ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುರಭಿಮಾನದ ಪರಿಣಾಮ ಅವಮಾನವೇ!

ದುರಭಿಮಾನದ ಪರಿಣಾಮ ಅವಮಾನವೇ!

ದುರಭಿಮಾನದ ಪರಿಣಾಮ ಅವಮಾನವೇ!

“ದುರಭಿಮಾನ ಉಂಟಾಗಿದೆಯೋ? ಹಾಗಾದರೆ ಅದರ ಪರಿಣಾಮ ಅವಮಾನವೇ; ಆದರೆ ವಿನಯಶೀಲರಲ್ಲಿ ವಿವೇಕವಿದೆ.”—ಜ್ಞಾನೋಕ್ತಿ 11:2, NW.

1, 2. ದುರಭಿಮಾನ ಎಂದರೇನು, ಮತ್ತು ಇದು ಯಾವ ರೀತಿಯಲ್ಲಿ ವಿನಾಶಕ್ಕೆ ಕಾರಣವಾಗಿದೆ?

ಅ ಸೂಯೆಗೊಂಡಿದ್ದ ಒಬ್ಬ ಲೇವಿಯನು, ಯೆಹೋವನ ನೇಮಿತ ಮುಂದಾಳುಗಳ ವಿರುದ್ಧ ದಂಗೆಯೇಳುವಂತೆ ಒಂದು ಗುಂಪನ್ನು ಹುರಿದುಂಬಿಸುತ್ತಾನೆ. ಮಹತ್ವಾಕಾಂಕ್ಷೆಯಿದ್ದ ಒಬ್ಬ ರಾಜಕುಮಾರನು, ತನ್ನ ತಂದೆಯ ಸಿಂಹಾಸನವನ್ನು ಸ್ವಾಧೀನಪಡಿಸಿಕೊಳ್ಳಲಿಕ್ಕಾಗಿ ಮೋಸಕರ ಒಳಸಂಚನ್ನು ಹೂಡುತ್ತಾನೆ. ಸಹನೆಯಿಲ್ಲದ ಒಬ್ಬ ಅರಸನು ದೇವರ ಪ್ರವಾದಿಯ ಸುಸ್ಪಷ್ಟವಾದ ಸೂಚನೆಗಳನ್ನು ತಳ್ಳಿಹಾಕುತ್ತಾನೆ. ಈ ಮೂವರು ಇಸ್ರಾಯೇಲ್ಯರಲ್ಲಿಯೂ ಒಂದೇ ರೀತಿಯ ಪ್ರವೃತ್ತಿಯಿದೆ: ಅದು ದುರಭಿಮಾನವೇ.

2 ದುರಭಿಮಾನವು ಮನಸ್ಸಿನ ಒಂದು ವಿಶಿಷ್ಟ ಗುಣಲಕ್ಷಣವಾಗಿದ್ದು, ಇದು ಎಲ್ಲರಿಗೂ ಗಂಭೀರವಾದ ಬೆದರಿಕೆಯನ್ನೊಡ್ಡುತ್ತದೆ. (ಕೀರ್ತನೆ 19:13) ದುರಭಿಮಾನವಿರುವ ಒಬ್ಬ ವ್ಯಕ್ತಿಯು ಮನಸ್ಸಿಗೆ ಬಂದಂತೆ ವರ್ತಿಸುತ್ತಾನೆ ಮತ್ತು ಯಾವ ಕೆಲಸವನ್ನು ಮಾಡಲು ಅವನಿಗೆ ಅಧಿಕಾರವಿರುವುದಿಲ್ಲವೋ ಅದನ್ನು ಮಾಡಲು ಅವನು ಹಿಂಜರಿಯುವುದಿಲ್ಲ. ಆದರೆ ಹೀಗೆ ಮಾಡುವುದು ವಿನಾಶಕ್ಕೆ ನಡಿಸುತ್ತದೆ. ಉದಾಹರಣೆಗಾಗಿ, ಈ ದುರಭಿಮಾನವು ಅನೇಕ ರಾಜರ ಅವನತಿಗೆ ಕಾರಣವಾಗಿದೆ ಮತ್ತು ಅನೇಕ ಸಾಮ್ರಾಜ್ಯಗಳನ್ನು ಉರುಳಿಸಿಬಿಟ್ಟಿದೆ. (ಯೆರೆಮೀಯ 50:29, 31, 32; ದಾನಿಯೇಲ 5:20) ಅಷ್ಟುಮಾತ್ರವಲ್ಲದೆ, ಯೆಹೋವನ ಸೇವಕರಲ್ಲಿ ಸಹ ಕೆಲವರು ಈ ದುರಭಿಮಾನದ ಪಾಶಕ್ಕೆ ಸಿಕ್ಕಿಕೊಂಡಿದ್ದಾರೆ ಮತ್ತು ಇದು ಅವರಿಗೆ ಸರ್ವನಾಶವನ್ನುಂಟುಮಾಡಿದೆ.

3. ದುರಭಿಮಾನದಿಂದ ಉಂಟಾಗುವ ಅಪಾಯಗಳ ಕುರಿತು ನಾವು ಹೇಗೆ ಗ್ರಹಿಸಸಾಧ್ಯವಿದೆ?

3 ಸಕಾರಣದಿಂದಲೇ ಬೈಬಲು ಹೇಳುವುದು: “ದುರಭಿಮಾನ ಉಂಟಾಗಿದೆಯೋ? ಹಾಗಾದರೆ ಅದರ ಪರಿಣಾಮ ಅವಮಾನವೇ; ಆದರೆ ವಿವೇಕವಿದೆ.” (ಜ್ಞಾನೋಕ್ತಿ 11:2, NW) ಈ ಜ್ಞಾನೋಕ್ತಿಯ ಮಾತುಗಳ ಸತ್ಯತೆಗೆ ಹೊಂದಿಕೆಯಲ್ಲಿರುವ ಉದಾಹರಣೆಗಳನ್ನು ಬೈಬಲು ನಮಗೆ ನೀಡುತ್ತದೆ. ಈ ಉದಾಹರಣೆಗಳಲ್ಲಿ ಕೆಲವನ್ನು ಪರೀಕ್ಷಿಸುವಾಗ, ಹದ್ದುಮೀರಿ ವರ್ತಿಸುವುದರ ಅಪಾಯಗಳನ್ನು ಗ್ರಹಿಸುವಂತೆ ನಮಗೆ ಸಹಾಯ ಮಾಡುವುದು. ಆದುದರಿಂದ ಅಸೂಯೆ, ಮಹತ್ವಾಕಾಂಕ್ಷೆ ಮತ್ತು ಅಸಹನೆಯಂತಹ ಗುಣಗಳು, ಈ ಲೇಖನದ ಆರಂಭದಲ್ಲಿ ತಿಳಿಸಿದಂತಹ ಮೂರು ಮಂದಿಯಲ್ಲಿ ದುರಭಿಮಾನವನ್ನು ಹೇಗೆ ಉಂಟುಮಾಡಿದವು ಮತ್ತು ಅವರ ಅವಮಾನಕ್ಕೆ ಅದು ಹೇಗೆ ಕಾರಣವಾಯಿತು ಎಂಬುದನ್ನು ನಾವು ಪರಿಗಣಿಸೋಣ.

ಕೋರಹ—ಅಸೂಯೆಯುಳ್ಳ ಒಬ್ಬ ದಂಗೆಕೋರ

4. (ಎ) ಕೋರಹನು ಯಾರು, ಮತ್ತು ಅವನು ಯಾವ ಐತಿಹಾಸಿಕ ಘಟನೆಗಳಲ್ಲಿ ಭಾಗವಹಿಸಿದ್ದನು? (ಬಿ) ಆದರೆ ಸಮಯಾನಂತರ ಕೋರಹನು ಅಪಕೀರ್ತಿ ತರುವಂತಹ ಯಾವ ಕೃತ್ಯವನ್ನು ಪ್ರಚೋದಿಸಿದನು?

