ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳು, ರಕ್ತದ ಘಟಕಗಳು ಅಥವಾ ರಕ್ತದ ಅಂಶಗಳಿರುವ ಯಾವುದೇ ವೈದ್ಯಕೀಯ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತಾರೊ?

ಯೆಹೋವನ ಸಾಕ್ಷಿಗಳು ರಕ್ತವನ್ನು ತೆಗೆದುಕೊಳ್ಳುವುದಿಲ್ಲ ಎಂಬುದು ಈ ಮೇಲಿನ ಪ್ರಶ್ನೆಗೆ ನೇರವಾದ ಉತ್ತರವಾಗಿದೆ. ರಕ್ತದ ಕುರಿತಾದ ದೇವರ ನಿಯಮವನ್ನು, ಬದಲಾಗುತ್ತಿರುವ ಅಭಿಪ್ರಾಯಗಳಿಗೆ ಹೊಂದಿಕೊಳ್ಳುವಂತೆ ಮಾರ್ಪಡಿಸಲು ಸಾಧ್ಯವಿಲ್ಲವೆಂದು ನಾವು ದೃಢವಾಗಿ ನಂಬುತ್ತೇವೆ. ಹೀಗಿದ್ದರೂ, ರಕ್ತವನ್ನು ಈಗ ಸಂಸ್ಕರಿಸಿ, ಅದರಲ್ಲಿರುವ ನಾಲ್ಕು ಪ್ರಮುಖ ಘಟಕಗಳನ್ನು ಬೇರ್ಪಡಿಸಸಾಧ್ಯವಿದೆ ಮತ್ತು ಈ ಘಟಕಗಳಿಂದಲೂ ಅಂಶಗಳನ್ನು (ಫ್ರ್ಯಾಕ್‌ಷನ್‌ಗಳನ್ನು) ಬೇರ್ಪಡಿಸಲು ಸಾಧ್ಯವಿರುವುದರಿಂದ ಹೊಸ ವಿವಾದಾಂಶಗಳು ಏಳುತ್ತವೆ. ಈ ಘಟಕಗಳನ್ನು ಅಥವಾ ಈ ಘಟಕಗಳಿಂದ ತೆಗೆಯಲಾಗಿರುವ ಅಂಶಗಳನ್ನು ಸ್ವೀಕರಿಸಬೇಕೊ ಇಲ್ಲವೊ ಎಂಬುದನ್ನು ನಿರ್ಣಯಿಸುವಾಗ, ಒಬ್ಬ ಕ್ರೈಸ್ತನು ಇದರಿಂದ ಸಿಗಬಹುದಾದ ವೈದ್ಯಕೀಯ ಪ್ರಯೋಜನಗಳು ಮತ್ತು ಉಂಟಾಗಬಹುದಾದ ಅಪಾಯಗಳಿಗಿಂತಲೂ ಹೆಚ್ಚನ್ನು ಪರಿಗಣಿಸಬೇಕು. ಬೈಬಲ್‌ ಏನು ಹೇಳುತ್ತದೆ ಮತ್ತು ಸರ್ವಶಕ್ತ ದೇವರೊಂದಿಗಿನ ತನ್ನ ಸಂಬಂಧದ ಮೇಲೆ ಇದು ಯಾವ ಪರಿಣಾಮವನ್ನು ಬೀರುತ್ತದೆ ಎಂಬುದೇ ಅವನ ಮೊದಲ ಚಿಂತೆಯಾಗಿರಬೇಕು.

ಇದರಲ್ಲಿ ಒಳಗೂಡಿರುವ ಮುಖ್ಯ ವಿಷಯಗಳು ತೀರ ಸರಳವಾಗಿವೆ. ಇದು ಏಕೆ ಅಷ್ಟೊಂದು ಸರಳವಾಗಿದೆ ಎಂಬುದನ್ನು ತಿಳಿಯಲು ಸಹಾಯಮಾಡಲಿಕ್ಕಾಗಿ, ಕೆಲವೊಂದು ಬೈಬಲ್‌ ಸಂಬಂಧಿತ, ಐತಿಹಾಸಿಕ, ಮತ್ತು ವೈದ್ಯಕೀಯ ಹಿನ್ನೆಲೆಯನ್ನು ಪರಿಗಣಿಸಿರಿ.

ರಕ್ತವನ್ನು ವಿಶೇಷವಾದದ್ದಾಗಿ ಪರಿಗಣಿಸಬೇಕೆಂದು ನಮ್ಮೆಲ್ಲರ ಪೂರ್ವಜನಾದ ನೋಹನಿಗೆ ಯೆಹೋವ ದೇವರು ಹೇಳಿದನು. (ಆದಿಕಾಂಡ 9:3, 4) ಸ್ವಲ್ಪ ಸಮಯದ ನಂತರ, ದೇವರು ಇಸ್ರಾಯೇಲ್‌ ಜನಾಂಗಕ್ಕೆ ಕೊಟ್ಟ ನಿಯಮಗಳು, ರಕ್ತದ ಪವಿತ್ರತೆಯನ್ನು ಪ್ರತಿಬಿಂಬಿಸಿದವು: ‘ಇದಲ್ಲದೆ ಇಸ್ರಾಯೇಲ್ಯರಲ್ಲಿಯಾಗಲಿ ಅವರ ನಡುವೆ ಇಳುಕೊಂಡಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ರಕ್ತಭೋಜನಮಾಡಿದರೆ ನಾನು ಆತನ ಮೇಲೆ ಉಗ್ರವಾದ ಕೋಪವನ್ನು ಮಾಡುವೆನು.’ ದೇವರ ನಿಯಮವನ್ನು ತಿರಸ್ಕರಿಸುವ ಮೂಲಕ ಒಬ್ಬ ಇಸ್ರಾಯೇಲ್ಯನು ಇತರರ ಮನಸ್ಸನ್ನೂ ಕೆಡಿಸಸಾಧ್ಯವಿತ್ತು. ಆದುದರಿಂದಲೇ ದೇವರು ಕೂಡಿಸಿ ಹೇಳಿದ್ದು: “ಅವನನ್ನು ಕುಲದಿಂದ ತೆಗೆದುಹಾಕುವೆನು.” (ಯಾಜಕಕಾಂಡ 17:10) ತದನಂತರ, ಯೆರೂಸಲೇಮಿನಲ್ಲಿ ನಡೆದ ಒಂದು ಕೂಟದಲ್ಲಿ ಅಪೊಸ್ತಲರು ಮತ್ತು ಸಭೆಯ ಹಿರಿಯರು, ನಾವು ‘ರಕ್ತವನ್ನು ವಿಸರ್ಜಿಸಬೇಕೆಂಬ’ ಕಟ್ಟಳೆಯನ್ನು ಹೊರಡಿಸಿದರು. ಲೈಂಗಿಕ ಅನೈತಿಕತೆ ಮತ್ತು ವಿಗ್ರಹಾರಾಧನೆಯಿಂದ ದೂರವಿರುವುದು ಎಷ್ಟು ಅತ್ಯಾವಶ್ಯಕವಾಗಿದೆಯೊ, ರಕ್ತವನ್ನು ವಿಸರ್ಜಿಸುವುದು ಸಹ ಅಷ್ಟೇ ಅತ್ಯಾವಶ್ಯಕವಾಗಿದೆ.—ಅ. ಕೃತ್ಯಗಳು 15:28, 29.

