ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನಂತಹ ಮನೋಭಾವವನ್ನು ತೋರ್ಪಡಿಸಿರಿ

ಕ್ರಿಸ್ತನಂತಹ ಮನೋಭಾವವನ್ನು ತೋರ್ಪಡಿಸಿರಿ

ಕ್ರಿಸ್ತನಂತಹ ಮನೋಭಾವವನ್ನು ತೋರ್ಪಡಿಸಿರಿ

“ಆ ಸ್ಥಿರಚಿತ್ತವನ್ನೂ ಆದರಣೆಯನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ನಿಮಗೆ ದಯಪಾಲಿಸಲಿ.”​—ರೋಮಾಪುರ 15:⁠5.

1. ವ್ಯಕ್ತಿಯೊಬ್ಬನ ಮನೋಭಾವವು ಅವನ ಜೀವಿತದ ಮೇಲೆ ಹೇಗೆ ಬಲವಾದ ಪರಿಣಾಮವನ್ನು ಬೀರಸಾಧ್ಯವಿದೆ?

ಜೀವನದಲ್ಲಿ ಮನೋಭಾವವು ತುಂಬ ಪ್ರಾಮುಖ್ಯವಾದದ್ದಾಗಿದೆ. ಉದಾಸೀನಭಾವ ಅಥವಾ ಶ್ರದ್ಧಾಭಾವ, ಸಕಾರಾತ್ಮಕ ಅಥವಾ ನಕಾರಾತ್ಮಕ ಮನೋಭಾವ, ಆಕ್ರಮಣಶೀಲ ಅಥವಾ ಸಹಕಾರದ ಮನೋಭಾವ, ದೋಷಾರೋಪಣೆ ಮಾಡುವ ಅಥವಾ ಕೃತಜ್ಞತೆಯನ್ನು ತೋರಿಸುವ ಮನೋಭಾವ​—⁠ಇವೆಲ್ಲವೂ ಒಬ್ಬ ವ್ಯಕ್ತಿಯು ಕೆಲವೊಂದು ಸನ್ನಿವೇಶಗಳನ್ನು ಹೇಗೆ ನಿಭಾಯಿಸುತ್ತಾನೆ ಮತ್ತು ಇತರರು ಅವನೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬುದರ ಮೇಲೆ ಬಲವಾದ ಪರಿಣಾಮವನ್ನು ಬೀರಸಾಧ್ಯವಿದೆ. ಒಬ್ಬ ವ್ಯಕ್ತಿಗೆ ಒಳ್ಳೆಯ ಮನೋಭಾವವಿರುವುದಾದರೆ, ಅವನು ತುಂಬ ಕಷ್ಟಕರ ಸನ್ನಿವೇಶಗಳಲ್ಲಿ ಸಹ ಸಂತೋಷದಿಂದ ಇರುತ್ತಾನೆ. ಆದರೆ ಕೆಟ್ಟ ಮನೋಭಾವವಿರುವ ಒಬ್ಬ ವ್ಯಕ್ತಿಗೆ ಮಾತ್ರ ಎಲ್ಲವೂ ತಪ್ಪಾಗಿ ಕಂಡುಬರುತ್ತದೆ, ಅಂದರೆ ಜೀವನದಲ್ಲಿ ಅವನಿಗೆ ಯಾವುದೇ ಕಷ್ಟಗಳಿಲ್ಲದಿರುವುದಾದರೂ ಅವನು ಅಸಂತೋಷದಿಂದಿರುತ್ತಾನೆ.

2. ಒಬ್ಬ ವ್ಯಕ್ತಿಯು ಮನೋಭಾವಗಳನ್ನು ಹೇಗೆ ಕಲಿತುಕೊಳ್ಳುತ್ತಾನೆ?

2 ಒಳ್ಳೆಯ ಅಥವಾ ಕೆಟ್ಟ ಮನೋಭಾವಗಳನ್ನು ಕಲಿತುಕೊಳ್ಳಸಾಧ್ಯವಿದೆ. ವಾಸ್ತವದಲ್ಲಿ ಅವುಗಳನ್ನು ಕಲಿತುಕೊಳ್ಳಲೇಬೇಕು. ಒಂದು ನವಜಾತ ಮಗುವಿನ ಕುರಿತಾಗಿ ಮಾತಾಡುತ್ತಾ ಕಲಿಯರ್ಸ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಒಂದು ಮಗುವು ಒಂದು ಭಾಷೆಯನ್ನು ಅಥವಾ ನೈಪುಣ್ಯವನ್ನು ಪಡೆದುಕೊಳ್ಳಲು ಸಾಧನೆಮಾಡಬೇಕಾಗಿರುವಂತೆ ಅಥವಾ ಕಲಿಯಬೇಕಾಗಿರುವಂತೆಯೇ, ಕಾಲಕ್ರಮೇಣ ಮಗುವಿನಲ್ಲಿ ಬರುವಂತಹ ಮನೋಭಾವಗಳನ್ನು ಸ್ವತಃ ಆ ಮಗುವೇ ಗಳಿಸಿಕೊಳ್ಳಬೇಕು ಅಥವಾ ಕಲಿತುಕೊಳ್ಳಬೇಕು.” ನಾವು ಮನೋಭಾವಗಳನ್ನು ಹೇಗೆ ಕಲಿಯಸಾಧ್ಯವಿದೆ? ಮನೋಭಾವಗಳನ್ನು ಬೆಳೆಸಿಕೊಳ್ಳುವುದರಲ್ಲಿ ಅನೇಕ ಅಂಶಗಳು ವ್ಯಕ್ತಿಯೊಬ್ಬನಿಗೆ ಸಹಾಯ ಮಾಡುತ್ತವಾದರೂ, ಪರಿಸರ ಹಾಗೂ ಸಹವಾಸಗಳು ಹೆಚ್ಚಿನ ಪ್ರಭಾವವನ್ನು ಬೀರುತ್ತವೆ. ಈ ಮುಂಚೆ ತಿಳಿಸಲ್ಪಟ್ಟಿರುವ ವಿಶ್ವಕೋಶವು ಹೇಳುವುದು: “ಆಸ್ಮೋಸಿಸ್‌ನಿಂದಲೋ ಎಂಬಂತೆ, ನಾವು ಯಾರೊಂದಿಗೆ ನಿಕಟವಾಗಿ ಸಹವಾಸ ಮಾಡುತ್ತೇವೋ ಅವರ ಮನೋಭಾವಗಳನ್ನು ನಾವು ಕಲಿತುಕೊಳ್ಳುತ್ತೇವೆ ಅಥವಾ ಹೀರಿಕೊಳ್ಳುತ್ತೇವೆ.” ಸಾವಿರಾರು ವರ್ಷಗಳ ಹಿಂದೆ, ಬೈಬಲು ಸಹ ಇದೇ ರೀತಿ ಹೇಳಿತ್ತು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”​—⁠ಜ್ಞಾನೋಕ್ತಿ 13:20; 1 ಕೊರಿಂಥ 15:⁠33.

ಯೋಗ್ಯವಾದ ಮನೋಭಾವದ ವಿಷಯದಲ್ಲಿ ಒಂದು ಮಾದರಿ

3. ಮನೋಭಾವದ ವಿಷಯದಲ್ಲಿ ಯಾರು ಅತ್ಯುತ್ತಮ ಮಾದರಿಯನ್ನಿಟ್ಟನು, ಮತ್ತು ನಾವು ಅವನನ್ನು ಹೇಗೆ ಅನುಕರಿಸಸಾಧ್ಯವಿದೆ?

