ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀನನಾದ ಯೋಷೀಯನು ಯೆಹೋವನ ಅನುಗ್ರಹವನ್ನು ಹೊಂದಿದ್ದನು

ದೀನನಾದ ಯೋಷೀಯನು ಯೆಹೋವನ ಅನುಗ್ರಹವನ್ನು ಹೊಂದಿದ್ದನು

ದೀನನಾದ ಯೋಷೀಯನು ಯೆಹೋವನ ಅನುಗ್ರಹವನ್ನು ಹೊಂದಿದ್ದನು

ಐದು ವರ್ಷ ವಯಸ್ಸಿನ ಯೂದಾಯದ ಯುವರಾಜನಾದ ಯೋಷೀಯನು ಭಯಭೀತನಾಗಿರಬೇಕು. ಏಕೆ? ಏಕೆಂದರೆ, ಅವನ ತಾಯಿಯಾದ ಯೆದೀದಳು ದುಃಖದಿಂದ ಶೋಕಿಸುತ್ತಿದ್ದಾಳೆ. ಕಾರಣ, ಯೋಷೀಯನ ತಾತನಾದ ಅರಸ ಮನಸ್ಸೆಯು ಸತ್ತುಹೋಗಿದ್ದಾನೆ.​—⁠2 ಅರಸು 21:​18.

ಈಗ ಯೋಷೀಯನ ತಂದೆಯಾದ ಆಮೋನನು ಯೂದಾಯದ ಅರಸನಾಗಲಿರುವನು. (2 ಪೂರ್ವಕಾಲ 33:20) ಎರಡು ವರ್ಷಗಳ ನಂತರ (659 ಸಾ.ಶ.ಪೂ.) ಆಮೋನನು ತನ್ನ ಸೇವಕರಿಂದಲೇ ಕೊಲೆಗೀಡಾಗುತ್ತಾನೆ. ಜನರೆಲ್ಲ ಒಟ್ಟುಗೂಡಿ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕುತ್ತಾರೆ ಮತ್ತು ಎಳೆಯ ಯೋಷೀಯನನ್ನು ಅರಸನನ್ನಾಗಿ ಮಾಡುತ್ತಾರೆ. (2 ಅರಸು 21:24; 2 ಪೂರ್ವಕಾಲ 33:25) ಆಮೋನನ ಆಳ್ವಿಕೆಯ ಸಮಯದಲ್ಲಿ, ಯೆರೂಸಲೇಮಿನ ಗಾಳಿಯಲ್ಲಾ ತುಂಬಿರುತ್ತಿದ್ದ ಧೂಪದ ಪರಿಮಳಕ್ಕೆ ಯೋಷೀಯನು ಒಗ್ಗಿಹೋಗಿದ್ದನು. ಹೇಗೆಂದರೆ, ಮಾಳಿಗೆಗಳ ಮೇಲಿದ್ದ ಅನೇಕ ವೇದಿಗಳ ಮುಂದೆ ಸುಳ್ಳು ದೇವತೆಗಳಿಗೆ ಜನರು ಅಡ್ಡಬೀಳುತ್ತಿದ್ದರು. ವಿಧರ್ಮಿ ಪೂಜಾರಿಗಳು ಒಳಗೂ ಹೊರಗೂ ಮೆರವಣಿಗೆ ಹೋಗುತ್ತಿರುವುದನ್ನು ಮತ್ತು ಯೆಹೋವನ ಆರಾಧಕರೆಂದು ಹೇಳಿಕೊಂಡವರೂ ಸೇರಿದ್ದ ಅವರ ಭಕ್ತರು, ಸುಳ್ಳು ದೇವರಾದ ಮಲ್ಕಾಮನ ಮೇಲೆ ಆಣೆಯಿಡುತ್ತಿರುವುದನ್ನು ನೋಡಬಹುದಿತ್ತು.​—⁠ಚೆಫನ್ಯ 1:​1, 5.

ಸುಳ್ಳು ದೇವತೆಗಳನ್ನು ಪೂಜಿಸುವ ಮೂಲಕ ಆಮೋನನು ದುಷ್ಟನಂತೆ ವರ್ತಿಸಿದ್ದನು ಎಂಬುದು ಯೋಷೀಯನಿಗೆ ತಿಳಿದಿದೆ. ಅಷ್ಟು ಮಾತ್ರವಲ್ಲದೆ, ಯೂದಾಯದ ಈ ಯುವ ಅರಸನು, ದೇವರ ಪ್ರವಾದಿಯಾದ ಚೆಫನ್ಯನ ಘೋಷಣೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹ ಶಕ್ತನಾಗುತ್ತಾನೆ. ಯೋಷೀಯನು 15 ವರ್ಷದವನಾಗುವುದರೊಳಗಾಗಿ (625 ಸಾ.ಶ.ಪೂ.) ತನ್ನ ಆಳ್ವಿಕೆಯ ಎಂಟನೇ ವರ್ಷದಲ್ಲಿರುತ್ತಾನೆ ಮತ್ತು ಚೆಫನ್ಯನ ಮಾತಿಗೆ ಕಿವಿಗೊಡಲು ದೃಢಮನಸ್ಕನಾಗಿದ್ದನು. ಅವನು ಇನ್ನೂ ಚಿಕ್ಕ ಹುಡುಗನಾಗಿರುವಾಗಲೇ ಯೆಹೋವನನ್ನು ಹುಡುಕಲು ಪ್ರಾರಂಭಿಸುತ್ತಾನೆ.​—⁠2 ಪೂರ್ವಕಾಲ 33:​21, 22; 34:⁠3.

