ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಯೋಜನಕರ ಹಾಗೂ ಆನಂದದಾಯಕವಾದ ಬೈಬಲ್‌ ವಾಚನ

ಪ್ರಯೋಜನಕರ ಹಾಗೂ ಆನಂದದಾಯಕವಾದ ಬೈಬಲ್‌ ವಾಚನ

ಪ್ರಯೋಜನಕರ ಹಾಗೂ ಆನಂದದಾಯಕವಾದ ಬೈಬಲ್‌ ವಾಚನ

“ನೀನು . . . ಅದನ್ನು ಹಗಲಿರುಳು ಓದುತ್ತಿರಬೇಕು.”​—⁠ಯೆಹೋಶುವ 1:⁠8, NW.

1. ಸಾಮಾನ್ಯ ರೀತಿಯ ವಾಚನದಿಂದ ಮತ್ತು ಅದರಲ್ಲೂ ವಿಶೇಷವಾಗಿ ಬೈಬಲ್‌ ವಾಚನದಿಂದ ಸಿಗುವ ಕೆಲವು ಪ್ರಯೋಜನಗಳು ಯಾವುವು?

ಒಳ್ಳೆಯ ಪುಸ್ತಕಗಳನ್ನು ಓದುವುದು ಪ್ರಯೋಜನಕರವಾದ ಒಂದು ಹವ್ಯಾಸವಾಗಿದೆ. ಫ್ರೆಂಚ್‌ ರಾಜಕೀಯ ತತ್ವಜ್ಞಾನಿಯಾದ ಮಾಂಟೆಸ್‌ಕ್ಯೂ (ಚಾರ್ಲ್ಸ್‌-ಲೂಯಿಸ್‌ ಡ ಸೆಕೆಂಡಾಟ್‌) ಬರೆದುದು: “ನನಗಾದರೋ, ಬೇಸರವನ್ನು ಹೋಗಲಾಡಿಸಲು ವಾಚನವು ಯಾವಾಗಲೂ ಸರ್ವೋತ್ಕೃಷ್ಟ ಸಹಾಯಕವಾಗಿ ಕಂಡುಬಂದಿದೆ. ನಾನು ಕೆಲವೊಮ್ಮೆ ಕಷ್ಟ ಮತ್ತು ನೋವನ್ನು ಅನುಭವಿಸಿರುವುದಾದರೂ, ಒಂದು ತಾಸಿನ ವಾಚನವು ಅಂತಹ ನೋವನ್ನು ಹೋಗಲಾಡಿಸಿದೆ. ಬಹಳಷ್ಟು ಮಟ್ಟಿಗೆ, ಬೈಬಲ್‌ ವಾಚನದ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಆದುದರಿಂದಲೇ, ಪ್ರೇರಿತ ಕೀರ್ತನೆಗಾರನು ಹೇಳಿದ್ದು: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ.”​—⁠ಕೀರ್ತನೆ 19:​7, 8.

2. ದೀರ್ಘಕಾಲದಿಂದಲೂ ಯೆಹೋವನು ಬೈಬಲನ್ನು ಏಕೆ ಜೋಪಾನವಾಗಿ ಸಂರಕ್ಷಿಸಿದ್ದಾನೆ, ಮತ್ತು ತನ್ನ ಜನರು ಏನು ಮಾಡುವಂತೆ ಆತನು ನಿರೀಕ್ಷಿಸುತ್ತಾನೆ?

2 ಬೈಬಲ್‌ ವಿರುದ್ಧ ಧಾರ್ಮಿಕ ಹಾಗೂ ಐಹಿಕ ವಿರೋಧಿಗಳು ಅನೇಕ ಶತಮಾನಗಳಿಂದ ವಿಪರೀತ ಆಕ್ಷೇಪಣೆಯನ್ನು ಒಡ್ಡಿರುವುದಾದರೂ, ಬೈಬಲಿನ ಗ್ರಂಥಕರ್ತನಾಗಿರುವ ಯೆಹೋವ ದೇವರು ಅದನ್ನು ಜೋಪಾನವಾಗಿ ಸಂರಕ್ಷಿಸಿದ್ದಾನೆ. ಏಕೆಂದರೆ “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಆತನ ಚಿತ್ತವಾಗಿದೆ. ಈ ಕಾರಣದಿಂದಲೇ ಆತನು ಸರ್ವ ಮಾನವಕುಲಕ್ಕೆ ತನ್ನ ವಾಕ್ಯವನ್ನು ಲಭ್ಯಗೊಳಿಸಿದ್ದಾನೆ. (1 ತಿಮೊಥೆಯ 2:⁠4) ಕೇವಲ 100 ಭಾಷೆಗಳನ್ನು ಉಪಯೋಗಿಸುವ ಮೂಲಕ ಭೂನಿವಾಸಿಗಳಲ್ಲಿ ಸುಮಾರು 80 ಪ್ರತಿಶತ ಜನರನ್ನು ತಲಪಸಾಧ್ಯವಿದೆ ಎಂದು ಅಂದಾಜುಮಾಡಲಾಗಿದೆ. ಆದರೆ, ಇಡೀ ಬೈಬಲು ಈಗ 370 ಭಾಷೆಗಳಲ್ಲಿ ಲಭ್ಯವಿದೆ, ಮತ್ತು ಪವಿತ್ರಶಾಸ್ತ್ರದ ಕೆಲವು ಭಾಗಗಳು, 1,860 ಭಾಷೆಗಳು ಮತ್ತು ಉಪಭಾಷೆಗಳಲ್ಲಿವೆ. ತನ್ನ ಜನರು ತನ್ನ ವಾಕ್ಯವನ್ನು ಓದಬೇಕೆಂದು ಯೆಹೋವನು ಬಯಸುತ್ತಾನೆ. ತನ್ನ ವಾಕ್ಯಕ್ಕೆ ಗಮನಕೊಡುವಂತಹ ಹಾಗೂ ಪ್ರತಿ ದಿನ ಅದನ್ನು ಓದುವಂತಹ ತನ್ನ ಸೇವಕರನ್ನು ಆತನು ಆಶೀರ್ವದಿಸುತ್ತಾನೆ.​—⁠ಕೀರ್ತನೆ 1:​1, 2.

ಮೇಲ್ವಿಚಾರಕರು ಬೈಬಲನ್ನು ಓದುವ ಅಗತ್ಯವಿದೆ

3, 4. ಇಸ್ರಾಯೇಲಿನ ಅರಸರು ಏನು ಮಾಡುವಂತೆ ಯೆಹೋವನು ಕೇಳಿಕೊಂಡನು, ಮತ್ತು ಈ ಆವಶ್ಯಕತೆಗಾಗಿರುವ ಯಾವ ಕಾರಣಗಳು ಇಂದಿನ ಕ್ರೈಸ್ತ ಹಿರಿಯರಿಗೂ ಅನ್ವಯಿಸುತ್ತವೆ?

3 ಇಸ್ರಾಯೇಲ್‌ ಜನಾಂಗದ ಮೇಲೆ ಒಬ್ಬ ಮಾನವ ಅರಸನು ಆಳ್ವಿಕೆ ನಡೆಸುವಂತಹ ಸಮಯದ ಕುರಿತಾಗಿ ಮಾತಾಡುತ್ತಾ ಯೆಹೋವನು ಹೇಳಿದ್ದು: “ಅವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು. ಅವನು ಮದದಿಂದ ತನ್ನ ಸ್ವದೇಶದವರನ್ನು ಹಿಯ್ಯಾಳಿಸದೆ ಯೆಹೋವನ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳದೆ ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸುವದಕ್ಕೆ ಅಭ್ಯಾಸಮಾಡಿಕೊಳ್ಳುವಂತೆ ಈ ಗ್ರಂಥವು ಅವನ ಬಳಿಯಲ್ಲೇ ಇರಬೇಕು; ಅವನು ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ ಇರಬೇಕು.”​—⁠ಧರ್ಮೋಪದೇಶಕಾಂಡ 17:​18-20.

