ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರಂತರ ಸಂತೋಷ ಸ್ವರ್ಗದಲ್ಲೋ ಅಥವಾ ಭೂಮಿಯಲ್ಲೋ?

ನಿರಂತರ ಸಂತೋಷ ಸ್ವರ್ಗದಲ್ಲೋ ಅಥವಾ ಭೂಮಿಯಲ್ಲೋ?

ನಿರಂತರ ಸಂತೋಷ ಸ್ವರ್ಗದಲ್ಲೋ ಅಥವಾ ಭೂಮಿಯಲ್ಲೋ?

ಸಂತೋಷ ಎನ್ನುವುದು, ನೀವು ಎಲ್ಲಿ ವಾಸಿಸುತ್ತೀರೋ ಅದರ ಮೇಲೆಯೇ ಅವಲಂಬಿಸಿರುತ್ತದೆಯೇ? ಇಲ್ಲ! ಅದಕ್ಕೆ ಬದಲಾಗಿ ಒಳ್ಳೇ ಆರೋಗ್ಯ, ಜೀವನದಲ್ಲಿ ಒಂದು ಉದ್ದೇಶ ಮತ್ತು ಇತರರೊಂದಿಗೆ ಉತ್ತಮ ಸಂಬಂಧದಂತಹ ವಿಷಯಗಳೇ ಸಂತೋಷವನ್ನು ತರುತ್ತವೆ ಎಂಬುದನ್ನು ಹೆಚ್ಚಿನವರು ಕೂಡಲೇ ಒಪ್ಪಿಕೊಳ್ಳುವರು. ಇದರ ಕುರಿತಾಗಿ ಬೈಬಲಿನ ಜ್ಞಾನೋಕ್ತಿಯು ಹೇಳುವುದು: “ದ್ವೇಷವಿರುವಲ್ಲಿ ಕೊಬ್ಬಿದ ದನದ ಮಾಂಸಕ್ಕಿಂತಲೂ ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ.”​—⁠ಜ್ಞಾನೋಕ್ತಿ 15:⁠17.

ಆದರೆ ದುಃಖಕರವಾದ ವಿಷಯವೇನೆಂದರೆ, ನಮ್ಮ ಈ ಭೂಗ್ರಹವು ದ್ವೇಷ, ಹಿಂಸೆ ಮತ್ತು ಇನ್ನಿತರ ರೀತಿಯ ದುಷ್ಟತನದ ಒಂದು ದೊಡ್ಡ ಚರಿತ್ರೆಯನ್ನೇ ಹೊಂದಿದೆ. ಆದರೆ, ಅನೇಕರು ಸತ್ತ ಮೇಲೆ ಹೋಗಲು ಬಯಸುವ ಸ್ಥಳವಾದ ಸ್ವರ್ಗ ಅಥವಾ ಆತ್ಮ ಕ್ಷೇತ್ರದ ಕುರಿತೇನು? ಇಂದು ಸಾಮಾನ್ಯವಾಗಿ ಅನೇಕರು ನೆನಸಿಕೊಂಡಿರುವ ಹಾಗೆ ಸ್ವರ್ಗದಲ್ಲಿ ಯಾವುದೇ ರೀತಿಯ ತೊಂದರೆಯಿಲ್ಲದೆ, ಯಾವಾಗಲೂ ಪರಮ ಶಾಂತಿ ಮತ್ತು ಸಮಾಧಾನದ ಹೊಳೆಯೇ ಹರಿಯುತ್ತಿರುತ್ತದೆಯೇ?