3 ಎಲ್ಲ ವಿಷಯಗಳಂತೆ ಮನೋಭಾವದ ವಿಷಯದಲ್ಲಿಯೂ ಯೇಸು ಕ್ರಿಸ್ತನು ಅತ್ಯುತ್ತಮವಾದ ಮಾದರಿಯನ್ನಿಟ್ಟಿದ್ದಾನೆ. ಅವನು ಹೇಳಿದ್ದು: “ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.” (ಯೋಹಾನ 13:15) ನಾವು ಯೇಸುವನ್ನು ಅನುಕರಿಸುವವರಾಗಿರಬೇಕಾದರೆ, ಮೊದಲಾಗಿ ಅವನ ಕುರಿತು ಕಲಿಯಬೇಕಾಗಿದೆ. * ಈ ವಿಷಯದಲ್ಲಿ ಅಪೊಸ್ತಲ ಪೇತ್ರನು ಏನನ್ನು ಶಿಫಾರಸ್ಸು ಮಾಡಿದನೋ ಅದನ್ನು ಮಾಡುವ ಉದ್ದೇಶದಿಂದಲೇ ನಾವು ಯೇಸುವಿನ ಜೀವನದ ಬಗ್ಗೆ ಅಭ್ಯಾಸಿಸುತ್ತೇವೆ. ಅದೇನೆಂದರೆ, “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಆದುದರಿಂದ, ಸಾಧ್ಯವಾದಷ್ಟು ಮಟ್ಟಿಗೆ ಯೇಸುವನ್ನು ಅನುಕರಿಸುವುದೇ ನಮ್ಮ ಗುರಿಯಾಗಿದೆ. ಯೇಸುವನ್ನು ಅನುಕರಿಸುವುದರಲ್ಲಿ, ನಾವು ಅವನ ಮನೋಭಾವವನ್ನು ಬೆಳೆಸಿಕೊಳ್ಳುವುದು ಸಹ ಒಳಗೂಡಿದೆ.

4, 5. ಯೇಸುವಿನ ಮನೋಭಾವದ ಯಾವ ಅಂಶವನ್ನು ರೋಮಾಪುರ 15:​1-3ರಲ್ಲಿ ಎತ್ತಿತೋರಿಸಲಾಗಿದೆ, ಮತ್ತು ಕ್ರೈಸ್ತರು ಹೇಗೆ ಅವನನ್ನು ಅನುಕರಿಸಸಾಧ್ಯವಿದೆ?

4 ಹಾಗಾದರೆ, ಯೇಸು ಕ್ರಿಸ್ತನ ಮನೋಭಾವವನ್ನು ಹೊಂದಿರುವುದರಲ್ಲಿ ಏನು ಒಳಗೂಡಿದೆ? ರೋಮಾಪುರದವರಿಗೆ ಬರೆದ ಪೌಲನ ಪತ್ರದ 15ನೆಯ ಅಧ್ಯಾಯವು, ಈ ಪ್ರಶ್ನೆಗೆ ಉತ್ತರವನ್ನು ಕೊಡಲು ಸಹಾಯ ಮಾಡುತ್ತದೆ. ಈ ಅಧ್ಯಾಯದ ಮೊದಲ ಕೆಲವು ವಚನಗಳಲ್ಲಿ ಪೌಲನು, ಯೇಸುವಿನ ಅತಿ ಪ್ರಮುಖ ಗುಣದ ಬಗ್ಗೆ ಮಾತಾಡುತ್ತಾನೆ. ಅವನು ಹೇಳುವುದು: “ದೃಢವಾದ ನಂಬಿಕೆಯುಳ್ಳ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ ದೃಢವಿಲ್ಲದವರ ಅನುಮಾನಗಳನ್ನು ಸಹಿಸಿಕೊಳ್ಳಬೇಕು. ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನ ಸುಖವನ್ನು ನೋಡಿಕೊಳ್ಳಲಿ. ಯಾಕಂದರೆ ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ. ದೇವರೇ, ನಿನ್ನನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೆ ಬಂದವು ಎಂಬದಾಗಿ ಬರೆದಿರುವಂತೆ ಆತನಿಗೆ ಸಂಭವಿಸಿತಲ್ಲಾ.”​—⁠ರೋಮಾಪುರ 15:​1-3.

5 ಕೇವಲ ತಮ್ಮ ಸುಖವನ್ನು ನೋಡಿಕೊಳ್ಳಲು ಬಯಸುವುದಕ್ಕೆ ಬದಲಾಗಿ, ಯೇಸುವಿನ ಮನೋಭಾವವನ್ನು ಅನುಕರಿಸುತ್ತಾ, ದೀನಭಾವದಿಂದ ಇತರರ ಆವಶ್ಯಕತೆಗಳನ್ನು ಪೂರೈಸಲು ಸಿದ್ಧರಾಗಿರುವಂತೆ ಕ್ರೈಸ್ತರಿಗೆ ಪ್ರೋತ್ಸಾಹ ನೀಡಲಾಗಿದೆ. ವಾಸ್ತವದಲ್ಲಿ, ಇತರರ ಹಿತವನ್ನು ಬಯಸುವಂತಹ ಈ ಮನೋಭಾವವು, ‘ದೃಢವಾದ ನಂಬಿಕೆಯುಳ್ಳವರ’ ವಿಶೇಷ ಗುಣವಾಗಿದೆ. ಇಷ್ಟರ ತನಕ ಜೀವಿಸಿರುವ ಯಾವುದೇ ಮಾನವನಿಗಿಂತ ಆತ್ಮಿಕತೆಯಲ್ಲಿ ಪ್ರಬಲನಾಗಿದ್ದ ಯೇಸು ಸ್ವತಃ ತನ್ನ ಕುರಿತಾಗಿ ಹೇಳಿದ್ದು: “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವದಕ್ಕೂ ಬಂದನು.” (ಮತ್ತಾಯ 20:28) ಆದುದರಿಂದ, ಕ್ರೈಸ್ತರಾಗಿರುವ ನಾವು ಸಹ, ‘ದೃಢವಿಲ್ಲದವರನ್ನೂ’ ಒಳಗೊಂಡು ಇನ್ನೂ ಅನೇಕರಿಗೆ ಸಹಾಯ ಮಾಡಲು ಬಯಸುತ್ತೇವೆ.

6. ಹಿಂಸೆ ಮತ್ತು ಖಂಡನೆಗೆ ಯೇಸು ತೋರಿಸಿದ ಪ್ರತಿಕ್ರಿಯೆಯನ್ನು ಯಾವ ರೀತಿಯಲ್ಲಿ ನಾವು ಅನುಕರಿಸಸಾಧ್ಯವಿದೆ?