4 ಕೋರಹನು ಲೇವಿಯನಾದ ಕೇಹಾತನ ಕುಲಕ್ಕೆ ಸೇರಿದವನಾಗಿದ್ದನು ಮತ್ತು ಮೋಶೆಆರೋನರ ಸೋದರಳಿಯನಾಗಿದ್ದನು. ಇವನು ಅನೇಕ ದಶಕಗಳ ವರೆಗೆ ಯೆಹೋವನಿಗೆ ನಿಷ್ಠಾವಂತನಾಗಿದ್ದನು ಎಂಬುದು ವ್ಯಕ್ತವಾಗುತ್ತದೆ. ಕೆಂಪು ಸಮುದ್ರದಿಂದ ಅದ್ಭುತಕರವಾಗಿ ಪಾರುಗೊಳಿಸಲ್ಪಟ್ಟಿದ್ದವರಲ್ಲಿ ಒಬ್ಬನಾಗಿರುವಂತಹ ಸುಯೋಗ ಕೋರಹನಿಗೆ ಸಿಕ್ಕಿತ್ತು. ಇದಲ್ಲದೆ, ಸೀನಾಯಿಪರ್ವತದಲ್ಲಿ ಬಸವನ ಆರಾಧನೆಯಲ್ಲಿ ತೊಡಗಿದ್ದ ಇಸ್ರಾಯೇಲ್ಯರ ವಿರುದ್ಧ ಯೆಹೋವನು ವಿಧಿಸಿದ ದಂಡನೆಯನ್ನು ಪೂರೈಸುವ ಕೆಲಸದಲ್ಲಿ ಕೂಡ ಅವನು ಪಾಲ್ಗೊಂಡಿದ್ದನು. (ವಿಮೋಚನಕಾಂಡ 32:26) ಆದರೆ, ಕಾಲಕ್ರಮೇಣ ಕೋರಹನು ಮೋಶೆ ಮತ್ತು ಆರೋನರ ವಿರುದ್ಧ ದಂಗೆಯೇಳುವಂತೆ ಒಂದು ಗುಂಪನ್ನು ಪ್ರಚೋದಿಸುವುದರಲ್ಲಿ ನಾಯಕತ್ವವನ್ನು ವಹಿಸಿದನು. ರೂಬೇನ್‌ ಕುಲದವರಾಗಿದ್ದ ದಾತಾನ್‌, ಅಬೀರಾಮರು ಹಾಗೂ ಇಸ್ರಾಯೇಲ್ಯರಲ್ಲಿ 250 ಮಂದಿ ಮುಖ್ಯಸ್ಥರು ಈ ಗುಂಪಿನಲ್ಲಿ ಸೇರಿದ್ದರು. * ಅವರು ಮೋಶೆ ಮತ್ತು ಆರೋನರಿಗೆ ಹೇಳಿದ್ದು: “ನಿಮ್ಮಿಂದ ಸಾಕಾಯಿತು; ಈ ಸಮೂಹದವರಲ್ಲಿ ಪ್ರತಿಯೊಬ್ಬನೂ ದೇವರಿಗೆ ಪ್ರತಿಷ್ಠಿತನೇ; ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನಲ್ಲವೇ; ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವದೇನು.”—ಅರಣ್ಯಕಾಂಡ 16:1-3.

5, 6. (ಎ) ಮೋಶೆ ಮತ್ತು ಆರೋನರ ವಿರುದ್ಧ ಕೋರಹನು ಏಕೆ ದಂಗೆಯೆದ್ದನು? (ಬಿ) ದೇವರ ಏರ್ಪಾಡಿನಲ್ಲಿ ತನಗಿದ್ದ ಸ್ಥಾನವನ್ನು ಕೋರಹನು ಕೀಳಾಗಿ ಕಂಡನು ಎಂದು ಏಕೆ ಹೇಳಸಾಧ್ಯವಿದೆ?

5 ಬಹಳ ವರ್ಷಗಳ ವರೆಗೆ ನಂಬಿಗಸ್ತಿಕೆಯಿಂದ ದೇವರ ಸೇವೆಮಾಡಿದ ಕೋರಹನು, ಸಮಯಾನಂತರ ಏಕೆ ದಂಗೆಯೆದ್ದನು? ಇಸ್ರಾಯೇಲ್ಯರ ಮುಂದಾಳಾಗಿದ್ದ ಮೋಶೆಯು ಖಂಡಿತವಾಗಿಯೂ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರಲಿಲ್ಲ. ಏಕೆಂದರೆ ಮೋಶೆಯು ‘ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನಾಗಿದ್ದನು.’ (ಅರಣ್ಯಕಾಂಡ 12:3) ಆದರೂ, ಮೋಶೆ ಮತ್ತು ಆರೋನರು ಪ್ರಮುಖ ಸ್ಥಾನದಲ್ಲಿರುವುದನ್ನು ನೋಡಿ ಕೋರಹನು ಅಸೂಯೆಪಟ್ಟನು. ಮೋಶೆ ಮತ್ತು ಆರೋನರು ನಿರಂಕುಶವಾಗಿ ಅಧಿಕಾರ ನಡೆಸುತ್ತಾರೆ ಹಾಗೂ ದೇವರ ಸಮೂಹದವರಿಗಿಂತ ತಮ್ಮನ್ನು ತಾವೇ ಹೆಚ್ಚಿಸಿಕೊಂಡಿದ್ದಾರೆ ಎಂದು ತಪ್ಪಾಗಿ ಹೇಳುವಂತೆ ಪ್ರಚೋದಿಸಲ್ಪಟ್ಟನು.—ಕೀರ್ತನೆ 106:16.

6 ಕೋರಹನು ಈ ರೀತಿಯಲ್ಲಿ ವರ್ತಿಸಲು ಒಂದು ಕಾರಣವೇನೆಂದರೆ, ದೇವರ ಏರ್ಪಾಡಿನಲ್ಲಿ ತನಗಿದ್ದಂತಹ ಸುಯೋಗಗಳನ್ನು ಅವನು ಅಮೂಲ್ಯವೆಂದು ನೆನಸಲಿಲ್ಲ. ಕೋರಹನು ಕೇಹಾತನ ಕುಲದವನಾಗಿದ್ದನು ಮತ್ತು ಕೇಹಾತನ ಕುಲದವರಾದ ಲೇವಿಯರು ಯಾಜಕರಾಗಿರಲಿಲ್ಲ. ಆದರೆ ಅವರು ದೇವರ ಧರ್ಮಶಾಸ್ತ್ರದ ಬೋಧಕರಾಗಿದ್ದರು. ಅಷ್ಟುಮಾತ್ರವಲ್ಲದೆ, ದೇವಾಲಯದ ಪೀಠೋಪಕರಣಗಳನ್ನು ಮತ್ತು ಪಾತ್ರೆಗಳನ್ನು ಬೇರೆ ಕಡೆಗೆ ರವಾನಿಸಬೇಕಾಗಿದ್ದಾಗ, ಆ ಕೆಲಸವನ್ನೂ ಇವರೇ ಮಾಡುತ್ತಿದ್ದರು. ಇದು ಸಾಮಾನ್ಯವಾದ ಕೆಲಸವಾಗಿರಲಿಲ್ಲ, ಏಕೆಂದರೆ ಧಾರ್ಮಿಕವಾಗಿ ಮತ್ತು ನೈತಿಕವಾಗಿ ಶುದ್ಧರಾಗಿದ್ದಂತಹ ವ್ಯಕ್ತಿಗಳು ಮಾತ್ರ ಈ ಪವಿತ್ರ ಪಾತ್ರೆಗಳನ್ನು ಮುಟ್ಟಸಾಧ್ಯವಿತ್ತು. (ಯೆಶಾಯ 52:11) ಆದುದರಿಂದ, ಮೋಶೆಯು ಕೋರಹನಿಗೆ ಪ್ರತ್ಯುತ್ತರ ನೀಡುತ್ತಿದ್ದಾಗ, ನೀನು ನಿನ್ನ ಸ್ವಂತ ನೇಮಕವನ್ನು ಅಲ್ಪವಾಗಿ ಪರಿಗಣಿಸಿ, ಯಾಜಕತ್ವವನ್ನು ನಿನ್ನದಾಗಿಸಿಕೊಳ್ಳಲು ಬಯಸುತ್ತಿರುವೆಯೊ? ಎಂದು ಕೋರಹನಿಗೆ ಕೇಳುವಂತಿತ್ತು. (ಅರಣ್ಯಕಾಂಡ 16:9, 10) ಏಕೆಂದರೆ ಕೋರಹನು ಒಂದು ವಿಷಯವನ್ನು ಗ್ರಹಿಸಲು ತಪ್ಪಿಹೋಗಿದ್ದನು. ಅದೇನೆಂದರೆ, ಒಂದು ವಿಶೇಷ ಅಂತಸ್ತು ಅಥವಾ ಸ್ಥಾನಮಾನವಲ್ಲ, ಬದಲಾಗಿ ಯೆಹೋವನ ಏರ್ಪಾಡಿಗನುಸಾರ ಆತನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುವುದೇ ಅತಿ ದೊಡ್ಡ ಸುಯೋಗವಾಗಿದೆ.—ಕೀರ್ತನೆ 84:10.

7. (ಎ) ಕೋರಹ ಮತ್ತು ಅವನ ಸಮೂಹದವರೊಂದಿಗೆ ಮೋಶೆ ಹೇಗೆ ವ್ಯವಹರಿಸಿದನು? (ಬಿ) ಯಾವ ರೀತಿಯಲ್ಲಿ ಕೋರಹನ ದಂಗೆಯು ದಾರುಣವಾಗಿ ಅಂತ್ಯಗೊಂಡಿತು?

