ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುವಾರ್ತೆಯನ್ನು ಅತ್ಯುತ್ಸಾಹದಿಂದ ಪ್ರಚುರಪಡಿಸಿರಿ

ಸುವಾರ್ತೆಯನ್ನು ಅತ್ಯುತ್ಸಾಹದಿಂದ ಪ್ರಚುರಪಡಿಸಿರಿ

ಸುವಾರ್ತೆಯನ್ನು ಅತ್ಯುತ್ಸಾಹದಿಂದ ಪ್ರಚುರಪಡಿಸಿರಿ

“ಅತ್ಯಾಸಕ್ತರಾಗಿದ್ದು, ಕರ್ತನ [“ಯೆಹೋವನ,” NW] ಸೇವೆ ಮಾಡುವವರಾಗಿರಿ.”—ರೋಮಾಪುರ 12:11.

1, 2. ಸುವಾರ್ತೆಯನ್ನು ಸಾರುವವರೋಪಾದಿ ಕ್ರೈಸ್ತರು ಯಾವ ಮನೋಭಾವವನ್ನು ಕಾಪಾಡಿಕೊಳ್ಳಲು ಪ್ರಯಾಸಪಡುತ್ತಾರೆ?

ಒ ಬ್ಬ ಯುವಕನು ತನ್ನ ಹೊಸ ಉದ್ಯೋಗದ ಕುರಿತು ಸಂಭ್ರಮಪಡುತ್ತಿದ್ದಾನೆ. ಕೆಲಸದ ಮೊದಲ ದಿನದಂದು, ಅವನು ತನ್ನ ಧಣಿಯ ಸೂಚನೆಗಳಿಗಾಗಿ ಕಾತುರದಿಂದ ಕಾಯುತ್ತಾನೆ. ತನ್ನ ಮೊದಲ ಕೆಲಸಕ್ಕಾಗಿ ಅವನು ಎದುರುನೋಡುತ್ತಾನೆ ಮತ್ತು ಅವನಿಗೆ ಕೆಲಸವು ಕೊಡಲ್ಪಟ್ಟಾಗ ಅದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾನೆ. ಆ ಕೆಲಸವನ್ನು ತನ್ನ ಕೈಲಾದಷ್ಟು ಚೆನ್ನಾಗಿ ಮಾಡಲು ಅವನು ಉತ್ಸುಕನಾಗಿರುತ್ತಾನೆ.

2 ಅದೇ ರೀತಿಯಲ್ಲಿ ಕ್ರೈಸ್ತರಾಗಿರುವ ನಾವು ಸಹ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿರುವವರಾಗಿ ಪರಿಗಣಿಸಿಕೊಳ್ಳಸಾಧ್ಯವಿದೆ. ನಮಗೆ ಸದಾಕಾಲ ಜೀವಿಸುವ ನಿರೀಕ್ಷೆಯಿರುವುದರಿಂದ, ಆ ಸಮಯಕ್ಕೆ ಹೋಲಿಸುವಾಗ ನಾವು ಈಗ ತಾನೇ ಯೆಹೋವನಿಗಾಗಿ ಕೆಲಸವನ್ನು ಮಾಡಲು ಆರಂಭಿಸಿದ್ದೇವೆ ಎಂದು ಹೇಳಬಹುದು. ನಿತ್ಯಕ್ಕೂ ನಮ್ಮನ್ನು ಕಾರ್ಯಮಗ್ನರನ್ನಾಗಿರಿಸುವ ಅನೇಕ ಕೆಲಸಗಳು ನಮ್ಮ ಸೃಷ್ಟಿಕರ್ತನ ಮನಸ್ಸಿನಲ್ಲಿವೆ. ಆದರೆ ಈಗ ನಾವು ಪಡೆದುಕೊಂಡಿರುವ ಮೊತ್ತಮೊದಲ ನೇಮಕವು, ದೇವರ ರಾಜ್ಯದ ಸುವಾರ್ತೆಯನ್ನು ಪ್ರಚುರಪಡಿಸುವುದೇ ಆಗಿದೆ. (1 ಥೆಸಲೊನೀಕ 2:4) ದೇವರಿಂದ ಬಂದಿರುವ ಈ ನೇಮಕದ ಕುರಿತು ನಮಗೆ ಹೇಗೆ ಅನಿಸುತ್ತದೆ? ಆ ಯುವಕನಂತೆ, ನಾವು ನಮ್ಮ ಶಕ್ತಿಸಾಮರ್ಥ್ಯವನ್ನೆಲ್ಲಾ ಆ ಕೆಲಸದಲ್ಲಿ ವಿನಿಯೋಗಿಸಲು ಬಯಸುತ್ತೇವೆ. ಅದನ್ನು ಹುರುಪು ಮತ್ತು ಸಂತೋಷದಿಂದ, ಹೌದು, ಅತ್ಯುತ್ಸಾಹದಿಂದ ಮಾಡಲು ಬಯಸುತ್ತೇವೆ.

3. ಸುವಾರ್ತೆಯ ಶುಶ್ರೂಷಕನೋಪಾದಿ ಸಫಲನಾಗಬೇಕಾದರೆ ಏನು ಆವಶ್ಯಕ?

3 ಆದರೆ ಅಂತಹ ಒಳ್ಳೆಯ ಮನೋಭಾವವನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿರಸಾಧ್ಯವಿದೆ. ಯಾಕೆಂದರೆ ಶುಶ್ರೂಷೆಯನ್ನು ನೆರವೇರಿಸಲಿಕ್ಕಿರುವುದರ ಜೊತೆಗೆ ನಮಗೆ ಇನ್ನಿತರ ಜವಾಬ್ದಾರಿಗಳು ಇರುತ್ತವೆ. ಇವುಗಳಲ್ಲಿ ಕೆಲವು ನಮ್ಮನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಣಿಸಿಬಿಡಬಹುದು. ಆದರೆ ಹೆಚ್ಚಾಗಿ ನಾವು ಈ ಎಲ್ಲ ಕೆಲಸಗಳನ್ನು ಹೇಗಾದರೂ ನಿಭಾಯಿಸುತ್ತೇವೆ. ಅದರ ಜೊತೆಗೆ ಶುಶ್ರೂಷೆಗೆ ಸಾಕಷ್ಟು ಗಮನವನ್ನು ಸಹ ಕೊಡುತ್ತೇವೆ. ಹೀಗಿದ್ದರೂ, ಈ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವುದು ಸತತವಾದ ಹೋರಾಟವಾಗಿರಬಲ್ಲದು. (ಮಾರ್ಕ 8:34) ಕ್ರೈಸ್ತರೋಪಾದಿ ಸಫಲತೆಯನ್ನು ಪಡೆದುಕೊಳ್ಳುವುದಕ್ಕಾಗಿ ನಾವು ಕಷ್ಟಪಟ್ಟು ಕೆಲಸಮಾಡಬೇಕಾಗುತ್ತದೆ ಎಂದು ಯೇಸು ಒತ್ತಿಹೇಳಿದನು.—ಲೂಕ 13:24.

4. ದಿನನಿತ್ಯದ ಚಿಂತೆಗಳು ನಮ್ಮ ಆತ್ಮಿಕ ದೃಷ್ಟಿಕೋನದ ಮೇಲೆ ಹೇಗೆ ಪರಿಣಾಮವನ್ನು ಬೀರಬಲ್ಲವು?

