ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ನಿರೀಕ್ಷೆಗಳು ಏಕೆ ಅತಿಯಾಗಿರಬಾರದು?

ನಮ್ಮ ನಿರೀಕ್ಷೆಗಳು ಏಕೆ ಅತಿಯಾಗಿರಬಾರದು?

ನಮ್ಮ ನಿರೀಕ್ಷೆಗಳು ಏಕೆ ಅತಿಯಾಗಿರಬಾರದು?

ನ ಮ್ಮ ನಿರೀಕ್ಷೆಗಳು ಕೈಗೂಡುವಾಗ ಮತ್ತು ಹೆಬ್ಬಯಕೆಗಳು ಈಡೇರುವಾಗ, ನಮಗೆ ಒಂದು ರೀತಿಯ ತೃಪ್ತಿ ಸಿಗುತ್ತದೆ. ಆದರೆ ನಮ್ಮ ಕನಸುಗಳು ಮತ್ತು ನಿರೀಕ್ಷೆಗಳಲ್ಲಿ ಹೆಚ್ಚಿನವು ನಾವು ಬಯಸುವಂತಹ ರೀತಿಯಲ್ಲಿ ನೆರವೇರುವುದಿಲ್ಲ ಎಂಬ ಮಾತಂತೂ ಸತ್ಯ. ನಮ್ಮ ಜೀವಿತದಲ್ಲಿ ನಮಗೆ ಪದೇ ಪದೇ ಆಶಾಭಂಗವಾಗುವಾಗ, ನಮಗೆ ನಮ್ಮ ಮೇಲೆ ಮಾತ್ರವಲ್ಲ ಇತರರ ಮೇಲೂ ಸಿಟ್ಟುಬರಬಹುದು. ಹೀಗಿರುವುದರಿಂದ, “ನಿರೀಕ್ಷೆಯು ನೆರವೇರದಿದ್ದರೆ ಹೃದಯವು ವ್ಯಸನವಾಗಿರುವುದು” ಎಂದು ಒಬ್ಬ ಜ್ಞಾನಿಯು ಬರೆದದ್ದು ಸರಿಯಾಗಿದೆ.—ಜ್ಞಾನೋಕ್ತಿ 13:12, ಪರಿಶುದ್ಧ ಬೈಬಲ್‌. *

ನಿರಾಶೆಯ ಭಾವನೆಗಳಿಗೆ ಕಾರಣವಾಗಿರುವ ಕೆಲವೊಂದು ಅಂಶಗಳು ಯಾವುವು? ನಮ್ಮ ನಿರೀಕ್ಷೆಗಳು ಅತಿಯಾಗಿರದಂತೆ ನಾವೇನು ಮಾಡಸಾಧ್ಯವಿದೆ? ಅಲ್ಲದೆ, ಹಾಗೆ ಮಾಡುವುದರಿಂದ ನಮಗೆ ಹೇಗೆ ಪ್ರಯೋಜನವಾಗುತ್ತದೆ?

