ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಆತನ ಕಾಲ ಇನ್ನೂ ಬಂದಿರಲಿಲ್ಲ’

‘ಆತನ ಕಾಲ ಇನ್ನೂ ಬಂದಿರಲಿಲ್ಲ’

‘ಆತನ ಕಾಲ ಇನ್ನೂ ಬಂದಿರಲಿಲ್ಲ’

“ಆತನ ಕಾಲ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನ ಮೇಲೆ ಕೈಹಾಕಲಿಲ್ಲ.”​—⁠ಯೋಹಾನ 7:⁠30.

1. ಯೇಸುವಿನ ಚಟುವಟಿಕೆಗಳು ಯಾವ ಎರಡು ಅಂಶಗಳಿಂದ ನಿಯಂತ್ರಿಸಲ್ಪಟ್ಟಿದ್ದವು?

“ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವದಕ್ಕೂ ಬಂದನು” ಎಂದು ಯೇಸು ಕ್ರಿಸ್ತನು ತನ್ನ ಅಪೊಸ್ತಲರಿಗೆ ಹೇಳಿದನು. (ಮತ್ತಾಯ 20:28) ರೋಮನ್‌ ದೇಶಾಧಿಪತಿಯಾಗಿದ್ದ ಪೊಂತ್ಯ ಪಿಲಾತನಿಗೆ ಯೇಸು ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37) ತಾನು ಏಕೆ ಸಾಯಲಿದ್ದೇನೆ ಮತ್ತು ತನ್ನ ಮರಣಕ್ಕೆ ಮುಂಚೆ ಯಾವ ಕೆಲಸವನ್ನು ಮಾಡಿಮುಗಿಸಬೇಕು ಎಂಬುದು ಯೇಸುವಿಗೆ ನಿಖರವಾಗಿ ತಿಳಿದಿತ್ತು. ಎಷ್ಟು ಕಾಲಾವಧಿಯ ತನಕ ತನ್ನ ಶುಶ್ರೂಷೆಯನ್ನು ಪೂರೈಸಬೇಕು ಎಂಬುದು ಸಹ ಅವನಿಗೆ ಗೊತ್ತಿತ್ತು. ಮೆಸ್ಸೀಯನೋಪಾದಿ ಅವನು ಭೂಮಿಯಲ್ಲಿ ಮಾಡುವ ಶುಶ್ರೂಷಾ ಕಾರ್ಯವು, ಕೇವಲ ಮೂರೂವರೆ ವರ್ಷಗಳಿಗೆ ಮಾತ್ರ ಸೀಮಿತವಾಗಿತ್ತು. ಮುಂತಿಳಿಸಲ್ಪಟ್ಟ 70ನೆಯ ಸಾಂಕೇತಿಕ ವಾರದ ಆರಂಭದಲ್ಲಿ (ಸಾ.ಶ. 29ರಲ್ಲಿ) ಯೊರ್ದನ್‌ ಹೊಳೆಯಲ್ಲಿ ಯೇಸು ನೀರಿನ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಮೂಲಕ ಈ ಕಾರ್ಯವು ಪ್ರಾರಂಭವಾಯಿತು. ಮತ್ತು ಆ 70ನೆಯ ವಾರದ ಮಧ್ಯದಲ್ಲಿ (ಸಾ.ಶ. 33ರಲ್ಲಿ) ಅವನು ಯಾತನಾ ಕಂಭದ ಮೇಲೆ ಮರಣಪಟ್ಟಾಗ ಆ ಕಾರ್ಯವು ಕೊನೆಗೊಂಡಿತು. (ದಾನಿಯೇಲ 9:​24-27; ಮತ್ತಾಯ 3:​16, 17; 20:​17-19) ಆದುದರಿಂದ, ಭೂಮಿಯಲ್ಲಿದ್ದಾಗ ಯೇಸುವಿನ ಎಲ್ಲಾ ಚಟುವಟಿಕೆಗಳು ಈ ಎರಡು ಅಂಶಗಳಿಂದ ನಿಯಂತ್ರಿಸಲ್ಪಟ್ಟಿದ್ದವು: ಮೊದಲನೆಯದಾಗಿ ಅವನು ಭೂಮಿಗೆ ಬಂದ ಉದ್ದೇಶ ಮತ್ತು ಎರಡನೆಯದಾಗಿ, ಅದನ್ನು ಮಾಡಿಮುಗಿಸುವ ಕಾಲಾವಧಿ.

2. ಸುವಾರ್ತಾ ವೃತ್ತಾಂತಗಳು ಯೇಸುವನ್ನು ಹೇಗೆ ಚಿತ್ರಿಸುತ್ತವೆ, ಮತ್ತು ಅವನು ತನ್ನ ಶುಶ್ರೂಷೆಯ ಅರಿವುಳ್ಳವನಾಗಿದ್ದನು ಎಂಬುದನ್ನು ಹೇಗೆ ತೋರ್ಪಡಿಸಿದನು?

2 ಸುವಾರ್ತಾ ವೃತ್ತಾಂತಗಳು ಯೇಸು ಕ್ರಿಸ್ತನನ್ನು ಕಾರ್ಯನಿಷ್ಠ ವ್ಯಕ್ತಿಯಾಗಿ ಚಿತ್ರಿಸುತ್ತವೆ. ಏಕೆಂದರೆ ಯೇಸು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಅನೇಕ ಅದ್ಭುತಕಾರ್ಯಗಳನ್ನು ನಡೆಸುತ್ತಾ, ಪ್ಯಾಲಿಸ್ಟೈನಿನ ಪ್ರತಿಯೊಂದು ಭಾಗದಲ್ಲೂ ಸಂಚರಿಸಿದನು. ಯೇಸುವಿನ ಕ್ರಿಯಾಶೀಲ ಶುಶ್ರೂಷೆಯ ಆರಂಭದಲ್ಲಿ, ‘ಆತನ ಕಾಲ ಇನ್ನೂ ಬಂದಿಲ್ಲ’ ಎಂದು ಅವನ ಕುರಿತು ಹೇಳಲಾಗಿತ್ತು. ಈ ವಿಷಯದಲ್ಲಿ ಸ್ವತಃ ಯೇಸುವೇ ಹೇಳಿದ್ದು: ‘ನನ್ನ ಸಮಯವು ಇನ್ನೂ ಬಂದಿಲ್ಲ.’ ಆದರೆ, ತನ್ನ ಶುಶ್ರೂಷೆಯು ಇನ್ನೇನು ಕೊನೆಗೊಳ್ಳಲಿದ್ದಾಗ, ‘ಆ ಸಮಯ ಬಂದಿದೆ’ ಎಂಬ ವಾಕ್ಸರಣಿಯನ್ನು ಅವನು ಉಪಯೋಗಿಸಿದನು. (ಯೋಹಾನ 7:​8, 30; 12:23) ತನ್ನ ನೇಮಿತ ಕೆಲಸ ಹಾಗೂ ತನ್ನ ಯಜ್ಞಾರ್ಪಿತ ಮರಣದ ಗಳಿಗೆ ಅಥವಾ ಸಮಯದ ಕುರಿತು ಯೇಸು ಅರಿವುಳ್ಳವನಾಗಿದ್ದರಿಂದ, ಅವನು ಏನು ಹೇಳಿದನೋ ಹಾಗೂ ಏನು ಮಾಡಿದನೋ ಅದರ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರಿದ್ದಿರಬೇಕು. ಇದನ್ನು ಅರ್ಥಮಾಡಿಕೊಳ್ಳುವ ಮೂಲಕ, ನಾವು ಅವನ ವ್ಯಕ್ತಿತ್ವ ಹಾಗೂ ಅವನ ಆಲೋಚನಾ ರೀತಿಯ ಒಳನೋಟವನ್ನು ಪಡೆದುಕೊಳ್ಳಸಾಧ್ಯವಿದೆ. ಅಷ್ಟುಮಾತ್ರವಲ್ಲ, ನಾವು ಇನ್ನೂ ನಿಕಟವಾಗಿ ಅವನ ‘ಹೆಜ್ಜೆಯ ಜಾಡಿನಲ್ಲಿ ನಡೆಯುವಂತೆ’ ಇದು ನಮಗೆ ಸಹಾಯಮಾಡುವುದು.​—⁠1 ಪೇತ್ರ 2:⁠21.

