ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ಮಾದರಿಗಳು—ನೀವು ಅವರಿಂದ ಏನಾದರೂ ಕಲಿತುಕೊಳ್ಳುತ್ತಿದ್ದೀರೊ?

ಒಳ್ಳೇ ಮಾದರಿಗಳು—ನೀವು ಅವರಿಂದ ಏನಾದರೂ ಕಲಿತುಕೊಳ್ಳುತ್ತಿದ್ದೀರೊ?

ಒಳ್ಳೇ ಮಾದರಿಗಳು—ನೀವು ಅವರಿಂದ ಏನಾದರೂ ಕಲಿತುಕೊಳ್ಳುತ್ತಿದ್ದೀರೊ?

“ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಕ್ರಿಸ್ತನನ್ನು ನಂಬುವವರೆಲ್ಲರಿಗೆ ಮಾದರಿಯಾದಿರಿ.” ಈ ಮಾತುಗಳನ್ನು ಅಪೊಸ್ತಲ ಪೌಲನು, ಥೆಸಲೊನೀಕದಲ್ಲಿ ವಾಸಿಸುತ್ತಿದ್ದ ನಂಬಿಗಸ್ತ ಕ್ರೈಸ್ತರಿಗೆ ಬರೆದನು. ಈ ಕ್ರೈಸ್ತರು ತಮ್ಮ ಜೊತೆ ವಿಶ್ವಾಸಿಗಳಿಗಾಗಿ ಇಟ್ಟಂತಹ ಮಾದರಿಯು ನಿಜವಾಗಿ ಶ್ಲಾಘನೀಯವಾಗಿತ್ತು. ಆದರೆ ಈ ಥೆಸಲೊನೀಕದವರು ಯಾರ ಮಾದರಿಯನ್ನು ಅನುಕರಿಸುತ್ತಿದ್ದರು? ಪೌಲನ ಮತ್ತು ಅವನ ಸಂಗಡಿಗರ ಮಾದರಿಯನ್ನೇ. ಆದುದರಿಂದ ಪೌಲನು ಹೇಳಿದ್ದು: “ನಾವು ಸಾರಿದ ಸುವಾರ್ತೆಯು ನಿಮ್ಮಲ್ಲಿ ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಬಹು ನಿಶ್ಚಯದೊಡನೆಯೂ ಬಂತೆಂಬದನ್ನೂ ಬಲ್ಲೆವು. ನಾವು ನಿಮ್ಮಲ್ಲಿದ್ದು ನಿಮಗೋಸ್ಕರ ಎಂಥವರಾಗಿ ವರ್ತಿಸಿದೆವೆಂಬದನ್ನು ನೀವೂ ಬಲ್ಲಿರಿ. ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ ನಮ್ಮನ್ನೂ ಕರ್ತನಾದ ಯೇಸುವನ್ನೂ ಅನುಸರಿಸುವವರಾದಿರಿ.”—1 ಥೆಸಲೊನೀಕ 1:5-7.

ಪೌಲನು ಕೇವಲ ಪ್ರಸಂಗಗಳನ್ನು ಕೊಡುವುದಕ್ಕಿಂತಲೂ ಹೆಚ್ಚನ್ನು ಮಾಡಿದನು. ತಾನು ಕಲಿಸುತ್ತಿದ್ದ ಸಂಗತಿಗಳನ್ನು ಅವನು ಸ್ವತಃ ತನ್ನ ಜೀವನದಲ್ಲೇ ಕಾರ್ಯರೂಪಕ್ಕೆ ಹಾಕುತ್ತಿದ್ದನು. ಅವನ ಜೀವನವು ನಂಬಿಕೆ, ತಾಳ್ಮೆ ಮತ್ತು ಸ್ವತ್ಯಾಗಕ್ಕೆ ಒಂದು ಮಾದರಿಯಾಗಿತ್ತು. ಈ ಕಾರಣದಿಂದಾಗಿ, ಪೌಲನು ಮತ್ತು ಅವನ ಸಂಗಡಿಗರು ಥೆಸಲೊನೀಕದವರ ಜೀವಿತಗಳ ಮೇಲೆ ತುಂಬ ಪ್ರಭಾವವನ್ನು ಬೀರಿದ್ದರು. ಅದು, ಅವರು “ಹಿಂಸೆಯನ್ನು ಅನುಭವಿಸಬೇಕಾಗಿದ್ದರೂ” ಸತ್ಯವನ್ನು ಸ್ವೀಕರಿಸುವಂತೆ ಪ್ರಚೋದಿಸಿತು. ಆದರೆ ಥೆಸಲೊನೀಕದವರ ಮೇಲೆ ಒಳ್ಳೇ ಪ್ರಭಾವವನ್ನು ಬೀರಿದವರಲ್ಲಿ, ಕೇವಲ ಪೌಲ ಮತ್ತು ಅವನ ಜೊತೆ ಕೆಲಸಗಾರರು ಮಾತ್ರ ಸೇರಿರಲಿಲ್ಲ. ಹಿಂಸೆಯನ್ನು ತಾಳಿಕೊಂಡಂತಹ ಇತರರ ಮಾದರಿಯೂ ಒಂದು ಉತ್ತೇಜನವಾಗಿತ್ತು. ಪೌಲನು ಥೆಸಲೊನೀಕದವರಿಗೆ ಬರೆದದ್ದು: “ಹೌದು, ಸಹೋದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾದಿರಿ. ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನು ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ.”—1 ಥೆಸಲೊನೀಕ 2:14.

