ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸಮೀಪಕ್ಕೆ ಬರುವುದು—ಹೇಗೆ?

ದೇವರ ಸಮೀಪಕ್ಕೆ ಬರುವುದು—ಹೇಗೆ?

ದೇವರ ಸಮೀಪಕ್ಕೆ ಬರುವುದು​—⁠ಹೇಗೆ?

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಯಾಕೋಬ 4:8 ಹೇಳುತ್ತದೆ. ಮನುಷ್ಯರು ತನ್ನೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳಬೇಕೆಂದು ಯೆಹೋವ ದೇವರು ಬಯಸುತ್ತಾನೆ. ತನ್ನ ಒಬ್ಬನೇ ಮಗನನ್ನು ನಮ್ಮ ಪರವಾಗಿ ಕೊಡುವ ಮೂಲಕ ಆತನು ತನ್ನ ಈ ಬಯಕೆಯನ್ನು ವ್ಯಕ್ತಪಡಿಸಿದನು.

ಆ ಪ್ರೀತಿತುಂಬಿದ ಕ್ರಿಯೆಗೆ ಪ್ರತಿಕ್ರಿಯೆಯಲ್ಲಿ ಅಪೊಸ್ತಲ ಯೋಹಾನನು ಬರೆದುದು: “ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.” (1 ಯೋಹಾನ 4:19) ಆದರೆ ದೇವರ ಸಮೀಪಕ್ಕೆ ಬರಬೇಕಾದರೆ, ವೈಯಕ್ತಿಕವಾಗಿ ನಾವು ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು. ಹಿಂದಿನ ಲೇಖನದಲ್ಲಿ, ಜೊತೆ ಮಾನವರಿಗೆ ಹತ್ತಿರವಾಗುವ ನಾಲ್ಕು ವಿಧಗಳನ್ನು ತಿಳಿಸಲಾಯಿತು. ದೇವರ ಸಮೀಪಕ್ಕೆ ಬರಲು ತೆಗೆದುಕೊಳ್ಳಬೇಕಾದ ಕ್ರಮಗಳು ಸಹ ಅವುಗಳಿಗೆ ಹೋಲುತ್ತವೆ. ನಾವೀಗ ಅವುಗಳನ್ನು ಚರ್ಚಿಸೋಣ.

ದೇವರ ಅದ್ಭುತ ಗುಣಗಳನ್ನು ಅವಲೋಕಿಸಿರಿ

ದೇವರಿಗೆ ಅದ್ಭುತವಾದ ಅನೇಕಾನೇಕ ಗುಣಗಳಿವೆ. ಇವುಗಳಲ್ಲಿ ಎದ್ದುಕಾಣುವಂತಹ ಗುಣಗಳು, ಆತನ ಪ್ರೀತಿ, ವಿವೇಕ, ನ್ಯಾಯ ಮತ್ತು ಶಕ್ತಿ ಆಗಿವೆ. ಆತನ ವಿವೇಕ ಮತ್ತು ಶಕ್ತಿಯನ್ನು, ವಿಶಾಲವಾದ ವಿಶ್ವದಲ್ಲಿ ಮತ್ತು ನಮ್ಮ ಸುತ್ತಲಿನ ಜಗತ್ತಿನಲ್ಲಿ ನೋಡಬಹುದು. ದೊಡ್ಡ ದೊಡ್ಡ ಆಕಾಶಗಂಗೆಗಳಿಂದ ಹಿಡಿದು ಚಿಕ್ಕ ಅಣುಗಳಲ್ಲೂ ಆ ಗುಣಗಳನ್ನು ನೋಡಸಾಧ್ಯವಿದೆ. ಕೀರ್ತನೆಗಾರನು ಬರೆದದ್ದು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.”​—⁠ಕೀರ್ತನೆ 19:1; ರೋಮಾಪುರ 1:⁠20.

