ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಸ್ತ್ರಗಳನ್ನು ಉತ್ಪಾದಿಸುವುದೆಲ್ಲಿ ಜೀವರಕ್ಷಕ ಕೆಲಸವೆಲ್ಲಿ?

ಶಸ್ತ್ರಗಳನ್ನು ಉತ್ಪಾದಿಸುವುದೆಲ್ಲಿ ಜೀವರಕ್ಷಕ ಕೆಲಸವೆಲ್ಲಿ?

ಜೀವನ ಕಥೆ

ಶಸ್ತ್ರಗಳನ್ನು ಉತ್ಪಾದಿಸುವುದೆಲ್ಲಿ ಜೀವರಕ್ಷಕ ಕೆಲಸವೆಲ್ಲಿ?

ಈಸೀಡಾರಸ್‌ ಈಸ್‌ಮೈಲೀಡಿಸ್‌ ಅವರು ಹೇಳಿದಂತೆ

“ಓಹ್‌, ನನ್ನ ದೇವರೇ, ನಾನು ಈ ಶಸ್ತ್ರಗಳನ್ನು ಉತ್ಪಾದಿಸುವ ಉದ್ಯೋಗದಲ್ಲಿ ಇನ್ನು ಮುಂದೆ ಕೆಲಸಮಾಡಲಾರೆ. ನನ್ನ ಮನಸ್ಸಾಕ್ಷಿ ನನ್ನನ್ನು ಚುಚ್ಚಿ ಚುಚ್ಚಿ ಘಾಸಿಗೊಳಿಸುತ್ತಿದೆ. ನಾನು ಕೆಲಸಕ್ಕಾಗಿ ಎಷ್ಟೇ ಅಲೆದಾಡಿದರೂ ನನಗೆ ಒಂದು ಕೆಲಸವೂ ಸಿಕ್ಕಿಲ್ಲ. ಆದರೂ ನಾನು ನಾಳೆ ರಾಜೀನಾಮೆ ಕೊಡುತ್ತಿದ್ದೇನೆ. ಯೆಹೋವನೇ, ನನ್ನ ನಾಲ್ಕು ಮಂದಿ ಮಕ್ಕಳು ಹಸಿವೆಯಿಂದ ನರಳುವಂತೆ ಮಾಡಬೇಡ, ನನ್ನ ದೇವರೇ ನನ್ನ ಕೈ ಬಿಡಬೇಡ” ಎಂದು ಮೊಣಕಾಲೂರಿ ಪ್ರಾರ್ಥಿಸಿದೆ. ನನ್ನ ಕಣ್ಣುಗಳಿಂದ ನೀರು ಒಂದೇ ಸಮನೆ ನನ್ನ ಕೆನ್ನೆಯ ಮೇಲೆ ಹರಿಯುತ್ತಿತ್ತು. ನಾನು ಈ ಸ್ಥಿತಿಗೆ ಬಂದದ್ದು ಹೇಗೆ?

ನಾ ನು ಇಸವಿ 1932ರಲ್ಲಿ ಉತ್ತರದ ಗ್ರೀಸಿನ ಡ್ರಾಮಾ ಎಂಬ ಸ್ಥಳದಲ್ಲಿ ಹುಟ್ಟಿದೆ. ಅಲ್ಲಿ ಜೀವನವು ನಿರುಮ್ಮಳವಾಗಿಯೂ ನಿರಾಡಂಬರವಾಗಿಯೂ ಸಾಗುತ್ತಿತ್ತು. ನಾನು ಜೀವನದಲ್ಲಿ ಏನನ್ನು ಸಾಧಿಸಬೇಕು ಎಂಬುದರ ಬಗ್ಗೆ ತಂದೆ ಯಾವಾಗಲೂ ನನ್ನ ಹತ್ತಿರ ಮಾತಾಡುತ್ತಿದ್ದರು. ಶಿಕ್ಷಣವನ್ನು ಪಡೆದುಕೊಳ್ಳಲು ಅಮೆರಿಕಕ್ಕೆ ಹೋಗುವಂತೆ ನನ್ನ ತಂದೆ ನನ್ನನ್ನು ಉತ್ತೇಜಿಸಿದರು. IIನೇ ವಿಶ್ವ ಯುದ್ಧದ ಸಮಯದಲ್ಲಿ ಗ್ರೀಸ್‌ ದೇಶವು ಲೂಟಿಮಾಡಲ್ಪಟ್ಟಿದ್ದರಿಂದ, ಗ್ರೀಕರು ಹೀಗೆ ಹೇಳುತ್ತಿದ್ದರು: “ನೀವು ನಮ್ಮ ಸಿರಿಸಂಪತ್ತುಗಳನ್ನು ಲೂಟಿಮಾಡಬಹುದು, ಆದರೆ ನಮ್ಮ ತಲೆಯಲ್ಲಿ ಏನಿದೆಯೋ ಅದನ್ನು ಲೂಟಿಮಾಡಸಾಧ್ಯವಿಲ್ಲ.” ಆದುದರಿಂದ, ಯಾರೊಬ್ಬರೂ ನನ್ನಿಂದ ಕಸಿದುಕೊಳ್ಳಲಾರದಂತಹ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ನಾನು ಮನಸ್ಸುಮಾಡಿದೆ.

ನಾನು ಯುವಕನಾಗಿದ್ದಾಗಲೇ, ಗ್ರೀಕ್‌ ಆರ್ತೊಡಾಕ್ಸ್‌ ಚರ್ಚಿನಿಂದ ಏರ್ಪಡಿಸಲ್ಪಟ್ಟ ಹಲವಾರು ಯೂತ್‌ ಗ್ರೂಪುಗಳಲ್ಲಿ ಒಳಗೂಡಿದ್ದೆ. ಅಪಾಯಕಾರಿ ಪಂಥಗಳಿಂದ ದೂರವಿರುವಂತೆ ಅಲ್ಲಿ ನಮಗೆ ಹೇಳಲಾಗುತ್ತಿತ್ತು. ಅವುಗಳಲ್ಲಿ ಒಂದು ಗುಂಪು ಯೆಹೋವನ ಸಾಕ್ಷಿಗಳಾಗಿದ್ದಾರೆ ಎಂದು ಹೇಳಲಾಗಿದ್ದ ವಿಷಯವು ನನಗೆ ನಿರ್ದಿಷ್ಟವಾಗಿ ಇನ್ನೂ ಚೆನ್ನಾಗಿ ನೆನಪಿದೆ. ಅವರು ಕ್ರಿಸ್ತ ವಿರೋಧಿಗಳಾಗಿದ್ದಾರೆ ಎಂದು ಹೇಳಲಾಗಿತ್ತು.

ಇಸವಿ 1953ರಲ್ಲಿ ಏಥೆನ್ಸ್‌ನ ಟೆಕ್ನಿಕಲ್‌ ಸ್ಕೂಲಿನಿಂದ ಪದವಿಯನ್ನು ಪಡೆದ ನಂತರ, ನಾನು ಜರ್ಮನಿಗೆ ಪ್ರಯಾಣ ಬೆಳೆಸಿದೆ. ಅಲ್ಲಿ ಒಂದು ಕೆಲಸವನ್ನು ಕಂಡುಕೊಳ್ಳುವುದು ಮತ್ತು ಅದೇ ಸಮಯದಲ್ಲಿ ಶಿಕ್ಷಣವನ್ನು ಮುಂದುವರೆಸುವುದು ನನ್ನ ಉದ್ದೇಶವಾಗಿತ್ತು. ಆದರೆ ಹಾಗೇ ಮಾಡಲಾಗಲಿಲ್ಲವಾದುದರಿಂದ ನಾನು ಇನ್ನಿತರ ದೇಶಗಳಿಗೆ ಹೋದೆ. ಕೆಲವೊಂದು ವಾರಗಳ ಅನಂತರ, ಕೈಯಲ್ಲಿ ಪುಡಿಗಾಸಿಲ್ಲದೆ ಕಂಗಾಲಾಗಿ ನಾನು ಬೆಲ್ಜಿಯಮ್‌ ಬಂದರಿನಲ್ಲಿ ನಿಂತಿದ್ದೆ. ಆಗ ನಾನೇನು ಮಾಡಿದೆ ಎಂಬುದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಒಂದು ಚರ್ಚಿನೊಳಗೆ ಹೋಗಿ, ಕುಳಿತುಕೊಂಡು ಜೋರಾಗಿ ಅತ್ತುಬಿಟ್ಟೆ. ನಾನು ಎಷ್ಟು ಅತ್ತೆನೆಂದರೆ ನೆಲವು ಸಹ ಕಣ್ಣೀರಿನಿಂದ ತೋಯ್ದಿತ್ತು. ದೇವರೇನಾದರೂ ನನಗೆ ಅಮೆರಿಕಕ್ಕೆ ಹೋಗಲು ಸಹಾಯಮಾಡಿದರೆ, ನಾನು ಭೌತಿಕ ಸಂಪತ್ತುಗಳನ್ನಲ್ಲ, ಬದಲಿಗೆ ಶಿಕ್ಷಣವನ್ನು ಪಡೆದುಕೊಂಡು ಒಬ್ಬ ಒಳ್ಳೆಯ ಕ್ರೈಸ್ತನಾಗಲು ಹಾಗೂ ಒಳ್ಳೆಯ ನಾಗರಿಕನಾಗಲು ಪ್ರಯತ್ನಿಸುವೆ ಎಂದು ಪ್ರಾರ್ಥಿಸಿದೆ. ಹೇಗೋ ಕೊನೆಗೆ ನಾನು 1957ರಲ್ಲಿ ಅಮೆರಿಕಕ್ಕೆ ಹೋಗಿ ಸೇರಿದೆ.