7 ಮರುದಿನ ಬೆಳಗ್ಗೆ ಕೋರಹನು ಮತ್ತು ಅವನ ಸಮೂಹದವರೆಲ್ಲರು ತಮ್ಮ ಧೂಪಾರತಿಗಳನ್ನು ಮತ್ತು ಧೂಪವನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಗೆ ಬರಬೇಕು ಎಂದು ಮೋಶೆಯು ಕೋರಹನಿಗೆ ಹೇಳಿದನು. ಕೋರಹ ಮತ್ತು ಅವನ ಸಮೂಹದವರು ಯಾಜಕರಲ್ಲದ ಕಾರಣ ಅವರಿಗೆ ಧೂಪಹಾಕುವ ಅಧಿಕಾರವಿರಲಿಲ್ಲ. ಒಂದುವೇಳೆ ಅವರು ತಮ್ಮ ತಮ್ಮ ಧೂಪಾರತಿಗಳು ಮತ್ತು ಧೂಪದೊಂದಿಗೆ ಬರುವಲ್ಲಿ, ಯಾಜಕರೋಪಾದಿ ಕಾರ್ಯನಡಿಸಲು ತಮಗೂ ಹಕ್ಕಿದೆ ಎಂಬ ಭಾವನೆ ಈ ಜನರಿಗಿದೆ ಎಂಬುದನ್ನು ಅದು ಸೂಚಿಸುತ್ತಿತ್ತು. ಅಷ್ಟುಮಾತ್ರವಲ್ಲದೆ, ಇಡೀ ರಾತ್ರಿ ಈ ವಿಷಯದ ಬಗ್ಗೆ ಆಲೋಚಿಸುವಷ್ಟು ಸಮಯವು ಅವರಿಗೆ ಕೊಡಲ್ಪಟ್ಟಿತ್ತಾದರೂ, ಮರುದಿನ ಬೆಳಗ್ಗೆ ಅವರು ತಮ್ಮ ತಮ್ಮ ಧೂಪಾರತಿಗಳು ಮತ್ತು ಧೂಪದೊಂದಿಗೆ ಬಂದರು. ಅದನ್ನು ನೋಡಿ ಯೆಹೋವನು ತನ್ನ ಉಗ್ರ ಕೋಪವನ್ನು ವ್ಯಕ್ತಪಡಿಸಿದ್ದು ಯುಕ್ತವಾಗಿತ್ತು. ಇದರ ಫಲಿತಾಂಶವಾಗಿ, ರೂಬೇನನ ಕುಲದವರು “ಸಜೀವಿಗಳಾಗಿ ತಮ್ಮ ಸರ್ವಸ್ವವು ಸಹಿತ ಪಾತಾಳಕ್ಕೆ ಹೋಗಿಬಿಟ್ಟರು.” ಆದರೆ ಕೋರಹನು ಹಾಗೂ ಇನ್ನುಳಿದವರು ದೇವರಿಂದ ಕಳುಹಿಸಲ್ಪಟ್ಟ ಬೆಂಕಿಗೆ ಆಹುತಿಯಾದರು. (ಧರ್ಮೋಪದೇಶಕಾಂಡ 11:6; ಅರಣ್ಯಕಾಂಡ 16:16-35; 26:10, NW) ಹೀಗೆ, ಕೋರಹನ ದುರಭಿಮಾನವು ಅಂತಿಮವಾಗಿ ಅವಮಾನಕ್ಕೆ, ಅಂದರೆ ದೇವರ ಅಸಮ್ಮತಿಗೆ ನಡಿಸಿತು!

‘ಅಸೂಯೆಪಡುವ ಪ್ರವೃತ್ತಿಯನ್ನು’ ಪ್ರತಿರೋಧಿಸಿರಿ

8. ‘ಅಸೂಯೆಪಡುವ ಪ್ರವೃತ್ತಿಯು’ ಕ್ರೈಸ್ತರ ನಡುವೆ ಹೇಗೆ ವ್ಯಕ್ತವಾಗಸಾಧ್ಯವಿದೆ?

8 ಕೋರಹನ ವೃತ್ತಾಂತವು ನಮಗೆ ಎಚ್ಚರಿಕೆಯ ಒಂದು ಪಾಠವಾಗಿದೆ. ಏಕೆಂದರೆ ಅಪರಿಪೂರ್ಣ ಮಾನವರಲ್ಲಿ ‘ಅಸೂಯೆಪಡುವ ಪ್ರವೃತ್ತಿಯಿದೆ’ ಮತ್ತು ಇದು ಕ್ರೈಸ್ತ ಸಭೆಯಲ್ಲಿ ಸಹ ವ್ಯಕ್ತಪಡಿಸಲ್ಪಡಸಾಧ್ಯವಿದೆ. (ಯಾಕೋಬ 4:5) ಉದಾಹರಣೆಗೆ, ನಾವು ಯಾವಾಗಲೂ ಸ್ಥಾನಮಾನದ ಬಗ್ಗೆ ಚಿಂತಿಸುವ ವ್ಯಕ್ತಿಗಳಾಗಿರಬಹುದು. ಮತ್ತು ಕೆಲವೊಮ್ಮೆ ನಾವು ಬಯಸುವಂತಹ ಸುಯೋಗಗಳು ಬೇರೆಯವರಿಗೆ ಸಿಗುವಾಗ, ಅವರನ್ನು ನೋಡಿ ನಾವು ಕೋರಹನಂತೆ ಅಸೂಯೆಪಡಬಹುದು. ಅಥವಾ ಪ್ರಥಮ ಶತಮಾನದ ದಿಯೊತ್ರೇಫನೆಂಬ ಹೆಸರಿನ ಕ್ರೈಸ್ತನಂತೆ ನಾವು ವರ್ತಿಸಸಾಧ್ಯವಿದೆ. ಅವನು ಅಪೊಸ್ತಲರ ಅಧಿಕಾರದ ಬಗ್ಗೆ ತುಂಬ ಟೀಕಿಸಿ ಮಾತಾಡುತ್ತಿದ್ದನು. ಇದಕ್ಕೆ ಕಾರಣವೇನೆಂದರೆ, ಅಂತಹ ಅಧಿಕಾರದ ಸ್ಥಾನದಲ್ಲಿ ತಾನಿರಬೇಕೆಂಬ ಬಯಕೆ ಈ ದಿಯೊತ್ರೇಫನಿಗಿತ್ತು. ಆದುದರಿಂದಲೇ, ಈ ದಿಯೊತ್ರೇಫನ ಕುರಿತು ‘ಸಭೆಯವರಲ್ಲಿ ಪ್ರಮುಖನಾಗಿರಬೇಕೆಂದಿರುವವನು’ ಎಂದು ಯೋಹಾನನು ಬರೆದನು.—3 ಯೋಹಾನ 9.

9. (ಎ) ಸಭೆಯ ಜವಾಬ್ದಾರಿಗಳ ಕಡೆಗೆ ನಮಗೆ ಯಾವ ರೀತಿಯ ಮನೋಭಾವವಿರಬಾರದು? (ಬಿ) ದೇವರ ಏರ್ಪಾಡಿನಲ್ಲಿ ನಮಗಿರುವ ಸ್ಥಾನದ ಕುರಿತು ಯಾವುದು ಯೋಗ್ಯವಾದ ದೃಷ್ಟಿಕೋನವಾಗಿದೆ?

