ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫಿಜಿ ದ್ವೀಪಗಳಲ್ಲಿ ರಾಜ್ಯದ ಸಂದೇಶವನ್ನು ಘೋಷಿಸುವುದು

ಫಿಜಿ ದ್ವೀಪಗಳಲ್ಲಿ ರಾಜ್ಯದ ಸಂದೇಶವನ್ನು ಘೋಷಿಸುವುದು

ನಾವಾದರೋ ನಂಬುವವರಾಗಿದ್ದೇವೆ

ಫಿಜಿ ದ್ವೀಪಗಳಲ್ಲಿ ರಾಜ್ಯದ ಸಂದೇಶವನ್ನು ಘೋಷಿಸುವುದು

ಯೇಸು ಕ್ರಿಸ್ತನು ಒಂದೊಮ್ಮೆ ಎರಡು ದಾರಿಗಳ ಬಗ್ಗೆ ಮಾತಾಡಿದನು. ಒಂದು ಅಗಲವಾದದ್ದಾಗಿದ್ದು, ಮರಣಕ್ಕೆ ನಡೆಸುತ್ತದೆ. ಇನ್ನೊಂದು ಇಕ್ಕಟ್ಟಾಗಿದ್ದು, ನಿತ್ಯಜೀವಕ್ಕೆ ನಡೆಸುವಂತಹದ್ದಾಗಿದೆ. (ಮತ್ತಾಯ 7:​13, 14) ಸರಿಯಾದ ದಾರಿಯನ್ನು ಜನರು ಆರಿಸಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ, ಯೆಹೋವ ದೇವರು ತನ್ನ ರಾಜ್ಯದ ಸುವಾರ್ತೆಯು ಜಗತ್ತಿನ ಎಲ್ಲೆಡೆಯೂ ಸಾರಲ್ಪಡಬೇಕೆಂದು ಹೇಳಿದನು. (ಮತ್ತಾಯ 24:14) ಆದುದರಿಂದ, ಈಗ ಎಲ್ಲೆಡೆಯೂ ಇರುವ ಜನರು ರಾಜ್ಯದ ಸಂದೇಶಕ್ಕೆ ಕಿವಿಗೊಡುತ್ತಿದ್ದಾರೆ. ‘ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿರುವ’ ಮೂಲಕ ಕೆಲವರು ನಿತ್ಯಜೀವದ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದಾರೆ. (ಇಬ್ರಿಯ 10:39) ಫಿಜಿಯಲ್ಲಿ ಮತ್ತು ದಕ್ಷಿಣ ಪೆಸಿಫಿಕ್‌ನ ಹತ್ತಿರವಿರುವ ಕೆಲವು ದ್ವೀಪಗಳಲ್ಲಿ ನಿತ್ಯಜೀವಕ್ಕಾಗಿರುವ ಮಾರ್ಗವನ್ನು ಆರಿಸಿಕೊಂಡವರ ಕುರಿತಾದ ವರದಿಗಳನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.

ಅವರು ಯೆಹೋವನಲ್ಲಿ ಭರವಸೆಯಿಟ್ಟರು

ಮಿರಿ ಎಂಬವಳು 1964ರಲ್ಲಿ ರಾಜ್ಯದ ಸಂದೇಶವನ್ನು ಕೇಳಿಸಿಕೊಂಡಳು. ಆಗ ಅವಳು ಶಾಲೆಗೆ ಹೋಗುತ್ತಿದ್ದಳು. ಅವಳಿದ್ದ ದ್ವೀಪವು ದೂರದಲ್ಲಿ ಎಲ್ಲೋ ಒಂದು ಮೂಲೆಯಲ್ಲಿದ್ದದ್ದರಿಂದ, ಯೆಹೋವನ ಸಾಕ್ಷಿಗಳ ಸಂಪರ್ಕವೇ ಅವಳಿಗೆ ಆಗಿರಲಿಲ್ಲ. ಹೇಗೋ ಕಟ್ಟಕಡೆಗೆ, ಬೈಬಲಿನ ಬಗ್ಗೆ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಶಕ್ತಳಾದಳು. ಆಗಲೇ, ಅವಳ ವಿವಾಹವು ಆ ಹಳ್ಳಿಯ ಮುಖ್ಯಸ್ಥನೊಟ್ಟಿಗೆ ನಡೆಯಿತು. ಆದರೆ ಬೈಬಲಿನ ತತ್ತ್ವಗಳಿಗೆ ಹೊಂದಿಕೆಯಲ್ಲಿ ತಾನು ಜೀವಿಸಲು ಬಯಸುತ್ತೇನೆ ಎಂಬ ನಿರ್ಧಾರವನ್ನು ಅವಳು ತೆಗೆದುಕೊಂಡ ಕಾರಣ, ಅವಳ ಪತಿ ಹಾಗೂ ಸಂಬಂಧಿಕರು ಮಿರಿಯನ್ನು ಬಹಳ ಕ್ರೂರ ರೀತಿಯಲ್ಲಿ ಉಪಚರಿಸಿದರು. ಹಳ್ಳಿಯವರು ಅವಳನ್ನು ಕಾಲಿನ ಕಸದಂತೆ ನೋಡಿದರು. ಇಷ್ಟೆಲ್ಲ ಆದರೂ, ಅವಳು 1991ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು.

