ಮೌನವು ಸಮ್ಮತಿಯನ್ನು ಸೂಚಿಸಿದಾಗ
ಮೌನವು ಸಮ್ಮತಿಯನ್ನು ಸೂಚಿಸಿದಾಗ
ಬಿಟ್ರೇಯಲ್—ಜರ್ಮನ್ ಚರ್ಚ್‌ಸ್ ಆ್ಯಂಡ್ ದ ಹೋಲೋಕಾಸ್ಟ್ ಎಂಬ ಪುಸ್ತಕವು ನಾಜಿತತ್ತ್ವದಲ್ಲಿ ಧರ್ಮದ ಪಾತ್ರವೇನಾಗಿತ್ತು ಎಂಬುದರ ಬಗ್ಗೆ ಪ್ರಾಮಾಣಿಕವಾಗಿ ಯಾವುದೇ ಮುಚ್ಚುಮರೆಯಿಲ್ಲದೇ ಮಾತಾಡುತ್ತದೆ. “ಆ ಸಮಯದ ಆಳ್ವಿಕೆಗೆ ಕ್ರೈಸ್ತರು ಸಹ ಬೆಂಬಲವನ್ನು ನೀಡುತ್ತಿದ್ದರು. ಯೆಹೂದಿಯರ ಮೇಲೆ ನಡೆಸುತ್ತಿದ್ದ ಅತ್ಯಾಚಾರ, ಹಿಂಸಾಚಾರಕ್ಕೆ ಅನೇಕ ಜನರು ಆಕ್ಷೇಪಣೆಯನ್ನು ಎತ್ತಲಿಲ್ಲ. ಇಲ್ಲಿಯೇ ಮೌನವು ಹೆಚ್ಚು ಸ್ಪಷ್ಟವಾಗಿ ಮಾತಾಡುತ್ತದೆ” ಎಂದು ಆ ಪುಸ್ತಕವು ಕಂಠೋಕ್ತವಾಗಿ ಹೇಳುತ್ತದೆ.
ಯಾವುದು ಕ್ರೈಸ್ತರನ್ನು ನಾಜಿತತ್ತ್ವಕ್ಕೆ ಆಕರ್ಷಿತರಾಗುವಂತೆ ಮಾಡಿತು? ಹಿಟ್ಲರನು “ಜರ್ಮನ್ ಸಮಾಜಕ್ಕೆ ಮಾಡಿದ್ದ ಕಾನೂನು ವ್ಯವಸ್ಥೆಯು” ಅನೇಕರನ್ನು ಪರವಶಗೊಳಿಸಿತು ಎಂದು ಆ ಪುಸ್ತಕವು ವಿವರಿಸುತ್ತದೆ. ಅದು ಹೇಳುವುದು: “ಅವನು ಅಶ್ಲೀಲ ಸಾಹಿತ್ಯ, ವ್ಯಭಿಚಾರ, ಅಬಾರ್ಷನ್, ಸಲಿಂಗೀಕಾಮ, ಮತ್ತು ಆಧುನಿಕ ಕಲೆಯ ‘ಅಶ್ಲೀಲತೆ’ಯನ್ನು ಪ್ರತಿಭಟಿಸಿದನು. ನಾಲ್ಕು, ಆರು, ಮತ್ತು ಎಂಟು ಮಕ್ಕಳನ್ನು ಹೆತ್ತ ಸ್ತ್ರೀಯರಿಗೆ ಕಂಚು, ಬೆಳ್ಳಿ, ಹಾಗೂ ಚಿನ್ನದ ಪದಕಗಳನ್ನು ಬಹುಮಾನವಾಗಿ ಕೊಡುತ್ತಿದ್ದನು. ಹೀಗೆ, ಮನೆಯಲ್ಲಿ ಕೂತು ತಮ್ಮ ಸಾಂಪ್ರದಾಯಿಕ ಪಾತ್ರವನ್ನು ಮುಂದುವರೆಸುವಂತೆ ಉತ್ತೇಜನವನ್ನು ನೀಡುತ್ತಿದ್ದನು. ಈ ರೀತಿಯ ಸಾಂಪ್ರದಾಯಿಕ ಮೌಲ್ಯಗಳ ಜೊತೆಗೆ ಮಿಲಿಟರಿ ಸಂಬಂಧಿತ ರಾಷ್ಟ್ರೀಯವಾದವನ್ನು ಸಹ ಹಿಟ್ಲರನು ನೀಡಿದನು. ವರ್ಸೈಲಿಸ್ ಒಪ್ಪಂದದಲ್ಲಿ ನಾಜಿ ರಾಷ್ಟ್ರಕ್ಕಾದ ಅವಮಾನಕ್ಕೆ ಪ್ರತಿಯಾಗಿ ಇವುಗಳನ್ನು ನೀಡಿದನು. ಇದು ಜರ್ಮನಿಯಲ್ಲಿದ್ದ ಅನೇಕ ಕ್ರೈಸ್ತರನ್ನು ಆಕರ್ಷಿಸಿತು.”
