ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ಪ್ರೀತಿಸುವವರು ಆತನಿಗೆ ಅಮೂಲ್ಯರಾಗಿದ್ದಾರೆ

ಯೆಹೋವನನ್ನು ಪ್ರೀತಿಸುವವರು ಆತನಿಗೆ ಅಮೂಲ್ಯರಾಗಿದ್ದಾರೆ

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಯೆಹೋವನನ್ನು ಪ್ರೀತಿಸುವವರು ಆತನಿಗೆ ಅಮೂಲ್ಯರಾಗಿದ್ದಾ

ಬೈ ಬಲ್‌ ಸಮಯಗಳಿಂದಲೂ ಲೆಬನೋನ್‌ ದೇಶವು ಪ್ರಾಕೃತಿಕ ಸಂಪತ್ತುಗಳಿಗಾಗಿ ಪ್ರಸಿದ್ಧವಾಗಿತ್ತು. (ಕೀರ್ತನೆ 72:16; ಯೆಶಾಯ 60:13) ಅದರಲ್ಲೂ, ಹೆಚ್ಚು ಬೇಡಿಕೆಯಿರುವ ಭವ್ಯವಾದ ದೇವದಾರು ಮರಗಳಿಗೆ ಅದು ಹೆಸರುವಾಸಿಯಾಗಿತ್ತು. ಈ ಮರಗಳು ಸೌಂದರ್ಯ, ಸುವಾಸನೆ ಹಾಗೂ ಬಾಳಿಕೆಬರುವಂಥ ಗುಣಗಳನ್ನು ಹೊಂದಿರುವುದರಿಂದ, ಅವುಗಳನ್ನು ಕಟ್ಟಡಗಳ ನಿರ್ಮಾಣಕ್ಕಾಗಿ ಹಾಗೂ ಪೀಠೋಪಕರಣಗಳಿಗಾಗಿ ಉಪಯೋಗಿಸಲಾಗುತ್ತದೆ. ಆದರೆ, ಪ್ರಥಮ ಶತಮಾನದಲ್ಲಿ ಇವುಗಳಿಗಿಂತಲೂ ಹೆಚ್ಚು ಅಮೂಲ್ಯವಾದವುಗಳು ಲೆಬನೋನಿನಲ್ಲಿ ಕಂಡುಬಂದವು. ಅದರ ಕುರಿತಾಗಿ ಮಾರ್ಕನ ಸುವಾರ್ತೆಯು ವರದಿಸುತ್ತದೆ. ಲೆಬನೋನಿನ ಹಳೇ ನಗರಗಳಾದ ತೂರ್‌ ಮತ್ತು ಸೀದೋನ್‌ನಿಂದ, ಯೇಸು “ಇಂಥಿಂಥ ಕೆಲಸಗಳನ್ನು ಮಾಡುತ್ತಾನೆಂದು ಕೇಳಿ ಬಹುಜನರು . . . ಆತನ ಬಳಿಗೆ ಬಂದರು.”—ಮಾರ್ಕ 3:8.

ಅದೇ ರೀತಿಯಲ್ಲಿ ಇಂದು ಸಹ, ಲೆಬನೋನ್‌ ಯೆಹೋವನ ದೃಷ್ಟಿಯಲ್ಲಿ ಬಹುಮೂಲ್ಯವಾದ ಫಲಗಳನ್ನು ಉತ್ಪತ್ತಿಮಾಡುತ್ತಿದೆ. ಅವು ಯಾವುವು ಎಂಬುದನ್ನು ಈ ಮುಂದಿನ ಅನುಭವಗಳು ಎತ್ತಿತೋರಿಸುತ್ತವೆ.

• ವಿಸಾಮ್‌ ಎಂಬ ಹೆಸರಿನ ಒಬ್ಬ ಯುವ ವಿದ್ಯಾರ್ಥಿಗೆ, ತನ್ನ ತರಗತಿಯಲ್ಲಿರುವ ಸಹಪಾಠಿಗಳಿಗೆ 30 ನಿಮಿಷಗಳು ಭಾಷಣಕೊಡುವಂತೆ ಹೇಳಲಾಯಿತು. ಸಾಕ್ಷಿನೀಡುವುದಕ್ಕೆ ಇದೇ ಒಳ್ಳೇ ಸಂದರ್ಭವೆಂದು ವಿಸಾಮ್‌ ನೆನಸಿದನು. ಸೃಷ್ಟಿಯ ವಿಷಯದ ಮೇಲೆ ಭಾಷಣವನ್ನು ತಯಾರಿಸುವುದಕ್ಕಾಗಿ ಅವನು ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಅಥವಾ ಸೃಷ್ಟಿಯಿಂದಲೋ? (ಇಂಗ್ಲಿಷ್‌) ಎಂಬ ಪುಸ್ತಕವನ್ನು ಉಪಯೋಗಿಸಿದನು. ಅವನ ಉಪಾಧ್ಯಾಯರು ಭಾಷಣದ ವಿಷಯವನ್ನು ನೋಡಿದ ನಂತರ, ವಿಷಯದ ಪ್ರಾಮುಖ್ಯತೆಯನ್ನು ಗ್ರಹಿಸಿದರು. ಆದುದರಿಂದ, ವಿಸಾಮನು ತನ್ನ ಭಾಷಣವನ್ನು 45 ನಿಮಿಷಗಳವರೆಗೆ ಕೊಡಬಹುದೆಂದು ಅವನಿಗೆ ಹೇಳಿದರು.