6 ಯೇಸು ಕ್ರಿಸ್ತನು ಇನ್ನೊಂದು ಅತ್ಯುತ್ತಮ ಗುಣಲಕ್ಷಣವನ್ನು ತೋರ್ಪಡಿಸಿದನು. ಅದೇನೆಂದರೆ, ಯಾವಾಗಲೂ ಸಕಾರಾತ್ಮಕವಾಗಿ ಆಲೋಚಿಸುವ ಹಾಗೂ ಕಾರ್ಯನಡಿಸುವ ವಿಷಯದಲ್ಲಿ ಅವನು ಒಂದು ಅತ್ಯುತ್ತಮ ಮಾದರಿಯನ್ನಿಟ್ಟನು. ದೇವರ ಸೇವೆಮಾಡುವುದರ ಕಡೆಗೆ ಅವನಿಗಿದ್ದ ಅತ್ಯುತ್ತಮ ಮನೋಭಾವದ ಮೇಲೆ ಇತರರ ನಕಾರಾತ್ಮಕ ಮನೋಭಾವವು ಪ್ರಭಾವ ಬೀರುವಂತೆ ಅವನು ಎಂದೂ ಅನುಮತಿಸಲಿಲ್ಲ; ನಾವು ಸಹ ಇತರರ ನಕಾರಾತ್ಮಕ ಮನೋಭಾವವು ನಮ್ಮ ಮೇಲೆ ಪ್ರಭಾವ ಬೀರುವಂತೆ ಬಿಡಬಾರದು. ನಂಬಿಗಸ್ತಿಕೆಯಿಂದ ದೇವರ ಆರಾಧನೆಮಾಡಿದ್ದಕ್ಕಾಗಿ ಯೇಸುವನ್ನು ಖಂಡಿಸಿದಾಗ ಮತ್ತು ಹಿಂಸಿಸಿದಾಗ, ಅದರ ಬಗ್ಗೆ ಆಪಾದಿಸುವುದಕ್ಕೆ ಬದಲಾಗಿ ಅವನು ಅದನ್ನು ತಾಳ್ಮೆಯಿಂದ ಸಹಿಸಿಕೊಂಡನು. ಇತರರ ‘ಹಿತವನ್ನೂ ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವರಾಗಿ’ ತಮ್ಮ ನೆರೆಯವರಿಗೆ ಸಂತೋಷವನ್ನು ಉಂಟುಮಾಡಲು ಪ್ರಯತ್ನಿಸುವವರು, ನಂಬಿಕೆ ಹಾಗೂ ತಿಳುವಳಿಕೆಯ ಕೊರತೆಯಿರುವ ಈ ಲೋಕದಿಂದ ವಿರೋಧವನ್ನು ನಿರೀಕ್ಷಿಸಸಾಧ್ಯವಿದೆ ಎಂಬುದು ಯೇಸುವಿಗೆ ಗೊತ್ತಿತ್ತು.

7. ಯೇಸು ತಾಳ್ಮೆಯನ್ನು ಹೇಗೆ ತೋರಿಸಿದನು, ಮತ್ತು ನಾವು ಕೂಡ ಅದೇ ರೀತಿಯ ತಾಳ್ಮೆಯನ್ನು ಹೇಗೆ ತೋರಿಸಸಾಧ್ಯವಿದೆ?

7 ಇನ್ನಿತರ ವಿಧಗಳಲ್ಲೂ ಯೇಸು ಯೋಗ್ಯವಾದ ಮನೋಭಾವವನ್ನು ತೋರಿಸಿದನು. ಅವನೆಂದೂ ಯೆಹೋವನ ವಿಷಯದಲ್ಲಿ ಅಸಹನೆಯನ್ನು ವ್ಯಕ್ತಪಡಿಸಲಿಲ್ಲ, ಬದಲಾಗಿ ಯೆಹೋವನು ತನ್ನ ಉದ್ದೇಶಗಳನ್ನು ಪೂರ್ಣಗೊಳಿಸುವಂತೆ ತಾಳ್ಮೆಯಿಂದ ಕಾದನು. (ಕೀರ್ತನೆ 110:1; ಮತ್ತಾಯ 24:36; ಅ. ಕೃತ್ಯಗಳು 2:​32-36; ಇಬ್ರಿಯ 10:​12, 13) ಅಷ್ಟುಮಾತ್ರವಲ್ಲ, ಯೇಸು ತನ್ನ ಶಿಷ್ಯರೊಂದಿಗೆ ವ್ಯವಹರಿಸುವಾಗ ಎಂದೂ ಅಸಹನೆಯನ್ನು ತೋರಿಸಲಿಲ್ಲ. ಅವನು ಅವರಿಗೆ ಹೇಳಿದ್ದು: “ನನ್ನಲ್ಲಿ ಕಲಿತುಕೊಳ್ಳಿರಿ.” ಏಕೆಂದರೆ ಅವನು “ಸಾತ್ವಿಕ”ನಾಗಿದ್ದನು ಮತ್ತು ಅವನ ಬೋಧನೆಯು ಭಕ್ತಿವೃದ್ಧಿಮಾಡುವಂತಹದ್ದೂ ಚೈತನ್ಯದಾಯಕವೂ ಆಗಿತ್ತು. ಅವನು “ದೀನ ಮನಸ್ಸುಳ್ಳವ”ನಾಗಿದ್ದರಿಂದ, ಅವನೆಂದೂ ಬಡಾಯಿಕೊಚ್ಚಿಕೊಳ್ಳಲಿಲ್ಲ ಅಥವಾ ದುರಭಿಮಾನವನ್ನು ತೋರಿಸಲಿಲ್ಲ. (ಮತ್ತಾಯ 11:29) ಯೇಸುವಿನ ಮನೋಭಾವದ ಈ ಅಂಶಗಳನ್ನು ಅನುಕರಿಸುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತಾ, ಪೌಲನು ಹೇಳುವುದು: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು.”​—⁠ಫಿಲಿಪ್ಪಿ 2:5-7.

8, 9. (ಎ) ನಿಸ್ವಾರ್ಥ ಮನೋಭಾವವನ್ನು ಬೆಳೆಸಿಕೊಳ್ಳಲು ನಾವೇಕೆ ಶ್ರಮಪಡಬೇಕಾಗಿದೆ? (ಬಿ) ಯೇಸು ಇಟ್ಟಂತಹ ಮಾದರಿಯನ್ನು ನಿಷ್ಕೃಷ್ಟವಾದ ರೀತಿಯಲ್ಲಿ ಅನುಸರಿಸಲು ನಾವು ತಪ್ಪಿಬೀಳುವಲ್ಲಿ ನಾವೇಕೆ ನಿರುತ್ಸಾಹಗೊಳ್ಳಬಾರದು, ಮತ್ತು ಈ ವಿಷಯದಲ್ಲಿ ಪೌಲನು ಹೇಗೆ ಒಂದು ಒಳ್ಳೆಯ ಮಾದರಿಯಾಗಿದ್ದಾನೆ?

8 ನಾವು ಇತರರ ಒಳಿತನ್ನು ಬಯಸುತ್ತೇವೆ ಮತ್ತು ನಮ್ಮ ಹಿತಕ್ಕಿಂತಲೂ ಹೆಚ್ಚಾಗಿ ಅವರ ಆವಶ್ಯಕತೆಗಳಿಗೆ ಗಮನ ಕೊಡಲು ಬಯಸುತ್ತೇವೆ ಎಂದು ಹೇಳುವುದು ತುಂಬ ಸುಲಭ. ಆದರೆ ನಮ್ಮ ಮನೋಭಾವವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳುವುದಾದರೆ, ನಮ್ಮ ಹೃದಯಗಳಲ್ಲಿ ಆ ಪ್ರವೃತ್ತಿಯು ಪೂರ್ತಿಯಾಗಿ ಬೇರೂರಿಲ್ಲ ಎಂಬುದು ಗೊತ್ತಾಗಬಹುದು. ಏಕೆ ಬೇರೂರಿಲ್ಲ? ಮೊದಲನೆಯ ಕಾರಣವೇನೆಂದರೆ, ಆದಾಮಹವ್ವರಿಂದ ನಾವು ಸ್ವಾರ್ಥಪರ ಪ್ರವೃತ್ತಿಗಳನ್ನು ವಂಶಾನುಕ್ರಮವಾಗಿ ಪಡೆದಿದ್ದೇವೆ; ಎರಡನೆಯ ಕಾರಣವೇನೆಂದರೆ, ಸ್ವಾರ್ಥಭಾವವನ್ನು ಉತ್ತೇಜಿಸುವಂತಹ ಒಂದು ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. (ಎಫೆಸ 4:​17, 18) ಆದುದರಿಂದ, ನಿಸ್ವಾರ್ಥ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದರೆ, ನಮ್ಮ ಅಂತರ್ಗತ ಅಪರಿಪೂರ್ಣ ಸ್ವಭಾವಕ್ಕೆ ವಿರುದ್ಧವಾದ ಆಲೋಚನಾ ವಿಧಾನವನ್ನು ನಾವು ವಿಕಸಿಸಿಕೊಳ್ಳಬೇಕು. ಇದಕ್ಕೆ ದೃಢನಿರ್ಧಾರ ಹಾಗೂ ಪ್ರಯತ್ನದ ಅಗತ್ಯವಿದೆ.