ನಿರೀಕ್ಷೆಗಳು ಮತ್ತು ಆಶಾಭಂಗಗಳು

ಇಂದಿನ ಜೀವನ ಗತಿಯು ಎಷ್ಟು ವೇಗವಾಗಿದೆಯೆಂದರೆ, ಅದರೊಂದಿಗೆ ನಾವು ಎಷ್ಟೇ ವೇಗವಾಗಿ ಓಡಲು ಪ್ರಯತ್ನಿಸಿದರೂ, ನಾವು ಯಾವಾಗಲೂ ಹಿಂದೆ ಉಳಿದಿರುವಂತೆ ತೋರುತ್ತದೆ. ಬಹಳಷ್ಟು ಕೆಲಸಗಳನ್ನು ಮಾಡಲಿಕ್ಕಿರುವುದರಿಂದ, ನಮಗೆ ಸಮಯ ಮತ್ತು ಶಕ್ತಿಯೇ ಸಾಲದಿರುವಂತೆ ಅನಿಸಬಹುದು. ಮತ್ತು ನಾವು ಮಾಡಲು ಹೊರಟಿದ್ದ ಕೆಲಸವನ್ನು ಮಾಡಿಮುಗಿಸಲು ಅಶಕ್ತರಾದಾಗ ನಮ್ಮನ್ನೇ ನಾವು ಹಳಿದುಕೊಳ್ಳುತ್ತೇವೆ. ಅಷ್ಟುಮಾತ್ರವಲ್ಲದೆ, ನಾವು ಇತರರಿಗೂ ಆಶಾಭಂಗವನ್ನು ಉಂಟುಮಾಡುತ್ತಿದ್ದೇವೆಂದು ಸಹ ನೆನಸಲಾರಂಭಿಸಬಹುದು. ಮಕ್ಕಳನ್ನು ಬೆಳೆಸುವುದರಿಂದ ಉಂಟಾಗುವ ಒತ್ತಡಗಳನ್ನು ಅರಿತಿರುವ ಮತ್ತು ಒಬ್ಬ ತಾಯಿಯೂ ಪತ್ನಿಯೂ ಆಗಿರುವ ಸಿಂಥ್ಯಾ ಎಂಬ ಸ್ತ್ರೀಯು ಹೇಳುವುದು: “ನನ್ನ ಮಕ್ಕಳಿಗೆ ಯೋಗ್ಯವಾದ ತಿದ್ದುಪಾಟನ್ನು ನೀಡುತ್ತಿಲ್ಲ ಮತ್ತು ಸರಿಯಾದ ರೀತಿಯಲ್ಲಿ ತರಬೇತಿಗೊಳಿಸುತ್ತಿಲ್ಲ ಎಂಬ ಅನಿಸಿಕೆಯಿಂದಾಗಿ ನನಗೆ ಕಿರಿಕಿರಿಯಾಗುತ್ತದೆ.” ಒಬ್ಬ ಹದಿವಯಸ್ಕಳಾಗಿರುವ ಸ್ಟೆಫನಿಯು ತನ್ನ ಶಿಕ್ಷಣದ ಬಗ್ಗೆ ಹೇಳುವುದು: “ನಾನು ಬಯಸಿದ್ದೆಲ್ಲವನ್ನೂ ಮಾಡಲು ನನಗೆ ಸಾಕಷ್ಟು ಸಮಯ ಸಿಗುವುದಿಲ್ಲ, ಇದರಿಂದ ನಾನು ತಾಳ್ಮೆಗೆಡುತ್ತೇನೆ.”

ಅತಿಯಾಗಿರುವ ಉಚ್ಚ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ವ್ಯಕ್ತಿಯು, ಕ್ರಮೇಣವಾಗಿ ಪರಿಪೂರ್ಣತಾವಾದಿಯಾಗಿ ಬದಲಾಗಬಹುದು. ಇದು ತುಂಬ ಆಶಾಭಂಗವನ್ನು ಉಂಟುಮಾಡುತ್ತದೆ. ಒಬ್ಬ ಯುವ ವಿವಾಹಿತನಾಗಿರುವ ಬೆನ್‌ ಒಪ್ಪಿಕೊಳ್ಳುವುದು: “ನಾನು ಹಿಂದೆ ಮಾಡಿದ ಕ್ರಿಯೆಗಳು, ಯೋಚಿಸಿದ ವಿಚಾರಗಳು ಅಥವಾ ನನ್ನಲ್ಲಿದ್ದ ಭಾವನೆಗಳ ಕುರಿತು ನಾನು ಯೋಚಿಸುವಾಗ, ಅವು ಹೆಚ್ಚು ಉತ್ತಮವಾಗಿರಬಹುದಿತ್ತೇನೊ ಎಂದು ಯಾವಾಗಲೂ ನೆನಸುತ್ತಿರುತ್ತೇನೆ. ನಾನು ಯಾವಾಗಲೂ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತೇನೆ, ಮತ್ತು ಇದು ಅಸಹನೆ, ಆಶಾಭಂಗ, ಮತ್ತು ನಿರಾಶೆಗೆ ನಡೆಸುತ್ತದೆ.” ಒಬ್ಬ ಕ್ರೈಸ್ತ ಪತ್ನಿಯಾಗಿರುವ ಗೇಲ್‌ ಹೇಳುವುದು: “ಪರಿಪೂರ್ಣತಾವಾದಿಗಳು ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಪರಿಪೂರ್ಣತಾವಾದಿಗಳಾಗಿರುವಾಗ, ನಾವು ಸೂಪರ್‌ ಅಮ್ಮಂದಿರು ಮತ್ತು ಸೂಪರ್‌ ಪತ್ನಿಯರಾಗಿರಲು ಬಯಸುತ್ತೇವೆ. ಸಂತೋಷದಿಂದಿರಬೇಕಾದರೆ ನಾವು ಮಾಡಿದ್ದೆಲ್ಲವೂ ಲಾಭಕರವಾಗಿರಬೇಕೆಂದು ಎಣಿಸುತ್ತೇವೆ ಮತ್ತು ಯಾವುದೇ ರೀತಿಯಲ್ಲಿ ಸಮಯ ಅಥವಾ ಪ್ರಯತ್ನವು ವ್ಯರ್ಥವಾಗಿ ಹೋದರೆ ನಮಗೆ ಕಿರಿಕಿರಿಯಾಗುತ್ತದೆ.”