ಅಮೆರಿಕದಲ್ಲಿ ಹೊಸ ಜೀವನ

ವಲಸೆ ಬಂದಂತಹ ನನ್ನಂತಹವನಿಗೆ ಅಮೆರಿಕದ ಜೀವನವು ಸುಲಭವಾದದ್ದಾಗಿರಲಿಲ್ಲ. ಏಕೆಂದರೆ ಒಂದು ನನಗೆ ಅಲ್ಲಿನ ಭಾಷೆ ಬರುತ್ತಿರಲಿಲ್ಲ, ಇನ್ನೊಂದು ನನ್ನ ಕೈಯಲ್ಲಿ ಹಣವಿರಲಿಲ್ಲ. ರಾತ್ರಿ ಸಮಯದಲ್ಲಿ ನಾನು ಎರಡು ಸ್ಥಳಗಳಲ್ಲಿ ಕೆಲಸಮಾಡುತ್ತಿದ್ದೆ ಮತ್ತು ಹಗಲಿನ ಹೊತ್ತಿನಲ್ಲಿ ಶಾಲೆಗೆ ಹೋಗುತ್ತಿದ್ದೆ. ಹಲವಾರು ಕಾಲೇಜುಗಳಲ್ಲಿ ಓದಿ, ಡಿಪ್ಲೊಮಾವನ್ನು ಪಡೆದುಕೊಂಡೆ. ಅನಂತರ ನಾನು ಲಾಸ್‌ ಏಂಜಲೀಸ್‌ನಲ್ಲಿರುವ ಕ್ಯಾಲಿಫೋರ್ನಿಯದ ವಿಶ್ವವಿದ್ಯಾನಿಲಯಕ್ಕೆ ಹೋಗಿ, ಅಲ್ಲಿ ಪ್ರಾಯೋಗಿಕ ಭೌತವಿಜ್ಞಾನದಲ್ಲಿ ಬ್ಯಾಚ್ಯುಲರ್‌ ಆಫ್‌ ಸೈಎನ್ಸ್‌ ಡಿಗ್ರಿಯನ್ನು ಪಡೆದುಕೊಂಡೆ. ಈ ಎಲ್ಲ ಕಷ್ಟಕರ ಸಮಯಗಳಲ್ಲೂ, ಶಿಕ್ಷಣವನ್ನು ಪಡೆದುಕೊಳ್ಳುವ ವಿಷಯದಲ್ಲಿ ತಂದೆ ಹೇಳಿದಂತಹ ಮಾತುಗಳು ನನಗೆ ಮುಂದೆ ಮುಂದೆ ಸಾಗುವಂತೆ ಸಹಾಯಮಾಡಿತು.

ಈ ಸಮಯದಲ್ಲೇ, ನೋಡಲು ಸುಂದರಳಾಗಿದ್ದ ಒಬ್ಬ ಗ್ರೀಕ್‌ ಹುಡುಗಿಯನ್ನು ನಾನು ಸಂಧಿಸಿದೆ. ಅವಳ ಹೆಸರು ಎಕಾಟಿರೀನೀ ಎಂದಾಗಿತ್ತು ಮತ್ತು ನಾವು 1964ರಲ್ಲಿ ಮದುವೆಯಾದೆವು. ನಮ್ಮ ಮೊದಲನೇ ಮಗನು, ಮದುವೆಯಾಗಿ ಮೂರು ವರ್ಷಗಳ ನಂತರ ಹುಟ್ಟಿದನು. ಮುಂದಿನ ನಾಲ್ಕು ವರ್ಷಗಳೊಳಗೆ ನಮಗೆ ಇನ್ನೂ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಹುಟ್ಟಿದರು. ಕುಟುಂಬವನ್ನು ನೋಡಿಕೊಂಡು, ಅದೇ ಸಮಯದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಓದುವುದು ತುಂಬ ಕಷ್ಟಕರವಾಗಿತ್ತು.

ಕ್ಯಾಲಿಫೋರ್ನಿಯದ ಸನೀವೇಲ್‌ನಲ್ಲಿ ಕ್ಷಿಪಣಿ ಮತ್ತು ಅಂತರಿಕ್ಷದ ಕಂಪನಿಯೊಂದರಲ್ಲಿ ನಾನು ಅಮೆರಿಕದ ವಾಯು ಪಡೆಗಾಗಿ ಕೆಲಸಮಾಡುತ್ತಿದ್ದೆ. ಅಗೆನ ಮತ್ತು ಅಪೋಲೋ ಪ್ರೋಗ್ರ್ಯಾಮ್‌ಗಳನ್ನು ಒಳಗೊಂಡು, ನಾನು ಅನೇಕ ವಾಯು ಹಾಗೂ ಅಂತರಿಕ್ಷದ ಪ್ರಾಜೆಕ್ಟ್‌ಗಳಲ್ಲಿ ಒಳಗೂಡಿದ್ದೆ. ಅಪೋಲೋ 8 ಮತ್ತು ಅಪೋಲೋ 11ನೆಯ ಮಿಷನ್‌ಗಳಲ್ಲಿ ಕೆಲಸಮಾಡಿದ್ದಕ್ಕಾಗಿ ನನಗೆ ಪದಕಗಳು ಸಹ ಸಿಕ್ಕಿದವು. ಅದರ ನಂತರ, ನಾನು ನನ್ನ ಶಿಕ್ಷಣವನ್ನು ಮುಂದುವರೆಸಿದೆ ಹಾಗೂ ಅನೇಕ ಮಿಲಿಟರಿ ಬಾಹ್ಯಾಕಾಶದ ಪ್ರಾಜೆಕ್ಟ್‌ಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋದೆ. ನನ್ನ ಜೀವನವು ತೃಪ್ತಿದಾಯಕವಾಗಿದೆ, ನನ್ನ ಬಳಿ ಎಲ್ಲವೂ ಇದೆ ಎಂದು ನನಗೆ ಅನಿಸಿತು—ಚೆಲುವೆಯಾದ ಪತ್ನಿ, ನಾಲ್ಕು ಮುದ್ದಾದ ಮಕ್ಕಳು, ಪ್ರತಿಷ್ಠಿತವಾದೊಂದು ಉದ್ಯೋಗ, ಮತ್ತು ಭವ್ಯವಾದ ಮನೆ. ಜೀವನದಲ್ಲಿ ಇದಕ್ಕಿಂತಲೂ ಇನ್ನೇನು ಬೇಕು?

ಪಟ್ಟುಬಿಡದ ಗೆಳೆಯ

ಇಸವಿ 1967ರ ಆದಿಭಾಗದಲ್ಲಿ, ನಾನು ಜಿಮ್‌ ಎಂಬ ಒಬ್ಬ ವ್ಯಕ್ತಿಯನ್ನು ಸಂಧಿಸಿದೆ. ಅವನು ಬಹಳ ದೀನನೂ ದಯಾಪರನೂ ಆದ ವ್ಯಕ್ತಿಯಾಗಿದ್ದನು. ಜಿಮ್‌ನ ಮುಖದಲ್ಲಿ ಯಾವಾಗಲೂ ನಗು ಲಾಸ್ಯವಾಡುತ್ತಿರುತ್ತಿತ್ತು. ಮತ್ತು ನನ್ನೊಂದಿಗೆ ಕಾಫಿಯನ್ನು ಕುಡಿಯಲು ಬರುವಂತೆ ನಾನು ಅವನನ್ನು ಕರೆಯುತ್ತಿದ್ದಾಗಲೆಲ್ಲ ಅವನು ಇಲ್ಲ ಎನ್ನುತ್ತಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಅವನು ಬೈಬಲಿನಿಂದ ಕೆಲವೊಂದು ವಿಷಯಗಳನ್ನು ನನಗೆ ಹೇಳುತ್ತಿದ್ದನು. ತಾನು ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಾಸಮಾಡುತ್ತಿದ್ದೇನೆ ಎಂದು ಜಿಮ್‌ ನನಗೆ ಹೇಳಿದ.

