ನೀವು ಸಿನಿಕರಿಂದೇನಾದರೂ ಪ್ರಭಾವಿಸಲ್ಪಟ್ಟಿದ್ದೀರೋ?
ನೀವು ಸಿನಿಕರಿಂದೇನಾದರೂ ಪ್ರಭಾವಿಸಲ್ಪಟ್ಟಿದ್ದೀರೋ?
“ಸಿನಿಕನೊಬ್ಬನು ಯಾವ ವ್ಯಕ್ತಿಯಲ್ಲೂ ಒಳ್ಳೆಯ ಗುಣವನ್ನು ನೋಡಲಾರದನು. ಆದರೆ, ಮತ್ತೊಬ್ಬರಲ್ಲಿರುವ ದೋಷವನ್ನು ಕಂಡುಹಿಡಿಯುವುದರಲ್ಲಿ ಅವನು ಮಹಾಜಾಣ. ಅವನು ರಾತ್ರಿಯಲ್ಲಿ ಎಚ್ಚರವಾಗಿದ್ದು ಹಗಲಿನಲ್ಲಿ ಕುರುಡಾಗಿರುವ ಮಾನವಗೂಬೆ. ಗೂಬೆಯು ಸಣ್ಣ ಸಣ್ಣ ಕ್ರಿಮಿಕೀಟಗಳಿಗಾಗಿ ಹುಡುಕುತ್ತಿರುತ್ತದೆ. ಆದರೆ ಅದು ಎಂದೂ ಒಳ್ಳೆಯ ಬೇಟೆಪ್ರಾಣಿಯನ್ನು ನೋಡಲಾರದು.” ಈ ಹೇಳಿಕೆಯನ್ನು, 19ನೇ ಶತಮಾನದಲ್ಲಿ ಜೀವಿಸಿದ್ದ ಅಮೆರಿಕದ ಹೆನ್ರಿ ವಾರ್ಡ್ ಬೀಚರ್ ಎಂಬ ಪಾದ್ರಿಯು ನೀಡಿದ್ದನು. ಈ ಮಾತುಗಳು, ಆಧುನಿಕ ದಿನದ ಸಿನಿಕರ ಸ್ವಭಾವವನ್ನು ಎಷ್ಟು ಚೆನ್ನಾಗಿ ವರ್ಣಿಸುತ್ತದೆಂದು ಅನೇಕರು ನೆನಸಬಹುದು. ಆದರೆ, ಈ ಪದವು ಹೇಗೆ ಮತ್ತು ಎಲ್ಲಿಂದ ಬಂತು? “ಸಿನಿಕ” ಎಂಬ ಪದದ ಉಗಮವು ಪ್ರಾಚೀನ ಗ್ರೀಸ್ ದೇಶವಾಗಿದೆ. ಆದರೆ, ಅಲ್ಲಿ ಸಿನಿಕನ ಮನೋಭಾವವನ್ನು ಪ್ರದರ್ಶಿಸುತ್ತಿದ್ದವರಿಗೆ ಮಾತ್ರವೇ ಈ ಹೆಸರನ್ನು ಉಪಯೋಗಿಸುತ್ತಿರಲಿಲ್ಲ. ಬದಲಿಗೆ, ಅದನ್ನು ತತ್ತ್ವಜ್ಞಾನಿಗಳ ಪಂಥದವರಿಗೆ ಸೂಚಿಸಿ ಹೇಳಲಾಗುತ್ತಿತ್ತು.
ಹಾಗಾದರೆ, ಸಿನಿಕರ ತತ್ವಜ್ಞಾನವು ಹೇಗೆ ಬೆಳೆದುಬಂತು? ಅವರು ಏನನ್ನು ಕಲಿಸುತ್ತಿದ್ದರು? ಸಿನಿಕರ ಗುಣಗಳು ಒಬ್ಬ ಕ್ರೈಸ್ತನಿಗೆ ಯೋಗ್ಯವಾಗಿವೆಯೇ?
ಪ್ರಾಚೀನ ಕಾಲದ ಸಿನಿಕರ ಮೂಲ ಮತ್ತು ನಂಬಿಕೆಗಳು
ಪ್ರಾಚೀನ ಕಾಲದ ಗ್ರೀಸ್ ದೇಶವು ಚರ್ಚೆ ಹಾಗೂ ವಾಗ್ವಾದಗಳಿಗೆ ತವರೂರಾಗಿತ್ತು. ಅನೇಕ ಶತಮಾನಗಳಿಂದ ಹಿಡಿದು ನಮ್ಮ ಸಾಮಾನ್ಯ ಶಕದ ವರೆಗೆ ಸಾಕ್ರಟೀಸ್, ಪ್ಲೇಟೊ ಮತ್ತು ಅರಿಸ್ಟಾಟಲ್‌ನಂಥವರು ತಮ್ಮ ತತ್ವಜ್ಞಾನಗಳನ್ನು ಜನರಿಗೆ ಪರಿಚಯಮಾಡಿಕೊಟ್ಟಿದ್ದಾರೆ. ಅವರು ತಮ್ಮ ತತ್ವಜ್ಞಾನಗಳಿಂದಲೇ ಪ್ರಖ್ಯಾತಿಯ ಶಿಖರವನ್ನು ಏರಿದರು. ಅಷ್ಟುಮಾತ್ರವಲ್ಲದೆ, ಅವರ ಬೋಧನೆಗಳು ಜನರ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದವು. ಅಂಥ ತತ್ವಗಳನ್ನು ಈಗಲೂ ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಕಾಣಬಹುದಾಗಿದೆ.
