ಅನೈತಿಕ ಲೋಕದಲ್ಲಿ ಶೀಲವಂತರಾಗಿರುವುದು
ಅನೈತಿಕ ಲೋಕದಲ್ಲಿ ಶೀಲವಂತರಾಗಿರುವುದು
ಅವರಿಬ್ಬರೂ ಒಂದೇ ಕಡೆಯಲ್ಲಿ ಕೆಲಸಮಾಡುತ್ತಿದ್ದರು. ಅವನೋ ಕಪ್ಪು ಮೈಬಣ್ಣದ ಚೆಲುವ, ಅವಳಾದರೋ ಪ್ರತಿಭಾವಂತಳಾದ ಸುಂದರಿ. ಅವಳು, ಅವನ ಕುರಿತು ಹೆಚ್ಚು ಅಕ್ಕರೆಯುಳ್ಳವಳಾಗಿದ್ದಳು. ಅದಕ್ಕೆ ಮನಸೋತ ಅವನೋ ಮೆಚ್ಚುಗೆಯ ನುಡಿಗಳನ್ನು ಹೇಳುತ್ತಿದ್ದನು. ಅವರಿಬ್ಬರೂ ಪರಸ್ಪರರಿಗಾಗಿ ಉಡುಗೊರೆಗಳನ್ನು ತರುತ್ತಿದ್ದರು. ಹೀಗೆ ನೋಡನೋಡುತ್ತಿದ್ದಂತೆ, ಅವರಿಬ್ಬರು ಪ್ರೇಮಿಗಳಾದರು. ಅವಳಿಗಾಗಿ, ಅವನು ತನ್ನ ಹೆಂಡತಿಯನ್ನು ಸಹ ಬಿಟ್ಟುಬಿಟ್ಟನು. ಆದರೆ, ಅವಳೋ ಕೊನೆಯಲ್ಲಿ ತನ್ನ ಗಂಡನೊಂದಿಗೆ ಬಾಳಲು ನಿರ್ಧರಿಸಿದಳು ಹಾಗೂ ಪ್ರೇಮಿಯೊಂದಿಗಿದ್ದ ಸಂಬಂಧವನ್ನು ಮುರಿಯಲು ತೀರ್ಮಾನಿಸಿದಳು. ಆಗ, ಅವನು ಅರೆಮನಸ್ಸಿನಿಂದ ತನ್ನ ಹೆಂಡತಿಯ ಬಳಿಗೆ ಹಿಂದಿರುಗಲು ಪ್ರಯತ್ನಿಸಿದನು. ಆದರೆ, ನಿಜವಾದ ಪರಿತಾಪವಿಲ್ಲದ ಅವನಿಗೆ ತನ್ನ ವಿವಾಹವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅದರಲ್ಲಿ ಒಳಗೂಡಿದವರೆಲ್ಲರೂ ತಮ್ಮ ತಮ್ಮ ಜೀವನವನ್ನು ಮುಂದುವರೆಸಿಕೊಂಡು ಹೋದರಾದರೂ, ಮಾನಸಿಕವಾಗಿ ಅವರಾರಿಗೂ ಗಾಯವಾಗದೆ ಹೋಗಲಿಲ್ಲ.
ಶೀಲವಂತರಾಗಿರುವುದು ಒಂದು ಸದ್ಗುಣವಾಗಿದೆ ಎಂದು ಈ ಲೋಕವು ನೆನಸುವುದೇ ಇಲ್ಲ. ಏಕೆಂದರೆ, ಸುಖಾನುಭವಕ್ಕಾಗಿ ಜನರ ಕಟ್ಟುಪಾಡಿಲ್ಲದ ಬೆನ್ನಟ್ಟುವಿಕೆಯು ಇಂದು ಬಹಳ ಸರ್ವಸಾಮಾನ್ಯವಾಗಿಬಿಟ್ಟಿರುವಂತೆ ಕಾಣುತ್ತದೆ. ಇದರ ಕುರಿತು ದ ನ್ಯೂ ಎನ್‌ಸೈಕ್ಲೊಪೀಡಿಯಾ ಬ್ರಿಟ್ಯಾನಿಕ ಹೇಳುವುದು: “ವ್ಯಭಿಚಾರವು ಎಲ್ಲೆಡೆಯೂ ಇರುವಂತೆ ಕಾಣುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಅದು ಮದುವೆಯಷ್ಟೇ ಸರ್ವಸಾಧಾರಣವಾಗಿದೆ.”
ಆದರೆ, “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು” ಎಂದು ಯೆಹೋವ ದೇವರು ಬಯಸುತ್ತಾನೆ. (ಇಬ್ರಿಯ 13:4) ಶಾಸ್ತ್ರವಚನಗಳು ಹೇಳುವುದು: “ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು . . . ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:9, 10) ಆದ್ದರಿಂದ, ನಾವು ದೇವರ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ, ಈ ಅನೈತಿಕ ಲೋಕದಲ್ಲಿ ನೈತಿಕ ಶುದ್ಧತೆಯನ್ನು ಅಂದರೆ, ಶೀಲವನ್ನು ಕಾಪಾಡಿಕೊಳ್ಳಬೇಕು.
ಹಾಗಾದರೆ, ನಮ್ಮ ಸುತ್ತಮುತ್ತಲೂ ಇರುವ ಅಶ್ಲೀಲ ಪ್ರಭಾವಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಲ್ಲೆವು? ಈ ಪ್ರಶ್ನೆಗೆ ಉತ್ತರವನ್ನು, ಪ್ರಾಚೀನ ಇಸ್ರಾಯೇಲಿನ ಅರಸನಾದ ಸೊಲೊಮೋನನು ಬೈಬಲಿನ ಜ್ಞಾನೋಕ್ತಿ ಪುಸ್ತಕದ 5ನೇ ಅಧ್ಯಾಯದಲ್ಲಿ ನೀಡುತ್ತಾನೆ. ಅವನು ಏನು ಹೇಳಲಿದ್ದಾನೆಂಬುದನ್ನು ಪರೀಕ್ಷಿಸಿ ನೋಡೋಣ.
