ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಹೆಸರನ್ನು ಕಾಪಾಡಿಕೊಳ್ಳಿರಿ

ನಿಮ್ಮ ಹೆಸರನ್ನು ಕಾಪಾಡಿಕೊಳ್ಳಿರಿ

ನಿಮ್ಮ ಹೆಸರನ್ನು ಕಾಪಾಡಿಕೊಳ್ಳಿರಿ

ಸುಂದರವಾದ ಕಟ್ಟಡಗಳನ್ನು ವಿನ್ಯಾಸಿಸುವ ಒಬ್ಬ ಮನುಷ್ಯನು ಅತ್ಯುತ್ತಮ ವಾಸ್ತುಶಿಲ್ಪಿ ಎಂಬ ಹೆಸರನ್ನು ಪಡೆದುಕೊಳ್ಳುತ್ತಾನೆ. ವಿಶ್ವವಿದ್ಯಾನಿಲಯದ ವ್ಯಾಸಂಗದಲ್ಲಿ ಅತ್ಯುತ್ತಮಳಾಗಿರುವ ಒಬ್ಬ ಯುವತಿಯು ಬುದ್ಧಿವಂತ ವಿದ್ಯಾರ್ಥಿನಿ ಎಂಬ ಪ್ರಸಿದ್ಧಿ ಪಡೆಯುತ್ತಾಳೆ. ಅಷ್ಟೇಕೆ, ಏನೂ ಮಾಡದಂತಹ ಒಬ್ಬ ವ್ಯಕ್ತಿಯು ಸಹ ಸೋಮಾರಿಯೆಂಬ ಹೆಸರನ್ನು ಪಡೆದುಕೊಳ್ಳಬಹುದು. ಒಂದು ಒಳ್ಳೆಯ ಹೆಸರನ್ನು ಪಡೆದುಕೊಳ್ಳುವುದರ ಮಹತ್ವವನ್ನು ಒತ್ತಿಹೇಳುತ್ತಾ ಬೈಬಲು ವಿವರಿಸುವುದು: “ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.”​—⁠ಜ್ಞಾನೋಕ್ತಿ 22:⁠1.

ಬಹಳ ಕಾಲಾವಧಿಯ ತನಕ ಚಿಕ್ಕಪುಟ್ಟ ಕೃತ್ಯಗಳನ್ನು ಮಾಡುವ ಮೂಲಕ ಒಂದು ಒಳ್ಳೆಯ ಹೆಸರನ್ನು ಪಡೆದುಕೊಳ್ಳಸಾಧ್ಯವಿದೆ. ಆದರೆ, ಒಂದೇ ಒಂದು ಮೂರ್ಖ ಕೃತ್ಯವನ್ನು ಮಾಡುವ ಮೂಲಕ ಆ ಹೆಸರನ್ನು ಹಾಳುಮಾಡಿಕೊಳ್ಳಸಾಧ್ಯವಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಒಂದೇ ಒಂದು ಬಾರಿ ಅನೈತಿಕ ಕೃತ್ಯವೆಸಗಿದರೆ ಸಾಕು, ಅದು ಅವನಿಗಿರುವ ಒಳ್ಳೇ ಹೆಸರನ್ನು ಹಾಳುಮಾಡಿಬಿಡಸಾಧ್ಯವಿದೆ. ಪುರಾತನ ಇಸ್ರಾಯೇಲಿನ ಅರಸನಾಗಿದ್ದ ಸೊಲೊಮೋನನು, ನಮ್ಮ ಹೆಸರನ್ನು ಹಾಳುಮಾಡುವಂತಹ ಹಾಗೂ ಯೆಹೋವ ದೇವರೊಂದಿಗಿನ ನಮ್ಮ ಸಂಬಂಧಕ್ಕೆ ಹಾನಿಯನ್ನು ಉಂಟುಮಾಡುವಂತಹ ಮನೋಭಾವಗಳು ಹಾಗೂ ಕೃತ್ಯಗಳ ವಿರುದ್ಧ ನಮಗೆ ಎಚ್ಚರಿಕೆಯನ್ನು ನೀಡುತ್ತಾನೆ. ಇದನ್ನು ಬೈಬಲಿನ ಜ್ಞಾನೋಕ್ತಿ ಪುಸ್ತಕದ 6ನೆಯ ಅಧ್ಯಾಯದಲ್ಲಿ ನಾವು ನೋಡಸಾಧ್ಯವಿದೆ. ಅಲ್ಲಿ ಯೆಹೋವನು ದ್ವೇಷಿಸುವಂತಹ ಅನೇಕ ವಿಷಯಗಳು ಕೊಡಲ್ಪಟ್ಟಿವೆ. ಅವುಗಳಲ್ಲಿ ಅವಿಚಾರದಿಂದ ಸಾಲಕ್ಕೆ ಹೊಣೆಯಾಗುವುದು, ಸೋಮಾರಿತನ, ಮೋಸ ಹಾಗೂ ಲೈಂಗಿಕ ಅನೈತಿಕತೆಗಳು ಕೆಲವಾಗಿವೆ. ಈ ಬುದ್ಧಿವಾದಕ್ಕೆ ಕಿವಿಗೊಡುವುದು, ನಮ್ಮ ಒಳ್ಳೆಯ ಹೆಸರನ್ನು ಕಾಪಾಡಿಕೊಳ್ಳಲು ನಮಗೆ ಸಹಾಯಮಾಡುವುದು.

ಸಾಲಕ್ಕೆ ಹೊಣೆಯಾಗುವ ಅವಿವೇಕದ ಕೃತ್ಯದಿಂದ ನಿಮ್ಮನ್ನು ಬಿಡಿಸಿಕೊಳ್ಳಿರಿ

ಜ್ಞಾನೋಕ್ತಿ ಪುಸ್ತಕದ 6ನೆಯ ಅಧ್ಯಾಯವು ಈ ಮಾತುಗಳಿಂದ ಆರಂಭವಾಗುತ್ತದೆ: “ಮಗನೇ, ನೀನು ನೆರೆಯವನಿಗೆ ಹೊಣೆಯಾಗಿದ್ದರೆ ಪರನಿಗಾಗಿ ಕೈ ಮೇಲೆ ಕೈ ಹಾಕಿದ್ದರೆ ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿದ್ದೀ; ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ. ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು; ನಡೆ, ತ್ವರೆಪಡು, ಆ ನೆರೆಯವನನ್ನು ಕಾಡು.”​—⁠ಜ್ಞಾನೋಕ್ತಿ 6:​1-3.

