ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ನಂಬಿಗಸ್ತರನ್ನು ಎಂದೂ ಕೈಬಿಡನು

ಯೆಹೋವನು ತನ್ನ ನಂಬಿಗಸ್ತರನ್ನು ಎಂದೂ ಕೈಬಿಡನು

ಜೀವನ ಚರಿತ್ರೆ

ಯೆಹೋವನು ತನ್ನ ನಂಬಿಗಸ್ತರನ್ನು ಎಂದೂ ಕೈಬಿಡನು

ವರ್‌ನನ್‌ ಡಾನ್ಕಮ್‌ ಅವರು ಹೇಳಿರುವಂತೆ

ಸಂಜೆ ತಿಂಡಿಯನ್ನು ತಿಂದು ಮುಗಿಸಿದ ಬಳಿಕ, ಎಂದಿನಂತೆ ನಾನು ಸಿಗರೇಟನ್ನು ಹೊತ್ತಿಸಿದೆ. ನಂತರ ನನ್ನ ಹೆಂಡತಿಯಾದ ಐಲಿನ್‌ ಬಳಿ, “ಇವತ್ತು ಮೀಟಿಂಗ್‌ನಲ್ಲಿ ಏನು ನಡೆಯಿತು?” ಎಂದು ಕೇಳಿದೆ.

ಅದಕ್ಕೆ ಐಲಿನ್‌ ಕೆಲವು ಕ್ಷಣಗಳು ಸುಮ್ಮನಿದ್ದು, ನಂತರ ಹೇಳಿದ್ದು: “ಹೊಸ ನೇಮಕಗಳ ಕುರಿತು ಪ್ರಕಟಿಸುವ ಪತ್ರವೊಂದನ್ನು ಓದಲಾಯಿತು. ಅದರಲ್ಲಿ ನಿಮ್ಮ ಹೆಸರನ್ನು ಕೂಡ ತಿಳಿಸಲಾಯಿತು. ನೀವು ಸೌಂಡ್‌ ಅನ್ನು ನೋಡಿಕೊಳ್ಳುವ ಸೇವಕರಾಗಿದ್ದೀರಿ. ಆ ಪತ್ರದ ಕೊನೆಯ ವಾಕ್ಯವು ಹೇಳಿದ್ದು: ‘ಹೊಸದಾಗಿ ನೇಮಕವಾಗಿರುವ ಸಹೋದರರಲ್ಲಿ ಯಾರಾದರೂ ತಂಬಾಕನ್ನು ಸೇವಿಸುವವರಾಗಿದ್ದರೆ, ಅಂಥವರು ತನಗೆ ನೇಮಕವು ಸ್ವೀಕಾರಾರ್ಹವಿಲ್ಲ ಎಂದು ಸೊಸೈಟಿಗೆ ಬರೆಯಲು ಕರ್ತವ್ಯಬದ್ಧರಾಗಿರಬೇಕು.’” * ಅದಕ್ಕೆ ನಾನು ತುಂಬ ಸಮಯದ ವರೆಗೆ ಸುಮ್ಮನಿದ್ದು ನಂತರ, ಆದರೆ ನಾನು . . . ನಾನು! ಹಾಗಾದರೆ, ಅದನ್ನೇ ಹೇಳಲಾಯಿತಾ” ಎಂದು ಕೇಳಿದೆ.

ನಾನು ನನ್ನ ಹಲ್ಲುಗಳನ್ನು ಗಟ್ಟಿಯಾಗಿ ಕಚ್ಚಿಕೊಳ್ಳುತ್ತಾ, ನನ್ನ ಕೈಯಲ್ಲಿದ್ದ ಸಿಗರೇಟನ್ನು ಪಕ್ಕದಲ್ಲಿದ್ದ ಆ್ಯಷ್‌ ಟ್ರೇಯಲ್ಲಿ ತುರುಕಿಸಿಬಿಟ್ಟೆ. “ಈ ನೇಮಕಕ್ಕೆ ನನ್ನನ್ನು ಯಾಕೆ ಆಯ್ಕೆಮಾಡಲಾಯಿತು ಎಂದು ನನಗೆ ಗೊತ್ತಿರಲಿಲ್ಲ. ಆದರೆ, ಇದುವರೆಗೂ ಒಂದನ್ನೂ ನಾನು ಬೇಡವೆಂದು ಹೇಳಿರಲಿಲ್ಲ, ಹಾಗೆ ಹೇಳುವ ಮನಸ್ಸು ಕೂಡ ನನಗಿರಲಿಲ್ಲ.” ಅಂದೇ, ನಾನು ಮತ್ತೆ ಧೂಮಪಾನ ಮಾಡುವುದಿಲ್ಲವೆಂದು ತೀರ್ಮಾನಿಸಿಬಿಟ್ಟೆ. ಆ ನನ್ನ ತೀರ್ಮಾನವು ಕ್ರೈಸ್ತನಾಗಿ ಮತ್ತು ಒಬ್ಬ ಸಂಗೀತಗಾರನಾಗಿ ನನ್ನ ಜೀವನವನ್ನು ಹೆಚ್ಚು ಆಳವಾಗಿ ಪ್ರಭಾವಿಸಿತು. ಇಂಥ ಒಂದು ತೀರ್ಮಾನಕ್ಕೆ ಬರುವಂತೆ ನಡೆಸಿದಂತಹ ಕೆಲವು ಘಟನೆಗಳನ್ನು ನಾನು ನಿಮಗೆ ವಿವರಿಸುವೆ.

ಕುಟುಂಬ ಜೀವನದ ಆರಂಭದಲ್ಲಿ

ನಾನು ಕೆನಡಾದ ಟೊರಾಂಟೋ ನಗರದಲ್ಲಿ ಸೆಪ್ಟೆಂಬರ್‌ 21, 1914ರಲ್ಲಿ ಹುಟ್ಟಿದೆ. ಶ್ರಮಜೀವಿಗಳೂ ವಾತ್ಸಲ್ಯಮೂರ್ತಿಗಳೂ ಆಗಿದ್ದ ವರ್‌ನಾನ್‌ ಮತ್ತು ಲೈಲ ಎಂಬುವವರ ಹಿರಿಮಗನಾಗಿದ್ದೆ. ನನ್ನ ಹೆತ್ತವರು, ನಾಲ್ಕು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಸಾಕಿಸಲಹುತ್ತಿದ್ದರು. ನನ್ನ ನಂತರ ಹುಟ್ಟಿದವರು ಯಾರ್ಕ್‌, ಒರ್‌ಲಾಂಡೋ, ಡಗ್‌ಲಸ್‌ ಎಂಬ ತಮ್ಮಂದಿರು ಮತ್ತು ಐಲಿನ್‌ ಹಾಗೂ ಕಾರಲ್‌ ಎಂಬ ತಂಗಿಯರು. ನಾನು ಕೇವಲ ಒಂಬತ್ತು ವರ್ಷದವನಾಗಿದ್ದಾಗ, ನಮ್ಮ ತಾಯಿಯು ನನ್ನ ಕೈಯಲ್ಲಿ ಒಂದು ವಯಲಿನ್‌ ಅನ್ನು ಕೊಟ್ಟು ಹ್ಯಾರಿಸ್‌ ಸ್ಕೂಲ್‌ ಆಫ್‌ ಮ್ಯೂಸಿಕ್‌ ಎಂಬ ಶಾಲೆಯಲ್ಲಿ ಸಂಗೀತವನ್ನು ಕಲಿಯುವಂತೆ ಏರ್ಪಾಡನ್ನು ಮಾಡಿದರು. ಆದರೆ, ಮನೆಯ ಪರಿಸ್ಥಿತಿಯು ಅಷ್ಟೇನು ಉತ್ತಮವಾಗಿರಲಿಲ್ಲ. ನನ್ನ ಶಾಲೆಯ ಶುಲ್ಕ ಮತ್ತು ಹೋಗಿಬರುವ ಖರ್ಚನ್ನು ತೆರಲು ನನ್ನ ಹೆತ್ತವರು ಬಹಳ ಕಷ್ಟಪಟ್ಟರು. ತದನಂತರ, ನಾನು ಟೊರಾಂಟೋದಲ್ಲಿದ್ದ ರಾಯಲ್‌ ಕನ್‌ಸರ್‌ವೇಟರಿ ಆಫ್‌ ಮ್ಯೂಸಿಕ್‌ ಎಂಬ ಶಾಲೆಯಲ್ಲಿ ಸಂಗೀತ ಶಾಸ್ತ್ರವನ್ನು ಹಾಗೂ ಸ್ವರಮೇಳವನ್ನು ಕಲಿತುಕೊಂಡೆ. ನಾನು 12 ವರ್ಷದವನಾಗಿದ್ದಾಗ, ಟೊರಾಂಟೋ ನಗರದ ಪ್ರಸಿದ್ಧ ಭವನವಾಗಿದ್ದ ಮ್ಯಾಸಿ ಹಾಲ್‌ನಲ್ಲಿ ಏರ್ಪಡಿಸಿದ್ದ ನಗರದಾದ್ಯಂತದ ವಾದ್ಯ ಕಛೇರಿಯಲ್ಲಿ ಭಾಗವಹಿಸಿದೆ. ಅದರಲ್ಲಿ, ನನ್ನನ್ನು ವಿಜೇತನನ್ನಾಗಿ ಆಯ್ಕೆಮಾಡಿದರು. ಮೊಸಳೆ ಚರ್ಮದ ಪೆಟ್ಟಿಗೆಯಲ್ಲಿಟ್ಟಿದ್ದ ಒಂದು ಶ್ರೇಷ್ಟ ಗುಣಮಟ್ಟದ ವಯಲಿನ್‌ ಅನ್ನು ನನಗೆ ಬಹುಮಾನವಾಗಿ ನೀಡಲಾಯಿತು.

