ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷವನ್ನು ಬುಡಸಮೇತ ಕಿತ್ತುಹಾಕುವ ಏಕೈಕ ಮಾರ್ಗ

ದ್ವೇಷವನ್ನು ಬುಡಸಮೇತ ಕಿತ್ತುಹಾಕುವ ಏಕೈಕ ಮಾರ್ಗ

ದ್ವೇಷವನ್ನು ಬುಡಸಮೇತ ಕಿತ್ತುಹಾಕುವ ಏಕೈಕ ಮಾರ್ಗ

“ಭಯವಿಲ್ಲದಿರುವಲ್ಲಿ ದ್ವೇಷವಿಲ್ಲ. . . . ನಾವು ಯಾವುದರ ಬಗ್ಗೆ ಭಯಪಡುತ್ತೇವೊ ಅದನ್ನು ದ್ವೇಷಿಸುತ್ತೇವೆ. ಇದರರ್ಥ, ಎಲ್ಲಿ ದ್ವೇಷವಿದೆಯೊ ಅಲ್ಲಿ ಮರೆಯಲ್ಲಿ ಭಯವು ಅಡಗಿಕೊಂಡಿರುತ್ತದೆ.”—ಸಿರಿಲ್‌ ಕೊನೊಲಿ, ಸಾಹಿತ್ಯ ವಿಮರ್ಶಕ ಮತ್ತು ಸಂಪಾದಕ.

ಅನೇಕ ಸಮಾಜಶಾಸ್ತ್ರಜ್ಞರ ಅಭಿಪ್ರಾಯಕ್ಕನುಸಾರ, ದ್ವೇಷವು ಮನುಷ್ಯನ ಸುಪ್ತಚೇತನದಲ್ಲಿ ಆಳವಾಗಿ ಬೇರೂರಿಸಲ್ಪಟ್ಟಿದೆ. “ಇದರಲ್ಲಿ ಹೆಚ್ಚಿನದ್ದು, ನಮ್ಮೊಳಗೆ ಕಾಯಂ ಆಗಿ ಕೂಡಿಸಲ್ಪಟ್ಟಿದೆ,” ಅಥವಾ ಮಾನವ ಸ್ವಭಾವದಲ್ಲೇ ಅಳವಡಿಸಲ್ಪಟ್ಟಿದೆ ಎಂದು ಸಹ ಒಬ್ಬ ರಾಜ್ಯಶಾಸ್ತ್ರಜ್ಞನು ಹೇಳಿದನು.

ಮಾನವ ಸ್ವಭಾವವನ್ನು ಅಭ್ಯಾಸಮಾಡುತ್ತಿರುವವರು ಏಕೆ ಈ ತೀರ್ಮಾನಕ್ಕೆ ಬರುತ್ತಾರೆಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಎಷ್ಟೆಂದರೂ ಅವರು ಯಾರ ಅಭ್ಯಾಸವನ್ನು ಮಾಡುತ್ತಿದ್ದಾರೊ, ಆ ವ್ಯಕ್ತಿಗಳು ಬೈಬಲಿನಲ್ಲಿ ತಿಳಿಸಲ್ಪಟ್ಟಿರುವಂತೆ ‘ಪಾಪ’ ಮತ್ತು ‘ದ್ರೋಹದಲ್ಲಿ’ ಹುಟ್ಟಿರುವ ಸ್ತ್ರೀಪುರುಷರಾಗಿದ್ದಾರೆ. (ಕೀರ್ತನೆ 51:5) ಸೃಷ್ಟಿಕರ್ತನು ತಾನೇ, ಕೆಲವು ಸಹಸ್ರಮಾನಗಳ ಹಿಂದೆ ಅಪರಿಪೂರ್ಣ ಮನುಷ್ಯರ ಸ್ವಭಾವವನ್ನು ಪರೀಕ್ಷಿಸುತ್ತಿದ್ದಾಗ, ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ ನೋಡಿದನು.’—ಆದಿಕಾಂಡ 6:5.

