ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಕುರುಬರೇ, ‘ನಿಮ್ಮ ಹೃದಯವನ್ನು ವಿಶಾಲವಾಗಿ ತೆರೆಯಿರಿ’!

ಕ್ರೈಸ್ತ ಕುರುಬರೇ, ‘ನಿಮ್ಮ ಹೃದಯವನ್ನು ವಿಶಾಲವಾಗಿ ತೆರೆಯಿರಿ’!

ಕ್ರೈಸ್ತ ಕುರುಬರೇ, ‘ನಿಮ್ಮ ಹೃದಯವನ್ನು ವಿಶಾಲವಾಗಿ ತೆರೆಯಿರಿ’!

“ಯೆಹೋವನು ನನಗೆ ಕುರುಬನು; ಕೊರತೆ ಪಡೆನು.” ಈ ಮಾತುಗಳ ಮೂಲಕ ದಾವೀದನು, ತನ್ನ ದೇವರಲ್ಲಿ ಅವನಿಗಿದ್ದ ಸಂಪೂರ್ಣ ಭರವಸೆಯನ್ನು ವ್ಯಕ್ತಪಡಿಸಿದನು. ಆತ್ಮಿಕ ರೀತಿಯಲ್ಲಿ, ಯೆಹೋವನು ಅವನನ್ನು “ಹಸುರುಗಾವಲುಗಳ” ಬಳಿ ಮತ್ತು “ವಿಶ್ರಾಂತಿಕರವಾದ ನೀರುಗಳ” ಬಳಿ ನಡಿಸುತ್ತಾ, “ನೀತಿಮಾರ್ಗದಲ್ಲಿ” ನಡೆಯುವಂತೆ ಅವನಿಗೆ ಮಾರ್ಗದರ್ಶನ ನೀಡಿದನು. ದಾವೀದನು ತನ್ನ ವಿರೋಧಿಗಳಿಂದ ಸುತ್ತುವರಿಯಲ್ಪಟ್ಟಾಗ, ದಾವೀದನಿಗೆ ಬೆಂಬಲ ಮತ್ತು ಉತ್ತೇಜನವು ಸಿಕ್ಕಿತು. ಆದುದರಿಂದ ಅವನು ಯೆಹೋವನಿಗೆ ಹೀಗೆ ಹೇಳುವಂತೆ ಪ್ರೇರೇಪಿಸಲ್ಪಟ್ಟನು: “ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು.” ಇಂತಹ ಒಬ್ಬ ಶ್ರೇಷ್ಠ ಕುರುಬನಿರುವುದರಿಂದ, ದಾವೀದನು “ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿ”ಸುವ ದೃಢನಿರ್ಧಾರವನ್ನು ಮಾಡಿದ್ದನು.—ಕೀರ್ತನೆ 23:1-6.

ದೇವರ ಏಕಜಾತ ಪುತ್ರನು ಸಹ ಯೆಹೋವನ ಈ ಪ್ರೀತಿಪೂರ್ವಕ ಆರೈಕೆಯನ್ನು ಅನುಭವಿಸಿದನು. ಮತ್ತು ಅವನು ಈ ಭೂಮಿಗೆ ಬಂದಾಗ ಇದೇ ರೀತಿಯ ಆರೈಕೆಯನ್ನು ತನ್ನ ಶಿಷ್ಯರೊಂದಿಗಿನ ವ್ಯವಹಾರಗಳಲ್ಲಿ ಪ್ರತಿಬಿಂಬಿಸಿದನು. ಆದುದರಿಂದಲೇ ಶಾಸ್ತ್ರಗಳಲ್ಲಿ ಅವನನ್ನು “ಒಳ್ಳೇ ಕುರುಬ,” “ಮಹಾಪಾಲಕ,” ಮತ್ತು “ಹಿರೀ ಕುರುಬ” ಎಂದು ಕರೆಯಲಾಗಿದೆ.—ಯೋಹಾನ 10:11; ಇಬ್ರಿಯ 13:20; 1 ಪೇತ್ರ 5:2-4.

ತಮ್ಮನ್ನು ಪ್ರೀತಿಸುವವರೆಲ್ಲರನ್ನು ಯೆಹೋವನು ಮತ್ತು ಯೇಸು ಕ್ರಿಸ್ತನು ಈಗಲೂ ಪರಾಮರಿಸುತ್ತಾ ಇದ್ದಾರೆ. ಅವರ ಪರಾಮರಿಕೆಯು ಸಭೆಯಲ್ಲಿ ಉಪಕುರುಬರ ಪ್ರೀತಿಪರ ಏರ್ಪಾಡಿನ ಮೂಲಕ ತೋರಿಸಲ್ಪಡುತ್ತದೆ. ಅಂತಹ ಉಪಕುರುಬರನ್ನು ಉದ್ದೇಶಿಸಿಯೇ ಪೌಲನಂದದ್ದು: “ದೇವರು ಸ್ವರಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.”—ಅ. ಕೃತ್ಯಗಳು 20:28.