ಅಷ್ಟರೊಳಗಾಗಿ, ನಾನು ಪಿಯಾನೋ ಹಾಗೂ ಮಂದ್ರಸ್ವರದ ವಯಲಿನ್‌ ಅಥವಾ ಬಾಸ್‌ ವಯಲಿನ್‌ ಅನ್ನು ನುಡಿಸುವುದನ್ನು ಕೂಡ ಕಲಿತುಕೊಂಡೆ. ಅನೇಕ ಸಮಯಗಳಲ್ಲಿ, ನಾವು ಗುಂಪಾಗಿ ಶುಕ್ರವಾರ ಮತ್ತು ಶನಿವಾರದ ಸಂಜೆಯ ವೇಳೆಯಲ್ಲಿ ಚಿಕ್ಕ ಪಾರ್ಟಿಗಳಲ್ಲಿ ಮತ್ತು ಸೌಭ್ರಾತೃ ಸಂಘದವರು ಏರ್ಪಡಿಸುತ್ತಿದ್ದ ಡ್ಯಾನ್ಸ್‌ಗಳಿಗೆ ಸಂಗೀತವನ್ನು ನುಡಿಸುತ್ತಿದ್ದೆವು. ಈ ರೀತಿಯ ಡ್ಯಾನ್ಸ್‌ಗಳಲ್ಲೇ ನಾನು ಐಲಿನಳನ್ನು ಮೊದಲಬಾರಿ ಭೇಟಿಯಾದೆ. ನನ್ನ ಶಾಲೆಯ ಕೊನೆಯ ವರ್ಷದಲ್ಲಿ, ನಗರದ ನಾಲ್ಕು ಕಡೆಗಳಲ್ಲಿ ಜರುಗುವ ಅನೇಕ ಆರ್ಕಿಸ್ಟ್ರಾಗಳಲ್ಲಿ ಸಂಗೀತವನ್ನು ನುಡಿಸಿದೆ. ನಾನು ಶಾಲೆಯನ್ನು ಮುಗಿಸಿದೊಡನೆ, ಫರ್ಡಿ ಮೋರೆ ಎಂಬ ಆರ್ಕಿಸ್ಟ್ರಾಕ್ಕೆ ಸೇರಿಕೊಳ್ಳುವಂತೆ ಕರೆಸಿಕ್ಕಿತು. ಆ ಕೆಲಸವು 1943ರವರೆಗೂ ಒಂದು ಸ್ಥಿರವಾದ ಉದ್ಯೋಗವಾಯಿತು.

ಯೆಹೋವನನ್ನು ತಿಳಿದುಕೊಂಡದ್ದು

ಮೊದಲನೇ ಮಹಾಯುದ್ಧವು ಪ್ರಾರಂಭವಾಗುವುದಕ್ಕೆ ಸ್ವಲ್ಪ ಮುಂಚೆ, ನನ್ನ ಹೆತ್ತವರಿಗೆ ಪ್ರಪ್ರಥಮವಾಗಿ ಬೈಬಲ್‌ ಸತ್ಯದ ಪರಿಚಯವಾಯಿತು. ಆ ಸಮಯದಲ್ಲಿ ನನ್ನ ತಂದೆಯವರು ಒಂದು ಡಿರ್ಪಾರ್ಟ್‌ಮೆಂಟಲ್‌ ಸ್ಟೋರ್‌ನಲ್ಲಿ ಕೆಲಸಮಾಡುತ್ತಿದ್ದರು. ಅಲ್ಲಿ ಅವರು, ಅಂಗಡಿಯ ಸರಕುಗಳನ್ನು ಗಾಜಿನ ಮೂಲಕ ಕಾಣುವಂತೆ ಅಂದವಾಗಿ ಜೋಡಿಸುವ ಕಿಟಕಿ ಪ್ರದರ್ಶನದ ಕೆಲಸವನ್ನು ಮಾಡುತ್ತಿದ್ದರು. ಮಧ್ಯಾಹ್ನ ಊಟವನ್ನು ಮಾಡುತ್ತಿದ್ದ ಕೊಣೆಯಲ್ಲಿ, ತಮ್ಮೊಂದಿಗೆ ಕೆಲಸಮಾಡುತ್ತಿದ್ದ ಇನ್ನಿಬ್ಬರ ಸಂಭಾಷಣೆಯನ್ನು ತಂದೆಯು ಕೇಳಿಸಿಕೊಳ್ಳುತ್ತಿದ್ದರು. ಅವರು ಬೈಬಲ್‌ ವಿದ್ಯಾರ್ಥಿಗಳಾಗಿದ್ದರು. (ಆಗ ಯೆಹೋವನ ಸಾಕ್ಷಿಗಳಿಗೆ ಇದ್ದ ಹೆಸರು.) ಸಂಜೆ ಮನೆಗೆ ಬಂದಮೇಲೆ ತಂದೆಯವರು ತಾವು ಕೇಳಿಸಿಕೊಂಡ ವಿಷಯಗಳನ್ನು ತಾಯಿಯವರೊಂದಿಗೆ ಹಂಚಿಕೊಳ್ಳುತ್ತಿದ್ದರು. ಕೆಲವು ವರ್ಷಗಳು ಕಳೆದ ನಂತರ, ಅಂದರೆ 1927ರಲ್ಲಿ ಬೈಬಲ್‌ ವಿದ್ಯಾರ್ಥಿಗಳು ಟೊರಾಂಟೋ ನಗರದಲ್ಲಿರುವ ಕೊಲಿಸಿಯಮ್‌ನ ಕೆನಡಿಯನ್‌ ನ್ಯಾಷಿನಲ್‌ ಎಕ್ಸಿಬಿಷನ್‌ ಗ್ರೌಂಡ್ಸ್‌ ಎಂಬಲ್ಲಿ ಮಹತ್ವಪೂರ್ಣವಾದ ಸಮ್ಮೇಳನವನ್ನು ನಡೆಸಿದರು. ಆ ಗ್ರೌಂಡಿನ ಪಶ್ಚಿಮ ದಿಕ್ಕಿನ ಪ್ರವೇಶದ್ವಾರದ ಕಡೆಯಿಂದ ಎರಡು ವಠಾರಗಳ ನಂತರ ನಮ್ಮ ಮನೆಯಿತ್ತು. ಅಮೆರಿಕದ ಓಹಾಯೋದಿಂದ ಬಂದಿದ್ದ 25 ಮಂದಿಯು, ತಂಗುವುದಕ್ಕಾಗಿ ನಮ್ಮ ಮನೆಯನ್ನು ಉಪಯೋಗಿಸಲಾಯಿತು.

ತರುವಾಯ, ಬೈಬಲ್‌ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಎಡಾ ಬ್ಲೆಟ್ಸೋ ಎಂಬುವವರು ಹೊಸ ಪತ್ರಿಕೆಗಳನ್ನು ಕೊಡುವುದಕ್ಕಾಗಿ ನಮ್ಮ ತಾಯಿಯನ್ನು ಸಂದರ್ಶಿಸಲು ಆಗಾಗ್ಗ ಬರುತ್ತಿದ್ದರು. ಒಂದು ದಿನ ಅವರು ಹೇಳಿದ್ದು: “ಶ್ರೀಮತಿ ಡಾನ್‌ಕೊಂಬ್‌ ಅವರೇ, ನಾನು ಸ್ವಲ್ಪ ಸಮಯಗಳಿಂದ ನಿಮ್ಮಲ್ಲಿ ಸಾಹಿತ್ಯಗಳನ್ನು ಬಿಟ್ಟುಹೋಗುತ್ತಿದ್ದೇನೆ. ಅದರಲ್ಲಿ ಒಂದನ್ನಾದರೂ ನೀವು ಓದಿದಿರಾ?” ಆರು ಮಕ್ಕಳನ್ನು ಬೆಳೆಸುವುದರ ಜೊತೆಗೆ ಪತ್ರಿಕೆಯನ್ನು ಓದುವುದು ಬಹಳ ಕಷ್ಟವಾಗಿದ್ದರೂ, ಪತ್ರಿಕೆಗಳನ್ನು ಓದಿಯೇ ತೀರುತ್ತೇನೆಂದು ಅಂದೇ ನಮ್ಮ ತಾಯಿ ತೀರ್ಮಾನಿಸಿದರು. ಅಂದಿನಿಂದ ಅವರು ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಲಿಲ್ಲ. ಆದರೆ, ನಾನು ಆ ಪ್ರಕಾಶನಗಳ ಕಡೆಗೆ ಸ್ವಲ್ಪವೂ ಗಮನವನ್ನು ಕೊಡಲಿಲ್ಲ. ಏಕೆಂದರೆ, ನಾನು ಸಂಗೀತ ಶಾಲೆಯಿಂದ ಪದವಿಯನ್ನು ಪಡೆಯುವುದಕ್ಕಾಗಿ ಪ್ರಯಾಸಪಡುತ್ತಿದ್ದರಿಂದ ಸಂಗೀತದಲ್ಲೇ ಸಂಪೂರ್ಣವಾಗಿ ಮುಳುಗಿಬಿಟ್ಟೆ.

ಜೂನ್‌ 1935ರಲ್ಲಿ, ಐಲಿನ್‌ ಮತ್ತು ನಾನು ಆಂಗ್ಲಿಕನ್‌ ಚರ್ಚ್‌ನಲ್ಲಿ ಮದುವೆಯಾದವು. ನಾನು 13 ವರ್ಷದವನಾಗಿದ್ದಾಗಲೇ ಯೂನೈಟಡ್‌ ಚರ್ಚ್‌ ಆಫ್‌ ಕೆನಡಾವನ್ನು ಬಿಟ್ಟುಬಿಟ್ಟಿದ್ದೆ. ಆದುದರಿಂದ, ನಾನು ಯಾವುದೇ ಧರ್ಮವನ್ನು ಸ್ವೀಕರಿಸಿರಲಿಲ್ಲ. ಆಗ ನಾನೊಬ್ಬ ಯೆಹೋವನ ಸಾಕ್ಷಿಯಾಗಿರದಿದ್ದರೂ, ವಿವಾಹದ ರಿಜಿಸ್ಟಾರ್‌ನಲ್ಲಿ ನಾನೊಬ್ಬ ಯೆಹೋವನ ಸಾಕ್ಷಿ ಎಂದು ಸಹಿಯನ್ನು ಹಾಕಿದೆ.