ಪೂರ್ವಾಗ್ರಹ, ಬೇಧಭಾವ, ಮತ್ತು ಅದರಿಂದ ಫಲಿಸುವ ದ್ವೇಷ, ಇವೆಲ್ಲವೂ ಮನುಷ್ಯನು ಬಾಧ್ಯತೆಯಾಗಿ ಪಡೆದಿರುವ ಅಪರಿಪೂರ್ಣತೆ ಮತ್ತು ಸ್ವಾರ್ಥದ ಫಲಗಳಾಗಿವೆ. (ಧರ್ಮೋಪದೇಶಕಾಂಡ 32:5) ಮತ್ತು ವಿಷಾದಕರ ಸಂಗತಿಯೇನೆಂದರೆ, ಇಂತಹ ವಿಷಯಗಳಲ್ಲಿ ಈ ವರೆಗೂ ಯಾವುದೇ ರೀತಿಯ ಕಾರ್ಯನೀತಿಯುಳ್ಳ ಯಾವುದೇ ಮಾನವ ಸಂಸ್ಥೆ ಇಲ್ಲವೇ ಸರಕಾರವು, ಮನುಷ್ಯನ ಹೃದಯಗಳಲ್ಲಿ ಬದಲಾವಣೆಯನ್ನು ತರಲು ಶಕ್ತವಾಗಿಲ್ಲ. ಜೊಹಾನಾ ಮಾಕ್‌ಗೇರಿ ಎಂಬ ವಿದೇಶೀ ಸುದ್ದಿಗಾರಳು ಹೇಳಿದ್ದು: “ಬಾಸ್ನಿಯ, ಸೊಮಾಲಿಯ, ಲೈಬೀರಿಯಾ, ಕಾಶ್ಮೀರ್‌, ಮತ್ತು ಕಾಕಸಸ್‌ ಪರ್ವತಗಳಲ್ಲಿ ರಕ್ತದ ಪ್ರವಾಹವು ಹರಿಯುವಂತೆ ಮಾಡಿದ ದ್ವೇಷಗಳನ್ನು ಅಳಿಸಿಹಾಕುವುದರಲ್ಲಿ ಯಾವುದೇ ಭೌಗೋಲಿಕ ಪೊಲೀಸನು, ಅವನು ಎಷ್ಟೇ ಶಕ್ತಿಶಾಲಿಯಾಗಿರಲಿ, ಸಫಲನಾಗಿಲ್ಲ.”

ಆದರೆ ಈ ಸಮಸ್ಯೆಯ ಪರಿಹಾರವೇನೆಂಬುದನ್ನು ನಾವು ಕಂಡುಕೊಳ್ಳಲು ಆರಂಭಿಸುವ ಮುಂಚೆ, ಜನರು ಈ ರೀತಿಯ ದ್ವೇಷವನ್ನು ತೋರಿಸುವುದಕ್ಕಿರುವ ಕಾರಣಗಳೇನೆಂಬುದನ್ನು ಸ್ವಲ್ಪ ತಿಳಿದುಕೊಳ್ಳಬೇಕು.

ಭಯ-ಪೋಷಿತ ದ್ವೇಷ

ದ್ವೇಷವು ಬೇರೆಬೇರೆ ರೀತಿಗಳಲ್ಲಿ ವ್ಯಕ್ತಪಡಿಸಲ್ಪಡುತ್ತದೆ. ಲೇಖಕ ಆ್ಯಂಡ್ರೂ ಸಲಿವನ್‌, ಇದನ್ನು ಚೆನ್ನಾಗಿ ಸಾರಾಂಶಿಸಿ ಹೇಳಿದ್ದು: “ಭಯಪಡುವಂತಹ ದ್ವೇಷವಿದೆ, ಬರಿಯ ತಿರಸ್ಕಾರವುಳ್ಳ ದ್ವೇಷವಿದೆ, ಶಕ್ತಿಯನ್ನು ತೋರಿಸುವ ದ್ವೇಷವಿದೆ, ಮತ್ತು ಶಕ್ತಿಯಿಲ್ಲದಿರುವುದರಿಂದ ಹೊರಡುವ ದ್ವೇಷವಿದೆ, ಮುಯ್ಯಿ ತೀರಿಸುವ ದ್ವೇಷವಿದೆ, ಮತ್ತು ಈರ್ಷ್ಯಯಿಂದಲೂ ಹೊಮ್ಮುವ ದ್ವೇಷವಿದೆ. . . . ದಬ್ಬಾಳಿಕೆಗಾರನಿಗೆ ದ್ವೇಷವಿರುತ್ತದೆ, ಮತ್ತು ದಬ್ಬಾಳಿಕೆಗೆ ಗುರಿಯಾದ ವ್ಯಕ್ತಿಗೂ ದ್ವೇಷವಿರುತ್ತದೆ. ಒಳಗೊಳಗೆ ಕುದಿಯುತ್ತಿರುವ ದ್ವೇಷವಿದೆ, ಮತ್ತು ಬಾಡಿಹೋಗುವಂತಹ ದ್ವೇಷವಿದೆ. ಸಿಡಿದುಬೀಳುವ ದ್ವೇಷವಿದೆ, ಮತ್ತು ಎಂದೂ ಉರಿಯದಂತಹ ದ್ವೇಷವೂ ಇದೆ.”

