ಭಿನ್ನಾಭಿಪ್ರಾಯಗಳನ್ನು ನೀವು ಹೇಗೆ ಬಗೆಹರಿಸುತ್ತೀರಿ?
ಭಿನ್ನಾಭಿಪ್ರಾಯಗಳನ್ನು ನೀವು ಹೇಗೆ ಬಗೆಹರಿಸುತ್ತೀರಿ?
ಪ್ರತಿ ದಿನ ನಾವು ಬೇರೆ ಬೇರೆ ವ್ಯಕ್ತಿತ್ವಗಳುಳ್ಳ ಜನರೊಂದಿಗೆ ವ್ಯವಹರಿಸುತ್ತೇವೆ. ಇದರಿಂದ ನಮಗೆ ಆನಂದವೂ ಉಂಟಾಗುತ್ತದೆ, ಹೊಸ ಹೊಸ ದೃಷ್ಟಿಕೋನಗಳೂ ತಿಳಿದುಬರುತ್ತವೆ. ಆದರೆ ಆಗಾಗ್ಗೆ, ಇದರಿಂದ ಭಿನ್ನಾಭಿಪ್ರಾಯಗಳೂ ಉದ್ಭವಿಸುತ್ತವೆ. ಕೆಲವು ಭಿನ್ನಾಭಿಪ್ರಾಯಗಳು ದಿನನಿತ್ಯದ ಸಾಮಾನ್ಯ ಘರ್ಷಣೆಗಳಾಗಿರುತ್ತವೆ, ಆದರೆ ಕೆಲವೊಂದು ಗಂಭೀರವಾದದ್ದಾಗಿರುತ್ತವೆ. ಅವು ಯಾವುದೇ ರೀತಿಯದ್ದಾಗಿರಲಿ, ಈ ಭಿನ್ನಾಭಿಪ್ರಾಯಗಳನ್ನು ನಾವು ಹೇಗೆ ನಿರ್ವಹಿಸುತ್ತೇವೊ ಅದು ನಮ್ಮ ಮೇಲೆ ಮಾನಸಿಕ, ಭಾವನಾತ್ಮಕ ಮತ್ತು ಆತ್ಮಿಕ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ.
ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡುವುದರಿಂದ, ನಾವು ಒಳ್ಳೇ ಆರೋಗ್ಯವನ್ನು ಆನಂದಿಸಲು ಮತ್ತು ಇತರರೊಂದಿಗೆ ಶಾಂತಿಭರಿತ ಸಂಬಂಧಗಳನ್ನು ಇಟ್ಟುಕೊಳ್ಳಲು ಸಹಾಯವಾಗುವುದು. ಒಂದು ಪುರಾತನ ಜ್ಞಾನೋಕ್ತಿಯು ಹೀಗನ್ನುತ್ತದೆ: “ಶಾಂತಿಗುಣವು ದೇಹಕ್ಕೆ ಜೀವಾಧಾರವು; ಕ್ರೋಧವು ಎಲುಬಿಗೆ ಕ್ಷಯವು.”—ಜ್ಞಾನೋಕ್ತಿ 14:30.
ಇದಕ್ಕೆ ವ್ಯತಿರಿಕ್ತವಾಗಿ ಒಂದು ಸತ್ಯೋಕ್ತಿಯಿದೆ: “ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.” (ಜ್ಞಾನೋಕ್ತಿ 25:28) ಅನುಚಿತವಾದ ರೀತಿಯಲ್ಲಿ, ಅಂದರೆ ನಮಗೂ ಇತರರಿಗೂ ಹಾನಿಯನ್ನುಂಟುಮಾಡುವ ರೀತಿಯಲ್ಲಿ ವರ್ತಿಸುವಂತೆ ಮಾಡುವ ತಪ್ಪಾಲೋಚನೆಗಳ ಆಕ್ರಮಣಕ್ಕೆ ಸುಲಭವಾಗಿ ತುತ್ತಾಗಲು ನಮ್ಮಲ್ಲಿ ಯಾರು ತಾನೇ ಬಯಸುವೆವು? ಅನಿಯಂತ್ರಿತ, ಕೋಪದ ಪ್ರತಿವರ್ತನೆಗಳು ಅದನ್ನೇ ಮಾಡಬಲ್ಲವು. ಯೇಸು ತನ್ನ ಪರ್ವತ ಪ್ರಸಂಗದಲ್ಲಿ ನಾವು ನಮ್ಮ ಮನೋಭಾವವನ್ನು ಪರೀಕ್ಷಿಸುವಂತೆ ಹೇಳುತ್ತಾನೆ. ಯಾಕೆಂದರೆ ನಮಗೆ ಇತರರೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿರುವಾಗ, ನಾವು ಅವುಗಳನ್ನು ಬಗೆಹರಿಸುವ ರೀತಿಯ ಮೇಲೆ ನಮ್ಮ ಮನೋಭಾವ ಪ್ರಭಾವ ಬೀರಬಹುದು. (ಮತ್ತಾಯ 7:3-5) ಇತರರಲ್ಲಿ ಯಾವಾಗಲೂ ತಪ್ಪನ್ನು ಕಂಡುಹಿಡಿಯಲು ಪ್ರಯತ್ನಿಸುವ ಬದಲಿಗೆ, ಬೇರೆ ಬೇರೆ ದೃಷ್ಟಿಕೋನಗಳುಳ್ಳ ಮತ್ತು ಬೇರೆ ಬೇರೆ ಹಿನ್ನೆಲೆಗಳಿಂದ ಬಂದಿರುವವರೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವುದು ಮತ್ತು ಅದನ್ನು ಕಾಪಾಡಿಕೊಂಡು ಹೋಗುವುದು ಹೇಗೆಂಬುದರ ಕುರಿತು ಯೋಚಿಸಬೇಕು.
