ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಬಿನ್‌ಸನ್‌ ಕ್ರೂಸೊ ದ್ವೀಪದಲ್ಲಿರಕ್ಷಣಾ ಕೆಲಸ

ರಾಬಿನ್‌ಸನ್‌ ಕ್ರೂಸೊ ದ್ವೀಪದಲ್ಲಿರಕ್ಷಣಾ ಕೆಲಸ

ರಾಬಿನ್‌ಸನ್‌ ಕ್ರೂಸೊ ದ್ವೀಪದಲ್ಲಿರಕ್ಷಣಾ ಕೆಲಸ

ದಕ್ಷಿಣ ಅಮೆರಿಕದಲ್ಲಿರುವ ಚಿಲಿ ದೇಶದ ಕರಾವಳಿ ಪ್ರದೇಶದಿಂದ ಸುಮಾರು 640 ಕಿಲೋಮೀಟರ್‌ ದೂರದಲ್ಲಿ ಜಾನ್‌ ಫರ್ನಾಂಡಿಸ್‌ ಎಂದು ಕರೆಯಲ್ಪಡುವ ದ್ವೀಪಸಮೂಹಗಳು ಇವೆ. ಅವು ಪೆಸಿಫಿಕ್‌ ಸಾಗರದಲ್ಲಿದ್ದು, ಅಲ್ಲಿರುವ ಮೂರು ದ್ವೀಪಗಳಲ್ಲಿ ರಾಬಿನ್‌ಸನ್‌ ಕ್ರೂಸೊ ಎಂಬುದು ಒಂದು ದ್ವೀಪವಾಗಿದೆ. * 93 ಚದರ ಕಿಲೋಮೀಟರ್‌ ವಿಸ್ತಾರವಾಗಿರುವ ಈ ದ್ವೀಪಕ್ಕೆ ರಾಬಿನ್‌ಸನ್‌ ಕ್ರೂಸೊ ಎಂಬ ಹೆಸರು ಹೇಗೆ ಬಂತು? 18ನೇ ಶತಮಾನದಲ್ಲಿ ಡ್ಯಾನಿಯಲ್‌ ಡಿಫೆ ಎಂಬ ಒಬ್ಬ ಆಂಗ್ಲ ಲೇಖಕನಿದ್ದನು. ಅವನ ಪ್ರಸಿದ್ಧ ಕಾದಂಬರಿಯಾಗಿದ್ದ ರಾಬಿನ್‌ಸನ್‌ ಕ್ರೂಸೊ ಎಂಬ ಹೆಸರನ್ನೇ ಈ ದ್ವೀಪಕ್ಕೆ ಇಡಲಾಗಿದೆ. ಈ ಕಾದಂಬರಿಯು, ಅಲೆಕ್ಸಾಂಡರ್‌ ಸೆಲ್‌ಕ್ರಿಕ್‌ ಎಂಬ ಸ್ಕಾಟಿಷ್‌ ವ್ಯಕ್ತಿಯ ಅಸ್ಪಷ್ಟ ಸಾಹಸಗಳ ಮೇಲಾಧಾರಿತವಾಗಿ ಬರೆಯಲ್ಪಟ್ಟಿದೆ. ಇವನು ಈ ದ್ವೀಪದಲ್ಲಿ ಸುಮಾರು ನಾಲ್ಕು ವರ್ಷಗಳಷ್ಟು ಸಮಯ ಒಬ್ಬೊಂಟಿಗನಾಗಿಯೇ ಜೀವಿಸಿದ್ದನು.

ಈ ದ್ವೀಪದಲ್ಲಿರುವ ಒಂದು ಮರದ ಫಲಕದಲ್ಲಿ ಬರೆಯಲ್ಪಟ್ಟಿರುವ ಒಂದು ವಾಕ್ಯವು ಹೀಗೆ ಹೇಳುತ್ತದೆ: “ಸ್ಕಾಟಿಷ್‌ ನಾವಿಕನಾಗಿದ್ದ ಅಲೆಕ್ಸಾಂಡರ್‌ ಸೆಲ್‌ಕ್ರಿಕ್‌, ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಸಮಯ ದಿನಂಪ್ರತಿ ಇದೇ ಸ್ಥಳದಲ್ಲಿ ಕುಳಿತುಕೊಂಡು, ತನ್ನನ್ನು ಒಂಟಿತನದಿಂದ ಪಾರುಮಾಡುವ ದೋಣಿಗಾಗಿ ಬಾನಂಚನ್ನು ನೋಡುತ್ತಾ ಕಾಯುತ್ತಿದ್ದನು.” ಕೊನೆಗೂ ಸೆಲ್‌ಕ್ರಿಕನು ಅಲ್ಲಿಂದ ರಕ್ಷಿಸಲ್ಪಟ್ಟನು. ಒಂದು ದೋಣಿಯು ಅವನನ್ನು ತನ್ನ ತಾಯ್ನಾಡಿಗೆ ಕೊಂಡೊಯ್ದಿತು. ಆದರೆ, ಈ ದ್ವೀಪದಲ್ಲಿ ತನ್ನದೇ ಆದ ಪುಟ್ಟ ಪ್ರಮೋದವನದಲ್ಲಿ ಸ್ವಲ್ಪಕಾಲ ಅವನು ಅನುಭವಿಸಿದ ಜೀವನವನ್ನು ತನ್ನ ತಾಯ್ನಾಡಿನಲ್ಲಿ ಪುನಃ ಅನುಭವಿಸಲು ಅವನಿಗೆ ಸಾಧ್ಯವಾಗಲಿಲ್ಲ. ಒಂದು ವರದಿಗನುಸಾರ ಅವನು ನಂತರ ಹೀಗೆ ಹೇಳಿದನು: “ಓ, ನನ್ನ ಒಲವಿನ ದ್ವೀಪವೇ, ನಾ ನಿನ್ನ ಬಿಟ್ಟು ಅಗಲಿರಬಾರದಿತ್ತು!”