ಒಂದು ಗುಂಪು ಮಾತ್ರ ತೀರ ಎದ್ದುಕಾಣುವಂತಹ ರೀತಿಯಲ್ಲಿ ಭಿನ್ನವಾಗಿತ್ತು. “ಅವರೇ ಯೆಹೋವನ ಸಾಕ್ಷಿಗಳಾಗಿದ್ದರು. ಇವರು ಹಿಂಸಾಚಾರವನ್ನು ನಡೆಸಲು ಇಲ್ಲವೇ ಮಿಲಿಟರಿ ಶಕ್ತಿಯನ್ನು ಉಪಯೋಗಿಸಲು ನಿರಾಕರಿಸಿದರು” ಎಂದು ಬಿಟ್ರೇಯಲ್ ಹೇಳುತ್ತದೆ. ಇದು ಆ ಚಿಕ್ಕ ಗುಂಪಿನ ಮೇಲೆ ಅಮಾನುಷವಾದ ರೀತಿಯಲ್ಲಿ ಆಕ್ರಮಣ ಮಾಡುವಂತೆ ನಡೆಸಿತು. ಮತ್ತು ಆ ಗುಂಪಿನ ಅನೇಕ ಸದಸ್ಯರನ್ನು ಕೂಟ ಶಿಬಿರಗಳಲ್ಲಿ ಹಾಕಲಾಯಿತು. ಆದರೂ, ಕ್ರಿಸ್ತನ ಅನುಯಾಯಿಗಳೆಂದು ಹೇಳಿಕೊಂಡ ಅನೇಕರು ಸೊಲ್ಲೆತ್ತದೆ, ಕಲ್ಲುಬಂಡೆಗಳಂತಿದ್ದರು. ಆ ಪುಸ್ತಕವು ಇನ್ನೂ ಹೇಳುವುದು: “ಕ್ಯಾಥೊಲಿಕರು ಮತ್ತು ಪ್ರಾಟೆಸ್ಟಂಟರು ಯೆಹೋವನ ಸಾಕ್ಷಿಗಳಿಗೆ ಸಹಾನುಭೂತಿಯನ್ನು ತೋರಿಸಬೇಕಾಗಿತ್ತು. ಆದರೆ ಅದರ ಬದಲಿಗೆ, ಅವರು ದ್ವೇಷದ ಕಿಡಿ ಕಾರಿದರು. ಸಾಕ್ಷಿಗಳ ಶಾಂತಿವಾದಕ್ಕೆ ಒತ್ತಾಸೆಯನ್ನು ನೀಡುವುದಕ್ಕೆ ಬದಲು ಹಿಟ್ಲರನ ಕಟು ರೀತಿನೀತಿಗಳಿಗೆ ಬೆಂಬಲವನ್ನು ಕೊಟ್ಟರು.” ಇವರ ಮೌನವು ನಾಜಿ ಆಳ್ವಿಕೆಯ ಕೆಳಗೆ ಸಾಕ್ಷಿಗಳನ್ನು ಕ್ರೂರ ರೀತಿಯಲ್ಲಿ ಉಪಚರಿಸುವುದಕ್ಕೆ ಚಿತಾವಣೆಯನ್ನು ನೀಡಿತು.
ನಾಜಿ ರಾಷ್ಟ್ರದ ರಾಜಕೀಯದಲ್ಲಿ ಚರ್ಚುಗಳು ಒಳಗೂಡುತ್ತಿವೆ ಎಂಬುದು ವಾಗ್ವಾದಕ್ಕೆ ಕಾರಣವಾಗುತ್ತಾ ಇರುವುದಾದರೂ, ಬಿಟ್ರೇಯಲ್ ಯೆಹೋವನ ಸಾಕ್ಷಿಗಳನ್ನು ‘ಆ ಆಳ್ವಿಕೆಯನ್ನು ಅನುಮೋದಿಸುವುದಕ್ಕೋ ಇಲ್ಲವೇ ಅದರೊಂದಿಗೆ ಜೊತೆಗೂಡಿ ಕೆಲಸಮಾಡುವುದಕ್ಕೋ ನಿರಾಕರಿಸಿದ ಒಂದು ಗುಂಪು” ಎಂದು ಕರೆಯುತ್ತದೆ.