ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನೇಕ ಜನಾಂಗಗಳಿಗೆ ಒಬ್ಬ ಬೆಳಕುವಾಹಕ

ಅನೇಕ ಜನಾಂಗಗಳಿಗೆ ಒಬ್ಬ ಬೆಳಕುವಾಹಕ

ಜೀವನ ಕಥೆ

ಅನೇಕ ಜನಾಂಗಗಳಿಗೆ ಒಬ್ಬ ಬೆಳಕುವಾಹಕ

ಜಾರ್ಜ್‌ ಯಂಗ್‌ರವರ ಕಥೆ ರೂತ್‌ ಯಂಗ್‌ ನಿಕೊಲ್ಸನ್‌ರವರು ಹೇಳಿದಂತೆ

“ಹಾಗಾದರೆ ನಮ್ಮ ಚರ್ಚುಗಳ ವೇದಿಕೆಯಲ್ಲಿ ಈ ಮೌನವೇಕೆ? . . . ನಾನು ಇದುವರೆಗೂ ಬರೆದಿರುವ ಸಂಗತಿಗಳು ಸತ್ಯವೆಂದು ನಮಗೆ ರುಜುಪಡಿಸಲ್ಪಟ್ಟ ಮೇಲೆಯೂ ನಾವು ಬಾಯಿಮುಚ್ಚಿಕೊಂಡು ಇದ್ದರೆ ನಾವು ಎಂತಹ ಪುರುಷರು? ನಾವು ಜನರನ್ನು ಅಜ್ಞಾನದ ಅಂಧಕಾರದಲ್ಲಿ ಇಡದೆ, ಸತ್ಯವನ್ನು ಧೈರ್ಯದಿಂದ ಮತ್ತು ಮುಚ್ಚುಮರೆಯಿಲ್ಲದೆ ಘೋಷಿಸೋಣ.”

ಈ ಮಾತುಗಳು ನನ್ನ ತಂದೆಯವರು ಬರೆದಿದ್ದ 33 ಪುಟಗಳಷ್ಟು ಉದ್ದದ ಪತ್ರದಲ್ಲಿದ್ದವು. ಆ ಪತ್ರದಲ್ಲಿ ಅವರು, ಚರ್ಚಿನ ರೆಜಿಸ್ಟರ್‌ನಿಂದ ತನ್ನ ಹೆಸರನ್ನು ತೆಗೆದುಹಾಕುವಂತೆ ವಿನಂತಿಸಿಕೊಂಡಿದ್ದರು. ಅದು 1913ನೆಯ ಇಸವಿಯಾಗಿತ್ತು. ಅಂದಿನಿಂದ ನನ್ನ ತಂದೆಯವರು ಅನೇಕ ಜನಾಂಗಗಳಿಗೆ ಒಬ್ಬ ಬೆಳಕುವಾಹಕರಾಗಿ ಸೇವೆಸಲ್ಲಿಸತೊಡಗಿದರು. ಇದು ವಿಶೇಷವಾದ ಘಟನೆಗಳಿಂದ ಕೂಡಿದ ಅವರ ಜೀವನದ ಆರಂಭವಾಗಿತ್ತು. (ಫಿಲಿಪ್ಪಿ 2:15) ನಾನು ಬಾಲಕಿಯಾಗಿದ್ದಾಗಲೇ, ನನ್ನ ಸಂಬಂಧಿಕರಿಂದ ಮತ್ತು ಐತಿಹಾಸಿಕ ಸಾಹಿತ್ಯದಿಂದ ನನ್ನ ತಂದೆಯವರ ಅನುಭವಗಳನ್ನು ಸಂಗ್ರಹಿಸಲಾರಂಭಿಸಿದೆ. ಅವರ ಜೀವಿತದಲ್ಲಾದ ಘಟನೆಗಳ ಕುರಿತಾದ ಕಥೆಗಳನ್ನು ಒಟ್ಟುಗೂಡಿಸಿ ಸರಿಯಾಗಿ ಜೋಡಿಸುವುದರಲ್ಲಿ ನನ್ನ ಸ್ನೇಹಿತರು ನನಗೆ ಸಹಾಯಮಾಡಿದರು. ತಂದೆಯವರ ಜೀವನವು ನನಗೆ ಅಪೊಸ್ತಲ ಪೌಲನ ಜೀವನವನ್ನು ನೆನಪಿಗೆ ತರುತ್ತದೆ. ‘ಅನ್ಯಜನರಿಗೆ ಅಪೊಸ್ತಲ’ನಾಗಿದ್ದ ಪೌಲನಂತೆಯೇ ನನ್ನ ತಂದೆಯೂ ಇದ್ದರು. ಅಂದರೆ, ಪ್ರತಿಯೊಂದು ದೇಶ ಮತ್ತು ದ್ವೀಪದ ಜನರಿಗೆ ಯೆಹೋವನ ಸಂದೇಶವನ್ನು ತಲಪಿಸಲು ಅವರು ಯಾವಾಗಲೂ ತುದಿಗಾಲಿನಲ್ಲಿ ನಿಲ್ಲುತ್ತಿದ್ದರು. (ರೋಮಾಪುರ 11:13; ಕೀರ್ತನೆ 107:1-3) ನಾನು ನಿಮಗೆ ನನ್ನ ತಂದೆ ಜಾರ್ಜ್‌ ಯಂಗ್‌ರ ಬಗ್ಗೆ ಇನ್ನೂ ಹೆಚ್ಚನ್ನು ಹೇಳಬಯಸುತ್ತೇನೆ.

ಆರಂಭದ ವರ್ಷಗಳು

ನನ್ನ ತಂದೆಯವರು ಜಾನ್‌ ಮತ್ತು ಮಾರ್ಗರೆಟ್‌ ಯಂಗ್‌ ಎಂಬ ದಂಪತಿಯ ಕಿರಿಯ ಪುತ್ರರಾಗಿದ್ದರು. ಇವರು ಸ್ಕಾಟಿಷ್‌ ಪ್ರೆಸ್ಬಿಟಿರಿಯನ್‌ ಧರ್ಮದವರಾಗಿದ್ದರು. ಇವರ ಕುಟುಂಬವು ಸ್ಕಾಟ್ಲೆಂಡಿನ ಎಡಿನ್‌ಬರ್ಗ್‌ನಿಂದ, ಪಶ್ಚಿಮ ಕೆನಡದಲ್ಲಿರುವ ಬ್ರಿಟಿಷ್‌ ಕೊಲಂಬಿಯಕ್ಕೆ ಸ್ಥಳಾಂತರಿಸಿದ ಸ್ವಲ್ಪ ಸಮಯದೊಳಗೆ, ಅಂದರೆ 1886, ಸೆಪ್ಟೆಂಬರ್‌ 8ರಂದು ನನ್ನ ತಂದೆ ಜನಿಸಿದರು. ತಂದೆಯವರಿಗೆ ಅಲೆಕ್ಸಾಂಡರ್‌, ಜಾನ್‌ ಮತ್ತು ಮಾಲ್ಕಮ್‌ ಎಂಬ ಮೂವರು ಅಣ್ಣಂದಿರಿದ್ದರು. ಈ ಅಣ್ಣಂದಿರು ಸ್ಕಾಟ್ಲೆಂಡಿನಲ್ಲೇ ಹುಟ್ಟಿದ್ದರು. ಇವರಿಗೆ ಮೇರಿಯನ್‌ ಎಂಬ ತಂಗಿಯಿದ್ದಳು. ಅವಳು ನನ್ನ ತಂದೆಗಿಂತ ಎರಡು ವರ್ಷ ಚಿಕ್ಕವಳಾಗಿದ್ದು, ಎಲ್ಲರೂ ಅವಳನ್ನು ಪ್ರೀತಿಯಿಂದ ನೆಲ್ಲಿ ಎಂದು ಕರೆಯುತ್ತಿದ್ದರಂತೆ.

ಈ ಐದು ಮಂದಿ ಮಕ್ಕಳು, ಬ್ರಿಟಿಷ್‌ ಕೊಲಂಬಿಯದ ವಿಕ್ಟೋರಿಯದಿಂದ ಸ್ವಲ್ಪ ದೂರದಲ್ಲಿದ್ದ ಸಾನಿಕ್‌ ಪಟ್ಟಣದ ಒಂದು ಫಾರ್ಮ್‌ನಲ್ಲಿ ಬೆಳೆದಿದ್ದರು. ಅಲ್ಲಿ ಈ ಮಕ್ಕಳು ಆಟಪಾಠದಲ್ಲಿ ತುಂಬ ಆನಂದಿಸುತ್ತಿದ್ದರು. ಆದರೆ ಅದೇ ಸಮಯದಲ್ಲಿ ತಮ್ಮ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಸಹ ಅವರು ಕಲಿತುಕೊಂಡರು. ಹೀಗೆ, ಅವರ ಹೆತ್ತವರು ವಿಕ್ಟೋರಿಯ ನಗರಕ್ಕೆ ಹೋಗಿ ಬರುವುದರೊಳಗೆ, ಈ ಮಕ್ಕಳು ಮನೆ ಹೊರಗಿನ ಎಲ್ಲಾ ಕೆಲಸಗಳನ್ನು ಮಾಡಿಮುಗಿಸಿ, ಮನೆಯನ್ನು ಚೊಕ್ಕಟವಾಗಿಡುತ್ತಿದ್ದರು.