ದೇವರ ಚಿತ್ತವನ್ನು ಮಾಡುವ ದೃಢನಿಶ್ಚಯ

3, 4. (ಎ) ಕಾನಾ ಊರಿನ ಮದುವೆಯ ಸಮಾರಂಭದಲ್ಲಿ ಏನು ಸಂಭವಿಸುತ್ತದೆ? (ಬಿ) ದ್ರಾಕ್ಷಾರಸವು ಮುಗಿದುಹೋದಾಗ ಮರಿಯಳು ಕೊಟ್ಟ ಸಲಹೆಗೆ ದೇವಕುಮಾರನು ಏಕೆ ಅಸಮ್ಮತಿ ಸೂಚಿಸುತ್ತಾನೆ, ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

3 ಇದು ಸಾ.ಶ. 29ನೆಯ ವರ್ಷವಾಗಿದೆ. ಯೇಸು ತನ್ನ ಪ್ರಥಮ ಶಿಷ್ಯರನ್ನು ಆಯ್ಕೆಮಾಡಿ ಕೆಲವೇ ದಿನಗಳು ಕಳೆದಿವೆ. ಒಂದು ಮದುವೆಯ ಸಮಾರಂಭಕ್ಕಾಗಿ ಈಗ ಅವರೆಲ್ಲರೂ ಗಲಿಲಾಯದ ಕಾನಾ ಎಂಬ ಊರಿಗೆ ಬಂದಿದ್ದಾರೆ. ಯೇಸುವಿನ ತಾಯಿಯಾದ ಮರಿಯಳು ಸಹ ಅಲ್ಲಿದ್ದಾಳೆ. ಮದುವೆಯು ನಡೆಯುತ್ತಿರುವಾಗ, ದ್ರಾಕ್ಷಾರಸವು ಮುಗಿದುಹೋಗುತ್ತದೆ. ಇದನ್ನು ಗಮನಿಸಿದ ಮರಿಯಳು, ತನ್ನ ಮಗನು ಏನಾದರೂ ಸಹಾಯವನ್ನು ಮಾಡಬೇಕೆಂದು ಬಯಸುತ್ತಾಳೆ. ಆದುದರಿಂದ, ಮರಿಯಳು ತನ್ನ ಮಗನಿಗೆ, “ಅವರಲ್ಲಿ ದ್ರಾಕ್ಷಾರಸವಿಲ್ಲ” ಎಂದು ಹೇಳುತ್ತಾಳೆ. ಆದರೆ ಯೇಸು ಅವಳಿಗೆ ಉತ್ತರಿಸಿದ್ದು: “ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯವು ಇನ್ನೂ ಬಂದಿಲ್ಲ.”​—⁠ಯೋಹಾನ 1:​35-51; 2:​1-4.

4 “ಅಮ್ಮಾ, ನನ್ನ ಗೊಡವೆ ನಿನಗೇಕೆ?” ಎಂಬ ಯೇಸುವಿನ ಉತ್ತರವು, ಪುರಾತನ ಸಮಯದಲ್ಲಿ ಉಪಯೋಗಿಸಲ್ಪಡುತ್ತಿದ್ದ ಒಂದು ರೀತಿಯ ಪ್ರಶ್ನೆಯಾಗಿದೆ; ಇದು ಸೂಚಿಸಲ್ಪಟ್ಟ ಅಥವಾ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಅಸಮ್ಮತಿಯನ್ನು ಸೂಚಿಸುತ್ತದೆ. ಮರಿಯಳ ಮಾತುಗಳಿಗೆ ಯೇಸು ಅಸಮ್ಮತಿಯನ್ನು ಏಕೆ ವ್ಯಕ್ತಪಡಿಸಿದನು? ಏಕೆಂದರೆ, ಯೇಸು ಈಗ 30 ವರ್ಷ ಪ್ರಾಯದವನಾಗಿದ್ದಾನೆ. ಕೆಲವೇ ವಾರಗಳ ಮುಂಚೆ ಅವನು ದೀಕ್ಷಾಸ್ನಾನ ಪಡೆದುಕೊಂಡಿದ್ದು, ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದನು. ಅಷ್ಟುಮಾತ್ರವಲ್ಲ, “ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು” ಎಂದು ಸ್ನಾನಿಕನಾದ ಯೋಹಾನನಿಂದ ಜನರಿಗೆ ಪರಿಚಯಿಸಲ್ಪಟ್ಟಿದ್ದನು. (ಯೋಹಾನ 1:​29-34; ಲೂಕ 3:​21-23) ಆದುದರಿಂದ, ಯಾರು ಅವನನ್ನು ಕಳುಹಿಸಿದನೋ ಆ ಪರಮಾಧಿಕಾರಿಯೇ ಅವನನ್ನು ಈಗ ಮಾರ್ಗದರ್ಶಿಸಬೇಕು. (1 ಕೊರಿಂಥ 11:⁠3) ಯಾರೊಬ್ಬರೂ, ಅಂದರೆ ಸ್ವಂತ ಕುಟುಂಬದ ಸದಸ್ಯರು ಸಹ, ಯೇಸು ಭೂಮಿಗೆ ಯಾವ ಕೆಲಸವನ್ನು ಮಾಡಲಿಕ್ಕಾಗಿ ಬಂದನೋ ಆ ಕೆಲಸದಲ್ಲಿ ಅಡ್ಡಬರುವಂತೆ ಅನುಮತಿಸಸಾಧ್ಯವಿರಲಿಲ್ಲ. ಮರಿಯಳಿಗೆ ಯೇಸು ಕೊಟ್ಟ ಉತ್ತರದಲ್ಲಿ, ತನ್ನ ತಂದೆಯ ಚಿತ್ತವನ್ನು ಮಾಡಲು ಅವನು ಎಷ್ಟು ದೃಢನಿಶ್ಚಿತನಾಗಿದ್ದನು ಎಂಬುದು ವ್ಯಕ್ತಪಡಿಸಲ್ಪಟ್ಟಿದೆ! ಯೇಸುವಿನಂತೆಯೇ ನಾವು ಸಹ ದೇವರು ಕೊಟ್ಟಿರುವ “ಕರ್ತವ್ಯ”ವನ್ನು ಪೂರೈಸಲು ದೃಢನಿಶ್ಚಿತರಾಗಿರೋಣ.​—⁠ಪ್ರಸಂಗಿ 12:⁠13.

5. ಕಾನಾ ಊರಿನಲ್ಲಿ ಯೇಸು ಕ್ರಿಸ್ತನು ಯಾವ ಅದ್ಭುತಕಾರ್ಯವನ್ನು ಮಾಡುತ್ತಾನೆ, ಮತ್ತು ಈ ಘಟನೆಯು ಇತರರ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?

5 ತನ್ನ ಮಗನ ಮಾತುಗಳ ಅರ್ಥವನ್ನು ಗ್ರಹಿಸಿದ ಮರಿಯಳು, ತತ್‌ಕ್ಷಣವೇ ಕೆಲಸದವರ ಬಳಿಗೆ ಹೋಗಿ, “ಆತನು ನಿಮಗೆ ಏನು ಹೇಳುವನೋ ಅದನ್ನು ಮಾಡಿರಿ” ಎಂದು ಅವರಿಗೆ ಹೇಳುತ್ತಾಳೆ. ಆಗ ಯೇಸು ದ್ರಾಕ್ಷಾರಸದ ಸಮಸ್ಯೆಯನ್ನು ಬಗೆಹರಿಸಲು ಕಾರ್ಯನಡಿಸುತ್ತಾನೆ. ಅವನು ಕೆಲಸದವರಿಗೆ ಕಲ್ಲಿನ ಬಾನೆಗಳಲ್ಲಿ ನೀರನ್ನು ತುಂಬಿಸುವಂತೆ ಹೇಳುತ್ತಾನೆ ಮತ್ತು ಆ ನೀರನ್ನು ಅತ್ಯುತ್ತಮ ದ್ರಾಕ್ಷಾರಸವಾಗಿ ಮಾರ್ಪಡಿಸುತ್ತಾನೆ. ಈ ಘಟನೆಯು, ಯೇಸುವಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯಿದೆ ಎಂಬುದಕ್ಕೆ ಪೀಠಿಕೆಯಾಗಿ ಕಾರ್ಯನಡಿಸುತ್ತದೆ. ಮತ್ತು ದೇವರಾತ್ಮವು ಅವನ ಮೇಲಿದೆ ಎಂಬ ಸೂಚನೆಯನ್ನು ನೀಡುತ್ತದೆ. ಅವನ ಹೊಸ ಶಿಷ್ಯರು ಈ ಅದ್ಭುತಕಾರ್ಯವನ್ನು ನೋಡಿದಾಗ, ಅವರ ನಂಬಿಕೆಯು ಇನ್ನೂ ಬಲಗೊಳ್ಳುತ್ತದೆ.​—⁠ಯೋಹಾನ 2:​5-11.

ಯೆಹೋವನ ಆಲಯಕ್ಕಾಗಿ ಅಭಿಮಾನ

6. ಯೆರೂಸಲೇಮಿನ ದೇವಾಲಯದಲ್ಲಿ ಯೇಸು ನೋಡಿದಂತಹ ಸಂಗತಿಯಿಂದ ಏಕೆ ಕೋಪಗೊಂಡನು, ಮತ್ತು ಆ ಕೂಡಲೆ ಅವನು ಏನು ಮಾಡುತ್ತಾನೆ?