ಈ ಧಾರ್ಮಿಕ ಗುಂಪಿನೊಂದಿಗೆ ಜಿಮ್‌ ಸೇರಿಕೊಂಡಿಬಿಟ್ಟಿದ್ದಾನೆ ಎಂಬ ಈ ಸುದ್ದಿಯನ್ನು ಕೇಳಿಸಿಕೊಂಡಾಗ ನಾನು ತಲ್ಲಣಗೊಂಡೆ. ಕ್ರಿಸ್ತ ವಿರೋಧಿಗಳ ಈ ಪಂಥಕ್ಕೆ ಇಂತಹ ಒಬ್ಬ ಒಳ್ಳೆಯ ವ್ಯಕ್ತಿ ಹೇಗೆ ಸೇರಿಕೊಂಡ? ಅದು ಹೇಗೆ ಸಾಧ್ಯ? ಎಂದು ನಾನು ನೆನಸಿದೆ. ಆದರೆ ನನಗೆ ಜಿಮ್‌ನನ್ನು ತಡೆಯಲು ಸಾಧ್ಯವಾಗಲಿಲ್ಲ ಏಕೆಂದರೆ, ಅವನು ನನ್ನಲ್ಲಿ ತೋರಿಸುತ್ತಿದ್ದ ಆಸಕ್ತಿ ಹಾಗೂ ಅವನ ದಯಾಪರ ನಡತೆಯು ನನ್ನ ಬಾಯಿಯನ್ನು ಕಟ್ಟಿಹಾಕಿತು. ಪ್ರತಿ ದಿನವೂ ಅವನು ನನಗೆ ಬೇರೆ ಬೇರೆ ವಿಷಯಗಳ ಕುರಿತು ಏನಾದರೊಂದು ಸಾಹಿತ್ಯವನ್ನು ಓದಲು ಕೊಡುತ್ತಿದ್ದ. ಉದಾಹರಣೆಗೆ, ಒಂದು ದಿನ ಅವನು ನನ್ನ ಆಫೀಸಿಗೆ ಬಂದು, “ಈಸೀಡಾರಸ್‌, ಈ ಕಾವಲಿನಬುರುಜು ಪತ್ರಿಕೆಯಲ್ಲಿರುವ ಲೇಖನವು ಕುಟುಂಬ ಜೀವನವನ್ನು ಹೇಗೆ ಬಲಪಡಿಸಬೇಕು ಎಂಬುದರ ಬಗ್ಗೆ ಮಾತಾಡುತ್ತದೆ. ಇದನ್ನು ಮನೆಗೆ ತೆಗೆದುಕೊಂಡು ಹೋಗಿ, ನಿನ್ನ ಹೆಂಡತಿಯೊಂದಿಗೆ ಓದು” ಎಂದು ಹೇಳಿದ. ಈ ಸಂಚಿಕೆಯನ್ನು ನಾನು ಓದುತ್ತೇನೆ ಎಂದು ಹೇಳಿದೆನಾದರೂ, ನಂತರ ನಾನು ಶೌಚಾಲಯಕ್ಕೆ ಹೋಗಿ, ಆ ಪತ್ರಿಕೆಯನ್ನು ಚೂರುಚೂರು ಮಾಡಿ ಹರಿದು, ಅಲ್ಲಿದ್ದ ಕಸದ ಬುಟ್ಟಿಯಲ್ಲಿ ಹಾಕಿಬಿಟ್ಟೆ.

ಮೂರು ವರ್ಷಗಳ ಕಾಲ, ಜಿಮ್‌ ಕೊಟ್ಟ ಪ್ರತಿಯೊಂದು ಪುಸ್ತಕವನ್ನೂ ಪತ್ರಿಕೆಯನ್ನೂ ಹೀಗೆ ಹರಿದು ಬಿಸಾಡಿಬಿಟ್ಟೆ. ಯೆಹೋವನ ಸಾಕ್ಷಿಗಳ ಕುರಿತಾಗಿ ನನಗೆ ಪೂರ್ವ ಕಲ್ಪಿತ ಅಭಿಪ್ರಾಯವಿತ್ತು. ಆದರೆ ಜಿಮ್‌ನ ಸ್ನೇಹವನ್ನು ಕಾಪಾಡಿಕೊಳ್ಳುವುದಕ್ಕಾಗಿ, ಅವನು ಏನು ಹೇಳುತ್ತಿದ್ದನೋ ಅದನ್ನು ಈ ಕಿವಿಯಿಂದ ಕೇಳಿಸಿಕೊಂಡು ಆ ಕಿವಿಯಿಂದ ಬಿಟ್ಟುಬಿಡುವುದೇ ಒಳ್ಳೆಯದು ಎಂದು ನಾನು ನೆನಸಿದೆ.

ಹೀಗಿದ್ದರೂ, ನಾನು ನಂಬುತ್ತಿದ್ದ ಹಾಗೂ ಮಾಡುತ್ತಿದ್ದ ಅನೇಕ ವಿಷಯಗಳು ಬೈಬಲ್‌ನ ಮೇಲೆ ಆಧರಿಸಲ್ಪಟ್ಟಿಲ್ಲ ಎಂಬುದು ನನಗೆ ಆ ಚರ್ಚೆಗಳಿಂದ ತಿಳಿದುಬಂತು. ತ್ರಯೈಕ್ಯ, ನರಕಾಗ್ನಿ, ಮತ್ತು ಆತ್ಮದ ಅಮರತ್ವದ ಬೋಧನೆಗಳು ಶಾಸ್ತ್ರೀಯವಲ್ಲ ಎಂಬುದನ್ನು ನಾನು ತಿಳಿದುಕೊಂಡೆ. (ಪ್ರಸಂಗಿ 9:10; ಯೆಹೆಜ್ಕೇಲ 18:4; ಯೋಹಾನ 20:17) ನಾನೊಬ್ಬ ಗ್ರೀಕ್‌ ಆರ್ತೊಡಾಕ್ಸ್‌ ವ್ಯಕ್ತಿಯಾಗಿದ್ದೇನೆಂಬ ಹೆಮ್ಮೆ ನನ್ನಲ್ಲಿದದ್ದರಿಂದ, ಜಿಮ್‌ ಹೇಳುತ್ತಿದ್ದ ವಿಷಯಗಳು ಸರಿಯಾಗಿದ್ದವು ಎಂಬುದನ್ನು ಎಲ್ಲರ ಮುಂದೆ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಆದರೆ ಅವನು ಯಾವುದೇ ವಿಷಯದ ಕುರಿತಾಗಲಿ ತನ್ನ ಸ್ವಂತ ಅಭಿಪ್ರಾಯವನ್ನು ಕೊಡಲಿಲ್ಲ. ಅದಕ್ಕೆ ಬದಲಾಗಿ ಎಲ್ಲದಕ್ಕೂ ಅವನು ಬೈಬಲನ್ನು ಉಪಯೋಗಿಸುತ್ತಿದ್ದನು. ಆದುದರಿಂದ ಈ ವ್ಯಕ್ತಿಯ ಬಳಿ ನನಗೋಸ್ಕರ ಬೈಬಲಿನ ಅತ್ಯಮೂಲ್ಯ ಸಂದೇಶವೊಂದಿದೆ ಎಂಬುದನ್ನು ಕೊನೆಗೆ ನಾನು ಕಂಡುಕೊಂಡೆ.