4 ಇಸ್ರಾಯೇಲ್‌ನ ಎಲ್ಲ ಭಾವೀ ಅರಸರು ಧರ್ಮಶಾಸ್ತ್ರವನ್ನು ಪ್ರತಿ ದಿನ ಓದುವಂತೆ ಯೆಹೋವನು ಏಕೆ ಕೇಳಿಕೊಂಡನು ಎಂಬುದಕ್ಕಿರುವ ಕಾರಣಗಳನ್ನು ಗಮನಿಸಿರಿ: (1) “ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸುವದಕ್ಕೆ ಅಭ್ಯಾಸಮಾಡಿಕೊಳ್ಳುವಂತೆ”; (2) ‘ಅವನು ಮದದಿಂದ ತನ್ನ ಸ್ವದೇಶದವರನ್ನು ಹಿಯ್ಯಾಳಿಸದಿರುವಂತೆ’; (3) ‘ಯೆಹೋವನ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳದಿರುವಂತೆ.’ ಅಂತೆಯೇ, ಇಂದಿರುವ ಕ್ರೈಸ್ತ ಮೇಲ್ವಿಚಾರಕರು ಯೆಹೋವನಿಗೆ ಭಯಪಡುವ, ಆತನ ನಿಯಮಗಳಿಗೆ ವಿಧೇಯರಾಗುವ, ತಮ್ಮ ಸಹೋದರರಿಗಿಂತ ತಮ್ಮನ್ನು ಶ್ರೇಷ್ಟರೆಂದೆಣಿಸಿಕೊಳ್ಳುವುದರಿಂದ ದೂರವಿರುವ, ಹಾಗೂ ಯೆಹೋವನ ಆಜ್ಞೆಗಳನ್ನು ಮೀರಿ ನಡೆಯುವುದನ್ನು ತೊರೆಯಬೇಕು. ಹಾಗಾದರೆ, ಧರ್ಮಶಾಸ್ತ್ರವನ್ನು ಓದುವುದು ಇಸ್ರಾಯೇಲ್‌ನ ಅರಸರಿಗೆ ಪ್ರಾಮುಖ್ಯವಾಗಿದ್ದಂತೆಯೇ, ಇಂದು ಪ್ರತಿ ದಿನ ಬೈಬಲನ್ನು ಓದುವುದು ಕ್ರೈಸ್ತ ಮೇಲ್ವಿಚಾರಕರಿಗೂ ಪ್ರಾಮುಖ್ಯವಾದದ್ದಾಗಿದೆ.

5. ಬೈಬಲ್‌ ವಾಚನದ ಕುರಿತು ಇತ್ತೀಚೆಗೆ ಆಡಳಿತ ಮಂಡಲಿಯು ಬ್ರಾಂಚ್‌ ಕಮಿಟಿಯ ಸದಸ್ಯರಿಗೆ ಏನೆಂದು ಪತ್ರ ಬರೆಯಿತು, ಮತ್ತು ಎಲ್ಲ ಕ್ರೈಸ್ತ ಹಿರಿಯರು ಸಹ ಆ ಸಲಹೆಯನ್ನು ಅನುಸರಿಸುವುದು ಏಕೆ ಉಪಯುಕ್ತವಾಗಿದೆ?

5 ಇಂದು ಕ್ರೈಸ್ತ ಹಿರಿಯರಿಗೆ ತುಂಬ ಜವಾಬ್ದಾರಿಗಳಿವೆ. ಆದುದರಿಂದ, ದೈನಂದಿನ ಬೈಬಲ್‌ ವಾಚನವು ಒಂದು ಪಂಥಾಹ್ವಾನವಾಗಿದೆ. ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರು ಮತ್ತು ಲೋಕವ್ಯಾಪಕವಾಗಿರುವ ಬ್ರಾಂಚ್‌ ಕಮಿಟಿಗಳ ಸದಸ್ಯರಿಗೆ ತುಂಬ ಜವಾಬ್ದಾರಿಗಳಿರುತ್ತವೆ. ಹಾಗೂ ಅವರು ತುಂಬ ಕಾರ್ಯಮಗ್ನರಾಗಿರುತ್ತಾರೆ. ಆದರೆ ಇತ್ತೀಚೆಗೆ ಆಡಳಿತ ಮಂಡಲಿಯು ಎಲ್ಲ ಬ್ರಾಂಚ್‌ ಕಮಿಟಿಗಳಿಗೆ ಒಂದು ಪತ್ರವನ್ನು ಕಳುಹಿಸಿತು. ಅದರಲ್ಲಿ ದೈನಂದಿನ ಬೈಬಲ್‌ ವಾಚನವನ್ನು ಹಾಗೂ ಕ್ರಮವಾದ ಅಭ್ಯಾಸದ ಹವ್ಯಾಸಗಳನ್ನು ಕಾಪಾಡಿಕೊಳ್ಳುವುದರ ಅಗತ್ಯವನ್ನು ಒತ್ತಿಹೇಳಲಾಯಿತು. ಇದೇ ಪತ್ರವು ತಿಳಿಸಿದ್ದೇನೆಂದರೆ, ಒಂದುವೇಳೆ ನಾವು ಕ್ರಮವಾಗಿ ಬೈಬಲ್‌ ಓದುವಲ್ಲಿ, ಅದು ಯೆಹೋವನಿಗಾಗಿರುವ ಮತ್ತು ಸತ್ಯಕ್ಕಾಗಿರುವ ನಮ್ಮ ಪ್ರೀತಿಯನ್ನು ಹೆಚ್ಚಿಸುವುದು ಮಾತ್ರವಲ್ಲ, “ಮಹಿಮಾಭರಿತ ಅಂತ್ಯದ ತನಕ ನಮ್ಮ ನಂಬಿಕೆ, ಸಂತೋಷ, ಹಾಗೂ ತಾಳ್ಮೆಯನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯಮಾಡುವುದು.” ಯೆಹೋವನ ಸಾಕ್ಷಿಗಳ ಸಭೆಗಳಲ್ಲಿರುವ ಎಲ್ಲ ಹಿರಿಯರು ಸಹ ಈ ಆವಶ್ಯಕತೆಯನ್ನು ಪೂರೈಸಬೇಕು. ಪ್ರತಿ ದಿನ ಶಾಸ್ತ್ರವಚನಗಳನ್ನು ಓದುವುದು, “ವಿವೇಚನೆಯಿಂದ ಕಾರ್ಯನಡಿಸುವಂತೆ” (NW) ಅವರಿಗೆ ಸಹಾಯಮಾಡುವುದು. (ಯೆಹೋಶುವ 1:​7, 8) ವಿಶೇಷವಾಗಿ ಅವರಿಗೆ, ಬೈಬಲ್‌ ವಾಚನವು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.”​—⁠2 ತಿಮೊಥೆಯ 3:⁠16.

