ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫಲಪ್ರದ ಹಾಗೂ ಆನಂದಕರವಾದ ಅಧ್ಯಯನ

ಫಲಪ್ರದ ಹಾಗೂ ಆನಂದಕರವಾದ ಅಧ್ಯಯನ

ಫಲಪ್ರದ ಹಾಗೂ ಆನಂದಕರವಾದ ಅಧ್ಯಯನ

‘ನೀನು ಅದನ್ನು ಹುಡುಕುತ್ತಾ ಇರುವಲ್ಲಿ . . . , ನೀನು ದೈವಜ್ಞಾನವನ್ನು ಪಡೆದುಕೊಳ್ಳುವಿ.’​—⁠ಜ್ಞಾನೋಕ್ತಿ 2:​4, 5, NW.

1. ಬಿಡುವಿನ ಸಮಯದಲ್ಲಿ ಓದುವ ಪುಸ್ತಕಗಳು ಹೇಗೆ ಮನಸ್ಸಿಗೆ ಮುದನೀಡಬಲ್ಲವು?

ಅನೇಕರು ಕೇವಲ ಮನಸ್ಸಂತೋಷಕ್ಕಾಗಿ ಓದುತ್ತಾರೆ. ಓದುತ್ತಿರುವಂತಹ ಪುಸ್ತಕವು ಒಳ್ಳೇದಾಗಿರುವಲ್ಲಿ, ಅದು ಸ್ವಸ್ಥಕರವಾದ ಆನಂದದ ಮೂಲವಾಗಿರಸಾಧ್ಯವಿದೆ. ಕೆಲವು ಕ್ರೈಸ್ತರು ಕ್ರಮವಾದ ರೀತಿಯಲ್ಲಿ ಬೈಬಲನ್ನು ಓದುವುದರ ಜೊತೆಗೆ, ಕೆಲವೊಮ್ಮೆ ಬೈಬಲಿನ ಕೀರ್ತನೆಗಳು, ಜ್ಞಾನೋಕ್ತಿಗಳು, ಸುವಾರ್ತಾ ವೃತ್ತಾಂತಗಳು, ಅಥವಾ ಇನ್ನಿತರ ಪುಸ್ತಕಗಳನ್ನು ಓದುವ ಮೂಲಕವೂ ನಿಜವಾದ ಆನಂದವನ್ನು ಪಡೆದುಕೊಳ್ಳುತ್ತಾರೆ. ಈ ಪುಸ್ತಕಗಳಲ್ಲಿ ಉಪಯೋಗಿಸಲ್ಪಟ್ಟಿರುವ ಭಾಷಾ ಶೈಲಿ ಹಾಗೂ ವಿಷಯಗಳು ಅವರ ಮನಸ್ಸಿಗೆ ಮುದನೀಡುತ್ತವೆ. ಇನ್ನಿತರರು ಓದಲಿಕ್ಕಾಗಿ ಬೇರೆ ರೀತಿಯ ವಿಷಯಗಳನ್ನು ಆರಿಸಿಕೊಳ್ಳುತ್ತಾರೆ. ಅಂದರೆ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌), ಎಚ್ಚರ! ಪತ್ರಿಕೆ, ಈ ಪತ್ರಿಕೆಯಲ್ಲಿ ಪ್ರಕಟಿಸಲ್ಪಡುವ ಜೀವಶಾಸ್ತ್ರ ಸಂಬಂಧಿತ ಲೇಖನಗಳು ಅಥವಾ ಇತಿಹಾಸ, ಭೂಗೋಳ, ಹಾಗೂ ನೈಸರ್ಗಿಕ ವಿಚಾರಗಳ ಕುರಿತಾದ ಮುದ್ರಿತ ಲೇಖನಗಳನ್ನು ಓದುವುದರಲ್ಲಿ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಾರೆ.

2, 3. (ಎ) ಯಾವ ರೀತಿಯಲ್ಲಿ ಗಹನವಾದ ಆತ್ಮಿಕ ಮಾಹಿತಿಯನ್ನು ಗಟ್ಟಿಯಾದ ಆಹಾರಕ್ಕೆ ಹೋಲಿಸಸಾಧ್ಯವಿದೆ? (ಬಿ) ಅಧ್ಯಯನ ಮಾಡುವುದರಲ್ಲಿ ಏನೆಲ್ಲಾ ಒಳಗೂಡಿದೆ?

2 ಮನಸ್ಸಿನ ಸಂತೋಷಕ್ಕೋಸ್ಕರ ಓದುವುದು ಒಂದು ರೀತಿಯ ವಿನೋದವಾಗಿರುವುದಾದರೂ, ಅಧ್ಯಯನವು ಮಾನಸಿಕ ಪ್ರಯತ್ನವನ್ನು ಕೇಳಿಕೊಳ್ಳುತ್ತದೆ. ಇಂಗ್ಲಿಷ್‌ ತತ್ವಜ್ಞಾನಿಯಾದ ಫ್ರಾನ್ಸಿಸ್‌ ಬೇಕನ್‌ ಬರೆದುದು: “ಕೆಲವು ಪುಸ್ತಕಗಳನ್ನು ಕೇವಲ ರುಚಿನೋಡಬೇಕು, ಇನ್ನಿತರ ಪುಸ್ತಕಗಳನ್ನು ನುಂಗಬೇಕು, ಮತ್ತು ಕೆಲವು ಪುಸ್ತಕಗಳನ್ನು ಚೆನ್ನಾಗಿ ಅಗಿದು ಜೀರ್ಣಿಸಿಕೊಳ್ಳಬೇಕು.” ಖಂಡಿತವಾಗಿಯೂ ಬೈಬಲು ಚೆನ್ನಾಗಿ ಅಗಿದು ಜೀರ್ಣಿಸಿಕೊಳ್ಳಬೇಕಾಗಿರುವ ಪುಸ್ತಕಗಳ ವರ್ಗಕ್ಕೆ ಸೇರಿದ್ದಾಗಿದೆ. ಆದುದರಿಂದಲೇ, ಅಪೊಸ್ತಲ ಪೌಲನು ಬರೆದುದು: “ಈ ವಿಷಯದಲ್ಲಿ [ರಾಜ-ಯಾಜಕನಾದ ಮೆಲ್ಕಿಚೆದೇಕನಿಂದ ಮುನ್‌ಚಿತ್ರಿಸಲ್ಪಟ್ಟಂತೆ, ಕ್ರಿಸ್ತನ ವಿಷಯದಲ್ಲಿ] ನಾವು ಹೇಳಬೇಕಾದ ಮಾತು ಬಹಳ ಉಂಟು, ಆದರೆ ನಿಮ್ಮ ಕಿವಿಗಳು ಮಂದವಾದದರಿಂದ ಅದನ್ನು ವಿವರಿಸುವದು ಕಷ್ಟವಾಗಿದೆ. . . . ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು [“ಗ್ರಹಣ ಶಕ್ತಿಗಳನ್ನು,” NW] ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” (ಇಬ್ರಿಯ 5:​11, 14) ಗಟ್ಟಿಯಾದ ಆಹಾರವನ್ನು ನುಂಗಿ ಜೀರ್ಣಿಸಿಕೊಳ್ಳುವ ಮುಂಚೆ, ಅದನ್ನು ಹಲ್ಲಿನಿಂದ ನುಣ್ಣಗೆ ಅಗಿಯಬೇಕು. ತದ್ರೀತಿಯಲ್ಲಿ, ಗಹನವಾದ ಆತ್ಮಿಕ ಮಾಹಿತಿಯನ್ನು ಅರ್ಥಮಾಡಿಕೊಂಡು, ಮನಸ್ಸಿನಲ್ಲಿಟ್ಟುಕೊಳ್ಳುವ ಮುಂಚೆ, ಅದರ ಬಗ್ಗೆ ಮನನಮಾಡಬೇಕು.