ದೇವರು ಸ್ವರ್ಗದಲ್ಲಿ ಲಕ್ಷಾಂತರ ಆತ್ಮಜೀವಿಗಳೊಂದಿಗೆ ನೆಲೆಸಿದ್ದಾನೆ ಎಂದು ಬೈಬಲ್‌ ಕಲಿಸುತ್ತದೆ. ಈ ಆತ್ಮಜೀವಿಗಳನ್ನು ದೇವದೂತರೆಂದು ಕರೆಯಲಾಗುತ್ತದೆ. (ಮತ್ತಾಯ 18:10: ಪ್ರಕಟನೆ 5:11) ಇವರನ್ನು “ದೇವರ ಪುತ್ರರು” (NW) ಎಂಬುದಾಗಿ ವರ್ಣಿಸಲಾಗಿದೆ. (ಯೋಬ 38:​4, 7) ಮನುಷ್ಯರಂತೆ, ಈ ದೇವದೂತರು ಸಹ ಸ್ವತಂತ್ರ ನೈತಿಕ ವ್ಯಕ್ತಿಗಳಾಗಿದ್ದಾರೆ; ಅವರು ಯಂತ್ರಮಾನವರಲ್ಲ. ಆದುದರಿಂದ, ಅವರು ಕೂಡ ಸರಿ ಯಾವುದು ತಪ್ಪು ಯಾವುದು ಎಂಬುದನ್ನು ಆಯ್ಕೆಮಾಡಶಕ್ತರು ಎಂಬುದಾಗಿ ಬೈಬಲ್‌ ಮುಂದುವರಿಸಿ ಹೇಳುತ್ತದೆ. ಹಾಗಾದರೆ, ದೇವದೂತರು ತಪ್ಪನ್ನು ಮಾಡಸಾಧ್ಯವೇ? ಅವರು ಕೂಡ ತಪ್ಪು ಮಾಡಿದರು ಎಂಬ ನಿಜ ತಿಳಿದುಬರುವಾಗ ಕೆಲವರಿಗೆ ಆಶ್ಚರ್ಯವಾಗಬಹುದು. ಸಾವಿರಾರು ವರ್ಷಗಳ ಹಿಂದೆ ದೊಡ್ಡ ಸಂಖ್ಯೆಯಲ್ಲಿ ದೇವದೂತರು, ದೇವರ ವಿರುದ್ಧ ಪಾಪ ಮಾಡಿದರು. ಅಂದರೆ, ಆತನ ವಿರುದ್ಧ ಅವರು ದಂಗೆಯೆದ್ದರು!​—⁠ಯೂದ 6.

ಸ್ವರ್ಗದಲ್ಲಿ ದಂಗೆಕೋರರೇ?

ಒಬ್ಬ ದೇವದೂತನು ದೇವರ ವಿರುದ್ಧ ದಂಗೆಯೆದ್ದ ಕಾರಣ, ಆತ್ಮಕ್ಷೇತ್ರದಲ್ಲಿ ಪಾಪವು ಕಾಣಿಸಿಕೊಳ್ಳಲಾರಂಭಿಸಿತು. ಈ ದೇವದೂತನನ್ನೇ ಸೈತಾನ (ಪ್ರತಿಭಟಕ) ಮತ್ತು ಪಿಶಾಚನು (ನಿಂದಕ) ಎಂದು ನಂತರ ಕರೆಯಲಾಯಿತು. ಒಮ್ಮೆ ವಿಧೇಯನಾಗಿದ್ದ ಈ ದೇವದೂತನು ತನ್ನ ಸ್ವಇಚ್ಛೆಯಿಂದಲೇ ತಪ್ಪನ್ನು ಮಾಡುವ ಹೆಜ್ಜೆಯನ್ನು ತೆಗೆದುಕೊಂಡನು. ತದನಂತರ, ಅವನು ಇನ್ನಿತರ ಆತ್ಮಜೀವಿಗಳ ಮೇಲೆ ಕೆಟ್ಟ ಪ್ರಭಾವವನ್ನು ಬೀರುವವನಾದನು. ನೋಹನ ಸಮಯದರೊಳಗಾಗಿ, ಅಂದರೆ ಜಲಪ್ರಳಯಕ್ಕೆ ಮುಂಚೆ ದೇವದೂತರ ಒಂದು ದೊಡ್ಡ ಗುಂಪೇ ದೇವರ ವಿರುದ್ಧ ದಂಗೆಯೇಳುವುದಕ್ಕಾಗಿ ಸೈತಾನನನ್ನು ಜೊತೆಗೂಡಿತು.​—⁠ಆದಿಕಾಂಡ 6:​2, 2 ಪೇತ್ರ 2:⁠4.

ಈ ಪತಿತರಾದ ದೇವದೂತರನ್ನು ದೇವರು ಆ ಕೂಡಲೇ ಸ್ವರ್ಗದಿಂದ ಹೊರಹಾಕಲಿಲ್ಲ. ಅದಕ್ಕೆ ಬದಲಾಗಿ, ಸ್ಪಷ್ಟವಾಗಿಯೇ ಕೆಲವು ನಿರ್ಬಂಧಗಳೊಂದಿಗೆ ಅವರು ಸ್ವರ್ಗಕ್ಕೆ ಬಂದುಹೋಗುವುದನ್ನು ಸಾವಿರಾರು ವರ್ಷಗಳ ವರೆಗೆ ಆತನು ಸಹಿಸಿಕೊಂಡನು. * ಆದರೆ, ಈ ದುಷ್ಟರನ್ನು ಸಹಿಸಿಕೊಳ್ಳುವ ದೇವರ ತಾಳ್ಮೆಯು ಮುಗಿಯುವ ಸಮಯವು ಬಂದಾಗ, ಅಂತಿಮವಾಗಿ ನಾಶಪಡಿಸಲ್ಪಡುವುದಕ್ಕಾಗಿ ಅವರನ್ನು ಸ್ವರ್ಗದಿಂದ ‘ದೊಬ್ಬಲಾಯಿತು’, ಆಗ ಪರಲೋಕದ ಆಕಾಶವಾಣಿಯೊಂದು ಹೇಳಿದ್ದು: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ.” (ಪ್ರಕಟನೆ 12:​7-12) ಸ್ಪಷ್ಟವಾಗಿಯೇ, ನಂಬಿಗಸ್ತ ದೇವದೂತರು ಹೆಚ್ಚು ಹರ್ಷಗೊಂಡರು. ಕಾರಣ, ಕೊನೆಗೂ ಸ್ವರ್ಗವು ಆ ಭ್ರಷ್ಟ ಕಿರುಕುಳಗಾರರಿಂದ ಬಿಡುಗಡೆಯನ್ನು ಹೊಂದಿತ್ತು!