ಸುಬುದ್ಧಿಯು ನಿನ್ನನ್ನು ಕಾಪಾಡುವುದು
“ಕಂದಾ, ನನ್ನ ಜ್ಞಾನೋಪದೇಶವನ್ನು ಆಲಿಸು” ಎಂದು ಹೇಳುವ ಮೂಲಕ ಇಸ್ರಾಯೇಲಿನ ಅರಸನು ತನ್ನ ಬುದ್ಧಿಮಾತನ್ನು ಆರಂಭಿಸುತ್ತಾನೆ. ನಂತರ ಅವನು ಹೇಳುವುದು: “ನನ್ನ ವಿವೇಕಬೋಧೆಗೆ ಕಿವಿಗೊಡು. ಹೀಗಾದರೆ ನೀನು ಸುಬುದ್ಧಿಯನ್ನು ಕೈಗೊಳ್ಳುವಿ, ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಪಾಡುವವು.”—ಜ್ಞಾನೋಕ್ತಿ 5:1, 2.
ಅನೈತಿಕತೆಯಲ್ಲಿ ಒಳಗೂಡುವಂತೆ ಶೋಧನೆಗಳು ಬರುವಾಗ, ಅದನ್ನು ಎದುರಿಸಲು ನಮಗೆ ವಿವೇಕ ಮತ್ತು ವಿವೇಚನಾಶಕ್ತಿಯು ಬೇಕಾಗಿದೆ. ವಿವೇಕವು, ಶಾಸ್ತ್ರವಚನಗಳಿಂದ ಪಡೆದುಕೊಂಡಿರುವ ಜ್ಞಾನವನ್ನು ಕಾರ್ಯರೂಪಕ್ಕೆ ಹಾಕುವ ಸಾಮರ್ಥ್ಯವಾಗಿದೆ. ವಿವೇಚನಾಶಕ್ತಿಯು, ಸರಿ ಯಾವುದು ಮತ್ತು ತಪ್ಪು ಯಾವುದು ಎಂಬ ಬೇಧವನ್ನು ಮಾಡಿ, ಅದರಲ್ಲಿ ಸರಿಯಾದದ್ದನ್ನು ಆರಿಸಿಕೊಳ್ಳುವ ಸಾಮರ್ಥ್ಯವಾಗಿದೆ. ಹಾಗಾಗಿ, ನಮ್ಮ ಆಲೋಚನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ವಿವೇಕ ಹಾಗೂ ವಿವೇಚನಾಶಕ್ತಿಗೆ ನಾವು ಹೆಚ್ಚು ಗಮನಕೊಡುವಂತೆ ಪ್ರೇರೇಪಿಸಲಾಗಿದೆ. ಆದರೆ, ಅದನ್ನು ಹೇಗೆ ಮಾಡಬಹುದು? ಹೇಗೆಂದರೆ, ದೇವರ ವಾಕ್ಯವಾದ ಬೈಬಲನ್ನು ಓದುವಾಗ ಯಾವುದೇ ಒಂದು ವಿಷಯವನ್ನು ಯೆಹೋವನು ಹೇಗೆ ಮಾಡುತ್ತಾನೆ ಎಂಬುದನ್ನು ನಾವು ಗಮನಿಸಬೇಕು. ಎರಡನೆಯದಾಗಿ, ಆತನ ಚಿತ್ತ ಮತ್ತು ಉದ್ದೇಶಗಳಿಗೆ ನಾವು ಕಿವಿಗೊಡಬೇಕು. ಹೀಗೆ ಮಾಡುವ ಮೂಲಕ, ನಾವು ನಮ್ಮ ಆಲೋಚನಾ ರೀತಿಯನ್ನು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶಿಸುತ್ತಿರುವೆವು. ಈ ರೀತಿಯಾಗಿ ಗಳಿಸಿಕೊಂಡ ಆಲೋಚನಾ ಸಾಮರ್ಥ್ಯವು, ದೈವಿಕ ಜ್ಞಾನದೊಂದಿಗೆ ಹೊಂದಾಣಿಕೆಯಲ್ಲಿರುತ್ತದೆ. ಈ ಆಲೋಚನಾ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಪ್ರಯೋಗಿಸುವಲ್ಲಿ, ಅದು ಅನೈತಿಕ ಸೆಳೆತಗಳಿಂದ ನಮ್ಮನ್ನು ಕಾಪಾಡುವುದು.
ನಯವಾದ ಮಾತಿಗೆ ಮರುಳಾಗದಿರಿ
ಈ ಅನೈತಿಕ ಲೋಕದಲ್ಲಿ ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳಲು ಆಲೋಚನಾ ಸಾಮರ್ಥ್ಯವು ಪ್ರಾಮುಖ್ಯವಾಗಿದೆ. ಕಾರಣ, ಅನೈತಿಕ ಜ್ಞಾನೋಕ್ತಿ 5:3, 4.