ನಮ್ಮ ಮನೋಭಾವ
ನಿಜವಾಗಿ ಒಂದು ಭಿನ್ನಾಭಿಪ್ರಾಯವಿರುವಲ್ಲಿ ಅಥವಾ ಭಿನ್ನಾಭಿಪ್ರಾಯವಿರುವುದನ್ನು ನಾವು ಗ್ರಹಿಸಿರುವಲ್ಲಿ, ನಾವು ತೆಗೆದುಕೊಳ್ಳಬೇಕಾದ ಮೊದಲನೆಯ ಹೆಜ್ಜೆ ಇದಾಗಿದೆ: ನಾವೆಲ್ಲರೂ ತಪ್ಪಾಲೋಚನೆಗಳು ಮತ್ತು ಮನೋಭಾವಗಳಿಗೆ ಬಲಿಬೀಳುತ್ತೇವೆಂಬುದನ್ನು ಗ್ರಹಿಸಿಕೊಳ್ಳುವುದೇ. ನಾವೆಲ್ಲರೂ ಪಾಪಮಾಡಿ, ‘ದೇವರ ಮಹಿಮೆಯನ್ನು ಹೊಂದದೆ ಹೋಗುತ್ತೇವೆ’ ಎಂದು ಶಾಸ್ತ್ರವಚನಗಳು ನಮಗೆ ನೆನಪುಹುಟ್ಟಿಸುತ್ತವೆ. (ರೋಮಾಪುರ 3:23) ಇದಕ್ಕೆ ಕೂಡಿಸಿ, ಸಮಸ್ಯೆಗೆ ನಾವೇ ಕಾರಣರೆಂದು ವಿವೇಚನಾಶಕ್ತಿಯು ನಮಗೆ ತೋರಿಸಿಕೊಡಬಹುದು. ಈ ವಿಷಯದ ಸಂಬಂಧದಲ್ಲಿ ನಾವು ಯೋನನ ಅನುಭವವನ್ನು ಪರಿಗಣಿಸೋಣ.
ಯೆಹೋವನ ಸೂಚನೆಯ ಮೇರೆಗೆ ಯೋನನು ನಿನೆವೆ ಪಟ್ಟಣಕ್ಕೆ ಹೋಗಿ, ಅದರ ನಿವಾಸಿಗಳ ಮೇಲೆ ಬರಲಿದ್ದ ದೇವರ ನ್ಯಾಯದಂಡನೆಯ ಕುರಿತಾಗಿ ಸಾರಿದನು. ಸಂತೋಷಕರವಾಗಿ, ನಿನೆವೆ ಪಟ್ಟಣದವರೆಲ್ಲರೂ ಪಶ್ಚಾತ್ತಾಪಪಟ್ಟು, ಸತ್ಯ ದೇವರಲ್ಲಿ ನಂಬಿಕೆಯನ್ನಿಟ್ಟರು. (ಯೋನ 3:5-10) ಅವರು ಪಶ್ಚಾತ್ತಾಪಪಟ್ಟದ್ದರಿಂದಾಗಿ, ಅವರನ್ನು ಕ್ಷಮಿಸುವುದು ಸರಿಯಾಗಿದೆಯೆಂದು ಯೆಹೋವನಿಗನಿಸಿ, ಅವರನ್ನು ಉಳಿಸಿದನು. ಆದರೆ ‘ಇದರಿಂದ ಯೋನನಿಗೆ ಬಹು ಕರಕರೆಯಾಯಿತು ಮತ್ತು ಅವನು ಸಿಟ್ಟುಗೊಂಡನು.’ (ಯೋನ 4:1) ಯೆಹೋವನ ಕರುಣೆಗೆ ಯೋನನು ಪ್ರತಿಕ್ರಿಯಿಸಿದಂತಹ ರೀತಿಯು, ಆಶ್ಚರ್ಯಗೊಳಿಸುವಂಥದ್ದಾಗಿತ್ತು. ಯೋನನು ಯೆಹೋವನ ಮೇಲೆ ಏಕೆ ಸಿಟ್ಟುಗೊಂಡನು? ಆ ಸಮುದಾಯದವರ ಮುಂದೆ ತನ್ನ ಅವಮಾನವಾಯಿತಲ್ಲ ಎಂಬ ತನ್ನ ಸ್ವಂತ ಭಾವನೆಗಳಲ್ಲೇ ಯೋನನು