ಯೆಹೋವನು ಮತ್ತು ಯೇಸು ಕ್ರಿಸ್ತನು ಇಟ್ಟಿರುವ ಮಾದರಿಗನುಸಾರ ಹಿಂಡನ್ನು ಪರಾಮರಿಸುವುದು ಸುಲಭವಾದ ಕೆಲಸವಲ್ಲ. ಆದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಈ ಕೆಲಸಕ್ಕೆ ಹೆಚ್ಚು ಪ್ರಮುಖತೆ ಕೊಡಬೇಕಾಗಿದೆ. ಕಳೆದ ಮೂರು ವರ್ಷಗಳಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿರುವ ಹತ್ತು ಲಕ್ಷ ಸಾಕ್ಷಿಗಳ ಕುರಿತಾಗಿ ಸ್ವಲ್ಪ ಯೋಚಿಸಿರಿ! ಈ ಹೊಸಬರಿಗೆ ಯಾವುದೇ ಆತ್ಮಿಕ ಹಿನ್ನಲೆಯಿರುವುದಿಲ್ಲ. ಅಷ್ಟುಮಾತ್ರವಲ್ಲದೆ ಚಿಕ್ಕ ಮಕ್ಕಳು ಅಥವಾ ಹದಿವಯಸ್ಕ ಸಾಕ್ಷಿಗಳ ಕುರಿತಾಗಿಯೂ ಯೋಚಿಸಿರಿ! ಇವರಿಗೆ ಕೇವಲ ತಮ್ಮ ಹೆತ್ತವರ ಗಮನ ಮಾತ್ರವಲ್ಲದೆ ಸಭೆಯಲ್ಲಿರುವ ಉಪಕುರುಬರ ಗಮನವೂ ಬೇಕಾಗಿದೆ.

ಹೌದು, ಪ್ರತಿಯೊಬ್ಬ ಕ್ರೈಸ್ತನು ಲೋಕದ ಒತ್ತಡಗಳಿಗೆ ಗುರಿಯಾಗುತ್ತಾನೆ. ಈ ಒತ್ತಡಗಳಲ್ಲಿ ಸಮಾನಸ್ಥರ ಒತ್ತಡವೂ ಸೇರಿರುತ್ತದೆ. ಅಷ್ಟುಮಾತ್ರವಲ್ಲದೇ, ಸ್ವಂತ ಬಯಕೆಗಳನ್ನು ಪೂರೈಸಿಕೊಳ್ಳುವುದರಲ್ಲೇ ತಲ್ಲೀನರಾಗುವುದು ಇಂದಿನ ಲೋಕದ ನೀತಿಯಾಗಿದೆ. ಇದನ್ನು ಹಿಂಬಾಲಿಸುವ ಬಲವಾದ ಸೆಳೆತವನ್ನು ವಿರೋಧಿಸಲು ನಾವು ಶತಪ್ರಯತ್ನ ಮಾಡಬೇಕು. ಕೆಲವು ದೇಶಗಳಲ್ಲಿ, ಜನರು ತಮ್ಮ ಸಂದೇಶಕ್ಕೆ ಕಿವಿಗೊಡದಿರುವ ಕಾರಣ ರಾಜ್ಯ ಪ್ರಚಾರಕರು ನಿರುತ್ಸಾಹಗೊಳ್ಳಬಹುದು. ಅನೇಕ ಪ್ರಚಾರಕರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳು ಇವೆ. ಇನ್ನಿತರರು ತಮ್ಮ ಜೀವಿತದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡಲು ಪ್ರಯತ್ನಿಸುವುದಾದರೂ, ಹಣಕಾಸಿನ ತೊಂದರೆಗಳು ಅವರನ್ನು ತಡೆಯುತ್ತಿರಬಹುದು. ಆದರೂ ನಮಗೆಲ್ಲರಿಗೆ, ಅಂದರೆ ಸತ್ಯದಲ್ಲಿ ಅನೇಕ ವರ್ಷಗಳಿಂದ ಇರುವವರಿಗೆ ಸಹ ಪ್ರೀತಿಪರ ಕುರುಬರ ಸಹಾಯದ ಅಗತ್ಯವಿದೆ ಎಂಬುದಂತೂ ಸತ್ಯ.

ಸರಿಯಾದ ಪ್ರೇರಣೆ

ಪ್ರಥಮ ಶತಮಾನದ ಕ್ರೈಸ್ತರಿಗೆ ಈ ಬುದ್ಧಿವಾದವನ್ನು ಕೊಡಲಾಗಿತ್ತು: ‘ನಿಮ್ಮ ಹೃದಯವನ್ನು ವಿಶಾಲವಾಗಿ ತೆರೆಯಿರಿ’! (2 ಕೊರಿಂಥ 6:11-13) ಕ್ರೈಸ್ತ ಹಿರಿಯರು, ತಮ್ಮ ಕುರಿಪಾಲನಾ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ ಈ ಬುದ್ಧಿವಾದವನ್ನು ಅನುಸರಿಸುವುದು ಒಳ್ಳೇದು. ಅವರಿದನ್ನು ಹೇಗೆ ಮಾಡಬಹುದು? ಮತ್ತು ಮುಂದೆ ಕುರುಬರಾಗುವ ಸಾಧ್ಯತೆಯುಳ್ಳ ಶುಶ್ರೂಷಾ ಸೇವಕರ ಕುರಿತಾಗಿ ಏನು?

