ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಜೀವನವು ಹೆಚ್ಚು ಅರ್ಥಭರಿತವಾಗಿರಲು ಹೇಗೆ ಸಾಧ್ಯ?

ನಿಮ್ಮ ಜೀವನವು ಹೆಚ್ಚು ಅರ್ಥಭರಿತವಾಗಿರಲು ಹೇಗೆ ಸಾಧ್ಯ?

ನಿಮ್ಮ ಜೀವನವು ಹೆಚ್ಚು ಅರ್ಥಭರಿತವಾಗಿರಲು ಹೇಗೆ ಸಾಧ್ಯ?

“ದುಡ್ಡಿನಾಸೆಯಿಂದ ದುಡಿಯಬೇಡ; ಸ್ವಬುದ್ಧಿಯನ್ನೇ ಆಶ್ರಯಿಸಬೇಡ. ನಿನ್ನ ದೃಷ್ಟಿಯು ಧನದ ಮೇಲೆ ಎರಗುತ್ತದೋ? ಧನವು ಅಷ್ಟರೊಳಗೆ ಮಾಯವಾಗುವದು; ಆಕಾಶದ ಕಡೆಗೆ ಹಾರುವ ಹದ್ದಿನಂತೆ ಅದು ರೆಕ್ಕೆಗಳನ್ನು ಕಟ್ಟಿಕೊಂಡಿದೆ” ಎಂದು ಹಳೇ ಕಾಲದ ಒಂದು ಜ್ಞಾನೋಕ್ತಿಯು ಹೇಳುತ್ತದೆ. (ಜ್ಞಾನೋಕ್ತಿ 23:4, 5) ಬೇರೆ ಮಾತಿನಲ್ಲಿ ಹೇಳುವುದಾದರೆ, ಶ್ರೀಮಂತರಾಗುವುದಕ್ಕಾಗಿ ದುಡಿದು ದುಡಿದು ನಮ್ಮನ್ನು ನಾವೇ ಸವೆಯಿಸಿಕೊಳ್ಳವುದು ಬುದ್ಧಿವಂತರ ಲಕ್ಷಣವಲ್ಲ. ಏಕೆಂದರೆ, ಐಶ್ವರ್ಯವು ಹದ್ದಿನಂತೆ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಹೋಗಬಲ್ಲದು.

ಬೈಬಲು ತೋರಿಸುವಂತೆ, ಐಶ್ವರ್ಯವು ಇದ್ದಕ್ಕಿದ್ದಂತೆ ಮಾಯವಾಗಿಬಿಡಬಲ್ಲದು. ಉದಾಹರಣೆಗೆ, ಪ್ರಕೃತಿ ವಿಕೋಪ, ಆರ್ಥಿಕ ಕುಸಿತ ಅಥವಾ ಇನ್ನಿತರ ಅನಿರೀಕ್ಷಿತ ಘಟನೆಗಳು ಸಂಭವಿಸುವಾಗ ದಿನಬೆಳಗಾಗುವುದರೊಳಗೆ ಐಶ್ವರ್ಯವು ಕಣ್ಮರೆಯಾಗಬಹುದು. ಅಷ್ಟೇ ಅಲ್ಲದೆ, ಸುಖದ ಸುಪ್ಪತ್ತಿಗೆಯಲ್ಲೇ ತೇಲುತ್ತಿರುವವರಿಗೂ ಕೂಡ ಅನೇಕವೇಳೆ ಜೀವನದಲ್ಲಿ ಸಂತೋಷವೇ ಇರುವುದಿಲ್ಲ. ಉದಾಹರಣೆಗೆ, ಜಾನ್‌ ಎಂಬ ವ್ಯಕ್ತಿಯ ಅನುಭವವನ್ನು ಗಮನಿಸಿ. ರಾಜಕಾರಣಿಗಳಿಗೆ, ಕ್ರೀಡಾಪಟುಗಳಿಗೆ ಮತ್ತು ರಾಜಮನೆತನದವರಿಗೆ ಭರ್ಜರಿ ಪಾರ್ಟಿಗಳನ್ನು ಏರ್ಪಡಿಸುವುದೇ ಅವನ ಕೆಲಸವಾಗಿತ್ತು.

ಜಾನ್‌ ಹೇಳುವುದು: “ಈ ಕೆಲಸಕ್ಕಾಗಿ ನನ್ನನ್ನೇ ನಾನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೆ. ನಾನು ಹೆಚ್ಚೆಚ್ಚು ಹಣ ಗಳಿಸಿದೆ, ಐಷಾರಾಮದ ಹೋಟೆಲುಗಳಲ್ಲಿ ತಂಗಿದೆ. ಕೆಲವೊಮ್ಮೆ, ಕೆಲಸಕ್ಕೆ ಖಾಸಗಿ ಜೆಟ್‌ ವಿಮಾನದಲ್ಲಿ ಕೂಡ ಪ್ರಯಾಣಿಸಿದೆ. ಆರಂಭದಲ್ಲಿ ಇವೆಲ್ಲವೂ ನನಗೆ ತುಂಬಾ ಹಿಡಿಸಿದವು. ಆದರೆ, ಕ್ರಮೇಣ ನನಗೆ ಬೇಸರವಾಗತೊಡಗಿತು. ನಾನು ಯಾರನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸಪಡುತ್ತಿದ್ದೆನೋ ಅವರೆಲ್ಲರೂ ಕೇವಲ ಹೊರತೋರಿಕೆಯ ಜನರಂತೆ ಕಂಡರು. ಇದೆಲ್ಲವನ್ನು ನೋಡಿ, ನನಗೆ ಜೀವನದಲ್ಲಿ ಅರ್ಥವೇ ಇಲ್ಲದಂತಾಯಿತು.”