ಏನೋ ನಡೆಯುತ್ತಿದೆ ಎಂಬುದನ್ನು ನನ್ನ ಹೆಂಡತಿಯು ಕಂಡುಹಿಡಿದುಬಿಟ್ಟಳು. ಸಾಕ್ಷಿಗಳೊಂದಿಗೆ ಸಹವಾಸವನ್ನಿಟ್ಟಿದ್ದ ನನ್ನ ಸ್ನೇಹಿತನೊಂದಿಗೆ ನಾನೇನಾದರೂ ಮಾತಾಡಿದ್ದೇನೋ ಎಂಬುದನ್ನು ಅವಳು ನನಗೆ ಕೇಳಿದಳು. ನಾನು ಮಾತಾಡಿದೆ ಎಂದು ಹೇಳಿದಾಗ ಅವಳು ಹೇಳಿದ್ದು: “ಬೇರೆ ಯಾವುದೇ ಚರ್ಚಿಗಾದರೂ ನಾವು ಹೋಗುವಾ, ಆದರೆ ಯೆಹೋವನ ಸಾಕ್ಷಿಗಳ ಚರ್ಚಿಗೆ ಮಾತ್ರ ಬೇಡ.” ಆದರೆ ಆದದ್ದೇ ಬೇರೆ. ಬೇಗನೇ ನಾನು ಮತ್ತು ನನ್ನ ಹೆಂಡತಿ, ಮಕ್ಕಳು ಎಲ್ಲರೂ ಸಾಕ್ಷಿಗಳ ಕೂಟಗಳಿಗೆ ಕ್ರಮವಾಗಿ ಹೋಗುತ್ತಿದ್ದೆವು.

ಕಷ್ಟಕರವಾದೊಂದು ನಿರ್ಣಯ

ಬೈಬಲನ್ನು ಅಧ್ಯಯನ ಮಾಡುತ್ತಿರುವಾಗ, ನಾನು ಪ್ರವಾದಿಯಾದ ಯೆಶಾಯನ ಈ ಮಾತುಗಳನ್ನು ಓದಿದೆ: “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” (ಯೆಶಾಯ 2:4) ‘ಶಾಂತಿಪ್ರಿಯನಾದ ದೇವರ ಒಬ್ಬ ಸೇವಕನು, ವಿನಾಶಕಾರಿ ಶಸ್ತ್ರಗಳನ್ನು ವಿನ್ಯಾಸಿಸುವ ಹಾಗೂ ಉತ್ಪಾದಿಸುವ ಕೆಲಸದಲ್ಲಿ ಹೇಗೆ ತಾನೇ ಇರಸಾಧ್ಯ?’ ಎಂದು ನನಗೆ ನಾನೇ ಪ್ರಶ್ನಿಸಿಕೊಂಡೆ. (ಕೀರ್ತನೆ 46:9) ನಾನು ನನ್ನ ಉದ್ಯೋಗವನ್ನು ಬದಲಾಯಿಸಲೇಬೇಕು ಎಂಬ ತೀರ್ಮಾನಕ್ಕೆ ಬರಲು ಬಹಳ ಸಮಯ ಹಿಡಿಸಲಿಲ್ಲ.

ನಿಜವಾಗಿಯೂ ಇದು ಒಂದು ದೊಡ್ಡ ಪರೀಕ್ಷೆಯಾಗಿತ್ತು. ನನ್ನ ಕೈಯಲ್ಲಿ ಪ್ರತಿಷ್ಠಿತ ಉದ್ಯೋಗವಿತ್ತು. ಈ ಹಂತಕ್ಕೆ ಬಂದು ತಲುಪಲು, ನಾನು ಎಷ್ಟೋ ವರ್ಷಗಳ ವರೆಗೆ ಬಹಳಷ್ಟು ಕಷ್ಟಪಟ್ಟಿದ್ದೆ, ಅದಕ್ಕಾಗಿ ಶಿಕ್ಷಣವನ್ನು ಪಡೆದುಕೊಂಡಿದ್ದೆ ಹಾಗೂ ಅನೇಕ ತ್ಯಾಗಗಳನ್ನು ಮಾಡಿದ್ದೆ. ನಾನು ಉತ್ತುಂಗಕ್ಕೇರಿದ್ದೆ, ಆದರೆ ಈಗ ನಾನು ನನ್ನ ವೃತ್ತಿಯನ್ನೇ ಬಿಡಬೇಕಾಗಿತ್ತು. ಆದರೆ ಯೆಹೋವನ ಮೇಲಿದ್ದ ಗಾಢವಾದ ಪ್ರೀತಿ ಹಾಗೂ ಆತನ ಚಿತ್ತವನ್ನು ಮಾಡಲು ನನಗಿದ್ದ ಅತ್ಯಭಿಲಾಷೆಯು ಜಯಹೊಂದಿತು.—ಮತ್ತಾಯ 7:21.

ವಾಷಿಂಗ್ಟನ್‌ನ ಸೀಯಟಲ್‌ನಲ್ಲಿರುವ ಒಂದು ಕಂಪನಿಯಲ್ಲಿ ಕೆಲಸಮಾಡಲು ನಾನು ನಿರ್ಧರಿಸಿದೆ. ಆದರೆ ಇದು ನಿರಾಶೆಯನ್ನು ಉಂಟುಮಾಡಿತು, ಏಕೆಂದರೆ ಯೆಶಾಯ 2:4ಕ್ಕೆ ಹೊಂದಾಣಿಕೆಯಲ್ಲಿಲ್ಲದ ಕೆಲಸದಲ್ಲಿ ನಾನು ಇನ್ನೂ ಹೆಚ್ಚಿನ ರೀತಿಯಲ್ಲಿ ಒಳಗೊಂಡಿದ್ದೇನೆಂದು ನನಗೆ ತಿಳಿದುಬಂತು. ಬೇರೆ ಪ್ರಾಜೆಕ್ಟ್‌ಗಳಲ್ಲಿ ಕೆಲಸಮಾಡಲು ನಾನು ಮಾಡಿದ ಪ್ರಯತ್ನಗಳು ಸೋತವು ಮತ್ತು ಪುನಃ ನನ್ನ ಮನಸ್ಸಾಕ್ಷಿ ನನ್ನನ್ನು ಚುಚ್ಚಲಾರಂಭಿಸಿತು. ಈ ಕೆಲಸವನ್ನು ಮಾಡಿದಲ್ಲಿ ನಾನು ಒಂದು ಒಳ್ಳೆಯ ಶುದ್ಧವಾದ ಮನಸ್ಸಾಕ್ಷಿಯನ್ನು ಹೊಂದಿರಸಾಧ್ಯವಿಲ್ಲ ಎಂಬುದನ್ನು ನಾನು ಮನಗಂಡೆ.—1 ಪೇತ್ರ 3:21.

ನಾವು ಬಹಳ ಮುಖ್ಯವಾದ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂಬುದು ಸ್ಪಷ್ಟವಾಯಿತು. ಆರು ತಿಂಗಳುಗಳೊಳಗೆ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡೆವು ಮತ್ತು ನಮ್ಮ ಕುಟುಂಬದ ಖರ್ಚನ್ನು ಅರ್ಧಕ್ಕೆ ಇಳಿಸಿದೆವು. ಆಮೇಲೆ ನಾವು ನಮ್ಮ ಭವ್ಯವಾದ ಮನೆಯನ್ನು ಮಾರಿ, ಕೊಲಾರಡೋದ ಡೆನ್‌ವರ್‌ನಲ್ಲಿ ಒಂದು ಪುಟ್ಟ ಮನೆಯನ್ನು ಖರೀದಿಸಿದೆವು. ಈಗ ನಾನು ನನ್ನ ಕೊನೆಯ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೆ—ಅದು ನನ್ನ ಕೆಲಸವನ್ನು ಬಿಡುವುದೇ ಆಗಿತ್ತು. ನಾನು ನನ್ನ ಮನಸ್ಸಾಕ್ಷಿಯ ಕಾರಣದಿಂದ ಈ ಕೆಲಸವನ್ನು ಮಾಡಲಾಗುವುದಿಲ್ಲ ಎಂಬುದನ್ನು ವಿವರಿಸುತ್ತಾ ನಾನು ರಾಜೀನಾಮೆ ಪತ್ರವನ್ನು ಟೈಪ್‌ ಮಾಡಿದೆ. ನಮ್ಮ ಮಕ್ಕಳೆಲ್ಲ ನಿದ್ರೆಹೋದ ಮೇಲೆ, ಆ ರಾತ್ರಿಯಂದು ನಾನು ಮತ್ತು ನನ್ನ ಪತ್ನಿ ಮೊಣಕಾಲೂರಿ ಯೆಹೋವನಿಗೆ ಪ್ರಾರ್ಥಿಸಿದೆವು. ನಾನು ಲೇಖನದ ಆರಂಭದಲ್ಲಿ ವಿವರಿಸಿದ ಸನ್ನಿವೇಶವು ಇದೇ ಆಗಿತ್ತು.