ಇಡೀ ಸೃಷ್ಟಿಯು ದೇವರ ಪ್ರೀತಿಯನ್ನು ಸಹ ಪ್ರತಿಬಿಂಬಿಸುತ್ತದೆ. ಉದಾಹರಣೆಗಾಗಿ, ನಾವು ಸೃಷ್ಟಿಸಲ್ಪಟ್ಟಿರುವ ರೀತಿಯು, ನಾವು ಜೀವಿತವನ್ನು ಆನಂದಿಸುವಂತೆ ದೇವರು ಬಯಸುತ್ತಾನೆಂಬುದನ್ನು ತೋರಿಸುತ್ತದೆ. ಆತನು ನಮಗೆ ವಿವಿಧ ಬಣ್ಣಗಳನ್ನು ನೋಡುವ ಸಾಮರ್ಥ್ಯ, ರುಚಿನೋಡುವ ಮತ್ತು ಆಘ್ರಾಣಿಸುವ ಸಾಮರ್ಥ್ಯ, ಸಂಗೀತವನ್ನು ಆಲಿಸಿ ಆನಂದಿಸುವ ಸಾಮರ್ಥ್ಯ ಮತ್ತು ನಗುವ ಹಾಗೂ ಸೌಂದರ್ಯವನ್ನು ಆಸ್ವಾದಿಸುವ ಸಾಮರ್ಥ್ಯವನ್ನು ಸಹ ಕೊಟ್ಟಿದ್ದಾನೆ. ಬದುಕಲಿಕ್ಕಾಗಿ ಇವೆಲ್ಲವುಗಳ ಆವಶ್ಯಕತೆಯಿಲ್ಲ. ಆದರೂ ಜೀವನವನ್ನು ಆನಂದಿಸಲಿಕ್ಕಾಗಿ ಇಂತಹ ಎಷ್ಟೋ ಸಾಮರ್ಥ್ಯಗಳನ್ನು ಮತ್ತು ಗುಣಲಕ್ಷಣಗಳನ್ನು ಆತನು ನಮಗೆ ಕೊಟ್ಟಿದ್ದಾನೆ. ಹೌದು, ದೇವರು ನಿಜವಾಗಿಯೂ ಉದಾರಿಯೂ, ದಯಾಪರನೂ, ಪ್ರೀತಿಪರನೂ ಆಗಿದ್ದಾನೆ. ಈ ಗುಣಗಳಿಂದಾಗಿಯೇ ಆತನು “ಸಂತೋಷದ ದೇವರು” (NW) ಆಗಿದ್ದಾನೆ ಎಂಬುದರಲ್ಲಿ ಸಂದೇಹವೇ ಇಲ್ಲ.​—⁠1 ತಿಮೊಥೆಯ 1:11; ಅ. ಕೃತ್ಯಗಳು 20:⁠35.