ಕ್ರೈಸ್ತ ಹಿರಿಯರು ಮಂದೆಗೆ ಆಶೀರ್ವಾದವಾಗಿ ಪರಿಣಮಿಸಬೇಕಾದಲ್ಲಿ, ಅವರಿಗೆ ಕರ್ತವ್ಯದ ಪ್ರಜ್ಞೆಗಿಂತಲೂ ಹೆಚ್ಚಿನ ಪ್ರೇರಣೆಯ ಅಗತ್ಯವಿದೆ. ಆದುದರಿಂದಲೇ, ಅವರಿಗೆ ಈ ಸಲಹೆಯನ್ನು ಕೊಡಲಾಗಿದೆ: “ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ, ಮೇಲ್ವಿಚಾರಣೆಮಾಡಿರಿ.” (ಓರೆಅಕ್ಷರಗಳು ನಮ್ಮವು.) (1 ಪೇತ್ರ 5:2) ಆದುದರಿಂದ, ಪರಿಣಾಮಕಾರಿಯಾದ ರೀತಿಯಲ್ಲಿ ಕುರಿಪಾಲನೆ ಮಾಡುವುದರಲ್ಲಿ, ಇತರರ ಸೇವೆಯನ್ನು ಇಷ್ಟಪೂರ್ವಕವಾಗಿ ಮತ್ತು ಸಿದ್ಧಮನಸ್ಸಿನಿಂದ ಮಾಡುವುದೂ ಒಳಗೂಡಿದೆ. (ಯೋಹಾನ 21:15-17) ಇದರರ್ಥ, ಕುರಿಗಳಿಗೆ ಯಾವುದರ ಆವಶ್ಯಕತೆಯಿದೆ ಎಂಬುದನ್ನು ಕಂಡುಹಿಡಿದು, ಅದಕ್ಕೆ ಬೇಗನೆ ಸ್ಪಂದಿಸುವುದು ಮತ್ತು ಇತರರೊಂದಿಗೆ ವ್ಯವಹರಿಸುವಾಗ ದೇವರಾತ್ಮದ ಫಲಗಳಾಗಿರುವ ಉತ್ತಮ ಕ್ರೈಸ್ತ ಗುಣಗಳನ್ನು ಪ್ರದರ್ಶಿಸುವುದೇ ಆಗಿದೆ.—ಗಲಾತ್ಯ 5:22, 23.

ಕುರಿಪಾಲನೆ ಮಾಡುವುದರಲ್ಲಿ, ಸಹೋದರರನ್ನು ಕೆಲವೊಮ್ಮೆ ಅವರ ಮನೆಗಳಲ್ಲಿ ಭೇಟಿಮಾಡುವುದು ಸಹ ಸೇರಿರುತ್ತದೆ. * ಆದರೆ ‘ತಮ್ಮ ಹೃದಯಗಳನ್ನು ವಿಶಾಲವಾಗಿ ತೆರೆಯುವ’ ಕುರುಬರು ಇದಕ್ಕಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸುತ್ತಾರೆ. ಅಂದರೆ, ಅವರು ಯಾವಾಗಲಾದರೊಮ್ಮೆ ಕುರಿಪಾಲನಾ ಭೇಟಿಗಳನ್ನು ಮಾಡುವುದಕ್ಕಿಂತಲೂ ಹೆಚ್ಚನ್ನು ಮಾಡುತ್ತಾರೆ. ಮಂದೆಯಲ್ಲಿರುವವರನ್ನು ಪರಾಮರಿಸಲು ಸಿಗುವ ಪ್ರತಿಯೊಂದು ಅವಕಾಶವನ್ನು ಅವರು ಸದುಪಯೋಗಿಸುತ್ತಾರೆ.

ಕುರುಬರಾಗುವಂತೆ ಇತರರಿಗೆ ತರಬೇತಿ ನೀಡುವುದು

‘ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದಿರುವ’ ಯಾವುದೇ ವಯಸ್ಸಿನ ಸಹೋದರನು ‘ಒಳ್ಳೇ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆ.’ (1 ತಿಮೊಥೆಯ 3:1) ಅನೇಕ ಶುಶ್ರೂಷಾ ಸೇವಕರು, ಹೆಚ್ಚಿನ ಸುಯೋಗಗಳನ್ನು ಪಡೆಯಲಿಕ್ಕಾಗಿ ಸಿದ್ಧಮನಸ್ಸನ್ನು ತೋರಿಸಿದ್ದಾರೆ. ಹೀಗಿರುವುದರಿಂದ ಈ ಸಿದ್ಧಮನಸ್ಸಿನ ಸಹೋದರರು, ‘ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳುವುದರಲ್ಲಿ’ ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳಲು ಹಿರಿಯರು ಸಂತೋಷದಿಂದ ಸಹಾಯಮಾಡುತ್ತಾರೆ. ಇದರರ್ಥ, ಅಂತಹ ಸಹೋದರರು ಪರಿಣಾಮಕಾರಿ ಕುರುಬರಾಗುವಂತೆ ಅವರಿಗೆ ಕಲಿಸುವುದೇ ಆಗಿದೆ.