6 ಇದು ಸಾ.ಶ. 30ರ ವಸಂತಕಾಲವಾಗಿದೆ. ಯೇಸು ಮತ್ತು ಅವನ ಸಂಗಡಿಗರು ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ ಯೆರೂಸಲೇಮಿಗೆ ಹೋಗುತ್ತಿದ್ದಾರೆ. ಯೆರೂಸಲೇಮಿನ ದೇವಾಲಯದೊಳಗೆ ಹೋದಾಗ, ತಮ್ಮ ಗುರು ಭಿನ್ನವಾದ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಶಿಷ್ಯರು ನೋಡುತ್ತಾರೆ. ಅಂದರೆ, ಈ ಮುಂಚೆ ಅವನು ಈ ರೀತಿ ವರ್ತಿಸಿದ್ದನ್ನು ಅವರೆಂದೂ ನೋಡಿರಲಿಲ್ಲ. ಅವನು ಹೀಗೆ ವರ್ತಿಸಲು ಕಾರಣವೇನೆಂದರೆ, ಲೋಭಿಗಳಾಗಿದ್ದ ಯೆಹೂದಿ ವ್ಯಾಪಾರಿಗಳು ಯಜ್ಞಕ್ಕೆ ಬೇಕಾಗಿದ್ದ ಪ್ರಾಣಿಪಕ್ಷಿಗಳನ್ನು ದೇವಾಲಯದೊಳಗೇ ಮಾರುತ್ತಿದ್ದರು. ಅಷ್ಟುಮಾತ್ರವಲ್ಲ, ನಂಬಿಗಸ್ತ ಯೆಹೂದಿ ಆರಾಧಕರು ಅವುಗಳನ್ನು ಕೊಂಡುಕೊಳ್ಳಲು ಬಂದಾಗ, ಆ ವ್ಯಾಪಾರಿಗಳು ವಿಪರೀತ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದನ್ನೆಲ್ಲ ನೋಡಿ ಕೋಪಗೊಂಡ ಯೇಸು, ಅವರನ್ನು ಅಲ್ಲಿಂದ ಹೊರಡಿಸಲು ಕಾರ್ಯನಡಿಸುತ್ತಾನೆ. ಅವನು ಹಗ್ಗಗಳಿಂದ ಕೊರಡೆಯನ್ನು ಮಾಡಿ, ಆ ವ್ಯಾಪಾರಿಗಳನ್ನು ಹೊರಗೆ ಅಟ್ಟುತ್ತಾನೆ. ಚಿನಿವಾರರ ನಾಣ್ಯಗಳನ್ನು ಚೆಲ್ಲಿ, ಅವರ ಮೇಜುಗಳನ್ನು ಕೆಡವುತ್ತಾನೆ. ಪಾರಿವಾಳಗಳನ್ನು ಮಾರುವವರಿಗೆ, “ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ” ಎಂದು ಆಜ್ಞೆ ನೀಡುತ್ತಾನೆ. ಇಷ್ಟೊಂದು ಆಲಯಾಭಿಮಾನದಿಂದ ಯೇಸು ವರ್ತಿಸುವುದನ್ನು ನೋಡಿದ ಅವನ ಶಿಷ್ಯರು, ದೇವಕುಮಾರನ ಕುರಿತಾದ ಒಂದು ಪ್ರವಾದನೆಯನ್ನು ಜ್ಞಾಪಿಸಿಕೊಳ್ಳುತ್ತಾರೆ: “ನಿನ್ನ ಆಲಯಾಭಿಮಾನವು ಬೆಂಕಿಯಂತೆ ನನ್ನನ್ನು ದಹಿಸುತ್ತದೆ” ಎಂಬುದೇ ಆ ಪ್ರವಾದನೆ. (ಯೋಹಾನ 2:​13-17; ಕೀರ್ತನೆ 69:⁠9) ತದ್ರೀತಿಯಲ್ಲಿ, ಲೌಕಿಕ ಪ್ರವೃತ್ತಿಗಳು ನಮ್ಮ ಆರಾಧನೆಯನ್ನು ಕಲುಷಿತಗೊಳಿಸದಿರುವಂತೆ ನಾವು ಸಹ ಯಾವಾಗಲೂ ಜಾಗರೂಕರಾಗಿರಬೇಕು.

7. (ಎ) ಮೆಸ್ಸೀಯನನ್ನು ಭೇಟಿಯಾಗುವಂತೆ ಯಾವುದು ನಿಕೊದೇಮನನ್ನು ಪ್ರಭಾವಿಸುತ್ತದೆ? (ಬಿ) ಸಮಾರ್ಯದ ಒಬ್ಬ ಹೆಂಗಸಿಗೆ ಯೇಸು ಸಾಕ್ಷಿನೀಡಿದಂತಹ ವಿಷಯವು ನಮಗೆ ಯಾವ ಪಾಠವನ್ನು ಕಲಿಸುತ್ತದೆ?

7 ಯೆರೂಸಲೇಮಿನಲ್ಲಿದ್ದಾಗ ಯೇಸು ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಾನೆ ಮತ್ತು ಇವುಗಳನ್ನು ನೋಡಿ ಅನೇಕರು ಅವನಲ್ಲಿ ನಂಬಿಕೆಯಿಡುತ್ತಾರೆ. ಸನ್ಹೆದ್ರಿನ್‌ ಅಥವಾ ಯೆಹೂದಿ ಹಿರೀಸಭೆಯ ಒಬ್ಬ ಸದಸ್ಯನಾಗಿದ್ದ ನಿಕೊದೇಮನು ಸಹ ಯೇಸುವಿನ ಕಾರ್ಯಗಳಿಂದ ಪ್ರಭಾವಿತನಾಗುತ್ತಾನೆ ಮತ್ತು ಅವನಿಂದ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲಿಕ್ಕಾಗಿ ರಾತ್ರಿಯಲ್ಲಿ ಯೇಸುವಿನ ಬಳಿಗೆ ಬರುತ್ತಾನೆ. ತದನಂತರ, ಯೇಸು ಮತ್ತು ಅವನ ಶಿಷ್ಯರು ಸುಮಾರು ಎಂಟು ತಿಂಗಳುಗಳ ವರೆಗೆ “ಯೂದಾಯ ದೇಶ”ದಲ್ಲಿ ಉಳಿಯುತ್ತಾರೆ; ಅಲ್ಲಿ ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಮುಂದುವರಿಸುತ್ತಾರೆ. ಆದರೆ, ಸ್ನಾನಿಕನಾದ ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟಾಗ, ಯೇಸು ಮತ್ತು ಅವನ ಶಿಷ್ಯರು ಯೂದಾಯವನ್ನು ಬಿಟ್ಟು ಗಲಿಲಾಯಕ್ಕೆ ಹೊರಡುತ್ತಾರೆ. ಅವರು ಸಮಾರ್ಯಸೀಮೆಯ ಮೂಲಕ ಪ್ರಯಾಣಿಸುತ್ತಿರುವಾಗ, ಸಮಾರ್ಯದ ಒಬ್ಬ ಹೆಂಗಸಿಗೆ ಸಾಕ್ಷಿನೀಡಲು ಸಿಕ್ಕಿದ ಅವಕಾಶವನ್ನು ಯೇಸು ಸದುಪಯೋಗಿಸಿಕೊಳ್ಳುತ್ತಾನೆ. ಇದು, ಸಮಾರ್ಯಸೀಮೆಯಲ್ಲಿರುವ ಅನೇಕರಿಗೆ ಯೇಸುವಿನಲ್ಲಿ ನಂಬಿಕೆಯಿಡುವ ಅವಕಾಶವನ್ನು ನೀಡುತ್ತದೆ. ಯೇಸುವಿನಂತೆ ನಾವು ಸಹ ರಾಜ್ಯದ ಕುರಿತು ಮಾತಾಡಲಿಕ್ಕಾಗಿ ನಮಗೆ ಸಿಗುವ ಎಲ್ಲ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಲು ಸದಾ ಜಾಗರೂಕರಾಗಿರೋಣ.​—⁠ಯೋಹಾನ 2:23; 3:​1-22; 4:​1-42; ಮಾರ್ಕ 1:⁠14.

ಗಲಿಲಾಯದಲ್ಲಿ ವ್ಯಾಪಕವಾಗಿ ಕಲಿಸುವುದು

8. ಗಲಿಲಾಯದಲ್ಲಿ ಯೇಸು ಯಾವ ಕೆಲಸವನ್ನು ಆರಂಭಿಸುತ್ತಾನೆ?