ಸಾಮಾನ್ಯವಾಗಿ ಅನೇಕರಿಗೆ ಅಜ್ಞಾತವಾಗಿರುವ ಈ ವಿವರಣೆಗಳು ತಿಳಿದುಬರುವಾಗ, ಒಂದು ವಿಷಯವು ಸ್ಪಷ್ಟವಾಗುತ್ತದೆ. ಅದೇನೆಂದರೆ, ಬುದ್ಧಿವಂತ ಜೀವಿಗಳು ದೇವರ ನಿಯಮ ಮತ್ತು ತತ್ವಗಳನ್ನು ತಳ್ಳಿಹಾಕುವಾಗಲೆಲ್ಲಾ ಶಾಂತಿಯು ಭಂಗಗೊಳ್ಳುತ್ತದೆ. (ಯೆಶಾಯ 57:​20, 21; ಯೆರೆಮೀಯ 14:​19, 20) ಆದರೆ ಮತ್ತೊಂದು ಕಡೆಯಲ್ಲಿ, ದೇವರ ನಿಯಮವನ್ನು ಎಲ್ಲರೂ ಪಾಲಿಸುವಾಗ, ಶಾಂತಿ ಮತ್ತು ಸಮಾಧಾನವು ನೆಲೆಸಿರುತ್ತದೆ. (ಕೀರ್ತನೆ 119:165; ಯೆಶಾಯ 48:​17, 18) ಎಲ್ಲಾ ಮಾನವರು ದೇವರನ್ನು ಪ್ರೀತಿಸಿ ಆತನ ನಿಯಮಗಳಿಗೆ ವಿಧೇಯರಾಗಿದ್ದು, ತಮ್ಮ ನೆರೆಹೊರೆಯವರನ್ನು ಪ್ರೀತಿಸುವುದಾದರೆ ಈ ಭೂಮಿಯು ನಿಜವಾಗಿಯೂ ಒಂದು ಆನಂದಮಯವಾದ ಬೀಡಾಗಿರುವುದಿಲ್ಲವೋ? ಖಂಡಿತವಾಗಿಯೂ ಹಾಗೆಯೇ ಇರುವುದು ಎಂದು ಬೈಬಲ್‌ ಉತ್ತರಿಸುತ್ತದೆ!

ಆದರೆ ನೀವು ಕೇಳಬಹುದು, ಸ್ವಾರ್ಥದಿಂದಾಗಿ ತಮ್ಮ ದುರ್ಮಾರ್ಗಗಳನ್ನು ಬದಲಾಯಿಸಲು ಒಪ್ಪದಿರುವಂಥ ಜನರಿಗೆ ಏನಾಗುವುದು? ಅಂಥವರು, ದೇವರ ಚಿತ್ತವನ್ನು ಕಾಯಾವಾಚಾಮನಸ್ಸಾ ಮಾಡಲು ಇಚ್ಛಿಸುವವರ ಶಾಂತಿಯನ್ನು ಕದಡುವುದಿಲ್ಲವೇ? ಇಲ್ಲ, ಏಕೆಂದರೆ ಸ್ವರ್ಗದಲ್ಲಿದ್ದ ದುಷ್ಟ ದೇವದೂತರೊಂದಿಗೆ ದೇವರು ಹೇಗೆ ವರ್ತಿಸಿದನೋ, ಅದೇ ರೀತಿಯಲ್ಲಿ ಭೂಮಿಯ ಮೇಲಿರುವ ದುಷ್ಟ ಜನರೊಂದಿಗೂ ವರ್ತಿಸುವನು.