ದ್ವೇಷಭರಿತ ಜಗಳಗಳನ್ನು ಹೊತ್ತಿಸುವ ಪ್ರಮುಖ ಕಾರಣಗಳಲ್ಲಿ ಕೆಲವು, ಸಾಮಾಜಿಕ ಮತ್ತು ಆರ್ಥಿಕವಾದದ್ದಾಗಿವೆ ಎಂಬುದರಲ್ಲಿ ಸಂದೇಹವಿಲ್ಲ. ಕೆಲವೊಂದು ಕ್ಷೇತ್ರಗಳಲ್ಲಿ, ಧನಿಕರಾದವರು ಅಲ್ಪಸಂಖ್ಯಾತರಾಗಿರುತ್ತಾರೆ. ಆಗ ಅಲ್ಲಿ, ಪೂರ್ವಾಗ್ರಹ ಮತ್ತು ದ್ವೇಷದ ಕಿಡಿಗಳು ಹಾರುತ್ತಿರುತ್ತವೆ. ಅಲ್ಲದೆ, ಯಾವುದೇ ಜನಸಮಾಜದಲ್ಲಿ ಬೇರೆ ಸ್ಥಳಗಳಿಂದ ವಿದೇಶೀಯರು ನುಗ್ಗಿಬರುತ್ತಿರುವುದರಿಂದ ಜೀವಿತದ ಮಟ್ಟವು ಬೆದರಿಸಲ್ಪಟ್ಟಾಗ, ಅಲ್ಲಿಯೂ ದ್ವೇಷವು ಹೊತ್ತಿಕೊಳ್ಳುತ್ತದೆ.

ಈ ಹೊಸಬರು ಉದ್ಯೋಗಗಳಿಗಾಗಿ ತಮ್ಮೊಂದಿಗೆ ಸ್ಪರ್ಧೆಗಿಳಿಯುವರು, ತೀರ ಕಡಿಮೆ ಸಂಬಳಕ್ಕಾಗಿ ಕೆಲಸಮಾಡುವರು, ಅಥವಾ ಆಸ್ತಿಯ ಮೌಲ್ಯವು ಕುಸಿಯುವಂತೆ ಮಾಡುವರೆಂದು ಕೆಲವರಿಗನಿಸಬಹುದು. ಈ ರೀತಿಯ ಭಯವು ಸರಿಯೊ ಇಲ್ಲವೊ ಎಂಬುದು ಮತ್ತೊಂದು ಸಂಗತಿ. ಆದರೆ ಒಂದು ವಿಷಯವಂತೂ ತೀರ ಸ್ಪಷ್ಟ: ಆರ್ಥಿಕ ನಷ್ಟದ ಭಯ ಮತ್ತು ಜನಸಮಾಜದ ಮಟ್ಟಗಳು ಅಥವಾ ಜೀವನ ಶೈಲಿಯು ಕೀಳ್ಮಟ್ಟಕ್ಕಿಳಿಯುವುದರ ಭಯ, ಪೂರ್ವಾಗ್ರಹ ಮತ್ತು ದ್ವೇಷವನ್ನು ಹೊತ್ತಿಸುವುದರಲ್ಲಿ ಬಲವಾದ ಕಾರಣಗಳಾಗಿವೆ.

ಹಾಗಾದರೆ, ದ್ವೇಷವನ್ನು ಬೇರುಸಮೇತ ಕಿತ್ತುಹಾಕುವುದಕ್ಕಾಗಿ ತೆಗೆದುಕೊಳ್ಳಬೇಕಾದ ಮೊದಲನೆಯ ಕ್ರಮ ಯಾವುದು? ಮನೋಭಾವದಲ್ಲಿನ ಬದಲಾವಣೆಯೇ.