ಯೋಷೀಯನು ಕ್ರಿಯೆಗೈಯಲು ಸನ್ನದ್ಧನಾಗುತ್ತಾನೆ

ನಾಲ್ಕು ವರ್ಷಗಳು ಕಳೆದುಹೋಗುತ್ತವೆ. ಯೋಷೀಯನು ಯೆರೂಸಲೇಮ್‌ ಮತ್ತು ಯೂದಾಯದಲ್ಲಿರುವ ಸುಳ್ಳು ಧರ್ಮವನ್ನು ತೆಗೆದುಹಾಕುವ ಕೆಲಸವನ್ನು ಆರಂಭಿಸುತ್ತಾನೆ (648 ಸಾ.ಶ.ಪೂ.). ಅವನು ವಿಗ್ರಹಗಳನ್ನು, ವಿಗ್ರಹಸ್ತಂಭಗಳನ್ನು ಮತ್ತು ಬಾಳನ ಆರಾಧನೆಗಾಗಿ ಉಪಯೋಗಿಸುತ್ತಿದ್ದ ಧೂಪವೇದಿಗಳನ್ನು ನಾಶಮಾಡುತ್ತಾನೆ. ಸುಳ್ಳು ದೇವತೆಗಳ ವಿಗ್ರಹಗಳನ್ನು ಪುಡಿಪುಡಿ ಮಾಡಿ, ಅವುಗಳಿಗೆ ಬಲಿಯನ್ನು ಅರ್ಪಿಸುತ್ತಿದ್ದವರ ಸಮಾಧಿಗಳ ಮೇಲೆ ಅವುಗಳನ್ನು ಚೆಲ್ಲಲಾಗುತ್ತದೆ. ಅಶುದ್ಧ ಆರಾಧನೆಗಾಗಿ ಉಪಯೋಗಿಸಲ್ಪಡುತ್ತಿದ್ದ ಪೂಜಾಸ್ಥಳಗಳು ಹೊಲೆಮಾಡಲ್ಪಡುತ್ತವೆ ಹಾಗೂ ನಾಶಗೊಳಿಸಲ್ಪಡುತ್ತವೆ.​—⁠2 ಅರಸು 23:​8-14.

ಲೇವಿಯನಾಗಿದ್ದ ಯಾಜಕನ ಮಗನಾದ ಯೆರೆಮೀಯನು ಯೆರೂಸಲೇಮಿಗೆ ಬರುವಾಗ (647 ಸಾ.ಶ.ಪೂ.) ಯೋಷೀಯನ ಶುದ್ಧೀಕರಿಸುವ ಕೆಲಸವು ತೀವ್ರಗತಿಯಲ್ಲಿ ನಡೆಯುತ್ತಿರುತ್ತದೆ. ಈ ಸಮಯದಲ್ಲಿ ಯೆಹೋವ ದೇವರು ಯುವ ಯೆರೆಮೀಯನನ್ನು ತನ್ನ ಪ್ರವಾದಿಯಾಗಿ ನೇಮಿಸಿದ್ದಾನೆ. ಸುಳ್ಳು ಧರ್ಮದ ವಿರುದ್ಧ ಯೆಹೋವನ ಸಂದೇಶವನ್ನು ಯೆರೆಮೀಯನು ಎಷ್ಟು ಪ್ರಭಾವಶಾಲಿಯಾಗಿ ಘೋಷಿಸುತ್ತಾನೆ! ಯೋಷೀಯನು ಯೆರೆಮೀಯನ ವಯಸ್ಸಿನವನಷ್ಟೇ ಆಗಿರುತ್ತಾನೆ. ಯೋಷೀಯನು ಧೈರ್ಯದಿಂದ ಮಾಡುತ್ತಿರುವ ಶುದ್ಧೀಕರಣ ಮತ್ತು ಯೆರೆಮೀಯನ ನಿರ್ಭಯದಿಂದ ಕೂಡಿದ ಘೋಷಣೆಗಳ ಮಧ್ಯೆಯೂ, ಜನರು ಸ್ವಲ್ಪ ಸಮಯದರೊಳಗಾಗಿ ಸುಳ್ಳು ಆರಾಧನೆಗೆ ಹಿಂದಿರುಗುತ್ತಾರೆ.​—⁠ಯೆರೆಮೀಯ 1:​1-10.