ಶುಚಿಗೊಳಿಸಲ್ಪಟ್ಟ ಒಂದು ಭೂಮಿ

“ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದ ಪೀಠ” ಎಂದು ದೇವರು ಹೇಳಿದ್ದಾನೆ. (ಯೆಶಾಯ 66:⁠1) ಪವಿತ್ರತೆಯ ಪರಾಕಾಷ್ಠತೆಯಲ್ಲಿರುವ ದೇವರು ತನ್ನ “ಪಾದಪೀಠ”ವು ದುಷ್ಟತನದಿಂದ ಎಂದೆಂದಿಗೂ ಕಲುಷಿತವಾಗಿರುವಂತೆ ಅನುಮತಿಸನು. (ಯೆಶಾಯ 6:​1-3; ಪ್ರಕಟನೆ 4:⁠8) ದುಷ್ಟ ಆತ್ಮಗಳನ್ನು ಪರಲೋಕದಿಂದ ತೆಗೆದುಹಾಕಿದ ಹಾಗೆಯೇ, ದುಷ್ಟ ಜನರನ್ನು ಸಹ ಈ ಭೂಮಿಯಿಂದ ತೆಗೆದುಹಾಕುವನು. ಇದನ್ನು ಬೈಬಲಿನ ಮುಂದಿನ ವಚನಗಳು ತೋರಿಸುತ್ತವೆ:

“ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.”​—⁠ಕೀರ್ತನೆ 37:⁠9.

“ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”​—⁠ಜ್ಞಾನೋಕ್ತಿ 2:​21, 22.

“ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ. ಯಾವಾಗ ಕೊಡುವನಂದರೆ ಯೇಸುಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು. ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು. ಆ ದಿನದಲ್ಲಿ ಆತನು ತನ್ನ ಪವಿತ್ರರ ಮೂಲಕ ಪ್ರಭಾವಹೊಂದುವವನಾಗಿಯೂ ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವವನಾಗಿಯೂ ಬರುವಾಗ ಅಂಥವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.”​—⁠2 ಥೆಸಲೊನೀಕ 1:​6-9.

“ಲೋಕವೂ [ದುಷ್ಟ ಮಾನವಕುಲ] ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”​—⁠1 ಯೋಹಾನ 2:⁠17.

ಭೂಮಿಯಲ್ಲಿ ಶಾಂತಿಯು ನೆಲೆಸಿರುವುದೋ?

ದುಷ್ಟತನವನ್ನು ಸಹಿಸಿಕೊಳ್ಳುವ ದೇವರ ತಾಳ್ಮೆಗೂ ಮಿತಿಯಿದೆ ಎಂಬುದನ್ನು ಶಾಸ್ತ್ರವಚನಗಳು ಸ್ಪಷ್ಟವಾಗಿ ತೋರಿಸುತ್ತವೆ ಎಂಬುದೇನೋ ನಿಜ. ಆದರೆ ಒಮ್ಮೆ ನಿರ್ಮೂಲನಮಾಡಲ್ಪಟ್ಟ ದುಷ್ಟತನವು ಮತ್ತೆ ಕಾಣಿಸಿಕೊಳ್ಳಲಾರದು ಎಂಬುದರ ಕುರಿತು ನಾವು ಹೇಗೆ ಖಚಿತರಾಗಿರಬಹುದು? ಎಷ್ಟೇ ಆದರೂ, ನೋಹನ ದಿನದಲ್ಲಾದ ಜಲಪ್ರಳಯವು ಸಂಭವಿಸಿ ಸ್ವಲ್ಪ ಸಮಯದರಲ್ಲೇ ದುಷ್ಟತನವು ಮತ್ತೆ ಕಾಣಿಸಿಕೊಳ್ಳಲಿಲ್ಲವೇ? ಅದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಮಾನವರ ದುಷ್ಟ ಸಂಚುಗಳನ್ನು ಮುರಿದುಹಾಕುವುದಕ್ಕಾಗಿ ದೇವರು ಅವರ ಭಾಷೆಗಳನ್ನು ಗಲಿಬಿಲಿಗೊಳಿಸಬೇಕಾಗಿ ಬಂತು.​—⁠ಆದಿಕಾಂಡ 11:​1-8.