ಯೆಹೋವನು ತನ್ನ ಪರಮಾಧಿಕಾರವನ್ನು ಮುಖ್ಯವಾಗಿ ಪ್ರೀತಿಯಿಂದಲೇ ಚಲಾಯಿಸುತ್ತಾನೆ. ಅಷ್ಟುಮಾತ್ರವಲ್ಲ, ಆ ಪರಮಾಧಿಕಾರವನ್ನು ತನ್ನ ಬುದ್ಧಿವಂತ ಸೃಷ್ಟಿಜೀವಿಗಳು ಸಹ ಪ್ರೀತಿಯಿಂದಲೇ ಬೆಂಬಲಿಸುತ್ತಾರೆ ಎಂಬ ಸಂಗತಿಯ ಕುರಿತು ಯೆಹೋವನು ಸಂತೋಷದಿಂದ ಹಿಗ್ಗುತ್ತಾನೆ. (1 ಯೋಹಾನ 4:⁠8) ಒಬ್ಬ ತಂದೆಯು ತನ್ನ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆಯೇ, ಯೆಹೋವನು ಇಡೀ ವಿಶ್ವದ ಪರಮಾಧಿಕಾರಿಯಾಗಿದ್ದರೂ, ಆತನು ಮಾನವರನ್ನು ವಿಶೇಷವಾಗಿ ತನ್ನ ನಿಷ್ಠಾವಂತ ಸೇವಕರನ್ನು ಮಕ್ಕಳಂತೆ ನೋಡಿಕೊಳ್ಳುತ್ತಾನೆ. (ಮತ್ತಾಯ 5:45) ಅವರ ಒಳಿತಿಗಾಗಿ ಬೇಕಾಗಿರುವುದೆಲ್ಲವನ್ನೂ ಆತನು ಮಾಡುತ್ತಾನೆ. (ರೋಮಾಪುರ 8:​38, 39) ಈಗಾಗಲೇ ತಿಳಿಸಲ್ಪಟ್ಟಿರುವಂತೆ, ಆತನು ತನ್ನ ಏಕಜಾತ ಪುತ್ರನ ಜೀವವನ್ನೂ ನಮಗೋಸ್ಕರ ಬಲಿಕೊಟ್ಟನು. ಹೌದು, ನಾವು ಅಸ್ತಿತ್ವದಲ್ಲಿರಲು ಮತ್ತು ನಿತ್ಯ ಜೀವದ ನಿರೀಕ್ಷೆಯನ್ನು ಹೊಂದಿರಲು, ದೇವರ ಪ್ರೀತಿಯೇ ಕಾರಣ.​—⁠ಯೋಹಾನ 3:⁠16.

ಯೇಸು ತನ್ನ ತಂದೆಯನ್ನು ಪೂರ್ಣ ರೀತಿಯಲ್ಲಿ ಅನುಕರಿಸಿದ್ದರಿಂದ, ದೇವರ ವ್ಯಕ್ತಿತ್ವದ ಬಗ್ಗೆ ನಮಗೆ ಹೆಚ್ಚಿನ ತಿಳಿವಳಿಕೆಯನ್ನು ಕೊಟ್ಟನು. (ಯೋಹಾನ 14:​9-11) ಆತನು ನಿಸ್ವಾರ್ಥನೂ, ದಯಾಪರನೂ ಮತ್ತು ಬೇರೆಯವರ ಕುರಿತಾಗಿ ಚಿಂತಿಸುವವನೂ ಆಗಿದ್ದನು. ಒಂದು ಸಂದರ್ಭದಲ್ಲಿ, ತೊದಲು ಮಾತಾಡುತ್ತಿದ್ದ ಮತ್ತು ಕಿವುಡನಾಗಿದ್ದ ಒಬ್ಬ ವ್ಯಕ್ತಿಯನ್ನು ಯೇಸುವಿನ ಬಳಿ ತರಲಾಯಿತು. ಅಲ್ಲಿನ ಜನಸಂದಣಿಯಲ್ಲಿ ಆ ವ್ಯಕ್ತಿಗೆ ಎಷ್ಟು ಮುಜುಗರವಾಗುತ್ತಿದ್ದಿರಬಹುದು ಎಂಬುದನ್ನು ನೀವು ಊಹಿಸಿಕೊಳ್ಳಬಹುದು. ಆದುದರಿಂದ ಯೇಸು, ಈ ವ್ಯಕ್ತಿಯನ್ನು ಒಂದು ಏಕಾಂತ ಸ್ಥಳಕ್ಕೆ ಕರೆದೊಯ್ದು ಅವನನ್ನು ಅಲ್ಲಿ ಗುಣಪಡಿಸಿದನು. (ಮಾರ್ಕ 7:​32-35) ಈ ರೀತಿಯಲ್ಲಿ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡು, ನಿಮ್ಮನ್ನು ಗೌರವಿಸುವ ಜನರು ನಿಮಗೆ ಇಷ್ಟವಾಗುವುದಿಲ್ಲವೊ? ಹಾಗಿರುವಲ್ಲಿ, ನೀವು ಯೆಹೋವನ ಮತ್ತು ಯೇಸುವಿನ ಕುರಿತಾಗಿ ಹೆಚ್ಚನ್ನು ಕಲಿಯುತ್ತಾ ಹೋದಂತೆ ಖಂಡಿತವಾಗಿಯೂ ನೀವು ಅವರ ಬಳಿ ಸೆಳೆಯಲ್ಪಡುವಿರಿ, ಯಾಕೆಂದರೆ ಅವರು ಅಂಥ ವ್ಯಕ್ತಿಗಳಾಗಿದ್ದಾರೆ.