ವಿಸಾಮನು ತನ್ನ ಭಾಷಣವನ್ನು ನೀಡಲು ಪ್ರಾರಂಭಿಸಿದಂತೆ, ಅವನ ಉಪಾಧ್ಯಾಯರು ಅವನನ್ನು ತಡೆದು, ಆ ಭಾಷಣವನ್ನು ಕೇಳಿಸಿಕೊಳ್ಳಲು ಪ್ರಾಂಶುಪಾಲರು ಕೂಡ ಬರುವಂತೆ ಕರೆ ಕಳುಹಿಸಿದರು. ಸ್ವಲ್ಪ ಸಮಯದರೊಳಗೆ ಅವರೂ ಬಂದುಬಿಟ್ಟರು. ವಿಸಾಮನು ತನ್ನ ಭಾಷಣವನ್ನು ಮತ್ತೆ ಪ್ರಾರಂಭಿಸಿದನು. ತನ್ನ ಭಾಷಣದ ಪೀಠಿಕೆಯಲ್ಲಿ ವಿಸಾಮನು ಎಬ್ಬಿಸಿದ ಪ್ರಶ್ನೆಗಳನ್ನು ಉಪಾಧ್ಯಾಯರು ಗಮನವಿಟ್ಟು ಆಲಿಸಿದರು. ಪ್ರಾಂಶುಪಾಲರು ಆ ಭಾಷಣವನ್ನು ಕೇಳಿ ಎಷ್ಟು ಉತ್ತೇಜಿತರಾದರೆಂದರೆ, ಆ ಭಾಷಣದ ನಕಲು ಪ್ರತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಕೊಡುವಂತೆ ಹೇಳಿದರು.

ಸ್ವಲ್ಪ ಸಮಯದ ನಂತರ, ಅಲ್ಲೇ ಪಕ್ಕದಲ್ಲೇ ಹಾದುಹೋಗುತ್ತಿದ್ದ ಇನ್ನೊಬ್ಬ ಉಪಾಧ್ಯಾಯರು ತರಗತಿಯಲ್ಲಿದ್ದವರೆಲ್ಲರ ಸಂಭ್ರಮವನ್ನು ನೋಡಿ ಏನು ನಡೆಯುತ್ತಿದೆಯೆಂದು ವಿಚಾರಿಸಿದರು. ಉತ್ತರ ಸಿಕ್ಕಿದ ನಂತರ ಆ ಉಪಾಧ್ಯಾಯರು, ವಿಕಾಸವಾದ ಇಲ್ಲವೇ ಸೃಷ್ಟಿ ಇವೆರಡರಲ್ಲಿ ವಿಸಾಮನು ಯಾವುದನ್ನು ರುಜುಪಡಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಕೇಳಿದರು. “ಸೃಷ್ಟಿ” ಎಂದು ಉತ್ತರ ಬಂತು. ವಿಸಾಮ್‌ ಒಬ್ಬ ಯೆಹೋವನ ಸಾಕ್ಷಿಯಾಗಿದ್ದಾನೆ ಎಂಬುದು ಅವರಿಗೆ ಗೊತ್ತಾದಾಗ, ಆ ಉಪಾಧ್ಯಾಯರು ತರಗತಿಯಲ್ಲಿದ್ದವರಿಗೆ, “ವಿಜ್ಞಾನವು ಸೃಷ್ಟಿಯನ್ನು ಬೆಂಬಲಿಸುತ್ತದೆ, ವಿಕಾಸವಾದವನ್ನಲ್ಲ ಎಂಬುದನ್ನು ಅವನ ಭಾಷಣದಲ್ಲಿ ಗಮನಿಸುವಿರಿ” ಎಂದು ಹೇಳಿದರು.

ಈ ಉಪಾಧ್ಯಾಯರ ಬಳಿ ಕೂಡ ಸೃಷ್ಟಿ ಪುಸ್ತಕವಿತ್ತು ಮತ್ತು ಅವರು ಅದನ್ನು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸವನ್ನು ಕೊಡುವುದಕ್ಕಾಗಿ ಉಪಯೋಗಿಸುತ್ತಿದ್ದರು ಎಂಬುದು ತದನಂತರ ಗೊತ್ತಾಯಿತು! ಅಲ್ಲಿಂದ ಹೋಗುವ ಮುಂಚೆ, ವಿಸಾಮನ ಭಾಷಣವನ್ನು ಕೇಳಿಸಿಕೊಳ್ಳಲು ಅವರು ಮರುದಿನ ತನ್ನ ವಿದ್ಯಾರ್ಥಿಗಳೊಂದಿಗೆ ಬರಬಹುದೋ ಎಂದು ಕೇಳಿದರು. ಅದು ಯೆಹೋವನಿಗೆ ಮತ್ತೊಂದು ಉತ್ತಮ ಸಾಕ್ಷಿಯಾಗಿ ಪರಿಣಮಿಸಿತು.