ಭೂಮಿಯ ಮೇಲೆ ದುಷ್ಟತನವು ಮತ್ತೆ ತಲೆಯೆತ್ತದು ಎಂಬ ನಮ್ಮ ಭರವಸೆಗೆ ಮುಖ್ಯ ಕಾರಣವೇನೆಂದರೆ, ಜಲಪ್ರಳಯದ ನಂತರ ಸಂಭವಿಸಿದಂತೆ, ಭೂಮಿಯ ಮೇಲೆ ಇನ್ನೆಂದೂ ಮನುಷ್ಯರು ತಮ್ಮ ಆಳ್ವಿಕೆಯನ್ನು ಮಾಡಲಾರರು. ಅದಕ್ಕೆ ಬದಲಾಗಿ, ಈ ಭೂಮಿಯನ್ನು ದೇವರ ರಾಜ್ಯವು ಆಳುವುದು. ಈ ರಾಜ್ಯವು, ಸ್ವರ್ಗದಿಂದ ಆಳ್ವಿಕೆಮಾಡುತ್ತಾ, ಭೂಮಿಯ ಏಕಮಾತ್ರ ಸರ್ಕಾರವಾಗಿರುವುದು. (ದಾನಿಯೇಲ 2:44; 7:​13, 14) ಈ ರಾಜ್ಯವು ದುಷ್ಟತನವನ್ನು ಮತ್ತೆ ಶುರುಮಾಡಲು ಪ್ರಯತ್ನಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕೂಡಲೇ ಕ್ರಿಯೆಗೈಯುವುದು. (ಯೆಶಾಯ 65:20) ನಿಜ ಹೇಳಬೇಕೆಂದರೆ, ದುಷ್ಟತನದ ಮೂಲಕರ್ತನಾದ ಪಿಶಾಚನಾದ ಸೈತಾನನನ್ನು ಮತ್ತು ಅವನನ್ನು ಹಿಂಬಾಲಿಸಿದ ದುಷ್ಟ ದೇವದೂತರಾದ ದೆವ್ವಗಳನ್ನು ಆ ರಾಜ್ಯವು ಕೊನೆಯಲ್ಲಿ ನಾಶಮಾಡುವುದು.​—⁠ರೋಮಾಪುರ 16:⁠20.

ಅಷ್ಟುಮಾತ್ರವಲ್ಲದೆ, ಮಾನವರು ಆಹಾರ, ಬಟ್ಟೆ, ವಸತಿ ಮತ್ತು ಉದ್ಯೋಗದ ಕುರಿತು ಚಿಂತಿಸುವುದಕ್ಕೆ ಯಾವುದೇ ಕಾರಣವಿರಲಾರದು. ಆದರೆ, ಇಂದು ಇವುಗಳ ಕೊರತೆಯು ಕೆಲವರನ್ನು ಪಾತಕದ ಜೀವನಕ್ಕೆ ತಳ್ಳಿವೆ. ಹೌದು, ಇಡೀ ಭೂಮಿಯು ಫಲಪ್ರದವಾದ ಪ್ರಮೋದವನವಾಗಿ ಪರಿವರ್ತಿಸಲ್ಪಡುವುದು ಮತ್ತು ಅಲ್ಲಿ ಎಲ್ಲರಿಗೂ ಹೇರಳವಾದ ಸಮೃದ್ಧಿಯಿರುವುದು.​—⁠ಯೆಶಾಯ 65:​21-23; ಲೂಕ 23:⁠43.

ಹೆಚ್ಚು ಪ್ರಾಮುಖ್ಯವಾದ ವಿಷಯವೇನೆಂದರೆ, ಶಾಂತಿಯುತ ಪ್ರಜೆಗಳಾಗಿ ಜೀವಿಸುವ ವಿಧವನ್ನು ದೇವರ ರಾಜ್ಯವು ತನ್ನ ಜನರಿಗೆ ಕಲಿಸುವುದು. ಅದೇ ಸಮಯದಲ್ಲಿ, ಅವರನ್ನು ಮಾನವ ಪರಿಪೂರ್ಣತೆಯ ಪರಾಕಾಷ್ಠತೆಗೆ ಏರಿಸುವುದು. (ಯೋಹಾನ 17:3; ರೋಮಾಪುರ 8:21) ಇವೆಲ್ಲವುಗಳ ನಂತರ, ಮಾನವಕುಲವು ಬಲಹೀನತೆಗಳೊಂದಿಗೆ ಮತ್ತು ಪಾಪಪೂರ್ಣ ಪ್ರವೃತ್ತಿಗಳೊಂದಿಗೆ ಹೋರಾಡಬೇಕಾಗಿರುವುದಿಲ್ಲ. ಆಗ, ಪರಿಪೂರ್ಣ ಮಾನವನಾದ ಯೇಸುವಿನ ವಿಷಯದಲ್ಲಿ ನೋಡಿದಂತೆ, ದೇವರಿಗೆ ಪರಿಪೂರ್ಣ ವಿಧೇಯತೆಯನ್ನು ತೋರಿಸುವುದು ಸುಲಭವೂ ಸಂತೋಷಕರವೂ ಆಗಿರುವುದು. (ಯೆಶಾಯ 11:3) ವಾಸ್ತವದಲ್ಲಿ ಅತ್ಯಂತ ಘೋರ ಯಾತನೆ ಮತ್ತು ಶೋಧನೆಯ ಮಧ್ಯೆಯೂ ಯೇಸು ದೇವರಿಗೆ ನಂಬಿಗಸ್ತನಾಗಿ ಉಳಿದನು. ಆದರೆ, ಇಂಥ ವಿಷಯಗಳು ಪ್ರಮೋದವನದಲ್ಲಿ ಖಂಡಿತವಾಗಿಯೂ ಇರಲಾರದು.​—⁠ಇಬ್ರಿಯ 7:⁠26.