ಸಮಯಾನಂತರ, ನನ್ನ ತಂದೆ ಮತ್ತು ಅವರ ಅಣ್ಣಂದಿರಿಗೆ ಗಣಿಗಾರಿಕೆಯಲ್ಲಿ ಮತ್ತು ಮರದಿಮ್ಮಿಗಳ ಉದ್ಯಮದಲ್ಲಿ ಆಸಕ್ತಿಹುಟ್ಟಿತು. ಅವರ ಮರದಿಮ್ಮಿಗಳ ವ್ಯಾಪಾರವು ಚೆನ್ನಾಗಿ ನಡೆಯುತ್ತಿತ್ತು. ಈ ವ್ಯಾಪಾರದ ಹಣಕಾಸಿನ ವ್ಯವಹಾರವನ್ನು ನನ್ನ ತಂದೆಯವರು ನೋಡಿಕೊಳ್ಳುತ್ತಿದ್ದರು.

ತಂದೆಯವರಿಗೆ ಆತ್ಮಿಕ ವಿಷಯಗಳಲ್ಲಿ ತುಂಬ ಆಸಕ್ತಿಯಿತ್ತು. ಆದುದರಿಂದ ಅವರು ಒಬ್ಬ ಪ್ರೆಸ್ಬಿಟಿರಿಯನ್‌ ಪಾದ್ರಿಯಾಗುವ ನಿರ್ಣಯವನ್ನು ಮಾಡಿದರು. ಆದರೆ ಅದೇ ಸಮಯದಲ್ಲಿ, ಝಯನ್ಸ್‌ ವಾಚ್‌ ಟವರ್‌ ಟ್ರ್ಯಾಕ್ಟ್‌ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್‌ ಟೇಸ್‌ ರಸಲ್‌ರವರ ಪ್ರಸಂಗಗಳು ವಾರ್ತಾಪತ್ರಿಕೆಗಳಲ್ಲಿ ಬರುತ್ತಿದ್ದವು. ಮತ್ತು ಈ ಪ್ರಸಂಗಗಳು ತಂದೆಯವರ ಜೀವಿತದ ಮೇಲೆ ತುಂಬ ಪ್ರಭಾವವನ್ನು ಬೀರಿದವು. ತಂದೆಯವರು ಏನನ್ನು ಕಲಿತುಕೊಂಡರೋ ಅದು, ಅವರು ಈ ಕಥೆಯ ಆರಂಭದಲ್ಲಿ ತಿಳಿಸಲ್ಪಟ್ಟಿರುವ ತ್ಯಾಗಪತ್ರವನ್ನು ಬರೆದು, ಪಾದ್ರಿಗೆ ಕಳುಹಿಸುವಂತೆ ಪ್ರಚೋದಿಸಿತು.

ಮಾನವ ಆತ್ಮವು ಅಮರವಾಗಿದೆ ಮತ್ತು ದೇವರು ಮನುಷ್ಯರ ಆತ್ಮಗಳನ್ನು ನರಕಾಗ್ನಿಯಲ್ಲಿ ಸದಾಕಾಲ ಯಾತನೆಗೊಳಪಡಿಸುತ್ತಾನೆ ಎಂಬಂತಹ ಚರ್ಚ್‌ ಬೋಧನೆಗಳು ಸುಳ್ಳಾಗಿವೆಯೆಂಬುದನ್ನು ತಂದೆಯವರು ವಿನಯಭಾವದಿಂದ ಆ ಪತ್ರದಲ್ಲಿ ವಿವರಿಸಿದರು. ಅಷ್ಟುಮಾತ್ರವಲ್ಲ, ಇದಕ್ಕಾಗಿ ಅವರು ಸ್ಪಷ್ಟವಾದ ಬೈಬಲ್‌ ವಚನಗಳನ್ನೂ ತೋರಿಸಿದರು. ತ್ರಯೈಕ್ಯ ಸಿದ್ಧಾಂತವು ಕ್ರೈಸ್ತೇತರ ಮೂಲದಿಂದ ಬಂದಿದೆ ಮತ್ತು ಬೈಬಲಿನಲ್ಲಿ ಅದಕ್ಕೆ ಯಾವುದೇ ಆಧಾರವಿಲ್ಲವೆಂಬುದನ್ನು ಸಹ ಅವರು ಬಯಲುಪಡಿಸಿದರು. ಅಂದಿನಿಂದ ಅವರು ಯೇಸು ಕ್ರಿಸ್ತನನ್ನು ಅನುಕರಿಸುತ್ತಾ ಕ್ರೈಸ್ತ ಶುಶ್ರೂಷೆಯನ್ನು ಬೆನ್ನಟ್ಟಿದರು. ಅಂದರೆ ತಮ್ಮ ಎಲ್ಲ ಶಕ್ತಿಸಾಮರ್ಥ್ಯಗಳನ್ನು ಯೆಹೋವನ ಮಹಿಮೆಗಾಗಿ ವಿನಿಯೋಗಿಸಿದರು.

1917ರಲ್ಲಿ, ವಾಚ್‌ ಟವರ್‌ ಸೊಸೈಟಿಯ ನಿರ್ದೇಶನದ ಮೇರೆಗೆ, ತಂದೆಯವರು ಸಂಚರಣಾ (ಪಿಲ್‌ಗ್ರಿಮ್‌) ಸೇವೆಯನ್ನಾರಂಭಿಸಿದರು. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳ ಸಂಚಾರಿ ಪ್ರತಿನಿಧಿಗಳನ್ನು ಹೀಗೆ ಕರೆಯಲಾಗುತ್ತಿತ್ತು. ಕೆನಡದಾದ್ಯಂತ ಇದ್ದ ನಗರ ಮತ್ತು ಪಟ್ಟಣಗಳಲ್ಲಿ ಅವರು ಭಾಷಣಗಳನ್ನು ಕೊಟ್ಟರು ಮತ್ತು “ಫೋಟೋ ಡ್ರಾಮಾ ಆಫ್‌ ಕ್ರಿಯೇಷನ್‌” ಎಂಬ ಚಲನ ಚಿತ್ರ ಮತ್ತು ಸ್ಲೈಡ್‌ ಕಾರ್ಯಕ್ರಮವನ್ನು ಸಾದರಪಡಿಸಿದರು. ತಂದೆಯವರು ಭೇಟಿ ನೀಡಿದಲ್ಲೆಲ್ಲ, ಥಿಯೇಟರುಗಳು ಜನರಿಂದ ಕಿಕ್ಕಿರಿದಿರುತ್ತಿದ್ದವು. ಅವರು ಎಲ್ಲೆಲ್ಲಿ ಭೇಟಿಕೊಡಲಿದ್ದಾರೆಂಬ ಕಾಲತಖ್ತೆಯು, 1921ರ ವರೆಗೆ ದ ವಾಚ್‌ಟವರ್‌ ಪತ್ರಿಕೆಯಲ್ಲಿ ಮುದ್ರಿಸಲ್ಪಡುತ್ತಿತ್ತು.

ಸಂಚಾರಿ ಪ್ರಚಾರಕರಾದ ಯಂಗ್‌ ಎಂಬುವವರು 2,500 ಮಂದಿಗೆ ಭಾಷಣಕೊಟ್ಟರು, ಆದರೆ ಸಭಾಂಗಣವು ತುಂಬಿಹೋಗಿದ್ದರಿಂದ ಇನ್ನೂ ಅನೇಕರಿಗೆ ಪ್ರವೇಶ ಸಿಗಲಿಲ್ಲ ಎಂದು ವಿನಿಪೆಗ್‌ನ ಒಂದು ವಾರ್ತಾಪತ್ರಿಕೆಯು ವರದಿಸಿತು. ಅವರು ಒಟ್ಟಾವದಲ್ಲಿ “ನರಕದಿಂದ ಹಿಂದಿರುಗಿ ಬರುವುದು” ಎಂಬ ವಿಷಯದ ಕುರಿತು ಭಾಷಣ ಕೊಟ್ಟರು. ಅಲ್ಲಿದ್ದ ಒಬ್ಬ ವೃದ್ಧ ವ್ಯಕ್ತಿಯು ವರದಿಸಿದ್ದು: “ಭಾಷಣವು ಮುಗಿದ ನಂತರ ಜಾರ್ಜ್‌ ಯಂಗ್‌ರವರು, ಸಾಲಾಗಿ ಕುಳಿತುಕೊಂಡಿದ್ದ ಕೆಲವು ಪಾದ್ರಿಗಳಿಗೆ, ವೇದಿಕೆಯ ಮೇಲೆ ಬಂದು ತಮ್ಮೊಂದಿಗೆ ಈ ವಿಷಯದ ಕುರಿತು ಚರ್ಚಿಸುವಂತೆ ಕರೆಕೊಟ್ಟರು. ಆದರೆ ಅವರಲ್ಲಿ ಒಬ್ಬರೂ ತಮ್ಮ ಕುರ್ಚಿಗಳಿಂದ ಕದಲಲಿಲ್ಲ. ನಾನು ಸತ್ಯವನ್ನು ಕಂಡುಕೊಂಡಿದ್ದೇನೆಂಬುದು ನನಗೆ ಆಗಲೇ ಮನದಟ್ಟಾಯಿತು.”

