ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನಶ್ಶಾಂತಿಯನ್ನು ನೀವು ಕಂಡುಕೊಳ್ಳಲು ಸಾಧ್ಯವೇ?

ಮನಶ್ಶಾಂತಿಯನ್ನು ನೀವು ಕಂಡುಕೊಳ್ಳಲು ಸಾಧ್ಯವೇ?

ಮನಶ್ಶಾಂತಿಯನ್ನು ನೀವು ಕಂಡುಕೊಳ್ಳಲು ಸಾಧ್ಯವೇ?

“ಅಸಂಖ್ಯಾತ ವ್ಯಕ್ತಿಗಳು ತಮ್ಮ ಜೀವನಚಕ್ರವನ್ನು ಮೌನವಾಗಿ ಆಶಾಹೀನ ಸ್ಥಿತಿಯಲ್ಲೇ ಉರುಳಿಸುತ್ತಿರುತ್ತಾರೆ” ಎಂದು 1854ರಲ್ಲಿ ಅಮೆರಿಕದ ಲೇಖಕನಾಗಿದ್ದ ಹೆನ್ರಿ ಥಿರೋ ಬರೆದನು.

ಅವನು ಹೀಗೆ ಬರೆಯಲು ಕಾರಣವೇನು? ಏಕೆಂದರೆ, ಅವನ ಸಮಯದಲ್ಲಿ ಜೀವಿಸುತ್ತಿದ್ದ ಹೆಚ್ಚಿನ ಜನರಿಗೆ ಮನಶ್ಶಾಂತಿಯೇ ಇರಲಿಲ್ಲ. ಅದು ಸುಮಾರು 150 ವರ್ಷಗಳಷ್ಟು ಹಿಂದಿನ ಮಾತು. ಆದರೆ ಇಂದಿನ ಪರಿಸ್ಥಿತಿಯಲ್ಲೇನಾದರೂ ಬದಲಾವಣೆಯಾಗಿದೆಯೇ? ಅಥವಾ ಥಿರೋನ ಮಾತುಗಳು ಇಂದಿಗೂ ಅನ್ವಯಿಸುತ್ತವೆಯೇ? ನಿಮ್ಮ ಜೀವನದ ಕುರಿತೇನು? ನೀವು ಜೀವನದಲ್ಲಿ ಸಂತೃಪ್ತರಾಗಿದ್ದು, ನೆಮ್ಮದಿಯಿಂದಿದ್ದೀರೋ? ಅಥವಾ ಥಿರೋನ ಮಾತುಗಳಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ಭವಿಷ್ಯ ಹೇಗಿರುವುದೋ ಎಂಬ ಆತಂಕದಿಂದ ‘ಮೌನವಾಗಿ ಆಶಾಹೀನ ಸ್ಥಿತಿಯಲ್ಲಿ’ ತೊಳಲಾಡುತ್ತಿದ್ದೀರೋ?