9 ಯೇಸು ನಮಗೋಸ್ಕರ ಇಟ್ಟಂತಹ ಪರಿಪೂರ್ಣ ಮಾದರಿಗಿಂತ ತೀರ ಭಿನ್ನವಾಗಿರುವ ನಮ್ಮ ಅಪರಿಪೂರ್ಣತೆಯು, ಕೆಲವೊಮ್ಮೆ ನಮ್ಮನ್ನು ತುಂಬ ನಿರುತ್ಸಾಹಗೊಳಿಸಬಹುದು. ಯೇಸುವಿಗಿದ್ದಂತಹ ಮನೋಭಾವವನ್ನು ನಾವು ಸಹ ಪಡೆದುಕೊಳ್ಳಸಾಧ್ಯವಿದೆಯೋ ಎಂದು ನಾವು ಅನೇಕವೇಳೆ ಸಂಶಯಪಡಬಹುದು. ಆದರೆ ಪೌಲನ ಉತ್ತೇಜನದಾಯಕ ಮಾತುಗಳನ್ನು ಗಮನಿಸಿರಿ: “ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ. ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು. ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ. ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.” (ರೋಮಾಪುರ 7:​18, 19, 22, 23) ಪೌಲನ ಅಪರಿಪೂರ್ಣತೆಯು, ತಾನು ಅಪೇಕ್ಷಿಸಿದಂತಹ ರೀತಿಯಲ್ಲಿ ದೇವರ ಚಿತ್ತವನ್ನು ಮಾಡುವುದರಿಂದ ಅವನನ್ನು ಪದೇ ಪದೇ ತಡೆಗಟ್ಟಿತೆಂಬುದಂತೂ ನಿಜ. ಆದರೆ ಅವನ ಮನೋಭಾವವು, ಅಂದರೆ ಯೆಹೋವನ ಹಾಗೂ ಆತನ ನಿಯಮದ ಕುರಿತಾದ ಅವನ ಆಲೋಚನಾ ರೀತಿ ಮತ್ತು ಅನಿಸಿಕೆಯು ತುಂಬ ಆದರ್ಶಪ್ರಾಯವಾದದ್ದಾಗಿತ್ತು. ನಮ್ಮ ಮನೋಭಾವವು ಸಹ ಆದರ್ಶಪ್ರಾಯವಾದುದ್ದಾಗಿ ಇರಸಾಧ್ಯವಿದೆ.

ತಪ್ಪಾದ ಮನೋಭಾವಗಳನ್ನು ಸರಿಪಡಿಸಿಕೊಳ್ಳುವುದು

10. ಯಾವ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಪೌಲನು ಫಿಲಿಪ್ಪಿಯವರನ್ನು ಉತ್ತೇಜಿಸಿದನು?

10 ತಪ್ಪಾದ ಮನೋಭಾವವನ್ನು ಕೆಲವರು ಸರಿಪಡಿಸಿಕೊಳ್ಳುವ ಅಗತ್ಯವಿರಸಾಧ್ಯವಿದೆಯೊ? ಹೌದು. ಪ್ರಥಮ ಶತಮಾನದಲ್ಲಿದ್ದ ಕೆಲವು ಕ್ರೈಸ್ತರ ವಿಷಯದಲ್ಲಿ ಇದು ಸತ್ಯವಾಗಿತ್ತು. ಫಿಲಿಪ್ಪಿಯವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಸರಿಯಾದ ಮನೋಭಾವವುಳ್ಳವರಾಗಿರುವುದರ ಕುರಿತು ಮಾತಾಡಿದನು. ಅವನು ಬರೆದುದು: “ಇಷ್ಟರೊಳಗೆ ನಾನು ಬಿರುದನ್ನು [ಈ ಮುಂಚಿನ ಪುನರುತ್ಥಾನದ ಮೂಲಕ ಸ್ವರ್ಗೀಯ ಜೀವಿತ] ಪಡಕೊಂಡು ಸಿದ್ಧಿಗೆ ಬಂದವನೆಂದು ಹೇಳುವದಿಲ್ಲ; ನಾನು ಯಾವದನ್ನು ಹೊಂದುವದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಹಿಡಿದುಕೊಂಡನೋ ಅದನ್ನು ಹಿಡಿದುಕೊಳ್ಳುವದಕ್ಕೋಸ್ಕರ ಓಡುತ್ತಾ ಇದ್ದೇನೆ. ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ. ನಮ್ಮಲ್ಲಿ ಪ್ರವೀಣರಾದವರು ಇದೇ ಅಭಿಪ್ರಾಯವುಳ್ಳವರಾಗಿರೋಣ [“ಮನೋಭಾವದವರಾಗಿರೋಣ,” NW].” (ಓರೆ ಅಕ್ಷರಗಳು ನಮ್ಮವು.)​—⁠ಫಿಲಿಪ್ಪಿ 3:​12-15.

11, 12. ಯಾವ ವಿಧಗಳಲ್ಲಿ ಯೆಹೋವನು ಒಂದು ಯೋಗ್ಯವಾದ ಮನೋಭಾವವನ್ನು ನಮಗೆ ಪ್ರಕಟಪಡಿಸುತ್ತಾನೆ?

11 ಒಬ್ಬ ವ್ಯಕ್ತಿಯು ಕ್ರೈಸ್ತನಾಗಿದ್ದು, ಪ್ರಗತಿಯನ್ನು ಮಾಡುವ ಆವಶ್ಯಕತೆಯನ್ನು ಮನಗಾಣದಿರುವಲ್ಲಿ, ಅವನಿಗೆ ಕೆಟ್ಟ ಮನೋಭಾವವಿದೆ ಎಂಬುದನ್ನು ಪೌಲನ ಮಾತುಗಳು ತೋರಿಸುತ್ತವೆ. ಅಂದರೆ, ಕ್ರಿಸ್ತನ ಮನೋಭಾವಕ್ಕನುಸಾರ ತನ್ನನ್ನು ಹೊಂದಿಸಿಕೊಳ್ಳಲು ಆ ವ್ಯಕ್ತಿಯು ಅಸಮರ್ಥನಾಗಿದ್ದಾನೆ ಎಂದರ್ಥ. (ಇಬ್ರಿಯ 4:11; 2 ಪೇತ್ರ 1:10; 3:14) ಅಂತಹ ಒಬ್ಬ ವ್ಯಕ್ತಿಯ ಸನ್ನಿವೇಶವು ನಿರೀಕ್ಷಾಹೀನವಾಗಿದೆಯೊ? ಖಂಡಿತವಾಗಿಯೂ ಇಲ್ಲ. ನಮಗೆ ನಿಜವಾಗಿಯೂ ಮನಸ್ಸಿರುವಲ್ಲಿ, ನಮ್ಮ ಮನೋಭಾವವನ್ನು ಬದಲಾಯಿಸಲು ದೇವರು ನಮಗೆ ಸಹಾಯ ಮಾಡಬಲ್ಲನು. ಈ ವಿಷಯದಲ್ಲಿ ಪೌಲನು ಮುಂದುವರಿಸುತ್ತಾ ಹೇಳುವುದು: “ಯಾವದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ [“ಮನೋಭಾವದವರಾಗಿದ್ದರೆ,” NW] ಅದನ್ನೂ ದೇವರು ನಿಮಗೆ ತೋರಿಸಿಕೊಡುವನು.”​—⁠ಫಿಲಿಪ್ಪಿ 3:⁠15.

