ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿಂಸೆಯು ಅಂತಿಯೋಕ್ಯದಲ್ಲಿ ವೃದ್ಧಿಯನ್ನು ಉಂಟುಮಾಡುತ್ತದೆ

ಹಿಂಸೆಯು ಅಂತಿಯೋಕ್ಯದಲ್ಲಿ ವೃದ್ಧಿಯನ್ನು ಉಂಟುಮಾಡುತ್ತದೆ

ಹಿಂಸೆಯು ಅಂತಿಯೋಕ್ಯದಲ್ಲಿ ವೃದ್ಧಿಯನ್ನು ಉಂಟುಮಾಡುತ್ತದೆ

ಸಿರಿಯ ದೇಶದ ಉತ್ತರ ದಿಕ್ಕಿಗೆ ಸುಮಾರು 550 ಕಿಲೊಮೀಟರುಗಳ ದೂರದಲ್ಲಿ ಅಂತಿಯೋಕ್ಯ ಎಂಬ ನಗರವಿದೆ. ಅಲ್ಲಿ ಸಂಭವಿಸಿದಂತಹ ಘಟನೆಗಳು ಕ್ರೈಸ್ತ ಚರಿತ್ರೆಯನ್ನೇ ಸಂಪೂರ್ಣವಾಗಿ ಬದಲಾಯಿಸಿದವು. ಆದರೆ, ಅದಕ್ಕೆ ಮುಂಚೆ ಏನು ಸಂಭವಿಸಿತು ಎಂಬುದನ್ನು ತಿಳಿದುಕೊಳ್ಳೋಣ. ಕ್ರಿಸ್ತನ ಹಿಂಬಾಲಕರಲ್ಲಿ ಒಬ್ಬನಾಗಿದ್ದ ಸ್ತೆಫನನು ಹುತಾತ್ಮನಾಗಿ ಮಡಿದಾಗ, ಹಿಂಸೆಯ ಅಲೆಯು ಎಲ್ಲೆಲ್ಲೂ ಏಳಲು ಪ್ರಾರಂಭವಾಯಿತು. ಹಿಂಸೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಯೇಸು ಕ್ರಿಸ್ತನ ಅನೇಕ ಶಿಷ್ಯರು ಯೆರೂಸಲೇಮಿನಿಂದ ಓಡಿಹೋದರು. ಹೀಗೆ, ಅವರು ಆಶ್ರಯವನ್ನು ಪಡೆದುಕೊಂಡ ಸ್ಥಳಗಳಲ್ಲಿ ಅಂತಿಯೋಕ್ಯವು ಒಂದಾಗಿತ್ತು. (ಅ. ಕೃತ್ಯಗಳು 11:19) ಅಲ್ಲಿ ಏನು ಸಂಭವಿಸಿತು ಎಂಬುದನ್ನು ತಿಳಿದುಕೊಳ್ಳಬೇಕಾದರೆ, ಮೊದಲು ಈ ನಗರದ ಕುರಿತಾಗಿ ಸ್ವಲ್ಪ ತಿಳಿದುಕೊಳ್ಳುವುದು ಉಪಯುಕ್ತವಾಗಿದೆ.

ಆಗಿನ ಕಾಲದಲ್ಲಿದ್ದ ರೋಮನ್‌ ಸಾಮ್ರಾಜ್ಯದ ನಗರಗಳ ವಿಸ್ತೀರ್ಣ, ಸಮೃದ್ಧಿ ಮತ್ತು ಅವುಗಳ ಪ್ರಾಮುಖ್ಯತೆಯನ್ನು ನೋಡುವಾಗ, ರೋಮ್‌ ಮತ್ತು ಅಲೆಕ್ಸಾಂಡ್ರಿಯಾ ನಗರಗಳ ನಂತರ ಮೂರನೇ ಪ್ರತಿಸ್ಪರ್ಧಿ ನಗರವು ಅಂತಿಯೋಕ್ಯವಾಗಿತ್ತು. ಸಿರಿಯದ ಈ ಮಹಾನಗರವು ಮೆಡಿಟರೇನಿಯನ್‌ ಸಮುದ್ರ ತೀರದ ಈಶಾನ್ಯ ದಿಕ್ಕಿನ ಮೂಲೆಯನ್ನು ಆವರಿಸಿತ್ತು. ಅಂತಿಯೋಕ್ಯವು (ಆಧುನಿಕ ದಿನದ ಟರ್ಕಿ ದೇಶದ ಅಂಟಾಕ್ಯ), ನೌಕಾಯಾನಕ್ಕೆ ಸುಲಭವಾಗಿದ್ದ ಒರಾಂಟಸ್‌ ನದಿಯ ದಡದಲ್ಲಿತ್ತು. ಈ ನದಿಯು, 32 ಕಿಲೋಮೀಟರ್‌ ದೂರದಲ್ಲಿದ್ದ ಸೆಲ್ಯೂಕ್ಯ ಪೆರಿಯಾ ಎಂಬ ರೇವುಪಟ್ಟಣಕ್ಕೆ ಅಂತಿಯೋಕ್ಯವನ್ನು ಸೇರಿಸುತ್ತಿತ್ತು. ಇದರಿಂದಾಗಿ, ಅಂತಿಯೋಕ್ಯವು ರೋಮ್‌ ಹಾಗೂ ಯೂಫ್ರಟಿಸ್‌ ಮತ್ತು ಟೈಗ್ರಿಸ್‌ ಕಣಿವೆ ಪ್ರದೇಶಗಳ ಮಧ್ಯೆ ಇದ್ದ ಅತ್ಯಂತ ಪ್ರಾಮುಖ್ಯವಾದ ವ್ಯಾಪಾರ ಮಾರ್ಗಗಳ ಮೇಲೆ ಏಕಸ್ವಾಮ್ಯವನ್ನು ಹೊಂದಿತ್ತು. ಅಷ್ಟುಮಾತ್ರವಲ್ಲ, ಅಂತಿಯೋಕ್ಯ ನಗರವು ವಾಣಿಜ್ಯದ ಮುಖ್ಯಕೇಂದ್ರವಾಗಿದ್ದರಿಂದ, ಅದು ಇಡೀ ರೋಮ್‌ ಸಾಮ್ರಾಜ್ಯದಾದ್ಯಂತ ವ್ಯಾಪಾರವನ್ನು ಮಾಡುತ್ತಿತ್ತು. ವ್ಯಾಪಾರಕ್ಕಾಗಿ ಬಂದುಹೋಗುತ್ತಿದ್ದ ಎಲ್ಲಾ ತರಹದ ಜನರನ್ನು ಅಲ್ಲಿ ನೋಡಬಹುದಾಗಿತ್ತು. ಇವರು, ರೋಮ್‌ ಸಾಮ್ರಾಜ್ಯದಾದ್ಯಂತ ಆಗುತ್ತಿದ್ದ ಧಾರ್ಮಿಕ ಚಳುವಳಿಗಳ ಕುರಿತ ಸುದ್ದಿಯನ್ನು ತರುತ್ತಿದ್ದರು.