ಮುಳುಗಿಹೋಗಿದ್ದಿರಬಹುದು. ಅವನು ಯೆಹೋವನ ಕರುಣೆಯನ್ನು ಗ್ರಹಿಸಿಕೊಳ್ಳಲು ತಪ್ಪಿಹೋದನು. ಆದರೆ ಯೆಹೋವನು ಯೋನನಿಗೆ ದಯೆಯಿಂದಲೇ ಒಂದು ವಸ್ತುಪಾಠವನ್ನು ಕಲಿಸಿದನು. ಇದು, ಅವನು ತನ್ನ ಮನೋಭಾವವನ್ನು ಬದಲಾಯಿಸಿ, ದೇವರ ಕರುಣೆಯು ಎಷ್ಟು ಶ್ರೇಷ್ಠವಾದದ್ದು ಎಂಬುದನ್ನು ನೋಡುವಂತೆ ಸಹಾಯಮಾಡಿತು. (ಯೋನ 4:7-11) ಇಲ್ಲಿ, ಯೆಹೋವನಲ್ಲ ಬದಲಾಗಿ ಯೋನನೇ ತನ್ನ ಮನೋಭಾವವನ್ನು ಬದಲಾಯಿಸಬೇಕಾಗಿತ್ತೆಂಬುದು ಸ್ಪಷ್ಟ.
ರೋಮಾಪುರ 12:10) ಅವನ ಮಾತಿನ ಅರ್ಥವೇನಾಗಿತ್ತು? ಒಂದರ್ಥದಲ್ಲಿ ನಾವು ವಿವೇಚನಾಶೀಲರಾಗಿರುವಂತೆ ಅವನು ಉತ್ತೇಜಿಸುತ್ತಿದ್ದಾನೆ. ಅಷ್ಟುಮಾತ್ರವಲ್ಲದೆ, ನಾವು ಬೇರೆ ಕ್ರೈಸ್ತರನ್ನು ತುಂಬ ಗೌರವ ಘನತೆಯಿಂದ ಉಪಚರಿಸಬೇಕು. ಇದರಲ್ಲಿ, ಪ್ರತಿಯೊಬ್ಬ ವ್ಯಕ್ತಿಗೆ ಸ್ವತಂತ್ರ ಆಯ್ಕೆಯ ಸುಯೋಗವಿದೆ ಎಂಬುದನ್ನು ಒಪ್ಪಿಕೊಳ್ಳುವುದು ಸೇರಿರುತ್ತದೆ. ಪೌಲನು ನಮಗೆ ಇದನ್ನೂ ಜ್ಞಾಪಕಹುಟ್ಟಿಸುತ್ತಾನೆ: “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5) ಆದುದರಿಂದ ಭಿನ್ನಾಭಿಪ್ರಾಯಗಳಿಂದಾಗಿ ಇನ್ನೊಬ್ಬರೊಂದಿಗಿನ ನಮ್ಮ ಸಂಬಂಧದಲ್ಲಿ ಬಿರುಕು ಹುಟ್ಟುವ ಮುಂಚೆ, ನಮ್ಮ ಮನೋಭಾವದಲ್ಲೇ ಎಲ್ಲಿಯಾದರೂ ಬದಲಾವಣೆ ಮಾಡುವ ಅಗತ್ಯವಿದೆಯೊ ಎಂಬುದನ್ನು ಪರೀಕ್ಷಿಸಿ ನೋಡುವುದು ಹೆಚ್ಚು ವಿವೇಕಯುತ! ಯೆಹೋವನು ಯೋಚಿಸುವಂತಹ ರೀತಿಯಲ್ಲೇ ಯೋಚಿಸಲಿಕ್ಕಾಗಿ ಮತ್ತು ದೇವರನ್ನು ನಿಜವಾಗಿಯೂ ಪ್ರೀತಿಸುವವರೊಂದಿಗೆ ಶಾಂತಿಯನ್ನು ಕಾಪಾಡಿಕೊಂಡು ಹೋಗಲಿಕ್ಕಾಗಿ ನಾವು ಕಷ್ಟಪಟ್ಟು ಪ್ರಯತ್ನಿಸಬೇಕು.—ಯೆಶಾಯ 55:8, 9.