4 ನಮಗೆ ಮಾಡಲು ತುಂಬ ಕೆಲಸಗಳು ಇರುವುದರಿಂದ, ನಾವು ಕೆಲವೊಮ್ಮೆ ಸುಲಭವಾಗಿ ಮನಗುಂದಿದವರಾಗಬಲ್ಲೆವು ಅಥವಾ ಒಂದು ದೊಡ್ಡ ಭಾರ ನಮ್ಮ ಮೇಲಿರುವಂತೆ ನಮಗೆ ಅನಿಸಬಹುದು. ‘ಪ್ರಪಂಚದ ಚಿಂತೆಗಳು’ ದೇವಪ್ರಭುತ್ವ ಚಟುವಟಿಕೆಗಳಿಗಾಗಿರುವ ನಮ್ಮ ಹುರುಪು ಮತ್ತು ಗಣ್ಯತೆಯನ್ನು ಅದುಮಿಬಿಡಬಲ್ಲವು. (ಲೂಕ 21:34, 35; ಮಾರ್ಕ 4:18, 19) ನಾವು ಸ್ವಭಾವಸಿದ್ಧರಾಗಿ ಅಪರಿಪೂರ್ಣರಾಗಿರುವ ಕಾರಣದಿಂದಾಗಿ, ‘ಮೊದಲು ಇದ್ದ ಪ್ರೀತಿಯನ್ನು’ ಬಿಟ್ಟುಬಿಡಬಹುದು. (ಪ್ರಕಟನೆ 2:1-4) ಯೆಹೋವನ ಸೇವೆಯ ಕೆಲವು ಭಾಗಗಳು ಹೆಚ್ಚುಕಡಿಮೆ ಯಾಂತ್ರಿಕವಾಗಲೂ ಸಾಧ್ಯವಿದೆ. ಆದರೆ, ಶುಶ್ರೂಷೆಗಾಗಿರುವ ನಮ್ಮ ಹುರುಪನ್ನು ಕಾಪಾಡಿಕೊಳ್ಳಲು ಬೇಕಾಗಿರುವ ಉತ್ತೇಜನವನ್ನು ಬೈಬಲ್‌ ಹೇಗೆ ಕೊಡುತ್ತದೆ?

ನಮ್ಮ ಹೃದಯಗಳಲ್ಲಿ ‘ಉರಿಯುವ ಬೆಂಕಿಯಂತೆ’

5, 6. ಅಪೊಸ್ತಲ ಪೌಲನು ಸಾರುವ ತನ್ನ ಸುಯೋಗವನ್ನು ಯಾವ ದೃಷ್ಟಿಕೋನದಿಂದ ನೋಡಿದನು?

5 ಯೆಹೋವನು ನಮಗೆ ಕೊಟ್ಟಿರುವ ಶುಶ್ರೂಷೆಯು ಎಷ್ಟು ಅಮೂಲ್ಯವಾಗಿದೆಯೆಂದರೆ, ಅದು ನಮ್ಮ ಜೀವಿತದಲ್ಲಿ ಒಂದು ಮಾಮೂಲಿಯಾದ ಸಂಗತಿಯಾಗುವಂತೆ ನಾವು ಬಿಡಲಾರೆವು. ಸುವಾರ್ತೆಯನ್ನು ಸಾರುವ ನೇಮಕವು ಅತಿ ದೊಡ್ಡ ಸುಯೋಗವಾಗಿದೆ ಎಂದು ಅಪೊಸ್ತಲ ಪೌಲನು ಪರಿಗಣಿಸಿದನು ಮತ್ತು ಅದು ತನಗೆ ಕೊಡಲ್ಪಟ್ಟಿದ್ದರೂ ತಾನು ಮಾತ್ರ ಅದಕ್ಕೆ ಅಯೋಗ್ಯನಾಗಿದ್ದೇನೆಂಬ ದೃಷ್ಟಿಕೋನವು ಅವನಿಗಿತ್ತು. ಅವನು ಹೇಳಿದ್ದು: “ನಾನು ಕ್ರಿಸ್ತನ ಅಪ್ರಮೇಯವಾದ ಐಶ್ವರ್ಯದ ವಿಷಯವಾದ ಶುಭಸಮಾಚಾರವನ್ನು ಅನ್ಯಜನರಿಗೆ ಪ್ರಸಿದ್ಧಿಪಡಿಸುವ ಹಾಗೆಯೂ ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ ಆದಿಯಿಂದ ಮರೆಯಾಗಿದ್ದ ಮರ್ಮವು ಪ್ರಕಟವಾಗುವ ವಿಧ ಎಂಥದೆಂದು ತಿಳಿಸುವ ಹಾಗೆಯೂ ದೇವಜನರೊಳಗೆ ಅತ್ಯಲ್ಪನಾದ ನನಗೆ ಅನುಗ್ರಹಿಸೋಣವಾಯಿತು.”—ಎಫೆಸ 3:8, 9.

6 ತನ್ನ ಶುಶ್ರೂಷೆಯ ವಿಷಯದಲ್ಲಿ ಪೌಲನಿಗಿದ್ದ ಸಕಾರಾತ್ಮಕ ಮನೋಭಾವವು ನಮಗೆ ಅತ್ಯುತ್ತಮವಾದ ಮಾದರಿಯಾಗಿದೆ. ರೋಮಾಪುರದವರಿಗೆ ಬರೆದ ತನ್ನ ಪತ್ರಿಕೆಯಲ್ಲಿ ಅವನು ತಿಳಿಸಿದ್ದು: ‘ನಿಮಗೆ ಸುವಾರ್ತೆಯನ್ನು ಸಾರುವದಕ್ಕೆ ನಾನಂತೂ ಸಿದ್ಧವಾಗಿದ್ದೇನೆ.’ ಅವನು ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳಲಿಲ್ಲ. (ರೋಮಾಪುರ 1:15, 16) ಅವನಿಗೆ ಅದರ ಕಡೆಗೆ ಒಳ್ಳೆಯ ಮನೋಭಾವವಿತ್ತು ಮತ್ತು ತನ್ನ ಶುಶ್ರೂಷೆಯನ್ನು ಮುಂದುವರಿಸಿಕೊಂಡು ಹೋಗಲು ಅವನು ಉತ್ಸುಕನಾಗಿದ್ದನು.

7. ರೋಮಾಪುರದವರಿಗೆ ಬರೆದ ಪತ್ರದಲ್ಲಿ ಪೌಲನು ಯಾವುದರ ವಿರುದ್ಧ ಎಚ್ಚರಿಸಿದ್ದನು?

7 ಹುರುಪುಳ್ಳ ಮನೋಭಾವವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂಬುದು ಅಪೊಸ್ತಲ ಪೌಲನಿಗೆ ತಿಳಿದಿತ್ತು. ಆದುದರಿಂದಲೇ ಅವನು ರೋಮಿನಲ್ಲಿರುವ ಕ್ರೈಸ್ತರಿಗೆ ಬುದ್ಧಿವಾದವನ್ನು ಕೊಡುತ್ತಾ ಹೀಗೆ ಹೇಳಿದನು: “ಆಲಸ್ಯವಾಗಿರದೆ ಆಸಕ್ತಚಿತ್ತರಾಗಿದ್ದು ಕರ್ತನ [“ಯೆಹೋವನ,” NW] ಸೇವೆ ಮಾಡುವವರಾಗಿರ್ರಿ.” (ರೋಮಾಪುರ 12:11) “ಆಲಸ್ಯ” ಎಂದು ತರ್ಜುಮೆಯಾಗಿರುವ ಗ್ರೀಕ್‌ ಪದವು, “ಜಡ ಮನೋಭಾವ, ಮೈಗಳ್ಳತನ” ಎಂಬ ಅರ್ಥವನ್ನು ಕೊಡುತ್ತದೆ. ನಾವು ನಮ್ಮ ಶುಶ್ರೂಷೆಯಲ್ಲಿ ಅಕ್ಷರಶಃವಾಗಿ ಆಲಸ್ಯವಾಗಿರದೆ ಇರಬಹುದು. ಆದರೆ ನಮ್ಮಲ್ಲಿ ಆತ್ಮಿಕವಾದ ಜಡ ಮನೋಭಾವದ ಯಾವುದೇ ಆರಂಭದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆಯೊ ಎಂಬುದರ ಬಗ್ಗೆ ನಾವು ಯಾವಾಗಲೂ ಎಚ್ಚೆತ್ತವರಾಗಿರಬೇಕು. ಮತ್ತು ಒಂದುವೇಳೆ ನಮ್ಮಲ್ಲಿ ಅಂತಹ ಲಕ್ಷಣಗಳು ಕಾಣಿಸಿಕೊಂಡಿವೆಯೆಂದು ನಮಗೆ ತಿಳಿದುಬಂದರೆ, ನಾವು ನಮ್ಮ ಮನೋಭಾವದಲ್ಲಿ ತಕ್ಕ ಹೊಂದಾಣಿಕೆಗಳನ್ನು ಮಾಡಬೇಕಾಗಿರುತ್ತದೆ.—ಜ್ಞಾನೋಕ್ತಿ 22:3.