12 ಆದರೂ, ನಮಗೆ ಯೆಹೋವನೇ ಯೋಗ್ಯವಾದ ಮನೋಭಾವವನ್ನು ಪ್ರಕಟಿಸುವಂತೆ ನಾವು ಬಯಸುವಲ್ಲಿ, ನಾವು ಸಹ ನಮ್ಮಿಂದಾದ ಪ್ರಯತ್ನವನ್ನು ಮಾಡಬೇಕು. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಒದಗಿಸಲ್ಪಡುವ ಕ್ರೈಸ್ತ ಪ್ರಕಾಶನಗಳ ಸಹಾಯದಿಂದ ನಾವು ಪ್ರಾರ್ಥನಾಪೂರ್ವಕವಾಗಿ ದೇವರ ವಾಕ್ಯವನ್ನು ಅಭ್ಯಾಸಿಸಬೇಕು. ಹೀಗೆ ಮಾಡುವುದರಿಂದ, ‘ಬೇರೆ ಅಭಿಪ್ರಾಯವುಳ್ಳವರಾಗಿರುವವರು’ ತಮ್ಮಲ್ಲಿ ಯೋಗ್ಯವಾದ ಮನೋಭಾವವನ್ನು ಬೆಳೆಸಿಕೊಳ್ಳಲು ಶಕ್ತರಾಗುವರು. (ಮತ್ತಾಯ 24:45) ಅಷ್ಟುಮಾತ್ರವಲ್ಲ, “ದೇವರು . . . ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ” ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿರುವ ಕ್ರೈಸ್ತ ಹಿರಿಯರು ಸಹ ಬೆಂಬಲವನ್ನು ನೀಡಲು ಸಂತೋಷಿಸುವರು. (ಅ. ಕೃತ್ಯಗಳು 20:28) ಯೆಹೋವನು ನಮ್ಮ ಅಪರಿಪೂರ್ಣತೆಗಳನ್ನು ಪರಿಗಣಿಸುತ್ತಾನೆ ಮತ್ತು ಪ್ರೀತಿಯಿಂದ ನಮಗೆ ಸಹಾಯ ಮಾಡುತ್ತಾನೆ ಎಂಬುದಕ್ಕೆ ನಾವೆಷ್ಟು ಕೃತಜ್ಞರಾಗಿದ್ದೇವೆ! ಆ ಸಹಾಯವನ್ನು ನಾವು ಸ್ವೀಕರಿಸೋಣ.

ಇತರರಿಂದ ಕಲಿತುಕೊಳ್ಳುವುದು

13. ಯೋಗ್ಯವಾದ ಒಂದು ಮನೋಭಾವದ ಬಗ್ಗೆ ಯೋಬನ ಕುರಿತಾದ ಬೈಬಲ್‌ ವೃತ್ತಾಂತದಿಂದ ನಾವೇನನ್ನು ಕಲಿತುಕೊಳ್ಳುತ್ತೇವೆ?

13ರೋಮಾಪುರ 15ನೆಯ ಅಧ್ಯಾಯದಲ್ಲಿ, ಐತಿಹಾಸಿಕ ಉದಾಹರಣೆಗಳ ಕುರಿತು ಮನನಮಾಡುವುದು ಸಹ ನಮ್ಮ ಮನೋಭಾವವನ್ನು ಸರಿಹೊಂದಿಸಿಕೊಳ್ಳಲು ನಮಗೆ ಸಹಾಯ ಮಾಡಸಾಧ್ಯವಿದೆ ಎಂಬುದನ್ನು ಪೌಲನು ತೋರಿಸುತ್ತಾನೆ. ಅವನು ಬರೆಯುವುದು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:⁠4) ಗತಕಾಲದ ಯೆಹೋವನ ನಂಬಿಗಸ್ತ ಸೇವಕರಲ್ಲಿ ಕೆಲವರಿಗೆ, ತಮ್ಮ ಮನೋಭಾವದ ಕೆಲವೊಂದು ಅಂಶಗಳನ್ನು ಸರಿಪಡಿಸಿಕೊಳ್ಳುವ ಅಗತ್ಯವಿತ್ತು. ಉದಾಹರಣೆಗೆ, ಒಟ್ಟಿನಲ್ಲಿ ಹೇಳುವುದಾದರೆ ಯೋಬನಲ್ಲಿ ಒಳ್ಳೆಯ ಮನೋಭಾವವಿತ್ತು. ಅವನೆಂದೂ ಯೆಹೋವನ ಮೇಲೆ ತಪ್ಪುಹೊರಿಸಲಿಲ್ಲ. ಮತ್ತು ಯಾವುದೇ ಕಷ್ಟಾನುಭವವು ದೇವರಲ್ಲಿನ ತನ್ನ ಭರವಸೆಯನ್ನು ಕುಂದಿಸುವಂತೆ ಅವನು ಅನುಮತಿಸಲಿಲ್ಲ. (ಯೋಬ 1:​8, 21, 22) ಆದರೂ, ತಾನು ಹೇಳಿದ್ದೇ ಸರಿಯೆಂದು ಸಮರ್ಥಿಸುವ ಪ್ರವೃತ್ತಿ ಅವನಲ್ಲಿತ್ತು. ತನ್ನ ಈ ಪ್ರವೃತ್ತಿಯನ್ನು ಸರಿಪಡಿಸಿಕೊಳ್ಳುವಂತೆ ಯೋಬನಿಗೆ ಸಹಾಯ ಮಾಡಲಿಕ್ಕಾಗಿ ಯೆಹೋವನು ಎಲೀಹುವನ್ನು ಕಳುಹಿಸಿದನು. ಯೋಬನು ಇದನ್ನು ಅವಮಾನವಾಗಿ ಪರಿಗಣಿಸಲಿಲ್ಲ, ಬದಲಾಗಿ ತನ್ನ ಮನೋಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಿದೆ ಎಂಬುದನ್ನು ದೀನಭಾವದಿಂದ ಒಪ್ಪಿಕೊಂಡನು. ಅಷ್ಟುಮಾತ್ರವಲ್ಲ, ಆ ಕೂಡಲೆ ಬದಲಾವಣೆಯನ್ನು ಮಾಡಿಕೊಳ್ಳಲು ಆರಂಭಿಸಿದನು.​—⁠ಯೋಬ 42:​1-6.

14. ನಮ್ಮ ಮನೋಭಾವದ ಕುರಿತು ನಮಗೆ ಯಾರಾದರೂ ಸಲಹೆ ನೀಡುವಲ್ಲಿ, ನಾವು ಯೋಬನಂತೆ ಹೇಗೆ ವರ್ತಿಸಸಾಧ್ಯವಿದೆ?

14 ನಾವು ತಪ್ಪಾದ ಮನೋಭಾವವನ್ನು ತೋರಿಸುತ್ತಿದ್ದೇವೆ ಎಂದು ಒಬ್ಬ ಜೊತೆ ಕ್ರೈಸ್ತನು ನಮಗೆ ಹೇಳುವುದಾದರೆ, ನಾವು ಸಹ ಯೋಬನಂತೆ ಪ್ರತಿಕ್ರಿಯಿಸುತ್ತೇವೊ? ಯೋಬನು ದೇವರ ಮೇಲೆ ಹೇಗೆ ತಪ್ಪುಹೊರಿಸಲಿಲ್ಲವೋ ಹಾಗೆಯೇ ನಾವು ಸಹ ‘ದೇವರ ಮೇಲೆ ತಪ್ಪುಹೊರಿಸದಿರೋಣ.’ (ಯೋಬ 1:22) ನಾವು ಅನ್ಯಾಯವಾಗಿ ಕಷ್ಟಾನುಭವಿಸುವಲ್ಲಿ, ನಮ್ಮ ಕಷ್ಟತೊಂದರೆಗಳಿಗಾಗಿ ಯೆಹೋವನ ಮೇಲೆ ತಪ್ಪುಹೊರಿಸದಿರೋಣ ಅಥವಾ ಆತನೇ ಜವಾಬ್ದಾರನೆಂದು ನೆನಸದಿರೋಣ. ಇದಲ್ಲದೆ, ಯೆಹೋವನ ಸೇವೆಯಲ್ಲಿ ನಮಗೆ ಯಾವುದೇ ಸುಯೋಗಗಳಿರಲಿ, ನಾವು ಮಾತ್ರ “ಆಳುಗಳು, ಪ್ರಯೋಜನವಿಲ್ಲದವರು” ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡವರಾಗಿದ್ದು, ನಮ್ಮದೇ ಸರಿಯೆಂದು ಸಮರ್ಥಿಸಲು ಪ್ರಯತ್ನಿಸದಿರೋಣ.​—⁠ಲೂಕ 17:⁠10.

