‘ಅವರು ಸದ್ಗುಣ ಮತ್ತು ಪ್ರೀತಿಯ ಕುರಿತು ಮಾತನಾಡುತ್ತಾರೆ’
‘ಅವರು ಸದ್ಗುಣ ಮತ್ತು ಪ್ರೀತಿಯ ಕುರಿತು ಮಾತನಾಡುತ್ತಾರೆ’
ಇತ್ತೀಚಿನ ವರ್ಷಗಳಲ್ಲಿ, ಫ್ರಾನ್ಸ್ ದೇಶದಲ್ಲಿ ಯೆಹೋವನ ಸಾಕ್ಷಿಗಳಿಗೆ ಅಪಕೀರ್ತಿಯನ್ನು ಉಂಟುಮಾಡುವುದಕ್ಕಾಗಿ ತೀವ್ರವಾದ ಪ್ರಯತ್ನಗಳು ಮಾಡಲ್ಪಡುತ್ತಿವೆ. ಆ ಪ್ರಯತ್ನಗಳಲ್ಲಿ ಅರ್ಧಸತ್ಯ ಮತ್ತು ಅಪಪ್ರಚಾರವನ್ನು ಉಪಯೋಗಿಸುತ್ತಾ, ವಿರೋಧಿಗಳು ಸಾರ್ವಜನಿಕರ ಮುಂದೆ ಸಾಕ್ಷಿಗಳನ್ನು ತಪ್ಪಾಗಿ ನಿರೂಪಿಸುತ್ತಿದ್ದಾರೆ. 1999ನೇ ಇಸವಿಯ ಆರಂಭದಲ್ಲಿ, ಫ್ರಾನ್ಸ್‌ನಾದ್ಯಂತ ಯೆಹೋವನ ಸಾಕ್ಷಿಗಳು 1.2 ಕೋಟಿ ಬಿಡಿಪ್ರತಿಗಳನ್ನು ಸಾರ್ವಜನಿಕರಿಗೆ ಹಂಚಿದ್ದಾರೆ. ಆ ಬಿಡಿಪ್ರತಿಯು ಫ್ರಾನ್ಸಿನ ಜನತೆಯೇ, ನೀವು ವಂಚಿಸಲ್ಪಡುತ್ತಿದ್ದೀರಿ! ಎಂದಾಗಿತ್ತು. ಈ ಬಿಡಿಪ್ರತಿಯು, ಸಾಕ್ಷಿಗಳ ವಿರುದ್ಧ ಮಾಡಲ್ಪಟ್ಟಿದ್ದ ದೂಷಣಾತ್ಮಕ ಹೇಳಿಕೆಗಳನ್ನು ಖಂಡಿಸಿತು.
ಈ ಕಾರ್ಯಾಚರಣೆಯು ಮುಗಿದು ಕೆಲವು ದಿನಗಳ ಬಳಿಕ, ಒಬ್ಬ ಡಾಕ್ಟರರೂ ಶಾಸನಸಭೆಯ ಮಾಜಿ ಸದಸ್ಯರೂ ಆಗಿದ್ದ ಶ್ರಿಮಾನ್. ಝಾನ್ ಬೋನಮ್ ಎಂಬುವವರು ಒಂದು ಬಹಿರಂಗ ಪತ್ರವನ್ನು ಸ್ಥಳಿಕ ವಾರ್ತಾಪತ್ರಿಕೆಯವರಿಗೆ ಬರೆದು ಕಳುಹಿಸಿದರು. ಆ ಪತ್ರದಲ್ಲಿ ಅವರು ಬರೆದದ್ದು: “ಆಗೊಮ್ಮೆ ಈಗೊಮ್ಮೆ ಸಾಕ್ಷಿಗಳು ನನ್ನ ಮನೆಗೆ ಬರುತ್ತಿರುತ್ತಾರೆ. ಅವರು ಸದ್ಗುಣ ಹಾಗೂ ಪ್ರೀತಿಯ ಕುರಿತು ನನ್ನ ಬಳಿ ಮಾತಾಡಲು ಬರುತ್ತಾರೆ. . . . ಅವರು ಯಾರ ಮನೆಯೊಳಗೂ ಬಲವಂತವಾಗಿ ನುಗ್ಗುವುದಿಲ್ಲ. ತಮ್ಮ ಅಭಿಪ್ರಾಯಗಳನ್ನು ಹೆಚ್ಚು ನಯವಿನಯದೊಂದಿಗೆ ವ್ಯಕ್ತಪಡಿಸುತ್ತಾರೆ ಹಾಗೂ ನನಗಿರುವ ಸಂದೇಹಗಳನ್ನು ದಯಾಪೂರ್ವಕವಾಗಿ ಕೇಳಿಸಿಕೊಳ್ಳುತ್ತಾರೆ.”
ಯೆಹೋವನ ಸಾಕ್ಷಿಗಳ ಆತ್ಮಿಕ ದೃಷ್ಟಿಕೋನದ ಕುರಿತು ಹೇಳುತ್ತಾ, ಶ್ರಿಮಾನ್. ಬೋನಮ್ ಅವರು ಹೇಳಿದ್ದು: “ಅವರ ನಿಷ್ಕಪಟತನವು ಯಾರಿಗೂ ಯಾವ ರೀತಿಯಲ್ಲೂ ಹಾನಿಯನ್ನು ಉಂಟುಮಾಡಸಾಧ್ಯವಿಲ್ಲ. ಆದರೆ, ಅದೇ ಸಮಯದಲ್ಲಿ ಕೆಲವು ರಾಜಕಾರಣಿಗಳ ಅಕೃತಿಮತನವು ನಾಗರಿಕರ ಶಾಂತಿ ಮತ್ತು ಸಮಾಜದ ಸಾಮರಸ್ಯಕ್ಕೆ ಹೆಚ್ಚು ಬೆದರಿಕೆಯನ್ನು ಉಂಟುಮಾಡುವಂಥದ್ದಾಗಿದೆ.”