• ಇಪ್ಪತ್ತನಾಲ್ಕು ವರ್ಷದ ನೀನಾ ಸತ್ಯಕ್ಕಾಗಿ ಹಸಿದಿದ್ದಳು. ಒಂದು ದಿನ ಅವಳ ಸೋದರತ್ತೆಯ ಮಗನು ಅವಳಿಗೆ ಒಂದು ಬೈಬಲನ್ನು ಕೊಟ್ಟು, ಪೆಂಟಿಕಾಸ್ಟಲ್‌ ಚರ್ಚಿನೊಂದಿಗೆ ಪರಿಚಯಮಾಡಿಸಿಕೊಟ್ಟನು. ನೀನಾ ಬೈಬಲನ್ನು ಓದಲು ತುಂಬ ಸಂತೋಷಿಸಿದಳು. ಕ್ರೈಸ್ತರು ಸಾರುವ ಕೆಲಸವನ್ನು ಮಾಡಬೇಕು ಎಂಬುದನ್ನು ತಾನು ಓದಿದ ವಿಷಯಗಳಿಂದ ತಿಳಿದುಕೊಂಡಳು. ಇದರ ಪರಿಣಾಮವಾಗಿ, ತನ್ನ ಪರಿಚಯದವರೊಂದಿಗೆ ಬೈಬಲಿನ ಕುರಿತು ಮಾತಾಡಲು ಪ್ರಾರಂಭಿಸಿದಳು. ಆದರೆ, ಅವಳು ಯಾರೊಂದಿಗೆಲ್ಲಾ ಮಾತಾಡಿದಳೋ ಅವರೆಲ್ಲಾ, “ನೀನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳೋ?” ಎಂದು ಕೇಳಿದರು. ಅದು ಅವಳನ್ನು ಗೊಂದಲಕ್ಕೀಡುಮಾಡಿತು.

ಆರು ವರ್ಷಗಳ ನಂತರ, ಯೆಹೋವನ ಸಾಕ್ಷಿಗಳು ನೀನಾಳನ್ನು ಅವಳ ಮನೆಯಲ್ಲಿ ಭೇಟಿಯಾದರು ಮತ್ತು ಅವಳಿಗೆ ದೇವರ ರಾಜ್ಯದ ಕುರಿತಾಗಿ ಹೇಳಿದರು. ಆರಂಭದಲ್ಲಿ, ಅವಳು ಅವರ ಬೋಧನೆಗಳಲ್ಲಿ ತಪ್ಪನ್ನು ಕಂಡುಹಿಡಿಯಲು ಪ್ರಯತ್ನಿಸಿದಳು. ಆದರೆ, ಸಮಯ ಕಳೆದಂತೆ ಅವರ ಉತ್ತರಗಳೆಲ್ಲಾ ತರ್ಕಬದ್ಧವೂ ಬೈಬಲಾಧಾರಿತವೂ ಆಗಿರುವುದನ್ನು ಕಂಡುಕೊಂಡಳು.

ಕೊನೆಯಲ್ಲಿ ನೀನಾ, ದೇವರ ಹೆಸರು ಯೆಹೋವ ಎಂಬುದನ್ನು ಮತ್ತು ದೇವರ ರಾಜ್ಯದ ಮೂಲಕ ಸಿಗಲಿರುವ ಆಶೀರ್ವಾದಗಳು, ಮುಂತಾದ ವಿಷಯಗಳ ಕುರಿತು ಕಲಿತುಕೊಂಡಳು. ಅವು, ಸತ್ಯವು ತನಗೆ ಸಿಕ್ಕಿದೆ ಎಂಬ ಮನವರಿಕೆಯನ್ನು ಅವಳಲ್ಲಿ ಉಂಟುಮಾಡಿದವು. ನಂತರ ಅವಳು ದೇವರಿಗೆ ತನ್ನ ಜೀವನವನ್ನು ಸಮರ್ಪಿಸಿಕೊಂಡು, ದೀಕ್ಷಾಸ್ನಾನವನ್ನು ಪಡೆದುಕೊಂಡಳು. ಕಳೆದ ಏಳು ವರ್ಷಗಳಿಂದ, ನೀನಾ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆಸಲ್ಲಿಸುತ್ತಿದ್ದಾಳೆ. ನಿಜವಾಗಿಯೂ, ತನ್ನನ್ನು ಪ್ರೀತಿಸುವವರನ್ನು ಯೆಹೋವನು ಖಂಡಿತವಾಗಿಯೂ ಆಶೀರ್ವದಿಸುತ್ತಾನೆ.—1 ಕೊರಿಂಥ 2:9.