ಬೇರೆಯವರ, ಅದರಲ್ಲೂ ಅಪರಿಚಿತರ ವ್ಯಾಪಾರ ವ್ಯವಹಾರಗಳಲ್ಲಿ ಒಳಗೂಡುವುದರ ವಿರುದ್ಧ ಈ ಜ್ಞಾನೋಕ್ತಿಯು ಎಚ್ಚರಿಕೆ ನೀಡುತ್ತದೆ. ಹೌದು, ಇಸ್ರಾಯೇಲ್ಯರು ‘ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ ಅವನು ಬದುಕಿಕೊಳ್ಳುವಂತೆ’ ಅವನಿಗೆ ಸಹಾಯ ನೀಡಬೇಕಾಗಿತ್ತು. (ಯಾಜಕಕಾಂಡ 25:​35-38) ಆದರೆ, ಉದ್ಯಮಶೀಲರಾದ ಕೆಲವು ಇಸ್ರಾಯೇಲ್ಯರು ಸಂಶಯಾಸ್ಪದವಾದ ವ್ಯಾಪಾರ ವಹಿವಾಟುಗಳಲ್ಲಿ ಒಳಗೂಡಿದರು. ಅಷ್ಟುಮಾತ್ರವಲ್ಲ, ತಮಗೋಸ್ಕರ ‘ಜಾಮೀನು ನಿಲ್ಲುವಂತೆ’ ಇತರರ ಮನವೊಪ್ಪಿಸಿದರು. ಹೀಗೆ ಆ ಇಸ್ರಾಯೇಲ್ಯರು ತಮ್ಮ ಸಾಲಕ್ಕೆ ಈ ಜಾಮೀನುದಾರರನ್ನು ಹೊಣೆಗಾರರನ್ನಾಗಿ ಮಾಡಿದರು. ಇಂದು ಸಹ ತದ್ರೀತಿಯ ಸನ್ನಿವೇಶಗಳು ಬರಬಹುದು. ಉದಾಹರಣೆಗೆ, ಯಾವುದು ಅಪಾಯಕರ ಸಾಲವೆಂದು ಹಣಕಾಸಿನ ಸಂಸ್ಥೆಗಳು ಪರಿಗಣಿಸುತ್ತವೋ ಆ ಸಾಲವನ್ನು ಕೊಡುವುದಕ್ಕೆ ಮೊದಲು, ಒಬ್ಬ ಜೊತೆಸಹಿದಾರನು ಸಹಿಹಾಕುವಂತೆ ಆ ಸಂಸ್ಥೆಗಳು ಕೇಳಿಕೊಳ್ಳಬಹುದು. ಇತರರ ಪರವಾಗಿ ಆ ಕಟ್ಟುಪಾಡಿಗೆ ಸಹಿಹಾಕಲು ತ್ವರೆಪಡುವುದು ಎಷ್ಟು ಅವಿವೇಕತನವಾಗಿದೆ! ಅಷ್ಟೇಕೆ, ಇದು ನಮ್ಮನ್ನು ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಸಬಹುದು, ಮತ್ತು ಬ್ಯಾಂಕ್‌ಗಳಿಂದ ಹಾಗೂ ಸಾಲಕೊಟ್ಟ ಇತರರಿಂದ ನಮ್ಮ ಹೆಸರು ಸಹ ಹಾಳಾಗಬಹುದು!

ಆರಂಭದಲ್ಲಿ ವಿವೇಕಯುತವಾಗಿ ಕಂಡುಬಂದರೂ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮೂರ್ಖತನವಾಗಿ ತೋರುವಂತಹ ಒಂದು ಕ್ರಮವನ್ನು ಕೈಗೊಂಡಿರುವ ಬಿಕ್ಕಟ್ಟಿಗೆ ನಾವು ಸಿಲುಕಿರುವಲ್ಲಿ ಆಗೇನು? ಈ ವಿಷಯದಲ್ಲಿ, ಸ್ವಾಭಿಮಾನವನ್ನು ಬದಿಗೊತ್ತಿ, ಪಟ್ಟುಬಿಡದೆ ವಿನಂತಿಸಿಕೊಳ್ಳುವ ಮೂಲಕ “ಆ ನೆರೆಯವನನ್ನು ಕಾಡು” ಎಂಬ ಬುದ್ಧಿವಾದವನ್ನು ಕೊಡಲಾಗಿದೆ. ಅಂದರೆ ಆ ಸಮಸ್ಯೆಯನ್ನು ಸರಿಪಡಿಸಲು ನಮ್ಮಿಂದಾದಷ್ಟು ಪ್ರಯತ್ನವನ್ನು ನಾವು ಮಾಡಬೇಕು. ಒಂದು ಪುಸ್ತಕವು ಹೀಗೆ ಹೇಳುತ್ತದೆ: “ನಿಮ್ಮ ಕರಾರುಪತ್ರ (ಬಾಂಡ್‌)ವು ನಿಮ್ಮ ವಿರುದ್ಧವಾಗಲಿ ಇಲ್ಲವೇ ನಿಮ್ಮ ಕುಟುಂಬದ ವಿರುದ್ಧವಾಗಲಿ ತೊಂದರೆಯನ್ನು ಉಂಟುಮಾಡದಂತೆ, ನಿಮ್ಮ ಎದುರಾಳಿಯೊಂದಿಗೆ ರಾಜಿಮಾಡಿಕೊಂಡು, ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿ ಸರ್ವ ಪ್ರಯತ್ನವನ್ನೂ ಮಾಡಿರಿ.” ಮತ್ತು ಅದನ್ನು ಆದಷ್ಟು ಬೇಗನೆ ಮಾಡಬೇಕು. ಏಕೆಂದರೆ ಅರಸನು ಇನ್ನೂ ಹೇಳುವುದು: “ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ, ರೆಪ್ಪೆಗಳನ್ನು ಮುಚ್ಚದಿರು; ಬೇಟೆಗಾರನ ಕೈಯಿಂದ ಜಿಂಕೆಯು ಓಡುವಂತೆಯೂ ಪಕ್ಷಿಯು ಹಾರಿ ಹೋಗುವ ಹಾಗೂ ತಪ್ಪಿಸಿಕೋ.” (ಜ್ಞಾನೋಕ್ತಿ 6:​4, 5) ಹೀಗೆ, ಮೂರ್ಖತನದ ಒಂದು ಒಪ್ಪಂದದಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕಿಂತಲೂ ಅದರಿಂದ ತಪ್ಪಿಸಿಕೊಳ್ಳುವುದೇ ಒಳ್ಳೇದು.

ಇರುವೆಯಂತೆ ಉದ್ಯೋಗಶೀಲರಾಗಿರಿ

“ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ” ಎಂದು ಸೊಲೊಮೋನನು ಬುದ್ಧಿಹೇಳುತ್ತಾನೆ. ಒಂದು ಚಿಕ್ಕ ಇರುವೆಯ ನಡವಳಿಕೆಯಿಂದ ನಾವು ಯಾವ ಜ್ಞಾನವನ್ನು ಪಡೆದುಕೊಳ್ಳಸಾಧ್ಯವಿದೆ? ಇದಕ್ಕೆ ಅರಸನು ಉತ್ತರಿಸುವುದು: “ಅದಕ್ಕೆ ನಾಯಕ ಅಧಿಕಾರಿ ಪ್ರಭುಗಳಿಲ್ಲದಿದ್ದರೂ ಸುಗ್ಗಿಯಲ್ಲಿ ತನ್ನ ತೀನಿಯನ್ನು ಕೂಡಿಸಿಡುವದು, ಕೊಯ್ಲಿನ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವದು.”​—⁠ಜ್ಞಾನೋಕ್ತಿ 6:​6-8.