3 ಒಂದು ಶಬ್ದಕೋಶವು “ಅಧ್ಯಯನ” ಎಂಬ ಅರ್ಥವುಳ್ಳ “ಸ್ಟಡಿ” ಎಂಬಂತಹ ಇಂಗ್ಲಿಷ್‌ ಶಬ್ದವನ್ನು ಹೀಗೆ ಅರ್ಥನಿರೂಪಿಸುತ್ತದೆ: “ಓದುವ, ಪರಿಶೀಲಿಸುವ ಮೂಲಕ, ಜ್ಞಾನ ಇಲ್ಲವೆ ತಿಳುವಳಿಕೆಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಮನಸ್ಸನ್ನು ಪ್ರಯೋಗಿಸುವ ಕ್ರಿಯೆ ಇಲ್ಲವೆ ಕಾರ್ಯವಿಧಾನ.” ಆದುದರಿಂದ, ಒಂದು ಲೇಖನವನ್ನು ಅವಸರ ಅವಸರವಾಗಿ ಓದಿ, ಕೆಲವು ಪದಗಳಿಗೆ ಅಡಿಗೆರೆ ಹಾಕುವುದಕ್ಕಿಂತಲೂ ಹೆಚ್ಚಿನದ್ದು ಅಧ್ಯಯನದಲ್ಲಿ ಒಳಗೂಡಿದೆ ಎಂಬುದು ಇದರರ್ಥ. ಅಧ್ಯಯನದಲ್ಲಿ, ಕೆಲಸ, ಮಾನಸಿಕ ಪ್ರಯತ್ನ, ಹಾಗೂ ಗ್ರಹಣ ಶಕ್ತಿಗಳ ಉಪಯೋಗವು ಒಳಗೂಡಿದೆ. ಅಧ್ಯಯನ ಮಾಡಲು ಪ್ರಯತ್ನದ ಅಗತ್ಯವಿರುವುದರಿಂದ, ಅದನ್ನು ಆನಂದದಾಯಕವಾಗಿ ಮಾಡಲು ಸಾಧ್ಯವಿಲ್ಲ ಎಂಬುದು ಇದರ ಅರ್ಥವಲ್ಲ.

ಅಧ್ಯಯನವನ್ನು ಆಹ್ಲಾದಕರವಾಗಿ ಮಾಡುವುದು

4. ಕೀರ್ತನೆಗಾರನಿಗನುಸಾರ, ದೇವರ ವಾಕ್ಯದ ಅಧ್ಯಯನವು ಹೇಗೆ ಚೈತನ್ಯದಾಯಕವೂ ಫಲಪ್ರದವಾದದ್ದೂ ಆಗಿರಸಾಧ್ಯವಿದೆ?

4 ದೇವರ ವಾಕ್ಯವನ್ನು ಓದುವುದು ಹಾಗೂ ಅದರ ಅಧ್ಯಯನ ಮಾಡುವುದು, ಚೈತನ್ಯದಾಯಕವೂ ಬಲಪಡಿಸುವಂತಹದ್ದೂ ಆಗಿರಸಾಧ್ಯವಿದೆ. ಈ ವಿಷಯದಲ್ಲಿ ಕೀರ್ತನೆಗಾರನಾದ ದಾವೀದನು ಹೇಳಿದ್ದು: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ.” (ಕೀರ್ತನೆ 19:​7, 8) ಯೆಹೋವನ ನಿಯಮಗಳು ಹಾಗೂ ಕಟ್ಟಳೆಗಳು ನಮಗೆ ಆತ್ಮಿಕ ಚೈತನ್ಯವನ್ನು ನೀಡುತ್ತವೆ, ನಾವು ಆತ್ಮಿಕವಾಗಿ ಸ್ವಸ್ಥರಾಗಿರುವಂತೆ ಮಾಡುತ್ತವೆ, ಮನಸ್ಸನ್ನು ಸಂತೋಷಪಡಿಸುತ್ತವೆ, ಮತ್ತು ಕಣ್ಣುಗಳನ್ನು ಕಳೆಗೊಳಿಸುತ್ತವೆ. ಇದರಿಂದಾಗಿ ನಾವು ಯೆಹೋವನ ಅದ್ಭುತಕರ ಉದ್ದೇಶಗಳ ಸ್ಪಷ್ಟವಾದ ಚಿತ್ರಣವನ್ನು ನೋಡಸಾಧ್ಯವಿದೆ. ಅದೆಷ್ಟು ಆನಂದಕರವಾದದ್ದಾಗಿದೆ!

5. ಯಾವ ರೀತಿಗಳಲ್ಲಿ ಅಧ್ಯಯನವು ನಮಗೆ ಹೆಚ್ಚಿನ ಸಂತೋಷವನ್ನು ಉಂಟುಮಾಡಬಲ್ಲದು?

5 ನಾವು ಪರಿಶ್ರಮದಿಂದ ಮಾಡಿದ ಕೆಲಸಕ್ಕೆ ಒಳ್ಳೆಯ ಫಲಿತಾಂಶಗಳು ಸಿಗುವುದನ್ನು ನೋಡುವಾಗ, ಆ ಕೆಲಸವನ್ನು ಮಾಡುವುದರಲ್ಲಿ ನಾವು ಆನಂದಿಸುತ್ತೇವೆ. ಆದುದರಿಂದ, ಅಧ್ಯಯನವನ್ನು ಆನಂದದಾಯಕವಾಗಿ ಮಾಡಬೇಕಾದರೆ, ಹೊಸದಾಗಿ ಪಡೆದುಕೊಂಡಿರುವ ಜ್ಞಾನವನ್ನು ಆ ಕೂಡಲೆ ಉಪಯೋಗಕ್ಕೆ ಹಾಕಬೇಕು. ಈ ವಿಷಯದಲ್ಲಿ ಯಾಕೋಬನು ಬರೆದುದು: “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು ವಾಕ್ಯವನ್ನು ಕೇಳಿ ಮರೆತುಹೋಗುವವನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.” (ಯಾಕೋಬ 1:25) ಕಲಿತಂಥ ಅಂಶಗಳನ್ನು ಆ ಕೂಡಲೆ ವೈಯಕ್ತಿಕವಾಗಿ ಅನ್ವಯಿಸಿಕೊಳ್ಳುವುದರಿಂದ ಹೆಚ್ಚಿನ ಸಂತೃಪ್ತಿ ಸಿಗುತ್ತದೆ. ನಾವು ಸಾರುತ್ತಿರುವಾಗ ಅಥವಾ ಕಲಿಸುತ್ತಿರುವಾಗ ನಮಗೆ ಕೇಳಲ್ಪಡುವಂತಹ ಒಂದು ಪ್ರಶ್ನೆಗೆ ಉತ್ತರವನ್ನು ಕೊಡುವ ಉದ್ದೇಶದಿಂದ ರಿಸರ್ಚ್‌ ಮಾಡುವುದು ನಮಗೆ ಅತ್ಯಧಿಕ ಸಂತೋಷವನ್ನು ಉಂಟುಮಾಡುವುದು.

ದೇವರ ವಾಕ್ಯಕ್ಕಾಗಿ ಒಲವನ್ನು ಬೆಳೆಸಿಕೊಳ್ಳುವುದು

6. ಕೀರ್ತನೆ 119ರ ಬರಹಗಾರನು ಯೆಹೋವನ ವಾಕ್ಯಕ್ಕಾಗಿರುವ ತನ್ನ ಒಲವನ್ನು ಹೇಗೆ ವ್ಯಕ್ತಪಡಿಸಿದನು?