ಕಾಲವು ಕಳೆದಂತೆ, ಈ ಸುಂದರ ದ್ವೀಪವನ್ನು ದಂಡನೆಯ ಸ್ಥಳವಾಗಿ ಉಪಯೋಗಿಸಲಾಯಿತು. ಅಲ್ಲಿ ನೆಲೆಸಿದ್ದವರಲ್ಲಿ ಕೆಲವರು ಕ್ಯಾಥೊಲಿಕ್‌ ಚರ್ಚಿನ ವಿರುದ್ಧ “ನಂಬಿಕೆಗೆ ಸಂಬಂಧಿಸಿದ ಪಾತಕಗಳನ್ನು” ಮಾಡಿದವರಾಗಿದ್ದರು. ಪ್ರಮೋದವನ ದ್ವೀಪವೆಂದು ಸೆಲ್‌ಕ್ರಿಕನಿಗೆ ಒಮ್ಮೆ ಪರಿಚಯವಾಗಿದ್ದ ದ್ವೀಪದಲ್ಲಿ ಇದು ಎಂಥ ಒಂದು ಬದಲಾವಣೆಯಾಗಿತ್ತು! ಆದರೂ, ಲೋಕದ ಅನೇಕರಿಗೆ ಗೊತ್ತಿರದಂತಹ ಪ್ರಶಾಂತ ವಾತಾವರಣವನ್ನು ಈಗಲೂ ಆ ದ್ವೀಪದ ಜನರು ಅನುಭವಿಸುತ್ತಾರೆ. ಸಾಮಾನ್ಯವಾಗಿ ದ್ವೀಪಗಳಲ್ಲಿರುವ ಜನರ ಜೀವನವು ತುಂಬಾ ಆರಾಮವಾಗಿರುತ್ತದೆ. ಆದುದರಿಂದ, ಅಲ್ಲಿರುವವರೊಂದಿಗೆ ಸಂಭಾಷಣೆ ಮಾಡುವುದು ಬಹಳ ಸುಲಭ.

ಅಧಿಕೃತ ವರದಿಗನುಸಾರ, ರಾಬಿನ್‌ಸನ್‌ ಕ್ರೂಸೊ ದ್ವೀಪದಲ್ಲಿ ಸುಮಾರು 500 ಮಂದಿ ನಿವಾಸಿಗಳಿದ್ದಾರೆ. ಆದರೆ ವರ್ಷದಲ್ಲಿ ಹೆಚ್ಚಿನ ಸಮಯ 400 ಮಂದಿ ಮಾತ್ರ ದ್ವೀಪದಲ್ಲಿ ಇರುತ್ತಾರೆ. ಉಳಿದವರು ಚಿಲಿಯಲ್ಲಿರುತ್ತಾರೆ. ಕಾರಣ, ಕೆಲವು ಮಕ್ಕಳು ಚಿಲಿಯಲ್ಲಿರುವ ಶಾಲೆಗಳಲ್ಲಿ ಓದುತ್ತಿರುತ್ತಾರೆ. ಈ ಮಕ್ಕಳೊಂದಿಗೆ ಅವರ ತಾಯಂದಿರು ಸಹ ವರ್ಷವಿಡೀ ಚಿಲಿಯಲ್ಲೇ ಉಳಿಯುತ್ತಾರೆ. ಅವರು ರಜಾದಿನಗಳಲ್ಲಿ ಮಾತ್ರ ಉಳಿದ ಪರಿವಾರದವರೊಂದಿಗೆ ಸಮಯ ಕಳೆಯುವುದಕ್ಕಾಗಿ ದ್ವೀಪಕ್ಕೆ ಹಿಂದಿರುಗುತ್ತಾರೆ.

ರಾಬಿನ್‌ಸನ್‌ ಕ್ರೂಸೊ ದ್ವೀಪದಲ್ಲಿ ಉದ್ಯಾನವನದಂತಹ ಸುಂದರ ಪರಿಸರವಿರುವುದಾದರೂ, ಅಲ್ಲಿನ ಕೆಲವು ನಿವಾಸಿಗಳಿಗೆ ತಾವು ಆತ್ಮಿಕವಾಗಿ ಬರಡಾಗಿರುವಂತೆ ಅನಿಸುತ್ತದೆ. ಹಾಗಾಗಿ, ಆತ್ಮಿಕ ವಿಷಯಗಳ ಕುರಿತು ತೃಪ್ತಿಕರವಾದ ಉತ್ತರಗಳಿಗಾಗಿ ಅವರು ಹುಡುಕುತ್ತಿರುತ್ತಾರೆ. ಇನ್ನೂ ಕೆಲವರಿಗೆ, ತಾವು ಆತ್ಮಿಕವಾಗಿ ರಕ್ಷಿಸಲ್ಪಡಬೇಕಾಗಿದೆಯೋ ಎಂದನಿಸುತ್ತದೆ.