ಆ ರೀತಿಯ ತತ್ವಗಳಲ್ಲಿ ಒಂದು ಸಾಕ್ರಟೀಸನ ತತ್ವವಾಗಿತ್ತು (ಸಾ.ಶ.ಪೂ. 470-399). ಇಂದ್ರಿಯ ಸುಖಗಳಿಂದಲೋ ಅಥವಾ ಭೌತಿಕ ವಸ್ತುಗಳಿಂದಲೋ ನಿರಂತರವಾದ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದೇ ಅವನ ವಾದವಾಗಿತ್ತು. ಅದಕ್ಕೆ ಬದಲಾಗಿ ಸದ್ಗುಣದ ಅನ್ವೇಷಣೆಯಲ್ಲಿ ಕಳೆಯುವ ಜೀವನವೇ ನಿಜವಾದ ಸಂತೋಷವನ್ನು ಕೊಡುವುದು ಎಂದು ಅವನು ಪ್ರತಿಪಾದಿಸಿದನು. ಸದ್ಗುಣವೇ ಒಳ್ಳೆಯತನದ ಮೂಲವೆಂದು ಸಾಕ್ರಟೀಸನು ನಂಬಿದ್ದನು. ಈ ಗುರಿಯನ್ನು ಮುಟ್ಟುವುದಕ್ಕಾಗಿ, ಆತನು ಎಲ್ಲಾ ರೀತಿಯ ಸುಖಭೋಗಗಳು ಮತ್ತು ಅದಕ್ಕಾಗಿ ಮಾಡಲ್ಪಡುವ ಹೆಣಗಾಟಗಳು ಅನಗತ್ಯವಾಗಿವೆ ಎಂದು ನೆನಸಿದನು. ಇವು ತನ್ನ ಗುರಿಯನ್ನು ಮುಟ್ಟಲು ತಡೆಯಾಗಿರುವವು ಎಂಬ ಕಾರಣಕ್ಕಾಗಿ ಅವನು ಇವೆಲ್ಲವನ್ನೂ ತಿರಸ್ಕರಿಸಿದನು. ಅವನು ಕಟ್ಟುನಿಟ್ಟಾದ ಹಾಗೂ ತುಂಬ ಸರಳವಾದ ಜೀವನವನ್ನು ಸ್ವೀಕರಿಸಿದನು.
ಸಾಕ್ರಟೀಸನ ವಿಧಾನ ಎಂದು ಕರೆಯಲ್ಪಡುವ ಒಂದು ಕಲಿಸುವ ರೀತಿಯನ್ನು ಸಾಕ್ರಟೀಸನು ಆರಂಭಿಸಿದನು. ಅದು ಹೇಗಿತ್ತೆಂದರೆ, ಅನೇಕವೇಳೆ ವಿಚಾರವಾದಿಗಳು ತಾವು ಕಂಡುಹಿಡಿದಿರುವ ಯಾವುದಾದರೂ ಒಂದು ವಿಚಾರವನ್ನು ಮುಂದಿಡುತ್ತಿದ್ದರು. ಅನಂತರ ಅದನ್ನು ಬೆಂಬಲಿಸುವ ವಾದಗಳನ್ನು ಅವರು ಒದಗಿಸುತ್ತಿದ್ದರು. ಆದರೆ, ಸಾಕ್ರಟೀಸನು ಇದಕ್ಕೆ ತದ್ವಿರುದ್ಧವಾದ್ದದ್ದನ್ನು ಮಾಡಿದನು. ಅಂದರೆ, ಬೇರೆ ತತ್ವಜ್ಞಾನಿಗಳ ವಿಚಾರವಾದಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದನು. ಅನಂತರ, ಅದರಲ್ಲಿರುವ ಲೋಪದೋಷಗಳನ್ನು ಬಯಲುಮಾಡಲು ಪ್ರಯತ್ನಿಸುತ್ತಿದ್ದನು. ಈ ವಿಧಾನವು, ಬೇರೆಯವರಲ್ಲಿ ತಪ್ಪನ್ನು ಹುಡುಕುವ ಮತ್ತು ಅವರನ್ನು ತಿರಸ್ಕಾರದಿಂದ ಕಾಣುವ ಮನೋಭಾವವನ್ನು ಪ್ರೋತ್ಸಾಹಿಸಿತು.