6ಕೀರ್ತನೆ 119ರ ರಚಕನಾದ ಹಿಜ್ಕೀಯನು, ಯುವ ರಾಜಕುಮಾರನಾಗಿದ್ದಾಗಲೇ ಯೆಹೋವನ ವಾಕ್ಯಕ್ಕಾಗಿರುವ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದನು. ಕವಿತೆಯ ಶೈಲಿಯಲ್ಲಿ ಅವನು ಹೇಳಿದ್ದು: “ನಿನ್ನ ನಿಬಂಧನೆಗಳಲ್ಲಿ ಉಲ್ಲಾಸಪಡುವೆನು [“ನಿನ್ನ ನಿಂಬಂಧನೆಗಾಗಿ ಒಲವನ್ನು ತೋರಿಸುವೆನು,” NW]; ನಿನ್ನ ವಾಕ್ಯವನ್ನು ಮರೆಯುವದಿಲ್ಲ. ನಿನ್ನ ಕಟ್ಟಳೆಗಳು ನನ್ನ ಆನಂದವು, . . . ನಿನ್ನ ಆಜ್ಞೆಗಳಲ್ಲಿ ಆನಂದಪಡುತ್ತೇನೆ; ಅವು ನನಗೆ ಇಷ್ಟವಾಗಿವೆ. ನಾನು ಬದುಕುವಂತೆ ನಿನ್ನ ಕರುಣೆಯು ನನಗೆ ದೊರೆಯಲಿ; ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವಾಗಿದೆ. ಯೆಹೋವನೇ, ನಿನ್ನಿಂದುಂಟಾಗುವ ರಕ್ಷಣೆಯನ್ನು ಕೋರುತ್ತೇನೆ; ನಿನ್ನ ಧರ್ಮಶಾಸ್ತ್ರವೇ ಆನಂದವು.”​—⁠ಕೀರ್ತನೆ 119:​16, 24, 47, 77, 174.

7, 8. (ಎ) ಒಂದು ರೆಫರೆನ್ಸ್‌ ಪುಸ್ತಕಕ್ಕನುಸಾರ, ದೇವರ ವಾಕ್ಯಕ್ಕಾಗಿ “ಒಲವನ್ನು ತೋರಿಸು”ವುದರ ಅರ್ಥವೇನಾಗಿದೆ? (ಬಿ) ಯೆಹೋವನ ವಾಕ್ಯಕ್ಕಾಗಿರುವ ನಮ್ಮ ಪ್ರೀತಿಯನ್ನು ನಾವು ಹೇಗೆ ತೋರಿಸಸಾಧ್ಯವಿದೆ? (ಸಿ) ಯೆಹೋವನ ಧರ್ಮಶಾಸ್ತ್ರವನ್ನು ಓದುವ ಮುಂಚೆ ಎಜ್ರನು ತನ್ನನ್ನು ಹೇಗೆ ಸಿದ್ಧಪಡಿಸಿಕೊಂಡನು?

7ಕೀರ್ತನೆ 119ರಲ್ಲಿ “ಒಲವನ್ನು ತೋರಿಸು” ಎಂದು ಭಾಷಾಂತರಿಸಲ್ಪಟ್ಟಿರುವ ಶಬ್ದವನ್ನು ವಿವರಿಸುತ್ತಾ, ಹೀಬ್ರು ಶಾಸ್ತ್ರವಚನಗಳ ಕುರಿತಾದ ಒಂದು ಶಬ್ದಕೋಶವು ಹೇಳುವುದು: “16ನೆಯ ವಚನದಲ್ಲಿರುವ ಈ ಶಬ್ದದ ಉಪಯೋಗವು, ಉಲ್ಲಾಸಪಡು . . . ಹಾಗೂ ಮನನಮಾಡು ಎಂಬುದಕ್ಕಾಗಿರುವ [ಕ್ರಿಯಾಪದಗಳಿಗೆ] ಸಮಾನವಾಗಿದೆ . . . ಇದರ ಕ್ರಮವಿಧಾನವು ಹೀಗಿದೆ: ಉಲ್ಲಾಸಿಸು, ಮನನಮಾಡು, ಆನಂದಪಡು . . . ಈ ಸಂಯೋಜನೆಯು, ಉದ್ದೇಶಪೂರ್ವಕವಾದ ಮನನಮಾಡುವಿಕೆಯ ಮೂಲಕ ಒಬ್ಬನು ಯೆಹೋವನ ವಾಕ್ಯದಲ್ಲಿ ಆನಂದಪಡುತ್ತಾನೆ ಎಂಬುದನ್ನು ಸೂಚಿಸಬಹುದು. . . . ಈ ಶಬ್ದದ ಅರ್ಥದಲ್ಲಿ, ಭಾವನೆಗಳನ್ನು ವ್ಯಕ್ತಪಡಿಸುವುದು ಸಹ ಒಳಗೂಡಿದೆ.” *

8 ಹೌದು, ಯೆಹೋವನ ವಾಕ್ಯಕ್ಕಾಗಿರುವ ನಮ್ಮ ಪ್ರೀತಿಯು, ಹೃದಯದಾಳದಿಂದ ಬರಬೇಕು. ಏಕೆಂದರೆ ಹೃದಯದಿಂದಲೇ ಭಾವನೆಗಳು ಹುಟ್ಟುತ್ತವೆ. ಆದುದರಿಂದ, ನಾವು ಆಗತಾನೇ ಓದಿರುವಂತಹ ಕೆಲವೊಂದು ಭಾಗಗಳ ಕುರಿತು ಆಲೋಚಿಸುವುದರಲ್ಲಿ ಆನಂದವನ್ನು ಪಡೆದುಕೊಳ್ಳಬೇಕು. ಗಹನವಾಗಿರುವಂತಹ ಕೆಲವು ಆತ್ಮಿಕ ವಿಷಯಗಳ ಕುರಿತು ನಾವು ಜಾಗರೂಕತೆಯಿಂದ ಮನನಮಾಡಬೇಕು, ಅವುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳ ಬಗ್ಗೆ ಧ್ಯಾನಿಸಬೇಕು. ಇದು ಶಾಂತವಾಗಿ ಮನನಮಾಡುವುದು ಹಾಗೂ ಪ್ರಾರ್ಥನೆಮಾಡುವುದನ್ನು ಕೇಳಿಕೊಳ್ಳುತ್ತದೆ. ದೇವರ ವಾಕ್ಯದ ವಾಚನ ಹಾಗೂ ಅಧ್ಯಯನಕ್ಕಾಗಿ, ನಾವು ಎಜ್ರನಂತೆ ನಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಅವನ ಕುರಿತು ಹೀಗೆ ಬರೆಯಲ್ಪಟ್ಟಿದೆ: “ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಲು ಮತ್ತು ಅದನ್ನು ಅನುಸರಿಸಲು ಹಾಗೂ ಇಸ್ರಾಯೇಲ್ಯರಿಗೆ ಅದರ ವಿಧಿನ್ಯಾಯಗಳನ್ನು ಕಲಿಸಲು ಎಜ್ರನು ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡಿದ್ದನು.” (ಎಜ್ರ 7:​10, NW) ಎಜ್ರನು ಯಾವುದಕ್ಕಾಗಿ ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡನೋ ಆ ಮೂರು ಉದ್ದೇಶಗಳನ್ನು ಗಮನಿಸಿರಿ: ಅಭ್ಯಾಸಿಸಲು, ವೈಯಕ್ತಿಕ ಅನ್ವಯವನ್ನು ಮಾಡಿಕೊಳ್ಳಲು, ಹಾಗೂ ಕಲಿಸಲು. ನಾವು ಸಹ ಅವನ ಮಾದರಿಯನ್ನು ಅನುಸರಿಸಬೇಕು.

ಅಧ್ಯಯನವನ್ನು ಆರಾಧನೆಯ ಒಂದು ಭಾಗವಾಗಿ ಪರಿಗಣಿಸಿರಿ

9, 10. (ಎ) ಯಾವ ವಿಧಗಳಲ್ಲಿ ಕೀರ್ತನೆಗಾರನು ಯೆಹೋವನ ವಾಕ್ಯದ ಬಗ್ಗೆ ಧ್ಯಾನಿಸಿದನು? (ಬಿ) “ಧ್ಯಾನಿಸು” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಕ್ರಿಯಾಪದದ ಅರ್ಥವೇನು? (ಸಿ) ನಾವು ಬೈಬಲಿನ ಅಧ್ಯಯನವನ್ನು “ಆರಾಧನೆಯ ಒಂದು ಕ್ರಿಯೆ”ಯಾಗಿ ಪರಿಗಣಿಸುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?

