ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರಿಗೆ ಏಕೆ ಮಕ್ಕಳಿಲ್ಲ?

ಅವರಿಗೆ ಏಕೆ ಮಕ್ಕಳಿಲ್ಲ?

ಅವರಿಗೆ ಏಕೆ ಮಕ್ಕಳಿಲ್ಲ?

ಒ ಬ್ಬ ವಿವಾಹಿತ ದಂಪತಿಯಾಗಿದ್ದ ಡೆಲಿ ಮತ್ತು ಫೋಲರು, * ನೈಜಿರೀಯದಲ್ಲಿರುವ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸಿನಲ್ಲಿ ವಾಸಿಸುತ್ತಿದ್ದರು ಮತ್ತು ಅಲ್ಲಿಯೇ ಕೆಲಸಮಾಡುತ್ತಿದ್ದರು. ಅವರು ಅಲ್ಲಿ ಸೇವೆಮಾಡಲಾರಂಭಿಸಿದ ಸ್ವಲ್ಪ ಸಮಯಾನಂತರ, ಫೋಲಳ ತಾಯಿ ಅವರನ್ನು ಭೇಟಿಯಾಗಲು ಅಲ್ಲಿಗೆ ಬಂದರು. ಏಕೆಂದರೆ ತುಂಬ ಸಮಯದಿಂದ ಅವರಿಗೆ ಒಂದು ಚಿಂತೆಯು ಕಾಡುತ್ತಿತ್ತು. ಇದರಿಂದಾಗಿ ಅವರು ಅನೇಕ ನಿದ್ರಾಹೀನ ರಾತ್ರಿಗಳನ್ನು ಸಹ ಕಳೆದಿದ್ದರು. ಆದುದರಿಂದ, ಈ ಚಿಂತೆಯ ಕುರಿತು ಚರ್ಚಿಸಲಿಕ್ಕಾಗಿ ಅವರು ಬಹಳ ದೂರದಿಂದ ಬಂದಿದ್ದರು.

ಈ ದಂಪತಿಗೆ ಅವರು ಹೇಳಿದ್ದು: “ನೀವು ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೀರಿ! ನೀವು ಉಡುಗೊರೆಗಳನ್ನು ಕಳುಹಿಸುತ್ತೀರಿ ಮತ್ತು ನನ್ನನ್ನು ನೋಡಲು ಬರುತ್ತೀರಿ. ನಿಮ್ಮ ಪ್ರೀತಿಯ ಈ ಎಲ್ಲ ವ್ಯಕ್ತಪಡಿಸುವಿಕೆಗಳನ್ನು ನಾನು ನಿಜವಾಗಿಯೂ ಅಮೂಲ್ಯವೆಂದೆಣಿಸುತ್ತೇನೆ. ಆದರೆ ಇವು ನನಗೆ ಚಿಂತೆಯನ್ನು ಸಹ ಉಂಟುಮಾಡುತ್ತವೆ. ಏಕೆಂದರೆ ನೀವು ನನ್ನ ಪ್ರಾಯದವರಾಗುವಾಗ ಯಾರು ನಿಮ್ಮನ್ನು ಹೀಗೆ ನೋಡಿಕೊಳ್ಳುವರು? ಎಂದು ನಾನು ಯಾವಾಗಲೂ ಯೋಚಿಸುತ್ತೇನೆ. ಈಗ ನಿಮ್ಮ ಮದುವೆಯಾಗಿ ಎರಡು ವರ್ಷಗಳು ಕಳೆದಿವೆ, ಆದರೆ ನಿಮಗಿನ್ನೂ ಮಕ್ಕಳಾಗಿಲ್ಲ. ಆದುದರಿಂದ, ನೀವೀಗ ಬೆತೆಲ್‌ ಬಿಟ್ಟು, ಒಂದು ಕುಟುಂಬವನ್ನು ಆರಂಭಿಸಬಹುದಲ್ಲವೋ?”

ತಾಯಿಯವರು ಹೀಗೆ ತರ್ಕಿಸಿದ್ದರು: ಡೆಲಿ ಮತ್ತು ಫೋಲರು ಬೆತೆಲ್‌ ಸೇವೆಯಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಈಗ ಅವರು ತಮ್ಮ ಭವಿಷ್ಯತ್ತಿನ ಬಗ್ಗೆ ಯೋಚಿಸಬೇಕು. ಅವರು ಬೆತೆಲನ್ನು ಬಿಟ್ಟುಹೋಗುವಲ್ಲಿ ಖಂಡಿತವಾಗಿಯೂ ಬೇರೆಯವರು ಅವರ ಕೆಲಸವನ್ನು ಮಾಡಸಾಧ್ಯವಿದೆ. ಡೆಲಿ ಮತ್ತು ಫೋಲರು ಪೂರ್ಣ ಸಮಯದ ಸೇವೆಯನ್ನು ಬಿಡಬೇಕಾಗಿಲ್ಲ. ಅದಕ್ಕೆ ಬದಲಾಗಿ, ಮಕ್ಕಳನ್ನು ಹಡೆದು, ತಂದೆತಾಯ್ತನದ ಆನಂದವನ್ನು ಅನುಭವಿಸಲು ಅನುಕೂಲಕರವಾಗಿರುವಂತಹ ಇನ್ನೊಂದು ಕ್ಷೇತ್ರದಲ್ಲಿ ಅವರು ಸೇವೆಮಾಡಸಾಧ್ಯವಿದೆ.

ತಾಯಿಯ ಚಿಂತೆ

ತಾಯಿಯವರ ಚಿಂತೆಯು ಅರ್ಥಮಾಡಿಕೊಳ್ಳತಕ್ಕದ್ದೇ. ಮಕ್ಕಳನ್ನು ಪಡೆಯುವಂತಹ ಬಯಕೆಯು ಎಲ್ಲ ಸಂಸ್ಕೃತಿಗಳಲ್ಲಿ ಮತ್ತು ಎಲ್ಲ ಕಾಲಗಳಲ್ಲಿ ಸರ್ವಸಾಮಾನ್ಯವಾಗಿದೆ. ಮಕ್ಕಳನ್ನು ಹೆರುವುದು, ಆನಂದ ಹಾಗೂ ನಿರೀಕ್ಷೆಯ ಅಪೂರ್ವ ಅನಿಸಿಕೆಗಳನ್ನು ಉಂಟುಮಾಡುತ್ತದೆ. “ಗರ್ಭಫಲವು ಆತನ ಬಹುಮಾನವೇ” ಎಂದು ಬೈಬಲು ಹೇಳುತ್ತದೆ. ಹೌದು, ಮಕ್ಕಳನ್ನು ಹೆರುವ ಸಾಮರ್ಥ್ಯವು ನಮ್ಮ ಪ್ರೀತಿಯ ಸೃಷ್ಟಿಕರ್ತನಿಂದ ಕೊಡಲ್ಪಟ್ಟಿರುವ ಒಂದು ಅಮೂಲ್ಯ ವರದಾನವಾಗಿದೆ.—ಕೀರ್ತನೆ 127:3.