ಆತ್ಮಿಕ ರಕ್ಷಣೆ

ಈ ದ್ವೀಪದಲ್ಲಿ ಆತ್ಮಿಕ ರಕ್ಷಣಾ ಕೆಲಸವು 1979ರಲ್ಲಿ ಆರಂಭವಾಯಿತು. ಈ ದ್ವೀಪದ ಒಬ್ಬ ಮಹಿಳೆಯು ಚಿಲಿ ದೇಶದ ಸ್ಯಾಂಟಿಯೆಗೋವಿನಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಭ್ಯಾಸ ಮಾಡುತ್ತಿದ್ದಳು. ಆಕೆಯು ದ್ವೀಪಕ್ಕೆ ಹಿಂದಿರುಗಿದ ನಂತರ ತಾನು ಕಲಿತಿದ್ದ ವಿಷಯಗಳನ್ನು ಇತರರಿಗೂ ಕಲಿಸಲು ಆರಂಭಿಸಿದಳು. ಸ್ವಲ್ಪ ಸಮಯದ ನಂತರ, ಕೆಲಸದ ಮೇಲೆ ಆಗಾಗ್ಗೆ ಈ ದ್ವೀಪಕ್ಕೆ ಬಂದುಹೋಗುತ್ತಿದ್ದ ಒಬ್ಬ ಹಿರಿಯನು ಅಲ್ಲಿಗೆ ಬಂದನು. ಆಗ ಅಲ್ಲಿ ಅವನಿಗೊಂದು ಆಶ್ಚರ್ಯವು ಕಾದಿತ್ತು! ಅದೇನೆಂದರೆ, ಆ ಮಹಿಳೆಯ ಸಹಾಯದಿಂದ ಆತ್ಮಿಕ ಪ್ರಗತಿಯನ್ನು ಮಾಡುತ್ತಿದ್ದ ವಿದ್ಯಾರ್ಥಿಗಳ ಒಂದು ಚಿಕ್ಕ ಗುಂಪನ್ನು ಅವನು ನೋಡಿದನು. ಮೂರು ತಿಂಗಳುಗಳ ನಂತರ ಆ ಹಿರಿಯನು ಪುನಃ ದ್ವೀಪಕ್ಕೆ ಬಂದನು. ಅಷ್ಟರೊಳಗಾಗಿ, ಆ ಒಂಟಿ ಬೈಬಲ್‌ ಶಿಕ್ಷಕಿ ಮತ್ತು ಅವಳ ಇಬ್ಬರು ವಿದ್ಯಾರ್ಥಿಗಳು ದೀಕ್ಷಾಸ್ನಾನಕ್ಕೆ ಸಿದ್ಧರಾಗಿದ್ದರಿಂದ, ಆ ಹಿರಿಯನು ಅವರ ದೀಕ್ಷಾಸ್ನಾನಕ್ಕೆ ಏರ್ಪಾಡನ್ನು ಮಾಡಿದನು. ಕಾಲಾನಂತರ, ಹೊಸದಾಗಿ ದೀಕ್ಷಾಸ್ನಾನವಾದವರಲ್ಲಿ ಒಬ್ಬಳು ಮದುವೆಯಾದಳು. ನಂತರ ಆತ್ಮಿಕ ರಕ್ಷಣೆಯನ್ನು ಬಯಸುವ ಜನರನ್ನು ಹುಡುಕುವ ಕೆಲಸವನ್ನು ತನ್ನ ಗಂಡನೊಂದಿಗೆ ಮುಂದುವರಿಸಿದಳು. ಆಕೆಯ ಗಂಡನು ಸಾಧಾರಣವಾದ ಒಂದು ರಾಜ್ಯ ಸಭಾಗೃಹವನ್ನು ಕಟ್ಟುವ ಕೆಲಸದಲ್ಲಿ ಮುಂದಾಳತ್ವವನ್ನು ವಹಿಸಿಕೊಂಡನು. ಈ ಸಭಾಗೃಹವು ಇಂದಿನವರೆಗೂ ಆ ದ್ವೀಪದಲ್ಲಿರುವ ಚಿಕ್ಕ ಗುಂಪಿಗೆ ಆರಾಧನಾ ಸ್ಥಳವಾಗಿದೆ. ಅಷ್ಟರೊಳಗೆ ಆ ದಂಪತಿಯು ಆರ್ಥಿಕ ಕಾರಣಗಳಿಗಾಗಿ ರಾಬಿನ್‌ಸನ್‌ ಕ್ರೂಸೊ ದ್ವೀಪವನ್ನು ಬಿಡಬೇಕಾಯಿತು. ಆದರೆ, ಅವರು ಚಿಲಿಯ ಭೂಮಧ್ಯ ಪ್ರದೇಶದಲ್ಲಿರುವ ಒಂದು ಸಭೆಯಲ್ಲಿ ಈಗಲೂ ಯೆಹೋವನನ್ನು ಹೆಚ್ಚು ಹುರುಪಿನಿಂದ ಸೇವಿಸುತ್ತಿದ್ದಾರೆ.