9 ಯೆಹೋವನ ನಿಯಮಗಳು, ಆಜ್ಞೆಗಳು, ಕಟ್ಟಳೆಗಳ ಬಗ್ಗೆ ತಾನು ಧ್ಯಾನಿಸಿದೆನೆಂದು ಕೀರ್ತನೆಗಾರನು ಹೇಳುತ್ತಾನೆ. ಅವನು ಹಾಡುವುದು: “ನಿನ್ನ ನೇಮಗಳನ್ನು ಧ್ಯಾನಿಸುತ್ತಾ ನಿನ್ನ ದಾರಿಯನ್ನು ಲಕ್ಷೀಕರಿಸಿಕೊಳ್ಳುವೆನು. . . . ನಿನ್ನ ಆಜ್ಞೆಗಳಿಗಾಗಿಯೇ ಕೈಯೊಡ್ಡುತ್ತೇನೆ, ಅವು ನನಗೆ ಇಷ್ಟವಾಗಿವೆ; ನಿನ್ನ ನಿಬಂಧನೆಗಳನ್ನು ಧ್ಯಾನಿಸುವೆನು. ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ. ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವದರಿಂದ ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.” (ಕೀರ್ತನೆ 119:​15, 48, 97, 99) ಯೆಹೋವನ ವಾಕ್ಯದ ಕುರಿತು ‘ಧ್ಯಾನಿಸುವುದು’ ಅಂದರೇನು?

10 “ಧ್ಯಾನಿಸು” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಕ್ರಿಯಾಪದದ ಅರ್ಥ, “ಮನಸ್ಸಿನಲ್ಲೇ ಯೋಚಿಸುವುದು, ಮನನಮಾಡುವುದು,” “ಒಂದು ವಿಷಯದ ಕುರಿತು ಮನಸ್ಸಿನಲ್ಲಿ ಆಲೋಚಿಸುವುದಾಗಿದೆ.” “ದೇವರ ಕೆಲಸಗಳು . . . ಹಾಗೂ ದೇವರ ವಾಕ್ಯದ ಬಗ್ಗೆ ಮೌನವಾಗಿ ಪುನರಾಲೋಚಿಸುವುದರ ವಿಷಯದಲ್ಲಿ ಇದನ್ನು ಉಪಯೋಗಿಸಲಾಗಿದೆ.” (ಥಿಯೋಲಾಜಿಕಲ್‌ ವರ್ಡ್‌ಬುಕ್‌ ಆಫ್‌ ದಿ ಓಲ್ಡ್‌ ಟೆಸ್ಟಮೆಂಟ್‌) “ಧ್ಯಾನಿಸು” ಎಂಬ ಶಬ್ದದ ನಾಮಪದ ರೂಪವು, “ಕೀರ್ತನೆಗಾರನ ಮನನಮಾಡುವಿಕೆ,” ದೇವರ ಧರ್ಮಶಾಸ್ತ್ರದ ಕುರಿತಾದ “ಅವನ ಪ್ರೀತಿಪಾತ್ರ ಅಧ್ಯಯನ,” ಹೀಗೆ ಅವನ “ಆರಾಧನೆಯ ಒಂದು ಕ್ರಿಯೆ”ಗೆ ಸೂಚಿತವಾಗಿದೆ. ದೇವರ ವಾಕ್ಯದ ಅಧ್ಯಯನವನ್ನು ನಮ್ಮ ಆರಾಧನೆಯ ಒಂದು ಭಾಗವಾಗಿ ಪರಿಗಣಿಸುವುದರಿಂದ, ಅಧ್ಯಯನದ ಗಂಭೀರತೆಯು ಹೆಚ್ಚುತ್ತದೆ. ಆದುದರಿಂದ, ನಮ್ಮ ಬೈಬಲ್‌ ಅಧ್ಯಯನವನ್ನು ಶ್ರದ್ಧೆಯಿಂದ ಹಾಗೂ ಪ್ರಾರ್ಥನಾಪೂರ್ವಕವಾಗಿ ಮಾಡಬೇಕು. ಅಷ್ಟುಮಾತ್ರವಲ್ಲ, ಅಧ್ಯಯನವು ನಮ್ಮ ಆರಾಧನೆಯ ಒಂದು ಭಾಗವಾಗಿದೆ ಮತ್ತು ನಮ್ಮ ಆರಾಧನೆಯನ್ನು ಉತ್ತಮಗೊಳಿಸಲಿಕ್ಕಾಗಿಯೇ ಇದು ಮಾಡಲ್ಪಡುತ್ತದೆ.

ದೇವರ ವಾಕ್ಯವನ್ನು ಆಳವಾಗಿ ಪರಿಶೋಧಿಸುವುದು

11. ಅಗಾಧವಾದ ಆತ್ಮಿಕ ವಿಷಯಗಳನ್ನು ಯೆಹೋವನು ತನ್ನ ಜನರಿಗೆ ಹೇಗೆ ಪ್ರಕಟಪಡಿಸುತ್ತಿದ್ದಾನೆ?

11 ಭಯಭಕ್ತಿಯಿಂದ ಕೂಡಿದ ಮೆಚ್ಚಿಕೆಯೊಂದಿಗೆ ಕೀರ್ತನೆಗಾರನು ಹೀಗೆ ಘೋಷಿಸಿದನು: “ಯೆಹೋವನೇ, ನಿನ್ನ ಕೃತ್ಯಗಳು ಎಷ್ಟೋ ಶ್ರೇಷ್ಠವಾಗಿವೆ; ನಿನ್ನ ಆಲೋಚನೆಗಳು ಅಶೋಧ್ಯವಾಗಿವೆ.” (ಕೀರ್ತನೆ 92:⁠5) ಮತ್ತು ನಂಬಿಗಸ್ತನೂ ವಿವೇಕಿಯೂ ಆದಂಥ ಆಳುವರ್ಗದ ಮೇಲೆ ಕಾರ್ಯನಡಿಸುತ್ತಿರುವ “ತನ್ನ ಆತ್ಮನ ಮೂಲಕ” ಯೆಹೋವನು ತನ್ನ ಜನರಿಗೆ ಪ್ರಕಟಪಡಿಸುವ ಗಹನವಾದ ವಿಚಾರಗಳ ಕುರಿತು, ಅಂದರೆ “ದೇವರ ಅಗಾಧವಾದ ವಿಷಯಗಳ” ಕುರಿತು ಅಪೊಸ್ತಲ ಪೌಲನು ಮಾತಾಡಿದನು. (1 ಕೊರಿಂಥ 2:10; ಮತ್ತಾಯ 24:45) ಆ ಆಳುವರ್ಗವು ಎಲ್ಲರಿಗೂ ಬೇಕಾಗಿರುವ ಆತ್ಮಿಕ ಪೋಷಣೆಯನ್ನು ಶ್ರದ್ಧೆಯಿಂದ ಒದಗಿಸುತ್ತಿದೆ. ಅಂದರೆ ಹೊಸಬರಿಗಾಗಿ ‘ಹಾಲನ್ನು’ ಹಾಗೂ “ಪ್ರಾಯಸ್ಥರಿಗೋಸ್ಕರ” “ಗಟ್ಟಿಯಾದ ಆಹಾರವನ್ನು” ಸರಬರಾಜುಮಾಡುತ್ತಿದೆ.​—⁠ಇಬ್ರಿಯ 5:​11-14.

12. ಆಳುವರ್ಗದಿಂದ ವಿವರಿಸಲ್ಪಟ್ಟಿರುವ “ದೇವರ ಅಗಾಧವಾದ ವಿಷಯಗಳ” ಕುರಿತಾದ ಒಂದು ಉದಾಹರಣೆಯನ್ನು ಕೊಡಿರಿ.