ಜಾನ್‌ ಕಂಡುಕೊಂಡಂತೆ, ಆತ್ಮಿಕ ಮೌಲ್ಯಗಳಿಲ್ಲದ ಜೀವನವು ಬರಡಾಗಿದೆ. ಜೀವನದಲ್ಲಿ ನಿರಂತರವಾದ ಸಂತೋಷವನ್ನು ಹೇಗೆ ಕಂಡುಕೊಳ್ಳಬಹುದೆಂದು ಯೇಸು ಕ್ರಿಸ್ತನು ತನ್ನ ಪ್ರಸಿದ್ಧವಾದ ಪರ್ವತ ಪ್ರಸಂಗದಲ್ಲಿ ತೋರಿಸಿಕೊಟ್ಟನು. ಅಲ್ಲಿ ಅವನು ಹೇಳಿದ್ದು: “ಆತ್ಮದಲ್ಲಿ ಬಡವರಾಗಿರುವವರು [“ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು,” NW] ಧನ್ಯರು; ಪರಲೋಕರಾಜ್ಯವು ಅವರದು.” (ಮತ್ತಾಯ 5:3) ಆದ್ದರಿಂದ, ನಮ್ಮ ಜೀವನದಲ್ಲಿ ಆತ್ಮಿಕ ವಿಷಯಗಳಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುವುದು ಬುದ್ಧಿವಂತಿಕೆಯಾಗಿದೆ. ಇದರೊಂದಿಗೆ, ಇನ್ನಿತರ ಅಂಶಗಳು ಕೂಡ ಜೀವನವನ್ನು ಹೆಚ್ಚು ಅರ್ಥಭರಿತವನ್ನಾಗಿ ಮಾಡಲು ಸಹಾಯಕಾರಿಯಾಗಿವೆ.

ನಿಮ್ಮ ಕುಟುಂಬದವರು ಮತ್ತು ಸ್ನೇಹಿತರು

ಕುಟುಂಬದವರ ಹಾಗೂ ಆಪ್ತ ಸ್ನೇಹಿತರ ಒಡನಾಟವಿಲ್ಲದ ಜೀವನವು ಸಾರವಿಲ್ಲದ್ದಾಗಿದೆ! ಅಂಥ ಜೀವನವು ಬೇಸರಹಿಡಿಸುವುದಂತೂ ನಿಶ್ಚಯ. ಏಕೆಂದರೆ ನಮ್ಮ ಸೃಷ್ಟಿಕರ್ತನು, ಪ್ರೀತಿಸುವ ಮತ್ತು ಪ್ರೀತಿಗಾಗಿ ಹಂಬಲಿಸುವ ಬಯಕೆಯೊಂದಿಗೆ ನಮ್ಮನ್ನು ಸೃಷ್ಟಿಮಾಡಿದ್ದಾನೆ. ಆದ್ದರಿಂದಲೇ, ‘ನಮ್ಮ ನೆರೆಯವರನ್ನು ನಮ್ಮಂತೆಯೇ ಪ್ರೀತಿಸುವುದು’ ಏಕೆ ಪ್ರಾಮುಖ್ಯವಾಗಿದೆ ಎಂಬುದನ್ನು ಯೇಸು ಎತ್ತಿತೋರಿಸಿದಕ್ಕೆ ಇದೂ ಒಂದು ಕಾರಣವಾಗಿದೆ. (ಮತ್ತಾಯ 22:39) ನಿಸ್ವಾರ್ಥ ಪ್ರೀತಿಯನ್ನು ತೋರಿಸಲು, ದೇವರ ಕೊಡುಗೆಯಾಗಿರುವ ಕುಟುಂಬದ ಏರ್ಪಾಡು ಒಂದು ತಕ್ಕ ವಾತಾವರಣವನ್ನು ಒದಗಿಸುತ್ತದೆ.—ಎಫೆಸ 3:14, 15.

ನೀವು ಹೀಗೆ ಕೇಳಬಹುದು, ಕುಟುಂಬವು ನಮ್ಮ ಜೀವನಕ್ಕೆ ಹೇಗೆ ಹೆಚ್ಚು ಅರ್ಥವನ್ನು ಕೊಡಲು ಸಾಧ್ಯ? ಒಗ್ಗಟ್ಟಿನಿಂದ ಇರುವ ಒಂದು ಕುಟುಂಬವನ್ನು ರಮ್ಯವಾದ ತೋಟಕ್ಕೆ ಹೋಲಿಸಬಹುದು. ಈ ತೋಟವು, ದಿನನಿತ್ಯದ ಒತ್ತಡಗಳಿಂದ ಬಾಡಿ ಬಳಲಿ ಬರುವವನಿಗೆ ಆಹ್ಲಾದವನ್ನು ನೀಡುವ ಆಶ್ರಯತಾಣವಾಗಿರುತ್ತದೆ. ಹಾಗೆಯೇ, ಒಂದು ಕುಟುಂಬದಲ್ಲಿ ಒಲವಿನ ಮಧುರ ಬಾಂಧವ್ಯವು ಒಂಟಿತನದ ಭಾವನೆಗಳನ್ನು ತೊಲಗಿಸಲು ಸಹಾಯಮಾಡುವುದು. ಆದರೆ, ಕುಟುಂಬವು ತನ್ನಷ್ಟಕ್ಕೆ ತಾನೇ ಅಂಥ ಒಂದು ವಿಶ್ರಾಂತಿಧಾಮವಾಗಲು ಸಾಧ್ಯವಿಲ್ಲ. ಅದಕ್ಕಾಗಿ, ಕುಟುಂಬದವರೊಂದಿಗೆ ಬಲವಾದ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಅವರ ನಡುವಿನ ಅನ್ಯೋನ್ಯತೆಯು ಹೆಚ್ಚಾಗುವುದು ಮತ್ತು ಜೀವನವು ಸುಖ ಸಮೃದ್ಧಿಯಿಂದಿರುವುದು. ಉದಾಹರಣೆಗೆ, ಗಂಡ ಮತ್ತು ಹೆಂಡತಿಯು ಪರಸ್ಪರರಿಗಾಗಿ ತೋರಿಸುವ ಪ್ರೀತಿ ಮತ್ತು ಗೌರವವು, ಪ್ರತಿದಿನ ಖಾತೆಯಲ್ಲಿ ಕೂಡಿಡುವ ಹಣದಂತಿರುತ್ತದೆ. ಅದು ಕೊನೆಯಲ್ಲಿ, ಹೆಚ್ಚು ಬಡ್ಡಿಯೊಂದಿಗೆ ಹೇರಳವಾದ ಫಲವನ್ನು ನೀಡಬಹುದು.—ಎಫೆಸ 5:33.