ಅನೇಕ ಸಮಾಜಗಳಲ್ಲಿ, ವಿವಾಹಿತ ದಂಪತಿಗಳು ಮಕ್ಕಳನ್ನು ಹೆರುವಂತೆ ಸಮಾಜವು ತುಂಬ ಒತ್ತಡವನ್ನು ಹೇರುತ್ತದೆ. ಉದಾಹರಣೆಗೆ, ನೈಜಿರೀಯದಲ್ಲಿ ಒಬ್ಬ ಸ್ತ್ರೀಯು ಸರಾಸರಿ ಆರು ಮಕ್ಕಳಿಗೆ ಜನ್ಮನೀಡುತ್ತಾಳೆ; ಅಲ್ಲಿನ ಮದುವೆಗಳಲ್ಲಿ ನವವಿವಾಹಿತರಿಗೆ ಹಿತೈಷಿಗಳು, “ಇಂದಿನಿಂದ ಸರಿಯಾಗಿ ಒಂಬತ್ತು ತಿಂಗಳುಗಳ ನಂತರ ನಿಮ್ಮ ಮನೆಯಲ್ಲಿ ಒಂದು ಮಗುವು ಅಳುವುದನ್ನು ಕೇಳಿಸಿಕೊಳ್ಳಲು ನಾವು ಬಯಸುತ್ತೇವೆ” ಎಂದು ಹೇಳುವುದು ಸರ್ವಸಾಮಾನ್ಯವಾಗಿದೆ. ಕೆಲವೊಮ್ಮೆ ವಧೂವರರಿಗೆ ಒಂದು ತೊಟ್ಟಿಲನ್ನೂ ಉಡುಗೊರೆಯಾಗಿ ಕೊಡಲಾಗುತ್ತದೆ. ಮತ್ತು ಹೆಣ್ಣಿನ ಅತ್ತೆಯು ಕ್ಯಾಲೆಂಡರನ್ನು ಪರಿಶೀಲಿಸುತ್ತಾ ಇರುತ್ತಾಳೆ. ಒಂದುವೇಳೆ ಸೊಸೆ ಒಂದು ವರ್ಷದೊಳಗೆ ಗರ್ಭಿಣಿಯಾಗದಿರುವಲ್ಲಿ, ಅವಳಿಗೆ ಏನಾದರೂ ಸಮಸ್ಯೆಯಿದೆಯೋ ಮತ್ತು ಅದನ್ನು ಬಗೆಹರಿಸಲು ತಾವು ಸಹಾಯ ಮಾಡಸಾಧ್ಯವಿದೆಯೋ ಎಂಬುದನ್ನು ಅವರು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ.

ಒಂದು ಗಂಡು ಮತ್ತು ಹೆಣ್ಣು ಮದುವೆಯಾಗುವುದರ ಕಾರಣವು, ತಮ್ಮ ವಂಶವನ್ನು ಬೆಳೆಸುವುದೇ ಆಗಿದೆ ಎಂಬುದು ಅನೇಕ ತಾಯಂದಿರ ಅನಿಸಿಕೆ. ಫೋಲಳ ತಾಯಿಯು ಅವಳಿಗೆ ಹೇಳಿದ್ದು: “ನಿನಗೆ ಮಕ್ಕಳನ್ನು ಹೆರುವುದು ಬೇಡವಾಗಿರುವಲ್ಲಿ, ನೀನು ಏಕೆ ಮದುವೆಯಾದೆ? ನಿನಗೆ ನಿನ್ನ ಹೆತ್ತವರು ಜನ್ಮಕೊಟ್ಟರು; ನೀನು ಸಹ ನಿನ್ನ ಸ್ವಂತ ಮಕ್ಕಳಿಗೆ ಜನ್ಮಕೊಡಬೇಕು.”

ಅಷ್ಟುಮಾತ್ರವಲ್ಲ, ಅನೇಕ ಪ್ರಾಯೋಗಿಕ ವಿಷಯಗಳನ್ನು ಸಹ ಪರಿಗಣಿಸಲಿಕ್ಕಿದೆ. ಆಫ್ರಿಕದ ಅನೇಕ ದೇಶಗಳಲ್ಲಿ, ವೃದ್ಧರನ್ನು ನೋಡಿಕೊಳ್ಳಲಿಕ್ಕಾಗಿರುವ ಸರಕಾರಿ ಏರ್ಪಾಡುಗಳು ತೀರ ಕಡಿಮೆ. ಮಕ್ಕಳು ಚಿಕ್ಕವರಾಗಿದ್ದಾಗ ಹೆತ್ತವರು ಅವರನ್ನು ನೋಡಿಕೊಂಡಂತೆಯೇ, ಈಗ ಮಕ್ಕಳು ತಮ್ಮ ವೃದ್ಧ ಹೆತ್ತವರನ್ನು ನೋಡಿಕೊಳ್ಳುವುದು ಒಂದು ರೂಢಿಯಾಗಿದೆ. ಆದುದರಿಂದಲೇ, ಫೋಲಳ ತಾಯಿಯು ತರ್ಕಿಸಿದ್ದು: ತನ್ನ ಮಕ್ಕಳಿಗೂ ತಮ್ಮ ಸ್ವಂತ ಮಕ್ಕಳಿರಬೇಕು, ಇಲ್ಲದಿದ್ದರೆ ತನ್ನ ಮಕ್ಕಳಿಗೆ ವಯಸ್ಸಾದಾಗ ಅವರಿಗೆ ಒಂಟಿತನ ಕಾಡುವುದು, ಯಾರಿಗೂ ಬೇಡವಾದವರಾಗುವರು, ಮತ್ತು ಬಡವರಾಗುವರು. ಸಮಯಾನಂತರ ಅವರು ಮೃತಪಟ್ಟಾಗ ಅವರನ್ನು ಹೂಳಿಡಲು ಸಹ ಯಾರೂ ಇರುವುದಿಲ್ಲ.