ವೈಯಕ್ತಿಕ ನಿರಾಶೆಗೆ ನಡೆಸುವ ಇನ್ನೊಂದು ಅಂಶವು, ಹದಗೆಡುತ್ತಿರುವ ಆರೋಗ್ಯ ಹಾಗೂ ವೃದ್ಧಾಪ್ಯವಾಗಿದೆ. ಇವುಗಳಿಂದಾಗಿ ನಮ್ಮ ಓಡಾಟವು ಕಡಮೆಯಾಗುವುದರಿಂದ ಮತ್ತು ಶಕ್ತಿಯು ಕುಂದಿಹೋಗುವುದರಿಂದ ನಮಗಿರುವ ಇತಿಮಿತಿಗಳು ಎದ್ದುಕಾಣುತ್ತವೆ ಮತ್ತು ಆಶಾಭಂಗದ ಭಾವನೆಗಳು ಹೆಚ್ಚಾಗುತ್ತವೆ. ಎಲಿಸಬೇತ್‌ ಎಂಬ ಸ್ತ್ರೀಯು ಒಪ್ಪಿಕೊಳ್ಳುವುದು: “ಅಸ್ವಸ್ಥಳಾಗುವ ಮುಂಚೆ ನಾನು ಸುಲಭವಾಗಿ ಮತ್ತು ಸರಾಗವಾಗಿ ಮಾಡುತ್ತಿದ್ದ ಕೆಲಸಗಳನ್ನು ಈಗ ಮಾಡಲು ಆಗದಿರುವುದರಿಂದ ನಾನು ತಾಳ್ಮೆಗೆಡುತ್ತಿದ್ದೆ.”

ಇವೆಲ್ಲವೂ, ನಿರಾಶೆಯ ಭಾವನೆಗಳನ್ನು ಕೆರಳಿಸುವಂತಹ ಕೆಲವೊಂದು ಕಾರಣಗಳಾಗಿವೆಯಷ್ಟೇ. ಇಂತಹ ಭಾವನೆಗಳನ್ನು ನಿಯಂತ್ರಿಸದಿದ್ದರೆ, ನಮ್ಮನ್ನು ಯಾರೂ ಗಣ್ಯಮಾಡುವುದಿಲ್ಲವೆಂಬ ಅಭಿಪ್ರಾಯವು ನಮ್ಮಲ್ಲಿ ಹುಟ್ಟಬಲ್ಲದು. ಆದುದರಿಂದ, ಅತಿಯಾಗಿರದ ನಿರೀಕ್ಷೆಗಳನ್ನಿಡಲು ಮತ್ತು ನಿರಾಶೆಗಳನ್ನು ನಿಭಾಯಿಸಲಿಕ್ಕಾಗಿ ನಾವು ಯಾವ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದು?

ನ್ಯಾಯಸಮ್ಮತವಾದ ನಿರೀಕ್ಷೆಗಳನ್ನಿಡುವ ವಿಧಗಳು

ಪ್ರಥಮವಾಗಿ, ಯೆಹೋವನು ನ್ಯಾಯಸಮ್ಮತನೂ ಅರ್ಥಮಾಡಿಕೊಳ್ಳುವವನೂ ಆಗಿದ್ದಾನೆಂಬುದನ್ನು ನೆನಪಿನಲ್ಲಿಡಿರಿ. ಕೀರ್ತನೆ 103:14 ನಮಗೆ ಹೀಗೆ ಜ್ಞಾಪಕಹುಟ್ಟಿಸುತ್ತದೆ: “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” ನಮ್ಮ ಸಾಮರ್ಥ್ಯಗಳು ಹಾಗೂ ನಮ್ಮ ಇತಿಮಿತಿಗಳು ಯೆಹೋವನಿಗೆ ಗೊತ್ತಿರುವುದರಿಂದ, ನಾವೇನನ್ನು ಮಾಡಲು ಶಕ್ತರಾಗಿದ್ದೇವೊ ಅದನ್ನು ಮಾತ್ರ ಆತನು ನಮ್ಮಿಂದ ಅಪೇಕ್ಷಿಸುತ್ತಾನೆ. ಆತನು ನಮ್ಮಿಂದ ಕೇಳಿಕೊಳ್ಳುವ ವಿಷಯಗಳಲ್ಲಿ ಒಂದು, “[ನಮ್ಮ] ದೇವರಿಗೆ ನಮ್ರವಾಗಿ [“ವಿನಯಶೀಲರಾಗಿ,” NW] ನಡೆದು”ಕೊಳ್ಳುವುದೇ ಆಗಿದೆ.—ಮೀಕ 6:8.