ಹಾಗೆಯೇ ನಾವು ಕೂಡ ಒಂದು ವಿಷಯದ ಕುರಿತಾಗಿ ನಮಗಿರುವ ಮನೋಭಾವವನ್ನು ಬದಲಾಯಿಸಬೇಕಾಗಬಹುದು. ಅಪೊಸ್ತಲ ಪೌಲನು ನಮಗೆ ಈ ಬುದ್ಧಿವಾದವನ್ನು ಕೊಟ್ಟನು: “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ಭಿನ್ನಾಭಿಪ್ರಾಯಗಳೊಂದಿಗೆ ವ್ಯವಹರಿಸುವ ರೀತಿ
ಇಬ್ಬರು ಮಕ್ಕಳು ಒಂದೇ ಆಟಿಕೆಗಾಗಿ ಜಗ್ಗಾಡುತ್ತಿರುವುದನ್ನು ನೀವು ನೋಡಿರಬಹುದು. ಆ ಆಟಿಕೆ ತನಗೇ ಸಿಗಬೇಕೆಂಬ ಉದ್ದೇಶದಿಂದ ಒಬ್ಬರಿಗಿಂತ ಒಬ್ಬರು ಹೆಚ್ಚು ಬಲಗೂಡಿಸಿ ಎಳೆಯುತ್ತಿರುತ್ತಾರೆ. ಈ ಕಚ್ಚಾಟದಲ್ಲಿ ಅವರು ಕೋಪದಿಂದ ಕಿರುಚಾಡುತ್ತಿರಬಹುದು. ಕೊನೆಯಲ್ಲಿ ಅವರಲ್ಲೊಬ್ಬರು ಆ ಆಟಿಕೆಯನ್ನು ಬಿಟ್ಟುಕೊಡಬೇಕಾಗುತ್ತದೆ ಅಥವಾ ಬೇರೆ ಯಾರಾದರೂ ಮಧ್ಯ ಪ್ರವೇಶಿಸಬೇಕಾಗುತ್ತದೆ.
ಆದಿಕಾಂಡದ ವೃತ್ತಾಂತದಲ್ಲಿ, ಅಬ್ರಹಾಮನು ತನ್ನ ದನಕಾಯುವವರು ಮತ್ತು ತನ್ನ ಸೋದರಳಿಯನಾದ ಲೋಟನ ದನಕಾಯುವವರ ನಡುವೆ ನಡೆದ ಒಂದು ವಾಗ್ವಾದದ ಕುರಿತಾಗಿ ಕೇಳಿಸಿಕೊಂಡನೆಂದು ಹೇಳಲಾಗಿದೆ. ಅಬ್ರಹಾಮನೇ ಲೋಟನೊಂದಿಗೆ ಮಾತಾಡುವ ಮೊದಲ ಹೆಜ್ಜೆಯನ್ನು ತೆಗೆದುಕೊಂಡು, ಹೀಗಂದನು: “ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರಲ್ಲವೇ.” ಯಾವುದೇ ರೀತಿಯ ಸಂಘರ್ಷದಿಂದಾಗಿ ತಮ್ಮ ನಡುವಿನ ಸಂಬಂಧಕ್ಕೆ ಹಾನಿಯಾಗಬಾರದೆಂಬುದು ಅಬ್ರಹಾಮನ ದೃಢಸಂಕಲ್ಪವಾಗಿತ್ತು. ಆದರೆ ಆ ಸಂಬಂಧವನ್ನು ಕಾಪಾಡಿಕೊಳ್ಳಲು ಅವನು ಯಾವ ಬೆಲೆಯನ್ನು ತೆರಲು ಸಿದ್ಧನಿದ್ದನು? ಅವನು ತನ್ನ ವತಿಯಿಂದ ಏನನ್ನೊ ಬಿಟ್ಟುಕೊಡಲು ಸಿದ್ಧನಿದ್ದನು. ಅವರಿಬ್ಬರಲ್ಲಿ ಅವನೇ ಹಿರಿಯನಾಗಿದ್ದನು, ಮತ್ತು ದೇಶವನ್ನು ಆಯ್ಕೆಮಾಡುವ ಹಕ್ಕು ಅವನಿಗೇ ಇತ್ತು. ಆದರೆ ಅಬ್ರಹಾಮನು ತನ್ನ ಈ ಸುಯೋಗವನ್ನು ಬಿಟ್ಟುಕೊಟ್ಟನು. ಲೋಟನು ತನ್ನ ಮನೆತನ ಮತ್ತು ದನಕುರಿಗಳನ್ನು ಎಲ್ಲಿಗೆ ಕೊಂಡುಹೋಗಲು ಬಯಸಿದನೊ ಆ ಕ್ಷೇತ್ರವನ್ನು ಮೊದಲು ಆರಿಸಿಕೊಳ್ಳುವಂತೆ ಅಬ್ರಹಾಮನು ಲೋಟನಿಗೆ ಅನುಮತಿ ನೀಡಿದನು. ಲೋಟನು ತನಗಾಗಿ ಸೊದೋಮ್ ಗೊಮೋರದ ಹಚ್ಚಹಸಿರಾದ ಕ್ಷೇತ್ರವನ್ನು ಆರಿಸಿಕೊಂಡನು. ಮತ್ತು ಹೀಗೆ ಅಬ್ರಹಾಮ ಹಾಗೂ ಲೋಟರು ಸಮಾಧಾನದಿಂದ ತಮ್ಮ ತಮ್ಮ ದಾರಿ ಹಿಡಿದರು.—ಆದಿಕಾಂಡ 13:5-12.