ಕೆಲವರು ಸ್ವರ್ಗಕ್ಕೆ ಯಾಕೆ ಹೋಗುತ್ತಾರೆ?

ಬೈಬಲನ್ನು ಓದಿರುವ ಅನೇಕರಿಗೆ ಯೇಸುವಿನ ಈ ಮಾತುಗಳು ಚಿರಪರಿಚಿತವಾಗಿವೆ. ಅದೇನೆಂದರೆ, ‘ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; . . . ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತಿದ್ದೇನೆ.’ (ಯೋಹಾನ 14:​2, 3) ಹಾಗಾದರೆ, ಪ್ರಮೋದವನ ಭೂಮಿಯ ಮೇಲೆ ಜೀವಿಸುವಂತಹ ವಿಚಾರವು ಇದಕ್ಕೆ ವಿರುದ್ಧವಾಗಿಲ್ಲವೇ? ಎಂದು ನೀವು ಕೇಳಬಹುದು.

ಈ ಬೋಧನೆಗಳು ಒಂದಕ್ಕೊಂದು ವಿರುದ್ಧವಾದುವುಗಳಲ್ಲ. ವಾಸ್ತವದಲ್ಲಿ ಅವು ಒಂದನ್ನೊಂದು ಬೆಂಬಲಿಸುತ್ತವೆ. ಅದು ಹೇಗೆಂದು ನೋಡೋಣವೇ? ನಂಬಿಗಸ್ತ ಕ್ರೈಸ್ತರಲ್ಲಿ ಸ್ವಲ್ಪ ಮಂದಿ ಮಾತ್ರ, ಅಂದರೆ 1,44,000 ಮಂದಿ ಮಾತ್ರ ಆತ್ಮ ಜೀವಿಗಳಾಗಿ ಸ್ವರ್ಗೀಯ ಜೀವನಕ್ಕೆ ಎಬ್ಬಿಸಲ್ಪಡುವರು ಎಂಬುದಾಗಿ ಬೈಬಲ್‌ ಹೇಳುತ್ತದೆ. ಇವರಿಗೆ ಮಾತ್ರ ಯಾಕೆ ಇಂಥ ಅದ್ಭುತಕರ ಬಹುಮಾನವು ಕೊಡಲ್ಪಡುತ್ತದೆ? ಯಾಕೆಂದರೆ, “ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಸಾವಿರ ವರುಷ ಆಳುವ” ಇವರು ಯೋಹಾನನು ದರ್ಶನದಲ್ಲಿ ನೋಡಿದ ಗುಂಪಿನವರಾಗಿದ್ದಾರೆ. (ಪ್ರಕಟನೆ 14:​1, 3; 20:​4-6) ಈ 1,44,000 ಮಂದಿಯನ್ನು ಭೂಮಿಯ ಕೋಟ್ಯಂತರ ಜನರಿಗೆ ಹೋಲಿಸುವಾಗ, ಇವರು ನಿಜವಾಗಿಯೂ “ಚಿಕ್ಕ ಹಿಂಡೇ” ಆಗಿದ್ದಾರೆ. (ಲೂಕ 12:32) ಅಷ್ಟುಮಾತ್ರವಲ್ಲದೆ, ಯೇಸುವಿನಂತೆ ಇವರು ಸಹ ಮಾನವರಿಗೆ ಸಾಮಾನ್ಯವಾಗಿರುವ ಸಮಸ್ಯೆಗಳನ್ನು ಅನುಭವಿಸಿರುವುದರಿಂದ, ಭೂಮಿಯ ಮೇಲೆ ಮಾನವರ ಪುನಃಸ್ಥಾಪನೆಯ ಮೇಲ್ವಿಚಾರಣೆಯನ್ನು ಮಾಡುವಾಗ ಇವರು ‘ನಮ್ಮ ನಿರ್ಬಲಾವಸ್ಥೆಯ ಕುರಿತು ಅನುತಾಪವನ್ನು’ ತೋರಿಸಲು ಶಕ್ತರಾಗಿರುವರು.​—⁠ಇಬ್ರಿಯ 4:⁠15.

