ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶೀಘ್ರದಲ್ಲೇ ಹತಾಶೆಯಿಲ್ಲದ ಒಂದು ಲೋಕವು ಬರಲಿದೆ

ಶೀಘ್ರದಲ್ಲೇ ಹತಾಶೆಯಿಲ್ಲದ ಒಂದು ಲೋಕವು ಬರಲಿದೆ

ಶೀಘ್ರದಲ್ಲೇ ಹತಾಶೆಯಿಲ್ಲದ ಒಂದು ಲೋಕವು ಬರಲಿದೆ

ದಿನ ಕಳೆದಂತೆ ಜೀವನ ಮಾಡುವುದೇ ಬಹಳ ಕಷ್ಟವಾಗುತ್ತಿದೆ. ಆದ್ದರಿಂದ ಅನೇಕರು ನಿರಾಶರಾಗುತ್ತಾರೆ ಮತ್ತು ಆ ರೀತಿ ನಿರಾಶರಾಗುವುದಕ್ಕೆ ಸಹ ಹಲವಾರು ಕಾರಣಗಳಿವೆ. ಆಶಾಭಂಗವಾದಾಗ, ನಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ತುಂಬ ಕಷ್ಟ. ಅಷ್ಟೇ ಏಕೆ, ಜೀವವನ್ನು ಪ್ರೀತಿಸುವಂಥ ವ್ಯಕ್ತಿಗಳು ಕೂಡ ತೀರ ಅಸಂತುಷ್ಟರಾಗುವ ಸಾಧ್ಯತೆಯಿದೆ! ಇದರ ಕುರಿತಾಗಿ ಕೆಲವೊಂದು ಉದಾಹರಣೆಗಳನ್ನು ಗಮನಿಸಿ.

ಪ್ರಾಚೀನ ಕಾಲದಲ್ಲಿ, ಪ್ರವಾದಿಯಾಗಿದ್ದ ಮೋಶೆಯು ಎಷ್ಟು ನಿರಾಶನಾಗಿದ್ದನೆಂದರೆ, ಅವನು ದೇವರಿಗೆ ಹೀಗೆ ಹೇಳಿದನು: “ನನ್ನನ್ನು ಈಗಲೇ ಕೊಂದುಹಾಕಿಬಿಟ್ಟರೆ ಉಪಕಾರ; ನನಗಾಗುವ ದುರವಸ್ಥೆಯನ್ನು ನಾನು ನೋಡಲಾರೆನು.” (ಅರಣ್ಯಕಾಂಡ 11:15) ಶತ್ರುಗಳಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಪ್ರವಾದಿಯಾಗಿದ್ದ ಎಲೀಯನು ಕೂಗುತ್ತಾ ಹೇಳಿದ್ದು: “ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು.” (1 ಅರಸು 19:4) ಮತ್ತು ಪ್ರವಾದಿಯಾಗಿದ್ದ ಯೋನನು ಹೇಳಿದ್ದು: “ಯೆಹೋವನೇ, ನನ್ನ ಪ್ರಾಣವನ್ನು ತೆಗೆ; ನಾನು ಬದುಕುವದಕ್ಕಿಂತ ಸಾಯುವದೇ ಲೇಸು.” (ಯೋನ 4:⁠3) ಆದರೆ ಮೋಶೆಯೋ, ಎಲೀಯನೋ ಅಥವಾ ಯೋನನೋ ಆತ್ಮಹತ್ಯೆಯನ್ನು ಮಾಡಿಕೊಳ್ಳಲಿಲ್ಲ. ಏಕೆಂದರೆ, ಅವರೆಲ್ಲರಿಗೂ “ನರಹತ್ಯ ಮಾಡಬಾರದು” ಎಂಬ ದೇವರ ನಿಯಮವು ಗೊತ್ತಿತ್ತು. (ವಿಮೋಚನಕಾಂಡ 20:13) ಅವರಿಗೆ ದೇವರ ಮೇಲೆ ದೃಢವಾದ ನಂಬಿಕೆ ಇದ್ದದ್ದರಿಂದ, ಜೀವನದಲ್ಲಿ ಯಾವುದೇ ಸ್ಥಿತಿಯು ಆಶಾಹೀನವಾದದ್ದಲ್ಲ ಹಾಗೂ ಜೀವವು ದೇವರ ಕೊಡುಗೆಯಾಗಿದೆ ಎಂಬುದನ್ನು ಅರಿತಿದ್ದರು.