ನಾನು ಮತ್ತು ಐಲಿನ್‌ ಮುಂದೆ ಕುಟುಂಬವನ್ನು ಬೆಳೆಸುವ ಮತ್ತು ಆದರ್ಶಪ್ರಾಯರಾದ ಹೆತ್ತವರಾಗಿರುವ ಕನಸನ್ನು ಕಂಡಿದ್ದೆವು. ಹಾಗಾಗಿ, ನಾವು ಬೈಬಲಿನ ಹೊಸ ಒಡಂಬಡಿಕೆಯನ್ನು ಒಟ್ಟಾಗಿ ಓದಲು ಪ್ರಾರಂಭಿಸಿದೆವು. ನಮಗೇನೋ ಒಳ್ಳೇ ಉದ್ದೇಶಗಳಿದ್ದವು, ಆದರೆ ಬೇರೆ ವಿಷಯಗಳು ಮಧ್ಯೆ ಪ್ರವೇಶಿಸಿದ್ದರಿಂದ ಆ ಉದ್ದೇಶಗಳು ನೆರವೇರಲಿಲ್ಲ. ಸ್ವಲ್ಪ ಸಮಯದ ನಂತರ ನಾವು ಪುನಃ ಪ್ರಯತ್ನಿಸಿದೆವು. ಆದರೆ, ಫಲಿತಾಂಶವೇನು ಸಿಗಲಿಲ್ಲ. 1935ರ ಕ್ರಿಸ್ಮಸ್‌ ದಿನದಂದು ದ ಹಾರ್ಪ್‌ ಆಫ್‌ ಗಾಡ್‌ (ದೇವರ ಕುಡುಗೋಲು) ಎಂಬ ಪುಸ್ತಕವು ಕೊಡುಗೆಯ ರೂಪದಲ್ಲಿ ನಮಗೆ ಸಿಕ್ಕಿತು. ಆಗ ನನ್ನ ಹೆಂಡತಿಯು ಹೇಳಿದ್ದು: “ಇದೇನಿದು, ನಿಮ್ಮ ತಾಯಿ ವಿಚಿತ್ರವಾದ ಕ್ರಿಸ್ಮಸ್‌ ಕೊಡುಗೆಯನ್ನು ಕಳುಹಿಸಿದ್ದಾರಲ್ಲ?” ಹಾಗಿದ್ದರೂ, ನಾನು ಕೆಲಸಕ್ಕೆ ಹೋದ ಮೇಲೆ, ನನ್ನ ಹೆಂಡತಿಯು ಅದನ್ನು ಓದಲು ಪ್ರಾರಂಭಿಸಿದಳು. ತಾನು ಓದುತ್ತಿರುವ ವಿಷಯವು ಅವಳಿಗೆ ತುಂಬಾ ಇಷ್ಟವಾಯಿತು. ಸ್ವಲ್ಪ ಸಮಯದ ವರೆಗೂ, ಈ ವಿಷಯದ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಕುಟುಂಬಕ್ಕಾಗಿದ್ದ ನಮ್ಮ ನಿರೀಕ್ಷೆಗಳು ಇನ್ನೂ ನೆರವೇರದೆ ಇದ್ದವು. ಏಕೆಂದರೆ, 1937ರಲ್ಲಿ ನಮಗೆ ಒಬ್ಬ ಮಗಳು ಹುಟ್ಟಿದಳು. ಆದರೆ, ಅವಳು ಬಹಳ ಕಾಲ ಉಳಿಯಲಿಲ್ಲ. ಆಗ ನಮಗಾದ ದುಃಖವು ಹೇಳತೀರದು!

ಈ ಸಮಯದಲ್ಲಿ, ನನ್ನ ಹೆತ್ತವರ ಕುಟುಂಬವು ಸಾರುವ ಕೆಲಸದಲ್ಲಿ ಹೆಚ್ಚು ಹುರುಪಿನಿಂದ ಭಾಗವಹಿಸುತ್ತಿತ್ತು. ನಮ್ಮ ಕುಟುಂಬದಲ್ಲಿ, ನಮ್ಮ ತಂದೆಯೊಬ್ಬರೆ ಕಾನ್‌ಸೊಲೆಷನ್‌ (ಈಗ ಎಚ್ಚರ!) ಪತ್ರಿಕೆಗಾಗಿ ಚಂದಾವನ್ನು ಇನ್ನೂ ನೀಡದಿದ್ದ ರಾಜ್ಯ ಘೋಷಕರಾಗಿದ್ದಾರೆಂಬುದು ನನಗೆ ಗೊತ್ತಾಯಿತು. ಆ ತಿಂಗಳು ಚಂದಾವನ್ನು ನೀಡುವುದು ಕ್ಷೇತ್ರಸೇವೆಯ ಗುರಿಯಾಗಿತ್ತು. ಆ ಗುರಿಯನ್ನು ಮುಟ್ಟಲು ನನ್ನ ತಂದೆಗೆ ಇನ್ನೂ ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂತು. ಅಲ್ಲಿಯವರೆಗೂ ನಾನು ಸೊಸೈಟಿಯ ಯಾವುದೇ ಪತ್ರಿಕೆಗಳನ್ನು ಓದಿರಲಿಲ್ಲ. ಆದರೆ ನನ್ನ ತಂದೆಯವರನ್ನು ನೋಡಿ ಪಾಪ ಅನ್ನಿಸುತ್ತಿತ್ತು. ಹಾಗಾಗಿ ನಾನು ಅವರಿಗೆ ಹೀಗೆ ಹೇಳಿದೆ: “ಸರಿ, ನೀವು ಕೂಡ ಬೇರೆ ಸೌವಾರ್ತಿಕರಂತೆಯೇ ಇದ್ದೀರಿ: ಆದ್ದರಿಂದ, ನನ್ನನ್ನು ನಿಮ್ಮ ಚಂದಾದಾರರಾಗಿ ಮಾಡಿಕೊಳ್ಳಿ.” ಬೇಸಿಗೆಕಾಲ ಆರಂಭವಾದಾಗ ನಮ್ಮ ಆರ್ಕಿಸ್ಟ್ರಾ, ನಗರದ ಆಚೆಯಿರುವ ಬೇಸಿಗೆ ಧಾಮದಲ್ಲಿ ಕಾರ್ಯಕ್ರಮವನ್ನು ನೀಡಲು ಪ್ರಾರಂಭಿಸಿತು. ಕಾನ್‌ಸೊಲೆಷನ್‌ ಪತ್ರಿಕೆಯು ಕೂಡ ಅಂಚೆಯ ಮೂಲಕ ನನ್ನನ್ನು ಹಿಂಬಾಲಿಸಿತು. ಶರತ್ಕಾಲವು ಆರಂಭವಾದಾಗ ನಮ್ಮ ಆರ್ಕಿಸ್ಟ್ರಾ ಟೊರಾಂಟೋ ನಗರಕ್ಕೆ ಹಿಂದಿರುಗಿತು. ಪತ್ರಿಕೆಗಳು ನಮ್ಮ ಹೊಸ ವಿಳಾಸಕ್ಕೆ ಬರುವುದು ನಿಂತುಹೋಗಲಿಲ್ಲ. ಆದರೆ, ನಾನು ಒಂದು ಪತ್ರಿಕೆಯನ್ನೂ ಸುತ್ತುಹಾಳೆಯಿಂದ ಹೊರಗೆ ತೆಗೆದಿರಲಿಲ್ಲ.

ಒಮ್ಮೆ ಕ್ರಿಸ್ಮಸ್‌ ರಜಾದಿನಗಳಲ್ಲಿ, ಪತ್ರಿಕೆಗಳ ರಾಶಿಯನ್ನು ನೋಡಿ, ಈ ಪುಸ್ತಕಗಳಿಗೆ ನಾನು ಹಣ ಕೊಟ್ಟಿರುವುದಾದರೆ ಕನಿಷ್ಟಪಕ್ಷ ಕೆಲವನ್ನಾದರೂ ಓದಿ, ಅದರಲ್ಲಿ ಏನು ಬರೆದಿದೆ ಎಂಬುದನ್ನು ನೋಡಬೇಕು ಎಂದು ನಾನು ತೀರ್ಮಾನಿಸಿದೆ. ನಾನು ಓದಲು ತೆಗೆದ ಮೊದಲ ಪತ್ರಿಕೆಯು ನನ್ನನ್ನು ಬೆಚ್ಚಿಬೀಳುವಂತೆ ಮಾಡಿತು. ಲೇಖನವು ಆ ಸಮಯದಲ್ಲಿದ್ದ ಭ್ರಷ್ಟಾಚಾರ ಮತ್ತು ರಾಜಕೀಯ ಒಳಸಂಚನ್ನು ಬಯಲುಮಾಡಿತ್ತು. ನಾನು ಓದುತ್ತಿದ್ದ ವಿಷಯಗಳ ಕುರಿತು ನನ್ನ ಜೊತೆ ಸಂಗೀತಗಾರರೊಂದಿಗೆ ಮಾತನಾಡಲಾರಂಭಿಸಿದೆ. ಆದರೆ, ಅವರು ನಾನು ಹೇಳುತ್ತಿರುವ ವಿಷಯದ ಸತ್ಯತೆಯ ಕುರಿತು ಸವಾಲೆಸೆದರು. ನಾನು ಹೇಳುತ್ತಿರುವುದು ನಿಜವೆಂಬುದನ್ನು ರುಜುಪಡಿಸುವುದಕ್ಕಾಗಿ ನಾನು ಪತ್ರಿಕೆಗಳನ್ನು ಓದುತ್ತಿರಬೇಕಾಯಿತು. ನನಗರಿವಿಲ್ಲದೆಯೇ ನಾನು ಯೆಹೋವನ ಕುರಿತು ಸಾಕ್ಷಿಯನ್ನು ಕೊಡಲು ಪ್ರಾರಂಭಿಸಿದ್ದೆ. ಆ ಸಮಯದಿಂದ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಓದಗಿಸುವ ಅದ್ಭುತಕರವಾದ ಬೈಬಲ್‌ ಪ್ರಕಾಶನಗಳನ್ನು ಓದುವುದನ್ನು ಇಂದಿನವರೆಗೂ ನಾನು ನಿಲ್ಲಿಸಿಲ್ಲ.​—⁠ಮತ್ತಾಯ 24:⁠45.