ಆಫ್ರಿಕಾದ ಬಹುತೇಕ ದೇಶಗಳಲ್ಲಿ ಮಕ್ಕಳಿಲ್ಲದಿರುವುದು ಒಂದು ಶಾಪವೆಂದೆಣಿಸಲಾಗುತ್ತದೆ. ಅಷ್ಟುಮಾತ್ರವಲ್ಲದೆ, ಆ ದೇಶದ ಕೆಲವು ಸ್ಥಳಗಳಲ್ಲಿ, ಮಕ್ಕಳನ್ನು ಹೆರುವ ತಮ್ಮ ಸಾಮರ್ಥ್ಯವನ್ನು ಸ್ತ್ರೀಯರು ಮದುವೆಗೆ ಮುಂಚೆಯೇ ಸಮರ್ಥಿಸಿ ತೋರಿಸುವಂತೆ ನಿರೀಕ್ಷಿಸಲಾಗುತ್ತದೆ. ಮತ್ತು ಗರ್ಭಧರಿಸಲು ಅಶಕ್ತರಾಗಿರುವ ಅನೇಕ ಸ್ತ್ರೀಯರು, ತಮ್ಮ ಬಂಜೆತನವನ್ನು ಹೋಗಲಾಡಿಸಿಕೊಳ್ಳಲು ಅನೇಕ ಔಷಧಗಳು ಮತ್ತು ಚಿಕಿತ್ಸೆಗಳ ಮೊರೆಹೋಗುತ್ತಾರೆ.

ಈ ಮನೋಭಾವಗಳನ್ನು ಪರಿಗಣಿಸುವಾಗ, ಮದುವೆಯಾಗಿದ್ದು, ಉದ್ದೇಶಪೂರ್ವಕವಾಗಿ ಮಕ್ಕಳಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುವ ದಂಪತಿಗಳು ಯಾವುದೊ ಒಳ್ಳೆಯ ವಿಷಯದಿಂದ ವಂಚಿತರು ಎಂದು ಇತರರು ಅಪಾರ್ಥಮಾಡಿಕೊಳ್ಳುತ್ತಾರೆ. ಅಂತಹ ದಂಪತಿಗಳು ತುಂಬ ವಿಚಿತ್ರರು, ಮುಂದಾಲೋಚನೆಯಿಲ್ಲದವರು, ಶೋಚನೀಯ ಸ್ಥಿತಿಯಲ್ಲಿರುವವರು ಎಂದು ಜನರು ನೆನಸುತ್ತಾರೆ.

ಆನಂದ ಮತ್ತು ಜವಾಬ್ದಾರಿ

ಮಕ್ಕಳನ್ನು ಹೆರುವುದು ಆನಂದದಾಯಕ ಸಂಗತಿಯಾಗಿದೆಯಾದರೂ, ಇದು ಜವಾಬ್ದಾರಿಯನ್ನೂ ತಂದೊಡ್ಡುತ್ತದೆ ಎಂಬುದನ್ನು ಯೆಹೋವನ ಜನರು ಗ್ರಹಿಸುತ್ತಾರೆ. ಈ ವಿಷಯದ ಕುರಿತಾಗಿ 1 ತಿಮೊಥೆಯ 5:8ರಲ್ಲಿ ಬೈಬಲು ಹೇಳುವುದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”

ಹೆತ್ತವರು ತಮ್ಮ ಕುಟುಂಬಗಳ ಭೌತಿಕ ಹಾಗೂ ಆತ್ಮಿಕ ಆವಶ್ಯಕತೆಗಳನ್ನು ಪೂರೈಸಲೇಬೇಕಾಗಿದೆ. ಇದನ್ನು ಮಾಡಲು ಸಾಕಷ್ಟು ಸಮಯ ಹಾಗೂ ಪ್ರಯತ್ನದ ಅಗತ್ಯವಿದೆ. ದೇವರೇ ಮಕ್ಕಳನ್ನು ಕೊಡುತ್ತಾನಾದ್ದರಿಂದ, ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಆತನದ್ದೇ ಆಗಿದೆ ಎಂಬ ಮನೋಭಾವ ಅವರಿಗಿಲ್ಲ. ಅದಕ್ಕೆ ಬದಲಾಗಿ, ಬೈಬಲ್‌ ಮೂಲತತ್ವಗಳಿಗನುಸಾರ ಮಕ್ಕಳನ್ನು ಬೆಳೆಸುವುದು ಒಂದು ಪೂರ್ಣ ಸಮಯದ ಜವಾಬ್ದಾರಿಯಾಗಿದ್ದು, ಈ ನೇಮಕವು ಹೆತ್ತವರಿಗೆ ದೇವರಿಂದ ಕೊಡಲ್ಪಟ್ಟಿದೆ; ಈ ಜವಾಬ್ದಾರಿಯನ್ನು ಇತರರ ತಲೆಯ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ಗ್ರಹಿಸುತ್ತಾರೆ.—ಧರ್ಮೋಪದೇಶಕಾಂಡ 6:6, 7.

ಹೀಗೆ, “ಕಠಿನ ಕಾಲಗಳ” ಈ “ಕಡೇ ದಿವಸಗಳಲ್ಲಿ” ಮಕ್ಕಳನ್ನು ಬೆಳೆಸುವ ಕೆಲಸವು ವಿಶೇಷವಾಗಿ ಕಷ್ಟಕರವಾದದ್ದಾಗಿದೆ. (2 ತಿಮೊಥೆಯ 3:1-5) ಇಂದು ಆರ್ಥಿಕ ಪರಿಸ್ಥಿತಿಗಳು ಹದಗೆಡುತ್ತಿದ್ದು, ಸಮಾಜದಲ್ಲಿ ಅಧರ್ಮವು ಹೆಚ್ಚಾಗುತ್ತಿರುವುದರಿಂದ, ಮಕ್ಕಳನ್ನು ಬೆಳೆಸುವುದು ಒಂದು ದೊಡ್ಡ ಸವಾಲಾಗಿದೆ. ಹಾಗಿದ್ದರೂ, ಲೋಕದಾದ್ಯಂತ ಅನೇಕಾನೇಕ ಕ್ರೈಸ್ತ ದಂಪತಿಗಳು ಈ ಸವಾಲನ್ನು ಸ್ವೀಕರಿಸಿದ್ದಾರೆ ಮತ್ತು ದೇವಭಕ್ತಿಯುಳ್ಳ ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” (NW) ಸಫಲಪೂರ್ವಕವಾಗಿ ಬೆಳೆಸುತ್ತಿದ್ದಾರೆ. (ಎಫೆಸ 6:4) ಈ ಹೆತ್ತವರ ಪರಿಶ್ರಮಕ್ಕಾಗಿ ಯೆಹೋವನು ಅವರನ್ನು ಪ್ರೀತಿಸುತ್ತಾನೆ ಮತ್ತು ಆಶೀರ್ವದಿಸುತ್ತಾನೆ.