ಬೆಲೆಕಟ್ಟಲಾಗದ ಒಂದು ಆವಿಷ್ಕಾರ!

ಸುಮಾರು ಐದು ವರ್ಷಗಳು ಕಳೆದುಹೋಗುತ್ತವೆ. ಇಪ್ಪತ್ತೈದು ವರ್ಷದ ಯೋಷೀಯನು ಸುಮಾರು 18 ವರ್ಷಗಳಿಂದ ಆಳ್ವಿಕೆಯನ್ನು ಮಾಡುತ್ತಿದ್ದಾನೆ. ಅವನು, ಕಾರ್ಯದರ್ಶಿಯಾದ ಶಾಫಾನ; ಪುರಾಧಿಕಾರಿಯಾದ ಮಾಸೇಯ; ಮತ್ತು ಲೇಖಕನಾದ ಯೋವಾಹನನ್ನು ಕರೆಸುತ್ತಾನೆ. ನಂತರ ಅರಸನು ಶಾಫಾನನಿಗೆ ಆಜ್ಞಾಪಿಸುವುದು: “ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ ಅವನಿಗೆ​—⁠ದ್ವಾರಪಾಲಕರು ಯೆಹೋವನ ಆಲಯಕ್ಕೆ ಬರುವ ಜನರಿಂದ ಕೂಡಿಸಿದ ಹಣವನ್ನು ಲೆಕ್ಕಿಸಿ ಆಲಯದ ಕೆಲಸಮಾಡಿಸುವ ಮೊಕ್ತೇಸರರಿಗೆ ಅದನ್ನು ಒಪ್ಪಿಸು ಎಂದು ಹೇಳು.”​—⁠2 ಅರಸು 22:​3-6; 2 ಪೂರ್ವಕಾಲ 34:⁠8.

ಮುಂಜಾನೆಯಿಂದಲೇ, ದುರಸ್ತಿಮಾಡುವ ಕೆಲಸಗಾರರು ಶ್ರಮಪಟ್ಟು ದೇವಾಲಯದ ಕೆಲಸವನ್ನು ಮಾಡುತ್ತಾರೆ. ನಿಜವಾಗಿಯೂ, ಯೋಷೀಯನು ಯೆಹೋವನಿಗೆ ಕೃತಜ್ಞನಾಗಿದ್ದಾನೆ. ಏಕೆಂದರೆ, ತನ್ನ ಕೆಲವು ದುಷ್ಟ ಪೂರ್ವಿಕರು ದೇವಾಲಯಕ್ಕೆ ಮಾಡಿದ ಹಾನಿಯನ್ನು, ಕೆಲಸಗಾರರು ಈಗ ಸರಿಪಡಿಸುತ್ತಿದ್ದಾರೆ. ಕೆಲಸವು ಪ್ರಗತಿಯಾಗುತ್ತಿದ್ದಂತೆ, ಶಾಫಾನ ಒಂದು ವರದಿಯನ್ನು ನೀಡಲು ಬರುತ್ತಾನೆ. ಆದರೆ ಅವನ ಕೈಯಲ್ಲಿರುವುದೇನು? ಹೌದು, ಅವನು ಒಂದು ಸುರುಳಿಯನ್ನು ತೆಗೆದುಕೊಂಡು ಬರುತ್ತಿದ್ದಾನೆ! ಅವನು, “ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟಿದ್ದ ಯೆಹೋವನ ಧರ್ಮೋಪದೇಶದ ಗ್ರಂಥವು ಯಾಜಕನಾದ ಹಿಲ್ಕೀಯನಿಗೆ ಸಿಕ್ಕಿತು” ಎಂಬುದಾಗಿ ವಿವರಿಸುತ್ತಾನೆ. (2 ಪೂರ್ವಕಾಲ 34:​12-18) ನಿಜವಾಗಿಯೂ, ಅದು ಎಂಥ ಒಂದು ಆವಿಷ್ಕಾರವಾಗಿತ್ತು! ಏಕೆಂದರೆ, ಅದು ಧರ್ಮೋಪದೇಶದ ಮೂಲಪ್ರತಿಯಾಗಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ.