ದೇವರ ಗುಣಗಳ ಕುರಿತಾಗಿ ಯೋಚಿಸಿರಿ

ಒಬ್ಬ ವ್ಯಕ್ತಿಯಲ್ಲಿ ಒಳ್ಳೊಳ್ಳೆ ಗುಣಗಳಿರಬಹುದು. ಆದರೆ ಆ ವ್ಯಕ್ತಿಗೆ ಹತ್ತಿರವಾಗಲು ನಾವೇನು ಮಾಡಬೇಕಾಗುತ್ತದೆ? ಆ ವ್ಯಕ್ತಿಯ ಕುರಿತಾಗಿ ನಾವು ಯೋಚಿಸುತ್ತಿರಬೇಕು. ಯೆಹೋವನ ವಿಷಯದಲ್ಲೂ ನಾವು ಇದನ್ನೇ ಮಾಡಬೇಕು. ನಾವು ಆತನ ಸಮೀಪಕ್ಕೆ ಬರಲು ತೆಗೆದುಕೊಳ್ಳಬೇಕಾದ ಎರಡನೆಯ ಆವಶ್ಯಕ ಹೆಜ್ಜೆಯು ಅದೇ ಆಗಿದೆ: ಆತನ ಗುಣಗಳ ಕುರಿತಾಗಿ ನಾವು ಮನನ ಮಾಡಬೇಕು. ಯೆಹೋವನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದ, ಮತ್ತು ‘[ಯೆಹೋವನು] ಒಪ್ಪುವ ಮನುಷ್ಯನಾಗಿದ್ದ’ ದಾವೀದನು ಹೇಳಿದ್ದು: “ಹಳೇ ದಿನಗಳನ್ನು ನೆನಸಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ.”​—⁠ಅ. ಕೃತ್ಯಗಳು 13:22; ಕೀರ್ತನೆ 143:⁠5.

ಸೃಷ್ಟಿಯ ಅದ್ಭುತಗಳನ್ನು ನೋಡುವಾಗ ಅಥವಾ ದೇವರ ವಾಕ್ಯವಾದ ಬೈಬಲನ್ನು ಓದುವಾಗ, ನೀವು ನೋಡಿ ಕೇಳುವ ಸಂಗತಿಗಳ ಕುರಿತಾಗಿ ದಾವೀದನಂತೆ ಮನನ ಮಾಡುತ್ತೀರೊ? ತನ್ನ ತಂದೆಯನ್ನು ತುಂಬ ಪ್ರೀತಿಸುವ ಹುಡುಗನಿಗೆ ತಂದೆಯಿಂದ ಒಂದು ಪತ್ರ ಬರುತ್ತದೆಂದು ಊಹಿಸಿಕೊಳ್ಳಿ. ಅವನು ಆ ಪತ್ರವನ್ನು ಏನು ಮಾಡುವನು? ಅವನು ಅದರ ಮೇಲೆ ಸುಮ್ಮನೆ ಕಣ್ಣೋಡಿಸಿ, ಡ್ರಾಯರ್‌ನೊಳಗೆ ಎಸೆದುಬಿಡುವನೋ? ಖಂಡಿತವಾಗಿಯೂ ಇಲ್ಲ. ಅದಕ್ಕೆ ಬದಲಾಗಿ ಅವನು ಅದನ್ನು ತುಂಬ ಜಾಗರೂಕತೆಯಿಂದ ಓದಿ, ಅದರಲ್ಲಿನ ಪ್ರತಿಯೊಂದು ವಿವರಕ್ಕೂ, ಸೂಕ್ಷ್ಮ ಅರ್ಥಕ್ಕೂ ತುಂಬ ಗಮನವನ್ನು ಕೊಡುವನು. ಹಾಗೆಯೇ, ಕೀರ್ತನೆಗಾರನಂತೆ ದೇವರ ವಾಕ್ಯವು ನಮಗೂ ತುಂಬ ಅಮೂಲ್ಯವಾದದ್ದಾಗಿರಬೇಕು. ಅವನು ಹಾಡಿದ್ದು: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”​—⁠ಕೀರ್ತನೆ 119:⁠97.