ಕೆಲವರು ಏಕೆ ಮಕ್ಕಳಿಲ್ಲದೆ ಉಳಿಯಲು ಬಯಸುತ್ತಾರೆ?

ಇನ್ನೊಂದು ಕಡೆಯಲ್ಲಿ, ಅನೇಕ ಕ್ರೈಸ್ತ ದಂಪತಿಗಳಿಗೆ ಮಕ್ಕಳಿಲ್ಲ. ಕೆಲವರು ಬಂಜೆಯರಾಗಿದ್ದಾರೆ, ಆದರೂ ಮಕ್ಕಳನ್ನು ದತ್ತುತೆಗೆದುಕೊಳ್ಳುವುದಿಲ್ಲ. ಇನ್ನಿತರ ದಂಪತಿಗಳಿಗೆ ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯವಿದ್ದರೂ ಅವರು ಸಂತಾನರಹಿತರಾಗಿ ಉಳಿಯಲು ಬಯಸುತ್ತಾರೆ. ಆದರೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅಥವಾ ತಂದೆತಾಯ್ತನದ ಪಂಥಾಹ್ವಾನಗಳನ್ನು ನಿಭಾಯಿಸಲು ಭಯಪಡುವ ಕಾರಣದಿಂದ ಈ ದಂಪತಿಗಳು ಸಂತಾನರಹಿತರಾಗಿ ಉಳಿಯುವ ಆಯ್ಕೆಮಾಡುವುದಿಲ್ಲ. ಅದಕ್ಕೆ ಬದಲಾಗಿ, ಬೇರೆ ಬೇರೆ ರೀತಿಯ ಪೂರ್ಣ ಸಮಯದ ಶುಶ್ರೂಷೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿಕ್ಕಾಗಿ ಅವರು ಈ ನಿರ್ಧಾರವನ್ನು ಮಾಡಿದ್ದಾರೆ. ಏಕೆಂದರೆ ಮಕ್ಕಳಿದ್ದರೆ ಅವರು ಇದನ್ನು ಮಾಡಲಾರರು. ಇದರಿಂದಾಗಿಯೇ ಕೆಲವರು ಮಿಷನೆರಿಗಳಾಗಿ ಸೇವೆ ಸಲ್ಲಿಸುತ್ತಾರೆ. ಇನ್ನಿತರರು ಸಂಚರಣ ಕೆಲಸದಲ್ಲಿ ಅಥವಾ ಬೆತೆಲಿನಲ್ಲಿ ಯೆಹೋವನ ಸೇವೆಮಾಡುತ್ತಾರೆ.

ಎಲ್ಲ ಕ್ರೈಸ್ತರಂತೆ, ಒಂದು ತುರ್ತಿನ ಕೆಲಸವನ್ನು ಮಾಡಲಿಕ್ಕಿದೆ ಎಂಬುದನ್ನು ಇವರು ಸಹ ಗ್ರಹಿಸುತ್ತಾರೆ. ಏಕೆಂದರೆ ಯೇಸು ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” ಈ ಕೆಲಸವು ಇಂದು ಮಾಡಲ್ಪಡುತ್ತಿದೆ. ಇದು ತುಂಬ ಜರೂರಿಯ ಕೆಲಸವಾಗಿದೆ, ಏಕೆಂದರೆ ಯಾರು ಸುವಾರ್ತೆಗೆ ಕಿವಿಗೊಡುವುದಿಲ್ಲವೋ ಅವರಿಗೆ “ಅಂತ್ಯವು” ನಾಶನದ ಅರ್ಥದಲ್ಲಿರುವುದು.—ಮತ್ತಾಯ 24:14; 2 ಥೆಸಲೊನೀಕ 1:7, 8.

ನಾವು ಜೀವಿಸುತ್ತಿರುವಂತಹ ಸಮಯವು ನೋಹನ ಸಮಯದಂತೆಯೇ ಇದೆ. ಆಗ ದೊಡ್ಡ ಜಲಪ್ರಳಯವು ಬಂತು, ಮತ್ತು ಅದರಿಂದ ಪಾರಾಗಲಿಕ್ಕಾಗಿ ನೋಹನೂ ಅವನ ಕುಟುಂಬವೂ ಸೇರಿಕೊಂಡು ಬೃಹದ್ಗಾತ್ರದ ಒಂದು ನಾವೆಯನ್ನು ಕಟ್ಟಿದರು. (ಆದಿಕಾಂಡ 6:13-16; ಮತ್ತಾಯ 24:37) ನೋಹನ ಮೂವರು ಪುತ್ರರು ವಿವಾಹಿತರಾಗಿದ್ದರೂ, ಜಲಪ್ರಳಯವು ಮುಗಿಯುವ ತನಕ ಅವರು ಮಕ್ಕಳನ್ನು ಹುಟ್ಟಿಸಲಿಲ್ಲ. ಇದಕ್ಕೆ ಒಂದು ಕಾರಣವು, ಈ ದಂಪತಿಗಳು ತಾವು ಮಾಡಲಿಕ್ಕಿದ್ದ ಕೆಲಸಕ್ಕಾಗಿ ತಮ್ಮ ಸಂಪೂರ್ಣ ಗಮನ ಹಾಗೂ ಶಕ್ತಿಯನ್ನು ಮೀಸಲಾಗಿಡಲು ಬಯಸಿದ್ದಿರಬಹುದು. ಇನ್ನೊಂದು ಕಾರಣವು, ಕೀಳ್ಮಟ್ಟಕ್ಕಿಳಿದಿದ್ದ ಹಾಗೂ ಹಿಂಸಾಚಾರದಿಂದ ತುಂಬಿದ್ದ ಒಂದು ಲೋಕದಲ್ಲಿ ಮಕ್ಕಳನ್ನು ಬೆಳೆಸಲು ಅವರಿಗೆ ಇಷ್ಟವಿಲ್ಲದಿದ್ದಿರಬಹುದು. ಏಕೆಂದರೆ ಆಗ ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿತ್ತು ಮತ್ತು ಅವರು ಹೃದಯದಲ್ಲಿ ಯೋಚಿಸುವದೆಲ್ಲವೂ ಯಾವಾಗಲೂ ಬರೀ ಕೆಟ್ಟದ್ದಾಗಿತ್ತು.’—ಆದಿಕಾಂಡ 6:5.