ಸಾಕ್ರಟೀಸನ ಅನುಯಾಯಿಗಳಲ್ಲಿ ಆಂಟಿಸ್ಥೆನಸ್ (ಸುಮಾರು ಸಾ.ಶ.ಪೂ. 445-365) ಎಂಬ ಒಬ್ಬ ತತ್ವಜ್ಞಾನಿ ಇದ್ದನು. ಇವನೊಂದಿಗೆ ಇನ್ನೂ ಅನೇಕರು ಸೇರಿ ಸಾಕ್ರಟೀಸನ ಮೂಲಬೋಧನೆಯನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡುಹೋದರು. ಹೇಗೆಂದರೆ, ಸದ್ಗುಣವು ಒಳ್ಳೆಯತನದ ಮೂಲವೆಂದು ಸಾಕ್ರಟೀಸನು ಹೇಳಿದ್ದನು. ಆದರೆ ಇವರು ಸದ್ಗುಣ ಮಾತ್ರವೇ ಒಳ್ಳೆಯತನದ ಮೂಲವೆಂದು ಹೇಳಿದರು. ಅವರು, ಸುಖಭೋಗಗಳ ಬೆನ್ನಟ್ಟುವಿಕೆಯನ್ನು ಒಂದು ತಡೆಯಾಗಿ ಮಾತ್ರವಲ್ಲ, ಕೆಡುಕಾಗಿಯೂ ನೆನಸಿದರು. ಇವರು ತಮ್ಮ ಜೊತೆಮಾನವರನ್ನು ತುಂಬ ಕೀಳಾಗಿ ನೋಡುತ್ತಿದ್ದದ್ದರಿಂದ, ಅವರು ತೀರ ಸಮಾಜವಿರೋಧಿ ಜನರಾದರು. ಇವರೇ ನಂತರ ಸಿನಿಕರೆಂದು ಪ್ರಸಿದ್ಧರಾದರು. ಸಿನಿಕ ಎಂಬ ಪದವು ಗ್ರೀಕ್ ಭಾಷೆಯಲ್ಲಿ (ಕಿನಿಕೋಸ್) ಎಂಬ ಪದದಿಂದ ಬಂದಿರಬಹುದು. ಇದರರ್ಥ “ನಾಯಿಯಂಥವರು” ಎಂದಾಗಿತ್ತು. ಇದು ಅವರ ಗಂಟು ಮೋರೆ ಮತ್ತು ದುರಹಂಕಾರದ ಸ್ವಭಾವದೊಂದಿಗಿದ್ದ ಅವರ ಹರಿತವಾದ ನಾಲಿಗೆಯನ್ನು ವರ್ಣಿಸುತ್ತಿತ್ತು. *
ಅವರ ಬೋಧನೆಯ ಪರಿಣಾಮ
ಕಟ್ಟುನಿಟ್ಟಾದ ಹಾಗೂ ಸರಳ ಜೀವನದಂಥ ಸಿನಿಕ ತತ್ವಗಳನ್ನು ಸ್ವೀಕರಿಸಿದ್ದು ತಾನೇ ಜನರು, ಸಿನಿಕರನ್ನು ಮೆಚ್ಚುಗೆಯಿಂದ ಕಾಣುವಂತೆ ಮಾಡಿದ್ದಿರಬಹುದು. ಆದರೆ, ಸಿನಿಕರು ತಮ್ಮ ವಿಚಾರಧಾರೆಗಳಲ್ಲಿ ಎಷ್ಟು ವಿಪರೀತರಾಗಿದ್ದರು ಎಂಬುದನ್ನು ಡಿಯೋಜೀನಸ್ ಎಂಬ ಒಬ್ಬ ಪ್ರಸಿದ್ಧ ತತ್ವಜ್ಞಾನಿಯ ಜೀವನವನ್ನು ನೋಡುವಾಗ ಗೊತ್ತಾಗುತ್ತದೆ.
ಡಿಯೋಜೀನಸನು ಸಾ.ಶ.ಪೂ. 412ರಲ್ಲಿ, ಕಪ್ಪುಸಮುದ್ರದ ಬಳಿಯಿರುವ ಸಿನೋಪೆ ಎಂಬ ನಗರದಲ್ಲಿ ಹುಟ್ಟಿದ್ದನು. ತದನಂತರ ಅವನು ತನ್ನ ತಂದೆಯೊಂದಿಗೆ ಅಥೆನ್ಸ್ ನಗರಕ್ಕೆ ಸ್ಥಳಾಂತರಿಸಿದನು. ಅಲ್ಲಿ ಅವನಿಗೆ ಸಿನಿಕರೊಂದಿಗೆ ಸಂಪರ್ಕವಾಯಿತು. ಡಿಯೋಜೀನಸನು ಆಂಟಿಸ್ಥೆನಸ್‌ನಿಂದ ಶಿಕ್ಷಣವನ್ನು ಪಡೆದುಕೊಂಡನು. ತರುವಾಯ ಸಿನಿಕ್ ತತ್ವಜ್ಞಾನದಲ್ಲೇ ಸಂಪೂರ್ಣವಾಗಿ ತಲ್ಲೀನನಾಗಿಬಿಟ್ಟನು. ಸಾಕ್ರಟೀಸನಾದರೋ ಸರಳವಾದ ಜೀವನವನ್ನು ನಡೆಸಿದನು. ಮತ್ತು ಆಂಟಿಸ್ಥೆನಸನು ಕಟ್ಟುನಿಟ್ಟಾದ ಜೀವನವನ್ನು ನಡೆಸಿದನು. ಆದರೆ, ಡಿಯೋಜೀನಸನಾದರೋ ವಿರಕ್ತನಾಗಿ ಜೀವಿಸಿದನು. ಅವನು ತಾನು ಎಲ್ಲಾ ರೀತಿಯ ಸುಖಭೋಗಗಳನ್ನು ತಿರಸ್ಕರಿಸಿ ವಿರಕ್ತ ಜೀವನವನ್ನು ನಡೆಸುತ್ತಿದ್ದೇನೆಂದು ತೋರಿಸಲಿಕ್ಕಾಗಿ ಅವನು ಸ್ವಲ್ಪಕಾಲ ತೊಟ್ಟಿಯಲ್ಲಿ ಜೀವಿಸಿದನಂತೆ!