9 ಆದರೂ, ಒಬ್ಬ ಕ್ರೈಸ್ತ ಪುರುಷನು ಸಭಾ ಜವಾಬ್ದಾರಿಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು ತಪ್ಪು ಎಂಬುದು ಇದರರ್ಥವಲ್ಲ. ಏಕೆಂದರೆ ಒಬ್ಬನು ಜವಾಬ್ದಾರಿಯುತ ಸ್ಥಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುವಂತೆ ಪೌಲನೇ ಪ್ರೋತ್ಸಾಹಿಸುತ್ತಾನೆ. (1 ತಿಮೊಥೆಯ 3:1) ಆದರೆ ಸೇವಾ ಸುಯೋಗಗಳು ಹಿರಿಮೆಯ ಸಂಕೇತವಾಗಿವೆಯೆಂದು ನಾವು ನೆನಸಬಾರದು. ಮತ್ತು ಇಂತಹ ಸೇವಾ ಸುಯೋಗಗಳನ್ನು ಪಡೆದುಕೊಳ್ಳುವ ಮೂಲಕ ತಾವು ಪ್ರಗತಿಯ ಮೆಟ್ಟಿಲನ್ನು ಏರಿದ್ದೇವೆ ಎಂದು ನೆನಸಬಾರದು. “ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು” ಎಂದು ಯೇಸು ಹೇಳಿದ್ದನ್ನು ಎಂದಿಗೂ ಮರೆಯಬೇಡಿರಿ. (ಮತ್ತಾಯ 20:26, 27) ಆದುದರಿಂದ, ಯಾರಿಗೆ ಹೆಚ್ಚಿನ ಜವಾಬ್ದಾರಿಯುತ ಸ್ಥಾನಗಳಿವೆಯೋ ಅವರನ್ನು ನೋಡಿ ನಾವು ಅಸೂಯೆಪಡಬಾರದು. ಏಕೆಂದರೆ ದೇವರ ಸಂಸ್ಥೆಯಲ್ಲಿ ನಾವು ಯಾವ “ಸ್ಥಾನಮಾನ”ವನ್ನು ಪಡೆದುಕೊಂಡಿದ್ದೇವೆ ಎಂಬುದರ ಆಧಾರದ ಮೇಲೆ ಆತನು ನಮ್ಮನ್ನು ಅಮೂಲ್ಯರಾಗಿ ಪರಿಗಣಿಸುವುದಿಲ್ಲ. ಈ ವಿಷಯದಲ್ಲಿ ಯೇಸು ಹೇಳಿದ್ದು: “ನೀವೆಲ್ಲರು ಸಹೋದರರು.” (ಮತ್ತಾಯ 23:8) ಹೌದು, ಪ್ರಚಾರಕರಾಗಿರಲಿ ಪಯನೀಯರರಾಗಿರಲಿ, ಹೊಸದಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡವರಾಗಿರಲಿ, ದೀರ್ಘಸಮಯದಿಂದ ಸಮಗ್ರತೆಯನ್ನು ಕಾಪಾಡಿಕೊಂಡಿರುವವರಾಗಿರಲಿ, ಯಾರು ಪೂರ್ಣಮನಸ್ಸಿನಿಂದ ಯೆಹೋವನ ಸೇವೆಮಾಡುತ್ತಾರೋ ಅವರೆಲ್ಲರೂ ಆತನ ಏರ್ಪಾಡಿನಲ್ಲಿ ಅಮೂಲ್ಯ ಸ್ಥಾನವನ್ನು ಹೊಂದಿದ್ದಾರೆ. (ಲೂಕ 10:27; 12:6, 7; ಗಲಾತ್ಯ 3:28; ಇಬ್ರಿಯ 6:10) ಹೀಗೆ, “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ” ಎಂಬ ಬೈಬಲ್‌ ಸಲಹೆಯನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಲು ಪ್ರಯತ್ನಿಸುತ್ತಿರುವ ಲಕ್ಷಾಂತರ ಜನರೊಂದಿಗೆ ಜೊತೆಗೂಡಿ ಕೆಲಸಮಾಡುವುದು ನಿಜವಾಗಿಯೂ ಒಂದು ಆಶೀರ್ವಾದವಾಗಿದೆ.—1 ಪೇತ್ರ 5:5.

ಅಬ್ಷಾಲೋಮ—ಮಹತ್ವಾಕಾಂಕ್ಷೆಯಿದ್ದಂತಹ ಒಬ್ಬ ಸಮಯಸಾಧಕ

10. ಅಬ್ಷಾಲೋಮನು ಯಾರಾಗಿದ್ದನು ಮತ್ತು ಅವನು ಅರಸನ ಬಳಿ ವ್ಯಾಜ್ಯ ತೀರಿಸಿಕೊಳ್ಳಲಿಕ್ಕಾಗಿ ಬರುತ್ತಿದ್ದವರ ಅನುಗ್ರಹವನ್ನು ಪಡೆದುಕೊಳ್ಳಲು ಹೇಗೆ ಪ್ರಯತ್ನಿಸಿದನು?

10 ಅರಸನಾದ ದಾವೀದನ ಮೂರನೆಯ ಮಗನಾಗಿದ್ದ ಅಬ್ಷಾಲೋಮನ ಜೀವನ ರೀತಿಯು, ಮಹತ್ವಾಕಾಂಕ್ಷೆಯ ವಿಷಯದಲ್ಲಿ ಒಂದು ಪಾಠವನ್ನು ಕಲಿಸುತ್ತದೆ. ಒಳಸಂಚು ನಡೆಸುತ್ತಿದ್ದ ಈ ಸಮಯಸಾಧಕನು, ಅರಸನ ಬಳಿ ವ್ಯಾಜ್ಯ ತೀರಿಸಿಕೊಳ್ಳಲಿಕ್ಕಾಗಿ ಬರುವವರ ಅನುಗ್ರಹವನ್ನು ಪಡೆದುಕೊಳ್ಳಲು ಪ್ರಯತ್ನಿಸಿದನು. ಹೇಗೆಂದರೆ, ಅರಸನ ಬಳಿಗೆ ಬರುತ್ತಿದ್ದ ಜನರಲ್ಲಿ, ದಾವೀದನು ಅವರ ಅಗತ್ಯಗಳಿಗೆ ಲಕ್ಷ್ಯಕೊಡುತ್ತಿಲ್ಲ ಎಂಬ ಅನಿಸಿಕೆಯನ್ನು ಅವನು ಉಂಟುಮಾಡಿದನು. ತದನಂತರ ಈ ಕಪಟೋಪಾಯವನ್ನು ಬಿಟ್ಟು, ತನ್ನ ಮನೋಭಿಲಾಷೆಯನ್ನು ನೇರವಾಗಿ ಪ್ರಕಟಿಸಿದನು. ಅವನು ರಾಗವಾಗಿ ಹೇಳಿದ್ದು: “ವ್ಯಾಜ್ಯವಾಗಲಿ ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡಕೊಳ್ಳುವ ಹಾಗೆ ನನ್ನನ್ನೇ ದೇಶದ ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು.” ಅಬ್ಷಾಲೋಮನ ಚತುರ ಒಳಸಂಚಿಕೆಗೆ ಇತಿಮಿತಿಯೇ ಇರಲಿಲ್ಲ. “ಯಾವನಾದರೂ ಅವನಿಗೆ ಸಾಷ್ಟಾಂಗ ನಮಸ್ಕಾರಮಾಡುವದಕ್ಕೆ ಬಂದರೆ ಅವನು ಕೂಡಲೆ ಕೈಚಾಚಿ ಅವನನ್ನು ಹಿಡಿದು ಮುದ್ದಿಡುವನು. ಅರಸನ ಬಳಿಗೆ ವ್ಯಾಜ್ಯಕ್ಕಾಗಿ ಬರುವ ಎಲ್ಲಾ ಇಸ್ರಾಯೇಲ್ಯರಿಗೆ ಅಬ್ಷಾಲೋಮನು” ಹೀಗೆಯೇ ಮಾಡುತ್ತಿದ್ದನು ಎಂದು ಬೈಬಲು ಹೇಳುತ್ತದೆ. ಇದರ ಫಲಿತಾಂಶವೇನಾಗಿತ್ತು? ಏನೆಂದರೆ ಅಬ್ಷಾಲೋಮನು “ಎಲ್ಲರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿಕೊಂಡನು.”—2 ಸಮುವೇಲ 15:1-6.

11. ಅಬ್ಷಾಲೋಮನು ಹೇಗೆ ದಾವೀದನ ಸಿಂಹಾಸನವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದನು?

11 ಅಬ್ಷಾಲೋಮನು ತನ್ನ ತಂದೆಯಿಂದ ಅರಸುತನವನ್ನು ಕಸಿದುಕೊಳ್ಳಲು ನಿರ್ಧರಿಸಿದನು. ಇದಕ್ಕೆ ಮೊದಲು, ಅಂದರೆ ಸುಮಾರು ಐದು ವರ್ಷಗಳಿಗೆ ಮುಂಚೆ, ಅಬ್ಷಾಲೋಮನ ತಂಗಿಯಾಗಿದ್ದ ತಾಮಾರಳನ್ನು ದಾವೀದನ ಹಿರಿಯ ಮಗನಾಗಿದ್ದ ಅಮ್ಮೋನನು ಕೆಡಿಸಿದ್ದನು. ಆಗ ಅಬ್ಷಾಲೋಮನು ತನ್ನ ತಂಗಿಯನ್ನು ಕೆಡಿಸಿದ್ದ ನೆಪವನ್ನು ಉಪಯೋಗಿಸಿ ಅಮ್ಮೋನನನ್ನು ಕೊಲ್ಲಿಸಿದನು. (2 ಸಮುವೇಲ 13:28, 29) ಆದರೆ, ಆಗಲೂ ಅಬ್ಷಾಲೋಮನಿಗೆ ಸಿಂಹಾಸನವನ್ನು ತನ್ನದಾಗಿಸಿಕೊಳ್ಳುವ ಆಸೆಯಿದ್ದಿರಬಹುದು. ಆದುದರಿಂದ, ತನ್ನ ಪ್ರತಿಸ್ಪರ್ಧಿಯಾಗಿದ್ದ ಅಮ್ಮೋನನ ಕೊಲೆಮಾಡಿಸುವುದೇ ಸೂಕ್ತವಾದ ಮಾರ್ಗವೆಂದು ಅವನು ನೆನಸಿದ್ದಿರಬಹುದು. * ಏನೇ ಆಗಲಿ, ಅವಕಾಶ ಸಿಕ್ಕಿದಾಗ ಅಬ್ಷಾಲೋಮನು ಕಾರ್ಯಪ್ರವೃತ್ತನಾದನು. ಮತ್ತು ಅವನ ಅರಸುತನದ ಬಗ್ಗೆ ದೇಶದಲ್ಲೆಲ್ಲ ಪ್ರಚಾರಮಾಡಿಸಿದನು.—2 ಸಮುವೇಲ 15:10.