ಇಂದು ಮಕ್ಕಳನ್ನು ಪಡೆಯುವುದು ತಪ್ಪು ಎಂದು ಇದರ ಅರ್ಥವಲ್ಲ. ಆದರೂ ಅನೇಕ ಕ್ರೈಸ್ತ ದಂಪತಿಗಳು ಸಂತಾನರಹಿತರಾಗಿ ಉಳಿಯಲು ಬಯಸುತ್ತಾರೆ. ಕಾರಣವೇನೆಂದರೆ, ಯೆಹೋವನು ತನ್ನ ಜನರಿಗೆ ವಹಿಸಿಕೊಟ್ಟಿರುವ ಜರೂರಿಯ ಕೆಲಸದಲ್ಲಿ ಸಂಪೂರ್ಣವಾಗಿ ಒಳಗೂಡಲು ಅವರು ಬಯಸುತ್ತಾರೆ. ಕೆಲವು ದಂಪತಿಗಳು ದೀರ್ಘ ಸಮಯಾವಧಿಯ ನಂತರ ಮಕ್ಕಳನ್ನು ಪಡೆಯಲು ನಿರ್ಧರಿಸಿದ್ದಾರೆ; ಇನ್ನಿತರರು ಸಂತಾನರಹಿತರಾಗಿ ಉಳಿದು, ಯೆಹೋವನ ನೀತಿಯ ನೂತನ ಲೋಕದಲ್ಲಿ ಮಕ್ಕಳನ್ನು ಹೆರುವ ಸಾಧ್ಯತೆಯ ಬಗ್ಗೆ ಆಲೋಚಿಸುತ್ತಾರೆ. ಇವರನ್ನು ಮುಂದಾಲೋಚನೆಯಿಲ್ಲದವರು ಎಂದು ಹೇಳಸಾಧ್ಯವಿದೆಯೋ? ಇವರು ಜೀವನದಲ್ಲಿ ಅಮೂಲ್ಯವಾದ ಏನನ್ನೋ ಕಳೆದುಕೊಳ್ಳುತ್ತಿದ್ದಾರೋ? ಇವರು ಶೋಚನೀಯ ಸ್ಥಿತಿಯಲ್ಲಿದ್ದಾರೋ?

ಭದ್ರವಾದ ಹಾಗೂ ಆನಂದಭರಿತವಾದ ಜೀವಿತ

ಈ ಮುಂಚೆ ತಿಳಿಸಲ್ಪಟ್ಟಿರುವ ಡೆಲಿ ಮತ್ತು ಫೋಲರು ಮದುವೆಯಾಗಿ ಈಗ ಹತ್ತು ವರ್ಷಗಳೇ ಕಳೆದಿವೆ. ಮತ್ತು ಸಂತಾನರಹಿತವಾಗಿಯೇ ಉಳಿಯುವ ಅವರ ನಿರ್ಧಾರವು ಹಾಗೆಯೇ ಉಳಿದಿದೆ. “ಈಗಲೂ ನಮ್ಮ ಸಂಬಂಧಿಕರು ಮಕ್ಕಳನ್ನು ಪಡೆಯುವಂತೆ ಒತ್ತಾಯಿಸುತ್ತಾರೆ” ಎಂದು ಡೆಲಿ ಹೇಳುತ್ತಾನೆ. “ನಮ್ಮ ಭವಿಷ್ಯತ್ತಿನ ಭದ್ರತೆಯೇ ಅವರ ಮುಖ್ಯ ಚಿಂತೆಯಾಗಿದೆ. ಅವರು ತೋರಿಸುತ್ತಿರುವ ಪರಿಗಣನೆಗಾಗಿ ನಾವು ಯಾವಾಗಲೂ ಗಣ್ಯತೆಯನ್ನು ವ್ಯಕ್ತಪಡಿಸುತ್ತೇವೆ. ಆದರೆ ನಾವು ಏನು ಮಾಡುತ್ತಿದ್ದೇವೋ ಅದರಲ್ಲಿ ನಾವು ತುಂಬ ಸಂತೋಷದಿಂದಿದ್ದೇವೆ ಎಂದು ನಾವು ಅವರಿಗೆ ನಯವಾದ ರೀತಿಯಲ್ಲಿ ವಿವರಿಸುತ್ತೇವೆ. ಭದ್ರತೆಯ ವಿಷಯಕ್ಕೆ ಬರುವಾಗ, ನಾವು ಯೆಹೋವನ ಮೇಲೆ ಭರವಸೆಯಿಟ್ಟಿದ್ದೇವೆ, ಹಾಗೂ ತನಗೆ ನಂಬಿಗಸ್ತರಾಗಿ ಮತ್ತು ನಿಷ್ಠಾವಂತರಾಗಿ ಉಳಿಯುವವರೆಲ್ಲರ ಹಿತಕ್ಷೇಮವನ್ನು ಆತನೇ ನೋಡಿಕೊಳ್ಳುತ್ತಾನೆ ಎಂದು ಹೇಳುತ್ತೇವೆ. ಅಷ್ಟುಮಾತ್ರವಲ್ಲದೆ, ಮಕ್ಕಳಿದ್ದ ಮಾತ್ರಕ್ಕೆ ಅವರು ತಮ್ಮ ಹೆತ್ತವರನ್ನು ತಮ್ಮ ವೃದ್ಧಾಪ್ಯದಲ್ಲಿ ಸುಖವಾಗಿ ನೋಡಿಕೊಳ್ಳುತ್ತಾರೆ ಎಂದು ನೆನಸಸಾಧ್ಯವಿಲ್ಲ ಎಂಬುದನ್ನು ಸಹ ವಿವರಿಸುತ್ತೇವೆ. ಏಕೆಂದರೆ, ಕೆಲವು ಮಕ್ಕಳು ಹೆತ್ತವರನ್ನು ತಿರಸ್ಕರಿಸುತ್ತಾರೆ, ಇನ್ನಿತರರು ಸಹಾಯ ಮಾಡುವ ಸ್ಥಿತಿಯಲ್ಲಿರುವುದಿಲ್ಲ, ಇನ್ನೂ ಅನೇಕರು ತಮ್ಮ ಹೆತ್ತವರಿಗೆ ಮುಂಚೆ ತಾವೇ ಮೃತಪಡುತ್ತಾರೆ. ಆದರೆ ನಮ್ಮ ವಿಷಯದಲ್ಲಿ ಹೇಳುವುದಾದರೆ, ನಾವು ಸಂತಾನರಹಿತರಾಗಿ ಉಳಿದಿರುವುದಾದರೂ ನಮ್ಮ ಭವಿಷ್ಯತ್ತು ಯೆಹೋವನ ಹಸ್ತದಲ್ಲಿ ಸುರಕ್ಷಿತವಾಗಿದೆ ಎಂಬ ಭರವಸೆ ನಮಗಿದೆ.”

