ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ಕ್ರಿಯೆಗಳು ದೇವರಿಗೆ ಮಹಿಮೆಯನ್ನು ತರುತ್ತವೆ

ಒಳ್ಳೇ ಕ್ರಿಯೆಗಳು ದೇವರಿಗೆ ಮಹಿಮೆಯನ್ನು ತರುತ್ತವೆ

ಒಳ್ಳೇ ಕ್ರಿಯೆಗಳು ದೇವರಿಗೆ ಮಹಿಮೆಯನ್ನು ತರುತ್ತವೆ

ದೇವರನ್ನು ಪ್ರೀತಿಸುವವರು ಆತನ ವಾಕ್ಯವಾದ ಬೈಬಲಿನಲ್ಲಿರುವ ಆತ್ಮಿಕ ಬೆಳಕನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತಾರೆ. ಈ ರೀತಿಯಲ್ಲಿ ಅವರು ಯೇಸುವಿನ ಈ ಆಜ್ಞೆಯನ್ನು ಪಾಲಿಸುವರು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” (ಮತ್ತಾಯ 5:16) ಅವರ ಒಳ್ಳೆಯ ನಡೆನುಡಿಯು ದೇವರಿಗೆ ಮಹಿಮೆಯನ್ನು ತರಬಲ್ಲದು.

ಯೆಹೋವನ ಸಾಕ್ಷಿಗಳು ಬೈಬಲಿಗನುಸಾರ ನಡೆಯುವ ಮೂಲಕ ಮತ್ತು ಇತರರಿಗೆ ಆತ್ಮಿಕವಾದ ರೀತಿಯಲ್ಲಿ ಸಹಾಯಮಾಡುವ ಮೂಲಕ ದೇವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ತಮ್ಮ ಬಹಿರಂಗ ಶುಶ್ರೂಷೆಯು ಇನ್ನೂ ಕಾನೂನುಬದ್ಧಗೊಳಿಸಲ್ಪಟ್ಟಿರದ ದೇಶಗಳಲ್ಲಿಯೂ ಸಹ ಈ ರೀತಿಯಲ್ಲಿ ನಡೆದುಕೊಳ್ಳಲು ಅವರು ಪ್ರಯತ್ನಿಸುತ್ತಾರೆ. ಇಂತಹ ದೇಶಗಳಲ್ಲೊಂದರ ರಾಜಧಾನಿಯಲ್ಲಿ, ಯಾವಾಗಲೂ ವಾರ್ಷಿಕ ಅಧಿವೇಶನಗಳನ್ನು ನಡೆಸಲಾಗುತ್ತಿತ್ತು. ಇಲ್ಲಿ ಸುಮಾರು 6,000ದಿಂದ 9,000ದಷ್ಟು ಜನರು ಒಟ್ಟುಗೂಡುತ್ತಿದ್ದರು. ಮತ್ತು ಇಂತಹ ಕೂಟಗಳಿಗಾಗಿ, ವಸ್ತುಪ್ರದರ್ಶನಗಳು ನಡೆಯುವ ಒಂದು ಕಾಂಪ್ಲೆಕ್ಸ್‌ನಲ್ಲಿರುವ ಹಾಲ್‌ಗಳನ್ನು ಅವರು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದರು. ಹಿಂದಿನ ವರ್ಷಗಳಲ್ಲಿ ಮಾಡಿದಂತೆ, 1999ರಲ್ಲಿ ಸಹ ಅಧಿವೇಶನಕ್ಕೆ ಮುಂಚೆ, ಆ ಕಟ್ಟಡಗಳನ್ನು ಶುಚಿಗೊಳಿಸಲು, ಧ್ವನಿವ್ಯವಸ್ಥೆಯನ್ನು ಅಳವಡಿಸಲು ಹಾಗೂ ಸಾವಿರಾರು ಕುರ್ಚಿಗಳನ್ನು ಜೋಡಿಸಲು ನೂರಾರು ಸಾಕ್ಷಿಗಳು ಕಷ್ಟಪಟ್ಟು ಕೆಲಸಮಾಡಿದರು.