ತಂದೆಯವರು ತಮ್ಮ ಸಂಚರಣಾ ಭೇಟಿಗಳಿಗಾಗಿ ಹೋದಲ್ಲೆಲ್ಲ, ಸಾಧ್ಯವಿರುವಷ್ಟು ಹೆಚ್ಚು ಆತ್ಮಿಕ ಚಟುವಟಿಕೆಯಲ್ಲಿ ಒಳಗೂಡಲು ಪ್ರಯತ್ನಿಸಿದರು. ಅನಂತರ, ಅವರು ಮುಂದಿನ ಸ್ಥಳಕ್ಕೆ ಹೋಗಲಿಕ್ಕಾಗಿ ಇನ್ನೊಂದು ರೈಲುಗಾಡಿಯನ್ನು ಹಿಡಿಯಲು ಓಡಬೇಕಾಗುತ್ತಿತ್ತು. ಯಾವಾಗ ಅವರು ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರೋ ಆಗ, ಬೆಳಗ್ಗಿನ ಉಪಾಹಾರಕ್ಕೆ ಮುಂಚೆಯೇ ಮನೆಯಿಂದ ಹೊರಟು, ಮುಂದಿನ ನೇಮಕಕ್ಕೆ ಪ್ರಯಾಣಿಸುತ್ತಿದ್ದರು. ಅವರಲ್ಲಿ ತುಂಬ ಹುರುಪಿತ್ತು ಮಾತ್ರವಲ್ಲದೆ, ಅವರೊಬ್ಬ ದಯಾಪರ ವ್ಯಕ್ತಿಯಾಗಿದ್ದರು. ಇದಲ್ಲದೆ ಅವರ ಕ್ರೈಸ್ತ ಕಾರ್ಯಗಳು ಹಾಗೂ ಉದಾರಭಾವಕ್ಕೆ ಹೆಸರಾಂತ ವ್ಯಕ್ತಿಯಾಗಿದ್ದರು.

ಅವರು ಹಾಜರಾಗಿದ್ದ ಆರಂಭದ ಅನೇಕ ಅಧಿವೇಶನಗಳಲ್ಲಿ, 1918ರಲ್ಲಿ ಆಲ್ಬರ್ಟಾದ ಎಡ್ಮಂಟನ್‌ನಲ್ಲಿ ನಡೆದ ಅಧಿವೇಶನವು ಚಿರಸ್ಮರಣೀಯವಾಗಿತ್ತು. ನೆಲ್ಲಿಯ ದೀಕ್ಷಾಸ್ನಾನಕ್ಕಾಗಿ ನಮ್ಮ ತಂದೆಯವರ ಇಡೀ ಕುಟುಂಬವು ಅಲ್ಲಿ ಕೂಡಿಬಂದಿತ್ತು. ಎಲ್ಲ ಅಣ್ಣತಮ್ಮಂದಿರು ಒಟ್ಟುಗೂಡಿದ್ದು ಅದೇ ಕೊನೆಯ ಬಾರಿಯಾಗಿತ್ತು. ಏಕೆಂದರೆ ಎರಡು ವರ್ಷಗಳ ನಂತರ, ಮಾಲ್ಕಮ್‌ ನ್ಯೂಮೋನಿಯಾ ರೋಗಕ್ಕೆ ತುತ್ತಾಗಿ ಸತ್ತನು. ಮಾಲ್ಕಮ್‌ಗೆ, ಅವನ ಮೂವರು ಸಹೋದರರಿಗೆ ಮತ್ತು ತಂದೆಯವರಿಗೆ ಸಹ ಸ್ವರ್ಗೀಯ ನಿರೀಕ್ಷೆಯಿತ್ತು. ಅವರೆಲ್ಲರೂ ತಮ್ಮ ಮರಣಪರ್ಯಂತ ದೇವರಿಗೆ ನಂಬಿಗಸ್ತರಾಗಿ ಉಳಿದರು.—ಫಿಲಿಪ್ಪಿ 3:14.

ವಿದೇಶೀ ಕ್ಷೇತ್ರಗಳಿಗೆ ಪಯಣ

1921ರ ಸೆಪ್ಟೆಂಬರ್‌ ತಿಂಗಳಿನಲ್ಲಿ ತಂದೆಯವರು ಕೆನಡದಲ್ಲಿನ ತಮ್ಮ ಸಾರುವ ಪ್ರವಾಸವನ್ನು ಮುಗಿಸಿದರು. ಆ ಸಮಯದಲ್ಲಿ ವಾಚ್‌ಟವರ್‌ ಸೊಸೈಟಿಯ ಅಧ್ಯಕ್ಷರಾಗಿದ್ದ ಜೋಸೆಫ್‌ ಎಫ್‌. ರದರ್‌ಫರ್ಡ್‌ರವರು, ತಂದೆಯವರಿಗೆ ಕ್ಯಾರಿಬಿಯನ್‌ ದ್ವೀಪಗಳಿಗೆ ಹೋಗುವಂತೆ ಹೇಳಿದರು. ತಂದೆಯವರು “ಫೋಟೋ ಡ್ರಾಮಾ ಆಫ್‌ ಕ್ರಿಯೇಷನ್‌” ಚಲನ ಚಿತ್ರವನ್ನು ತೋರಿಸಿದ ಎಲ್ಲ ಸ್ಥಳಗಳಲ್ಲಿ, ಅನೇಕ ಜನರು ಅದನ್ನು ನೋಡಲು ಬಂದರು. ಟ್ರಿನಿಡಾಡ್‌ನಲ್ಲಿದ್ದಾಗ ಅವರು ಹೀಗೆ ಪತ್ರ ಬರೆದರು: “ಆ ಸಭಾಂಗಣವು ಕಿಕ್ಕಿರಿದಿತ್ತು, ಆದುದರಿಂದ ತುಂಬ ಜನರನ್ನು ಹಿಂದೆ ಕಳುಹಿಸಬೇಕಾಯಿತು. ಮುಂದಿನ ರಾತ್ರಿ ಸಹ ಕಟ್ಟಡವು ಜನರಿಂದ ತುಂಬಿಹೋಗಿತ್ತು.”

ಅನಂತರ 1923ರಲ್ಲಿ ತಂದೆಯವರನ್ನು ಬ್ರಸಿಲ್‌ ದೇಶಕ್ಕೆ ನೇಮಿಸಲಾಯಿತು. ಅಲ್ಲಿ ಅವರು ದೊಡ್ಡ ಜನಸಮೂಹಗಳಿಗೆ ಭಾಷಣಗಳನ್ನು ಕೊಟ್ಟರು. ಅಗತ್ಯವಿದ್ದಾಗ ಹಣಕೊಟ್ಟು ಭಾಷಾಂತರಮಾಡುವವರನ್ನು ಕರೆತರುತ್ತಿದ್ದರು. 1923, ಡಿಸೆಂಬರ್‌ 15ರ ದ ವಾಚ್‌ಟವರ್‌ ಪತ್ರಿಕೆಯು ವರದಿಸಿದ್ದು: “ಜೂನ್‌ 1ರಿಂದ ಸೆಪ್ಟೆಂಬರ್‌ 30ರ ವರೆಗೆ ಸಹೋದರ ಯಂಗ್‌ರವರು 3,600 ಮಂದಿ ಹಾಜರಾಗಿದ್ದ 21 ಸಾರ್ವಜನಿಕ ಕೂಟಗಳನ್ನು ನಡೆಸಿದರು; 1,100 ಮಂದಿ ಹಾಜರಾದ 48 ಸಭಾ ಕೂಟಗಳನ್ನು ನಡೆಸಿದರು; ಮತ್ತು 5,000 ಪ್ರತಿಗಳ ಸಾಹಿತ್ಯವನ್ನು ಪೋರ್ಚುಗೀಸ್‌ ಭಾಷೆಯಲ್ಲಿ ಉಚಿತವಾಗಿ ಹಂಚಿದ್ದಾರೆ.” “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಎಂಬ ಭಾಷಣವನ್ನು ತಂದೆಯವರು ಕೊಟ್ಟಾಗ, ಅನೇಕ ಜನರು ಆಸಕ್ತಿಯನ್ನು ತೋರಿಸಿದರು.

