ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧಿಕಾರಕ್ಕೆ ಅಗೌರವ—ಹೆಚ್ಚುತ್ತಿರಲು ಕಾರಣವೇನು?

ಅಧಿಕಾರಕ್ಕೆ ಅಗೌರವ—ಹೆಚ್ಚುತ್ತಿರಲು ಕಾರಣವೇನು?

ಅಧಿಕಾರಕ್ಕೆ ಅಗೌರವ—ಹೆಚ್ಚುತ್ತಿರಲು ಕಾರಣವೇನು?

“ಸಾಮಾಜಿಕ, ಧಾರ್ಮಿಕ, ರಾಜಕೀಯ ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ, ಎಲ್ಲೆಡೆಯೂ ಅಧಿಕಾರಕ್ಕೆ ಎದುರುಬೀಳುವುದು ಕಳೆದ ದಶಕದ ಅತ್ಯಂತ ಗಮನಾರ್ಹವಾದ ಘಟನೆಯಾಗಿತ್ತು ಎಂದು ಈ ಲೋಕವು ಒಂದು ದಿನ ಮಾತಾಡುವುದು.”

ಇತಿಹಾಸಗಾರ್ತಿ ಹಾಗೂ ತತ್ವಜ್ಞಾನಿ ಹಾನಾ ಆ್ಯರೆಂಟ್‌, ಕಳೆದ ದಶಕ ಎಂದು ಯಾವುದನ್ನು ಸೂಚಿಸಿ ಹೇಳಿದರು? ಅದು 1960ರಿಂದ 1970ರ ನಡುವಿನ ವರ್ಷಗಳೇ. ಅವರು ಈ ಮಾತನ್ನು ಹೇಳಿ ಅನೇಕ ವರ್ಷಗಳೇ ಉರುಳಿಹೋಗಿವೆ. ಆದರೂ, ಇಂದು ಅಧಿಕಾರಕ್ಕೆ ಅಗೌರವವನ್ನು ತೋರಿಸುವುದು ಹೆಚ್ಚಾಗುತ್ತಿದೆಯೇ ವಿನಹಃ ಕಡಿಮೆಯಾಗುತ್ತಿಲ್ಲ.

ಸಾಮಾನ್ಯವಾಗಿ, ಶಿಕ್ಷಕರು ಶಾಲೆಯಲ್ಲಿ ಮಕ್ಕಳನ್ನು ಶಿಸ್ತುಗೊಳಿಸುತ್ತಾರೆ. ಉದಾಹರಣೆಗೆ, ಇತ್ತೀಚೆಗೆ ಲಂಡನ್ನಿನ ದ ಟೈಮ್ಸ್‌ ಪತ್ರಿಕೆಯ ವರದಿಯು ಇದರ ಕುರಿತು ಹೇಳಿದ್ದು: “ಕೆಲವು ಹೆತ್ತವರು ತಮ್ಮ ಮಕ್ಕಳ ಮೇಲೆ ಶಾಲೆಯ ಶಿಕ್ಷಕರಿಗಿರುವ ಅಧಿಕಾರವನ್ನು ಅಂಗೀಕರಿಸಲು ಸಿದ್ಧರಾಗಿಲ್ಲ. ಮಕ್ಕಳನ್ನು ಶಿಸ್ತುಗೊಳಿಸುವ ಪ್ರಯತ್ನವನ್ನು ಶಿಕ್ಷಕರು ಮಾಡುವಾಗ ಹೆತ್ತವರು ಅವರ ಮೇಲೆ ದೂರು ಕೊಡುತ್ತಾರೆ.” ಆದರೆ, ಕೆಲವು ಹೆತ್ತವರು ಅವರನ್ನು ಬೆದರಿಸುವುದಕ್ಕಾಗಿ ಮಾತ್ರವಲ್ಲ, ಅವರ ಮೇಲೆ ಹಲ್ಲೆ ಮಾಡುವುದಕ್ಕಾಗಿಯೂ ಶಾಲೆಗೆ ಬರುತ್ತಾರೆ.