ಯೋಷೀಯನು ಆ ಗ್ರಂಥದಲ್ಲಿದ್ದ ಪ್ರತಿಯೊಂದು ಶಬ್ದವನ್ನು ಕೇಳಿಸಿಕೊಳ್ಳಲು ತವಕವುಳ್ಳವನಾಗಿದ್ದಾನೆ. ಶಾಫಾನನು ಓದುತ್ತಿರುವಾಗ, ಪ್ರತಿಯೊಂದು ನಿಯಮವು ತನಗೆ ಮತ್ತು ಜನರಿಗೆ ಯಾವ ರೀತಿಯಲ್ಲಿ ಅನ್ವಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅರಸನು ಪ್ರಯತ್ನಿಸುತ್ತಾನೆ. ವಿಶೇಷವಾಗಿ, ನಿಜ ಆರಾಧನೆಯ ಕುರಿತು ಗ್ರಂಥವು ಹೇಗೆ ಒತ್ತನ್ನು ನೀಡುತ್ತದೆ ಮತ್ತು ಸುಳ್ಳುಧರ್ಮದಲ್ಲಿ ಜನರು ಒಳಗೂಡುವುದಾದರೆ ಅವರ ಮೇಲೆ ಬಂದೆರಗುವ ಉಪದ್ರವಗಳನ್ನು ಮತ್ತು ಅದರ ನಂತರ ಬರಲಿರುವ ಸೆರೆಯ ಕುರಿತು ಮುಂತಿಳಿಸಿರುವಂಥ ವಿಷಯಗಳು ಅವನ ಮನಸ್ಸನ್ನು ನಾಟುತ್ತವೆ. ದೇವರ ಎಲ್ಲಾ ಆಜ್ಞೆಗಳಿಗನುಸಾರ ತಾನು ನಡೆದುಕೊಂಡಿಲ್ಲ ಎಂಬುದು ಈಗ ಅವನ ಅರಿವಿಗೆ ಬಂದಾಗ, ಯೋಷೀಯನು ತನ್ನ ಬಟ್ಟೆಗಳನ್ನು ಹರಿದುಕೊಳ್ಳುತ್ತಾನೆ. ಹಿಲ್ಕೀಯ, ಶಾಫಾನ ಮತ್ತು ಇನ್ನಿತರರಿಗೆ ಆಜ್ಞೆಯನ್ನು ಕೊಡುತ್ತಾನೆ. ‘ನಮ್ಮ ಪೂರ್ವಿಕರು ನಮಗೆ ಸಿಕ್ಕಿರುವ ಈ ಗ್ರಂಥವಾಕ್ಯಗಳಿಗೆ ಕಿವಿಗೊಡದೆ . . . ಹೋದದರಿಂದ ನಾವು ಯೆಹೋವನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದದರಿಂದ, . . . ಯೆಹೋವನ ಬಳಿಗೆ ಹೋಗಿ ಈ ಗ್ರಂಥವಾಕ್ಯಗಳ ವಿಷಯವಾಗಿ ವಿಚಾರಿಸಿರಿ.’​—⁠2 ಅರಸು 22:​11-13; 2 ಪೂರ್ವಕಾಲ 34:​19-21.

ಯೆಹೋವನ ಸಂದೇಶವು ಸಿಗುತ್ತದೆ

ಯೋಷೀಯನ ಸಂದೇಶಕರು ಯೆರೂಸಲೇಮಿನಲ್ಲಿರುವ ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋಗುತ್ತಾರೆ ಮತ್ತು ಅಲ್ಲಿಂದ ವರದಿಯೊಂದಿಗೆ ಹಿಂದಿರುಗುತ್ತಾರೆ. ಹುಲ್ದಳು ಯೆಹೋವನ ಸಂದೇಶವನ್ನು ಹೇಳುತ್ತಾಳೆ. ಅದೇನೆಂದರೆ, ಹೊಸದಾಗಿ ಸಿಕ್ಕಿರುವ ಗ್ರಂಥವಾಕ್ಯದಲ್ಲಿ ದಾಖಲಾಗಿರುವ ಎಲ್ಲಾ ಶಿಕ್ಷೆಗಳು ಧರ್ಮಭ್ರಷ್ಟ ಜನಾಂಗದ ಮೇಲೆ ಬಂದೆರಗುವವು ಎಂಬುದಾಗಿ ಸೂಚಿಸುತ್ತಾಳೆ. ಆದರೆ, ಯೋಷೀಯನು ಯೆಹೋವ ದೇವರ ಮುಂದೆ ತನ್ನನ್ನು ತಗ್ಗಿಸಿಕೊಂಡಿದ್ದರಿಂದ, ಆ ದೇಶಕ್ಕೆ ಯೆಹೋವನು ಬರಮಾಡುವ ಶಿಕ್ಷೆಗಳಲ್ಲಿ ಒಂದನ್ನೂ ಅವನು ನೋಡಬೇಕಾಗಿರುವುದಿಲ್ಲ. ಅವನು ಸಮಾಧಾನದಿಂದ ಮೃತಹೊಂದಿ ತನ್ನ ಪೂರ್ವಿಕರೊಂದಿಗೆ ಸೇರಿಸಲ್ಪಡುವನು.​—⁠2 ಅರಸು 22:​14-20; 2 ಪೂರ್ವಕಾಲ 34:​22-28.