ಮನೋಭಾವವನ್ನು ಬದಲಾಯಿಸುವುದು

“ಜನರು ಆಂತರ್ಯದಲ್ಲಿ ತಮ್ಮ ಸ್ವಂತ ಇಷ್ಟದಿಂದ ಬದಲಾದರೆ ಮಾತ್ರ ನಿಜವಾದ ಬದಲಾವಣೆಯಾಗಬಲ್ಲದು” ಎಂದು ಮಾಕ್‌ಗೇರಿ ಹೇಳುತ್ತಾರೆ. ಆದರೆ ಅದು ಹೇಗೆ ಸಾಧ್ಯ? ದ್ವೇಷದ ಬೆಳವಣಿಗೆಯ ವಿರುದ್ಧ ಕೆಲಸಮಾಡುವ ಅತಿ ಶಕ್ತಿಶಾಲಿಯಾದ, ಅತಿ ಬಲಿಷ್ಠವಾದ ಪ್ರೇರಕ ಮತ್ತು ಅತಿ ಹೆಚ್ಚು ಕಾಲ ಬಾಳಿರುವ ಪ್ರಭಾವವು ಯಾವುದು? ಅನುಭವವು ರುಜುಪಡಿಸಿರುವಂತೆ, ಅದು ದೇವರ ವಾಕ್ಯವಾದ ಬೈಬಲೇ ಆಗಿದೆ. ಇದಕ್ಕೆ ಕಾರಣವೇನೆಂದರೆ, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.”—ಇಬ್ರಿಯ 4:12.

ಆದರೆ, ಪೂರ್ವಾಗ್ರಹ ಮತ್ತು ದ್ವೇಷವನ್ನು ಬೇರುಸಮೇತ ಕಿತ್ತುಹಾಕುವ ಕೆಲಸವು ತನ್ನಿಂದ ತಾನೇ ಆಗುವುದಿಲ್ಲ. ಅಥವಾ ಅದು ದಿನಬೆಳಗಾಗುವುದರೊಳಗೂ ಆಗುವುದಿಲ್ಲ ಎಂಬುದು ಒಪ್ಪತಕ್ಕ ಮಾತೇ. ಆದರೂ ಅದನ್ನು ಖಂಡಿತವಾಗಿಯೂ ಕಿತ್ತುಹಾಕಸಾಧ್ಯವಿದೆ. ಯೇಸು ಕ್ರಿಸ್ತನು ಜನರ ಹೃದಯಗಳನ್ನು ಪ್ರಚೋದಿಸುವವನೂ, ಜಡವಾಗಿಬಿಟ್ಟಿದ್ದ ಮನಸ್ಸಾಕ್ಷಿಗಳು ಪ್ರತಿಕ್ರಿಯಿಸುವಂತೆಯೂ ಮಾಡುವ ವ್ಯಕ್ತಿಯಾಗಿದ್ದನು. ಇದರಲ್ಲಿ ಅವನಿಗೆ ಸರಿಸಾಟಿಯಾಗಿರುವ ಬೇರಾವುದೇ ವ್ಯಕ್ತಿ ಇರಲಿಲ್ಲ. ಜನರು ಬದಲಾಗುವಂತೆ ಮಾಡಲು ಅವನು ಶಕ್ತನಾಗಿದ್ದನು. “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ” ಎಂದು ಯೇಸು ಕ್ರಿಸ್ತನು ಕೊಟ್ಟ ಬುದ್ಧಿವಂತ ಸಲಹೆಯನ್ನೂ ಕೋಟಿಗಟ್ಟಲೆ ಜನರು ಪಾಲಿಸುವುದರಲ್ಲಿ ಯಶಸ್ವಿಗಳಾಗಿದ್ದಾರೆ.—ಮತ್ತಾಯ 5:44.