ಒಳ್ಳೆಯ ಸಂವಾದವನ್ನು ಇಟ್ಟುಕೊಳ್ಳಿ

ಯಾವುದೇ ಸಂಬಂಧದಲ್ಲಿ, ಒಳ್ಳೆಯ ಸಂವಾದವು ಜೀವಸತ್ವದ್ದಾಗಿರುತ್ತದೆ. ಸಂವಾದದಲ್ಲಿ, ಮಾತಾಡುವುದು ಮತ್ತು ಕಿವಿಗೊಡುವುದು ಸೇರಿದೆ. ಇದರಲ್ಲಿ ಕೇವಲ ಮನಸ್ಸು ಮಾತ್ರವಲ್ಲ, ಹೃದಯವೂ ಒಳಗೂಡಿರಬೇಕು. ಸೃಷ್ಟಿಕರ್ತನೊಂದಿಗೂ ನಾವು ಪ್ರಾರ್ಥನೆಯ ಮೂಲಕ ಮಾತಾಡುತ್ತೇವೆ. ಇದರರ್ಥ ನಾವು ದೇವರೊಂದಿಗೆ ಪೂಜ್ಯಭಾವದಿಂದ ಸಂವಾದ ನಡೆಸುತ್ತೇವೆ. ತನ್ನನ್ನು ಪ್ರೀತಿಸಿ, ತನ್ನ ಸೇವೆಮಾಡುವ ಮತ್ತು ಯೇಸು ಕ್ರಿಸ್ತನು ತನ್ನ ಮುಖ್ಯ ಪ್ರತಿನಿಧಿಯಾಗಿದ್ದಾನೆಂಬುದನ್ನು ಒಪ್ಪಿಕೊಳ್ಳುವವರ ಪ್ರಾರ್ಥನೆಗಳನ್ನು ಆಲಿಸಲು ಯೆಹೋವನು ಸಂತೋಷಿಸುತ್ತಾನೆ.​—⁠ಕೀರ್ತನೆ 65:2; ಯೋಹಾನ 14:​6, 14.