ಯೇಸು ಕ್ರಿಸ್ತನು—ಪ್ರಮುಖ ಮಾದರಿ

ಬೇರೆಯವರು ಅನುಕರಿಸುವಷ್ಟು ಉತ್ತಮವಾದ ಮಾದರಿಯನ್ನು ಸ್ವತಃ ಪೌಲನೇ ಇಟ್ಟಿದ್ದನಾದರೂ, ಕ್ರೈಸ್ತರು ಅನುಸರಿಸಬೇಕಾದ ಪ್ರಮುಖ ಮಾದರಿಯು ಯೇಸು ಕ್ರಿಸ್ತನಾಗಿದ್ದಾನೆಂದು ಅವನು ತಿಳಿಸಿದನು. (1 ಥೆಸಲೊನೀಕ 1:6) ಕ್ರಿಸ್ತನು ಹಿಂದೆಯೂ ಒಬ್ಬ ಪ್ರಮುಖ ಮಾದರಿಯಾಗಿದ್ದನು ಮತ್ತು ಈಗಲೂ ನಮ್ಮ ಪ್ರಮುಖ ಮಾದರಿಯಾಗಿದ್ದಾನೆ. ಅಪೊಸ್ತಲ ಪೇತ್ರನು ಬರೆದುದು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.”—1 ಪೇತ್ರ 2:21.

ಆದರೆ ಸುಮಾರು 2,000 ವರ್ಷಗಳ ಹಿಂದೆಯೇ ಯೇಸುವಿನ ಮಾನವ ಜೀವಿತವು ಕೊನೆಗೊಂಡಿತು. ಈಗ ಅವನು ಒಬ್ಬ ಅಮರ ಆತ್ಮಜೀವಿಯಾಗಿದ್ದು, “ಅಗಮ್ಯವಾದ ಬೆಳಕಿನಲ್ಲಿ ವಾಸಮಾಡು”ತ್ತಾನೆ. ಈ ಕಾರಣದಿಂದ “ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು.” (1 ತಿಮೊಥೆಯ 6:16) ಹೀಗಿರುವಾಗ, ನಾವು ಅವನನ್ನು ಹೇಗೆ ಅನುಕರಿಸಬಲ್ಲೆವು? ಯೇಸುವಿನ ಜೀವನದ ಬಗ್ಗೆ ಬೈಬಲಿನಲ್ಲಿರುವ ನಾಲ್ಕು ವೃತ್ತಾಂತಗಳನ್ನು ಅಭ್ಯಾಸಮಾಡುವ ಮೂಲಕವೇ. ಈ ಸುವಾರ್ತಾ ಪುಸ್ತಕಗಳು, ಅವನ ವ್ಯಕ್ತಿತ್ವ, ಜೀವನ ಕ್ರಮ ಮತ್ತು ಅವನ ‘ಮನಸ್ಸಿನ’ ಕುರಿತು ತಿಳುವಳಿಕೆಯನ್ನು ನೀಡುತ್ತವೆ. (ಫಿಲಿಪ್ಪಿ 2:5-8) ಜೀವಿಸಿರುವವರಲ್ಲೇ ಅತ್ಯಂತ ಮಹಾನ್‌ ಪುರುಷ ಎಂಬ ಪುಸ್ತಕವನ್ನು ಜಾಗರೂಕತೆಯಿಂದ ಅಭ್ಯಾಸಮಾಡುವ ಮೂಲಕ ಸಹ ಹೆಚ್ಚಿನ ತಿಳುವಳಿಕೆಯನ್ನು ಪಡೆಯಸಾಧ್ಯವಿದೆ. ಈ ಪುಸ್ತಕವು, ಯೇಸುವಿನ ಜೀವನದಲ್ಲಿ ನಡೆದಂತಹ ಘಟನೆಗಳನ್ನು ಸವಿಸ್ತಾರವಾಗಿ ಚಿತ್ರಿಸುತ್ತದೆ ಮತ್ತು ಆ ಘಟನೆಗಳನ್ನು ಕಾಲಾನುಕ್ರಮವಾಗಿ ವರದಿಸುತ್ತದೆ. *