8 ಯೇಸು ತನ್ನ ಮರಣದ ನೇಮಿತ “ಕಾಲ”ವು ಬರುವುದಕ್ಕೆ ಮುಂಚೆ, ತನ್ನ ಸ್ವರ್ಗೀಯ ತಂದೆಯು ನೇಮಿಸಿದ ಕೆಲಸವನ್ನು ಪೂರೈಸಬೇಕಾಗಿದೆ. ಆದುದರಿಂದ, ಯೂದಾಯ ಮತ್ತು ಯೆರೂಸಲೇಮಿಗಿಂತಲೂ ಗಲಿಲಾಯದಲ್ಲಿ ಯೇಸು ವ್ಯಾಪಕವಾದ ಶುಶ್ರೂಷಾ ಕೆಲಸವನ್ನು ಆರಂಭಿಸುತ್ತಾನೆ. ಅವನು “ಗಲಿಲಾಯದಲ್ಲೆಲ್ಲಾ ತಿರುಗಾಡಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿಹೇಳುತ್ತಾ ಜನರ ಎಲ್ಲಾತರದ ರೋಗಗಳನ್ನೂ ಎಲ್ಲಾತರದ ಬೇನೆಗಳನ್ನೂ ವಾಸಿಮಾಡುತ್ತಾ” ಹೋಗುತ್ತಾನೆ. (ಮತ್ತಾಯ 4:23) ಅವನು ಸಾರುವಾಗ, “ಪರಲೋಕರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂಬ ಭಾವಪ್ರಚೋದಕ ಮಾತುಗಳು ಗಲಿಲಾಯದಲ್ಲೆಲ್ಲ ಸ್ಪಷ್ಟವಾಗಿ ಕೇಳಿಬರುತ್ತವೆ. (ಮತ್ತಾಯ 4:17) ಕೆಲವು ತಿಂಗಳುಗಳು ಕಳೆದ ಬಳಿಕ, ಯೇಸುವಿನ ಕುರಿತಾದ ವರದಿಯನ್ನು ಅವನಿಂದಲೇ ಕೇಳಿ ತಿಳಿದುಕೊಳ್ಳಲಿಕ್ಕಾಗಿ ಸ್ನಾನಿಕನಾದ ಯೋಹಾನನ ಇಬ್ಬರು ಶಿಷ್ಯರು ಯೇಸುವಿನ ಬಳಿಗೆ ಬರುತ್ತಾರೆ. ಅವರಿಗೆ ಯೇಸು ಹೇಳುವುದು: “ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರಿಗೆ ಕಣ್ಣುಬರುತ್ತವೆ, ಕುಂಟರಿಗೆ ಕಾಲುಬರುತ್ತವೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರಿಗೆ ಕಿವಿಬರುತ್ತವೆ, ಸತ್ತವರು ಜೀವವನ್ನು ಹೊಂದುತ್ತಾರೆ, ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ. ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು.”​—⁠ಲೂಕ 7:​22, 23.

9. ಜನರು ಏಕೆ ಗುಂಪುಗುಂಪಾಗಿ ಯೇಸು ಕ್ರಿಸ್ತನನ್ನು ಹಿಂಬಾಲಿಸುತ್ತಾರೆ, ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಬಹುದು?

9 ‘ಯೇಸುವಿನ ಸುದ್ದಿಯು ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು. ಎಲ್ಲರೂ ಅವನನ್ನು ಹೊಗಳಿದರು.’ ಅಷ್ಟುಮಾತ್ರವಲ್ಲ, ಗಲಿಲಾಯ, ದೆಕಪೊಲಿ, ಯೆರೂಸಲೇಮ್‌, ಯೂದಾಯ ಎಂಬ ಸ್ಥಳಗಳಿಂದಲೂ, ಯೊರ್ದನ್‌ ಹೊಳೆಯ ಆಚೇ ಕಡೆಯಿಂದಲೂ ಜನರು ಗುಂಪುಗುಂಪಾಗಿ ಅವನನ್ನು ಹಿಂಬಾಲಿಸಿದರು. (ಲೂಕ 4:​14, 15; ಮತ್ತಾಯ 4:​24, 25) ಅವನ ಅದ್ಭುತ ವಾಸಿಮಾಡುವಿಕೆಗಳಿಂದ ಮಾತ್ರವಲ್ಲ, ಅವನ ಅದ್ಭುತ ಬೋಧನಾ ಸಾಮರ್ಥ್ಯದಿಂದಲೂ ಜನರು ಅವನ ಬಳಿಗೆ ಬಂದರು. ಏಕೆಂದರೆ ಅವನ ಸಂದೇಶವು ಆಸಕ್ತಿಕರವಾಗಿತ್ತು ಮತ್ತು ಉತ್ತೇಜನದಾಯಕವಾಗಿತ್ತು. (ಮತ್ತಾಯ 5:​1–7:27) ಯೇಸುವಿನ ಮಾತುಗಳು ಮನಸ್ಸಿಗೆ ಮುದನೀಡುವಂತಿದ್ದವು ಹಾಗೂ ಉಲ್ಲಾಸಕರವಾಗಿದ್ದವು. (ಲೂಕ 4:22) ಜನರ ಗುಂಪುಗಳು “ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು,” ಏಕೆಂದರೆ ಅವನು ಶಾಸ್ತ್ರವಚನಗಳನ್ನು ಆಧಾರವಾಗಿ ಉಪಯೋಗಿಸುತ್ತಾ, ಅಧಿಕಾರವಿದ್ದವನಂತೆ ಉಪದೇಶಿಸುತ್ತಿದ್ದನು. (ಮತ್ತಾಯ 7:​28, 29; ಲೂಕ 4:32) ಇಂತಹ ವ್ಯಕ್ತಿತ್ವವಿರುವ ಮನುಷ್ಯನ ಕಡೆಗೆ ಯಾರು ತಾನೆ ಆಕರ್ಷಿತರಾಗುವುದಿಲ್ಲ? ಪ್ರಾಮಾಣಿಕ ಹೃದಯದ ಜನರು ಸತ್ಯದ ಕಡೆಗೆ ಆಕರ್ಷಿತರಾಗುವಂತೆ ಮಾಡಲಿಕ್ಕಾಗಿ, ನಾವು ಸಹ ಬೋಧಿಸುವ ಕಲೆಯನ್ನು ಬೆಳೆಸಿಕೊಳ್ಳೋಣ.

10. ನಜರೇತಿನ ಜನರು ಏಕೆ ಯೇಸುವನ್ನು ಕೊಲ್ಲಲು ಪ್ರಯತ್ನಿಸುತ್ತಾರೆ, ಆದರೆ ಅವರು ಅವನನ್ನು ಕೊಲ್ಲುವುದರಲ್ಲಿ ಏಕೆ ಸಫಲರಾಗುವುದಿಲ್ಲ?

10 ಆದರೂ, ಯೇಸುವಿಗೆ ಕಿವಿಗೊಟ್ಟವರಲ್ಲಿ ಎಲ್ಲರೂ ಆಸಕ್ತರಾಗಿದ್ದರು ಎಂದು ಹೇಳಸಾಧ್ಯವಿಲ್ಲ. ಏಕೆಂದರೆ, ಅವನ ಶುಶ್ರೂಷೆಯ ಆರಂಭದಲ್ಲಿ, ತಾನು ಬೆಳೆದ ಊರಿನಲ್ಲಿ, ಅಂದರೆ ನಜರೇತಿನಲ್ಲಿರುವ ಸಭಾಮಂದಿರದಲ್ಲಿ ಬೋಧಿಸುತ್ತಿದ್ದಾಗ, ಅವನನ್ನು ಕೊಲ್ಲುವ ಪ್ರಯತ್ನವನ್ನು ಮಾಡಲಾಗುತ್ತದೆ. ಆ ಊರಿನ ಜನರು ಅವನ “ಇಂಪಾದ ಮಾತುಗಳಿಗೆ” ಆಶ್ಚರ್ಯಪಟ್ಟರೂ, ಅವನು ಮಾಡುವಂತಹ ಅದ್ಭುತಕಾರ್ಯಗಳನ್ನು ನೋಡಲು ಬಯಸಿದರು. ಆದರೂ, ಅಲ್ಲಿ ಅನೇಕ ಸೂಚಕಕಾರ್ಯಗಳನ್ನು ನಡಿಸುವುದಕ್ಕೆ ಬದಲಾಗಿ, ಅವರ ಸ್ವಾರ್ಥಭಾವ ಹಾಗೂ ನಂಬಿಕೆಯ ಕೊರತೆಯನ್ನು ಯೇಸು ಬಯಲುಪಡಿಸುತ್ತಾನೆ. ಆಗ, ಸಭಾಮಂದಿರದಲ್ಲಿದ್ದ ಕೆಲವರು ಬಹಳವಾಗಿ ಸಿಟ್ಟುಗೊಳ್ಳುತ್ತಾರೆ ಮತ್ತು ಅವನನ್ನು ಹಿಡಿದು, ಊರಹೊರಕ್ಕೆ ಅಟ್ಟಿ, ಗುಡ್ಡದ ಕಡಿದಾದ ಸ್ಥಳಕ್ಕೆ ನಡಿಸಿಕೊಂಡು ಹೋಗಿ ಅಲ್ಲಿಂದ ಕೆಳಕ್ಕೆ ದೊಬ್ಬಬೇಕೆಂದಿರುತ್ತಾರೆ. ಆದರೆ ಯೇಸು ಅವರ ಹಿಡಿತದಿಂದ ತಪ್ಪಿಸಿಕೊಂಡು, ಸುರಕ್ಷಿತವಾಗಿ ಪಾರಾಗುತ್ತಾನೆ. ಅವನ ಮರಣಪಡುವ “ಕಾಲ”ವು ಇನ್ನೂ ಬಂದಿರುವುದಿಲ್ಲ.​—⁠ಲೂಕ 4:​16-30.

11. (ಎ) ಕೆಲವು ಧಾರ್ಮಿಕ ಮುಖಂಡರು ಯಾವ ಉದ್ದೇಶದಿಂದ ಯೇಸುವಿನ ಮಾತುಗಳನ್ನು ಕೇಳಿಸಿಕೊಳ್ಳಲು ಬರುತ್ತಿದ್ದರು? (ಬಿ) ಯೇಸು ಸಬ್ಬತ್‌ ನಿಯಮವನ್ನು ಉಲ್ಲಂಘಿಸಿದನೆಂದು ಯಾವ ಕಾರಣಕ್ಕಾಗಿ ದೂಷಿಸಲಾಯಿತು?