ದೇವರ ಉಚ್ಚ ಮಟ್ಟಗಳಿಗೆ ನಿಕಟವಾಗಿ ಅಂಟಿಕೊಳ್ಳುವ ಕಾರಣದಿಂದ, ಯೆಹೋವನ ಕ್ರೈಸ್ತ ಸಭೆಯು ಯೆಹೆಜ್ಕೇಲ 34:2-6ರಲ್ಲಿ ವರ್ಣಿಸಲ್ಪಟ್ಟಿರುವಂಥ ರೀತಿಯ ಸುಳ್ಳು ಕುರುಬರಿಂದ ದುರ್ಬಲಗೊಳಿಸಲ್ಪಟ್ಟಿಲ್ಲ. ಈ ಕುರುಬರು ಯೆಹೋವನ ದೃಷ್ಟಿಯಲ್ಲಿ ತಿರಸ್ಕಾರಾರ್ಹರಾಗಿದ್ದರು ಮತ್ತು ಅದು ತಕ್ಕದ್ದಾಗಿತ್ತು. ಯಾಕೆಂದರೆ, ಮಂದೆಯನ್ನು ಮೇಯಿಸುವುದಕ್ಕೆ ಬದಲು, ಅವರು ತಮ್ಮ ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದರು. ಅವರು ದುರ್ಬಲ ಕುರಿಗಳನ್ನು ಬಲಪಡಿಸಲಿಲ್ಲ, ರೋಗಿ ಕುರಿಗಳನ್ನು ಸ್ವಸ್ಥಮಾಡಲಿಲ್ಲ, ಅಥವಾ ಚದರಿಹೋಗಿದ್ದ ಅಥವಾ ತಪ್ಪಿಸಿಕೊಂಡಿದ್ದ ಕುರಿಗಳನ್ನು ಪುನಃ ಮಂದೆಗೆ ಸೇರಿಸಲಿಲ್ಲ. ಕುರುಬರಂತಿರದೆ ನರಿಗಳಂತಿದ್ದ ಇವರು ಕುರಿಗಳನ್ನು ಪೀಡಿಸುತ್ತಿದ್ದರು. ಕುರುಬರಿಂದ ಅಲಕ್ಷಿಸಲ್ಪಟ್ಟಿದ್ದ ಈ ಕುರಿಗಳು ಚದರಿಹೋಗಿ, ಗೊತ್ತುಗುರಿಯಿಲ್ಲದೆ ಅಲೆದಾಡುತ್ತಾ ಇದ್ದವು.—ಯೆರೆಮೀಯ 23:1, 2; ನಹೂಮ 3:18; ಮತ್ತಾಯ 9:36.

ಕ್ರೈಸ್ತ ಕುರುಬರು ಆ ಅಪನಂಬಿಗಸ್ತ ಕುರುಬರಂತಿಲ್ಲ. ಬದಲಾಗಿ ಈ ಕುರುಬರು ಯೆಹೋವನ ಮಾದರಿಯನ್ನು ಅನುಸರಿಸುತ್ತಾರೆ. ಅವರು ಕುರಿಗಳನ್ನು ಆತ್ಮಿಕ “ಹಸುರುಗಾವಲುಗಳ” ಬಳಿ ಮತ್ತು “ವಿಶ್ರಾಂತಿಕರವಾದ ನೀರುಗಳ” ಬಳಿ ನಡಿಸುತ್ತಾರೆ. ಕುರಿಗಳು ಯೆಹೋವನ ವಾಕ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡು, ವೈಯಕ್ತಿಕ ಜೀವನದಲ್ಲಿ ಅದನ್ನು ಅನ್ವಯಿಸುವಂತೆ ಸಹಾಯಮಾಡುವ ಮೂಲಕ ಅವರು ಕುರಿಗಳನ್ನು “ನೀತಿಮಾರ್ಗದಲ್ಲಿ” ಮಾರ್ಗದರ್ಶಿಸಲು ಪ್ರಯತ್ನಿಸುತ್ತಾರೆ. ಈ ಕುರುಬರು ‘ಬೋಧಿಸುವುದರಲ್ಲಿ ಪ್ರವೀಣ’ರಾಗಿರುವುದರಿಂದ, ಇದನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಮಾಡಬಲ್ಲರು.—1 ತಿಮೊಥೆಯ 3:2.