ಒಂದುವೇಳೆ ನಿಮಗೆ ಮಕ್ಕಳಿರುವುದಾದರೆ, ಅವರು ಒಳ್ಳೇ ರೀತಿಯಲ್ಲಿ ಬೆಳೆಯಲು ತಕ್ಕ ಕುಟುಂಬ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿರುವುದು ಹೆತ್ತವರ ಕರ್ತವ್ಯವಾಗಿದೆ. ಮಕ್ಕಳೊಂದಿಗೆ ಸಮಯವನ್ನು ಕಳೆಯುವುದು, ಮನಬಿಚ್ಚಿ ಮಾತಾಡುವಂತೆ ಸನ್ನಿವೇಶವನ್ನು ಅವರಿಗೆ ಕಲ್ಪಿಸಿಕೊಡುವುದು, ಆತ್ಮಿಕ ಬೋಧನೆಗಳನ್ನು ನೀಡುವಂಥದ್ದು ಹೆತ್ತವರಿಗೆ ನಿಜವಾಗಿಯೂ ತುಂಬ ಕಷ್ಟಕರವಾಗಿರಬಹುದು. ಆದರೆ, ಆ ರೀತಿಯ ಸಮಯ ಮತ್ತು ಪ್ರಯತ್ನವು ಮುಂದೆ ಹೆಚ್ಚು ಪ್ರತಿಫಲವನ್ನು ಕೊಡುವುದು. ಯಶಸ್ವಿಕರ ಹೆತ್ತವರು, ತಮ್ಮ ಮಕ್ಕಳನ್ನು ದೇವರ ವರವಾಗಿ ಹಾಗೂ ಉತ್ತಮ ರೀತಿಯಲ್ಲಿ ಪರಾಮರಿಸಬೇಕಾದ ಆತನ ಸ್ವತ್ತಾಗಿ ವೀಕ್ಷಿಸುವರು.—ಕೀರ್ತನೆ 127:3.

ಒಳ್ಳೇ ಸ್ನೇಹಿತರು ಕೂಡ ಜೀವನವನ್ನು ಅರ್ಥಭರಿತವನ್ನಾಗಿ ಮಾಡುತ್ತಾರೆ. (ಜ್ಞಾನೋಕ್ತಿ 27:9) ಅನುಕಂಪವನ್ನು ತೋರಿಸುವ ಮೂಲಕ ನಾವು ಅನೇಕ ಸ್ನೇಹಿತರನ್ನು ಮಾಡಿಕೊಳ್ಳಬಹುದು. (1 ಪೇತ್ರ 3:8) ಜೀವನದಲ್ಲಿ ನಾವು ಎಡವಿ ಬೀಳುವಾಗ ನಿಜ ಸ್ನೇಹಿತರು ನಮ್ಮನ್ನು ಮೇಲೆತ್ತುವರು. (ಪ್ರಸಂಗಿ 4:9, 10) ಮತ್ತು “ನಿಜವಾದ ಒಡನಾಡಿಯು . . . ಸಂಕಟದ ಸಮಯಕ್ಕಾಗಿ ಹುಟ್ಟಿರುವ ಸಹೋದರನಾಗಿದ್ದಾನೆ.”—ಜ್ಞಾನೋಕ್ತಿ 17:17, NW.

ನಿಜ ಸ್ನೇಹವು ಎಷ್ಟೊಂದು ಸಂತೃಪ್ತಿಕರವಾಗಿರಬಲ್ಲದು! ನಯನಮನೋಹರವಾದ ಸೂರ್ಯಾಸ್ತಮಾನ, ಸವಿಯಾದ ಭೋಜನ, ಮನಕ್ಕೆ ಮುದನೀಡುವ ಸಂಗೀತ ಇವೆಲ್ಲವನ್ನು ಒಬ್ಬ ಸ್ನೇಹಿತನೊಂದಿಗೆ ಹಂಚಿಕೊಳ್ಳುವಾಗ ಹೆಚ್ಚು ಸಂತೋಷವನ್ನು ಉಂಟುಮಾಡುತ್ತದೆ. ಅನ್ಯೋನ್ಯವಾದ ಕುಟುಂಬ ಮತ್ತು ವಿಶ್ವಾಸಾರ್ಹ ಸ್ನೇಹಿತರು, ಇವೆರಡೂ ಅರ್ಥಭರಿತ ಜೀವನಕ್ಕೆ ಕೇವಲ ಎರಡು ಮುಖಗಳಾಗಿವೆ ಎಂಬುದು ಖಂಡಿತ. ನಮ್ಮ ಜೀವನವನ್ನು ಹೆಚ್ಚು ಅರ್ಥಭರಿತವನ್ನಾಗಿ ಮಾಡಸಾಧ್ಯವಿರುವ ಇನ್ಯಾವ ಒದಗಿಸುವಿಕೆಗಳನ್ನು ದೇವರು ನೀಡಿದ್ದಾನೆ?