ಬ್ರಿಟನ್ನಿನಲ್ಲಿರುವ ಮುಖ್ಯೋಪಾಧ್ಯಾಯರ ರಾಷ್ಟ್ರೀಯ ಸಂಘದ ಒಬ್ಬ ಪ್ರತಿನಿಧಿಯು ಹೀಗೆ ಹೇಳಿರುವುದಾಗಿ ತಿಳಿಸಲಾಯಿತು: “ಹೆತ್ತವರು, ‘ನಮಗೆ ಹಕ್ಕಿದೆ’ ಎಂದು ಹೇಳುತ್ತಾರೆಯೇ ಹೊರತು, ‘ನಮಗೆ ಜವಾಬ್ದಾರಿ ಕೂಡ ಇದೆ’ ಎಂದು ಹೇಳುವುದಿಲ್ಲ.” ಹೆತ್ತವರು, ಅಧಿಕಾರದಲ್ಲಿರುವವರಿಗೆ ಭಯಭಕ್ತಿ ಮತ್ತು ಗೌರವವನ್ನು ತೋರಿಸುವುದರ ಕುರಿತು ತಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ವಿಫಲರಾಗಿದ್ದಾರೆ. ಅಷ್ಟುಮಾತ್ರವಲ್ಲ, ಕೆಲವು ಹೆತ್ತವರು ತಮ್ಮ ಮಕ್ಕಳನ್ನು ತಾವೂ ತಿದ್ದುವುದಿಲ್ಲ, ಬೇರೆಯವರನ್ನೂ ತಿದ್ದಲು ಬಿಡುವುದಿಲ್ಲ. ಇದು ನಮ್ಮ “ಹಕ್ಕು” ಎಂದು ಮಕ್ಕಳು ತಮ್ಮ ಹಕ್ಕಿನ ಕುರಿತು ಎಬ್ಬಿಸಿರುವ ಸ್ವರವನ್ನು ಅನುಮತಿಸಿರುವ ಪರಿಣಾಮವು, ಹೆತ್ತವರ ಹಾಗೂ ಅಧ್ಯಾಪಕರ ಅಧಿಕಾರಕ್ಕೆ ತಿರಸ್ಕಾರವನ್ನು ತೋರಿಸುವಂತೆ ಅವರನ್ನು ನಡೆಸಿದೆ. ಇದರ ಫಲಿತಾಂಶವು ನಮಗೆಲ್ಲರಿಗೂ ಗೊತ್ತಿರುವ ಹಾಗೆ ತೀರ ಹದಗೆಟ್ಟ ಸ್ಥಿತಿಯಾಗಿದೆ. ಅಂದರೆ, “ಅಧಿಕಾರಕ್ಕೆ ಕಿಂಚಿತ್ತೂ ಗೌರವವನ್ನು ತೋರಿಸದ ಒಂದು ಹೊಸ ಪೀಳಿಗೆಯು ಹುಟ್ಟಿಕೊಂಡಿದೆ. ಈ ಪೀಳಿಗೆಗೆ ಸರಿ ಯಾವುದು ತಪ್ಪು ಯಾವುದು ಎಂಬುದರ ಪರಿಜ್ಞಾನವೇ ಇಲ್ಲ” ಎಂದು ಅಂಕಣಗಾರ್ತಿಯಾದ ಮಾರ್ಗರೆಟ್‌ ಡ್ರಿಸ್‌ಕೋಲ್‌ ಬರೆಯುತ್ತಾರೆ.