ನಾವು ಪ್ರಾರ್ಥನೆಯ ಮೂಲಕ ತನ್ನ ಬಳಿ ಬರುವಂತೆಯೂ ಯೆಹೋವನು ಉತ್ತೇಜಿಸುತ್ತಾನೆ. (ರೋಮಾಪುರ 12:12; 1 ಥೆಸಲೊನೀಕ 5:17) ಆದರೆ ಪ್ರಾರ್ಥನೆಯಿಂದ ನಮಗೆ ಯಾವ ಸಹಾಯವು ಸಿಗುತ್ತದೆ? ಪ್ರಾರ್ಥನೆಯು ನಮ್ಮ ಯೋಚನಾ ವಿಧಾನವನ್ನು ಯಥಾಸ್ಥಿತಿಗೆ ತಂದು, ಸಮತೂಕಗೊಳಿಸುತ್ತದೆ. ಕಟ್ಟಾಸಕ್ತಿಯಿಂದ ಮಾಡುವ ಪ್ರಾರ್ಥನೆಯು, ನಮಗೆ ಸಹಾಯದ ಅಗತ್ಯವಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆಂಬುದನ್ನು ತೋರಿಸುತ್ತದೆ. ಅದು ವಿನಯಶೀಲತೆ ಮತ್ತು ನಮ್ರತೆಯ ಒಂದು ಗುರುತಾಗಿದೆ. ನಾವು ಹೀಗೆ ಪ್ರಾರ್ಥನೆಮಾಡುವಾಗ, ಯೆಹೋವನು ತನ್ನ ಪವಿತ್ರಾತ್ಮವನ್ನು ಕೊಡುವ ಮೂಲಕ ನಮ್ಮ ಪ್ರಾರ್ಥನೆಗಳನ್ನು ಉತ್ತರಿಸಲು ಸದಾ ಸಿದ್ಧನಾಗಿರುತ್ತಾನೆ. ಆ ಪವಿತ್ರಾತ್ಮದ ಫಲಗಳಲ್ಲಿ, ಪ್ರೀತಿ, ದಯೆ, ಉಪಕಾರ ಮತ್ತು ಶಮೆದಮೆಗಳು ಸೇರಿವೆ. (ಲೂಕ 11:13; ಗಲಾತ್ಯ 5:22, 23) ಪ್ರಾರ್ಥನೆಯು ನಮ್ಮ ಚಿಂತೆ ಮತ್ತು ಆಶಾಭಂಗವನ್ನು ಸಹ ಕಡಿಮೆಗೊಳಿಸುತ್ತದೆ. ಅಷ್ಟುಮಾತ್ರವಲ್ಲ, ಪ್ರಾರ್ಥನೆಯ ಮೂಲಕ “ನಾವು ಬೇರಾವುದೇ ಮೂಲದಿಂದ ಪಡೆಯಲಾರದಂತಹ ಸಾಂತ್ವನವನ್ನು ಪಡೆದುಕೊಳ್ಳುತ್ತೇವೆ” ಎಂದು ಎಲಿಸಬೇತ್‌ ಹೇಳುತ್ತಾರೆ. ಕೆವಿನ್‌ ಒಪ್ಪಿಕೊಳ್ಳುವುದು: “ಒಂದು ಸಮಸ್ಯೆಯನ್ನು ನಿಭಾಯಿಸಲು ಬೇಕಾಗಿರುವ ಶಾಂತ ಹೃದಯ ಮತ್ತು ಶುದ್ಧ ಮನಸ್ಸನ್ನು ದಯಪಾಲಿಸುವಂತೆ ನಾನು ಪ್ರಾರ್ಥಿಸುತ್ತೇನೆ. ಮತ್ತು ಈ ವಿಷಯದಲ್ಲಿ ಯೆಹೋವನು ಎಂದೂ ನನ್ನನ್ನು ನಿರಾಶೆಗೊಳಿಸಿಲ್ಲ.” ಪ್ರಾರ್ಥನೆಯು ಎಷ್ಟು ಅಮೂಲ್ಯವೆಂಬುದು ಅಪೊಸ್ತಲ ಪೌಲನಿಗೆ ತಿಳಿದಿತ್ತು. ಆದುದರಿಂದಲೇ ಅವನು ಹೀಗೆ ಶಿಫಾರಸ್ಸು ಮಾಡಿದನು: “ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಹೌದು, ಯೆಹೋವನೊಂದಿಗೆ ಮಾತಾಡುವ ಮೂಲಕ, ನಾವು ನಮ್ಮ ಕುರಿತು ಹಾಗೂ ಇತರರ ಕುರಿತು ಇಟ್ಟುಕೊಳ್ಳುವಂತಹ ನಿರೀಕ್ಷೆಗಳು ಅತಿಯಾಗಿರದಂತೆ ಖಂಡಿತವಾಗಿಯೂ ಸಹಾಯಸಿಗುವುದು.