11 ಯೇಸು ಸಾರುತ್ತಿರುವ ಸ್ಥಳಗಳಲ್ಲಿ, ಧಾರ್ಮಿಕ ಮುಖಂಡರಾದ ಶಾಸ್ತ್ರಿಗಳು, ಫರಿಸಾಯರು, ಸದ್ದುಕಾಯರು ಹಾಗೂ ಇನ್ನಿತರರು ಸಹ ಹಾಜರಿರುತ್ತಿದ್ದರು. ಆದರೆ ಅವರು ಬರುತ್ತಿದ್ದುದು ಯೇಸುವಿನ ಮಾತುಗಳಿಗೆ ಕಿವಿಗೊಡುವುದಕ್ಕಾಗಲಿ ಕಲಿಯಲಿಕ್ಕಾಗಲಿ ಅಲ್ಲ, ಬದಲಾಗಿ ಯೇಸುವಿನಲ್ಲಿ ತಪ್ಪನ್ನು ಕಂಡುಹಿಡಿದು, ಅವನನ್ನು ತೊಂದರೆಗೆ ಸಿಕ್ಕಿಸಲಿಕ್ಕಾಗಿಯೇ. (ಮತ್ತಾಯ 12:38; 16:1; ಲೂಕ 5:17; 6:​1, 2) ಉದಾಹರಣೆಗೆ, ಸಾ.ಶ. 31ರ ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ ಯೇಸು ಯೆರೂಸಲೇಮಿಗೆ ಹೋಗಿದ್ದಾಗ, 38 ವರ್ಷಗಳಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನನ್ನು ಅವನು ವಾಸಿಮಾಡುತ್ತಾನೆ. ಸಬ್ಬತ್‌ ದಿನದಲ್ಲಿ ವಾಸಿಮಾಡಬಾರದೆಂಬ ನಿಯಮವನ್ನು ಯೇಸು ಉಲ್ಲಂಘಿಸಿದ್ದಕ್ಕಾಗಿ ಯೆಹೂದಿ ಧಾರ್ಮಿಕ ಮುಖಂಡರು ಅವನನ್ನು ವಿರೋಧಿಸುತ್ತಾರೆ. ಆಗ ಅವನು ಉತ್ತರಿಸುವುದು: “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾನೆ, ನಾನೂ ಕೆಲಸಮಾಡುತ್ತೇನೆ.” ದೇವರನ್ನು ತಂದೆಯೆಂದು ಕರೆಯುವ ಮೂಲಕ ಯೇಸು ತಾನು ದೇವಕುಮಾರನೆಂದು ಹೇಳಿಕೊಂಡದ್ದರಿಂದ, ಆ ಯೆಹೂದಿ ಧಾರ್ಮಿಕ ಮುಖಂಡರು ಇವನ ಮೇಲೆ ದೇವದೂಷಣೆಯ ಆರೋಪವನ್ನು ಹೊರಿಸುತ್ತಾರೆ. ಅಷ್ಟುಮಾತ್ರವಲ್ಲ, ಅವರು ಯೇಸುವನ್ನು ಕೊಲ್ಲಲು ಸಹ ಪ್ರಯತ್ನಿಸುತ್ತಾರೆ. ಆದರೆ ಅವನು ಮತ್ತು ಅವನ ಶಿಷ್ಯರು ಯೆರೂಸಲೇಮನ್ನು ಬಿಟ್ಟು ಗಲಿಲಾಯಕ್ಕೆ ಹೊರಡುತ್ತಾರೆ. ಹೀಗೆ, ರಾಜ್ಯದ ಕುರಿತಾಗಿ ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ನಮ್ಮ ಶಕ್ತಿ ಹಾಗೂ ಸಾಮರ್ಥ್ಯವನ್ನು ಉಪಯೋಗಿಸುವಾಗ, ವಿವೇಕದಿಂದ ಕಾರ್ಯನಡಿಸಬೇಕು. ಅಂದರೆ, ನಮ್ಮ ವಿರೋಧಿಗಳನ್ನು ಅನಗತ್ಯವಾಗಿ ಎದುರುಹಾಕಿಕೊಳ್ಳುವುದನ್ನು ತಪ್ಪಿಸಲಿಕ್ಕಾಗಿ ನಾವು ಸಹ ಯೇಸುವಿನಂತೆ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು.​—⁠ಯೋಹಾನ 5:​1-18; 6:⁠1.

12. ಗಲಿಲಾಯದಲ್ಲಿ ಯೇಸು ಎಷ್ಟು ವ್ಯಾಪಕವಾಗಿ ಸುವಾರ್ತೆಯನ್ನು ಸಾರಿದನು?

12 ತದನಂತರದ ಒಂದೂವರೆ ವರ್ಷಗಳ ವರೆಗೆ ಯೇಸು ಗಲಿಲಾಯದಲ್ಲಿ ತನ್ನ ಸಾರುವ ಕೆಲಸವನ್ನು ಮುಂದುವರಿಸುತ್ತಾನೆ. ಆದರೆ ಯೆಹೂದ್ಯರ ಮೂರು ವಾರ್ಷಿಕ ಹಬ್ಬಗಳನ್ನು ಆಚರಿಸುವುದಕ್ಕೋಸ್ಕರ ಮಾತ್ರ ಯೆರೂಸಲೇಮಿಗೆ ಹೋಗುತ್ತಾನೆ. ಗಲಿಲಾಯದಲ್ಲಿ ಒಟ್ಟು ಅವನು ಮೂರು ಬಾರಿ ಸಾರುವ ಕೆಲಸವನ್ನು ಕೈಗೊಂಡಿದ್ದಾನೆ: ಮೊದಲನೆಯ ಬಾರಿ ತನ್ನ 4 ಹೊಸ ಶಿಷ್ಯರೊಂದಿಗೆ, ಎರಡನೆಯ ಬಾರಿ 12 ಅಪೊಸ್ತಲರೊಂದಿಗೆ, ಮತ್ತು ಮೂರನೆಯ ಬಾರಿ ತರಬೇತಿ ಪಡೆದಿದ್ದ ಅಪೊಸ್ತಲರೊಂದಿಗೆ ಸೇರಿಕೊಂಡು ವ್ಯಾಪಕವಾಗಿ ನಡೆಸಿದ ಸಾಕ್ಷಿಕಾರ್ಯ. ಸತ್ಯದ ವಿಷಯವಾಗಿ ಗಲಿಲಾಯದಲ್ಲಿ ಎಷ್ಟೊಂದು ವ್ಯಾಪಕವಾದ ಸಾಕ್ಷಿಯು ನೀಡಲ್ಪಟ್ಟಿತು!​—⁠ಮತ್ತಾಯ 4:​18-25; ಲೂಕ 8:​1-3; 9:​1-6.

ಯೂದಾಯ ಹಾಗೂ ಪೆರಿಯದಲ್ಲಿ ಧೈರ್ಯದಿಂದ ಸಾರಿದ್ದು

13, 14. (ಎ) ಯಾವ ಸಂದರ್ಭದಲ್ಲಿ ಯೇಸುವನ್ನು ಹಿಡಿಯಲು ಯೆಹೂದ್ಯರು ಒಳಸಂಚು ನಡೆಸುತ್ತಿದ್ದರು? (ಬಿ) ಓಲೇಕಾರರು ಯೇಸುವನ್ನು ಏಕೆ ಹಿಡಿಯಲಿಲ್ಲ?

13 ಇದು ಸಾ.ಶ. 32ರ ಶರತ್ಕಾಲವಾಗಿದೆ, ಮತ್ತು ಯೇಸುವಿನ “ಕಾಲ”ವು ಭವಿಷ್ಯತ್ತಿನಲ್ಲಿ ಬರಲಿಕ್ಕಿತ್ತು. ಪರ್ಣಶಾಲೆಗಳ ಹಬ್ಬ ಸಮೀಪಿಸಿದೆ. ಈ ಸಮಯದಲ್ಲಿ ಯೇಸುವಿನ ಅಣ್ಣತಮ್ಮಂದಿರು, “ನೀನು . . . ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು” ಎಂದು ಅವನಿಗೆ ಹೇಳುತ್ತಾರೆ. ಏಕೆಂದರೆ, ಯೆರೂಸಲೇಮಿನಲ್ಲಿ ನಡೆಯುವ ಪರ್ಣಶಾಲೆಗಳ ಹಬ್ಬಕ್ಕೆ ಒಟ್ಟುಗೂಡುವವರೆಲ್ಲರಿಗೆ ಯೇಸು ತನ್ನ ಅದ್ಭುತಕಾರ್ಯಗಳನ್ನು ತೋರಿಸಬೇಕೆಂದು ಅವರು ಬಯಸುತ್ತಾರೆ. ಅಲ್ಲಿಯೂ ತನಗೆ ಅಪಾಯವಿದೆ ಎಂಬುದು ಯೇಸುವಿಗೆ ಗೊತ್ತಿದೆ. ಆದುದರಿಂದ ಅವನು ತನ್ನ ಅಣ್ಣತಮ್ಮಂದಿರಿಗೆ ಹೇಳುವುದು: “ನನ್ನ ಸಮಯವು ಇನ್ನೂ ಒದಗದೆ ಇರುವದರಿಂದ ನಾನು ಈ ಜಾತ್ರೆಗೆ ಈಗ ಹೋಗುವದಿಲ್ಲ.”​—⁠ಯೋಹಾನ 7:​1-8.