ಯೇಸು ತನ್ನ ಸ್ವಂತ ಬೋಧನೆಗಳಿಗನುಸಾರ ನಡೆದುಕೊಂಡನು. ಉದಾಹರಣೆಗೆ, ಮತ್ತಾಯನೆಂಬವನು ಯೆಹೂದಿ ಸಮಾಜದಿಂದ ಹೊರಹಾಕಲ್ಪಟ್ಟ ಒಬ್ಬ ವ್ಯಕ್ತಿಯಾಗಿದ್ದನು. ಆದರೂ ಯೇಸು ಅವನನ್ನು ತನ್ನ ಅತ್ಯಾಪ್ತ ಸ್ನೇಹಿತರ ಗುಂಪಿನಲ್ಲಿ ಸೇರಿಸಿಕೊಂಡನು. (ಮತ್ತಾಯ 9:9; 11:19) ಅದಲ್ಲದೆ, ಯೇಸು ತದನಂತರ ಒಂದು ಶುದ್ಧಾರಾಧನಾ ರೀತಿಯನ್ನು ಸ್ಥಾಪಿಸಿದನು. ಮತ್ತು ಇದನ್ನು ಕಾಲಾನಂತರ, ಈ ಹಿಂದೆ ಯೆಹೂದ್ಯರು ದೂರವಾಗಿಡುತ್ತಿದ್ದ ಹಾಗೂ ದ್ವೇಷಿಸುತ್ತಿದ್ದ ಅನ್ಯಜಾತಿಯವರು ಸಹ ಸ್ವೀಕರಿಸಲಿದ್ದರು. (ಗಲಾತ್ಯ 3:28) ಆ ಸಮಯದಲ್ಲಿ ಜ್ಞಾತವಾಗಿದ್ದ ಇಡೀ ಲೋಕದಿಂದ, ಜನರು ಯೇಸು ಕ್ರಿಸ್ತನ ಅನುಯಾಯಿಗಳಾದರು. (ಅ. ಕೃತ್ಯಗಳು 10:34, 35) ಮತ್ತು ಈ ವ್ಯಕ್ತಿಗಳು ತಮ್ಮ ಅತಿಶಯ ಪ್ರೀತಿಗಾಗಿ ಪ್ರಸಿದ್ಧರಾದರು. (ಯೋಹಾನ 13:35) ದ್ವೇಷಕಾರುತ್ತಿದ್ದ ಪುರುಷರು ಯೇಸುವಿನ ಶಿಷ್ಯನಾದ ಸ್ತೆಫನನನ್ನು ಕಲ್ಲೆಸೆದು ಕೊಂದರು. ಆದರೂ, “ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡ” ಎಂಬುದು, ಅವನು ಸಾಯುವ ಮುನ್ನ ಆಡಿದ ಕೊನೆಯ ಮಾತುಗಳಾಗಿದ್ದವು. ತನ್ನನ್ನು ದ್ವೇಷಿಸಿದವರನ್ನು ದ್ವೇಷಿಸುವ ಬದಲಿಗೆ ಸ್ತೆಫನನು ಅವರ ಒಳಿತನ್ನು ಬಯಸಿದನು.—ಅ. ಕೃತ್ಯಗಳು 6:8-14; 7:54-60.

ಹಾಗೆಯೇ, ಆಧುನಿಕ ದಿನದ ಸತ್ಯ ಕ್ರೈಸ್ತರು ಸಹ ಒಳಿತನ್ನು ಮಾಡುವುದರ ಬಗ್ಗೆ ಯೇಸು ಕೊಟ್ಟ ಸಲಹೆಯನ್ನು ಪಾಲಿಸುತ್ತಾರೆ. ಅವರು ಕೇವಲ ತಮ್ಮ ಕ್ರೈಸ್ತ ಸಹೋದರರಿಗೆ ಮಾತ್ರವಲ್ಲ, ಬದಲಾಗಿ ತಮ್ಮನ್ನು ದ್ವೇಷಿಸುವವರಿಗೂ ಒಳಿತನ್ನು ಮಾಡುತ್ತಾರೆ. (ಗಲಾತ್ಯ 6:10) ವಿಷಕಾರಿಯಾಗಿರುವ ದ್ವೇಷವನ್ನು ತಮ್ಮ ಜೀವಿತಗಳಿಂದ ತೊಲಗಿಸಲಿಕ್ಕಾಗಿ ಅವರು ತುಂಬ ಪ್ರಯತ್ನಮಾಡುತ್ತಿದ್ದಾರೆ. ತಮ್ಮೊಳಗೆ ದ್ವೇಷವನ್ನು ಹುಟ್ಟಿಸಬಲ್ಲ ಪ್ರಭಾವಶಾಲಿ ಶಕ್ತಿಗಳನ್ನು ಗುರುತಿಸುತ್ತಾ, ಅವರು ಆ ದ್ವೇಷವನ್ನು ತೆಗೆದುಹಾಕಿ ಅದರ ಸ್ಥಾನದಲ್ಲಿ ಪ್ರೀತಿಯನ್ನು ತುಂಬಿಸಲು ನಿಶ್ಚಿತವಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಹೌದು, ಪ್ರಾಚೀನಕಾಲದ ಒಬ್ಬ ಬುದ್ಧಿವಂತ ವ್ಯಕ್ತಿ ಹೇಳಿದಂತೆ, “ದ್ವೇಷವು ಜಗಳಗಳನ್ನೆಬ್ಬಿಸುತ್ತದೆ; ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ.”—ಜ್ಞಾನೋಕ್ತಿ 10:12.