ಎಳೆಯರಿಗೂ ವೃದ್ಧರಿಗೂ ಒಂದು ಆವಶ್ಯಕತೆ

6. ಒಟ್ಟುಗೂಡಿಸಲ್ಪಟ್ಟಿದ್ದ ಇಸ್ರಾಯೇಲ್‌ ಕುಲಗಳು ಹಾಗೂ ಅನ್ಯರ ಮುಂದೆ ಯೆಹೋಶುವನು ಯೆಹೋವನ ಧರ್ಮಶಾಸ್ತ್ರದ ಮಾತುಗಳನ್ನು ಏಕೆ ಗಟ್ಟಿಯಾಗಿ ಓದಿದನು?

6 ಪುರಾತನ ಸಮಯಗಳಲ್ಲಿ, ವೈಯಕ್ತಿಕ ಉಪಯೋಗಕ್ಕಾಗಿ ಶಾಸ್ತ್ರಗಳ ಬಿಡಿ ಪ್ರತಿಗಳು ಲಭ್ಯವಿರಲಿಲ್ಲ. ಆದುದರಿಂದ, ಒಟ್ಟುಗೂಡಿಸಲ್ಪಟ್ಟಿದ್ದ ಜನಸಮೂಹಗಳ ಮುಂದೆ ಬೈಬಲನ್ನು ಓದಲಾಗುತ್ತಿತ್ತು. ಒಂದು ಬಾರಿ, ಯೆಹೋಶುವನು ಆಯಿ ಎಂಬ ಪಟ್ಟಣವನ್ನು ಜಯಿಸುವಂತೆ ಯೆಹೋವನು ಅನುಮತಿಸಿದಾಗ, ಯೆಹೋಶುವನು ಏಬಾಲ್‌ ಬೆಟ್ಟ ಹಾಗೂ ಗೆರಿಜ್ಜೀಮ್‌ ಬೆಟ್ಟದ ಮುಂದೆ ಇಸ್ರಾಯೇಲ್‌ ಕುಲಗಳನ್ನು ಒಟ್ಟುಗೂಡಿಸಿದನು. ತದನಂತರ, ಏನಾಯಿತೆಂಬುದನ್ನು ಆ ವೃತ್ತಾಂತವು ನಮಗೆ ತಿಳಿಸುತ್ತದೆ: “ಯೆಹೋಶುವನು ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದಶಾಪವಾಕ್ಯಗಳನ್ನು ಆ ಗ್ರಂಥದಲ್ಲಿ ಇದ್ದ ಹಾಗೆಯೇ ಓದಿದನು. ಮೋಶೆಯು ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಹೆಂಗಸರಿಗೂ ಚಿಕ್ಕವರಿಗೂ ಅವರಲ್ಲಿದ್ದ ಅನ್ಯದೇಶಸ್ಥರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಓದಿದನು.” (ಯೆಹೋಶುವ 8:​34, 35) ಎಂತಹ ನಡತೆಯನ್ನು ಯೆಹೋವನು ಆಶೀರ್ವದಿಸುತ್ತಾನೆ ಮತ್ತು ಎಂತಹ ನಡತೆಯನ್ನು ಯೆಹೋವನು ಅಸಮ್ಮತಿಸುತ್ತಾನೆ ಎಂಬುದನ್ನು ಎಳೆಯರು, ವೃದ್ಧರು, ಸ್ವದೇಶಸ್ಥರು, ಹಾಗೂ ಅನ್ಯರ ಹೃದಮನಗಳ ಮೇಲೆ ಅಚ್ಚೊತ್ತುವ ಅಗತ್ಯವಿತ್ತು. ಆದುದರಿಂದ, ಕ್ರಮವಾಗಿ ಮಾಡಲ್ಪಡುವ ಬೈಬಲ್‌ ವಾಚನವು ಖಂಡಿತವಾಗಿಯೂ ಈ ವಿಷಯದಲ್ಲಿ ನಮಗೆ ಸಹಾಯಮಾಡುವುದು.

7, 8. (ಎ) ಇಂದು ಯಾರು “ಅನ್ಯ”ರಂತಿದ್ದಾರೆ, ಮತ್ತು ಅವರು ಪ್ರತಿ ದಿನ ಬೈಬಲನ್ನು ಏಕೆ ಓದಬೇಕು? (ಬಿ) ಯೆಹೋವನ ಜನರ ನಡುವೆ ಇರುವ ‘ಚಿಕ್ಕವರು’ ಯಾವ ವಿಧಗಳಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸಸಾಧ್ಯವಿದೆ?

7 ಇಂದು, ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು ಆತ್ಮಿಕ ಅರ್ಥದಲ್ಲಿ ಆ “ಅನ್ಯ”ರಂತಿದ್ದಾರೆ. ಒಂದು ಕಾಲದಲ್ಲಿ ಅವರು ಲೋಕದ ಮಟ್ಟಗಳಿಗನುಸಾರ ಜೀವಿಸುತ್ತಿದ್ದರೂ, ಈಗ ತಮ್ಮ ವ್ಯಕ್ತಿತ್ವಗಳನ್ನು ಬದಲಾಯಿಸಿಕೊಂಡಿದ್ದಾರೆ. (ಎಫೆಸ 4:​22-24; ಕೊಲೊಸ್ಸೆ 3:​7, 8) ಒಳ್ಳೆಯದರ ಹಾಗೂ ಕೆಟ್ಟದ್ದರ ಕುರಿತಾದ ಯೆಹೋವನ ಮಟ್ಟಗಳನ್ನು ಅವರು ಸತತವಾಗಿ ಜ್ಞಾಪಿಸಿಕೊಳ್ಳಬೇಕಾಗಿದೆ. (ಆಮೋಸ 5:​14, 15) ದೇವರ ವಾಕ್ಯದ ದೈನಂದಿನ ವಾಚನವು ಇದನ್ನು ಮಾಡಲು ಅವರಿಗೆ ಸಹಾಯಮಾಡುತ್ತದೆ.​—⁠ಇಬ್ರಿಯ 4:12; ಯಾಕೋಬ 1:⁠25.