12 ಆದರೆ, “ದೇವರ ಅಗಾಧವಾದ ವಿಷಯಗಳ”ನ್ನು ಗ್ರಹಿಸಲು, ಪ್ರಾರ್ಥನಾಪೂರ್ವಕವಾಗಿ ಆತನ ವಾಕ್ಯದ ಅಧ್ಯಯನ ಮಾಡಬೇಕು ಮತ್ತು ಅದರ ಕುರಿತು ಧ್ಯಾನಿಸಬೇಕು. ಉದಾಹರಣೆಗೆ, ಏಕಕಾಲದಲ್ಲಿ ಯೆಹೋವನು ಹೇಗೆ ನ್ಯಾಯವಂತನೂ ಕರುಣಾಮಯಿಯೂ ಆಗಿರಸಾಧ್ಯವಿದೆ ಎಂಬುದನ್ನು ತೋರಿಸುವಂತಹ ಅತ್ಯುತ್ತಮವಾದ ಲೇಖನಗಳು ಪ್ರಕಾಶಿಸಲ್ಪಟ್ಟಿವೆ. ಆತನು ಕರುಣೆಯನ್ನು ತೋರಿಸುವುದು, ತನ್ನ ನ್ಯಾಯತೀರ್ಪನ್ನು ತಗ್ಗಿಸುತ್ತಾನೆ ಎಂಬುದನ್ನು ಅರ್ಥೈಸುವುದಿಲ್ಲ; ಬದಲಾಗಿ, ದೇವರ ಕರುಣೆಯು ಆತನ ನ್ಯಾಯ ಹಾಗೂ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿದೆ. ಒಬ್ಬ ಪಾಪಿಗೆ ನ್ಯಾಯತೀರ್ಪು ನೀಡುತ್ತಿರುವಾಗ, ತನ್ನ ಮಗನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಆ ಪಾಪಿಗೆ ಕರುಣೆಯನ್ನು ತೋರಿಸಸಾಧ್ಯವಿದೆಯೋ ಎಂಬುದನ್ನು ಯೆಹೋವನು ಮೊದಲು ನಿರ್ಧರಿಸುತ್ತಾನೆ. ಒಂದುವೇಳೆ ಆ ಪಾಪಿಯು ಪಶ್ಚಾತ್ತಾಪಪಡದವನೋ ಅಥವಾ ದಂಗೆಕೋರನೋ ಆಗಿರುವಲ್ಲಿ, ಯಾವುದೇ ರೀತಿಯಲ್ಲಿ ಕರುಣೆಯನ್ನು ತೋರಿಸದೆ ದೇವರು ನ್ಯಾಯತೀರ್ಪನ್ನು ಜಾರಿಗೆ ತರುತ್ತಾನೆ. ಎರಡೂ ರೀತಿಯಲ್ಲಿ ಆತನು ತನ್ನ ಉಚ್ಚ ಮೂಲತತ್ವಗಳಿಗೆ ನಂಬಿಗಸ್ತನಾಗಿದ್ದಾನೆ. * (ರೋಮಾಪುರ 3:​21-26) ‘ಆಹಾ, ದೇವರ ವಿವೇಕವು ಎಷ್ಟೋ ಅಗಾಧ!’​—⁠ರೋಮಾಪುರ 11:⁠33.

13. ಇಷ್ಟರ ತನಕ ಪ್ರಕಟಪಡಿಸಲ್ಪಟ್ಟಿರುವ “ಒಟ್ಟು” ಆತ್ಮಿಕ ಸತ್ಯತೆಗಳಿಗಾಗಿ ನಾವು ಹೇಗೆ ಗಣ್ಯತೆಯನ್ನು ತೋರಿಸಬೇಕು?

13 ಯೆಹೋವನು ತನ್ನ ಸಂಕಲ್ಪಗಳಲ್ಲಿ ಅನೇಕ ಸಂಕಲ್ಪಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾನೆ ಎಂಬ ವಾಸ್ತವಾಂಶದಿಂದ, ಕೀರ್ತನೆಗಾರನಂತೆ ನಾವು ಸಹ ರೋಮಾಂಚನಗೊಳ್ಳುತ್ತೇವೆ. ದಾವೀದನು ಬರೆದುದು: “ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ; ಅವುಗಳ ಒಟ್ಟು ಅಸಂಖ್ಯವಾಗಿದೆ. ಅವುಗಳನ್ನು ಲೆಕ್ಕಿಸುವದಾದರೆ [ಸಮುದ್ರದ] ಮರಳಿಗಿಂತ ಹೆಚ್ಚಾಗಿವೆ.” (ಕೀರ್ತನೆ 139:​17, 18) ಇಂದು ನಮಗಿರುವ ಜ್ಞಾನವು, ನಿತ್ಯತೆಯುದ್ದಕ್ಕೂ ಯೆಹೋವನು ಪ್ರಕಟಪಡಿಸಲಿಕ್ಕಿರುವ ಅಸಂಖ್ಯಾತ ಸಂಕಲ್ಪಗಳಲ್ಲಿ ಕೇವಲ ಒಂದು ಚಿಕ್ಕ ಭಾಗವನ್ನು ಮಾತ್ರ ಪ್ರತಿನಿಧಿಸುತ್ತದೆ. ಹಾಗಿದ್ದರೂ, ಇಷ್ಟರ ತನಕ ಪ್ರಕಟಪಡಿಸಲ್ಪಟ್ಟಿರುವ ಅಮೂಲ್ಯವಾದ “ಒಟ್ಟು” ಆತ್ಮಿಕ ಸತ್ಯತೆಗಳನ್ನು ನಾವು ಆಳವಾಗಿ ಗಣ್ಯಮಾಡುತ್ತೇವೆ ಮತ್ತು ದೇವರ ವಾಕ್ಯದ ಸಾರಾಂಶವನ್ನು ತಿಳಿದುಕೊಳ್ಳಲಿಕ್ಕಾಗಿ ನಾವು ಅದನ್ನು ಇನ್ನೂ ಆಳವಾಗಿ ಪರಿಶೋಧಿಸುತ್ತೇವೆ.​—⁠ಕೀರ್ತನೆ 119:​160, NW, ಪಾದಟಿಪ್ಪಣಿ.

ಪ್ರಯತ್ನ ಹಾಗೂ ಪರಿಣಾಮಕಾರಿ ಸಾಧನಗಳ ಅಗತ್ಯವಿದೆ

14. ಜ್ಞಾನೋಕ್ತಿ 2:​1-6ನೆಯ ವಚನಗಳು, ದೇವರ ವಾಕ್ಯದ ಅಧ್ಯಯನದಲ್ಲಿ ನಾವು ಮಾಡಬೇಕಾಗಿರುವ ಪ್ರಯತ್ನವನ್ನು ಹೇಗೆ ಒತ್ತಿಹೇಳುತ್ತವೆ?

14 ಗಹನವಾದ ಬೈಬಲ್‌ ಅಧ್ಯಯನವನ್ನು ಮಾಡಲು ಪ್ರಯತ್ನದ ಅಗತ್ಯವಿದೆ. ಜ್ಞಾನೋಕ್ತಿ 2:​1-6ನ್ನು ಜಾಗರೂಕವಾಗಿ ಓದುವಲ್ಲಿ, ಈ ವಿಷಯವು ನಮಗೆ ಹೆಚ್ಚು ಸ್ಪಷ್ಟವಾಗಿ ತಿಳಿದುಬರುತ್ತದೆ. ದೈವಿಕ ಜ್ಞಾನ, ವಿವೇಕ, ಹಾಗೂ ವಿವೇಚನಾಶಕ್ತಿಯನ್ನು ಪಡೆದುಕೊಳ್ಳಲು ಅಗತ್ಯವಿರುವ ಪ್ರಯತ್ನವನ್ನು ಒತ್ತಿಹೇಳಲಿಕ್ಕಾಗಿ, ಜ್ಞಾನಿ ಅರಸನಾದ ಸೊಲೊಮೋನನು ಉಪಯೋಗಿಸಿದ ಪ್ರಭಾವಕಾರಿ ಕ್ರಿಯಾಪದಗಳನ್ನು ಗಮನಿಸಿರಿ. ಅವನು ಬರೆದುದು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ. ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.” (ಓರೆ ಅಕ್ಷರಗಳು ನಮ್ಮವು.) ಹೌದು, ನಮ್ಮ ಅಧ್ಯಯನವು ಫಲಪ್ರದವಾಗಬೇಕಾದರೆ, ಗುಪ್ತವಾದ ನಿಕ್ಷೇಪವನ್ನು ಹುಡುಕುತ್ತಿದ್ದೇವೋ ಎಂಬಂಥ ರೀತಿಯಲ್ಲಿ ಸಂಶೋಧನೆ ಮಾಡಬೇಕು ಹಾಗೂ ಆಳವಾಗಿ ಅಗೆಯಬೇಕು.