ನನ್ನ ಕೆಲಸದ ನಿಮಿತ್ತ ವಾರದ ದಿನಗಳಲ್ಲಿ ನಾನು ತುಂಬ ಕಾರ್ಯಮಗ್ನನಾಗಿರುತ್ತಿದ್ದೆ. ಸ್ವಲ್ಪ ಸಮಯದರೊಳಗಾಗಿ, ನಾನು ಮತ್ತು ಐಲಿನ್‌ ಭಾನುವಾರದ ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದೆವು. 1938ರಲ್ಲಿ, ಒಂದು ಭಾನುವಾರದಂದು ನಾವು ಕೂಟಕ್ಕಾಗಿ ಬಂದಿಳಿದೆವು. ಆಗ ಇಬ್ಬರು ವೃದ್ಧ ಸಹೋದರಿಯರು ನಮಗೆ ವಂದನೆಯನ್ನು ಹೇಳಿದರು. ಅವರಲ್ಲಿ ಒಬ್ಬರು ಹೇಳಿದ್ದು: “ಯುವ ಸಹೋದರನೇ, ಯೆಹೋವನಿಗಾಗಿ ನೀನು ನಿನ್ನ ನಿಲುವನ್ನು ಇನ್ನೂ ತೆಗೆದುಕೊಂಡಿಲ್ಲವೋ? ನಿನಗೆ ಗೊತ್ತೆ, ಅರ್ಮಗೆದೋನ್‌ ಬಹಳ ಹತ್ತಿರದಲ್ಲಿದೆ!” ಯೆಹೋವನೊಬ್ಬನೇ ನಿಜ ದೇವರೆಂದು ನನಗೆ ಗೊತ್ತಿತ್ತು. ಇದು ಅವನ ಸಂಸ್ಥೆಯೆಂಬುದನ್ನು ನಾನು ಮನಗಂಡಿದ್ದೆ. ನಾನು ಅದರ ಭಾಗವಾಗಿರಬೇಕು ಎಂಬ ಬಯಕೆಯೂ ಇತ್ತು. ಹಾಗಾಗಿ, ನಾನು 1938, ಅಕ್ಟೋಬರ್‌ 15ರಂದು ದೀಕ್ಷಾಸ್ನಾನವನ್ನು ಪಡೆದುಕೊಂಡೆ. ಐಲಿನ್‌ಗೆ ಸುಮಾರು ಆರು ತಿಂಗಳುಗಳ ನಂತರ ದೀಕ್ಷಾಸ್ನಾನವಾಯಿತು. ನನ್ನ ಕುಟುಂಬದಲ್ಲಿರುವವರೆಲ್ಲರೂ ಯೆಹೋವನ ಸಮರ್ಪಿತ ಸೇವಕರಾಗಿದ್ದಾರೆ ಎಂದು ಹೇಳಲು ಸಂತೋಷಿಸುತ್ತೇನೆ.

ನಾನು ದೇವಜನರೊಂದಿಗೆ ಅನುಭವಿಸಿದ ಸಹಾವಾಸವು ಎಂಥ ಮಹದಾನಂದವಾಗಿತ್ತು! ಸ್ವಲ್ಪ ಸಮಯದಲ್ಲೇ ನನ್ನ ಕುಟುಂಬದವರೊಂದಿಗೆ ಇರುವಂಥ ಅನಿಸಿಕೆಯುಂಟಾಯಿತು. ನಾನು ಕೂಟಗಳಿಗೆ ಹಾಜರಾಗಲು ಸಾಧ್ಯವಾಗದಿದ್ದಾಗ, ಅಲ್ಲಿ ಏನು ನಡೆಯಿತು ಎಂಬುದನ್ನು ತಿಳಿದುಕೊಳ್ಳಲು ಯಾವಾಗಲೂ ತವಕವುಳ್ಳವನಾಗಿದ್ದೆ. ಲೇಖನದ ಆರಂಭದಲ್ಲಿ ತಿಳಿಸಿದ ಆ ವಿಶೇಷ ಸಂಜೆಯು, ಯೆಹೋವನಿಗಾದ ನನ್ನ ಸೇವೆಯಲ್ಲಿ ಒಂದು ತಿರುಗುಬಿಂದುವಾಗಿತ್ತು.

ಮಹತ್ವಪೂರ್ಣವಾದ ಬದಲಾವಣೆಗಳ ಸಮಯ

ನಮ್ಮ ಜೀವನದಲ್ಲಿ ಮತ್ತೊಂದು ಮಹತ್ವಪೂರ್ಣವಾದ ಬದಲಾವಣೆಯು ಮೇ 1, 1943ರಲ್ಲಿ ಆಯಿತು. ಅದೇನೆಂದರೆ, ನಾವು ಪ್ರಪ್ರಥಮವಾಗಿ ಬಹಳ ಪ್ರಾಮುಖ್ಯವಾಗಿದ್ದ ಸಮ್ಮೇಳನಕ್ಕೆ ಹಾಜರಾದೆವು. ಆ ಸಮ್ಮೇಳನವು ಕ್ಲೀವ್‌ಲ್ಯಾಂಡಿನ ಓಹಾಯೋದಲ್ಲಿ ನಡೆದ ಹೊಸಲೋಕದ ದೇವಪ್ರಭುತ್ವ ಸಮ್ಮೇಳನವಾಗಿತ್ತು. ಆಗ ಎರಡನೇ ಮಹಾಯುದ್ಧವು ನಡೆಯುತ್ತಿತ್ತು ಮತ್ತು ಯುದ್ಧವು ಮುಕ್ತಾಯಗೊಳ್ಳುವ ಯಾವುದೇ ಸೂಚನೆಯಿರಲಿಲ್ಲ. ಅಂಥ ಸಮಯದಲ್ಲಿ ವಾಚ್‌ಟವರ್‌ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಸಹೋದರ ನಾರ್‌ ಅವರು ಧೈರ್ಯದಿಂದ, ಗಮನವನ್ನು ಸೆಳೆಯುವಂಥ ಭಾಷಣವನ್ನು ಕೊಟ್ಟರು. ಆ ಭಾಷಣದ ಶೀರ್ಷಿಕೆಯು “ಶಾಂತಿ​—⁠ಅದು ಎಂದಾದರೂ ಕೊನೆಗೊಳ್ಳುವುದೋ?” ಎಂಬುದಾಗಿತ್ತು. ಅವರು ಪ್ರಕಟನೆ ಪುಸ್ತಕದ 17ನೇ ಅಧ್ಯಾಯದಿಂದ, ಯುದ್ಧದ ನಂತರ ಶಾಂತಿಯ ಸಮಯಾವಧಿಯು ಇರುವುದು ಆ ಸಮಯದಲ್ಲಿ ಸುವಾರ್ತೆಯನ್ನು ಸಾರುವ ಮಹಾ ಕೆಲಸವು ನೆರವೇರಿಸಲ್ಪಡುವುದು ಎಂಬುದನ್ನು ತೋರಿಸಿದ್ದು ನಮಗೆ ಈಗಲೂ ನೆನಪಿದೆ.

ಈ ಭಾಷಣಕ್ಕೆ ಮುಂಚೆ ಸಹೋದರರಾದ ನಾರ್‌ ಕೊಟ್ಟಂಥ ಭಾಷಣವು ನಮ್ಮನ್ನು ಹೆಚ್ಚು ಪ್ರಭಾವಿಸಿತು. ಅದು “ಯೆಫ್ತಾಹ ಮತ್ತು ಅವನ ಪ್ರತಿಜ್ಞೆ” ಎಂಬ ಭಾಷಣವಾಗಿತ್ತು. ಆ ಭಾಷಣದಲ್ಲಿ ಹೆಚ್ಚು ಪಯನೀಯರರಿಗಾಗಿ ಕೇಳಿಕೊಳ್ಳಲಾಯಿತು. ನಾನು ಮತ್ತು ಐಲಿನ್‌ ಒಬ್ಬರನ್ನೊಬ್ಬರು ನೋಡಿಕೊಂಡೆವು. ನಾವು ಹಾಗೂ (ನಮ್ಮೊಂದಿಗೆ ಆ ಸಮಯದಲ್ಲಿ ಅಲ್ಲಿದ್ದ ಅನೇಕರೊಂದಿಗೆ) ಜೊತೆಗೂಡಿ “ಅದು ನಾವೇ!” ಎಂದು ಹೇಳಿದೆವು. ಕೂಡಲೇ ಹೆಚ್ಚು ಪ್ರಾಮುಖ್ಯವಾದ ಪಯನೀಯರ್‌ ಕೆಲಸಕ್ಕಾಗಿ ಯೋಜನೆಗಳನ್ನು ಮಾಡಲು ಪ್ರಾರಂಭಿಸಿದೆವು.

