ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಣ್ಣಿಗೆ ಕಾಣದಿರುವ ದೇವರ ಸಮೀಪಕ್ಕೆ ಬರುವುದು—ಅದು ಸಾಧ್ಯವೊ?

ಕಣ್ಣಿಗೆ ಕಾಣದಿರುವ ದೇವರ ಸಮೀಪಕ್ಕೆ ಬರುವುದು—ಅದು ಸಾಧ್ಯವೊ?

ಕಣ್ಣಿಗೆ ಕಾಣದಿರುವ ದೇವರ ಸಮೀಪಕ್ಕೆ ಬರುವುದು​—⁠ಅದು ಸಾಧ್ಯವೊ?

‘ಕಣ್ಣಿಗೆ ಕಾಣದ ದೇವರೊಂದಿಗೆ ನಾನು ಹೇಗೆ ತಾನೇ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಬಲ್ಲೆ?’ ಎಂದು ನೀವು ಕೇಳಬಹುದು. ಅದು ಸಮಂಜಸವಾದ ಪ್ರಶ್ನೆಯಂತೆ ತೋರುತ್ತದೆ. ಆದರೆ ಈ ವಿಷಯದ ಕುರಿತು ಸ್ವಲ್ಪ ಯೋಚಿಸಿರಿ:

ಪ್ರೀತಿಭರಿತ ಮತ್ತು ಚಿರಕಾಲಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲಿಕ್ಕಾಗಿ ಒಬ್ಬ ವ್ಯಕ್ತಿಯನ್ನು ಕಣ್ಣಾರೆ ನೋಡುವುದು ಎಷ್ಟು ಪ್ರಾಮುಖ್ಯ? ದೃಷ್ಟಿಗೆ ಬೀಳದಂತಹ ಅಂಶಗಳು ಸಹ ಪ್ರಾಮುಖ್ಯವಾಗಿರುವುದಿಲ್ಲವೊ? ಖಂಡಿತವಾಗಿಯೂ ಪ್ರಾಮುಖ್ಯವಾಗಿವೆ. ಅವು ಹೆಚ್ಚು ಪ್ರಾಮುಖ್ಯವೆಂದೇ ಹೇಳಬಹುದು! ಈ ಕಾರಣದಿಂದಾಗಿಯೇ, ಕೆಲವು ವ್ಯಕ್ತಿಗಳು ಕ್ರಮವಾದ ಪತ್ರವ್ಯವಹಾರದ ಮೂಲಕ ಇತರರೊಂದಿಗೆ ತುಂಬ ಆಪ್ತವಾದ ಸಂಬಂಧವನ್ನು ಬೆಳೆಸಿಕೊಳ್ಳಲು ಶಕ್ತರಾಗಿದ್ದಾರೆ. ಅವರು ಪತ್ರಗಳ ಮೂಲಕ ತಮಗೆ ಇಷ್ಟವಾದ ಹಾಗೂ ಇಷ್ಟವಾಗದಂತಹ ಸಂಗತಿಗಳು, ಗುರಿಗಳು, ತತ್ವಗಳು, ಹಾಸ್ಯ ಪ್ರಜ್ಞೆ, ಮತ್ತು ವ್ಯಕ್ತಿತ್ವದ ಇನ್ನಿತರ ಲಕ್ಷಣಗಳು ಇಲ್ಲವೇ ಅಭಿರುಚಿಗಳನ್ನು ಪ್ರಾಮಾಣಿಕವಾಗಿ ತಿಳಿಸುತ್ತಾರೆ.

ಒಬ್ಬ ವ್ಯಕ್ತಿಯೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಲಿಕ್ಕಾಗಿ ಆ ವ್ಯಕ್ತಿಯನ್ನು ಕಣ್ಣಾರೆ ನೋಡುವ ಆವಶ್ಯಕತೆಯಿಲ್ಲ ಎಂಬುದನ್ನು ಅಂಧ ವ್ಯಕ್ತಿಗಳು ಸಹ ರುಜುಪಡಿಸುತ್ತಾರೆ. ಉದಾಹರಣೆಗಾಗಿ, ಎಡ್ವರ್ಡ್‌ ಮತ್ತು ಗ್ವೆನ್‌ * ಎಂಬುವವರನ್ನು ತೆಗೆದುಕೊಳ್ಳಿ. ಇವರು ಅಂಧ ವಿವಾಹಿತ ದಂಪತಿಯಾಗಿದ್ದಾರೆ. ಎಡ್ವರ್ಡ್‌ ಮತ್ತು ಗ್ವೆನ್‌ ಅಂಧರಿಗಾಗಿರುವ ಒಂದು ಶಾಲೆಯಲ್ಲಿ ಕಲಿಯುತ್ತಿದ್ದಾಗ, ಪರಸ್ಪರ ಪರಿಚಯವಾಯಿತು. ಅವನು ಗ್ವೆನ್‌ಳ ಗುಣಗಳನ್ನು, ವಿಶೇಷವಾಗಿ ಅವಳ ಪ್ರಾಮಾಣಿಕ ನಡೆನುಡಿ ಮತ್ತು ಕೆಲಸದ ಕಡೆಗೆ ಅವಳಿಗಿದ್ದ ಒಳ್ಳೆಯ ಮನೋಭಾವವನ್ನು ಮೆಚ್ಚಿಕೊಂಡನು. ಗ್ವೆನ್‌ ಸಹ ಎಡ್ವರ್ಡನನ್ನು ಇಷ್ಟಪಟ್ಟಳು. ಯಾಕೆಂದರೆ ಅವಳೇ ಹೇಳಿದಂತೆ, “ಪ್ರಾಮುಖ್ಯವಾದವುಗಳೆಂದು ನನಗೆ ಕಲಿಸಲಾಗಿದ್ದ ಎಲ್ಲ ಗುಣಗಳು ಅವನಲ್ಲಿದ್ದವು.” ಅವರು ಜೊತೆಯಾಗಿ ಸಮಯವನ್ನು ಕಳೆಯಲಾರಂಭಿಸಿದರು ಮತ್ತು ಮೂರು ವರ್ಷಗಳ ಬಳಿಕ ಮದುವೆಯಾದರು.