ಒಂದು ತಿಂಗಳೊಳಗೆ ನಾವು ಡೆನ್‌ವರ್‌ಗೆ ಸ್ಥಳಾಂತರಿಸಿದೆವು. ಅಲ್ಲಿಗೆ ಹೋಗಿ ಸುಮಾರು ಎರಡು ವಾರಗಳ ಅನಂತರ, ಅಂದರೆ 1975, ಜುಲೈ ತಿಂಗಳಿನಲ್ಲಿ ನಾನು ಮತ್ತು ನನ್ನ ಪತ್ನಿ ದೀಕ್ಷಾಸ್ನಾನ ಪಡೆದುಕೊಂಡೆವು. ಆರು ತಿಂಗಳುಗಳ ಕಾಲ ನಾನು ಕೆಲಸ ಇಲ್ಲದೆ ಇದ್ದೆ. ನಮ್ಮ ಕೈಯಲ್ಲಿ ಇದ್ದಬದ್ದ ಹಣವೆಲ್ಲವೂ ಸ್ವಲ್ಪ ಸ್ವಲ್ಪವಾಗಿ ಮೇಣದಂತೆ ಕರಗಿಹೋಗುತ್ತಿತ್ತು. ಏಳನೆಯ ತಿಂಗಳೊಳಗೆ ನಮ್ಮ ಉಳಿತಾಯ ಖಾತೆಯಲ್ಲಿದ್ದ ಹಣವು, ನಾವು ನಮ್ಮ ಮನೆಯ ಸಾಲವನ್ನು ತೀರಿಸಲಿಕ್ಕಾಗಿ ಪ್ರತಿ ತಿಂಗಳು ಕೊಡಬೇಕಾಗಿದ್ದ ಹಣಕ್ಕಿಂತಲೂ ಕಡಿಮೆಯಾಗಿತ್ತು. ಯಾವುದಾದರೂ ಚಿಕ್ಕಪುಟ್ಟ ಕೆಲಸ ಸಿಕ್ಕುತ್ತದೋ ಎಂದು ನಾನು ಹುಡುಕುತ್ತಿದ್ದೆ, ಆಗ ನನಗೆ ಒಂದು ಎಂಜಿನಿಯರ್‌ ಕೆಲಸ ಸಿಕ್ಕಿತು. ನನಗೆ ಈ ಮುಂಚೆ ಸಿಗುತ್ತಿದ್ದ ಸಂಬಳದಲ್ಲಿ ಅರ್ಧದಷ್ಟು ಮಾತ್ರ ಈ ಕೆಲಸದಲ್ಲಿ ಸಿಕ್ಕುತ್ತಿತ್ತು. ಆದರೆ ನಾನು ಯೆಹೋವನಲ್ಲಿ ಕೇಳಿಕೊಂಡದ್ದಕ್ಕಿಂತಲೂ ಇದು ಬಹಳ ಹೆಚ್ಚಾಗಿತ್ತು. ಏನೇ ಆಗಲಿ ಆತ್ಮಿಕ ವಿಷಯಗಳಿಗೆ ಮೊದಲನೇ ಸ್ಥಾನವನ್ನು ಕೊಟ್ಟಿದ್ದಕ್ಕಾಗಿ ನಾನೆಷ್ಟು ಸಂತೋಷಿತನಾಗಿದ್ದೆ!—ಮತ್ತಾಯ 6:33.

ಯೆಹೋವನನ್ನು ಪ್ರೀತಿಸುವಂತಹ ರೀತಿಯಲ್ಲಿ ನಮ್ಮ ಮಕ್ಕಳನ್ನು ಬೆಳೆಸುವುದು

ನಮ್ಮ ನಾಲ್ಕು ಮಂದಿ ಮಕ್ಕಳನ್ನು ದೈವಿಕ ತತ್ತ್ವಗಳಿಗೆ ಹೊಂದಿಕೆಯಲ್ಲಿ ಬೆಳೆಸುವುದು ನಿಜವಾಗಿಯೂ ಒಂದು ಸವಾಲಾಗಿತ್ತು. ನಾನು ಮತ್ತು ಎಕಾಟಿರೀನೀ ಈ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದೆವು. ಸಂತೋಷದ ಸಂಗತಿಯೇನೆಂದರೆ, ಇವರೆಲ್ಲರೂ ಯೆಹೋವನ ಸಹಾಯದಿಂದ ಪ್ರೌಢ ಕ್ರೈಸ್ತರಾಗಿದ್ದಾರೆ ಮತ್ತು ಬಹು ಮುಖ್ಯ ಕೆಲಸವಾದ ರಾಜ್ಯ ಪ್ರಚಾರ ಕಾರ್ಯಕ್ಕೆ ತಮ್ಮ ಜೀವಿತವನ್ನು ಮುಡಿಪಾಗಿಟ್ಟುಕೊಂಡಿದ್ದಾರೆ. ನಮ್ಮ ಮೂವರು ಗಂಡು ಮಕ್ಕಳಾದ ಕ್ರೀಸ್ಟೊಸ್‌, ಲೇಕೀಸ್‌ ಮತ್ತು ಗ್ರೆಗರಿ ಮಿನಿಸ್ಟೀರಿಯಲ್‌ ಟ್ರೇನಿಂಗ್‌ ಸ್ಕೂಲಿನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. ಮತ್ತು ಈಗ ಬೇರೆ ಬೇರೆ ನೇಮಕಗಳಲ್ಲಿ ಕೆಲಸಮಾಡಿಕೊಂಡಿದ್ದು, ಸಭೆಗಳನ್ನು ಸಂದರ್ಶಿಸುವುದರಲ್ಲಿ ಮತ್ತು ಬಲಪಡಿಸುವುದರಲ್ಲಿ ತಮ್ಮನ್ನು ವ್ಯಯಿಸಿಕೊಂಡಿದ್ದಾರೆ. ನಮ್ಮ ಮಗಳಾದ ಟೂಲಾ ನ್ಯೂ ಯಾರ್ಕ್‌ನ ಯೆಹೋವನ ಸಾಕ್ಷಿಗಳ ಕಾರ್ಯಾಲಯದಲ್ಲಿ ಸ್ವಯಂಸೇವಕಿಯಾಗಿ ಕೆಲಸಮಾಡುತ್ತಿದ್ದಾಳೆ. ಯೆಹೋವನಿಗೆ ಸೇವೆಯನ್ನು ಸಲ್ಲಿಸುವುದಕ್ಕಾಗಿ, ಇವರೆಲ್ಲರೂ ತಮ್ಮ ಒಳ್ಳೆಯ ವೃತ್ತಿಯನ್ನು ಮತ್ತು ಕೈತುಂಬ ಸಂಪಾದಿಸಬಹುದಾದ ಕೆಲಸಗಳನ್ನು ಬಿಟ್ಟುಬಿಟ್ಟಾಗ ನಮ್ಮ ಹೃದಯವು ಸಂತೋಷದಿಂದ ಉಬ್ಬಿಹೋಯಿತು.

ಇಷ್ಟೊಂದು ಯಶಸ್ವಿಕರವಾಗಿ ಮಕ್ಕಳನ್ನು ಹೇಗೆ ಬೆಳೆಸಿದಿರಿ ಎಂದು ಅನೇಕರು ನಮ್ಮನ್ನು ಕೇಳಿದ್ದಾರೆ. ಮಕ್ಕಳನ್ನು ಬೆಳೆಸುವುದಕ್ಕೆ ಇಂತಿಂತಹದ್ದು ಎಂಬ ನಿರ್ದಿಷ್ಟವಾದ ತತ್ತ್ವವಿಲ್ಲ. ಆದರೆ ನಾವು ನಮ್ಮ ಮಕ್ಕಳ ಹೃದಯಗಳಲ್ಲಿ ಯೆಹೋವನಿಗಾಗಿ ಮತ್ತು ನೆರೆಯವರಿಗಾಗಿ ಪ್ರೀತಿಯನ್ನು ಬೇರೂರಿಸಲು ನಾವು ತುಂಬ ಪ್ರಯತ್ನಪಟ್ಟೆವು. (ಧರ್ಮೋಪದೇಶಕಾಂಡ 6:6, 7; ಮತ್ತಾಯ 22:37-39) ನಾವು ನಮ್ಮ ಕಾರ್ಯಗಳಲ್ಲಿ ತೋರಿಸದ ವಿನಹ, ನಾವು ಯೆಹೋವನನ್ನು ಪ್ರೀತಿಸುತ್ತಿದ್ದೇವೆ ಎಂದು ಆತನಿಗೆ ಹೇಳಸಾಧ್ಯವಿಲ್ಲ ಎಂಬುದನ್ನು ನಮ್ಮ ಮಕ್ಕಳು ತಿಳಿದುಕೊಂಡರು.