15. (ಎ) ಯೇಸುವಿನ ಶಿಷ್ಯರಲ್ಲಿ ಕೆಲವರು ಯಾವ ಕೆಟ್ಟ ಮನೋಭಾವವನ್ನು ತೋರ್ಪಡಿಸಿದರು? (ಬಿ) ಪೇತ್ರನು ಹೇಗೆ ಒಂದು ಒಳ್ಳೆಯ ಮನೋಭಾವವನ್ನು ತೋರಿಸಿದನು?

15 ಮೊದಲನೆಯ ಶತಮಾನದಲ್ಲಿ, ಯೇಸುವಿನ ಮಾತುಗಳನ್ನು ಕೇಳಿಸಿಕೊಂಡ ಕೆಲವರು ಅಸಭ್ಯ ಮನೋಭಾವವನ್ನು ತೋರ್ಪಡಿಸಿದರು. ಒಂದು ಸಂದರ್ಭದಲ್ಲಿ, ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದ್ದಂತಹ ಯಾವುದೋ ಒಂದು ವಿಷಯವನ್ನು ಯೇಸು ಹೇಳಿದನು. ಇದಕ್ಕೆ ಉತ್ತರವಾಗಿ, “ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ​—⁠ಇದು ಕಠಿಣವಾದ ಮಾತು, ಇದನ್ನು ಯಾರು ಕೇಳಾರು? ಅಂದುಕೊಂಡರು.” ಯಾರು ಈ ರೀತಿ ಮಾತಾಡಿದರೋ ಅವರಿಗೆ ಕೆಟ್ಟ ಮನೋಭಾವವಿತ್ತು ಎಂಬುದಂತೂ ಸ್ಪಷ್ಟ. ಮತ್ತು ಆ ಕೆಟ್ಟ ಮನೋಭಾವವು, ಅವರು ಯೇಸುವಿನ ಮಾತುಗಳಿಗೆ ಕಿವಿಗೊಡುವುದನ್ನು ನಿಲ್ಲಿಸುವಂತೆ ಮಾಡಿತು. ಹೀಗೆ, ವೃತ್ತಾಂತವು ಹೇಳುವುದು: “ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂಜರಿದು ಆತನ ಕೂಡ ಸಂಚಾರಮಾಡುವದನ್ನು ಬಿಟ್ಟರು.” ಆದರೆ ಎಲ್ಲ ಶಿಷ್ಯರಲ್ಲೂ ಇಂತಹದ್ದೇ ಕೆಟ್ಟ ಮನೋಭಾವವಿತ್ತೋ? ಖಂಡಿತವಾಗಿಯೂ ಇಲ್ಲ. ಏಕೆಂದರೆ ಅದೇ ವೃತ್ತಾಂತವು ಮುಂದುವರಿಸುವುದು: “ಯೇಸು ಇದನ್ನು ನೋಡಿ ತನ್ನ ಹನ್ನೆರಡು ಮಂದಿಯನ್ನು​—⁠ನೀವು ಸಹ ಹೋಗಬೇಕೆಂದಿದ್ದೀರಾ? ಎಂದು ಕೇಳಿದ್ದಕ್ಕೆ ಸೀಮೋನ್‌ಪೇತ್ರನು​—⁠ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? . . . ಅಂದನು.” ತದನಂತರ ಪೇತ್ರನು ತನ್ನ ಪ್ರಶ್ನೆಗೆ ತಾನೇ ಹೀಗೆ ಉತ್ತರ ಕೊಟ್ಟನು: “ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು.” (ಯೋಹಾನ 6:​60, 66-68) ಎಂತಹ ಅತ್ಯುತ್ತಮ ಮನೋಭಾವ! ಕೆಲವೊಮ್ಮೆ ಶಾಸ್ತ್ರವಚನಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಕೊಡಲ್ಪಡುವ ವಿವರಗಳು ಅಥವಾ ಸೂಕ್ಷ್ಮ ವ್ಯತ್ಯಾಸಗಳನ್ನು ಅಂಗೀಕರಿಸುವುದು ಮೊದಲ ಬಾರಿಗೆ ನಮಗೆ ಕಷ್ಟಕರವಾದದ್ದಾಗಿ ಕಂಡುಬರಬಹುದು. ಅಂತಹ ಸಮಯದಲ್ಲಿ ಪೇತ್ರನು ತೋರಿಸಿದಂತಹದ್ದೇ ಮನೋಭಾವವನ್ನು ನಾವೂ ತೋರಿಸುವುದು ಒಳ್ಳೇದಾಗಿರುವುದಿಲ್ಲವೊ? ಇದಕ್ಕೆ ಬದಲಾಗಿ, ಮೊದಮೊದಲು ಕೆಲವೊಂದು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿರುವ ಕಾರಣದಿಂದಲೇ, ಯೆಹೋವನ ಸೇವೆಮಾಡುವುದನ್ನು ನಿಲ್ಲಿಸುವುದು ಅಥವಾ ‘ಸ್ವಸ್ಥಬೋಧನಾವಾಕ್ಯಗಳಿಗೆ’ ವಿರುದ್ಧವಾಗಿ ಮಾತಾಡುವುದು ಎಷ್ಟು ಮೂರ್ಖತನವಾಗಿರುವುದು!​—⁠2 ತಿಮೊಥೆಯ 1:⁠13.

16. ಯೇಸುವಿನ ದಿನದ ಯೆಹೂದಿ ಧಾರ್ಮಿಕ ಮುಖಂಡರಿಂದ ಯಾವ ಅಪಾಯಕರ ಮನೋಭಾವವು ತೋರಿಸಲ್ಪಟ್ಟಿತು?