ಡೆಲಿ ಮತ್ತು ಅವನಂತಹ ಇನ್ನಿತರರು, ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಮಾಡಿರುವ ವಾಗ್ದಾನದಲ್ಲಿ ದೃಢಭರವಸೆಯಿಡುತ್ತಾರೆ. ಆ ವಾಗ್ದಾನವೇನೆಂದರೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” (ಇಬ್ರಿಯ 13:5) ಇದಲ್ಲದೆ, “ಯೆಹೋವನ ಹಸ್ತವು ರಕ್ಷಿಸಲಾರದಂತೆ ಮೋಟುಗೈಯಲ್ಲ; ಆತನ ಕಿವಿಯು ಕೇಳಲಾರದ ಹಾಗೆ ಕಿವುಡಲ್ಲ” ಎಂಬುದನ್ನು ಸಹ ಅವರು ನಂಬುತ್ತಾರೆ.—ಯೆಶಾಯ 59:1.

ಯೆಹೋವನಲ್ಲಿ ದೃಢಭರವಸೆಯಿಡಲಿಕ್ಕಾಗಿರುವ ಇನ್ನೊಂದು ಕಾರಣವು, ಆತನು ತನ್ನ ನಂಬಿಗಸ್ತ ಸೇವಕರನ್ನು ಹೇಗೆ ಪೋಷಿಸುತ್ತಾನೆ ಎಂಬುದನ್ನು ಗಮನಿಸುವುದರಿಂದ ಗೊತ್ತಾಗುತ್ತದೆ. ಅರಸನಾದ ದಾವೀದನು ಬರೆದುದು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ . . . ನೋಡಲಿಲ್ಲ.” ಇದರ ಕುರಿತು ಆಲೋಚಿಸಿರಿ. ಯೆಹೋವನ ಯಾವುದೇ ನಂಬಿಗಸ್ತ ಸೇವಕನು ‘ದಿಕ್ಕಿಲ್ಲದೆ ಬಿದ್ದಿರುವುದನ್ನು’ ನೀವು ನೋಡಿದ್ದೀರೊ?—ಕೀರ್ತನೆ 37:25.

ಅನೇಕರು ಯೆಹೋವನ ಮತ್ತು ತಮ್ಮ ಜೊತೆ ಕ್ರೈಸ್ತರ ಸೇವೆಮಾಡುವುದರಲ್ಲಿ ತಮ್ಮ ಜೀವಿತವನ್ನು ಕಳೆದಿದ್ದಾರೆ. ಇಂಥವರು ತಾವು ತೆಗೆದುಕೊಂಡ ನಿರ್ಧಾರಕ್ಕಾಗಿ ವಿಷಾದಪಡುವುದಿಲ್ಲ, ಬದಲಾಗಿ ಅದರ ಬಗ್ಗೆ ನೆನಸುವಾಗ ಅವರಿಗೆ ಸಂತೃಪ್ತಿಯ ಅನುಭವವಾಗುತ್ತದೆ. ಸಹೋದರ ಈರೋ ಊಮಾರವರು ಸುಮಾರು 45 ವರ್ಷಗಳಿಂದ ಪೂರ್ಣ ಸಮಯದ ಸೇವೆಯಲ್ಲಿದ್ದು, ಈಗ ನೈಜಿರೀಯದಲ್ಲಿ ಸಂಚರಣ ಮೇಲ್ವಿಚಾರಕರ ಕೆಲಸವನ್ನು ಮಾಡುತ್ತಿದ್ದಾರೆ. ಆ ಸಹೋದರನು ಹೇಳುವುದು: “ನಮಗಿಬ್ಬರಿಗೆ ಮಕ್ಕಳಿಲ್ಲದಿರುವುದಾದರೂ, ಯೆಹೋವನು ಯಾವಾಗಲೂ ನಮ್ಮಿಬ್ಬರ ಆತ್ಮಿಕ ಹಾಗೂ ಭೌತಿಕ ಆವಶ್ಯಕತೆಗಳನ್ನು ಪೂರೈಸಿದ್ದಾನೆ ಎಂಬುದನ್ನು ನಾವು ಎಂದೂ ಮರೆಯುವುದಿಲ್ಲ. ಇಷ್ಟರ ತನಕ ನಮಗೆ ಯಾವುದರ ಕೊರತೆಯೂ ಇಲ್ಲ. ನಮಗೆ ವಯಸ್ಸಾಗುತ್ತಾ ಹೋದಂತೆ ಆತನು ನಮ್ಮ ಕೈಬಿಡುವುದಿಲ್ಲ. ಪೂರ್ಣ ಸಮಯದ ಸೇವೆಯಲ್ಲಿ ಕಳೆದಿರುವ ಈ ವರ್ಷಗಳು, ನಮ್ಮ ಜೀವಿತದಲ್ಲೇ ಅತ್ಯಂತ ಸಂತೋಷದಾಯಕ ವರ್ಷಗಳಾಗಿ ಪರಿಣಮಿಸಿವೆ. ನಮ್ಮ ಸಹೋದರರ ಸೇವೆಮಾಡುವ ಸುಯೋಗ ನಮಗೆ ಸಿಕ್ಕಿರುವುದಕ್ಕೆ ನಾವು ಆಭಾರಿಗಳಾಗಿದ್ದೇವೆ. ಅಷ್ಟುಮಾತ್ರವಲ್ಲದೆ, ನಮ್ಮ ಸಹೋದರರು ನಮ್ಮ ಸೇವೆಯನ್ನು ಗಣ್ಯಮಾಡುತ್ತಾರೆ ಮತ್ತು ನಮಗೆ ತುಂಬ ಸಹಾಯ ಮಾಡುತ್ತಾರೆ.”