12. ಅಬ್ಷಾಲೋಮನ ದುರಭಿಮಾನವು ಹೇಗೆ ಅವಮಾನಕ್ಕೆ ನಡಿಸಿತೆಂಬುದನ್ನು ವಿವರಿಸಿರಿ.

12 ಸ್ವಲ್ಪ ಸಮಯದ ತನಕ ಅಬ್ಷಾಲೋಮನು ತನ್ನ ಯೋಜನೆಯಲ್ಲಿ ಸಫಲನಾದನು. ಏಕೆಂದರೆ “ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದದರಿಂದ ಒಳಸಂಚು ಬಲವಾಗುತ್ತಾ ಹೋಯಿತು.” ಈ ಮಧ್ಯೆ, ಅವನ ಕೈಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅರಸನಾದ ದಾವೀದನು ಜೀವಭಯದಿಂದ ಓಡಿಹೋದನು. (2 ಸಮುವೇಲ 15:12-17) ಆದರೂ, ಸ್ವಲ್ಪದರಲ್ಲೇ ಅಬ್ಷಾಲೋಮನ ಪ್ರಗತಿಗೆ ಧಕ್ಕೆಯುಂಟಾಯಿತು. ಏಕೆಂದರೆ ಯೋವಾಬನು ಅವನನ್ನು ಕೊಂದು, ಅವನ ಶವವನ್ನು ಕಾಡಿನಲ್ಲಿದ್ದ ಒಂದು ದೊಡ್ಡ ಗುಂಡಿಯೊಳಗೆ ಹಾಕಿ, ಅದರ ಮೇಲೆ ದೊಡ್ಡ ಕಲ್ಲುಕುಪ್ಪೆಯನ್ನು ಮಾಡಿದನು. ತುಸು ಊಹಿಸಿಕೊಳ್ಳಿರಿ: ಅರಸನಾಗಲು ಬಯಸಿದ್ದ ಈ ವ್ಯಕ್ತಿಯು ಮಹತ್ವಾಕಾಂಕ್ಷಿಯಾಗಿದ್ದರೂ, ಅವನು ಸತ್ತ ನಂತರ ಅವನಿಗೆ ಯಾವ ಯೋಗ್ಯವಾದ ಶವಸಂಸ್ಕಾರವೂ ದೊರೆಯಲಿಲ್ಲ! * ನಿಜವಾಗಿಯೂ ಅಬ್ಷಾಲೋಮನ ದುರಭಿಮಾನವು ಅವನನ್ನು ಅವಮಾನಕ್ಕೆ ನಡಿಸಿತು.—2 ಸಮುವೇಲ 18:9-17.

ಸ್ವಾರ್ಥಪರ ಮಹತ್ವಾಕಾಂಕ್ಷೆಯಿಂದ ದೂರವಿರಿ

13. ಒಬ್ಬ ಕ್ರೈಸ್ತನ ಹೃದಯದಲ್ಲಿ ಮಹತ್ವಾಕಾಂಕ್ಷೆಯು ಹೇಗೆ ಬೇರೂರಸಾಧ್ಯವಿದೆ?

13 ಅಬ್ಷಾಲೋಮನು ಅಧಿಕಾರಕ್ಕೆ ಬಂದದ್ದು ಮತ್ತು ಸ್ವಲ್ಪದರಲ್ಲೇ ಅವನತಿಹೊಂದಿದ್ದು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ನೀತಿನಿಯಮಗಳಿಲ್ಲದ ಇಂದಿನ ಲೋಕದಲ್ಲಿ, ತಮ್ಮ ಮೇಲಧಿಕಾರಿಗಳ ಚಾಕರಿಮಾಡುವುದು ಜನರಿಗೆ ಸರ್ವಸಾಮಾನ್ಯವಾಗಿಬಿಟ್ಟಿದೆ. ತಮ್ಮ ಬಗ್ಗೆ ಮೇಲಧಿಕಾರಿಗಳಲ್ಲಿ ಸದಭಿಪ್ರಾಯವನ್ನು ಮೂಡಿಸಲು ಅಥವಾ ಕೆಲವೊಂದು ರೀತಿಯ ಸದವಕಾಶಗಳನ್ನು ಪಡೆದುಕೊಳ್ಳಲು ಇಲ್ಲವೆ ಕೆಲಸದಲ್ಲಿ ಬಡತಿ ಪಡೆಯಲು ಜನರು ಹೀಗೆ ಮಾಡುತ್ತಾರೆ. ಅದೇ ಸಮಯದಲ್ಲಿ ಈ ಜನರು, ತಮ್ಮ ಕೈಕೆಳಗಿರುವವರ ಅನುಗ್ರಹ ಮತ್ತು ಬೆಂಬಲವನ್ನು ಪಡೆದುಕೊಳ್ಳುವ ನಿರೀಕ್ಷೆಯಿಂದ ಅವರ ಮುಂದೆ ಜಂಬಕೊಚ್ಚಿಕೊಳ್ಳಬಹುದು. ಒಂದುವೇಳೆ ನಾವು ಜಾಗ್ರತೆವಹಿಸದಿದ್ದರೆ ಅಂತಹ ಮಹತ್ವಾಕಾಂಕ್ಷೆಯು ನಮ್ಮ ಹೃದಯದಲ್ಲೂ ಬೇರೂರಸಾಧ್ಯವಿದೆ. ಏಕೆಂದರೆ ಪ್ರಥಮ ಶತಮಾನದಲ್ಲಿದ್ದ ಕೆಲವರಲ್ಲಿ ಮಹತ್ವಾಕಾಂಕ್ಷೆಯು ಬೇರುಬಿಟ್ಟಿತು. ಆಗ ಅಪೊಸ್ತಲರು, ಅಂತಹವರ ವಿರುದ್ಧ ಜಾಗರೂಕತೆಯಿಂದಿರುವಂತೆ ಬಲವಾದ ಎಚ್ಚರಿಕೆಗಳನ್ನು ಕೊಡಬೇಕಾಯಿತು.—ಗಲಾತ್ಯ 4:17; 3 ಯೋಹಾನ 9, 10.

14. ನಾವು ಮಹತ್ವಾಕಾಂಕ್ಷೆಯ ಮನೋಭಾವವನ್ನು ಏಕೆ ಬೆಳೆಸಿಕೊಳ್ಳಬಾರದು?

14 ‘ಸ್ವಂತಮಾನದ ಕುರಿತು ಹೆಚ್ಚಾಗಿ ಯೋಚಿಸಲು’ ಪ್ರಯತ್ನಿಸುತ್ತಿದ್ದು, ತಮ್ಮ ಬಗ್ಗೆ ಬಡಾಯಿಕೊಚ್ಚಿಕೊಳ್ಳುವಂತಹ ಒಳಸಂಚುಗಾರರಿಗೆ ಯೆಹೋವನು ತನ್ನ ಸಂಸ್ಥೆಯಲ್ಲಿ ಸ್ಥಳವನ್ನು ಕೊಡಲಾರನು. (ಜ್ಞಾನೋಕ್ತಿ 25:27) ಆದುದರಿಂದಲೇ ಬೈಬಲು ಎಚ್ಚರಿಸುವುದು: ‘ಯೆಹೋವನು ವಂಚನೆಯ ತುಟಿಗಳನ್ನೂ ಬಡಾಯಿ ನಾಲಿಗೆಯನ್ನೂ ಕಡಿದುಬಿಡುವನು.’ (ಕೀರ್ತನೆ 12:3) ಅಬ್ಷಾಲೋಮನಿಗೆ ವಂಚನಾತ್ಮಕ ತುಟಿಗಳಿದ್ದವು. ತನಗೆ ಯಾರ ಅನುಗ್ರಹ ಬೇಕಾಗಿತ್ತೋ ಅವರನ್ನು ಅವನು ಮೇಲೇರಿಸಿ ಮಾತಾಡಿದನು; ತಾನು ಅತ್ಯಾಸೆಪಟ್ಟ ಒಂದು ಅಧಿಕಾರದ ಸ್ಥಾನವನ್ನು ಸಂಪಾದಿಸಿಕೊಳ್ಳಲಿಕ್ಕಾಗಿಯೇ ಅವನು ಇಷ್ಟೆಲ್ಲ ಮಾಡಿದನು. ಇದಕ್ಕೆ ತದ್ವಿರುದ್ಧವಾಗಿ, “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ” ಎಂಬ ಪೌಲನ ಸಲಹೆಯನ್ನು ಅನುಸರಿಸುವಂತಹ ಸಹೋದರರ ಒಂದು ಬಳಗದ ನಡುವೆ ನಾವಿರುವುದು ಎಂತಹ ಒಂದು ಆಶೀರ್ವಾದವಾಗಿದೆ!—ಫಿಲಿಪ್ಪಿ 2:3.