“ನೀವು ಇನ್ನೊಬ್ಬ ವ್ಯಕ್ತಿಯ ಜೊತೆಯಲ್ಲಿರುವಾಗ, ಆ ವ್ಯಕ್ತಿಯೊಂದಿಗೆ ಸಂಬಂಧವನ್ನು ಬೆಳೆಸುವುದರಲ್ಲಿ ಕುರುಡುತನ ಒಂದು ತಡೆಯಾಗಿರುವುದಿಲ್ಲ. ನೀವು ಕುರುಡರಾಗಿರಬಹುದಾದರೂ, ಭಾವನೆಗಳು ಕುರುಡಾಗಿರುವುದಿಲ್ಲ” ಅನ್ನುತ್ತಾರೆ ಎಡ್ವರ್ಡ್‌. ಅವರು ವಿವಾಹವಾಗಿ ಈಗ 57 ವರ್ಷಗಳು ಕಳೆದಿವೆ, ಮತ್ತು ಈಗಲೂ ಅವರು ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತಾರೆ. ಅವರ ಈ ಆಶ್ಚರ್ಯಕರವಾದ ಸಂಬಂಧದ ರಹಸ್ಯದಲ್ಲಿ ಕಡಿಮೆಪಕ್ಷ ಈ ನಾಲ್ಕು ಸಂಗತಿಗಳು ಸೇರಿವೆ: (1) ಇನ್ನೊಬ್ಬ ವ್ಯಕ್ತಿಯ ಗುಣಗಳನ್ನು ಗಮನಿಸುವುದು, (2) ಆ ಗುಣಗಳ ಕುರಿತಾಗಿ ಯೋಚಿಸುವುದು ಮತ್ತು ಅವುಗಳ ಕಡೆಗೆ ಆಕರ್ಷಿತರಾಗುವುದು, (3) ಒಳ್ಳೆಯ ಸಂವಾದವನ್ನು ಇಟ್ಟುಕೊಳ್ಳುವುದು ಮತ್ತು (4) ಎಲ್ಲವನ್ನೂ ಜೊತೆಗೂಡಿ ಮಾಡುವುದು.

ಈ ನಾಲ್ಕು ಅಂಶಗಳು ಸ್ನೇಹಿತರ ನಡುವಣ ಸಂಬಂಧದಲ್ಲಿ, ಗಂಡ ಹೆಂಡತಿಯರ ನಡುವಣ ಸಂಬಂಧದಲ್ಲಿ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಮನುಷ್ಯರ ಮತ್ತು ದೇವರ ನಡುವಣ ಸಂಬಂಧದಲ್ಲೂ, ಹೀಗೆ ಯಾವುದೇ ಸಂಬಂಧವನ್ನು ಕಾಪಾಡಿಕೊಂಡು ಹೋಗಲು ತುಂಬ ಪ್ರಾಮುಖ್ಯವಾಗಿವೆ. ನಾವು ದೇವರನ್ನು ನೋಡಸಾಧ್ಯವಿಲ್ಲದಿದ್ದರೂ, ಆತನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಈ ಅಂಶಗಳು ಹೇಗೆ ಸಹಾಯಮಾಡಬಲ್ಲವು ಎಂಬುದನ್ನು ನಾವು ಮುಂದಿನ ಲೇಖನದಲ್ಲಿ ನೋಡುವೆವು. *

[ಪಾದಟಿಪ್ಪಣಿಗಳು]

^ ಪ್ಯಾರ. 4 ಹೆಸರುಗಳು ಬದಲಾಯಿಸಲ್ಪಟ್ಟಿವೆ.

^ ಪ್ಯಾರ. 6 ದೇವರೊಂದಿಗಿನ ಸಂಬಂಧವು ಮನುಷ್ಯರ ನಡುವಣ ಸಂಬಂಧಕ್ಕಿಂತ ಭಿನ್ನವಾಗಿದೆ. ಆತನೊಂದಿಗಿನ ಸಂಬಂಧಕ್ಕೆ ಆಧಾರವು, ಆತನ ಅಸ್ತಿತ್ವದಲ್ಲಿ ನಂಬಿಕೆಯಿಡುವುದೇ ಆಗಿದೆ. (ಇಬ್ರಿಯ 11:⁠6) ದೇವರಲ್ಲಿ ಬಲವಾದ ನಂಬಿಕೆಯನ್ನು ಬೆಳೆಸುವುದರ ಕುರಿತಾದ ಒಂದು ಸಂಪೂರ್ಣ ಚರ್ಚೆಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯು ಪ್ರಕಾಶಿಸಿರುವ ನಿಮ್ಮ ಕುರಿತಾಗಿ ಚಿಂತಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್‌) ಎಂಬ ಪುಸ್ತಕವನ್ನು ಓದಿರಿ.