ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷಮಾಶೀಲರಾಗಿರಬೇಕು ಏಕೆ?

ಕ್ಷಮಾಶೀಲರಾಗಿರಬೇಕು ಏಕೆ?

ಕ್ಷಮಾಶೀಲರಾಗಿರಬೇಕು ಏಕೆ?

“ಕ್ಷಮಿಸುವುದು, ಒಬ್ಬ ವ್ಯಕ್ತಿಯ ಭಾವನಾತ್ಮಕ ಮತ್ತು ಶಾರೀರಿಕ ಆರೋಗ್ಯವನ್ನು ಉತ್ತಮಗೊಳಿಸಬಲ್ಲದೆಂಬುದನ್ನು ತೋರಿಸಲಾರಂಭಿಸಿರುವ ಸಂಶೋಧನೆಯನ್ನು ವಿಜ್ಞಾನಿಗಳು ಪ್ರಾರಂಭಿಸಿದ್ದಾರೆ” ಎಂದು ಕೆನಡದ ದ ಟೊರಾಂಟೊ ಸ್ಟಾರ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಆದರೆ, “ಕ್ಷಮಾಪಣೆ ಎಂದರೇನು ಮತ್ತು ಅದರ ಪರಿಣಾಮಗಳೇನು ಎಂಬುದು ಕೊಂಚ ಮಂದಿಗೆ ಮಾತ್ರ ತಿಳಿದಿದೆ” ಎಂಬುದನ್ನು ಅಮೆರಿಕದ ಸ್ಟಾನ್‌ಫರ್ಡ್‌ ವಿಶ್ವವಿದ್ಯಾನಿಲಯದ ಪ್ರೊಫೆಸರರೂ, ಸ್ಟಾನ್‌ಫರ್ಡ್‌ ಫರ್‌ಗಿವ್‌ನೆಸ್‌ ಪ್ರಾಜೆಕ್ಟ್‌ನ ಮುಖ್ಯ ಸಂಶೋಧಕರೂ ಆಗಿರುವ ಕಾರ್ಲ್‌ ಥೊರೆಸನ್‌ ಗಮನಿಸಿದರು.

ನಿಜವಾದ ಕ್ಷಮಾಪಣೆಯು, ಕ್ರೈಸ್ತ ಧರ್ಮದ ಒಂದು ಮುಖ್ಯ ಅಂಶವಾಗಿದೆ. ದ ಟೊರಾಂಟೊ ಸ್ಟಾರ್‌ ಕ್ಷಮಾಪಣೆಯ ಅರ್ಥವನ್ನು ಹೀಗೆ ವಿವರಿಸುತ್ತದೆ: “ನಿಮಗೆ ಅನ್ಯಾಯಮಾಡಲಾಗಿದೆಯೆಂದು ಗೊತ್ತಾದರೂ, ಎಲ್ಲ ರೀತಿಯ ಅಸಮಾಧಾನವನ್ನು ಬಿಟ್ಟುಬಿಡುವುದು ಮತ್ತು ತಪ್ಪುಮಾಡಿರುವ ವ್ಯಕ್ತಿಯೊಂದಿಗೆ ಕನಿಕರದಿಂದ ಮತ್ತು ಪ್ರೀತಿಯಿಂದ ವ್ಯವಹರಿಸುವುದು.” ಇದು, ಮಾಡಲ್ಪಟ್ಟ ತಪ್ಪನ್ನು ಮನ್ನಿಸುವುದು, ವಿನಾಯಿತಿ ನೀಡುವುದು, ಮರೆಯುವುದು, ಅಥವಾ ತಪ್ಪು ಮಾಡಲ್ಪಟ್ಟಿಲ್ಲ ಎಂದು ಹೇಳುವುದಕ್ಕಿಂತ ಭಿನ್ನವಾಗಿದೆ; ಇಲ್ಲವೇ ಆ ವ್ಯಕ್ತಿಯು ನಿಮಗೆ ಪುನಃ ಅನ್ಯಾಯಮಾಡುವಂತೆ ನೀವು ಬಿಡಬೇಕು ಎಂಬುದೂ ಇದರರ್ಥವಲ್ಲ. ನಿಜ ಕ್ಷಮಾಪಣೆಯ ಕೀಲಿಕೈಯು, “ಕೋಪ ಮತ್ತು ನಕಾರಾತ್ಮಕ ಭಾವನೆಗಳನ್ನು ಕಿತ್ತೆಸೆಯುವುದೇ” ಆಗಿದೆಯೆಂದು ಆ ವರದಿಯು ಹೇಳುತ್ತದೆ.