ಸ್ವಲ್ಪ ಸಮಯದರೊಳಗೆ, ಮಿರಿಯ ಪತಿಯಾದ ಚೋಸೂಆ ಮೆತ್ತಗಾದನು ಮಾತ್ರವಲ್ಲ, ಅವಳು ಮಕ್ಕಳೊಂದಿಗೆ ಬೈಬಲ್‌ ಅಭ್ಯಾಸವನ್ನು ಮಾಡುತ್ತಿದ್ದ ಸಮಯದಲ್ಲಿ ಅವನೂ ಜೊತೆಗೂಡಲಾರಂಭಿಸಿದನು. ಹೀಗೆ ಅವನು ಮೆತೊಡಿಸ್ಟ್‌ ಚರ್ಚಿಗೆ ಹೋಗುವುದನ್ನು ಸಹ ನಿಲ್ಲಿಸಿಬಿಟ್ಟನು. ಆದರೆ ಅವನು ಹಳ್ಳಿಯ ಮುಖ್ಯಸ್ಥನಾಗಿದ್ದರಿಂದ, ವಾರದಲ್ಲಿ ಆಗುತ್ತಿದ್ದ ಹಳ್ಳಿಯ ಪಂಚಾಯಿತಿಗಳಲ್ಲಿ ಒಳಗೂಡುತ್ತಿದ್ದನು. ಹಳ್ಳಿಗರ ಕಣ್ಣುಗಳಲ್ಲಿಯಾದರೋ ಚೋಸೂಆ ಮಹಾ ಅಪರಾಧಿಯೂ ನಿಷ್ಠಾಹೀನನೂ ಆದನು. ಏಕೆಂದರೆ ಫಿಜಿಯರ ಹಳ್ಳಿಗಾಡಿನ ಜೀವನದಲ್ಲಿ ಮೆತೊಡಿಸ್ಟ್‌ ಚರ್ಚು ಅವಿಭಾಜ್ಯ ಅಂಗವಾಗಿತ್ತು. ಆದುದರಿಂದ, ಮತ್ತೆ ಮೊದಲಿದ್ದ ಧರ್ಮಕ್ಕೆ ಬಂದು ಸೇರಿಕೊಳ್ಳುವಂತೆ ಅಲ್ಲಿನ ಪಾಸ್ಟರ್‌ ಚೋಸೂಆನನ್ನು ಒತ್ತಾಯಿಸತೊಡಗಿದನು.

