ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪುನಸ್ಸ್ಥಾಪನೆಯ ಕಾಲ” ಸಮೀಪಿಸಿದೆ!

“ಪುನಸ್ಸ್ಥಾಪನೆಯ ಕಾಲ” ಸಮೀಪಿಸಿದೆ!

“ಪುನಸ್ಸ್ಥಾಪನೆಯ ಕಾಲ” ಸಮೀಪಿಸಿದೆ!

ಯೇಸು ಪರಲೋಕಕ್ಕೆ ಏರಿಹೋಗುವ ಸ್ವಲ್ಪ ಮುಂಚೆ, ಅವನ ನಂಬಿಗಸ್ತ ಶಿಷ್ಯರಲ್ಲಿ ಕೆಲವರು ಅವನನ್ನು ಕೇಳಿದ್ದು: “ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್‌ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ?” ಈ ಪ್ರಶ್ನೆಗೆ ಯೇಸು ಕೊಟ್ಟ ಉತ್ತರವು, ಆ ರಾಜ್ಯವು ಬರುವುದಕ್ಕೆ ಮೊದಲು ಇನ್ನೂ ಸ್ವಲ್ಪ ಸಮಯ ಕಳೆಯಲಿಕ್ಕಿದೆ ಎಂಬುದನ್ನು ಸೂಚಿಸಿತು. ಈ ಮಧ್ಯೆ ಅವನ ಹಿಂಬಾಲಕರು ಮಹತ್ತರವಾದ ಒಂದು ಕೆಲಸವನ್ನು ಮಾಡಲಿಕ್ಕಿತ್ತು. ಅವರು “ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ” ಯೇಸುವಿನ ವಿಷಯದಲ್ಲಿ ಸಾಕ್ಷಿಕೊಡಬೇಕಾಗಿತ್ತು.​—⁠ಅ. ಕೃತ್ಯಗಳು 1:​6-8.

ಕೆಲವೊಂದು ದಿನಗಳಲ್ಲಿ, ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ ಆ ನೇಮಕವನ್ನು ಪೂರೈಸಸಾಧ್ಯವಿರಲಿಲ್ಲ. ಆದರೂ, ಸ್ವಲ್ಪವೂ ಹಿಂಜರಿಕೆಯಿಲ್ಲದೆ ಶಿಷ್ಯರು ಸಾರುವ ಕಾರ್ಯವನ್ನು ಆರಂಭಿಸಿದರು. ಅವರು ಸಾರುವ ಕೆಲಸದಲ್ಲಿ ಕಾರ್ಯಮಗ್ನರಾಗಿದ್ದರೂ, ರಾಜ್ಯವನ್ನು ಪುನಸ್ಸ್ಥಾಪಿಸುವ ವಿಷಯದಲ್ಲಿ ಅವರು ಆಸಕ್ತಿಯನ್ನು ಕಳೆದುಕೊಳ್ಳಲಿಲ್ಲ. ಅದರ ಕುರಿತಾಗಿ ಮಾತಾಡುತ್ತಾ ಯೆರೂಸಲೇಮಿನಲ್ಲಿ ಒಟ್ಟುಗೂಡಿದ್ದ ಒಂದು ದೊಡ್ಡ ಗುಂಪಿಗೆ ಅಪೊಸ್ತಲ ಪೇತ್ರನು ಹೇಳಿದ್ದು: “ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ತಿರುಗಿದರೆ ದೇವರ ಸನ್ನಿಧಾನದಿಂದ ವಿಶ್ರಾಂತಿಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿಕೊಡುವನು. ಆದರೆ ಸಮಸ್ತವನ್ನು ಸರಿಮಾಡುವ [“ಪುನಸ್ಸ್ಥಾಪನೆಯ,” NW] ಕಾಲವು ಬರುವ ತನಕ ಪರಲೋಕವೇ ಆ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಹೇಳಿಸಿದ್ದಾನೆ.” (ಓರೆ ಅಕ್ಷರಗಳು ನಮ್ಮವು.)​—⁠ಅ. ಕೃತ್ಯಗಳು 3:​19-21.