ಈ ದ್ವೀಪದಲ್ಲಿರುವ ಇತರರು ಸುಳ್ಳು ಧರ್ಮದಿಂದ ರಕ್ಷಿಸಲ್ಪಟ್ಟಂತೆ, ಅಲ್ಲಿರುವ ಚಿಕ್ಕ ಗುಂಪು ಸ್ವಲ್ಪ ಸ್ವಲ್ಪವಾಗಿ ವೃದ್ಧಿಯಾಗಲಾರಂಭಿಸಿತು. ಹಾಗಿದ್ದರೂ, ಅಲ್ಲಿರುವ ವಿದ್ಯಾರ್ಥಿಗಳು ಹೈಸ್ಕೂಲಿನ ವಿದ್ಯಾಭ್ಯಾಸಕ್ಕಾಗಿ ಚಿಲಿಗೆ ಹೋಗುವುದರಿಂದ, ಮತ್ತೆ ಆ ಗುಂಪು ಇಬ್ಬರು ದೀಕ್ಷಾಸ್ನಾನವಾದ ಸಹೋದರಿಯರು ಮತ್ತು ಒಬ್ಬ ಹುಡುಗಿ ಮಾತ್ರವೇ ಇರುವಷ್ಟು ಚಿಕ್ಕದಾಗುತ್ತದೆ. ಆದರೆ ರಜಾದಿನಗಳಲ್ಲಿ ತಾಯಂದಿರು ತಮ್ಮ ಮಕ್ಕಳೊಂದಿಗೆ ದ್ವೀಪಕ್ಕೆ ಹಿಂದಿರುಗುವಾಗ ಗುಂಪು ಮತ್ತೆ ದೊಡ್ಡದಾಗುತ್ತದೆ. ಇದು ವರ್ಷವಿಡೀ ಅಲ್ಲೇ ಉಳಿದಿರುವ ಈ ಮೂವರ ಕ್ರೈಸ್ತ ನಂಬಿಕೆಗೆ ಜೀವಕಳೆಯನ್ನು ತುಂಬುತ್ತದೆ. ಈ ಮೂವರು ಸಹೋದರಿಯರ ಕಠಿನ ಶ್ರಮದ ಫಲವಾಗಿ, ರಾಬಿನ್‌ಸನ್‌ ಕ್ರೂಸೊ ದ್ವೀಪದಲ್ಲಿ ಯೆಹೋವನ ಸಾಕ್ಷಿಗಳು ಪ್ರಸಿದ್ಧರಾಗಿದ್ದಾರೆ. ಅಲ್ಲಿರುವ ಕೆಲವರು ಅವರ ಕೆಲಸಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ದೇವರ ರಾಜ್ಯದ ಸಂದೇಶವನ್ನು ನಿರಾಕರಿಸಲು ಇತರರನ್ನು ಒತ್ತಾಯಿಸಿರುವುದೇನೋ ನಿಜ. ಹಾಗಿದ್ದರೂ, ಪ್ರಾಮಾಣಿಕ ಜನರ ಹೃದಯಗಳಲ್ಲಿ ಬಿತ್ತಿರುವ ಬೈಬಲ್‌ ಸತ್ಯದ ಬೀಜಗಳು ಮೊಳಕೆಯೊಡೆಯುತ್ತಿರುವುದಂತೂ ನಿಂತಿಲ್ಲ.

ರಕ್ಷಿಸಲ್ಪಟ್ಟವರನ್ನು ಬಲಪಡಿಸುವುದು

ವರ್ಷಕ್ಕೊಮ್ಮೆ ಒಬ್ಬ ಸಂಚರಣ ಮೇಲ್ವಿಚಾರಕನು ಆ ದ್ವೀಪವನ್ನು ಸಂದರ್ಶಿಸುತ್ತಾನೆ. ಯಾವುದೋ ಒಂದು ಮೂಲೆಯಲ್ಲಿರುವ ದ್ವೀಪದಲ್ಲಿ ಕೆಲವೇ ಕೆಲವು ಸಾಕ್ಷಿಗಳನ್ನು ಭೇಟಿಮಾಡುವ ಅನುಭವ ಹೇಗಿರಬಹುದು? ರಾಬಿನ್‌ಸನ್‌ ಕ್ರೂಸೊ ದ್ವೀಪಕ್ಕೆ ಮೊದಲ ಬಾರಿ ಭೇಟಿನೀಡಿದ ಅನುಭವವನ್ನು ಒಬ್ಬ ಸಂಚರಣ ಮೇಲ್ವಿಚಾರಕನು ವರ್ಣಿಸುವುದನ್ನು ನೀವೇ ಕೇಳಿಸಿಕೊಳ್ಳಿ:

“ಈ ಪ್ರವಾಸವು ನನ್ನ ಕನಸು ನನಸಾದಂತಿತ್ತು. ಬೆಳಗ್ಗೆ 7 ಗಂಟೆಗೆ ವಾಲ್‌ಪರೈಸಿಯೊವಿನಿಂದ ಸ್ಯಾಂಟಿಯೆಗೋ ಸೆರಿಲ್ಲೋಸ್‌ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೊರಡುವ ಮೂಲಕ ನಮ್ಮ ಪ್ರಯಾಣವು ಪ್ರಾರಂಭವಾಯಿತು. ಅಲ್ಲಿ ತಲುಪಿದ ನಂತರ, ಏಳು ಮಂದಿ ಕುಳಿತುಕೊಳ್ಳುವ ಒಂದು ಸಣ್ಣ ವಿಮಾನವನ್ನು ಹತ್ತಿದೆವು. 2 ಗಂಟೆ 45 ನಿಮಿಷಗಳ ಪ್ರಯಾಣದ ನಂತರ, ದೂರದಲ್ಲಿ ಬೆಟ್ಟಗಳ ತುದಿಗಳು ಮೋಡಗಳನ್ನು ತೂರಿ ಹೊರಬಂದಿರುವುದನ್ನು ನಾವು ನೋಡಿದೆವು. ನಾವು ಹತ್ತಿರವಾಗುತ್ತಿದ್ದಂತೆ ದ್ವೀಪವು ಗೋಚರಿಸಲಾರಂಭಿಸಿತು. ತುಂಬ ಆಕರ್ಷಕವಾದ ಬಂಡೆಗಳ ಸಮೂಹವು ಸಮುದ್ರದ ಮಧ್ಯದಲ್ಲಿ ಕಾಣಿಸತೊಡಗಿದವು. ಆ ಬಂಡೆಗಳು ದಿಕ್ಕುತಪ್ಪಿದ ಹಡಗಿನಂತೆ ವಿಶಾಲವಾದ ಸಮುದ್ರದಲ್ಲಿ ತೇಲುತ್ತಿರುವ ಹಾಗೆ ಕಾಣಿಸಿದವು.