15. ಒಳ್ಳೆಯ ಅಭ್ಯಾಸದ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಯಾವ ಬೈಬಲ್‌ ದೃಷ್ಟಾಂತವು ಒತ್ತಿಹೇಳುತ್ತದೆ?

15 ನಮ್ಮ ಅಧ್ಯಯನವು ಆತ್ಮಿಕವಾಗಿ ಸಂಪದ್ಯುಕ್ತಗೊಳ್ಳಬೇಕಾದರೆ, ಒಳ್ಳೆಯ ಅಭ್ಯಾಸದ ವಿಧಾನಗಳನ್ನು ನಾವು ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ವಿಷಯದಲ್ಲಿ ಸೊಲೊಮೋನನು ಬರೆದುದು: “ಮೊಂಡುಕೊಡಲಿಯ ಬಾಯಿ ಮೊನೆಮಾಡದಿದ್ದರೆ ಹೆಚ್ಚು ಬಲವನ್ನು ಪ್ರಯೋಗಿಸಬೇಕಲ್ಲವೆ.” (ಪ್ರಸಂಗಿ 10:10) ಒಬ್ಬ ಕೆಲಸಗಾರನು ಮೊಂಡಾಗಿರುವ ಕೊಡಲಿಯನ್ನು ಉಪಯೋಗಿಸುವಲ್ಲಿ ಅಥವಾ ಅವನು ಅದನ್ನು ಕೌಶಲದಿಂದ ಪ್ರಯೋಗಿಸದಿರುವಲ್ಲಿ, ಅವನು ತನ್ನ ಬಲವನ್ನು ಹೆಚ್ಚು ಉಪಯೋಗಿಸಬೇಕಾಗುತ್ತದೆ ಮತ್ತು ಅವನ ಕೆಲಸವೂ ಅಚ್ಚುಕಟ್ಟಾಗಿರುವುದಿಲ್ಲ. ಅದೇ ರೀತಿಯಲ್ಲಿ, ನಮ್ಮ ಅಭ್ಯಾಸ ವಿಧಾನಗಳ ಮೇಲಾಧಾರಿಸಿ, ಅಧ್ಯಯನಮಾಡುವುದಕ್ಕಾಗಿ ವ್ಯಯಿಸಲ್ಪಡುವ ಸಮಯದಿಂದ ದೊರಕುವ ಪ್ರಯೋಜನಗಳು ಭಿನ್ನವಾಗಿರಬಹುದು. ದೇವಪ್ರಭುತ್ವ ಶುಶ್ರೂಷಾ ಶಾಲಾ ಮಾರ್ಗದರ್ಶಕ ಪುಸ್ತಕ (ಇಂಗ್ಲಿಷ್‌)ದ ಪಾಠ 7ರಲ್ಲಿ, ನಾವು ಅಧ್ಯಯನಮಾಡುವ ವಿಧವನ್ನು ಉತ್ತಮಗೊಳಿಸಲಿಕ್ಕಾಗಿ ಅತ್ಯುತ್ತಮವಾದ ಪ್ರಾಯೋಗಿಕ ಸಲಹೆಗಳನ್ನು ನಾವು ಕಂಡುಕೊಳ್ಳಸಾಧ್ಯವಿದೆ. *

16. ನಾವು ಗಹನವಾದ ಅಧ್ಯಯನದಲ್ಲಿ ಒಳಗೂಡುವಂತೆ ಸಹಾಯಮಾಡಲು ಯಾವ ಪ್ರಾಯೋಗಿಕ ಸಲಹೆಗಳು ನಮಗೆ ಕೊಡಲ್ಪಟ್ಟಿವೆ?

16 ಒಬ್ಬ ಕುಶಲಕರ್ಮಿಯು ತನ್ನ ಕೆಲಸವನ್ನು ಆರಂಭಿಸುವುದಕ್ಕೆ ಮುಂಚೆ, ತನಗೆ ಬೇಕಾಗಿರುವ ಎಲ್ಲ ಸಾಧನಗಳನ್ನು ಹೊರಗೆ ತೆಗೆದು ತನ್ನ ಮುಂದೆ ಹರಡಿಕೊಳ್ಳುತ್ತಾನೆ. ತದ್ರೀತಿಯಲ್ಲಿ, ನಾವು ಅಧ್ಯಯನವನ್ನು ಆರಂಭಿಸುವಾಗ, ನಮಗೆ ಬೇಕಾಗುವಂತಹ ಅಭ್ಯಾಸ ಸಾಧನಗಳನ್ನು ನಮ್ಮ ವೈಯಕ್ತಿಕ ಗ್ರಂಥಾಲಯದಿಂದ ಆರಿಸಿಕೊಳ್ಳಬೇಕು. ಅಧ್ಯಯನವು ಒಂದು ಕೆಲಸವಾಗಿದೆ ಮತ್ತು ಇದನ್ನು ಮಾಡಲು ಮಾನಸಿಕ ಪ್ರಯತ್ನದ ಅಗತ್ಯವಿರುವುದರಿಂದ, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಸಹ ಒಳ್ಳೇದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಾವು ಮಾನಸಿಕವಾಗಿ ಎಚ್ಚರವಾಗಿರಲು ಬಯಸುವಲ್ಲಿ, ಹಾಸಿಗೆಯಲ್ಲಿ ಮಲಗಿಕೊಂಡು ಅಥವಾ ಆರಾಮ ಕುರ್ಚಿಯಲ್ಲಿ ಕುಳಿತುಕೊಂಡು ಅಧ್ಯಯನಮಾಡುವುದಕ್ಕೆ ಬದಲಾಗಿ, ಒಂದು ಮೇಜಿನ ಬಳಿಯಿರುವ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಹೆಚ್ಚು ಪರಿಣಾಮಕಾರಿಯಾಗಿರುವುದು. ಸ್ವಲ್ಪ ಸಮಯದ ವರೆಗೆ ಏಕಾಗ್ರಚಿತ್ತರಾಗಿ ಅಧ್ಯಯನ ನಡೆಸಿದ ಬಳಿಕ, ಸ್ವಲ್ಪ ಸಮಯ ವಿರಮಿಸುವುದನ್ನು ಅಥವಾ ತಾಜಾ ಗಾಳಿ ಸೇವನೆಗಾಗಿ ಹೊರಗೆ ಹೋಗುವುದನ್ನು ನೀವು ಪ್ರಯೋಜನದಾಯಕವಾಗಿ ಕಂಡುಕೊಳ್ಳಬಹುದು.

17, 18. ನಿಮಗೆ ಲಭ್ಯಗೊಳಿಸಲ್ಪಟ್ಟಿರುವ ಅತ್ಯುತ್ತಮ ಅಭ್ಯಾಸದ ಸಾಧನಗಳನ್ನು ಹೇಗೆ ಉಪಯೋಗಿಸುವುದು ಎಂಬುದರ ಕುರಿತು ಉದಾಹರಣೆಗಳನ್ನು ಕೊಡಿರಿ.