16 ಪ್ರಥಮ ಶತಮಾನದ ಯೆಹೂದಿ ಧಾರ್ಮಿಕ ಮುಖಂಡರು, ಯೇಸುವಿನಂತಹ ಮನೋಭಾವವನ್ನು ತೋರಿಸಲು ತಪ್ಪಿಹೋದರು. ಯೇಸುವಿನ ಮಾತುಗಳಿಗೆ ಕಿವಿಗೊಡದಿರಲು ಅವರು ಮಾಡಿದ ದೃಢಸಂಕಲ್ಪವು, ಅವನು ಲಾಜರನನ್ನು ಪುನರುತ್ಥಾನಗೊಳಿಸಿದಾಗ ಸ್ಪಷ್ಟವಾಗಿ ತೋರಿಬಂತು. ಏಕೆಂದರೆ, ಯೋಗ್ಯ ಮನೋಭಾವವಿರುವ ಯಾರೇ ಆಗಲಿ, ಈ ಅದ್ಭುತ ಕೃತ್ಯವು ಯೇಸುವು ದೇವರಿಂದ ಕಳುಹಿಸಲ್ಪಟ್ಟವನು ಎಂಬುದಕ್ಕೆ ಸಕಾರಾತ್ಮಕ ರುಜುವಾತಾಗಿದೆ ಎಂಬುದನ್ನು ಮನಗಾಣುತ್ತಿದ್ದರು. ಆದರೆ, ನಾವು ಓದುವುದು: “ಆಗ ಮಹಾಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ​—⁠ನಾವು ಮಾಡುವದು ಇದೇನು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಅವನನ್ನು ನಂಬಾರು; ಮತ್ತು ರೋಮ್‌ ರಾಜ್ಯದವರು ಬಂದು ನಮ್ಮ ಸ್ಥಾನವನ್ನೂ ಜನವನ್ನೂ ಸೆಳಕೊಂಡಾರು ಅಂದರು.” ಇದಕ್ಕಾಗಿ ಅವರು ಯಾವ ಒಳಸಂಚನ್ನು ನಡೆಸಿದರು? “ಆ ದಿನದಿಂದ ಆತನನ್ನು ಕೊಲ್ಲುವದಕ್ಕೆ ಆಲೋಚಿಸುತ್ತಿದ್ದರು.” ಅವರು ಯೇಸುವನ್ನು ಕೊಲ್ಲಲು ಒಳಸಂಚು ನಡೆಸುವುದರ ಜೊತೆಗೆ, ಅವನು ಅದ್ಭುತಕಾರ್ಯಗಳನ್ನು ನಡಿಸುವಾತನು ಎಂಬುದಕ್ಕಿರುವ ಜೀವಂತ ಪುರಾವೆಯನ್ನೇ ಇಲ್ಲವಾಗಿಸಲು ಮುಂದುವರಿದರು. “ಮಹಾಯಾಜಕರು ಲಾಜರನನ್ನೂ ಕೊಲ್ಲಬೇಕೆಂದು ಆಲೋಚಿಸಿದರು.” (ಯೋಹಾನ 11:​47, 48, 53; 12:​9-11) ನಾವು ಸಹ ಮಹಾಯಾಜಕರಂತಹ ಮನೋಭಾವವನ್ನು ಬೆಳೆಸಿಕೊಳ್ಳುವಲ್ಲಿ ಹಾಗೂ ನಿಜವಾಗಿಯೂ ಆನಂದಪಡಬೇಕಾದ ವಿಷಯಗಳ ಬಗ್ಗೆ ಕೋಪಗೊಳ್ಳುವಲ್ಲಿ ಅಥವಾ ಉದ್ರೇಕಗೊಳ್ಳುವಲ್ಲಿ, ಅದೆಷ್ಟು ಅಸಂಗತವಾಗಿರುವುದು! ಹೌದು, ಅದೆಷ್ಟು ಅಪಾಯಕರವಾದದ್ದಾಗಿರುವುದು!

ಕ್ರಿಸ್ತನ ಸಕಾರಾತ್ಮಕ ಮನೋಭಾವವನ್ನು ಅನುಸರಿಸುವುದು

17. (ಎ) ಯಾವ ಸನ್ನಿವೇಶಗಳ ಕೆಳಗೆ ದಾನಿಯೇಲನು ಒಂದು ನಿರ್ಭೀತ ಮನೋಭಾವವನ್ನು ತೋರಿಸಿದನು? (ಬಿ) ಯಾವ ರೀತಿಯಲ್ಲಿ ಯೇಸು ತನ್ನನ್ನು ಧೈರ್ಯಶೀಲನೆಂದು ತೋರ್ಪಡಿಸಿಕೊಂಡನು?

17 ಯೆಹೋವನ ಸೇವಕರು ಒಂದು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುತ್ತಾರೆ. ಒಮ್ಮೆ ದಾನಿಯೇಲನ ವೈರಿಗಳು, 30 ದಿನಗಳ ತನಕ ರಾಜನಿಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆಮಾಡಿಕೊಳ್ಳಬಾರದು ಎಂಬ ನಿಷೇಧಾಜ್ಞೆಯನ್ನು ಜಾರಿಗೆ ತರುವಂತೆ ಒಳಸಂಚು ನಡೆಸಿದರು. ಯೆಹೋವ ದೇವರೊಂದಿಗಿನ ತನ್ನ ಸಂಬಂಧದ ಮೇಲೆ ಆಕ್ರಮಣಮಾಡಲಿಕ್ಕಾಗಿ ಈ ಒಳಸಂಚು ನಡೆಸಲ್ಪಟ್ಟಿದೆ ಎಂಬುದು ದಾನಿಯೇಲನಿಗೆ ಗೊತ್ತಿತ್ತು. ಹಾಗಾದರೆ, ಅವನು 30 ದಿನಗಳ ತನಕ ದೇವರಿಗೆ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿಬಿಟ್ಟನೋ? ಖಂಡಿತವಾಗಿಯೂ ಇಲ್ಲ. ಅವನು ನಿರ್ಭಯವಾಗಿ ಯಥಾಪ್ರಕಾರ ದಿನಕ್ಕೆ ಮೂರಾವರ್ತಿ ಯೆಹೋವನಿಗೆ ಪ್ರಾರ್ಥಿಸುವುದನ್ನು ಮುಂದುವರಿಸಿದನು. (ದಾನಿಯೇಲ 6:​6-17) ಅದೇ ರೀತಿಯಲ್ಲಿ ಯೇಸು ಸಹ ತನ್ನ ವೈರಿಗಳ ಬೆದರಿಕೆಗೆ ಮಣಿಯಲಿಲ್ಲ. ಒಂದು ಸಬ್ಬತ್‌ ದಿನದಲ್ಲಿ ಯೇಸು ಕೈಬತ್ತಿಹೋದವನೊಬ್ಬನನ್ನು ಎದುರುಗೊಂಡನು. ಸಬ್ಬತ್‌ ದಿನದಲ್ಲಿ ಯಾರನ್ನಾದರೂ ವಾಸಿಮಾಡಿದರೆ, ಅಲ್ಲಿ ಹಾಜರಿರುವ ಯೆಹೂದ್ಯರಲ್ಲಿ ಅನೇಕರಿಗೆ ಅದು ಇಷ್ಟವಾಗುವುದಿಲ್ಲ ಎಂಬುದು ಯೇಸುವಿಗೆ ಗೊತ್ತಿತ್ತು. ಆಗ ಯೇಸು ಸಬ್ಬತ್‌ ದಿನದಲ್ಲಿ ವಾಸಿಮಾಡುವುದರ ಬಗ್ಗೆ ಅವರಿಗಿರುವ ಅಭಿಪ್ರಾಯವನ್ನು ತಿಳಿಯಪಡಿಸುವಂತೆ ಅವರನ್ನು ಕೇಳಿಕೊಂಡನು. ಅವರಲ್ಲಿ ಯಾರೂ ಉತ್ತರ ಕೊಡದಿದ್ದಾಗ, ಯೇಸು ಆ ಮನುಷ್ಯನನ್ನು ವಾಸಿಮಾಡಿದನು. (ಮಾರ್ಕ 3:​1-6) ಹೀಗೆ ಮಾಡುವುದು ಸರಿಯೆಂದು ಯೇಸುವಿಗೆ ತೋರಿದ್ದರಿಂದ, ತನ್ನ ನೇಮಕವನ್ನು ಪೂರೈಸಲು ಅವನು ಎಂದೂ ಹಿಂಜರಿಯಲಿಲ್ಲ.

18. ಕೆಲವರು ಏಕೆ ಯೆಹೋವನ ಸಾಕ್ಷಿಗಳ ಬಗ್ಗೆ ವಿರೋಧವನ್ನು ತೋರಿಸುತ್ತಾರೆ, ಆದರೆ ಅವರ ನಕಾರಾತ್ಮಕ ಮನೋಭಾವಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?