ಆ ಕಾಲದಲ್ಲಿ ರಕ್ತವನ್ನು ‘ವಿಸರ್ಜಿಸುವುದರಲ್ಲಿ’ ಏನೆಲ್ಲಾ ಒಳಗೂಡಿದ್ದಿರಬಹುದು? ಕ್ರೈಸ್ತರು ತಾಜಾ ರಕ್ತವನ್ನು ಅಥವಾ ಹೆಪ್ಪುಗಟ್ಟಿಸಿರುವ ರಕ್ತವನ್ನು ಸೇವಿಸುತ್ತಿರಲಿಲ್ಲ; ಅಥವಾ ರಕ್ತ ಬಸಿಯದ ಪ್ರಾಣಿಯ ಮಾಂಸವನ್ನೂ ತಿನ್ನುತ್ತಿರಲಿಲ್ಲ. ಅಷ್ಟುಮಾತ್ರವಲ್ಲದೆ, ಬ್ಲಡ್‌ ಸಾಸೆಜ್‌ನಂತಹ ರಕ್ತ ಸೇರಿಸಿ ತಯಾರಿಸಲ್ಪಟ್ಟಿದ್ದ ಆಹಾರಗಳನ್ನೂ ಅವರು ಭುಜಿಸುತ್ತಿರಲಿಲ್ಲ. ಇಲ್ಲಿ ತಿಳಿಸಲ್ಪಟ್ಟಿರುವಂತಹ ರೀತಿಯಲ್ಲಿ, ರಕ್ತವನ್ನು ತೆಗೆದುಕೊಳ್ಳುವುದು ದೇವರ ನಿಯಮವನ್ನು ಉಲ್ಲಂಘಿಸುವಂತಿತ್ತು.—1 ಸಮುವೇಲ 14:32, 33.

ಪ್ರಾಚೀನಕಾಲದ ಹೆಚ್ಚಿನ ಜನರಿಗೆ ರಕ್ತವನ್ನು ಸೇವಿಸುವ ವಿಷಯದಲ್ಲಿ ಯಾವುದೇ ಅಭ್ಯಂತರವಿರಲಿಲ್ಲ. ಇದನ್ನು (ಸಾ.ಶ. ಎರಡನೆಯ ಮತ್ತು ಮೂರನೆಯ ಶತಮಾನಗಳ) ಟೆರ್ಟುಲಿಯನ್‌ನ ಬರಹಗಳಲ್ಲಿ ನಾವು ನೋಡಸಾಧ್ಯವಿದೆ. ಕ್ರೈಸ್ತರು ರಕ್ತವನ್ನು ಸೇವಿಸುತ್ತಿದ್ದಾರೆಂಬ ಸುಳ್ಳಾರೋಪಗಳಿಗೆ ಪ್ರತ್ಯುತ್ತರವನ್ನು ಕೊಡುತ್ತಿರುವಾಗ, ರಕ್ತವನ್ನು ಕುಡಿಯುವ ಮೂಲಕ ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದ ಬುಡಕಟ್ಟು ಜನರ ಕುರಿತು ಟೆರ್ಟುಲಿಯನನು ತಿಳಿಸಿದನು. “ಅಖಾಡದಲ್ಲಿ ಒಂದು ಪ್ರದರ್ಶನವು ನಡೆದಾಗ, ಅತಿದಾಹಿಗಳಾದ [ಕೆಲವರು] . . . ತಮ್ಮ ಅಪಸ್ಮಾರವನ್ನು ಗುಣಪಡಿಸಲಿಕ್ಕಾಗಿ ಅಪರಾಧಿಗಳ ತಾಜಾ ರಕ್ತವನ್ನು ಶೇಖರಿಸಿದರು” ಎಂಬುದನ್ನೂ ಅವನು ತಿಳಿಸಿದನು.

ಇಂತಹ ಆಚಾರಗಳು (ಕೆಲವು ರೋಮನರು ಅದನ್ನು ಆರೋಗ್ಯದ ಕಾರಣಗಳಿಗಾಗಿ ಮಾಡಿದರೂ) ಕ್ರೈಸ್ತರ ದೃಷ್ಟಿಯಲ್ಲಿ ತಪ್ಪಾಗಿದ್ದವು. “ನಮ್ಮ ದೈನಂದಿನ ಆಹಾರದಲ್ಲಿ ನಾವು ಪ್ರಾಣಿಗಳ ರಕ್ತವನ್ನೂ ಸೇರಿಸುವುದಿಲ್ಲ” ಎಂದು ಟೆರ್ಟುಲಿಯನನು ಬರೆದನು. ನಿಜ ಕ್ರೈಸ್ತರ ಸಮಗ್ರತೆಯನ್ನು ಪರೀಕ್ಷಿಸಲಿಕ್ಕಾಗಿ ರೋಮನರು ಅವರಿಗೆ ರಕ್ತಮಿಶ್ರಿತ ಆಹಾರವನ್ನು ಕೊಡುತ್ತಿದ್ದರು. ಟೆರ್ಟುಲಿಯನನು ಮುಂದುವರಿಸುತ್ತಾ ಹೇಳಿದ್ದು: “ಪ್ರಾಣಿಗಳ ರಕ್ತವೇ ಅವರಿಗೆ [ಕ್ರೈಸ್ತರಿಗೆ] ಹೇವರಿಕೆಯನ್ನು ಉಂಟುಮಾಡುತ್ತದೆಂಬ ಭರವಸೆ ನಿಮಗಿರುವಾಗ, ಅವರು ಮಾನವ ರಕ್ತಕ್ಕಾಗಿ ಅತ್ಯಾಶೆಪಡುತ್ತಾರೆಂದು ನೀವು ಹೇಗೆ ತಾನೇ ನೆನಸಬಹುದು ಎಂದು ನಾನು ಈಗ ನಿಮಗೆ ಕೇಳುತ್ತೇನೆ.”