ವಾರದಲ್ಲಿ ಒಂದು ದಿನ, ಸಾಮಾನ್ಯವಾಗಿ ಶನಿವಾರದಂದು ನಾವು ಕುಟುಂಬವಾಗಿ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುತ್ತಿದ್ದೆವು. ರಾತ್ರಿಯೂಟದ ನಂತರ ಪ್ರತಿ ಸೋಮವಾರದಂದು ನಾವು ಕುಟುಂಬವಾಗಿ ಬೈಬಲ್‌ ಅಭ್ಯಾಸವನ್ನು ಮಾಡುತ್ತಿದ್ದೆವು. ಇದರ ಜೊತೆಗೆ, ನಾವು ಪ್ರತಿ ಮಗುವಿನೊಂದಿಗೂ ವೈಯಕ್ತಿಕವಾಗಿ ಬೈಬಲ್‌ ಅಭ್ಯಾಸವನ್ನು ಮಾಡುತ್ತಿದ್ದೆವು. ಮಕ್ಕಳು ಚಿಕ್ಕವರಾಗಿದ್ದಾಗ, ಪ್ರತಿಯೊಬ್ಬ ಮಗುವಿನೊಂದಿಗೂ ವಾರದಲ್ಲಿ ಹಲವಾರು ಬಾರಿ ಸ್ವಲ್ಪ ಸಮಯಕ್ಕಾಗಿ ಅಭ್ಯಾಸಮಾಡುತ್ತಿದ್ದೆವು. ಆದರೆ ಅವರು ದೊಡ್ಡವರಾದಂತೆ ವಾರದಲ್ಲಿ ಒಮ್ಮೆ ಹೆಚ್ಚು ಸಮಯದ ತನಕ ಅಭ್ಯಾಸಗಳನ್ನು ಮಾಡುತ್ತಿದ್ದೆವು. ಈ ಅಭ್ಯಾಸಗಳ ಸಮಯದಲ್ಲಿ, ನಮ್ಮ ಮಕ್ಕಳು ತಮಗಿದ್ದ ಸಮಸ್ಯೆಗಳ ಕುರಿತು ಮುಚ್ಚುಮರೆಯಿಲ್ಲದೆ ಮಾತಾಡುತ್ತಿದ್ದರು.

ನಾವು ಕುಟುಂಬವಾಗಿ ಆಟಾಪಾಟ ವಿನೋದಗಳಲ್ಲಿ ಆನಂದಿಸಿದೆವು. ನಾವೆಲ್ಲರೂ ಒಟ್ಟಿಗೆ ವಾದ್ಯಗಳನ್ನು ನುಡಿಸಲು ಇಷ್ಟಪಡುತ್ತಿದ್ದೆವು. ಆಗ ಮಕ್ಕಳಲ್ಲಿ ಪ್ರತಿಯೊಬ್ಬರೂ ತಮ್ಮ ಅಚ್ಚುಮೆಚ್ಚಿನ ಗೀತೆಗಳನ್ನು ನುಡಿಸಲು ಇಷ್ಟಪಡುತ್ತಿದ್ದರು. ಕೆಲವು ವಾರಾಂತ್ಯಗಳಲ್ಲಿ ಇತರ ಕುಟುಂಬಗಳನ್ನು ನಾವು ನಮ್ಮ ಮನೆಗೆ ಆಮಂತ್ರಿಸುತ್ತಿದ್ದೆವು. ಇದರಿಂದ ಒಳ್ಳೆಯ ಆತ್ಮೋನ್ನತಿಯನ್ನು ಉಂಟುಮಾಡುತ್ತಿದ್ದ ಸಹವಾಸವನ್ನು ನಾವು ಹೊಂದುತ್ತಿದ್ದೆವು. ನಾವು ರಜೆಯನ್ನು ತೆಗೆದುಕೊಂಡು ಕುಟುಂಬವಾಗಿ ಎಲ್ಲಾದರೂ ಪ್ರವಾಸಕ್ಕೆ ಹೋಗುತ್ತಿದ್ದೆವು. ಅಂತಹ ಒಂದು ಪ್ರವಾಸದಲ್ಲಿ, ನಾವು ಕೊಲಾರೋಡದ ಪರ್ವತಗಳಲ್ಲಿ ಎರಡು ವಾರಗಳನ್ನು ಕಳೆದೆವು ಮತ್ತು ಅಲ್ಲಿನ ಸಭೆಗಳೊಂದಿಗೆ ಕ್ಷೇತ್ರ ಸೇವೆಯಲ್ಲಿ ಕೆಲಸಮಾಡಿದೆವು. ಜಿಲ್ಲಾ ಅಧಿವೇಶನಗಳಲ್ಲಿ ಅನೇಕ ಡಿಪಾರ್ಟ್‌ಮೆಂಟ್‌ಗಳಲ್ಲಿ ಕೆಲಸಮಾಡಿದ್ದನ್ನು ಮತ್ತು ಅನೇಕ ಸ್ಥಳಗಳಲ್ಲಿ ರಾಜ್ಯ ಸಭಾಗೃಹ ನಿರ್ಮಾಣಕ್ಕೆ ಸಹಾಯಮಾಡಿದ್ದನ್ನು ನಮ್ಮ ಮಕ್ಕಳು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. ನಮ್ಮ ಸಂಬಂಧಿಕರನ್ನು ನೋಡುವುದಕ್ಕಾಗಿ ನಾವು ಮಕ್ಕಳನ್ನು ಗ್ರೀಸಿಗೆ ಕರೆದುಕೊಂಡು ಹೋದಾಗ, ಅಲ್ಲಿ ಅವರು ಅನೇಕ ನಂಬಿಗಸ್ತ ಸಾಕ್ಷಿಗಳನ್ನು ಸಹ ಭೇಟಿಯಾಗಲು ಸಾಧ್ಯವಾಯಿತು. ಇವರೆಲ್ಲರೂ ತಮ್ಮ ನಂಬಿಕೆಯ ಕಾರಣದಿಂದಾಗಿ ಸೆರೆಮನೆವಾಸವನ್ನು ಅನುಭವಿಸಿದವರಾಗಿದ್ದರು. ಇದು ಮಕ್ಕಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಹಾಗೂ ಸತ್ಯಕ್ಕಾಗಿ ದೃಢವಾಗಿಯೂ ಧೈರ್ಯವಾಗಿಯೂ ನಿಲ್ಲುವ ದೃಢಸಂಕಲ್ಪವನ್ನು ಮಾಡಲು ಇದು ಅವರಿಗೆ ಸಹಾಯಮಾಡಿತು.

ನಮ್ಮ ಮಕ್ಕಳಲ್ಲಿ ಕೆಲವರು ಕೆಲವೊಮ್ಮೆ ದಾರಿತಪ್ಪಿಹೋಗಿ, ತಪ್ಪಾದ ಸ್ನೇಹಿತರೊಂದಿಗೆ ಮಿತ್ರತ್ವವನ್ನು ಬೆಳೆಸಿದ್ದರೆಂಬುದು ನಿಜ. ಇನ್ನೂ ಕೆಲವೊಮ್ಮೆ ನಾವು ಕೆಲವೊಂದು ವಿಚಾರಗಳಲ್ಲಿ ತೀರ ಕಟ್ಟುನಿಟ್ಟಾಗಿದ್ದು ಅವರಿಗೆ ಸಮಸ್ಯೆಗಳನ್ನು ತಂದೊಡ್ಡಿದೆವು. ಆದರೂ, ನಾವು ಬೈಬಲಿನಲ್ಲಿರುವ “ಯೆಹೋವನ ಮಾನಸಿಕ ಕ್ರಮಪಡಿಸುವಿಕೆ”ಯ (NW) ಮೂಲಕ ವಿಷಯಗಳನ್ನು ನಾವು ಸರಿಪಡಿಸಸಾಧ್ಯವಾಯಿತು.—ಎಫೆಸ 6:4; 2 ತಿಮೊಥೆಯ 3:16, 17.