14 ಸ್ವಲ್ಪ ಕಾಲದ ವರೆಗೆ ಗಲಿಲಾಯದಲ್ಲೇ ಉಳಿದು, ತದನಂತರ ಯೇಸು ಯೆರೂಸಲೇಮಿಗೆ “ಜನರಿಗೆ ಕಾಣುವಂತೆ ಹೋಗದೆ ಮರೆಯಾಗಿ ಹೋದನು.” ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ, “ಆತನು ಎಲ್ಲಿದ್ದಾನೆ” ಎಂದು ಕೇಳುತ್ತಾ ಯೆಹೂದ್ಯರು ಅವನನ್ನು ಹುಡುಕುತ್ತಿದ್ದರು. ಹಬ್ಬವು ಅರ್ಧ ಮುಗಿದಿರುವಾಗ, ಯೇಸು ದೇವಾಲಯದೊಳಗೆ ಹೋಗಿ, ಧೈರ್ಯದಿಂದ ಬೋಧಿಸಲು ಆರಂಭಿಸುತ್ತಾನೆ. ಆಗ, ಅವನನ್ನು ಹಿಡಿದು ಸೆರೆಯಲ್ಲಿ ಹಾಕಲು ಅಥವಾ ಅವನನ್ನು ಕೊಲ್ಲಿಸಲು ಯೆಹೂದ್ಯರು ಒಳಸಂಚು ನಡೆಸುತ್ತಿರುತ್ತಾರೆ. ಆದರೆ ಅವರು ಸಫಲರಾಗುವುದಿಲ್ಲ, ಏಕೆಂದರೆ ‘ಆತನ ಕಾಲ ಇನ್ನೂ ಬಂದಿರುವುದಿಲ್ಲ.’ ಇಷ್ಟರಲ್ಲಾಗಲೇ ಅನೇಕರು ಯೇಸುವಿನಲ್ಲಿ ನಂಬಿಕೆಯಿಡುತ್ತಾರೆ. ಅಷ್ಟೇಕೆ, ಯೇಸುವನ್ನು ಹಿಡಿದು ತರುವಂತೆ ಕಳುಹಿಸಲ್ಪಟ್ಟಿದ್ದ ಓಲೇಕಾರರು ಸಹ ಬರಿಗೈಯಿಂದ ಮಹಾಯಾಜಕರ ಬಳಿಗೆ ಹೋಗಿ ಹೀಗೆ ಹೇಳುತ್ತಾರೆ: “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ.”​—⁠ಯೋಹಾನ 7:​9-14, 30-46.

15. ಯೆಹೂದ್ಯರು ಯೇಸುವನ್ನು ಹೊಡೆಯಲಿಕ್ಕಾಗಿ ಏಕೆ ಕಲ್ಲುಗಳನ್ನು ಆರಿಸಿಕೊಳ್ಳುತ್ತಾರೆ, ಮತ್ತು ಯೆರೂಸಲೇಮಿನ ಹೊರಗೆ ಯೇಸು ಯಾವ ರೀತಿಯ ಸಾರುವ ಕಾರ್ಯಾಚರಣೆಯನ್ನು ಆರಂಭಿಸುತ್ತಾನೆ?

15 ಹಬ್ಬದ ಸಮಯದಲ್ಲಿ ಯೇಸು ತನ್ನ ತಂದೆಯ ಕುರಿತು ದೇವಾಲಯದಲ್ಲಿ ಬೋಧಿಸುವುದನ್ನು ಮುಂದುವರಿಸಿದಾಗ, ಯೇಸು ಮತ್ತು ಅವನ ಯೆಹೂದಿ ವಿರೋಧಿಗಳ ಮಧ್ಯೆ ಇದ್ದ ಭಿನ್ನಾಭಿಪ್ರಾಯವು ಇನ್ನೂ ಅಧಿಕಗೊಳ್ಳುತ್ತದೆ. ಹಬ್ಬದ ಕೊನೆಯ ದಿನ ಯೇಸು ತನ್ನ ಮಾನವಪೂರ್ವ ಅಸ್ತಿತ್ವದ ಕುರಿತು ಜನರಿಗೆ ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಯೆಹೂದ್ಯರು ತುಂಬ ಸಿಟ್ಟುಗೊಂಡು, ಅವನನ್ನು ಕೊಲ್ಲುವದಕ್ಕಾಗಿ ಕಲ್ಲುಗಳನ್ನು ಆರಿಸಿಕೊಳ್ಳುತ್ತಾರೆ. ಆಗ ಯೇಸು ಅಡಗಿಕೊಂಡು ಯಾವುದೇ ತೊಂದರೆಯಿಲ್ಲದೆ ತಪ್ಪಿಸಿಕೊಳ್ಳುತ್ತಾನೆ. (ಯೋಹಾನ 8:​12-59) ಯೆರೂಸಲೇಮಿನ ಹೊರಗೆ ಉಳಿದುಕೊಂಡಿದ್ದ ಯೇಸು, ಯೂದಾಯದಲ್ಲಿ ಮಹತ್ತರವಾದ ಸಾರುವ ಕಾರ್ಯಾಚರಣೆಯನ್ನು ಆರಂಭಿಸುತ್ತಾನೆ. ಅವನು 70 ಮಂದಿ ಶಿಷ್ಯರನ್ನು ಆರಿಸಿಕೊಂಡು, ಅವರಿಗೆ ಉಪದೇಶ ನೀಡಿ, ಸಾರಲಿಕ್ಕಾಗಿ ಅವರನ್ನು ಇಬ್ಬಿಬ್ಬರಾಗಿ ಕಳುಹಿಸುತ್ತಾನೆ. ಯೇಸು ತನ್ನ ಅಪೊಸ್ತಲರ ಜೊತೆಗೂಡಿ ಯಾವ ಸ್ಥಳಗಳಿಗೆ ಹೋಗಬೇಕೆಂದು ಯೋಜಿಸುತ್ತಾನೋ ಆ ಪ್ರತಿಯೊಂದು ಸ್ಥಳಕ್ಕೆ ಹಾಗೂ ಪಟ್ಟಣಕ್ಕೆ ಈ ಶಿಷ್ಯರು ಮುಂದಾಗಿ ಹೋಗುತ್ತಾರೆ.​—⁠ಲೂಕ 10:​1-24.

16. ಪ್ರತಿಷ್ಠೆಯ ಹಬ್ಬದ ಸಮಯದಲ್ಲಿ ಯೇಸು ಯಾವ ಅಪಾಯದಿಂದ ತಪ್ಪಿಸಿಕೊಳ್ಳುತ್ತಾನೆ, ಮತ್ತು ಪುನಃ ಅವನು ಯಾವ ಕೆಲಸದಲ್ಲಿ ಕಾರ್ಯಮಗ್ನನಾಗುತ್ತಾನೆ?

16 ಸಾ.ಶ. 32ರ ಚಳಿಗಾಲದಲ್ಲಿ, ಯೇಸುವಿನ “ಕಾಲ”ವು ಸ್ವಲ್ಪಸ್ವಲ್ಪವಾಗಿ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ, ಪ್ರತಿಷ್ಠೆಯ ಹಬ್ಬಕ್ಕಾಗಿ ಅವನು ಯೆರೂಸಲೇಮಿಗೆ ಬರುತ್ತಾನೆ. ಆಗಲೂ ಯೆಹೂದ್ಯರು ಇವನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ದೇವಾಲಯದ ಮಂಟಪದಲ್ಲಿ ಯೇಸು ತಿರುಗಾಡುತ್ತಾ ಇರುವಾಗ, ಆ ಯೆಹೂದ್ಯರು ಅವನನ್ನು ಸುತ್ತಿಕೊಳ್ಳುತ್ತಾರೆ. ಯೇಸುವನ್ನು ದೇವದೂಷಕನೆಂದು ನಿಂದಿಸುತ್ತಾ, ಅವನನ್ನು ಕೊಲ್ಲಲಿಕ್ಕಾಗಿ ಅವರು ಕಲ್ಲುಗಳನ್ನು ಎತ್ತಿಕೊಳ್ಳುತ್ತಾರೆ. ಆದರೆ ಈ ಮುಂಚಿನ ಸಂದರ್ಭಗಳಲ್ಲಿ ಮಾಡಿದಂತೆಯೇ ಯೇಸು ಈಗಲೂ ತಪ್ಪಿಸಿಕೊಳ್ಳುತ್ತಾನೆ. ಅಲ್ಲಿಂದ ತಪ್ಪಿಸಿಕೊಂಡ ನಂತರ, ಅವನು ದಾರಿಯುದ್ದಕ್ಕೂ ಜನರಿಗೆ ಬೋಧಿಸುತ್ತಾ ಹೋಗುತ್ತಾನೆ. ಈ ಬಾರಿ ಅವನು ಯೊರ್ದನ್‌ ಹೊಳೆಯ ಆಚೆ, ಪೆರಿಯ ಸೀಮೆಯಲ್ಲಿ ಪಟ್ಟಣದಿಂದ ಪಟ್ಟಣಕ್ಕೂ ಹಳ್ಳಿಯಿಂದ ಹಳ್ಳಿಗೂ ಸಾರುತ್ತಾ ಹೋಗುತ್ತಾನೆ. ಅಲ್ಲಿ ಅನೇಕರು ಅವನಲ್ಲಿ ನಂಬಿಕೆಯಿಡುತ್ತಾರೆ. ಆದರೆ ತನ್ನ ಪ್ರಿಯ ಮಿತ್ರನಾದ ಲಾಜರನ ಕುರಿತಾದ ಒಂದು ಸುದ್ದಿಯು ಯೇಸುವಿಗೆ ತಲಪುತ್ತದೆ, ಆದುದರಿಂದ ಅವನು ಪುನಃ ಯೂದಾಯಕ್ಕೆ ಹೋಗಬೇಕಾಗುತ್ತದೆ.​—⁠ಲೂಕ 13:33; ಯೋಹಾನ 10:​20-42.