ಇರುವೆಗಳು ತುಂಬ ಕ್ರಮಬದ್ಧ ರೀತಿಯಲ್ಲಿ ಕಾರ್ಯನಡಿಸುತ್ತವೆ ಮತ್ತು ಪರಸ್ಪರ ಸಹಕಾರ ನೀಡುತ್ತವೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಸಹಜ ಪ್ರವೃತ್ತಿಯಿಂದ ಅವು ಭವಿಷ್ಯತ್ಕಾಲಕ್ಕಾಗಿ ಆಹಾರವನ್ನು ಕೂಡಿಸಿಡುತ್ತವೆ. ಇರುವೆಗಳಿಗೆ “ನಾಯಕ ಅಧಿಕಾರಿ ಪ್ರಭುಗಳಿಲ್ಲ.” ಆದರೆ ರಾಣಿ ಇರುವೆ ಇರುತ್ತದೆ ಎಂಬುದು ನಿಜವಾದರೂ, ಮೊಟ್ಟೆಗಳನ್ನಿಡುವುದು ಮತ್ತು ಇರುವೆಗಳ ಸಮೂಹಕ್ಕೆ ತಾಯಿಯಾಗಿರುವುದು ಮಾತ್ರ ಅದರ ಕೆಲಸವಾಗಿದೆ. ಅವಳೆಂದೂ ಇತರ ಇರುವೆಗಳ ಮೇಲೆ ಅಧಿಕಾರ ನಡೆಸುವುದಿಲ್ಲ ಅಥವಾ ಅವುಗಳನ್ನು ಅಂಕೆಯಲ್ಲಿಟ್ಟುಕೊಳ್ಳುವುದಿಲ್ಲ. ಅವುಗಳ ಕೆಲಸವನ್ನು ಮಾರ್ಗದರ್ಶಿಸಲು ಅಥವಾ ಅವು ಮಾಡುವ ಕೆಲಸದ ಮೇಲೆ ಮೇಲ್ವಿಚಾರಣೆ ನಡೆಸಲು ಯಾವುದೇ ಮೇಲ್ವಿಚಾರಕನಿಲ್ಲವಾದರೂ, ಇರುವೆಗಳು ತಮ್ಮ ಕೆಲಸವನ್ನು ನಿರಾಯಾಸವಾಗಿ ಮುಂದುವರಿಸುತ್ತಾ ಇರುತ್ತವೆ.

ಇರುವೆಗಳಂತೆ ನಾವು ಸಹ ಉದ್ಯೋಗಶೀಲರಾಗಿರಬಾರದೊ? ನಮ್ಮ ಕೆಲಸದ ವಿಷಯದಲ್ಲಿ ಯಾರಾದರೂ ಮೇಲ್ವಿಚಾರಣೆಮಾಡುತ್ತಿರಲಿ ಇಲ್ಲದಿರಲಿ, ಕಷ್ಟಪಟ್ಟು ಕೆಲಸಮಾಡುವುದು ಹಾಗೂ ನಮ್ಮ ಕೆಲಸದಲ್ಲಿ ಪ್ರಗತಿಯನ್ನು ಮಾಡಲು ಶ್ರಮಿಸುವುದರಿಂದ ನಮಗೇ ಒಳ್ಳೇದಾಗುತ್ತದೆ. ಹೌದು, ಶಾಲೆಯಲ್ಲಿ, ನಮ್ಮ ಕೆಲಸದ ಸ್ಥಳದಲ್ಲಿ ಮತ್ತು ಆತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವಾಗ, ನಮ್ಮಿಂದಾದಷ್ಟು ಅತ್ಯುತ್ತಮವಾದ ರೀತಿಯಲ್ಲಿ ನಾವು ಕಾರ್ಯನಿರ್ವಹಿಸಬೇಕು. ತನ್ನ ಉದ್ಯೋಗಶೀಲತೆಯಿಂದ ಇರುವೆಯು ಪ್ರಯೋಜನವನ್ನು ಪಡೆದುಕೊಳ್ಳುವಂತೆಯೇ, ನಾವು ಸಹ ‘ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಸುಖವನ್ನನುಭವಿಸಬೇಕೆಂಬುದು’ ದೇವರ ಉದ್ದೇಶವಾಗಿದೆ. (ಪ್ರಸಂಗಿ 3:​13, 22; 5:18) ಹೀಗೆ, ಕಷ್ಟಪಟ್ಟು ಕೆಲಸಮಾಡುವುದರ ಪ್ರತಿಫಲಗಳೇನೆಂದರೆ, ಶುದ್ಧ ಮನಸ್ಸಾಕ್ಷಿ ಮತ್ತು ವೈಯಕ್ತಿಕ ಸಂತೃಪ್ತಿಯೇ.​—⁠ಪ್ರಸಂಗಿ 5:⁠12.

“ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ?” ಎಂಬ ಎರಡು ಭಾವೋತ್ತೇಜಕ ಪ್ರಶ್ನೆಗಳನ್ನು ಉಪಯೋಗಿಸುವ ಮೂಲಕ, ಸೊಲೊಮೋನನು ಒಬ್ಬ ಸೋಮಾರಿಯನ್ನು ತನ್ನ ಸೋಮಾರಿತನದಿಂದ ಎಚ್ಚರಿಸಲು ಪ್ರಯತ್ನಿಸುತ್ತಾನೆ. ಸೋಮಾರಿಯ ಮಾತುಗಳನ್ನು ಅನುಕರಿಸುತ್ತಾ ಅರಸನು ಕೂಡಿಸುವುದು: “ಇನ್ನು ಸ್ವಲ್ಪ ನಿದ್ದೆ, ಇನ್ನು ತುಸು ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.” (ಜ್ಞಾನೋಕ್ತಿ 6:​9-11) ಒಬ್ಬ ಸೋಮಾರಿಯು ಮೇಲ್ಮುಖವಾಗಿ ಮಲಗಿಕೊಂಡಿರುವಾಗ, ಅವನ ಮೇಲೆ ಬಡತನವು ದಾರಿಗಳ್ಳನಷ್ಟು ವೇಗದಲ್ಲಿ ಬಂದು ಮುತ್ತಿಕೊಳ್ಳುತ್ತದೆ, ಹಾಗೂ ಕೊರತೆಯು ಪಂಜುಗಳ್ಳನಂತೆ ಅವನ ಮೇಲೆ ಆಕ್ರಮಣಮಾಡುತ್ತದೆ. ಅಷ್ಟುಮಾತ್ರವಲ್ಲ, ಒಬ್ಬ ಸೋಂಬೇರಿಯ ಹೊಲಗಳು, ಅತಿ ಬೇಗನೆ ಮುಳ್ಳುಗಿಡಗಳು ಹಾಗೂ ಕಳೆಗಳಿಂದ ಮುಚ್ಚಿಹೋಗುತ್ತವೆ. (ಜ್ಞಾನೋಕ್ತಿ 24:​30, 31) ಸ್ವಲ್ಪ ಕಾಲಾವಧಿಯಲ್ಲಿಯೇ ಅವನ ವ್ಯಾಪಾರ ಉದ್ಯಮಗಳು ನಷ್ಟವನ್ನು ಅನುಭವಿಸುತ್ತವೆ. ಒಬ್ಬ ಯಜಮಾನನು ಎಷ್ಟರ ತನಕ ಆಲಸಿಯನ್ನು ಸಹಿಸಿಕೊಂಡಾನು? ಮತ್ತು ತುಂಬ ಸೋಮಾರಿಯಾಗಿರುವ ವಿದ್ಯಾರ್ಥಿಯೊಬ್ಬನು ಶಾಲೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಾನೆ ಎಂದು ನಿರೀಕ್ಷಿಸಸಾಧ್ಯವಿದೆಯೊ?