1997, ಮಾರ್ಚ್‌ 8ರಂದು ಬ್ರಸಿಲ್‌ ದೇಶದಲ್ಲಿ ಹೊಸ ಬ್ರಾಂಚ್‌ ಕಟ್ಟಡಗಳ ಸಮರ್ಪಣೆಯಾಯಿತು. ಆ ಸಂದರ್ಭದಲ್ಲಿ ಕೊಡಲ್ಪಟ್ಟ ಬ್ರೋಷರಿನಲ್ಲಿ ಹೀಗೆ ವರದಿಸಲಾಗಿತ್ತು: “1923: ಜಾರ್ಜ್‌ ಯಂಗ್‌ ಬ್ರಸಿಲ್‌ಗೆ ಆಗಮಿಸಿದರು. ರಿಯೊ ಡಿ ಜನೈರೊದ ಮಧ್ಯಭಾಗದಲ್ಲಿ ಅವರು ಒಂದು ಬ್ರಾಂಚ್‌ ಆಫೀಸನ್ನು ವ್ಯವಸ್ಥಾಪಿಸಿದರು.” ಬೈಬಲ್‌ ಸಾಹಿತ್ಯವು ಸ್ಪ್ಯಾನಿಷ್‌ ಭಾಷೆಯಲ್ಲಿ ಲಭ್ಯವಿದ್ದರೂ, ಬ್ರಸಿಲ್‌ ದೇಶದ ಪ್ರಧಾನ ಭಾಷೆಯಾಗಿದ್ದ ಪೋರ್ಚುಗೀಸ್‌ ಭಾಷೆಯಲ್ಲಿ ಸಾಹಿತ್ಯವು ಬೇಕಾಗಿತ್ತು. ಆದುದರಿಂದ 1923, ಅಕ್ಟೋಬರ್‌ 1ರಂದು, ಪೋರ್ಚುಗೀಸ್‌ ಭಾಷೆಯ ಕಾವಲಿನಬುರುಜು ಪತ್ರಿಕೆಯ ಮುದ್ರಣವು ಆರಂಭವಾಯಿತು.

ತಂದೆಯವರು ಬ್ರಸಿಲ್‌ನಲ್ಲಿ ಅನೇಕ ಗಮನಾರ್ಹ ವ್ಯಕ್ತಿಗಳನ್ನು ಭೇಟಿಯಾದರು. ಅವರಲ್ಲಿ ಒಬ್ಬನು, ಜಾಸಿಂತೋ ಪಿಮೆಂಟಲ್‌ ಕಾಬ್ರಾಲ್‌ ಎಂಬ ಹೆಸರಿನ ವ್ಯಕ್ತಿಯಾಗಿದ್ದನು. ಇವನು ಪೋರ್ಚುಗೀಸನಾಗಿದ್ದು, ತುಂಬ ಧನಿಕನಾಗಿದ್ದನು. ಅವನು ಕೂಟಗಳನ್ನು ನಡೆಸಲಿಕ್ಕಾಗಿ ತನ್ನ ಮನೆಯನ್ನು ಕೊಟ್ಟನು. ಜಾಸಿಂತೋ ಬೇಗನೆ ಬೈಬಲ್‌ ಸತ್ಯವನ್ನು ಸ್ವೀಕರಿಸಿದನು ಮತ್ತು ಕಾಲಾನಂತರ ಅಲ್ಲಿನ ಬ್ರಾಂಚ್‌ ಸಿಬ್ಬಂದಿಯ ಒಬ್ಬ ಸದಸ್ಯನಾದನು. ಇನ್ನೊಬ್ಬ ವ್ಯಕ್ತಿಯು, ಮಾನ್ವಲ್‌ ಡಾ ಸಿಲ್ವ ಸಾರ್ದೌ ಎಂಬ ಒಬ್ಬ ಯುವ ಪೋರ್ಚುಗೀಸ್‌ ತೋಟಗಾರನಾಗಿದ್ದನು. ನನ್ನ ತಂದೆಯವರು ಕೊಟ್ಟ ಒಂದು ಭಾಷಣದಿಂದ ಪ್ರೇರಿತನಾದ ಇವನು ಪೋರ್ಚುಗಲ್‌ಗೆ ಹಿಂದಿರುಗಿ, ಒಬ್ಬ ಕಾಲ್‌ಪೋರ್ಟರ್‌ ಆಗಿ ಸೇವೆಸಲ್ಲಿಸಲಾರಂಭಿಸಿದನು. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಸೇವಕರನ್ನು ಕಾಲ್‌ಪೋರ್ಟರ್‌ ಎಂದು ಕರೆಯಲಾಗುತ್ತಿತ್ತು.

ತಂದೆಯವರು ಬ್ರಸಿಲ್‌ ದೇಶದಾದ್ಯಂತ ರೈಲುಗಾಡಿಯಲ್ಲಿ ಪ್ರಯಾಣಿಸಿ, ಆಸಕ್ತ ಜನರನ್ನು ಕಂಡುಹಿಡಿಯಲು ಶಕ್ತರಾದರು. ಈ ರೀತಿಯ ಒಂದು ಪ್ರಯಾಣದ ಸಮಯದಲ್ಲಿ, ಬೊನಿ ಮತ್ತು ಕ್ಯಾಟರೀನಾ ಗ್ರೀನ್‌ ಎಂಬ ದಂಪತಿಯನ್ನು ಭೇಟಿಯಾದರು. ಅವರಿಗೆ ಶಾಸ್ತ್ರವಚನಗಳ ಕುರಿತಾಗಿ ವಿವರಿಸುತ್ತಾ, ಸುಮಾರು ಎರಡು ವಾರಗಳ ವರೆಗೆ ಅವರೊಂದಿಗೆ ಉಳಿದರು. ಅನಂತರ ಅವರ ಕುಟುಂಬದಲ್ಲಿ ಸುಮಾರು ಏಳು ಮಂದಿ ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸಿದರು.

ತದನಂತರ, 1923ರಲ್ಲಿ ತಂದೆಯವರು ಸಾರಾ ಬೆಲೊನಾ ಫೆರ್ಗುಸನ್‌ ಎಂಬುವವರನ್ನು ಸಂಪರ್ಕಿಸಿದರು. ಇವರು 1867ರಲ್ಲಿ ಒಬ್ಬ ಬಾಲಕಿಯಾಗಿದ್ದಾಗಲೇ, ತಮ್ಮ ಅಣ್ಣ ಇರಾಸ್ಮಸ್‌ ಫುಲ್ಟನ್‌ ಸ್ಮಿತ್‌ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಅಮೆರಿಕದಿಂದ ಬ್ರಸಿಲ್‌ ದೇಶಕ್ಕೆ ಸ್ಥಳಾಂತರಿಸಿದ್ದರು. 1899ರಿಂದ ಇವರು ಕ್ರಮವಾಗಿ ಅಂಚೆಯ ಮೂಲಕ ವಾಚ್‌ಟವರ್‌ ಪತ್ರಿಕೆಯನ್ನು ಪಡೆದುಕೊಳ್ಳುತ್ತಿದ್ದರು. ಸಾರಾ, ಅವರ ನಾಲ್ಕು ಮಂದಿ ಮಕ್ಕಳು ಮತ್ತು ಯಾರನ್ನು ಆಂಟಿ ಸಾಲಿ ಎಂದು ನಮ್ಮ ತಂದೆಯವರು ಕರೆಯುತ್ತಿದ್ದರೋ ಅವರಿಗೆ ಬಹಳ ಸಮಯದಿಂದ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಬಯಕೆಯಿತ್ತು. ನನ್ನ ತಂದೆಯವರು ಆ ಸ್ಥಳಕ್ಕೆ ಭೇಟಿನೀಡಿದಾಗ ಅವರಿಗೆ ಈ ಅವಕಾಶ ದೊರೆಯಿತು. ಹೀಗೆ, 1924ರ ಮಾರ್ಚ್‌ 11ರಂದು ಇವರೆಲ್ಲರೂ ದೀಕ್ಷಾಸ್ನಾನವನ್ನು ಪಡೆದುಕೊಂಡರು.

ಅದರ ನಂತರ ಸ್ವಲ್ಪ ಸಮಯದೊಳಗೆ ತಂದೆಯವರು ದಕ್ಷಿಣ ಅಮೆರಿಕದ ದೇಶಗಳಲ್ಲಿ ಸಾರುತ್ತಿದ್ದರು. 1924, ನವೆಂಬರ್‌ 8ರಂದು ಅವರು ಪೆರು ದೇಶದಿಂದ ಈ ರೀತಿಯಾಗಿ ಪತ್ರ ಬರೆದರು: “ಈಗಷ್ಟೇ ಲೀಮಾ ಮತ್ತು ಕಾಯಾವೊ ಪಟ್ಟಣಗಳಲ್ಲಿ 17,000 ಟ್ರ್ಯಾಕ್ಟ್‌ಗಳನ್ನು ವಿತರಿಸಿದ್ದೇನೆ.” ತದನಂತರ ಅವರು ಬೊಲಿವಿಯಕ್ಕೆ ಹೋಗಿ, ಅಲ್ಲಿ ಟ್ರ್ಯಾಕ್ಟ್‌ಗಳನ್ನು ವಿತರಿಸಿದರು. ಅಲ್ಲಿಗೆ ತಾವು ನೀಡಿದ ಭೇಟಿಯ ಕುರಿತಾಗಿ ಅವರು ಬರೆದುದು: “ನಮ್ಮ ತಂದೆಯು ನನ್ನ ಪ್ರಯತ್ನವನ್ನು ಆಶೀರ್ವದಿಸುತ್ತಿದ್ದಾನೆ. ಈ ಕೆಲಸದಲ್ಲಿ ಒಬ್ಬ ಇಂಡಿಯನ್‌ ನನಗೆ ಸಹಾಯಮಾಡಿದ. ಅವನ ಮನೆ ಅಮೆಜಾನ್‌ ನದಿಯ ಉಗಮಸ್ಥಾನದಲ್ಲಿದೆ. ಅವನು ಹಿಂದಿರುಗಿ ಹೋಗುವಾಗ 1,000 ಟ್ರ್ಯಾಕ್ಟ್‌ಗಳನ್ನು ಮತ್ತು ಕೆಲವೊಂದು ಪುಸ್ತಕಗಳನ್ನು ತನ್ನೊಂದಿಗೆ ಕೊಂಡೊಯ್ಯಲಿದ್ದಾನೆ.”