ಇಂದು, ರಕ್ತವನ್ನು ತೆಗೆದುಕೊಳ್ಳುವಂತೆ ಒಬ್ಬ ಡಾಕ್ಟರ್‌ ಹೇಳುವಾಗ, ಸರ್ವಶಕ್ತ ದೇವರ ನಿಯಮಗಳು ಇದಕ್ಕೆ ವಿರುದ್ಧವಾಗಿವೆಯೆಂಬುದರ ಬಗ್ಗೆ ಯೋಚಿಸುವವರು ತೀರ ಕಡಿಮೆ. ಯೆಹೋವನ ಸಾಕ್ಷಿಗಳು ಖಂಡಿತವಾಗಿಯೂ ಬದುಕಿರಲು ಬಯಸುತ್ತಾರೆ. ಆದರೆ ಅದೇ ಸಮಯದಲ್ಲಿ, ರಕ್ತದ ಕುರಿತಾದ ಯೆಹೋವನ ನಿಯಮಕ್ಕೆ ವಿಧೇಯರಾಗಲು ಅವರು ಬದ್ಧರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಪ್ರಸ್ತುತ ಪ್ರಗತಿಯನ್ನು ನಾವು ಗಮನಿಸುವಾಗ, ಈ ಆಜ್ಞೆಯು ನಮಗೆ ಈಗ ಯಾವ ಅರ್ಥದಲ್ಲಿದೆ?

IIನೆಯ ವಿಶ್ವ ಯುದ್ಧದ ನಂತರ ರಕ್ತಪೂರಣಗಳು ಸರ್ವಸಾಮಾನ್ಯವಾಗಲು ತೊಡಗಿದಂತೆ, ಇದು ದೇವರ ನಿಯಮಕ್ಕೆ ವಿರುದ್ಧವಾಗಿದೆಯೆಂಬುದನ್ನು ಯೆಹೋವನ ಸಾಕ್ಷಿಗಳು ತಿಳಿದುಕೊಂಡರು. ನಾವು ಈ ಸಂಗತಿಯನ್ನು ಈಗಲೂ ನಂಬುತ್ತೇವೆ. ಆದರೆ, ಸಮಯ ದಾಟಿದಂತೆ ಔಷಧೋಪಚಾರವು ಬದಲಾಗಿದೆ. ಇಂದು ಹೆಚ್ಚಿನ ಪೂರಣಗಳು, ಸ್ವತಃ ರಕ್ತದ ಪೂರಣಗಳಾಗಿರದೆ, ರಕ್ತದ ಪ್ರಮುಖ ಘಟಕಗಳಲ್ಲಿ ಯಾವುದೇ ಒಂದು ಘಟಕದ ಪೂರಣವಾಗಿರುತ್ತವೆ. ಈ ಪ್ರಮುಖ ಘಟಕಗಳು (1) ಕೆಂಪು ರಕ್ತಕಣಗಳು, (2) ಬಿಳಿ ರಕ್ತಕಣಗಳು, (3) ಪ್ಲೇಟ್‌ಲೆಟ್‌ಗಳು ಮತ್ತು (4) ದ್ರವ ಭಾಗವಾಗಿರುವ ಪ್ಲಾಸ್ಮಾ [ಸೇರಮ್‌]ಗಳೇ ಆಗಿವೆ. ರೋಗಿಯ ಸ್ಥಿತಿಗತಿಯ ಆಧಾರದ ಮೇಲೆ ವೈದ್ಯರು, ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲೇಟ್‌ಲೆಟ್‌ಗಳು ಅಥವಾ ಪ್ಲಾಸ್ಮಾವನ್ನು ತೆಗೆದುಕೊಳ್ಳುವಂತೆ ಶಿಫಾರಸ್ಸು ಮಾಡಬಹುದು. ರಕ್ತದಿಂದ ಇಂತಹ ಪ್ರಮುಖ ಘಟಕಗಳನ್ನು ಆಯ್ಕೆಮಾಡಿ ರೋಗಿಗೆ ಕೊಡಲು ಸಾಧ್ಯವಿರುವುದರಿಂದ, ರಕ್ತದ ಒಂದೇ ಒಂದು ಯೂನಿಟ್‌ ಅನ್ನು ಒಂದಕ್ಕಿಂತಲೂ ಹೆಚ್ಚು ರೋಗಿಗಳಿಗೆ ಹಂಚಸಾಧ್ಯವಿದೆ. ರಕ್ತವನ್ನೇ ಅಥವಾ ರಕ್ತದ ನಾಲ್ಕು ಪ್ರಮುಖ ಘಟಕಗಳಲ್ಲಿ ಯಾವುದೇ ಒಂದು ಘಟಕವನ್ನು ತೆಗೆದುಕೊಳ್ಳುವುದು ದೇವರ ನಿಯಮವನ್ನು ಉಲ್ಲಂಘಿಸುತ್ತದೆಂಬುದನ್ನು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಈ ಬೈಬಲ್‌ ಆಧಾರಿತ ಅಭಿಪ್ರಾಯಕ್ಕೆ ಅಂಟಿಕೊಂಡಿರುವುದರಿಂದ, ಅವರು ರಕ್ತದಿಂದ ಹರಡುವ ಅನೇಕ ರೋಗಗಳಿಂದ ಸಂರಕ್ಷಿಸಲ್ಪಟ್ಟಿದ್ದಾರೆ. ಈ ರೋಗಗಳಲ್ಲಿ ಹೆಪಟೈಟಿಸ್‌ ಮತ್ತು ಏಡ್ಸ್‌ ರೋಗಗಳು ಸಹ ಸೇರಿವೆ.