ಯೋಷೀಯನು ರಣರಂಗದಲ್ಲಿ ಸತ್ತುಹೋದದ್ದರಿಂದ, ಹುಲ್ದಳ ಪ್ರವಾದನೆಯು ನಿಷ್ಕೃಷ್ಟವಾಗಿತ್ತೋ? (2 ಅರಸು 23:​28-30) ಹೌದು. ಹೇಗೆಂದರೆ, ಯೂದಾಯದ ಮೇಲೆ ಬರಲಿದ್ದ “ಶಿಕ್ಷೆಗಳಿಗೆ” ಹೋಲಿಸಿನೋಡುವಾಗ, ಅವನು ಮೃತಹೊಂದಿ ಸಮಾಧಿಗೆ ಸೇರಿದ್ದು “ಸಮಾಧಾನ”ದಿಂದಲೇ ಎಂದು ಹೇಳಬೇಕು. (2 ಅರಸು 22:20; 2 ಪೂರ್ವಕಾಲ 34:28) ಹೇಗೆಂದರೆ, ಬಬಿಲೋನಿಯರು ಸಾ.ಶ.ಪೂ 609​—⁠607ರಲ್ಲಿ, ಯೆರುಸಲೇಮಿಗೆ ಮುತ್ತಿಗೆಹಾಕಿ ಅದನ್ನು ನಾಶಮಾಡಿದ ಘೋರ ವಿಪತ್ತಿಗೆ ಮುಂಚೆಯೇ ಯೋಷೀಯನು ಸತ್ತುಹೋದನು. ಅವನು ತನ್ನ ಪೂರ್ವಿಕರ ‘ಸಮಾಧಿಸೇರುವನು’ ಎಂದು ಹೇಳುವಾಗ, ಅದು ಹಿಂಸಾತ್ಮಕ ಮರಣದಿಂದ ಸಾಯಬಾರದು ಎಂದೇನಿಲ್ಲ. ಏಕೆಂದರೆ, ಇದೇ ರೀತಿಯ ಹೋಲಿಕೆಯ ಅಭಿವ್ಯಕ್ತಿಯನ್ನು ಹಿಂಸಾತ್ಮಕ ಹಾಗೂ ಹಿಂಸಾತ್ಮಕವಲ್ಲದ ಹೀಗೆ, ಎರಡೂ ರೀತಿಯ ಮರಣಕ್ಕೆ ಸಂಬಂಧಿಸಿ ಉಪಯೋಗಿಸಲಾಗಿದೆ.​—⁠1 ಅರಸು 2:10; 22:​34, 40.

ಸತ್ಯಾರಾಧನೆಯು ಪ್ರಗತಿ ಹೊಂದುತ್ತದೆ

ಯೋಷೀಯನು ಯೆರೂಸಲೇಮಿನ ದೇವಾಲಯದ ಬಳಿಗೆ ಜನರನ್ನು ಒಟ್ಟುಗೂಡಿಸುತ್ತಾನೆ. ಅವರಿಗೆ ಯೆಹೋವನ ಆಲಯದಲ್ಲಿ ಸಿಕ್ಕಿದ ‘ನಿಬಂಧನಗ್ರಂಥವನ್ನು ಸಂಪೂರ್ಣವಾಗಿ ಓದಿಸುತ್ತಾನೆ.’ ನಂತರ, “ಯೆಹೋವನ ಮಾರ್ಗದಲ್ಲಿ ನಡೆಯುವದಾಗಿಯೂ ಆತನ ಆಜ್ಞಾನಿಯಮವಿಧಿಗಳನ್ನು ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಕೈಕೊಳ್ಳುವದಾಗಿಯೂ ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವದಾಗಿಯೂ” ಯೆಹೋವನಿಗೆ ಅವನು ಪ್ರಮಾಣಮಾಡುತ್ತಾನೆ. ಆಗ, ಜನರೆಲ್ಲರೂ ಆ ಪ್ರಮಾಣಕ್ಕೆ ಸಮ್ಮತಿಯನ್ನು ಸೂಚಿಸುತ್ತಾ ತಮ್ಮ ನಿಲುವನ್ನು ತೆಗೆದುಕೊಳ್ಳುತ್ತಾರೆ.​—⁠2 ಅರಸು 23:​1-3.