ಆದರೆ ಕೆಲವೊಮ್ಮೆ ನಮಗೆ ಆ ಕ್ಷಣವೇ ಸಾಂತ್ವನದ ಅಗತ್ಯವಿರುತ್ತದೆ. ಸಮಯೋಚಿತವಾದ ಮಾತುಗಳು ಪ್ರಯೋಜನದಾಯಕವಾಗಿರುತ್ತವೆ. ಭರವಸಾರ್ಹರೂ ಪ್ರೌಢರೂ ಆಗಿರುವ ಒಬ್ಬ ಸ್ನೇಹಿತ ಅಥವಾ ಸ್ನೇಹಿತೆಯೊಂದಿಗೆ ಮನಬಿಚ್ಚಿ ಮಾತಾಡುವುದರಿಂದ, ನಿಮಗೆ ನಿರಾಶೆ ಅಥವಾ ಚಿಂತೆಯನ್ನುಂಟುಮಾಡುವ ವಿಷಯವನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಲು ಸಹಾಯವು ಸಿಗುವುದು. (ಜ್ಞಾನೋಕ್ತಿ 15:23; 17:17; 27:9) ಆಶಾಭಂಗಗಳೊಂದಿಗೆ ಹೋರಾಡುತ್ತಿರುವ ಯುವ ಜನರು, ತಮ್ಮ ಹೆತ್ತವರಿಂದ ಸಲಹೆಸೂಚನೆಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ಸಮಚಿತ್ತವನ್ನು ಪುನಃ ಪಡೆದುಕೊಳ್ಳಬಹುದು. ಕ್ಯಾಂಡಿ ಎಂಬ ಹದಿವಯಸ್ಕಳು ಗಣ್ಯತಾಭಾವದಿಂದ ಒಪ್ಪಿಕೊಳ್ಳುವುದು: “ನನ್ನ ಹೆತ್ತವರು ಕೊಟ್ಟಿರುವ ಪ್ರೀತಿಪೂರ್ವಕ ಮಾರ್ಗದರ್ಶನವು, ನನ್ನನ್ನು ಹೆಚ್ಚು ನ್ಯಾಯಸಮ್ಮತಳನ್ನಾಗಿಯೂ ಸಮಚಿತ್ತಳನ್ನಾಗಿಯೂ ಮಾಡಿದೆ, ಮತ್ತು ಬೇರೆಯವರು ನನ್ನೊಂದಿಗಿರಲು ಇಷ್ಟಪಡುವಂತಹ ರೀತಿಯ ವ್ಯಕ್ತಿಯನ್ನಾಗಿಯೂ ಮಾಡಿದೆ.” ಈ ವಿಷಯದಲ್ಲಿ ಜ್ಞಾನೋಕ್ತಿ 1:8, 9ರಲ್ಲಿರುವ ಮರುಜ್ಞಾಪನವು ಸಮಯೋಚಿತವಾದದ್ದಾಗಿದೆ: “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ. ಅವು ನಿನ್ನ ತಲೆಗೆ ಅಂದದ ಪುಷ್ಪಕಿರೀಟ; ಕೊರಳಿಗೆ ಹಾರ.”

ಪರಿಪೂರ್ಣತಾವಾದವನ್ನು ಅಪೇಕ್ಷಿಸುವುದರ ಫಲಿತಾಂಶಗಳನ್ನು ಈ ನಾಣ್ನುಡಿಯಲ್ಲಿ ಚೆನ್ನಾಗಿ ಸಾರಾಂಶಿಸಲಾಗಿದೆ: “ನಮ್ಮ ಷರತ್ತುಗಳಿಗನುಸಾರ ಜೀವಿತವು ನಡೆಯಬೇಕೆಂದರೆ, ಅದು ಆಶಾಭಂಗವನ್ನು ಆಮಂತ್ರಿಸುವಂತಿರುತ್ತದೆ.” ಇದನ್ನು ತಪ್ಪಿಸಲಿಕ್ಕಾಗಿ, ನಮ್ಮ ಯೋಚನಾ ರೀತಿಯಲ್ಲಿ ನಾವು ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಿರುವುದು. ನಮ್ರರು ಹಾಗೂ ವಿನಯಶೀಲರು ಆಗಿರುವುದರಿಂದ, ಅಂದರೆ ನಮ್ಮ ಇತಿಮಿತಿಗಳ ಕುರಿತಾದ ವಾಸ್ತವಿಕ ದೃಷ್ಟಿಕೋನವನ್ನು ಹೊಂದಿರುವುದರಿಂದ, ನಾವು ಖಂಡಿತವಾಗಿಯೂ ಸಮಚಿತ್ತವಾದ ಮತ್ತು ನ್ಯಾಯಸಮ್ಮತವಾದ ನಿರೀಕ್ಷೆಗಳನ್ನಿಡುವೆವು. ಸೂಕ್ತವಾಗಿಯೇ ರೋಮಾಪುರ 12:3 ನಮಗೆ ಈ ಎಚ್ಚರಿಕೆಯನ್ನು ಕೊಡುತ್ತದೆ: “ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳ”ಬಾರದು. ಇದಕ್ಕೆ ಕೂಡಿಸಿ, ಫಿಲಿಪ್ಪಿ 2:3 ನಾವು ದೀನಭಾವದವರಾಗಿದ್ದು, ಮತ್ತೊಬ್ಬರನ್ನು ನಮಗಿಂತಲೂ ಶ್ರೇಷ್ಠರೆಂದು ಎಣಿಸುವಂತೆ ಉತ್ತೇಜಿಸುತ್ತದೆ.