ಆದರೆ, ರಕ್ತದ ಆ ಪ್ರಮುಖ ಘಟಕಗಳನ್ನು ಸಹ ಸಂಸ್ಕರಿಸಸಾಧ್ಯವಿದೆ. ಆದುದರಿಂದ, ಈ ರಕ್ತದ ಪ್ರಮುಖ ಘಟಕಗಳಿಂದ ತೆಗೆಯಲಾಗುವ ಅಂಶಗಳ ಕುರಿತಾಗಿ ಪ್ರಶ್ನೆಗಳೇಳುತ್ತವೆ. ಅಂತಹ ರಕ್ತದ ಅಂಶಗಳನ್ನು ಯಾವ ವಿಧದಲ್ಲಿ ಉಪಯೋಗಿಸಲಾಗುತ್ತದೆ, ಮತ್ತು ಅವುಗಳನ್ನು ತೆಗೆದುಕೊಳ್ಳಬೇಕೊ ಇಲ್ಲವೊ ಎಂಬುದನ್ನು ನಿರ್ಣಯಿಸುವಾಗ ಒಬ್ಬ ಕ್ರೈಸ್ತನು ಏನನ್ನು ಪರಿಗಣಿಸಬೇಕು?

ರಕ್ತವು ತುಂಬ ಸಂಕೀರ್ಣವಾದ ದ್ರವವಾಗಿದೆ. 90 ಪ್ರತಿಶತ ನೀರಾಗಿರುವ ಪ್ಲಾಸ್ಮಾದಲ್ಲೂ, ನೂರಾರು ಹಾರ್ಮೋನುಗಳು, ಅಜೈವಿಕ ಲವಣಗಳು, ಕಿಣ್ವಗಳು ಮತ್ತು ಪೌಷ್ಟಿಕಾಂಶಗಳಿವೆ. ಈ ಪೌಷ್ಟಿಕಾಂಶಗಳಲ್ಲಿ ಖನಿಜಗಳು ಹಾಗೂ ಸಕ್ಕರೆಯು ಒಳಗೂಡಿದೆ. ಪ್ಲಾಸ್ಮಾದಲ್ಲಿ ಆಲ್ಬುಮಿನ್‌ನಂತಹ ಸಸಾರಜನಕಗಳು, ರಕ್ತ ಹೆಪ್ಪುಗಟ್ಟಿಸುವಂತಹ ಅಂಶಗಳು, ಮತ್ತು ರೋಗಗಳನ್ನು ಪ್ರತಿರೋಧಿಸುವ ಪ್ರತಿಜನಕಗಳೂ ಇವೆ. ತಂತ್ರಜ್ಞರು ಪ್ಲಾಸ್ಮಾದಿಂದ ಅನೇಕ ಸಸಾರಜನಕಗಳನ್ನು ವಿಂಗಡಿಸಿ, ಅವುಗಳನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ, ಅನೇಕವೇಳೆ ರಕ್ತಸ್ರಾವವಾಗುತ್ತಿರುವ ಹೀಮೋಫೀಲಿಯ ರೋಗಿಗಳಿಗೆ ರಕ್ತ ಹೆಪ್ಪುಗಟ್ಟಿಸುವ ಫ್ಯಾಕ್ಟರ್‌ VIIIನ್ನು ಕೊಡಲಾಗುತ್ತದೆ. ಅಥವಾ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ರೋಗಗಳಿದ್ದರೆ, ಈಗಾಗಲೇ ಸೋಂಕುರಕ್ಷಣೆಯನ್ನು ಪಡೆದುಕೊಂಡಿರುವ ಜನರ ಪ್ಲಾಸ್ಮಾದಿಂದ ತೆಗೆಯಲಾಗಿರುವ ಗಾಮಾ ಗ್ಲಾಬುಲಿನ್‌ನ ಸೂಜಿಮದ್ದುಗಳನ್ನು ವೈದ್ಯರು ಕೊಡಬಹುದು. ಬೇರೆ ಕೆಲವೊಂದು ಪ್ಲಾಸ್ಮಾ ಸಸಾರಜನಕಗಳನ್ನು ವೈದ್ಯಕೀಯವಾಗಿ ಉಪಯೋಗಿಸಲಾಗುತ್ತದಾದರೂ, ಮೇಲೆ ತಿಳಿಸಲ್ಪಟ್ಟಿರುವ ವಿಷಯಗಳು, ರಕ್ತದ ಒಂದು ಪ್ರಮುಖ ಘಟಕವನ್ನು (ಪ್ಲಾಸ್ಮಾ) ಸಂಸ್ಕರಿಸಿ, ಅದರ ಅಂಶಗಳನ್ನು ಹೇಗೆ ತೆಗೆಯಲಾಗುತ್ತದೆಂಬುದನ್ನು ತೋರಿಸುತ್ತವೆ. *

