ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ವಿನಯಶೀಲರಲ್ಲಿ ವಿವೇಕವಿದೆ”

“ವಿನಯಶೀಲರಲ್ಲಿ ವಿವೇಕವಿದೆ”

“ವಿನಯಶೀಲರಲ್ಲಿ ವಿವೇಕವಿದೆ”

“ನಿನ್ನ ದೇವರಿಗೆ ನಮ್ರವಾಗಿ [“ವಿನಯಶೀಲನಾಗಿ,” NW] ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”—ಮೀಕ 6:8.

1, 2. ವಿನಯಶೀಲತೆ ಎಂದರೇನು, ಮತ್ತು ಇದು ದುರಭಿಮಾನಕ್ಕಿಂತ ಹೇಗೆ ಭಿನ್ನವಾಗಿದೆ?

ಒಬ್ಬ ಪ್ರಮುಖ ಅಪೊಸ್ತಲನು ತನ್ನ ಕಡೆಗೆ ಗಮನವನ್ನು ಸೆಳೆದುಕೊಳ್ಳಲು ನಿರಾಕರಿಸಿದನು. ತುಂಬ ಧೈರ್ಯಶಾಲಿಯಾಗಿದ್ದ ಒಬ್ಬ ಇಸ್ರಾಯೇಲ್ಯ ನ್ಯಾಯಸ್ಥಾಪಕನು, ತನ್ನ ತಂದೆಯ ಕುಲದಲ್ಲಿ ತಾನೇ ಅಲ್ಪನು ಎಂದು ಹೇಳಿಕೊಳ್ಳುತ್ತಾನೆ. ಜೀವಿಸಿರುವವರಲ್ಲೇ ಅತ್ಯಂತ ಮಹಾನ್‌ ಪುರುಷನು, ತನ್ನ ಬಳಿ ಸರ್ವೋಚ್ಚ ಅಧಿಕಾರವಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ಇವರಲ್ಲಿ ಪ್ರತಿಯೊಬ್ಬರೂ ವಿನಯಶೀಲತೆಯನ್ನು ತೋರಿಸುವವರಾಗಿದ್ದಾರೆ.

2 ವಿನಯಶೀಲತೆಯು ದುರಭಿಮಾನಕ್ಕೆ ತದ್ವಿರುದ್ಧವಾದ ಗುಣವಾಗಿದೆ. ವಿನಯಶೀಲನಾಗಿರುವ ಒಬ್ಬ ವ್ಯಕ್ತಿಗೆ ತನ್ನ ಸಾಮರ್ಥ್ಯಗಳು ಹಾಗೂ ಯೋಗ್ಯತೆಯ ಬಗ್ಗೆ ಸಮತೂಕ ನೋಟವಿರುತ್ತದೆ ಮತ್ತು ಅವನಲ್ಲಿ ಗರ್ವ ಅಥವಾ ಜಂಬವಿರುವುದಿಲ್ಲ. ಅಹಂಕಾರಪಡುವುದು, ಜಂಬಕೊಚ್ಚಿಕೊಳ್ಳುವುದು, ಅಥವಾ ಮಹತ್ವಾಕಾಂಕ್ಷೆಯುಳ್ಳವನಾಗಿರುವುದಕ್ಕೆ ಬದಲಾಗಿ, ವಿನಯಶೀಲನಾಗಿರುವ ಒಬ್ಬ ವ್ಯಕ್ತಿಯು ತನ್ನ ಇತಿಮಿತಿಗಳ ಕುರಿತು ಚೆನ್ನಾಗಿ ಅರಿವುಳ್ಳವನಾಗಿರುತ್ತಾನೆ. ಆದುದರಿಂದ, ಇತರರ ಭಾವನೆಗಳು ಮತ್ತು ದೃಷ್ಟಿಕೋನಗಳನ್ನು ಅವನು ಗೌರವಿಸುತ್ತಾನೆ ಮತ್ತು ಅವುಗಳಿಗೆ ಬೆಲೆ ಕೊಡುತ್ತಾನೆ.

3. ಯಾವ ಅರ್ಥದಲ್ಲಿ ವಿವೇಕವು “ವಿನಯಶೀಲರಲ್ಲಿದೆ?”

3 ಸಕಾರಣದಿಂದಲೇ ಬೈಬಲು ಹೇಳುವುದು: “ವಿನಯಶೀಲರಲ್ಲಿ ವಿವೇಕವಿದೆ.” (ಜ್ಞಾನೋಕ್ತಿ 11:2 NW) ವಿನಯಶೀಲನಾಗಿರುವ ಒಬ್ಬ ವ್ಯಕ್ತಿಯು ವಿವೇಕಿಯಾಗಿದ್ದಾನೆ. ಏಕೆಂದರೆ ದೇವರಿಗೆ ಸ್ವೀಕಾರಾರ್ಹವಾಗಿರುವಂತಹ ಒಂದು ಮಾರ್ಗವನ್ನು ಅವನು ಅನುಸರಿಸುತ್ತಾನೆ ಮತ್ತು ಅವಮಾನವನ್ನು ಉಂಟುಮಾಡುವಂತಹ ದುರಭಿಮಾನದ ಮನೋಭಾವದಿಂದ ದೂರವಿರುತ್ತಾನೆ. (ಜ್ಞಾನೋಕ್ತಿ 8:13; 1 ಪೇತ್ರ 5:5) ವಿನಯಶೀಲರಲ್ಲಿ ವಿವೇಕವಿದೆ ಎಂಬುದು, ಅನೇಕ ದೇವರ ಸೇವಕರ ಜೀವನಮಾರ್ಗದಿಂದ ಪುಷ್ಟೀಕರಿಸಲ್ಪಟ್ಟಿದೆ. ಆದುದರಿಂದ, ಈ ಲೇಖನದ ಮೊದಲ ಪ್ಯಾರಗ್ರಾಫ್‌ನಲ್ಲಿ ತಿಳಿಸಲ್ಪಟ್ಟಿರುವ ಮೂರು ಉದಾಹರಣೆಗಳನ್ನು ನಾವೀಗ ಪರಿಗಣಿಸೋಣ.

ಪೌಲ—‘ಕೈಕೆಳಗಿನವನು’ ಮತ್ತು ಒಬ್ಬ ‘ಮನೆವಾರ್ತೆಯವನು’

4. ಪೌಲನು ಯಾವ ಅಪೂರ್ವ ಸುಯೋಗಗಳಲ್ಲಿ ಆನಂದಿಸಿದನು?

4 ಆದಿಕ್ರೈಸ್ತರಲ್ಲಿ ಪೌಲನು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. ತನ್ನ ಶುಶ್ರೂಷೆಯ ಸಮಯಾವಧಿಯಲ್ಲಿ ಅವನು ಜಲಮಾರ್ಗವಾಗಿ ಮತ್ತು ಭೂಮಾರ್ಗವಾಗಿ ಸಾವಿರಾರು ಕಿಲೊಮೀಟರುಗಳಷ್ಟು ದೂರದ ವರೆಗೆ ಪ್ರಯಾಣಿಸಿದನು ಹಾಗೂ ಅನೇಕ ಸಭೆಗಳನ್ನು ಸ್ಥಾಪಿಸಿದನು. ಅಷ್ಟುಮಾತ್ರವಲ್ಲ, ಯೆಹೋವನು ದರ್ಶನಗಳನ್ನು ಹಾಗೂ ಬೇರೆ ಬೇರೆ ಭಾಷೆಗಳನ್ನು ಮಾತಾಡುವ ವರದಾನವನ್ನು ನೀಡುವ ಮೂಲಕ ಪೌಲನನ್ನು ಆಶೀರ್ವದಿಸಿದನು. (1 ಕೊರಿಂಥ 14:18; 2 ಕೊರಿಂಥ 12:1-5) ಇದಲ್ಲದೆ, ಈಗ ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳ ಭಾಗವಾಗಿರುವ 14 ಪತ್ರಗಳನ್ನು ಬರೆಯುವಂತೆ ಸಹ ಆತನು ಪೌಲನನ್ನು ಪ್ರೇರಿಸಿದನು. ಆದುದರಿಂದಲೇ, ಬೇರೆಲ್ಲ ಅಪೊಸ್ತಲರಿಗಿಂತಲೂ ಪೌಲನು ಶುಶ್ರೂಷೆಯಲ್ಲಿ ಹೆಚ್ಚು ಪ್ರಯಾಸಪಟ್ಟನೆಂದು ಹೇಳಸಾಧ್ಯವಿದೆ.—1 ಕೊರಿಂಥ 15:10.

5. ಪೌಲನಿಗೆ ತನ್ನ ಬಗ್ಗೆ ವಿನಯಶೀಲ ದೃಷ್ಟಿಕೋನವಿತ್ತು ಎಂಬುದನ್ನು ಅವನು ಹೇಗೆ ತೋರಿಸಿದನು?