8 ಇಂದು ಸಹ ಯೆಹೋವನ ಜನರ ನಡುವೆ ಬಹಳಷ್ಟು ಮಂದಿ ‘ಚಿಕ್ಕವರು’ ಇದ್ದಾರೆ. ಈ ಚಿಕ್ಕ ಮಕ್ಕಳ ಹೆತ್ತವರು ಅವರಿಗೆ ಯೆಹೋವನ ಮಟ್ಟಗಳನ್ನು ಕಲಿಸುತ್ತಾರಾದರೂ, ಆತನ ಚಿತ್ತವು ಯೋಗ್ಯವಾದದ್ದು ಎಂಬುದನ್ನು ಸ್ವತಃ ಮಕ್ಕಳೇ ಮನದಟ್ಟುಮಾಡಿಕೊಳ್ಳಬೇಕು. (ರೋಮಾಪುರ 12:​1, 2) ಅವರು ಇದನ್ನು ಹೇಗೆ ಮಾಡಸಾಧ್ಯವಿದೆ? ಇಸ್ರಾಯೇಲಿನಲ್ಲಿ, ಯಾಜಕರು ಹಾಗೂ ಹಿರಿಯರಿಗೆ ಹೀಗೆ ಆಜ್ಞಾಪಿಸಲಾಗಿತ್ತು: “ನಿಮ್ಮ ದೇವರಾದ ಯೆಹೋವನು ಆದುಕೊಂಡ ಸ್ಥಳದಲ್ಲಿ ಇಸ್ರಾಯೇಲ್ಯರೆಲ್ಲರು ಆತನ ಸನ್ನಿಧಿಗೆ ಕೂಡಿಬಂದಾಗ ನೀವು ಅವರೆಲ್ಲರಿಗೂ ಕೇಳಿಸುವಂತೆ ಈ ಧರ್ಮಶಾಸ್ತ್ರವನ್ನು ಅವರ ಮುಂದೆ ಓದಬೇಕು. ಜನರೆಲ್ಲರೂ ಈ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀಪುರುಷರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಅನ್ಯರನ್ನೂ ಕೂಡಿಸಬೇಕು. ಆಗ ಅವರು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯುವರು. ಮತ್ತು ಯೆಹೋವನ ಮಹತ್ಕಾರ್ಯಗಳನ್ನು ನೋಡದಿರುವ ನಿಮ್ಮ ಸಂತತಿಯವರೂ ಕೇಳಿ . . . ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವದಕ್ಕೆ ಕಲಿತುಕೊಳ್ಳುವರು.” (ಧರ್ಮೋಪದೇಶಕಾಂಡ 31:​11-13) ನಿಯಮಶಾಸ್ತ್ರದ ಕೆಳಗೆ ಜೀವಿಸುತ್ತಿದ್ದ ಯೇಸು, 12ರ ಎಳೆಯ ಪ್ರಾಯದಲ್ಲಿಯೇ ತನ್ನ ತಂದೆಯ ನಿಯಮಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ತುಂಬ ಆಸಕ್ತಿಯನ್ನು ತೋರಿಸಿದನು. (ಲೂಕ 2:​41-49) ತದನಂತರ, ಸಭಾಮಂದಿರಕ್ಕೆ ಹೋಗಿ ಶಾಸ್ತ್ರವಚನಗಳನ್ನು ಕೇಳಿಸಿಕೊಳ್ಳುವುದು ಹಾಗೂ ಓದುವುದರಲ್ಲಿ ಭಾಗವಹಿಸುವುದು ಅವನಿಗೆ ವಾಡಿಕೆಯಾಗಿತ್ತು. (ಲೂಕ 4:16; ಅ. ಕೃತ್ಯಗಳು 15:21) ಇಂದು ಎಳೆಯರು, ದೇವರ ವಾಕ್ಯವನ್ನು ಪ್ರತಿ ದಿನ ಓದುವ ಮೂಲಕ ಹಾಗೂ ಬೈಬಲನ್ನು ಓದಿ ಅಭ್ಯಾಸಿಸಲಾಗುವಂತಹ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ ಯೇಸುವಿನ ಮಾದರಿಯನ್ನು ಅನುಸರಿಸಬೇಕು.

ಬೈಬಲ್‌ ವಾಚನಕ್ಕೆ ಆದ್ಯತೆ

9. (ಎ) ನಾವು ಓದುವ ಪುಸ್ತಕಗಳನ್ನು ಸರಿಯಾಗಿ ಆಯ್ಕೆಮಾಡುವುದು ಏಕೆ ಅಗತ್ಯವಾದದ್ದಾಗಿದೆ? (ಬಿ) ಬೈಬಲ್‌ ಅಭ್ಯಾಸ ಸಹಾಯಕಗಳ ವಿಷಯದಲ್ಲಿ ಈ ಪತ್ರಿಕೆಯ ಮೊದಲ ಸಂಪಾದಕರು ಏನೆಂದು ಹೇಳಿದರು?

9 ಜ್ಞಾನಿ ಅರಸನಾದ ಸೊಲೊಮೋನನು ಬರೆದುದು: “ಎಚ್ಚರದಿಂದಿರು; ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿವ್ಯಾಸಂಗವು ದೇಹಕ್ಕೆ ಆಯಾಸ.” (ಪ್ರಸಂಗಿ 12:12) ಇಂದು ಪ್ರಕಾಶಿಸಲ್ಪಡುತ್ತಿರುವ ಅನೇಕ ಪುಸ್ತಕಗಳನ್ನು ಓದುವುದು ದೇಹಕ್ಕೆ ಆಯಾಸಕರವಾಗಿದೆ ಮಾತ್ರವಲ್ಲ, ಮನಸ್ಸಿಗೆ ತುಂಬ ಅಪಾಯಕರವೂ ಆಗಿದೆ ಎಂದು ಒಬ್ಬನು ಧೈರ್ಯದಿಂದ ಹೇಳಬಹುದು. ಆದುದರಿಂದ, ಯಾವ ಪುಸ್ತಕಗಳು ಓದಲು ಯೋಗ್ಯವಾಗಿವೆ ಎಂಬ ವಿಷಯದಲ್ಲಿ ಆಯ್ಕೆಮಾಡುವುದು ಅತಿ ಪ್ರಾಮುಖ್ಯವಾದದ್ದಾಗಿದೆ. ನಾವಾದರೋ, ನಮ್ಮ ಬೈಬಲ್‌ ಅಭ್ಯಾಸದ ಪುಸ್ತಕಗಳನ್ನು ಓದುವುದರ ಜೊತೆಗೆ, ಬೈಬಲನ್ನು ಸಹ ಓದಬೇಕಾಗಿದೆ. ಕಾವಲಿನಬುರುಜು ಪತ್ರಿಕೆಯ ಸಂಪಾದಕರು ವಾಚಕರಿಗೆ ಬರೆದುದು: “ಬೈಬಲು ನಮ್ಮ ಪ್ರಮಾಣ ಗ್ರಂಥವಾಗಿದೆ ಮತ್ತು ದೇವರಿಂದ ನಮಗೆ ಎಷ್ಟೇ ಸಹಾಯಕಗಳು ಕೊಡಲ್ಪಟ್ಟಿರಲಿ, ಅವು ಕೇವಲ ಸಹಾಯಕಗಳಾಗಿವೆ, ಅವು ಬೈಬಲಿಗೆ ಬದಲಿಯಾಗಿ ಕೊಡಲ್ಪಟ್ಟಿಲ್ಲ ಎಂಬುದನ್ನು ಎಂದಿಗೂ ಮರೆಯದಿರಿ.” * ಆದುದರಿಂದ, ನಾವು ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಓದುವುದರ ಜೊತೆಗೆ ಬೈಬಲನ್ನು ಸಹ ಓದಬೇಕು.

10. ಬೈಬಲ್‌ ವಾಚನದ ಪ್ರಮುಖತೆಯನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹೇಗೆ ಒತ್ತಿಹೇಳಿದೆ?