ತಂದೆಯ ಪ್ರಯತ್ನಗಳಿಂದಾಗಿ, ಬೈಬಲ್‌ ಸತ್ಯದ ಬೀಜಗಳು ಮಧ್ಯ ಮತ್ತು ದಕ್ಷಿಣ ಅಮೆರಿಕದ ಅನೇಕ ದೇಶಗಳಲ್ಲಿ ಬಿತ್ತಲ್ಪಟ್ಟವು. 1924, ಡಿಸೆಂಬರ್‌ 1ರ ವಾಚ್‌ಟವರ್‌ ಪತ್ರಿಕೆಯು ವರದಿಸಿದ್ದು: “ಜಾರ್ಜ್‌ ಯಂಗ್‌ ಎರಡಕ್ಕಿಂತಲೂ ಹೆಚ್ಚು ವರ್ಷಗಳಿಂದ ದಕ್ಷಿಣ ಅಮೆರಿಕದಲ್ಲಿದ್ದಾರೆ. . . . ಮೆಜಿಲಾನ್‌ ಜಲಸಂಧಿಯಲ್ಲಿರುವ ಪುಂಟಾ ಅರೇನಾಸ್‌ ಎಂಬ ಪಟ್ಟಣಕ್ಕೆ ಸತ್ಯದ ಸಂದೇಶವನ್ನು ಒಯ್ಯುವುದು ನಮ್ಮ ಈ ಪ್ರಿಯ ಸಹೋದರನ ಸುಯೋಗವಾಗಿದೆ.” ಕೊಸ್ಟರೀಕ, ಪ್ಯಾನಮ, ಮತ್ತು ವೆನಿಸ್ವೇಲದಂತಹ ದೇಶಗಳಲ್ಲೂ ಅವರು ಸಾರುವ ಕೆಲಸದಲ್ಲಿ ಮುಂದಾಳತ್ವವನ್ನು ವಹಿಸಿದರು. ಮಲೇರಿಯ ರೋಗದಿಂದಾಗಿ ಅವರ ಆರೋಗ್ಯವು ಹದಗೆಟ್ಟಿದ್ದರೂ, ತಮ್ಮ ಕೆಲಸವನ್ನು ಮುಂದುವರಿಸಿದರು.

ಯೂರೋಪಿಗೆ

1925ರ ಮಾರ್ಚ್‌ ತಿಂಗಳಿನಲ್ಲಿ ತಂದೆಯವರು ಹಡಗಿನಲ್ಲಿ ಯೂರೋಪಿಗೆ ಪ್ರಯಾಣ ಬೆಳೆಸಿದರು. ಸ್ಪೆಯಿನ್‌ ಮತ್ತು ಪೋರ್ಚುಗಲ್‌ನಲ್ಲಿ 3,00,000 ಟ್ರ್ಯಾಕ್ಟ್‌ಗಳನ್ನು ವಿತರಿಸುವ ಮತ್ತು ಸಹೋದರ ರದರ್‌ಫರ್ಡ್‌ ಅವರು ಬಹಿರಂಗ ಭಾಷಣಗಳನ್ನು ಕೊಡುವಂತೆ ಏರ್ಪಾಡುಗಳನ್ನು ಮಾಡುವ ನಿರೀಕ್ಷೆ ಅವರಿಗಿತ್ತು. ಆದರೆ ತಂದೆಯವರು ಸ್ಪೆಯಿನ್‌ ತಲಪಿದಾಗ, ಅಲ್ಲಿದ್ದ ಧಾರ್ಮಿಕ ಅಸಹಿಷ್ಣುತೆಯ ವಾತಾವರಣವನ್ನು ನೋಡಿ, ಸಹೋದರ ರದರ್‌ಫರ್ಡರು ಅಲ್ಲಿ ಭಾಷಣಗಳನ್ನು ಕೊಡುವುದರ ಕುರಿತು ಸ್ವಲ್ಪ ಅಂಜಿಕೆಯನ್ನು ವ್ಯಕ್ತಪಡಿಸಿದರು.

ಇದಕ್ಕೆ ಉತ್ತರವಾಗಿ, ಸಹೋದರ ರದರ್‌ಫರ್ಡ್‌ ಯೆಶಾಯ 51:16ನ್ನು ಉಲ್ಲೇಖಿಸಿ ಬರೆದುದು: “ಆಕಾಶವನ್ನು ನಿಲ್ಲಿಸಬೇಕೆಂತಲೂ ಭೂಲೋಕವನ್ನು ಸ್ಥಾಪಿಸಬೇಕೆಂತಲೂ ಚೀಯೋನಿಗೆ ನೀನು ನನ್ನ ಜನವೆಂದು ಹೇಳಬೇಕೆಂತಲೂ ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟು ನನ್ನ ಕೈಯ ನೆರಳಿನಲ್ಲಿ ನಿನ್ನನ್ನು ಹುದುಗಿಸಿದ್ದೇನೆ.” ಇದನ್ನು ಓದಿ ತಂದೆಯವರು ಈ ತೀರ್ಮಾನಕ್ಕೆ ಬಂದರು: “ನಾನು ನನ್ನ ಕೆಲಸಗಳನ್ನು ಮುಂದುವರಿಸಿ, ಫಲಿತಾಂಶಗಳನ್ನು ಕರ್ತನ ಕೈಯಲ್ಲಿ ಬಿಡುವುದು ಅವನ ಚಿತ್ತವಾಗಿದೆ ಎಂಬುದಂತೂ ಖಂಡಿತ.”

ಹೀಗೆ 1925, ಮೇ 10ರಂದು ಸಹೋದರ ರದರ್‌ಫರ್ಡರು, ಬಾರ್ಸೆಲೊನಾದಲ್ಲಿರುವ ನೊವಿಡಾಡಿಸ್‌ ಥಿಯೇಟರ್‌ನಲ್ಲಿ ಭಾಷಾಂತರಮಾಡುವ ಒಬ್ಬ ವ್ಯಕ್ತಿಯ ಸಹಾಯದಿಂದ ತಮ್ಮ ಭಾಷಣವನ್ನು ಕೊಟ್ಟರು. 2,000ಕ್ಕಿಂತಲೂ ಹೆಚ್ಚು ಮಂದಿ ಅದಕ್ಕೆ ಹಾಜರಿದ್ದರು. ಇವರಲ್ಲಿ ಒಬ್ಬ ಸರಕಾರಿ ಅಧಿಕಾರಿಯೂ ಸೇರಿದ್ದನು ಮತ್ತು ವೇದಿಕೆಯ ಮೇಲೆ ಒಬ್ಬ ವಿಶೇಷ ಅಂಗರಕ್ಷಕನೂ ಇದ್ದನು. ತಂದೆಯವರು ಮ್ಯಾಡ್ರಿಡ್‌ನಲ್ಲೂ ಇದೇ ರೀತಿ ಭಾಷಣವನ್ನು ಕೊಟ್ಟರು ಮತ್ತು ಅಲ್ಲಿ 1,200 ಮಂದಿ ಹಾಜರಾಗಿದ್ದರು. ಈ ಭಾಷಣಗಳು ಎಷ್ಟೊಂದು ಆಸಕ್ತಿಯನ್ನು ಕೆರಳಿಸಿದವೆಂದರೆ, ಸ್ಪೆಯಿನ್‌ನಲ್ಲಿ ಒಂದು ಬ್ರಾಂಚ್‌ ಆಫೀಸನ್ನು ಸ್ಥಾಪಿಸಲಾಯಿತು. ಮತ್ತು 1978 ಯಿಯರ್‌ಬುಕ್‌ ಆಫ್‌ ಜೆಹೋವಾಸ್‌ ವಿಟ್ನೆಸಸ್‌ ಹೇಳುವಂತೆ, ಈ ಬ್ರಾಂಚನ್ನು “ಜಾರ್ಜ್‌ ಯಂಗ್‌ರವರ ಮಾರ್ಗದರ್ಶನಕ್ಕೆ ಒಪ್ಪಿಸಲಾಯಿತು.”