ಪ್ಲಾಸ್ಮಾದಿಂದ ವಿಭಿನ್ನ ಅಂಶಗಳನ್ನು ತೆಗೆಯಲು ಸಾಧ್ಯವಿರುವಂತೆಯೇ, ಬೇರೆ ಪ್ರಮುಖ ಘಟಕಗಳನ್ನೂ (ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲೇಟ್‌ಲೆಟ್‌ಗಳು) ಸಂಸ್ಕರಿಸಿ, ಅವುಗಳಲ್ಲಿನ ಚಿಕ್ಕ ಅಂಶಗಳನ್ನು ಬೇರ್ಪಡಿಸಸಾಧ್ಯವಿದೆ. ಉದಾಹರಣೆಗೆ, ಕೆಲವೊಂದು ಸಾಂಕ್ರಾಮಿಕ ಸೋಂಕುಗಳನ್ನು ಮತ್ತು ಕ್ಯಾನ್ಸರ್‌ ರೋಗಗಳ ಚಿಕಿತ್ಸೆಗಾಗಿ ಉಪಯೋಗಿಸಲಾಗುವ ಇಂಟರ್‌ಫೆರಾನ್ಸ್‌ ಮತ್ತು ಇಂಟರ್‌ಲ್ಯೂಕಿನ್ಸ್‌ಗಳನ್ನು ಬಿಳಿ ರಕ್ತಕಣಗಳಿಂದ ತೆಗೆಯಬಹುದು. ಕಿರುಫಲಕಗಳನ್ನು ಸಂಸ್ಕರಿಸಿ, ಗಾಯಗಳನ್ನು ಗುಣಪಡಿಸುವ ಒಂದು ಅಂಶವನ್ನು ತೆಗೆಯಸಾಧ್ಯವಿದೆ. ಮತ್ತು (ಕಡಿಮೆಪಕ್ಷ ಆರಂಭದಲ್ಲಿ) ರಕ್ತದ ಘಟಕಗಳ ಸತ್ತ್ವಗಳುಳ್ಳ ಬೇರೆ ಔಷಧಗಳೂ ತಯಾರಾಗುತ್ತಾ ಇವೆ. ಇಂತಹ ಚಿಕಿತ್ಸೆಗಳಲ್ಲಿ, ರಕ್ತದ ಆ ಪ್ರಮುಖ ಘಟಕಗಳ ಪೂರಣಗಳು ಇರುವುದಿಲ್ಲ, ಬದಲಾಗಿ ಆ ಘಟಕಗಳಿಂದ ತೆಗೆಯಲಾದ ಭಾಗಗಳ ಅಥವಾ ಅಂಶಗಳ ಪೂರಣಗಳು ಸೇರಿರುತ್ತವೆ. ಕ್ರೈಸ್ತರು ತಮ್ಮ ವೈದ್ಯಕೀಯ ಚಿಕಿತ್ಸೆಯಲ್ಲಿ ಇಂತಹ ರಕ್ತದ ಅಂಶಗಳನ್ನು ತೆಗೆದುಕೊಳ್ಳಬೇಕೊ? ಅದನ್ನು ನಾವು ಹೇಳಸಾಧ್ಯವಿಲ್ಲ. ಯಾಕೆಂದರೆ ಅದರ ಬಗ್ಗೆ ಬೈಬಲ್‌ ಹೆಚ್ಚಿನ ವಿವರಗಳನ್ನು ಕೊಡುವುದಿಲ್ಲ. ಆದುದರಿಂದ, ಒಬ್ಬ ಕ್ರೈಸ್ತನು ದೇವರ ಮುಂದೆ ತನ್ನ ಸ್ವಂತ ಮನಸ್ಸಾಕ್ಷಿಗನುಸಾರ ನಿರ್ಣಯವನ್ನು ಮಾಡಬೇಕು.

ಕೆಲವರು ರಕ್ತದಿಂದ ತೆಗೆಯಲ್ಪಟ್ಟಿರುವ ಯಾವುದೇ ಉತ್ಪನ್ನವನ್ನೂ (ಅಂದರೆ ತಾತ್ಕಾಲಿಕ ನಿಷ್ಕ್ರಿಯ ಸೋಂಕುರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಕೊಡಲಾಗುವ ರಕ್ತದ ಅಂಶಗಳನ್ನೂ) ಸ್ವೀಕರಿಸಲು ನಿರಾಕರಿಸುವರು. ಅವರ ಅಭಿಪ್ರಾಯದಲ್ಲಿ ‘ರಕ್ತವನ್ನು ವಿಸರ್ಜಿಸು’ ಎಂಬ ದೇವರ ಆಜ್ಞೆಯನ್ನು ಪಾಲಿಸುವ ಅರ್ಥವು ಇದೇ ಆಗಿದೆ. ದೇವರು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮವು, ಒಂದು ಜೀವಿಯಿಂದ ತೆಗೆಯಲಾಗುವ ರಕ್ತವನ್ನು ‘ಭೂಮಿಯ ಮೇಲೆ ಸುರಿದುಬಿಡುವುದನ್ನು’ ಅವಶ್ಯಪಡಿಸಿತೆಂದು ಅವರು ತರ್ಕಿಸುತ್ತಾರೆ. (ಧರ್ಮೋಪದೇಶಕಾಂಡ 12:22-24) ಆದರೆ ಈ ನಿಯಮಕ್ಕೂ, ನಾವು ಚರ್ಚಿಸುತ್ತಿರುವ ಈ ಪ್ರಸಕ್ತ ವಿಷಯಕ್ಕೂ ಏನು ಸಂಬಂಧವಿದೆ? ಗಾಮಾ ಗ್ಲಾಬುಲಿನ್‌, ರಕ್ತ ಪ್ರಧಾನಾಂಶವಾಗಿರುವ ಹೆಪ್ಪುಗಟ್ಟಿಸುವ ಫ್ಯಾಕ್ಟರ್‌ಗಳು, ಮುಂತಾದವುಗಳನ್ನು ತಯಾರಿಸಲು ಮೊದಲು ರಕ್ತವನ್ನು ಶೇಖರಿಸಿ, ಸಂಸ್ಕರಿಸಬೇಕಾಗುತ್ತದೆ. ಆದುದರಿಂದಲೇ ಕೆಲವು ಕ್ರೈಸ್ತರು, ಇಡೀ ರಕ್ತವನ್ನು ಅಥವಾ ಅದರ ನಾಲ್ಕು ಪ್ರಮುಖ ಘಟಕಗಳನ್ನು ತಿರಸ್ಕರಿಸುವಂತೆಯೇ ಇಂತಹ ಉತ್ಪನ್ನಗಳನ್ನೂ ತಿರಸ್ಕರಿಸುತ್ತಾರೆ. ಅವರು ತೆಗೆದುಕೊಳ್ಳುವ ಈ ಪ್ರಾಮಾಣಿಕ, ಶುದ್ಧಾಂತಃಕರಣದ ನಿಲುವಿಗೆ ಗೌರವ ತೋರಿಸಲ್ಪಡಬೇಕು.