ಹಿರಿಯರು ಹೆಚ್ಚಾಗಿ ಸಭಾ ಕೂಟಗಳಲ್ಲಿ ವೇದಿಕೆಯ ಮೇಲಿಂದ ಕಲಿಸುತ್ತಾರಾದರೂ, ಅವರು ವೈಯಕ್ತಿಕವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಕಲಿಸುತ್ತಾರೆ. ಕೆಲವು ಹಿರಿಯರು ಒಬ್ಬೊಬ್ಬ ವ್ಯಕ್ತಿಗೆ ವೈಯಕ್ತಿಕವಾಗಿ ಕಲಿಸುವುದರಲ್ಲಿ ಹೆಚ್ಚು ಉತ್ತಮರಾಗಿರುತ್ತಾರೆ, ಅದೇ ಸಮಯದಲ್ಲಿ ಇನ್ನಿತರ ಹಿರಿಯರು ಒಳ್ಳೇ ಭಾಷಣಗಳನ್ನು ಕೊಡುವುದರಲ್ಲಿ ನಿಪುಣರಾಗಿರುತ್ತಾರೆ. ಆದರೆ ಒಬ್ಬ ಹಿರಿಯನು ಕಲಿಸುವಿಕೆಯ ಯಾವುದೋ ಒಂದು ಕ್ಷೇತ್ರದಲ್ಲಿ ಕಡಿಮೆ ಸಾಮರ್ಥ್ಯವುಳ್ಳವನಾಗಿದ್ದಾನೆ ಎಂದಮಾತ್ರಕ್ಕೆ ಅವನು ಒಬ್ಬ ಶಿಕ್ಷಕನಾಗಿರಲು ಅನರ್ಹನೆಂದು ಹೇಳಸಾಧ್ಯವಿಲ್ಲ. ಹಿರಿಯರು ತಮಗೆ ಲಭ್ಯವಿರುವ ಎಲ್ಲ ಕ್ಷೇತ್ರಗಳಲ್ಲಿ ಕಲಿಸುತ್ತಾರೆ. ಇದರಲ್ಲಿ ಕುರಿಪಾಲನಾ ಭೇಟಿಗಳನ್ನು ಮಾಡುವ ಮೂಲಕ ಕಲಿಸುವುದು ಸಹ ಒಳಗೂಡಿದೆ. ಕೆಲವೊಂದು ರೀತಿಯ ಕುರಿಪಾಲನೆಯನ್ನು ಒಂದು ಔಪಚಾರಿಕ ರೀತಿಯಲ್ಲಿ ನಡೆಸಲಾಗುತ್ತದೆ. ಉದಾಹರಣೆಗಾಗಿ, ಹಿರಿಯರು ಮುಂದಾಗಿಯೇ ಏರ್ಪಾಡನ್ನು ಮಾಡಿ, ಸಹೋದರರನ್ನು ಭೇಟಿಮಾಡುತ್ತಾರೆ. ಆದರೆ ಹೆಚ್ಚಿನ ಕುರಿಪಾಲನೆಯನ್ನು ಅನೌಪಚಾರಿಕ ರೀತಿಯಲ್ಲೂ ಮಾಡಸಾಧ್ಯವಿದೆ. ಮತ್ತು ಇದು ಸಹ ತುಂಬ ಪ್ರಯೋಜನಗಳನ್ನು ತರುತ್ತದೆ.