1925, ಮೇ 13ರಂದು, ಸಹೋದರ ರದರ್‌ಫರ್ಡರು ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಭಾಷಣವನ್ನು ಕೊಟ್ಟರು. ಅಲ್ಲಿನ ಪಾದ್ರಿಗಳು, ಅರಚಾಡುವ ಮೂಲಕ ಮತ್ತು ಕುರ್ಚಿಗಳನ್ನು ಮುರಿದುಹಾಕುವ ಮೂಲಕ ಕೂಟವನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೂ ರದರ್‌ಫರ್ಡರು ಅಲ್ಲಿಗೆ ನೀಡಿದ ಭೇಟಿಯು ತುಂಬ ಯಶಸ್ವಿಯಾಯಿತು. ಸ್ಪೆಯಿನ್‌ ಮತ್ತು ಪೋರ್ಚುಗಲ್‌ನಲ್ಲಿ ಸಹೋದರ ರದರ್‌ಫರ್ಡ್‌ರವರು ಭಾಷಣಗಳನ್ನು ಕೊಟ್ಟು ಹಿಂದಿರುಗಿ ಹೋದ ನಂತರ, ತಂದೆಯವರು “ಫೋಟೋ ಡ್ರಾಮಾ”ವನ್ನು ಜನರಿಗೆ ತೋರಿಸುವುದನ್ನು ಮುಂದುವರಿಸಿದರು. ಅಷ್ಟುಮಾತ್ರವಲ್ಲ, ಆ ಸ್ಥಳಗಳಲ್ಲಿ ಬೈಬಲ್‌ ಸಾಹಿತ್ಯವನ್ನು ಮುದ್ರಿಸಿ, ವಿತರಿಸುವ ಏರ್ಪಾಡುಗಳನ್ನು ಸಹ ಮಾಡಿದರು. 1927ರಲ್ಲಿ ಅವರು ವರದಿಸಿದ್ದೇನೆಂದರೆ, ಸುವಾರ್ತೆಯು “ಸ್ಪೆಯಿನ್‌ನ ಪ್ರತಿಯೊಂದು ನಗರದಲ್ಲಿ ಮತ್ತು ಪಟ್ಟಣದಲ್ಲಿ ಸಾರಲ್ಪಟ್ಟಿದೆ.”

ಸೋವಿಯತ್‌ ಒಕ್ಕೂಟದಲ್ಲಿ ಸಾರುವುದು

ತಂದೆಯವರ ಮುಂದಿನ ಮಿಷನೆರಿ ನೇಮಕವು, ಸೋವಿಯತ್‌ ಒಕ್ಕೂಟವಾಗಿತ್ತು. ಆದುದರಿಂದ, ಅವರು 1928, ಆಗಸ್ಟ್‌ 28ರಂದು ಅಲ್ಲಿಗೆ ಹೋದರು. ಅವರು 1928 ಅಕ್ಟೋಬರ್‌ 10ರಂದು ಬರೆದ ಪತ್ರದಲ್ಲಿ ಒಂದು ಕಡೆ ಹೀಗೆ ಬರೆಯಲಾಗಿತ್ತು:

“ನಾನು ರಷ್ಯಕ್ಕೆ ಬಂದು ತಲಪಿದಾಗಿನಿಂದ, ‘ನಿನ್ನ ರಾಜ್ಯವು ಬರಲಿ’ ಎಂದು ನಾನು ನಿಜವಾಗಿಯೂ ಮನದಾಳದಿಂದ ಪ್ರಾರ್ಥಿಸಬಲ್ಲೆ. ನಾನು ಇಲ್ಲಿನ ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನಾದರೂ, ತುಂಬ ನಿಧಾನವಾಗಿ ಕಲಿಯುತ್ತಿದ್ದೇನೆ. ನನ್ನ ಭಾಷಣವನ್ನು ಭಾಷಾಂತರಮಾಡುವುದಕ್ಕೆ ಸಿಕ್ಕಿರುವವರು ತುಂಬ ಅಸಾಧಾರಣ ವ್ಯಕ್ತಿಯಾಗಿದ್ದಾರೆ. ಅವರೊಬ್ಬ ಯೆಹೂದಿಯಾಗಿರುವುದಾದರೂ, ಕ್ರಿಸ್ತನನ್ನು ನಂಬುತ್ತಾರೆ ಮತ್ತು ಬೈಬಲನ್ನು ಇಷ್ಟಪಡುತ್ತಾರೆ. ನನಗೆ ಕೆಲವೊಂದು ಆಸಕ್ತಿದಾಯಕ ಅನುಭವಗಳಾದವು, ಆದರೆ ನನ್ನನ್ನು ಎಷ್ಟು ಸಮಯದ ವರೆಗೆ ಇಲ್ಲಿರಲು ಅನುಮತಿಸಲಾಗುವುದೆಂದು ನನಗೆ ಗೊತ್ತಿಲ್ಲ. ಕಳೆದ ವಾರ, ನಾನು 24 ತಾಸುಗಳೊಳಗೆ ಇಲ್ಲಿಂದ ಹೊರಡಬೇಕೆಂಬ ನೋಟೀಸನ್ನು ಪಡೆದಿದ್ದೆ, ಆದರೆ ಹೇಗೋ ಆ ಸಮಸ್ಯೆಯಿಂದ ತಪ್ಪಿಸಿಕೊಂಡೆ. ಆದುದರಿಂದಲೇ ನಾನು ಇನ್ನೂ ಇಲ್ಲಿದ್ದೇನೆ.”

ಯೂಕ್ರೇನ್‌ನಲ್ಲಿ ಈಗ ಒಂದು ದೊಡ್ಡ ನಗರವಾಗಿರುವ, ಖಾರ್ಕೊವ್‌ನಲ್ಲಿದ್ದ ಕೆಲವು ಬೈಬಲ್‌ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಯಿತು. ಮತ್ತು ಆಗ ನಡೆದಂತಹ ಸ್ನೇಹಪೂರ್ವಕ ಸಂಭಾಷಣೆಯಿಂದಾಗಿ, ಅವರ ಕಣ್ಣುಗಳು ಆನಂದಾಶ್ರುಗಳಿಂದ ತುಂಬಿದವು. ಪ್ರತಿ ರಾತ್ರಿ ಮಧ್ಯರಾತ್ರಿಯ ವರೆಗೆ ಒಂದು ಪುಟ್ಟ ಅಧಿವೇಶನವನ್ನು ನಡೆಸಲಾಗುತ್ತಿತ್ತು. ಸಹೋದರರೊಂದಿಗಿನ ಈ ಭೇಟಿಯ ಕುರಿತಾಗಿ ಬರೆಯುತ್ತಾ, ತಂದೆ ಹೇಳಿದ್ದು: “ಆ ಬಡ ಸಹೋದರರ ಬಳಿ ಇದ್ದ ಕೆಲವೇ ಪುಸ್ತಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮತ್ತು ಇಲ್ಲಿನ ಅಧಿಕಾರಿಗಳು ತುಂಬ ಕಠೋರರಾಗಿದ್ದಾರೆ. ಆದರೂ ನಮ್ಮ ಸಹೋದರರು ಸಂತೋಷದಿಂದಿದ್ದಾರೆ.”

ತಂದೆಯವರು ಸೋವಿಯತ್‌ ಒಕ್ಕೂಟದಲ್ಲಿ ನಡೆಸಿದ ಸೇವೆಯನ್ನು, ಒಂದು ವಿಶೇಷ ಬ್ರೋಷರಿನಲ್ಲಿ ಎತ್ತಿತೋರಿಸಲಾಯಿತು. ಮತ್ತು ಈ ಬ್ರೋಷರನ್ನು, ರಷ್ಯದ ಸೆಂಟ್‌ ಪೀಟರ್ಸ್‌ಬರ್ಗ್‌ನಲ್ಲಿನ ಹೊಸ ಬ್ರಾಂಚ್‌ ಕಟ್ಟಡಗಳ ಸಮರ್ಪಣೆಯ ದಿನದಂದು, ಅಂದರೆ 1997, ಜೂನ್‌ 21ರಂದು ಆ ಸಮಾರಂಭಕ್ಕೆ ಹಾಜರಾದವರಿಗೆ ಹಂಚಲಾಯಿತು. ತಂದೆಯವರನ್ನು ಮಾಸ್ಕೋಗೆ ಕಳುಹಿಸಲಾಯಿತು ಎಂದು ಆ ಬ್ರೋಷರ್‌ನಲ್ಲಿ ಹೇಳಲಾಗಿತ್ತು, ಮತ್ತು “ರಷ್ಯದಲ್ಲಿ ವಿತರಿಸಲಿಕ್ಕಾಗಿ, ಜನರಿಗೆ ಸ್ವಾತಂತ್ರ್ಯ ಮತ್ತು ಸತ್ತವರು ಎಲ್ಲಿದ್ದಾರೆ? (ಇಂಗ್ಲಿಷ್‌) ಎಂಬ ಪುಸ್ತಿಕೆಗಳ 15,000 ಪ್ರತಿಗಳನ್ನು ಮುದ್ರಿಸಲು” ತಂದೆಯವರು ಅನುಮತಿಯನ್ನು ಪಡೆದುಕೊಂಡರೆಂದು ಸಹ ಆ ಬ್ರೋಷರಿನಲ್ಲಿ ವರದಿಸಲಾಗಿತ್ತು.