ಹಿಂದಿನ ಕಾಲದಲ್ಲಿ, ದೇವರು ಮನುಷ್ಯರೊಂದಿಗೆ ಬೇರೆ ಬೇರೆ ಮಾಧ್ಯಮಗಳ ಮೂಲಕ ಮಾತಾಡಿದನು. ಅಂದರೆ, ದರ್ಶನಗಳ ಮೂಲಕ, ಕನಸುಗಳಲ್ಲಿ ಮತ್ತು ದೇವದೂತರ ಮುಖಾಂತರ ಮಾತಾಡಿದನು. ಈಗಲಾದರೊ, ಆತನು ತನ್ನ ಲಿಖಿತ ವಾಕ್ಯವಾಗಿರುವ ಪವಿತ್ರ ಬೈಬಲಿನ ಮೂಲಕ ಮಾತಾಡುತ್ತಾನೆ. (2 ತಿಮೊಥೆಯ 3:16) ಈ ಲಿಖಿತ ವಾಕ್ಯದಿಂದ ಅನೇಕ ಪ್ರಯೋಜನಗಳಿವೆ. ಮೊದಲನೆಯದಾಗಿ, ನಾವು ಅದನ್ನು ಯಾವುದೇ ಸಮಯದಲ್ಲಿ ತೆರೆದು ಓದಬಹುದು. ಎರಡನೆಯದಾಗಿ, ಅದನ್ನು ಒಂದು ಪತ್ರದಂತೆ ಪುನಃ ಪುನಃ, ಎಷ್ಟು ಸಲ ಬೇಕಾದರೂ ಓದಿ ಆನಂದಿಸಬಹುದು. ಸಾಮಾನ್ಯವಾಗಿ ಬಾಯಿಮಾತಿನ ಮೂಲಕ ದಾಟಿಸಲ್ಪಡುವ ಸಂದೇಶಗಳು ತಿರಿಚಿಮುರುಚಿ ತಿಳಿಸಲ್ಪಡುತ್ತವೆ. ಆದರೆ ದೇವರ ಮಾತುಗಳ ವಿಷಯದಲ್ಲಿ ಹಾಗಾಗಲು ಸಾಧ್ಯವಿಲ್ಲ, ಏಕೆಂದರೆ ಅವು ಲಿಖಿತರೂಪದಲ್ಲಿವೆ. ಆದುದರಿಂದ, ಬೈಬಲ್‌ ನಿಮ್ಮ ಪ್ರಿಯ ಸ್ವರ್ಗೀಯ ತಂದೆಯಿಂದ ಬಂದಿರುವ ಪತ್ರಗಳ ಸಂಗ್ರಹವಾಗಿದೆಯೊ ಎಂಬಂತೆ ಪರಿಗಣಿಸಿರಿ. ಮತ್ತು ಅದನ್ನು ದಿನಾಲೂ ಓದುವ ಮೂಲಕ, ಆತನು ನಿಮ್ಮೊಂದಿಗೆ ಮಾತಾಡುವಂತೆ ಬಿಡಿರಿ.​—⁠ಮತ್ತಾಯ 4:⁠4.

ಬೈಬಲಿನಲ್ಲಿ ಕೊಡಲ್ಪಟ್ಟಿರುವ ಕೆಲವೊಂದು ವಿಷಯಗಳನ್ನು ಪರಿಗಣಿಸಿರಿ. ಸರಿ ಮತ್ತು ತಪ್ಪಿನ ಬಗ್ಗೆ ಯೆಹೋವನ ದೃಷ್ಟಿಕೋನವೇನೆಂಬುದನ್ನು ಬೈಬಲ್‌ ತಿಳಿಸುತ್ತದೆ. ಆತನು ಮಾನವಕುಲವನ್ನು ಮತ್ತು ಭೂಮಿಯನ್ನು ಸೃಷ್ಟಿಮಾಡಿರುವ ಉದ್ದೇಶವನ್ನು ಅದು ವಿವರಿಸುತ್ತದೆ. ಮತ್ತು ದೇವರ ನಿಷ್ಠಾವಂತ ಆರಾಧಕರಿಂದ ಹಿಡಿದು ಆತನ ಬದ್ಧವೈರಿಗಳ ವರೆಗೆ, ಹೀಗೆ ವಿವಿಧ ಜನರು ಹಾಗೂ ಜನಾಂಗಗಳೊಂದಿಗಿನ ಆತನ ವ್ಯವಹಾರಗಳ ಕುರಿತಾಗಿ ಅದು ಪ್ರಕಟಿಸುತ್ತದೆ. ತಾನು ಮನುಷ್ಯರೊಂದಿಗೆ ವ್ಯವಹರಿಸಿದಂತಹ ವಿಧಗಳನ್ನು ಈ ರೀತಿಯಲ್ಲಿ ದಾಖಲಿಸುವ ಮೂಲಕ, ಯೆಹೋವನು ತನ್ನ ವ್ಯಕ್ತಿತ್ವದ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ಕೊಟ್ಟಿದ್ದಾನೆ. ತನ್ನ ಪ್ರೀತಿ, ಸಂತೋಷ, ದುಃಖ, ಸಂಕಟ, ನಿರಾಶೆ, ಕೋಪ, ಕರುಣೆ ಮತ್ತು ಚಿಂತೆಯನ್ನು ಆತನು ಪ್ರಕಟಪಡಿಸಿದ್ದಾನೆ. ಆತನ ಎಲ್ಲ ವಿಚಾರಗಳು ಮತ್ತು ಭಾವನೆಗಳನ್ನು ಹಾಗೂ ಅವುಗಳ ಹಿಂದಿರುವ ಕಾರಣಗಳನ್ನು ಮನುಷ್ಯರಾದ ನಾವು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿರುವಂತಹ ರೀತಿಯಲ್ಲಿ ತಿಳಿಸಲಾಗಿದೆ.​—⁠ಕೀರ್ತನೆ 78:​3-7.