ಅಪೊಸ್ತಲ ಯೋಹಾನನು ತಿಳಿಸಿದ್ದು: “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ.” (1 ಯೋಹಾನ 3:15) ಯೆಹೋವನ ಸಾಕ್ಷಿಗಳು ಈ ಮಾತುಗಳನ್ನು ನಂಬುತ್ತಾರೆ. ಆದುದರಿಂದ, ಅವರು ಬೇರೆ ಬೇರೆ ಜನಾಂಗೀಯ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಷ್ಟ್ರೀಯ ಹಿನ್ನಲೆಗಳಿಂದ ಬಂದಿರುವುದಾದರೂ, ಈಗ ಒಂದು ಐಕ್ಯ, ದ್ವೇಷರಹಿತ ಸಮಾಜವಾಗಿ ಮತ್ತು ಒಂದು ನಿಜವಾದ ಭೌಗೋಲಿಕ ಸಹೋದರತ್ವದೊಳಗೆ ಒಟ್ಟುಗೂಡಿಸಲ್ಪಡುತ್ತಿದ್ದಾರೆ.—ಈ ಲೇಖನಗಳ ಜೊತೆಯಲ್ಲಿರುವ ರೇಖಾಚೌಕಗಳನ್ನು ನೋಡಿರಿ.

ದ್ವೇಷವು ಬುಡಸಮೇತ ಕಿತ್ತುಹಾಕಲ್ಪಡುವುದು!

‘ಆದರೆ ಇದೆಲ್ಲವು ಅಂತಹ ದ್ವೇಷವಿರುವವರಿಗೆ ಮತ್ತು ಅದಕ್ಕೆ ಬಲಿಯಾಗುವವರೆಲ್ಲರಿಗೆ ಒಳ್ಳೇದು. ಏನಿದ್ದರೂ, ಇಡೀ ಭೂಮಿಯಿಂದ ದ್ವೇಷವು ಸಂಪೂರ್ಣವಾಗಿ ತೊಲಗಿಹೋಗಲು ಸಾಧ್ಯವೇ ಇಲ್ಲ’ ಎಂದು ನೀವು ಹೇಳಬಹುದು. ಹೌದು, ನಿಮ್ಮಲ್ಲಿ ದ್ವೇಷವಿರದಿದ್ದರೂ, ನೀವು ಬೇರೆಯವರ ದ್ವೇಷಕ್ಕೆ ಬಲಿಯಾಗುವ ಸಾಧ್ಯತೆಯಿದೆ. ಆದುದರಿಂದ, ಈ ಭೌಗೋಲಿಕ ಸಮಸ್ಯೆಗೆ ನಿಜವಾದ ಪರಿಹಾರವನ್ನು ಕೇವಲ ದೇವರು ನೀಡಶಕ್ತನು.

ಬೇಗನೆ ದ್ವೇಷವನ್ನು ಅದರ ಎಲ್ಲ ಕುರುಹುಗಳ ಸಮೇತ ಈ ಭೂಮಿಯಿಂದ ತೆಗೆದುಹಾಕುವ ಉದ್ದೇಶ ದೇವರಿಗಿದೆ. ಇದು ಆತನ ಸ್ವರ್ಗೀಯ ಸರಕಾರದ ಆಳ್ವಿಕೆಯ ಕೆಳಗೆ ನಡೆಯಲಿದೆ. ಆ ಸರಕಾರಕ್ಕಾಗಿ ಯೇಸು ಹೀಗೆ ಪ್ರಾರ್ಥಿಸುವಂತೆ ಕಲಿಸಿದ್ದನು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿ ನೆರವೇರಲಿ.”—ಮತ್ತಾಯ 6:9, 10.