ಇತರರೊಂದಿಗೆ ಶಾಂತಿಪೂರ್ವಕ ಸಂಬಂಧಗಳನ್ನು ಕಾಪಾಡಿಕೊಂಡು ಹೋಗಲಿಕ್ಕಾಗಿ, ನಾವು ಅಬ್ರಹಾಮನಂತೆಯೇ ವರ್ತಿಸಲು ಸಿದ್ಧರಿದ್ದೇವೊ? ಈ ಬೈಬಲ್ ಘಟನೆಯಲ್ಲಿ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಾಗ ನಾವು ಅನುಕರಿಸಬಹುದಾದ ಒಂದು ಒಳ್ಳೆಯ ಮಾದರಿಯನ್ನು ನೋಡುತ್ತೇವೆ. ನಮ್ಮಲ್ಲಿ “ಜಗಳವಿರಬಾರದು” ಎಂದು ಅಬ್ರಹಾಮನು ಬೇಡಿಕೊಂಡನು. ಏಕೆಂದರೆ ಶಾಂತಿಪೂರ್ವಕವಾಗಿ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಅಬ್ರಹಾಮನ ಪ್ರಾಮಾಣಿಕ ಮನದಾಸೆಯಾಗಿತ್ತು. ಶಾಂತಿಪೂರ್ವಕ ಸಂಬಂಧಗಳನ್ನಿಡಲಿಕ್ಕಾಗಿ ಅಂತಹ ಒಂದು ವಿನಂತಿಯನ್ನು ಮಾಡುವುದು, ಯಾವುದೇ ರೀತಿಯ ತಪ್ಪಭಿಪ್ರಾಯವನ್ನು ತೆಗೆದುಹಾಕಲು ಖಂಡಿತವಾಗಿಯೂ ಸಹಾಯಮಾಡುವುದು. ಆನಂತರ ಅಬ್ರಹಾಮನು, “ನಾವು ಸಹೋದರರಲ್ಲವೇ” ಎಂಬ ವಾಕ್ಸರಣಿಯೊಂದಿಗೆ ಕೊನೆಗೊಳಿಸುತ್ತಾನೆ. ತನ್ನ ಸ್ವಂತ ಇಷ್ಟವನ್ನು ಈಡೇರಿಸಲಿಕ್ಕಾಗಿ ಅಥವಾ ಅಹಂಕಾರದಿಂದಾಗಿ, ಇಷ್ಟೊಂದು ಅಮೂಲ್ಯವಾದ ಸಂಬಂಧವನ್ನು ಏಕೆ ಕಡಿದುಕೊಳ್ಳಬೇಕೆಂಬುದು ಅವನ ಅಭಿಪ್ರಾಯವಾಗಿತ್ತು. ಯಾವುದು ಪ್ರಾಮುಖ್ಯವಾಗಿದೆಯೊ ಅದಕ್ಕೆ ಅಬ್ರಹಾಮನು ಹೆಚ್ಚು ಮಹತ್ವವನ್ನು ಕೊಟ್ಟನು. ಅದನ್ನು ಅವನು ಸ್ವಗೌರವ ಮತ್ತು ಸನ್ಮಾನದೊಂದಿಗೆ ಮಾಡಿದನು ಮಾತ್ರವಲ್ಲ, ಅದೇ ಸಮಯದಲ್ಲಿ ತನ್ನ ಸೋದರಳಿಯನನ್ನು ಸಹ ಘನಪಡಿಸಿದನು.
ಒಂದು ಭಿನ್ನಾಭಿಪ್ರಾಯವನ್ನು ಬಗೆಹರಿಸಲಿಕ್ಕಾಗಿ ಬೇರೆ ಯಾರಾದರೂ ಮಧ್ಯಬರಬೇಕಾದಂತಹ ಸನ್ನಿವೇಶಗಳಲ್ಲೂ, ಆ ಸಮಸ್ಯೆಯನ್ನು ಏಕಾಂತದಲ್ಲಿ ಬಗೆಹರಿಸುವುದು ಅದೆಷ್ಟು ಹೆಚ್ಚು ಉತ್ತಮ! ನಮ್ಮ ಸಹೋದರರೊಂದಿಗೆ ಶಾಂತಿ ಸ್ಥಾಪಿಸಲು, ಬೇಕಾದಲ್ಲಿ ಕ್ಷಮೆಯಾಚಿಸಲಿಕ್ಕಾಗಿಯೂ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಯೇಸು ಉತ್ತೇಜಿಸುತ್ತಾನೆ. * (ಮತ್ತಾಯ 5:23, 24) ಇದಕ್ಕಾಗಿ ನಮ್ರತೆ ಅಥವಾ ದೀನಮನಸ್ಸು ಆವಶ್ಯಕ. ಪೇತ್ರನು ಹೀಗೆ ಬರೆದನು: “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (1 ಪೇತ್ರ 5:5) ನಾವು ನಮ್ಮ ಜೊತೆ ಆರಾಧಕರನ್ನು ಹೇಗೆ ಉಪಚರಿಸುತ್ತೇವೊ ಅದು, ದೇವರೊಂದಿಗಿನ ನಮ್ಮ ಸಂಬಂಧದ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ.—1 ಯೋಹಾನ 4:20.