ಇಂದು ಪ್ರಪಂಚದಲ್ಲಿ ಜನರು ಮನಶ್ಶಾಂತಿಯನ್ನು ಕಳೆದುಕೊಳ್ಳುವಂತೆ ಮಾಡುವ ಅನೇಕ ವಿಷಯಗಳಿವೆ ಎಂಬುದು ವಿಷಾದನೀಯ. ಅವುಗಳಲ್ಲಿ ಕೆಲವೊಂದನ್ನು ನೋಡೋಣ. ಇಂದು, ಅನೇಕ ದೇಶಗಳಲ್ಲಿ ನಿರುದ್ಯೋಗ ಹಾಗೂ ಕಡಿಮೆ ಸಂಬಳವು ಬಡತನವನ್ನು ಉಂಟುಮಾಡುತ್ತದೆ. ಅದರೊಂದಿಗೆ ಬರುವ ಆರ್ಥಿಕ ಬಿಕ್ಕಟ್ಟು ಜನರಿಗೆ ನಿರಾಶೆಯನ್ನು ಉಂಟುಮಾಡುತ್ತದೆ. ಇನ್ನಿತರ ದೇಶಗಳಲ್ಲಿ ಅನೇಕರು, ಧನಸಂಪತ್ತು ಮತ್ತು ಸುಖಭೋಗದ ಜೀವನಕ್ಕಾಗಿ ಅರಸುತ್ತಾ ತಮ್ಮಲ್ಲಿರುವ ಶಕ್ತಿಯನ್ನೆಲ್ಲಾ ಅದಕ್ಕಾಗಿಯೇ ವ್ಯಯಿಸುತ್ತಾರೆ. ಆದರೆ, ಅನೇಕವೇಳೆ ಈ ರೀತಿಯ ಸ್ಪರ್ಧಾತ್ಮಕ ಜೀವನಶೈಲಿಯಲ್ಲಿ ಒಳಗೂಡಿರುವವರಿಗೆ, ಮನಶ್ಶಾಂತಿಗಿಂತ ಚಿಂತೆಯೇ ಹೆಚ್ಚಾಗಿರುತ್ತದೆ. ಇನ್ನೂ ಅನಾರೋಗ್ಯ, ಯುದ್ಧ, ಪಾತಕ, ಅನ್ಯಾಯ ಮತ್ತು ದಬ್ಬಾಳಿಕೆಯಂಥ ವಿಷಯಗಳು ಕೂಡ ಜನರ ಮನಶ್ಶಾಂತಿಯನ್ನು ಕಸಿದುಕೊಳ್ಳುತ್ತವೆ.

ಮನಶ್ಶಾಂತಿಯನ್ನು ಅರಸಿದವರು

ಅನೇಕರಿಗೆ ಇಂದಿನ ಜಗತ್ತಿನ ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಹೋಗಲು ಇಷ್ಟವಿಲ್ಲ. ಉದಾಹರಣೆಗೆ, ಬ್ರಸಿಲ್‌ ದೇಶದ ಸವೊಪಾಲೊದಲ್ಲಿರುವ ಒಂದು ದೊಡ್ಡ ಕಾರ್ಖಾನೆಯ ಕಾರ್ಮಿಕರ ನಾಯಕನಾಗಿದ್ದ ಆ್ಯನ್‌ಟೋನಿಯೊ * ಎಂಬ ವ್ಯಕ್ತಿಯ ಅನುಭವವನ್ನು ಗಮನಿಸಿ. ಕಾರ್ಮಿಕರ ಜೀವನ ಸ್ಥಿತಿಯನ್ನು ಸುಧಾರಿಸುವ ಆಸೆ ಅವನಿಗಿತ್ತು. ಅದಕ್ಕಾಗಿ ಅವನು ಪ್ರತಿಭಟನೆಗಳಲ್ಲಿ ಮತ್ತು ಸಾರ್ವಜನಿಕ ಪ್ರದರ್ಶನಗಳಲ್ಲಿ ಭಾಗವಹಿಸಿದನು. ಆದರೆ ಇವುಗಳಲ್ಲಿ ಯಾವುದೂ ಅವನಿಗೆ ಮನಶ್ಶಾಂತಿಯನ್ನು ಕೊಡಲಿಲ್ಲ.

ಇನ್ನೂ ಕೆಲವರು, ಮದುವೆಯಾದರೆ ತಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗಬಹುದು ಎಂದು ನೆನಸುತ್ತಾರೆ. ಆದರೆ ಅದು ಕೂಡ ಅವರಿಗೆ ನಿರಾಶೆಯನ್ನುಂಟುಮಾಡಬಹುದು. ಅಂಥ ಒಂದು ಉದಾಹರಣೆಯನ್ನು ಗಮನಿಸಿ. ಮಾರ್ಕೋಸ್‌ ಎಂಬುವವನು ಒಬ್ಬ ಯಶಸ್ವಿ ವ್ಯಾಪಾರಸ್ಥನಾಗಿದ್ದನು. ಸ್ವಲ್ಪ ಸಮಯದ ನಂತರ, ಅವನು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸತೊಡಗಿದನು. ನಂತರ ಅವನು ಒಂದು ಕೈಗಾರಿಕಾ ನಗರದ ಮೇಯರ್‌ ಆದನು. ಆದರೆ, ಅವನ ಕುಟುಂಬ ಜೀವನವೋ ನುಚ್ಚುನೂರಾಗಿತ್ತು. ಅವನ ಮಕ್ಕಳು ಮನೆಬಿಟ್ಟು ಹೋದಾಗ, ಅವನು ಮತ್ತು ಅವನ ಹೆಂಡತಿಯು ಕೂಡ ಬೇರೆಬೇರೆಯಾದರು. ಏಕೆಂದರೆ, ಒಟ್ಟಿಗೆ ಜೀವಿಸಲು ಸಾಧ್ಯವೇ ಇಲ್ಲದಷ್ಟರ ಮಟ್ಟಿಗೆ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು.