ಪ್ರಾಮಾಣಿಕರಾಗಿರಿ

ಸಮಾಜದಲ್ಲಿ ಒಬ್ಬ ವ್ಯಕ್ತಿಯ ಒಳ್ಳೆಯ ಹೆಸರನ್ನು ಹಾಗೂ ದೇವರೊಂದಿಗಿನ ಅವನ ಸಂಬಂಧವನ್ನು ಹಾಳುಮಾಡುವ ಇನ್ನೊಂದು ರೀತಿಯ ನಡವಳಿಕೆಯ ಕುರಿತು ಸಹ ಸೊಲೊಮೋನನು ತಿಳಿಸುತ್ತಾನೆ. ಅವನು ಹೇಳುವುದು: “ನೀಚನೂ ದುಷ್ಟನೂ ಆಗಿರುವ ಅವನ ನಡತೆಯನ್ನು ನೋಡು; ಸೊಟ್ಟುಬಾಯಿಯವನಾಗಿದ್ದಾನೆ [“ವಂಚನಾತ್ಮಕವಾಗಿ ಮಾತಾಡುವವನಾಗಿದ್ದಾನೆ,” NW], ಕಣ್ಣನ್ನು ಮಿಟಕಿಸುತ್ತಾನೆ, ಕಾಲಿನಿಂದ ಕೆರೆಯುತ್ತಾನೆ, ಬೆರಳ ಸನ್ನೆಮಾಡುತ್ತಾನೆ. ಅವನ ಮನಸ್ಸಿನಲ್ಲಿರುವದು ದ್ರೋಹವೇ; ಕೇಡನ್ನು ನಿರಂತರ ಕಲ್ಪಿಸುತ್ತಾನೆ. ಜಗಳದ ಬೀಜವನ್ನು ಬಿತ್ತುತ್ತಾನೆ.”​—⁠ಜ್ಞಾನೋಕ್ತಿ 6:​12-14.

ಇದು ಒಬ್ಬ ವಂಚಕನ ಕುರಿತಾದ ವರ್ಣನೆಯಾಗಿದೆ. ಒಬ್ಬ ಸುಳ್ಳುಗಾರನು ಸಾಮಾನ್ಯವಾಗಿ ತನ್ನ ಅಸತ್ಯಮಾರ್ಗಗಳನ್ನು ಮರೆಮಾಚಲು ಪ್ರಯತ್ನಿಸುತ್ತಾನೆ. ಹೇಗೆ? “ವಂಚನಾತ್ಮಕವಾಗಿ ಮಾತಾಡುವ” ಮೂಲಕವಾಗಿ ಮಾತ್ರವಲ್ಲ, ದೇಹಭಾಷೆಯಿಂದಲೂ ಅವನು ಅದನ್ನು ತೋರಿಸುತ್ತಾನೆ. ಒಬ್ಬ ವಿದ್ವಾಂಸನು ಸೂಚಿಸುವುದು: “ಭಾವಾಭಿನಯಗಳು, ಸ್ವರಭಾರ ಮತ್ತು ಮುಖಭಾವಗಳು ಸಹ ವಂಚನೆಯ ರೂಪಗಳೋಪಾದಿ ಪರಿಗಣಿಸಲ್ಪಡುತ್ತವೆ; ಪ್ರಾಮಾಣಿಕತೆಯ ಮೊಗವಾಡದ ಹಿಂದೆ ದ್ರೋಹಿ ಮನೋಭಾವ ಹಾಗೂ ವೈಷಮ್ಯವು ಇರುತ್ತದೆ.” ಕೆಲಸಕ್ಕೆ ಬಾರದ ಅಂತಹ ಮನುಷ್ಯನು ಯಾವಾಗಲೂ ಕೇಡನ್ನು ಕಲ್ಪಿಸುತ್ತಿರುತ್ತಾನೆ ಮತ್ತು ಎಲ್ಲ ಸಮಯದಲ್ಲಿ ಜಗಳವನ್ನು ಆರಂಭಿಸುತ್ತಾನೆ. ಆದರೆ ಇದರ ಪರಿಣಾಮವಾಗಿ ಅವನಿಗೆ ಏನು ಸಂಭವಿಸುವುದು?

“ಆದಕಾರಣ ಅವನಿಗೆ ತಟ್ಟನೆ ವಿಪತ್ತು ಸಂಭವಿಸುವದು, ಏಳದ ಹಾಗೆ ಫಕ್ಕನೆ ಮುರಿಯಲ್ಪಡುವನು” ಎಂದು ಇಸ್ರಾಯೇಲಿನ ಅರಸನು ಉತ್ತರಿಸುತ್ತಾನೆ. (ಜ್ಞಾನೋಕ್ತಿ 6:15) ಆ ಸುಳ್ಳುಗಾರನ ಕೃತ್ಯಗಳು ಬಯಲಿಗೆ ತರಲ್ಪಟ್ಟಾಗ, ಅವನ ಹೆಸರು ಹಾಳಾಗುತ್ತದೆ. ಆಗ ಪುನಃ ಅವನ ಮೇಲೆ ಯಾರು ಭರವಸೆಯಿಟ್ಟಾರು? ಅವನ ಅಂತ್ಯ ಸ್ಥಿತಿಯು ದಾರುಣವಾಗಿರುವುದು. ಏಕೆಂದರೆ ಯಾರು ನಿತ್ಯಮರಣವನ್ನು ಅನುಭವಿಸಲಿದ್ದಾರೋ ಆ ಪಟ್ಟಿಯಲ್ಲಿ ‘ಎಲ್ಲಾ ಸುಳ್ಳುಗಾರರು’ ಸಹ ಸೇರಿದ್ದಾರೆ. (ಪ್ರಕಟನೆ 21:⁠8) ಆದುದರಿಂದ, ನಾವು ‘ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳೋಣ.’​—⁠ಇಬ್ರಿಯ 13:⁠18.