ಅಂತಿಯೋಕ್ಯದಲ್ಲಿ ಗ್ರೀಕ್‌ ಧರ್ಮ ಮತ್ತು ತತ್ವಜ್ಞಾನವು ಎಲ್ಲೆಲ್ಲೂ ಹರಡಿತ್ತು. ಆದರೆ, “ಕ್ರಿಸ್ತನ ಸಮಯದಲ್ಲಿ ಜನರು ತಮ್ಮ ಸಮಸ್ಯೆಗಳಿಗೆ ಹಾಗೂ ಆಸೆ ಆಕಾಂಕ್ಷೆಗಳಿಗೆ ಧರ್ಮದ ಮೂಲಕ ತೃಪ್ತಿಯನ್ನು ಸ್ವತಃ ಅರಸಲು ಪ್ರಾರಂಭಿಸಿದ್ದರು. ಇದರ ಪರಿಣಾಮವಾಗಿ, ಹಳೇ ಧಾರ್ಮಿಕ ಕುಪಂಥಗಳು ಮತ್ತು ತತ್ವಜ್ಞಾನಗಳು ಜನರ ವೈಯಕ್ತಿಕ ನಂಬಿಕೆಗಳಾಗಿ ಬೆಳೆಯಲು ಪ್ರಾರಂಭಿಸಿದವು” (ಸಿರಿಯದಲ್ಲಿರುವ ಅಂತಿಯೋಕ್ಯದ ಚರಿತ್ರೆ [ಇಂಗ್ಲಿಷ್‌]) ಎಂದು ಗ್ಲಾನ್‌ವೆಲ್‌ ಡಾನೆ ಎಂಬ ಇತಿಹಾಸಗಾರರು ಹೇಳುತ್ತಾರೆ. ಇದರಿಂದಾಗಿ, ಅನೇಕರು ಯೆಹೂದಿ ಧರ್ಮದ ಏಕದೇವವಾದ, ಮತಸಂಸ್ಕಾರಗಳು ಮತ್ತು ನೀತಿಶಾಸ್ತ್ರದಲ್ಲಿ ತೃಪ್ತಿಯನ್ನು ಕಂಡುಕೊಂಡರು.

ಸಾ.ಶ.ಪೂ. 300ರಲ್ಲಿ ಅಂತಿಯೋಕ್ಯ ನಗರದ ಸ್ಥಾಪನೆಯಾಯಿತು. ಆಗಿನಿಂದಲೂ ಯೆಹೂದ್ಯರ ದೊಡ್ಡ ಸಮುದಾಯವು ಅಂತಿಯೋಕ್ಯದಲ್ಲಿ ನೆಲೆಸಿತ್ತು. ಅಂತಿಯೋಕ್ಯದ ಜನಸಂಖ್ಯೆಯಲ್ಲಿ 10 ಪ್ರತಿಶತಕ್ಕಿಂತಲೂ ಹೆಚ್ಚಿನವರು ಅಂದರೆ, 20,000ದಿಂದ 60,000ದಷ್ಟು ಮಂದಿ ಯೆಹೂದಿಗಳಿದ್ದರೆಂದು ಅಂದಾಜುಮಾಡಲಾಗಿದೆ. ಚರಿತ್ರೆಗಾರನಾದ ಜೋಸೀಫಸನು ಹೇಳುವುದೇನೆಂದರೆ, ಅಂತಿಯೋಕ್ಯದಲ್ಲಿ ನೆಲಸುವಂತೆ ಯೆಹೂದ್ಯರನ್ನು ಉತ್ತೇಜಿಸುವುದಕ್ಕಾಗಿ, ಸೆಲ್ಯೂಸಿಡ್‌ ರಾಜವಂಶದ ಅರಸರು ಅವರಿಗೆ ಎಲ್ಲಾ ರೀತಿಯ ಪೌರಹಕ್ಕುಗಳನ್ನು ನೀಡಿದ್ದರು. ಅಷ್ಟರೊಳಗಾಗಿ, ಇಬ್ರಿಯ ಭಾಷೆಯ ಶಾಸ್ತ್ರವಚನಗಳು ಗ್ರೀಕ್‌ ಭಾಷೆಯಲ್ಲಿ ಸಿಗಲಾರಂಭಿಸಿದವು. ಇದು, ಮೆಸ್ಸೀಯನ ಕುರಿತಾದ ಯೆಹೂದ್ಯರ ಬೋಧನೆಗಳನ್ನು ಬೆಂಬಲಿಸುತ್ತಿದ್ದವರ ಆಸಕ್ತಿಯನ್ನು ಇನ್ನೂ ಹೆಚ್ಚು ಕೆರಳಿಸಿತು. ಇದರಿಂದಾಗಿ, ಗ್ರೀಕರಲ್ಲಿ ಅನೇಕರು ಯೆಹೂದಿ ಧರ್ಮವನ್ನು ಸ್ವೀಕರಿಸಿದರು. ಈ ಎಲ್ಲಾ ಅಂಶಗಳು, ಕ್ರೈಸ್ತರನ್ನಾಗಿ ಮಾಡುವ ಕೆಲಸಕ್ಕೆ ಅಂತಿಯೋಕ್ಯವನ್ನು ಫಲವತ್ತಾದ ನೆಲವನ್ನಾಗಿ ಮಾಡಿತ್ತು.