ನಮ್ಮ ಆತ್ಮಿಕ ಅಗತ್ಯಗಳನ್ನು ಪೂರೈಸುವುದು

ಈಗಾಗಲೇ ತಿಳಿಸಿರುವಂತೆ, ಯೇಸು ಸಂತೋಷವನ್ನು ನಮ್ಮ ಆತ್ಮಿಕ ಅಗತ್ಯದೊಂದಿಗೆ ಸಂಬಂಧಿಸಿದನು. ಏಕೆಂದರೆ, ನಾವು ಆತ್ಮಿಕ ಹಾಗೂ ನೈತಿಕ ಸಾಮರ್ಥ್ಯದೊಂದಿಗೆ ಸೃಷ್ಟಿಸಲ್ಪಟ್ಟಿದ್ದೇವೆ. ಆದುದರಿಂದಲೇ, ಬೈಬಲ್‌ ‘ಆತ್ಮಿಕ ವ್ಯಕ್ತಿಗೆ’ (NW) ಮತ್ತು ‘ಆಂತರ್ಯದಲ್ಲಿರುವ ಗುಟ್ಟಿನ ಮನುಷ್ಯನಿಗೆ’ (NW) ಸೂಚಿಸಿ ಮಾತಾಡುತ್ತದೆ.—1 ಕೊರಿಂಥ 2:15; 1 ಪೇತ್ರ 3:3, 4.

ಡಬ್ಲ್ಯೂ. ಈ. ವೈನ್‌ ಅವರ, ಎಕ್ಸ್‌ಪಾಸಿಟರಿ ಡಿಕ್ಷ್‌ನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ಗನುಸಾರ, ಸಾಂಕೇತಿಕ ಹೃದಯವು, “ವಿಚಾರಯುಕ್ತ ಹಾಗೂ ಭಾವನಾತ್ಮಕ ಅಂಶಗಳನ್ನು ಹೊಂದಿರುವ ವ್ಯಕ್ತಿಯ ಸಂಪೂರ್ಣ ಮಾನಸಿಕ ಹಾಗೂ ನೈತಿಕ ಚಟುವಟಿಕೆಯನ್ನು” ಸಂಕೇತಿಸುತ್ತದೆ. “ಬೇರೆ ಮಾತಿನಲ್ಲಿ ಹೇಳುವುದಾದರೆ, ಸಾಂಕೇತಿಕ ಹೃದಯವನ್ನು ಆಂತರಿಕ ವ್ಯಕ್ತಿಯಲ್ಲಿ ಮರೆಯಾಗಿರುವ ಬುಗ್ಗೆಗಳಿಗೆ ಉಪಯೋಗಿಸಲ್ಪಡುತ್ತದೆ” ಎಂದು ವಿವರಣಾತ್ಮಕವಾಗಿ ವೈನ್‌ ಕೂಡಿಸಿ ಹೇಳುತ್ತಾರೆ. ಅದೇ ಕೃತಿಯು ಗಮನಿಸುವುದೇನೆಂದರೆ, “ಆಂತರ್ಯದಲ್ಲಿರುವ ಹೃದಯವು ‘ಗುಟ್ಟಿನ ಮನುಷ್ಯನನ್ನು’ . . . ಅಂದರೆ ನಿಜವಾದ ಮನುಷ್ಯನನ್ನು ಒಳಗೊಂಡಿರುತ್ತದೆ.”

ಹಾಗಾದರೆ, “ಆತ್ಮಿಕ ವ್ಯಕ್ತಿಯ” ಅಥವಾ “ಗುಟ್ಟಿನ ಮನುಷ್ಯನ” ಅಂದರೆ, “ಆಂತರ್ಯದಲ್ಲಿರುವ ಗುಟ್ಟಿನ ಮನುಷ್ಯನ” ಅಗತ್ಯಗಳನ್ನು ನಾವು ಹೇಗೆ ಪೂರೈಸಬಲ್ಲೆವು? ಇದನ್ನು ಪ್ರೇರಿತ ಕೀರ್ತನೆಗಾರನ ಹಾಡಿನಲ್ಲಿ ಸ್ಪಷ್ಟೀಕರಿಸಲಾಗಿದೆ. ಅದು ಹೇಳುವುದೇನೆಂದರೆ, “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ; ನಾವು ಆತನವರು. ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ ಆಗಿದ್ದೇವೆ.” ಈ ಅಂಶವನ್ನು ನಾವು ಒಪ್ಪಿಕೊಳ್ಳಬೇಕು. ಆಗ ನಾವು ನಮ್ಮ ಆತ್ಮಿಕ ಅಗತ್ಯಗಳನ್ನು ಪೂರೈಸಲು ಬಹುಮುಖ್ಯವಾದ ಹೆಜ್ಜೆಯನ್ನು ತೆಗೆದುಕೊಳ್ಳುವವರಾಗಿರುತ್ತೇವೆ. (ಕೀರ್ತನೆ 100:3) ಅಷ್ಟೇ ಅಲ್ಲದೆ, ಈ ಅಂಶವನ್ನು ನಾವು ಅಂಗೀಕರಿಸುವಾಗ, ನಾವು ದೇವರಿಗೆ ಲೆಕ್ಕ ಒಪ್ಪಿಸುವವರಾಗಿದ್ದೇವೆ ಎಂಬ ನ್ಯಾಯಬದ್ಧ ತೀರ್ಮಾನಕ್ಕೆ ಬರಲು ಇದು ನಮಗೆ ಸಹಾಯಮಾಡುತ್ತದೆ. ನಾವು “ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ” ಆಗಿರಬೇಕಾದರೆ, ದೇವರ ವಾಕ್ಯವಾದ ಬೈಬಲಿಗನುಸಾರ ನಾವು ಜೀವಿಸಬೇಕು.