8. (ಎ) ಯೆರೆಮೀಯನ ಹೃದಯದಲ್ಲಿ ಯಾವುದು “ಉರಿಯುವ ಬೆಂಕಿ”ಯಂತಾಯಿತು, ಮತ್ತು ಯಾಕೆ? (ಬಿ) ಯೆರೆಮೀಯನ ಅನುಭವದಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

8 ನಾವು ನಿರುತ್ಸಾಹಗೊಂಡಾಗ ದೇವರ ಆತ್ಮವು ಸಹ ನಮಗೆ ಸಹಾಯಮಾಡಬಲ್ಲದು. ಉದಾಹರಣೆಗೆ, ಒಂದು ಸಮಯದಲ್ಲಿ ಪ್ರವಾದಿಯಾದ ಯೆರೆಮೀಯನು ನಿರುತ್ಸಾಹಗೊಂಡು, ತನ್ನ ಪ್ರವಾದನ ಕೆಲಸವನ್ನು ನಿಲ್ಲಿಸುವ ನಿರ್ಧಾರಕ್ಕೂ ಬಂದನು. ಅವನು ಯೆಹೋವನ ಕುರಿತಾಗಿಯೂ ಹೀಗೆ ಹೇಳಿದನು: “ನಾನು ಯೆಹೋವನ ವಿಷಯವನ್ನು ಪ್ರಕಟಿಸೆನು, ಆತನ ಹೆಸರಿನಲ್ಲಿ ಇನ್ನು ಮಾತಾಡೆನು.” ಈ ಮಾತುಗಳು, ಯೆರೆಮೀಯನಲ್ಲಿ ಗಂಭೀರವಾದ ಆತ್ಮಿಕ ಕೊರತೆಯಿತ್ತು ಎಂಬುದನ್ನು ತೋರಿಸುತ್ತವೋ? ಇಲ್ಲ. ನಿಜ ವಿಷಯವೇನಂದರೆ, ಯೆರೆಮೀಯನಲ್ಲಿದ್ದ ಬಲವಾದ ಆತ್ಮಿಕತೆ, ಯೆಹೋವನ ಕಡೆಗೆ ಅವನಿಗಿದ್ದ ಪ್ರೀತಿ ಮತ್ತು ಸತ್ಯಕ್ಕಾಗಿದ್ದ ಅವನ ಹುರುಪು, ಪ್ರವಾದಿಸುತ್ತಾ ಮುಂದುವರಿಯುವಂತೆ ಅವನಿಗೆ ಬಲವನ್ನು ಒದಗಿಸಿತು. ಅವನು ವಿವರಿಸುವುದು: ‘ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ [ಯೆಹೋವನ ವಾಕ್ಯವು] ಸಂಕಟವನ್ನು ಉಂಟುಮಾಡಿತು; ತಡೆದು ತಡೆದು ಆಯಾಸಗೊಂಡಿದ್ದೇನೆ, ಸಹಿಸಲಾರೆ.’ (ಯೆರೆಮೀಯ 20:9) ದೇವರ ನಂಬಿಗಸ್ತ ಸೇವಕರು ಆಗಿಂದಾಗ್ಗೆ ನಿರುತ್ಸಾಹಗೊಳ್ಳುವುದು ಸ್ವಾಭಾವಿಕವಾಗಿದೆ. ಆದರೆ ಅವರು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುವಾಗ, ಆತನು ಅವರ ಹೃದಯಗಳಲ್ಲೇನಿದೆ ಎಂಬುದನ್ನು ನೋಡುವನು ಮತ್ತು ಯೆರೆಮೀಯನಂತೆ ಅವರ ಹೃದಯಗಳಲ್ಲಿ ಆತನ ವಾಕ್ಯವಿರುವುದಾದರೆ, ಆತನು ಅವರಿಗೆ ತನ್ನ ಪವಿತ್ರಾತ್ಮವನ್ನು ಉದಾರವಾಗಿ ಕೊಡುವನು.—ಲೂಕ 11:9-13; ಅ. ಕೃತ್ಯಗಳು 15:8.

“ಪವಿತ್ರಾತ್ಮವನ್ನು ನಂದಿಸಬೇಡಿರಿ”

9. ಪವಿತ್ರಾತ್ಮವು ನಮ್ಮ ಪರವಾಗಿ ಕೆಲಸಮಾಡುವುದಕ್ಕೆ ಯಾವುದು ತಡೆಯನ್ನೊಡ್ಡಬಲ್ಲದು?

9 ಅಪೊಸ್ತಲ ಪೌಲನು ಥೆಸಲೊನೀಕದವರಿಗೆ, “ಪವಿತ್ರಾತ್ಮವನ್ನು ನಂದಿಸಬೇಡಿರಿ” ಎಂದು ಸಲಹೆಯನ್ನು ನೀಡಿದನು. (1 ಥೆಸಲೊನೀಕ 5:19) ಹೌದು, ನಮ್ಮ ಕಾರ್ಯಗಳು ಅಥವಾ ಮನೋಭಾವಗಳು ದೈವಿಕ ಮೂಲತತ್ವಗಳಿಗೆ ವಿರುದ್ಧವಾಗಿರುವಲ್ಲಿ, ನಮ್ಮ ಪರವಾಗಿ ಪವಿತ್ರಾತ್ಮವು ಮಾಡುವ ಕೆಲಸವನ್ನು ಇದು ತಡೆಗಟ್ಟಬಲ್ಲದು. (ಎಫೆಸ 4:30) ಕ್ರೈಸ್ತರಾದ ನಮಗೆ ಇಂದು ಸುವಾರ್ತೆಯನ್ನು ಸಾರುವ ನೇಮಕವಿದೆ. ನಾವು ಈ ಸುಯೋಗವನ್ನು ಆಳವಾದ ಗೌರವದಿಂದ ಕಾಣುತ್ತೇವೆ. ದೇವರನ್ನು ತಿಳಿಯದೇ ಇರುವವರು ನಮ್ಮ ಸಾರುವ ಕೆಲಸವನ್ನು ತಿರಸ್ಕಾರದಿಂದ ಕಾಣುತ್ತಿರುವುದು ನಮ್ಮನ್ನು ಆಶ್ಚರ್ಯಗೊಳಿಸುವುದಿಲ್ಲ. ಆದರೆ ಒಬ್ಬ ಕ್ರೈಸ್ತನು ತನ್ನ ಶುಶ್ರೂಷೆಯನ್ನು ಬೇಕುಬೇಕೆಂದೇ ನಿರ್ಲಕ್ಷಿಸುವಾಗ, ಅದು ದೇವರ ಕಾರ್ಯಕಾರಿ ಶಕ್ತಿಯ ಬೆಂಕಿಯನ್ನು ನಂದಿಸಿಬಿಡುತ್ತದೆ.

10. (ಎ) ನಮ್ಮ ಜೊತೆಮಾನವರ ದೃಷ್ಟಿಕೋನವು ನಮ್ಮನ್ನು ಹೇಗೆ ಪ್ರಭಾವಿಸಸಾಧ್ಯವಿದೆ? (ಬಿ) ಎರಡನೆಯ ಕೊರಿಂಥ 2:17ರಲ್ಲಿ ನಮ್ಮ ಶುಶ್ರೂಷೆಯ ಕುರಿತಾದ ಯಾವ ಉನ್ನತ ಅಭಿಪ್ರಾಯವು ವ್ಯಕ್ತಪಡಿಸಲ್ಪಟ್ಟಿದೆ?