ಕ್ರೈಸ್ತ ಸಭೆಯೊಳಗೆ ಶಾಂತಿಯನ್ನು ಕಾಪಾಡಲಿಕ್ಕೋಸ್ಕರ, ನಮಗೆ ಮಾಡಲು ಹಕ್ಕು ಇರುವಂತಹ ಸಂಗತಿಗಳನ್ನು ಸಹ ಬಿಟ್ಟುಕೊಡಬೇಕಾಗಬಹುದು. ಕಳೆದ ಐದು ವರ್ಷಗಳಲ್ಲಿ, ದೇವರ ಸತ್ಯಾರಾಧಕರ ಕುಟುಂಬದೊಳಗೆ ಅನೇಕರು ಬಂದು ಸೇರಿದ್ದಾರೆ. ಇವರು ಈಗ ಯೆಹೋವನ ಸಾಕ್ಷಿಗಳೊಂದಿಗೆ ಸಹವಸಿಸುತ್ತಿದ್ದಾರೆ. ಇದರಿಂದ ನಮಗೆಷ್ಟು ಸಂತೋಷವಾಗುತ್ತದೆ! ನಾವು ಹೇಗೆ ನಡೆದುಕೊಳ್ಳುತ್ತೇವೊ ಅದು ಖಂಡಿತವಾಗಿಯೂ ಈ ಹೊಸಬರ ಮೇಲೆ ಮತ್ತು ಸಭೆಯಲ್ಲಿರುವ ಇತರರ ಮೇಲೆ ಪರಿಣಾಮವನ್ನು ಬೀರುತ್ತದೆ. ಆದುದರಿಂದ ಬೇರೆಯವರು ನಮ್ಮನ್ನು ಹೇಗೆ ಕಾಣುವರೆಂಬುದನ್ನು ಪರಿಗಣಿಸುತ್ತಾ, ನಾವು ನಮ್ಮ ಮನೋರಂಜನೆ, ಹವ್ಯಾಸಗಳು, ಸಾಮಾಜಿಕ ಚಟುವಟಿಕೆಗಳು, ಅಥವಾ ಉದ್ಯೋಗವನ್ನು ಹೆಚ್ಚು ಜಾಗರೂಕತೆಯಿಂದ ಪರಿಗಣಿಸುವುದಕ್ಕೆ ಇದೊಂದು ಒಳ್ಳೆಯ ಕಾರಣವಾಗಿದೆ. ನಮ್ಮ ಯಾವುದೇ ವರ್ತನೆ ಅಥವಾ ಮಾತುಗಳನ್ನು ಅಪಾರ್ಥಮಾಡಿಕೊಂಡು, ಇತರರು ಎಡವಿಬೀಳುವ ಸಾಧ್ಯತೆಯಿದೆಯೊ?
ಅಪೊಸ್ತಲ ಪೌಲನು ನಮಗೆ ಹೀಗೆ ನೆನಪುಹುಟ್ಟಿಸುತ್ತಾನೆ: “ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, ಆದರೆ ಎಲ್ಲವೂ ಭಕ್ತಿಯನ್ನು ಬೆಳಿಸುವದಿಲ್ಲ. ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.” (1 ಕೊರಿಂಥ 10:23, 24) ಕ್ರೈಸ್ತರೋಪಾದಿ, ನಾವು ನಮ್ಮ ಕ್ರೈಸ್ತ ಸಹೋದರತ್ವದ ಪ್ರೀತಿಐಕ್ಯತೆಯನ್ನು ಹೆಚ್ಚಿಸುವುದರ ಕುರಿತಾಗಿ ನಿಜವಾಗಿಯೂ ಚಿಂತಿತರಾಗಿದ್ದೇವೆ.—ಕೀರ್ತನೆ 133:1; ಯೋಹಾನ 13:34, 35.
ವಾಸಿಕಾರಕ ನುಡಿಗಳು
ಮಾತುಗಳು ಬಲವಾದ ರೀತಿಯಲ್ಲಿ ಒಳ್ಳೆಯ ಪ್ರಭಾವವನ್ನು ಬೀರಬಲ್ಲವು. “ಸವಿನುಡಿಯು ಜೇನುಕೊಡ; ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ [“ವಾಸಿಕಾರಕ,” NW].” (ಜ್ಞಾನೋಕ್ತಿ 16:24) ಗಿದ್ಯೋನನು ಎಫ್ರಾಯೀಮ್ಯರೊಂದಿಗಿನ ಒಂದು ಸಂಭಾವ್ಯ ಯುದ್ಧವನ್ನು ತಪ್ಪಿಸಿಕೊಳ್ಳುವ ಕುರಿತಾದ ವೃತ್ತಾಂತವು ಆ ಜ್ಞಾನೋಕ್ತಿಯ ಸತ್ಯತೆಯನ್ನು ದೃಷ್ಟಾಂತಿಸುತ್ತದೆ.