ಕೆನಡಾದಲ್ಲಿ ಜುಲೈ 4, 1940ರಿಂದಲೇ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ನಿಷೇಧವು ಇತ್ತು. ಮೇ 1, 1943ರಲ್ಲಿ ನಾವು ನಮ್ಮ ಪಯನೀಯರ್‌ ಕೆಲಸವನ್ನು ಆರಂಭಿಸಿದಾಗ, ಯೆಹೋವನ ಕುರಿತು ಮಾತಾಡುವುದು ಮತ್ತು ಸಂಸ್ಥೆಯ ಪ್ರಕಾಶನಗಳನ್ನು ಜನರಿಗೆ ಹಂಚುವುದು ಕಾನೂನು ವಿರುದ್ಧವಾಗಿತ್ತು. ಕ್ರೈಸ್ತರಾಗಿ ಸೇವೆಸಲ್ಲಿಸುತ್ತಿದ್ದ ನಾವು, ಕೇವಲ ನಮ್ಮ ವೈಯಕ್ತಿಕ ಕಾಪಿಗಳಾದ ಕಿಂಗ್‌ ಜೇಮ್ಸ್‌ ವರ್ಷನ್‌ ಬೈಬಲುಗಳನ್ನು ಮಾತ್ರ ನಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದೆವು. ಪ್ರಪ್ರಥಮವಾದ ನಮ್ಮ ಪಯನೀಯರ್‌ ನೇಮಕವು, ಒಂಟಾರಿಯೋ ನಗರದ ಪ್ಯಾರಿ ಸೌಂಡ್‌ ಎಂಬ ಸ್ಥಳವಾಗಿತ್ತು. ಅಲ್ಲಿಗೆ ಬಂದು ಸ್ವಲ್ಪ ದಿನಗಳೊಳಗಾಗಿ, ನಮಗೆ ಸಹಾಯಮಾಡುವುದಕ್ಕಾಗಿ ಸ್ವೀವರ್ಟ್‌ ಮ್ಯಾನ್‌ ಎಂಬ ಅನುಭವಸ್ಥ ಪಯನೀಯರ್‌ ಅನ್ನು ಬ್ರಾಂಚ್‌ ಆಫೀಸು ಕಳುಹಿಸಿಕೊಟ್ಟಿತು. ಅದು ನಿಜವಾಗಿಯೂ ಒಂದು ಪ್ರೀತಿಪೂರ್ವಕ ಏರ್ಪಾಡಾಗಿತ್ತು. ಏಕೆಂದರೆ, ಸಹೋದರ ಮ್ಯಾನ್‌ ಅವರು ಹಸನ್ಮುಖರಾದ ವ್ಯಕ್ತಿಯಾಗಿದ್ದರು ಮತ್ತು ಜನರೊಂದಿಗಿನ ಅವರ ವರ್ತನೆಯು ತುಂಬ ಹಿತಕರವಾಗಿತ್ತು. ಇದನ್ನು ನಾವು ಅವರಿಂದ ಕಲಿತುಕೊಂಡೆವು ಮತ್ತು ಅವರೊಂದಿಗೆ ಸಂತೋಷಕರವಾದ ಸಮಯವನ್ನು ಕಳೆದವು. ಸಂಸ್ಥೆಯು ಹ್ಯಾಮಿಲ್‌ಟನ್‌ ಎಂಬ ನಗರಕ್ಕೆ ನಮ್ಮನ್ನು ಪುನಃ ನೇಮಿಸಿದಾಗ, ನಾವು ಅನೇಕ ಬೈಬಲ್‌ ಅಭ್ಯಾಸಗಳನ್ನು ನಡೆಸುತ್ತಿದ್ದೆವು. ಅಲ್ಲಿಗೆ ಹೋಗಿ ಸ್ವಲ್ಪ ಸಮಯದರೊಳಗಾಗಿ, ನಾನು ಮಿಲಿಟರಿ ಸೇರುವ ವಯಸ್ಸನ್ನು ದಾಟ್ಟಿದ್ದರೂ, ಸೈನ್ಯದ ಸಹಾಯಕ ದಳಕ್ಕೆ ಸೇರುವಂತೆ ನನಗೆ ಹೇಳಲಾಯಿತು. ನಾನು ಒಪ್ಪದಿದ್ದ ಕಾರಣ, ಡಿಸೆಂಬರ್‌ 31, 1943ರಲ್ಲಿ ನನ್ನನ್ನು ಕೈದುಮಾಡಲಾಯಿತು. ಕೋರ್ಟಿನ ನಿಯಮಾನುಸರಣೆಗಳನ್ನು ಪೂರ್ತಿಮಾಡಿದ ನಂತರ, ಆಯುಧಗಳನ್ನು ಹೊರಲು ತಿರಸ್ಕರಿಸುವವರಿಗೆ, ನಾಗರಿಕರ ಸೇವೆಯನ್ನು ಮಾಡುವ ಶಿಕ್ಷೆಯು ವಿಧಿಸಲ್ಪಟ್ಟಿತು. ಅಲ್ಲಿ ಆಗಸ್ಟ್‌ 1945ರವರೆಗೂ ನಾನು ಉಳಿದಿದ್ದೆ.

ನನ್ನನ್ನು ಬಿಡುಗಡೆಮಾಡಿದ ನಂತರ, ಕೂಡಲೇ ನಾನು ಮತ್ತು ಐಲಿನ್‌ ಒಂಟಾರಿಯೋದ ಕಾರ್ನ್‌ವಾಲ್‌ ಎಂಬಲ್ಲಿಗೆ ಪಯನೀಯರ್‌ ನೇಮಕವನ್ನು ಸ್ವೀಕರಿಸಿಕೊಂಡೆವು. ಅದಾದ ಸ್ವಲ್ಪ ಸಮಯದರೊಳಗೆ, ಸಂಸ್ಥೆಯ ಕಾನೂನು ಡಿಪಾರ್ಟ್‌ಮೆಂಟ್‌ ವಿಶೇಷ ಪೋಲಿಸ್‌ ಕೋರ್ಟಿನ ನೇಮಕಕ್ಕಾಗಿ ನಮ್ಮನ್ನು ಕ್ಯೂಬೆಕ್‌ಗೆ ಕಳುಹಿಸಿತು. ಆಗ ಕ್ಯೂಬೆಕ್‌ನಲ್ಲಿ ಡ್ಯೂಪ್ಲಸಿಗಳು ಆಳ್ವಿಕೆಮಾಡುತ್ತಿದ್ದ ಶಕವಾಗಿತ್ತು. ಆ ಸಮಯದಲ್ಲಿ ವಿಶೇಷವಾಗಿ ಯೆಹೋವನ ಸಾಕ್ಷಿಗಳನ್ನು ಹಿಂಸಿಸುವುದು ತೀವ್ರವಾಗಿತ್ತು. ನಮ್ಮ ಸಹೋದರರಿಗೆ ಸಹಾಯಮಾಡುವುದಕ್ಕಾಗಿ, ವಾರದ ಅನೇಕ ದಿನಗಳು ನಾಲ್ಕು ವಿಭಿನ್ನ ಕೋರ್ಟುಗಳಿಗೆ ಹೋಗಬೇಕಾಗಿತ್ತು. ಆ ಸಮಯವು ನಿಜವಾಗಿಯೂ ನಂಬಿಕೆಯನ್ನು ಕಟ್ಟುವಂಥದ್ದೂ ಉತ್ತೇಜನಕಾರಿಯಾದದ್ದೂ ಆಗಿತ್ತು.

1946ರಲ್ಲಿ ನಡೆದ ಕ್ಲೀವ್‌ಲ್ಯಾಂಡ್‌ ಸಮ್ಮೇಳನದ ಬಳಿಕ, ಒಂದು ತೀರ ಪ್ರದೇಶದಿಂದ ಇನ್ನೊಂದು ತೀರ ಪ್ರದೇಶಕ್ಕೆ ಸರ್ಕಿಟ್‌ ಕೆಲಸಕ್ಕಾಗಿ ಹೋಗುವಂತೆ ನನಗೆ ಮತ್ತು ನನ್ನ ಹೆಂಡತಿಗೆ ನೇಮಕವು ಸಿಕ್ಕಿತು. ಈಗ ವಿಷಯಗಳು ಬೇಗನೆ ಬದಲಾಗತೊಡಗಿದವು. ಹೇಗೆಂದರೆ, 1948ರಲ್ಲಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡಿನ 11ನೇ ತರಗತಿಗೆ ಹಾಜರಾಗುವಂತೆ ನಮಗೆ ಆಹ್ವಾನ ಸಿಕ್ಕಿತು. ಅಲ್ಲಿ ಸಹೋದರರಾದ ಆಲ್ಬರ್ಟ್‌ ಶ್ರೋಡರ್‌ ಮತ್ತು ಮ್ಯಾಕ್ಸ್‌ವೆಲ್‌ ಫ್ರೆಂಡ್‌ ನಮ್ಮ ಶಿಕ್ಷಕರಾಗಿದ್ದರು. ನಮ್ಮ ತರಗತಿಯಲ್ಲಿ 108 ವಿದ್ಯಾರ್ಥಿಗಳಿದ್ದರು ಮತ್ತು ಅವರಲ್ಲಿ 40 ಮಂದಿ ಅಭಿಷಕ್ತರಾಗಿದ್ದರು. ಬಹುಕಾಲ ಯೆಹೋವನನ್ನು ಸೇವಿಸಿದ ಸೇವಕರು ಅಲ್ಲಿದದ್ದು, ನಿಜವಾಗಿಯೂ ಪುಷ್ಟಿಗೊಳಿಸುವಂತಹ ಹಾಗೂ ಬಹುಮೂಲ್ಯವಾದ ಅನುಭವವಾಗಿತ್ತು ಎಂಬುದರಲ್ಲಿ ಸಂದೇಹವೇ ಇರಲಿಲ್ಲ!

ಒಂದು ದಿನ ಸಹೋದರ ನಾರ್‌ ಅವರು ಬ್ರೂಕ್ಲಿನ್‌ನಿಂದ ನಮ್ಮನ್ನು ಭೇಟಿಯಾಗುವುದಕ್ಕಾಗಿ ಬಂದಿದ್ದರು. ಅವರು ತಮ್ಮ ಭಾಷಣದಲ್ಲಿ, ಜ್ಯಾಪನೀಸ್‌ ಭಾಷೆಯನ್ನು ಕಲಿಯಲು ಮನಸ್ಸುಳ್ಳ 25 ಮಂದಿಯನ್ನು ಕರೆದರು. ಆದರೆ, 108 ಮಂದಿಯೂ ಮುಂದೆಬಂದರು! ಅವರಲ್ಲಿ ಜ್ಯಾಪನೀಸ್‌ ಭಾಷೆಯನ್ನು ಯಾರಿಗೆ ಕಲಿಸುವುದು ಎಂದು ಆಯ್ಕೆಮಾಡುವುದು ದೊಡ್ಡ ಕೆಲಸವೇ ಆಗಿತ್ತು. ಆಯ್ಕೆಯನ್ನು ಮಾಡಲು ಯೆಹೋವನು ಮಾರ್ಗದರ್ಶಿಸಿದನು ಎಂದು ನಾನು ನೆನಸುತ್ತೇನೆ. ಏಕೆಂದರೆ, ಆ ಆಯ್ಕೆಯು ನಿಜವಾಗಿಯೂ ಕಾರ್ಯಸಾಧಕವಾಗಿತ್ತು. ಅದರಲ್ಲಿ ಆಯ್ಕೆಯಾದ 25 ಮಂದಿಗೆ, ಸ್ವಲ್ಪ ಸಮಯದರೊಳಗೆ ಜಪಾನ್‌ ದೇಶದಲ್ಲಿ ಸಾರುವ ಕೆಲಸವನ್ನು ಪ್ರಾರಂಭಿಸುವ ಸುಯೋಗವು ಸಿಕ್ಕಿತು. ಅವರಲ್ಲಿ ಅನೇಕರಿಗೆ ವಯಸ್ಸಾಗಿದ್ದರೂ ಈಗಲೂ ತಮ್ಮ ನೇಮಕದಲ್ಲಿ ಉಳಿದುಕೊಂಡು ಅಲ್ಲೇ ಸೇವೆಮಾಡುತ್ತಿದ್ದಾರೆ. ಅವರಲ್ಲಿ ಕೆಲವರು, ಲಾಯಡ್‌ ಮತ್ತು ಮೆಲ್ಬಾ ಬ್ಯಾರಿ ಇನ್ನಿತರ ನೇಮಕಗಳಿಗಾಗಿ ಅಲ್ಲಿಂದ ಬೇರೆ ಕಡೆಗೆ ಹೋಗಿದ್ದಾರೆ. ಕಳೆದ ವರ್ಷ ಲಾಯಡ್‌ ಅವರು ಮರಣಹೊಂದಿದರು. ಅಲ್ಲಿಯ ವರೆಗೂ ಆಡಳಿತ ಮಂಡಳಿಯ ಸದಸ್ಯರಲ್ಲಿ ಒಬ್ಬರಾಗಿ ಸೇವೆಸಲ್ಲಿಸಿದ್ದರು. ಯೆಹೋವನು ಅವರಿಗೆ ನೀಡಿರುವ ಬಹುಮಾನಕ್ಕಾಗಿ ನಾವು ಅವರೊಂದಿಗೆ ಹರ್ಷಿಸುತ್ತೇವೆ.