ನನ್ನ ಜೀವಿತದಲ್ಲಿ ಅತ್ಯಂತ ಸಂತೋಷದ ಸಮಯ

ನಮ್ಮ ಮಕ್ಕಳು ಪೂರ್ಣಸಮಯದ ಶೂಶ್ರೂಷೆಯನ್ನು ಸೇರಿದ ಬಳಿಕ, ಈ ಜೀವರಕ್ಷಕ ಕೆಲಸದಲ್ಲಿ ನಾವು ಇನ್ನೂ ಹೆಚ್ಚಾಗಿ ಯಾವ ರೀತಿಯಲ್ಲಿ ಕೆಲಸಮಾಡಬಹುದು ಎಂಬುದರ ಕುರಿತಾಗಿ ನಾನು ಮತ್ತು ಎಕಾಟಿರೀನೀ ಗಂಭೀರವಾಗಿ ಆಲೋಚಿಸಿದೆವು. ಹೀಗೆ 1994ರಲ್ಲಿ ನಾನೇ ಸ್ವತಃ ನಿವೃತ್ತಿಯನ್ನು ತೆಗೆದುಕೊಂಡ ಬಳಿಕ, ನಾವಿಬ್ಬರೂ ರೆಗ್ಯುಲರ್‌ ಪಯನೀಯರುಗಳಾಗಿ ಸೇವೆಸಲ್ಲಿಸಲು ಪ್ರಾರಂಭಿಸಿದೆವು. ನಮ್ಮ ಶುಶ್ರೂಷೆಯಲ್ಲಿ ಸ್ಥಳಿಕ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಹೋಗಿ ಸಂದರ್ಶಿಸುವುದು ಒಳಗೂಡಿದೆ. ಇಲ್ಲಿ ನಾವು ವಿದ್ಯಾರ್ಥಿಗಳಿಗೆ ಸಾಕ್ಷಿನೀಡಿ, ಅವರಲ್ಲಿ ಕೆಲವರೊಂದಿಗೆ ಬೈಬಲ್‌ ಅಭ್ಯಾಸಗಳನ್ನು ಮಾಡುತ್ತೇವೆ. ಅವರಿಗಿರುವ ಕಷ್ಟಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ, ಏಕೆಂದರೆ ಅನೇಕ ವರ್ಷಗಳ ಹಿಂದೆ ನಾನು ಸಹ ಅವರ ಸ್ಥಾನದಲ್ಲಿದ್ದೆ. ಆದುದರಿಂದ ಯೆಹೋವನ ಬಗ್ಗೆ ಅವರಿಗೆ ಕಲಿಸುವುದರಲ್ಲಿ ನಾನು ಹೆಚ್ಚಿನ ಸಫಲತೆಯನ್ನು ಪಡೆದಿದ್ದೇನೆ. ಈಜಿಪ್ಟ್‌, ಇಥಿಯೋಪಿಯ, ಚಿಲಿ, ಚೈನ, ಥಾಯ್‌ಲೆಂಡ್‌, ಟರ್ಕಿ, ಬೊಲಿವಿಯ, ಬ್ರಸಿಲ್‌, ಮತ್ತು ಮೆಕ್ಸಿಕೊ ದೇಶದ ವಿದ್ಯಾರ್ಥಿಗಳೊಂದಿಗೆ ಬೈಬಲ್‌ ಅಭ್ಯಾಸಗಳನ್ನು ನಡೆಸಿರುವುದರಲ್ಲಿ ನಾನು ನಿಜವಾಗಿಯೂ ಅಪಾರವಾದ ಆನಂದವನ್ನು ಅನುಭವಿಸಿದ್ದೇನೆ! ವಿಶೇಷವಾಗಿ ನನ್ನ ಮಾತೃಭಾಷೆಯನ್ನು ಮಾತಾಡುವ ಜನರೊಂದಿಗೆ ನಾನು ಟೆಲಿಫೋನ್‌ನ ಮೂಲಕ ಸಾಕ್ಷಿನೀಡುವುದರಲ್ಲಿ ಸಹ ಆನಂದಿಸುತ್ತೇನೆ.

ನನ್ನ ಉಚ್ಚಾರಣೆಯು ಬಹಳಷ್ಟು ಗ್ರೀಕ್‌ನಂತಹ ಉಚ್ಚಾರಣೆಯಾಗಿದೆ ಮತ್ತು ನನಗೆ ವಯಸ್ಸಾಗುತ್ತಿರುವುದಾದರೂ, ಯಾವಾಗಲೂ ನಾನು ಸಿದ್ಧಮನಸ್ಸಿನಿಂದ ಯಾವುದೇ ಕೆಲಸಕ್ಕೂ ನನ್ನನ್ನು ಲಭ್ಯಗೊಳಿಸಿಕೊಳ್ಳಲು ಮತ್ತು ಯೆಶಾಯನ ಮನೋಭಾವವನ್ನು ಹೊಂದಿರಲು ಪ್ರಯತ್ನಿಸಿದ್ದೇನೆ. ಅವನು ಹೇಳಿದ್ದು: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.” (ಯೆಶಾಯ 6:8) ಯೆಹೋವನಿಗೆ ತಮ್ಮ ಜೀವಿತಗಳನ್ನು ಸಮರ್ಪಿಸಿಕೊಳ್ಳುವಂತೆ ಆರು ಮಂದಿಗಿಂತಲೂ ಹೆಚ್ಚು ವ್ಯಕ್ತಿಗಳಿಗೆ ನಾವು ಸಹಾಯಮಾಡಿರುವುದರಲ್ಲಿ ನಮಗೆ ಸಂತೋಷವಿದೆ. ಖಂಡಿತವಾಗಿಯೂ ಇದು ನಮಗೆ ಅತ್ಯಂತ ಸಂತೋಷದ ಸಮಯವಾಗಿತ್ತು.

ಒಂದು ಕಾಲದಲ್ಲಿ, ಮನುಷ್ಯರನ್ನು ಕೊಲ್ಲಲಿಕ್ಕಾಗಿ ಬೀಭತ್ಸಕರವಾದ ಶಸ್ತ್ರಗಳನ್ನು ಉತ್ಪಾದಿಸುವುದೇ ನನ್ನ ಜೀವನವಾಗಿತ್ತು. ಆದರೆ, ಯೆಹೋವನು ತನ್ನ ಅಪಾತ್ರ ದಯೆಯ ಕಾರಣ, ನನಗೂ ನನ್ನ ಕುಟುಂಬಕ್ಕೂ ದಾರಿ ತೋರಿಸಿದನು. ಆದುದರಿಂದಲೇ ನಾವು ಆತನ ಸಮರ್ಪಿತ ಸೇವಕರಾಗಿ, ಪ್ರಮೋದವನ ಭೂಮಿಯ ಮೇಲೆ ನಿತ್ಯಜೀವವನ್ನು ಪಡೆದುಕೊಳ್ಳಬಹುದು ಎಂಬ ಸುವಾರ್ತೆಯನ್ನು ಜನರಿಗೆ ತಿಳಿಸುವುದಕ್ಕಾಗಿ ನಮ್ಮ ಜೀವಿತಗಳನ್ನು ಮುಡಿಪಾಗಿರಿಸಲು ಸಾಧ್ಯವಾಯಿತು. ನಾನು ಮಾಡಬೇಕಾಗಿದ್ದ ಕಠಿಣವಾದ ನಿರ್ಣಯಗಳ ಬಗ್ಗೆ ನಾನು ಚಿಂತನೆ ಮಾಡಿ ನೋಡುವಾಗ, ಮಲಾಕಿಯ 3:10ರ ಮಾತುಗಳು ನನ್ನ ಕಿವಿಯಲ್ಲಿ ಮೊರೆಯುತ್ತದೆ. ಅದು ಹೇಳುವುದು: “ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ.” ಮತ್ತು ನಿಜವಾಗಿಯೂ ನಮಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ಆತನು ಹಾಗೆ ಮಾಡಿದ್ದಾನೆ!

[ಪುಟ 27ರಲ್ಲಿರುವ ಚೌಕ/ಚಿತ್ರ]

ಲೇಕೀಸ್‌: ನನ್ನ ತಂದೆ ಕಪಟತನವನ್ನು ಹೇಸುತ್ತಿದ್ದರು. ಅವರು ಕಪಟಿಗಳಂತೆ ಎಂದೂ ನಡೆದುಕೊಳ್ಳಲಿಲ್ಲ. ವಿಶೇಷವಾಗಿ, ನಮ್ಮ ಕುಟುಂಬಕ್ಕೆ ಒಂದು ಒಳ್ಳೆಯ ಮಾದರಿಯನ್ನಿಡುವ ವಿಷಯದಲ್ಲಿ ಅವರು ಕಪಟಿಯಾಗಿರದಂತೆ ತುಂಬ ಪ್ರಯತ್ನಮಾಡಿದರು. ಅವರು ನಮಗೆ ಯಾವಾಗಲೂ ಹೀಗೆ ಹೇಳುತ್ತಿದ್ದರು: “ನೀವು ನಿಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡರೆ, ನೀವು ಏನನ್ನೊ ಮಾಡಬೇಕು ಎಂದರರ್ಥವಾಗಿದೆ. ಯೆಹೋವನಿಗಾಗಿ ನೀವು ತ್ಯಾಗಗಳನ್ನು ಮಾಡಲು ಯಾವಾಗಲೂ ಸಿದ್ಧರಾಗಿರಬೇಕು. ಒಬ್ಬ ಕ್ರೈಸ್ತನಾಗಿರುವುದರಲ್ಲಿ ಇದು ಒಳಗೂಡಿದೆ.” ಈ ಮಾತುಗಳು ನನ್ನ ಮನಸ್ಸಿನಲ್ಲಿ ಹಾಗೇ ಅಚ್ಚಳಿಯದೇ ಉಳಿದಿವೆ. ಮತ್ತು ಯೆಹೋವನಿಗಾಗಿ ತ್ಯಾಗಗಳನ್ನು ಮಾಡುವುದರಲ್ಲಿ ಅವರ ಮಾದರಿಯನ್ನು ಅನುಸರಿಸಲು ನನಗೆ ಸಹಾಯಮಾಡಿದೆ.