ಯೆಹೋವನು ಹಗೆಮಾಡುವುದನ್ನು ನೀವೂ ಹಗೆಮಾಡಿರಿ

ಕೆಟ್ಟತನವನ್ನು ಹಗೆಮಾಡುವುದು, ನಮ್ಮ ಹೆಸರನ್ನು ಹಾಳುಮಾಡುವಂತಹ ಕೃತ್ಯಗಳನ್ನು ನಡಿಸುವುದರಿಂದ ನಮ್ಮನ್ನು ತಡೆಯುತ್ತದೆ. ಆದುದರಿಂದ, ಯಾವುದು ಕೆಟ್ಟದ್ದಾಗಿದೆಯೋ ಅದನ್ನು ಹಗೆಮಾಡುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬಾರದೋ? ಆದರೆ ನಿರ್ದಿಷ್ಟವಾಗಿ ನಾವು ಯಾವುದನ್ನು ಹಗೆಮಾಡಬೇಕು? ಈ ವಿಷಯದಲ್ಲಿ ಸೊಲೊಮೋನನು ಹೇಳುವುದು: “ಯೆಹೋವನು ಹಗೆಮಾಡುವ ವಸ್ತುಗಳು ಆರು ಇವೆ. ಹೌದು, ಏಳು ಆತನಿಗೆ ಅಸಹ್ಯಗಳಾಗಿ ತೋರುತ್ತವೆ. ಯಾವವಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷರಕ್ತವನ್ನು ಸುರಿಸುವ ಕೈ, ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತ್ವರೆಪಡುವ ಕಾಲು, ಅಸತ್ಯವಾಡುವ ಸುಳ್ಳುಸಾಕ್ಷಿ, ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು, ಈ ಏಳೇ.”​—⁠ಜ್ಞಾನೋಕ್ತಿ 6:​16-19.

ಜ್ಞಾನೋಕ್ತಿಯು ಉಲ್ಲೇಖಿಸುವಂತಹ ಏಳು ವಿಷಯಗಳು ಮೂಲಭೂತವಾಗಿವೆ ಮತ್ತು ವಾಸ್ತವದಲ್ಲಿ ಅವು ಎಲ್ಲ ರೀತಿಯ ತಪ್ಪುಗಳನ್ನು ಒಳಗೊಳ್ಳುತ್ತವೆ. “ಹೆಮ್ಮೆಯ ಕಣ್ಣು” ಮತ್ತು “ದುರಾಲೋಚನೆಗಳನ್ನು ಕಲ್ಪಿಸುವ ಹೃದಯ”​—⁠ಇವು ಮನಸ್ಸಿನಲ್ಲಿ ನಡೆಸಲ್ಪಡುವ ಪಾಪಗಳಾಗಿವೆ. “ಸುಳ್ಳಿನ ನಾಲಿಗೆ” ಮತ್ತು “ಅಸತ್ಯವಾಡುವ ಸುಳ್ಳುಸಾಕ್ಷಿ”ಗಳು ಪಾಪಭರಿತ ಮಾತುಗಳಾಗಿವೆ. “ನಿರ್ದೋಷರಕ್ತವನ್ನು ಸುರಿಸುವ ಕೈ” ಮತ್ತು “ಕೇಡುಮಾಡಲು ತ್ವರೆಪಡುವ ಕಾಲು”ಗಳು ದುಷ್ಕೃತ್ಯಗಳಿಗೆ ಸೂಚಿತವಾಗಿವೆ. ಅಷ್ಟುಮಾತ್ರವಲ್ಲ, ಶಾಂತಿಯಿಂದ ಒಟ್ಟುಗೂಡಿ ಜೀವಿಸುತ್ತಿರುವ ಜನರ ನಡುವೆ ಜಗಳವನ್ನು ಉಂಟುಮಾಡುವುದರಲ್ಲಿ ಆನಂದವನ್ನು ಕಂಡುಕೊಳ್ಳುವಂತಹ ವ್ಯಕ್ತಿಯನ್ನು ಯೆಹೋವನು ತುಂಬ ಹಗೆಮಾಡುತ್ತಾನೆ. ಮಾನವರು ತಮ್ಮ ದುಷ್ಕೃತ್ಯಗಳನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇರುವುದರಿಂದ, ಈ ಪಟ್ಟಿಯು ಪೂರ್ಣಗೊಳಿಸಲ್ಪಟ್ಟಿಲ್ಲ ಎಂಬುದನ್ನು, ಯೆಹೋವನು ಹಗೆಮಾಡುವ ವಿಷಯಗಳ ಸಂಖ್ಯೆಯು ಆರರಿಂದ ಏಳಕ್ಕೆ ಏರಿರುವುದು ಸೂಚಿಸುತ್ತದೆ.

ವಾಸ್ತವದಲ್ಲಿ, ದೇವರು ಹಗೆಮಾಡುವಂತಹ ವಿಷಯಗಳ ಕಡೆಗೆ ನಾವು ದ್ವೇಷವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ದೃಷ್ಟಾಂತಕ್ಕಾಗಿ, ನಾವು ‘ಹೆಮ್ಮೆಯ ಕಣ್ಣನ್ನು’ ಅಥವಾ ಅಹಂಕಾರ ತೋರಿಸುವುದನ್ನು ದೂರಮಾಡಬೇಕು. ಮತ್ತು ಹಾನಿಕರವಾದ ಹರಟೆಮಾತನ್ನು ಸಹ ನಿಲ್ಲಿಸಬೇಕು, ಏಕೆಂದರೆ ಇದು ಸುಲಭವಾಗಿ “ಒಡಹುಟ್ಟಿದವರಲ್ಲಿ ಜಗಳಗಳನ್ನು” ಉಂಟುಮಾಡಬಲ್ಲದು. ಅಹಿತಕರವಾದ ಗಾಳಿಸುದ್ದಿಯನ್ನು, ಅನುಚಿತವಾದ ಟೀಕೆಯನ್ನು, ಅಥವಾ ಸುಳ್ಳುಮಾತುಗಳನ್ನು ಹಬ್ಬಿಸುವ ಮೂಲಕ ನಾವು ‘ನಿರ್ದೋಷರಕ್ತವನ್ನು ಸುರಿಸದೆ’ ಇರಬಹುದಾದರೂ, ಇನ್ನೊಬ್ಬ ವ್ಯಕ್ತಿಯ ಒಳ್ಳೆಯ ಹೆಸರನ್ನಂತೂ ಖಂಡಿತವಾಗಿಯೂ ಹಾಳುಮಾಡಸಾಧ್ಯವಿದೆ.