ಯೆಹೂದೇತ್ಯರರಿಗೆ ಸಾಕ್ಷಿನೀಡುವುದು

ಯೇಸುವಿನ ಶಿಷ್ಯರು ಹಿಂಸಿಸಲ್ಪಟ್ಟಾಗ ಅವರಲ್ಲಿ ಹೆಚ್ಚಿನವರು ಯೆರೂಸಲೇಮಿನಿಂದ ಓಡಿಹೋದರು. ಹೀಗೆ ಚದರಿಹೋದವರು ಕೇವಲ ಯೆಹೂದ್ಯರೊಂದಿಗೆ ಮಾತ್ರ ತಮ್ಮ ನಂಬಿಕೆಯನ್ನು ಹಂಚಿಕೊಂಡಿದ್ದರು. ಆದರೆ, ಕುಪ್ರದ್ವೀಪ ಮತ್ತು ಕುರೇನ್ಯದ ಕೆಲವು ಶಿಷ್ಯರು ಅಂತಿಯೋಕ್ಯದಲ್ಲಿ “ಗ್ರೀಕರ ಸಂಗಡ” ಸುವಾರ್ತೆಯ ಕುರಿತು ಮಾತಾಡಿದರು. (ಅ. ಕೃತ್ಯಗಳು 11:20) ಗ್ರೀಕ್‌ ಭಾಷೆಯನ್ನು ಮಾತಾಡುತ್ತಿದ್ದ ಯೆಹೂದ್ಯರಿಗೆ ಹಾಗೂ ಯೆಹೂದ್ಯ ಮತಾವಲಂಬಿಗಳಿಗೆ ಸಾರುವುದು ಹೊಸ ವಿಷಯವೇನಾಗಿರಲಿಲ್ಲ. ಏಕೆಂದರೆ, ಈ ಜನರಿಗೆ ಸಾರುವ ಕೆಲಸವು ಸಾ.ಶ. 33ರ ಪಂಚಾಶತ್ತಮದಿಂದಲೇ ನಡೆಯುತ್ತಿತ್ತು. ಆದರೆ, ಅಂತಿಯೋಕ್ಯದಲ್ಲಿ ಸಾರುವುದು ಕ್ರೈಸ್ತರಿಗೆ ಒಂದು ಹೊಸ ಅನುಭವವಾಗಿದ್ದಂತೆ ಕಾಣುತ್ತದೆ. ಏಕೆಂದರೆ, ಅಲ್ಲಿ ಯೆಹೂದ್ಯರಿಗೆ ಮಾತ್ರವಲ್ಲ, ಎಲ್ಲಾ ರೀತಿಯ ಜನರಿಗೂ ಸುವಾರ್ತೆಯು ಸಾರಲ್ಪಟ್ಟಿತು. ಆದರೆ ಇದಕ್ಕೆ ಮೊದಲೇ, ಯೆಹೂದ್ಯನಲ್ಲದ ಕೊರ್ನೇಲ್ಯ ಮತ್ತು ಅವನ ಕುಟುಂಬದವರಿಗೆ ಸಾರಲಾಗಿತ್ತು ಮತ್ತು ಅವರು ಈಗಾಗಲೇ ಕ್ರೈಸ್ತರಾಗಿದ್ದರು. ಆದರೆ ಇದನ್ನು ಮಾಡಲು ಅಂದರೆ ಯೆಹೂದ್ಯರಲ್ಲದವರಿಗೆ ಮತ್ತು ಇತರ ಜನಾಂಗಗಳಿಗೆ ಸಾರುವುದು ಯುಕ್ತವಾಗಿದೆ ಎಂಬುದನ್ನು ಅಪೊಸ್ತಲ ಪೇತ್ರನಿಗೆ ಮನಗಾಣಿಸಲು ಯೆಹೋವ ದೇವರು ಒಂದು ದರ್ಶನವನ್ನೇ ಕೊಟ್ಟು ಅವನಿಗೆ ಅರ್ಥಮಾಡಿಸಬೇಕಾಯಿತು.—ಅ. ಕೃತ್ಯಗಳು 10:1-48.

ತುಂಬ ಹಳೆಯಕಾಲದ ದೊಡ್ಡ ಯೆಹೂದಿ ಸಮುದಾಯವನ್ನು ಹೊಂದಿದ್ದ ಈ ನಗರದಲ್ಲಿ, ಯೆಹೂದ್ಯರ ಮತ್ತು ಯೆಹೂದ್ಯೇತರರ ಮಧ್ಯೆ ಅಷ್ಟೇನೂ ದ್ವೇಷವಿರಲಿಲ್ಲ. ಅಲ್ಲದೆ, ಯೆಹೂದ್ಯೇತರರು ಸುವಾರ್ತೆಗೆ ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು. ಈ ರೀತಿಯ ಬೆಳವಣಿಗೆಗೆ ಅಂತಿಯೋಕ್ಯವು ಉತ್ತಮ ವಾತಾವರಣವನ್ನು ಕಲ್ಪಿಸಿಕೊಟ್ಟಿತ್ತು. ಇದರ ಪರಿಣಾಮವಾಗಿ ‘ಬಹು ಜನರು ನಂಬಿದರು.’ (ಅ. ಕೃತ್ಯಗಳು 11:21) ಅಷ್ಟುಮಾತ್ರವಲ್ಲದೆ, ಈ ಹಿಂದೆ ಅನ್ಯದೇವತೆಗಳನ್ನು ಪೂಜಿಸುತ್ತಿದ್ದು, ನಂತರ ಯೆಹೂದ್ಯ ಮತಾವಲಂಬಿಗಳಾಗಿದ್ದವರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಆಗ, ತಮ್ಮ ಹಿಂದಿನ ಧರ್ಮವನ್ನು ಈಗಲೂ ಅನುಸರಿಸುತ್ತಿದ್ದ ಯೆಹೂದ್ಯರಲ್ಲದವರಿಗೆ ಸಾಕ್ಷಿಕೊಡುವುದು ಅವರಿಗೆ ಸುಲಭವಾಗಿತ್ತು. ಏಕೆಂದರೆ, ಅವರು ಈಗಾಗಲೇ ಯೆಹೂದಿ ಧರ್ಮಕ್ಕೆ ಮತಾಂತರಗೊಂಡಿದ್ದವರಾಗಿದ್ದರು. ಹಾಗೂ ಈಗ ಅವರು ಕ್ರೈಸ್ತಧರ್ಮವನ್ನು ಕೂಡ ತಿಳಿದುಕೊಂಡಿದ್ದರು.

ಅಂತಿಯೋಕ್ಯದಲ್ಲಾಗುತ್ತಿದ್ದ ಪ್ರಗತಿಯು ಯೆರೂಸಲೇಮಿನಲ್ಲಿದ್ದ ಸಭೆಗೆ ಗೊತ್ತಾಯಿತು. ಆಗ, ಈ ಸಂಗತಿಯು ನಿಜವೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಬಾರ್ನಬನನ್ನು ಕಳುಹಿಸಿದರು. ಬಾರ್ನಬನನ್ನು ಆಯ್ಕೆಮಾಡಿದ್ದು ಬುದ್ಧಿವಂತಿಕೆ ಮತ್ತು ಪ್ರೀತಿಯನ್ನು ಸೂಚಿಸಿತು. ಏಕೆಂದರೆ, ಈಗಾಗಲೇ ಯೆಹೂದ್ಯರಲ್ಲದವರಿಗೆ ಸಾರುತ್ತಿದ್ದ ಕೆಲವು ಶಿಷ್ಯರಂತೆ ಬಾರ್ನಬನು ಕೂಡ ಕುಪ್ರ ದ್ವೀಪದವನಾಗಿದ್ದನು. ಆದ್ದರಿಂದ, ಅಂತಿಯೋಕ್ಯದಲ್ಲಿದ್ದ ಯೆಹೂದ್ಯೇತರರೊಂದಿಗೆ ಬೆರೆಯುವುದು ಬಾರ್ನಬನಿಗೆ ಮುಜುಗರವನ್ನು ಉಂಟುಮಾಡಿರಲಾರದು. ಅದೇ ರೀತಿಯಲ್ಲಿ, ಅಲ್ಲಿದ್ದ ಯೆಹೂದ್ಯೇತರರು ಕೂಡ ತಮಗೆ ಪರಿಚಿತವಾಗಿದ್ದ ಒಂದೇ ಸಮುದಾಯದವನಾಗಿದ್ದ ಬಾರ್ನಬನನ್ನು ಸ್ನೇಹಿತನಂತೆ ನೋಡಿದ್ದಿರಬಹುದು. * ಮತ್ತು ಕ್ರೈಸ್ತರು ಅಲ್ಲಿ ಮಾಡುತ್ತಿದ್ದ ಕೆಲಸವನ್ನು ಬಾರ್ನಬನು ಅರ್ಥಮಾಡಿಕೊಳ್ಳಲು ಸಾಧ್ಯವಿತ್ತು. ಆದುದರಿಂದ, ಅವನು “ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು—ನೀವು ದೃಢಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರ್ರಿ ಎಂದು ಅವರೆಲ್ಲರಿಗೆ ಬುದ್ಧಿಹೇಳಿದನು. ಆಗ ಬಹುಮಂದಿ ಕರ್ತನಿಗೆ ಸೇರಿಕೊಂಡರು.”—ಅ. ಕೃತ್ಯಗಳು 11:22-25.