ಈ ಎಲ್ಲ ಸಿದ್ಧತೆಗಳು ಅಲ್ಲಿದ್ದವರ ಗಮನಸೆಳೆದವು. ಆ ಕಟ್ಟಡದ ಆಡಳಿತ ಸಿಬ್ಬಂದಿ ವರ್ಗದವರು ಈ ಎಲ್ಲ ಕಾರ್ಯಕಲಾಪಗಳನ್ನು ಗಮನಿಸಿದರು. ಆ ಅಧಿವೇಶನದಲ್ಲಿ ಸುಮಾರು 15,666 ಜನರು ಹಾಜರಾಗಿದ್ದರೂ ಯಾವುದೇ ಅಡ್ಡಿಅಡಚಣೆಯಿಲ್ಲದೆ ಕಾರ್ಯಕ್ರಮಗಳು ಸರಾಗವಾಗಿ ಸಾಗಿದವು ಮತ್ತು ಸಾಕ್ಷಿಗಳು ಕ್ರಮಬದ್ಧತೆಯನ್ನು ಕಾಪಾಡಿಕೊಂಡಿದ್ದರು ಎಂಬ ವಿಷಯವನ್ನು ಸಹ ಅವರು ಗಮನಿಸಿದರು. ಅಧಿವೇಶನದ ನಂತರ ಆ ಕಟ್ಟಡವನ್ನು ಸಾಕ್ಷಿಗಳು ಅಚ್ಚುಕಟ್ಟಾಗಿ ಶುಚಿಗೊಳಿಸಿದ್ದನ್ನು ಸಹ ಅವರು ನೋಡಿ ಬೆರಗಾದರು.

ಸಾಕ್ಷಿಗಳ ಕಡೆಗಿನ ತಮ್ಮ ಗಣ್ಯತೆಯನ್ನು ತೋರಿಸಲು, ಆಡಳಿತ ಸಿಬ್ಬಂದಿ ವರ್ಗದವರು ತಮ್ಮ ಪಟ್ಟಿಯಲ್ಲಿ ಸಾಕ್ಷಿಗಳ ಹೆಸರನ್ನು ಮೊದಲನೇ ಸ್ಥಾನದಲ್ಲಿ ನಮೂದಿಸಿಕೊಂಡರು. ಹೀಗೆ ಮುಂದಿನ ವರ್ಷ ಸಹ ಇವರು ಈ ಕಟ್ಟಡವನ್ನು ಉಪಯೋಗಿಸುವಲ್ಲಿ, ಮೊದಲು ಬಾಡಿಗೆಗೆ ಕೊಡುವುದು ಇವರಿಗೇ ಎಂದು ಅವರು ನಿರ್ಧರಿಸಿದರು. ಅಷ್ಟುಮಾತ್ರವಲ್ಲದೆ, 1999, ಜುಲೈ 15ರಂದು ಅವರು ಅಧಿವೇಶನದ ಕಮಿಟಿಗೆ ಗಣ್ಯತೆಯ ಪಾರಿತೋಷಕವನ್ನು ಕೊಟ್ಟರು. ಆ ಫಲಕದ ಮೇಲೆ “ಯೆಹೋವನ ಸಾಕ್ಷಿಗಳ ಸಭೆ” ಎಂಬ ಪದಗಳು ಕೆತ್ತಲ್ಪಟ್ಟಿದ್ದವು. ಎಲ್ಲಿ ಬೈಬಲ್‌ ಶಿಕ್ಷಣಾ ಕಾರ್ಯವು ನಿಷೇಧದ ಕೆಳಗಿದೆಯೋ ಅಂತಹ ಒಂದು ದೇಶದಲ್ಲಿ ಈ ರೀತಿಯ ಪಾರಿತೋಷಕ ನೀಡಲ್ಪಟ್ಟಿರುವುದು ನಿಜವಾಗಿಯೂ ಕನಸಿನಲ್ಲಿಯೂ ನೆನಸದಿರುವಂತಹ ಸಂಗತಿಯಾಗಿದೆ.

2000/2001ರಲ್ಲಿ ಲೋಕದಾದ್ಯಂತ ಯೆಹೋವನ ಸಾಕ್ಷಿಗಳ, “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ನೂರಾರು ಜಿಲ್ಲಾ ಅಧಿವೇಶನಗಳು ನಡೆಯಲಿವೆ. ಈ ಅಧಿವೇಶನಗಳಿಗೆ ಲಕ್ಷಾಂತರ ಜನರು ಹಾಜರಾಗಲಿದ್ದಾರೆ. ಬೈಬಲಿಗನುಸಾರ ಶ್ರದ್ಧೆಯಿಂದ ನಡೆಯುವವರು ದೇವರಿಗೆ ಮಹಿಮೆಯನ್ನು ತರುವಂತಹ ಒಳ್ಳೇ ಕ್ರಿಯೆಗಳಲ್ಲಿ ಹೇಗೆ ಶ್ರದ್ಧಾಪೂರ್ವಕವಾಗಿ ಒಳಗೂಡುತ್ತಾರೆ ಎಂಬುದನ್ನು ನೀವು ಅಲ್ಲಿ ಹಾಜರಾಗುವ ಮೂಲಕ ಖುದ್ದಾಗಿ ನೋಡಸಾಧ್ಯವಿದೆ.