[ಪುಟ 27ರಲ್ಲಿರುವ ಚೌಕ/ಚಿತ್ರ]

ಕ್ರೀಸ್ಟೊಸ್‌: ಯೆಹೋವನಿಗಾಗಿ ನಮ್ಮ ತಂದೆತಾಯಿಯರಿಗಿರುವ ತನುಮನದ ನಿಷ್ಠೆ ಹಾಗೂ ಹೆತ್ತವರಾಗಿ ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿರುವ ರೀತಿ, ನಿಜವಾಗಿಯೂ ಶ್ಲಾಘನೀಯ. ಇದನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೆ. ಕ್ಷೇತ್ರ ಸೇವೆಗೆ ಹೋಗುವುದರಿಂದ ಹಿಡಿದು, ರಜೆಯಲ್ಲಿ ಪ್ರವಾಸಕ್ಕೆ ಹೋಗುವುದರ ವರೆಗೆ, ಪ್ರತಿಯೊಂದು ವಿಷಯವನ್ನು ನಾವು ಕುಟುಂಬವಾಗಿ ಸೇರಿ ಮಾಡಿದೆವು. ನಮ್ಮ ತಂದೆತಾಯಿಯರು ಬೇರೆ ಬೇರೆ ವಿಷಯಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗಸಾಧ್ಯವಿತ್ತಾದರೂ, ಅವರು ಯಾವಾಗಲೂ ತಮ್ಮ ಜೀವನವನ್ನು ನಿರಾಡಂಬರವಾಗಿಟ್ಟು, ಶುಶ್ರೂಷೆಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ನಾನು ಯೆಹೋವನ ಸೇವೆಯಲ್ಲಿ ಸಂಪೂರ್ಣವಾಗಿ ಮುಳುಗಿರುವಾಗಲೇ ನಾನು ಬಹಳ ಸಂತೋಷದಿಂದಿರುತ್ತೇನೆಂಬುದು ನನಗೆ ಈಗ ಮನದಟ್ಟಾಗಿದೆ.

[ಪುಟ 28ರಲ್ಲಿರುವ ಚೌಕ/ಚಿತ್ರ]

ಗ್ರೆಗರಿ: ಶುಶ್ರೂಷೆಯಲ್ಲಿ ಇನ್ನೂ ಹೆಚ್ಚನ್ನು ಮಾಡಬೇಕು ಎಂಬುದರ ಬಗ್ಗೆ ನಮ್ಮ ತಂದೆತಾಯಿಯರು ಹೇಳಿದ ಮಾತುಗಳಿಗಿಂತಲೂ ಹೆಚ್ಚಾಗಿ, ಅವರ ಮಾದರಿ ಮತ್ತು ಯೆಹೋವನ ಸೇವೆಯಲ್ಲಿ ಅವರಿಗಿರುವ ಆನಂದವು ನನ್ನನ್ನು ಪ್ರಚೋದಿಸಿದವು. ಇದು ನಾನು ನನ್ನ ಪರಿಸ್ಥಿತಿಗಳನ್ನು ಪುನರ್‌ಪರಿಶೀಲಿಸುವಂತೆ ಮಾಡಿತು. ಪೂರ್ಣಸಮಯದ ಸೇವೆಯನ್ನು ಆರಂಭಿಸುವುದರ ಕುರಿತಾದ ಯಾವುದೇ ಚಿಂತೆವ್ಯಾಕುಲತೆಗಳನ್ನು ಬದಿಗೆ ತಳ್ಳಿ, ಯೆಹೋವನ ಕೆಲಸದಲ್ಲಿ ನನ್ನನ್ನು ಸಂಪೂರ್ಣವಾಗಿ ತಲ್ಲೀನಗೊಳಿಸಿಕೊಳ್ಳಲು ಇದು ನನ್ನನ್ನು ಪ್ರಚೋದಿಸಿತು. ಕಠಿನವಾಗಿ ಪರಿಶ್ರಮಿಸುವುದರಿಂದ ಸಿಗುವ ಸಂತೋಷವನ್ನು ಅನುಭವಿಸಲು ನನಗೆ ಸಹಾಯಮಾಡಿದ್ದಕ್ಕಾಗಿ ನಾನು ನನ್ನ ತಂದೆತಾಯಿಯರಿಗೆ ಉಪಕಾರವನ್ನು ಹೇಳುತ್ತೇನೆ.

[ಪುಟ 28ರಲ್ಲಿರುವ ಚೌಕ/ಚಿತ್ರ]

ಟೂಲಾ: ಯೆಹೋವನೊಂದಿಗೆ ನಮಗಿರುವ ಸಂಬಂಧವೇ ನಮ್ಮ ಬಳಿಯಿರುವ ಅತ್ಯಮೂಲ್ಯ ವಿಷಯವಾಗಿದೆ ಮತ್ತು ಯೆಹೋವನಿಗೆ ಸರ್ವೋತ್ತಮವಾದುದನ್ನು ಕೊಡುವ ಮೂಲಕವೇ ನಾವು ನಿಜ ಸಂತೋಷವನ್ನು ಪಡೆದುಕೊಳ್ಳಸಾಧ್ಯವಿದೆ ಎಂದು ನಮ್ಮ ತಂದೆತಾಯಿಯರು ಯಾವಾಗಲೂ ಹೇಳುತ್ತಿದ್ದರು. ಯೆಹೋವನು ಒಬ್ಬ ನಿಜ ವ್ಯಕ್ತಿಯಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಅವರು ನಮಗೆ ಸಹಾಯಮಾಡಿದರು. ಯೆಹೋವನನ್ನು ಸಂತೋಷಪಡಿಸಲು ನಾನು ನನ್ನ ಕೈಲಾದ ಪ್ರಯತ್ನವನ್ನು ಮಾಡಿದ್ದೇನೆ ಎಂಬ ಶುದ್ಧ ಮನಸ್ಸಾಕ್ಷಿಯೊಂದಿಗೆ ರಾತ್ರಿ ನಿದ್ದೆಮಾಡಲು ಹೋಗುವಾಗ ನಿಮಗೆ ನಿಜವಾಗಿಯೂ ವರ್ಣಿಸಲಸಾಧ್ಯವಾದ ಅನುಭವವು ಉಂಟಾಗುತ್ತದೆ ಎಂದು ನಮ್ಮ ತಂದೆಯು ಯಾವಾಗಲೂ ನಮಗೆ ಹೇಳುತ್ತಿದ್ದರು.

[ಪುಟ 25ರಲ್ಲಿರುವ ಚಿತ್ರ]

1951ರಲ್ಲಿ ಗ್ರೀಸಿನಲ್ಲಿ ನಾನು ಒಬ್ಬ ಸೈನಿಕನಾಗಿದ್ದಾಗಿನ ಚಿತ್ರ

[ಪುಟ 25ರಲ್ಲಿರುವ ಚಿತ್ರ]

1966ರಲ್ಲಿ ಎಕಾಟಿರೀನೀಯೊಂದಿಗೆ

[ಪುಟ 26ರಲ್ಲಿರುವ ಚಿತ್ರ]

1996ರಲ್ಲಿ ನನ್ನ ಕುಟುಂಬದೊಂದಿಗೆ: (ಎಡಗಡೆಯಿಂದ ಬಲಗಡೆಗೆ, ಹಿಂಭಾಗದಲ್ಲಿ) ಗ್ರೆಗರಿ, ಕ್ರೀಸ್ಟೊಸ್‌, ಟೂಲಾ; (ಮುಂಭಾಗದಲ್ಲಿ) ಲೇಕೀಸ್‌, ಎಕಾಟಿರೀನೀ ಮತ್ತು ನಾನು