ಈ ಮುಂಚೆ ತಿಳಿಸಲಾಗಿದ್ದ ಎಲಿಸಬೇತಳು, ತನ್ನ ಅಸ್ವಸ್ಥತೆಯಿಂದಾಗಿ ತನ್ನ ಮೇಲೆಯೇ ತಾಳ್ಮೆಗೆಡುತ್ತಿದ್ದಳು. ತನ್ನ ಪರಿಸ್ಥಿತಿಯ ವಿಷಯದಲ್ಲಿ ಯೆಹೋವನ ದೃಷ್ಟಿಕೋನವೇನು ಎಂಬುದನ್ನು ತಿಳಿದುಕೊಳ್ಳಲು ಮತ್ತು ಆತನು ನಮ್ಮ ಸೇವೆಯನ್ನು ಎಂದೂ ಮರೆಯುವುದಿಲ್ಲ ಎಂಬ ಅರಿವಿನಿಂದ ಸಾಂತ್ವನವನ್ನು ಪಡೆದುಕೊಳ್ಳಲು ಅವಳಿಗೆ ಸಮಯ ಹಿಡಿಯಿತು. ಕಾಲಿನ್‌ ಎಂಬುವವರು, ಶಕ್ತಿಗುಂದಿಸುವಂತಹ ಒಂದು ಕಾಯಿಲೆಯಿಂದಾಗಿ ಆಚೀಚೆ ಓಡಾಡಲು ಅಸಮರ್ಥರಾಗಿದ್ದರು. ಈಗ ತಾನು ಮಾಡುತ್ತಿರುವ ಸೇವೆಯನ್ನು, ಒಳ್ಳೆಯ ಆರೋಗ್ಯವಿದ್ದಾಗ ತಾನು ಮಾಡುತ್ತಿದ್ದ ಸೇವೆಯೊಂದಿಗೆ ಹೋಲಿಸುವಾಗ ಅದು ಏನೂ ಪ್ರಯೋಜನವಿಲ್ಲದ್ದೆಂದು ಅವರಿಗೆ ಆರಂಭದಲ್ಲಿ ಅನಿಸುತ್ತಿತ್ತು. ಆದರೆ, 2 ಕೊರಿಂಥ 8:12 ಹೇಳುವುದು: “ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ.” ಇಂತಹ ವಚನಗಳ ಕುರಿತು ಮನನ ಮಾಡುವ ಮೂಲಕ, ಕಾಲಿನ್‌ ಆ ಭಾವನೆಗಳನ್ನು ಹೊಡೆದೋಡಿಸಲು ಶಕ್ತರಾದರು. “ನಾನು ಹೆಚ್ಚನ್ನು ಕೊಡಲು ಅಶಕ್ತನಾಗಿದ್ದರೂ, ಈಗಲೂ ಕಡಿಮೆಪಕ್ಷ ಏನಾದರೂ ಕೊಡಲು ಶಕ್ತನಾಗಿದ್ದೇನೆ ಮತ್ತು ಇದನ್ನೇ ಯೆಹೋವನು ಮೆಚ್ಚುತ್ತಾನೆ” ಎಂದು ಅವರು ಹೇಳುತ್ತಾರೆ. ಇಬ್ರಿಯ 6:10ರಲ್ಲಿ ನಮಗೆ ಈ ಸಂಗತಿಯನ್ನು ನೆನಪಿಗೆ ತರಲಾಗಿದೆ: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”