ಮಿದ್ಯಾನ್ಯರ ವಿರುದ್ಧ ಒಂದು ಯುದ್ಧದಲ್ಲಿ ತಲ್ಲೀನನಾಗಿದ್ದ ಗಿದ್ಯೋನನು, ಎಫ್ರಾಯೀಮ್ ಕುಲದವರಿಂದ ಸಹಾಯವನ್ನು ಕೋರಿದನು. ಆದರೆ ಯುದ್ಧವು ಮುಗಿದ ನಂತರ, ಈ ಎಫ್ರಾಯೀಮ್ ಕುಲದವರು ಗಿದ್ಯೋನನ ಮೇಲೆ ಸಿಟ್ಟುಮಾಡಿ, ಅವರನ್ನು ಯುದ್ಧದ ಆರಂಭದಲ್ಲೇ ಕರೆಯದಿದ್ದಕ್ಕಾಗಿ ದೂಷಿಸಲಾರಂಭಿಸಿದರು. ಅವರು “ಉಗ್ರದಿಂದ ಕಲಹಮಾಡಿದರು” ಎಂದು ಆ ದಾಖಲೆಯು ತಿಳಿಸುತ್ತದೆ. ಇದಕ್ಕೆ ಉತ್ತರವಾಗಿ ಗಿದ್ಯೋನನು ಹೇಳಿದ್ದು: “ನೀವು ಮಾಡಿದ ಕಾರ್ಯಕ್ಕೆ ಸಮಾನವಾದದ್ದನ್ನು ನಾನೇನು ಮಾಡಿದೆನು? ಅಬೀಯೆಜೆರನವರು ಸುಗ್ಗಿಯಲ್ಲಿ ಕೂಡಿಸಿದ್ದಕ್ಕಿಂತಲೂ ಎಫ್ರಾಯೀಮ್ಯರು ಹಕ್ಕಲಾಯ್ದು ಕೂಡಿಸಿದ್ದು ಹೆಚ್ಚಾಗಿದೆಯಲ್ಲವೇ. ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ನಾಯಕರಾದ ಓರೇಬ್ ಜೇಬರನ್ನು ಒಪ್ಪಿಸಿಕೊಟ್ಟಿದ್ದಾನಲ್ಲಾ! ಇದಕ್ಕೆ ಸಮಾನವಾದದ್ದನ್ನು ನಾನೇನು ಮಾಡಿದ್ದೇನೆ”? (ನ್ಯಾಯಸ್ಥಾಪಕರು 8:1-3) ಅವನು ಯೋಚಿಸಿ ನುಡಿದಂತಹ ಶಾಂತವಾದ ಮಾತುಗಳಿಂದ, ಗಿದ್ಯೋನನು ಒಂದು ವಿಪತ್ಕಾರಕ ಅಂತರ್ಜಾತೀಯ ಯುದ್ಧವನ್ನು ತಪ್ಪಿಸಿದನು. ಎಫ್ರಾಯೀಮ್ ಕುಲದವರಿಗೆ, ಸ್ವಪ್ರತಿಷ್ಠೆ ಮತ್ತು ಅಹಂಕಾರವಿದ್ದಿರಬಹುದು. ಆದರೂ, ಒಂದು ಶಾಂತಿಪೂರ್ವಕ ರೀತಿಯಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲಿಕ್ಕಾಗಿ ಪ್ರಯತ್ನಮಾಡುವುದರಿಂದ ಇದು ಗಿದ್ಯೋನನನ್ನು ತಡೆಯಲಿಲ್ಲ. ನಾವು ಸಹ ಹಾಗೆಯೇ ಮಾಡಬಹುದೊ?