ಬೇರೆ ಕ್ರೈಸ್ತರು ಇದಕ್ಕಿಂತ ಭಿನ್ನವಾದ ನಿರ್ಣಯವನ್ನು ಮಾಡಬಹುದು. ಅವರು ಸಹ ಇಡೀ ರಕ್ತ, ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲೇಟ್‌ಲೆಟ್‌ಗಳು, ಅಥವಾ ಪ್ಲಾಸ್ಮಾದ ಪೂರಣಗಳನ್ನು ನಿರಾಕರಿಸುತ್ತಾರೆ. ಆದರೂ, ಈ ಪ್ರಮುಖ ಘಟಕಗಳಲ್ಲಿ ಒಂದರಿಂದ ತೆಗೆಯಲಾಗಿರುವ ಒಂದು ಅಂಶವನ್ನು ಕೊಟ್ಟು ಚಿಕಿತ್ಸೆ ನಡೆಸಲು ಅವರು ಡಾಕ್ಟರರಿಗೆ ಒಪ್ಪಿಗೆ ಕೊಡಬಹುದು. ಇಲ್ಲಿ ಕೂಡ ಭಿನ್ನಭಿನ್ನ ಅಭಿಪ್ರಾಯಗಳಿರಬಹುದು. ಒಬ್ಬ ಕ್ರೈಸ್ತನು, ಒಂದು ಗಾಮಾ ಗ್ಲಾಬುಲಿನ್‌ ಚುಚ್ಚುಮದ್ದನ್ನು ಸ್ವೀಕರಿಸಬಹುದು. ಆದರೆ ಅವನು ಕೆಂಪು ಅಥವಾ ಬಿಳಿ ರಕ್ತಕಣಗಳಿಂದ ಹೊರ ತೆಗೆಯಲಾಗಿರುವ ಅಂಶವುಳ್ಳ ಚುಚ್ಚುಮದ್ದನ್ನು ಸ್ವೀಕರಿಸಬಹುದು ಇಲ್ಲವೇ ಸ್ವೀಕರಿಸದೇ ಇರಬಹುದು. ಹೀಗಿರುವುದರಿಂದ, ಕೆಲವು ಕ್ರೈಸ್ತರು ತಾವು ರಕ್ತದ ಅಂಶಗಳನ್ನು ಸ್ವೀಕರಿಸಬಹುದೆಂಬ ತೀರ್ಮಾನಕ್ಕೆ ಬರುವಂತೆ ಮಾಡಬಹುದಾದ ಕೆಲವು ಕಾರಣಗಳು ಯಾವುವು?

ಜೂನ್‌ 1, 1990ರ ದ ವಾಚ್‌ಟವರ್‌ ಪತ್ರಿಕೆಯಲ್ಲಿನ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವು ಹೇಳಿದ್ದೇನೆಂದರೆ, ಒಬ್ಬ ಗರ್ಭಿಣಿ ಸ್ತ್ರೀಯ ರಕ್ತಸಾರ ಸಸಾರಜನಕಗಳು (ಅಂಶಗಳು) ಭ್ರೂಣದ ಪ್ರತ್ಯೇಕವಾದ ರಕ್ತವ್ಯೂಹದೊಳಗೆ ದಾಟಿಹೋಗುತ್ತವೆ. ಹೀಗೆ ತಾಯಿಯು ತನ್ನ ಮಗುವಿಗೆ ಇಮ್ಯುನೋಗ್ಲಾಬುಲಿನ್‌ಗಳನ್ನು ದಾಟಿಸಿ, ಅದಕ್ಕೆ ಅತ್ಯಮೂಲ್ಯವಾಗಿರುವ ಸೋಂಕುರಕ್ಷಣೆಯನ್ನು ಒದಗಿಸುತ್ತಾಳೆ. ಅಲ್ಲದೆ, ಭ್ರೂಣದ ಕೆಂಪು ರಕ್ತಕಣಗಳು ತಮ್ಮ ಸಾಮಾನ್ಯವಾದ ಜೀವನಾವಧಿಯನ್ನು ಪ್ರತ್ಯೇಕವಾಗಿ ಪೂರ್ಣಗೊಳಿಸಿದಂತೆ, ಅವುಗಳ ಆಮ್ಲಜನಕ ಹೊತ್ತಿರುವ ಭಾಗವು ಸಂಸ್ಕರಿಸಲ್ಪಡುತ್ತದೆ. ಅದರಲ್ಲಿ ಸ್ವಲ್ಪ ಭಾಗವು, ಬಿಲಿರುಬಿನ್‌ ಆಗಿ ಪರಿವರ್ತಿಸಲ್ಪಡುತ್ತದೆ. ಇದು ಜರಾಯುವನ್ನು (ಪ್ಲಸೆಂಟವನ್ನು) ದಾಟಿ ತಾಯಿಗೆ ಸೇರಿ, ಅವಳ ದೇಹದ ತ್ಯಾಜ್ಯವಸ್ತುಗಳೊಂದಿಗೆ ಹೊರಹೋಗುತ್ತದೆ. ಹೀಗೆ ಈ ಸಹಜ ಕ್ರಿಯೆಯಿಂದ ರಕ್ತದ ಅಂಶಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ದಾಟಿಸಲ್ಪಡುವುದರಿಂದ, ತಾವು ಪ್ಲಾಸ್ಮಾ ಅಥವಾ ರಕ್ತಕಣಗಳಿಂದ ತೆಗೆಯಲಾಗಿರುವ ಒಂದು ಅಂಶವನ್ನು ಸ್ವೀಕರಿಸಬಹುದೆಂದು ಕೆಲವು ಕ್ರೈಸ್ತರು ತೀರ್ಮಾನಿಸಬಹುದು.