ಸೌಲ—ಸಹನೆಯಿಲ್ಲದಂತಹ ಒಬ್ಬ ರಾಜ

15. ಒಂದು ಸಮಯದಲ್ಲಿ ಸೌಲನು ತನ್ನನ್ನು ಹೇಗೆ ವಿನಯಶೀಲನಾಗಿ ತೋರಿಸಿಕೊಂಡನು?

15 ಸಮಯಾನಂತರ ಇಸ್ರಾಯೇಲ್‌ನ ಅರಸನಾಗಿ ಪರಿಣಮಿಸಿದ ಸೌಲನು, ಒಂದು ಕಾಲದಲ್ಲಿ ತುಂಬ ವಿನಯಶೀಲ ವ್ಯಕ್ತಿಯಾಗಿದ್ದನು. ಉದಾಹರಣೆಗೆ, ಅವನು ಯುವ ಪ್ರಾಯದವನಾಗಿದ್ದಾಗ ಏನು ಸಂಭವಿಸಿತು ಎಂಬುದನ್ನು ಪರಿಗಣಿಸಿರಿ. ದೇವರ ಪ್ರವಾದಿಯಾದ ಸಮುವೇಲನು ಸೌಲನ ಪರವಹಿಸಿ ಮಾತಾಡಿದಾಗ, ಸೌಲನು ದೀನಭಾವದಿಂದ ಉತ್ತರಿಸಿದ್ದು: “ನಾನು ಇಸ್ರಾಯೇಲ್‌ ಕುಲಗಳಲ್ಲಿ ಅಲ್ಪವಾಗಿರುವ ಬೆನ್ಯಾಮೀನ್‌ ಕುಲದವನಲ್ಲವೋ? ಬೆನ್ಯಾಮೀನ್ಯರ ಎಲ್ಲಾ ಕುಟುಂಬಗಳಲ್ಲಿ ನನ್ನದು ಕನಿಷ್ಠವಾದದ್ದು; ನನಗೆ ಇಂಥ ದೊಡ್ಡ ಮಾತನ್ನು ಯಾಕೆ ಹೇಳುತ್ತೀ.”—1 ಸಮುವೇಲ 9:21.

16. ಯಾವ ರೀತಿಯಲ್ಲಿ ಸೌಲನು ಅಸಹನೆಯುಳ್ಳ ವ್ಯಕ್ತಿಯಾಗಿದ್ದನು?

16 ಆದರೂ, ಸಮಯಾನಂತರ ಸೌಲನ ವಿನಯಶೀಲತೆಯು ಕಣ್ಮರೆಯಾಯಿತು. ಒಮ್ಮೆ ಫಿಲಿಷ್ಟಿಯರೊಂದಿಗೆ ಯುದ್ಧ ಮಾಡುತ್ತಿದ್ದಾಗ, ಅವನು ಗಿಲ್ಗಾಲಿಗೆ ಹಿಂದಿರುಗಿದನು. ದೇವರಿಗೆ ಸರ್ವಾಂಗಹೋಮವನ್ನು ಸಮರ್ಪಿಸಲಿಕ್ಕಾಗಿ ಸಮುವೇಲನು ಅಲ್ಲಿಗೆ ಬರುವ ತನಕ ಸೌಲನು ಅವನಿಗಾಗಿ ಕಾಯಬೇಕಾಗಿತ್ತು. ನಿಗದಿತ ಸಮಯಕ್ಕೆ ಸಮುವೇಲನು ಬರದಿದ್ದಾಗ, ದುರಹಂಕಾರದಿಂದ ಸೌಲನು ತಾನೇ ಹೋಗಿ ಸರ್ವಾಂಗಹೋಮವನ್ನು ಸಮರ್ಪಿಸಿದನು. ಅದು ಮುಗಿಯುವಷ್ಟರಲ್ಲೇ ಸಮುವೇಲನು ಬಂದನು. “ಇದೇನು ನೀನು ಮಾಡಿದ್ದು”? ಎಂದು ಸಮುವೇಲನು ಕೇಳಿದನು. ಸೌಲನು ಉತ್ತರಿಸಿದ್ದು: “ಜನರು ಚದರಿಹೋಗುವದನ್ನೂ ನೀನು ನಿಯಮಿತಕಾಲದಲ್ಲಿ ಬಾರದಿರುವದನ್ನೂ . . . ನೋಡಿ . . . ಭಯಪಟ್ಟು ಸರ್ವಾಂಗಹೋಮವನ್ನು ಸಮರ್ಪಿಸುವದಕ್ಕೆ ಮುಂಗೊಂಡೆನು.”—1 ಸಮುವೇಲ 13:8-12.

17. (ಎ) ಮೇಲುನೋಟಕ್ಕೆ ಸೌಲನ ಕೃತ್ಯವು ಏಕೆ ನ್ಯಾಯಯುತವಾಗಿ ಕಂಡುಬರಬಹುದು? (ಬಿ) ಸೌಲನು ಅಸಹನೆಯಿಂದ ಮಾಡಿದ ಕೃತ್ಯಕ್ಕಾಗಿ ಯೆಹೋವನು ಅವನನ್ನು ಏಕೆ ಆಕ್ಷೇಪಿಸಿದನು?