ಯೇಸುವಿನ ಸ್ವತ್ಯಾಗದ ಮಾದರಿಯು, ಅಪೊಸ್ತಲ ಪೌಲನ ಮೇಲೆ ಬಲವಾದ ಪ್ರಭಾವವನ್ನು ಬೀರಿತು. ಅವನು ಕೊರಿಂಥದಲ್ಲಿದ್ದ ಕ್ರೈಸ್ತರಿಗಂದದ್ದು: “ನಾನಂತೂ ನನಗಿರುವದನ್ನು ನಿಮ್ಮ ಆತ್ಮಸಂರಕ್ಷಣೆಗೋಸ್ಕರ ಅತಿಸಂತೋಷದಿಂದ ವೆಚ್ಚಮಾಡುತ್ತೇನೆ, ನನ್ನನ್ನೇ ವೆಚ್ಚಮಾಡಿಕೊಳ್ಳುತ್ತೇನೆ.” (2 ಕೊರಿಂಥ 12:15) ಕ್ರಿಸ್ತನಂತಹ ಮನೋಭಾವವನ್ನು ಪೌಲನು ಎಷ್ಟು ಚೆನ್ನಾಗಿ ಪ್ರದರ್ಶಿಸಿದನು! ನಾವು ಕ್ರಿಸ್ತನ ಪರಿಪೂರ್ಣ ಮಾದರಿಯ ಕುರಿತಾಗಿ ಯೋಚಿಸುವಾಗ, ನಾವು ಕೂಡ ಅವನನ್ನು ಅನುಕರಿಸುವಂತೆ ಪ್ರಚೋದಿಸಲ್ಪಡಬೇಕು.