ನೀವು ದೇವರ ವಾಕ್ಯದಿಂದ ಒಂದು ಭಾಗವನ್ನು ಓದಿದ ನಂತರ, ಆ ಓದುವಿಕೆಯಿಂದ ಹೇಗೆ ಪ್ರಯೋಜನವನ್ನು ಪಡೆಯಬಲ್ಲಿರಿ? ಮತ್ತು ವಿಶೇಷವಾಗಿ ನಮ್ಮ ಮುಖ್ಯ ವಿಷಯಕ್ಕನುಸಾರ, ನೀವು ಹೇಗೆ ದೇವರ ಸಮೀಪಕ್ಕೆ ಬರಬಲ್ಲಿರಿ? ಮೊದಲು, ನೀವೇನನ್ನು ಓದಿದ್ದೀರೊ ಅದರಿಂದ ದೇವರ ವ್ಯಕ್ತಿತ್ವದ ಬಗ್ಗೆ ನೀವೇನು ಕಲಿತಿದ್ದೀರೆಂಬುದರ ಕುರಿತು ಯೋಚಿಸಿರಿ. ಆ ವಿಷಯಗಳು ನಿಮ್ಮ ಹೃದಯವನ್ನು ತಲಪುವಂತೆ ಬಿಡಿರಿ. ಅನಂತರ ಯೆಹೋವನಿಗೆ ಪ್ರಾರ್ಥನೆ ಮಾಡಿರಿ. ನೀವು ಈಗಷ್ಟೇ ಓದಿದಂತಹ ವಿಷಯದ ಕುರಿತಾಗಿ ನಿಮ್ಮ ವಿಚಾರಗಳೇನು ಮತ್ತು ಅಂತರಾಳದಲ್ಲಿ ನಿಮಗಿರುವ ಅನಿಸಿಕೆಗಳೇನು ಎಂಬುದರ ಕುರಿತಾಗಿ ಆತನಿಗೆ ತಿಳಿಸಿರಿ. ಅಷ್ಟುಮಾತ್ರವಲ್ಲ, ನೀವು ಆ ವಿಷಯದಿಂದ ಹೇಗೆ ಪ್ರಯೋಜನವನ್ನು ಪಡೆಯಲು ಪ್ರಯತ್ನಿಸುವಿರಿ ಎಂಬುದನ್ನೂ ತಿಳಿಸಿರಿ. ಇದನ್ನೇ ಸಂವಾದ ಎಂದು ಹೇಳಬಹುದು. ನಿಮ್ಮ ಮನಸ್ಸಿನಲ್ಲಿ ಬೇರಾವುದೇ ವಿಚಾರಗಳಿರುವಲ್ಲಿ, ಖಂಡಿತವಾಗಿಯೂ ಅದನ್ನೂ ನೀವು ನಿಮ್ಮ ಪ್ರಾರ್ಥನೆಯಲ್ಲಿ ಸೇರಿಸಬಹುದು.