10 ಈ ಆವಶ್ಯಕತೆಯ ಅರಿವುಳ್ಳ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ಅನೇಕ ವರ್ಷಗಳಿಂದ ಬೈಬಲ್‌ ವಾಚನದ ಶೆಡ್ಯೂಲನ್ನು ನೀಡುತ್ತಿದೆ; ಅಂದರೆ ಪ್ರತಿಯೊಂದು ಸಭೆಯಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಒಂದು ಭಾಗವಾಗಿ ಬೈಬಲ್‌ ವಾಚನವು ಮಾಡಲ್ಪಡುತ್ತದೆ. (ಮತ್ತಾಯ 24:45) ಸದ್ಯದ ಬೈಬಲ್‌ ವಾಚನ ಕಾರ್ಯಕ್ರಮವು, ಇಡೀ ಬೈಬಲನ್ನು ಸುಮಾರು ಏಳು ವರ್ಷಗಳ ಕಾಲಾವಧಿಯಲ್ಲಿ ಮುಗಿಸಲು ಸಹಾಯಮಾಡುತ್ತದೆ. ಈ ಶೆಡ್ಯೂಲ್‌ ಎಲ್ಲರಿಗೂ ಪ್ರಯೋಜನಕರವಾಗಿದೆ; ಅದರಲ್ಲೂ ವಿಶೇಷವಾಗಿ, ಇಷ್ಟರ ತನಕ ಎಂದೂ ಬೈಬಲನ್ನು ಸಂಪೂರ್ಣವಾಗಿ ಓದಿರದಂತಹ ಹೊಸಬರಿಗೆ ಇದು ಹೆಚ್ಚು ಪ್ರಯೋಜನಕರವಾಗಿದೆ. ಮಿಷನೆರಿಗಳಿಗಾಗಿರುವ ವಾಚ್‌ಟವರ್‌ ಸ್ಕೂಲ್‌ ಆಫ್‌ ಗಿಲ್ಯಡ್‌ ಮತ್ತು ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗುವವರು ಹಾಗೂ ಬೆತೆಲ್‌ ಕುಟುಂಬದ ಹೊಸ ಸದಸ್ಯರು, ಒಂದು ವರ್ಷದಲ್ಲಿ ಇಡೀ ಬೈಬಲನ್ನು ಓದಿ ಮುಗಿಸಬೇಕೆಂಬುದು ಒಂದು ಆವಶ್ಯಕತೆಯಾಗಿದೆ. ಆದುದರಿಂದ, ವೈಯಕ್ತಿಕವಾಗಿ ಅಥವಾ ಒಂದು ಕುಟುಂಬದೋಪಾದಿ ನೀವು ಯಾವುದೇ ಶೆಡ್ಯೂಲನ್ನು ಅನುಸರಿಸಲಿ, ಅದನ್ನು ಕಾರ್ಯರೂಪಕ್ಕೆ ತರುವುದು ಬೈಬಲ್‌ ವಾಚನಕ್ಕೆ ಆದ್ಯತೆ ನೀಡುವುದನ್ನು ಅಗತ್ಯಪಡಿಸುತ್ತದೆ.

ನಿಮ್ಮ ವಾಚನ ಹವ್ಯಾಸಗಳು ಏನನ್ನು ವ್ಯಕ್ತಪಡಿಸುತ್ತವೆ?

11. ಪ್ರತಿ ದಿನ ಹೇಗೆ ಮತ್ತು ಏಕೆ ನಾವು ಯೆಹೋವನ ಮಾತುಗಳನ್ನು ಸೇವಿಸಬೇಕು?

11 ಬೈಬಲ್‌ ವಾಚನ ಕಾರ್ಯತಖ್ತೆಯನ್ನು ಅನುಸರಿಸುವುದು ನಿಮಗೆ ಕಷ್ಟಕರವಾಗಿರುವಲ್ಲಿ, ಸ್ವತಃ ನಿಮ್ಮನ್ನು ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ಬೇರೆ ಪುಸ್ತಕಗಳನ್ನು ಓದುವ ಅಥವಾ ಟಿವಿ ನೋಡುವ ನನ್ನ ಹವ್ಯಾಸವು, ಯೆಹೋವನ ವಾಕ್ಯವನ್ನು ಓದುವ ನನ್ನ ಸಾಮರ್ಥ್ಯದ ಮೇಲೆ ಯಾವ ಪರಿಣಾಮವನ್ನು ಬೀರಬಹುದು?’ ಮೋಶೆಯು ಏನು ಬರೆದನೋ ಹಾಗೂ ಯೇಸು ಏನನ್ನು ಪುನರಾವರ್ತಿಸಿದನೋ ಅದನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿರಿ. ಅದೇನೆಂದರೆ, “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” (ಮತ್ತಾಯ 4:4; ಧರ್ಮೋಪದೇಶಕಾಂಡ 8:⁠3) ನಮ್ಮ ಶಾರೀರಿಕ ಪೋಷಣೆಗಾಗಿ ನಾವು ಪ್ರತಿ ದಿನ ರೊಟ್ಟಿಯನ್ನು ಅಥವಾ ಅದಕ್ಕೆ ಸರಿದೂಗುವಂತಹ ಆಹಾರವನ್ನು ತಿನ್ನಬೇಕಾಗಿರುವಂತೆಯೇ, ನಮ್ಮ ಆತ್ಮಿಕತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಪ್ರತಿ ದಿನ ಯೆಹೋವನ ಆಲೋಚನೆಗಳನ್ನು ಅರಗಿಸಿಕೊಳ್ಳುವ ಅಗತ್ಯವಿದೆ. ಆದುದರಿಂದ, ಪ್ರತಿ ದಿನ ಬೈಬಲನ್ನು ಓದುವ ಮೂಲಕ ನಾವು ದೇವರ ಆಲೋಚನೆಗಳನ್ನು ತಿಳಿದುಕೊಳ್ಳಸಾಧ್ಯವಿದೆ.

12, 13. (ಎ) ದೇವರ ವಾಕ್ಯಕ್ಕಾಗಿ ನಮಗಿರಬೇಕಾದ ಹಂಬಲವನ್ನು ಅಪೊಸ್ತಲ ಪೇತ್ರನು ಹೇಗೆ ದೃಷ್ಟಾಂತಿಸುತ್ತಾನೆ? (ಬಿ) ಪೌಲನು ಹಾಲಿನ ದೃಷ್ಟಾಂತವನ್ನು ಪೇತ್ರನ ದೃಷ್ಟಾಂತಕ್ಕಿಂತ ಭಿನ್ನವಾದ ರೀತಿಯಲ್ಲಿ ಹೇಗೆ ಉಪಯೋಗಿಸುತ್ತಾನೆ?

12 ನಾವು ಬೈಬಲನ್ನು “ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ” ಅಂಗೀಕರಿಸುವುದಾದರೆ, ಒಂದು ಮಗುವು ತನ್ನ ತಾಯಿಯ ಹಾಲಿಗಾಗಿ ಹಂಬಲಿಸುವಂತೆಯೇ ನಾವು ದೇವರ ವಾಕ್ಯಕ್ಕಾಗಿ ಹಂಬಲಿಸುವೆವು. (1 ಥೆಸಲೊನೀಕ 2:13) ಅಪೊಸ್ತಲ ಪೇತ್ರನು, “ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ; ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ; ಕರ್ತನು ದಯಾಳುವೆಂದು ನೀವು ಅನುಭವದಿಂದ ತಿಳಿದು”ಕೊಳ್ಳುವಿರಿ ಎಂದು ಬರೆಯುತ್ತಾ ಆ ಹೋಲಿಕೆಯನ್ನು ಮಾಡಿದನು. (1 ಪೇತ್ರ 2:​2, 3) “ಕರ್ತನು ದಯಾಳುವೆಂದು” ನಾವು ನಿಜವಾಗಿಯೂ ಅನುಭವದ ಮೂಲಕ ತಿಳಿದುಕೊಂಡಿರುವಲ್ಲಿ, ಬೈಬಲ್‌ ವಾಚನಕ್ಕಾಗಿ ನಾವು ಹಂಬಲವನ್ನು ಬೆಳೆಸಿಕೊಳ್ಳುವೆವು.