ನಾವು ದೇವರಿಗೆ ಲೆಕ್ಕ ಒಪ್ಪಿಸುವವರಾಗಿದ್ದೇವೆ ಎಂಬ ವಿಷಯವು ಅಹಿತಕರವಾಗಿದೆಯೋ? ಇಲ್ಲವೇ ಇಲ್ಲ. ಏಕೆಂದರೆ, ನಮ್ಮ ನಡತೆಯು ದೇವರಿಗೆ ಬಹಳ ಪ್ರಾಮುಖ್ಯವಾಗಿದೆ ಎಂಬ ಅರಿವು ತಾನೇ ನಮ್ಮ ಜೀವನಕ್ಕೆ ಹೆಚ್ಚು ಅರ್ಥವನ್ನು ಕೊಡುತ್ತದೆ. ಅದು ನಾವು ಉತ್ತಮ ವ್ಯಕ್ತಿಗಳಾಗಿರುವಂತೆ ಪ್ರೋತ್ಸಾಹಿಸುತ್ತದೆ. ಮತ್ತು ಇದು ನಿಜವಾಗಿಯೂ ಒಂದು ಸಾರ್ಥಕವಾದ ಗುರಿಯಾಗಿದೆ. “ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು” ಎಂದು ಕೀರ್ತನೆ 112:1 ಹೇಳುತ್ತದೆ. ದೇವರಿಗಾಗಿರುವ ಪೂಜ್ಯ ಭಾವನೆಯಿಂದ ಕೂಡಿದ ಭಯ ಮತ್ತು ಆತನ ನಿಯಮಗಳಿಗಾಗಿರುವ ಹೃತ್ಪೂರ್ವಕ ವಿಧೇಯತೆಯು, ನಮ್ಮ ಜೀವನಕ್ಕೆ ಹೆಚ್ಚು ಅರ್ಥವನ್ನು ನೀಡಬಲ್ಲದು.

ನೀವು ಹೀಗೆ ಕೇಳಬಹುದು, ದೇವರಿಗೆ ವಿಧೇಯರಾಗಿರುವುದರಿಂದ ನಮಗೆ ಹೇಗೆ ತೃಪ್ತಿಯು ಸಿಗಸಾಧ್ಯವಿದೆ? ಹೇಗೆಂದರೆ, ನಮಗೆ ಮನಸ್ಸಾಕ್ಷಿ ಎಂಬುದೊಂದಿದೆ. ಇದು ದೇವರು ಎಲ್ಲಾ ಮನುಷ್ಯರಿಗೂ ಅನುಗ್ರಹಿಸಿರುವ ಒಂದು ಕೊಡುಗೆಯಾಗಿದೆ. ಈ ಮನಸ್ಸಾಕ್ಷಿಯು ನೀತಿ ಪರೀಕ್ಷಕನಂತಿದ್ದು, ನಾವು ಮಾಡಿರುವ ಅಥವಾ ಮಾಡಲು ಯೋಜಿಸುತ್ತಿರುವ ವಿಷಯಗಳಲ್ಲಿ ಸರಿ ಯಾವುದು ತಪ್ಪು ಯಾವುದು ಎಂಬುದನ್ನು ನಿರ್ಣಯಿಸುತ್ತದೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ, ಕೆಲವೊಮ್ಮೆ ನಾವು ತಪ್ಪುಮಾಡುವಾಗ ನಮ್ಮ ಮನಸ್ಸಾಕ್ಷಿಯು ನಮ್ಮನ್ನು ಚುಚ್ಚುತ್ತದೆ. (ರೋಮಾಪುರ 2:15) ಅದೇ ರೀತಿಯಲ್ಲಿ ಸರಿಯಾದುದ್ದನ್ನು ಮಾಡುವಾಗ, ಅದು ನಮಗೆ ‘ಭೇಷ್‌’ ಎಂದು ಕೂಡ ಹೇಳುತ್ತದೆ. ಆದ್ದರಿಂದಲೇ, ನಾವು ನಮ್ಮ ಜೊತೆ ಮಾನವರಿಗಾಗಿಯೂ ದೇವರಿಗಾಗಿಯೂ ನಿಸ್ವಾರ್ಥ ಸೇವೆಯನ್ನು ಮಾಡುವಾಗ ನಮಗೆ ಸಂತೃಪ್ತಿಯ ಭಾವನೆಯುಂಟಾಗುತ್ತದೆ. ಆಗ ‘ತೆಗೆದುಕೊಳ್ಳುವದಕ್ಕಿಂತ ಕೊಡುವುದರಲ್ಲೇ ಹೆಚ್ಚಿನ ಭಾಗ್ಯ’ ಇದೆಯೆಂಬುದನ್ನು ನಾವು ಕಂಡುಕೊಳ್ಳುತ್ತೇವೆ. (ಅ. ಕೃತ್ಯಗಳು 20:35) ಈ ರೀತಿಯ ಭಾವನೆಯುಂಟಾಗಲು ಒಂದು ಮುಖ್ಯ ಕಾರಣವಿದೆ.