‘ಪುನಸ್ಸ್ಥಾಪನೆಯ ಕಾಲವು’ ಯೆಹೋವನ ಸನ್ನಿಧಾನದಿಂದ ‘ವಿಶ್ರಾಂತಿಕಾಲಗಳಿಗಾಗಿ’ ಮಾರ್ಗವನ್ನು ತೆರೆಯುವುದು. ಮುಂತಿಳಿಸಲ್ಪಟ್ಟ ಪುನಸ್ಸ್ಥಾಪನೆಯು ಎರಡು ಹಂತಗಳಲ್ಲಿ ಬರಲಿಕ್ಕಿತ್ತು. ಮೊದಲನೆಯದಾಗಿ, ಚೈತನ್ಯದಾಯಕವಾದ ಆತ್ಮಿಕ ಪುನಸ್ಸ್ಥಾಪನೆಯು ಸಂಭವಿಸಲಿಕ್ಕಿತ್ತು, ಮತ್ತು ಅದು ಈಗ ನಡೆಯುತ್ತಿದೆ. ಎರಡನೆಯದಾಗಿ, ಭೂಮಿಯ ಮೇಲೆ ಒಂದು ಭೌತಿಕ ಪ್ರಮೋದವನವು ಸ್ಥಾಪಿಸಲ್ಪಡಲಿಕ್ಕಿತ್ತು.

ಪುನಸ್ಸ್ಥಾಪನೆಯ ಕಾಲವು ಆರಂಭವಾಗುತ್ತದೆ

ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ದೊಡ್ಡ ಗುಂಪಿಗೆ ಅಪೊಸ್ತಲ ಪೇತ್ರನು ಹೇಳಿದಂತೆ, ಸ್ವರ್ಗವು ‘ಯೇಸುವಿನ ಸ್ಥಾನವಾಗಿತ್ತು.’ ತದನಂತರ 1914ರಲ್ಲಿ ಯೇಸು ತನ್ನ ರಾಜ್ಯಾಧಿಕಾರವನ್ನು ವಹಿಸಿಕೊಂಡು, ದೇವರ ನೇಮಿತ ಅರಸನೋಪಾದಿ ಆಳಲು ಆರಂಭಿಸಿದನು. ಆ ಸಮಯದಲ್ಲಿ ಯೆಹೋವನು ತನ್ನ ಮಗನನ್ನು ‘ಕಳುಹಿಸಿಕೊಡಲಿಕ್ಕಿದ್ದನು,’ ಅಂದರೆ ತನ್ನ ಉದ್ದೇಶಗಳನ್ನು ಪೂರೈಸುವುದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವಂತೆ ಯೆಹೋವನು ಯೇಸುವಿಗೆ ಅನುಮತಿ ನೀಡಲಿಕ್ಕಿದ್ದನು ಎಂದು ಪೇತ್ರನು ಮುಂತಿಳಿಸಿದನು. ಬೈಬಲು ಈ ಘಟನೆಯನ್ನು ಸಾಂಕೇತಿಕ ಭಾಷೆಯಲ್ಲಿ ವರ್ಣಿಸುತ್ತದೆ: “ಆಕೆ [ದೇವರ ಸ್ವರ್ಗೀಯ ಸಂಸ್ಥೆ] ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ ಒಂದು ಗಂಡು ಮಗುವನ್ನು [ಯೇಸು ಕ್ರಿಸ್ತನ ಅಧಿಕಾರದಲ್ಲಿರುವ ದೇವರ ರಾಜ್ಯ] ಹೆತ್ತಳು.”​—⁠ಪ್ರಕಟನೆ 12:⁠5.