“ವಿಮಾನದಿಂದ ಕೆಳಗಿಳಿದ ಮೇಲೆ, ನಾವು ಹೋಗಬೇಕಾಗಿದ್ದ ಹಳ್ಳಿಗೆ ನಮ್ಮನ್ನು ದೋಣಿಯೊಂದು ಕರೆದೊಯ್ದಿತು. ಅಲ್ಲಲ್ಲಿ, ಸಮುದ್ರದಿಂದ ಹೊರಚಾಚಿದ್ದ ಬಂಡೆಗಳು, ಸಣ್ಣ ದ್ವೀಪಗಳಂತಿದ್ದವು. ಇವು ಜಾನ್‌ ಫರ್ನಾಂಡಿಸ್‌ನಲ್ಲಿರುವ ತುಪ್ಪಟವಿರುವ ಸೀಲ್‌ಗಳಿಗೆ ತಂಗುದಾಣವಾಗಿದ್ದವು. ಅಷ್ಟೇ ಅಲ್ಲದೆ, ಈ ಪ್ರಾಣಿಗಳ ಸಂಖ್ಯೆಯು ಅತ್ಯಧಿಕ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಇವು ಸಂರಕ್ಷಿಸಲ್ಪಟ್ಟ ಪ್ರಾಣಿಗಳಾಗಿವೆ. ಇದ್ದಕ್ಕಿದ್ದಂತೆ ನಮ್ಮ ದೋಣಿಯ ಪಕ್ಕದಲ್ಲಿ ಏನೋ ಹಾರಿ ಸಮುದ್ರದೊಳಗೆ ಮತ್ತೆ ಸೇರಿಕೊಂಡಂತೆ ಅನಿಸಿತು. ಅದು ಒಂದು ರೀತಿಯ ಹಾರುವ ಮೀನಾಗಿತ್ತು. ನೆರಿಗೆಯಿಂದ ಕೂಡಿರುವ ಈ ಮೀನಿನ ಈಜು ರೆಕ್ಕೆಗಳು, ಪಕ್ಷಿಗಳ ರೆಕ್ಕೆಗಳನ್ನು ಹೋಲುತ್ತಿದ್ದವು. ಕ್ರಿಮಿಕೀಟಗಳನ್ನು ಹಿಡಿಯುವುದಕ್ಕಾಗಿ ನೀರಿನಿಂದ ಜಿಗಿಯುವುದರಲ್ಲಿ ಈ ಮೀನು ತುಂಬ ಆನಂದಿಸುತ್ತಿರುವಂತೆ ಕಾಣಿಸುತ್ತಿತ್ತು. ಹೀಗೆ ಜಿಗಿಯುವಾಗ ಕೆಲವೊಮ್ಮೆ ಬೇಟೆಯಾಡುವ ಮೀನೇ ಬಲೆಯಲ್ಲಿ ಸಿಕ್ಕಿಕೊಳ್ಳುವುದು ಖಂಡಿತ. ಹೇಗೆಂದರೆ, ಈ ಮೀನು ನೀರಿನಿಂದ ಒಳಗೂ ಹೊರಗೂ ಜಿಗಿಯುವ ಪರಿಯು, ಅದನ್ನು ಹಿಡಿಯುವುದಕ್ಕಾಗಿಯೇ ಕಾಯುತ್ತಿರುವ ಕೆಲವು ಪಕ್ಷಿಗಳ ಗಮನವನ್ನು ಸೆಳೆಯುತ್ತದೆ. ಈ ಮೀನು ನೀರಿನಲ್ಲಿ ಸೇರಿಕೊಳ್ಳುವುದಕ್ಕಾಗಿ ಕೆಳಗಿಳಿಯುವಾಗ ಪಕ್ಷಿಗಳು ಗಬ್ಬಕ್ಕನೆ ಅದನ್ನು ನುಂಗಿಬಿಡುತ್ತವೆ.

“ಕೊನೆಗೂ ನಾವು ಸಾನ್‌ ವ್ಯಾನ್‌ ಬಾಟ್‌ಟಿಸ್ಟಾ (ಸೆಂಟ್‌ ಜಾನ್‌ ದ ಬ್ಯಾಪ್ಟಿಸ್ಟ್‌) ಎಂಬ ಹಳ್ಳಿಗೆ ಬಂದಿಳಿದೆವು. ಆ ದ್ವೀಪದಲ್ಲಿ ವಾಸಿಸುವ ಅನೇಕರು ಹಡಗುಕಟ್ಟೆಯ ಬಳಿ ನಿಂತಿದ್ದರು. ಕೆಲವರು ತಮ್ಮನ್ನು ಭೇಟಿ ನೀಡಲು ಬರುತ್ತಿದ್ದವರಿಗಾಗಿ ಕಾಯುತ್ತಿದ್ದರು ಇಲ್ಲವೇ ಆ ಸಮಯದಲ್ಲಿ ಯಾರು ಬರುತ್ತಿದ್ದಾರೆಂಬುದನ್ನು ನೋಡಲು ಕುತೂಹಲರಾಗಿದ್ದರು. ಏರುಪೇರುಗಳಿಂದ ಕೂಡಿದ್ದ ಭವ್ಯವಾದ ಎಲ್‌ ಯುನ್‌ಕ (ದಿ ಅನ್‌ವಿಲ್‌) ಎಂಬ ಪರ್ವತದ ಅವಿಚ್ಛಿನ್ನ ದೃಶ್ಯಕ್ಕೆ ನಾವು ಮನಸೋತೆವು. ಕಡುಹಸಿರು ಬಣ್ಣದ ರತ್ನಗಂಬಳಿಯನ್ನು ಅದರ ಮೇಲೆ ಹಾಸಿದಂತಿತ್ತು. ಅದರ ಹಿಂದಿದ್ದ ತಿಳಿಯಾದ ನೀಲಿ ಆಗಸವು, ಹರಡಿರುವ ಬಿಳಿ ಮೋಡಗಳ ಅಂಚಿನಿಂದ ಅಲಂಕೃತವಾಗಿತ್ತು.