17 ಮೇಲುನೋಟಕ್ಕೆ ಸೌಲನ ಕೃತ್ಯವು ನ್ಯಾಯಯುತವಾಗಿ ಕಂಡುಬರಬಹುದು. ಏಕೆಂದರೆ ದೇವಜನರಾಗಿದ್ದ ಇಸ್ರಾಯೇಲ್ಯರ ಮೇಲೆ ‘ಕೇಡು ಬಂದಿತ್ತು,’ ಅವರು “ಇಕ್ಕಟ್ಟಿನಲ್ಲಿದ್ದರು” ಮತ್ತು ತಮ್ಮ ಹತಾಶ ಸನ್ನಿವೇಶವನ್ನು ನೋಡಿ ಅವರು ಭಯದಿಂದ ನಡುಗುತ್ತಿದ್ದರು. (1 ಸಮುವೇಲ 13:6, 7) ಅಷ್ಟುಮಾತ್ರವಲ್ಲ, ಕೆಲವೊಮ್ಮೆ ಕೆಲವು ಸನ್ನಿವೇಶಗಳಲ್ಲಿ ಒಂದು ಕೆಲಸವನ್ನು ಮಾಡಲು ಮುನ್ನೆಜ್ಜೆಯಿಡುವುದು ನಿಜವಾಗಿಯೂ ತಪ್ಪಾಗಿರುವುದಿಲ್ಲ. * ಆದರೂ, ಯೆಹೋವನು ನಮ್ಮ ಹೃದಯಗಳನ್ನು ಓದಬಲ್ಲನು ಮತ್ತು ನಮ್ಮ ಅಂತರಂಗದ ಉದ್ದೇಶಗಳನ್ನು ಗ್ರಹಿಸಬಲ್ಲನು ಎಂಬುದು ನಿಮಗೆ ನೆನಪಿರಲಿ. (1 ಸಮುವೇಲ 16:7) ಆದುದರಿಂದ, ಆತನು ಸೌಲನ ಮನಸ್ಸಿನಲ್ಲಿದ್ದ ಕೆಲವು ಭಾವನೆಗಳನ್ನು ನೇರವಾಗಿ ನೋಡಿದ್ದಿರಬಹುದು. ಆದರೆ ಈ ಬೈಬಲ್‌ ವೃತ್ತಾಂತದಲ್ಲಿ ಅವು ನೇರವಾಗಿ ತಿಳಿಸಲ್ಪಟ್ಟಿಲ್ಲ. ಉದಾಹರಣೆಗೆ, ಸೌಲನ ಅಸಹನೆಯು ಅಹಂಕಾರದಿಂದಲೇ ಉಂಟಾಗಿತ್ತು ಎಂಬುದನ್ನು ಯೆಹೋವನು ಗಮನಿಸಿದ್ದಿರಬಹುದು. ಏಕೆಂದರೆ, ಇಸ್ರಾಯೇಲ್ಯರ ಅಸನಾಗಿರುವ ತಾನು, ವೃದ್ಧನೂ ಕಾಲಹರಣಮಾಡುವವನೂ ಆಗಿರುವಂತಹ ಒಬ್ಬ ವ್ಯಕ್ತಿಗೋಸ್ಕರ ಕಾಯಬೇಕಲ್ಲ ಎಂಬ ಅನಿಸಿಕೆಯೇ ಸೌಲನಿಗೆ ಕೋಪವನ್ನುಂಟುಮಾಡಿದ್ದಿರಬಹುದು! ಏನೇ ಇರಲಿ, ಸಮುವೇಲನು ತಡಮಾಡಿದ್ದರಿಂದ, ಆ ಕೆಲಸವನ್ನು ಪೂರೈಸುವ ಹಕ್ಕು ತನ್ನದೇ ಎಂಬ ಅನಿಸಿಕೆ ಸೌಲನಿಗಾಯಿತು. ಆದುದರಿಂದಲೇ ಅವನು ತನಗೆ ಕೊಡಲ್ಪಟ್ಟಿದ್ದ ಸುಸ್ಪಷ್ಟ ಸೂಚನೆಗಳನ್ನು ಧಿಕ್ಕರಿಸಿ, ಸಮುವೇಲನ ಕೆಲಸವನ್ನು ತಾನೇ ಮಾಡಿಮುಗಿಸಿದನು. ಇದರ ಫಲಿತಾಂಶವೇನು? ಸೌಲನು ಮುನ್ನೆಜ್ಜೆಯನ್ನು ತೆಗೆದುಕೊಂಡದ್ದಕ್ಕಾಗಿ ಸಮುವೇಲನು ಅವನನ್ನು ಹೊಗಳಲಿಲ್ಲ. ಅದಕ್ಕೆ ಬದಲಾಗಿ, ‘ನಿನ್ನ ಅರಸುತನವು ನಿಲ್ಲುವದಿಲ್ಲ; ನೀನು ಯೆಹೋವನ ಆಜ್ಞೆಯನ್ನು ಕೈಕೊಳ್ಳದೆ ಹೋದಿ’ ಎಂದು ಹೇಳುತ್ತಾ ಸೌಲನನ್ನು ಖಂಡಿಸಿದನು. (1 ಸಮುವೇಲ 13:13, 14) ಹೀಗೆ, ಸೌಲನ ದುರಭಿಮಾನವು ಅವಮಾನಕ್ಕೆ ನಡಿಸಿತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಅಸಹನೆಯುಂಟಾಗದಂತೆ ನೋಡಿಕೊಳ್ಳಿರಿ

18, 19. (ಎ) ಯಾವ ರೀತಿಯಲ್ಲಿ ಅಸಹನೆಯು ದೇವರ ಆಧುನಿಕ ದಿನದ ಸೇವಕನೊಬ್ಬನು ದುರಭಿಮಾನದಿಂದ ಕಾರ್ಯನಡಿಸುವಂತೆ ಪ್ರಚೋದಿಸಸಾಧ್ಯವಿದೆ ಎಂಬುದನ್ನು ವಿವರಿಸಿರಿ. (ಬಿ) ಕ್ರೈಸ್ತ ಸಭೆಯು ಕಾರ್ಯನಡಿಸುವ ರೀತಿಯ ವಿಷಯದಲ್ಲಿ ನಾವು ಯಾವುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು?

18 ಸೌಲನು ದುರಭಿಮಾನದಿಂದ ಮಾಡಿದ ಕೃತ್ಯದ ಕುರಿತಾದ ವೃತ್ತಾಂತವು, ನಮ್ಮ ಪ್ರಯೋಜನಕ್ಕಾಗಿ ದೇವರ ವಾಕ್ಯದಲ್ಲಿ ದಾಖಲಿಸಲ್ಪಟ್ಟಿದೆ. (1 ಕೊರಿಂಥ 10:11) ಕೆಲವೊಮ್ಮೆ ನಮ್ಮ ಸಹೋದರರ ಅಪರಿಪೂರ್ಣತೆಗಳನ್ನು ನೋಡಿ ನಾವು ಬೇಗ ಕೋಪಗೊಳ್ಳುತ್ತೇವೆ. ಅಷ್ಟುಮಾತ್ರವಲ್ಲದೆ, ಯಾವುದೇ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕಾಗಿರುವಲ್ಲಿ, ಆ ಕೆಲಸವು ನಮ್ಮ ಕೈಗೆ ಬರಬೇಕು ಎಂದು ನೆನಸುತ್ತಾ ನಾವು ಸೌಲನಂತೆ ಅಸಹನೆಯಿಂದ ವರ್ತಿಸಬಹುದು. ಉದಾಹರಣೆಗೆ, ಒಬ್ಬ ಸಹೋದರನು ಸಂಸ್ಥೆಗೆ ಸಂಬಂಧಪಟ್ಟ ಕೆಲವೊಂದು ವಿಚಾರಗಳಲ್ಲಿ ತುಂಬ ಬುದ್ಧಿವಂತನಾಗಿದ್ದಾನೆ ಎಂದಿಟ್ಟುಕೊಳ್ಳಿರಿ. ಅವನು ತುಂಬ ಕಾಲನಿಷ್ಠೆಯುಳ್ಳವನೂ, ಸಭೆಯ ಕಾರ್ಯವಿಧಾನಗಳನ್ನು ಚೆನ್ನಾಗಿ ತಿಳಿದುಕೊಂಡಿರುವವನೂ, ಭಾಷಣ ಕೊಡುವುದರಲ್ಲಿ ಮತ್ತು ಕಲಿಸುವುದರಲ್ಲಿ ತುಂಬ ಕುಶಲನೂ ಆಗಿದ್ದಾನೆ. ಅದೇ ಸಮಯದಲ್ಲಿ ಇತರರು ತನ್ನ ಖಚಿತ ಮಟ್ಟಗಳಿಗೆ ಸರಿಸಮವಾಗಿ ಕಾರ್ಯನಡಿಸುವುದಿಲ್ಲ ಮತ್ತು ತಾನು ಎಷ್ಟು ಬಯಸುತ್ತೇನೋ ಅಷ್ಟರ ಮಟ್ಟಿಗೆ ಅವರು ಕಾರ್ಯಸಾಧಕರಾಗಿಲ್ಲ ಎಂಬುದನ್ನು ಗ್ರಹಿಸುತ್ತಾನೆ. ಸನ್ನಿವೇಶವು ಹೀಗಿರುವಾಗ, ಅವನು ಅವರ ಮೇಲೆ ಅಸಹನೆಯನ್ನು ತೋರಿಸುವುದು ನ್ಯಾಯವೋ? ಒಂದುವೇಳೆ ತಾನು ಪ್ರಯತ್ನಿಸದಿರುತ್ತಿದ್ದಲ್ಲಿ ಯಾವ ಕೆಲಸವೂ ಆಗುತ್ತಿರಲಿಲ್ಲ ಮತ್ತು ಸಭೆಯು ಹಿಂದುಳಿಯುತ್ತಿತ್ತು ಎಂಬ ಅನಿಸಿಕೆಯನ್ನುಂಟುಮಾಡುತ್ತಾ ಅವನು ಆ ಸಹೋದರರನ್ನು ಟೀಕಿಸಬೇಕೊ? ಇಲ್ಲ, ಏಕೆಂದರೆ ಇದು ಖಂಡಿತವಾಗಿಯೂ ದುರಭಿಮಾನವಾಗಿರುವುದು!