ಪದವಿ ನೀಡುವ ದಿನವು ಬಂದಿತು. ನಮ್ಮನ್ನು ಜಮೇಕ ದೇಶಕ್ಕೆ ನೇಮಿಸಲಾಯಿತು. ಆದರೆ, ಕ್ಯೂಬೆಕ್‌ ದೇಶದಲ್ಲಿ ಇನ್ನೂ ತೀರ್ಮಾನವಾಗದೆ ಇದ್ದ ಕೋರ್ಟ್‌ ತಾರೀಖುಗಳ ನಿಮಿತ್ತ, ನಾವು ಕೆನಡ ದೇಶಕ್ಕೆ ಹಿಂದಿರುಗುವಂತೆ ಹೇಳಲಾಯಿತು.

ಇನ್ನೂ ಹೆಚ್ಚು ಸಂಗೀತ!

ಪಯನೀಯರ್‌ ಸೇವೆಯನ್ನು ಮಾಡುವುದಕ್ಕಾಗಿ ನಾನು ಸಂಗೀತವನ್ನು ಬಿಟ್ಟುಬಿಟ್ಟಿದ್ದರೂ, ಸಂಗೀತವು ನನ್ನನ್ನು ಅಷ್ಟು ಸುಲಭವಾಗಿ ಬಿಡುವಂತೆ ಕಾಣಲಿಲ್ಲ. 1949ರಲ್ಲಿ ಸಂಸ್ಥೆಯ ಅಧ್ಯಕ್ಷರಾದ ನೇತನ್‌ ನಾರ್‌ ಮತ್ತು ಅವರ ಸೆಕ್ರಿಟರಿ ಮಿಲ್ಟನ್‌ ಹೆನ್ಶಲ್‌ ಅವರು, ಟೊರಾಂಟೋದಲ್ಲಿದ್ದ ಮೇಪಲ್‌ ಲೀಫ್‌ ಗಾರ್ಡನ್‌ಗೆ ಬಂದರು. ಅಲ್ಲಿ ಸಹೋದರ ನಾರ್‌ ಅವರು “ನೀವು ನೆನಸುವುದಕ್ಕಿಂತ ಅದು ತಡವಾಗಿರುವುದು!” ಎಂಬ ಭಾಷಣವನ್ನು ಕೊಟ್ಟರು. ಆಗ, ಪ್ರಪ್ರಥಮವಾಗಿ ಸಮ್ಮೇಳನದ ಆರ್ಕಿಸ್ಟ್ರಾವನ್ನು ನಿರ್ದೇಶಿಸುವಂತೆ ನನಗೆ ಆಹ್ವಾನವು ಸಿಕ್ಕಿತು. ನಾವು ಕಿಂಗ್‌ಡಂಮ್‌ ಸರ್ವಿಸ್‌ ಸಾಂಗ್‌ ಬುಕ್‌ನಲ್ಲಿ (1944) ಕೆಲವು ಪ್ರಸಿದ್ಧ ಹಾಡುಗಳನ್ನು ತಯಾರಿಸುವುದಕ್ಕಾಗಿ ವಾಲ್ಸ್‌ ಸಂಗೀತವನ್ನು ಏರ್ಪಾಡುಮಾಡಿದೆವು. ಸಹೋದರರಿಗೆ ಅದು ಇಷ್ಟವಾದಂತಿತ್ತು. ಶನಿವಾರ ಮಧ್ಯಾಹ್ನದ ಕಾರ್ಯಕ್ರಮವು ಮುಕ್ತಾಯಗೊಂಡಾಗ, ಯೋಜನೆಮಾಡಿದ ಭಾನುವಾರದ ಕಾರ್ಯಕ್ರಮಕ್ಕಾಗಿ ನಾವು ಅಭ್ಯಾಸಮಾಡುತ್ತಿದ್ದೆವು. ನಾವಿದ್ದ ಕಡೆಗೆ ಅಂದರೆ, ಅಖಾಡದ ನೆಲಹಾಸಿನ ಕಡೆಯಿಂದ ಸಹೋದರ ಹೆನ್ಶಲ್‌ ಅವರು ಬರುತ್ತಿರುವುದನ್ನು ನೋಡಿದೆ. ಕೂಡಲೆ ನಾನು ಅವರ ಭೇಟಿಮಾಡುವುದಕ್ಕಾಗಿ ಆರ್ಕಿಸ್ಟ್ರಾವನ್ನು ನಿಲ್ಲಿಸಿದೆ. ಆಗ “ನಿನ್ನ ಆರ್ಕಿಸ್ಟ್ರಾದಲ್ಲಿ ಎಷ್ಟು ಮಂದಿ ಸಂಗೀತಗಾರರಿದ್ದಾರೆ?” ಎಂದು ಅವರು ಕೇಳಿದರು. “ಎಲ್ಲರೂ ಹಾಜರಿರುವಾಗ ನಾವು ಒಟ್ಟು 35 ಮಂದಿ” ಎಂದು ಉತ್ತರಿಸಿದೆ. “ಹಾಗಾದರೆ, ನ್ಯೂಯಾರ್ಕ್‌ನಲ್ಲಿ ಮುಂದಿನ ಬೇಸಿಗೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಇದಕ್ಕಿಂತ ಎರಡು ಪಟ್ಟು ಜನರನ್ನು ನಿನಗೆ ಕೊಡಲಾಗುವುದು” ಎಂದು ಅವರು ಉತ್ತರಿಸಿದರು.

ಆದರೆ, ಆ ಬೇಸಿಗೆಕಾಲವು ಬರುವುದಕ್ಕೆ ಮುಂಚೆಯೇ, ಬ್ರೂಕ್ಲಿನ್‌ಗೆ ಬರುವಂತೆ ನನಗೆ ಆಹ್ವಾನ ಸಿಕ್ಕಿತು. ಆಗಿದ್ದ ಪರಿಸ್ಥಿತಿಯಿಂದಾಗಿ ಐಲಿನ್‌ ನನ್ನೊಂದಿಗೆ ಬರಲು ಸಾಧ್ಯವಾಗಲಿಲ್ಲ. ಏಕೆಂದರೆ, ಆಗ ಹೊಸದಾದ 124 ಕೊಲಂಬಿಯಾ ಹೈಟ್ಸ್‌ ಕಟ್ಟಡಗಳು ಇನ್ನೂ ಕಟ್ಟಲ್ಪಟ್ಟಿರಲಿಲ್ಲ. ಆದುದರಿಂದ ಒಂದು ಸಣ್ಣ ಕೋಣೆಯಲ್ಲಿ ಇಬ್ಬರು ಅಭಿಷಿಕ್ತ ಸಹೋದರರೊಂದಿಗೆ ನಾನು ತಂಗುವಂತೆ ಏರ್ಪಾಡನ್ನು ಮಾಡಲಾಗಿತ್ತು. ಆ ವೃದ್ಧ ಸಹೋದರರು ಪೇಯ್ನ್‌ ಮತ್ತು ಕಾರ್ಲ್‌ ಕ್ಲೇಯ್ನ್‌ ಎಂಬುವವರಾಗಿದ್ದರು. ಅವರನ್ನು ನಾನು ಪ್ರಪ್ರಥಮವಾಗಿ ಭೇಟಿಯಾದದ್ದು ಆಗಲೇ. ಆದರೆ ಆ ಕೋಣೆಯು ಇಕ್ಕಟ್ಟಾಗಿತ್ತೋ? ಹೌದು, ಹಾಗಿದ್ದರೂ ನಾವು ಒಬ್ಬರಿಗೊಬ್ಬರು ಹೊಂದಿಕೊಂಡು ಇದ್ದೆವು. ಆ ವೃದ್ಧ ಸಹೋದರರು ದೀರ್ಘಶಾಂತಿಯುಳ್ಳವರೂ ತಾಳ್ಮೆಯುಳ್ಳವರೂ ಆಗಿದ್ದರು. ನಾನು ತಪ್ಪಾಗಿ ಏನೂ ಹೇಳದಂತಿರಲು ತುಂಬ ಪ್ರಯತ್ನಿಸಿದೆ! ದೇವರ ಆತ್ಮವು ಏನನ್ನು ಕಲಿಸಸಾಧ್ಯವಿದೆ ಎಂಬುದಕ್ಕೆ ಅದೊಂದು ಒಳ್ಳೇ ಪಾಠವಾಗಿತ್ತು. ಏಕೆಂದರೆ, ಸಹೋದರ ಕ್ಲೇಯ್ನ್‌ ಅವರನ್ನು ಭೇಟಿಯಾದದ್ದು ಮತ್ತು ಅವರೊಟ್ಟಿಗೆ ಕೆಲಸಮಾಡಿದ್ದು ಎಂಥ ಆಶೀರ್ವಾದವಾಗಿತ್ತು! ಅವರು ಯಾವಾಗಲೂ ದಯಾಪರರು ಮತ್ತು ಉಪಕಾರ ಮಾಡುವವರೂ ಆಗಿದ್ದರು. ನಾವು ಒಟ್ಟಿಗೆ ಉತ್ತಮವಾಗಿ ಕೆಲಸಮಾಡಿದೆವು ಮತ್ತು ಕಳೆದ 50 ವರ್ಷಗಳಿಂದ ಆಪ್ತ ಸ್ನೇಹಿತರಾಗಿ ಉಳಿದಿದ್ದೇವೆ.