ಹಾಗಾದರೆ ನಮ್ಮ ನಿರೀಕ್ಷೆಗಳು ಅತಿಯಾಗಿವೆಯೊ ಇಲ್ಲವೊ ಎಂಬುದನ್ನು ನಾವು ಹೇಗೆ ನಿರ್ಧರಿಸಬಹುದು? ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನ್ನ ನಿರೀಕ್ಷೆಗಳು ಮತ್ತು ದೇವರ ನಿರೀಕ್ಷೆಗಳು ಪರಸ್ಪರ ಹೊಂದಿಕೆಯಲ್ಲಿವೆಯೊ?’ ಗಲಾತ್ಯ 6:4 ತಿಳಿಸುವುದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.” ಅಷ್ಟುಮಾತ್ರವಲ್ಲ, ಯೇಸುವಿನ ಮಾತುಗಳನ್ನು ನೆನಪಿನಲ್ಲಿಡಿರಿ: “ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” ಹೌದು, ಕ್ರೈಸ್ತರೋಪಾದಿ ನಾವು ಒಂದು ನೊಗವನ್ನು ಹೊರಬೇಕಾಗಿದೆ. ಆದರೆ ಅದು “ಮೃದುವಾದದ್ದು” ಮತ್ತು “ಹೌರವಾದದ್ದು” ಆಗಿದೆ. ಮತ್ತು ನಾವು ಅದನ್ನು ಸರಿಯಾಗಿ ಹೊತ್ತುಕೊಳ್ಳಲು ಕಲಿತುಕೊಳ್ಳುವಲ್ಲಿ, ಅದು ಚೈತನ್ಯದಾಯಕವಾಗಿರುವುದೆಂದು ಯೇಸು ಮಾತುಕೊಟ್ಟನು.—ಮತ್ತಾಯ 11:28-30.

ನ್ಯಾಯಸಮ್ಮತವಾದ ನಿರೀಕ್ಷೆಗಳು ಪ್ರತಿಫಲದಾಯಕವಾಗಿವೆ

ನ್ಯಾಯಸಮ್ಮತವಾದ ನಿರೀಕ್ಷೆಗಳನ್ನಿಡಲಿಕ್ಕಾಗಿ ನಾವು ದೇವರ ವಾಕ್ಯದ ಸಲಹೆಗೆ ಕಿವಿಗೊಟ್ಟು, ಅದನ್ನು ಅನ್ವಯಿಸಿಕೊಳ್ಳುವಾಗ ಆ ಕೂಡಲೆ ಪ್ರತಿಫಲಗಳು ಸಿಗುತ್ತವೆ. ಮತ್ತು ಈ ಪ್ರತಿಫಲಗಳು ಶಾಶ್ವತವಾದವುಗಳೂ ಆಗಿರುತ್ತವೆ. ಒಂದು ಪ್ರತಿಫಲವೇನೆಂದರೆ, ಅದು ನಮ್ಮ ಮೇಲೆ ಶಾರೀರಿಕವಾಗಿ ಒಳ್ಳೆಯ ಪ್ರಭಾವವನ್ನು ಬೀರುತ್ತದೆ. ಯೆಹೋವನ ಮರುಜ್ಞಾಪನಗಳಿಂದ ಪ್ರಯೋಜನವನ್ನು ಪಡೆದಿರುವ ಜೆನಿಫರಳು ಒಪ್ಪಿಕೊಳ್ಳುವುದು: “ನನಗೆ ಹೆಚ್ಚು ಶಕ್ತಿ ಮತ್ತು ಜೀವನೋತ್ಸಾಹವಿದೆ.” ಯೆಹೋವನ ಮಾತುಗಳು ‘ಜೀವವೂ, ದೇಹಕ್ಕೆಲ್ಲಾ ಆರೋಗ್ಯವೂ’ ಆಗಿರುವುದರಿಂದ, ಅವುಗಳ ಮೇಲೆ ನಮ್ಮ ದೃಷ್ಟಿಯನ್ನಿಡುವಂತೆ ಮತ್ತು ಅವುಗಳನ್ನು ನಮ್ಮ ಹೃದಯದಲ್ಲಿಟ್ಟುಕೊಳ್ಳುವಂತೆ ಜ್ಞಾನೋಕ್ತಿ 4:21, 22 ನಮ್ಮನ್ನು ಉತ್ತೇಜಿಸುತ್ತದೆ.