10 ಕ್ರೈಸ್ತ ಸಭೆಗೆ ಸೇರಿರದಂತಹ ಕೆಲವು ಜನರು, ನಮ್ಮ ಶುಶ್ರೂಷೆಯು ಕೇವಲ ಸಾಹಿತ್ಯವನ್ನು ನೀಡುವ ಕೆಲಸವಾಗಿದೆ ಎಂದು ಹೇಳಬಹುದು. ಇನ್ನಿತರರ ಮನಸ್ಸಿನಲ್ಲಿ, ನಾವು ಮನೆಯಿಂದ ಮನೆಗೆ ಹೋಗಿ ಕೇವಲ ದಾನಗಳನ್ನು ಸ್ವೀಕರಿಸುತ್ತೇವೆಂಬ ತಪ್ಪು ವಿಚಾರವು ಸಹ ಇರಬಹುದು. ಇಂತಹ ನಕಾರಾತ್ಮಕ ಅಭಿಪ್ರಾಯಗಳು ನಮ್ಮ ಮನೋಭಾವವನ್ನು ಪ್ರಭಾವಿಸುವಂತೆ ನಾವು ಬಿಡುವುದಾದರೆ, ಶುಶ್ರೂಷೆಯಲ್ಲಿನ ನಮ್ಮ ಪರಿಣಾಮಕಾರಿತ್ವವು ಕಡಿಮೆಯಾಗುವುದು. ಇಂತಹ ಯೋಚನೆಯು ನಮ್ಮನ್ನು ಪ್ರಭಾವಿಸುವಂತೆ ಬಿಡುವುದರ ಬದಲು, ಯೆಹೋವನಿಗೆ ಮತ್ತು ಯೇಸುವಿಗೆ ನಮ್ಮ ಶುಶ್ರೂಷೆಯ ಕುರಿತು ಯಾವ ಅಭಿಪ್ರಾಯವಿದೆಯೋ, ಅದೇ ರೀತಿಯ ಅಭಿಪ್ರಾಯವನ್ನು ನಾವು ಕಾಪಾಡಿಕೊಳ್ಳೋಣ. ಅಪೊಸ್ತಲ ಪೌಲನಲ್ಲಿ ಅಂತಹ ಉನ್ನತ ಅಭಿಪ್ರಾಯವಿತ್ತೆಂಬುದು ಅವನ ಈ ಮಾತುಗಳಲ್ಲಿ ಕಂಡುಬರುತ್ತದೆ: “ಆದರೆ ನಾವು ದೇವರ ವಾಕ್ಯವನ್ನು ಕಲಬೆರಿಕೆಮಾಡುವವರಾದ [“ವ್ಯಾಪಾರಿಗಳಾದ,” NW] ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಉಪದೇಶಹೊಂದಿದವರಿಗೆ ತಕ್ಕ ಹಾಗೆ ಕ್ರಿಸ್ತನ ಅನ್ಯೋನ್ಯತೆಯಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತಾಡುತ್ತೇವೆ.”—2 ಕೊರಿಂಥ 2:17.

11. ಹಿಂಸೆಯ ಕೆಳಗೂ ಹುರುಪುಳ್ಳವರಾಗಿರುವಂತೆ ಆರಂಭದ ಕ್ರೈಸ್ತರಿಗೆ ಯಾವುದು ಶಕ್ತಗೊಳಿಸಿತು, ಮತ್ತು ಅವರ ಉದಾಹರಣೆಯು ನಮ್ಮನ್ನು ಹೇಗೆ ಪ್ರಭಾವಿಸಬೇಕು?

11 ಯೇಸುವಿನ ಮರಣದ ಸ್ವಲ್ಪ ಸಮಯದ ನಂತರ, ಯೆರೂಸಲೇಮಿನಲ್ಲಿದ್ದ ಅವನ ಶಿಷ್ಯರು ಬಹಳಷ್ಟು ಹಿಂಸೆಯನ್ನು ಅನುಭವಿಸಿದರು. ಅವರು ಬೆದರಿಸಲ್ಪಟ್ಟರು ಮತ್ತು ಸಾರುವುದನ್ನು ನಿಲ್ಲಿಸುವಂತೆ ಆಜ್ಞಾಪಿಸಲ್ಪಟ್ಟರು. ಹೀಗಿದ್ದರೂ, “ಅವರೆಲ್ಲರು ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವವರಾದರು” ಎಂದು ಬೈಬಲ್‌ ಹೇಳುತ್ತದೆ. (ಅ. ಕೃತ್ಯಗಳು 4:17, 21, 31) ಕೆಲವು ವರುಷಗಳ ನಂತರ ಪೌಲನು ತಿಮೊಥೆಯನಿಗೆ ಪತ್ರವನ್ನು ಬರೆದಾಗ, ಕ್ರೈಸ್ತರು ಕಾಪಾಡಿಕೊಳ್ಳಬೇಕಾದ ಸರಿಯಾದ ಮನೋವೃತ್ತಿಯ ಕುರಿತಾಗಿ ಅವನು ತಿಳಿಸಿದನು. ಪೌಲನಂದದ್ದು: “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ. ಆದದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆಪಡದೆ ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಶ್ರಮೆಯನ್ನನುಭವಿಸು.”—2 ತಿಮೊಥೆಯ 1:7, 8.

ನಮ್ಮ ನೆರೆಯವನಿಗೆ ನಾವು ಯಾವ ಋಣವನ್ನು ತೀರಿಸಲಿಕ್ಕಿದೆ?

12. ನಾವು ಸುವಾರ್ತೆಯನ್ನು ಯಾವ ಮುಖ್ಯ ಕಾರಣಕ್ಕಾಗಿ ಸಾರುತ್ತೇವೆ?

12 ನಮ್ಮ ಶುಶ್ರೂಷೆಯ ಕಡೆಗೆ ನಮಗೆ ಸರಿಯಾದ ಮನೋಭಾವವು ಇರಬೇಕಾದರೆ, ನಮಗೆ ಯೋಗ್ಯವಾದ ಹೇತುವಿರಲೇಬೇಕು. ನಾವು ಯಾವ ಕಾರಣಕ್ಕಾಗಿ ಸಾರುತ್ತೇವೆ? ಸಾರುವುದಕ್ಕಿರುವ ಮುಖ್ಯ ಕಾರಣವು ಕೀರ್ತನೆಗಾರನ ಈ ಮಾತುಗಳಲ್ಲಿ ತೋರಿಬರುತ್ತದೆ: “ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವದು; ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು. ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು; ನಿನ್ನ ಪ್ರತಾಪವನ್ನು ವರ್ಣಿಸುವರು. ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು.” (ಕೀರ್ತನೆ 145:10-12) ಯೆಹೋವನನ್ನು ಬಹಿರಂಗವಾಗಿ ಸ್ತುತಿಸಲಿಕ್ಕಾಗಿ ಮತ್ತು ಮಾನವಕುಲದವರೆಲ್ಲರ ಮುಂದೆ ಆತನ ನಾಮವನ್ನು ಪವಿತ್ರೀಕರಿಸಲಿಕ್ಕಾಗಿ ನಾವು ಸಾರುತ್ತೇವೆ. ನಮ್ಮ ಸಂದೇಶವನ್ನು ಸ್ವಲ್ಪ ಮಂದಿ ಆಲಿಸುತ್ತಿರುವಾಗಲೂ, ನಾವು ನಂಬಿಗಸ್ತಿಕೆಯಿಂದ ರಕ್ಷಣೆಯ ಸಂದೇಶವನ್ನು ಸಾರುವುದರಿಂದ ನಾವು ಯೆಹೋವನಿಗೆ ಸ್ತುತಿಯನ್ನು ತರುತ್ತೇವೆ.

13. ರಕ್ಷಣೆಯ ಸಂದೇಶವನ್ನು ಇತರರಿಗೆ ಹೇಳುವಂತೆ ಯಾವುದು ನಮ್ಮನ್ನು ಪ್ರೇರಿಸುತ್ತವೆ?