17 ಇಂದು ನಮಗೆ ತುಂಬ ಸಹಾಯಕರವಾಗಿರುವಂತಹ ಅಭ್ಯಾಸದ ಸಾಧನಗಳು ಲಭ್ಯಗೊಳಿಸಲ್ಪಟ್ಟಿವೆ. ಇಂತಹ ಸಾಧನಗಳಲ್ಲಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲ್‌ ಅತ್ಯಂತ ಪ್ರಮುಖವಾದದ್ದಾಗಿದೆ. ಈ ಬೈಬಲ್‌ ಈಗ ಸಂಪೂರ್ಣವಾಗಿ ಅಥವಾ ಭಾಗಶಃ 37 ಭಾಷೆಗಳಲ್ಲಿ ಲಭ್ಯವಿದೆ. ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ನ ಸ್ಟ್ಯಾಂಡರ್ಡ್‌ ಎಡಿಷನ್‌ನಲ್ಲಿ, ಕ್ರಾಸ್‌ ರೆಫರೆನ್ಸ್‌ಗಳಿವೆ ಮತ್ತು “ಬೈಬಲ್‌ ಪುಸ್ತಕಗಳ ಪಟ್ಟಿ” ಇದೆ. ಈ ಪಟ್ಟಿಯಲ್ಲಿ ಪ್ರತಿಯೊಂದು ಪುಸ್ತಕದ ಬರಹಗಾರನ ಹೆಸರು, ಬರೆಯಲ್ಪಟ್ಟ ಸ್ಥಳ, ಮತ್ತು ಆವರಿಸಲ್ಪಟ್ಟ ಕಾಲಾವಧಿಯು ಕೊಡಲ್ಪಟ್ಟಿದೆ. ಇದರಲ್ಲಿ ಬೈಬಲ್‌ ಶಬ್ದಗಳ ಒಂದು ವಿಷಯಸೂಚಿ, ಅನುಬಂಧ ಹಾಗೂ ಭೂಪಟಗಳು ಸಹ ಇವೆ. ಕೆಲವು ಭಾಷೆಗಳಲ್ಲಿ ಈ ಬೈಬಲು ದೊಡ್ಡ ಸಂಪುಟಗಳಲ್ಲಿ ಮುದ್ರಿಸಲ್ಪಟ್ಟಿದ್ದು, ಇದು ರೆಫರೆನ್ಸ್‌ ಬೈಬಲ್‌ ಎಂದು ಕರೆಯಲ್ಪಡುತ್ತದೆ. ಈ ಬೈಬಲಿನಲ್ಲಿಯೂ ಮೇಲೆ ತಿಳಿಸಲ್ಪಟ್ಟಿರುವ ಎಲ್ಲ ವಿಶೇಷತೆಗಳು ಇವೆ. ಅಷ್ಟುಮಾತ್ರವಲ್ಲ, ಈ ಬೈಬಲಿನಲ್ಲಿ ಸವಿಸ್ತಾರವಾದ ಪಾದಟಿಪ್ಪಣಿಗಳು ಒಳಗೂಡಿಸಲ್ಪಟ್ಟಿದ್ದು, ಅವುಗಳ ವಿಷಯಸೂಚಿಯು ಸಹ ಕೊಡಲ್ಪಟ್ಟಿದೆ. ಆದುದರಿಂದ, ದೇವರ ವಾಕ್ಯವನ್ನು ಇನ್ನೂ ಆಳವಾಗಿ ಪರಿಶೋಧಿಸುವಂತೆ ನಿಮಗೆ ಸಹಾಯಮಾಡಲಿಕ್ಕಾಗಿ, ನಿಮ್ಮ ಭಾಷೆಯಲ್ಲಿ ಲಭ್ಯವಿರುವ ಸಾಧನಗಳನ್ನು ನೀವು ಪೂರ್ಣವಾಗಿ ಸದುಪಯೋಗಿಸುತ್ತಿದ್ದೀರೋ?

18 ಅತ್ಯಮೂಲ್ಯವಾಗಿರುವ ಇನ್ನೊಂದು ಅಭ್ಯಾಸ ಸಾಧನವು, ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಎಂಬ ಬೈಬಲ್‌ ಎನ್‌ಸೈಕ್ಲೊಪೀಡಿಯವಾಗಿದ್ದು, ಇದು ಎರಡು ಸಂಪುಟಗಳನ್ನು ಒಳಗೊಂಡಿದೆ. ನೀವು ಅರ್ಥಮಾಡಿಕೊಳ್ಳಲು ಸಾಧ್ಯವಿರುವಂತಹ ಭಾಷೆಯಲ್ಲಿ ಈ ಸಂಪುಟಗಳು ನಿಮ್ಮ ಬಳಿ ಇರುವುದಾದರೆ, ಅಧ್ಯಯನ ಮಾಡುವಾಗ ನೀವು ಇವುಗಳನ್ನು ಯಾವಾಗಲೂ ನಿಮ್ಮ ಹತ್ತಿರ ಇಟ್ಟುಕೊಳ್ಳಿರಿ. ಇವು ನಿಮಗೆ ಬೈಬಲಿನ ಅಧಿಕಾಂಶ ವಿಷಯಗಳ ಕುರಿತಾದ ಹಿನ್ನೆಲೆ ಮಾಹಿತಿಯನ್ನು ಒದಗಿಸುವವು. ಇದಲ್ಲದೆ, “ಆಲ್‌ ಸ್ಕ್ರಿಪ್ಚರ್ಸ್‌ ಈಸ್‌ ಇನ್‌ಸ್ಪಾಯರ್ಡ್‌ ಆಫ್‌ ಗಾಡ್‌ ಆ್ಯಂಡ್‌ ಬೆನಿಫಿಷಿಯಲ್‌” ಎಂಬ ಪುಸ್ತಕವು ಸಹ ಒಂದು ಸಹಾಯಕರ ಸಾಧನವಾಗಿದೆ. ಬೈಬಲಿನ ಒಂದು ಹೊಸ ಪುಸ್ತಕವನ್ನು ಓದಲು ಆರಂಭಿಸುವುದಕ್ಕೆ ಮೊದಲು, “ಆಲ್‌ ಸ್ಕ್ರಿಪ್ಚರ್ಸ್‌” ಎಂಬ ಪುಸ್ತಕದಲ್ಲಿ ಇದಕ್ಕೆ ಅನುರೂಪವಾಗಿ ಕೊಡಲ್ಪಟ್ಟಿರುವ ವಿಷಯವನ್ನು ಪರಿಶೋಧಿಸುವುದು ಒಳ್ಳೇದು. ಏಕೆಂದರೆ ಈ ಪುಸ್ತಕದಲ್ಲಿ, ಬೈಬಲಿನ ಪ್ರತಿಯೊಂದು ಪುಸ್ತಕದ ಕುರಿತಾದ ಭೂವಿವರಣೆ ಹಾಗೂ ಐತಿಹಾಸಿಕ ಸನ್ನಿವೇಶವು ಕೊಡಲ್ಪಟ್ಟಿರುತ್ತದೆ. ಅಷ್ಟುಮಾತ್ರವಲ್ಲ, ಬೈಬಲಿನಲ್ಲಿರುವ ಪ್ರತಿಯೊಂದು ಪುಸ್ತಕದ ಸಾರಾಂಶ ಹಾಗೂ ಆ ಪುಸ್ತಕವು ನಮಗೆ ಏಕೆ ಅಮೂಲ್ಯವಾಗಿದೆ ಎಂಬ ವಿವರಣೆಯು ಸಹ ಅದರಲ್ಲಿ ಒಳಗೂಡಿಸಲ್ಪಟ್ಟಿದೆ. ಮುದ್ರಿತ ರೂಪದಲ್ಲಿರುವಂತಹ ಅಭ್ಯಾಸದ ಸಾಧನಗಳ ಜೊತೆಗೆ, ಇತ್ತೀಚೆಗೆ ಕಂಪ್ಯೂಟರೀಕೃತ ವಾಚ್‌ಟವರ್‌ ಲೈಬ್ರರಿ ಸಹ ಸಿದ್ಧಗೊಳಿಸಲ್ಪಟ್ಟಿದೆ. ಮತ್ತು ಇದು ಈಗ ಒಂಬತ್ತು ಭಾಷೆಗಳಲ್ಲಿ ಲಭ್ಯವಿದೆ.

19. (ಎ) ಬೈಬಲ್‌ ಅಧ್ಯಯನಕ್ಕಾಗಿ ಯೆಹೋವನು ನಮಗೆ ಅತ್ಯುತ್ತಮ ಸಾಧನಗಳನ್ನು ಏಕೆ ಒದಗಿಸಿದ್ದಾನೆ? (ಬಿ) ಯೋಗ್ಯವಾದ ಬೈಬಲ್‌ ವಾಚನ ಹಾಗೂ ಅಧ್ಯಯನಕ್ಕೆ ಯಾವುದರ ಅಗತ್ಯವಿದೆ?