ಒಳ್ಳೆಯತನದ ಮೂಲವನ್ನು ಕಂಡುಹಿಡಿಯುವುದಕ್ಕಾಗಿ ಡಿಯೋಜೀನಸನು ನಡುಹಗಲಿನಲ್ಲಿ ಅಥೆನ್ಸ್ ನಗರದ ಬೀದಿಯಲ್ಲಿ ದೀಪವನ್ನು ಹಿಡಿದುಕೊಂಡು ಸದ್ಗುಣನಾದ ವ್ಯಕ್ತಿಯನ್ನು ಹುಡುಕಿಕೊಂಡು ಹೋದನೆಂದು ಹೇಳಲಾಗುತ್ತದೆ! ಇಂಥ ವರ್ತನೆಯು ಜನರ ಗಮನವನ್ನು ಸೆಳೆಯಿತು. ಈ ಮೂಲಕವೇ ಡಿಯೋಜೀನಸ್ ಮತ್ತು ಇನ್ನಿತರ ಸಿನಿಕರು ಬೇರೆಯವರಿಗೆ ಕಲಿಸುತ್ತಿದ್ದರು. ಒಮ್ಮೆ ಮಹಾ ಅಲೆಗ್ಸಾಂಡರನು, ಡಿಯೋಜೀನಸನ ಬಳಿ ನೀನು ಏನನ್ನು ಬಯಸುತ್ತೀ ಎಂದು ಕೇಳಿದಾಗ, ಅದಕ್ಕುತ್ತರವಾಗಿ ಡಿಯೋಜೀನಸನು, ಸೂರ್ಯನ ಬೆಳಕಿಗೆ ಅಡ್ಡವಾಗಿರದಂತೆ ಪಕ್ಕಕ್ಕೆ ಸರಿಯುವಂತೆ ಅಲೆಗ್ಸಾಂಡರನನ್ನು ಕೇಳಿಕೊಂಡನೆಂದು ಹೇಳಲಾಗುತ್ತದೆ.
ಡಿಯೋಜೀನಸ್ ಮತ್ತು ಇನ್ನಿತರ ಸಿನಿಕರು ಭಿಕ್ಷುಕರಂತೆ ಜೀವಿಸಿದರು. ಜನಸಾಮಾನ್ಯರಂತೆ ಜೀವಿಸಲು ಅವರ ಬಳಿ ಸಮಯವೇ ಇರಲಿಲ್ಲ. ಅಷ್ಟುಮಾತ್ರವಲ್ಲ, ಅವರು ಪೌರಕರ್ತವ್ಯಗಳನ್ನು ತಿರಸ್ಕರಿಸಿದರು. ಬಹುಶಃ, ಅವರು ಸಾಕ್ರಟೀಸನ ವಾಗ್ವಾದಮಾಡುವ ವಿಧಾನದಿಂದ ಪ್ರಭಾವಿತಗೊಂಡಿದ್ದಿರಬೇಕು. ಆದ್ದರಿಂದಲೇ, ಅವರು ಇತರರನ್ನು ತುಂಬಾ ಅವಮರ್ಯಾದೆಯಿಂದ ಕಾಣುವ ಜನರಾದರು. ಡಿಯೋಜೀನಸನು ಇತರರ ಮನಸ್ಸನ್ನು ಇರಿಯುವಂಥ ಕೊಂಕುನುಡಿಗೆ ಪ್ರಸಿದ್ಧನಾದನು. ಇದರಿಂದಾಗಿಯೇ, ಸಿನಿಕರು “ನಾಯಿಗಳಂಥ ಜನರು” ಎಂಬ ಬಿರುದನ್ನು ಪಡೆದುಕೊಂಡರು. ಆದರೆ, ಸ್ವತಃ ಡಿಯೋಜೀನಸನಿಗೆ ನಾಯಿ ಎಂಬ ಅಡ್ಡಹೆಸರನ್ನಿಡಲಾಯಿತು. ಅವನು 90 ವರ್ಷದವನಾಗಿದ್ದಾಗ ಅಂದರೆ, ಸಾ.ಶ.ಪೂ. 320ರಲ್ಲಿ ಸತ್ತುಹೋದನು. ಅವನ ಸಮಾಧಿಯ ಮೇಲೆ ಅಮೃತಶಿಲೆಯಿಂದ ಕೆತ್ತಿದ ನಾಯಿಯ ಸ್ಮಾರಕವನ್ನು ಇಡಲಾಯಿತು.
ಆದರೆ, ಬೇರೆ ರೀತಿಯ ವಿಚಾರಭಾವಗಳನ್ನು ಕಲಿಸುತ್ತಿದ್ದ ಇನ್ನಿತರ ಪಂಥಗಳು ಕೂಡ ಸಿನಿಕರ ತತ್ವಜ್ಞಾನಗಳಲ್ಲಿ ಕೆಲವೊಂದು ಬೋಧನೆಗಳನ್ನು ತಮ್ಮದಾಗಿಸಿಕೊಂಡವು. ಆದರೆ ಅಷ್ಟರೊಳಗಾಗಿ, ಡಿಯೋಜೀನಸ್ ಮತ್ತು ಅವನ ನಂತರದ ಅನುಯಾಯಿಗಳ ವಿಚಿತ್ರ ನಡವಳಿಕೆಯು ಅವರ ಪಂಥಕ್ಕೆ ಅಪಕೀರ್ತಿಯನ್ನು ತಂದಿತು. ಹೀಗೆ, ಕೊನೆಯಲ್ಲಿ ಅವರ ಪಂಥವು ಸಂಪೂರ್ಣವಾಗಿ ಕಣ್ಮರೆಯಾಯಿತು.
ಇಂದಿನ ಸಿನಿಕರಂತೆ ನೀವಿರಬೇಕೋ?