ಉದಾಹರಣೆಗಾಗಿ, ನಮ್ಮ ಭೌತಿಕ ಅಗತ್ಯಗಳನ್ನು ಪೂರೈಸುವ ವಿಷಯದಲ್ಲಿ ದೇವರು ನಮಗೆ ಕೊಟ್ಟಿರುವ ವಾಗ್ದಾನದ ಮೇಲೆ ನಾವು ಆತುಕೊಳ್ಳಬೇಕೆಂದು ಯೇಸು ನಮಗೆ ಕಲಿಸಿದನು. ಆದರೆ ಅವನು ಜನರಿಗೆ ಹಾಗೆ ಕಲಿಸಿದನು ಮಾತ್ರವಲ್ಲ, ಪ್ರತಿದಿನವೂ ಯೆಹೋವನಲ್ಲಿ ತನಗಿದ್ದಂತಹ ನಂಬಿಕೆ ಮತ್ತು ಭರವಸೆಯನ್ನು ಅವನು ಕ್ರಿಯೆಯಲ್ಲಿ ತೋರಿಸಿದನು. ಅವನಂದದ್ದು: “ನರಿಗಳಿಗೆ ಗುದ್ದುಗಳವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ.” (ಮತ್ತಾಯ 6:25; 8:20) ನಿಮ್ಮ ಯೋಚನೆಗಳು ಮತ್ತು ಕ್ರಿಯೆಗಳು ಯಾವಾಗಲೂ ಪ್ರಾಪಂಚಿಕ ವಿಷಯಗಳ ಸುತ್ತಲೂ ತಿರುಗುತ್ತಿರುತ್ತವೊ? ಅಥವಾ ನೀವು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡುತ್ತೀರೆಂಬುದಕ್ಕೆ ನಿಮ್ಮ ಜೀವನವು ಸ್ಪಷ್ಟವಾದ ಪುರಾವೆಯನ್ನು ನೀಡುತ್ತದೊ? ಅಷ್ಟುಮಾತ್ರವಲ್ಲದೆ, ಯೆಹೋವನ ಸೇವೆಯ ವಿಷಯದಲ್ಲಿ ನಿಮ್ಮ ಮನೋಭಾವವೇನು? ಈ ವಿಷಯದಲ್ಲಿ ನಮ್ಮ ಮಾದರಿಯಾಗಿರುವ ಯೇಸುವಿನ ಮನೋಭಾವವೇ ನಿಮಗಿದೆಯೊ? ಯೇಸು ಹುರುಪನ್ನು ತೋರಿಸಬೇಕೆಂದು ಕೇವಲ ಬಾಯಿಮಾತಿನಲ್ಲಿ ಹೇಳುತ್ತಿರಲಿಲ್ಲ, ಬದಲಾಗಿ ಅನೇಕ ಸಂದರ್ಭಗಳಲ್ಲಿ ಉತ್ಕಟ ಉತ್ಸಾಹವನ್ನು ಕ್ರಿಯೆಗಳಲ್ಲಿ ತೋರಿಸಿದನು ಎಂದು ಬೈಬಲ್‌ ತೋರಿಸುತ್ತದೆ. (ಯೋಹಾನ 2:14-17) ಅಷ್ಟುಮಾತ್ರವಲ್ಲದೆ, ಪ್ರೀತಿಯನ್ನು ತೋರಿಸುವ ವಿಷಯದಲ್ಲೂ ಯೇಸು ಎಷ್ಟೊಂದು ಒಳ್ಳೆಯ ಮಾದರಿಯನ್ನಿಟ್ಟನು! ಅವನು ತನ್ನ ಶಿಷ್ಯರಿಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟನು! (ಯೋಹಾನ 15:13) ನೀವು ಸಹ ನಿಮ್ಮ ಕ್ರೈಸ್ತ ಸಹೋದರರಿಗೆ ಪ್ರೀತಿಯನ್ನು ತೋರಿಸುವ ಮೂಲಕ ಯೇಸುವನ್ನು ಅನುಕರಿಸುತ್ತಿದ್ದೀರೊ? ಅಥವಾ ಅವರಲ್ಲಿರುವ ಅಪರಿಪೂರ್ಣತೆಗಳು ನೀವು ಅವರನ್ನು ಪ್ರೀತಿಸದಂತೆ ನಿಮ್ಮನ್ನು ತಡೆಯುತ್ತಿವೆಯೊ?

ಕ್ರಿಸ್ತನ ಮಾದರಿಯನ್ನು ಅನುಕರಿಸಲು ಪ್ರಯತ್ನಿಸುತ್ತಿರುವಾಗ, ಅನೇಕವೇಳೆ ನಾವು ತಪ್ಪಿಬೀಳುವೆವು ಎಂಬುದೇನೊ ನಿಜ. ಆದರೆ ‘ಯೇಸು ಕ್ರಿಸ್ತನನ್ನು ಧರಿಸಿಕೊಳ್ಳುವ’ ಪ್ರಯತ್ನಗಳನ್ನು ನಾವು ಮಾಡಿದರೆ, ಅದನ್ನು ನೋಡಿ ಯೆಹೋವನು ಖಂಡಿತವಾಗಿಯೂ ಸಂತೋಷಿಸುತ್ತಾನೆ.—ರೋಮಾಪುರ 13:14.

“ಮಂದೆಗೆ ಮಾದರಿ”