ಆದರೆ ಯಾವ ಜನಾಂಗಗಳೂ ಕ್ರಿಸ್ತನ ಆಳ್ವಿಕೆಗೆ ಅಧೀನವಾಗಲು ಇಷ್ಟಪಡಲಿಲ್ಲ. ಅಷ್ಟುಮಾತ್ರವಲ್ಲ, ಇಂದು ಯೇಸುವಿನ ನಿಷ್ಠಾವಂತ ಭೂಪ್ರಜೆಗಳಾಗಿರುವ ಯೆಹೋವನ ಸಾಕ್ಷಿಗಳನ್ನು ಈ ಜನಾಂಗಗಳು ಬಲವಾಗಿ ಖಂಡಿಸಿವೆ. ಈ ಮುಂಚೆ ಅಪೊಸ್ತಲರು ಮಾಡಿದಂತೆ, ಸಾಕ್ಷಿಗಳು ಸಹ ಇಂದು “ಯೇಸುವಿನ ವಿಷಯವಾದ ಸಾಕ್ಷಿಯನ್ನು” ನೀಡುವ ಕೆಲಸವನ್ನು ನಿರ್ಭಯವಾಗಿ ಮುಂದುವರಿಸುತ್ತಿದ್ದಾರೆ. (ಪ್ರಕಟನೆ 12:17) ಆದರೆ, ಒಂದಾದ ಮೇಲೆ ಇನ್ನೊಂದು ದೇಶದಲ್ಲಿ, ಈ ಪ್ರಾಮಾಣಿಕ ಕ್ರೈಸ್ತರು ಮಾಡುತ್ತಿರುವ ಕೆಲಸಕ್ಕೆ ಅತ್ಯಧಿಕ ವಿರೋಧವನ್ನು ತೋರಿಸಲಾಗುತ್ತಿದೆ. 1918ರಲ್ಲಿ, ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿರುವ ವಾಚ್‌ ಟವರ್‌ ಸೊಸೈಟಿಯ ಮುಖ್ಯಕಾರ್ಯಾಲಯದಲ್ಲಿ ಕೆಲಸಮಾಡುತ್ತಿದ್ದ ಜವಾಬ್ದಾರಿಯುತ ಸದಸ್ಯರನ್ನು ಬಂಧಿಸಲಾಯಿತು. ಮತ್ತು ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಅವರನ್ನು ಕೋರ್ಟಿಗೆ ಕರೆದೊಯ್ಯಲಾಯಿತು ಮತ್ತು ದೀರ್ಘ ಸಮಯಾವಧಿಯ ವರೆಗೆ ಅನ್ಯಾಯವಾಗಿ ಸೆರೆಮನೆಯ ಶಿಕ್ಷೆಯನ್ನು ನೀಡಲಾಯಿತು. ಆಗ, “ಭೂಲೋಕದ ಕಟ್ಟಕಡೆಯವರೆಗೂ” ಮಾಡಲ್ಪಡಬೇಕಾದ ಆಧುನಿಕ ದಿನದ ಸಾಕ್ಷಿಕಾರ್ಯವು ಇನ್ನೇನು ನಿಂತುಹೋಗುತ್ತದೋ ಎಂಬಂತೆ ತೋರಿತು.​—⁠ಪ್ರಕಟನೆ 11:​7-10.

ಆದರೆ 1919ರಲ್ಲಿ, ಸೆರೆಮನೆಯಲ್ಲಿದ್ದ ಮುಖ್ಯಕಾರ್ಯಾಲಯದ ಸದಸ್ಯರನ್ನು ಬಿಡುಗಡೆಮಾಡಲಾಯಿತು ಮತ್ತು ಕಾಲಾನಂತರ ಎಲ್ಲ ಸುಳ್ಳು ಆರೋಪಗಳಿಂದ ಅವರನ್ನು ವಿಮೋಚಿಸಲಾಯಿತು. ಸೆರೆಮನೆಯಿಂದ ಹೊರಬಂದ ಕೂಡಲೆ ಅವರು ಆತ್ಮಿಕ ಪುನಸ್ಸ್ಥಾಪನಾ ಕೆಲಸವನ್ನು ಪುನಃ ಆರಂಭಿಸಿದರು. ಅಂದಿನಿಂದ, ಯೆಹೋವನ ಜನರು ಅಸಾಮಾನ್ಯವಾದ ಆತ್ಮಿಕ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದಾರೆ.