ವ್ಯಕ್ತಿಯ ಮಾರ್ಗಗಳು ತುಂಬಾ ಮೋಡಿಮಾಡುವಂಥದ್ದಾಗಿವೆ. ಆದುದರಿಂದಲೇ ಸೊಲೊಮೋನನು ಹೀಗೆ ಎಚ್ಚರಿಸುತ್ತಾನೆ: “ಜಾರಸ್ತ್ರೀಯ [“ಪರಸ್ತ್ರೀಯ,” NW] ತುಟಿಗಳಲ್ಲಾದರೋ ಜೇನುಗರೆಯುವದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ. ಅವಳು ಕಡೆಯಲ್ಲಿ ವಿಷದಂತೆ ಕಹಿಯೂ ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು.”—ಈ ಜ್ಞಾನೋಕ್ತಿಯಲ್ಲಿ ಸ್ವೇಚ್ಛಾಚಾರದ ವ್ಯಕ್ತಿಯನ್ನು, “ಪರಸ್ತ್ರೀ” ಅಂದರೆ, ಒಬ್ಬ ವೇಶ್ಯೆಯಾಗಿ ವರ್ಣಿಸಲಾಗಿದೆ. * ಅವಳು, ತನ್ನ ಬಲಿಪಶುವನ್ನು ಮರುಳುಗೊಳಿಸುವುದಕ್ಕಾಗಿ ಆಡುವ ಮಾತುಗಳು ಜೇನಿನಂತೆ ಸಿಹಿಯೂ, ಆಲಿವ್ ಎಣ್ಣೆಗಿಂತಲೂ ನಯವೂ ಆಗಿರುತ್ತವೆ. ಇಂದು ಸಹ, ಹೆಚ್ಚಿನ ಅನೈತಿಕ ಸಂಬಂಧಗಳು ಈ ರೀತಿಯ ಸವಿಜೇನಿನಂಥ ನುಡಿಗಳಿಂದಲೇ ಆರಂಭವಾಗುವುದಿಲ್ಲವೇ? ಇದರ ಕುರಿತಾದ ಒಂದು ಉದಾಹರಣೆಯನ್ನು ಗಮನಿಸಿ. ಏಮೀ ಎಂಬ 27 ವರ್ಷದ ಆಕರ್ಷಕ ರೂಪುಳ್ಳ ಸೆಕ್ರೆಟರಿ ಹೇಳುವುದು: “ನಾನು ಕೆಲಸಮಾಡುತ್ತಿರುವ ಸ್ಥಳದಲ್ಲಿರುವ ಈ ವ್ಯಕ್ತಿ ಯಾವಾಗಲೂ ನನ್ನ ಹಿಂದೆ ಬಿದ್ದಿರುತ್ತಾನೆ. ಸಂದರ್ಭ ಸಿಕ್ಕಿದಾಗಲೆಲ್ಲಾ ಬಾಯಿ ತುಂಬ ಹೊಗಳುತ್ತಿರುತ್ತಾನೆ. ನಿಜ, ನಾವು ಬೇರೆಯವರ ಗಮನಕ್ಕೆ ಪಾತ್ರರಾಗಬೇಕೆಂದು ಬಯಸುವುದು ಸ್ವಾಭಾವಿಕವೇ. ಆದರೆ, ಅವನ ಕಣ್ಣೆಲ್ಲಾ ನನ್ನ ದೇಹ ಸೌಂದರ್ಯದ ಮೇಲೆಯೇ ಎಂದು ನನಗೆ ಚೆನ್ನಾಗಿ ಗೊತ್ತು. ಆದ್ದರಿಂದ, ಅವನು ಎಷ್ಟೇ ಪ್ರಯತ್ನಿಸಿದರು, ನಾನು ಅವನ ಮಾತಿಗೆ ಮರುಳಾಗಲಾರೆ.” ಸಾಮಾನ್ಯವಾಗಿ ಮೋಡಿಮಾಡುವವನು ಅಥವಾ ಮೋಡಿಮಾಡುವವಳ ಹೊಗಳುವ ಮಾತಿನ ಹಿಂದಿರುವ ಉದ್ದೇಶವೇನೆಂದು ಗೊತ್ತಿರದಿದ್ದರೆ, ನಾವು ಸುಲಭವಾಗಿ ಅವರ ಮೋಹದ ಬಲೆಯಲ್ಲಿ ಸಿಕ್ಕಿಬೀಳುವೆವು. ಹಾಗಾಗದಿರಲು, ನಾವು ನಮ್ಮ ಆಲೋಚನಾ ಸಾಮರ್ಥ್ಯವನ್ನು ಉಪಯೋಗಿಸಬೇಕು.
ಅನೈತಿಕತೆಯ ಪರಿಣಾಮಗಳು ವಿಷದಷ್ಟು ಕಹಿಯಾಗಿದ್ದು, ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗಿರುತ್ತವೆ. ಅಂದರೆ, ಹೆಚ್ಚು ವೇದನಾಮಯವೂ ಮರಣಕ್ಕೆ ನಡೆಸುವಂಥದ್ದೂ ಆಗಿದೆ. ಅನೇಕವೇಳೆ, ಈ ರೀತಿಯ ಸಡಿಲು ನಡತೆಯ ಪರಿಣಾಮಗಳಾವುವೆಂದರೆ, ಕ್ಷೋಭೆಗೊಂಡ ಮನಸ್ಸಾಕ್ಷಿ, ಅನಪೇಕ್ಷಿತ ಗರ್ಭಧಾರಣೆ ಅಥವಾ ರತಿರವಾನಿತ ರೋಗಗಳಾಗಿವೆ. ಇವು ನಿಜವಾಗಿಯೂ ಕಹಿ ಅನುಭವಗಳೇ. ಮತ್ತು ತನ್ನ ವಿವಾಹ ಪ್ರತಿಜ್ಞೆಗಳಿಗೆ ಅಪನಂಬಿಗಸ್ತನಾದ ವ್ಯಕ್ತಿಯ ನಡತೆಯಿಂದಾಗಿ ಮುಗ್ಧ ಸಂಗಾತಿಯು ಅನುಭವಿಸುವ ಹೇಳಲಾಗದ ಮಾನಸಿಕ ವೇದನೆಯ ಕುರಿತು ಸ್ವಲ್ಪ ಯೋಚಿಸಿನೋಡಿ. ಒಮ್ಮೆ ಮಾಡಿದ ದಾಂಪತ್ಯ ದ್ರೋಹವು ಜೀವನಪರ್ಯಂತ ಉಳಿಯುವಷ್ಟು ಆಳವಾದ ಗಾಯವನ್ನು ಉಂಟುಮಾಡಬಲ್ಲದು. ಹೌದು, ಅನೈತಿಕತೆಯು ನಿಜವಾಗಿಯೂ ಮನಸ್ಸನ್ನು ನೋಯಿಸುತ್ತದೆ.
ಸ್ವೇಚ್ಛಾಚಾರದ ಹೆಣ್ಣಿನ ಜೀವನಶೈಲಿಯ ಕುರಿತು ಸೊಲೊಮೋನನು ಮುಂದುವರಿಸುತ್ತಾ ಹೇಳುವುದು: “ಅವಳು ಮರಣದ ಕಡೆಗೆ ನಡೆಯುತ್ತಾ ಇಳಿದು ಹೋಗುವಳು, ಅವಳ ಹೆಜ್ಜೆಗಳು ಪಾತಾಳದ ದಾರಿಯನ್ನು ಹಿಡಿಯುವವು. ಅವಳ ನಡತೆಯು ಚಂಚಲವಾಗಿರುವದರಿಂದ ಅವಳು ಜೀವದ ಮಾರ್ಗವನ್ನು ವಿವೇಚಿಸಲಾರಳು, ಅದು ಅವಳಿಗೆ ಗೊತ್ತೇ ಇಲ್ಲ.” (ಜ್ಞಾನೋಕ್ತಿ 5:5, 6) ಅನೈತಿಕ ಸ್ತ್ರೀಯ ಜೀವನಮಾರ್ಗವು ಕೊನೆಯಲ್ಲಿ ಅವಳನ್ನು ಮರಣಕ್ಕೆ ನಡೆಸುತ್ತದೆ. ಅವಳ ಹೆಜ್ಜೆಗಳು ಪಾತಾಳಕ್ಕೆ ಅಂದರೆ, ಮಾನವರ ಸಾಮಾನ್ಯ ಸಮಾಧಿಗೆ ನಡೆಸುತ್ತದೆ. ವಿಶೇಷವಾಗಿ, ವ್ಯಾಪಕವಾಗಿ ಹರಡುತ್ತಿರುವ ಏಯ್ಡ್ಸ್‌ನಂತಹ ರತಿರವಾನಿತ ರೋಗಗಳನ್ನು ನೋಡುವಾಗ, ಈ ಮೇಲಿನ ಮಾತುಗಳು ಎಷ್ಟು ಸತ್ಯವೆಂದು ಅನ್ನಿಸುತ್ತದೆ! ಅವಳ ವಕ್ರವಾದ ಜೀವನ ಮಾರ್ಗವನ್ನು ಬೆನ್ನಟ್ಟಿಹೋಗುವವರಿಗೂ ಅವಳ ಗತಿಯೇ ಬರುವುದು.