ಹಾಗಾದರೆ, ನಾವು ಇಂದು ಎದುರಿಸುವ ಸಮಸ್ಯೆಗಳ ಕುರಿತೇನು? ಕೆಲವೊಮ್ಮೆ ಭಾವನಾತ್ಮಕ ನೋವು ಇಲ್ಲವೇ ಶಾರೀರಿಕ ಸಮಸ್ಯೆಗಳಲ್ಲದೆ, ನಮ್ಮ ಕುಟುಂಬ ಸದಸ್ಯರು, ನೆರೆಹೊರೆಯವರು ಇಲ್ಲವೇ ಸಹೋದ್ಯೋಗಿಗಳು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳದಿದ್ದಾಗ, ಅದನ್ನು ಕೂಡ ನಾವು ಸಹಿಸಕೊಳ್ಳಬೇಕಾಗಿರಬಹುದು. ಇದರ ಕುರಿತಾಗಿ ಬೈಬಲ್‌ ಹೇಳುವುದು: ಜನರು “ಸಕಲವಿಧವಾದ ಅನ್ಯಾಯ ದುರ್ಮಾರ್ಗತನ ಲೋಲುಪ್ತಿ ದುಷ್ಟತ್ವಗಳಿಂದಲೂ ಹೊಟ್ಟೇಕಿಚ್ಚು ಕೊಲೆ ಜಗಳ ಮೋಸ ಹಗೆತನಗಳಿಂದಲೂ ತುಂಬಿದವರಾದರು. ಅವರು ಕಿವಿ ಊದುವವರೂ ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ತಂದೆತಾಯಿಗಳ ಮಾತನ್ನು ಕೇಳದವರೂ ವಿವೇಕವಿಲ್ಲದವರೂ ಮಾತಿಗೆ ತಪ್ಪುವವರೂ ಮಮತೆಯಿಲ್ಲದವರೂ ಕರುಣೆಯಿಲ್ಲದವರೂ” ಆಗಿರುವರು. (ರೋಮಾಪುರ 1:​28-31) ಇಂಥ ಜನರು ನಮ್ಮ ಸುತ್ತಮುತ್ತಲೂ ಇರುವುದರಿಂದ, ಪ್ರತಿದಿನವೂ ಜೀವನವೇ ಒಂದು ಹೊರೆಯಾಗಿರುವಂತೆ ಅನಿಸಬಹುದು. ಇವೆಲ್ಲವುಗಳಿಂದ ಬಿಡುಗಡೆ ಮತ್ತು ಸಾಂತ್ವನ ಬಯಸುವ ಜನರಿಗೆ ನಾವು ಹೇಗೆ ಸಹಾಯಮಾಡಬಹುದು?

ಕಿವಿಗೊಡಲು ಮನಸ್ಸುಳ್ಳವರಾಗಿರುವುದು

ಆಪತ್ತುಗಳು ಮತ್ತು ಕಷ್ಟತೊಂದರೆಗಳು ಬಂದೆರಗುವಾಗ, ಒಬ್ಬ ವ್ಯಕ್ತಿಯು ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳಸಾಧ್ಯವಿದೆ. ಒಬ್ಬ ಬುದ್ಧಿವಂತ ವ್ಯಕ್ತಿಯು ಹೇಳಿದ್ದು: “ದಬ್ಬಾಳಿಕೆಯು ಬುದ್ಧಿವಂತನನ್ನೂ ಹುಚ್ಚನ ಹಾಗೆ ವರ್ತಿಸುವಂತೆ ಮಾಡುವುದು.” (ಪ್ರಸಂಗಿ 7:⁠7, NW) ಆದುದರಿಂದ, ಆತ್ಮಹತ್ಯೆಯನ್ನು ಮಾಡಿಕೊಳ್ಳುವುದರ ಕುರಿತು ಮಾತಾಡುವ ವ್ಯಕ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅವನ ಸಮಸ್ಯೆಯು ಭಾವನಾತ್ಮಕ, ಶಾರೀರಿಕ, ಮಾನಸಿಕ, ಇಲ್ಲವೇ ಆತ್ಮಿಕ ಹೀಗೆ, ಯಾವುದೇ ರೀತಿಯದ್ದಾಗಿದ್ದರೂ, ಅದಕ್ಕೆ ಕೂಡಲೇ ಗಮನಕೊಡಬೇಕಾಗಿರಬಹುದು. ಚಿಕಿತ್ಸೆಗಳು ಮತ್ತು ಥೆರಪಿಗಳು ಬೇರೆ ಬೇರೆಯಾಗಿರುತ್ತವೆ ಎಂಬುದು ಖಂಡಿತ. ಆದರೆ, ಯಾವ ರೀತಿಯ ಥೆರಪಿಯನ್ನು ಆಯ್ಕೆಮಾಡಬೇಕು ಎಂಬ ವಿಷಯದಲ್ಲಿ ವೈಯಕ್ತಿಕ ತೀರ್ಮಾನವನ್ನು ಮಾಡಬೇಕು.​—⁠ಗಲಾತ್ಯ 6:⁠5.