ವೈಯಕ್ತಿಕ ಅಭಿಪ್ರಾಯಗಳು ಮತ್ತು ಮನಸ್ಸಾಕ್ಷಿಗನುಸಾರ ಮಾಡಲಾಗುವ ನಿರ್ಣಯಗಳಲ್ಲಿ ವ್ಯತ್ಯಾಸಗಳಿರುವುದರಿಂದ, ಈ ವಿವಾದಾಂಶವು ಅಷ್ಟೇನೂ ಪ್ರಾಮುಖ್ಯವಲ್ಲವೆಂದು ಇದರರ್ಥವೊ? ಇಲ್ಲ. ಇದು ಒಂದು ಗಂಭೀರ ವಿಷಯವಾಗಿದೆ. ಆದರೂ, ಮೂಲಭೂತವಾಗಿರುವ ಒಂದು ಸರಳ ವಿಷಯವಿದೆ. ಇಷ್ಟರ ವರೆಗಿನ ಮಾಹಿತಿಯು ತೋರಿಸುವುದೇನೆಂದರೆ, ಯೆಹೋವನ ಸಾಕ್ಷಿಗಳು ಇಡೀ ರಕ್ತ ಮತ್ತು ರಕ್ತದ ಪ್ರಮುಖ ಘಟಕಾಂಶಗಳ ಪೂರಣಗಳನ್ನು ನಿರಾಕರಿಸುತ್ತಾರೆ. ಕ್ರೈಸ್ತರು ‘ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ವಿಸರ್ಜಿಸುವಂತೆ’ ಬೈಬಲು ಹೇಳುತ್ತದೆ. (ಅ. ಕೃತ್ಯಗಳು 15:29) ಆದರೆ, ಈ ಯಾವುದೇ ಪ್ರಮುಖ ಘಟಕಗಳಿಂದ ತೆಗೆಯಲಾಗುವ ಅಂಶಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ, ಪ್ರತಿಯೊಬ್ಬ ಕ್ರೈಸ್ತನು ಜಾಗರೂಕತೆಯಿಂದ ಮತ್ತು ಪ್ರಾರ್ಥನಾಪೂರ್ವಕವಾಗಿ ಇದನ್ನು ಪರಿಗಣಿಸಬೇಕು ಮತ್ತು ತನ್ನ ಮನಸ್ಸಾಕ್ಷಿಗನುಸಾರ ನಿರ್ಣಯವನ್ನು ಮಾಡಬೇಕು.

ಹೆಚ್ಚಿನ ಜನರು, ತತ್‌ಕ್ಷಣ ಉಪಶಮನವನ್ನು ನೀಡುವಂತಹ ಯಾವುದೇ ರೀತಿಯ ಚಿಕಿತ್ಸೆಯನ್ನು ಸ್ವೀಕರಿಸಲು ಸಿದ್ಧರಿರುತ್ತಾರೆ. ಆರೋಗ್ಯಕ್ಕೆ ಅಪಾಯವನ್ನೊಡ್ಡಬಲ್ಲ ಚಿಕಿತ್ಸೆಗಳ ವಿಷಯದಲ್ಲೂ, ಉದಾಹರಣೆಗೆ ರಕ್ತದ ಉತ್ಪನ್ನಗಳನ್ನು ಉಪಯೋಗಿಸುವಂತಹ ರೀತಿಯ ಚಿಕಿತ್ಸೆಯ ವಿಷಯದಲ್ಲೂ ಇದು ಸತ್ಯ. ಪ್ರಾಮಾಣಿಕ ಕ್ರೈಸ್ತನೊಬ್ಬನು, ಕೇವಲ ಶಾರೀರಿಕ ಅಂಶಗಳಿಗಿಂತಲೂ ಹೆಚ್ಚನ್ನು ಒಳಗೂಡಿರುವ ಮತ್ತು ಹೆಚ್ಚು ವಿಶಾಲವಾದ ಹಾಗೂ ಹೆಚ್ಚು ಸಮತೋಲನವುಳ್ಳ ಅಭಿಪ್ರಾಯವನ್ನು ಹೊಂದಿರಲು ಪ್ರಯತ್ನಿಸುತ್ತಾನೆ. ಉತ್ತಮ ಮಟ್ಟದ ವೈದ್ಯಕೀಯ ಆರೈಕೆಯನ್ನು ಕೊಡಲಿಕ್ಕಾಗಿ ಮಾಡಲ್ಪಡುವ ಪ್ರಯತ್ನಗಳನ್ನು ಯೆಹೋವನ ಸಾಕ್ಷಿಗಳು ಗಣ್ಯಮಾಡುತ್ತಾರೆ. ಆದರೆ ಯಾವುದೇ ರೀತಿಯ ಚಿಕಿತ್ಸೆಯಲ್ಲಿ ಎಷ್ಟು ಅಪಾಯವಿದೆ ಮತ್ತು ಎಷ್ಟು ಪ್ರಯೋಜನಗಳಿವೆ ಎಂಬುದನ್ನು ಅವರು ತೂಗಿನೋಡುತ್ತಾರೆ. ಆದರೆ ರಕ್ತದಿಂದ ತೆಗೆಯಲಾಗುವ ಉತ್ಪನ್ನಗಳ ವಿಷಯಕ್ಕೆ ಬರುವಾಗ, ನಮ್ಮ ಜೀವದಾತನಾದ ದೇವರು ಏನು ಹೇಳುತ್ತಾನೊ ಅದಕ್ಕೆ ಮತ್ತು ಆತನೊಂದಿಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ಅವರು ವಿಶೇಷವಾಗಿ ತೂಗಿನೋಡುತ್ತಾರೆ.—ಕೀರ್ತನೆ 36:9.

ಕೀರ್ತನೆಗಾರನಿಗಿದ್ದಂತಹ ರೀತಿಯ ಭರವಸೆಯಿರುವುದು ಒಬ್ಬ ಕ್ರೈಸ್ತನಿಗೆ ಎಂತಹ ಒಂದು ಆಶೀರ್ವಾದವಾಗಿದೆ! ಕೀರ್ತನೆಗಾರನು ಬರೆದುದು: “ಯೆಹೋವದೇವರು ಸೂರ್ಯನೂ ಗುರಾಣಿಯೂ ಆಗಿದ್ದಾನಲ್ಲಾ. ಯೆಹೋವನು ಕೃಪೆಯನ್ನೂ ಘನವನ್ನೂ ಅನುಗ್ರಹಿಸುವನು; ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು? . . . ಯೆಹೋವನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.”—ಕೀರ್ತನೆ 84:11, 12.

