ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿ ಕೇವಲ ಮಾನವರನ್ನು ಪರೀಕ್ಷಿಸುವ ನೆಲವೋ?

ಭೂಮಿ ಕೇವಲ ಮಾನವರನ್ನು ಪರೀಕ್ಷಿಸುವ ನೆಲವೋ?

ಭೂಮಿ ಕೇವಲ ಮಾನವರನ್ನು ಪರೀಕ್ಷಿಸುವ ನೆಲವೋ?

ಅಬ್ಬಾ! ಕೊನೆಗೂ ಮುಗಿಯಿತು! ಅಂತೂ ಪರೀಕ್ಷೆಯಲ್ಲಿ ಅವಳು ಪಾಸಾದಳು. ಎರಡು ವಾರಗಳ ವರೆಗೂ ಬಹಳ ಕಷ್ಟಪಟ್ಟು ಬರೆದ ಪರೀಕ್ಷೆಯ ನಂತರ, ವಿದ್ಯಾರ್ಥಿನಿಯು ಕೊನೆಗೂ ತೃಪ್ತಿಕರವಾದ ರಿಪೋರ್ಟ್‌ ಅನ್ನು ಪಡೆದುಕೊಂಡಿದ್ದಾಳೆ. ಈಗ ಅವಳ ಬಹಳ ದಿನಗಳ ಕನಸು ನನಸಾಗಲಿದೆ. ಅದೇನೆಂದರೆ, ಅವಳು ಇನ್ನು ಕೆಲಸಕ್ಕೆ ಸೇರಿಕೊಳ್ಳಬಹುದು.

ಅನೇಕರು, ಭೂಮಿಯ ಮೇಲಿನ ಜೀವನವನ್ನು ಇದೇ ರೀತಿಯಲ್ಲಿ ವೀಕ್ಷಿಸುತ್ತಾರೆ. ಅದು ಪ್ರತಿಯೊಬ್ಬರು ಬರೆಯಲೇಬೇಕಾದ ಪೂರ್ವಭಾವಿ ಪರೀಕ್ಷೆಯೆಂದು ಅವರು ನೆನಸುತ್ತಾರೆ. ಈ ಪರೀಕ್ಷೆಯಲ್ಲಿ “ಪಾಸ್‌” ಆಗುವವರು, ಯಾವುದಾದರೊಂದು ಉತ್ತಮವಾದ ಜೀವನಕ್ಕೆ ಕಾಲಿಡುವರು. ಸದ್ಯದ ಜೀವನ​—⁠ಅನೇಕರಿಗೆ ಕೇವಲ ಬದುಕಿರುವುದೇ​—⁠ಮಾನವರು ನಿರೀಕ್ಷಿಸಬಹುದಾದ ಅತ್ಯುತ್ತಮ ಜೀವನವಾಗಿರುವುದಾದರೆ, ನಿಜವಾಗಿಯೂ ಅದು ಎಷ್ಟು ವಿಷಾದನೀಯ! ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ವ್ಯಕ್ತಿಯಾದ ಯೋಬನು ತನ್ನ ಜೀವಮಾನಕಾಲವೆಲ್ಲಾ ಆರೋಗ್ಯವಂತನೂ ಐಶ್ವರ್ಯವಂತನೂ ಆಗಿದ್ದನು. ಆದರೂ ಅವನು ಹೇಳಿದ್ದೇನೆಂದರೆ, “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು.”​—⁠ಯೋಬ 14:⁠1.