ಒಬ್ಬ ವ್ಯಕ್ತಿಗೆ ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕೆಂಬ ಅನಿಸಿಕೆಗಳು ಬರುವುದಕ್ಕೆ ಅನೇಕ ಕಾರಣಗಳಿರಬಹುದು. ಕಾರಣವು ಏನೇ ಆಗಿರಲಿ, ಅಂಥವರು ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳುವುದಕ್ಕೆ ಅರ್ಥಮಾಡಿಕೊಳ್ಳುವ, ಸಹಾನುಭೂತಿಯುಳ್ಳ ಹಾಗೂ ತಾಳ್ಮೆಯುಳ್ಳ ಒಬ್ಬ ವ್ಯಕ್ತಿಯು ಇರಬೇಕು. ಅಂಥ ಸಹಾಯವು ತಾನೇ, ಆ ವ್ಯಕ್ತಿಯಲ್ಲಿ ಹೆಚ್ಚು ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡಬಲ್ಲದು. ಅವರು ಹೇಳುವುದನ್ನು ಕಿವಿಗೊಟ್ಟು ಕೇಳಲು ಮನಸ್ಸಿರುವ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಅವರಿಗೆ ಸಹಾಯಮಾಡಬಹುದು. ಜೀವನದಲ್ಲಿ ಆಶೆಯನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಸಹಾನುಭೂತಿ ಮತ್ತು ದಯೆಯೊಂದಿಗೆ, ದೇವರ ವಾಕ್ಯದಿಂದ ಹುರಿದುಂಬಿಸುವ ಮಾತುಗಳು ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ.

ಮನೋವ್ಯಥೆಯಲ್ಲಿರುವವರಿಗೆ ಆತ್ಮಿಕ ಸಹಾಯ

ಬೈಬಲನ್ನು ಓದುವುದು ಎಷ್ಟೊಂದು ಪ್ರೋತ್ಸಾಹನದಾಯಕವಾಗಿದೆ ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಆಶ್ಚರ್ಯವಾಗಬಹುದು. ಬೈಬಲ್‌ ಒಂದು ಮಾನಸಿಕ ಆರೋಗ್ಯದ ಕೈಪಿಡಿಯಲ್ಲ. ಆದರೆ ಜೀವವನ್ನು ಬೆಲೆಯುಳ್ಳದ್ದಾಗಿ ಕಾಣಲು ಅದು ನಮಗೆ ಸಹಾಯಮಾಡಬಲ್ಲದು. ಒಮ್ಮೆ ಅರಸನಾದ ಸೊಲೊಮೋನನು ಹೇಳಿದ್ದು: “ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹ.” (ಪ್ರಸಂಗಿ 3:​12, 13) ತೃಪ್ತಿದಾಯಕ ಕೆಲಸವು ಜೀವನಕ್ಕೆ ಹೆಚ್ಚು ಅರ್ಥವನ್ನು ಕೊಡುವುದಲ್ಲದೆ, ತಂಗಾಳಿ, ಸೂರ್ಯನ ಬೆಳಕು, ಹೂವುಗಳು, ಮರಗಳು, ಪಕ್ಷಿಗಳಂಥ ಸಾಮಾನ್ಯ ವಸ್ತುಗಳು ಕೂಡ ನಾವು ಅನುಭವಿಸಬಹುದಾದ ದೇವರ ಕೊಡುಗೆಗಳಾಗಿವೆ.

ಅದಕ್ಕಿಂತಲೂ ಇನ್ನೂ ಹೆಚ್ಚು ಆತ್ಮೋನ್ನತಿಯನ್ನು ಉಂಟುಮಾಡುವಂಥದ್ದು, ಬೈಬಲಿನಲ್ಲಿ ನೀಡಿರುವ ಆಶ್ವಾಸನೆಯಾಗಿದೆ. ಅದೇನೆಂದೆರೆ, ಯೆಹೋವ ದೇವರು ಮತ್ತು ಆತನ ಮಗನಾದ ಯೇಸು ಕ್ರಿಸ್ತನು ನಮ್ಮ ಕುರಿತು ಅಕ್ಕರೆಯುಳ್ಳವರಾಗಿದ್ದಾರೆ ಎಂಬುದೇ. (ಯೋಹಾನ 3:16; 1 ಪೇತ್ರ 5:​6, 7) ಇದರ ಕುರಿತು ಕೀರ್ತನೆಗಾರನು ಸರಿಯಾಗಿಯೇ ಹೇಳಿದ್ದು: “ಅನುದಿನವೂ ನಮ್ಮ ಭಾರವನ್ನು ಹೊರುವ ಕರ್ತನಿಗೆ ಸ್ತೋತ್ರವಾಗಲಿ. ನಮ್ಮನ್ನು ರಕ್ಷಿಸುವ ದೇವರು ಆತನೇ.” (ಕೀರ್ತನೆ 68:19) ನಾವು ಅಲ್ಪರೂ ಅನರ್ಹರೂ ಎಂಬ ಭಾವನೆ ನಮಗೆ ಬರಬಹುದಾದರೂ, ಅದಕ್ಕಾಗಿ ನಾವು ದೇವರಿಗೆ ಪ್ರಾರ್ಥಿಸುವಂತೆ ಆತನು ನಮ್ಮನ್ನು ಆಹ್ವಾನಿಸುತ್ತಾನೆ. ಯಾರು ದೀನರೂ ಮತ್ತು ಪ್ರಾಮಾಣಿಕರೂ ಆಗಿ ಆತನ ಸಹಾಯವನ್ನು ಕೋರುತ್ತಾರೋ, ಅಂಥವರು ಕಡೆಗಣಿಸಲ್ಪಡುವುದಿಲ್ಲ ಎಂಬ ವಿಷಯದಲ್ಲಿ ಖಚಿತರಾಗಿರಬಹುದು.

ಸಮಸ್ಯೆಯೇ ಇಲ್ಲದ ಪರಿಸ್ಥಿತಿಯನ್ನು ಇಂದು ಯಾರೂ ನಿರೀಕ್ಷಿಸಸಾಧ್ಯವಿಲ್ಲ. (ಯೋಬ 14:⁠1) ಆದರೂ, ತಮ್ಮ ಸಮಸ್ಯೆಗಳಿಗೆ ಆತ್ಮಹತ್ಯೆ ತಕ್ಕ ಪರಿಹಾರವಲ್ಲ ಎಂಬುದನ್ನು ದೇವರ ವಾಕ್ಯದ ಸತ್ಯವು ಅನೇಕರಿಗೆ ತೋರಿಸಿಕೊಟ್ಟಿದೆ. ಹತಾಶನಾಗಿದ್ದ ಸೆರೆಮನೆಯ ಯಜಮಾನನೊಬ್ಬನಿಗೆ ಅಪೊಸ್ತಲ ಪೌಲನು ಹೇಗೆ ಸಹಾಯಮಾಡಿದನು ಎಂಬುದನ್ನು ಸ್ವಲ್ಪ ಗಮನಿಸಿ. “ಸೆರೆಯ ಯಜಮಾನನು ನಿದ್ದೆಯಿಂದ ಎಚ್ಚತ್ತು ಸೆರೆಮನೆಯ ಕದಗಳು ತೆರೆದಿರುವದನ್ನು ಕಂಡು ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ ಕತ್ತಿಯನ್ನು ಹಿರಿದು ಆತ್ಮಹತ್ಯ ಮಾಡಿಕೊಳ್ಳಬೇಕೆಂದಿದ್ದನು.” ಒಂದು ಕ್ಷಣದಲ್ಲಿ, ಆ ಯಜಮಾನನು ಅವಮಾನ ಮತ್ತು ತನ್ನ ಕೆಲಸದಲ್ಲಿ ಅಜಾಗರೂಕನಾಗಿದ್ದಕ್ಕಾಗಿ ಸಿಗಬಹುದಾದ ಹಿಂಸಾತ್ಮಕ ಸಾವಿನ ಶಿಕ್ಷೆಗಿಂತ ಆತ್ಮಹತ್ಯೆಯೇ ಮೇಲು ಎಂಬ ತೀರ್ಮಾನಕ್ಕೆ ಬಂದಿದ್ದನು. ಆದರೆ ಪೌಲನು ಗಟ್ಟಿಯಾಗಿ ಕೂಗುತ್ತಾ ಅವನಿಗೆ, ‘ನೀನೇನೂ ಕೇಡು ಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ ಎಂದು ಹೇಳಿದನು.’ ಪೌಲನು ಅಲ್ಲಿಗೆ ತನ್ನ ಮಾತನ್ನು ನಿಲ್ಲಿಸಿಬಿಡಲಿಲ್ಲ. ನಿಜ ಹೇಳಬೇಕೆಂದೆರೆ, ಪೌಲ ಮತ್ತು ಸೀಲರು ಆ ಸೆರೆಮನೆಯ ಯಜಮಾನನನ್ನು ಸಮಾಧಾನ ಪಡಿಸಿದರು ಮತ್ತು ಅವನ ಪ್ರಶ್ನೆಗೆ ಉತ್ತರಿಸುತ್ತಾ, ಅವರು ಹೇಳಿದ್ದು: ‘ನಾನು ರಕ್ಷಣೆಹೊಂದುವದಕ್ಕೆ ಏನೂ ಮಾಡಬೇಕೆಂದು ಕೇಳಲು ಅವರು​—⁠ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು ಎಂದು ಹೇಳಿದರು.’ ಅನಂತರ, ಅವರು ಅವನಿಗೂ ಅವನ ಮನೆಯಲ್ಲಿದ್ದವರೆಲ್ಲರಿಗೂ ಯೆಹೋವನ ವಾಕ್ಯವನ್ನು ತಿಳಿಸಿದರು. ಅದರ ಪರಿಣಾಮವಾಗಿ, “ಅದೇ ಗಳಿಗೆಯಲ್ಲಿ . . . ತಾನು ತನ್ನವರೆಲ್ಲರ ಸಹಿತವಾಗಿ ದೀಕ್ಷಾಸ್ನಾನಮಾಡಿಸಿಕೊಂಡನು.” ಆ ಸೆರೆಯ ಯಜಮಾನ, ಮತ್ತು ಅವನ ಮನೆಯವರೆಲ್ಲರೂ ಹೆಚ್ಚು ಉಲ್ಲಾಸಿಸಿದರು ಮತ್ತು ಉದ್ದೇಶಭರಿತ ಜೀವನವನ್ನು ಕಂಡುಕೊಂಡರು.​—⁠ಅ. ಕೃತ್ಯಗಳು 16:​27-35.

ದೇವರು ದುಷ್ಟತ್ವಕ್ಕೆ ಕಾರಣನಲ್ಲ ಎಂಬುದನ್ನು ಇಂದು ತಿಳಿದುಕೊಂಡಿರುವುದು ಎಷ್ಟು ನೆಮ್ಮದಿಯನ್ನು ತರುವಂಥ ವಿಷಯವಾಗಿದೆ! ಆತನ ವಾಕ್ಯವು ದುಷ್ಟತನಕ್ಕೆ ಕಾರಣವಾಗಿರುವ ದುಷ್ಟ ಆತ್ಮನನ್ನು ತೋರಿಸಿಕೊಡುತ್ತದೆ. ಅವನು ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ . . . ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳವನು.’ ಆದರೆ, ಅವನಿಗೆ ಉಳಿದಿರುವ ಸಮಯವು ಸ್ವಲ್ಪವೇ ಆಗಿದೆ. (ಪ್ರಕಟನೆ 12:​9, 12) ಸೈತಾನ ಮತ್ತು ಅವನ ದೆವ್ವಗಳು, ಭೂಮಿಯ ನಿವಾಸಿಗಳ ಮೇಲೆ ತಂದಿರುವ ಎಲ್ಲಾ ಸಂಕಟಗಳಿಗೂ, ದೇವರು ಅಂತ್ಯವನ್ನು ತರುವನು. ಆಗ, ದೇವರು ವಾಗ್ದಾನ ಮಾಡಿರುವ ನೀತಿಯ ಹೊಸಲೋಕವು, ಆಶಾಹೀನಸ್ಥಿತಿ ಮತ್ತು ಆತ್ಮಹತ್ಯೆಯ ಹಿಂದಿರುವ ಎಲ್ಲಾ ಕಾರಣಗಳನ್ನು ಶಾಶ್ವತವಾಗಿ ತೆಗೆದುಹಾಕುವುದು.​—⁠2 ಪೇತ್ರ 3:⁠13.

ಸಹಾಯಕ್ಕಾಗಿ ಆಕ್ರಂದಿಸುತ್ತಿರುವ ಜೀವಗಳಿಗೆ ಸಮಾಧಾನ

ಎದೆಗುಂದಿರುವವರು ಈಗಲೂ ಸಹ ಶಾಸ್ತ್ರವಚನಗಳಿಂದ ಸಾಂತ್ವನವನ್ನು ಪಡೆದುಕೊಳ್ಳಬಹುದು. (ರೋಮಾಪುರ 15:⁠4) ಕೀರ್ತನೆಗಾರನಾದ ದಾವೀದನು ಹಾಡಿದ್ದು: “ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” (ಕೀರ್ತನೆ 51:17) ಹೌದು, ನಾವು ತಪ್ಪಿಸಿಕೊಳ್ಳಲಾಗದ ಕೆಲವೊಂದು ಕಷ್ಟತೊಂದರೆಗಳನ್ನು ಎದುರಿಸುತ್ತೇವೆ ಹಾಗೂ ಅಪರಿಪೂರ್ಣತೆಯ ಪರಿಣಾಮಗಳನ್ನು ಅನುಭವಿಸುತ್ತೇವೆ. ಆದರೆ ನಮ್ಮ ಪ್ರೀತಿಯುಳ್ಳ, ಕರುಣಾಮಯಿ, ಮತ್ತು ವಿವೇಕಯುತ ಸ್ವರ್ಗೀಯ ತಂದೆಯು, ಅಂಥ ಸಮಯದಲ್ಲಿ ನಾವು ಆತನ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದೇವೆ ಎಂಬ ಪುನರಾಶ್ವಾಸನೆಯನ್ನು ಕೊಡುತ್ತಾನೆ. ದೇವರು ನಮ್ಮ ಪ್ರಮುಖ ಸ್ನೇಹಿತನೂ ಶಿಕ್ಷಕನೂ ಆಗಿರಸಾಧ್ಯವಿದೆ. ನಾವು ಯೆಹೋವ ದೇವರೊಂದಿಗೆ ನಿಕಟವಾದ ಸಂಬಂಧವನ್ನು ಬೆಳೆಸಿಕೊಳ್ಳುವಲ್ಲಿ ಆತನು ಎಂದೂ ನಮ್ಮನ್ನು ನಿರಾಶೆಗೊಳಿಸನು. “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”​—⁠ಯೆಶಾಯ 48:⁠17.

ದೇವರನ್ನು ಅವಲಂಬಿಸಿರುವ ಅನೇಕರಿಗೆ ಸಹಾಯವು ದೊರಕಿದೆ. ದೃಷ್ಟಾಂತಕ್ಕಾಗಿ ಈ ಅನುಭವವನ್ನು ಗಮನಿಸಿ: ಮಾರ್‌ ಎಂಬ ಸ್ತ್ರೀಯು, ತನ್ನ ಒಬ್ಬನೇ ಮಗನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದಳು. ಆಗಲೇ ದೀರ್ಘಕಾಲದ ಖಿನ್ನತೆಯು ಅವಳನ್ನು ಬಲಹೀನಳನ್ನಾಗಿ ಮಾಡಿತ್ತು. * ಅಪಘಾತವು ನೆನಪಿಗೆ ಬರುವಾಗಲೆಲ್ಲಾ ಅವಳಿಗೆ ತೀವ್ರ ಭಯವಾಗುತ್ತಿತ್ತು. ಆದ್ದರಿಂದ, ಅವಳು ತನ್ನ ಜೀವನವನ್ನು ಅಂತ್ಯಗೊಳಿಸಲು ಪ್ರಯತ್ನಿಸಿದ್ದಳು. ಆದರೆ, ಈಗ ಅವಳು ತನ್ನ ಮನೆಗೆಲಸಗಳನ್ನು ಮಾಡುವುದಕ್ಕಾಗಿ ಬೆಳಿಗ್ಗೆ ಬೇಗನೆ ಏಳುತ್ತಾಳೆ. ಸಂಗೀತವನ್ನು ಕೇಳಿಸಿಕೊಳ್ಳುವುದರಲ್ಲೂ ಮತ್ತು ಇತರರಿಗೆ ಸಹಾಯಮಾಡುವುದರಲ್ಲೂ ಆನಂದಿಸುತ್ತಾಳೆ. ಇದು ಹೇಗೆ ಸಾಧ್ಯವಾಯಿತು? ಹೇಗೆಂದರೆ, ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು’ ಎಂಬ ನಿರೀಕ್ಷೆಯು ಆಕೆಯ ಮಗನ ವಿಷಾದಕರ ಮರಣದಿಂದಾದ ನೋವನ್ನು ಸ್ವಲ್ಪ ಮಟ್ಟಿಗೆ ತೆಗೆದುಹಾಕಿದೆ. ಮತ್ತು ದೇವರಲ್ಲಿ ಅವಳ ನಂಬಿಕೆಯನ್ನು ಬಲಪಡಿಸಿದೆ. (ಅ. ಕೃತ್ಯಗಳು 24:15) ಮಾರಳಿಗೆ ಸ್ವರ್ಗದಲ್ಲಿ ದೇವದೂತರಂತೆ ಇರುವ ಆಸೆ ಎಂದೂ ಇರದಿದ್ದ ಕಾರಣ, ಕೀರ್ತನೆ 37:11ರಲ್ಲಿರುವ ಮಾತುಗಳು ಅವಳನ್ನು ಸ್ಪರ್ಶಿಸಿದವು. ಅದು ಹೇಳುವುದು: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”

ಇನ್ನೊಬ್ಬ ಬ್ರೆಸಿಲಿಯನ್‌ ಮಹಿಳೆಯ ಅನುಭವವನ್ನು ಗಮನಿಸಿ. ಆಕೆಯ ಹೆಸರು ಸ್ಯಾಂಡ್ರ. ತನ್ನ ಮೂವರು ಮಕ್ಕಳಿಗೆ ಉತ್ತಮ ತಾಯಿಯಾಗಿರಲು ಆಕೆ ತುಂಬ ಶ್ರಮಿಸಿದಳು. ಆದರೆ ಆಕೆ ಹೇಳುವುದು: “ನಾನು ಎಷ್ಟು ಕಾರ್ಯಮಗ್ನಳಾಗಿದ್ದಳೆಂದರೆ, ನನ್ನ ತಂದೆಯವರು ತೀರಿಕೊಂಡ ಅದೇ ಸಮಯದಲ್ಲಿ ನನ್ನ ಗಂಡನು ಇನ್ನೊಬ್ಬ ಸ್ತ್ರೀಯೊಂದಿಗೆ ಸಂಬಂಧವಿಟ್ಟುಕೊಂಡಿರುವುದು ಕೂಡ ನನಗೆ ಗೊತ್ತಾಯಿತು. ಆ ಸಮಯದಲ್ಲಿ, ಸಹಾಯಕ್ಕಾಗಿ ದೇವರಿಗೆ ಪ್ರಾರ್ಥನೆಮಾಡಬೇಕೆಂದು ಸಹ ನನಗೆ ಅನಿಸಲಿಲ್ಲ.” ಹತಾಶಳಾಗಿದ್ದ ಸ್ಯಾಂಡ್ರ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು. ಆದರೆ, ಅದರಿಂದ ಚೇತರಿಸಿಕೊಳ್ಳಲು ಆಕೆಗೆ ಸಹಾಯಮಾಡಿದ್ದು ಯಾವುದು? ಅದು, ಆತ್ಮಿಕ ವಿಷಯಗಳಿಗಾಗಿರುವ ಆಕೆಯ ಗಣ್ಯತೆಯೇ ಆಗಿತ್ತು. ಅದನ್ನು ಆಕೆ ಹೇಳುವುದು: “ಪ್ರತಿರಾತ್ರಿ ನಾನು ಮಲಗುವ ಮುಂಚೆ ಬೈಬಲನ್ನು ಓದುತ್ತಿದ್ದೆ, ನಾನು ಓದುತ್ತಿರುವ ಜನರ ಪರಿಸ್ಥಿತಿಯಲ್ಲಿ ನನ್ನನ್ನಿಟ್ಟು ನೋಡಲು ಪ್ರಯತ್ನಿಸುತ್ತಿದ್ದೆ. ನಾನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಸಹ ಓದುತ್ತಿದ್ದೆ. ಅದರಲ್ಲೂ ವಿಶೇಷವಾಗಿ ಜೀವನ ಚರಿತ್ರೆಗಳು ನನಗೆ ತುಂಬ ಹಿಡಿಸುತ್ತಿದ್ದವು. ಏಕೆಂದರೆ, ಜೀವನದಲ್ಲಿ ನನಗೆ ಸಿಕ್ಕಿರುವ ಎಲ್ಲಾ ಒಳ್ಳೆ ವಿಷಯಗಳಿಗಾಗಿ ತೃಪ್ತಳಾಗಿರುವಂತೆ ನನಗೆ ಅವು ಸಹಾಯಮಾಡುತ್ತವೆ.” ಯೆಹೋವನು ತನ್ನ ಆಪ್ತ ಸ್ನೇಹಿತನು ಎಂಬುದನ್ನು ಆಕೆಯು ಅರಿತಿರುವುದರಿಂದ, ಪ್ರಾರ್ಥನೆ ಮಾಡುವಾಗ ನಿರ್ದಿಷ್ಟವಾದ ವಿಷಯಗಳನ್ನೇ ಆತನ ಮುಂದಿಡಲು ಆಕೆ ಕಲಿತುಕೊಂಡಿದ್ದಾಳೆ.

ಹತಾಶೆಯಿಲ್ಲದ ಒಂದು ಭವಿಷ್ಯ

ಮಾನವ ಸಂಕಷ್ಟಗಳು ನಿರಂತರವಲ್ಲ ಎಂಬುದನ್ನು ತಿಳಿದುಕೊಳ್ಳುವುದು ಎಷ್ಟೊಂದು ಸಾಂತ್ವನದಾಯಕವಾಗಿದೆ! ಪಾತಕ, ಅನ್ಯಾಯ ಇಲ್ಲವೇ ಕುಲಭೇದಕ್ಕೆ ಈಗ ಬಲಿಯಾಗಿರುವ ಮಕ್ಕಳು, ವಯಸ್ಕರು ದೇವರ ರಾಜ್ಯದ ಕೆಳಗೆ ಹರ್ಷಿಸುವರು. ಪ್ರವಾದನಾತ್ಮಕ ಕೀರ್ತನೆಯಲ್ಲಿ ಮುಂತಿಳಿಸಲ್ಪಟ್ಟಿರುವಂತೆ, ಯೆಹೋವನ ನೇಮಿತ ರಾಜನಾದ ಯೇಸುಕ್ರಿಸ್ತನು “ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು.” ಅಷ್ಟೇ ಅಲ್ಲದೆ, “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.” ಹೌದು, “ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು. ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”​—⁠ಕೀರ್ತನೆ 72:​12-14.

ಆ ಪ್ರವಾದನಾತ್ಮಕ ನುಡಿಗಳು ನೆರವೇರುವ ಸಮಯವು ಹತ್ತಿರದಲ್ಲಿದೆ. ಭೂಮಿಯ ಮೇಲೆ ನಿತ್ಯಜೀವವನ್ನು ಅನುಭವಿಸುವ ಆಲೋಚನೆಯು ತಾನೇ ನಿಮ್ಮ ಮನಸ್ಸಿಗೆ ಹಿತಕರವಾಗಿದೆಯೋ? ಹಾಗಿರುವುದಾದರೆ, ನೀವು ಹರ್ಷಭರಿತರಾಗಿರಲು ಮತ್ತು ದೇವರ ಕೊಡುಗೆಯಾಗಿರುವ ಜೀವವನ್ನು ಕಾಪಾಡಲು ಸಕಾರಣವಿದೆ. ಈ ಸಾಂತ್ವನದಾಯಕವಾದ ಶಾಸ್ತ್ರೀಯ ವಾಗ್ದಾನಗಳನ್ನು ನೀವು ಇತರರೊಂದಿಗೆ ಹಂಚಿಕೊಳ್ಳುವುದಾದರೆ, ಭಾವನೆಗಳೇ ಇಲ್ಲದ ಹಾಗೂ ಪ್ರೀತಿರಹಿತ ಲೋಕದಲ್ಲಿ ಸಹಾಯಕ್ಕಾಗಿ ಆಕ್ರಂದಿಸುತ್ತಿರುವ ಜೀವಗಳಿಗೆ ಹೇರಳವಾದ ಸಂತೋಷವನ್ನು ತರಬಲ್ಲಿರಿ.

[ಪಾದಟಿಪ್ಪಣಿ]

^ ಪ್ಯಾರ. 15 ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 6ರಲ್ಲಿರುವ ಚಿತ್ರ]

ಸಂತೋಷಿಸುವುದಕ್ಕೆ ಇಂದು ಅನೇಕ ಕಾರಣಗಳು ನಮಗಿವೆ

[ಪುಟ 7ರಲ್ಲಿರುವ ಚಿತ್ರ]

ಹತಾಶೆಯಿಲ್ಲದ ಒಂದು ಲೋಕಕ್ಕಾಗಿ ನೀವು ಎದುರುನೋಡುತ್ತಿದ್ದೀರೋ?