ಯಾಂಕಿ ಕ್ರೀಡಾಂಗಣದಲ್ಲಿ ನಡೆದ ಅಧಿವೇಶನಗಳಿಗೆ ಸಂಗೀತವನ್ನು ಸಂಯೋಜಿಸುವ ಸುಯೋಗವು ನನಗೆ ಸಿಕ್ಕಿತು. ಆ ಸಮ್ಮೇಳನಗಳು 1950, 1953, 1955 ಮತ್ತು 1958ರಲ್ಲಿ ನಡೆದವು. ಅದರೊಂದಿಗೆ 1963ರಲ್ಲಿ ಕ್ಯಾಲಿಫೋರ್ನಿಯಾದ ಪ್ಯಾಸಡಿನದಲ್ಲಿನ ರೋಸ್‌ ಬೌಲ್‌ ಎಂಬ ಸಮ್ಮೇಳನಕ್ಕಾಗಿ ಆರ್ಕಿಸ್ಟ್ರಾದ ಜವಾಬ್ದಾರಿಗಳನ್ನು ಆ್ಯಲ್‌ ಕ್ಯವ್‌ಲಿನ್‌ರೊಂದಿಗೆ ಏರ್ಪಾಡುಮಾಡಿದೆ. 1953ರಲ್ಲಿ ಯಾಂಕಿ ಕ್ರಿಡಾಂಗಣದಲ್ಲಿ ನಡೆದ ಸಮ್ಮೇಳನದ ಸಮಯದಲ್ಲಿ, ಭಾನುವಾರದ ಕಾರ್ಯಕ್ರಮದಂದು ಬಹಿರಂಗ ಭಾಷಣಕ್ಕೆ ಮುಂಚೆ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗಿತ್ತು. ಎರಿಕ್‌ ಫ್ರಾಸ್ಟ್‌ ಅವರು, ಎಡಿತ್‌ ಷಿಮ್ಯೋನಿಕ್‌ ಸೊಪ್ರೋನೋ (ನಂತರ ವೈಗ್ಯಾಂಟ್‌ ಎಂದು ಹೆಸರು ಬದಲಾಸಿಕೊಂಡರು) ಅವರಿಗೆ ಪರಿಚಯಮಾಡಿಕೊಟ್ಟರು. ಅವರು “ಫಾರ್‌ವರ್ಡ್‌, ಯೂ ವಿಟ್ನಸಸ್‌!” ಎಂಬ ತಮ್ಮ ಹಾಡನ್ನು ನಮ್ಮ ಆರ್ಕಿಸ್ಟ್ರಾದೊಂದಿಗೆ ಹಾಡಿದರು. ಅನಂತರ, ಆಫ್ರಿಕ ದೇಶದಲ್ಲಿರುವ ನಮ್ಮ ಸಹೋದರ ಸಹೋದರಿಯರ ಮಧುರವಾದ ಹಾಗೂ ಇಂಪಾದ ಸ್ವರವನ್ನು ಟೇಪ್‌ ಮೂಲಕ ಕೇಳಿಸಿಕೊಂಡಾಗ, ನಾವು ಪುಳಕಿತಗೊಂಡೆವು. ಆ ಟೇಪ್‌ ಅನ್ನು ನಾವು ಆಲಿಸಿ ಸಂತೋಷಿಸುವುದಕ್ಕಾಗಿ, ಮಿಷಿನೆರಿಯಾಗಿದ್ದ ಹ್ಯಾರಿ ಆ್ಯರ್ನಾಟ್‌ ಅವರು ಉತ್ತರ ರೊಡೇಶಿಯಾದಿಂದ (ಈಗ ಸಾಂಬಿಯ) ತಂದಿದ್ದರು. ಆ ಮಧುರ ಧ್ವನಿಯು ಇಡೀ ಕ್ರೀಡಾಂಗಣವನ್ನೇ ತುಂಬಿಕೊಂಡಿತು.

1966ರ ಸಂಗೀತ ಪುಸ್ತಕದ ರೆಕಾರ್ಡಿಂಗ್‌

“ಸಿಂಗಿಂಗ್‌ ಆ್ಯಂಡ್‌ ಅಕಂಪನಿಯಿಂಗ್‌ ಯುವರ್‌ಸೆಲ್ಫ್‌ ವಿತ್‌ ಮ್ಯೂಸಿಕ್‌ ಇನ್‌ ಯುವರ್‌ ಹಾರ್ಟ್ಸ್‌” ಎಂಬ ವಿನ್ಯಾಲ್‌ ಕವರಿನ ಸಂಗೀತ ಪುಸ್ತಕವು ನಿಮಗೆ ನೆನಪಿದೆಯೇ? ಈ ಪುಸ್ತಕವು ತಯಾರಾಗಲು ಇನ್ನೇನು ಅಂತಿಮ ಘಟ್ಟವನ್ನು ತಲುಪುತ್ತಿರುವಾಗ ಸಹೋದರ ನಾರ್‌ ಹೇಳಿದ್ದು: “ನಾವು ಇನ್ನು ಕೆಲವು ಹಾಡುಗಳನ್ನು ಮುದ್ರಿಸಲಿರುವೆವು. ಆದ್ದರಿಂದ, ಕೇವಲ ಕೆಲವೇ ವಯಲಿನ್‌ ಮತ್ತು ಕೆಲವೊಂದು ಕೊಳಲುಗಳು ಸೇರಿದ ಒಂದು ಸಣ್ಣ ಆರ್ಕಿಸ್ಟ್ರಾವನ್ನು ಸಿದ್ಧಮಾಡಿದರೆ ಅಷ್ಟೇ ಸಾಕು ಎಂದು ಹೇಳಿದರು. ಆದರೆ ಯಾರೂ ‘ತುತೂರಿಯನ್ನು ಊದಬಾರದು’ ಎಂದು ಹಾಸ್ಯದಿಂದ ಹೇಳಿದರು’!” ಬೆತೆಲ್‌ನಲ್ಲಿದ್ದ ಕಿಂಗ್‌ಡಮ್‌ ಹಾಲ್‌ ನಮ್ಮ ಸ್ಟುಡಿಯೋ ಆಗಿರುವುದು. ಆದರೆ ಅದನ್ನು ಉಪಯೋಗಿಸುವುದರ ಕುರಿತು ಕೆಲವೊಂದು ಚಿಂತೆಗಳಿದ್ದವು. ಅವು ಯಾವುವೆಂದರೆ, ಯಾವುದೇ ಹೊದಿಕೆಯಿಲ್ಲದಿದ್ದ ಗೋಡೆಗಳು, ನೆಲದಲ್ಲಿದ್ದ ಟೈಲ್ಸ್‌ಗಳು ಮತ್ತು ಮಡಿಚಿಡಬಹುದಾದ ಲೋಹದ ಕುರ್ಚಿಗಳು, ಇವುಗಳಿಂದ ಶಬ್ದತರಂಗಗಳು ಪ್ರತಿಧ್ವನಿಸುವಂತಾದರೆ ಆಗೇನು ಮಾಡುವುದು? ಅನಪೇಕ್ಷಣಿಯ ಶಬ್ದತರಂಗಗಳನ್ನು ತಡೆಯಲು ಯಾರು ನಮಗೆ ಸಹಾಯಮಾಡುವರು? ಆಗ, ಒಬ್ಬರು: “ಟಾಮಿ ಮಿಷೆಲ್‌! ಅವರು ಎಬಿಸಿ ನೆಟ್‌ವರ್ಕ್‌ ಸ್ಟುಡಿಯೋದಲ್ಲಿ ಕೆಲಸಮಾಡುತ್ತಾರೆ” ಎಂದು ಹೇಳಿದರು. ನಾವು ಸಹೋದರ ಮಿಷೆಲ್‌ ಅವರನ್ನು ಸಂಪರ್ಕಿಸಿದೆವು ಮತ್ತು ಅವರು ನಮಗೆ ಸಹಾಯಮಾಡಲು ತುಂಬ ಸಂತೋಷಿಸಿದರು.

ನಮ್ಮ ರೆಕಾರ್ಡಿಂಗ್‌ನ ಮೊದಲ ಶನಿವಾರದ ಬೆಳಗ್ಗೆ ಬಂದೇಬಿಟ್ಟಿತು. ಸಂಗೀತಗಾರರನ್ನು ಪರಿಚಯಿಸುತ್ತಿದ್ದಾಗ, ಆ ಸಹೋದರರಲ್ಲಿ ಒಬ್ಬರ ಬಳಿ ಟ್ರಾಂಬ್‌ಬೋನ್‌ ಪೆಟ್ಟಿಗೆಯಿತ್ತು. “ಯಾರೂ ತುತ್ತೂರಿಯನ್ನು ಊದಬಾರದು!” ಎಂದು ಸಹೋದರ ನಾರ್‌ ಹೇಳಿದ ಮಾತು ನನ್ನ ನೆನಪಿಗೆ ಬಂತು. ಈಗ ಏನು ಮಾಡುವುದು? ಅವರು ತಮ್ಮ ಪೆಟ್ಟಿಗೆಯಿಂದ ಟ್ರಾಂಬೋನ್‌ ಅನ್ನು ಹೊರತೆಗೆದು ಅದರ ಜಾರಿನ ಮೇಲೆ ನಿಲ್ಲಿಸಿದರು. ನಂತರ ಸಿದ್ಧವಾಗಲು ಪ್ರಾರಂಭಿಸಿದರು. ಆ ಸಹೋದರರು ಟಾಂಮ್‌ ಮಿಷೆಲ್‌ ಆಗಿದ್ದರು. ಅವರ ಪ್ರಾರಂಭದ ಕೆಲವು ಶೃತಿಗಳು ತುಂಬ ಚೆನ್ನಾಗಿದ್ದವು. ಅವರು ಟ್ರಾಂಬೋನಿನ ಸ್ವರವನ್ನು ವಯಲಿನ್‌ ಸ್ವರದಂತೆ ನುಡಿಸಿದರು. ಆಗ ನಾನು, ‘ಈ ಸಹೋದರನು ಇಲ್ಲಿ ಇರಲೇ ಬೇಕು!’ ಎಂದು ನೆನಸಿ, ಅದನ್ನು ಸಹೋದರ ನಾರ್‌ ಅವರಿಗೆ ಹೇಳಿದಾಗ ಅವರು ಆಕ್ಷೇಪಣೆಯನ್ನು ಸೂಚಿಸಲಿಲ್ಲ.