ಎಲ್ಲ ಸಮಯದಲ್ಲೂ ಕುರುಬರು ಮತ್ತು ಶಿಕ್ಷಕರು

ಒಬ್ಬ ವೈದ್ಯನು ತನ್ನ ಜೀವನದಲ್ಲಿ ಸಫಲನಾಗಬೇಕಾದರೆ, ಅವನಿಗೆ ಜ್ಞಾನವಿರಬೇಕು ಮತ್ತು ಅನುಭವವಿರಬೇಕು. ಆದರೆ ಅದೇ ಸಮಯದಲ್ಲಿ ಅವನು ದಯೆ, ಕನಿಕರ, ಚಿಂತೆ ಮತ್ತು ನಿಜವಾದ ಆಸಕ್ತಿಯನ್ನು ತೋರಿಸುವಾಗ ರೋಗಿಗಳಿಗೆ ಹೆಚ್ಚು ಸಂತೋಷವಾಗುತ್ತದೆ. ಆದುದರಿಂದ ಇಂತಹ ಗುಣಗಳು ಅವನ ವ್ಯಕ್ತಿತ್ವದ ಭಾಗವಾಗಿರಬೇಕು. ಅದೇ ರೀತಿಯಲ್ಲಿ, ಮೇಲೆ ತಿಳಿಸಲ್ಪಟ್ಟಿರುವ ಎಲ್ಲ ಗುಣಗಳು ಒಬ್ಬ ಒಳ್ಳೆಯ ಶಿಕ್ಷಕನ ಮತ್ತು ಕುರುಬನ ವ್ಯಕ್ತಿತ್ವದ ಭಾಗವಾಗಿರಬೇಕು. ಅಂದರೆ ಅವು ಅವನ ದೈನಂದಿನ ವ್ಯಕ್ತಿತ್ವದ ಭಾಗವಾಗಿರಬೇಕು. ಅವನೊಬ್ಬ ನಿಜವಾದ ಶಿಕ್ಷಕನಾಗಿರುವಲ್ಲಿ, ತನ್ನ ಸುತ್ತಲಿರುವವರಿಗೆ ಅವಶ್ಯವಿರುವ ಯಾವುದೇ ಸಮಯದಲ್ಲಿ ಕಲಿಸಲು ಅವನು ತಯಾರಿರುವನು. “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ!” ಎಂದು ಜ್ಞಾನೋಕ್ತಿ 15:23 ಹೇಳುತ್ತದೆ. ಈ ‘ಉಚಿತವಾದ ಸಮಯವು’ ಅವನು ವೇದಿಕೆಯಿಂದ ಮಾತಾಡುತ್ತಿರುವಾಗ ಆಗಿರಬಹುದು, ಇಲ್ಲವೇ ಮನೆಯಿಂದ ಮನೆಗೆ ಸಾರುತ್ತಿರುವಾಗ ಆಗಿರಬಹುದು, ಅಥವಾ ರಾಜ್ಯ ಸಭಾಗೃಹದಲ್ಲಿ ಇಲ್ಲವೇ ಟೆಲಿಫೋನಿನಲ್ಲಿ ಮಾತಾಡುತ್ತಿರುವಾಗಲೂ ಆಗಿರಬಹುದು. ಅಂತೆಯೇ, ಒಬ್ಬ ಒಳ್ಳೆಯ ಕುರುಬನು ಕೇವಲ ಕುರಿಪಾಲನಾ ಭೇಟಿಗಳನ್ನು ಮಾಡುತ್ತಿರುವಾಗ ಮಾತ್ರವಲ್ಲ, ಎಲ್ಲ ಸಮಯಗಳಲ್ಲಿ ಕಾಳಜಿಯನ್ನು ತೋರಿಸುವ ಗುಣಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಾನೆ. ಅವನು ‘ತನ್ನ ಹೃದಯವನ್ನು ವಿಶಾಲವಾಗಿ ತೆರೆದಿರುವುದರಿಂದ,’ ಕುರಿಗಳ ಪಾಲನೆಮಾಡಲು ಸಿಗುವ ಪ್ರತಿಯೊಂದು ಸಂದರ್ಭದ ಸದುಪಯೋಗವನ್ನು ಮಾಡುವನು ಮತ್ತು ಸರಿಯಾದ ಸಮಯದಲ್ಲಿ ಅವರಿಗೆ ಬೇಕಾದ ಆರೈಕೆಯನ್ನು ನೀಡುವನು. ಇದನ್ನು ಮಾಡುವಾಗಲೇ ಅವನು ಕುರಿಗಳ ದೃಷ್ಟಿಯಲ್ಲಿ ಅತಿಪ್ರಿಯನಾಗುತ್ತಾನೆ.—ಮಾರ್ಕ 10:43.

ಈಗ ಒಬ್ಬ ಹಿರಿಯನಾಗಿರುವ ವುಲ್ಫ್‌ಗ್ಯಾಂಗ್‌ ಎಂಬ ಸಹೋದರನು, ಒಬ್ಬ ಶುಶ್ರೂಷಾ ಸೇವಕನು ಮತ್ತು ಅವನ ಹೆಂಡತಿಯು ತಮ್ಮ ಕುಟುಂಬವನ್ನು ಭೇಟಿಯಾಗಲು ಮನೆಗೆ ಬಂದ ಸಂದರ್ಭವನ್ನು ಜ್ಞಾಪಿಸಿಕೊಳ್ಳುತ್ತಾನೆ. ಅವನು ಹೇಳುವುದು: “ನಮ್ಮ ಮಕ್ಕಳು ತಮಗೆ ಸಿಕ್ಕಿದಂತಹ ಗಮನದಿಂದ ಮತ್ತು ನಾವೆಲ್ಲರೂ ಅಂದು ಆನಂದಿಸಿದ ಒಳ್ಳೆಯ ಸಮಯದಿಂದ ತುಂಬ ಖುಶಿಪಟ್ಟರು. ಈಗಲೂ ಅವರು ಅದರ ಬಗ್ಗೆ ಮಾತಾಡುತ್ತಿರುತ್ತಾರೆ.” ಹೌದು, ಆ ಶುಶ್ರೂಷಾ ಸೇವಕನು, ಈ ಕುಟುಂಬದ ಬಗ್ಗೆ ತನಗೆ ಆಸಕ್ತಿಯಿದೆಯೆಂಬುದನ್ನು ತೋರಿಸಿದನು. ಅವನು ‘ತನ್ನ ಹೃದಯವನ್ನು ವಿಶಾಲವಾಗಿ ತೆರೆದಿದ್ದನು.’