“ಆರಂಭದಲ್ಲೇ ಅಂತಿಯೋಕ್ಯದಲ್ಲಾದ ಕ್ರೈಸ್ತಪ್ರಚಾರದ ಯಶಸ್ಸಿಗೆ ಕಾರ್ಯತಃ ಅನೇಕ ಕಾರಣಗಳಿದ್ದಿರಬಹುದು. ಅವುಗಳಲ್ಲಿ ಒಂದು, ಅಂತಿಯೋಕ್ಯ ನಗರದಲ್ಲಿದ್ದ ಕ್ರೈಸ್ತ ಮಿಷನೆರಿಗಳಿಗೆ, ಯೆರೂಸಲೇಮಿನಲ್ಲಿದ್ದಂತೆ ಮತಭ್ರಾಂತ ಯೆಹೂದ್ಯರ ಕಾಟವಿಲ್ಲದಿದ್ದಿರಬಹುದು. ಎರಡನೆಯದಾಗಿ, ಸಿರಿಯದ ರಾಜಧಾನಿಯಾಗಿದ್ದ ಅಂತಿಯೋಕ್ಯವು ಒಬ್ಬ ಮಿಲಿಟರಿ ಕಮಾಂಡರನ ಕೆಳಗಿದ್ದದ್ದರಿಂದ, ಬಹುಮಟ್ಟಿಗೆ ಅಲ್ಲಿ ಸಾರ್ವಜನಿಕ ಶಿಸ್ತು ಇರುತ್ತಿತ್ತು. ಅಷ್ಟುಮಾತ್ರವಲ್ಲ, ಯೂದಾಯದಲ್ಲಿದ್ದ ಆಡಳಿತಾಧಿಕಾರಿಗಳಿಗೆ (ಕನಿಷ್ಟಪಕ್ಷ ಈ ಸಮಯದಲ್ಲಿ) ಯೆಹೂದಿ ಮತಭ್ರಾಂತರ ಹುಟ್ಟನ್ನು ಅಡಗಿಸಲಾಗುತ್ತಿರಲಿಲ್ಲ. ಆದಕಾರಣ, ಯೆರೂಸಲೇಮಿನಲ್ಲಿ ಈಗಾಗಲೇ ಗಲಾಟೆ ಮತ್ತು ಹಿಂಸಾತ್ಮಕ ಚಟುವಟಿಕೆಗಳು ನಡೆದಿದ್ದವು. ಆದರೆ ಅಂತಿಯೋಕ್ಯದಲ್ಲಿ ಈ ರೀತಿಯ ಚಟುವಟಿಕೆಗಳಿಗೆ ಹೆಚ್ಚು ಆಸ್ಪದವಿರಲಿಲ್ಲ” ಎಂದು ಇತಿಹಾಸಗಾರರಾದ ಡಾನೆ ಸೂಚಿಸುತ್ತಾರೆ.

ಇಂಥ ಅನುಕೂಲಕರ ಪರಿಸ್ಥಿತಿಯಲ್ಲಿ ಮಾಡಲು ಬೇಕಾದಷ್ಟು ಕೆಲಸವಿದ್ದದ್ದನ್ನು ಬಹುಶಃ ಬಾರ್ನಬನು ಅರಿತಿದ್ದಿರಬೇಕು. ಆದುದರಿಂದ, ಸಹಾಯದ ಅಗತ್ಯವನ್ನು ಗ್ರಹಿಸುತ್ತಾ, ತನ್ನ ಸ್ನೇಹಿತನಾದ ಸೌಲನನ್ನು ನೆನಪಿಸಿಕೊಂಡನು. ಆದರೆ ಸಹಾಯಕ್ಕಾಗಿ ಸೌಲನು ಅಥವಾ ಪೌಲನೇ ಯಾಕೆ ಬೇಕಾಗಿತ್ತು? ಏಕೆಂದರೆ, ಪೌಲನು 12 ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿರದಿದ್ದರೂ, ಅನ್ಯಜನಗಳಿಗೆ ಅಪೋಸ್ತಲತನವನ್ನು ಪಡೆದಿದ್ದನೆಂಬುದು ಸ್ಪಷ್ಟವಾಗಿದೆ. (ಅ. ಕೃತ್ಯಗಳು 9:15, 27; ರೋಮಾಪುರ 1:5; ಪ್ರಕಟನೆ 21:14) ಆದುದರಿಂದ, ಯೆಹೂದ್ಯೇತರರ ನಗರವಾದ ಅಂತಿಯೋಕ್ಯದಲ್ಲಿ ಸುವಾರ್ತೆಯನ್ನು ಸಾರುವುದಕ್ಕೆ ಪೌಲನು ಬಾರ್ನಬನಿಗೆ ತಕ್ಕ ಸಂಗಡಿಗನಾಗಿದ್ದನು. (ಗಲಾತ್ಯ 1:16) ಹೀಗಾಗಿ, ಬಾರ್ನಬನು ತಾರ್ಸಕ್ಕೆ ಹೋಗಿ, ಪೌಲನನ್ನು ಹುಡುಕಿ ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು.—ಅ. ಕೃತ್ಯಗಳು 11:25, 26; 26-7ರ ಪುಟಗಳಲ್ಲಿರುವ ರೇಖಾಚೌಕವನ್ನು ನೋಡಿ.