13 ಈ ವಚನದಲ್ಲಿ ಪೇತ್ರನು ಹಾಲಿನ ದೃಷ್ಟಾಂತವನ್ನು ಅಪೊಸ್ತಲ ಪೌಲನ ಹೇಳಿಕೆಗಿಂತ ಭಿನ್ನವಾದ ರೀತಿಯಲ್ಲಿ ಉಪಯೋಗಿಸಿದನು ಎಂಬುದನ್ನು ಗಮನಿಸಬೇಕಾಗಿದೆ. ಏಕೆಂದರೆ, ಒಂದು ನವಜಾತ ಶಿಶುವಿಗೆ ಅಗತ್ಯವಿರುವ ಎಲ್ಲ ಪೋಷಕಾಂಶಗಳನ್ನು ಹಾಲು ಒದಗಿಸುತ್ತದೆ. ತದ್ರೀತಿಯಲ್ಲಿ, ‘ಬೆಳೆಯುತ್ತಾ ರಕ್ಷಣೆಯನ್ನು ಹೊಂದಲು’ ನಮಗೆ ಅಗತ್ಯವಿರುವಂತಹ ವಿಷಯಗಳೆಲ್ಲ ದೇವರ ವಾಕ್ಯದಲ್ಲಿ ಇದೆ ಎಂಬುದನ್ನು ಪೇತ್ರನ ದೃಷ್ಟಾಂತವು ತೋರಿಸುತ್ತದೆ. ಇನ್ನೊಂದು ಕಡೆಯಲ್ಲಿ ನೋಡುವುದಾದರೆ, ಆತ್ಮಿಕ ವಿಷಯಗಳಲ್ಲಿ ತಾವು ವಯಸ್ಕರಾಗಿದ್ದೇವೆ ಎಂದು ಹೇಳಿಕೊಳ್ಳುವ ಕೆಲವರು, ಸರಿಯಾದ ರೀತಿಯಲ್ಲಿ ದೇವರ ವಾಕ್ಯದಿಂದ ಆತ್ಮಿಕ ಆಹಾರವನ್ನು ಕ್ರಮವಾಗಿ ಉಣ್ಣದಿರುವುದನ್ನು ದೃಷ್ಟಾಂತಿಸಲಿಕ್ಕಾಗಿ ಪೌಲನು ಹಾಲಿನ ಆವಶ್ಯಕತೆಯನ್ನು ಒತ್ತಿಹೇಳುತ್ತಾನೆ. ಇಬ್ರಿಯರಿಗೆ ಬರೆದ ಪತ್ರದಲ್ಲಿ ಪೌಲನು ಬರೆದುದು: “ಕಾಲವನ್ನು ನೋಡಿದರೆ ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ. ಹಾಲು ಬೇಕಾದವನು ಕೂಸಿನಂತಿದ್ದು ನೀತಿವಾಕ್ಯದಲ್ಲಿ ಅನುಭವವಿಲ್ಲದವನಾಗಿದ್ದಾನೆ. ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು [“ಗ್ರಹಣ ಶಕ್ತಿಗಳನ್ನು,” NW] ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” (ಇಬ್ರಿಯ 5:​12-14) ನಮ್ಮ ಗ್ರಹಣ ಶಕ್ತಿಗಳನ್ನು ವಿಕಸಿಸಲು ಮತ್ತು ಆತ್ಮಿಕ ವಿಷಯಗಳಿಗಾಗಿರುವ ನಮ್ಮ ಹಸಿವನ್ನು ಪ್ರಚೋದಿಸಲು, ಜಾಗರೂಕವಾದ ಬೈಬಲ್‌ ವಾಚನವು ಹೆಚ್ಚಿನ ಸಹಾಯವನ್ನು ಮಾಡಬಲ್ಲದು.

ಬೈಬಲನ್ನು ಓದುವ ವಿಧ

14, 15. (ಎ) ಬೈಬಲಿನ ಲೇಖಕನು ನಮಗೆ ಯಾವ ಸುಯೋಗವನ್ನು ನೀಡುತ್ತಾನೆ? (ಬಿ) ದೈವಿಕ ವಿವೇಕದಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ? (ಉದಾಹರಣೆಗಳನ್ನು ಕೊಡಿ.)

14 ಅತ್ಯಂತ ಪ್ರಯೋಜನಾರ್ಹವಾದ ಬೈಬಲ್‌ ವಾಚನವನ್ನು, ಓದುವ ಮೂಲಕವಲ್ಲ ಬದಲಾಗಿ ಪ್ರಾರ್ಥನೆಯ ಮೂಲಕ ಆರಂಭಿಸಬೇಕು. ಪ್ರಾರ್ಥನೆಯು ಒಂದು ವಿಶೇಷ ಸುಯೋಗವಾಗಿದೆ. ಇದು, ನೀವು ತುಂಬ ಪ್ರಾಮುಖ್ಯವಾದ ವಿಷಯವಿರುವ ಒಂದು ಪುಸ್ತಕವನ್ನು ಪರೀಕ್ಷಿಸಲು ಆರಂಭಿಸಲಿದ್ದು, ನೀವು ಓದಲಿರುವ ವಿಷಯವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಸಹಾಯಮಾಡುವಂತೆ ಲೇಖಕನನ್ನು ಕೇಳಿಕೊಳ್ಳುತ್ತಿರುವಂತಿದೆ. ಅದು ಎಷ್ಟೊಂದು ಪ್ರಯೋಜನದಾಯಕವಾಗಿರಸಾಧ್ಯವಿದೆ! ಬೈಬಲಿನ ಲೇಖಕನಾದ ಯೆಹೋವನು ಅಂತಹ ಒಂದು ಸುಯೋಗವನ್ನು ನಿಮಗೆ ನೀಡಲು ಸಿದ್ಧನಿದ್ದಾನೆ. ಆದುದರಿಂದಲೇ, ಪ್ರಥಮ ಶತಮಾನದ ಆಡಳಿತ ಮಂಡಲಿಯ ಒಬ್ಬ ಸದಸ್ಯನು ತನ್ನ ಸಹೋದರರಿಗೆ ಬರೆದುದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ. ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು.” (ಯಾಕೋಬ 1:​5, 6) ಆಧುನಿಕ ದಿನದ ಆಡಳಿತ ಮಂಡಲಿಯು ಸಹ, ಪ್ರಾರ್ಥನಾಪೂರ್ವಕವಾದ ಬೈಬಲ್‌ ವಾಚನದಲ್ಲಿ ಒಳಗೂಡುವಂತೆ ನಮ್ಮನ್ನು ಉತ್ತೇಜಿಸುತ್ತದೆ.