ಕ್ರಿಸ್ತನು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದ ಸರ್ವ ವಿಷಯಗಳನ್ನು ಪೂರೈಸಲಿಕ್ಕಾಗಿ, ಎಲ್ಲ ಜನಾಂಗಗಳ ಜನರಿಗೆ ಕಲಿಸಲಿಕ್ಕಾಗಿರುವ ವ್ಯಾಪಕವಾದ ಒಂದು ಕಾರ್ಯಾಚರಣೆಯು ಆರಂಭಿಸಲ್ಪಟ್ಟಿತು. (ಮತ್ತಾಯ 28:⁠20) ಈ ಮುಂಚೆ ಪ್ರಾಣಿಗಳಂತಹ ಗುಣಲಕ್ಷಣಗಳನ್ನು ತೋರಿಸುತ್ತಿದ್ದ ಕೆಲವರು, ತಮ್ಮ ಹೊರನೋಟವನ್ನು ಬದಲಾಯಿಸಿರುವುದನ್ನು ನೋಡುವುದು ಎಷ್ಟು ಚೈತನ್ಯದಾಯಕವಾದದ್ದಾಗಿತ್ತು! ಅವರು “ಕೋಪ,” “ದೂಷಣೆ” ಮತ್ತು “ಬಾಯಿಂದ ಹೊರಡುವ ದುರ್ಭಾಷೆ”ಗಳಂತಹ ದುರ್ಗುಣಗಳನ್ನು ಉಂಟುಮಾಡುವ ತಮ್ಮ ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿದರು; ಮತ್ತು ‘ಯಾವ ಸ್ವಭಾವವು ಅದನ್ನು ಸೃಷ್ಟಿಸಿದಾತನ [ದೇವರ] ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೋ’ ಆ ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡರು. ಒಂದು ಆತ್ಮಿಕ ಅರ್ಥದಲ್ಲಿ, ಪ್ರವಾದಿಯಾದ ಯೆಶಾಯನ ಮಾತುಗಳು ಈಗಲೂ ನೆರವೇರುತ್ತಿವೆ: “ತೋಳವು [ಈ ಮುಂಚೆ ತೋಳದಂತಹ ಗುಣಲಕ್ಷಣಗಳನ್ನು ತೋರಿಸುತ್ತಿದ್ದ ಒಬ್ಬ ವ್ಯಕ್ತಿ] ಕುರಿಯ [ದೀನ ಮನೋಭಾವವನ್ನು ತೋರಿಸುತ್ತಿರುವ ಒಬ್ಬ ವ್ಯಕ್ತಿ] ಸಂಗಡ ವಾಸಿಸುವದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟಪಶುವೂ ಒಟ್ಟಿಗಿರುವವು.”​—⁠ಕೊಲೊಸ್ಸೆ 3:​8-10; ಯೆಶಾಯ 11:​6, 9.

ಇನ್ನೂ ಹೆಚ್ಚಿನ ಪುನಸ್ಸ್ಥಾಪನೆಯು ಸಮೀಪಿಸಿದೆ!