ದೈವಾನುಗ್ರಹದಿಂದ ಕ್ರೈಸ್ತರೆಂದು ಕರೆಯಲ್ಪಟ್ಟರು

ಅಂತಿಯೋಕ್ಯದಲ್ಲಿ ಪೌಲ ಮತ್ತು ಬಾರ್ನಬರು ಒಂದು ವರ್ಷದವರೆಗೂ “ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ [“ದೈವಾನುಗ್ರಹದಿಂದ,” NW ] ಯೇಸುವಿನ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.” ಯೇಸುಕ್ರಿಸ್ತನ ಶಿಷ್ಯರನ್ನು, ಕ್ರೈಸ್ತರು (ಗ್ರೀಕ್‌ ಭಾಷೆಯಲ್ಲಿ) ಅಥವಾ ಮೆಸ್ಸಿಯಾನಿಸ್ಟ್‌ (ಹೀಬ್ರು ಭಾಷೆಯಲ್ಲಿ) ಎಂದು ಮೊದಲಾಗಿ ಕರೆದವರು ಯೆಹೂದ್ಯರಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ, ಅವರು ಯೇಸುವನ್ನು ಮೆಸ್ಸೀಯನಲ್ಲವೆಂದು ತಿರಸ್ಕರಿಸಿದ್ದರು. ಒಂದುವೇಳೆ ಅವರು ಯೇಸುವಿನ ಶಿಷ್ಯರನ್ನು ಕ್ರೈಸ್ತರೆಂದು ಕರೆದಿದ್ದರೆ, ಯೇಸುವನ್ನು ಮೆಸ್ಸೀಯನೆಂದು ಅಂಗೀಕರಿಸಿದ್ದರು ಎಂತಾಗುವುದು, ಅಂಥ ಕೆಲಸವನ್ನು ಅವರು ಎಂದೂ ಮಾಡಿದ್ದಿರಲಾರರು. ವಿಧರ್ಮಿ ಜನರು ಪರಿಹಾಸ್ಯಮಾಡುವುದಕ್ಕಾಗಿ ಯೇಸುವಿನ ಶಿಷ್ಯರಿಗೆ ಕ್ರೈಸ್ತರೆಂದು ಅಡ್ಡಹೆಸರಿಟ್ಟಿರಬಹುದು ಎಂದು ಇನ್ನೂ ಕೆಲವರು ನೆನಸುತ್ತಾರೆ. ಆದರೆ, ಕ್ರೈಸ್ತರು ಎಂಬ ಹೆಸರು ದೇವದತ್ತವಾದುದು ಎಂಬುದನ್ನು ಬೈಬಲ್‌ ತೋರಿಸುತ್ತದೆ.—ಅ. ಕೃತ್ಯಗಳು 11:26.

ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ, ಕ್ರೈಸ್ತರು ಎಂಬ ಹೊಸ ಹೆಸರೊಂದಿಗೆ ಸಂಬಂಧಿಸಲ್ಪಟ್ಟಿರುವ ಕ್ರಿಯಾಪದವನ್ನು ಸಾಮಾನ್ಯವಾಗಿ “ಕರೆಯಲ್ಪಟ್ಟರು” (NW) ಎಂದು ಭಾಷಾಂತರಿಸುತ್ತಾರೆ. ಇದು ಯಾವಾಗಲೂ ಒಂದು ರೀತಿಯ ಅದ್ಭುತಕ್ಕೆ, ದಿವ್ಯವಾಣಿ ಅಥವಾ ದೈವಿಕವಾದ ವಿಷಯದೊಂದಿಗೆ ಸಂಬಂಧಿಸಿರುತ್ತದೆ. ಹಾಗಾಗಿ, ಪಂಡಿತರು ಈ ಪದವನ್ನು “ದಿವ್ಯವಾಣಿಯನ್ನು ಹೇಳುವುದು,” “ದೈವಿಕವಾಗಿ ಅನ್ಯೋನ್ಯವಾದುದು” ಅಥವಾ “ದೈವಿಕ ಆಜ್ಞೆ ಅಥವಾ ಬುದ್ಧಿವಾದವನ್ನು ಕೊಡುವುದು, ಸ್ವರ್ಗದಿಂದ ಕಲಿಸುವುದು” ಎಂಬುದಾಗಿ ತರ್ಜುಮೆಮಾಡುತ್ತಾರೆ. ಯೇಸುವಿನ ಹಿಂಬಾಲಕರು “ದೈವಾನುಗ್ರಹದಿಂದ” ಕ್ರೈಸ್ತರು ಎಂದು ಕರೆಯಲ್ಪಟ್ಟಿರುವುದರಿಂದ, ಈ ಹೆಸರನ್ನು ನೀಡುವಂತೆ ಪೌಲ ಮತ್ತು ಬಾರ್ನಬರಿಗೆ ಯೆಹೋವನು ಮಾರ್ಗದರ್ಶಿಸಿದ್ದಿರಸಾಧ್ಯವಿದೆ.

ಹೀಗೆ, ಈ ಹೊಸ ಹೆಸರನ್ನು ಯೇಸುವಿನ ಶಿಷ್ಯರಿಗೆ ಉಪಯೋಗಿಸುವುದು ಮುಂದುವರಿಯಿತು. ಆದ್ದರಿಂದ, ಯೇಸುವಿನ ಶಿಷ್ಯರನ್ನು ಯೆಹೂದಿ ಧರ್ಮದ ಒಂದು ಪಂಗಡವಾಗಿ ಇನ್ನೆಂದೂ ಅಪಾರ್ಥಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಏಕೆಂದರೆ, ಈ ಎರಡೂ ಧರ್ಮಗಳು ಸಂಪೂರ್ಣವಾಗಿ ಭಿನ್ನವಾಗಿದ್ದವು. ಸಾ.ಶ. 58ರೊಳಗಾಗಿ ಕ್ರಿಸ್ತರು ಯಾರೆಂಬುದು ರೋಮನ್‌ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿತ್ತು. (ಅ. ಕೃತ್ಯಗಳು 26:28) ಸಾ.ಶ. 64ರೊಳಗೆ, ಕ್ರೈಸ್ತರು ಎಂಬ ಹೆಸರು ರೋಮ್‌ನಲ್ಲಿದ್ದ ಜನಸಮೂಹಕ್ಕೆ ಕೂಡ ಚಿರಪರಿಚಿತವಾಗಿತ್ತು ಎಂದು ಇತಿಹಾಸಗಾರನಾದ ಟ್ಯಾಸಿಟಸ್‌ ಹೇಳುತ್ತಾನೆ.

ಯೆಹೋವನು ತನ್ನ ನಂಬಿಗಸ್ತರನ್ನು ಉಪಯೋಗಿಸುತ್ತಾನೆ

ಅಂತಿಯೋಕ್ಯದಲ್ಲಿ ಸುವಾರ್ತೆಯು ಒಳ್ಳೇ ಪ್ರಗತಿಯನ್ನು ಮಾಡಿತು. ಯೆಹೋವನ ಆಶೀರ್ವಾದ ಮತ್ತು ಸಾರುವ ಕೆಲಸವನ್ನು ಪಟ್ಟುಬಿಡದೆ ಮಾಡಬೇಕೆನ್ನುವ ಯೇಸುವಿನ ಶಿಷ್ಯರ ದೃಢಸಂಕಲ್ಪದ ಪರಿಣಾಮವಾಗಿ, ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತಧರ್ಮಕ್ಕೆ ಅಂತಿಯೋಕ್ಯವು ಒಂದು ಮುಖ್ಯಕೇಂದ್ರವಾಯಿತು. ದೂರದೂರದ ದೇಶಗಳಿಗೆ ಸುವಾರ್ತೆಯು ಹಬ್ಬುವಂತೆ ಮಾಡಲು ಅಂತಿಯೋಕ್ಯದಲ್ಲಿದ್ದ ಕ್ರೈಸ್ತ ಸಭೆಯನ್ನು ದೇವರು ಒಂದು ಕೇಂದ್ರಬಿಂದುವಾಗಿ ಉಪಯೋಗಿಸಿದನು. ಉದಾಹರಣೆಗೆ, ಅಪೊಸ್ತಲ ಪೌಲನು ಹೆಚ್ಚು ಪ್ರಯಾಸಕರವಾದ ಪ್ರತಿಯೊಂದು ಮಿಷನೆರಿ ಪ್ರಯಾಣವನ್ನು ಅಂತಿಯೋಕ್ಯದಿಂದಲೇ ಪ್ರಾರಂಭಿಸಿದನು.