[ಪಾದಟಿಪ್ಪಣಿ]

^ ಪ್ಯಾರ. 12 ಜೂನ್‌ 15, 1978 (ಇಂಗ್ಲಿಷ್‌) ಮತ್ತು ಅಕ್ಟೋಬರ್‌ 1, 1994ರ ಕಾವಲಿನಬುರುಜು ಪತ್ರಿಕೆಗಳಲ್ಲಿನ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವನ್ನು ನೋಡಿರಿ. ಔಷಧವಸ್ತುಗಳ ಕಂಪನಿಗಳು, ರಕ್ತದಿಂದ ತೆಗೆಯಲ್ಪಟ್ಟಿರದ ಕೃತಕ ಉತ್ಪನ್ನಗಳನ್ನು ತಯಾರಿಸಿವೆ ಮತ್ತು ಇವುಗಳನ್ನು ಹಿಂದೆ ಉಪಯೋಗಿಸಲಾಗುತ್ತಿದ್ದ ರಕ್ತದ ಅಂಶಗಳ ಬದಲಿಗೆ ಶಿಫಾರಸ್ಸು ಮಾಡಬಹುದು.

[ಪುಟ 30ರಲ್ಲಿರುವ ಚೌಕ]

ಡಾಕ್ಟರರಿಗೆ ಕೇಳಬಹುದಾದಂತಹ ಪ ಶ್ನೆಗಳು

ರಕ್ತದ ಒಂದು ಉತ್ಪನ್ನವು ಒಳಗೂಡಿರುವಂತಹ ಒಂದು ಶಸ್ತ್ರಚಿಕಿತ್ಸೆಯನ್ನು ಅಥವಾ ಬೇರಾವುದೋ ಚಿಕಿತ್ಸೆಯನ್ನು ನೀವು ಮಾಡಿಸಿಕೊಳ್ಳಬೇಕಾಗಿರುವಲ್ಲಿ, ಹೀಗೆ ಕೇಳಿರಿ:

ನಾನೊಬ್ಬ ಯೆಹೋವನ ಸಾಕ್ಷಿಯಾಗಿರುವುದರಿಂದ, ಯಾವುದೇ ಪರಿಸ್ಥಿತಿಯಲ್ಲಿ ನನಗೆ ರಕ್ತ ಪೂರಣಗಳು (ಇಡೀ ರಕ್ತ, ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲೇಟ್‌ಲೆಟ್‌ಗಳು, ಅಥವಾ ಪ್ಲಾಸ್ಮಾ) ಕೊಡಲ್ಪಡಬಾರದು ಎಂದು ನಾನು ಕೊಟ್ಟಿರುವ ನಿರ್ದೇಶನವು, ಈ ಚಿಕಿತ್ಸೆಯಲ್ಲಿ ಒಳಗೂಡಿರುವ ಎಲ್ಲ ವೈದ್ಯಕೀಯ ಸಿಬ್ಬಂದಿಗೆ ತಿಳಿದಿದೆಯೊ?

ವೈದ್ಯರು ಬರೆದು ಕೊಡುವ ಯಾವುದೇ ಔಷಧವು, ರಕ್ತರಸ, ಕೆಂಪು ಅಥವಾ ಬಿಳಿ ರಕ್ತಕಣಗಳು, ಅಥವಾ ಕಿರುಫಲಕಗಳಿಂದ ತಯಾರಿಸಲ್ಪಟ್ಟಿರುವಲ್ಲಿ, ಹೀಗೆ ಕೇಳಿರಿ:

ಈ ಔಷಧವು, ರಕ್ತದ ನಾಲ್ಕು ಪ್ರಮುಖ ಘಟಕಗಳಲ್ಲಿ ಒಂದರಿಂದ ತಯಾರಿಸಲ್ಪಟ್ಟಿದೆಯೊ? ಹೀಗಿರುವಲ್ಲಿ, ಆ ಔಷಧದಲ್ಲಿ ಯಾವ ವಸ್ತುಗಳಿಂದ ತಯಾರಿಸಲಾಗಿದೆಯೆಂಬುದನ್ನು ವಿವರಿಸುವಿರೊ?

ರಕ್ತದಿಂದ ತಯಾರಿಸಲಾಗಿರುವ ಈ ಔಷಧದಲ್ಲಿ ಎಷ್ಟು ಪ್ರಮಾಣವನ್ನು ದೇಹದೊಳಗೆ ಸೇರಿಸಲಾಗುವುದು ಮತ್ತು ಹೇಗೆ ಸೇರಿಸಲಾಗುವುದು?

ನಾನು ರಕ್ತದ ಈ ಅಂಶವನ್ನು ತೆಗೆದುಕೊಳ್ಳುವಂತೆ ನನ್ನ ಮನಸ್ಸಾಕ್ಷಿಯು ಅನುಮತಿಸುವಲ್ಲಿ, ಇದರಲ್ಲಿ ಯಾವೆಲ್ಲ ವೈದ್ಯಕೀಯ ಗಂಡಾಂತರಗಳಿವೆ?

ನಾನು ರಕ್ತದ ಈ ಅಂಶವನ್ನು ನಿರಾಕರಿಸುವಂತೆ ನನ್ನ ಮನಸ್ಸಾಕ್ಷಿ ಹೇಳುವಲ್ಲಿ, ಬೇರೆ ಯಾವ ರೀತಿಯ ಚಿಕಿತ್ಸೆಯನ್ನು ಉಪಯೋಗಿಸಸಾಧ್ಯವಿದೆ?

ನಾನು ಈ ವಿಷಯದ ಕುರಿತಾಗಿ ಇನ್ನೂ ಹೆಚ್ಚು ಯೋಚಿಸಿದ ನಂತರ, ನನ್ನ ತೀರ್ಮಾನವೇನೆಂಬುದನ್ನು ನಾನು ನಿಮಗೆ ಯಾವಾಗ ತಿಳಿಸಬಹುದು?