ಹೃದಯದಾಳದ ಚಿಂತೆಯೊಂದಿಗೆ ಅರಸನು ಮೊರೆಯಿಡುವುದು: “ಹೀಗಿರಲು, ಮಗನೇ, ನನ್ನ ಕಡೆಗೆ ಕಿವಿಗೊಡು, ನನ್ನ ಮಾತುಗಳಿಂದ ತೊಲಗಬಾರದು. ನಿನ್ನ ಮಾರ್ಗವು ಅವಳಿಗೆ ದೂರವಾಗಿರಲಿ, ಅವಳ ಮನೆಬಾಗಿಲ ಹತ್ತಿರ ಹೋದೀಯೆ.”—ಜ್ಞಾನೋಕ್ತಿ 5:7, 8.
ಹಾಗಾಗಿ, ನಾವು ಅನೈತಿಕ ವ್ಯಕ್ತಿಗಳ ಪ್ರಭಾವದಿಂದ ಆದಷ್ಟು ದೂರವಿರಬೇಕಾಗಿದೆ. ಏಕೆಂದರೆ, ಅನೈತಿಕ ವ್ಯಕ್ತಿಗಳು ಕೀಳ್ಮಟ್ಟದ ಸಂಗೀತ, ಅಶ್ಲೀಲವಾದ ಕಾರ್ಯಕ್ರಮಗಳು ಅಥವಾ ಕಾಮಪ್ರಚೋದಕ ವಿಷಯಗಳನ್ನೊಳಗೊಂಡ ಪುಸ್ತಕಗಳು, ಚಿತ್ರಗಳು ಮತ್ತು ಕಂಪ್ಯೂಟರ್ ಕಾರ್ಯಕ್ರಮಗಳನ್ನು ರಚಿಸುವವರಾಗಿದ್ದಾರೆ. ಅಂಥವುಗಳನ್ನು ಕೇಳಿಸಿಕೊಳ್ಳುವ, ಓದುವ ಅಥವಾ ನೋಡುವ ಮೂಲಕ ಅವರ ಕುಟಿಲವಾದ ಮಾರ್ಗಗಳಿಗೆ ನಮ್ಮನ್ನು ನಾವು ಯಾಕೆ ಒಡ್ಡಿಕೊಳ್ಳಬೇಕು? (ಜ್ಞಾನೋಕ್ತಿ 6:27; 1 ಕೊರಿಂಥ 15:33; ಎಫೆಸ 5:3-5) ನಾವು ಧರಿಸುವ ಬಟ್ಟೆ, ಕೇಶಾಲಂಕಾರ ಇಲ್ಲವೇ ವಿನೋದಕ್ಕಾಗಿ ಚೆಲ್ಲಾಟವಾಡುವ ಮೂಲಕ ಅಂಥವರ ಗಮನವನ್ನು ಸೆಳೆಯುವುದು ಎಂಥ ಮೂರ್ಖತನವಾಗಿರುವುದು!—1 ತಿಮೊಥೆಯ 4:8; 1 ಪೇತ್ರ 3:3, 4.
ಭಾರೀ ಬೆಲೆಯನ್ನು ತೆರಬೇಕಾಗಿರುತ್ತದೆ
ಇನ್ಯಾವ ಕಾರಣಗಳಿಗಾಗಿ ನಾವು ಸ್ವೇಚ್ಛಾಚಾರಿಯ ಮಾರ್ಗಗಳಿಂದ ಆದಷ್ಟು ದೂರವಿರಬೇಕು? ಸೊಲೊಮೋನನು ಉತ್ತರಿಸುವುದು: ‘ನೋಡಿಕೋ, ನಿನ್ನ ಪುರುಷತ್ವವು [“ಘನತೆಯು,” NW] ಪರಾಧೀನವಾದೀತು, ನಿನ್ನ ಆಯುಷ್ಯವು ಕ್ರೂರರ ವಶವಾದೀತು. ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳುವರು, ನೀನು ಅನ್ಯನ ಮನೆಯಲ್ಲಿ ದುಡಿಯುವಿ. ಕಟ್ಟಕಡೆಗೆ ನಿನ್ನ ದೇಹವೆಲ್ಲಾ ಕ್ಷೀಣವಾಗಿ ನೀನು ಅಂಗಲಾಚುವಿ.’—ಜ್ಞಾನೋಕ್ತಿ 5:9-11.
ಹೀಗೆ, ಸೊಲೊಮೋನನು ಅನೈತಿಕತೆಗೆ ಬಲಿಯಾಗುವುದರಿಂದ ತೆರಬೇಕಾದ ಭಾರಿ ಬೆಲೆಯನ್ನು ಎತ್ತಿತೋರಿಸುತ್ತಾನೆ. ಒಬ್ಬನು ವ್ಯಭಿಚಾರವನ್ನು ಮಾಡುವಾಗ, ತನ್ನ ಘನತೆ ಅಥವಾ ಸ್ವಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಲೈಂಗಿಕ ತೃಷೆಗಾಗಿ ಅಥವಾ ಯಾರೋ ಒಬ್ಬ ವ್ಯಕ್ತಿಯ ಲೈಂಗಿಕ ತೃಷೆಯನ್ನು ತಣಿಸುವುದಕ್ಕಾಗಿ ಕೇವಲ ನಾವು ಒಂದು ಸಾಧನವಾಗಿರುವುದು ವಾಸ್ತವದಲ್ಲಿ ನಾಚಿಕೆಗೇಡಿನ ಕೃತ್ಯವಲ್ಲವೇ? ನಾವು ವಿವಾಹವಾಗಿರದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಳ್ಳುವಾಗ, ಅದು ನಾಚಿಕೆಗೇಡಿತನವನ್ನು ತೋರಿಸುವುದಿಲ್ಲವೋ?