5 ಕ್ರೈಸ್ತ ಚಟುವಟಿಕೆಯಲ್ಲಿ ಪೌಲನು ಜವಾಬ್ದಾರಿಯುತ ಸ್ಥಾನದಲ್ಲಿದ್ದುದರಿಂದ, ಅವನು ಎಲ್ಲರ ಮುಂದೆ ತನ್ನ ಅಧಿಕಾರವನ್ನು ಪ್ರದರ್ಶಿಸುತ್ತಿರುವವನಾಗಿರುವಂತೆ ಕಂಡುಕೊಳ್ಳಲು ಕೆಲವರು ನಿರೀಕ್ಷಿಸಿದ್ದಿರಬಹುದು. ಆದರೆ ಪೌಲನು ಹಾಗಿರಲಿಲ್ಲ, ಏಕೆಂದರೆ ಅವನು ತುಂಬ ವಿನಯಶೀಲನಾಗಿದ್ದನು. ಸ್ವತಃ ತನ್ನ ಬಗ್ಗೆ ಅವನು ಹೇಳಿಕೊಂಡದ್ದು: “ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ; ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ.” (1 ಕೊರಿಂಥ 15:9) ಈ ಮುಂಚೆ ಪೌಲನು ಕ್ರೈಸ್ತರನ್ನು ಹಿಂಸಿಸುತ್ತಿದ್ದನು. ಆದುದರಿಂದ, ವಿಶೇಷವಾದ ಸೇವಾ ಸುಯೋಗಗಳನ್ನು ಆನಂದಿಸುವುದಿರಲಿ, ದೇವರೊಂದಿಗೆ ಒಂದು ಸಂಬಂಧವನ್ನು ಪಡೆದುಕೊಳ್ಳುವ ಸುಯೋಗವು ಸಹ ಆತನ ಅಪಾತ್ರ ದಯೆಯ ಮೂಲಕ ಮಾತ್ರವೇ ತನಗೆ ಸಿಗಸಾಧ್ಯವಿತ್ತು ಎಂಬುದನ್ನು ಪೌಲನು ಎಂದಿಗೂ ಮರೆತಿರಲಿಲ್ಲ. (ಯೋಹಾನ 6:44; ಎಫೆಸ 2:8) ಹೀಗೆ, ಶುಶ್ರೂಷೆಯಲ್ಲಿ ತಾನು ಅಸಾಮಾನ್ಯ ಸಾಧನೆಗಳನ್ನು ಮಾಡಿರುವುದರಿಂದ ತಾನು ಇತರರಿಗಿಂತಲೂ ಶ್ರೇಷ್ಠನು ಎಂದು ಪೌಲನು ಖಂಡಿತವಾಗಿಯೂ ನೆನಸಿರಲಿಲ್ಲ.—1 ಕೊರಿಂಥ 9:16.

6. ಕೊರಿಂಥದವರೊಂದಿಗಿನ ತನ್ನ ವ್ಯವಹಾರಗಳಲ್ಲಿ ಪೌಲನು ಹೇಗೆ ವಿನಯಶೀಲತೆಯನ್ನು ತೋರಿಸಿದನು?

6 ಕೊರಿಂಥದವರೊಂದಿಗಿನ ತನ್ನ ವ್ಯವಹಾರಗಳಲ್ಲಿ ಪೌಲನು ತೋರಿಸಿದ ವಿನಯಶೀಲತೆಯು ವಿಶೇಷವಾಗಿ ಎದ್ದುಕಾಣುವಂತಿತ್ತು. ಹೇಗೆಂದರೆ, ಕೊರಿಂಥದವರಲ್ಲಿ ಕೆಲವರು, ತಾವು ಯಾರನ್ನು ಅಗ್ರಗಣ್ಯ ಮೇಲ್ವಿಚಾರಕರೆಂದು ಪರಿಗಣಿಸುತ್ತಿದ್ದರೋ ಅಂತಹ ಜನರ ಪ್ರಭಾವಕ್ಕೆ ಒಳಗಾಗಿದ್ದರು. ಅಗ್ರಗಣ್ಯರೆಂದು ಪರಿಗಣಿಸಲ್ಪಟ್ಟಿದ್ದ ಆ ಮೇಲ್ವಿಚಾರಕರಲ್ಲಿ, ಅಪೊಲ್ಲೋಸ, ಕೇಫ, ಹಾಗೂ ಪೌಲರು ಸಹ ಸೇರಿದ್ದರು. (1 ಕೊರಿಂಥ 1:11-15) ಆದರೆ ಪೌಲನು ಎಂದೂ ಕೊರಿಂಥದವರ ಹೊಗಳಿಕೆಗೆ ಹಾತೊರೆಯಲಿಲ್ಲ ಇಲ್ಲವೆ ಅವರ ಪ್ರಶಂಸೆಯನ್ನು ದುರಪಯೋಗಿಸಿಕೊಳ್ಳಲಿಲ್ಲ. ಅವರನ್ನು ಸಂದರ್ಶಿಸುತ್ತಿದ್ದಾಗ, ಪೌಲನು ಅವರ ಮುಂದೆ ‘ವಾಕ್ಚಾತುರ್ಯ ಹಾಗೂ ಜ್ಞಾನಾಡಂಬರ’ವಿದ್ದವನಾಗಿ ತನ್ನನ್ನು ತೋರಿಸಿಕೊಳ್ಳಲಿಲ್ಲ. ಅದಕ್ಕೆ ಬದಲಾಗಿ, ಸ್ವತಃ ತನ್ನ ಕುರಿತು ಮತ್ತು ತನ್ನ ಸಂಗಡಿಗರ ಕುರಿತು ಪೌಲನು ಹೇಳಿದ್ದು: “ಜನರು ನಮ್ಮನ್ನು ಕ್ರಿಸ್ತನ ಕೈಕೆಳಗಿನವರೆಂತಲೂ ದೇವರು ತಿಳಿಸಿರುವ ಸತ್ಯಾರ್ಥಗಳ ವಿಷಯದಲ್ಲಿ ಮನೆವಾರ್ತೆಯವರೆಂತಲೂ ಎಣಿಸಬೇಕು.” *1 ಕೊರಿಂಥ 2:1-5; 4:1.

7. ಇತರರಿಗೆ ಸಲಹೆಯನ್ನು ಕೊಡುವಾಗಲೂ ಪೌಲನು ಹೇಗೆ ವಿನಯಶೀಲತೆಯನ್ನು ತೋರಿಸಿದನು?

7 ಗಂಭೀರವಾದ ಸಲಹೆಯನ್ನು ಮತ್ತು ಮಾರ್ಗದರ್ಶನವನ್ನು ಕೊಡಬೇಕಾಗಿದ್ದಾಗಲೂ ಪೌಲನು ವಿನಯಶೀಲತೆಯನ್ನು ತೋರಿಸಿದನು. ತನ್ನ ಜೊತೆ ಕ್ರೈಸ್ತರ ಮೇಲೆ ತನ್ನ ಅಪೊಸ್ತಲಸಂಬಂಧಿತ ಅಧಿಕಾರವನ್ನು ತೋರಿಸುವುದಕ್ಕೆ ಬದಲಾಗಿ, ‘ದೇವರ ಕನಿಕರದಿಂದ’ ಮತ್ತು “ಪ್ರೀತಿಯ ನಿಮಿತ್ತ” ಅವರೊಂದಿಗೆ ವ್ಯವಹರಿಸಿದನು. (ರೋಮಾಪುರ 12:1, 2; ಫಿಲೆಮೋನ 8, 9) ಪೌಲನು ಅವರೊಂದಿಗೆ ಏಕೆ ಹೀಗೆ ವ್ಯವಹರಿಸಿದನು? ಏಕೆಂದರೆ ಅವನು ತನ್ನನ್ನು ‘ಅವರ ನಂಬಿಕೆಯ ವಿಷಯದಲ್ಲಿ ದೊರೆತನಮಾಡುವವನಾಗಿ’ ಅಲ್ಲ, ಬದಲಾಗಿ ಜೊತೆ ಸಹೋದರರ ‘ಸಹಾಯಕನಾಗಿ’ ಪರಿಗಣಿಸಿಕೊಂಡಿದ್ದನು. (2 ಕೊರಿಂಥ 1:24) ಪೌಲನ ವಿನಯಶೀಲತೆಯೇ ಅವನನ್ನು ಪ್ರಥಮ ಶತಮಾನದ ಕ್ರೈಸ್ತ ಸಭೆಗಳಲ್ಲಿದ್ದವರೊಂದಿಗೆ ಆತ್ಮೀಯನಾಗಲು ಸಹಾಯ ಮಾಡಿತೆಂಬುದರಲ್ಲಿ ಸಂದೇಹವೇ ಇಲ್ಲ.—ಅ. ಕೃತ್ಯಗಳು 20:36-38.