ಬ್ರಸಿಲ್‌ನಲ್ಲಿರುವ ಸಾಲ್ವೆಡಾರ್‌ ಎಂಬಲ್ಲಿ ಗೆರ್‌ಸನ್‌ ಎಂಬ ಒಬ್ಬ ಬೀದಿ ಹುಡುಗನ ಅನುಭವವನ್ನು ಗಮನಿಸಿ. ಅವನು ಜೀವನದಲ್ಲಿ ಸಾಹಸವಿರಬೇಕೆಂದು ನಂಬಿದವನಾಗಿದ್ದನು. ಅದಕ್ಕಾಗಿ, ಅವನು ಟ್ರಕ್‌ ಡ್ರೈವರುಗಳೊಂದಿಗೆ ಪ್ರಯಾಣಿಸುತ್ತಾ ಊರಿಂದ ಊರಿಗೆ ಅಲೆಯುತ್ತಿದ್ದನು. ಸ್ವಲ್ಪ ಸಮಯದೊಳಗೆ ಅವನು ಮಾದಕವ್ಯಸನಿಯಾಗಿಬಿಟ್ಟನು. ಮಾದಕ ದ್ರವ್ಯಗಳನ್ನು ಖರೀದಿಸುವುದಕ್ಕಾಗಿ ಕಳ್ಳತನ ಮಾಡಲು ಶುರುಮಾಡಿದನು. ಅನೇಕ ಸಾರಿ ಪೊಲೀಸರು ಅವನನ್ನು ಹಿಡಿದಿದ್ದರು. ಅವನೊಬ್ಬ ಜಗಳಗಂಟನೂ ಹಾಗೂ ಕಠೋರ ವ್ಯಕ್ತಿಯೂ ಆಗಿದ್ದನು. ಆದರೂ, ಗೆರ್‌ಸನ್‌ ಮನಶ್ಶಾಂತಿಗಾಗಿ ಹಂಬಲಿಸುತ್ತಿದ್ದನು. ಆದರೆ ಅದು ಅವನಿಗೆ ಎಂದಾದರೂ ಸಿಕ್ಕಿತೇ?

ಇನ್ನೊಂದು ಉದಾಹರಣೆಯು ವೆನಿಯಾ ಎಂಬುವವಳದ್ದಾಗಿದೆ. ಅವಳು ಚಿಕ್ಕವಳಾಗಿರುವಾಗಲೇ ಅವಳ ತಾಯಿಯು ತೀರಿಕೊಂಡಳು. ಆಗ ಮನೆಯ ಇಡೀ ಜವಾಬ್ದಾರಿಯು ಅವಳ ಮೇಲೆ ಬಿತ್ತು. ಅದರಲ್ಲಿ ಕಾಯಿಲೆಯಿಂದ ನರಳುತ್ತಿದ್ದ ತಂಗಿಯನ್ನು ಕೂಡ ಅವಳು ನೋಡಿಕೊಳ್ಳಬೇಕಾಗಿತ್ತು. ವೆನಿಯಾ ಚರ್ಚಿಗೆ ಹೋಗುತ್ತಿದ್ದಳು. ಆದರೂ, ಅವಳಿಗೆ ದೇವರು ತನ್ನನ್ನು ತೊರೆದುಬಿಟ್ಟಿರುವಂತೆ ಅನಿಸುತ್ತಿತ್ತು. ಇದರಿಂದಾಗಿ ಅವಳ ಜೀವನದಲ್ಲಂತೂ ಸ್ವಲ್ಪವೂ ಶಾಂತಿಯಿರಲಿಲ್ಲ.