ರಷ್ಯದಿಂದ ಹಿಂದಿರುಗಿದ ಬಳಿಕ, ತಂದೆಯವರು ಅಮೆರಿಕದಲ್ಲಿ ಪಿಲ್‌ಗ್ರಿಮ್‌ ಕೆಲಸಕ್ಕಾಗಿ ನೇಮಿಸಲ್ಪಟ್ಟರು. ದಕ್ಷಿಣ ಡಕೋಟದಲ್ಲಿ ಅವರು ನೆಲೆನಾ ಮತ್ತು ವೆರ್ಡಾ ಪೂಲ್‌ ಎಂಬ ಇಬ್ಬರು ಅಕ್ಕತಂಗಿಯರ ಮನೆಯನ್ನು ಭೇಟಿಮಾಡಿದರು. ಕೆಲವು ವರ್ಷಗಳ ನಂತರ, ಇವರು ಪೆರುವಿನಲ್ಲಿ ಮಿಷನೆರಿಗಳಾದರು. ತಂದೆಯವರ ಹುರುಪಿನ ಶುಶ್ರೂಷೆಯ ಬಗ್ಗೆ ಇವರು ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಅಕ್ಕರೆಯಿಂದ ಹೇಳಿದ್ದು: “ಆ ದಿನಗಳಲ್ಲಿ ಸಹೋದರರಲ್ಲಿ ಖಂಡಿತವಾಗಿಯೂ ಪಯನೀಯರ್‌ ಸೇವೆಯನ್ನು ಮಾಡುವ ಹುರುಪಿತ್ತು. ಅವರು ಈ ಎಲ್ಲಾ ವಿದೇಶಿ ಕ್ಷೇತ್ರಗಳಿಗೆ ಹೋಗುವಾಗ ಅವರ ಬಳಿ ಲೌಕಿಕ ರೀತಿಯಲ್ಲಿ ಹೆಚ್ಚೇನೂ ಇರಲಿಲ್ಲವಾದರೂ, ಅವರ ಹೃದಯವು ಯಾವಾಗಲೂ ಯೆಹೋವನಿಗಾಗಿ ಪ್ರೀತಿಯಿಂದ ತುಂಬಿರುತ್ತಿತ್ತು. ಈ ಕಾರಣದಿಂದಲೇ ಅವರು ಇಷ್ಟೊಂದು ಕೆಲಸವನ್ನು ಪೂರೈಸಲು ಶಕ್ತರಾಗಿದ್ದರು.”

ಮದುವೆ ಮತ್ತು ಎರಡನೆಯ ಪ್ರವಾಸ

ಅನೇಕ ವರ್ಷಗಳಿಂದ ತಂದೆಯವರು, ಆಂಟೇರಿಯೊದ ಮಾನಟುಲನ್‌ ದ್ವೀಪದಲ್ಲಿದ್ದ ಕ್ಲಾರಾ ಹಬರ್ಟ್‌ಳೊಂದಿಗೆ ಪತ್ರವ್ಯವಹಾರವನ್ನು ನಡೆಸುತ್ತಾ ಇದ್ದರು. 1931, ಜುಲೈ 26ರಂದು ಓಹಾಯೊದ ಕೊಲಂಬಸ್‌ನಲ್ಲಿ ನಡೆದ ಅಧಿವೇಶನದಲ್ಲಿ ಇವರಿಬ್ಬರೂ ಹಾಜರಿದ್ದರು. ಈ ಅಧಿವೇಶನದಲ್ಲೇ ಬೈಬಲ್‌ ವಿದ್ಯಾರ್ಥಿಗಳು, ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಪಡೆದುಕೊಂಡರು. (ಯೆಶಾಯ 43:10-12) ಇದಾಗಿ ಒಂದು ವಾರ ಕಳೆದ ನಂತರ ಅವರು ಮದುವೆಯಾದರು. ಸ್ವಲ್ಪ ಸಮಯದೊಳಗೆ ತಂದೆಯವರು ಪುನಃ ತಮ್ಮ ಪ್ರಯಾಣವನ್ನು ಆರಂಭಿಸಿದರು ಮತ್ತು ಕ್ಯಾರಿಬಿಯನ್‌ ದ್ವೀಪಗಳಲ್ಲಿ ತಮ್ಮ ಎರಡನೆಯ ಮಿಷನೆರಿ ಸಂಚಾರವನ್ನು ಕೈಗೊಂಡರು. ಆ ದ್ವೀಪಗಳಲ್ಲಿ ಅವರು ಕೂಟಗಳನ್ನು ಸಂಘಟಿಸಲು ಸಹಾಯಮಾಡಿದರು ಮತ್ತು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಇತರರಿಗೆ ತರಬೇತಿಯನ್ನು ನೀಡಿದರು.

ಅವರು ಸುರಿನಾಮ, ಸೆಂಟ್‌ ಕಿಟ್ಸ್‌, ಮತ್ತು ಬೇರೆ ಸ್ಥಳಗಳಿಗೆ ಹೋದಾಗ, ಅಲ್ಲಿಂದೆಲ್ಲ ತಾಯಿಯವರಿಗೆ ಚಿತ್ರಗಳನ್ನು, ಕಾರ್ಡುಗಳನ್ನು ಮತ್ತು ಪತ್ರಗಳನ್ನು ಕಳುಹಿಸುತ್ತಿದ್ದರು. ಈ ಪತ್ರಗಳಲ್ಲಿ ಸಾರುವ ಕೆಲಸವು ಹೇಗೆ ನಡೆಯುತ್ತಿದೆಯೆಂಬುದರ ಬಗ್ಗೆ ವರದಿಸುತ್ತಿದ್ದರು ಮತ್ತು ಕೆಲವೊಮ್ಮೆ ಅವರು ಇದ್ದಂತಹ ನಿರ್ದಿಷ್ಟ ದೇಶದ ಪಕ್ಷಿಗಳು, ಪ್ರಾಣಿಗಳು, ಮತ್ತು ಸಸ್ಯಗಳ ಕುರಿತು ಬರೆಯುತ್ತಿದ್ದರು. 1932, ಜೂನ್‌ ತಿಂಗಳಿನಲ್ಲಿ ತಂದೆಯವರು ಕ್ಯಾರಿಬಿಯನ್‌ನಲ್ಲಿನ ತಮ್ಮ ನೇಮಕವನ್ನು ಪೂರೈಸಿ, ಎಂದಿನಂತೆ ಹಡಗಿನಲ್ಲಿ ತೀರ ಕಡಿಮೆ ದರದ ವಿಭಾಗದಲ್ಲಿ ಪ್ರಯಾಣಿಸಿ ಕೆನಡಕ್ಕೆ ಹಿಂದಿರುಗಿದರು. ತದನಂತರ, ಅವರು ಮತ್ತು ತಾಯಿಯವರು ಜೊತೆಯಾಗಿ ಪೂರ್ಣ ಸಮಯದ ಸಾರುವ ಕೆಲಸದಲ್ಲಿ ಪಾಲ್ಗೊಳ್ಳತೊಡಗಿದರು. 1932/33ರ ಚಳಿಗಾಲದಲ್ಲಿ ಅವರು ಇತರ ಪೂರ್ಣ ಸಮಯದ ಶುಶ್ರೂಷಕರೊಂದಿಗೆ ಒಟ್ಟಾವ ಕ್ಷೇತ್ರದಲ್ಲಿ ಕೆಲಸಮಾಡಿದರು.

ಅಲ್ಪಾವಧಿಯ ಗೃಹಸ್ಥ ಜೀವನ

1934ರಲ್ಲಿ ನನ್ನ ಅಣ್ಣ ಡೇವಿಡ್‌ ಹುಟ್ಟಿದನು. ಅವನು ಒಬ್ಬ ಚಿಕ್ಕ ಹುಡುಗನಾಗಿದ್ದಾಗಲೇ, ಅಮ್ಮನ ಟೋಪಿಯನ್ನಿಡುವ ಪೆಟ್ಟಿಗೆಯ ಮೇಲೆ ನಿಂತುಕೊಂಡು, ತನ್ನ “ಭಾಷಣಗಳನ್ನು” ಕೊಡುವುದನ್ನು ಪ್ರ್ಯಾಕ್ಟಿಸ್‌ ಮಾಡುತ್ತಿದ್ದನು. ಅವನು ತನ್ನ ಜೀವನದಾದ್ಯಂತ ತಂದೆಯಂತೆಯೇ ಯೆಹೋವನಿಗಾಗಿ ಹುರುಪನ್ನು ತೋರಿಸಿದ್ದಾನೆ. ತಂದೆ, ತಾಯಿ ಮತ್ತು ಅಣ್ಣನವರು ಕಾರ್‌ನಲ್ಲಿ ಪ್ರಯಾಣಿಸುತ್ತಾ, ಕೆನಡದ ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಯ ವರೆಗಿನ ಸಭೆಗಳನ್ನು ಭೇಟಿಮಾಡುತ್ತಿದ್ದರು. ಹಾಗೆ ಪ್ರಯಾಣಿಸುತ್ತಿರುವಾಗ ಧ್ವನಿವರ್ಧಕಗಳನ್ನು ಕಾರಿನ ಮೇಲೆ ಕಟ್ಟುತ್ತಿದ್ದರು. 1938ರಲ್ಲಿ ನಾನು ಹುಟ್ಟಿದೆ. ಆ ಸಮಯದಲ್ಲಿ ತಂದೆಯವರು ಬ್ರಿಟಿಷ್‌ ಕೊಲಂಬಿಯದಲ್ಲಿ ಸೇವೆಸಲ್ಲಿಸುತ್ತಿದ್ದರು. ಆಗ ತಂದೆಯವರು ನನ್ನನ್ನು ಮಂಚದ ಮೇಲೆ ಮಲಗಿಸಿ, ಅವರು, ತಾಯಿಯವರು ಮತ್ತು ಡೇವಿಡ್‌ ಮಂಚದ ಸುತ್ತಲೂ ಮೊಣಕಾಲೂರಿ, ನನ್ನನ್ನು ಕೊಟ್ಟದ್ದಾಗಿ ತಂದೆಯವರು ದೇವರಿಗೆ ಪ್ರಾರ್ಥನೆಯ ಮೂಲಕ ಉಪಕಾರಸ್ತುತಿ ಮಾಡಿದ್ದು ಅಣ್ಣನಿಗೆ ಈಗಲೂ ನೆನಪಿದೆ.