19 ಭೂಮಿಯಲ್ಲಿರುವ ತನ್ನ ಸೇವಕರು ‘ದೈವಜ್ಞಾನವನ್ನು ಹುಡುಕುವಂತೆ ಮತ್ತು ಅರಿಯುವಂತೆ’ ಮಾಡಲಿಕ್ಕಾಗಿ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಯೆಹೋವನು ಈ ಎಲ್ಲ ಸಾಧನಗಳನ್ನು ಒದಗಿಸಿದ್ದಾನೆ. (ಜ್ಞಾನೋಕ್ತಿ 2:​4, 5) ಒಳ್ಳೆಯ ಅಭ್ಯಾಸ ರೂಢಿಗಳು, ಯೆಹೋವನ ಕುರಿತಾದ ಅತ್ಯಧಿಕ ಜ್ಞಾನವನ್ನು ಪಡೆದುಕೊಳ್ಳುವಂತೆ ಹಾಗೂ ಆತನೊಂದಿಗೆ ನಿಕಟ ಸಂಬಂಧದಲ್ಲಿ ಆನಂದಿಸುವಂತೆ ನಮ್ಮನ್ನು ಸಜ್ಜುಗೊಳಿಸುತ್ತವೆ. (ಕೀರ್ತನೆ 63:​1-8) ಹೌದು, ಅಧ್ಯಯನದ ಅರ್ಥವು ಕೆಲಸ ಎಂದಾಗಿದೆಯಾದರೂ, ಈ ಕೆಲಸವು ಆನಂದಕರವಾದದ್ದೂ ಫಲಪ್ರದವಾದದ್ದೂ ಆಗಿದೆ. ಆದರೂ, ಅಧ್ಯಯನಮಾಡಲು ಸಮಯದ ಅಗತ್ಯವಿದೆ. ಆದರೆ, ‘ನನ್ನ ಬೈಬಲ್‌ ವಾಚನ ಹಾಗೂ ವೈಯಕ್ತಿಕ ಅಧ್ಯಯನಕ್ಕೆ ಸಾಕಷ್ಟು ಗಮನಕೊಡಲು ನನಗೆ ಸಮಯವೆಲ್ಲಿದೆ?’ ಎಂದು ನೀವು ಆಲೋಚಿಸುತ್ತಿರಬಹುದು. ಈ ಲೇಖನಮಾಲೆಯ ಕೊನೆಯ ಲೇಖನದಲ್ಲಿ ಈ ಅಂಶವನ್ನು ಪರಿಗಣಿಸಲಾಗುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 7 ನ್ಯೂ ಇಂಟರ್‌ನ್ಯಾಷನಲ್‌ ಡಿಕ್ಷನೆರಿ ಆಫ್‌ ಓಲ್ಡ್‌ ಟೆಸ್ಟಮೆಂಟ್‌ ಥಿಯೋಲಜಿ ಆ್ಯಂಡ್‌ ಎಕ್ಸಿಜೀಸಿಸ್‌, ಸಂಪುಟ 4, 205-7ನೆಯ ಪುಟಗಳು.

^ ಪ್ಯಾರ. 12 ಆಗಸ್ಟ್‌ 1, 1998ರ ಕಾವಲಿನಬುರುಜು ಸಂಚಿಕೆಯ 13ನೆಯ ಪುಟದಲ್ಲಿರುವ 7ನೆಯ ಪ್ಯಾರಗ್ರಾಫನ್ನು ನೋಡಿರಿ. ಬೈಬಲ್‌ ಅಧ್ಯಯನ ಒಂದು ಯೋಜನೆಯೋಪಾದಿ, ಈ ಸಂಚಿಕೆಯಲ್ಲಿರುವ ಎರಡೂ ಅಭ್ಯಾಸ ಲೇಖನಗಳನ್ನು ನೀವು ಪುನರ್ವಿಮರ್ಶಿಸಬಹುದು. ಇದರೊಂದಿಗೆ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಎಂಬ ಬೈಬಲ್‌ ಎನ್‌ಸೈಕ್ಲೊಪೀಡಿಯದಲ್ಲಿರುವ “ನ್ಯಾಯ,” “ಕರುಣೆ,” ಮತ್ತು “ನೀತಿ” ಎಂಬ ಲೇಖನಗಳನ್ನು ಸಹ ಪರಿಶೀಲಿಸಬಹುದು.

^ ಪ್ಯಾರ. 15 ಈ ಪುಸ್ತಕವು ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ. ಒಂದುವೇಳೆ ಈ ಕೈಪಿಡಿಯು ನಿಮ್ಮ ಭಾಷೆಯಲ್ಲಿ ಲಭ್ಯವಿರದಿದ್ದಲ್ಲಿ, ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ ಈ ಕೆಳಗಿನ ಸಂಚಿಕೆಗಳಲ್ಲಿ, ಅಭ್ಯಾಸ ವಿಧಾನಗಳ ಕುರಿತಾದ ಅತ್ಯುತ್ತಮ ಸಲಹೆಯನ್ನು ಕಂಡುಕೊಳ್ಳಸಾಧ್ಯವಿದೆ: ಆಗಸ್ಟ್‌ 15, 1993, 13-17ನೆಯ ಪುಟಗಳು; ಮೇ 15, 1986, 19-20ನೆಯ ಪುಟಗಳು.

ಪುನರ್ವಿಮರ್ಶೆಯ ಪ್ರಶ್ನೆಗಳು

• ನಮ್ಮ ವೈಯಕ್ತಿಕ ಅಧ್ಯಯನವನ್ನು ನಾವು ಚೈತನ್ಯದಾಯಕವಾಗಿ ಮತ್ತು ಫಲಪ್ರದವಾಗಿ ಹೇಗೆ ಮಾಡಬಲ್ಲೆವು?

• ಕೀರ್ತನೆಗಾರನಂತೆ, ಯೆಹೋವನ ವಾಕ್ಯಕ್ಕಾಗಿ ನಾವು ‘ಒಲವನ್ನು’ ಹೇಗೆ ತೋರಿಸಸಾಧ್ಯವಿದೆ ಹಾಗೂ ಅದರ ಬಗ್ಗೆ ಹೇಗೆ ‘ಧ್ಯಾನಿಸ’ಸಾಧ್ಯವಿದೆ?

ಜ್ಞಾನೋಕ್ತಿ 2:​1-6ನೆಯ ವಚನಗಳು, ದೇವರ ವಾಕ್ಯದ ಅಧ್ಯಯನದಲ್ಲಿ ನಾವು ಮಾಡಬೇಕಾಗಿರುವ ಪ್ರಯತ್ನವನ್ನು ಹೇಗೆ ಎತ್ತಿತೋರಿಸುತ್ತವೆ?

• ಅತ್ಯುತ್ತಮವಾಗಿರುವ ಯಾವ ಅಭ್ಯಾಸದ ಸಾಧನಗಳನ್ನು ಯೆಹೋವನು ಒದಗಿಸಿದ್ದಾನೆ?

[ಅಧ್ಯಯನ ಪ್ರಶ್ನೆಗಳು]

[ಪುಟ 14ರಲ್ಲಿರುವ ಚಿತ್ರ]

ಶಾಂತ ಮನಸ್ಸಿನಿಂದ ಮನನಮಾಡುವುದು ಹಾಗೂ ಪ್ರಾರ್ಥನೆಮಾಡುವುದು, ದೇವರ ವಾಕ್ಯಕ್ಕಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಲು ನಮಗೆ ಸಹಾಯಮಾಡುವುದು

[ಪುಟ 17ರಲ್ಲಿರುವ ಚಿತ್ರಗಳು]

ದೇವರ ವಾಕ್ಯವನ್ನು ಆಳವಾಗಿ ಪರಿಶೋಧಿಸಲು ಲಭ್ಯವಿರುವ ಸಾಧನಗಳನ್ನು ನೀವು ಸಂಪೂರ್ಣವಾಗಿ ಉಪಯೋಗಿಸುತ್ತಿದ್ದೀರೋ?