ಅನೇಕ ದಂಪತಿಗಳು ತಮ್ಮದೇ ಆದ ಮಕ್ಕಳನ್ನು ಹಡೆಯದಿರುವುದಾದರೂ, ಅವರು ಬೇರೊಂದು ರೀತಿಯಲ್ಲಿ ಮಕ್ಕಳನ್ನು ಹಡೆದಿದ್ದಾರೆ: ಯೆಹೋವನನ್ನು ಆರಾಧಿಸುವಂತಹ ಕ್ರೈಸ್ತ ಶಿಷ್ಯರನ್ನೇ. ಆದುದರಿಂದಲೇ, ಈ ಕೆಳಗಿನಂತೆ ಬರೆದಾಗ ಅಪೊಸ್ತಲ ಯೋಹಾನನು ಸುಮಾರು 100 ವರ್ಷ ಪ್ರಾಯದವನಾಗಿದ್ದನು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.” (3 ಯೋಹಾನ 4) ಯೋಹಾನನ “ಮಕ್ಕಳು,” ಅಂದರೆ ಅವನು ಯಾರಿಗೆ ‘ಸತ್ಯವನ್ನು’ ಕಲಿಸಿದ್ದನೋ ಅವರ ನಂಬಿಗಸ್ತಿಕೆಯು, ಅವನಿಗೆ ಮಹತ್ತರವಾದ ಆನಂದವನ್ನು ಉಂಟುಮಾಡಿತು.

ಇಂದು ಸಹ ಅದೇ ರೀತಿಯ ಆನಂದವು ವ್ಯಾಪಕವಾಗಿ ತುಂಬಿದೆ. ನೈಜಿರೀಯದವಳಾಗಿರುವ ಬರ್ನಿಸ್‌ ಮದುವೆಯಾಗಿ 19 ವರ್ಷಗಳೇ ಸಂದಿವೆ ಮತ್ತು ಅವಳು ಉದ್ದೇಶಪೂರ್ವಕವಾಗಿಯೇ ಸಂತಾನರಹಿತಳಾಗಿ ಉಳಿದಿದ್ದಾಳೆ. ಕಳೆದ 14 ವರ್ಷಗಳಿಂದ ಅವಳು ಒಬ್ಬ ಪಯನೀಯರಳಾಗಿ ಸೇವೆಮಾಡಿದ್ದಾಳೆ. ಈಗ ಅವಳ ವಯಸ್ಸು ಹೆಚ್ಚಾಗುತ್ತಿದೆ, ಮತ್ತು ಅವಳು ತನ್ನ ಸ್ವಂತ ಮಕ್ಕಳನ್ನು ಹಡೆಯುವ ಪ್ರಾಯವು ಮುಗಿಯುತ್ತಾ ಬಂದಿದೆ. ಆದರೂ, ತನ್ನ ಜೀವಿತದ ಮೇಲೆ ಹಿನ್ನೋಟ ಬೀರುವಾಗ, ಶಿಷ್ಯರನ್ನಾಗಿ ಮಾಡುವ ಕೆಲಸಕ್ಕಾಗಿ ತನ್ನ ಜೀವಿತವನ್ನು ಮೀಸಲಾಗಿಟ್ಟಿದ್ದಕ್ಕಾಗಿ ಅವಳು ಸ್ವಲ್ಪವೂ ವಿಷಾದಿಸುವುದಿಲ್ಲ. ಇದರ ಬಗ್ಗೆ ಅವಳು ಹೇಳುವುದು: “ನನ್ನ ಆತ್ಮಿಕ ಮಕ್ಕಳು ಬೆಳೆಯುತ್ತಿರುವುದನ್ನು ನೋಡಿ ನನಗೆ ತುಂಬ ಸಂತೋಷವಾಗುತ್ತದೆ. ಯಾರಿಗೆ ನಾನು ಸತ್ಯವನ್ನು ಕಲಿತುಕೊಳ್ಳಲಿಕ್ಕಾಗಿ ಸಹಾಯ ಮಾಡಿದ್ದೇನೋ ಅವರು ನನಗೆ ತುಂಬ ಆತ್ಮೀಯರಾಗಿದ್ದಾರೆ. ಒಂದುವೇಳೆ ನನಗೇ ಮಕ್ಕಳಿರುತ್ತಿದ್ದಲ್ಲಿ ಅವರು ಸಹ ನನಗೆ ಇಷ್ಟು ಆತ್ಮೀಯರಾಗಿರುತ್ತಿರಲಿಲ್ಲವೇನೋ. ಅವರು ನನ್ನನ್ನು ತಮ್ಮ ಸ್ವಂತ ತಾಯಿಯಂತೆ ಉಪಚರಿಸುತ್ತಾರೆ. ತಮ್ಮ ಸುಖದುಃಖಗಳನ್ನು ಮತ್ತು ಸಮಸ್ಯೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ನನ್ನಿಂದ ಸಲಹೆಯನ್ನು ಕೇಳುತ್ತಾರೆ. ಅವರು ನನಗೆ ಪತ್ರಗಳನ್ನು ಬರೆಯುತ್ತಾರೆ, ಮತ್ತು ನಾವು ಆಗಿಂದಾಗ್ಗೆ ಪರಸ್ಪರ ಭೇಟಿಯಾಗುತ್ತೇವೆ.