1939ರ ಚಳಿಗಾಲದಲ್ಲಿ, ನಾವು ವ್ಯಾಂಕೂವರ್‌ನಲ್ಲಿ ವಾಸಿಸುತ್ತಿದ್ದೆವು ಮತ್ತು ತಂದೆಯವರು ಆ ಕ್ಷೇತ್ರದಲ್ಲಿದ್ದ ಸಭೆಗಳನ್ನು ಸಂದರ್ಶಿಸುತ್ತಿದ್ದರು. ಅನೇಕ ವರ್ಷಗಳಿಂದ ನಾವು ಸಂಗ್ರಹಿಸಿರುವ ಪತ್ರಗಳಲ್ಲಿ, 1939, ಜನವರಿ 14ರಂದು ಅವರು ಬರೆದ ಒಂದು ಪತ್ರವಿದೆ. ಅದನ್ನು ಅವರು ಬ್ರಿಟಿಷ್‌ ಕೊಲಂಬಿಯದ ವರ್ನನ್‌ನಲ್ಲಿದ್ದಾಗ ಬರೆದಿದ್ದರು. ತಂದೆ ಅದನ್ನು ಕ್ಲಾರಾ, ಡೇವಿಡ್‌ ಮತ್ತು ರೂತ್‌ಳಿಗೆ ಸಂಬೋಧಿಸುತ್ತಾ ಬರೆದುದು: “ನಿಮಗೆ ನನ್ನ ಮುತ್ತುಗಳು ಮತ್ತು ಅಪ್ಪುಗೆ.” ಆ ಪತ್ರದಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಸಂದೇಶವಿತ್ತು. ವರ್ನನ್‌ನಲ್ಲಿ ಬೆಳೆಯು ಬಹಳವಾಗಿದೆ, ಆದರೆ ಕೆಲಸಗಾರರು ಕಡಿಮೆ ಇದ್ದಾರೆ ಎಂದು ಅವರು ಬರೆದಿದ್ದರು.—ಮತ್ತಾಯ 9:37, 38.

ತಮ್ಮ ನೇಮಕವನ್ನು ಪೂರೈಸಿ, ವ್ಯಾಂಕೂವರ್‌ಗೆ ಹಿಂದಿರುಗಿ ಒಂದು ವಾರ ಕಳೆದ ಬಳಿಕ, ತಂದೆಯವರು ಒಂದು ಕೂಟದಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ರೋಗ ತಪಾಸಣೆಮಾಡಿದಾಗ, ಅವರಿಗೆ ಮಿದುಳಿನಲ್ಲಿ ಕ್ಯಾನ್ಸರ್‌ ಗೆಡ್ಡೆ ಇದೆಯೆಂಬುದು ತಿಳಿದುಬಂತು. 1939, ಮೇ 1ರಂದು ಅವರು ತಮ್ಮ ಭೂಜೀವಿತವನ್ನು ಮುಗಿಸಿದರು. ಆಗ ನಾನು ಕೇವಲ ಒಂಬತ್ತು ತಿಂಗಳ ಮಗುವಾಗಿದ್ದೆ ಮತ್ತು ಡೇವಿಡ್‌ ಸುಮಾರು ಐದು ವರ್ಷದವನಾಗಿದ್ದನು. ನಮ್ಮ ಪ್ರಿಯ ತಾಯಿಗೂ ಸ್ವರ್ಗೀಯ ನಿರೀಕ್ಷೆಯಿತ್ತು. ಮತ್ತು ಅವರು 1963ರ ಜೂನ್‌ 19ರಂದು ಮೃತಪಟ್ಟರು. ಅವರು ತಮ್ಮ ಜೀವನಪರ್ಯಂತ ದೇವರಿಗೆ ನಂಬಿಗಸ್ತರಾಗಿದ್ದರು.

ಅನೇಕ ದೇಶಗಳಿಗೆ ಸುವಾರ್ತೆಯನ್ನು ಕೊಂಡೊಯ್ಯುವ ತಮ್ಮ ಸುಯೋಗದ ಕುರಿತು ತಂದೆಯವರಿಗೆ ಯಾವ ಅಭಿಪ್ರಾಯವಿತ್ತು ಎಂಬುದು, ಅವರು ನಮ್ಮ ತಾಯಿಗೆ ಬರೆದಂತಹ ಒಂದು ಪತ್ರದಲ್ಲಿ ಅತ್ಯುತ್ತಮವಾಗಿ ವ್ಯಕ್ತಪಡಿಸಲ್ಪಟ್ಟಿದೆ. ಪತ್ರದಲ್ಲಿ ಒಂದು ಕಡೆ ಅವರು ಹೀಗೆ ಬರೆದಿದ್ದರು: “ರಾಜ್ಯ ಸಂದೇಶವನ್ನು ಕೊಂಡೊಯ್ಯುವ ಬೆಳಕಿನೋಪಾದಿ, ಈ ದೇಶಗಳಿಗೆ ಹೋಗುವಂತೆ ಯೆಹೋವನು ಕೃಪಾಪೂರ್ಣನಾಗಿ ನನ್ನನ್ನು ಅನುಮತಿಸಿದನು. ಆತನ ಪವಿತ್ರ ನಾಮವು ಸ್ತುತಿಸಲ್ಪಡಲಿ. ನಾನು ದುರ್ಬಲನಾಗಿದ್ದರೂ ಅನರ್ಹನಾಗಿದ್ದರೂ ಬಲಹೀನನಾಗಿದ್ದರೂ, ನನ್ನ ಮೂಲಕ ಆತನ ಮಹಿಮೆಯು ಕಂಗೊಳಿಸುತ್ತದೆ.”

ಈಗ ಜಾರ್ಜ್‌ ಮತ್ತು ಕ್ಲಾರಾ ಯಂಗ್‌ರ ಮಕ್ಕಳು, ಮೊಮ್ಮಕ್ಕಳು, ಮತ್ತು ಮರಿಮಕ್ಕಳು ಸಹ ನಮ್ಮ ಪ್ರೀತಿಪರ ದೇವರಾದ ಯೆಹೋವನಿಗೆ ಸೇವೆಸಲ್ಲಿಸುತ್ತಿದ್ದಾರೆ. ತಂದೆಯವರು ಆಗಾಗ ಇಬ್ರಿಯ 6:10ನ್ನು ಉಲ್ಲೇಖಿಸುತ್ತಿದ್ದರೆಂದು ನನಗೆ ಅನೇಕರು ಹೇಳಿದ್ದಾರೆ. ಆ ವಚನದಲ್ಲಿ ಹೀಗೆ ತಿಳಿಸಲ್ಪಟ್ಟಿದೆ: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” ಮತ್ತು ನಾವು ಸಹ ತಂದೆಯವರ ಕೆಲಸವನ್ನು ಮರೆತಿಲ್ಲ.

[ಪುಟ 23ರಲ್ಲಿರುವ ಚಿತ್ರ]

ಬಲಗಡೆಯಲ್ಲಿರುವವರು ನನ್ನ ತಂದೆ, ತಮ್ಮ ಮೂವರು ಅಣ್ಣಂದಿರೊಂದಿಗೆ

[ಪುಟ 25ರಲ್ಲಿರುವ ಚಿತ್ರ]

ಸಹೋದರರಾದ ವುಡ್ಸ್‌ವರ್ತ್‌, ರದರ್‌ಫರ್ಡ್‌ ಮತ್ತು ಮ್ಯಾಕ್‌ಮಿಲನ್‌ರೊಂದಿಗೆ ನಮ್ಮ ತಂದೆ (ನಿಂತುಕೊಂಡಿರುವವರು)

ಕೆಳಗಡೆ: ಸಹೋದರ ರಸಲ್‌ರವರ ಗುಂಪಿನೊಂದಿಗೆ ನಮ್ಮ ತಂದೆ (ತೀರ ಎಡಕ್ಕೆ)

[ಪುಟ 26ರಲ್ಲಿರುವ ಚಿತ್ರ]

ತಂದೆ ಮತ್ತು ತಾಯಿ

ಕೆಳಗಡೆ: ಅವರ ಮದುವೆಯ ದಿನ

[ಪುಟ 27ರಲ್ಲಿರುವ ಚಿತ್ರ]

ತಂದೆಯವರು ಮರಣಪಟ್ಟು ಕೆಲವು ವರ್ಷಗಳು ಕಳೆದ ಬಳಿಕ ಡೇವಿಡ್‌ ಮತ್ತು ತಾಯಿಯೊಂದಿಗೆ ನಾನು