ಆ ಆರ್ಕಿಸ್ಟ್ರಾದಲ್ಲಿ, ಉತ್ತಮ ಸಂಗೀತಗಾರರ ಒಂದು ಗುಂಪಿತ್ತು. ಅಷ್ಟೇ ಅಲ್ಲ, ಅವರು ಪ್ರೀತಿಯುಳ್ಳ ಸಹೋದರ ಮತ್ತು ಸಹೋದರಿಯರೂ ಆಗಿದ್ದರು. ಅವರಲ್ಲಿ ಯಾರೂ ಸ್ವಪ್ರತಿಷ್ಠಿತರಾಗಿರಲಿಲ್ಲ! ರೆಕಾರ್ಡಿಂಗ್‌ ನಿಜವಾಗಿಯೂ ಶ್ರಮದಾಯಕ ಕೆಲಸವಾಗಿತ್ತು. ಆದರೆ ಯಾರೂ ದೂರು ಹೇಳುತ್ತಿರಲಿಲ್ಲ. ಕೆಲಸವು ಮುಗಿದೊಡನೆ, ಎಲ್ಲರ ಕಣ್ಣುಗಳಲ್ಲೂ ಕಂಬನಿಯು ಸುರಿಯುತ್ತಿತ್ತು; ಅದರಲ್ಲಿ ಭಾಗವಹಿಸಿದ ಎಲ್ಲರ ಮಧ್ಯೆ ಸ್ನೇಹದ ವಾತಾವರಣವು ತುಂಬಿರುತ್ತಿತ್ತು. ಆ ಸುಯೋಗವನ್ನು ನಮ್ಮಲ್ಲಿ ಪ್ರತಿಯೊಬ್ಬರು ಆನಂದಿಸಿದೆವು. ಯೆಹೋವನ ಸಹಾಯದಿಂದ ಕೆಲಸವನ್ನು ಮುಗಿಸಿದೆವು.

ಪ್ರತಿಫಲದಾಯಕವಾದ ಇನ್ನೂ ಹೆಚ್ಚಿನ ಸುಯೋಗಗಳು

ಅನೇಕ ವರ್ಷಗಳ ನಂತರ ನಾನು ಪೂರ್ಣ ಸಮಯದ ಸೇವೆಯಲ್ಲಿ ಇನ್ನೂ ಆನಂದಿಸುತ್ತಿದ್ದೇನೆ. ಸರ್ಕಿಟ್‌ ಮತ್ತು ಡಿಸ್‌ಟ್ರಿಕ್ಟ್‌ ಕೆಲಸದಲ್ಲಿ 28 ವರ್ಷಗಳನ್ನು ಕಳೆದಿದ್ದೇನೆ. ಅವುಗಳಲ್ಲಿ ಪ್ರತಿಯೊಂದು ಆನಂದದಾಯಕವಾಗಿತ್ತು. ಇದಾದ ನಂತರ, ಒಂಟಾರಿಯೋದಲ್ಲಿ ನಾರ್‌ವಲ್‌ ಅಸೆಂಬ್ಲಿ ಹಾಲ್‌ ಅನ್ನು ನೋಡಿಕೊಳ್ಳುವುದರಲ್ಲಿ ಐದು ವರ್ಷಗಳು ಕಳೆದೆವು. ಆ ಸಮಯದಲ್ಲಿ ಪ್ರತಿವಾರಾಂತ್ಯದಲ್ಲಿ ಸರ್ಕಿಟ್‌ ಸಮ್ಮೇಳನ ಹಾಗೂ ವಿದೇಶಿ ಭಾಷೆಗಳ ಜಿಲ್ಲಾ ಸಮ್ಮೇಳನಗಳಿಗಾಗಿ ನಾನು ಮತ್ತು ಐಲಿನ್‌ ಕಾರ್ಯಮಗ್ನರಾಗಿರುತ್ತಿದ್ದೇವು. 1979/80ರಲ್ಲಿ ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರುಗಳು, ಆ ಅಸೆಂಬ್ಲಿ ಹಾಲನ್ನು ಹಾಲ್‌ಟನ್‌ ಹಿಲ್ಸ್‌ನಲ್ಲಿ ಮುಂದೆ ಕಟ್ಟಲಿರುವ ಸಂಸ್ಥೆಯ ಬ್ರಾಂಚ್‌ ಆಫೀಸಿನ ಯೋಜನೆಗಳನ್ನು ಮಾಡುವುದಕ್ಕಾಗಿ ಉಪಯೋಗಿಸಿಕೊಂಡರು. ಅಸೆಂಬ್ಲಿ ಹಾಲಿನ ಕೆಲಸವು ಮುಗಿದ ನಂತರ, 1982ರಿಂದ 1984ರ ವರೆಗೆ ಬ್ರೂಕ್ಲಿನ್‌ನಲ್ಲಿ ಸಂಗೀತದ ಮಾಧ್ಯಮದಲ್ಲಿ ಹೆಚ್ಚು ಭಾಗವಹಿಸುವ ಇನ್ನೊಂದು ನೇಮಕದಲ್ಲಿ ಕಳೆದೆ.

ನನ್ನ ಪ್ರಿಯ ಪತ್ನಿಯು 1994ರ ಜೂನ್‌ 17ರಂದು ತೀರಿಕೊಂಡಳು. ಆಗ, ನಮ್ಮ 59ನೇ ವಿವಾಹ ವಾರ್ಷಿಕೋತ್ಸವ ಕಳೆದು ಏಳು ದಿನಗಳಾಗಿದ್ದವು. ನಾವಿಬ್ಬರು 51 ವರ್ಷಗಳ ವರೆಗೆ ಪಯನೀಯರ್‌ ಸೇವೆಯನ್ನು ಒಟ್ಟಿಗೆ ಕಳೆದಿದ್ದೇವೆ.

ಜೀವನದಲ್ಲಿ ನನಗಾದ ಅನೇಕ ಅನುಭವಗಳ ಕುರಿತು ನಾನು ಯೋಚಿಸುವಾಗ, ಬೈಬಲ್‌ ಹೇಗೆ ನನ್ನ ಜೀವನದಲ್ಲಿ ಅಮೂಲ್ಯವಾದ ಮಾರ್ಗದರ್ಶಿಯಾಗಿದೆ ಎಂಬುದನ್ನು ನೆನಪಿಸಿಕೊಳ್ಳುತ್ತೇನೆ. ಕೆಲವೊಮ್ಮೆ, ಐಲಿನಳ ಹೃದಯವನ್ನು ಯಾವುದು ಸ್ಪರ್ಶಿಸಿದವು ಎಂಬುದನ್ನು ಅವಳ ಸ್ವಂತ ಬೈಬಲಿನಲ್ಲಿ ಓದುವ ಮೂಲಕ ಆನಂದವನ್ನು ಕಾಣುತ್ತೇನೆ. ಅದರಲ್ಲಿ ಅವಳು ಗುರುತುಮಾಡಿಟ್ಟಿರುವ ವಚನಗಳು, ವಾಕ್ಯಗಳು, ಮತ್ತು ಪದಗಳು ಸೇರಿವೆ. ಐಲಿನಳಿಗಿದ್ದಂತೆ ನನಗೂ ಕೂಡ ಹೆಚ್ಚು ವಿಶೇಷಾರ್ಥವನ್ನು ಕೊಡುವ ವಚನಗಳು ಇವೆ. ಅಂಥವುಗಳಲ್ಲಿ ಒಂದು, ಕೀರ್ತನೆ 137ರಲ್ಲಿರುವ ವಚನವಾಗಿದೆ. ಅದು ಯೆಹೋವನಿಗಾಗಿ ಸುಂದರವಾದ ಪ್ರಾರ್ಥನೆಯನ್ನು ವ್ಯಕ್ತಪಡಿಸುತ್ತದೆ: “ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಡುವುದಾದರೆ, ಎಂದಿಗೂ ನಾನು ಕಿನ್ನರಿಯನ್ನು ನುಡಿಸದಂತಾಗಲಿ. ಯೆರೂಸಲೇಮೇ, ನೀನು ನನ್ನ ಅತ್ಯಂತ ಹೆಚ್ಚಿನ ಆನಂದಕ್ಕೆ ಕಾರಣವಾಗಿದ್ದಿಯೆಂಬುದನ್ನು ನಾನು ನೆನಸದಿರುವುದಾದರೆ, ನಾನು ಮತ್ತೆ ಎಂದೂ ಹಾಡದಂತಾಗಲಿ.” (ಕೀರ್ತನೆ 137:​5, 6, ಟುಡೇಸ್‌ ಇಂಗ್ಲಿಷ್‌ ವರ್ಷನ್‌) ನಾನು ಸಂಗೀತವನ್ನು ಪ್ರೀತಿಸುವುದಾದರೂ, ನನ್ನ ನಿಜವಾದ ಸಂತೋಷವು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವ ಮೂಲಕವೇ ಸಿಗುತ್ತದೆ. ಆತನು ನನಗೆ ಸಂತೃಪ್ತಿಕರವಾದ ಹಾಗೂ ಪ್ರತಿಫಲದಾಯಕವಾದ ಜೀವನವನ್ನು ಆಶೀರ್ವದಿಸಿದ್ದಾನೆ.

[ಪಾದಟಿಪ್ಪಣಿ]

^ ಪ್ಯಾರ. 5 1973, ಜೂನ್‌ 1ರ ದ ವಾಚ್‌ಟವರ್‌ ಪತ್ರಿಕೆಯು, ಆ ಸಮಯದಿಂದ ಯಾವುದೇ ವ್ಯಕ್ತಿಯು ಯೆಹೋವನ ಸಾಕ್ಷಿಯಾಗಬೇಕಾದರೆ, ದೀಕ್ಷಾಸ್ನಾನವಾಗುವುದಕ್ಕೆ ಮುಂಚೆ ಧೂಮಪಾನ ಮಾಡುವುದನ್ನು ಯಾಕೆ ಬಿಟ್ಟುಬಿಡಬೇಕು ಎಂಬುದನ್ನು ವಿವರಿಸಿತು.

[ಪುಟ 28ರಲ್ಲಿರುವ ಚಿತ್ರ]

ಐಲಿನಳೊಂದಿಗೆ 1947ರಲ್ಲಿ

[ಪುಟ 30ರಲ್ಲಿರುವ ಚಿತ್ರ]

ಆರಂಭದ ರೆಕಾರ್ಡಿಂಗ್‌ ಸಮಯದಲ್ಲಿ