ಇಂದು ನಮಗೆ ಮಾದರಿಯಾಗಿರಸಾಧ್ಯವಿರುವ ವ್ಯಕ್ತಿಗಳು ಸಭೆಗಳಲ್ಲಿದ್ದಾರೊ? ಖಂಡಿತವಾಗಿಯೂ ಇದ್ದಾರೆ! ಇದಲ್ಲದೆ, ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಸಹೋದರರೇ ವಿಶೇಷವಾಗಿ ಒಳ್ಳೇ ಮಾದರಿಯನ್ನಿಡಬೇಕು. ತೀತನೆಂಬುವವನು ಕ್ರೇತದಲ್ಲಿದ್ದ ಸಭೆಗಳಲ್ಲಿ ಸೇವೆಸಲ್ಲಿಸುತ್ತಿದ್ದನು ಮತ್ತು ಮೇಲ್ವಿಚಾರಕರನ್ನು ನೇಮಿಸುತ್ತಿದ್ದನು. ಪೌಲನು ಅವನಿಗೆ ಹೇಳಿದ್ದೇನೆಂದರೆ, ಪ್ರತಿಯೊಬ್ಬ ನೇಮಿತ ಹಿರಿಯನು ‘ನಿಂದಾರಹಿತನಾಗಿರಬೇಕು.’ (ತೀತ 1:5, 6) ‘ಹಿರಿಯರು’ “ಮಂದೆಗೆ ಮಾದರಿ”ಯಾಗಿರಬೇಕೆಂದು ಅಪೊಸ್ತಲ ಪೇತ್ರನು ಸಹ ಅದೇ ರೀತಿಯ ಬುದ್ಧಿವಾದವನ್ನು ಕೊಟ್ಟನು. (1 ಪೇತ್ರ 5:1-3) ಮತ್ತು ಶುಶ್ರೂಷಾ ಸೇವಕರಾಗಿ ಕೆಲಸಮಾಡುತ್ತಿರುವವರ ಕುರಿತು ಏನು ಹೇಳಬಹುದು? ಇವರು ಸಹ ‘ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡುವವರಾಗಿರಬೇಕು.’—1 ತಿಮೊಥೆಯ 3:13.

ಪ್ರತಿಯೊಬ್ಬ ಹಿರಿಯನು ಅಥವಾ ಶುಶ್ರೂಷಾ ಸೇವಕನು, ಕ್ರೈಸ್ತ ಶುಶ್ರೂಷೆಯ ಪ್ರತಿಯೊಂದು ಕ್ಷೇತ್ರದಲ್ಲಿ ನಿಪುಣನಾಗಿರಬೇಕು ಎಂದು ನಿರೀಕ್ಷಿಸುವುದು ಒಂದು ವ್ಯಾವಹಾರಿಕವಾದ ಮನೋಭಾವವಲ್ಲ. ಏಕೆಂದರೆ ಪೌಲನು ರೋಮಿನಲ್ಲಿದ್ದ ಕ್ರೈಸ್ತರಿಗೆ ಹೇಳಿದ್ದು: “ದೇವರು ನಮಗೆ ಕೃಪೆಮಾಡಿದ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ.” (ರೋಮಾಪುರ 12:6) ಬೇರೆ ಬೇರೆ ಸಹೋದರರು ವಿಭಿನ್ನ ಕ್ಷೇತ್ರಗಳಲ್ಲಿ ನಿಪುಣರಾಗಿರುತ್ತಾರೆ. ಹಿರಿಯರು ಮಾಡುವುದು ಮತ್ತು ಹೇಳುವುದೆಲ್ಲವೂ ಪರಿಪೂರ್ಣವಾಗಿರುತ್ತದೆ, ಅವರು ತಪ್ಪೇ ಮಾಡುವುದಿಲ್ಲ ಎಂದು ನಾವು ನೆನಸುವುದು ಸರಿಯಲ್ಲ. ಆದುದರಿಂದಲೇ ಯಾಕೋಬ 3:2ರಲ್ಲಿ ಬೈಬಲು ಹೀಗೆ ಹೇಳುತ್ತದೆ: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” ಆದರೆ ಹಿರಿಯರಿಗೆ ತಮ್ಮ ಸ್ವಂತ ಅಪರಿಪೂರ್ಣತೆಗಳಿದ್ದರೂ, ಅವರು ತಿಮೊಥೆಯನಂತಿದ್ದು, ‘ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ ಮಾದರಿಯಾಗಿರಬಲ್ಲರು.’ (1 ತಿಮೊಥೆಯ 4:12) ಹಿರಿಯರು ಹಾಗೆ ಮಾಡುವಾಗ, ಇಬ್ರಿಯ 13:7ರಲ್ಲಿರುವ ಈ ಬುದ್ಧಿವಾದವನ್ನು ಹಿಂಡಿನಲ್ಲಿರುವವರು ಸಿದ್ಧಮನಸ್ಸಿನಿಂದ ಪಾಲಿಸುವರು: “ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.”