ಆದರೆ, ‘ನಮ್ಮ ಆಯುಷ್ಯ, ಸಂಪತ್ತು, ದುಡಿಮೆಯ ಫಲ ಇವೆಲ್ಲವೂ ಪರರ ಅಥವಾ ಅನ್ಯರ ವಶವಾಗುವುದು’ ಎಂದರೇನು? ಇದರ ಕುರಿತು ಒಂದು ಕೃತಿಯು ಹೇಳುವುದೇನೆಂದರೆ, “ಈ ವಚನಗಳ ಮುಖ್ಯಾಂಶವು ಸ್ಪಷ್ಟವಾಗಿದೆ: ದಾಂಪತ್ಯ ದ್ರೋಹಕ್ಕಾಗಿ ತೆರಬೇಕಾದ ಬೆಲೆಯು ದುಬಾರಿಯಾಗಿರಬಹುದು; ಒಬ್ಬನ ದುಡಿಮೆಯೆಲ್ಲಾ ಅಂದರೆ ಅವನ ಅಧಿಕಾರ, ಅಂತಸ್ತು, ಸಂಪತ್ತು ಇವುಗಳೆಲ್ಲವೂ ವಂಚಕಿ ಹೆಣ್ಣಿನ ದುರಾಸೆಗೆ ವಶವಾಗಬಹುದು ಅಥವಾ ಸಮಾಜಕ್ಕೆ ನಷ್ಟಪರಿಹಾರವನ್ನು ಕೊಡುವ
ಮೂಲಕ ಎಲ್ಲವನ್ನೂ ಕಳೆದುಕೊಳ್ಳಬಹುದು.” ನಿಜವಾಗಿಯೂ, ಅನೈತಿಕ ಸಂಬಂಧಗಳು ಭಾರೀ ದುಬಾರಿಯಾಗಿವೆ!ತನ್ನ ಮಾನಮರ್ಯಾದೆಯನ್ನಲ್ಲದೆ, ಇದ್ದಬದ್ದ ಆಸ್ತಿಪಾಸ್ತಿಯನ್ನೆಲ್ಲಾ ಕಳೆದುಕೊಂಡು ದಿವಾಳಿಯಾದ ಒಬ್ಬ ಶತಮೂರ್ಖನು ಈ ರೀತಿಯಲ್ಲಿ ಪರಿತಪಿಸುವನು: “ಅಯ್ಯೋ, ನಾನು ಸದುಪದೇಶವನ್ನು ಎಷ್ಟು ದ್ವೇಷಿಸಿದೆ, ನನ್ನ ಹೃದಯವು ಬುದ್ಧಿವಾದವನ್ನು ಎಷ್ಟು ತಾತ್ಸಾರಮಾಡಿತು, ನನ್ನ ಬೋಧಕರ ಮಾತನ್ನು ಕೇಳದೆ ಹೋದೆನಲ್ಲಾ, ನನ್ನ ಉಪದೇಶಕರ ಕಡೆಗೆ ಕಿವಿಗೊಡಲಿಲ್ಲವಲ್ಲಾ! ನಾನು ಮಹಾಜನಸಭೆಯ ನಡುವೆ ಎಲ್ಲಾ ಕೇಡಿಗೂ ಸಿಕ್ಕಿಕೊಳ್ಳುವ ಹಾಗೆ ಆದೆನು.”—ಜ್ಞಾನೋಕ್ತಿ 5:12-14.
ಎಲ್ಲಾ ಮುಗಿದ ಮೇಲೆ, ತಪ್ಪು ಮಾಡಿದವನು, “ಓಹ್! ನಾನು ನನ್ನ ತಂದೆಯ ಮಾತನ್ನು ‘ಕೇಳಿದ್ದಿದ್ದರೇ’, ನಾನು ನನ್ನ ಸ್ವಂತ ಇಚ್ಛೆಯಂತೆ ನಡೆಯದಿದ್ದಿದ್ದರೇ, ನಾನು ಬೇರೆಯವರ ಬುದ್ಧಿಮಾತನ್ನು ಕೇಳಿದ್ದಿದ್ದರೇ ಎಂದು ಪರಿತಪಿಸುತ್ತಾ, ಹೀಗೆ ಮಾಡಿದ್ದಿದ್ದರೆ ಚೆನ್ನಾಗಿರುತ್ತಿತ್ತು ಅಥವಾ ಹಾಗೆ ಮಾಡಿದ್ದಿದ್ದರೆ ಚೆನ್ನಾಗಿರುತಿತ್ತು ಎಂದು, ಆಗ ಒಂದೇ ರಾಗವನ್ನು ಹಾಡಲು ಶುರುಮಾಡುತ್ತಾನೆ” ಎಂದು ಒಬ್ಬ ವಿದ್ವಾಂಸರು ಹೇಳುತ್ತಾರೆ. ಆದರೆ, ಈ ಅರಿವು ಬಹಳ ತಡವಾಗಿದೆ. ಏಕೆಂದರೆ, ಈಗಾಗಲೇ ವ್ಯಭಿಚಾರವನ್ನು ಮಾಡಿರುವ ವ್ಯಕ್ತಿಯು ಜೀವನವನ್ನು ಹಾಳುಮಾಡಿಕೊಂಡಿರುತ್ತಾನೆ ಹಾಗೂ ಅವನ ಮರ್ಯಾದೆ ಮಣ್ಣುಪಾಲಾಗಿರುತ್ತದೆ. ಆದ್ದರಿಂದ, ಅನೈತಿಕ ಜೀವನಶೈಲಿಯಲ್ಲಿ ಧುಮುಕುವುದಕ್ಕೆ ಮುಂಚೆ, ಅದಕ್ಕಾಗಿ ನಾವು ತೆರಬೇಕಾದ ಭಾರೀ ಬೆಲೆಯನ್ನು ಲೆಕ್ಕಹಾಕುವುದು ಎಷ್ಟೊಂದು ಪ್ರಾಮುಖ್ಯವಾಗಿದೆ!