13 ಸಾರಲಿಕ್ಕಿರುವ ಇನ್ನೊಂದು ಕಾರಣವು, ನಮಗೆ ಜನರ ಮೇಲೆ ಪ್ರೀತಿ ಇದೆ ಮತ್ತು ನಾವು ರಕ್ತಾಪರಾಧದಿಂದ ದೂರವಿರಲು ಬಯಸುತ್ತೇವೆ. (ಯೆಹೆಜ್ಕೇಲ 33:8; ಮಾರ್ಕ 6:34) ಈ ಮೇಲಿನ ಕಾರಣವು ಪೌಲನ ಮಾತುಗಳಿಗೆ ಹೊಂದಿಕೆಯಲ್ಲಿದೆ. ಕ್ರೈಸ್ತ ಸಭೆಗೆ ಸೇರಿರದಂತಹ ಜನರ ಕುರಿತು ಮಾತಾಡುತ್ತಾ ಪೌಲನು ಹೀಗೆ ಹೇಳುತ್ತಾನೆ: “ಗ್ರೀಕರಿಗೂ ಇತರ ಜನಗಳಿಗೂ ಜ್ಞಾನಿಗಳಿಗೂ ಮೂಢರಿಗೂ ತೀರಿಸಬೇಕಾದ ಒಂದು ಋಣ ನನ್ನ ಮೇಲೆ ಅದೆ.” (ರೋಮಾಪುರ 1:14) ಸುವಾರ್ತೆಯನ್ನು ಇತರರಿಗೆ ಪ್ರಚುರಪಡಿಸುವ ಋಣ ತನಗಿದೆಯೆಂಬ ಅನಿಸಿಕೆ ಪೌಲನಿಗಿತ್ತು, ಯಾಕೆಂದರೆ “ಎಲ್ಲಾ ಮನುಷ್ಯರು ರಕ್ಷಣೆಯನ್ನು” ಹೊಂದಬೇಕೆಂಬುದು ದೇವರ ಚಿತ್ತವಾಗಿದೆ. (1 ತಿಮೊಥೆಯ 2:4) ಇಂದು, ನಮಗೂ ನಮ್ಮ ನೆರೆಯವನ ಕಡೆಗೆ ಅದೇ ರೀತಿಯ ಪ್ರೀತಿ ಮತ್ತು ಹಂಗಿನ ಭಾವನೆಯಿದೆ. ಮಾನವಕುಲದ ಮೇಲೆ ಯೆಹೋವನಿಗೆ ಪ್ರೀತಿಯಿರುವುದರಿಂದ, ತನ್ನ ಒಬ್ಬನೇ ಮಗನನ್ನು ನಮಗೋಸ್ಕರ ಸಾಯುವಂತೆ ಈ ಭೂಮಿಗೆ ಕಳುಹಿಸಿದನು. (ಯೋಹಾನ 3:16) ಅದೊಂದು ಮಹಾ ತ್ಯಾಗವಾಗಿತ್ತು. ಯೇಸುವಿನ ಯಜ್ಞದಿಂದಾಗಿ ಸಿಗುವ ರಕ್ಷಣೆಯ ಕುರಿತಾದ ಸುವಾರ್ತೆಯ ಕುರಿತು ಇತರರಿಗೆ ಸಾರುವುದಕ್ಕಾಗಿ ನಮ್ಮ ಸಮಯ ಮತ್ತು ಪ್ರಯತ್ನವನ್ನು ಉಪಯೋಗಿಸುವ ಮೂಲಕ ನಾವು ಯೆಹೋವನ ಪ್ರೀತಿಯನ್ನು ಅನುಕರಿಸುತ್ತೇವೆ.

14. ಕ್ರೈಸ್ತ ಸಭೆಯ ಹೊರಗಿರುವ ಜಗತ್ತನ್ನು ಬೈಬಲ್‌ ಹೇಗೆ ವರ್ಣಿಸುತ್ತದೆ?

14 ತಮ್ಮ ಜೊತೆ ಮಾನವರು, ಮುಂದೊಂದು ದಿನ ಕ್ರೈಸ್ತ ಸಹೋದರತ್ವದ ಸದಸ್ಯರಾಗುವ ಸಾಧ್ಯತೆಯಿದೆ ಎಂಬ ದೃಷ್ಟಿಕೋನವು ಯೆಹೋವನ ಸಾಕ್ಷಿಗಳಿಗೆ ಇದೆ. ನಾವು ಧೈರ್ಯದಿಂದ ಸಾರಲೇಬೇಕು, ಆದರೆ ನಮ್ಮ ಧೈರ್ಯವು ಜಗಳವಾಡುವ ಸ್ವಭಾವದ್ದಾಗಿರುವುದಿಲ್ಲ. ಸಾಮಾನ್ಯ ಜಗತ್ತಿನ ಕುರಿತು ಮಾತಾಡುವಾಗ ಬೈಬಲು ಬಲವಾದ ಪದಗಳನ್ನು ಉಪಯೋಗಿಸುತ್ತದೆ ಎಂಬುದು ನಿಜ. ಉದಾಹರಣೆಗೆ, “ಇಹಲೋಕಜ್ಞಾನ” ಮತ್ತು “ಲೋಕದ ಆಶೆಗಳ” ಕುರಿತಾಗಿ ತಿಳಿಸುತ್ತಿರುವಾಗ, ಪೌಲನು “ಲೋಕ” ಎಂಬ ಪದವನ್ನೇ ನಕಾರಾತ್ಮಕ ಅರ್ಥದಲ್ಲಿ ಉಪಯೋಗಿಸುತ್ತಾನೆ. (1 ಕೊರಿಂಥ 3:19; ತೀತ 2:12) ಎಫೆಸದ ಕ್ರೈಸ್ತರು “ಇಹಲೋಕಾಚಾರಕ್ಕೆ ಅನುಸಾರವಾಗಿ ನಡೆದು”ಕೊಳ್ಳುತ್ತಿದ್ದ ಸಮಯದಲ್ಲಿ ಆತ್ಮಿಕವಾಗಿ ‘ಸತ್ತವರಾಗಿದ್ದರು’ ಎಂಬುದನ್ನು ಸಹ ಪೌಲನು ಅವರಿಗೆ ನೆನಪು ಹುಟ್ಟಿಸಿದನು. (ಎಫೆಸ 2:1-3) ಈ ಹೇಳಿಕೆಗಳು ಮತ್ತು ಇಂತಹ ಇತರ ಮಾತುಗಳು ಅಪೊಸ್ತಲ ಯೋಹಾನನ ಈ ಮುಂದಿನ ಮಾತುಗಳೊಂದಿಗೆ ಸಹಮತದಲ್ಲಿವೆ: “ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.”—1 ಯೋಹಾನ 5:19.

15. ಕ್ರೈಸ್ತ ಸಭೆಗೆ ಸೇರಿರದಂತಹ ಕೆಲವರ ಕುರಿತು ನಾವು ಯಾವ ತೀರ್ಮಾನಕ್ಕೆ ಬರಬಾರದು, ಮತ್ತು ಏಕೆ?