ನಮ್ಮ ಸುಯೋಗಗಳ ಕುರಿತು ವಿನಯಶೀಲ ದೃಷ್ಟಿಕೋನವಿರಬೇಕು

8, 9. (ಎ) ನಮ್ಮ ಬಗ್ಗೆ ನಮಗೆ ಯಾಕೆ ವಿನಯಶೀಲ ನೋಟವಿರಬೇಕು? (ಬಿ) ಕೆಲವೊಂದು ಜವಾಬ್ದಾರಿಗಳಿರುವ ಒಬ್ಬ ವ್ಯಕ್ತಿಯು ಹೇಗೆ ವಿನಯಶೀಲತೆಯನ್ನು ತೋರಿಸಸಾಧ್ಯವಿದೆ?

8 ಇಂದಿನ ಕ್ರೈಸ್ತರಿಗೆ ಪೌಲನು ಒಂದು ಅತ್ಯುತ್ತಮ ಮಾದರಿಯನ್ನಿಟ್ಟನು. ನಮಗೆ ಯಾವುದೇ ಜವಾಬ್ದಾರಿಗಳು ಕೊಡಲ್ಪಟ್ಟಿರಲಿ, ನಾವು ಇತರರಿಗಿಂತ ಶ್ರೇಷ್ಠರು ಎಂಬ ಭಾವನೆ ನಮ್ಮಲ್ಲಿ ಯಾರಿಗೂ ಇರಬಾರದು. “ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿದವನಾಗಿದ್ದಾನೆ” ಎಂದು ಪೌಲನು ಬರೆದನು. (ಗಲಾತ್ಯ 6:3) ಏಕೆ? ಏಕೆಂದರೆ “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23; 5:12, ಓರೆ ಅಕ್ಷರಗಳು ನಮ್ಮವು.) ಹೌದು, ನಾವೆಲ್ಲರೂ ಆದಾಮನಿಂದ ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದಿದ್ದೇವೆ ಎಂಬುದನ್ನು ನಾವೆಂದೂ ಮರೆಯಬಾರದು. ಆದುದರಿಂದ, ನಮ್ಮ ಹೀನವಾದ ಪಾಪಮಯ ಸ್ಥಿತಿಯಿಂದ ವಿಶೇಷ ಸುಯೋಗಗಳು ನಮ್ಮನ್ನು ಎಂದೂ ಮೇಲೆತ್ತಲಾರವು. (ಪ್ರಸಂಗಿ 9:2) ಪೌಲನ ವಿಷಯದಲ್ಲಿ ಯಾವುದು ಸತ್ಯವಾಗಿತ್ತೋ ಅದು ನಮ್ಮ ವಿಷಯದಲ್ಲಿಯೂ ಸತ್ಯವಾಗಿದೆ. ಏಕೆಂದರೆ, ಒಂದು ಸುಯೋಗಿತ ಸ್ಥಾನದಲ್ಲಿ ದೇವರ ಸೇವೆಮಾಡುವುದಿರಲಿ, ಆತನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಪಡೆದುಕೊಳ್ಳುವ ಸುಯೋಗವು ಸಹ ಆತನ ಅಪಾತ್ರ ದಯೆಯ ಮೂಲಕವೇ ನಮಗೆ ಸಿಕ್ಕಿದೆ.—ರೋಮಾಪುರ 3:12, 24.

9 ಇದನ್ನು ಅರ್ಥಮಾಡಿಕೊಂಡಿರುವ ಒಬ್ಬ ವಿನಯಶೀಲ ವ್ಯಕ್ತಿಯು, ತನ್ನ ಸುಯೋಗಗಳ ಬಗ್ಗೆ ಹೆಮ್ಮೆಯಿಂದ ಬೀಗುವುದಿಲ್ಲ ಅಥವಾ ತನ್ನ ಸಾಧನೆಗಳ ಕುರಿತು ಜಂಬಕೊಚ್ಚಿಕೊಳ್ಳುವುದಿಲ್ಲ. (1 ಕೊರಿಂಥ 4:7) ಇತರರಿಗೆ ಸಲಹೆ ಅಥವಾ ಮಾರ್ಗದರ್ಶನವನ್ನು ಕೊಡುತ್ತಿರುವಾಗ, ಅವನು ಒಬ್ಬ ಯಜಮಾನನಂತೆ ಅಲ್ಲ, ಬದಲಾಗಿ ಜೊತೆ ಕೆಲಸಗಾರನೋಪಾದಿ ವ್ಯವಹರಿಸುತ್ತಾನೆ. ಏಕೆಂದರೆ, ಕೆಲವೊಂದು ಕೆಲಸಗಳನ್ನು ಅತ್ಯುತ್ತಮ ರೀತಿಯಲ್ಲಿ ಮಾಡಸಾಧ್ಯವಿರುವ ಒಬ್ಬ ವ್ಯಕ್ತಿಯು, ಜೊತೆ ವಿಶ್ವಾಸಿಗಳ ಹೊಗಳಿಕೆಗೆ ಹಾತೊರೆಯುವುದು ಅಥವಾ ಅವರ ಪ್ರಶಂಸೆಯನ್ನು ದುರುಪಯೋಗಿಸಿಕೊಳ್ಳುವುದು ಖಂಡಿತವಾಗಿಯೂ ತಪ್ಪಾಗಿದೆ. (ಜ್ಞಾನೋಕ್ತಿ 25:27; ಮತ್ತಾಯ 6:2-4) ನಿಜವಾದ ಪ್ರಶಂಸೆಯು ಇತರರಿಂದ ಬರುತ್ತದೆ, ಆದರೆ ಅದಕ್ಕಾಗಿ ನಾವು ಹಾತೊರೆಯಬಾರದು. ಒಂದುವೇಳೆ ಇತರರು ನಮ್ಮನ್ನು ಹೊಗಳುವಲ್ಲಿ, ನಾವು ನಮ್ಮ ಬಗ್ಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಾಗಿ ಭಾವಿಸಿಕೊಳ್ಳದಂತೆ ಜಾಗ್ರತೆವಹಿಸಬೇಕು.—ಜ್ಞಾನೋಕ್ತಿ 27:2; ರೋಮಾಪುರ 12:3.

10. ದೀನರಾಗಿ ಕಂಡುಬರುವಂತಹ ಕೆಲವರು ಹೇಗೆ ‘ನಂಬಿಕೆಯಲ್ಲಿ ಐಶ್ವರ್ಯವಂತರಾಗಿರಬಹುದು’ ಎಂಬುದನ್ನು ವಿವರಿಸಿರಿ.