ಮಂದೆಯಲ್ಲಿ ಕುರಿಗಳು ಅಸ್ವಸ್ಥವಾಗಿರುವಾಗ, ‘ಒಬ್ಬನ ಹೃದಯವನ್ನು ವಿಶಾಲವಾಗಿ ತೆರೆಯುವ’ ಇನ್ನೊಂದು ಅವಕಾಶವು ಕುರುಬನಿಗೆ ದೊರಕುತ್ತದೆ. ಆಗ ಅವರನ್ನು ಭೇಟಿಮಾಡಿರಿ ಇಲ್ಲವೇ ಅವರಿಗೆ ಉತ್ತೇಜನದ ಮಾತುಗಳಿರುವ ಚಿಕ್ಕ ಪತ್ರವನ್ನು ಕಳುಹಿಸಿರಿ, ಅಥವಾ ಫೋನಿನ ಮೂಲಕ ಮಾತಾಡಿಸಿರಿ. ನಿಮಗೆ ಅವರ ಬಗ್ಗೆ ಚಿಂತೆ ಇದೆಯೆಂಬುದನ್ನು ತೋರಿಸುವ ಏನನ್ನಾದರೂ ಖಂಡಿತವಾಗಿಯೂ ಮಾಡಿರಿ! ಅಗತ್ಯವಿರುವಾಗ ಸಹಾಯವನ್ನು ಕೊಡಲು ಸಿದ್ಧರಿರಿ. ಅವರು ನಿಮ್ಮೊಂದಿಗೆ ಮಾತಾಡಲು ಬಯಸುತ್ತಿರುವುದಾದರೆ, ಅವರು ಹೇಳುವುದನ್ನು ಗಮನಕೊಟ್ಟು ಆಲಿಸಿರಿ. ಸ್ಥಳಿಕ ಸಭೆಯಲ್ಲಿ ಮತ್ತು ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಉತ್ತೇಜನದಾಯಕವಾದ ದೇವಪ್ರಭುತ್ವ ಚಟುವಟಿಕೆಗಳ ಕುರಿತು ಸಕಾರಾತ್ಮಕವಾಗಿ ಮಾತಾಡಿರಿ. ಯೆಹೋವನನ್ನು ಪ್ರೀತಿಸುವವರಿಗಾಗಿ ಕಾದಿರಿಸಲ್ಪಟ್ಟಿರುವ ಮಹಿಮಾಭರಿತ ಭವಿಷ್ಯತ್ತಿನ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಅವರಿಗೆ ಸಹಾಯಮಾಡಿರಿ.—2 ಕೊರಿಂಥ 4:16-18.

ಕುರಿಪಾಲನಾ ಭೇಟಿಗಳಿಗಿಂತಲೂ ಹೆಚ್ಚಿನದ್ದನ್ನು ಮಾಡುವುದು

ಸಹೋದರರ ಮನೆಗಳಿಗೆ ಹೋಗಿ ಔಪಚಾರಿಕ ಕುರಿಪಾಲನಾ ಭೇಟಿಗಳನ್ನು ಮಾಡುವುದು ಖಂಡಿತವಾಗಿಯೂ ಪ್ರಾಮುಖ್ಯವಾಗಿದೆ. ಆದರೆ ಕುರಿಪಾಲನೆಯ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡಿರುವಲ್ಲಿ, ಕೇವಲ ಔಪಚಾರಿಕವಾಗಿ ಸಹೋದರರ ಮನೆಗಳನ್ನು ಭೇಟಿಮಾಡುವುದಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಒಳಗೂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಸಹೋದರರು ಯಾವುದೇ ಪರಿಸ್ಥಿತಿಯಲ್ಲಿ ಮತ್ತು ಯಾವುದೇ ಸಮಯದಲ್ಲಿ ತನ್ನ ಬಳಿ ಮಾತಾಡಲು ಬರುವಷ್ಟು ಸ್ನೇಹಶೀಲನಾಗಿರುವ ಮೂಲಕ, ಒಬ್ಬ ಪ್ರೀತಿಪರ ಕುರುಬನು ‘ತನ್ನ ಹೃದಯವನ್ನು ವಿಶಾಲವಾಗಿ ತೆರೆಯುತ್ತಾನೆ.’ ಅವನು ಸಹೋದರರೊಂದಿಗೆ ಬೆಳೆಸಿಕೊಳ್ಳುವ ಪ್ರೀತಿಯ ಸಂಬಂಧವು ಅವರಿಗೆ ಆಶ್ವಾಸನೆಯನ್ನು ಕೊಡುತ್ತದೆ. ಅದೇನೆಂದರೆ, ಕಷ್ಟಸಂಕಟಗಳ ಸಮಯದಲ್ಲೂ ತಾವು ಕೇಡಿಗೆ ಹೆದರಬೇಕಾಗಿಲ್ಲ, ಯಾಕೆಂದರೆ ತಮ್ಮ ಪ್ರೀತಿಯ ಸಹೋದರನಾಗಿರುವ ಕ್ರೈಸ್ತ ಕುರುಬನು ತಮ್ಮ ಬಗ್ಗೆ ಕಾಳಜಿವಹಿಸುತ್ತಾನೆ ಎಂಬುದೇ.—ಕೀರ್ತನೆ 23:4.