ಕ್ಷಮಿಸುವುದರಿಂದ ಸಿಗುವ ಶಾರೀರಿಕ ಪ್ರಯೋಜನಗಳ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡುವುದು ಅಗತ್ಯವೆಂದು ಸಂಶೋಧಕರು ಹೇಳುತ್ತಾರೆ. ಆದರೆ ಅದರಿಂದ ಮನಸ್ಸಿನ ಮೇಲಾಗುವ ಒಳ್ಳೆಯ ಪರಿಣಾಮಗಳನ್ನು ಅವರು ಈಗಾಗಲೇ ಕಂಡುಹಿಡಿದು, ಅವುಗಳನ್ನು ವರದಿಸಿದ್ದಾರೆ. ಈ ಒಳ್ಳೆಯ ಪರಿಣಾಮಗಳಲ್ಲಿ, “ಮನಸ್ಸಿನ ಒತ್ತಡ, ವ್ಯಾಕುಲತೆ ಮತ್ತು ಖಿನ್ನತೆಯು ಕಡಿಮೆಯಾಗುವುದು” ಸಹ ಸೇರಿರುತ್ತದೆ.

ಯಾಕೆ ಕ್ಷಮಿಸುವವರಾಗಿರಬೇಕು ಎಂಬುದಕ್ಕೆ ಒಂದು ಉದಾತ್ತ ಕಾರಣವನ್ನು ಎಫೆಸ 4:32–5:1ರಲ್ಲಿ ಕೊಡಲಾಗಿದೆ. ಅದು ಹೇಳುವುದು: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.” (ಓರೆ ಅಕ್ಷರಗಳು ನಮ್ಮವು.) ನಾವು ಬೇರೆ ವಿಷಯಗಳಲ್ಲಿ ಹೇಗೆ ದೇವರನ್ನು ಅನುಕರಿಸುವಂತೆ ಉತ್ತೇಜಿಸಲ್ಪಡುತ್ತೇವೋ ಹಾಗೆಯೇ ಕ್ಷಮಿಸುವ ವಿಷಯದಲ್ಲೂ ಆತನನ್ನು ಅನುಕರಿಸುವಂತೆ ಪ್ರೇರೇಪಿಸಲ್ಪಟ್ಟಿದ್ದೇವೆ.—ಎಫೆಸ 5:1.

ಕರುಣೆಯನ್ನು ತೋರಿಸಲು ಕಾರಣವಿರುವಾಗಲೂ ನಾವು ಇತರರನ್ನು ಕ್ಷಮಿಸಲು ನಿರಾಕರಿಸುವಲ್ಲಿ, ಅದು ದೇವರೊಂದಿಗೆ ನಮಗಿರುವ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಬಹುದು. ನಾವು ಒಬ್ಬರನ್ನೊಬ್ಬರು ಕ್ಷಮಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆ. ಆಗ ಮಾತ್ರ, ಆತನು ನಮ್ಮನ್ನು ಕ್ಷಮಿಸುವಂತೆ ನಾವು ಬೇಡಿಕೊಳ್ಳಬಲ್ಲೆವು.—ಮತ್ತಾಯ 6:14; ಮಾರ್ಕ 11:25; 1 ಯೋಹಾನ 4:11.