15 ವಿವೇಕ ಅಂದರೆ ಜ್ಞಾನವನ್ನು ಕಾರ್ಯತಃ ಅನ್ವಯಿಸುವುದಾಗಿದೆ. ಆದುದರಿಂದ, ನಿಮ್ಮ ಬೈಬಲನ್ನು ತೆರೆಯುವ ಮೊದಲು, ನಿಮ್ಮ ವೈಯಕ್ತಿಕ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕಾಗಿರುವಂಥ ಅಂಶಗಳನ್ನು ವಾಚನದಲ್ಲಿ ಗುರುತಿಸಲು ನಿಮಗೆ ಸಹಾಯಮಾಡುವಂತೆ ಯೆಹೋವನ ಬಳಿ ಬೇಡಿಕೊಳ್ಳಿರಿ. ಈಗಾಗಲೇ ನಿಮಗಿರುವ ಜ್ಞಾನಕ್ಕೆ ಹೊಸದಾಗಿ ಕಲಿಯುತ್ತಿರುವ ವಿಷಯಗಳನ್ನು ಕೂಡಿಸಿರಿ. ಹೊಸ ವಿಷಯಗಳನ್ನು ನೀವು ಈಗಾಗಲೇ ಗ್ರಹಿಸಿರುವಂತಹ ‘ಸ್ವಸ್ಥಬೋಧನಾವಾಕ್ಯಗಳಿಗೆ’ ಸರಿಹೊಂದಿಸಿರಿ. (2 ತಿಮೊಥೆಯ 1:13) ಅಷ್ಟುಮಾತ್ರವಲ್ಲ, ಗತಕಾಲದ ಯೆಹೋವನ ಸೇವಕರ ಜೀವಿತಗಳಲ್ಲಿ ನಡೆದ ಘಟನೆಗಳ ಕುರಿತು ಮನನಮಾಡಿರಿ, ಮತ್ತು ಅಂತಹ ಸನ್ನಿವೇಶಗಳ ಕೆಳಗೆ ನೀವು ಹೇಗೆ ಕ್ರಿಯೆಗೈಯುತ್ತಿದ್ದಿರಿ ಎಂದು ಸ್ವತಃ ಕೇಳಿಕೊಳ್ಳಿರಿ.​—⁠ಆದಿಕಾಂಡ 39:​7-9; ದಾನಿಯೇಲ 3:​3-6, 16-18; ಅ. ಕೃತ್ಯಗಳು 4:​18-20.

16. ನಮ್ಮ ಬೈಬಲ್‌ ವಾಚನವನ್ನು ಹೆಚ್ಚು ಪ್ರಯೋಜನಾರ್ಹವಾದದ್ದಾಗಿ ಮಾಡಲಿಕ್ಕಾಗಿ ಯಾವ ಪ್ರಾಯೋಗಿಕ ಸಲಹೆಗಳು ಕೊಡಲ್ಪಟ್ಟಿವೆ?

16 ಕೇವಲ ಪುಟಗಳನ್ನು ಆವರಿಸಲಿಕ್ಕಾಗಿ ಓದಬೇಡಿರಿ. ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿರಿ. ನೀವು ಓದುತ್ತಿರುವ ವಿಷಯದ ಕುರಿತು ಆಲೋಚಿಸಿರಿ. ನಿರ್ದಿಷ್ಟವಾದ ಒಂದು ವಿಷಯದಲ್ಲಿ ನಿಮಗೆ ಆಸಕ್ತಿ ಉಂಟಾದಾಗ, ಒಂದುವೇಳೆ ನಿಮ್ಮ ಬೈಬಲಿನಲ್ಲಿ ಕ್ರಾಸ್‌ ರೆಫರೆನ್ಸ್‌ (ಪಕ್ಕ ಟಿಪ್ಪಣಿ)ಗಳಿದ್ದರೆ ಅವುಗಳನ್ನು ನೋಡಿರಿ. ಆಗಲೂ ಆ ಅಂಶವು ಸ್ಪಷ್ಟವಾಗಿ ಅರ್ಥವಾಗದಿದ್ದರೆ, ಅದನ್ನು ಬರೆದಿಟ್ಟುಕೊಂಡು, ಸಮಯಾನಂತರ ಅದರ ಬಗ್ಗೆ ರಿಸರ್ಚ್‌ ಮಾಡಿ. ಓದುತ್ತಿರುವಾಗ, ನೀವು ವಿಶೇಷವಾಗಿ ನೆನಪಿಟ್ಟುಕೊಳ್ಳಲು ಬಯಸುವಂತಹ ವಚನಗಳಿಗೆ ಗುರುತು ಹಾಕಿರಿ ಅಥವಾ ಅವುಗಳನ್ನು ಬರೆದಿಟ್ಟುಕೊಳ್ಳಿರಿ. ಅಷ್ಟುಮಾತ್ರವಲ್ಲ, ಆಯಾ ಪುಟದ ಬದಿಯಲ್ಲಿ ನಿಮ್ಮ ವೈಯಕ್ತಿಕ ಟಿಪ್ಪಣಿಗಳನ್ನು ಅಥವಾ ಕ್ರಾಸ್‌ ರೆಫರೆನ್ಸ್‌ಗಳನ್ನು ಸಹ ಬರೆದಿಟ್ಟುಕೊಳ್ಳಬಹುದು. ಓದುತ್ತಿರುವಾಗ, ನಿಮ್ಮ ಸಾರುವ ಹಾಗೂ ಕಲಿಸುವ ಕೆಲಸದಲ್ಲಿ ಯಾವಾಗಲಾದರೂ ಉಪಯೋಗಕ್ಕೆ ಬರುವಂತಹ ಕೆಲವು ವಚನಗಳನ್ನು ನೀವು ಗಮನಿಸಬಹುದು. ಆಗ, ಮುಖ್ಯ ಶಬ್ದವನ್ನು ಬರೆದಿಟ್ಟುಕೊಂಡು, ಒಂದುವೇಳೆ ನಿಮ್ಮ ಬೈಬಲಿನ ಕೊನೆಯ ಪುಟಗಳಲ್ಲಿ ಬೈಬಲ್‌ ಶಬ್ದಗಳ ಇಂಡೆಕ್ಸ್‌ ಇರುವಲ್ಲಿ, ಅದರಲ್ಲಿ ಈ ಶಬ್ದವನ್ನು ನೋಡಿರಿ. *

ಬೈಬಲ್‌ ವಾಚನವನ್ನು ಆನಂದದಾಯಕವಾಗಿ ಮಾಡಿರಿ

17. ಬೈಬಲನ್ನು ಓದುವುದರಲ್ಲಿ ನಾವು ಏಕೆ ಆನಂದವನ್ನು ಕಂಡುಕೊಳ್ಳಬೇಕು?

17 ಕೀರ್ತನೆಗಾರನು, ಯಾರು “ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ” ಅಂತಹ ಒಬ್ಬ ಸಂತೋಷಭರಿತ ವ್ಯಕ್ತಿಯ ಕುರಿತು ಮಾತಾಡಿದನು. (ಕೀರ್ತನೆ 1:⁠2) ನಮ್ಮ ದೈನಂದಿನ ಬೈಬಲ್‌ ವಾಚನವು ಬೇಸರದ ಒಂದು ಕೆಲಸವಾಗಿರಬಾರದು, ಬದಲಾಗಿ ಅದು ನಿಜವಾದ ಆನಂದವನ್ನು ಕಂಡುಕೊಳ್ಳುವಂತಿರಬೇಕು. ನಮ್ಮ ವಾಚನವನ್ನು ಆನಂದದಾಯಕವಾಗಿ ಮಾಡುವಂತಹ ಒಂದು ವಿಧವು, ನಾವು ಕಲಿತುಕೊಳ್ಳುವಂತಹ ವಿಷಯಗಳು ತುಂಬ ಅಮೂಲ್ಯವಾದವುಗಳಾಗಿವೆ ಎಂಬುದನ್ನು ಅರಿತವರಾಗಿರುವುದೇ ಆಗಿದೆ. ಜ್ಞಾನಿ ಅರಸನಾದ ಸೊಲೊಮೋನನು ಬರೆದುದು: “ಜ್ಞಾನವನ್ನು ಪಡೆದುಕೊಂಡಿರುವ ಮನುಷ್ಯನು ಹರ್ಷಚಿತ್ತನಾಗಿದ್ದಾನೆ . . . ಜ್ಞಾನದ ದಾರಿಗಳು ಸುಖಕರವಾಗಿವೆ, ಮತ್ತು ಅದರ ಮಾರ್ಗಗಳೆಲ್ಲಾ ಸಮಾಧಾನಕರವಾಗಿವೆ. ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ, ಮತ್ತು ಅದನ್ನು ಭದ್ರವಾಗಿ ಹಿಡಿದುಕೊಂಡಿರುವವರು ಸಂತೋಷಪಡುತ್ತಾರೆ.” (ಜ್ಞಾನೋಕ್ತಿ 3:​13, 17, 18, NW) ಜ್ಞಾನವನ್ನು ಪಡೆದುಕೊಳ್ಳಲು ಅಗತ್ಯವಿರುವ ಪ್ರಯತ್ನವು ನಿಜವಾಗಿಯೂ ಪ್ರಯೋಜನಾರ್ಹವಾದದ್ದಾಗಿದೆ. ಏಕೆಂದರೆ ಅದರ ದಾರಿಗಳು ಸುಖಕರವಾಗಿವೆ, ಸಮಾಧಾನಕರವಾಗಿವೆ, ಸಂತೋಷಕರವಾಗಿವೆ ಮತ್ತು ಜೀವಕ್ಕೆ ನಡೆಸುವಂಥವುಗಳಾಗಿವೆ.