ಇದೇ ರೀತಿಯಲ್ಲಿ, ಆಧುನಿಕ ದಿನಗಳಲ್ಲಿ ಕೂಡ ವಿರೋಧದ ಮಧ್ಯೆಯೂ ಸಹೋದರರು ಹುರುಪಿನಿಂದಲೂ ದೃಢಸಂಕಲ್ಪದಿಂದಲೂ ಸಾರುವ ಕೆಲಸವನ್ನು ಮುಂದುವರಿಸಿದ್ದಾರೆ. ಇದರ ಪರಿಣಾಮವಾಗಿ ಸುವಾರ್ತೆಯನ್ನು ಕೇಳಿ ಅದಕ್ಕೆ ಗಣ್ಯತೆಯನ್ನು ತೋರಿಸುವ ಸಂದರ್ಭವು ಅನೇಕರಿಗೆ ಸಿಕ್ಕಿದೆ. ಮತ್ತು ಇದು ನಿಜ ಕ್ರೈಸ್ತ ಧರ್ಮವು ಹರಡಲು ನೆರವಾಗಿದೆ. * ಆದ್ದರಿಂದ, ಸತ್ಯಾರಾಧನೆಗಾಗಿ ನೀವು ಬೆಂಬಲವನ್ನು ನೀಡುತ್ತಿರುವುದಕ್ಕಾಗಿ ವಿರೋಧವನ್ನು ಎದುರಿಸುವಲ್ಲಿ, ಅದನ್ನು ಅನುಮತಿಸಲು ಯೆಹೋವನಿಗೆ ಕಾರಣವಿದೆ ಎಂಬುದನ್ನು ಮರೆಯಬೇಡಿ. ಪ್ರಥಮ ಶತಮಾನದಲ್ಲಿದ್ದಂತೆ, ಇಂದೂ ಸಹ ದೇವರ ರಾಜ್ಯದ ಕುರಿತು ಕೇಳಿಸಿಕೊಳ್ಳಲು ಮತ್ತು ಅದಕ್ಕಾಗಿ ತಮ್ಮ ನಿಲುವನ್ನು ತೆಗೆದುಕೊಳ್ಳಲು ಜನರಿಗೆ ಅವಕಾಶ ಸಿಗಬೇಕು. ಯೆಹೋವನಿಗೆ ನಂಬಿಗಸ್ತಿಕೆಯಿಂದ ಅನುದಿನವೂ ಸೇವೆಸಲ್ಲಿಸಬೇಕೆಂಬ ನಿಮ್ಮ ದೃಢಸಂಕಲ್ಪವು ತಾನೇ, ಸತ್ಯದ ಕುರಿತು ನಿಷ್ಕೃಷ್ಟ ಜ್ಞಾನಕ್ಕೆ ಬರಲು ಬೇರೊಬ್ಬರಿಗೆ ಸಹಾಯಕರವಾಗಿರಬಹುದು.

[ಪಾದಟಿಪ್ಪಣಿಗಳು]

^ ಪ್ಯಾರ. 9 ಆಗಸವು ತಿಳಿಯಾಗಿರುವ ದಿನಗಳಲ್ಲಿ ಅಂತಿಯೋಕ್ಯದ ನೈರುತ್ಯ ದಿಕ್ಕಿನಲ್ಲಿರುವ ಕ್ಯಾಸಿಯಸ್‌ ಪರ್ವತದ ಮೇಲಿಂದ ಕುಪ್ರ ದ್ವೀಪವನ್ನು ಸ್ಪಷ್ಟವಾಗಿ ನೋಡಬಹುದು.

^ ಪ್ಯಾರ. 18 ಕಾವಲಿನಬುರುಜು ಪತ್ರಿಕೆಯ 1999, ಆಗಸ್ಟ್‌ 1ರ ಸಂಚಿಕೆಯಲ್ಲಿರುವ ಪುಟ 9 ಅನ್ನು ನೋಡಿ; ಹಾಗೆಯೇ, ಎಚ್ಚರ! ಪತ್ರಿಕೆಯ (ಇಂಗ್ಲಿಷ್‌) 1999ರ ಏಪ್ರಿಲ್‌ 22ರ ಸಂಚಿಕೆಯಲ್ಲಿರುವ ಪುಟ 21-2 ಹಾಗೂ ಯಿಯರ್‌ಬುಕ್‌ ಆಫ್‌ ಜೆಹೋವಾಸ್‌ ವಿಟ್‌ನೆಸಸ್‌ ಪುಸ್ತಕದ ಪುಟ 250-2 ಅನ್ನು ನೋಡಿರಿ.

[ಪುಟ 26, 27ರಲ್ಲಿರುವ ಚೌಕ/ಚಿತ್ರಗಳು]

ಸೌಲನ “ಅಜ್ಞಾತ ವರ್ಷಗಳು”

ಸುಮಾರು ಸಾ.ಶ. 36ರಲ್ಲಿ ಸೌಲನನ್ನು ಕೊಲ್ಲುವುದಕ್ಕಾಗಿ ಯೆರೂಸಲೇಮಿನಲ್ಲಿ ಮಾಡಲ್ಪಟ್ಟ ಕುತಂತ್ರಗಳು ವಿಫಲವಾದಾಗ, ಅವನ ಜೊತೆ ವಿಶ್ವಾಸಿಗಳು ಅವನನ್ನು ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು. (ಅ. ಕೃತ್ಯಗಳು 9:28-30; 11:25) ಇದು, ಅಪೊಸ್ತಲ ಕೃತ್ಯಗಳ ಪುಸ್ತಕದಲ್ಲಿ ಸೌಲನ ಕುರಿತಾದ ಕೊನೆಯ ಉಲ್ಲೇಖವಾಗಿದೆ. ಸೌಲನು, ಸುಮಾರು ಸಾ.ಶ. 45ರಲ್ಲಿ ಅಂತಿಯೋಕ್ಯಕ್ಕೆ ಹೋದನು. ಈ ಮಧ್ಯೆ ಅಂದರೆ, ಸಾ.ಶ. 36ರಿಂದ 45ರ ವರೆಗೆ ಒಂಬತ್ತು ವರ್ಷಗಳು ಕಳೆದಿದ್ದವು. ಈ ಕಾಲಾವಧಿಯನ್ನು ಸೌಲನ ಅಜ್ಞಾತ ವರ್ಷಗಳೆಂದು ಕರೆಯಲಾಗುತ್ತದೆ. ಈ ವರ್ಷಗಳಲ್ಲಿ ಸೌಲನು ಏನು ಮಾಡುತ್ತಿದ್ದನು?