17. (ಎ) ಪೆರಿಯದಲ್ಲಿ ಸಾರುತ್ತಿದ್ದಾಗ ಯೇಸು ಯಾವ ತುರ್ತಿನ ಸಂದೇಶವನ್ನು ಪಡೆದುಕೊಳ್ಳುತ್ತಾನೆ? (ಬಿ) ತಾನು ಯಾವ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆಯೋ ಅದರ ಉದ್ದೇಶದ ಬಗ್ಗೆ ಹಾಗೂ ಘಟನೆಗಳ ಸಮಯಾವಧಿಯ ಬಗ್ಗೆ ಯೇಸುವಿಗೆ ಚೆನ್ನಾಗಿ ಗೊತ್ತಿದೆ ಎಂಬುದನ್ನು ಯಾವುದು ತೋರಿಸುತ್ತದೆ?

17 ಆ ತುರ್ತಿನ ಸಂದೇಶವನ್ನು, ಲಾಜರನ ಸಹೋದರಿಯರಾಗಿದ್ದ ಮಾರ್ಥ ಹಾಗೂ ಮರಿಯರು ಯೇಸುವಿಗೆ ಕಳುಹಿಸಿರುತ್ತಾರೆ; ಇವರು ಯೂದಾಯದ ಬೇಥಾನ್ಯದಲ್ಲಿ ವಾಸಿಸುತ್ತಿರುತ್ತಾರೆ. “ಸ್ವಾಮೀ, ನಿನ್ನ ಪ್ರಿಯಮಿತ್ರನು ಅಸ್ವಸ್ಥನಾಗಿದ್ದಾನೆ” ಎಂದು ಸಂದೇಶವಾಹಕನು ಹೇಳುತ್ತಾನೆ. ಅದಕ್ಕೆ ಯೇಸು ಉತ್ತರಿಸುವುದು: “ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು.” ಈ ಉದ್ದೇಶವನ್ನು ಪೂರೈಸಲಿಕ್ಕಾಗಿಯೇ ಯೇಸು ತಾನಿದ್ದ ಸ್ಥಳದಲ್ಲೇ ಇನ್ನೂ ಎರಡು ದಿನಗಳ ತನಕ ಉಳಿಯುತ್ತಾನೆ. ತದನಂತರ ಅವನು ತನ್ನ ಶಿಷ್ಯರಿಗೆ ಹೇಳುವುದು: “ತಿರಿಗಿ ಯೂದಾಯಕ್ಕೆ ಹೋಗೋಣ.” ಅವನ ಮಾತನ್ನು ನಂಬಲಾರದೆ ಶಿಷ್ಯರು “ಗುರುವೇ, ಯೆಹೂದ್ಯರು ಆಗಲೇ ನಿನ್ನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು; ತಿರಿಗಿ ಅಲ್ಲಿಗೇ ಹೋಗುತ್ತೀಯಾ?” ಎಂದು ಕೇಳುತ್ತಾರೆ. ಆದರೆ, ‘ಹಗಲಿನ ತಾಸುಗಳಲ್ಲಿ’ ಉಳಿದಿರುವ ಸಮಯವು ಅಥವಾ ತನ್ನ ಭೂಶುಶ್ರೂಷೆಗಾಗಿ ದೇವರು ನೇಮಿಸಿರುವ ಕಾಲವು ಕೊನೆಗೊಳ್ಳುತ್ತಿದೆ ಎಂಬುದನ್ನು ಯೇಸು ಅರಿತುಕೊಳ್ಳುತ್ತಾನೆ. ಆದುದರಿಂದ, ತಾನು ಏನು ಮಾಡಬೇಕು ಮತ್ತು ಏಕೆ ಮಾಡಬೇಕು ಎಂಬುದು ಅವನಿಗೆ ಚೆನ್ನಾಗಿ ಗೊತ್ತಿದೆ.​—⁠ಯೋಹಾನ 11:​1-10.

ಯಾರೊಬ್ಬರೂ ಕಡೆಗಣಿಸಲಾಗದಂತಹ ಒಂದು ಅದ್ಭುತಕಾರ್ಯ

18. ಯೇಸು ಬೇಥಾನ್ಯಕ್ಕೆ ಬಂದಾಗ ಅಲ್ಲಿನ ಸನ್ನಿವೇಶವು ಹೇಗಿರುತ್ತದೆ, ಮತ್ತು ಅವನು ಬಂದ ನಂತರ ಏನು ಸಂಭವಿಸುತ್ತದೆ?

18 ಯೇಸು ಬೇಥಾನ್ಯಕ್ಕೆ ಹೋದಾಗ, ಮೊದಲು ಮಾರ್ಥಳು ಅವನನ್ನು ಸಂಧಿಸುತ್ತಾಳೆ. ಮತ್ತು “ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ” ಎಂದು ಅವಳು ಯೇಸುವಿಗೆ ಹೇಳುತ್ತಾಳೆ. ಆಗ ಮರಿಯಳೂ ಅವರ ಮನೆಗೆ ಬಂದಿದ್ದ ಇನ್ನಿತರ ಯೆಹೂದ್ಯರೂ ಅವನನ್ನು ಸಂಧಿಸಲು ಬರುತ್ತಾರೆ. ಅವರೆಲ್ಲರೂ ಗೋಳಾಡುತ್ತಿದ್ದಾರೆ. ಆಗ ಯೇಸು “ಅವನನ್ನು ಎಲ್ಲಿ ಇಟ್ಟಿದ್ದೀರಿ”? ಎಂದು ಕೇಳುತ್ತಾನೆ. “ಸ್ವಾಮೀ, ಬಂದು ನೋಡು” ಎಂದು ಹೇಳುತ್ತಾ, ಅವರೆಲ್ಲರೂ ಸಮಾಧಿಯ ಬಳಿಗೆ ಬರುತ್ತಾರೆ. ಅದು ಒಂದು ಗವಿಯಾಗಿದ್ದು, ಅದರ ಬಾಯಿಗೆ ಒಂದು ಕಲ್ಲು ಮುಚ್ಚಲಾಗಿರುತ್ತದೆ. “ಆ ಕಲ್ಲನ್ನು ತೆಗೆದುಹಾಕಿರಿ” ಎಂದು ಯೇಸು ಆಜ್ಞಾಪಿಸುತ್ತಾನೆ. ಆದರೆ ಯೇಸು ಹೀಗೇಕೆ ಹೇಳಿದನು ಎಂಬುದನ್ನು ಅರ್ಥಮಾಡಿಕೊಳ್ಳದ ಮಾರ್ಥಳು ಅವನಿಗೆ, “ಸ್ವಾಮೀ, ಅವನು ಸತ್ತು ನಾಲ್ಕು ದಿವಸವಾಯಿತು; ಈಗ ನಾತ ಹುಟ್ಟಿದೆ” ಎಂದು ಹೇಳುತ್ತಾಳೆ. ತತ್‌ಕ್ಷಣವೇ ಯೇಸು ಅವಳಿಗೆ “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ” ಎಂದು ಕೇಳುತ್ತಾನೆ.​—⁠ಯೋಹಾನ 11:​17-40.

19. ಲಾಜರನನ್ನು ಪುನರುತ್ಥಾನಗೊಳಿಸುವುದಕ್ಕೆ ಮೊದಲು, ಯೇಸು ಏಕೆ ಎಲ್ಲರ ಮುಂದೆ ಗಟ್ಟಿಯಾಗಿ ಪ್ರಾರ್ಥಿಸುತ್ತಾನೆ?