18. ಬೈಬಲ್‌ ಓದುವುದರ ಜೊತೆಗೆ ಬೇರೆ ಯಾವ ವಿಷಯವು ಸಹ ಅಗತ್ಯವಾಗಿದೆ, ಮತ್ತು ಮುಂದಿನ ಲೇಖನದಲ್ಲಿ ನಾವು ಯಾವ ವಿಷಯವನ್ನು ಚರ್ಚಿಸಲಿರುವೆವು?

18 ಹೌದು, ಬೈಬಲ್‌ ವಾಚನವು ಪ್ರಯೋಜನಕರವಾದದ್ದಾಗಿದೆ ಮತ್ತು ಆನಂದದಾಯಕವಾದದ್ದಾಗಿದೆ. ಆದರೆ ಅದಷ್ಟೇ ಸಾಕೊ? ಕ್ರೈಸ್ತಪ್ರಪಂಚದ ಚರ್ಚ್‌ ಸದಸ್ಯರು ಸಹ ಅನೇಕ ಶತಮಾನಗಳಿಂದ ಬೈಬಲನ್ನು ಓದುತ್ತಿದ್ದಾರೆ. ಆದರೂ, ಅವರು ‘ಯಾವಾಗಲೂ ಉಪದೇಶ ಕೇಳುತ್ತಿದ್ದರೂ ಸತ್ಯದ ಪರಿಜ್ಞಾನವನ್ನು ಹೊಂದಲಾರದವರಾಗಿದ್ದಾರೆ.’ (2 ತಿಮೊಥೆಯ 3:⁠7) ಬೈಬಲ್‌ ವಾಚನವು ಫಲವನ್ನು ನೀಡಬೇಕಾದರೆ, ನಾವು ಪಡೆದುಕೊಂಡಂಥ ಜ್ಞಾನವನ್ನು ನಮ್ಮ ವೈಯಕ್ತಿಕ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುವ ಗುರಿಯಿಂದ ಹಾಗೂ ನಮ್ಮ ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಅದನ್ನು ಉಪಯೋಗಿಸುವ ದೃಷ್ಟಿಕೋನದಿಂದ ನಾವು ಓದಬೇಕಾಗಿದೆ. (ಮತ್ತಾಯ 24:14; 28:​19, 20) ಇದಕ್ಕಾಗಿ ಪ್ರಯತ್ನಪಡುವ ಹಾಗೂ ಅಭ್ಯಾಸದ ಒಳ್ಳೆಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಇದು ಕೂಡ ಆನಂದದಾಯಕವಾಗಿಯೂ ಫಲಪ್ರದವಾಗಿಯೂ ಇರಸಾಧ್ಯವಿದೆ. ಅದು ಹೇಗೆ ಎಂಬುದನ್ನು ಮುಂದಿನ ಲೇಖನದಲ್ಲಿ ನಾವು ನೋಡಬಹುದು.

[ಪಾದಟಿಪ್ಪಣಿಗಳು]

^ ಪ್ಯಾರ. 9 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಯೆಹೋವನ ಸಾಕ್ಷಿಗಳು​—⁠ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಎಂಬ ಪುಸ್ತಕದ 241ನೆಯ ಪುಟವನ್ನು ನೋಡಿರಿ.

^ ಪ್ಯಾರ. 16 ಕಾವಲಿನಬುರುಜು ಪತ್ರಿಕೆಯ ಮೇ 1, 1995ರ ಸಂಚಿಕೆಯ 16-17ನೆಯ ಪುಟಗಳಲ್ಲಿರುವ “ನಿಮ್ಮ ಬೈಬಲ್‌ ವಾಚನವನ್ನು ಹೆಚ್ಚಿಸಲಿಕ್ಕಾಗಿರುವ ಸೂಚನೆಗಳು” ಎಂಬ ವಿಷಯವನ್ನು ನೋಡಿರಿ.

ಪುನರ್ವಿಮರ್ಶೆಯ ಪ್ರಶ್ನೆಗಳು

• ಇಸ್ರಾಯೇಲ್ಯ ಅರಸರಿಗೆ ಕೊಡಲ್ಪಟ್ಟ ಯಾವ ಸಲಹೆಯು ಇಂದಿನ ಮೇಲ್ವಿಚಾರಕರಿಗೆ ಅನ್ವಯವಾಗುತ್ತದೆ, ಮತ್ತು ಏಕೆ?

• ಇಂದು ಯಾರು “ಅನ್ಯ”ರಂತಿದ್ದಾರೆ ಮತ್ತು ಯಾರು ‘ಚಿಕ್ಕವರಂತೆ’ ಇದ್ದಾರೆ, ಹಾಗೂ ಅವರು ಪ್ರತಿ ದಿನ ಬೈಬಲನ್ನು ಏಕೆ ಓದಬೇಕಾಗಿದೆ?

• ನಾವು ಬೈಬಲನ್ನು ಕ್ರಮವಾಗಿ ಓದಲಿಕ್ಕಾಗಿ, ನಿರ್ದಿಷ್ಟವಾಗಿ ಯಾವ ಪ್ರಾಯೋಗಿಕ ರೀತಿಗಳಲ್ಲಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನಮಗೆ ಸಹಾಯಮಾಡಿದೆ?

• ನಮ್ಮ ಬೈಬಲ್‌ ವಾಚನದಿಂದ ನಾವು ನಿಜವಾದ ಪ್ರಯೋಜನ ಹಾಗೂ ಆನಂದವನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ವಿಶೇಷವಾಗಿ ಹಿರಿಯರು ಪ್ರತಿ ದಿನ ಬೈಬಲನ್ನು ಓದುವ ಅಗತ್ಯವಿದೆ

[ಪುಟ 10ರಲ್ಲಿರುವ ಚಿತ್ರ]

ಸಭಾಮಂದಿರಕ್ಕೆ ಹೋಗಿ ಶಾಸ್ತ್ರವಚನಗಳನ್ನು ಓದುವುದರಲ್ಲಿ ಭಾಗವಹಿಸುವುದು ಯೇಸುವಿಗೆ ವಾಡಿಕೆಯಾಗಿತ್ತು