ಅರಸನಾದ ಯೋಷೀಯನು ವಿಗ್ರಹರಾಧನೆಯ ವಿರುದ್ಧ ಸ್ಪಷ್ಟವಾಗಿಯೇ ಮತ್ತೊಂದು ತೀವ್ರವಾದ ಚಳುವಳಿಯನ್ನು ಈಗ ಮಾಡುತ್ತಾನೆ. ಯೂದಾಯದ ಅನ್ಯ ದೇವತೆಗಳ ಪೂಜಾರಿಗಳು ಮಾಡುತ್ತಿದ್ದ ವ್ಯಾಪಾರಗಳನ್ನು ಇನ್ನಿಲ್ಲದಂತೆ ಮಾಡಿಬಿಡುತ್ತಾನೆ. ಅಶುದ್ಧ ಆರಾಧನೆಯಲ್ಲಿ ಒಳಗೂಡಿದ್ದ ಲೇವಿಯ ಯಾಜಕರು, ಯೆಹೋವನ ವೇದಿಕೆಯ ಮುಂದೆ ಸೇವೆಮಾಡುವ ಸುಯೋಗವನ್ನು ಕಳೆದುಕೊಳ್ಳುತ್ತಾರೆ. ಸೊಲೊಮೋನನ ಆಳ್ವಿಕೆಯ ಕಾಲದಲ್ಲಿ ಕಟ್ಟಲ್ಪಟ್ಟಿದ್ದ ಪೂಜಾಸ್ಥಳಗಳು ಆರಾಧನೆಗೆ ಯೋಗ್ಯವಲ್ಲದವುಗಳಾಗಿ ಮಾಡಲ್ಪಡುತ್ತವೆ. ಈ ಶುದ್ಧೀಕರಿಸುವ ಕೆಲಸವು, ಈಗಾಗಲೇ ಅಶ್ಶೂರ್ಯರಿಂದ ಸೋಲಿಸಲ್ಪಟ್ಟಿದ್ದ (740 ಸಾ.ಶ.ಪೂ) ಹತ್ತು ಕುಲಗಳ ಇಸ್ರಾಯೇಲಿನ ಪ್ರಾಂತಗಳಲ್ಲೂ ಮುಂದುವರಿಯುತ್ತದೆ.

ಅನಾಮಧೇಯನಾಗಿದ್ದ “ಒಬ್ಬ ದೇವರ ಮನುಷ್ಯನು” 300 ವರ್ಷಗಳ ಹಿಂದೆ ಹೇಳಿದ ಮಾತುಗಳ ನೆರವೇರಿಕೆಯಲ್ಲಿ, ಯೋಷೀಯನು ಬಾಳನ ಪೂಜಾರಿಗಳ ಮೂಳೆಗಳನ್ನು ಅರಸ ಒಂದನೇ ಯಾರೊಬ್ಬಾಮನು ಬೇತೇಲಿನಲ್ಲಿ ಕಟ್ಟಿಸಿದ್ದ ಯಜ್ಞವೇದಿಕೆಯ ಮೇಲೆ ಸುಟ್ಟುಬಿಡುತ್ತಾನೆ. ಅಲ್ಲಿರುವ ಮತ್ತು ಇನ್ನಿತರ ಸ್ಥಳಗಳಲ್ಲಿರುವ ಪೂಜಾಸ್ಥಳಗಳು ಕೆಡವಲ್ಪಡುತ್ತವೆ. ವಿಗ್ರಹಾರಾಧನೆಗಾಗಿ ಧೂಪಸುಡುತ್ತಿದ್ದ ವೇದಿಗಳ ಮೇಲೆಯೇ ಅವುಗಳ ಯಾಜಕರನ್ನೂ ಯಜ್ಞವಾಗಿ ಅರ್ಪಿಸಲಾಗುತ್ತದೆ.​—⁠1 ಅರಸು 13:​1-4; 2 ಅರಸು 23:​4-20.

ಮಹಾ ಪಸ್ಕಹಬ್ಬವು ಆಚರಿಸಲ್ಪಡುತ್ತದೆ

ಸತ್ಯಾರಾಧನೆಗೆ ಉತ್ತೇಜನವನ್ನು ಕೊಡುವುದಕ್ಕಾಗಿ ಯೋಷೀಯನ ತೆಗೆದುಕೊಳ್ಳುತ್ತಿರುವ ಹೆಜ್ಜೆಗಳ ಹಿಂದೆ ದೈವಿಕ ಬೆಂಬಲವಿರುತ್ತದೆ. ತಾನು ಜೀವಂತನಾಗಿರುವ ವರೆಗೂ, ಜನರು “ಅವನ ಪಿತೃಗಳ ದೇವರಾದ ಯೆಹೋವನನ್ನು ಬಿಡದೆ ಹಿಂಬಾಲಿಸಿದ”ದ್ದಕ್ಕಾಗಿ ಅರಸನು ದೇವರಿಗೆ ಕೃತಜ್ಞನಾಗಿರುತ್ತಾನೆ. (2 ಪೂರ್ವಕಾಲ 34:33) ತನ್ನ ಆಳ್ವಿಕೆಯ 18ನೇ ವರ್ಷದಲ್ಲಿ ನಡೆದ ಒಂದು ಅದ್ಭುತಕರ ಘಟನೆಯನ್ನು ಯೋಷೀಯನು ಹೇಗೆ ತಾನೆ ಮರೆಯಬಲ್ಲನು?