19 ಲಾಜರನ ಸಮಾಧಿಯ ಮುಂದೆ ಮುಚ್ಚಲಾಗಿದ್ದ ಕಲ್ಲು ತೆಗೆಯಲ್ಪಟ್ಟಾಗ, ಯೇಸು ಗಟ್ಟಿಯಾಗಿ ಪ್ರಾರ್ಥನೆ ಮಾಡುತ್ತಾನೆ. ದೇವರು ಕೊಡುವ ಶಕ್ತಿಯಿಂದಲೇ ತಾನು ಮುಂದಿನ ಕೆಲಸವನ್ನು ಪೂರೈಸಲಿದ್ದೇನೆ ಎಂಬುದನ್ನು ಅಲ್ಲಿ ನೆರೆದಿದ್ದವರೆಲ್ಲರೂ ತಿಳಿದುಕೊಳ್ಳಬೇಕು ಎಂಬುದೇ ಅವನ ಉದ್ದೇಶವಾಗಿದೆ. ಆಮೇಲೆ ಅವನು “ಲಾಜರನೇ, ಹೊರಗೆ ಬಾ” ಎಂದು ದೊಡ್ಡ ಶಬ್ದದಿಂದ ಕೂಗುತ್ತಾನೆ. ಆಗ ಲಾಜರನು ಹೊರಗೆ ಬರುತ್ತಾನೆ; ಅವನ ಕೈಕಾಲುಗಳು ಬಟ್ಟೆಗಳಿಂದ ಸುತ್ತಲ್ಪಟ್ಟಿವೆ ಮತ್ತು ಅವನ ಮುಖವು ಕೈಪಾವಡದಿಂದ ಸುತ್ತಲ್ಪಟ್ಟಿದೆ. ಇದನ್ನು ನೋಡಿ ಯೇಸು, “ಅವನನ್ನು ಬಿಚ್ಚಿರಿ, ಹೋಗಲಿ” ಎಂದು ಹೇಳುತ್ತಾನೆ.​—⁠ಯೋಹಾನ 11:​41-44.

20. ಯೇಸು ಲಾಜರನನ್ನು ಪುನರುತ್ಥಾನಗೊಳಿಸಿದ್ದನ್ನು ನೋಡಿದವರು ಹೇಗೆ ಪ್ರತಿಕ್ರಿಯೆ ತೋರಿಸುತ್ತಾರೆ?

20 ಈ ಅದ್ಭುತಕಾರ್ಯವನ್ನು ನೋಡಿದ ಬಳಿಕ, ಮಾರ್ಥಳನ್ನೂ ಮರಿಯಳನ್ನೂ ಸಂತೈಸಲು ಬಂದಿದ್ದ ಅನೇಕ ಯೆಹೂದ್ಯರು ಯೇಸುವಿನಲ್ಲಿ ನಂಬಿಕೆಯಿಡುತ್ತಾರೆ. ಇನ್ನಿತರರು ಏನು ಸಂಭವಿಸಿತೋ ಅದರ ಬಗ್ಗೆ ವರದಿಯೊಪ್ಪಿಸಲು ಫರಿಸಾಯರ ಬಳಿಗೆ ಹೋಗುತ್ತಾರೆ. ಆಗ ಫರಿಸಾಯರು ಹೇಗೆ ಪ್ರತಿಕ್ರಿಯಿಸುತ್ತಾರೆ? ಆ ಕೂಡಲೆ ಫರಿಸಾಯರು ಮತ್ತು ಮಹಾಯಾಜಕರು ತುರ್ತಾಗಿ ಹಿರೀಸಭೆಯನ್ನು ಕೂಡಿಸುತ್ತಾರೆ. ತುಂಬ ಭೀತಿಗೊಂಡವರಾಗಿ ಅವರು ಹೀಗೆ ಪ್ರಲಾಪಿಸುತ್ತಾರೆ: “ನಾವು ಮಾಡುವದು ಇದೇನು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಅವನನ್ನು ನಂಬಾರು; ಮತ್ತು ರೋಮ್‌ ರಾಜ್ಯದವರು ಬಂದು ನಮ್ಮ ಸ್ಥಾನವನ್ನೂ ಜನವನ್ನೂ ಸೆಳಕೊಂಡಾರು.” ಆದರೆ ಮಹಾಯಾಜಕನಾಗಿದ್ದ ಕಾಯಫನು ಅವರಿಗೆ ಹೇಳುವುದು: “ನಿಮಗೇನೂ ತಿಳಿಯುವದಿಲ್ಲ; ಜನವೆಲ್ಲಾ ನಾಶವಾಗುವದಕ್ಕಿಂತ ಒಬ್ಬ ಮನುಷ್ಯನು ಜನಕ್ಕೋಸ್ಕರ ಸಾಯುವದು ನಿಮಗೆ ಹಿತವೆಂದು ನೀವು ಆಲೋಚಿಸುವದೂ ಇಲ್ಲ.” ಆದುದರಿಂದಲೇ, ಆ ದಿನದಿಂದ ಅವರು ಯೇಸುವನ್ನು ಕೊಲ್ಲುವುದಕ್ಕೆ ಸಂಚುಹೂಡುತ್ತಿದ್ದರು.​—⁠ಯೋಹಾನ 11:​45-53.

21. ಲಾಜರನ ಪುನರುತ್ಥಾನದ ಅದ್ಭುತಕಾರ್ಯವು ಯಾವುದಕ್ಕೆ ಪೀಠಿಕೆಯಾಗಿದೆ?

21 ಹೀಗೆ, ಯೇಸು ಬೇಥಾನ್ಯಕ್ಕೆ ಎರಡು ದಿನ ತಡವಾಗಿ ಹೋಗಿದ್ದರಿಂದ, ಯಾರೊಬ್ಬರೂ ಕಡೆಗಣಿಸಲಾರದಂತಹ ಒಂದು ಅದ್ಭುತಕಾರ್ಯವನ್ನು ಮಾಡಲು ಶಕ್ತನಾದನು. ಅದೇನೆಂದರೆ, ದೇವರಿಂದ ಶಕ್ತಿಪಡೆದವನಾದ ಯೇಸು, ಸತ್ತು ನಾಲ್ಕು ದಿವಸಗಳಾಗಿದ್ದ ಒಬ್ಬ ಮನುಷ್ಯನನ್ನು ಪುನರುತ್ಥಾನಗೊಳಿಸಿದನು. ತುಂಬ ಗೌರವಭರಿತ ಸ್ಥಾನದಲ್ಲಿದ್ದ ಹಿರೀಸಭೆಯವರು ಸಹ ಇದನ್ನು ನೋಡುವಂತೆ ಒತ್ತಾಯಿಸಲ್ಪಟ್ಟರು ಮತ್ತು ಅದ್ಭುತಕಾರ್ಯಗಳನ್ನು ನಡೆಸಿದವನನ್ನು ಕೊಲ್ಲುವ ಸಂಚುಹೂಡಿದರು! ಹೀಗೆ, ಯೇಸುವಿನ ಭೂಶುಶ್ರೂಷೆಯಲ್ಲಾದ ಈ ಬದಲಾವಣೆಗೆ, ಅವನು ಮಾಡಿದ ಈ ಅದ್ಭುತಕಾರ್ಯವು ಒಂದು ಪೀಠಿಕೆಯಾಗಿ ಪರಿಣಮಿಸುತ್ತದೆ. ಅಂದರೆ ಈ ಮುಂಚೆ ‘ಆತನ ಕಾಲ ಇನ್ನೂ ಬಂದಿರಲಿಲ್ಲ,’ ಆದರೆ ಈಗ ‘ಆ ಸಮಯ ಬಂದಿದೆ.’

ನೀವು ಹೇಗೆ ಉತ್ತರಿಸುವಿರಿ?

• ದೇವರು ನೇಮಿಸಿದಂತಹ ಕೆಲಸದ ಅರಿವು ತನಗಿದೆ ಎಂಬುದನ್ನು ಯೇಸು ಹೇಗೆ ತೋರಿಸಿದನು?

• ದ್ರಾಕ್ಷಾರಸವು ಮುಗಿದುಹೋದಾಗ ತನ್ನ ತಾಯಿಯು ಕೊಟ್ಟ ಸಲಹೆಗೆ ಯೇಸು ಏಕೆ ಅಸಮ್ಮತಿಯನ್ನು ಸೂಚಿಸಿದನು?

• ಅನೇಕ ಸಂದರ್ಭಗಳಲ್ಲಿ ಯೇಸು ತನ್ನ ವಿರೋಧಿಗಳೊಂದಿಗೆ ವ್ಯವಹರಿಸಿದ ರೀತಿಯಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

• ಲಾಜರನ ಅಸ್ವಸ್ಥತೆಯ ವಿಷಯವು ಗೊತ್ತಿದ್ದರೂ, ಅದಕ್ಕೆ ಪ್ರತಿಕ್ರಿಯೆ ತೋರಿಸಲು ಯೇಸು ಏಕೆ ತಡಮಾಡಿದನು?

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರಗಳು]

ಯೇಸು ದೇವರಿಂದ ನೇಮಿಸಲ್ಪಟ್ಟಿದ್ದ ಜವಾಬ್ದಾರಿಯನ್ನು ಪೂರೈಸುವುದಕ್ಕಾಗಿ ತನ್ನ ಶಕ್ತಿಯನ್ನು ಮೀಸಲಾಗಿಟ್ಟನು