15 ಹೀಗಿದ್ದರೂ, ಇಂತಹ ಮಾತುಗಳು ದೇವರಿಂದ ದೂರಸರಿದಿರುವ ಈ ಲೋಕವನ್ನು ಸೂಚಿಸುತ್ತದೆಯೇ ಹೊರತು ಒಬ್ಬೊಬ್ಬ ವ್ಯಕ್ತಿಗಳನ್ನಲ್ಲ ಎಂಬುದನ್ನು ಜ್ಞಾಪಕದಲ್ಲಿಡಿರಿ. ಯಾವುದೇ ವ್ಯಕ್ತಿಯು ಸಾರುವಿಕೆಯ ಕೆಲಸಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸುವನೆಂಬುದನ್ನು ಕ್ರೈಸ್ತರು ಮುಂದಾಗಿಯೇ ತೀರ್ಮಾನಿಸುವುದಿಲ್ಲ. ಯಾವುದೇ ರೀತಿಯ ವ್ಯಕ್ತಿಗಳನ್ನು ಆಡುಗಳೆಂದು ಕರೆಯಲು ಅವರಿಗೆ ಯಾವುದೇ ಆಧಾರವಿಲ್ಲ. ಇವರು ‘ಆಡುಗಳು’ ಮತ್ತು ಇವರು ‘ಕುರಿಗಳು’ ಎಂದು ವಿಂಗಡಿಸಲು ಯೇಸು ಬರುವಾಗ, ಅದರ ಫಲಿತಾಂಶವು ಏನಾಗಿರುವುದು ಎಂಬುದನ್ನು ಹೇಳುವುದು ನಮ್ಮ ಕೆಲಸವಲ್ಲ. (ಮತ್ತಾಯ 25:31-46) ನೇಮಿತ ನ್ಯಾಯಾಧೀಶರು ನಾವಲ್ಲ, ಬದಲಾಗಿ ಯೇಸುವೇ ಆಗಿದ್ದಾನೆ. ತುಂಬ ದುಷ್ಟರಾಗಿರುವ ಕೆಲವರು ಬೈಬಲಿನ ಸಂದೇಶವನ್ನು ಸ್ವೀಕರಿಸಿ, ಬದಲಾವಣೆಗಳನ್ನು ಮಾಡಿ, ಶುದ್ಧ ಜೀವನವನ್ನು ನಡೆಸುವ ಕ್ರೈಸ್ತರಾಗಿದ್ದಾರೆಂಬುದರ ಬಗ್ಗೆ ಅನೇಕ ಅನುಭವಗಳಿವೆ. ಆದುದರಿಂದ, ನಾವು ಇಂತಹವರೊಂದಿಗೆ ಸಹವಾಸವನ್ನು ಮಾಡಲು ಬಯಸದೇ ಇರುವುದಾದರೂ, ಅವಕಾಶ ಸಿಗುವಾಗಲೆಲ್ಲಾ ರಾಜ್ಯದ ನಿರೀಕ್ಷೆಯ ಕುರಿತು ಅಂತಹ ವ್ಯಕ್ತಿಗಳೊಂದಿಗೆ ಮಾತಾಡಲು ಹಿಂಜರಿಯಬಾರದು. ಅವಿಶ್ವಾಸಿಗಳಾಗಿರುವಾಗಲೂ, “ನಿತ್ಯಜೀವಕ್ಕೆ ಯೋಗ್ಯ ಪ್ರವೃತ್ತಿಯುಳ್ಳವರಾಗಿದ್ದ” (NW) ಕೆಲವು ವ್ಯಕ್ತಿಗಳ ಕುರಿತು ಶಾಸ್ತ್ರವಚನಗಳು ಮಾತಾಡುತ್ತವೆ. ಇವರು ಕ್ರಮೇಣವಾಗಿ ವಿಶ್ವಾಸಿಗಳಾದರು. (ಅ. ಕೃತ್ಯಗಳು 13:48) ನಾವು ಜನರಿಗೆ ಒಮ್ಮೆಯಾದರೂ ಅಥವಾ ಬಹುಶಃ ಅನೇಕ ಸಲ ಸಾಕ್ಷಿಯನ್ನು ಕೊಡುವ ತನಕ, ಯಾರು ಯೋಗ್ಯ ಪ್ರವೃತ್ತಿಯುಳ್ಳವರಾಗಿದ್ದಾರೆ ಎಂಬುದನ್ನು ಎಂದಿಗೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಇಷ್ಟರ ತನಕ ರಕ್ಷಣೆಯ ಸಂದೇಶವನ್ನು ಸ್ವೀಕರಿಸದೇ ಇರುವವರಲ್ಲಿ ಕೆಲವರು ಒಂದಲ್ಲ ಒಂದು ದಿನ ಜೀವದ ಸಂದೇಶಕ್ಕೆ ಪ್ರತಿಕ್ರಿಯೆಯನ್ನು ತೋರಿಸುವರೆಂಬ ನಿರೀಕ್ಷೆಯಿಂದ ನಾವು “ಶಾಂತಭಾವದಿಂದ” (NW) ಮತ್ತು “ಆಳವಾದ ಗೌರವದಿಂದ” ಅವರೊಂದಿಗೆ ವ್ಯವಹರಿಸಬೇಕಾಗಿದೆ.—2 ತಿಮೊಥೆಯ 2:25; 1 ಪೇತ್ರ 3:15.

16. ನಾವು “ಬೋಧಿಸುವ ಕಲೆ”ಯನ್ನು ವಿಕಸಿಸಿಕೊಳ್ಳಲು ಬಯಸುವ ಒಂದು ಕಾರಣವು ಯಾವುದು?

16 ಬೋಧಕರಾಗಲಿಕ್ಕಾಗಿ ನೈಪುಣ್ಯತೆಗಳನ್ನು ವಿಕಸಿಸಿಕೊಳ್ಳುವುದು ಸುವಾರ್ತೆಯನ್ನು ಪ್ರಚುರಪಡಿಸಲು ನಮಗಿರುವ ಅತ್ಯುತ್ಸಾಹವನ್ನು ಹೆಚ್ಚಿಸುವುದು. ಉದಾಹರಣೆಗೆ, ಒಂದು ಆಟ ಅಥವಾ ಸ್ಪರ್ಧೆಯು ಎಷ್ಟೇ ಆಸಕ್ತಿದಾಯಕವಾಗಿರುವುದಾದರೂ, ಆ ಆಟದ ಬಗ್ಗೆ ಏನೂ ಗೊತ್ತಿಲ್ಲದಂತಹ ಒಬ್ಬ ವ್ಯಕ್ತಿಗೆ ಅದು ಬೇಸರ ಹಿಡಿಸುವಂಥದ್ದಾಗಿರಬಹುದು. ಆದರೆ ಅದೇ ಆಟವನ್ನು ಚೆನ್ನಾಗಿ ಆಡಲು ತಿಳಿದಿರುವ ವ್ಯಕ್ತಿಯಾದರೋ ಆ ಆಟದಲ್ಲಿ ಆನಂದಿಸುತ್ತಾನೆ. ಅದೇ ರೀತಿಯಲ್ಲಿ, “ಬೋಧಿಸುವ ಕಲೆಯನ್ನು” (NW) ವಿಕಸಿಸಿಕೊಳ್ಳುವ ಕ್ರೈಸ್ತರು ಶುಶ್ರೂಷೆಯಲ್ಲಿ ಹೆಚ್ಚಿನ ಸಂತೋಷವನ್ನು ಕಂಡುಕೊಳ್ಳುವರು. (2 ತಿಮೊಥೆಯ 4:2; ತೀತ 1:9) ಪೌಲನು ತಿಮೊಥೆಯನಿಗೆ ಸಲಹೆ ಕೊಟ್ಟದ್ದು: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.” (2 ತಿಮೊಥೆಯ 2:15) ಬೋಧಿಸುವ ಕಲೆಯಲ್ಲಿ ನಾವು ಹೇಗೆ ನಿಪುಣತೆಯನ್ನು ಬೆಳೆಸಿಕೊಳ್ಳಬಹುದು?

17. ನಾವು ಬೈಬಲಿನ ಜ್ಞಾನಕ್ಕಾಗಿ ಹೇಗೆ ‘ಹಂಬಲವನ್ನು ಬೆಳೆಸಿಕೊಳ್ಳಬಲ್ಲೆವು,’ ಮತ್ತು ಇಂತಹ ಜ್ಞಾನವು ನಮ್ಮ ಶುಶ್ರೂಷೆಯಲ್ಲಿ ಹೇಗೆ ಪ್ರಯೋಜನವನ್ನು ತರುವುದು?