ಆ ಪ್ರಾರ್ಥನೆಯು ಪೂರ್ಣ ರೀತಿಯಲ್ಲಿ ಉತ್ತರಿಸಲ್ಪಡುವಾಗ, ದ್ವೇಷವನ್ನು ಹುಟ್ಟಿಸಿ, ಪೋಷಿಸುವಂತಹ ಪರಿಸ್ಥಿತಿಗಳು ಇನ್ನು ಮುಂದೆ ಇಲ್ಲದಿರುವವು. ದ್ವೇಷವು ಸ್ವಾರ್ಥಕ್ಕಾಗಿ ದುರುಪಯೋಗಿಸಲ್ಪಡುವಂತಹ ಸನ್ನಿವೇಶಗಳು ಸಹ ತೆಗೆದುಹಾಕಲ್ಪಡುವವು. ಅಪಪ್ರಚಾರ, ಅಜ್ಞಾನ, ಮತ್ತು ಪೂರ್ವಾಗ್ರಹದ ಬದಲಿಗೆ, ಜ್ಞಾನೋದಯ, ಸತ್ಯ ಮತ್ತು ನೀತಿಯು ಅಲ್ಲಿರುವುದು. ಆಗ ಖಂಡಿತವಾಗಿಯೂ ದೇವರು, ‘ಕಣ್ಣೀರನ್ನೆಲ್ಲಾ ಒರಸಿಬಿಟ್ಟಿರುವನು. ಇನ್ನು ಮರಣವಿರದು, ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರದು.’—ಪ್ರಕಟನೆ 21:1-4.

ಇದಕ್ಕಿಂತಲೂ ಉತ್ತಮವಾದ ಸುದ್ದಿಯೊಂದಿದೆ! ನಾವು ಈಗ “ಕಡೇ ದಿವಸಗಳಲ್ಲಿ” ಜೀವಿಸುತ್ತಾ ಇದ್ದೇವೆಂಬುದಕ್ಕೆ ನಿರಾಕರಿಸಲಾಗದಂತಹ ಸಾಕ್ಷ್ಯವಿದೆ. ಆದುದರಿಂದ ದೈವಿಕವಲ್ಲದ ಈ ದ್ವೇಷವು ಲೋಕದಿಂದಲೇ ಮಾಯವಾಗುವುದನ್ನು ನಾವು ಕಣ್ಣಾರೆ ನೋಡುವೆವೆಂಬ ಭರವಸೆ ನಮಗಿರಸಾಧ್ಯವಿದೆ. (2 ತಿಮೊಥೆಯ 3:1-5; ಮತ್ತಾಯ 24:3-14) ದೇವರ ವಾಗ್ದತ್ತ ಹೊಸ ಲೋಕದಲ್ಲಿ, ನಿಜವಾದ ಸಹೋದರತ್ವವು ಇರುವುದು. ಯಾಕಂದರೆ ಆಗ ಮಾನವರೆಲ್ಲರೂ ಪರಿಪೂರ್ಣತೆಗೆ ಏರಿಸಲ್ಪಟ್ಟಿರುವರು.—ಲೂಕ 23:43; 2 ಪೇತ್ರ 3:13.

ಆದರೆ ಅಂತಹ ನೈಜವಾದ ಭಾತೃತ್ವವನ್ನು ಸವಿಯಲು ನೀವು ಅಷ್ಟರ ವರೆಗೆ ಕಾಯಬೇಕಾಗಿಲ್ಲ. ವಾಸ್ತವದಲ್ಲಿ, ಈ ಲೇಖನದೊಂದಿಗಿರುವ ರೇಖಾಚೌಕದಲ್ಲಿ ತೋರಿಸಲ್ಪಟ್ಟಿರುವಂತೆ, ಕ್ರೈಸ್ತ ಪ್ರೀತಿಯು ಈಗಾಗಲೇ ಕೋಟಿಗಟ್ಟಲೆ ಜನರ ಹೃದಯಗಳಲ್ಲಿ ದ್ವೇಷವನ್ನು ಸ್ಥಾನಪಲ್ಲಟಗೊಳಿಸಿದೆ. ನೀವು ಕೂಡ ಆ ಪ್ರೀತಿಪರ ಸಹೋದರತ್ವದ ಭಾಗವಾಗುವಂತೆ ಆಮಂತ್ರಿಸಲ್ಪಟ್ಟಿದ್ದೀರಿ!

[ಪುಟ 7ರಲ್ಲಿರುವ ಚಿತ್ರ]

ದೇವರ ರಾಜ್ಯದ ಕೆಳಗೆ ದ್ವೇಷದ ಎಲ್ಲ ಕುರುಹುಗಳು ಭೂಮಿಯಿಂದ ತೆಗೆದುಹಾಕಲ್ಪಟ್ಟಿರುವವು