ಇಂದಿನ ಸಿನಿಕರನ್ನು ದಿ ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನೆರಿ ವರ್ಣಿಸುವುದು: “ಇತರರನ್ನು ಬಯ್ಯುವವನು ಇಲ್ಲವೇ ಅವರಲ್ಲಿ ತಪ್ಪನ್ನು ಕಂಡುಹಿಡಿಯುವವನು. . . . ಮತ್ತೊಬ್ಬ ವ್ಯಕ್ತಿಯ ಒಳ್ಳೇ ಉದ್ದೇಶಗಳನ್ನು ಮತ್ತು ಅವನ ನಡವಳಿಕೆ ಹಾಗೂ ಕ್ರಿಯೆಯಲ್ಲಿರುವ ಪ್ರಾಮಾಣಿಕತೆ ಅಥವಾ ಒಳ್ಳೆಯತನವನ್ನು ನಂಬಲು ತಯಾರಿಲ್ಲದವನು. ಮತ್ತು ತನ್ನ ಭಾವನೆಗಳನ್ನು ಅವನು ಹೀಯಾಳಿಸುವ ಹಾಗೂ ಕೊಂಕುನುಡಿಗಳನ್ನು ಹೇಳುವ ಮೂಲಕ ವ್ಯಕ್ತಪಡಿಸುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾನೆ. ಅವನು ಒಬ್ಬ ಅಣಿಕಿಸುವ ಬುದ್ಧಿಯುಳ್ಳ, ದೋಷವನ್ನು ಕಂಡುಹಿಡಿಯುವವನಾಗಿರುತ್ತಾನೆ.” ಈ ರೀತಿಯ ಗುಣಗಳನ್ನು ತೋರಿಸುವ ಜನರಿಂದ ನಾವು ಸುತ್ತುವರಿಯಲ್ಪಟ್ಟಿದ್ದೇವೆ. ಆದರೆ, ಅಂಥ ಗುಣಗಳು ಕ್ರೈಸ್ತ ವ್ಯಕ್ತಿತ್ವಕ್ಕೆ ಹೊಂದಿಕೆಯಲ್ಲಿಲ್ಲ ಎಂಬುದು ಖಂಡಿತ. ಈ ಮುಂದಿನ ಬೈಬಲಿನ ಸಿದ್ಧಾಂತಗಳು ಮತ್ತು ಬೋಧನೆಗಳನ್ನು ಗಮನಿಸಿ.
“ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. ಆತನು ಯಾವಾಗಲೂ ತಪ್ಪುಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ.” (ಕೀರ್ತನೆ 103:8, 9) “ದೇವರನ್ನು ಅನುಕರಿಸುವವರಾಗಿ” (NW) ಎಂದು ಕ್ರೈಸ್ತರಿಗೆ ಹೇಳಲಾಗಿದೆ. (ಎಫೆಸ 5:1) ಏಕೆಂದರೆ, ಸರ್ವಶಕ್ತನಾದ ದೇವರೇ ‘ಇತರರನ್ನು ಬಯ್ಯುವುದೋ ಇಲ್ಲವೇ ಅವರಲ್ಲಿ ತಪ್ಪನ್ನು ಕಂಡುಹಿಡಿಯುವುದನ್ನೋ’ ಮಾಡುವುದಿಲ್ಲ. ಅದರ ಬದಲು, ಆತನು ಕನಿಕರವನ್ನೂ ದೀರ್ಘಶಾಂತಿಯನ್ನೂ ತೋರಿಸುತ್ತಾನೆ. ಹೀಗಿರುವಾಗ, ಕ್ರೈಸ್ತರು ಕೂಡ ಅದೇ ರೀತಿಯ ಗುಣವನ್ನು ಪ್ರದರ್ಶಿಸಬೇಕು.
ಯೆಹೋವನ ಮೂರ್ತರೂಪವಾಗಿರುವ ಯೇಸು ಕ್ರಿಸ್ತನು ಕೂಡ, “ತನ್ನ ಹೆಜ್ಜೆಯ ಜಾಡಿನಲ್ಲಿ” ನಾವು ‘ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋಗಿದ್ದಾನೆ.’ (1 ಪೇತ್ರ 2:21; ಇಬ್ರಿಯ 1:3) ಕೆಲವೊಮ್ಮೆ, ಯೇಸು ಧಾರ್ಮಿಕ ಅಸತ್ಯಗಳನ್ನು ಬಯಲುಮಾಡಿದನು. ಮತ್ತು ಲೋಕದ ಕೆಲಸಗಳು ಕೆಟ್ಟವುಗಳೆಂದು ಸಾಕ್ಷಿಹೇಳಿದನು. (ಯೋಹಾನ 7:7) ಹಾಗಿದ್ದರೂ, ಪ್ರಾಮಾಣಿಕ ಜನರನ್ನು ನೋಡಿದಾಗ ಅವರ ಕುರಿತು ಅವನು ಮೆಚ್ಚುಗೆಯ ನುಡಿಗಳನ್ನು ಸಹ ಹೇಳಿದನು. ಉದಾಹರಣೆಗೆ, ನತಾನಯೇಲನ ಕುರಿತು “ಇಗೋ ಇವನು ನಿಜವಾದ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು. (ಯೋಹಾನ 1:47) ಕೆಲವೊಮ್ಮೆ ಯೇಸು ಅದ್ಭುತಗಳನ್ನು ಮಾಡಿದಾಗ, ಅದರಿಂದ ಪ್ರಯೋಜನ ಪಡೆದುಕೊಂಡ ವ್ಯಕ್ತಿಯ ನಂಬಿಕೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದನು. (ಮತ್ತಾಯ 9:22) ಮತ್ತೊಂದು ಸಂದರ್ಭದಲ್ಲಿ, ಗಣ್ಯತೆಯನ್ನು ತೋರಿಸುವುದಕ್ಕಾಗಿ ಓರ್ವ ಮಹಿಳೆಯು ತಂದ ಉಡುಗೊರೆಯು ದುಂದುವೆಚ್ಚವಾಗಿತ್ತು ಎಂದು ಬೇರೆಯವರು ನೆನಸಿದಾಗ, ಅವಳು ಉಡುಗೊರೆಯನ್ನು ಯಾವ ಕಾರಣಕ್ಕಾಗಿ ತಂದಿರಬಹುದು ಎಂದು ಯೇಸು ತಪ್ಪನ್ನು ಕಂಡುಹಿಡಿಯಲು ಪ್ರಯತ್ನಿಸಲಿಲ್ಲ, ಬದಲಿಗೆ ಅವನು ಹೇಳಿದ್ದು: ‘ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರು.’ (ಮತ್ತಾಯ 26:6-13) ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಒಬ್ಬ ವಿಶ್ವಾಸಾರ್ಹ ಸ್ನೇಹಿತನು ಹಾಗೂ ವಾತ್ಸಲ್ಯಭರಿತ ಸಂಗಡಿಗನಾಗಿದ್ದು, “ಅವರನ್ನು ಕೊನೆಯವರೆಗೂ ಪ್ರೀತಿಸಿದನು.”—ಯೋಹಾನ 13:1, NW.