ಸೃಷ್ಟಿಕರ್ತನು ನಮ್ಮನ್ನು ಯಾವ ರೀತಿಯಲ್ಲಿ ಉಂಟುಮಾಡಿದ್ದಾನೆಂದರೆ, ಜೊತೆ ಮಾನವರ ಆಸೆ ಆಕಾಂಕ್ಷೆಗಳು ಮತ್ತು ಅವರ ಅಗತ್ಯಗಳು ನಮ್ಮ ಮನಸ್ಸನ್ನು ನಾಟುತ್ತವೆ. ಆದ್ದರಿಂದಲೇ, ನಾವು ಇತರರಿಗೆ ಸಹಾಯಮಾಡುವಾಗ ನಮ್ಮ ಮನಸ್ಸಿನಲ್ಲಿ ಸಂತೋಷದ ಅಲೆಗಳೇಳುತ್ತವೆ. ಅಷ್ಟು ಮಾತ್ರವಲ್ಲದೆ, ಅಗತ್ಯದಲ್ಲಿರುವವರಿಗೆ ನಾವು ಸಹಾಯಮಾಡುವಾಗ, ದೇವರು ತನಗೇ ಕೃಪೆ ತೋರಿಸಿದಂತೆ ಅದನ್ನು ನೋಡುತ್ತಾನೆಂದು ಬೈಬಲ್‌ ನಮಗೆ ಆಶ್ವಾಸನೆಯನ್ನು ನೀಡುತ್ತದೆ.—ಜ್ಞಾನೋಕ್ತಿ 19:17.

ಆತ್ಮತೃಪ್ತಿಯನ್ನು ಪಡೆದುಕೊಳ್ಳುವುದರೊಂದಿಗೆ, ನಾವು ನಮ್ಮ ಆತ್ಮಿಕ ಅಗತ್ಯಗಳ ಕಡೆಗೆ ಗಮನಕೊಡುವುದು ನಮಗೆ ಪ್ರಾಯೋಗಿಕ ರೀತಿಯಲ್ಲಿ ಸಹಾಯಮಾಡಬಲ್ಲದೋ? ಖಂಡಿತ ಸಾಧ್ಯವಿದೆ ಎಂಬ ನಂಬಿಕೆ ಮಧ್ಯ ಪೂರ್ವ ದೇಶದಲ್ಲಿರುವ ರೇಮಂಡ್‌ ಎಂಬ ವ್ಯಾಪಾರಸ್ಥನಿಗಿದೆ. ಅವನು ಹೇಳುವುದೇನೆಂದರೆ, “ನನ್ನ ಜೀವನದಲ್ಲಿ ಹಣ ಸಂಪಾದಿಸುವುದೊಂದೇ ನನ್ನ ಗುರಿಯಾಗಿತ್ತು. ಆದರೆ, ದೇವರೊಬ್ಬನು ಇದ್ದಾನೆ ಮತ್ತು ಅವನ ಇಚ್ಛೆಗಳನ್ನು ಬೈಬಲ್‌ ವ್ಯಕ್ತಪಡಿಸುತ್ತದೆ ಎಂದು ತಿಳಿದುಕೊಂಡ ಗಳಿಗೆಯಿಂದ ನಾನು ಸಂಪೂರ್ಣವಾಗಿ ಬದಲಾಗಿಬಿಟ್ಟೆ. ಹಣಕ್ಕಾಗಿ ದುಡಿಯುವುದು ಈಗ ನನ್ನ ಜೀವನದಲ್ಲಿ ಎರಡನೇ ಸ್ಥಾನವನ್ನು ತೆಗೆದುಕೊಂಡಿದೆ. ಅಷ್ಟು ಮಾತ್ರವಲ್ಲ, ಇದರಿಂದ ಬೇರೆ ಪ್ರಯೋಜನವು ಕೂಡ ಸಿಕ್ಕಿದೆ. ಉದಾಹರಣೆಗೆ, ನನ್ನ ತಂದೆಯವರು ಒಂದು ಹೋರಾಟದಲ್ಲಿ ಕೊಲ್ಲಲ್ಪಟ್ಟಿದ್ದರು. ಅವರ ಸಾವಿಗೆ ಕಾರಣರಾದ ವ್ಯಕ್ತಿಗಳೊಂದಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಇಚ್ಛೆ ನನಗೆ ಕಿಂಚಿತ್ತೂ ಇಲ್ಲ. ಏಕೆಂದರೆ, ದೇವರನ್ನು ಮೆಚ್ಚಿಸಬೇಕೆಂದು ನಾನು ಮಾಡುತ್ತಿರುವ ಪ್ರಯತ್ನಗಳು, ದ್ವೇಷದ ಧ್ವಂಸಕರ ಭಾವನೆಗಳಿಂದ ನನ್ನನ್ನು ದೂರವಿರಿಸಿವೆ.”

ರೇಮಂಡನನು ಕಂಡುಕೊಂಡಂತೆ “ಆತ್ಮಿಕ ಮನುಷ್ಯನ” ಅಗತ್ಯಗಳು ಸರಿಯಾದ ರೀತಿಯಲ್ಲಿ ಪೂರೈಸಲ್ಪಡುವಾಗ, ಅದು ಆಳವಾದ ಭಾವನಾತ್ಮಕ ಗಾಯಗಳನ್ನು ವಾಸಿಮಾಡಬಲ್ಲದು. ಆದರೆ, ದಿನನಿತ್ಯದ ಜೀವನದಲ್ಲಿ ನಾವು ಎದುರಿಸುವ ಸಮಸ್ಯೆಗಳನ್ನು ನಿಭಾಯಿಸದಿದ್ದರೆ, ಜೀವನವು ಸಂತೃಪ್ತಿಯಿಂದ ಇರಲಾರದು.