ಅರಸನು ತನ್ನ ಜನರಿಗೆ, “ಈ ನಿಬಂಧನಗ್ರಂಥದಲ್ಲಿ [ಇತ್ತೀಚೆಗೆ ಸಿಕ್ಕಿರುವ] ಬರೆದಿರುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನಿಗೋಸ್ಕರ ಪಸ್ಕಹಬ್ಬವನ್ನು ಆಚರಿಸಬೇಕು” ಎಂದು ಆಜ್ಞಾಪಿಸುತ್ತಾನೆ. (2 ಅರಸು 23:21) ಅದಕ್ಕೆ ಸಿಗುವ ಉತ್ತಮ ಪ್ರತಿಕ್ರಿಯೆಯನ್ನು ನೋಡಿ ಯೋಷೀಯನು ಹರ್ಷಿಸುತ್ತಾನೆ. ಈ ಆಚರಣೆಗಾಗಿ, ಸ್ವತಃ ಅವನು 30,000 ಪಸ್ಕದ ಪ್ರಾಣಿಗಳನ್ನು ಮತ್ತು 3,000 ಹೋರಿಗಳನ್ನೂ ದಾನಮಾಡುತ್ತಾನೆ. ನಿಜವಾಗಿಯೂ ಅದು ಎಂಥ ಒಂದು ಪಸ್ಕಹಬ್ಬ! ಆ ಆಚರಣೆಯಲ್ಲಿ ಒಳಗೂಡಿದ್ದ ಬಲಿಗಳು, ಯೋಜನೆಮಾಡಲಾಗಿದ್ದ ಏರ್ಪಾಡುಗಳು ಮತ್ತು ಆರಾಧಕರ ಸಂಖ್ಯೆ ಇವುಗಳನ್ನೆಲ್ಲಾ ನೋಡುವಾಗ, ಪ್ರವಾದಿಯಾದ ಸಮುವೇಲನ ಸಮಯದಲ್ಲಿ ಆಚರಿಸಲ್ಪಟ್ಟ ಪಸ್ಕಹಬ್ಬವನ್ನು ಅದು ಮೀರಿಸುವಂತಿತ್ತು.​—⁠2 ಅರಸು 23:​22, 23; 2 ಪೂರ್ವಕಾಲ 35:​1-19.

ಮರಣಹೊಂದಿದಾಗ ಹೆಚ್ಚು ಗೋಳಾಡಿದ್ದು

ತನ್ನ ಉಳಿದ 31 ವರ್ಷದ ಆಳ್ವಿಕೆಯ ಸಮಯದಲ್ಲಿ (659-629 ಸಾ.ಶ.ಪೂ) ಯೋಷೀಯನು ಒಬ್ಬ ಒಳ್ಳೇ ಅರಸನಾಗಿ ಆಳುತ್ತಾನೆ. ತನ್ನ ಆಳ್ವಿಕೆಯ ಕೊನೆಯಲ್ಲಿ, ಐಗುಪ್ತದ ಫರೋಹನಾದ ನೆಕೋ, ಯೂಫ್ರೇಟೀಸ್‌ ನದಿಯ ಬಳಿಯಿರುವ ಕರ್ಕೆಮೀಷ್‌ ಎಂಬಲ್ಲಿ ಬಬಿಲೋನ್ಯದ ಸೇನೆಯನ್ನು ಅಡ್ಡಗಟ್ಟುವ ಮೂಲಕ, ಅಶ್ಶೂರ್ಯದ ಅರಸನಿಗೆ ಸಹಾಯಮಾಡುವುದಕ್ಕಾಗಿ ಯೂದಾಯದ ಮೂಲಕ ಹಾದುಹೋಗುತ್ತಿರುವುದು ಯೋಷೀಯನಿಗೆ ತಿಳಿದುಬರುತ್ತದೆ. ಯಾವುದೋ ಒಂದು ತಿಳಿಯಪಡಿಸದಿರುವ ಕಾರಣಕ್ಕಾಗಿ, ಯೋಷೀಯನು ಐಗುಪ್ತರ ವಿರುದ್ಧ ಯುದ್ಧಮಾಡುವುದಕ್ಕಾಗಿ ಹೋಗುತ್ತಾನೆ. ನಿಕೋ ತನ್ನ ಸಂದೇಶಕರನ್ನು ಯೋಷೀಯನ ಬಳಿಗೆ ಕಳುಹಿಸುತ್ತಾನೆ. ಅವನು ಹೇಳುವುದು: “ನನ್ನೊಂದಿಗಿರುವ ದೇವರಿಗೆ ವಿರೋಧವಾಗಿ ಕೈಯೆತ್ತುವದನ್ನು ಬಿಡು. ಇಲ್ಲವಾದರೆ ಆತನು ನಿನ್ನನ್ನು ನಾಶಮಾಡುವನು.” ಆದರೆ, ಯೋಷೀಯನು ಅವನ ಮಾತಿಗೆ ಕಿವಿಗೊಡುವುದಿಲ್ಲ. ಮೆಗಿದ್ದೋ ಬೈಲಿನಿಂದ ಐಗುಪ್ತರು ಹಿಮ್ಮೆಟ್ಟುವಂತೆ ಮಾಡುವುದಕ್ಕಾಗಿ ತನ್ನ ವೇಷವನ್ನು ಮರೆಸಿಕೊಂಡು ಹೋಗುತ್ತಾನೆ.​—⁠2 ಪೂರ್ವಕಾಲ 35:​20-22.