ನಾನು ಮತ್ತು ನನ್ನ ಕುಟುಂಬದವರು, ಯೆಹೋವ ದೇವರನ್ನು “ಆತ್ಮದಿಂದಲೂ ಸತ್ಯದಿಂದಲೂ” (NW) ಆರಾಧಿಸಲು ನಿಶ್ಚಯಿಸಿದ್ದೇವೆ ಎಂದು ಚೋಸೂಆ ಧೈರ್ಯದಿಂದ ಹೇಳಿದನು. (ಯೋಹಾನ 4:24) ಮುಂದಿನ ಪಂಚಾಯಿತಿಯಲ್ಲಿ, ಚೋಸೂಆ ಮತ್ತು ಅವನ ಕುಟುಂಬದವರನ್ನು ಸಮಾಜದಿಂದ ಬಹಿಷ್ಕರಿಸಲಾಗಿದೆಯೆಂದೂ ಅವರು ಹಳ್ಳಿಯನ್ನು ಬಿಟ್ಟುಹೋಗಬೇಕೆಂದೂ ಪ್ರಧಾನ ಮುಖ್ಯಸ್ಥನು ತೀರ್ಪು ಕೊಟ್ಟನು. ಇನ್ನು ಏಳು ದಿವಸಗಳೊಳಗೆ ಮನೆಮಠ, ಹೊಲಗದ್ದೆ, ಬೆಳೆ ಎಲ್ಲವನ್ನೂ ಬಿಟ್ಟು ಹೋಗುವಂತೆ ಅವರಿಗೆ ಹೇಳಲಾಯಿತು.

ಆಗ ಮತ್ತೊಂದು ದ್ವೀಪದಲ್ಲಿದ್ದ ಸಹೋದರರು ಅವರ ನೆರವಿಗೆ ಬಂದರು. ಅವರಿಗೆ ಉಳಿಯಲು ಸ್ಥಳವನ್ನು ಮತ್ತು ಬೆಳೆಗೆ ಜಮೀನನ್ನು ಕಂಡುಕೊಳ್ಳಲು ಅವರು ಸಹಾಯಮಾಡಿದರು. ಈಗ ಚೋಸೂಆ ಮತ್ತು ಅವನ ಹಿರಿಯ ಮಗನು ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಹಾಗೂ ಮತ್ತೊಬ್ಬ ಮಗನು ಅಸ್ನಾತ ಪ್ರಚಾರಕನಾಗಿ ಸೇವೆಸಲ್ಲಿಸುತ್ತಿದ್ದಾನೆ. ಮಿರಿಯು ಇತ್ತೀಚೆಗೆ ರೆಗ್ಯುಲರ್‌ ಪಯನೀಯರ್‌ (ಪೂರ್ಣಸಮಯದ ರಾಜ್ಯ ಘೋಷಕಳು) ಆದಳು. ಅವರು ಯೆಹೋವನಿಗೆ ಸೇವೆಸಲ್ಲಿಸುವ ಆಯ್ಕೆಯನ್ನು ಮಾಡಿದ್ದಕ್ಕಾಗಿ, ತಮ್ಮ ಸ್ಥಾನಮಾನ, ಆಸ್ತಿಪಾಸ್ತಿಗಳನ್ನೆಲ್ಲ ಕಳೆದುಕೊಳ್ಳಬೇಕಾಯಿತು. ಆದರೆ ಅಪೊಸ್ತಲ ಪೌಲನಂತೆ, ಈಗ ಪಡೆದುಕೊಂಡಿರುವ ವಿಷಯಕ್ಕೆ ಯಾವುದೂ ಸರಿಸಾಟಿಯಿಲ್ಲ ಎಂದು ಅವರು ನೆನಸುತ್ತಾರೆ.​—⁠ಫಿಲಿಪ್ಪಿ 3:⁠8.

ಮನಸ್ಸಾಕ್ಷಿಯನ್ನು ಒಳಗೊಳ್ಳುವ ಒಂದು ಆಯ್ಕೆ

ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಗೆ ತಕ್ಕಂತೆ ನಡೆಯಲು ನಿರ್ಧಾರಮಾಡಿಕೊಂಡಿರುವುದಾದರೆ, ಅದಕ್ಕೆ ನಂಬಿಕೆ ಹಾಗೂ ಧೈರ್ಯ ಬೇಕು. ಹೊಸದಾಗಿ ದೀಕ್ಷಾಸ್ನಾನಿತಳಾದ ಸೂರಂಗ್‌ಳ ವಿಷಯದಲ್ಲಿ ಇದು ಸತ್ಯವಾಗಿತ್ತು. ಈ ಯುವತಿಯು ಕಿರಿಬಾಟಿಯ ದ್ವೀಪಗಳಲ್ಲಿ ಒಂದಾದ ಟರಾವದಲ್ಲಿ ವಾಸಿಸುತ್ತಾಳೆ. ಅವಳು ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಕೆಲಸಮಾಡುತ್ತಿದ್ದಳು. ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಗೆ ವಿರುದ್ಧವಾದ ಕೆಲಸವೊಂದರಿಂದ ತನಗೆ ವಿನಾಯಿತಿ ಕೊಡಬೇಕೆಂದು ಅವಳು ಕೇಳಿಕೊಂಡಳು. ಆದರೆ ಅವಳಿಗೆ ಸಮ್ಮತಿ ದೊರೆಯಲಿಲ್ಲ. ಅದಕ್ಕೆ ಬದಲಾಗಿ, ಯೆಹೋವನ ಸಾಕ್ಷಿಗಳೇ ಇಲ್ಲದ ಒಂದು ದೂರದ ದ್ವೀಪಕ್ಕೆ ಹೋಗಿ ಅಲ್ಲಿ ಒಂದು ಚಿಕ್ಕ ವೈದ್ಯಕೀಯ ಕೇಂದ್ರದಲ್ಲಿ ಕೆಲಸಮಾಡುವಂತೆ ಹೇಳಲಾಯಿತು.