10 ನಮಗೆ ಸ್ವಲ್ಪಮಟ್ಟಿಗಿನ ಜವಾಬ್ದಾರಿಯು ಕೊಡಲ್ಪಟ್ಟಿದೆ ಎಂದಿಟ್ಟುಕೊಳ್ಳಿರಿ. ಆಗ ಕೇವಲ ನಮ್ಮ ಪ್ರಯತ್ನಗಳಿಂದ ಹಾಗೂ ಸಾಮರ್ಥ್ಯಗಳಿಂದ ಮಾತ್ರ ಸಭೆಯು ಏಳಿಗೆ ಹೊಂದುತ್ತಿದೆ ಎಂಬ ಅನಿಸಿಕೆಯನ್ನು ನಾವು ಇತರರಲ್ಲಿ ಉಂಟುಮಾಡಬಹುದು. ಆದರೆ ನಮ್ಮ ಬಗ್ಗೆ ನಾವು ಈ ರೀತಿ ಭಾವಿಸಿಕೊಳ್ಳದಂತೆ ವಿನಯಶೀಲತೆಯು ನಮಗೆ ಸಹಾಯ ಮಾಡುವುದು. ಉದಾಹರಣೆಗೆ, ಇತರರಿಗೆ ಬೋಧಿಸುವುದರಲ್ಲಿ ಪ್ರವೀಣರಾಗಿರುವ ವರದಾನವು ನಮಗೆ ಕೊಡಲ್ಪಟ್ಟಿರಬಹುದು. (ಎಫೆಸ 4:11, 12) ಆದರೆ, ನಾವು ವಿನಯಶೀಲರಾಗಿರುವಲ್ಲಿ, ಒಂದು ಸಭಾ ಕೂಟದಲ್ಲಿ ಕಲಿತುಕೊಳ್ಳುವಂತಹ ಅತ್ಯಂತ ಮಹತ್ವಪೂರ್ಣ ಪಾಠಗಳೆಲ್ಲವು ವೇದಿಕೆಯಿಂದಲೇ ಕೊಡಲ್ಪಡುವುದಿಲ್ಲ ಎಂಬುದನ್ನು ನಾವು ಗ್ರಹಿಸಬೇಕು. ಸಭೆಯಲ್ಲಿರುವ ಅನೇಕ ಸಹೋದರರ ಅತ್ಯುತ್ತಮ ಮಾದರಿಯಿಂದಲೂ ನಾವು ಪಾಠವನ್ನು ಕಲಿಯುತ್ತೇವೆ. ಉದಾಹರಣೆಗೆ, ಏಕ ಹೆತ್ತವರಾಗಿರುವ ಒಬ್ಬ ಸಹೋದರನು ಅಥವಾ ಸಹೋದರಿಯು ತಮ್ಮ ಮಕ್ಕಳೊಂದಿಗೆ ಪ್ರತಿಯೊಂದು ಕೂಟಕ್ಕೆ ಕ್ರಮವಾಗಿ ಹಾಜರಾಗುವುದನ್ನು ನೋಡಿ ನೀವು ಉತ್ತೇಜಿತರಾಗುವುದಿಲ್ಲವೋ? ಅಥವಾ ಒಬ್ಬ ಖಿನ್ನ ವ್ಯಕ್ತಿಗೆ ತಾನು ನಿಷ್ಪ್ರಯೋಜಕನೆಂಬ ಅನಿಸಿಕೆಗಳು ಸತತವಾಗಿ ಕಾಡುತ್ತಿರುವುದಾದರೂ ಆ ವ್ಯಕ್ತಿಯು ನಂಬಿಗಸ್ತಿಕೆಯಿಂದ ಕೂಟಗಳಿಗೆ ಹಾಜರಾಗುವುದನ್ನು ನೋಡಿ ನಾವು ಪ್ರೋತ್ಸಾಹಿತರಾಗುವುದಿಲ್ಲವೋ? ಇಲ್ಲವೆ ಒಬ್ಬ ಯುವಕ ಅಥವಾ ಯುವತಿಗೆ ಶಾಲೆಯಲ್ಲಿ ಮತ್ತು ಬೇರೆ ಕಡೆಗಳಲ್ಲಿ ಕೆಟ್ಟ ಪ್ರಭಾವಗಳನ್ನು ಎದುರಿಸಲಿಕ್ಕಿರುವುದಾದರೂ, ಅವನು ಅಥವಾ ಅವಳು ಏಕಪ್ರಕಾರವಾಗಿ ಆತ್ಮಿಕ ಪ್ರಗತಿಯನ್ನು ಮಾಡುತ್ತಿರುವುದನ್ನು ನೋಡಿ ನಾವು ಉತ್ತೇಜಿತರಾಗುವುದಿಲ್ಲವೋ? (ಕೀರ್ತನೆ 84:10) ಈ ವ್ಯಕ್ತಿಗಳು ಎಲ್ಲರ ಗಮನ ಸೆಳೆಯುವಂತಹ ರೀತಿಯಲ್ಲಿಲ್ಲದಿರಬಹುದು. ಮತ್ತು ಅವರು ಎದುರಿಸುವಂತಹ ಸಮಗ್ರತೆಯ ಪರೀಕ್ಷೆಗಳು ಇತರರ ಗಮನಕ್ಕೆ ಬಾರದಿರಬಹುದು. ಆದರೂ, ಸಭೆಯಲ್ಲಿ ಯಾರು ಪ್ರಮುಖ ಸ್ಥಾನಗಳಲ್ಲಿದ್ದಾರೋ ಅವರಷ್ಟೇ ಇವರು ಸಹ “ನಂಬಿಕೆಯಲ್ಲಿ ಐಶ್ವರ್ಯವಂತರಾಗಿ”ರಬಹುದು. (ಯಾಕೋಬ 2:5) ಏನೇ ಆದರೂ, ಕೊನೆಯಲ್ಲಿ ಯೆಹೋವನ ಅನುಗ್ರಹಕ್ಕೆ ಪಾತ್ರವಾಗುವುದು ನಮ್ಮ ನಂಬಿಕೆಯೇ.—ಮತ್ತಾಯ 10:22; 1 ಕೊರಿಂಥ 4:2.

ಗಿದ್ಯೋನನು—ತನ್ನ ತಂದೆಯ ಕುಲದಲ್ಲಿ “ಅಲ್ಪನು”

11. ದೇವದೂತನೊಂದಿಗೆ ಮಾತಾಡುತ್ತಿರುವಾಗ ಯಾವ ರೀತಿಯಲ್ಲಿ ಗಿದ್ಯೋನನು ವಿನಯಶೀಲತೆಯನ್ನು ತೋರಿಸಿದನು?

11 ಗಿದ್ಯೋನನು ಮನಸ್ಸೆ ಕುಲದ ಒಬ್ಬ ಧೀರ ಯೌವನಸ್ಥನಾಗಿದ್ದು, ಇಸ್ರಾಯೇಲ್‌ನ ಇತಿಹಾಸದಲ್ಲೇ ಅತ್ಯಂತ ಗಲಭೆಯ ಸಮಯದಲ್ಲಿ ಜೀವಿಸಿದ್ದನು. ಏಳು ವರ್ಷಗಳ ವರೆಗೆ ದೇವಜನರು ಮಿದ್ಯಾನ್ಯರ ದಬ್ಬಾಳಿಕೆಯ ಕೆಳಗೆ ಕಷ್ಟಾನುಭವಿಸಿದ್ದರು. ಆದರೆ ಈಗ ಯೆಹೋವನು ತನ್ನ ಜನರನ್ನು ಬಿಡುಗಡೆಮಾಡುವ ಸಮಯ ಬಂದಿತ್ತು. ಆದುದರಿಂದ, ಒಬ್ಬ ದೇವದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ, “ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಎಂದು ಹೇಳಿದನು. ಆದರೆ ಗಿದ್ಯೋನನು ವಿನಯಶೀಲನಾಗಿದ್ದರಿಂದ, ಈ ಅನಿರೀಕ್ಷಿತ ಶ್ಲಾಘನೆಯನ್ನು ಕೇಳಿ ಅವನು ಸಂಭ್ರಮಿಸಲಿಲ್ಲ. ಅದಕ್ಕೆ ಬದಲಾಗಿ, ಅವನು ಗೌರವಭರಿತನಾಗಿ ದೇವದೂತನಿಗೆ ಕೇಳಿದ್ದು: “ಸ್ವಾಮೀ, ಯೆಹೋವನು ನಮ್ಮ ಸಂಗಡ ಇದ್ದರೆ ನಮಗೆ ಇದೆಲ್ಲಾ ಯಾಕೆ ಸಂಭವಿಸಿತು?” ಆಗ ದೇವದೂತನು ವಿಷಯಗಳನ್ನು ಸ್ಪಷ್ಟವಾಗಿ ವಿವರಿಸಿ, ‘ನೀನು ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸುವಿ’ ಎಂದು ಗಿದ್ಯೋನನಿಗೆ ಹೇಳಿದನು. ಇದಕ್ಕೆ ಗಿದ್ಯೋನನು ಹೇಗೆ ಪ್ರತಿಕ್ರಿಯಿಸಿದನು? ಒಂದು ಜನಾಂಗದ ವೀರನಾಗಿ ಮೆರೆಯಲು ಸಿಕ್ಕಿದ ಈ ನೇಮಕವನ್ನು ಆ ಕೂಡಲೆ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಬದಲಾಗಿ ಗಿದ್ಯೋನನು ಉತ್ತರಿಸಿದ್ದು: “ಸ್ವಾಮೀ, ನಾನು ಇಸ್ರಾಯೇಲ್ಯರನ್ನು ರಕ್ಷಿಸುವದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು.” ಎಂತಹ ವಿನಯಶೀಲತೆ!—ನ್ಯಾಯಸ್ಥಾಪಕರು 6:11-15.

12. ತನ್ನ ನೇಮಕವನ್ನು ಪೂರೈಸುವುದರಲ್ಲಿ ಗಿದ್ಯೋನನು ಹೇಗೆ ಬುದ್ಧಿವಂತಿಕೆಯನ್ನು ತೋರಿಸಿದನು?