“ನಮ್ಮ ಕ್ರೈಸ್ತ ಸಹೋದರಿಯರು ಮತ್ತು ಅವರ ಮಕ್ಕಳು ಹಡಗುಕಟ್ಟೆಯ ಬಳಿ ನಮಗಾಗಿ ಕಾಯುತ್ತಿರುವುದನ್ನು ನಾವು ಕೂಡಲೆ ಗಮನಿಸಿದೆವು. ರಜಾದಿನಗಳಾದ್ದರಿಂದ, ಎಂದಿನಂತಿರದೆ ಗುಂಪು ದೊಡ್ಡದಾಗಿತ್ತು. ಒಬ್ಬರಿಗೊಬ್ಬರು ಅಭಿವಂದನೆಗಳನ್ನು ಹೇಳಿದ ನಂತರ, ಅವರು ನಮ್ಮನ್ನು ಒಂದು ಆಕರ್ಷಕವಾದ ಕುಟೀರಕ್ಕೆ ಕರೆದುಕೊಂಡುಹೋದರು. ಒಂದು ವಾರದ ವರೆಗೂ ಆ ಕುಟೀರವನ್ನು ನಾವು ನಮ್ಮ ಮನೆಯೆಂದು ಕರೆಯುವೆವು.

“ಆ ವಾರವು ಒಂದು ವಿಶೇಷ ವಾರವಾಗಿದ್ದುದರಿಂದ ದಿನಗಳು ಬೇಗನೆ ಕಳೆದುಹೋಗುವವು ಎಂದು ನಮಗೆ ಗೊತ್ತಿತ್ತು. ಆದ್ದರಿಂದ, ನಾವು ಸಮಯವನ್ನು ಸದುಪಯೋಗಿಸಿಕೊಳ್ಳಬೇಕಾಗಿತ್ತು. ನಾವು ಬಂದ ದಿನ ಮಧ್ಯಾಹ್ನದ ಊಟ ಮುಗಿಸಿದೊಡನೆ, ನಮ್ಮ ಆತ್ಮಿಕ ಸಹೋದರಿಯಾಗಲಿದ್ದ ಹಾಗೂ ದೇವರ ಆತ್ಮಿಕ ಪ್ರಮೋದವನದ ಭಾಗವಾಗಲಿದ್ದ ಒಬ್ಬ ಬೈಬಲ್‌ ವಿದ್ಯಾರ್ಥಿನಿಯನ್ನು ಭೇಟಿಯಾದೆವು. ಆಕೆಯ ಕಂಗಳು ಸಂತೋಷದಿಂದ ಹೊಳೆಯುತ್ತಿದ್ದರೂ ಸ್ವಲ್ಪ ಅಂಜಿಕೆಯೂ ಇತ್ತು. ಏಕೆಂದರೆ, ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದು ಅವಳ ಬಹಳ ದಿನಗಳ ಗುರಿಯಾಗಿತ್ತು ಮತ್ತು ಈಗ ಆ ಸಮಯವು ಸನ್ನಿಹಿತವಾಗುತ್ತಿತ್ತು. ಸುವಾರ್ತೆಯನ್ನು ಸಾರುವ ಒಬ್ಬ ಪ್ರಚಾರಕಳಾಗಿ ಅರ್ಹಳಾಗಲು ಅಗತ್ಯವಿರುವ ಕೆಲವು ಪ್ರಶ್ನೆಗಳನ್ನು ನಾವು ಅವಳೊಂದಿಗೆ ಚರ್ಚಿಸಿದೆವು. ಮರುದಿನ, ಅವಳು ಮೊದಲಬಾರಿಗೆ ಸಾರುವ ಕೆಲಸದಲ್ಲಿ ಭಾಗವಹಿಸಿದಳು. ಮೂರನೆಯ ದಿನ ದೀಕ್ಷಾಸ್ನಾನಕ್ಕಾಗಿ ಅಗತ್ಯವಿರುವ ಪ್ರಶ್ನೆಗಳನ್ನು ನಾವು ಅವಳಿಗೆ ಕೇಳಿದೆವು. ಆ ವಾರವು ಕಳೆಯುವುದರೊಳಗಾಗಿ ಅವಳ ದೀಕ್ಷಾಸ್ನಾನವಾಗಿತ್ತು!

“ಆ ವಾರದಲ್ಲಿ ನಡೆದ ಕೂಟಗಳಿಗೆ ಗರಿಷ್ಠ 14 ಮಂದಿ ಹಾಜರಾಗಿದ್ದು, ಕೂಟದ ಏರ್ಪಾಡಿಗೆ ಒಳ್ಳೇ ಬೆಂಬಲವು ಸಿಕ್ಕಿತು. ಕ್ಷೇತ್ರ ಸೇವೆ, ಪುನರ್ಭೇಟಿಗಳು ಮತ್ತು ಬೈಬಲ್‌ ಅಧ್ಯಯನಗಳು ಹಾಗೂ ಕುರಿಪಾಲನಾ ಭೇಟಿಗಳನ್ನು ಪ್ರತಿದಿನ ಏರ್ಪಾಡು ಮಾಡಲಾಗಿತ್ತು. ವರ್ಷವಿಡೀ ತಾವೇ ಎಲ್ಲವನ್ನು ಮಾಡಬೇಕಾಗಿದ್ದ ಸಹೋದರಿಯರಿಗೆ ಇದು ನಿಜವಾಗಿಯೂ ಎಂಥ ಒಂದು ಪ್ರೋತ್ಸಾಹವಾಗಿತ್ತು!”