“ಸ್ವಂತ ಕೊಳದ ನೀರನ್ನು . . . ಮಾತ್ರ ಕುಡಿ”
ಲೈಂಗಿಕ ಸಂಬಂಧಗಳ ಕುರಿತು ಬೈಬಲ್ ಮುಚ್ಚುಮರೆ ಮಾಡಿ ಹೇಳುತ್ತದೋ? ಇಲ್ಲವೇ ಇಲ್ಲ. ಗಂಡು ಮತ್ತು ಹೆಣ್ಣು ಅನುಭವಿಸುವ ಪ್ರಣಯಾತ್ಮಕ ಪ್ರೇಮ ಮತ್ತು ಆನಂದ ಪರವಶತೆಯು ದೇವರ ಕೊಡುಗೆಯಾಗಿದೆ. ಆದರೆ, ಈ ರೀತಿಯ ಆಪ್ತತೆಯನ್ನು ಮದುವೆಯಾದವರು ಮಾತ್ರ ಅನುಭವಿಸತಕ್ಕದ್ದು. ಆದುದರಿಂದ, ಮದುವೆಯಾದ ಪುರುಷನಿಗೆ ಸೊಲೊಮೋನನು ಈ ಪ್ರೋತ್ಸಾಹನೆಯನ್ನು ಕೊಡುತ್ತಾನೆ: “ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ. ನಿನ್ನ ಒರತೆಗಳು ಬೈಲಿನಲ್ಲಿಯೂ ನಿನ್ನ ಕಾಲಿವೆಗಳು ಚೌಕದಲ್ಲಿಯೂ ಹರಡಿ ಹರಿಯುವದು ವಿಹಿತವೇ? ಅವು ನಿನಗೊಬ್ಬನಿಗೋಸ್ಕರವೇ ಹರಿಯಲಿ, ಪರರು ನಿನ್ನೊಂದಿಗೆ ಸೇರಿ ಕುಡಿಯಬಾರದು.”—ಜ್ಞಾನೋಕ್ತಿ 5:15-17.
“ನಿನ್ನ ಸ್ವಂತ ಕೊಳ” ಹಾಗೂ “ಸ್ವಂತ ಬಾವಿ” ಎಂಬ ಅಭಿವ್ಯಕ್ತಿಗಳು, ಒಲವಿನ ಪತ್ನಿಗಾಗಿರುವ ಕಾವ್ಯಾತ್ಮಕ ವರ್ಣನೆಗಳಾಗಿವೆ. ಅವಳೊಂದಿಗೆ ಅನುಭವಿಸುವ ಲೈಂಗಿಕ ಸುಖವನ್ನು, ಉಕ್ಕಿ ಬರುವ ತಂಪಾದ ನೀರನ್ನು ಕುಡಿಯುವುದಕ್ಕೆ ಹೋಲಿಸಲಾಗಿದೆ. ಅದು ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ನೀರಿನಂತಿರದೆ, ಖಾಸಗಿ ಸ್ವತ್ತಾಗಿರುವ ಕೊಳ ಅಥವಾ ಬಾವಿಯ ನೀರಿನಂತಿರುತ್ತದೆ. ಅದೇ ರೀತಿಯಲ್ಲಿ, ಒಬ್ಬ ಪುರುಷನು ತನ್ನ ಹೆಂಡತಿಯೊಂದಿಗೆ ಕೂಡಿ ಮಕ್ಕಳನ್ನು ಹುಟ್ಟಿಸಬೇಕೇ ವಿನಹಃ ಪರಸ್ತ್ರೀಯರಲ್ಲಿ ತನ್ನ ವಂಶಾಭಿವೃದ್ಧಿಯನ್ನು ಮಾಡಬಾರದು ಎಂದು ಬುದ್ಧಿಹೇಳಲಾಗಿದೆ. ಆದುದರಿಂದ, ತನ್ನ ಹೆಂಡತಿಗೆ ನಂಬಿಗಸ್ತನಾಗಿರಬೇಕು ಎಂಬುದೇ ಒಬ್ಬ ಪುರುಷನಿಗೆ ಕೊಡಲಾಗಿರುವ ಬುದ್ಧಿವಾದವಾಗಿದೆ.
ಜ್ಞಾನಿಯಾದ ಸೊಲೊಮೋನನು ಮುಂದುವರಿಸುವುದು: “ನಿನ್ನ ಬುಗ್ಗೆಯು [ದೇವರ] ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. ಆಕೆ ಮನೋಹರವಾದ ಜಿಂಕೆಯಂತೆಯೂ ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ; ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರ ಲೀನವಾಗಿರು.”—ಜ್ಞಾನೋಕ್ತಿ 5:18, 19.
“ಬುಗ್ಗೆ” ಅಥವಾ ಚಿಲುಮೆಯು ಲೈಂಗಿಕ ತೃಪ್ತಿಯನ್ನು ಹೊಂದುವ ಮೂಲಕ್ಕೆ ಸೂಚಿಸುತ್ತದೆ. ಹೆಂಡತಿಯೊಂದಿಗೆ ಸಿಗುವ ಸುಖವು ದೇವರು ಕೊಟ್ಟಿರುವ ‘ಆಶೀರ್ವಾದವಾಗಿದೆ.’ ಆದುದರಿಂದಲೇ, ಒಬ್ಬನು ತನ್ನ ಯೌವನಕಾಲದ ಹೆಂಡತಿಯಲ್ಲಿ ಆನಂದಿಸುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದಾನೆ. ಅವಳು, ಅವನಿಗೆ ಮುದ್ದಾದ ಹೆಣ್ಣು ಜಿಂಕೆಯಂತೆಯೂ, ಮನೋಹರವಾದ ಅಂದದ ದುಪ್ಪಿಯಂತೆಯೂ ಇರುತ್ತಾಳೆ.
ನಂತರ ಸೊಲೊಮೋನನು ಎರಡು ಅಲಂಕಾರಿಕ ಪ್ರಶ್ನೆಗಳನ್ನು ಮುಂದಿಡುತ್ತಾನೆ. ಅದೇನೆಂದರೆ, “ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವದೇಕೆ?” (ಜ್ಞಾನೋಕ್ತಿ 5:20) ಹೌದು, ಮದುವೆಯಾದವರು, ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿರುವ ಬೇರೆ ವ್ಯಕ್ತಿಗಳೊಂದಿಗೆ ದೇಹಸುಖವನ್ನು ಯಾಕೆ ಬಯಸಬೇಕು?