18 ವಿರೋಧಿಗಳ ನಕಾರಾತ್ಮಕ ಪ್ರತಿಕ್ರಿಯೆಗೆ ತಾವೆಂದೂ ಹೆದರಬಾರದು ಎಂಬುದನ್ನು ಇಂದು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. ಇಲ್ಲದಿದ್ದರೆ, ಅವರು ಯೇಸುವಿನ ಮನೋಭಾವವನ್ನು ತೋರಿಸುವವರಾಗಿರುವುದಿಲ್ಲ. ಅನೇಕರು ಯೆಹೋವನ ಸಾಕ್ಷಿಗಳನ್ನು ವಿರೋಧಿಸುತ್ತಾರೆ; ನಿಷ್ಕೃಷ್ಟವಾದ ಜ್ಞಾನವಿಲ್ಲದ ಕಾರಣ ಕೆಲವರು ವಿರೋಧಿಸುತ್ತಾರೆ. ಮತ್ತು ಸಾಕ್ಷಿಗಳನ್ನು ಅಥವಾ ಅವರ ಸಂದೇಶವನ್ನು ದ್ವೇಷಿಸುವುದರ ಕಾರಣದಿಂದ ಇನ್ನೂ ಕೆಲವರು ವಿರೋಧವನ್ನು ತೋರಿಸುತ್ತಾರೆ. ಆದರೆ ಅವರ ದ್ವೇಷಭರಿತ ಮನೋಭಾವವು ನಮ್ಮ ಸಕಾರಾತ್ಮಕ ಮನೋಭಾವದ ಮೇಲೆ ಪ್ರಭಾವ ಬೀರಲು ಎಂದೂ ಅವಕಾಶ ಕೊಡದಿರೋಣ. ಅಷ್ಟುಮಾತ್ರವಲ್ಲ, ನಾವು ಹೇಗೆ ಆರಾಧಿಸಬೇಕು ಎಂಬ ವಿಷಯದಲ್ಲಿ ಬೇರೆಯವರು ನಮ್ಮನ್ನು ಮಾರ್ಗದರ್ಶಿಸುವಂತೆ ಬಿಡದಿರೋಣ.

19. ಯೇಸು ಕ್ರಿಸ್ತನಂತಹ ಮನೋಭಾವವನ್ನು ನಾವು ಹೇಗೆ ತೋರಿಸಸಾಧ್ಯವಿದೆ?

19 ತನ್ನ ಹಿಂಬಾಲಕರ ಕಡೆಗೆ ಮತ್ತು ದೇವರ ಏರ್ಪಾಡುಗಳ ಕಡೆಗೆ ಯೇಸು ಯಾವಾಗಲೂ ಸಕಾರಾತ್ಮಕವಾದ ಮನೋಭಾವವನ್ನೇ ತೋರಿಸಿದನು. ಹೀಗೆ ಮಾಡುವುದು ಎಲ್ಲ ಸಂದರ್ಭಗಳಲ್ಲೂ ಸುಲಭವಾಗಿರಲಿಲ್ಲ. (ಮತ್ತಾಯ 23:​2, 3) ಆದುದರಿಂದ, ನಾವು ಸಹ ಆತನ ಮಾದರಿಯನ್ನು ಅನುಸರಿಸಬೇಕು. ನಮ್ಮ ಸಹೋದರರು ಅಪರಿಪೂರ್ಣರಾಗಿದ್ದಾರೆ ಮತ್ತು ನಾವು ಸಹ ಅಪರಿಪೂರ್ಣರಾಗಿದ್ದೇವೆ ಎಂಬುದು ಒಪ್ಪತಕ್ಕ ವಿಷಯವೇ. ಏನೇ ಆದರೂ, ನಮ್ಮ ಲೋಕವ್ಯಾಪಕ ಸಹೋದರತ್ವವನ್ನು ಬಿಟ್ಟು ಇನ್ನೆಲ್ಲಿ ಅತ್ಯುತ್ತಮ ಒಡನಾಡಿಗಳನ್ನು ಅಥವಾ ನಿಜವಾಗಿಯೂ ನಿಷ್ಠಾವಂತರಾಗಿರುವ ಸ್ನೇಹಿತರನ್ನು ಕಂಡುಕೊಳ್ಳಸಾಧ್ಯವಿದೆ? ತನ್ನ ಲಿಖಿತ ವಾಕ್ಯದ ಸಂಪೂರ್ಣ ತಿಳುವಳಿಕೆಯನ್ನು ಯೆಹೋವನು ಇನ್ನೂ ನಮಗೆ ಕೊಟ್ಟಿಲ್ಲ. ಆದರೆ ಇನ್ನಾವ ಧಾರ್ಮಿಕ ಗುಂಪು ದೇವರ ವಾಕ್ಯವನ್ನು ನಮಗಿಂತ ಹೆಚ್ಚು ಅರ್ಥಮಾಡಿಕೊಳ್ಳುತ್ತದೆ? ಆದುದರಿಂದ, ಯಾವಾಗಲೂ ಯೋಗ್ಯವಾದ ಮನೋಭಾವವನ್ನು, ಅಂದರೆ ಯೇಸು ಕ್ರಿಸ್ತನಿಗಿದ್ದಂತಹ ಮನೋಭಾವವನ್ನು ನಾವು ಕಾಪಾಡಿಕೊಳ್ಳೋಣ. ಇದರಲ್ಲಿ ಅನೇಕ ವಿಷಯಗಳು ಒಳಗೂಡಿವೆ; ಮುಂದಿನ ಲೇಖನದಲ್ಲಿ ನಾವು ಚರ್ಚಿಸಲಿರುವಂತೆ, ಯೆಹೋವನಿಗೋಸ್ಕರ ಹೇಗೆ ಕಾದುಕೊಂಡಿರುವುದು ಎಂಬುದನ್ನು ತಿಳಿದುಕೊಂಡಿರುವುದು ಸಹ ಇದರಲ್ಲಿ ಸೇರಿದೆ.

[ಪಾದಟಿಪ್ಪಣಿ]

^ ಪ್ಯಾರ. 3 ವಾಚ್‌ಟವರ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಎಂಬ ಪ್ರಕಾಶನವು, ಯೇಸುವಿನ ಜೀವನ ಹಾಗೂ ಶುಶ್ರೂಷೆಯ ಬಗ್ಗೆ ಚರ್ಚಿಸುತ್ತದೆ.

ನೀವು ವಿವರಿಸಬಲ್ಲಿರೋ?

• ನಮ್ಮ ಮನೋಭಾವವು ನಮ್ಮ ಜೀವಿತದ ಮೇಲೆ ಹೇಗೆ ಪ್ರಭಾವ ಬೀರಬಲ್ಲದು?

• ಯೇಸು ಕ್ರಿಸ್ತನ ಮನೋಭಾವವನ್ನು ವರ್ಣಿಸಿರಿ.

• ಯೋಬನ ಮನೋಭಾವದಿಂದ ನಾವೇನನ್ನು ಕಲಿತುಕೊಳ್ಳಬಲ್ಲೆವು?

• ವಿರೋಧದ ಎದುರಿನಲ್ಲಿ ಎಂತಹ ಮನೋಭಾವವನ್ನು ತೋರಿಸುವುದು ಯೋಗ್ಯವಾಗಿರುವುದು?

[ಅಧ್ಯಯನ ಪ್ರಶ್ನೆಗಳು]

[ಪುಟ 7ರಲ್ಲಿರುವ ಚಿತ್ರಗಳು]

ಯೋಗ್ಯವಾದ ಮನೋಭಾವವಿರುವ ಒಬ್ಬ ಕ್ರೈಸ್ತನು ಇತರರಿಗೆ ಸಹಾಯ ಮಾಡಲು ಮುಂದಾಗುತ್ತಾನೆ

[ಪುಟ 9ರಲ್ಲಿರುವ ಚಿತ್ರ]

ದೇವರ ವಾಕ್ಯದ ಪ್ರಾರ್ಥನಾಪೂರ್ವಕ ಅಭ್ಯಾಸವು, ಕ್ರಿಸ್ತನ ಮನೋಭಾವವನ್ನು ಪಡೆದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