ಕ್ರೈಸ್ತ ಕುರುಬರಾಗಿರುವ ನೀವೆಲ್ಲರೂ ‘ನಿಮ್ಮ ಹೃದಯವನ್ನು ವಿಶಾಲವಾಗಿ ತೆರೆಯಿರಿ.’ ನಿಮ್ಮ ಸಹೋದರರಿಗಾಗಿ ನಿಜವಾದ ಪ್ರೀತಿಯನ್ನು ತೋರಿಸಿರಿ. ಅವರನ್ನು ಉತ್ತೇಜಿಸಿರಿ, ಅವರಲ್ಲಿ ಚೈತನ್ಯವನ್ನು ತುಂಬಿರಿ ಮತ್ತು ನಿಮ್ಮಿಂದ ಸಾಧ್ಯವಿರುವ ಎಲ್ಲ ವಿಧಗಳಲ್ಲಿ ಅವರನ್ನು ಆತ್ಮಿಕವಾಗಿ ಕಟ್ಟಿರಿ. ನಂಬಿಕೆಯಲ್ಲಿ ಸ್ಥಿರಚಿತ್ತರಾಗಿರುವಂತೆ ಅವರಿಗೆ ಸಹಾಯಮಾಡಿರಿ. (ಕೊಲೊಸ್ಸೆ 1:23) ತಮ್ಮ ‘ಹೃದಯವನ್ನು ವಿಶಾಲವಾಗಿ ತೆರೆದಿರುವ’ ಕ್ರೈಸ್ತ ಕುರುಬರಿಂದ ಆಶೀರ್ವದಿಸಲ್ಪಟ್ಟಾಗ, ಕುರಿಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ದಾವೀದನಂತೆಯೇ ಅವರು ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿಸಲು ದೃಢನಿರ್ಧಾರವನ್ನು ಮಾಡುವರು. (ಕೀರ್ತನೆ 23:1, 6) ಒಬ್ಬ ಪ್ರೀತಿಪರ ಕುರುಬನಿಗೆ ಇದಕ್ಕಿಂತಲೂ ಹೆಚ್ಚು ಇನ್ನೇನು ಬೇಕು?

[ಪಾದಟಿಪ್ಪಣಿ]

^ ಪ್ಯಾರ. 10 ಕುರಿಪಾಲನಾ ಭೇಟಿಗಳನ್ನು ಮಾಡುವುದಕ್ಕಾಗಿ ಸಲಹೆಸೂಚನೆಗಳು, ಕಾವಲಿನಬುರುಜು ಪತ್ರಿಕೆಯ 1993, ಸೆಪ್ಟೆಂಬರ್‌ 15, ಪುಟ 20-3ರಲ್ಲಿ ಮತ್ತು 1996, ಮಾರ್ಚ್‌ 15, ಪುಟ 24-7ರಲ್ಲಿ ಇವೆ.

[ಪುಟ 30ರಲ್ಲಿರುವ ಚೌಕ]

ಕ್ರೈಸ್ತ ಕುರುಬರು

•ತುಂಬ ಹುರುಪಿನಿಂದ ಮತ್ತು ಸಿದ್ಧಮನಸ್ಸಿನಿಂದ ಸೇವೆ ಸಲ್ಲಿಸುತ್ತಾರೆ

•ಹಿಂಡನ್ನು ಮೇಯಿಸಿ, ಕಾಳಜಿವಹಿಸುತ್ತಾರೆ

•ಇತರರು ಕುರುಬರಾಗುವಂತೆ ಪ್ರಯತ್ನಿಸಲು ಸಹಾಯಮಾಡುತ್ತಾರೆ

•ಅಸ್ವಸ್ಥರನ್ನು ಭೇಟಿಮಾಡಿ, ಅವರ ಆರೈಕೆಮಾಡುತ್ತಾರೆ

•ಎಲ್ಲ ಸಮಯಗಳಲ್ಲೂ ತಮ್ಮ ಸಹೋದರರಿಗೆ ಸಹಾಯಮಾಡಲು ಎಚ್ಚರವುಳ್ಳವರಾಗಿರುತ್ತಾರೆ

[ಪುಟ 31ರಲ್ಲಿರುವ ಚಿತ್ರಗಳು]

ಕ್ಷೇತ್ರ ಸೇವೆಯಲ್ಲಾಗಲಿ, ಕೂಟಗಳಲ್ಲಾಗಲಿ, ಅಥವಾ ಅನೌಪಚಾರಿಕ ಸಂದರ್ಭಗಳಲ್ಲಿಯಾಗಲಿ, ಹಿರಿಯರು ಯಾವಾಗಲೂ ಕುರುಬರಾಗಿರುತ್ತಾರೆ