ಆಧುನಿಕ ದಿನದ ಇನ್ನಿತರ ಮಾದರಿಗಳು

ಗತಿಸಿರುವ ಕೆಲವೊಂದು ದಶಕಗಳಲ್ಲಿ, ಇನ್ನೂ ಎಷ್ಟೋ ಅಸಂಖ್ಯಾತ ವ್ಯಕ್ತಿಗಳು ಉತ್ತಮ ಮಾದರಿಯಾಗಿ ಪರಿಣಮಿಸಿದ್ದಾರೆ. ಉದಾಹರಣೆಗೆ, ವಿದೇಶಿ ಕ್ಷೇತ್ರಗಳಲ್ಲಿ ತಮ್ಮ ಕ್ರೈಸ್ತ ನೇಮಕವನ್ನು ಪೂರೈಸಲಿಕ್ಕಾಗಿ, ಸ್ವತ್ಯಾಗದ ಮನೋಭಾವವನ್ನು ತೋರಿಸಿರುವ ಸಾವಿರಾರು ಮಂದಿ ಮಿಷನೆರಿಗಳಿದ್ದಾರೆ. ಇದಕ್ಕಾಗಿ ಅವರು ತಮ್ಮ ‘ಮನೆಗಳನ್ನು ಅಣ್ಣತಮ್ಮಂದಿರನ್ನು ಅಕ್ಕತಂಗಿಯರನ್ನು ತಂದೆಯನ್ನು ತಾಯಿಯನ್ನು ಮಕ್ಕಳನ್ನು ಭೂಮಿಯನ್ನು [“ದೇಶಗಳನ್ನು,” NW] ಬಿಟ್ಟುಬಿಟ್ಟಿದ್ದಾರೆ.’ (ಮತ್ತಾಯ 19:29) ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು, ವಾಚ್‌ಟವರ್‌ ಸೊಸೈಟಿಯ ಆಫೀಸುಗಳಲ್ಲಿ ಸ್ವಯಂಸೇವಕರಾಗಿ ಕೆಲಸಮಾಡುವ ಸ್ತ್ರೀಪುರುಷರು, ಮತ್ತು ಸಭೆಗಳಲ್ಲಿ ಸೇವೆಸಲ್ಲಿಸುತ್ತಿರುವ ಪಯನೀಯರರ ಕುರಿತಾಗಿಯೂ ಯೋಚಿಸಿರಿ. ಇವರ ಮಾದರಿಗಳು ಬೇರೆಯವರನ್ನು ಪ್ರಚೋದಿಸಸಾಧ್ಯವಿದೆಯೊ? ಏಷಿಯದಲ್ಲಿರುವ ಒಬ್ಬ ಕ್ರೈಸ್ತ ಸೌವಾರ್ತಿಕನು, ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ ಎಂಟನೆಯ ತರಗತಿಯ ವಿದ್ಯಾರ್ಥಿಯಾಗಿದ್ದ ಒಬ್ಬ ಮಿಷನೆರಿಯನ್ನು ಜ್ಞಾಪಿಸಿಕೊಳ್ಳುತ್ತಾನೆ. ಈ ನಂಬಿಗಸ್ತ ಮಿಷನೆರಿ ಸಹೋದರರು, “ಸೊಳ್ಳೆಗಳ ಕಾಟವನ್ನು ಮತ್ತು ಜೀವವನ್ನು ಹಿಂಡುವಂತಿದ್ದ ಆರ್ದ್ರತೆಯನ್ನು ಸಹಿಸಲು ಸಿದ್ಧರಿದ್ದರು. . . . ಅದಕ್ಕಿಂತಲೂ ಹೆಚ್ಚಾಗಿ, ಅವರು ಇಂಗ್ಲೆಂಡಿನವರಾಗಿದ್ದರೂ ಚೈನೀಸ್‌ ಮತ್ತು ಮಾಲೇ ಭಾಷೆಗಳಲ್ಲಿ ನಿರೂಪಣೆಗಳನ್ನು ಪ್ರಸ್ತುತಪಡಿಸಲು ಅವರಿಗಿದ್ದ ಸಾಮರ್ಥ್ಯವು ಮನತಟ್ಟುವ ಸಂಗತಿಯಾಗಿತ್ತು” ಎಂದು ಅವನು ಹೇಳಿದನು. ಅವರ ಒಳ್ಳೆಯ ಮಾದರಿಯು ಇತರರ ಮೇಲೆ ಯಾವ ಪರಿಣಾಮವನ್ನು ಬೀರಿತು? ಆ ಸಹೋದರನು ಹೇಳಿದ್ದು: “ಅವರ ಶಾಂತ ಸ್ವಭಾವ ಮತ್ತು ಆತ್ಮವಿಶ್ವಾಸವು, ದೊಡ್ಡವನಾದ ಮೇಲೆ ನಾನು ಸಹ ಒಬ್ಬ ಮಿಷನೆರಿಯಾಗಬೇಕೆಂಬ ಆಸೆಯನ್ನು ನನ್ನಲ್ಲಿ ಚಿಗುರಿಸಿತು.” ಹೀಗೆ ಈ ಸಹೋದರನು ದೊಡ್ಡವನಾದಾಗ ಒಬ್ಬ ಮಿಷನೆರಿಯಾದನೆಂಬುದು ಅಚ್ಚರಿಗೊಳಿಸುವ ಸಂಗತಿಯೇನಲ್ಲ.

ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ನಲ್ಲಿ ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಲ್ಲಿ ಬಂದಿರುವ ಹಲವಾರು ವ್ಯಕ್ತಿಗಳ ಜೀವನ ಕಥೆಗಳ ಒಂದು ಪಟ್ಟಿಯೇ ಇದೆ. ಈ ಕಥೆಗಳು, ಲೌಕಿಕ ಉದ್ಯೋಗಗಳು ಮತ್ತು ಗುರಿಗಳನ್ನು ಬದಿಗಿರಿಸಿರುವ, ಬಲಹೀನತೆಗಳನ್ನು ಜಯಿಸಿರುವ, ತಮ್ಮ ವ್ಯಕ್ತಿತ್ವದಲ್ಲಿ ಮಹತ್ತಾದ ಬದಲಾವಣೆಗಳನ್ನು ಮಾಡಿರುವ, ಸಂಕಷ್ಟಗಳ ಎದುರಿನಲ್ಲೂ ಸಕಾರಾತ್ಮಕ ಮನೋವೃತ್ತಿಯನ್ನು ಇಟ್ಟುಕೊಂಡಿರುವ ಹಾಗೂ ಶ್ರಮಶೀಲತೆ, ತಾಳ್ಮೆ, ನಿಷ್ಠೆ, ನಮ್ರತೆ ಮತ್ತು ಸ್ವತ್ಯಾಗದ ಮನೋಭಾವವನ್ನು ಪ್ರದರ್ಶಿಸಿದ ವ್ಯಕ್ತಿಗಳ ಕುರಿತಾಗಿ ತಿಳಿಸುತ್ತವೆ. ಈ ವೃತ್ತಾಂತಗಳ ಕುರಿತಾಗಿ ಒಬ್ಬ ಓದುಗಳು ಬರೆದುದು: “ಬೇರೆಯವರು ಅನುಭವಿಸಿರುವಂಥ ಎಲ್ಲ ಸಂಗತಿಗಳ ಕುರಿತಾಗಿ ನಾನು ಓದುವಾಗ, ಅವು ನನ್ನನ್ನು ಹೆಚ್ಚು ನಮ್ರಳಾದ ಮತ್ತು ಕೃತಜ್ಞತಾಭಾವವುಳ್ಳ ಕ್ರೈಸ್ತಳನ್ನಾಗಿ ಮಾಡುತ್ತವೆ. ಅಷ್ಟುಮಾತ್ರವಲ್ಲದೆ, ನಾನೇ ಶ್ರೇಷ್ಠಳು ಎಂದು ನೆನಸದಂತೆ ಅಥವಾ ಸ್ವಾರ್ಥಭಾವದವಳಾಗಿರದಂತೆ ಅವು ನನಗೆ ಸಹಾಯಮಾಡಿವೆ.”