ಯೇಸು ಪರಿಪೂರ್ಣನಾಗಿದ್ದರಿಂದ, ಅಪರಿಪೂರ್ಣ ಮಾನವರಲ್ಲಿ ಸುಲಭವಾಗಿ ತಪ್ಪುಗಳನ್ನು ಕಂಡುಹಿಡಿಯಬಹುದಾಗಿತ್ತು. ಆದರೆ, ಅವನು ಹಾಗೆ ಮಾಡಲಿಲ್ಲ. ಅಷ್ಟೇ ಅಲ್ಲ, ಅವನು ಜನರಲ್ಲಿ ತಪ್ಪು ಕಂಡುಹಿಡಿಯುವ ಮತ್ತಾಯ 11:29, 30.
ಮತ್ತು ಸಂಶಯಪಡುವ ಮನೋಭಾವವನ್ನು ತೋರಿಸಬಹುದಾಗಿತ್ತು. ಆದರೆ, ಅದಕ್ಕೆ ಬದಲಾಗಿ ಅವನು ಜನರಿಗೆ ಚೈತನ್ಯದಾಯಕನಾಗಿರಲು ಪ್ರಯತ್ನಿಸಿದನು.—“[ಪ್ರೀತಿಯು] ಎಲ್ಲವನ್ನೂ ನಂಬುತ್ತದೆ.” (ಓರೆಅಕ್ಷರಗಳು ನಮ್ಮವು) (1 ಕೊರಿಂಥ 13:7) ಈ ಹೇಳಿಕೆಯನ್ನು ತೆಗೆದುಕೊಳ್ಳುವುದಾದರೆ, ಅದು ಇತರರ ಪ್ರತಿಯೊಂದು ಉದ್ದೇಶವನ್ನು ಮತ್ತು ಕೃತ್ಯವನ್ನು ಸಂದೇಹಿಸುವ ಒಬ್ಬ ಸಿನಿಕನ ಸ್ವಭಾವಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ. ನಿಜ, ಇಂದು ಲೋಕದಲ್ಲಿ ಗುಪ್ತ ಉದ್ದೇಶಗಳನ್ನು ಇಟ್ಟುಕೊಂಡಿರುವ ಜನರು ಎಲ್ಲೆಲ್ಲೂ ಇದ್ದಾರೆ. ಆದ್ದರಿಂದ ನಾವು ಎಚ್ಚರಿಕೆಯಿಂದಿರಬೇಕಾಗಿದೆ. (ಜ್ಞಾನೋಕ್ತಿ 14:15) ಹಾಗಿದ್ದರೂ, ಪ್ರೀತಿಯು ನಂಬಲು ತಯಾರಿರುತ್ತದೆ. ಏಕೆಂದರೆ, ಅದು ಪ್ರತಿಯೊಂದನ್ನು ಸಂಶಯದ ದೃಷ್ಟಿಯಿಂದ ನೋಡುವುದಿಲ್ಲ.
ದೇವರು ತನ್ನ ಸೇವಕರನ್ನು ಪ್ರೀತಿಸುತ್ತಾನೆ ಮತ್ತು ಅವರನ್ನು ನಂಬುತ್ತಾನೆ. ಅವರ ಇತಿಮಿತಿಗಳ ಕುರಿತು ಅವರಿಗಿಂತಲೂ ಆತನು ಚೆನ್ನಾಗಿ ಬಲ್ಲವನಾಗಿದ್ದಾನೆ. ಹಾಗಿದ್ದರೂ, ಯೆಹೋವನು ತನ್ನ ಜನರನ್ನು ಎಂದೂ ಸಂಶಯದ ದೃಷ್ಟಿಯಿಂದ ನೋಡುವುದಿಲ್ಲ. ಮತ್ತು ಅವರು ಮಾಡಸಾಧ್ಯವಿರುವುದಕ್ಕಿಂತ ಹೆಚ್ಚನ್ನು ಆತನು ಅವರಿಂದ ಅಪೇಕ್ಷಿಸುವುದಿಲ್ಲ. (ಕೀರ್ತನೆ 103:13, 14) ಅಷ್ಟುಮಾತ್ರವಲ್ಲದೆ, ದೇವರು ಮಾನವರಲ್ಲಿ ಒಳ್ಳೆಯದನ್ನು ನೋಡುತ್ತಾನೆ. ಅದರೊಂದಿಗೆ, ಅಪರಿಪೂರ್ಣರಾಗಿದ್ದರೂ ನಂಬಿಗಸ್ತರಾದ ತನ್ನ ಸೇವಕರಿಗೆ ಸುಯೋಗಗಳನ್ನು ಮತ್ತು ಅಧಿಕಾರವನ್ನು ಸಹ ಭರವಸೆಯಿಂದ ನೀಡುತ್ತಾನೆ.—1 ಅರಸು 14:13; ಕೀರ್ತನೆ 82:6.
“ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು ಹೃದಯವನ್ನು ಪರೀಕ್ಷಿಸುವವನೂ ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ.” (ಯೆರೆಮೀಯ 17:10) ಒಬ್ಬ ವ್ಯಕ್ತಿಯ ಹೃದಯವನ್ನು ಯೆಹೋವನು ನಿಷ್ಕೃಷ್ಟವಾಗಿ ಓದಬಲ್ಲನು. ಆದರೆ, ಅದು ನಮಗೆ ಸಾಧ್ಯವಿಲ್ಲ. ಆದುದರಿಂದ, ಬೇರೆಯವರ ಮನಸ್ಸಿನಲ್ಲಿರುವ ಉದ್ದೇಶಗಳ ಕುರಿತು ಮಾತಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು.
ಮತ್ತೊಬ್ಬರಲ್ಲಿ ತಪ್ಪನ್ನು ಹುಡುಕುವ ಸಿನಿಕತನವನ್ನು ನಮ್ಮಲ್ಲಿ ಬೇರೂರಲು ನಾವು ಬಿಡುವುದಾದರೆ, ಕಟ್ಟಕಡೆಗೆ ಅದು ನಮ್ಮ ಆಲೋಚಶಕ್ತಿಯ ಮೇಲೆ ಸಂಪೂರ್ಣವಾದ ಹತೋಟಿಯನ್ನು ಸಾಧಿಸುವುದು. ಅದು ಎಷ್ಟು ಪ್ರಭಾವಶಾಲಿಯಾಗಿರುತ್ತದೆಯೆಂದರೆ, ನಮ್ಮ ಮತ್ತು ಜೊತೆ ವಿಶ್ವಾಸಿಗಳ ನಡುವೆ ಬಿರುಕನ್ನು ಉಂಟುಮಾಡಬಲ್ಲದು. ಅದು ಕ್ರೈಸ್ತ ಸಭೆಯ ಶಾಂತಿಯನ್ನು ಕದಡಸಾಧ್ಯವಿದೆ. ಆದುದರಿಂದ, ನಾವು ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸೋಣ. ಅವನು ತನ್ನ ಶಿಷ್ಯರೊಂದಿಗೆ ವ್ಯವಹರಿಸುವಾಗ, ಅವರ ಬಲಹೀನತೆಗಳನ್ನು ಅರಿತಿದ್ದರೂ ಅವರನ್ನು ತಿರಸ್ಕಾರದ ಭಾವನೆಯಿಂದ ಕಾಣಲಿಲ್ಲ. ಬದಲಿಗೆ ಅವನು ಅವರ ವಿಶ್ವಾಸಾರ್ಹ ಸ್ನೇಹಿತನಾದನು.—ಯೋಹಾನ 15:11-15.
“ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.” (ಲೂಕ 6:31) ಯೇಸು ಕ್ರಿಸ್ತನ ಈ ಸಲಹೆಯನ್ನು ಅನೇಕ ವಿಧಗಳಲ್ಲಿ ನಾವು ಅನುಸರಿಸಬಹುದಾಗಿದೆ. ಉದಾಹರಣೆಗೆ, ಇತರರು ನಮ್ಮ ಕುರಿತು ಮಾತಾಡುವಾಗ ಅವರು ಕಠೋರರಾಗಿ ಮಾತಾಡದೆ ದಯಾಪರವಾಗಿ ಮತ್ತು ಗೌರವದಿಂದ ಮಾತಾಡಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಅದೇ ರೀತಿಯಲ್ಲಿ, ನಾವು ಕೂಡ ಇತರರ ಕುರಿತು ನಿರ್ದಾಕ್ಷಿಣ್ಯವಾಗಿ ಮಾತಾಡದೆ, ದಯಾಪರರಾಗಿ ಗೌರವದಿಂದ ಮಾತಾಡಬೇಕು. ಧಾರ್ಮಿಕ ಗುರುಗಳ ಸುಳ್ಳು ಬೋಧನೆಗಳನ್ನು ಯೇಸು ಪ್ರಭಾವಶಾಲಿಯಾದ ರೀತಿಯಲ್ಲಿ ಬಯಲುಮಾಡಿದಾಗಲೂ, ಅದನ್ನು ಅವನು ಸಿನಿಕತನದಿಂದ ಮಾಡಲಿಲ್ಲ.—ಮತ್ತಾಯ 23:13-36.
ಸಿನಿಕತನದ ವಿರುದ್ಧ ಹೋರಾಡುವ ವಿಧಗಳು
ನಮಗೆ ಯಾರಾದರೂ ಆಶಾಭಂಗವನ್ನು ಉಂಟುಮಾಡಿರುವುದಾದರೆ, ಅಂಥವರಲ್ಲಿ ತಪ್ಪನ್ನು ಕಂಡುಹಿಡಿಯುವ ಸಿನಿಕತವು ನಮ್ಮನ್ನು ಪ್ರಭಾವಿಸುವಂತೆ ಮಾಡುವುದು ಬಹಳ ಸುಲಭ. ಇಂಥ ಮನೋಭಾವದ ವಿರುದ್ಧ ಹೋರಾಡಲು ಸಾಧ್ಯವಿದೆ. ಹೇಗೆಂದರೆ, ಯೆಹೋವನು ಹೇಗೆ ತನ್ನ ಅಪರಿಪೂರ್ಣ ಜನರಲ್ಲಿ ಭರವಸೆಯನ್ನಿಟ್ಟು ವರ್ತಿಸುತ್ತಾನೆ ಎಂಬುದನ್ನು ನಾವು ಗಣ್ಯಮಾಡಬೇಕು. ಆಗ, ನಾವು ದೇವರ ಇತರ ಆರಾಧಕರಿಂದ ಹೆಚ್ಚನ್ನು ಅಪೇಕ್ಷಿಸಲಾರೆವು. ಬದಲಿಗೆ, ಅವರು ಸಹ ಸರಿಯಾದುದನ್ನು ಮಾಡುವುದಕ್ಕಾಗಿ ಪ್ರಯಾಸಪಡುತ್ತಿರುವ ಅಪರಿಪೂರ್ಣ ಮಾನವರು ಎಂಬುದನ್ನು ಅಂಗೀಕರಿಸುವೆವು.