ಮಾರ್ಸೆಲೋ ಎಂಬುವವನು ಇನ್ನೊಬ್ಬ ವ್ಯಕ್ತಿ. ಇವನಿಗೆ ಜೀವನದಲ್ಲಿ ತುಂಬಾ ಮಜಾ ಮಾಡಬೇಕಾಗಿತ್ತಷ್ಟೇ. ಇತರ ಯುವಜನರೊಂದಿಗೆ ಪಾರ್ಟಿಗಳಿಗೆ ಹೋಗಿ ಅಲ್ಲಿ ಕುಡಿಯುತ್ತಾ, ಕುಣಿಯುತ್ತಾ, ಮಾದಕ ವಸ್ತುಗಳನ್ನು ತೆಗೆದುಕೊಳ್ಳುವುದು ಅವನಿಗೆ ತುಂಬ ಇಷ್ಟವಿತ್ತು. ಹೀಗೆ ಒಮ್ಮೆ ಪಾರ್ಟಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಜಗಳ ಶುರುವಾಯಿತು. ಅವನು ಅಲ್ಲಿದ್ದ ಮತ್ತೊಬ್ಬ ಯುವಕನನ್ನು ಹೊಡೆದುಬಿಟ್ಟನು. ಅನಂತರ ತಾನು ಮಾಡಿದ ಕೃತ್ಯಕ್ಕಾಗಿ ಅವನಿಗೆ ತುಂಬ ವ್ಯಥೆಯಾಯಿತು. ಹೀಗೆ, ಅವನು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿದನು. ಅವನಿಗೂ ಮನಶ್ಶಾಂತಿ ಬೇಕಾಗಿತ್ತು.

ಈ ಎಲ್ಲಾ ಅನುಭವಗಳು, ಮನಶ್ಶಾಂತಿಯನ್ನು ಕದಡಿಸಬಹುದಾದ ಕೆಲವೊಂದು ಸನ್ನಿವೇಶಗಳನ್ನು ದೃಷ್ಟಾಂತಿಸುತ್ತವೆ. ಆದರೆ ಪ್ರಶ್ನೆಯೇನೆಂದರೆ, ಲೇಖನದಲ್ಲಿ ತಿಳಿಸಲ್ಪಟ್ಟಿರುವ ಕಾರ್ಮಿಕ ನಾಯಕ, ರಾಜಕಾರಣಿ, ಬೀದಿ ಹುಡುಗ, ದುಡಿದು ಬಳಲಿಹೋಗಿರುವ ಮಗಳು, ಮತ್ತು ಪಾರ್ಟಿಗಳಲ್ಲಿ ತೀವ್ರ ಆಸಕ್ತನಾಗಿದ್ದ ಯುವಕ, ಹೀಗೆ ಇವರೆಲ್ಲರೂ ಅರಸುತ್ತಿದ್ದ ಮನಶ್ಶಾಂತಿಯನ್ನು ಕಂಡುಕೊಳ್ಳಲು ಯಾವುದಾದರೂ ಮಾರ್ಗವಿದೆಯೋ? ಅವರಿಗಾದ ಅನುಭವಗಳು ನಮಗೆ ಯಾವುದಾದರೂ ಪಾಠವನ್ನು ಕಲಿಸುತ್ತವೆಯೇ? ಈ ಎರಡೂ ಪ್ರಶ್ನೆಗಳಿಗೆ ಉತ್ತರವು, ಹೌದು ಎಂದಾಗಿದೆ. ಅದು ಹೇಗೆ ಎಂಬುದನ್ನು ನಾವು ಮುಂದಿನ ಲೇಖನದಲ್ಲಿ ನೋಡೋಣ.

[ಪಾದಟಿಪ್ಪಣಿ]

^ ಪ್ಯಾರ. 6 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 3ರಲ್ಲಿರುವ ಚಿತ್ರ]

ಮನಶ್ಶಾಂತಿಗಾಗಿ ನೀವು ಹಾತೊರೆಯುತ್ತಿದ್ದೀರೋ?