ಇದಕ್ಕೆ ಕೂಡಿಸಿ, ನಿಮ್ಮ ಸ್ವಂತ ಸಭೆಯಲ್ಲಿರುವ ಉತ್ತಮ ಮಾದರಿಗಳನ್ನು ಮರೆಯಬೇಡಿರಿ: ತಮ್ಮ ಕುಟುಂಬಗಳ ಭೌತಿಕ ಮತ್ತು ಆತ್ಮಿಕ ಅಗತ್ಯಗಳನ್ನು ತಪ್ಪದೆ ಪೂರೈಸುವ ಕುಟುಂಬದ ತಲೆಗಳು; ಮಕ್ಕಳನ್ನು ನೋಡಿಕೊಳ್ಳುವ ಒತ್ತಡಗಳನ್ನು ಎದುರಿಸುತ್ತಿರುವುದಾದರೂ, ಅದೇ ಸಮಯದಲ್ಲಿ ಶುಶ್ರೂಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಸಹೋದರಿಯರು ಮತ್ತು ಒಂಟಿ ತಾಯಂದಿರು; ಶಾರೀರಿಕ ದೌರ್ಬಲ್ಯ ಮತ್ತು ಕ್ಷೀಣಿಸುತ್ತಿರುವ ಆರೋಗ್ಯದ ಎದುರಿನಲ್ಲೂ ನಂಬಿಗಸ್ತರಾಗಿ ಮುಂದುವರಿಯುತ್ತಿರುವ ವೃದ್ಧರು ಮತ್ತು ಅಸ್ವಸ್ಥರು. ಇವರೆಲ್ಲರ ಮಾದರಿಯು ನಿಮ್ಮನ್ನು ಪ್ರಚೋದಿಸುವುದಿಲ್ಲವೊ?

ಈ ಲೋಕದಲ್ಲಿ ಕೆಟ್ಟ ಮಾದರಿಯನ್ನಿಡುವಂತಹ ಜನರೇ ಹೆಚ್ಚಾಗಿದ್ದಾರೆ ಎಂಬುದೇನೊ ನಿಜ. (2 ತಿಮೊಥೆಯ 3:13) ಹಾಗಿದ್ದರೂ, ಯೂದಾಯದಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ ಪೌಲನು ಕೊಟ್ಟ ಬುದ್ಧಿವಾದವನ್ನು ಪರಿಗಣಿಸಿರಿ. ಪ್ರಾಚೀನ ಕಾಲದ ಅನೇಕ ನಂಬಿಗಸ್ತ ಸ್ತ್ರೀಪುರುಷರ ಆದರ್ಶಪ್ರಾಯ ನಡವಳಿಕೆಯನ್ನು ವಿಸ್ತಾರವಾಗಿ ವರ್ಣಿಸಿದ ನಂತರ, ಅಪೊಸ್ತಲ ಪೌಲನು ಅವರನ್ನು ಉತ್ತೇಜಿಸಿದ್ದು: “ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ . . . ನಾವು ಸಹ . . . ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.” (ಇಬ್ರಿಯ 12:1, 2) ಇಂದಿನ ಕ್ರೈಸ್ತರ ಸುತ್ತಲೂ, ಪ್ರಾಚೀನ ಕಾಲದಲ್ಲಿ ಹಾಗೂ ಆಧುನಿಕ ದಿನದಲ್ಲಿ ಒಳ್ಳೆಯ ಮಾದರಿಯನ್ನು ಇಟ್ಟಿರುವಂತಹ ಜನರ ಒಂದು ‘ಮೇಘ’ವಿದೆ. ನೀವು ಈ ಮಾದರಿಗಳಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದೀರೊ? ನೀವು “ಕೆಟ್ಟ ನಡತೆಯನ್ನು ಅನುಸರಿಸದೆ ಒಳ್ಳೇ ನಡತೆಯನ್ನು ಅನುಸರಿಸು”ವ ದೃಢನಿರ್ಧಾರವನ್ನು ಮಾಡಿರುವಲ್ಲಿ, ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುವಿರಿ.—3 ಯೋಹಾನ 11.

[ಪಾದಟಿಪ್ಪಣಿ]

^ ಪ್ಯಾರ. 6 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.

[ಪುಟ 20ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪ್ರತಿಯೊಬ್ಬ ಹಿರಿಯನು ಅಥವಾ ಶುಶ್ರೂಷಾ ಸೇವಕನು, ಕ್ರೈಸ್ತ ಶುಶ್ರೂಷೆಯ ಪ್ರತಿಯೊಂದು ಕ್ಷೇತ್ರದಲ್ಲಿ ನಿಪುಣನಾಗಿರಬೇಕು ಎಂದು ನಿರೀಕ್ಷಿಸುವುದು ಒಂದು ವ್ಯಾವಹಾರಿಕವಾದ ಮನೋಭಾವವಲ್ಲ

[ಪುಟ 21ರಲ್ಲಿರುವ ಚಿತ್ರ]

ಹಿರಿಯರು ‘ಮಂದೆಗೆ ಮಾದರಿ’ಯಾಗಿರಬೇಕು