12 ಗಿದ್ಯೋನನನ್ನು ಯುದ್ಧಕ್ಕೆ ಕಳುಹಿಸುವ ಮುಂಚೆ ಯೆಹೋವನು ಅವನನ್ನು ಪರೀಕ್ಷಿಸಿದನು. ಅದು ಹೇಗೆ? ಅವನ ತಂದೆಯು ಕಟ್ಟಿದ್ದ ಬಾಳನ ಯಜ್ಞವೇದಿಯನ್ನು ಕೆಡವಿಬಿಟ್ಟು, ಅದರ ಬಳಿಯಲ್ಲಿದ್ದ ವಿಗ್ರಹಸ್ತಂಭವನ್ನು ಕಡಿದುಹಾಕುವಂತೆ ಅವನಿಗೆ ಹೇಳಲಾಯಿತು. ಈ ನೇಮಕವನ್ನು ಪೂರೈಸಲು ಧೈರ್ಯದ ಅಗತ್ಯವಿತ್ತು. ಆದರೆ ಈ ಕೆಲಸವನ್ನು ಪೂರೈಸುವುದರಲ್ಲಿ ಗಿದ್ಯೋನನು ವಿನಯಶೀಲತೆ ಹಾಗೂ ಬುದ್ಧಿವಂತಿಕೆಯನ್ನು ಸಹ ತೋರಿಸಿದನು. ಹೇಗೆಂದರೆ, ಗಿದ್ಯೋನನು ಎಲ್ಲರ ಮುಂದೆ ಈ ಕೆಲಸವನ್ನು ಮಾಡುವುದಕ್ಕೆ ಬದಲಾಗಿ, ರಾತ್ರಿಯಲ್ಲಿ ಯಾರೂ ನೋಡದಿರುವಂತಹ ಸಮಯದಲ್ಲಿ ಅದನ್ನು ಮಾಡಿದನು. ಅಷ್ಟುಮಾತ್ರವಲ್ಲ, ಗಿದ್ಯೋನನು ಮುಂದಾಲೋಚನೆಯಿಂದ ತನ್ನ ಕೆಲಸವನ್ನು ಆರಂಭಿಸಿದನು. ಅವನು ತನ್ನೊಂದಿಗೆ ಹತ್ತು ಮಂದಿ ಸೇವಕರನ್ನು ಕರೆದೊಯ್ದನು. ಈ ಸೇವಕರಲ್ಲಿ ಕೆಲವರು ನಿಂತುಕೊಂಡು ಕಾವಲು ಕಾಯುತ್ತಿರುವಾಗ, ಇನ್ನುಳಿದವರು ಯಜ್ಞವೇದಿಯನ್ನು ಕೆಡವಿಬಿಡಲು ಮತ್ತು ವಿಗ್ರಹಸ್ತಂಭವನ್ನು ಕಡಿದುಹಾಕಲು ಗಿದ್ಯೋನನಿಗೆ ಸಹಾಯಮಾಡಿದರು. * ಏನೇ ಇರಲಿ, ಯೆಹೋವನ ಆಶೀರ್ವಾದದಿಂದ ಗಿದ್ಯೋನನು ತನ್ನ ನೇಮಕವನ್ನು ಪೂರೈಸಿದನು ಮತ್ತು ಸಕಾಲದಲ್ಲಿ ಮಿದ್ಯಾನ್ಯರಿಂದ ಇಸ್ರಾಯೇಲ್ಯರನ್ನು ಬಿಡಿಸಲಿಕ್ಕಾಗಿ ದೇವರು ಅವನನ್ನು ಉಪಯೋಗಿಸಿದನು.—ನ್ಯಾಯಸ್ಥಾಪಕರು 6:25-27.

ಗಿದ್ಯೋನನ ವಿನಯಶೀಲತೆ ಮತ್ತು ಬುದ್ಧಿವಂತಿಕೆ

13, 14. (ಎ) ಒಂದು ಸೇವಾ ಸುಯೋಗವು ನಮಗೆ ಕೊಡಲ್ಪಡುವಾಗ ನಾವು ಹೇಗೆ ವಿನಯಶೀಲತೆಯನ್ನು ತೋರಿಸಸಾಧ್ಯವಿದೆ? (ಬಿ) ವಿನಯಶೀಲತೆಯನ್ನು ತೋರಿಸುವುದರಲ್ಲಿ ಸಹೋದರ ಎ. ಏಚ್‌. ಮ್ಯಾಕ್‌ಮಿಲನ್‌ರು ಹೇಗೆ ಒಂದು ಅತ್ಯುತ್ತಮ ಮಾದರಿಯನ್ನಿಟ್ಟರು?

13 ಗಿದ್ಯೋನನ ವಿನಯಶೀಲತೆಯಿಂದ ಬಹಳಷ್ಟನ್ನು ಕಲಿಯಸಾಧ್ಯವಿದೆ. ಉದಾಹರಣೆಗೆ, ಒಂದು ಸೇವಾ ಸುಯೋಗವು ನಮಗೆ ಕೊಡಲ್ಪಡುವಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಮೊದಲಾಗಿ, ಅದರಿಂದ ದೊರಕುವ ಘನತೆ ಅಥವಾ ಗೌರವದ ಕುರಿತು ನಾವು ಯೋಚಿಸುತ್ತೇವೊ? ಅಥವಾ ಆ ನೇಮಕವು ಅಗತ್ಯಪಡಿಸುವಂತಹ ವಿಷಯಗಳನ್ನು ನಾವು ಪೂರೈಸಬಲ್ಲೆವೋ ಎಂಬುದನ್ನು ನಾವು ವಿನಯಶೀಲತೆಯಿಂದ ಹಾಗೂ ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುತ್ತೇವೊ? 1966ರಲ್ಲಿ ತಮ್ಮ ಭೂಜೀವಿತವನ್ನು ಮುಗಿಸಿದಂತಹ ಸಹೋದರ ಎ. ಏಚ್‌. ಮ್ಯಾಕ್‌ಮಿಲನ್‌ರು ಈ ವಿಷಯದಲ್ಲಿ ಒಂದು ಅತ್ಯುತ್ತಮ ಮಾದರಿಯನ್ನಿಟ್ಟರು. ವಾಚ್‌ ಟವರ್‌ ಸೊಸೈಟಿಯ ಮೊದಲ ಅಧ್ಯಕ್ಷರಾಗಿದ್ದ ಸಿ. ಟಿ. ರಸಲರು ಒಮ್ಮೆ ಸಹೋದರ ಮ್ಯಾಕ್‌ಮಿಲನ್‌ರನ್ನು ಕರೆದು, ತಾನು ಇಲ್ಲದಿರುವಾಗ ಸಂಸ್ಥೆಯ ಕೆಲಸದ ಮೇಲ್ವಿಚಾರಣೆಯನ್ನು ಯಾರಿಗೆ ವಹಿಸಬಹುದು ಎಂದು ಅವರನ್ನು ಕೇಳಿದರು. ತದನಂತರ ಅವರಿಬ್ಬರೂ ಈ ವಿಷಯದ ಕುರಿತು ಚರ್ಚಿಸುತ್ತಿದ್ದಾಗ, ತಾನೇ ಈ ಕೆಲಸಕ್ಕೆ ಅರ್ಹನು ಎಂದು ಸಹೋದರ ಮ್ಯಾಕ್‌ಮಿಲನ್‌ ತಮ್ಮನ್ನು ಶಿಫಾರಸ್ಸು ಮಾಡಿಕೊಳ್ಳಸಾಧ್ಯವಿತ್ತಾದರೂ, ಅವರು ಹಾಗೆ ಮಾಡಲಿಲ್ಲ. ಕೊನೆಗೆ, ಸಹೋದರ ಮ್ಯಾಕ್‌ಮಿಲನ್‌ರೇ ಈ ನೇಮಕವನ್ನು ಸ್ವೀಕರಿಸುವಂತೆ ಸಹೋದರ ರಸಲ್‌ರು ಅವರನ್ನು ಕೇಳಿಕೊಂಡರು. ಮತ್ತು ಕೆಲವು ವರ್ಷಗಳ ಬಳಿಕ ಸಹೋದರ ಮ್ಯಾಕ್‌ಮಿಲನ್‌ರು ಬರೆದುದು: “ನಾನು ದಿಗ್ಭ್ರಮೆಯಿಂದ ಸ್ವಲ್ಪ ಹೊತ್ತು ಹಾಗೇ ನಿಂತುಬಿಟ್ಟೆ. ನಾನು ಅದರ ಬಗ್ಗೆ ತುಂಬ ಗಂಭೀರವಾಗಿ ಆಲೋಚಿಸಿದೆ, ಮತ್ತು ಸ್ವಲ್ಪ ಸಮಯದ ವರೆಗೆ ಅದರ ಕುರಿತು ಪ್ರಾರ್ಥಿಸಿದೆ. ತದನಂತರ, ನಿಮಗೆ ಸಹಾಯ ಮಾಡಲಿಕ್ಕಾಗಿ ನನ್ನಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಲು ನಾನು ಸಂತೋಷಿಸುತ್ತೇನೆ ಎಂದು ನಾನು ಅವರಿಗೆ ಹೇಳಿದೆ.”