ಯೆರೂಸಲೇಮಿನಿಂದ ಸೌಲನು ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯಗಳಿಗೆ ಹೋದನು. ಅಲ್ಲಿಂದ, ಯೂದಾಯದಲ್ಲಿದ್ದ ಸಭೆಯವರಿಗೆ ಸೌಲನ ಕುರಿತು ಈ ರೀತಿಯ ವರದಿ ಸಿಕ್ಕಿತು: “ಪೂರ್ವದಲ್ಲಿ ನಮ್ಮನ್ನು ಹಿಂಸೆಪಡಿಸಿದವನು ತಾನು ಹಾಳುಮಾಡುತ್ತಿದ್ದ ಮತವನ್ನು ಈಗ ಪ್ರಸಿದ್ಧಿಪಡಿಸುತ್ತಾನೆ.” (ಗಲಾತ್ಯ 1:21-23) ಈ ವರದಿಯು, ಬಾರ್ನಬನೊಂದಿಗೆ ಸೌಲನು ಅಂತಿಯೋಕ್ಯದಲ್ಲಿ ಮಾಡುತ್ತಿದ್ದ ಚಟುವಟಿಕೆಗಳನ್ನು ಸೂಚಿಸಿದ್ದಿರಬಹುದು. ಆದರೆ, ಇದಕ್ಕೆ ಮುಂಚೆ ಕೂಡ ಸೌಲನು ಸುಮ್ಮನೆ ಕೈಕಟ್ಟಿಕೊಂಡು ಕುಳಿತುಕೊಂಡಿರಲಿಲ್ಲ. ಏಕೆಂದರೆ, ಸಾ.ಶ. 49ರೊಳಗಾಗಿ ಸಿರಿಯ ಮತ್ತು ಕಿಲಿಕ್ಯದಲ್ಲಿ ಅನೇಕ ಸಭೆಗಳಿದ್ದವು. ಅವುಗಳಲ್ಲಿ ಒಂದು ಸಭೆಯು ಅಂತಿಯೋಕ್ಯದಲ್ಲಿತ್ತು ಮತ್ತು ಉಳಿದ ಸಭೆಗಳು ಸೌಲನ ಅಜ್ಞಾತ ವರ್ಷಗಳೆಂದು ಕರೆಯಲಾಗುವ ಸಮಯಾವಧಿಯಲ್ಲಿ ಮಾಡಲ್ಪಟ್ಟ ಚಟುವಟಿಕೆಗಳ ಪರಿಣಾಮವಾಗಿದ್ದಿರಬಹುದು ಎಂದು ಕೆಲವರು ನೆನಸುತ್ತಾರೆ.—ಅ. ಕೃತ್ಯಗಳು 11:26; 15:23, 41.

ಸೌಲನ ಜೀವನದಲ್ಲಾದಂಥ ನಾಟಕೀಯ ಘಟನೆಗಳು ಕೂಡ ಆ ಅವಧಿಯಲ್ಲೇ ನಡೆದಿರಬೇಕು ಎಂದು ಕೆಲವು ವಿದ್ವಾಂಸರು ನೆನಸುತ್ತಾರೆ. ‘ಕ್ರಿಸ್ತನ ಸೇವಕನಾಗಿ’ ಸೌಲನು ಅನುಭವಿಸಿದ ಅನೇಕ ಕಷ್ಟದೆಸೆಗಳು, ಅವನ ಮಿಷನೆರಿಯಾಗಿದ್ದ ವರ್ಷಗಳಲ್ಲಿ ಎಲ್ಲಿ ನಡೆದವು, ಯಾವಾಗ ನಡೆದವು ಎಂದು ತೀರ್ಮಾನಿಸುವುದು ಬಹಳ ಕಷ್ಟ. (2 ಕೊರಿಂಥ 11:23-27) ಉದಾಹರಣೆಗೆ, ಸೌಲನು ಯೆಹೂದ್ಯರಿಂದ 39 ಏಟುಗಳನ್ನು ಐದು ಬಾರಿ ತಿಂದದ್ದು ಯಾವಾಗ? ಮತ್ತು ಮೂರು ಸಾರಿ ಚಡಿಗಳಿಂದ ಹೊಡೆಸಿಕೊಂಡಿದ್ದು ಎಲ್ಲಿ? ಅವನು ‘ಹೆಚ್ಚಾಗಿ’ ಸೆರೆಮನೆಗಳಲ್ಲಿ ಹಾಕಲ್ಪಟ್ಟಿದ್ದು ಎಲ್ಲಿ? ರೋಮ್‌ನಲ್ಲಿ ಅವನನ್ನು ಕೈದು ಮಾಡಿದ್ದು ಈ ಘಟನೆಗಳ ನಂತರವೇ. ಒಮ್ಮೆ ಫಿಲಿಪ್ಪಿಯಲ್ಲಿ ಅವನನ್ನು ಜೈಲಿನಲ್ಲಿ ಹಾಕಿ ಹೊಡೆದ ವರದಿ ಬೈಬಲಿನಲ್ಲಿದೆ. ಆದರೆ ಇನ್ನಿತರ ಸೆರೆವಾಸಗಳು ಎಲ್ಲಿ ಯಾವಾಗ ಸಂಭವಿಸಿದವು? (ಅ. ಕೃತ್ಯಗಳು 16:22, 23) ಇದರ ಕುರಿತಾಗಿ ಒಬ್ಬ ಲೇಖಕನು ಸೂಚಿಸುವುದೇನೆಂದರೆ, ಈ ಸಮಯದಲ್ಲಿ ಸೌಲನು “ಕ್ರಿಸ್ತನ ಕುರಿತು ಡಯಾಸ್ಪೊರದ ದೇವಾಲಯಗಳಲ್ಲಿ ಸಾಕ್ಷಿಕೊಡುತ್ತಿದ್ದ ರೀತಿಯು ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಧಾರ್ಮಿಕ ಅಧಿಕಾರಿಗಳಿಂದ ಹಾಗೂ ಪ್ರಜಾಧಿಪತಿಗಳಿಂದ ಹಿಂಸೆಯನ್ನು ಅವನು ಬರಮಾಡಿಕೊಂಡನು.”

ಪೌಲನು ನಾಲ್ಕು ಬಾರಿ ಹಡಗೊಡೆತವನ್ನು ಅನುಭವಿಸಿದ್ದನು. ಆದರೆ ಶಾಸ್ತ್ರವಚನಗಳು ಒಂದು ಹಡಗೊಡೆತದ ಕುರಿತು ಮಾತ್ರ ತಿಳಿಸುತ್ತದೆ. ಇದು ಸೌಲನು ಕೊರಿಂಥದವರಿಗೆ ತನ್ನ ಸಂಕಷ್ಟಗಳನ್ನು ತಿಳಿಸಿದ ಮೇಲೆ ಸಂಭವಿಸಿತ್ತು. (ಅ. ಕೃತ್ಯಗಳು 27:27-44) ಹಾಗಾದರೆ, ಅವನು ಅನುಭವಿಸಿದ ಉಳಿದ ಮೂರು ಹಡಗೊಡೆತಗಳು ಅವನು ಸಮುದ್ರಪ್ರಯಾಣಗಳನ್ನು ಮಾಡುತ್ತಿದ್ದ ಸಮಯದಲ್ಲಿ ಸಂಭವಿಸಿದ್ದಿರಬೇಕು. ಆದರೆ, ಅವುಗಳ ಕುರಿತು ನಮ್ಮ ಬಳಿ ಯಾವ ಮಾಹಿತಿಯೂ ಇಲ್ಲ. ಇವುಗಳಲ್ಲಿ ಯಾವುದೇ ಒಂದು ಘಟನೆ ಅಥವಾ ಎಲ್ಲಾ ಘಟನೆಗಳು ‘ಅಜ್ಞಾತ ವರ್ಷಗಳಲ್ಲೇ’ ನಡೆದಿದ್ದರೂ, ಆ ಸುದ್ದಿಯು ಯೂದಾಯಕ್ಕೆ ಖಂಡಿತವಾಗಿಯೂ ತಲುಪಿತ್ತು ಎಂಬುದರಲ್ಲಿ ಆಶ್ಚರ್ಯವೇ ಇಲ್ಲ!