ಆ ದ್ವೀಪದಲ್ಲಿ, ಯಾರಾದರೂ ಹೊಸಬರು ಬಂದರೆ ಅವರು ಸ್ಥಳಿಕ ‘ಪ್ರೇತಕ್ಕೆ’ ಬಲಿಯನ್ನು ಅರ್ಪಿಸುವುದು ರೂಢಿಯಾಗಿತ್ತು. ಹಾಗೆ ಮಾಡದಿದ್ದಲ್ಲಿ ಅವರು ಸತ್ತುಹೋಗುವರು ಎಂಬ ನಂಬಿಕೆ ಆ ದ್ವೀಪದ ಜನರಲ್ಲಿತ್ತು. ಈ ರೀತಿಯ ವಿಗ್ರಹಾರಾಧನೆಯನ್ನು ಮಾಡಲು ಸೂರಂಗಳು ಒಪ್ಪದಿದ್ದುದರಿಂದ, ಕೋಪಗೊಂಡ ಆ ಪ್ರೇತವು ಬಂದು ಅವಳನ್ನು ಕತ್ತುಹಿಸುಕಿ ಸಾಯಿಸುವುದು ಎಂದು ಅಲ್ಲಿನ ಜನರು ನೆನಸಿದ್ದರು. ಸೂರಂಗಳಿಗೆ ಇಲ್ಲವೇ ಅವಳ ಜೊತೆಗಾರರಿಗೆ ಏನೂ ಸಂಭವಿಸಲಿಲ್ಲ, ಆಗ ಅವಳು ಅನೇಕರಿಗೆ ಒಂದು ಒಳ್ಳೇ ಸಾಕ್ಷಿಯನ್ನು ಕೊಡಲು ಶಕ್ತಳಾದಳು.

ಆದರೆ ಸೂರಂಗಳ ಕಷ್ಟವು ಅಲ್ಲಿಗೇ ಕೊನೆಗೊಳ್ಳಲಿಲ್ಲ. ಆ ದ್ವೀಪದ ಕೆಲವು ಯುವಕರು ಅಲ್ಲಿ ಬರುವ ಯುವತಿಯರನ್ನು ತಮ್ಮ ಕಡೆಗೆ ಆಕರ್ಷಿಸುವುದನ್ನು ಒಂದು ಸವಾಲಾಗಿ ನೆನಸುತ್ತಾರೆ. ಆದರೆ ಅವರ ಈ ಪ್ರಣಯ ಚೇಷ್ಟೆಗಳಿಗೆಲ್ಲ ಕಡಿವಾಣ ಹಾಕಿ, ದೇವರ ಕಡೆಗೆ ತನಗಿರುವ ಯಥಾರ್ಥತೆಯನ್ನು ಇವಳು ಕಾಪಾಡಿಕೊಂಡಳು. ಇಡೀ 24 ಗಂಟೆಯೂ ನರ್ಸ್‌ ಕರೆಯಾಳಾಗಿ ಇರಬೇಕಾಗಿದ್ದರೂ, ಒಬ್ಬ ರೆಗ್ಯುಲರ್‌ ಪಯನೀಯರ್‌ ಆಗಿಯೂ ಕೆಲಸಮಾಡಲು ಶಕ್ತಳಾಗಿದ್ದಳು. ಎಂತಹ ಒಂದು ಉತ್ತಮ ಉದಾಹರಣೆ!