14 ಈ ಘಟನೆ ನಡೆದ ಸ್ವಲ್ಪಸಮಯದ ಬಳಿಕ ಸಹೋದರ ರಸಲರು ಮರಣಹೊಂದಿದರು. ಮತ್ತು ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರ ಸ್ಥಾನವು ಖಾಲಿಯಾಯಿತು. ಸಹೋದರ ರಸಲರು ಕೊನೆಯ ಬಾರಿ ತಮ್ಮ ಸಾಕ್ಷಿಕಾರ್ಯಕ್ಕೆ ಹೋಗಿದ್ದಾಗ ಸಹೋದರ ಮ್ಯಾಕ್‌ಮಿಲನ್‌ರು ಮೇಲ್ವಿಚಾರಣೆಯನ್ನು ಮಾಡುತ್ತಿದ್ದುದರಿಂದ, ಒಬ್ಬ ಸಹೋದರನು ಅವರಿಗೆ ಹೇಳಿದ್ದು: “ಮ್ಯಾಕ್‌ ಖಂಡಿತವಾಗಿಯೂ ನಿಮಗೆ ಅಧ್ಯಕ್ಷರ ಸ್ಥಾನವನ್ನು ಪಡೆಯುವ ಅವಕಾಶವಿದೆ. ಸಹೋದರ ರಸಲ್‌ರವರು ಇಲ್ಲದಿದ್ದಾಗ ನೀವು ಅವರ ವಿಶೇಷ ಪ್ರತಿನಿಧಿಯಾಗಿದ್ದಿರಿ, ಮತ್ತು ಆಗ ನೀವು ಏನು ಹೇಳುತ್ತೀರೋ ಅದನ್ನೇ ಮಾಡುವಂತೆ ಸಹೋದರ ರಸಲ್‌ ನಮಗೆ ಹೇಳಿದ್ದರು. ಇಷ್ಟು ಹೇಳಿ ಅವರು ಹೋಗಿಬಿಟ್ಟರು, ಪುನಃ ಹಿಂದಿರುಗಿ ಬರಲಿಲ್ಲ. ಆದರೆ ಈಗ ಈ ಕೆಲಸವನ್ನು ಮುಂದುವರಿಸಲು ನಿಮ್ಮಿಂದ ಮಾತ್ರ ಸಾಧ್ಯ ಎಂಬಂತೆ ತೋರುತ್ತದೆ.” ಆದರೆ ಸಹೋದರ ಮ್ಯಾಕ್‌ಮಿಲನ್‌ರು ಉತ್ತರಿಸಿದ್ದು: “ಸಹೋದರನೇ, ಈ ವಿಷಯವನ್ನು ಆ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಇದು ಕರ್ತನ ಕೆಲಸವಾಗಿದೆ. ಮತ್ತು ಕರ್ತನ ಸಂಸ್ಥೆಯಲ್ಲಿ ನಾವು ಯಾವುದನ್ನು ಮಾಡಲು ಅರ್ಹರೆಂದು ಕರ್ತನು ನೆನಸುತ್ತಾನೋ ಆ ಕೆಲಸವು ಮಾತ್ರ ನಮಗೆ ಕೊಡಲ್ಪಡುತ್ತದೆ. ಆದರೆ ನಾನು ಮಾತ್ರ ಅಧ್ಯಕ್ಷನ ಸ್ಥಾನಕ್ಕೆ ಅರ್ಹನಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತು.” ತದನಂತರ ಸಹೋದರ ಮ್ಯಾಕ್‌ಮಿಲನ್‌ರು ಈ ಸ್ಥಾನಕ್ಕೆ ಬೇರೊಬ್ಬರನ್ನು ಶಿಫಾರಸ್ಸು ಮಾಡಿದರು. ಗಿದ್ಯೋನನಂತೆ, ಇವರಿಗೆ ತಮ್ಮ ಬಗ್ಗೆ ವಿನಯಶೀಲ ದೃಷ್ಟಿಕೋನವಿತ್ತು. ನಾವು ಸಹ ಅದೇ ರೀತಿಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಒಳ್ಳೇದಾಗಿದೆ.

15. ನಾವು ಇತರರಿಗೆ ಸಾರುವಾಗ ವಿವೇಚನಾಶಕ್ತಿಯನ್ನು ಉಪಯೋಗಿಸಸಾಧ್ಯವಿರುವ ಕೆಲವು ಪ್ರಾಯೋಗಿಕ ವಿಧಗಳು ಯಾವುವು?

15 ನಮ್ಮ ನೇಮಕವನ್ನು ಪೂರೈಸುವುದರಲ್ಲಿ ನಾವು ಸಹ ವಿನಯಶೀಲತೆಯನ್ನು ತೋರಿಸಬೇಕು. ಗಿದ್ಯೋನನು ವಿವೇಚನೆಯುಳ್ಳವನಾಗಿದ್ದನು, ಮತ್ತು ಅನಗತ್ಯವಾಗಿ ತನ್ನ ವಿರೋಧಿಗಳಿಗೆ ಕೋಪವನ್ನೆಬ್ಬಿಸಲು ಬಯಸಲಿಲ್ಲ. ಅದೇ ರೀತಿಯಲ್ಲಿ, ನಮ್ಮ ಸಾರುವ ಕೆಲಸದಲ್ಲಿ ನಾವು ಇತರರೊಂದಿಗೆ ಹೇಗೆ ಮಾತಾಡುತ್ತೇವೆ ಎಂಬ ವಿಷಯದಲ್ಲಿ ವಿನಯಶೀಲರಾಗಿರಬೇಕು ಮತ್ತು ವಿವೇಚನೆಯುಳ್ಳವರಾಗಿರಬೇಕು. ಏಕೆಂದರೆ, ‘ವಿತರ್ಕಗಳನ್ನು’ ಮತ್ತು ‘ಬಲವಾದ ಕೋಟೆಗಳನ್ನು ಕೆಡವಿಹಾಕುವಂತಹ’ ಒಂದು ಆತ್ಮಿಕ ಯುದ್ಧದಲ್ಲಿ ನಾವು ಒಳಗೂಡಿರುವವರಾಗಿದ್ದೇವೆ. (2 ಕೊರಿಂಥ 10:4, 5) ಆದರೆ ಸುವಾರ್ತೆಯನ್ನು ಸಾರುತ್ತಿರುವಾಗ ನಾವು ಇತರರನ್ನು ಕಡೆಗಣಿಸಿ ಮಾತಾಡಬಾರದು ಮತ್ತು ಅವರು ನಮ್ಮ ಸಂದೇಶದ ಬಗ್ಗೆ ತಪ್ಪು ತಿಳಿದುಕೊಳ್ಳುವಂತೆ ಯಾವುದೇ ನ್ಯಾಯಸಮ್ಮತ ಕಾರಣವನ್ನು ಕೊಡಬಾರದು. ಅದಕ್ಕೆ ಬದಲಾಗಿ, ನಾವು ಅವರ ದೃಷ್ಟಿಕೋನಗಳನ್ನು ಗೌರವಿಸಬೇಕು, ಯಾವ ವಿಷಯಗಳಲ್ಲಿ ನಾವು ಅವರೊಂದಿಗೆ ಸಮ್ಮತಿಸುತ್ತೇವೆ ಎಂಬುದನ್ನು ಒತ್ತಿಹೇಳಬೇಕು ಮತ್ತು ಆಮೇಲೆ ನಮ್ಮ ಸಂದೇಶದ ಸಕಾರಾತ್ಮಕ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು.—ಅ. ಕೃತ್ಯಗಳು 22:1-3; 1 ಕೊರಿಂಥ 9:22; ಪ್ರಕಟನೆ 21:4.

ಯೇಸು—ವಿನಯಶೀಲತೆಯ ಅತ್ಯುತ್ತಮ ಮಾದರಿ

16. ಸ್ವತಃ ತನ್ನ ಬಗ್ಗೆ ಯೇಸುವಿಗೆ ವಿನಯಶೀಲ ದೃಷ್ಟಿಕೋನವಿತ್ತು ಎಂಬುದನ್ನು ಅವನು ಹೇಗೆ ತೋರಿಸಿದನು?

16 ವಿನಯಶೀಲತೆಯನ್ನು ತೋರಿಸುವುದರಲ್ಲಿ ಯೇಸು ಕ್ರಿಸ್ತನು ಅತ್ಯುತ್ತಮವಾದ ಮಾದರಿಯನ್ನಿಟ್ಟನು. * ತನ್ನ ತಂದೆಯೊಂದಿಗೆ ಯೇಸುವಿಗೆ ನಿಕಟ ಸಂಬಂಧವಿತ್ತಾದರೂ, ಕೆಲವೊಂದು ವಿಚಾರಗಳು ತನ್ನ ವಶದಲ್ಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅವನು ಹಿಂಜರಿಯಲಿಲ್ಲ. (ಯೋಹಾನ 1:14) ಉದಾಹರಣೆಗೆ, ಯಾಕೋಬ ಮತ್ತು ಯೋಹಾನರ ತಾಯಿಯು ಯೇಸುವಿನ ಬಳಿಗೆ ಬಂದು, ಯೇಸು ತನ್ನ ರಾಜ್ಯದಲ್ಲಿ ತನ್ನಿಬ್ಬರು ಪುತ್ರರನ್ನು ಎಡಬಲಗಳಲ್ಲಿ ಕೂರಿಸಿಕೊಳ್ಳಬೇಕೆಂಬ ತನ್ನ ಬಯಕೆಯನ್ನು ವ್ಯಕ್ತಪಡಿಸಿದಳು. ಆದರೆ ಯೇಸು ಅವಳಿಗೆ ಉತ್ತರ ನೀಡಿದ್ದು: “ನನ್ನ ಎಡಬಲಗಡೆಗಳಲ್ಲಿ ಕೂತುಕೊಳ್ಳುವಂತೆ ಅನುಗ್ರಹಮಾಡುವದು ನನ್ನದಲ್ಲ.” (ಮತ್ತಾಯ 20:20-23) ಇನ್ನೊಂದು ಸಂದರ್ಭದಲ್ಲಿ ಯೇಸು ಮನಃಪೂರ್ವಕವಾಗಿ ಒಪ್ಪಿಕೊಂಡದ್ದು: ‘ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು . . . ನಾನು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವವನಾಗಿದ್ದೇನೆ.’—ಯೋಹಾನ 5:30; 14:28; ಫಿಲಿಪ್ಪಿ 2:5, 6.