‘ದೇವಶಾಂತಿಯನ್ನು’ ನಾವು ಪಡೆದುಕೊಳ್ಳಬಹುದು

ನಾಗಾಲೋಟದಿಂದ ಓಡುತ್ತಿರುವ ಈ ಜಗತ್ತಿನಲ್ಲಿ ದಿನಗಳು ಸರಾಗವಾಗಿ ಉರುಳುವುದೇ ಬಹಳ ಕಷ್ಟವಾಗಿದೆ. ಏಕೆಂದರೆ, ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಉದಾಹರಣೆಗೆ, ಕೆಲವೊಮ್ಮೆ ಅಪಘಾತಗಳು ಸಂಭವಿಸಬಹುದು, ಯೋಜನೆಗಳು ತಲೆಕೆಳಗಾಗಬಹುದು ಹಾಗೂ ಜನರು ನಿರಾಶೆಯನ್ನು ಉಂಟುಮಾಡಬಹುದು. ಈ ರೀತಿಯ ಹಿಮ್ಮೆಟ್ಟುವಿಕೆಗಳು ನಮ್ಮ ಸಂತೋಷವನ್ನು ಕಸಿದುಕೊಳ್ಳಬಹುದು. ಆದರೆ ಯೆಹೋವನನ್ನು ಸೇವಿಸುತ್ತಿರುವವರಿಗೆ ಆತ್ಮತೃಪ್ತಿ, ಅಂದರೆ, “ದೇವಶಾಂತಿಯು” ಇರುವುದು ಎಂದು ಬೈಬಲ್‌ ವಾಗ್ದಾನ ಮಾಡುತ್ತದೆ. ಆದರೆ ಪ್ರಶ್ನೆಯೇನೆಂದರೆ, ಈ ದೇವಶಾಂತಿಯನ್ನು ನಾವು ಪಡೆದುಕೊಳ್ಳುವುದಾದರೂ ಹೇಗೆ?

ಅಪೊಸ್ತಲ ಪೌಲನು ಬರೆದದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ನಮ್ಮ ಸಮಸ್ಯೆಗಳನ್ನು ನಾವೊಬ್ಬರೇ ಹೊರುವುದರ ಬದಲು, ಗಾಢವಾಗಿ ಪ್ರಾರ್ಥಿಸುವ ಮೂಲಕ ನಮ್ಮ ದೈನಂದಿನ ಚಿಂತಾಭಾರಗಳನ್ನು ದೇವರ ಮೇಲೆ ಹಾಕಬೇಕು. (ಕೀರ್ತನೆ 55:22) ನಾವು ಆತ್ಮಿಕವಾಗಿ ದೃಢರಾಗುತ್ತಿದ್ದಂತೆ ದೇವರು ನಮಗೆ ಯಾವ ರೀತಿಯಲ್ಲಿ ಸಹಾಯಮಾಡುತ್ತಾನೆ ಎಂಬುದನ್ನು ನಾವು ಗ್ರಹಿಸುವೆವು. ಆಗ, ದೇವರು ನಮ್ಮ ಭಿನ್ನಹಗಳಿಗೆ ತನ್ನ ಮಗನಾದ ಯೇಸುಕ್ರಿಸ್ತನ ಮೂಲಕ ಖಂಡಿತ ಕಿವಿಗೊಡುತ್ತಾನೆಂಬ ನಂಬಿಕೆಯು ಹೆಚ್ಚಾಗುವುದು.—ಯೋಹಾನ 14:6, 14; 2 ಥೆಸಲೊನೀಕ 1:3.

‘ಪ್ರಾರ್ಥನೆಯನ್ನು ಕೇಳುವವನಾದ’ ಯೆಹೋವನಲ್ಲಿ ನಮ್ಮ ಭರವಸೆಯನ್ನು ದೃಢವಾಗಿಸಿಕೊಳ್ಳುವಾಗ, ದೀರ್ಘಕಾಲದ ಅಸ್ವಸ್ಥತೆ, ಮುಪ್ಪು ಅಥವಾ ಮರಣದಲ್ಲಿ ಪ್ರಿಯ ವ್ಯಕ್ತಿಯ ಅಗಲಿಕೆಯಂತಹ ವೇದನಾಮಯ ಪರೀಕ್ಷೆಗಳನ್ನು ನಾವು ಹೆಚ್ಚು ಉತ್ತಮ ರೀತಿಯಲ್ಲಿ ನಿಭಾಯಿಸಾಧ್ಯವಿದೆ. (ಕೀರ್ತನೆ 65:2) ಆದರೆ, ಇವೆಲ್ಲದರೊಂದಿಗೆ ಅರ್ಥಭರಿತ ಜೀವನಕ್ಕಾಗಿ ನಮ್ಮ ಭವಿಷ್ಯವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳುವುದು ಪ್ರಾಮುಖ್ಯವಾಗಿದೆ.

ನಮ್ಮ ಮುಂದಿರುವ ನಿರೀಕ್ಷೆಯಲ್ಲಿ ಉಲ್ಲಾಸಿಸಿರಿ

ವಿಧೇಯ ಮಾನವ ಕುಟುಂಬಕ್ಕಾಗಿ, “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಬೈಬಲ್‌ ವಾಗ್ದಾನ ಮಾಡುತ್ತದೆ. ಇದು ಒಂದು ನೀತಿಯ, ಅಕ್ಕರೆಯುಳ್ಳ, ಸ್ವರ್ಗೀಯ ಸರ್ಕಾರವಾಗಿದ್ದು, ವಿಧೇಯ ಮಾನವ ಕುಟುಂಬದ ಮೇಲೆ ಆಳ್ವಿಕೆ ನಡೆಸಲಿರುವುದು. (2 ಪೇತ್ರ 3:13) ದೇವರು ವಾಗ್ದಾನ ಮಾಡಿರುವ ಆ ಹೊಸ ಲೋಕದಲ್ಲಿ ಯುದ್ಧ ಮತ್ತು ಅನ್ಯಾಯವು ತೆಗೆದುಹಾಕಲ್ಪಟ್ಟು, ಅದರ ಸ್ಥಾನದಲ್ಲಿ ಶಾಂತಿ ಮತ್ತು ನ್ಯಾಯವು ಸ್ಥಾಪಿಸಲ್ಪಡುವುದು. ಇದು ಒಂದು ರೀತಿಯ ಕ್ಷಣಿಕ ಇಚ್ಛೆಯಲ್ಲ, ಬದಲಿಗೆ ದಿನೇ ದಿನೇ ಹೆಚ್ಚಾಗುವ ಒಂದು ದೃಢಭರವಸೆಯಾಗಿದೆ. ಇದು ನಿಜವಾಗಿಯೂ ಒಂದು ಶುಭಸಮಾಚಾರವಾಗಿದೆ ಮತ್ತು ಖಂಡಿತವಾಗಿಯೂ ಹರ್ಷಿಸುವುದಕ್ಕೆ ಕಾರಣವಾಗಿರುವ ಒಂದು ವಿಷಯವಾಗಿದೆ.—ರೋಮಾಪುರ 12:12; ತೀತ 1:2.

ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟಿರುವ ಜಾನ್‌ಗೆ, ಈಗ ಜೀವನದಲ್ಲಿ ಹೆಚ್ಚು ಅರ್ಥವಿದೆಯೆಂದು ಅನ್ನಿಸುತ್ತದೆ. ಅವನು ಹೇಳುವುದು, “ನಾನೇನೂ ಅಷ್ಟು ಧಾರ್ಮಿಕ ವ್ಯಕ್ತಿಯಾಗಿರಲಿಲ್ಲ. ಆದರೂ ನನಗೆ ದೇವರಲ್ಲಿ ನಂಬಿಕೆಯಿತ್ತು. ಇಬ್ಬರು ಯೆಹೋವನ ಸಾಕ್ಷಿಗಳು ನನ್ನನ್ನು ಭೇಟಿಯಾಗುವ ವರೆಗೂ ಆ ನಂಬಿಕೆಯ ಕುರಿತು ನಾನು ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಅವರನ್ನು ಭೇಟಿಯಾದಾಗ, ‘ನಾವು ಈ ಭೂಮಿಯ ಮೇಲಿರಲು ಕಾರಣವೇನು? ನಮ್ಮ ಭವಿಷ್ಯವೇನು?’ ಎಂಬಂತಹ ಪ್ರಶ್ನೆಗಳ ಸುರಿಮಳೆಗೈದೆ. ಅವರ ತೃಪ್ತಿಕರವಾದ ಶಾಸ್ತ್ರೀಯ ಉತ್ತರಗಳು, ಜೀವನಕ್ಕೆ ಒಂದು ಉದ್ದೇಶವಿದೆ ಎಂಬ ಅರಿವನ್ನು ಮೊದಲ ಬಾರಿಗೆ ನನ್ನಲ್ಲಿ ಮೂಡಿಸಿತು. ಅದು ಕೇವಲ ಆರಂಭವಾಗಿತ್ತಷ್ಟೇ. ತದನಂತರ ಸತ್ಯಕ್ಕಾಗಿರುವ ನನ್ನ ಹಸಿವನ್ನು ನಾನು ಹೆಚ್ಚಿಸಿಕೊಂಡಂತೆ, ಅದು ನನ್ನ ಜೀವನದ ಮೌಲ್ಯಗಳನ್ನೇ ಬದಲಾಯಿಸಿತು. ನಾನು ಮೊದಲಿದ್ದ ಹಾಗೆ ಈಗ ಶ್ರೀಮಂತನೇನೂ ಅಲ್ಲ. ಆದರೆ ಆತ್ಮಿಕ ರೀತಿಯಲ್ಲಿ ಕೋಟ್ಯಾಧಿಪತಿಯಾಗಿದ್ದೇನೆ ಎಂದು ನನಗನಿಸುತ್ತದೆ.”

ಬಹುಶಃ, ನೀವು ಸಹ ಜಾನ್‌ನಂತೆ ಅನೇಕ ವರ್ಷಗಳಿಂದ ನಿಮ್ಮ ಆತ್ಮಿಕ ಸಾಮರ್ಥ್ಯವನ್ನು ನಿದ್ರಾವಸ್ಥೆಯಲ್ಲಿ ಬಿಟ್ಟುಬಿಟ್ಟಿರಬೇಕು. ಆದರೆ, “ಜ್ಞಾನದ ಹೃದಯವನ್ನು” ಬೆಳೆಸಿಕೊಳ್ಳುವ ಮೂಲಕ, ಆ ಸಾಮರ್ಥ್ಯವು ಪುನಶ್ಚೈತನ್ಯಗೊಳ್ಳುವಂತೆ ನೀವು ಮಾಡಬಹುದು. (ಕೀರ್ತನೆ 90:12) ದೃಢಸಂಕಲ್ಪದೊಂದಿಗೆ ನೀವು ಪ್ರಯತ್ನಮಾಡುವುದಾದರೆ ನಿಜ ಸಂತೋಷ, ಶಾಂತಿ ಮತ್ತು ನಿರೀಕ್ಷೆಯನ್ನು ಕಂಡುಕೊಳ್ಳುವಿರಿ. (ರೋಮಾಪುರ 15:13) ಆಗ, ನಿಮ್ಮ ಜೀವನವು ಖಂಡಿತವಾಗಿಯೂ ಹೆಚ್ಚು ಅರ್ಥಭರಿತವಾಗಿರುತ್ತದೆ.

[ಪುಟ 6ರಲ್ಲಿರುವ ಚಿತ್ರ]

ಪ್ರಾರ್ಥನೆಯು ನಮಗೆ ‘ದೇವಶಾಂತಿಯನ್ನು’ ನೀಡಬಲ್ಲದು

[ಪುಟ 7ರಲ್ಲಿರುವ ಚಿತ್ರಗಳು]

ಕುಟುಂಬ ಜೀವನವನ್ನು ಯಾವುದು ಹೆಚ್ಚು ತೃಪ್ತಿಕರವಾಗಿ ಮಾಡಬಲ್ಲದು ಎಂಬುದು ನಿಮಗೆ ಗೊತ್ತೇ?