“ಸ್ವಂತ ಮಕ್ಕಳಿಲ್ಲದಿರುವುದು ಒಂದು ಶಾಪವೆಂದು ಕೆಲವರು ನೆನಸುತ್ತಾರೆ. ಈಗ ಗೊತ್ತಾಗುವುದಿಲ್ಲ, ಆದರೆ ವಯಸ್ಸಾಗುತ್ತಾ ಹೋದಂತೆ ನೀವು ಕಷ್ಟವನ್ನು ಅನುಭವಿಸುವಾಗ ನಿಮಗೆ ಗೊತ್ತಾಗುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ನನ್ನ ಅಭಿಪ್ರಾಯವೇ ಬೇರೆ. ಎಷ್ಟರ ತನಕ ನಾನು ಪೂರ್ಣ ಮನಸ್ಸಿನಿಂದ ಯೆಹೋವನ ಸೇವೆಮಾಡುವೆನೋ ಅಷ್ಟರ ತನಕ ಆತನು ನನಗೆ ಪ್ರತಿಫಲ ನೀಡುವನು ಮತ್ತು ನನ್ನನ್ನು ನೋಡಿಕೊಳ್ಳುವನು ಎಂಬುದು ನನಗೆ ಗೊತ್ತಿದೆ. ನನಗೆ ವಯಸ್ಸಾದಾಗ ಖಂಡಿತವಾಗಿಯೂ ಆತನು ನನ್ನನ್ನು ತಳ್ಳಿಬಿಡುವುದಿಲ್ಲ.”

ಅಂಥವರನ್ನು ದೇವರು ಪ್ರೀತಿಸುತ್ತಾನೆ ಮತ್ತು ಅಮೂಲ್ಯರನ್ನಾಗಿ ಪರಿಗಣಿಸುತ್ತಾನೆ

ಯಾರು ಮಕ್ಕಳಿಗೆ ಜನ್ಮನೀಡಿ, ‘ಸತ್ಯವನ್ನನುಸರಿಸಿ ನಡೆಯುವವರಾಗುವಂತೆ’ ಅವರನ್ನು ಬೆಳೆಸಿದ್ದಾರೋ ಅವರು ಬಹಳಷ್ಟು ವಿಷಯಗಳಿಗಾಗಿ ಕೃತಜ್ಞರಾಗಿರಬಹುದು. ಆದುದರಿಂದಲೇ ಬೈಬಲು ಹೀಗೆ ಹೇಳಿರುವುದರಲ್ಲಿ ಆಶ್ಚರ್ಯವೇನಿಲ್ಲ: “ಧರ್ಮಿಯ ತಂದೆಯು ಅತಿ ಸಂತೋಷಪಡುವನು; ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು. ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ”!—ಜ್ಞಾನೋಕ್ತಿ 23:24, 25.

ಮಕ್ಕಳನ್ನು ಹಡೆಯುವ ಆನಂದವನ್ನು ಅನುಭವಿಸಿರದಂತಹ ಕ್ರೈಸ್ತರು, ಬೇರೆ ರೀತಿಗಳಲ್ಲಿ ಆಶೀರ್ವದಿಸಲ್ಪಟ್ಟಿದ್ದಾರೆ. ಈ ದಂಪತಿಗಳಲ್ಲಿ ಅನೇಕರು, ರಾಜ್ಯಾಭಿರುಚಿಗಳನ್ನು ಮುಂದುವರಿಸುವ ಕೆಲಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ವರ್ಷಗಳು ಕಳೆದಂತೆ, ರಾಜ್ಯ ಕಾರ್ಯಕ್ಕೆ ಅಮೂಲ್ಯವಾದ ರೀತಿಯಲ್ಲಿ ಸಹಾಯಮಾಡಲು ಅವರನ್ನು ಶಕ್ತರನ್ನಾಗಿ ಮಾಡುವಂತಹ ಅನುಭವ, ಜ್ಞಾನ, ಮತ್ತು ಕೌಶಲಗಳನ್ನು ಅವರು ಪಡೆದುಕೊಂಡಿದ್ದಾರೆ. ಇವರಲ್ಲಿ ಅನೇಕರು ಸಾಕ್ಷಿಕಾರ್ಯದಲ್ಲಿ ಮುಂದಾಳತ್ವವಹಿಸುತ್ತಿದ್ದಾರೆ.

ಇವರು ರಾಜ್ಯಾಭಿರುಚಿಗಳ ಸಲುವಾಗಿ ಸಂತಾನರಹಿತರಾಗಿ ಉಳಿದಿರುವುದಾದರೂ, ಅವರು ಮಾಡಿರುವಂತಹ ತ್ಯಾಗಗಳನ್ನು ತುಂಬ ಗಣ್ಯಮಾಡುವಂತಹ ಒಂದು ಪ್ರೀತಿಯ ಆತ್ಮಿಕ ಕುಟುಂಬವನ್ನು ಒದಗಿಸುವ ಮೂಲಕ ಯೆಹೋವನು ಅವರನ್ನು ಆಶೀರ್ವದಿಸಿದ್ದಾನೆ. ಈ ವಿಷಯದ ಕುರಿತು ಯೇಸು ಹೇಳಿದ್ದು: “ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟು ಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಮನೆ ಅಣ್ಣ ತಮ್ಮ ತಂಗಿ ತಾಯಿ ಮಕ್ಕಳು ಭೂಮಿ . . . ಸಹಿತವಾಗಿ ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.”—ಮಾರ್ಕ 10:29, 30.

ಯಾರು ನಂಬಿಗಸ್ತರಾಗಿದ್ದಾರೋ ಅವರು ಯೆಹೋವನ ದೃಷ್ಟಿಯಲ್ಲಿ ಎಷ್ಟು ಅಮೂಲ್ಯರಾಗಿದ್ದಾರೆ! ಆದುದರಿಂದ, ಮಕ್ಕಳಿರುವ ಮತ್ತು ಮಕ್ಕಳಿಲ್ಲದ ಇಂತಹ ನಿಷ್ಠಾವಂತರೆಲ್ಲರಿಗೆ ಅಪೊಸ್ತಲ ಪೌಲನು ಈ ಆಶ್ವಾಸನೆಯನ್ನು ನೀಡುತ್ತಾನೆ: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”

[ಪಾದಟಿಪ್ಪಣಿ]

^ ಪ್ಯಾರ. 2 ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 23ರಲ್ಲಿರುವ ಚಿತ್ರ]

ಮಕ್ಕಳಿಲ್ಲದಿರುವಂತಹ ದಂಪತಿಗಳು, ಒಂದು ಪ್ರೀತಿಯ ಆತ್ಮಿಕ ಕುಟುಂಬದಿಂದ ಆಶೀರ್ವದಿಸಲ್ಪಟ್ಟಿದ್ದಾರೆ