ಭೂಮಿ​—⁠ಮಾನವನ ನಿತ್ಯ ನಿವಾಸ

ದೇವರು ಯೇಸುಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವನ್ನು ಒದಗಿಸುವ ಮೂಲಕ, ಸುಮಾರು 2,000 ವರ್ಷಗಳ ಹಿಂದೆಯೇ 1,44,000 ಮಂದಿಯನ್ನು ಒಟ್ಟುಗೂಡಿಸುವ ಕೆಲಸವನ್ನು ಪ್ರಾರಂಭಿಸಿದನು. ಮತ್ತು ಈ ಗುಂಪು ಈಗ ಪೂರ್ಣಗೊಂಡಿದೆ ಎಂದು ಸೂಚನೆಗಳು ತೋರಿಸುತ್ತವೆ. (ಅ. ಕೃತ್ಯಗಳು 2:​1-4; ಗಲಾತ್ಯ 4:​4-7) ಹಾಗಿದ್ದರೂ, ಯೇಸುವಿನ ಯಜ್ಞವು 1,44,000 ಮಂದಿಯ ಪಾಪಕ್ಕಾಗಿ ಮಾತ್ರವಲ್ಲ, ಬದಲಿಗೆ “ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡು”ವುದಕ್ಕಾಗಿದೆ. (1 ಯೋಹಾನ 2:2) ಆದುದರಿಂದ, ಯೇಸುವಿನಲ್ಲಿ ನಂಬಿಕೆಯನ್ನು ಇಡುವವರಿಗೆ ನಿತ್ಯ ಜೀವದ ನಿರೀಕ್ಷೆಯಿದೆ. (ಯೋಹಾನ 3:16) ದೇವರ ನೆನಪಿನಲ್ಲಿದ್ದು ಸಮಾಧಿಗಳಲ್ಲಿ ನಿದ್ರಿಸುತ್ತಿರುವವರನ್ನು ಆತನು ಪುನರುತ್ಥಾನಗೊಳಿಸುವನು. ಆದರೆ ಅವರು ಸ್ವರ್ಗಕ್ಕೆ ಹೋಗಲು ಅಲ್ಲ, ಬದಲಿಗೆ ಶುಚಿಗೊಳಿಸಲ್ಪಟ್ಟ ಭೂಮಿಯ ಮೇಲೆ ಜೀವಿಸುವುದಕ್ಕಾಗಿ ಪುನರುತ್ಥಾನಗೊಳಿಸಲ್ಪಡುವರು. (ಪ್ರಸಂಗಿ 9:5; ಯೋಹಾನ 11:​11-13, 25; ಅ. ಕೃತ್ಯಗಳು 24:15) ಆದರೆ, ಅವರಿಗೆ ಅಲ್ಲಿ ಏನು ಸಿಗಲಿರುವುದು?

ಪ್ರಕಟನೆ 21:​1-4 ಇದಕ್ಕೆ ಉತ್ತರವನ್ನು ಕೊಡುತ್ತದೆ. ಅದು ಹೇಳುವುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಓರೆ ಅಕ್ಷರಗಳು ನಮ್ಮವು) ಮಾನವರು ಮರಣದಿಂದ ಬಿಡುಗಡೆಯಾಗುವುದನ್ನು ಹಾಗೂ ದುಃಖ ಮತ್ತು ಗೋಳಾಟಕ್ಕೆ ಕಾರಣವಾಗಿರುವ ವಿಷಯಗಳನ್ನು ಇನ್ನೆಂದಿಗೂ ಇಲ್ಲದೆ ಹೋಗುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ! ಕೊನೆಯಲ್ಲಿ, ಭೂಮಿಗಾಗಿ ಮತ್ತು ಮಾನವಕುಲಕ್ಕಾಗಿರುವ ದೇವರ ಮೂಲ ಉದ್ದೇಶಗಳು ಮಹಿಮಾಭರಿತ ನೆರವೇರಿಕೆಯನ್ನು ಹೊಂದುವವು.​—⁠ಆದಿಕಾಂಡ 1:​27, 28.