ಅನೇಕರು ನೆನಸುವಂತೆಯೇ, ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲೊಪೀಡಿಯ ಹೇಳುವುದೇನೆಂದರೆ: “ಸ್ವರ್ಗದಲ್ಲಿ ವೈಭವದಿಂದ ಇರುವುದೇ ದೇವರು ಮಾನವರಿಗಾಗಿ ಉದ್ದೇಶಿಸಿರುವ ನಿಯತಿಯಾಗಿದೆ. . . . ಮನುಷ್ಯನ ಸಂತೋಷವು, ಆತನ ಸ್ವರ್ಗೀಯ ಪರಮಾನಂದದಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುವುದರಲ್ಲೇ ಅಡಗಿದೆ.” ಇತ್ತೀಚೆಗೆ ಅಮೆರಿಕದಲ್ಲಿ ಚರ್ಚ್‌ ಆಫ್‌ ಕ್ರೈಸ್ಟ್‌ನವರು ಮಾಡಿದ ಒಂದು ಸಮೀಕ್ಷೆಗನುಸಾರ, ಉತ್ತರಿಸಿದವರಲ್ಲಿ 87 ಪ್ರತಿಶತದಷ್ಟು ಮಂದಿ, ತಾವು ಸತ್ತ ನಂತರ ಸ್ವರ್ಗಕ್ಕೆ ಹೋಗುವೆವು ಎಂಬ ಸಾಧ್ಯತೆಯಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದರು.

ಕ್ರೈಸ್ತರಲ್ಲದ ಅನೇಕರು ಕೂಡ ಸತ್ತ ಮೇಲೆ ಭೂಮಿಯನ್ನು ಬಿಟ್ಟು ಉತ್ತಮವಾದ ಬೇರೊಂದು ಸ್ಥಳಕ್ಕೆ ಹೋಗುವ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಉದಾಹರಣೆಗೆ, ಮುಸಲ್ಮಾನರನ್ನು ತೆಗೆದುಕೊಳ್ಳುವುದಾದರೆ, ಅವರು ಸ್ವರ್ಗೀಯ ಪ್ರಮೋದವನಕ್ಕೆ ಹೋಗುವ ನಂಬಿಕೆಯುಳ್ಳವರಾಗಿದ್ದಾರೆ. ಅದೇ ರೀತಿಯಲ್ಲಿ, ಚೀನಾ ಮತ್ತು ಜಪಾನಿನಲ್ಲಿರುವ ಬೌದ್ಧಧರ್ಮಕ್ಕೆ ಸೇರಿದ ಪರಿಶುದ್ಧ ಲೋಕ ಎಂಬ ಪಂಥದ ಅನುಯಾಯಿಗಳು, “ಆಮೀಡಾ” ಎಂಬ ಅನಂತ ಬೆಳಕಿನ ಬುದ್ಧನ ಹೆಸರನ್ನು ಪಠಿಸುವುದರಿಂದ, ತಾವು ಪರಿಶುದ್ಧ ದೇಶದಲ್ಲಿ ಅಥವಾ ಪಾಶ್ಚಾತ್ಯ ಪ್ರಮೋದವನದಲ್ಲಿ ಮರುಜನ್ಮವನ್ನು ಪಡೆದು, ಅಲ್ಲಿ ಪರಮಾನಂದದಲ್ಲಿ ಜೀವಿಸುವೆವು ಎಂದು ನಂಬುತ್ತಾರೆ.

ಸ್ವಾರಸ್ಯಕರವಾದ ವಿಷಯವೇನೆಂದರೆ, ಜಗತ್ತಿನಲ್ಲೇ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಿ ವಿತರಿಸಲ್ಪಟ್ಟಿರುವ ಪವಿತ್ರ ಗ್ರಂಥವಾದ ಬೈಬಲಿನ ದೃಷ್ಟಿಕೋನವು ಬೇರೆಯೇ ಆಗಿದೆ. ಹೇಗೆಂದರೆ, ಕಷ್ಟಗಳಿಂದ ತಪ್ಪಿಸಿಕೊಂಡು ಬೇರೆ ಯಾವುದೋ ಲೋಕಕ್ಕೆ ಹೋಗಲು ಈ ಭೂಮಿಯು ಒಂದು ಮೆಟ್ಟುಗಲ್ಲಾಗಿದೆ ಎಂದು ಬೈಬಲ್‌ ಹೇಳುವುದಿಲ್ಲ. ಉದಾಹರಣೆಗೆ, ಅದು ಹೇಳುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಬೈಬಲಿನಲ್ಲಿ ಯೇಸು ಹೇಳಿದ ಹೆಸರಾಂತ ಹೇಳಿಕೆಯು ಕೂಡ ಇದೆ. ಅದು ಹೇಳುವುದೇನೆಂದರೆ: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.”​—⁠ಮತ್ತಾಯ 5:⁠5.