‘ಅವಳ ಬೆಡಗನ್ನು ಮೋಹಿಸದಿರು’

ತನ್ನ ಬುದ್ಧಿವಾದದ ಮುಂದಿನ ಭಾಗವನ್ನು ಸೊಲೊಮೋನನು ಈ ಮಾತುಗಳಿಂದ ಆರಂಭಿಸುತ್ತಾನೆ: “ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಉಪದೇಶವನ್ನು ಬಿಡಬೇಡ. ಅವುಗಳನ್ನು ನಿನ್ನ ಹೃದಯಕ್ಕೆ ನಿರಂತರವಾಗಿ ಬಂಧಿಸು, ನಿನ್ನ ಕಂಠಕ್ಕೆ ಧರಿಸಿಕೋ.” ಏಕೆ? ಏಕೆಂದರೆ “ನೀನು ನಡೆಯುವಾಗ ಆ ಉಪದೇಶವು ನಿನ್ನನ್ನು ನಡಿಸುವದು, ಮಲಗಿಕೊಂಡಾಗ ಕಾಯುವದು, ಎಚ್ಚರಗೊಂಡಾಗ ನಿನ್ನೊಂದಿಗೆ ಮಾತಾಡುವದು.”​—⁠ಜ್ಞಾನೋಕ್ತಿ 6:​20-22.

ಹಾಗಾದರೆ, ದೇವರ ವಾಕ್ಯದ ಶಿಕ್ಷಣಕ್ಕನುಸಾರ ಬೆಳೆಸಲ್ಪಡುವುದು, ಲೈಂಗಿಕ ಅನೈತಿಕತೆಯ ಪಾಶದಿಂದ ನಮ್ಮನ್ನು ನಿಜವಾಗಿಯೂ ಕಾಪಾಡುತ್ತದೋ? ಹೌದು, ಕಾಪಾಡಬಲ್ಲದು. ಏಕೆಂದರೆ ನಮಗೆ ಈ ಆಶ್ವಾಸನೆಯು ಕೊಡಲ್ಪಟ್ಟಿದೆ: “ಆಜ್ಞೆಯೇ ದೀಪ, ಉಪದೇಶವೇ ಬೆಳಕು, ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ. ಅದು ಕೆಟ್ಟ ಹೆಂಗಸಿನಿಂದಲೂ ಪರಸ್ತ್ರೀಯ ನಾಲಿಗೆಯ ಸಿಹಿನುಡಿಯಿಂದಲೂ ನಿನ್ನನ್ನು ರಕ್ಷಿಸತಕ್ಕದ್ದಾಗಿದೆ.” (ಜ್ಞಾನೋಕ್ತಿ 6:​23, 24) ಆದುದರಿಂದ, ದೇವರ ವಾಕ್ಯದ ಸಲಹೆಯನ್ನು ನಾವು ಜ್ಞಾಪಿಸಿಕೊಳ್ಳಬೇಕು ಮತ್ತು ‘ನಮ್ಮ ಕಾಲಿಗೆ ದೀಪವೂ ದಾರಿಗೆ ಬೆಳಕೂ ಆಗಿ’ ಅದನ್ನು ಉಪಯೋಗಿಸಬೇಕು. ಆಗ ಅದು, ಅನೈತಿಕತೆಯ ವಿಷಯದಲ್ಲಿ ಒಬ್ಬ ಕೆಟ್ಟ ಸ್ತ್ರೀಯ ಅಥವಾ ಒಬ್ಬ ಕೆಟ್ಟ ಪುರುಷನ ಸಿಹಿನುಡಿಯ ಕರೆಗಳನ್ನು ಪ್ರತಿರೋಧಿಸುವಂತೆ ನಮಗೆ ಸಹಾಯಮಾಡುವುದು.​—⁠ಕೀರ್ತನೆ 119:105.

ಜ್ಞಾನಿಯಾದ ಅರಸನು ಸಲಹೆ ನೀಡುವುದು: “ನಿನ್ನ ಹೃದಯವು ಅವಳ ಬೆಡಗನ್ನು ಮೋಹಿಸದಿರಲಿ, ಅವಳು ತನ್ನ ಕಣ್ಣುರೆಪ್ಪೆಗಳಿಂದ ನಿನ್ನನ್ನು ವಶಮಾಡಿಕೊಂಡಾಳು, ನೋಡಿಕೋ.” ಏಕೆ ಎಚ್ಚರಿಕೆ ವಹಿಸಬೇಕು? ಏಕೆಂದರೆ “ವೇಶ್ಯೆಯಿಂದ ಯಾವನಿಗಾದರೂ ಒಂದು ರೊಟ್ಟಿ ಮಾತ್ರ ಗತಿಯಾಗುವದು, ಪರಸ್ತ್ರೀಯೋ ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು.”​—⁠ಜ್ಞಾನೋಕ್ತಿ 6:​25, 26.

ಇಲ್ಲಿ ಸೊಲೊಮೋನನು ವ್ಯಭಿಚಾರಿಣಿಯಾಗಿರುವ ಒಬ್ಬ ಪತ್ನಿಯನ್ನು ವೇಶ್ಯೆ ಎಂದು ಸಂಬೋಧಿಸಿ ಮಾತಾಡುತ್ತಿದ್ದಾನೋ? ಇರಬಹುದು. ಅಥವಾ ಒಬ್ಬ ವೇಶ್ಯೆಯೊಂದಿಗೆ ಅನೈತಿಕತೆಯನ್ನು ನಡಿಸುವುದರಿಂದಾಗುವ ಫಲಿತಾಂಶಗಳು ಹಾಗೂ ಇನ್ನೊಬ್ಬ ಪುರುಷನ ಹೆಂಡತಿಯೊಂದಿಗೆ ಮಾಡಲ್ಪಡುವ ವ್ಯಭಿಚಾರದಿಂದ ಉಂಟಾಗುವ ಫಲಿತಾಂಶಗಳ ನಡುವಿನ ವ್ಯತ್ಯಾಸದ ಕುರಿತು ಅವನು ತಿಳಿಸುತ್ತಿರಬಹುದು. ಒಬ್ಬ ವೇಶ್ಯೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿರುವ ವ್ಯಕ್ತಿಗೆ “ಒಂದು ರೊಟ್ಟಿ ಮಾತ್ರ ಗತಿಯಾಗುವದು,” ಅಂದರೆ ಅವನು ತೀರ ಬಡತನವನ್ನು ಅನುಭವಿಸುವನು. ಇದರ ಫಲಿತಾಂಶವಾಗಿ ಅವನು ವೇದನಾಭರಿತವೂ ಮಾರಕವೂ ಆದ ಏಡ್ಸ್‌ನಂತಹ ರತಿರವಾನಿತ ರೋಗಗಳಿಗೆ ತುತ್ತಾಗಬಹುದು. ಇನ್ನೊಂದು ಕಡೆಯಲ್ಲಿ, ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಇನ್ನೊಬ್ಬ ವ್ಯಕ್ತಿಯ ವಿವಾಹ ಸಂಗಾತಿಯೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡಿರುವ ಒಬ್ಬ ವ್ಯಕ್ತಿಯು, ಇನ್ನೂ ಗಂಭೀರವಾದ ಅಪಾಯಕ್ಕೆ ಒಳಗಾಗಸಾಧ್ಯವಿದೆ. ವ್ಯಭಿಚಾರಿಣಿಯಾದ ಒಬ್ಬ ಪತ್ನಿಯು, ತನ್ನ ಕಾನೂನುಬಾಹಿರ ಸಂಗಾತಿಯ “ಅಮೂಲ್ಯವಾದ ಜೀವ”ವನ್ನು ಅಪಾಯಕ್ಕೆ ಒಡ್ಡುತ್ತಾಳೆ. ಈ ವಿಷಯದಲ್ಲಿ ಒಂದು ಪರಾಮರ್ಶೆ ಪುಸ್ತಕವು ಹೇಳುವುದು: “ವ್ಯಭಿಚಾರಮಾಡುವುದರಲ್ಲಿ ಜೀವನಾಯುಷ್ಯವು ಕಡಿಮೆಯಾಗುವುದಕ್ಕಿಂತಲೂ ಹೆಚ್ಚಿನದ್ದು . . . ಸೇರಿರುತ್ತದೆ. ಅಂತಹ ಪಾಪಿಯು ಮರಣ ದಂಡನೆಗೆ ಬದ್ಧನಾಗಿದ್ದಾನೆ.” (ಯಾಜಕಕಾಂಡ 20:10; ಧರ್ಮೋಪದೇಶಕಾಂಡ 22:22) ಏನೇ ಆಗಲಿ, ಅಂತಹ ಸ್ತ್ರೀಯ ಬಾಹ್ಯ ಸೌಂದರ್ಯವು ಎಷ್ಟೇ ಮೋಹಕವಾಗಿರಲಿ, ಅವಳನ್ನು ಬಯಸುವುದು ತಪ್ಪಾಗಿದೆ.