ಕೆಲವೊಮ್ಮೆ, ಜೀವನದಲ್ಲಿ ಕೆಲವರು ಅನುಭವಿಸಿರುವ ಕಹಿ ಅನುಭವಗಳು, ಇತರರ ಮೇಲಿರುವ ನಂಬಿಕೆಯನ್ನು ಅವರು ಕಳೆದುಕೊಳ್ಳುವಂತೆ ಮಾಡಬಹುದು. ನಿಜ, ಅಪರಿಪೂರ್ಣ ಮಾನವರ ಮೇಲೆ ಸಂಪೂರ್ಣವಾಗಿ ಭರವಸೆಯನ್ನಿಡುವುದು ಮೂರ್ಖತನವಾಗಿದೆ. (ಕೀರ್ತನೆ 146:3, 4) ಆದರೆ, ಕ್ರೈಸ್ತ ಸಭೆಯಲ್ಲಿ ಅನೇಕರು ಇತರರಿಗೆ ಪ್ರೋತ್ಸಾಹನೆಯನ್ನು ನೀಡುವ ಮೂಲವಾಗಿರಲು ನಿಜವಾಗಿಯೂ ಬಯಸುವವರಾಗಿದ್ದಾರೆ. ತಮ್ಮ ಕುಟುಂಬದವರನ್ನು ಕಳೆದುಕೊಂಡಿರುವವರಿಗೆ, ಮಕ್ಕಳಂತೆ, ಅಣ್ಣತಮ್ಮಂದಿರಂತೆ, ಅಕ್ಕತಂಗಿಯರಂತೆ, ತಂದೆತಾಯಿಯರಂತಿರುವ ಸಾವಿರಾರು ಮಂದಿಯ ಕುರಿತು ಸ್ವಲ್ಪ ಯೋಚಿಸಿನೋಡಿ. (ಮಾರ್ಕ 10:30) ಕಷ್ಟದ ಸಮಯದಲ್ಲಿ ನಮಗೆ ಸಹಾಯಮಾಡಲು ಮುಂದೆಬರುವ ಅನೇಕ ನಿಜವಾದ ಸ್ನೇಹಿತರ ಕುರಿತು ಸಹ ಯೋಚಿಸಿನೋಡಿ. *—ಜ್ಞಾನೋಕ್ತಿ 18:24.
ಪ್ರೀತಿಯ ಗುಣವೇ ಯೇಸುಕ್ರಿಸ್ತನ ಶಿಷ್ಯರನ್ನು ಗುರುತಿಸುವಂತಹದ್ದಾಗಿದೆಯೇ ವಿನಹಃ ಸಿನಿಕತನವಲ್ಲ. ಏಕೆಂದರೆ, “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” ಎಂದು ಯೇಸು ಹೇಳಿದನು. (ಯೋಹಾನ 13:35) ಹಾಗಾಗಿ, ನಾವು ನಮ್ಮ ಜೊತೆ ಕ್ರೈಸ್ತರಿಗೆ ಪ್ರೀತಿಯನ್ನು ತೋರಿಸೋಣ ಮತ್ತು ಅವರಲ್ಲಿರುವ ಒಳ್ಳೇ ಗುಣಗಳನ್ನೇ ನೋಡೋಣ. ಹೀಗೆ ಮಾಡುವಾಗ, ಇತರರಲ್ಲಿ ತಪ್ಪನ್ನು ಕಂಡುಹಿಡಿಯುವ ಸಿನಿಕ ಗುಣವನ್ನು ಬೆಳೆಸಿಕೊಳ್ಳಲಾರೆವು.
[ಪಾದಟಿಪ್ಪಣಿಗಳು]
^ ಪ್ಯಾರ. 8 ಸಿನಿಕ ಎಂಬ ಹೆಸರು, ಕೆನೋಸಾರೀಸ್ ಎಂಬ ಪದದಿಂದಲೂ ಬಂದಿರಬಹುದು. ಇದು, ಆಂಟಿಸ್ಥೆನಸನು ಇತರರಿಗೆ ಕಲಿಸುತ್ತಿದ್ದ ಅಥೆನ್ಸ್‌ನ ಒಂದು ವ್ಯಾಯಾಮ ಶಾಲೆಯಾಗಿತ್ತು.
^ ಪ್ಯಾರ. 27 ಕಾವಲಿನಬುರುಜು ಪತ್ರಿಕೆಯ ಮೇ 15, 1999ರ ಸಂಚಿಕೆಯಲ್ಲಿರುವ “ಕ್ರೈಸ್ತ ಸಭೆ—ಬಲಗೊಳಿಸುವ ನೆರವಿನ ಒಂದು ಮೂಲ” ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ನೋಡಿ.
[ಪುಟ 21ರಲ್ಲಿರುವ ಚಿತ್ರ]
ಡಿಯೋಜೀನಸ್‌ನು ಹೆಚ್ಚು ಪ್ರಸಿದ್ಧನಾದ ಸಿನಿಕನಾಗಿದ್ದನು
[ಕೃಪೆ]
ಮಹಾ ಪುರುಷರು ಮತ್ತು ಪ್ರಸಿದ್ಧ ಮಹಿಳೆಯರು ಎಂಬ (ಇಂಗ್ಲಿಷ್) ಪುಸ್ತಕದಿಂದ