ಸೂರಂಗಳು ಆ ದ್ವೀಪವನ್ನು ಬಿಟ್ಟುಹೋಗಲಿದ್ದುದರಿಂದ, ಅವಳ ಗೌರವಾರ್ಹವಾಗಿ ಒಂದು ಔತಣಕೂಟವನ್ನು ಏರ್ಪಡಿಸಲಾಗಿತ್ತು. ಆದರೆ ಅದಕ್ಕೆ ಮುಂಚೆ ಆ ಹಳ್ಳಿಯ ಹಿರಿಯರು, ತಮ್ಮನ್ನು ಭೇಟಿಮಾಡಲು ಬಂದ ಮೊದಲ ನಿಜವಾದ ಮಿಷನೆರಿ ಸುರಂಗಳಾಗಿದ್ದಳು ಎಂಬುದನ್ನು ಅವಳಿಗೆ ತಿಳಿಸಿದರು. ಬೈಬಲ್‌ ತತ್ತ್ವಗಳಿಗಾಗಿ ಅವಳು ದೃಢವಾದ ನಿಲುವನ್ನು ತೆಗೆದುಕೊಂಡ ಕಾರಣ, ಆ ದ್ವೀಪದಲ್ಲಿರುವ ಅನೇಕರು ರಾಜ್ಯದ ಸಂದೇಶಕ್ಕೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿದರು.

ದೈಹಿಕ ಕಷ್ಟದೆಸೆಗಳು

ಕೆಲವು ಹಳ್ಳಿಗಳು ದೂರದೂರದಲ್ಲಿರುವುದರಿಂದ ಸಾರುವ ಕೆಲಸದಲ್ಲಿ ಮತ್ತು ಕೂಟಗಳಿಗೆ ಹಾಜರಾಗುವುದರ ವಿಷಯದಲ್ಲಿ, ಯೆಹೋವನ ಸಾಕ್ಷಿಗಳು ಬಹಳಷ್ಟು ಶ್ರಮಪಡಬೇಕಾಗಿರುತ್ತದೆ. ನಾಲ್ಕು ಸ್ನಾತ ಸಾಕ್ಷಿಗಳ ಉದಾಹರಣೆಯನ್ನು ತೆಗೆದುಕೊಳ್ಳಿರಿ. ಅವರಲ್ಲಿ ಒಬ್ಬನು ಸಹೋದರ ಹಾಗೂ ಮೂವರು ಸಹೋದರಿಯರಾಗಿದ್ದಾರೆ. ಇವರು ಕೂಟಗಳಿಗೆ ಹೋಗಿಬರಲು ಗಂಟೆಗಟ್ಟಲೇ ಸಮಯವನ್ನು ಪ್ರಯಾಣದಲ್ಲಿಯೇ ಕಳೆಯುತ್ತಾರೆ. ಅವರು ಮೂರು ನದಿಗಳನ್ನು ದಾಟಬೇಕಾಗಿರುತ್ತದೆ. ನೀರು ತುಂಬ ಮೇಲಿರುವಾಗ, ಆ ಸಹೋದರನು ಬ್ಯಾಗುಗಳು, ಪುಸ್ತಕಗಳು ಮತ್ತು ಕೂಟಕ್ಕಾಗಿ ಧರಿಸುವಂತಹ ಉಡುಪುಗಳಿರುವ ಒಂದು ದೊಡ್ಡ ಬೇಯಿಸುವ ಮಡಕೆಯನ್ನು ಎಳೆದುಕೊಂಡು ನದಿಯನ್ನು ದಾಟುತ್ತಾನೆ. ಅದನ್ನು ಅಲ್ಲಿಟ್ಟು ಆ ಮೂವರು ಸಹೋದರಿಯರಿಗೆ ಸಹಾಯಮಾಡಲು ಪುನಃ ಈಜಿ ಬರುತ್ತಾನೆ.