ಇಂದು ಒಂದು ಆತ್ಮಿಕ ಪ್ರಮೋದವನದಲ್ಲಿ ಫಲಿಸಿರುವ ಪುನಸ್ಸ್ಥಾಪನೆಯ ಜೊತೆಗೆ, ನಮ್ಮ ಭೂಗ್ರಹವು ಒಂದು ಭೌತಿಕ ಪ್ರಮೋದವನವಾಗಿ ಪರಿಣಮಿಸಲಿರುವ ಸಮಯವು ವೇಗವಾಗಿ ಸಮೀಪಿಸುತ್ತಿದೆ. ಯೆಹೋವನು ನಮ್ಮ ಪೂರ್ವಜರಾಗಿದ್ದ ಆದಾಮಹವ್ವರನ್ನು ಏದೆನ್‌ ತೋಟದಲ್ಲಿ ಇಟ್ಟಿದ್ದಾಗ, ಭೂಮಿಯ ಒಂದು ಚಿಕ್ಕ ಭಾಗವು ಮಾತ್ರ ಪ್ರಮೋದವನವಾಗಿತ್ತು. (ಆದಿಕಾಂಡ 1:​29-31) ಆದುದರಿಂದಲೇ ಪ್ರಮೋದವನದ ಕುರಿತು ನಾವು, ಅದು ಪುನಸ್ಸ್ಥಾಪಿಸಲ್ಪಡುತ್ತಿದೆ ಎಂದು ಹೇಳಸಾಧ್ಯವಿದೆ. ಆದರೂ, ಇದು ಸಂಭವಿಸುವುದಕ್ಕೆ ಮೊದಲು, ಈ ಭೂಮಿಯಿಂದ ದೇವರಿಗೆ ಅಗೌರವ ತರುವಂತಹ ಸುಳ್ಳು ಧರ್ಮವನ್ನು ತೆಗೆದುಹಾಕಲೇಬೇಕಾಗಿದೆ. ಈ ಲೋಕದ ರಾಜಕೀಯ ಶಕ್ತಿಗಳು ಈ ಕಾರ್ಯವನ್ನು ಪೂರೈಸುವವು. (ಪ್ರಕಟನೆ 17:​15-18) ತದನಂತರ, ರಾಜಕೀಯ ಹಾಗೂ ವಾಣಿಜ್ಯ ಶಕ್ತಿಗಳು ಮತ್ತು ಅವುಗಳ ಬೆಂಬಲಿಗರು ಸಂಪೂರ್ಣವಾಗಿ ನಾಶಗೊಳಿಸಲ್ಪಡುವರು. ಅಂತಿಮವಾಗಿ, ದೇವರ ವಿರೋಧಿಗಳಲ್ಲಿ ಕೊನೆಯದಾಗಿ ಉಳಿದಿರುವ ಪಿಶಾಚನಾದ ಸೈತಾನನೂ ಅವನ ದೆವ್ವಗಳೂ ಒಂದು ಸಾವಿರ ವರ್ಷಗಳ ವರೆಗೆ ಬಂಧನದಲ್ಲಿರಿಸಲ್ಪಡುವರು. ಈ ಸಮಯಾವಧಿಯಲ್ಲಿ ಪುನಸ್ಸ್ಥಾಪನೆಯ ಕಾರ್ಯವು ನಡೆಯುವುದು. ಆ ಸಮಯದಲ್ಲಿ, “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು.” (ಯೆಶಾಯ 35:⁠1) ಇಡೀ ಭೂಮಿಯು ಎಲ್ಲ ರೀತಿಯ ತೊಂದರೆಗಳಿಂದ ಮುಕ್ತವಾಗಿರುವುದು. (ಯೆಶಾಯ 14:⁠7) ಈಗ ಮೃತಪಟ್ಟಿರುವ ಲಕ್ಷಾಂತರ ಜನರು ಪುನಃ ಈ ಭೂಮಿಯ ಮೇಲೆ ಉಜ್ಜೀವಿಸಲ್ಪಡುವರು. ಪ್ರತಿಯೊಬ್ಬರೂ ಪ್ರಾಯಶ್ಚಿತ್ತ ಯಜ್ಞದ ಪುನಸ್ಸ್ಥಾಪನೆಯಿಂದ ಬರುವ ಪ್ರಯೋಜನಗಳನ್ನು ಅನುಭವಿಸುವರು. (ಪ್ರಕಟನೆ 20:​12-15; 22:​1, 2) ಭೂಮಿಯ ಮೇಲೆ ಕುರುಡರು, ಕಿವುಡರು ಇಲ್ಲವೆ ಕುಂಟರು ಇರುವುದೇ ಇಲ್ಲ. ಆಗ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ಕ್ರಿಸ್ತನ ಸಾವಿರ ವರ್ಷದಾಳಿಕೆಯು ಮುಗಿದ ಕೂಡಲೆ, ಸ್ವಲ್ಪ ಕಾಲಾವಧಿಯ ವರೆಗೆ ಪಿಶಾಚನನ್ನೂ ಅವನ ದೆವ್ವಗಳನ್ನೂ ಬಿಡುಗಡೆಗೊಳಿಸಲಾಗುವುದು. ಆಗ, ಭೂಮಿಗಾಗಿರುವ ದೇವರ ಉದ್ದೇಶವು ಎಷ್ಟರ ಮಟ್ಟಿಗೆ ನೆರವೇರಿಸಲ್ಪಟ್ಟಿದೆ ಎಂಬುದನ್ನು ಅವರು ನೋಡುವರು. ಕಟ್ಟಕಡೆಗೆ, ಅವರು ಶಾಶ್ವತವಾಗಿ ನಿರ್ನಾಮಗೊಳಿಸಲ್ಪಡುವರು.​—⁠ಪ್ರಕಟನೆ 20:​1-3.

ಈ ಭೂಮಿಯು ಪುನಸ್ಸ್ಥಾಪನೆಯ ಸಾವಿರ ವರ್ಷಗಳ ಅಂತ್ಯವನ್ನು ತಲಪುವಾಗ, “ಶ್ವಾಸವಿರುವದೆಲ್ಲವೂ” ಯೆಹೋವನನ್ನು ಸ್ತುತಿಸುವುದು ಮತ್ತು ಸದಾಕಾಲಕ್ಕೂ ಹೀಗೆ ಸ್ತುತಿಯನ್ನು ಸಲ್ಲಿಸುತ್ತಾ ಇರುವುದು. (ಕೀರ್ತನೆ 150:⁠6) ನೀವು ಸಹ ಅವರ ನಡುವೆ ಇರುವಿರೊ? ಇರಸಾಧ್ಯವಿದೆ.