ಈ ದ್ವೀಪದಲ್ಲಿರುವ ಗಂಡಸರಿಗೆ ಸತ್ಯಕ್ಕೆ ಪ್ರತಿಕ್ರಿಯಿಸುವುದು ಹೆಚ್ಚು ಕಷ್ಟಕರವಾಗಿದೆ. ಒಂದು ಕಾರಣ, ಅವರಿಗೆ ತಮ್ಮ ಕೆಲಸದಿಂದ ಪುರುಸೊತ್ತು ಸಿಗದೇ ಇರಬಹುದು. ಏಕೆಂದರೆ, ಕಡಲೇಡಿ (ಲಾಬ್‌ಸ್ಟರ್‌)ಯನ್ನು ಹಿಡಿಯುವುದೇ ಅಲ್ಲಿನವರ ಮುಖ್ಯ ಕಸುಬಾಗಿದೆ. ಈ ಕೆಲಸಕ್ಕಾಗಿ ಅವರು ಹೆಚ್ಚು ಸಮಯವನ್ನು ವ್ಯಯಿಸಬೇಕಾಗುತ್ತದೆ. ಇನ್ನೊಂದು ಕಾರಣ, ಅವರಲ್ಲಿರುವ ಪೂರ್ವಕಲ್ಪಿತ ಅಭಿಪ್ರಾಯವೇ ಆಗಿದೆ. ಏನೇ ಆಗಿರಲಿ, ಈ ದ್ವೀಪದಲ್ಲಿರುವ ಹೆಚ್ಚೆಚ್ಚು ಗಂಡಸರು ಮತ್ತು ಹೆಂಗಸರು ಬರಲಿರುವ ದಿನಗಳಲ್ಲಿ ಸುವಾರ್ತೆಗೆ ಪ್ರತಿಕ್ರಿಯಿಸುವರು ಎಂಬ ನಿರೀಕ್ಷೆಯಿದೆ.

ಈ ದ್ವೀಪದಲ್ಲಿ, ಇದುವರೆಗೂ ಸತ್ಯವನ್ನು ಮತ್ತು ಯೆಹೋವ ದೇವರ ಉದ್ದೇಶಗಳನ್ನು ತಿಳಿದುಕೊಳ್ಳುವ ಮೂಲಕ ಹತ್ತು ಮಂದಿ ರಕ್ಷಿಸಲ್ಪಟ್ಟಿದ್ದಾರೆ. ಅವರಲ್ಲಿ ಕೆಲವರು ಹಲವಾರು ಕಾರಣಗಳಿಗಾಗಿ ದ್ವೀಪವನ್ನು ಬಿಟ್ಟುಹೋಗಿದ್ದಾರೆ. ಅವರು ಅಲ್ಲೇ ಉಳಿಯಲಿ ಇಲ್ಲವೇ ಬಿಟ್ಟುಹೋಗಲಿ ಅವರ ಆತ್ಮಿಕ ರಕ್ಷಣೆಯು ಅಲೆಕ್ಸಾಂಡರ್‌ ಸೆಲ್‌ಕ್ರಿಕ್‌ನ ರಕ್ಷಣೆಗಿಂತ ಹೆಚ್ಚು ಮಹತ್ವಪೂರ್ಣವಾಗಿದೆ ಎಂಬುದು ರುಜುವಾಗಿದೆ. ಅವರು ಎಲ್ಲೇ ಜೀವಿಸಿದರೂ ಈಗ ಆತ್ಮಿಕ ಪ್ರಮೋದವನದಲ್ಲಿ ಆನಂದಿಸುತ್ತಾರೆ. ಅದೇ ದ್ವೀಪದಲ್ಲಿ ವಾಸಿಸುವ ಸಹೋದರಿಯರು ಮತ್ತು ಅವರ ಮಕ್ಕಳು ಉದ್ಯಾನವನದಂತಹ ಪರಿಸರದಲ್ಲಿ ಆನಂದಿಸುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ, ಒಂದು ದಿನ ಇಡೀ ಭೂಮಿಯು ನಿಜವಾದ ಪ್ರಮೋದವನವಾಗುವ ಪ್ರತೀಕ್ಷೆಯು ನೆರವೇರುವಾಗ, ಸಂಪೂರ್ಣ ಅರ್ಥದಲ್ಲಿ ಅವರು ಪ್ರಮೋದವನವನ್ನು ಅನುಭವಿಸುವರು.