ಜೀವ ಅಥವಾ ಮರಣ​—⁠ನಮ್ಮ ಆಯ್ಕೆಯಾಗಿದೆ

ದೇವರು, ಆದಾಮ ಮತ್ತು ಹವ್ವರಿಗೆ ಸ್ವರ್ಗಕ್ಕೆ ಹೋಗುವ ಆಯ್ಕೆಯನ್ನು ಎಂದೂ ಕೊಟ್ಟಿರಲಿಲ್ಲ. ಅವರಿಗಿದ್ದದ್ದು ಎರಡೇ ಆಯ್ಕೆ, ಒಂದು ದೇವರಿಗೆ ವಿಧೇಯರಾಗಿ ಪ್ರಮೋದವನದಲ್ಲಿ ನಿತ್ಯ ಜೀವವನ್ನು ಅನುಭವಿಸುವುದು ಇಲ್ಲವೇ ಆತನಿಗೆ ಅವಿಧೇಯರಾಗಿ ಸಾಯುವುದು. ದುಃಖಕರವಾಗಿ, ದೇವರಿಗೆ ಅವಿಧೇಯರಾಗಿ “ಮಣ್ಣಿಗೆ” ಹಿಂದಿರುಗುವುದನ್ನೇ ಅವರು ಆಯ್ದುಕೊಂಡರು. (ಆದಿಕಾಂಡ 2:​16, 17; 3:​2-5, 19) ಆದರೆ, ಜನಸಾಮಾನ್ಯರಿಂದ ಕೂಡಿರುವ ಮಾನವ ಕುಟುಂಬವು ಸತ್ತು ಸಮಾಧಿಯ ಮೂಲಕ ಸ್ವರ್ಗವನ್ನು ತುಂಬಬೇಕು ಎಂಬುದು ಎಂದೂ ದೇವರ ಉದ್ದೇಶವಾಗಿರಲಿಲ್ಲ. ಯಾಕೆಂದರೆ, ಸ್ವರ್ಗದಲ್ಲಿ ಜೀವಿಸುವುದಕ್ಕಾಗಿ ದೇವರು ಅಸಂಖ್ಯಾತ ದೇವದೂತರನ್ನು ಸೃಷ್ಟಿಸಿದನು; ಈ ಆತ್ಮ ಜೀವಿಗಳು, ಸತ್ತುಹೋಗಿ ನಂತರ ಸ್ವರ್ಗದಲ್ಲಿ ಜೀವಿಸುವುದಕ್ಕಾಗಿ ಪುನರುತ್ಥಾನವಾಗಿರುವ ಮಾನವರಲ್ಲ.​—⁠ಕೀರ್ತನೆ 104:​1, 4; ದಾನಿಯೇಲ 7:⁠10.

ಹಾಗಾದರೆ, ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ನಾವೇನು ಮಾಡಬೇಕು? ಮೊದಲನೇ ಹೆಜ್ಜೆಯು, ದೇವರ ವಾಕ್ಯವಾದ ಪವಿತ್ರ ಬೈಬಲನ್ನು ಓದುವುದೇ ಆಗಿದೆ. ಇದರ ಕುರಿತಾಗಿ ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”​—⁠ಯೋಹಾನ 17:⁠3.

ಆ ಜ್ಞಾನವನ್ನು ಕಾರ್ಯರೂಪಕ್ಕೆ ಹಾಕುವುದು, ಪ್ರಮೋದವನದಲ್ಲಿ ನಿರಂತರ ಸಂತೋಷವನ್ನು ಅನುಭವಿಸುವುದಕ್ಕೆ ಎರಡನೇ ಹೆಜ್ಜೆಯಾಗಿದೆ. (ಯಾಕೋಬ 1:​22-24) ದೇವರ ವಾಕ್ಯದ ಪ್ರಕಾರ ಜೀವಿಸುವವರು, “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ [ಮಾನವಕುಲ] ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು” (ಓರೆ ಅಕ್ಷರಗಳು ನಮ್ಮವು) ಎಂದು ಹೇಳಿರುವ ಯೆಶಾಯ 11:9ರಲ್ಲಿರುವಂಥ ಪ್ರವಾದನೆಗಳು ನೆರವೇರುವುದನ್ನು ಕಣ್ಣಾರೆ ಕಾಣುವ ಪ್ರತೀಕ್ಷೆಯನ್ನು ಹೊಂದಿರುವರು.

[ಪಾದಟಿಪ್ಪಣಿ]

^ ಪ್ಯಾರ. 7 ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿ ದೇವರು ಏಕೆ ದುಷ್ಟತನವನ್ನು ಸಹಿಸಿಕೊಂಡಿದ್ದಾನೆ ಎಂಬುದರ ಕುರಿತ ಚರ್ಚೆಗಾಗಿ, ನಿತ್ಯ ಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಲ್ಲಿ ಪುಟ 70-9ನ್ನು ನೋಡಿ. ಈ ಪುಸ್ತಕವು ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.

[ಪುಟ 7ರಲ್ಲಿರುವ ಚಿತ್ರಗಳು]

“ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”​—⁠ಕೀರ್ತನೆ 37:⁠29