ಅಪೊಸ್ತಲ ಪೌಲನು ಮದುವೆಯಾದ ಕ್ರೈಸ್ತರಿಗೆ ಈ ಬುದ್ಧಿವಾದವನ್ನು ನೀಡುತ್ತಾನೆ: “ಸಹೋದರರೇ, ನಾನು ಹೇಳುವದೇನಂದರೆ—ಸಮಯವು ಸಂಕೋಚವಾದದ್ದರಿಂದ ಇನ್ನು 1 ಕೊರಿಂಥ 7:29) ಇದರ ಅರ್ಥವೇನಾಗಿದೆ? ಯೇಸುಕ್ರಿಸ್ತನ ಹಿಂಬಾಲಕರು, ‘ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುತ್ತಿರಬೇಕಾಗಿದೆ.’ (ಮತ್ತಾಯ 6:33) ಆದುದರಿಂದ, ವಿವಾಹಿತ ದಂಪತಿಗಳು ಪರಸ್ಪರರಲ್ಲೇ ಮೈಮರೆತುಹೋಗದೆ, ತಮ್ಮ ಜೀವನದಲ್ಲಿ ರಾಜ್ಯದ ಅಭಿರುಚಿಗಳಿಗೆ ಮೊದಲನೇ ಸ್ಥಾನವನ್ನು ಕೊಡುತ್ತಾರೆ.
ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ . . . ಇರಬೇಕು.” (ಆತ್ಮಸಂಯಮದ ಅಗತ್ಯ
ಲೈಂಗಿಕ ತೃಷೆಯನ್ನು ಹತೋಟಿಯಲ್ಲಿಡಬಹುದು. ಆದ್ದರಿಂದ, ಯೆಹೋವನ ಅಂಗೀಕಾರವನ್ನು ಪಡೆಯಲು ಇಚ್ಚಿಸುವವರೆಲ್ಲರೂ ಅದನ್ನು ಖಂಡಿತವಾಗಿಯೂ ಹತೋಟಿಯಲ್ಲಿ ಇಡಬೇಕು. “ದೇವರ ಚಿತ್ತವೇನಂದರೆ ನೀವು ಶುದ್ಧರಾಗಿರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು. ದೇವರನ್ನರಿಯದ ಅನ್ಯಜನಗಳಂತೆ ಕಾಮಾಭಿಲಾಷೆಗೆ ಒಳಪಡದೆ ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಧರ್ಮಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು.”—1 ಥೆಸಲೊನೀಕ 4:3, 4.
ಹೀಗಿರುವುದರಿಂದ, ಲೈಂಗಿಕ ಇಚ್ಛೆಗಳು ಮನಸ್ಸಿನಲ್ಲಿ ಏಳುವುದನ್ನು ಅರಿತಾಕ್ಷಣ ಯುವಜನರು ಮದುವೆಯಾಗಬೇಕೆಂಬ ತೀರ್ಮಾನಕ್ಕೆ ಬರಬಾರದು. ಏಕೆಂದರೆ, ಮದುವೆಯಾಗುವವರು ಒಬ್ಬರಿಗೊಬ್ಬರು ಬದ್ಧರಾಗಿರಬೇಕು. ಮತ್ತು ಅಂಥ ಒಂದು ಜವಾಬ್ದಾರಿಯನ್ನು ಹೊರಲು ಪ್ರೌಢತೆಯು ಬೇಕಾಗಿದೆ. (ಆದಿಕಾಂಡ 2:24) ಆದ್ದರಿಂದ, ಒಬ್ಬನು ಲೈಂಗಿಕ ಇಚ್ಛೆಗಳು ಹೆಚ್ಚು ಬಲವಾಗಿರುವ ‘ಪ್ರಾಯ ಕಳೆಯುವವರೆಗೂ’ ಕಾಯುವುದು ಉತ್ತಮ. ಏಕೆಂದರೆ, ಆ ಸಮಯದಲ್ಲಿ ಲೈಂಗಿಕ ಇಚ್ಛೆಗಳು ಒಬ್ಬನ ವಿವೇಚನೆಯನ್ನು ಮಂಕುಮಾಡುವುವು. (1 ಕೊರಿಂಥ 7:36) ಮತ್ತು ಮದುವೆಯಾಗಲು ಬಯಸುವ ಒಬ್ಬ ವ್ಯಕ್ತಿಯು ತನಗೆ ತಕ್ಕ ಸಂಗಾತಿಯು ಸಿಗಲಿಲ್ಲವೆಂದ ಮಾತ್ರಕ್ಕೆ, ಅನೈತಿಕ ಕ್ರಿಯೆಗಳಲ್ಲಿ ಒಳಗೂಡುವುದು ಎಂಥ ಮೂರ್ಖತನವೂ ಪಾಪವೂ ಆಗಿರುತ್ತದೆ!
“ದುಷ್ಟನ ದುಷ್ಕೃತ್ಯಗಳೇ ಅವನನ್ನು ಆಕ್ರಮಿಸುವವು”
ಅನೈತಿಕ ಸಂಬಂಧವು ತಪ್ಪಾಗಿದೆ. ಅದಕ್ಕೆ ಒಂದು ಮೂಲಭೂತ ಕಾರಣವೇನೆಂದರೆ, ಮಾನವರಿಗೆ ಜೀವವನ್ನೂ ಲೈಂಗಿಕ ಸಾಮರ್ಥ್ಯವನ್ನೂ ಅನುಗ್ರಹಿಸಿರುವ ಯೆಹೋವ ದೇವರು ಅಂಥ ಕೃತ್ಯವನ್ನು ಸಮ್ಮತಿಸದಿರುವುದೇ ಆಗಿದೆ. ಶೀಲವಂತರಾಗಿರುವುದಕ್ಕೆ ಒಂದು ಬಲವಾದ ಕಾರಣವನ್ನು ಅರಸನಾದ ಸೊಲೊಮೋನನು ಕೊಡುತ್ತಾನೆ: “ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ, ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ.” (ಜ್ಞಾನೋಕ್ತಿ 5:21) ಹೌದು, ನಾವು ಯಾರಿಗೆ “ಲೆಕ್ಕ ಒಪ್ಪಿಸಬೇಕಾಗಿದೆಯೋ” ಆ ದೇವರ ಕಣ್ಣಿಗೆ ಮರೆಯಾದುದು ಯಾವುದೂ ಇಲ್ಲ. (ಇಬ್ರಿಯ 4:13) ಯಾವುದೇ ರೀತಿಯ ಲೈಂಗಿಕ ಅಶುದ್ಧತೆಯು, ಅದು ಎಷ್ಟೇ ಗುಟ್ಟಾಗಿದ್ದರೂ, ಮತ್ತು ಅದರಿಂದ ಯಾವುದೇ ರೀತಿಯ ಶಾರೀರಿಕ ಹಾಗೂ ಸಾಮಾಜಿಕ ಪರಿಣಾಮಗಳಿರಬಹುದಾದರೂ, ಅದು ಯೆಹೋವನೊಂದಿಗಿರುವ ನಮ್ಮ ಸಂಬಂಧವನ್ನು ಖಂಡಿತವಾಗಿಯೂ ಬಾಧಿಸುವುದು. ಕೆಲವು ಕ್ಷಣಗಳ ನಿಷಿದ್ಧ ಸುಖಕ್ಕಾಗಿ ದೇವರೊಂದಿಗಿರುವ ಸಂಬಂಧವನ್ನು ಕಳೆದುಕೊಳ್ಳುವುದು ಎಂಥ ಮೂರ್ಖತನವಾಗಿರುವುದು!