ಯೂದಾಯದ ಅರಸನಿಗೆ ಎಂಥ ದುರಾದೃಷ್ಟವು ಕಾದಿತ್ತು! ಶತ್ರುಪಡೆಯ ಬಿಲ್ಲುಗಾರರು ಗುರಿಯಿಟ್ಟು ಬಾಣವನ್ನು ಅವನ ಮೇಲೆ ಎಸೆಯುತ್ತಾರೆ. ಯೋಷೀಯನು ತನ್ನ ಸೇವಕರಿಗೆ ಹೇಳುವುದು: “ನನಗೆ ದೊಡ್ಡ ಗಾಯವಾಯಿತು, ನನ್ನನ್ನು ಆಚೆಗೆ ತೆಗೆದುಕೊಂಡು ಹೋಗಿರಿ.” ಸೇವಕರು ಯೋಷೀಯನನ್ನು ಆತನ ಯುದ್ಧರಥದಿಂದಿಳಿಸಿ, ಎರಡನೆಯ ರಥದಲ್ಲಿ ಮಲಗಿಸಿ ಯೆರೂಸಲೇಮಿಗೆ ಕರೆದುಕೊಂಡುಹೋಗುತ್ತಾರೆ. ಅಲ್ಲೇ ಅಥವಾ ಯೆರೂಸಲೇಮಿಗೆ ಹೋಗುವ ದಾರಿಯಲ್ಲೇ, ಯೋಷೀಯನು ತನ್ನ ಕೊನೆಯುಸಿರನ್ನೆಳೆಯುತ್ತಾನೆ. “ಅವನ ಶವವನ್ನು ಅವನ ಪೂರ್ವಿಕರ ಶ್ಮಶಾನದಲ್ಲಿ ಸಮಾಧಿಮಾಡಿದರು” ಎಂಬುದಾಗಿ ಪ್ರೇರಿತ ವಾಕ್ಯವು ಹೇಳುತ್ತದೆ. ಯೆರೆಮೀಯನು ಅವನಿಗಾಗಿ ಬಹಳ ಶೋಕಿಸಿದನು. ಮತ್ತು ಆ ಸಮಯದಿಂದ, ವಿಶೇಷ ಸಂದರ್ಭಗಳಲ್ಲಿ ಅರಸನ ಮೇಲೆಯೇ ಶೋಕಗೀತೆಗಳನ್ನು ಹಾಡಲಾಗುತ್ತಿತ್ತು.​—⁠2 ಪೂರ್ವಕಾಲ 35:​23-25.

ಹೌದು, ಅರಸನಾದ ಯೋಷೀಯನು ಐಗುಪ್ತದವರೊಂದಿಗೆ ಯುದ್ಧಮಾಡುವುದಕ್ಕಾಗಿ ರಣರಂಗಕ್ಕೆ ಇಳಿಯುವ ತಪ್ಪನ್ನು ಮಾಡಿದ್ದು ಎಂಥ ವಿಷಾದನೀಯ! (ಕೀರ್ತನೆ 130:⁠3) ಹಾಗಿದ್ದರೂ, ಆತನ ದೀನತೆ ಮತ್ತು ಸತ್ಯಾರಾಧನೆಗಾಗಿದ್ದ ದೃಢತೆಯು ದೇವರ ಮೆಚ್ಚಿಗೆಯನ್ನು ಅವನಿಗೆ ತಂದುಕೊಟ್ಟಿತು. ತನ್ನ ದೀನಮನಸ್ಸಿನ ಶ್ರದ್ಧಾಳು ಸೇವಕರಿಗೆ ಯೆಹೋವನು ದಯೆಯನ್ನು ತೋರಿಸುತ್ತಾನೆ ಎಂಬುದನ್ನು ಯೋಷೀಯನ ಜೀವನವು ಎಷ್ಟು ಚೆನ್ನಾಗಿ ದೃಷ್ಟಾಂತಿಸುತ್ತದೆ!​—⁠ಜ್ಞಾನೋಕ್ತಿ 3:34; ಯಾಕೋಬ 4:⁠6.

[ಪುಟ 29ರಲ್ಲಿರುವ ಚಿತ್ರ]

ಯುವ ಅರಸನಾದ ಯೋಷೀಯನು ಶ್ರದ್ಧೆಯಿಂದ ಯೆಹೋವನನ್ನು ಹುಡುಕಿದನು

[ಪುಟ 31ರಲ್ಲಿರುವ ಚಿತ್ರ]

ಯೋಷೀಯನು ಪೂಜಾಸ್ಥಳಗಳನ್ನು ನಾಶಪಡಿಸಿದನು ಹಾಗೂ ಸತ್ಯಾರಾಧನೆಗೆ ಬೆಂಬಲವನ್ನು ಕೊಟ್ಟನು