ಟೈಮ್‌ ಪತ್ರಿಕೆಯು “ಹಾಳಾದ ಸಂತತಿ” ಎಂಬ ಲೇಖನದಲ್ಲಿ, ಗೊಂದಲಕ್ಕೀಡಾಗಿರುವ ರಷ್ಯಾದ ಅನೇಕ ಯುವಜನರ ಕುರಿತು ಸೂಚಿಸಿತ್ತು. ಇದಕ್ಕೆ ಕಾರಣವೇನೆಂಬುದನ್ನು ಒಬ್ಬ ಪ್ರಸಿದ್ಧ ರ್ಯಾಪ್‌ ಸಂಗೀತ ಗಾಯಕನ ಹೇಳಿಕೆಯು ಸೂಚಿಸುತ್ತದೆ. ಅವನು ಹೇಳಿದ್ದೇನೆಂದರೆ: “ಸಕಲವೂ ನಶ್ವರವಾಗಿರುವ ಹಾಗೂ ಅನ್ಯಾಯವೇ ತುಂಬಿರುವ ಈ ಲೋಕದಲ್ಲಿ ಯಾವ ಮಾನವನಾದರೂ ಹೇಗೆ ತಾನೇ ನಂಬಿಕೆಯಿಟ್ಟಾನು.” ಹಾಗೆಯೇ, ಸಮಾಜಶಾಸ್ತ್ರಜ್ಞನಾದ ಮಿಕಾಯೆಲ್‌ ಟಾಪ್‌ಲೋವ್‌ ತಮ್ಮ ಅಭಿಪ್ರಾಯವನ್ನು ಸೇರಿಸುತ್ತಾರೆ: “ಈಗಿನ ಕಾಲದ ಮಕ್ಕಳೇನೂ ಮೂರ್ಖರಲ್ಲ. ಏಕೆಂದರೆ, ತಮ್ಮ ಹೆತ್ತವರಿಗೆ ಸರ್ಕಾರವು ಯಾವ ರೀತಿಯಲ್ಲಿ ಮೋಸಮಾಡಿದೆ ಎಂಬುದನ್ನು ಅವರು ನೋಡಿದ್ದಾರೆ. ಅಷ್ಟುಮಾತ್ರವಲ್ಲ, ತಮ್ಮ ಹೆತ್ತವರು ಖಾತೆಯಲ್ಲಿರುವ ಹಣವನ್ನಲ್ಲದೆ ಕೆಲಸವನ್ನು ಸಹ ಕಳೆದುಕೊಂಡಿರುವುದನ್ನು ಅವರು ನೋಡಿದ್ದಾರೆ. ಹೀಗಿರುವಾಗ, ಅವರು ಅಧಿಕಾರಿಗಳಿಗೆ ಗೌರವವನ್ನು ತೋರಿಸುವರೆಂದು ನಾವು ಹೇಗೆ ನಿರೀಕ್ಷಿಸಲು ಸಾಧ್ಯ?”

ಆದರೆ, ಅದೇ ಸಮಯದಲ್ಲಿ ಅಧಿಕಾರದಲ್ಲಿರುವವರ ಮೇಲೆ ನಂಬಿಕೆಯನ್ನು ಕಳೆದುಕೊಂಡಿರುವವರು ಕೇವಲ ಯುವಪೀಳಿಗೆಯವರೇ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಇಂದು ಎಲ್ಲಾ ವಯೋಮಿತಿಯವರೂ ಯಾವುದೇ ರೀತಿಯ ಅಧಿಕಾರವನ್ನು ಸಂಶಯದ ದೃಷ್ಟಿಯಿಂದ ಮಾತ್ರವಲ್ಲ, ತಿರಸ್ಕಾರದ ಭಾವನೆಯಿಂದಲೂ ನೋಡುತ್ತಾರೆ. ಹಾಗಾದರೆ, ಭರವಸಾರ್ಹವಾದ ಅಧಿಕಾರವು ಇಲ್ಲವೇ ಇಲ್ಲವೆಂಬುದೇ ಇದರ ಅರ್ಥವೇ? ಇಲ್ಲ. ಅಧಿಕಾರ ಎಂಬ ಪದಕ್ಕೆ “ಇತರರ ಕ್ರಿಯೆಗಳನ್ನು ನಿಯಂತ್ರಿಸುವ, ತೀರ್ಮಾನಿಸುವ ಇಲ್ಲವೇ ನಿಷೇಧಿಸುವ ಶಕ್ತಿ” ಎಂಬ ಅರ್ಥವಿದೆ. ಈ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಚಲಾಯಿಸುವಲ್ಲಿ, ಅದು ಒಳಿತನ್ನುಂಟುಮಾಡುವ ಶಕ್ತಿಯಾಗಿರುವುದು. ಅಷ್ಟುಮಾತ್ರವಲ್ಲ, ಅದು ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಪ್ರಯೋಜನಕಾರಿಯಾಗಿರುವುದು. ಅದು ಹೇಗೆ ಎಂಬುದನ್ನು ಮುಂದಿನ ಲೇಖನದಲ್ಲಿ ತಿಳಿಸಲಾಗಿದೆ.