ಸ್ವಲ್ಪವೂ ನಾಚಿಕೆಯಿಲ್ಲದೆ ಅನೈತಿಕ ಕ್ರಿಯೆಗಳಲ್ಲಿ ಒಳಗೂಡಿರುವವರು ಈಗ ಯಾವುದೇ ತೊಂದರೆಯನ್ನು ಅನುಭವಿಸದೇ ಇರುವಂತೆ ತೋರಬಹುದು. ಆದರೆ, ಅದು ಬಹಳ ಕಾಲ ಮುಂದುವರಿಯಲು ಸಾಧ್ಯವಿಲ್ಲ. ಅದಕ್ಕೆ ಕಾರಣವೇನೆಂದು ಸೊಲೊಮೋನನು ಹೇಳುತ್ತಾನೆ: “ದುಷ್ಟನ ದುಷ್ಕೃತ್ಯಗಳೇ ಅವನನ್ನು ಆಕ್ರಮಿಸುವವು, ಅವನ ಪಾಪಪಾಶಗಳೇ ಅವನನ್ನು ಬಂಧಿಸುವವು. ಸದುಪದೇಶದ ಕೊರತೆಯಿಂದಲೇ ಸಾಯುವನು, ತನ್ನ ಅತಿಮೂರ್ಖತನದಿಂದ ಭ್ರಾಂತನಾಗುವನು.”—ಜ್ಞಾನೋಕ್ತಿ 5:22, 23.
ಆದುದರಿಂದ, ನಮ್ಮಲ್ಲಿ ಯಾರೊಬ್ಬರು ಏಕೆ ದಾರಿತಪ್ಪಿಹೋಗಬೇಕು? ಎಷ್ಟೇ ಆದರೂ, ಜಗತ್ತಿನ ದುಷ್ಪ್ರೇರಕವಾದ ಮಾರ್ಗಗಳ ಕುರಿತು ಜ್ಞಾನೋಕ್ತಿಯ ಪುಸ್ತಕವು ನಮಗೆ ಮುಂಚಿತವಾಗಿಯೇ ಎಚ್ಚರಿಕೆಯನ್ನು ನೀಡುತ್ತದೆ ಅಲ್ಲವೇ. ಅಷ್ಟುಮಾತ್ರವಲ್ಲ, ಸಾಮಾನ್ಯವಾಗಿ ಲೈಂಗಿಕ ಅನೈತಿಕತೆಗಾಗಿ, ನಾವು ನಮ್ಮ ಆರೋಗ್ಯ, ಆಸ್ತಿಪಾಸ್ತಿ, ಶಕ್ತಿ, ಘನತೆಯನ್ನು ಕಳೆದುಕೊಳ್ಳುವಂಥ ಭಾರೀ ಬೆಲೆಯನ್ನು ತೆರಬೇಕಾಗಿರುವುದನ್ನು ಸಹ ಅದು ನಮಗೆ ತಿಳಿಸುತ್ತದೆ. ಈ ಎಲ್ಲಾ ಪರಿಣಾಮಗಳ ಸ್ಪಷ್ಟ ಮುನ್ನರಿವು ನಮಗಿರುವುದರಿಂದ, ಮಾತನ್ನು “ಕೇಳಿದ್ದಿದ್ದರೇ” ಎಂಬ ರಾಗವನ್ನು ಹಾಡುವ ಪ್ರಮೇಯವೇ ನಮಗೆ ಬರಲಾರದು. ಹೌದು, ತನ್ನ ಪ್ರೇರಿತ ವಾಕ್ಯದಲ್ಲಿ ಯೆಹೋವ ದೇವರು ನೀಡಿರುವ ಬುದ್ಧಿಮಾತುಗಳನ್ನು ನಾವು ಅನ್ವಯಿಸಿಕೊಳ್ಳುವ ಮೂಲಕ, ಈ ಅನೈತಿಕ ಲೋಕದಲ್ಲೂ ನಾವು ನೈತಿಕವಾಗಿ ಶುದ್ಧರಾಗಿ ಅಂದರೆ, ಶೀಲವಂತರಾಗಿ ಉಳಿಯಬಹುದು.
[ಪಾದಟಿಪ್ಪಣಿ]
^ ಪ್ಯಾರ. 11 “ಪರಕೀಯ” ಎಂಬ ಪದವನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಜೀವಿಸುತ್ತಿದ್ದು, ಹೀಗೆ ಯೆಹೋವನಿಂದ ದೂರಸರಿದವರಿಗೆ ಉಪಯೋಗಿಸಲಾಗುತ್ತಿತ್ತು. ಆದುದರಿಂದ, ಒಬ್ಬ ವೇಶ್ಯೆಯನ್ನು “ಪರಸ್ತ್ರೀ” ಎಂದು ಸೂಚಿಸಲಾಗಿದೆ.
[ಪುಟ 30ರಲ್ಲಿರುವ ಚಿತ್ರ]
ಅನೈತಿಕತೆಯ ಪರಿಣಾಮಗಳು ವಿಷದಷ್ಟು ಕಹಿಯಾಗಿವೆ
[ಪುಟ 31ರಲ್ಲಿರುವ ಚಿತ್ರ]
“ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು”