ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಹಾಯಕ್ಕಾಗಿ ಆಕ್ರಂದಿಸುತ್ತಿರುವ ಜೀವಗಳು

ಸಹಾಯಕ್ಕಾಗಿ ಆಕ್ರಂದಿಸುತ್ತಿರುವ ಜೀವಗಳು

ಸಹಾಯಕ್ಕಾಗಿ ಆಕ್ರಂದಿಸುತ್ತಿರುವ ಜೀವಗಳು

“ಅಯ್ಯೋ! ದೇವರು ನನ್ನ ಕೈಬಿಟ್ಟುಬಿಟ್ಟ” ಎಂದು ಒಬ್ಬ ಬ್ರೆಸಿಲಿಯನ್‌ ಮಹಿಳೆಯೊಬ್ಬಳು ಗೋಳಾಡಿದಳು. ಏಕೆಂದರೆ, ಇದ್ದಕ್ಕಿದ್ದಂತೆ ಆಕೆಯ ಗಂಡನು ತೀರಿಕೊಂಡುಬಿಟ್ಟಿದ್ದನು. ಅದರಿಂದಾಗಿ, ಅವಳಿಗೆ ಜೀವನದಲ್ಲಿ ಇನ್ನೇನೂ ಉಳಿದಿಲ್ಲ ಎಂದನಿಸಿತು. ಇಷ್ಟೊಂದು ವ್ಯಥೆಯನ್ನು ಅನುಭವಿಸುತ್ತಿರುವ ಇಲ್ಲವೇ ಸಹಾಯಕ್ಕಾಗಿ ಆಕ್ರಂದಿಸುತ್ತಿರುವ ಯಾರನ್ನಾದರೂ ಸಂತೈಸಲು ಎಂದಾದರೂ ನೀವು ಪ್ರಯತ್ನಿಸಿದ್ದೀರೋ?

ಕೆಲವರು ಎಷ್ಟೊಂದು ಎದೆಗುಂದಿಹೋಗುತ್ತಾರೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವುದೇ ಉಳಿದಿರುವ ಮಾರ್ಗ ಎಂದು, ತಮ್ಮ ಜೀವನವನ್ನೇ ಅಂತ್ಯಮಾಡಿಕೊಳ್ಳುತ್ತಾರೆ. ಅಂಥವರಲ್ಲಿ ಯುವಜನರೇ ಹೆಚ್ಚಿನವರು. ಬ್ರೆಸಿಲಿನಲ್ಲಿ ಮಾಡಲ್ಪಟ್ಟ ಅಧ್ಯಯನದ ಕುರಿತು ಫ್ಯಾಲ್‌ಯ ಡೆ ಎಸ್‌. ಪೌಲೋ ಎಂಬ ವಾರ್ತಾಪತ್ರಿಕೆಯು ಹೇಳುವುದೇನೆಂದರೆ, “ಆತ್ಮಹತ್ಯೆ ಮಾಡಿಕೊಳ್ಳುವ ಯುವಜನರ ಪ್ರಮಾಣವು 26 ಪ್ರತಿಶತದಷ್ಟು ಹೆಚ್ಚಾಗಿದೆ.” ಉದಾಹರಣೆಗೆ, ಸಾವೊ ಪೌಲೋ ನಗರದ ವಾಲ್ಟರ್‌ * ಎಂಬ ಯುವಕನ ಅನುಭವವನ್ನು ಗಮನಿಸಿ. ಅವನಿಗೆ ಹೆತ್ತವರಿರಲಿಲ್ಲ, ಮನೆಮಠವಿರಲಿಲ್ಲ, ಏಕಾಂತವಿರಲಿಲ್ಲ, ಆಸರೆಗಾಗಿ ಸ್ನೇಹಿತರಿರಲಿಲ್ಲ. ತನ್ನ ದುರವಸ್ಥೆಯನ್ನು ಕೊನೆಗೊಳಿಸುವುದಕ್ಕಾಗಿ ಸೇತುವೆಯ ಮೇಲಿಂದ ಜಿಗಿದು ತನ್ನ ಪ್ರಾಣವನ್ನು ಕಳೆದುಕೊಳ್ಳಲು ಅವನು ತೀರ್ಮಾನಿಸಿದನು.

ಎಡ್ನ ಎಂಬ ಗಂಡನಿಲ್ಲದ ಒಬ್ಬ ಒಂಟಿ ಹೆತ್ತವಳ ಉದಾಹರಣೆಯನ್ನು ಗಮನಿಸಿ. ಆಕೆಯು, ಇನ್ನೊಬ್ಬ ವ್ಯಕ್ತಿಯನ್ನು ಭೇಟಿಯಾದ ಸಮಯದಲ್ಲಾಗಲೇ ಅವಳಿಗೆ ಇಬ್ಬರು ಮಕ್ಕಳಿದ್ದರು. ಆ ವ್ಯಕ್ತಿಯೊಂದಿಗೆ ಪರಿಚಯವಾಗಿ ಕೇವಲ ಒಂದೇ ತಿಂಗಳೊಳಗೆ, ಅವನ ತಾಯಿಯ ಮನೆಯಲ್ಲಿ ಇಬ್ಬರೂ ಒಟ್ಟಾಗಿ ಕೂಡಿಬಾಳಲು ಪ್ರಾರಂಭಿಸಿದರು. ಅವನ ತಾಯಿಯು ಪ್ರೇತಾತ್ಮವಾದಗಳಲ್ಲಿ ಮುಳುಗಿಹೋಗಿದ್ದಳು ಮತ್ತು ಕುಡುಕಿಯಾಗಿದ್ದಳು. ಎಡ್ನಳಿಗೆ ಇನ್ನೊಂದು ಮಗುವಾಯಿತು. ಅವಳು ವಿಪರೀತವಾಗಿ ಮದ್ಯವನ್ನು ಕುಡಿಯಲು ಶುರುಮಾಡಿದಳು. ಎಡ್ನ ಎಷ್ಟು ಖಿನ್ನಳಾದಳೆಂದರೆ, ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿದಳು. ಇದೆಲ್ಲದರ ಪರಿಣಾಮವಾಗಿ ಅವಳು ಕೊನೆಯಲ್ಲಿ, ತನ್ನ ಮಕ್ಕಳನ್ನು ಸಾಕುವ ಹಕ್ಕನ್ನು ಸಹ ಕಳೆದುಕೊಂಡಳು.

ಹಾಗಾದರೆ, ವಯಸ್ಸಾದವರ ಕುರಿತೇನು? ಮರಿಯಾ ಎಂಬ ಹಿರಿಯ ಮಹಿಳೆಯ ಅನುಭವವನ್ನು ಗಮನಿಸಿ. ಅವರು ವಿನೋದಪ್ರಿಯರು ಹಾಗೂ ಹೆಚ್ಚು ಮಾತನಾಡುವವರು ಆಗಿದ್ದರು. ಆದರೆ, ಅವರಿಗೆ ವಯಸ್ಸಾದಂತೆ, ತಾವು ಮಾಡುತ್ತಿದ್ದ ನರ್ಸ್‌ ಕೆಲಸದ ಕುರಿತು ಚಿಂತೆಯು ಕಾಡಲಾರಂಭಿಸಿತು. ಏಕೆಂದರೆ, ತಾನು ಕೆಲಸದಲ್ಲೇನಾದರೂ ತಪ್ಪು ಮಾಡಿಬಿಡುವೆನೋ ಎಂಬ ಭಯವು ಅವರನ್ನು ಕಾಡುತ್ತಿತ್ತು. ಇದು ಆಕೆಯನ್ನು ಖಿನ್ನಳನ್ನಾಗಿ ಮಾಡಿತು. ಸ್ವಲ್ಪ ಕಾಲ ಸ್ವ-ಚಿಕಿತ್ಸೆಯನ್ನು ಮಾಡಿಕೊಂಡ ನಂತರ, ವೈದ್ಯಕೀಯ ಸಹಾಯಕ್ಕೆ ಅವರು ಮೊರೆಹೋದರು. ಅದು ಸ್ವಲ್ಪ ಕಾಲ ಸಹಾಯಮಾಡಿದಂತೆ ಅನಿಸಿತಾದರೂ, ಅವರು ತಮ್ಮ 57ನೇ ವಯಸ್ಸಿನಲ್ಲಿ ಕೆಲಸವನ್ನು ಕಳೆದುಕೊಂಡರು. ಆಗ ಅವರಿಗೆ ಖಿನ್ನತೆಯು ಎಷ್ಟು ತೀವ್ರವಾಯಿತೆಂದರೆ, ಮರಿಯಾ ಆತ್ಮಹತ್ಯೆ ಮಾಡಿಕೊಳ್ಳುವುದರ ಕುರಿತು ಯೋಚಿಸಲಾರಂಭಿಸಿದರು.

ಸಾವೊ ಪೌಲೋ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಆಗಿರುವ ಸುಸೇ ಅಲ್ಬರ್ಟು ಡೆಲ್‌ ಪೋರ್ಟು ಅವರು ಹೇಳುವುದೇನೆಂದರೆ, “ಖಿನ್ನರಾಗಿರುವ ಸುಮಾರು 10 ಪ್ರತಿಶತದಷ್ಟು ಮಂದಿ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.” ಅಮೆರಿಕದ ವೈದ್ಯಾಧಿಕಾರಿಯಾದ, ಡೇವಿಡ್‌ ಸಾಚರ್‌ ವರದಿಸುವುದು: “ನರಹತ್ಯೆಗಿಂತ, ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಹೆಚ್ಚು ಜನರು ಸತ್ತುಹೋಗಿದ್ದಾರೆ ಎಂಬುದನ್ನು ನಂಬಲು ಕಷ್ಟ, ಆದರೆ ಅದು ಕಟು ಸತ್ಯ.”

ಕೆಲವೊಮ್ಮೆ ಆತ್ಮಹತ್ಯೆಯನ್ನು ಮಾಡಿಕೊಳ್ಳುವುದಕ್ಕಾಗಿ ಪ್ರಯತ್ನಿಸುವುದು ತಾನೇ ಸಹಾಯಕ್ಕಾಗಿರುವ ಆರ್ತನಾದವಾಗಿದೆ. ಬದುಕುವ ಆಶೆಯನ್ನು ಕಳೆದುಕೊಂಡಿರುವ ವ್ಯಕ್ತಿಗೆ ತಕ್ಕ ಸಹಾಯವನ್ನು ನೀಡುವ ಇಚ್ಛೆ, ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಖಂಡಿತವಾಗಿಯೂ ಇರುತ್ತದೆ. ಆದರೆ, “ಸುಮ್ಮನೆ ವ್ಯಸನಪಡುತ್ತಿರಬೇಡ,” “ಅನೇಕರು, ನಿನಗಿಂತ ತೀರ ಹದಗೆಟ್ಟ ಸ್ಥಿತಿಯಲ್ಲಿದ್ದಾರೆ,” ಅಥವಾ, “ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತವೆ” ಎಂಬ ಅಭಿವ್ಯಕ್ತಿಗಳನ್ನು ಉಪಯೋಗಿಸುವುದಾದರೆ, ಅದು ಖಿನ್ನ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಸಹಾಯಮಾಡಲಾರದು ಎಂಬುದಂತೂ ನಿಶ್ಚಯ. ಅದಕ್ಕೆ ಬದಲಾಗಿ, ಒಬ್ಬ ನಿಜ ಸ್ನೇಹಿತರಾಗಿ ಮತ್ತು ಅವರ ಮಾತಿಗೆ ಕಿವಿಗೊಡುವವರಾಗಿ ಯಾಕಿರಬಾರದು? ಹೌದು, ಎದೆಗುಂದಿರುವ ವ್ಯಕ್ತಿಯು ಜೀವನಕ್ಕೆ ಬೆಲೆಯಿದೆ ಎಂಬುದನ್ನು ಗ್ರಹಿಸುವಂತೆ ಸಹಾಯಮಾಡಲು ಪ್ರಯತ್ನಿಸಬೇಕು.

ಫ್ರೆಂಚ್‌ ಲೇಖಕನಾದ ಒಲ್‌ಟೈರ್‌ ಬರೆದದು: “ಥಟ್ಟನೆ ಕೆರಳಿ ಬರುವ ಉದ್ವೇಗವನ್ನು ತಾಳಲಾರದೆ, ಇಂದು ತನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುವ ವ್ಯಕ್ತಿಯು, ಒಂದು ವೇಳೆ ಒಂದು ವಾರದ ತನಕ ಕಾದಿರುತ್ತಿದ್ದಲ್ಲಿ, ಬದುಕಿರಲು ಆಸೆಪಟ್ಟಿರುವನು.” ಹಾಗಾದರೆ, ಜೀವಕ್ಕೆ ಬೆಲೆಯಿದೆ ಎಂಬುದನ್ನು ಹತಾಶರಾದವರು ಹೇಗೆ ಕಂಡುಕೊಳ್ಳಸಾಧ್ಯವಿದೆ?

[ಪಾದಟಿಪ್ಪಣಿ]

^ ಪ್ಯಾರ. 3 ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 3ರಲ್ಲಿರುವ ಚಿತ್ರ]

ಹೆಚ್ಚು ಸಂಖ್ಯೆಯಲ್ಲಿ ಯುವಜನರು ಮತ್ತು ವಯಸ್ಕರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ

[ಪುಟ 4ರಲ್ಲಿರುವ ಚಿತ್ರ]

ಬದುಕಿನಲ್ಲಿ ಆಶೆಯನ್ನು ಕಳೆದುಕೊಂಡಿರುವ ವ್ಯಕ್ತಿಗೆ ನೀವು ಹೇಗೆ ಸಹಾಯಮಾಡಬಲ್ಲಿರಿ?