ಬೇರೆಯವರು ಕುಪಿತರಾಗಿ, ನಮ್ಮನ್ನು ದ್ವೇಷಿಸಬಹುದು. ಆಗ ಅವರ ಭಾವನೆಗಳನ್ನು ಅಂಗೀಕರಿಸಿ, ಅವರ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಅವರಲ್ಲಿ ಆ ರೀತಿಯ ಭಾವನೆಗಳುಂಟಾಗುವಂತೆ ನಾವು ಯಾವುದೇ ರೀತಿಯಲ್ಲಿ ಕಾರಣರಾಗಿದ್ದಿರಬಹುದೊ? ಹಾಗಿರುವಲ್ಲಿ, ಈ ಸಮಸ್ಯೆಯನ್ನು ಉಂಟುಮಾಡುವುದರಲ್ಲಿ ನಾವು ವಹಿಸಿರುವ ಪಾತ್ರವನ್ನು ಒಪ್ಪಿಕೊಂಡು, ಆ ಸಮಸ್ಯೆಯನ್ನು ಹೆಚ್ಚಿಸಿದಕ್ಕಾಗಿ ನಮಗೆ ನಮ್ಮ ಮೇಲೆಯೇ ಬೇಸರವಾಗಿದೆಯೆಂದು ನಾವೇಕೆ ಹೇಳಬಾರದು? ಚೆನ್ನಾಗಿ ಯೋಚಿಸಿ ಆರಿಸಿಕೊಂಡಿರುವ ಮಾತುಗಳನ್ನು ನುಡಿಯುವುದು, ಹಾನಿಗೊಳಗಾಗಿರುವ ಒಂದು ಸಂಬಂಧವನ್ನು ಸರಿಪಡಿಸಸಾಧ್ಯವಿದೆ. (ಯಾಕೋಬ 3:4) ಕ್ಷೋಭೆಗೊಂಡಿರುವ ಕೆಲವು ವ್ಯಕ್ತಿಗಳಿಗೆ ನಾವು ದಯಾಪೂರ್ವಕವಾಗಿ ಪುನರ್‌ಆಶ್ವಾಸನೆಯ ಮಾತುಗಳನ್ನಾಡಬಹುದು. “ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 26:20) ಹೌದು, ಯೋಗ್ಯವಾದ ಮನೋವೃತ್ತಿ ಮತ್ತು ಚೆನ್ನಾಗಿ ಯೋಚಿಸಿ ನುಡಿಯಲ್ಪಡುವ ಮಾತುಗಳು, “ಸಿಟ್ಟನ್ನಾರಿಸುವದು” ಮತ್ತು ಕ್ಷೇಮವನ್ನು ಉಂಟುಮಾಡುವದು.—ಜ್ಞಾನೋಕ್ತಿ 15:1.
ಅಪೊಸ್ತಲ ಪೌಲನು ಈ ಬುದ್ಧಿವಾದವನ್ನು ನೀಡುತ್ತಾನೆ: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾಪುರ 12:18) ನಾವು ಬೇರೆಯವರ ಭಾವನೆಗಳನ್ನು ನಿಯಂತ್ರಿಸಲಾರೆವು ಎಂಬುದು ನಿಜ. ಆದರೆ ಶಾಂತಿಯನ್ನು ಪ್ರವರ್ಧಿಸಲಿಕ್ಕಾಗಿ ನಾವು ಖಂಡಿತವಾಗಿಯೂ ನಮ್ಮ ಪ್ರಯತ್ನವನ್ನು ಮಾಡಬಹುದು. ನಮ್ಮ ಸ್ವಂತ ಅಪರಿಪೂರ್ಣ ಪ್ರತಿವರ್ತನೆಗಳಿಗೆ ಅಥವಾ ಬೇರೆಯವರ ಅಪರಿಪೂರ್ಣ ಪ್ರತಿವರ್ತನೆಗಳಿಗೆ ಸುಲಭವಾಗಿ ತುತ್ತಾಗುವ ಬದಲಿಗೆ, ನಾವು ಬೈಬಲಿನ ಸಾಧಾರವಾದ ತತ್ತ್ವಗಳನ್ನು ಈಗಲೇ ಅನ್ವಯಿಸಿಕೊಳ್ಳಬೇಕು. ಯೆಹೋವನು ನಮಗೆ ತಿಳಿಸುವಂತಹ ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದರಿಂದ ನಮಗೆ ನಿತ್ಯ ಶಾಂತಿ ಮತ್ತು ಸಂತೋಷವು ಲಭಿಸುವುದು.—ಯೆಶಾಯ 48:17.
[ಪಾದಟಿಪ್ಪಣಿ]
^ ಪ್ಯಾರ. 13 ಅಕ್ಟೋಬರ್ 15, 1999ರ ಕಾವಲಿನಬುರುಜು ಪತ್ರಿಕೆಯಲ್ಲಿ, “ನಿಮ್ಮ ಹೃದಯಾಂತರಾಳದಿಂದ ಕ್ಷಮಿಸಿರಿ” ಮತ್ತು “ನಿಮ್ಮ ಸಹೋದರನನ್ನು ನೀವು ಸಂಪಾದಿಸಿಕೊಳ್ಳುವ ಸಂಭವವಿದೆ” ಎಂಬ ಲೇಖನಗಳನ್ನು ನೋಡಿರಿ.
[ಪುಟ 24ರಲ್ಲಿರುವ ಚಿತ್ರ]
ಎಲ್ಲವೂ ನಮ್ಮ ಇಷ್ಟದ ಪ್ರಕಾರ ನಡೆಯುವಂತೆ ನಾವು ಹಟಹಿಡಿಯುತ್ತೇವೊ?
[ಪುಟ 25ರಲ್ಲಿರುವ ಚಿತ್ರ]
ಒಂದು ಭಿನ್ನಾಭಿಪ್ರಾಯವನ್ನು ಬಗೆಹರಿಸಲಿಕ್ಕಾಗಿ ಮಣಿಯುವವರಾಗಿರುವುದರಲ್ಲಿ ಅಬ್ರಹಾಮನು ಒಂದು ಒಳ್ಳೆಯ ಮಾದರಿಯನ್ನಿಟ್ಟನು