‘ಮಡಲಲ್ಲಿ ಬೆಂಕಿಯನ್ನಿಟ್ಟುಕೊಳ್ಳದಿರು’

ವ್ಯಭಿಚಾರದ ಅಪಾಯವನ್ನು ಇನ್ನೂ ಒತ್ತಿಹೇಳಲಿಕ್ಕಾಗಿ ಸೊಲೊಮೋನನು ಕೇಳುವುದು: “ಮಡಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವದಿಲ್ಲವೇ? ಧಗಧಗಿಸುವ ಕೆಂಡದ ಮೇಲೆ ನಡೆದರೆ ಕಾಲು ಬೇಯುವದಿಲ್ಲವೋ?” ಈ ದೃಷ್ಟಾಂತದ ಅರ್ಥವನ್ನು ವಿವರಿಸುತ್ತಾ ಅವನು ಹೇಳುವುದು: “ನೆರೆಯವನ ಹೆಂಡತಿಯ ಹತ್ತಿರ ಹೋಗುವವನಿಗೆ ಹೀಗೆಯೇ ಆಗುವದು, ಯಾವನು ಅವಳನ್ನು ಮುಟ್ಟುವನೋ ಅವನು ದಂಡನೆಯನ್ನು ಹೊಂದದೇ ಇರನು.” (ಜ್ಞಾನೋಕ್ತಿ 6:​27-29) ಇಂತಹ ಒಬ್ಬ ಪಾಪಿಯು ಖಂಡಿತವಾಗಿಯೂ ದಂಡನೆಯನ್ನು ಅನುಭವಿಸುವನು.

“ಕಳ್ಳನು ಹೊಟ್ಟೆಗಿಲ್ಲದೆ ಹಸಿವೆಯನ್ನು ನೀಗಿಸಲು ಕಳವು ಮಾಡಿದರೆ ಜನರು ಅಷ್ಟೇನೂ ಹೀಯಾಳಿಸರು” ಎಂದು ನಮಗೆ ಜ್ಞಾಪಕ ಹುಟ್ಟಿಸಲಾಗಿದೆ. ಆದರೂ, “ಅವನ ತಪ್ಪು ಬೈಲಾದರೆ ಅವನು ಏಳರಷ್ಟು ಕೊಡಬೇಕಾಗುವದು, ಅಥವಾ ತನ್ನ ಮನೆಯ ಆಸ್ತಿಯನ್ನೆಲ್ಲಾ ತೆತ್ತೇ ತೀರಬೇಕು.” (ಜ್ಞಾನೋಕ್ತಿ 6:​30, 31) ಪುರಾತನ ಇಸ್ರಾಯೇಲಿನಲ್ಲಿ, ಒಬ್ಬ ಕಳ್ಳನು ತಾನು ಕದ್ದದ್ದಕ್ಕೆ ಪ್ರತಿಯಾಗಿ ಈಡುಕೊಡಬೇಕಾಗಿತ್ತು. ಆ ಕಳ್ಳನ ಬಳಿ ಇರುವುದನ್ನೆಲ್ಲ ಮಾರಬೇಕಾಗಿ ಬಂದರೂ ಅವನು ಕದ್ದದ್ದನ್ನು ಹಿಂದಿರುಗಿಸಲೇಬೇಕಾಗಿತ್ತು. * ಹಾಗಾದರೆ, ತಾನು ಮಾಡಿರುವ ನಷ್ಟವನ್ನು ಯಾವ ವಿಧದಲ್ಲೂ ಹಿಂದಿರುಗಿಸಲಾರದಂಥ ಒಬ್ಬ ವ್ಯಭಿಚಾರಿಯು ಇನ್ನೆಷ್ಟು ಹೆಚ್ಚಿನ ಶಿಕ್ಷೆಗೆ ಅರ್ಹನಾಗಿದ್ದಾನೆ!

“ವ್ಯಭಿಚಾರಿಯೋ ಕೇವಲ ಬುದ್ಧಿಶೂನ್ಯನು” ಎಂದು ಸೊಲೊಮೋನನು ಹೇಳುತ್ತಾನೆ. ಬುದ್ಧಿಶೂನ್ಯನಾಗಿರುವ ಒಬ್ಬ ಮನುಷ್ಯನಿಗೆ ಒಳ್ಳೆಯ ವಿವೇಚನಾಶಕ್ತಿಯಿರುವುದಿಲ್ಲ, ಏಕೆಂದರೆ ಅವನು “ತನ್ನನ್ನೇ ನಾಶಪಡಿಸಿಕೊಳ್ಳುವನು.” (ಜ್ಞಾನೋಕ್ತಿ 6:32) ಹೊರತೋರಿಕೆಗೆ ಅವನು ಒಳ್ಳೆಯ ಹೆಸರನ್ನು ಪಡೆದುಕೊಂಡಿರುವಂತೆ ಕಂಡುಬರಬಹುದಾದರೂ, ಆಂತರ್ಯದಲ್ಲಿ ಅವನಿಗೆ ಯೋಗ್ಯವಾದ ವಿವೇಚನಾಶಕ್ತಿಯ ಕೊರತೆಯಿರುತ್ತದೆ.