17. ಇತರರೊಂದಿಗಿನ ತನ್ನ ವ್ಯವಹಾರಗಳಲ್ಲಿ ಯೇಸು ವಿನಯಶೀಲತೆಯನ್ನು ಹೇಗೆ ತೋರಿಸಿದನು?

17 ಪ್ರತಿಯೊಂದು ವಿಧದಲ್ಲಿ ಯೇಸು ಅಪರಿಪೂರ್ಣ ಮಾನವರಿಗಿಂತ ತುಂಬ ಶ್ರೇಷ್ಠನಾಗಿದ್ದನು. ಅಷ್ಟುಮಾತ್ರವಲ್ಲದೆ, ತನ್ನ ತಂದೆಯಾದ ಯೆಹೋವನಿಂದ ಅವನಿಗೆ ಬೇರೆಲ್ಲರಿಗಿಂತಲೂ ಹೆಚ್ಚು ಅಧಿಕಾರವು ಕೊಡಲ್ಪಟ್ಟಿತ್ತು. ಆದರೂ, ಹಿಂಬಾಲಕರೊಂದಿಗಿನ ತನ್ನ ವ್ಯವಹಾರಗಳಲ್ಲಿ ಯೇಸು ವಿನಯಶೀಲನಾಗಿದ್ದನು. ತನಗೆಲ್ಲ ಗೊತ್ತು ಎಂಬುದನ್ನು ತೋರಿಸಿಕೊಳ್ಳಲಿಕ್ಕಾಗಿ ಅವನು ತನ್ನ ಜ್ಞಾನವನ್ನು ಅವರ ಮುಂದೆ ಪ್ರದರ್ಶಿಸಲಿಲ್ಲ. ಬದಲಾಗಿ, ಅವನು ಸೂಕ್ಷ್ಮಗ್ರಾಹಿಯಾಗಿದ್ದನು ಮತ್ತು ತನ್ನ ಹಿಂಬಾಲಕರಿಗೆ ಸಹಾನುಭೂತಿಯನ್ನು ತೋರಿಸಿದನು. ಅಷ್ಟುಮಾತ್ರವಲ್ಲದೆ, ಅವರ ಆವಶ್ಯಕತೆಗಳಿಗೆ ಸಹ ಪರಿಗಣನೆ ತೋರಿಸಿದನು. (ಮತ್ತಾಯ 15:32; 26:40, 41; ಮಾರ್ಕ 6:31) ಹೀಗೆ, ಯೇಸು ಪರಿಪೂರ್ಣನಾಗಿದ್ದರೂ ಅವನು ಪರಿಪೂರ್ಣತಾವಾದಿಯಾಗಿರಲಿಲ್ಲ. ತನ್ನ ಶಿಷ್ಯರು ಏನು ಮಾಡಲು ಶಕ್ತರಾಗಿದ್ದರೋ ಅದಕ್ಕಿಂತ ಹೆಚ್ಚಿನದ್ದನ್ನು ಅವನು ಅವರಿಂದ ಅಪೇಕ್ಷಿಸಲಿಲ್ಲ. ಮತ್ತು ಅವರಿಂದ ಸಹಿಸಸಾಧ್ಯವಿದ್ದುದಕ್ಕಿಂತ ಹೆಚ್ಚಿನ ಭಾರವನ್ನು ಅವರ ಮೇಲೆ ಹೊರಿಸಲಿಲ್ಲ. (ಯೋಹಾನ 16:12) ಆದುದರಿಂದಲೇ ಅಷ್ಟೊಂದು ಮಂದಿಗೆ ಅವನು ಚೈತನ್ಯದಾಯಕವಾಗಿ ಕಂಡುಬಂದುದರಲ್ಲಿ ಆಶ್ಚರ್ಯವೇನಿಲ್ಲ!—ಮತ್ತಾಯ 11:29.

ಯೇಸುವಿನ ವಿನಯಶೀಲ ಮಾದರಿಯನ್ನು ಅನುಕರಿಸಿರಿ

18, 19. (ಎ) ನಮ್ಮ ಬಗ್ಗೆ ನಮಗಿರುವ ದೃಷ್ಟಿಕೋನ ಮತ್ತು (ಬಿ) ನಾವು ಇತರರನ್ನು ಉಪಚರಿಸುವ ರೀತಿಯಲ್ಲಿ ನಾವು ಯೇಸುವಿನ ವಿನಯಶೀಲತೆಯನ್ನು ಹೇಗೆ ಅನುಕರಿಸಸಾಧ್ಯವಿದೆ?

18 ಜೀವಿಸಿರುವವರಲ್ಲೇ ಅತ್ಯಂತ ಮಹಾನ್‌ ಪುರುಷನಾಗಿರುವ ಯೇಸುವೇ ವಿನಯಶೀಲತೆಯನ್ನು ತೋರಿಸಿರುವಾಗ, ನಾವೆಷ್ಟು ವಿನಯಶೀಲತೆಯನ್ನು ತೋರಿಸಬೇಕು ಎಂಬುದರ ಬಗ್ಗೆ ತುಸು ಆಲೋಚಿಸಿರಿ. ನಮಗೆ ಸಂಪೂರ್ಣ ಅಧಿಕಾರವಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಪರಿಪೂರ್ಣ ಮಾನವರು ಸಹ ಇಷ್ಟಪಡುವುದಿಲ್ಲ. ಆದರೂ, ಯೇಸುವನ್ನು ಅನುಕರಿಸುವುದರಲ್ಲಿ ಕ್ರೈಸ್ತರು ವಿನಯಶೀಲರಾಗಿರಲು ಪ್ರಯತ್ನಿಸುತ್ತಾರೆ. ಒಂದು ಜವಾಬ್ದಾರಿಗೆ ಯಾರು ಅರ್ಹರಾಗಿದ್ದಾರೋ ಅವರಿಗೆ ಆ ಜವಾಬ್ದಾರಿಯನ್ನು ವಹಿಸಿಕೊಡಲು ಅವರು ಹಿಂಜರಿಯುವುದಿಲ್ಲ. ಅಷ್ಟುಮಾತ್ರವಲ್ಲದೆ, ಯಾರಿಗೆ ಮಾರ್ಗದರ್ಶನವನ್ನು ಕೊಡುವ ಅಧಿಕಾರವಿದೆಯೋ ಅವರಿಂದ ಮಾರ್ಗದರ್ಶನವು ಕೊಡಲ್ಪಡುವಾಗ ಅದನ್ನು ಸ್ವೀಕರಿಸಲು ಅವರು ಬಿಗುಮಾನವನ್ನು ತೋರಿಸುವುದಿಲ್ಲ, ಬದಲಾಗಿ ಅದಕ್ಕೆ ಮನಃಪೂರ್ವಕವಾಗಿ ಸಹಕರಿಸುತ್ತಾರೆ. ಈ ಸಹಕಾರ ಮನೋಭಾವವನ್ನು ತೋರಿಸುವ ಮೂಲಕ ಅವರು ಸಭೆಯ ಎಲ್ಲ ಕಾರ್ಯಕಲಾಪಗಳು ‘ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲು’ ಅವಕಾಶಮಾಡಿಕೊಡುತ್ತಾರೆ.—1 ಕೊರಿಂಥ 14:40.

19 ಇತರರಿಂದ ನಾವು ಅಪೇಕ್ಷಿಸುವ ವಿಷಯಗಳಲ್ಲಿ ನಾವು ಯುಕ್ತಾಯುಕ್ತ ಪರಿಜ್ಞಾನವುಳ್ಳವರಾಗಿರುವಂತೆ ಮತ್ತು ಅವರ ಆವಶ್ಯಕತೆಗಳಿಗೆ ಪರಿಗಣನೆ ತೋರಿಸುವವರಾಗಿರುವಂತೆ ವಿನಯಶೀಲತೆಯು ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಫಿಲಿಪ್ಪಿ 4:5) ಏಕೆಂದರೆ, ಇತರರಲ್ಲಿ ಇಲ್ಲದಿರುವಂತಹ ವಿಶೇಷ ಸಾಮರ್ಥ್ಯಗಳು ಹಾಗೂ ಬಲವು ನಮ್ಮಲ್ಲಿರಬಹುದು. ಆದರೆ, ನಾವು ವಿನಯಶೀಲರಾಗಿರುವಲ್ಲಿ, ಯಾವಾಗಲೂ ನಾವು ಇಷ್ಟಪಡುವ ಪ್ರಕಾರವೇ ಅವರು ಕಾರ್ಯನಡಿಸುವಂತೆ ನಾವು ಬಯಸುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಇತಿಮಿತಿಗಳಿರುತ್ತವೆ ಎಂಬುದನ್ನು ತಿಳಿದವರಾಗಿದ್ದು, ವಿನಯಶೀಲತೆಯಿಂದ ನಾವು ಇತರರ ತಪ್ಪುಗಳನ್ನು ಮನ್ನಿಸುವವರಾಗಿರುವೆವು. ಈ ವಿಷಯದಲ್ಲಿ ಪೇತ್ರನು ಬರೆದುದು: “ಮೊಟ್ಟಮೊದಲು ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”—1 ಪೇತ್ರ 4:8.