2 ಕೊರಿಂಥ 12:2-5ರಲ್ಲಿ ತಿಳಿಸಲ್ಪಟ್ಟಿರುವ ಇನ್ನೊಂದು ಘಟನೆಯು ಕೂಡ ಇದೇ ಸಮಯದಲ್ಲಿ ನಡೆದಿರಬೇಕೆಂದು ಅನಿಸುತ್ತದೆ. ಆ ವಚನದಲ್ಲಿ ಸೌಲನು ಹೇಳುವುದು: ‘ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು, ಅವನು ಹದಿನಾಲ್ಕು ವರುಷಗಳ ಹಿಂದೆ ಮೂರನೆಯ ಆಕಾಶದ ಪರಿಯಂತರಕ್ಕೂ ಒಯ್ಯಲ್ಪಟ್ಟನು. ಅಂಥ ಮನುಷ್ಯನು ಪರದೈಸಕ್ಕೆ ಒಯ್ಯಲ್ಪಟ್ಟು ಮನುಷ್ಯರು ನುಡಿಯಲಶಕ್ಯವಾದ ಹೇಳಬಾರದ ಮಾತುಗಳನ್ನು ಕೇಳಿದನೆಂದು ಬಲ್ಲೆನು.’ ಸೌಲನು ತನ್ನ ಕುರಿತಾಗಿಯೇ ಮಾತನಾಡುತ್ತಿದ್ದನು ಎಂಬುದು ಸ್ಪಷ್ಟ. ಏಕೆಂದರೆ, ಈ ಪತ್ರವನ್ನು ಅವನು ಸುಮಾರು ಸಾ.ಶ. 55ರಲ್ಲಿ ಬರೆದಿದ್ದನು. ಅಲ್ಲಿಂದ 14 ವರ್ಷಗಳಷ್ಟು ಹಿಂದೆ ಹೋಗುವುದಾದರೆ, ನಾವು ಸಾ.ಶ. 41ಕ್ಕೆ ಬರುತ್ತೇವೆ. ಅದು ‘ಅಜ್ಞಾತ ವರ್ಷಗಳ’ ಮಧ್ಯ ಭಾಗದಲ್ಲಿ ನಡೆದ ಘಟನೆಯಾಗಿದೆ.

ಅಲ್ಲಿ ಸೌಲನಿಗಾದ ದರ್ಶನವು ಖಂಡಿತವಾಗಿಯೂ ಅವನಿಗೆ ವಿಶೇಷ ರೀತಿಯ ಒಳನೋಟವನ್ನು ಕೊಟ್ಟಿತು. ಆದರೆ, ಆ ದರ್ಶನವು ಅವನನ್ನು ‘ಅನ್ಯಜನರಿಗೆ ಅಪೊಸ್ತಲನಾಗುವಂತೆ’ ಸಜ್ಜುಗೊಳಿಸುವುದಕ್ಕಾಗಿ ನೀಡಲ್ಪಟ್ಟಿತ್ತೋ? (ರೋಮಾಪುರ 11:13) ಹಾಗೂ ತದನಂತರ, ಅವನು ಆಲೋಚಿಸಿದ, ಬರೆದ ಮತ್ತು ಮಾತಾನಾಡಿದ ರೀತಿಯನ್ನು ಅದು ಪ್ರಭಾವಿಸಿತೋ? ಸೌಲನ ಮತಾಂತರದ ನಂತರ ಹಾಗೂ ಅಂತಿಯೋಕ್ಯಕ್ಕೆ ಬರುವಂತೆ ಕರೆ ಸಿಗುವುದಕ್ಕೆ ಮುಂಚಿನ ವರ್ಷಗಳು ಅವನನ್ನು ತರಬೇತಿಗೊಳಿಸುವುದಕ್ಕಾಗಿಯೂ ಮತ್ತು ಭವಿಷ್ಯದಲ್ಲಿ ಅವನು ತೆಗೆದುಕೊಳ್ಳಲಿರುವ ಜವಾಬ್ದಾರಿಗಳಿಗಾಗಿ ಪ್ರೌಢನಾಗುವುದಕ್ಕಾಗಿಯೂ ಅದು ನೆರವಾಯಿತೋ? ಇಂಥ ಪ್ರಶ್ನೆಗಳಿಗೆ ಉತ್ತರವೂ ಏನೇ ಆಗಿರಲಿ, ಸಾರುವ ಕೆಲಸವನ್ನು ಮುಂದುವರಿಸಲು ಸಹಾಯಮಾಡುವಂತೆ ಬಾರ್ನಬನು ಸೌಲನನ್ನು ಕರೆದಾಗ, ಹುರುಪುಳ್ಳ ಸೌಲನು ತನ್ನ ನೇಮಕವನ್ನು ಪೂರೈಸಲು ಸಂಪೂರ್ಣವಾಗಿ ಅರ್ಹನಾಗಿದ್ದನು ಎಂಬುದರ ಕುರಿತು ನಾವು ಖಾತ್ರಿಯಿಂದಿರಬಹುದು.—ಅ. ಕೃತ್ಯಗಳು 11:19-26.

[ಪುಟ 25ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

[ಪುಟ 25ರಲ್ಲಿರುವ ಚಿತ್ರ]

ಸಿರಿಯ

ಒರಾಂಟಸ್‌

ಅಂತಿಯೋಕ್ಯ

ಸೆಲ್ಯೂಕ್ಯ

ಕುಪ್ರ ದ್ವೀಪ

ಮೆಡಿಟರೇನಿಯನ್‌ ಸಮುದ್ರ

ಯೆರೂಸಲೇಮ್‌

[ಕೃಪೆ]

Mountain High Maps® Copyright © 1997 Digital Wisdom, Inc.

[ಪುಟ 24ರಲ್ಲಿರುವ ಚಿತ್ರ]

ಮೇಲೆ: ಆಧುನಿಕ ದಿನದ ಅಂತಿಯೋಕ್ಯ

ಮಧ್ಯೆ: ಸೆಲ್ಯೂಕ್ಯ ನಗರದ ದಕ್ಷಿಣದಿಕ್ಕಿನಿಂದ ಕಾಣಸಿಗುವ ದೃಶ್ಯ

ಕೆಳಗೆ: ಸೆಲ್ಯೂಕ್ಯ ನಗರದ ಬಂದರಿನ ಗೋಡೆ