ಆದುದರಿಂದ, ಒಬ್ಬ ವ್ಯಭಿಚಾರಿಯು ಅನುಭವಿಸುವ ಪರಿಣಾಮಗಳಲ್ಲಿ ಹೆಚ್ಚಿನದ್ದು ಒಳಗೂಡಿದೆ. “ಅವನಿಗೆ ಗಾಯವೂ ಅವಮಾನವೂ ಆಗುವವು, ಅವನ ಕೆಟ್ಟ ಹೆಸರು ಎಂದಿಗೂ ಅಳಿಸಲ್ಪಡದು. ಏಕೆಂದರೆ ಮತ್ಸರವು ಪತಿಗೆ ಕ್ರೋಧವನ್ನು ಉಂಟು ಮಾಡುತ್ತದೆ, ಮುಯ್ಯಿತೀರಿಸತಕ್ಕ ದಿನದಲ್ಲಿ ವ್ಯಭಿಚಾರಿಯನ್ನು ಉಳಿಸನು. ಅವನು ಯಾವ ಈಡನ್ನೂ ಮುಟ್ಟನು; ಎಷ್ಟು ಲಂಚಕೊಟ್ಟರೂ ಒಪ್ಪನು.”​—⁠ಜ್ಞಾನೋಕ್ತಿ 6:​33-35.

ತಾನು ಕದ್ದಿರುವ ವಸ್ತುಗಳಿಗೆ ಪ್ರತಿಯಾಗಿ ಕಳ್ಳನು ಹಣವನ್ನೋ ವಸ್ತುಗಳನ್ನೋ ಹಿಂದಿರುಗಿಸಸಾಧ್ಯವಿದೆ. ಆದರೆ ವ್ಯಭಿಚಾರಿಯು ಏನನ್ನೂ ಹಿಂದಿರುಗಿ ಕೊಡಲಾರನು. ವ್ಯಭಿಚಾರಿಯು ಯಾವ ಸ್ತ್ರೀಯೊಂದಿಗೆ ವ್ಯಭಿಚಾರವನ್ನು ಮಾಡಿರುತ್ತಾನೋ, ಆ ಸ್ತ್ರೀಯ ಕೋಪಗೊಂಡಿರುವ ಪತಿಗೆ ಅವನು ಯಾವ ಪರಿಹಾರವನ್ನು ಕೊಡಸಾಧ್ಯವಿದೆ? ಆ ತಪ್ಪಿತಸ್ಥನು ಎಷ್ಟೇ ಬೇಡಿಕೊಂಡರೂ ಅವನಿಗೆ ಸಹಾನುಭೂತಿ ಸಿಗಲಾರದು. ಯಾವ ರೀತಿಯಲ್ಲಿಯೂ ಒಬ್ಬ ವ್ಯಭಿಚಾರಿಯು ತನ್ನ ಪಾಪದ ನಷ್ಟಪರಿಹಾರವನ್ನು ಹಿಂದಿರುಗಿಸಲಾರನು. ಆ ವ್ಯಭಿಚಾರಿಯ ಹೆಸರಿನ ಮೇಲೆ ಹೊರಿಸಲ್ಪಟ್ಟ ಕಳಂಕ ಹಾಗೂ ಅಗೌರವವು ಸಹ ಹಾಗೆಯೇ ಉಳಿಯುತ್ತದೆ. ಅಷ್ಟುಮಾತ್ರವಲ್ಲ, ತಾನು ಯಾವ ದಂಡನೆಗೆ ಅರ್ಹನಾಗಿದ್ದಾನೋ ಅದರಿಂದ ಅವನು ತನ್ನನ್ನು ವಿಮೋಚಿಸಿಕೊಳ್ಳಲಾರನು ಅಥವಾ ತನ್ನನ್ನು ಸ್ವತಂತ್ರಗೊಳಿಸಿಕೊಳ್ಳಲಾರನು.

ವ್ಯಭಿಚಾರದಿಂದ ಮತ್ತು ನಮ್ಮ ಒಳ್ಳೆಯ ಹೆಸರನ್ನು ಹಾಳುಮಾಡುವಂತಹ ಹಾಗೂ ದೇವರ ಹೆಸರಿಗೆ ಕಳಂಕ ತರುವಂತಹ ಯಾವುದೇ ನಡತೆ ಹಾಗೂ ಮನೋಭಾವಗಳಿಂದ ದೂರವಿರುವುದು ಎಷ್ಟು ವಿವೇಕಯುತವಾದದ್ದಾಗಿದೆ! ಆದುದರಿಂದ, ನಾವೆಂದೂ ಮೂರ್ಖತನದಿಂದ ಸಾಲಕ್ಕೆ ಹೊಣೆಗಾರರಾಗದಂತೆ ಜಾಗ್ರತೆವಹಿಸೋಣ. ಉದ್ಯೋಗಶೀಲತೆ ಮತ್ತು ಸತ್ಯತೆಗಳಿಂದ ನಾವು ಒಳ್ಳೆಯ ಹೆಸರನ್ನು ಪಡೆದುಕೊಳ್ಳೋಣ. ಅಷ್ಟುಮಾತ್ರವಲ್ಲ, ಯೆಹೋವನು ಹಗೆಮಾಡುವಂತಹ ವಿಷಯಗಳನ್ನು ನಾವು ಸಹ ಹಗೆಮಾಡಲು ಪ್ರಯತ್ನಿಸುತ್ತಾ, ಆತನೊಂದಿಗೆ ಮತ್ತು ನಮ್ಮ ಜೊತೆಮಾನವರೊಂದಿಗೆ ಒಂದು ಒಳ್ಳೆಯ ಹೆಸರನ್ನು ಮಾಡಿಕೊಳ್ಳೋಣ.

[ಪಾದಟಿಪ್ಪಣಿ]

^ ಪ್ಯಾರ. 28 ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ಕಳ್ಳನು ತಾನು ಕದ್ದದ್ದಕಿಂತ ಎರಡರಷ್ಟು, ನಾಲ್ಕರಷ್ಟು ಅಥವಾ ಐದರಷ್ಟು ಹಿಂದೆ ಕೊಡಬೇಕಾಗಿತ್ತು. (ವಿಮೋಚನಕಾಂಡ 22:​1-4) “ಏಳರಷ್ಟು” ಎಂಬ ಶಬ್ದವು, ಪೂರ್ಣ ರೀತಿಯ ಜುಲ್ಮಾನೆಯನ್ನು, ಅಂದರೆ ಅವನು ಕದ್ದದ್ದಕ್ಕಿಂತ ಅನೇಕ ಪಟ್ಟು ಹೆಚ್ಚನ್ನು ಸೂಚಿಸಬಹುದು.

[ಪುಟ 25ರಲ್ಲಿರುವ ಚಿತ್ರ]

ಒಂದು ಸಾಲಕ್ಕೆ ಜೊತೆಸಾಕ್ಷಿದಾರರಾಗಿ ಸಹಿ ಹಾಕುವ ವಿಷಯದಲ್ಲಿ ಜಾಗರೂಕತೆಯಿಂದಿರಿ

[ಪುಟ 26ರಲ್ಲಿರುವ ಚಿತ್ರ]

ಇರುವೆಯಂತೆ ಉದ್ಯೋಗಶೀಲರಾಗಿರಿ

[ಪುಟ 27ರಲ್ಲಿರುವ ಚಿತ್ರ]

ಹಾನಿಕರವಾದ ಹರಟೆಮಾತುಗಳ ವಿರುದ್ಧ ಎಚ್ಚರಿಕೆಯಿಂದಿರಿ