ಭೂಮಿಯ ಮೇಲಿನ ನಮ್ಮ ನಿವಾಸವು ಕೇವಲ ತಾತ್ಕಾಲಿಕವಾದುದು ಎಂದು ನೆನಸುವ ಸಾಮಾನ್ಯವಾದ ಅಭಿಪ್ರಾಯವು ತಾನೇ, ಮರಣವು ಆನಂದಪರವಶವಾದ ಮತ್ತೊಂದು ಜೀವನಕ್ಕೆ ಮಾರ್ಗವನ್ನು ತೆರೆಯುತ್ತದೆ ಎಂಬುದನ್ನು ಅರ್ಥೈಸುತ್ತದೆ. ಇದು ನಿಜವೇ ಆಗಿರುವುದಾದರೆ, ಮರಣವು ಖಂಡಿತವಾಗಿಯೂ ಒಂದು ಆಶೀರ್ವಾದವಾಗಿದೆ. ಆದರೆ, ಜನಸಾಮಾನ್ಯರು ಮರಣವನ್ನು ಆ ದೃಷ್ಟಿಯಲ್ಲಿ ನೋಡುತ್ತಾರೋ? ಅಥವಾ ಈಗಿರುವ ಜೀವನವನ್ನೇ ಇನ್ನೂ ಹೆಚ್ಚು ಕಾಲ ಆನಂದಿಸಲು ಪ್ರಯತ್ನಿಸುತ್ತಾರೋ? ಅನುಭವಗಳನ್ನು ನೋಡುವುದಾದರೆ, ಅವು ತಕ್ಕಮಟ್ಟಿಗೆ ಆರೋಗ್ಯ ಮತ್ತು ಭದ್ರತೆಯನ್ನು ಅನುಭವಿಸುತ್ತಿರುವ ಜನರು ಸಾಯಲು ಇಷ್ಟಪಡುವುದಿಲ್ಲ ಎಂಬುದನ್ನು ತೋರಿಸುತ್ತವೆ.

ಹಾಗಿದ್ದರೂ, ಭೂಮಿಯ ಮೇಲಿನ ಜೀವನವು ಬರೀ ದುಷ್ಟತನ ಮತ್ತು ಕಷ್ಟಸಂಕಟಗಳಿಂದಲೇ ತುಂಬಿದೆ. ಆದುದರಿಂದ, ನಿಜವಾದ ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳಬಹುದಾದ ಒಂದೇ ಒಂದು ಸ್ಥಳ ಎಂದರೆ, ಅದು ಸ್ವರ್ಗವೇ ಎಂದು ಅನೇಕರು ಈಗಲೂ ನೆನಸುತ್ತಾರೆ. ಆದರೆ, ಸ್ವರ್ಗವು ಯಾವುದೇ ರೀತಿಯ ದುಷ್ಟತನ ಮತ್ತು ಅಸಾಮರಸ್ಯವಿಲ್ಲದೆ, ಕೇವಲ ಶಾಂತಿಯೇ ತುಂಬಿರುವ ಸ್ಥಳವಾಗಿದೆಯೇ? ಸತ್ತ ಮೇಲೆ ಮತ್ತೊಂದು ರೀತಿಯ ಜೀವನವಿರುವುದಾದರೆ, ಅದು ಕೇವಲ ಸ್ವರ್ಗೀಯ ಜೀವನವೇ ಆಗಿರಬೇಕೇ? ಈ ಪ್ರಶ್ನೆಗಳಿಗೆ ಬೈಬಲ್‌ ಕೊಡುವ ಉತ್ತರಗಳನ್ನು ನೀವು ಓದಿನೋಡಿದರೆ, ನಿಮಗೆ ನಿಜವಾಗಿಯೂ ಆಶ್ಚರ್ಯವಾಗಬಹುದು. ಆದುದರಿಂದ, ದಯವಿಟ್ಟು ಓದುವುದನ್ನು ಮುಂದುವರಿಸಿ.