17 ಒಂದು ವಿಧಾನವು, ಹೆಚ್ಚೆಚ್ಚು ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದಾಗಿದೆ. ಅಪೊಸ್ತಲ ಪೇತ್ರನು ನಮ್ಮನ್ನು ಉತ್ತೇಜಿಸುವುದು: “ನವಜಾತ ಶಿಶುಗಳಂತೆ, ವಾಕ್ಯಕ್ಕೆ ಸೇರಿರುವ ಅಮಿಶ್ರಿತ ಹಾಲಿಗಾಗಿ ಹಂಬಲವನ್ನು ಬೆಳೆಸಿಕೊಳ್ಳಿರಿ, ಅದರ ಮೂಲಕ ನೀವು ರಕ್ಷಣೆಯ ಕಡೆಗೆ ಬೆಳೆಯಬಹುದು.” (1 ಪೇತ್ರ 2:2, NW) ಆರೋಗ್ಯದಿಂದಿರುವ ಒಂದು ಮಗು ಹಾಲಿಗಾಗಿ ಹಂಬಲಿಸುವುದು ಸಹಜ. ಆದರೆ ಒಬ್ಬ ಕ್ರೈಸ್ತನು ಬೈಬಲ್‌ ಜ್ಞಾನಕ್ಕಾಗಿ ‘ಹಂಬಲವನ್ನು ಬೆಳೆಸಿಕೊಳ್ಳುವ’ ಆವಶ್ಯಕತೆಯಿರಬಹುದು. ಈ ಹಂಬಲವನ್ನು ಒಳ್ಳೆಯ ಅಭ್ಯಾಸ ಮತ್ತು ವಾಚನದ ಹವ್ಯಾಸಗಳಿಂದ ಬೆಳೆಸಿಕೊಳ್ಳಸಾಧ್ಯವಿದೆ. (ಜ್ಞಾನೋಕ್ತಿ 2:1-6) ದೇವರ ವಾಕ್ಯದ ನಿಪುಣ ಬೋಧಕರಾಗಲು ಪ್ರಯತ್ನ ಮತ್ತು ಸ್ವ-ಶಿಸ್ತು ಆವಶ್ಯಕ. ಆದರೆ ಇಂತಹ ಪ್ರಯತ್ನಗಳನ್ನು ಮಾಡುವಾಗ ಪ್ರತಿಫಲಗಳು ಸಿಗುವುದಂತೂ ಖಂಡಿತ. ದೇವರ ವಾಕ್ಯವನ್ನು ಪರೀಕ್ಷಿಸುವುದರಿಂದ ಬರುವ ಆನಂದವು ನಾವು ದೇವರ ಆತ್ಮದೊಂದಿಗೆ ಹೆಚ್ಚು ಪ್ರಜ್ವಲಿಸುವಂತೆ ಮಾಡುತ್ತಾ, ಕಲಿಯುತ್ತಿರುವ ವಿಷಯಗಳನ್ನು ಇತರರಿಗೆ ಹಂಚುವುದರಲ್ಲಿ ಅತ್ಯುತ್ಸಾಹಿಗಳಾಗಿರುವಂತೆ ಮಾಡುವುದು.

18. ಸತ್ಯ ವಾಕ್ಯವನ್ನು ಸರಿಯಾಗಿ ಉಪದೇಶಿಸುವುದಕ್ಕೆ ಕ್ರೈಸ್ತ ಕೂಟಗಳು ನಮ್ಮನ್ನು ಹೇಗೆ ಸನ್ನದ್ಧಗೊಳಿಸಬಲ್ಲವು?

18 ದೇವರ ವಾಕ್ಯವನ್ನು ನಿಪುಣವಾಗಿ ಉಪಯೋಗಿಸಲು ಕ್ರೆಸ್ತ ಕೂಟಗಳು ಸಹ ನಮಗೆ ಬಹಳ ಸಹಾಯಮಾಡುತ್ತವೆ. ಬಹಿರಂಗ ಭಾಷಣಗಳಲ್ಲಿ ಮತ್ತು ಇತರ ಶಾಸ್ತ್ರೀಯ ಚರ್ಚೆಗಳಲ್ಲಿ ಬೈಬಲ್‌ ವಚನಗಳು ಓದಲ್ಪಡುವಾಗ, ನಾವು ನಮ್ಮ ಸ್ವಂತ ಬೈಬಲನ್ನು ತೆರೆದು ಆ ವಚನಗಳನ್ನು ಓದುವುದು ಒಳ್ಳೆಯದು. ಕೂಟದ ಭಾಗಗಳಿಗೆ, ಅದರಲ್ಲೂ ಮುಖ್ಯವಾಗಿ ನಮ್ಮ ಸಾರುವ ಕೆಲಸಕ್ಕೆ ಸಂಬಂಧಿಸಿದ ಭಾಗಗಳಿಗೆ ನಾವು ತುಂಬ ಗಮನವನ್ನು ಕೊಡುವುದು ವಿವೇಕಯುತವಾಗಿದೆ. ಪ್ರತ್ಯಕ್ಷಾಭಿನಯಗಳು ಅಷ್ಟೇನೂ ಮಹತ್ವಪೂರ್ಣವಲ್ಲವೆಂದು ನೆನಸುತ್ತಾ, ನಮ್ಮ ಗಮನವನ್ನು ಬೇರೆಲ್ಲೋ ತಿರುಗಿಸದಿರೋಣ. ಪುನಃ ಒಮ್ಮೆ ಇಲ್ಲಿಯೂ, ಸ್ವ-ಶಿಸ್ತು ಮತ್ತು ಏಕಾಗ್ರತೆಯು ಬೇಕಾಗಿದೆ. (1 ತಿಮೊಥೆಯ 4:16) ಕ್ರೈಸ್ತ ಕೂಟಗಳು ನಮ್ಮ ನಂಬಿಕೆಯನ್ನು ಕಟ್ಟುತ್ತವೆ, ದೇವರ ವಾಕ್ಯಕ್ಕಾಗಿ ಹಂಬಲವನ್ನು ಬೆಳೆಸಿಕೊಳ್ಳಲು ನಮಗೆ ಸಹಾಯಮಾಡುತ್ತವೆ ಮತ್ತು ಸುವಾರ್ತೆಯ ಅತ್ಯುತ್ಸಾಹಿ ಘೋಷಕರಾಗಲು ನಮ್ಮನ್ನು ತರಬೇತುಗೊಳಿಸುತ್ತವೆ.

ಯೆಹೋವನು ಬೆಂಬಲಿಸುತ್ತಾನೆ ಎಂಬ ಖಾತ್ರಿಯು ನಮಗಿದೆ

19. ಸಾರುವ ಕೆಲಸದಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದು ಯಾಕೆ ಪ್ರಾಮುಖ್ಯವಾಗಿದೆ?

19 ‘ಅತ್ಯಾಸಕ್ತರಾಗಿರುವ’ ಮತ್ತು ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಅತ್ಯುತ್ಸಾಹದಿಂದಿರುವ ಕ್ರೈಸ್ತರು ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸಲು ಪ್ರಯಾಸಪಡುತ್ತಾರೆ. (ಎಫೆಸ 5:15, 16) ನಿಜ, ಪ್ರತಿಯೊಬ್ಬರ ಸನ್ನಿವೇಶಗಳು ಬೇರೆ ಬೇರೆಯಾಗಿರುತ್ತವೆ ಮತ್ತು ಜೀವವನ್ನು ಸಂರಕ್ಷಿಸುವ ಈ ಕೆಲಸದಲ್ಲಿ ಎಲ್ಲರೂ ಒಂದೇ ಮಟ್ಟದಲ್ಲಿ ಸಮಯವನ್ನು ವ್ಯಯಿಸಲು ಸಾಧ್ಯವಿಲ್ಲ. (ಗಲಾತ್ಯ 6:4, 5) ಆದರೂ, ಸಾರುವ ಕೆಲಸದಲ್ಲಿ ನಾವು ಒಟ್ಟು ಎಷ್ಟು ಸಮಯವನ್ನು ಕಳೆಯುತ್ತೇವೆ ಎಂಬುದಕ್ಕಿಂತಲೂ, ನಮ್ಮ ನಿರೀಕ್ಷೆಯ ಕುರಿತು ನಾವು ಇತರರೊಂದಿಗೆ ಎಷ್ಟು ಬಾರಿ ಮಾತಾಡುತ್ತೇವೆ ಎಂಬುದು ಹೆಚ್ಚು ಪ್ರಾಮುಖ್ಯವಾಗಿದೆ. (2 ತಿಮೊಥೆಯ 4:1, 2) ನಾವು ಎಷ್ಟು ಹೆಚ್ಚು ಸಾರುತ್ತೇವೋ ಅಷ್ಟು ಹೆಚ್ಚು ಈ ಕೆಲಸದ ಪ್ರಾಮುಖ್ಯತೆಯನ್ನು ನಾವು ಗಣ್ಯಮಾಡುವೆವು. (ರೋಮಾಪುರ 10:14, 15) ನರಳುತ್ತಾ ಪ್ರಸವವೇದನೆಪಡುತ್ತಿರುವ ಹಾಗೂ ನಿರೀಕ್ಷಾಹೀನರಾದ ಯಥಾರ್ಥ ಜನರನ್ನು ನಾವು ಕ್ರಮವಾಗಿ ಸಂಪರ್ಕಿಸುವಾಗ, ನಮ್ಮ ಕನಿಕರ ಮತ್ತು ಸಹಾನುಭೂತಿಯು ಸಹ ಬೆಳೆಯುವುದು.—ಯೆಹೆಜ್ಕೇಲ 9:4; ರೋಮಾಪುರ 8:22.