ಕಿರಿಬಾಟಿಯ ನೋನೋನೂಟೀ ಎಂಬ ದೂರದ ದ್ವೀಪದಲ್ಲಿ ಕೂಟಗಳಿಗೆ ಹಾಜರಾಗುವ ಒಂದು ಸಣ್ಣ ಗುಂಪು ಇನ್ನೂ ಅನೇಕ ಕಷ್ಟದೆಸೆಗಳನ್ನು ಎದುರಿಸಬೇಕಾಗುತ್ತದೆ. ಅವರು ಒಂದು ಮನೆಯಲ್ಲಿ ಕೂಟಗಳನ್ನು ನಡೆಸುತ್ತಾರೆ. ಆ ಮನೆಯಲ್ಲಿ ಕೇವಲ ಏಳು ಅಥವಾ ಎಂಟು ಮಂದಿ ಮಾತ್ರ ಕುಳಿತುಕೊಳ್ಳಸಾಧ್ಯವಿದೆ. ಇನ್ನಿತರರು ಮನೆಯ ಹೊರಗಡೆ ಕುಳಿತುಕೊಂಡು, ಸಣ್ಣಸಣ್ಣ ತಂತಿಯಿಂದ ಮಾಡಲ್ಪಟ್ಟ ಗೋಡೆಗಳಿಂದ ಇಣುಕಿನೋಡುತ್ತಾರೆ. ಈ ಕೂಟದ ಸ್ಥಳವನ್ನು, ಹಳ್ಳಿಗರು ತಮ್ಮ ಭವ್ಯವಾದ ಚರ್ಚುಗಳಿಗೆ ಹೋಗಿಬರುವಾಗ ನೋಡಬಹುದಾಗಿದೆ. ಆದರೆ ಯೆಹೋವನ ಸೇವಕರಾದರೋ ಒಂದು ಅಂಶವನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅದೇನೆಂದರೆ, ದೇವರ ದೃಷ್ಟಿಯಲ್ಲಿ ಇಷ್ಟವಸ್ತುಗಳು ಕಟ್ಟಡಗಳಲ್ಲ, ಬದಲಿಗೆ ಜನರಾಗಿದ್ದಾರೆ ಎಂಬುದೇ. (ಹಗ್ಗಾಯ 2:⁠7) ಆ ದ್ವೀಪದಲ್ಲಿರುವ ಒಬ್ಬ ಸ್ನಾತ ಸಹೋದರಿಯು ತೀರ ವೃದ್ಧರಾಗಿದ್ದು, ಅವರಿಗೆ ತುಂಬ ದೂರ ನಡೆಯುವುದಕ್ಕೆ ಆಗುವುದಿಲ್ಲ. ಆದರೂ, ಅವರಿಗೆ ಸಾಕ್ಷಿ ಕಾರ್ಯಕ್ಕೆ ಕರೆದುಕೊಂಡು ಹೋಗಲು ಒಬ್ಬ ಯುವತಿಯು ಸಹಾಯಮಾಡುತ್ತಾಳೆ. ಇವಳು ಒಬ್ಬ ಅಸ್ನಾತ ಪ್ರಚಾರಕಳಾಗಿದ್ದು, ಈ ಸಹೋದರಿಯನ್ನು ತಳ್ಳುಗಾಡಿಯಲ್ಲಿ ಕರೆದುಕೊಂಡುಹೋಗುತ್ತಾಳೆ. ಸತ್ಯಕ್ಕಾಗಿ ಇವರು ಎಂತಹ ಗಣ್ಯತೆಯನ್ನು ತೋರಿಸುತ್ತಾರೆ!

ಫಿಜಿ ಮತ್ತು ಕಿರಿಬಾಟಿಯಲ್ಲಿ ಸೇವೆಸಲ್ಲಿಸುತ್ತಿರುವ ಸುಮಾರು 2,100ಕ್ಕಿಂತಲೂ ಹೆಚ್ಚಿನ ಪ್ರಚಾರಕರು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಮುಂದುವರಿಯಲು ಮನಸ್ಸುಮಾಡಿದ್ದಾರೆ. ಮತ್ತು ಇನ್ನೂ ಅನೇಕ ಜನರು “ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಲು” ಸಿದ್ಧರಾಗಿದ್ದಾರೆ ಎಂಬ ಆತ್ಮವಿಶ್ವಾಸವುಳ್ಳವರಾಗಿದ್ದಾರೆ.

[ಪುಟ 8ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಆಸ್ಟ್ರೇಲಿಯ

ಫಿಜಿ