19 ಇಂದು ಕ್ರೈಸ್ತ ಸಭೆಯನ್ನು ಯಾವುದು ಒಗ್ಗಟ್ಟಾಗಿರಿಸಿದೆ? ಕೆಲಸವನ್ನು ನಿರ್ವಹಿಸುವ ಚಾತುರ್ಯ, ಕಾರ್ಯಸಾಧಕತೆ, ಮತ್ತು ಗಹನವಾದ ಜ್ಞಾನವು ಒಂದು ಸಭೆಯನ್ನು ಒಗ್ಗಟ್ಟಾಗಿರಿಸುತ್ತದೋ? ಒಂದು ಸಭೆಯು ಸುಗಮವಾಗಿ ಕಾರ್ಯನಡೆಸಲು ಈ ಅಂಶಗಳು ಪ್ರಯೋಜನಾರ್ಹವಾಗಿವೆ ಎಂಬುದು ಒಪ್ಪತಕ್ಕದ್ದೇ. (1 ಕೊರಿಂಥ 14:40; ಫಿಲಿಪ್ಪಿ 3:16; 2 ಪೇತ್ರ 3:18) ಆದರೂ, ಪ್ರಥಮವಾಗಿ ತನ್ನ ಹಿಂಬಾಲಕರು ತಮ್ಮ ಪ್ರೀತಿಯಿಂದಲೇ ಗುರುತಿಸಲ್ಪಡುವರು ಎಂದು ಯೇಸು ಹೇಳಿದನು. (ಯೋಹಾನ 13:35) ಆದುದರಿಂದ, ಸಭೆಯ ಪರಾಮರಿಕೆಮಾಡುವ ಹಿರಿಯರು ಶಿಸ್ತನ್ನು ಪಾಲಿಸುತ್ತಾರಾದರೂ, ಸಭೆಯು ಕಟ್ಟುನಿಟ್ಟಾದ ನಿರ್ವಹಣೆಯನ್ನು ಅಗತ್ಯಪಡಿಸುವಂತಹ ಒಂದು ಉದ್ಯಮವಾಗಿಲ್ಲ, ಬದಲಾಗಿ ಕೋಮಲ ಆರೈಕೆಯ ಅಗತ್ಯವಿರುವ ಮಂದೆಯಿಂದ ಕೂಡಿದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. (ಯೆಶಾಯ 32:1, 2; 40:11) ಇಂತಹ ಮೂಲತತ್ವಗಳನ್ನು ದುರಭಿಮಾನದಿಂದ ಕಡೆಗಣಿಸುವುದು, ಅನೇಕವೇಳೆ ಕಲಹವನ್ನು ಉಂಟುಮಾಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ದೈವಿಕ ವ್ಯವಸ್ಥೆಯು ಶಾಂತಿಯನ್ನು ಉಂಟುಮಾಡುತ್ತದೆ.—1 ಕೊರಿಂಥ 14:33; ಗಲಾತ್ಯ 6:16.

20. ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

20ಜ್ಞಾನೋಕ್ತಿ 11:2ರಲ್ಲಿ ತಿಳಿಸಲ್ಪಟ್ಟಿರುವಂತೆ, ಕೋರಹ, ಅಬ್ಷಾಲೋಮ, ಮತ್ತು ಸೌಲರ ಕುರಿತಾದ ಬೈಬಲ್‌ ವೃತ್ತಾಂತಗಳು, ದುರಭಿಮಾನವು ಅವಮಾನಕ್ಕೆ ನಡಿಸುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಆದರೂ, ಅದೇ ಬೈಬಲ್‌ ವಚನವು ‘ವಿನಯಶೀಲರಲ್ಲಿ ವಿವೇಕವಿದೆ’ ಎಂದು ಸಹ ಹೇಳುತ್ತದೆ. ಹಾಗಾದರೆ, ವಿನಯಶೀಲತೆ ಎಂದರೇನು? ಈ ಗುಣದ ಮೇಲೆ ಬೆಳಕು ಬೀರಲು ಬೈಬಲಿನ ಯಾವ ಉದಾಹರಣೆಗಳು ಸಹಾಯ ಮಾಡಬಲ್ಲವು ಮತ್ತು ಇಂದು ನಾವು ವಿನಯಶೀಲತೆಯನ್ನು ಹೇಗೆ ತೋರಿಸಸಾಧ್ಯವಿದೆ? ಈ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಪರಿಗಣಿಸಲಾಗುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 4 ರೂಬೇನನು ಯಾಕೋಬನ ಚೊಚ್ಚಲು ಮಗನಾಗಿದ್ದನು. ಆದುದರಿಂದ, ರೂಬೇನನ ಕುಲದವರು ಮೋಶೆ ಹಾಗೂ ಆರೋನರ ವಿರುದ್ಧ ದಂಗೆಯೇಳುವಂತೆ ಕೋರಹನು ಹುರಿದುಂಬಿಸಿದನು. ಲೇವಿ ಕುಲದವನಾಗಿರುವ ಮೋಶೆಗೆ ತಮ್ಮ ಮೇಲೆ ಆಡಳಿತವನ್ನು ನಡೆಸುವ ಅಧಿಕಾರವನ್ನು ಏಕೆ ಕೊಡಲಾಗಿದೆಯೆಂದು ಅವರು ಅಸಮಾಧಾನಪಟ್ಟಿದ್ದಿರಬಹುದು.

^ ಪ್ಯಾರ. 11 ದಾವೀದನ ಎರಡನೆಯ ಮಗನಾಗಿದ್ದ ಕಿಲಾಬನ ಜನನದ ಬಗ್ಗೆ ತಿಳಿಸಲಾಗಿದೆಯಾದರೂ ಅವನ ಕುರಿತು ಬೇರೆ ಯಾವ ವಿವರವೂ ಕೊಡಲ್ಪಟ್ಟಿಲ್ಲ. ಬಹುಶಃ ಅಬ್ಷಾಲೋಮನು ದಂಗೆಯೇಳುವುದಕ್ಕೆ ಮೊದಲೇ ಅವನು ಮೃತಪಟ್ಟಿದ್ದಿರಬಹುದು.

^ ಪ್ಯಾರ. 12 ಬೈಬಲ್‌ ಸಮಯಗಳಲ್ಲಿ ಒಬ್ಬ ಮೃತ ವ್ಯಕ್ತಿಯ ದೇಹವನ್ನು ಹೂಳುವುದಕ್ಕೆ ಗಮನಾರ್ಹವಾದ ಮಹತ್ವವು ಕೊಡಲ್ಪಡುತ್ತಿತ್ತು. ಆದುದರಿಂದ, ಶವಸಂಸ್ಕಾರ ಮಾಡಲ್ಪಡದಿರುವುದು ವಿಪತ್ಕಾರಕವಾಗಿತ್ತು ಮತ್ತು ಅನೇಕವೇಳೆ ದೇವರ ಅಸಮ್ಮತಿಯ ಅಭಿವ್ಯಕ್ತಿಯಾಗಿತ್ತು—ಯೆರೆಮೀಯ 25:32, 33.

^ ಪ್ಯಾರ. 17 ಉದಾಹರಣೆಗೆ, ಸಾವಿರಾರು ಮಂದಿ ಇಸ್ರಾಯೇಲ್ಯರನ್ನು ಕೊಂದಂತಹ ವ್ಯಾಧಿಯನ್ನು ನಿಲ್ಲಿಸಲಿಕ್ಕಾಗಿ ಫೀನೆಹಾಸನು ಆ ಕೂಡಲೆ ಕ್ರಿಯೆಗೈದನು. ಮತ್ತು ‘ದೇವರ ಮಂದಿರದಲ್ಲಿದ್ದ’ ನೈವೇದ್ಯದ ರೊಟ್ಟಿಗಳನ್ನು ತಿನ್ನುವಂತೆ ದಾವೀದನು ತುಂಬ ಹಸಿದಿದ್ದ ತನ್ನ ಆಳುಗಳಿಗೆ ಉತ್ತೇಜಿಸಿದನು. ಇವೆರಡೂ ಸನ್ನಿವೇಶಗಳಲ್ಲಿ ಯಾವುದನ್ನೂ ದೇವರು ದುರಭಿಮಾನವೆಂದು ಖಂಡಿಸಲಿಲ್ಲ.—ಮತ್ತಾಯ 12:2-4; ಅರಣ್ಯಕಾಂಡ 25:7-9; 1 ಸಮುವೇಲ 21:1-6.

ನೀವು ಜ್ಞಾಪಿಸಿಕೊಳ್ಳುವಿರೋ?

• ದುರಭಿಮಾನ ಎಂದರೇನು?

• ಅಸೂಯೆಯು ಹೇಗೆ ಕೋರಹನನ್ನು ದುರಭಿಮಾನದಿಂದ ವರ್ತಿಸುವಂತೆ ಮಾಡಿತು?

• ಮಹತ್ವಾಕಾಂಕ್ಷೆಯಿದ್ದ ಅಬ್ಷಾಲೋಮನ ವೃತ್ತಾಂತದಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳುತ್ತೇವೆ?

• ಸೌಲನು ತೋರಿಸಿದಂತಹ ಅಸಹನೆಯ ಮನೋಭಾವವನ್ನು ನಾವು ಹೇಗೆ ದೂರಮಾಡಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ಸೌಲನು ಅಸಹನೆಗೊಂಡನು ಮತ್ತು ದುರಭಿಮಾನದಿಂದ ವರ್ತಿಸಿದನು