20, 21. (ಎ) ನಮ್ಮ ಮುಂದೆ ಇನ್ನೂ ಯಾವ ಕೆಲಸವು ಇದೆ? (ಬಿ) ಯೆಹೋವನು ನಮ್ಮ ಪ್ರಯತ್ನಗಳನ್ನು ಹೇಗೆ ಬೆಂಬಲಿಸುತ್ತಿದ್ದಾನೆ?

20 ಯೆಹೋವನು ನಮ್ಮ ವಶಕ್ಕೆ ಸುವಾರ್ತೆಯನ್ನು ಕೊಟ್ಟಿದ್ದಾನೆ. ಯೆಹೋವನ ‘ಜೊತೆಕೆಲಸದವರಾಗಿ’ ನಮಗೆ ಆತನಿಂದ ಸಿಕ್ಕಿರುವ ಮೊದಲ ನೇಮಕ ಇದೇ ಆಗಿದೆ. (1 ಕೊರಿಂಥ 3:6-9) ದೇವರು ಕೊಟ್ಟಿರುವ ಈ ಜವಾಬ್ದಾರಿಯನ್ನು ಪೂರ್ಣ ಹೃದಯದೊಂದಿಗೆ, ನಮ್ಮ ಎಲ್ಲ ಸಾಮರ್ಥ್ಯವನ್ನು ಉಪಯೋಗಿಸಿ ನೆರವೇರಿಸಲು ನಾವು ಅತ್ಯುತ್ಸಾಹಿಗಳಾಗಿದ್ದೇವೆ. (ಮಾರ್ಕ 12:30; ರೋಮಾಪುರ 12:1) ಸತ್ಯಕ್ಕಾಗಿ ಹಸಿದಿರುವ ಅನೇಕ ಯೋಗ್ಯ ಪ್ರವೃತ್ತಿಯುಳ್ಳ ಜನರು ಇನ್ನೂ ಲೋಕದಲ್ಲಿ ಇದ್ದಾರೆ. ನಮಗಿನ್ನೂ ಮಾಡಲು ತುಂಬ ಕೆಲಸವಿದೆ. ಆದರೆ ನಾವು ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸಲಿಕ್ಕಾಗಿ ಯೆಹೋವನು ಖಂಡಿತವಾಗಿಯೂ ಬೆಂಬಲವನ್ನು ಕೊಡುವನೆಂಬ ಖಾತ್ರಿಯು ನಮಗಿರಬಲ್ಲದು.—2 ತಿಮೊಥೆಯ 4:5.

21 ಯೆಹೋವನು ನಮ್ಮ ಸಹಾಯಕ್ಕಾಗಿ ತನ್ನ ಆತ್ಮವನ್ನು ಕೊಡುತ್ತಾನೆ ಮತ್ತು ದೇವರ ವಾಕ್ಯವೆಂಬ ‘ಪವಿತ್ರಾತ್ಮದ ಕತ್ತಿಯಿಂದ’ ನಮ್ಮನ್ನು ಸನ್ನದ್ಧಗೊಳಿಸುತ್ತಾನೆ. ಈ ರೀತಿ ಆತನ ಸಹಾಯದೊಂದಿಗೆ, “ಸುವಾರ್ತಾಸತ್ಯಾರ್ಥವನ್ನು ಭಯವಿಲ್ಲದೆ ತಿಳಿಸುವದಕ್ಕೆ ಬೇಕಾದ ಮಾತನ್ನು” ಹೇಳಲು ನಾವು ನಮ್ಮ ಬಾಯನ್ನು ತೆರೆಯಬಲ್ಲೆವು. (ಎಫೆಸ 6:17-20) ಥೆಸಲೊನೀಕದಲ್ಲಿರುವ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: “ನಾವು ಸಾರಿದ ಸುವಾರ್ತೆಯು ನಿಮ್ಮಲ್ಲಿ ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಬಹು ನಿಶ್ಚಯದೊಡನೆಯೂ ಬಂತೆಂಬದನ್ನೂ ಬಲ್ಲೆವು.” ಇದೇ ಹೇಳಿಕೆಯು ನಮ್ಮ ವಿಷಯದಲ್ಲಿಯೂ ಸತ್ಯವಾಗಲಿ. (1 ಥೆಸಲೊನೀಕ 1:5) ಹೌದು, ನಾವು ಸುವಾರ್ತೆಯನ್ನು ಅತ್ಯುತ್ಸಾಹದಿಂದ ಪ್ರಚುರಪಡಿಸೋಣ!

ಒಂದು ಸಂಕ್ಷಿಪ್ತ ಪುನರ್ವಿಮರ್ಶೆ

• ಜೀವನದ ಚಿಂತೆಗಳ ಕಾರಣದಿಂದಾಗಿ, ಶುಶ್ರೂಷೆಯಲ್ಲಿನ ನಮ್ಮ ಹುರುಪಿಗೆ ಏನಾಗಬಲ್ಲದು?

• ಸುವಾರ್ತೆಯನ್ನು ಪ್ರಚುರಪಡಿಸುವ ನಮ್ಮ ಆಕಾಂಕ್ಷೆಯು ಯಾವ ವಿಧದಲ್ಲಿ ನಮ್ಮ ಹೃದಯಗಳಲ್ಲಿ “ಉರಿಯುವ ಬೆಂಕಿ”ಯಂತಿರಬೇಕು?

• ಶುಶ್ರೂಷೆಯ ಕಡೆಗೆ ಯಾವ ನಕಾರಾತ್ಮಕ ಮನೋಭಾವಗಳನ್ನು ನಾವು ತೊರೆಯಬೇಕು?

• ನಮ್ಮ ನಂಬಿಕೆಗಳನ್ನು ಹಂಚಿಕೊಳ್ಳದವರ ಕುರಿತಾಗಿ ನಮಗೆ ಸಾಮಾನ್ಯವಾಗಿ ಯಾವ ದೃಷ್ಟಿಕೋನವಿರಬೇಕು?

• ಸಾರುವ ಕೆಲಸದಲ್ಲಿ ನಮ್ಮ ಹುರುಪನ್ನು ಕಾಪಾಡಿಕೊಳ್ಳಲು ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರಗಳು]

ಕ್ರೈಸ್ತರು ಪೌಲನ ಮತ್ತು ಯೆರೆಮೀಯನ ಹುರುಪನ್ನು ಅನುಕರಿಸುತ್ತಾರೆ

[ಪುಟ 10ರಲ್ಲಿರುವ ಚಿತ್ರಗಳು]

ಶುಶ್ರೂಷೆಯಲ್ಲಿನ ನಮ್ಮ ಅತ್ಯುತ್ಸಾಹವು, ದೇವರ ಕಡೆಗೆ ಮತ್ತು ನೆರೆಯವರ ಕಡೆಗೆ ಪ್ರೀತಿಯಿಂದ ಪ್ರೇರಿಸಲ್ಪಟ್ಟಿದೆ