ಇನ್ನೊಂದು ಪ್ರತಿಫಲವು, ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಹಿತಕ್ಷೇಮವಾಗಿದೆ. “ನಾನು ನನ್ನ ಹೃದಮನಗಳನ್ನು ದೇವರ ವಾಕ್ಯದ ಕಡೆಗೆ ತಿರುಗಿಸುವಾಗ, ನಾನು ಯಾವಾಗಲೂ ಹೆಚ್ಚು ಸಂತೋಷಿತಳಾಗಿರುತ್ತೇನೆ ಎಂಬುದು ನನಗೆ ಗೊತ್ತಾಗಿದೆ” ಅನ್ನುತ್ತಾಳೆ ತೆರೆಸಾ. ಏನೇ ಆದರೂ ನಮಗೆ ಜೀವಿತದಲ್ಲಿ ನಿರಾಶೆಗಳು ಇರುವವು ಎಂಬುದು ನಿಜ. ಹೀಗಿದ್ದರೂ, ನಾವು ಅವುಗಳನ್ನು ಹೆಚ್ಚು ಸುಲಭವಾಗಿ ತಾಳಿಕೊಳ್ಳಲು ಶಕ್ತರಾಗಿರುವೆವು. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಯಾಕೋಬ 4:8 ಉತ್ತೇಜಿಸುತ್ತದೆ. ಹೌದು, ಜೀವಿತದ ಪಂಥಾಹ್ವಾನಗಳನ್ನು ಎದುರಿಸುವಂತೆ ಯೆಹೋವನೇ ನಮ್ಮನ್ನು ಬಲಪಡಿಸುವನು ಮತ್ತು ಶಾಂತಿಯನ್ನು ನೀಡುವ ಮೂಲಕ ನಮ್ಮನ್ನು ಆಶೀರ್ವದಿಸುವನು.—ಕೀರ್ತನೆ 29:11.

ನ್ಯಾಯಸಮ್ಮತವಾದ ನಿರೀಕ್ಷೆಗಳನ್ನಿಡುವುದರಿಂದ ನಾವು ಆತ್ಮಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಶಕ್ತರಾಗುತ್ತೇವೆ. ಇದು ಸಹ ಒಂದು ಆಶೀರ್ವಾದವಾಗಿದೆ. ಜೀವಿತದಲ್ಲಿ ಹೆಚ್ಚು ಮಹತ್ವಪೂರ್ಣವಾದ ಸಂಗತಿಗಳ ಮೇಲೆ ನಾವು ಸರಿಯಾಗಿ ಗಮನವನ್ನು ಕೇಂದ್ರೀಕರಿಸಸಾಧ್ಯವಿದೆ. (ಫಿಲಿಪ್ಪಿ 1:10) ಆಗ ನಮ್ಮ ಗುರಿಗಳು ವಾಸ್ತವವಾದವುಗಳೂ, ಸಾಧಿಸಲು ಸಾಧ್ಯವಿರುವಂಥವುಗಳೂ ಆಗಿರುವವು. ಮತ್ತು ಇದು ನಮಗೆ ಹೆಚ್ಚಿನ ಆನಂದ ಮತ್ತು ಸಂತೃಪ್ತಿಯನ್ನು ತರುವುದು. ಯೆಹೋವನು ನಮ್ಮ ಹಿತಕ್ಕಾಗಿಯೇ ಎಲ್ಲವನ್ನೂ ನಡೆಸುವನೆಂದು ತಿಳಿದಿರಲಾಗಿ, ನಾವು ಯೆಹೋವನಿಗೆ ನಮ್ಮನ್ನೇ ಒಪ್ಪಿಸಿಬಿಡಲು ಹೆಚ್ಚು ಸಿದ್ಧರಾಗಿರುವೆವು. ಆದುದರಿಂದಲೇ ಪೇತ್ರನು ಹೇಳುವುದು: “ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು.” (1 ಪೇತ್ರ 5:6) ಮತ್ತು ಯೆಹೋವನು ಸಹ ನಮ್ಮನ್ನು ಸನ್ಮಾನಿಸುವನು. ನಮಗೆ ಇದಕ್ಕಿಂತಲೂ ಶ್ರೇಷ್ಠವಾದ ಇನ್ಯಾವ ಪ್ರತಿಫಲ ಬೇಕು?

[ಪಾದಟಿಪ್ಪಣಿ]

^ ಪ್ಯಾರ. 2 Taken from the HOLY BIBLE: Kannada EASY-TO-READ VERSION ©1997 by World Bible Translation Center, Inc. and used by permission.

[ಪುಟ 31ರಲ್ಲಿರುವ ಚಿತ್ರ]

ನ್ಯಾಯಸಮ್ಮತವಾದ ನಿರೀಕ್ಷೆಗಳನ್ನಿಡುವುದರಿಂದ, ನಮಗೆ ಆಶಾಭಂಗಗಳು ಮತ್ತು ನಿರಾಶೆಗಳನ್ನು ನಿಭಾಯಿಸಲು ಸಹಾಯವು ಸಿಗುವುದು