20. ದುರಭಿಮಾನದ ಪ್ರವೃತ್ತಿಯನ್ನು ಹೋಗಲಾಡಿಸಲು ನಾವೇನು ಮಾಡಸಾಧ್ಯವಿದೆ?

20 ನಾವೀಗ ಕಲಿತಿರುವಂತೆ, ನಿಜವಾಗಿಯೂ ವಿನಯಶೀಲರಲ್ಲಿ ವಿವೇಕವಿದೆ. ಆದರೂ, ನಿಮ್ಮಲ್ಲಿ ವಿನಯಶೀಲತೆಯಿಲ್ಲ ಅಥವಾ ದುರಭಿಮಾನದ ಪ್ರವೃತ್ತಿಯಿದೆ ಎಂಬುದು ನಿಮಗೆ ಗೊತ್ತಿರುವಲ್ಲಿ ಆಗೇನು? ನಿರುತ್ಸಾಹಗೊಳ್ಳದಿರಿ. ಅದಕ್ಕೆ ಬದಲಾಗಿ, ದಾವೀದನ ಮಾದರಿಯನ್ನು ಅನುಸರಿಸಿರಿ. ಅವನು ಪ್ರಾರ್ಥಿಸಿದ್ದು: “ಅದಲ್ಲದೆ ಬೇಕೆಂದು ಪಾಪಮಾಡದಂತೆ [“ದುರಭಿಮಾನದ ಕೃತ್ಯಗಳಿಂದ,” NW] ನಿನ್ನ ದಾಸನನ್ನು ಕಾಪಾಡು. ಅಂಥ ಪಾಪಗಳು ನನ್ನನ್ನು ಆಳದಿರಲಿ.” (ಕೀರ್ತನೆ 19:13) ಆಗ ಪೌಲ, ಗಿದ್ಯೋನ, ಮತ್ತು ಎಲ್ಲರಿಗಿಂತಲೂ ಹೆಚ್ಚಾಗಿ ಯೇಸು ಕ್ರಿಸ್ತನಂತಹ ನಂಬಿಗಸ್ತ ಪುರುಷರನ್ನು ಅನುಕರಿಸುವ ಮೂಲಕ, “ವಿನಯಶೀಲರಲ್ಲಿ ವಿವೇಕವಿದೆ” ಎಂಬ ಮಾತುಗಳ ಸತ್ಯತೆಯನ್ನು ವೈಯಕ್ತಿಕವಾಗಿ ಅನುಭವಿಸುವೆವು.—ಜ್ಞಾನೋಕ್ತಿ 11:2, NW.

[ಪಾದಟಿಪ್ಪಣಿಗಳು]

^ ಪ್ಯಾರ. 6 “ಕೈಕೆಳಗಿನವರು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಶಬ್ದವು, ಒಂದು ದೊಡ್ಡ ಹಡಗಿನ ಕೆಳಗಿನ ದಿಣ್ಣೆಯಲ್ಲಿ ಹುಟ್ಟುಹಾಕುವ ಒಬ್ಬ ದಾಸನನ್ನು ಸೂಚಿಸಸಾಧ್ಯವಿತ್ತು. ಇದಕ್ಕೆ ವಿರುದ್ಧವಾಗಿ, ‘ಮನೆವಾರ್ತೆಯವರಿಗೆ’ ಹೆಚ್ಚು ಜವಾಬ್ದಾರಿಗಳು ಕೊಡಲ್ಪಡುತ್ತಿದ್ದವು. ಬಹುಶಃ, ಇಡೀ ಆಸ್ತಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸಹ. ಆದರೂ, ಅನೇಕ ಯಜಮಾನರು ಮನೆವಾರ್ತೆಯವನನ್ನು ಸಹ, ಹುಟ್ಟುದೋಣಿಯಲ್ಲಿ ಹುಟ್ಟುಹಾಕುವ ಕೆಲಸವನ್ನು ಮಾಡುವ ಒಬ್ಬ ದಾಸನಷ್ಟೇ ಕೆಳದರ್ಜೆಯವನನ್ನಾಗಿ ಪರಿಗಣಿಸುತ್ತಿದ್ದರು.

^ ಪ್ಯಾರ. 12 ಗಿದ್ಯೋನನ ಬುದ್ಧಿವಂತಿಕೆ ಮತ್ತು ಎಚ್ಚರಿಕೆಯನ್ನು ಹೇಡಿತನದ ಒಂದು ಸಂಕೇತವಾಗಿ ಅಪಾರ್ಥಮಾಡಿಕೊಳ್ಳಬಾರದು. ಅದಕ್ಕೆ ಬದಲಾಗಿ, ಇಬ್ರಿಯ 11:32-38ರಲ್ಲಿ ಅವನ ಧೈರ್ಯವು ದೃಢೀಕರಿಸಲ್ಪಟ್ಟಿದೆ. ಅಲ್ಲಿ ಯಾರು ‘ಬಲಿಷ್ಠರಾಗಿ ಮಾಡಲ್ಪಟ್ಟವರು’ ಮತ್ತು ‘ಯುದ್ಧದಲ್ಲಿ ಪರಾಕ್ರಮಶಾಲಿಗಳಾದವರು’ ಎಂಬುದಾಗಿ ವರ್ಣಿಸಲ್ಪಟ್ಟಿದ್ದಾರೋ ಅವರ ನಡುವೆ ಗಿದ್ಯೋನನೂ ಒಬ್ಬನಾಗಿರುವುದನ್ನು ನಾವು ಗಮನಿಸಸಾಧ್ಯವಿದೆ.

^ ಪ್ಯಾರ. 16 ವಿನಯಶೀಲತೆಯಲ್ಲಿ ಒಬ್ಬನು ತನ್ನ ಇತಿಮಿತಿಗಳ ಅರಿವುಳ್ಳವನಾಗಿರುವುದು ಒಳಗೂಡಿದೆ. ಆದುದರಿಂದಲೇ, ಯೆಹೋವನು ವಿನಯಶೀಲನಾಗಿದ್ದಾನೆ ಎಂದು ನಾವು ಆತನ ಕುರಿತು ಹೇಳುವುದು ಸರಿಯಲ್ಲ. ಆದರೂ, ಆತನು ನಮ್ರನಾಗಿದ್ದಾನೆ.—ಕೀರ್ತನೆ 18:35.

ನೀವು ಜ್ಞಾಪಿಸಿಕೊಳ್ಳುವಿರೋ?

• ವಿನಯಶೀಲತೆ ಎಂದರೇನು?

• ಪೌಲನ ವಿನಯಶೀಲ ಗುಣವನ್ನು ನಾವು ಹೇಗೆ ಅನುಕರಿಸಬಲ್ಲೆವು?

• ವಿನಯಶೀಲತೆಯ ಕುರಿತಾದ ಗಿದ್ಯೋನನ ಉದಾಹರಣೆಯಿಂದ ನಾವೇನನ್ನು ಕಲಿಯಸಾಧ್ಯವಿದೆ?

• ಯೇಸು ಹೇಗೆ ವಿನಯಶೀಲಭಾವವನ್ನು ತೋರಿಸುವುದರಲ್ಲಿ ಅತ್ಯುತ್ತಮ ಮಾದರಿಯನ್ನಿಟ್ಟನು?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಪೌಲನ ವಿನಯಶೀಲತೆಯು ಅವನನ್ನು ತನ್ನ ಜೊತೆ ಕ್ರೈಸ್ತರ ಪ್ರೀತಿಗೆ ಪಾತ್ರನಾಗುವಂತೆ ಮಾಡಿತು

[ಪುಟ 17ರಲ್ಲಿರುವ ಚಿತ್ರ]

ದೇವರ ಚಿತ್ತವನ್ನು ಪೂರೈಸುವುದರಲ್ಲಿ ಗಿದ್ಯೋನನು ಬುದ್ಧಿವಂತಿಕೆಯನ್ನು ಉಪಯೋಗಿಸಿದನು

[ಪುಟ 18ರಲ್ಲಿರುವ ಚಿತ್ರ]

ದೇವಕುಮಾರನಾದ ಯೇಸು ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ವಿನಯಶೀಲತೆಯನ್ನು ತೋರಿಸುತ್ತಾನೆ