ರಕ್ಷಣಾ ಕೆಲಸವು ಮುಂದುವರಿಯುತ್ತಿದೆ

ಭೂಗೋಳಕ್ಕನುಸಾರ, ರಾಬಿನ್‌ಸನ್‌ ಕ್ರೂಸೊ ದ್ವೀಪದಲ್ಲಿರುವ ಯೆಹೋವನ ಸಾಕ್ಷಿಗಳ ಈ ಚಿಕ್ಕ ಗುಂಪು ತಮ್ಮ ಆತ್ಮಿಕ ಸಹೋದರ ಸಹೋದರಿಯರಿಂದ ಬಹಳ ದೂರದಲ್ಲಿ ವಾಸಿಸುತ್ತದೆ. ಆದರೆ ಅವರಿಗೆ ಸ್ಕಾಟಿಷ್‌ನವನಾದ ಸೆಲ್‌ಕ್ರಿಕ್‌ನಿಗಾದಂತೆ ತೊರೆದುಬಿಟ್ಟ ಅನಿಸಿಕೆಯಾಗುವುದಿಲ್ಲ. ಯಾಕೆಂದರೆ ಚಿಲಿಯಲ್ಲಿರುವ ವಾಚ್‌ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸು, ದೇವಪ್ರಭುತ್ವ ಪ್ರಕಾಶನಗಳನ್ನು ಮತ್ತು ವರ್ಷಕ್ಕೆ ಮೂರು ಬಾರಿ ಸಮ್ಮೇಳನಗಳ ಹಾಗೂ ಅಧಿವೇಶನಗಳ ವಿಡಿಯೋಗಳನ್ನು ಸತತವಾಗಿ ಕಳುಹಿಸುತ್ತಿರುತ್ತದೆ. ಇದರ ಜೊತೆಗೆ, ವರ್ಷಕ್ಕೊಮ್ಮೆ ಸರ್ಕಿಟ್‌ ಮೇಲ್ವಿಚಾರಕರ ಸಂದರ್ಶನವು ಇರುತ್ತದೆ. ಇವೆಲ್ಲದರ ಮೂಲಕ ಅವರು ಯೆಹೋವನ ಸಂಸ್ಥೆಯೊಂದಿಗೆ ನಿಕಟವಾದ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ. ಆದ್ದರಿಂದಲೇ ಅವರು ‘ಲೋಕದಲ್ಲಿರುವ ಸಹೋದರರ’ ಕ್ರಿಯಾಶೀಲ ಸದಸ್ಯರ ಭಾಗವಾಗಿ ಮುಂದುವರಿಯುತ್ತಿದ್ದಾರೆ.—1 ಪೇತ್ರ 5:9.

[ಪಾದಟಿಪ್ಪಣಿ]

^ ಪ್ಯಾರ. 2 ಈ ದ್ವೀಪದ ಅಧಿಕೃತ ಹೆಸರು ಮಾಸ್‌ ಅ ಟೆರಾ ಎಂದಾಗಿದೆ.

[ಪುಟ 9ರಲ್ಲಿರುವ ಭೂಪಟಗಳು/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಚಿಲಿ

ಸ್ಯಾಂಟಿಯೆಗೋ

ರಾಬಿನ್‌ಸನ್‌ ಕ್ರೂಸೊ ದ್ವೀಪ

ಸಾನ್‌ ವ್ಯಾನ್‌ ಬಾಟ್‌ಟಿಸ್ಟಾ

ಎಲ್‌ ಯುನ್‌ಕ

ಪೆಸಿಫಿಕ್‌ ಸಾಗರ 

ಸ್ಯಾಂಟ ಕ್ಲಾರಾ ದ್ವೀಪ

[ಚಿತ್ರ]

ಸಾಗರದ ಮಧ್ಯದಲ್ಲಿರುವ ಆಕರ್ಷಕ ಬಂಡೆಗಳ ಸಮೂಹವನ್ನು ಒಬ್ಬನು ನೋಡುತ್ತಿದ್ದಂತೆ ದ್ವೀಪವು ಕಣ್ಣಿಗೆ ಗೋಚರವಾಗತೊಡಗುತ್ತದೆ

[ಕೃಪೆ]

ಚಿಲಿ ದೇಶದ ನಕ್ಷೆ: Mountain High Maps® Copyright © 1997 Digital Wisdom, Inc.

[ಪುಟ 8, 9ರಲ್ಲಿರುವ ಚಿತ್ರ]

ಏರುಪೇರುಗಳಿಂದ ಕೂಡಿರುವ ಭವ್ಯವಾದ ಪರ್ವತ ಎಲ್‌ ಯುನ್‌ಕ (ದಿ ಅನ್‌ವಿಲ್‌)

[ಪುಟ 9ರಲ್ಲಿರುವ ಚಿತ್ರ]

ಸಾನ್‌ ವ್ಯಾನ್‌ ಬಾಟ್‌ಟಿಸ್ಟಾ (ಸೆಂಟ್‌ ಜಾನ್‌ ದ ಬ್ಯಾಪ್ಟಿಸ್ಟ್‌) ಎಂಬ ಹಳ್ಳಿ

[ಪುಟ 9ರಲ್ಲಿರುವ ಚಿತ್ರ]

ಸಣ್ಣ ಸಣ್ಣ ದ್ವೀಪಗಳು ತುಪ್ಪಟವಿರುವ ಸೀಲ್‌ಗಳಿಗೆ ತಂಗುದಾಣವಾಗಿರುತ್ತವೆ

[ಪುಟ 10ರಲ್ಲಿರುವ ಚಿತ್ರ]

ಚಿಲಿಯ ಸ್ಯಾಂಟಿಯೆಗೋವಿನಿಂದ ಒಂದು ಸಣ್ಣ ವಿಮಾನದಲ್ಲಿ ನಾವು ಹೋದೆವು

[ಪುಟ 10ರಲ್ಲಿರುವ ಚಿತ್ರ]

ರಾಬಿನ್‌ಸನ್‌ ಕ್ರೂಸೊ ದ್ವೀಪದ ಒಡ್ಡೊಡ್ಡಾದ ಕರಾವಳಿ ಪ್ರದೇಶಗಳು

[ಪುಟ 10ರಲ್ಲಿರುವ ಚಿತ್ರ]

ದ್ವೀಪದಲ್ಲಿರುವ ಸಾಧಾರಣವಾದ ರಾಜ್ಯ ಸಭಾಗೃಹ