ದೇವರೊಂದಿಗೆ ಜೊತೆಗೂಡಿ ಕೆಲಸಮಾಡಿರಿ

ಪ್ರಾಚೀನಕಾಲದ ಕೆಲವು ನಂಬಿಗಸ್ತ ಪುರುಷರ ಕುರಿತಾಗಿ ಹೇಳುವಾಗ, ಅವರು ಸತ್ಯ ದೇವರೊಂದಿಗೆ ಅಥವಾ ಆತನ ಮಾರ್ಗದಲ್ಲಿ ನಡೆದರೆಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 6:9; 1 ಅರಸು 8:25) ಇದರರ್ಥವೇನು? ದೇವರು ತಮ್ಮೊಂದಿಗೆ ಇದ್ದಾನೋ ಎಂಬಂತೆ ಅವರು ಪ್ರತಿ ದಿನ ತಮ್ಮ ಜೀವನವನ್ನು ನಡೆಸುತ್ತಿದ್ದರು. ಅವರು ಪಾಪಿಗಳಾಗಿದ್ದರು, ನಿಜ. ಆದರೂ ಅವರು ದೇವರ ನಿಯಮಗಳನ್ನು ಮತ್ತು ಮೂಲತತ್ವಗಳನ್ನು ಪ್ರೀತಿಸುತ್ತಿದ್ದರು ಮತ್ತು ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಜೀವಿಸುತ್ತಿದ್ದರು. ಯೆಹೋವನು ಇಂತಹವರ ಕಡೆಗೆ ಆಕರ್ಷಿಸಲ್ಪಟ್ಟು, ಅವರನ್ನು ಪರಾಮರಿಸುತ್ತಾನೆ. ಇದನ್ನು ಕೀರ್ತನೆ 32:8 ರುಜುಪಡಿಸುತ್ತದೆ: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.”

ಯೆಹೋವನು ನಿಮ್ಮ ಆಪ್ತ ಸ್ನೇಹಿತನೂ ಆಗಬಲ್ಲನು. ಆತನು ನಿಮ್ಮೊಂದಿಗೆ ನಡೆಯುವನು, ನಿಮ್ಮ ಕಾಳಜಿ ವಹಿಸುವನು ಮತ್ತು ನಿಮಗೆ ವಾತ್ಸಲ್ಯದಿಂದ ಬುದ್ಧಿವಾದವನ್ನು ಕೊಡುವನು. ಯೆಹೋವನು ‘ಯಾವದು ಒಳ್ಳೆಯದೋ, ಪ್ರಯೋಜನಕರವೋ ಅದನ್ನು ಮಾಡಲು ಕಲಿಸುತ್ತಾನೆ. ನೀವು ಹೋಗಲೇಬೇಕಾದ ದಾರಿಯಲ್ಲಿ ನಿಮ್ಮನ್ನು ನಡಿಸುವವನಾಗಿದ್ದಾನೆ’ ಎಂದು ಯೆಶಾಯನು ವರ್ಣಿಸುತ್ತಾನೆ. (ಯೆಶಾಯ 48:​17, ಪರಿಶುದ್ಧ ಬೈಬಲ್‌ *) ನಾವು ಈ ಪ್ರಯೋಜನಗಳನ್ನು ಪಡೆಯುವಾಗ, ದಾವೀದನಂತೆ ನಮಗೂ ಯೆಹೋವನು ‘[ನಮ್ಮ] ಬಲಗಡೆಯಲ್ಲಿ ಇದ್ದಾನೆಂದು’ ಅನಿಸುತ್ತದೆ.​—⁠ಕೀರ್ತನೆ 16:⁠8.

ದೇವರ ಹೆಸರು​—⁠ಆತನ ಗುಣಗಳ ಕೇಂದ್ರಬಿಂದು

ಅನೇಕ ಧರ್ಮಗಳು ಮತ್ತು ಹೆಚ್ಚಿನ ಬೈಬಲ್‌ ಭಾಷಾಂತರಗಳು, ದೇವರ ವೈಯಕ್ತಿಕ ಹೆಸರನ್ನು ಉಪಯೋಗಿಸುವುದಿಲ್ಲ ಮತ್ತು ಹೀಗೆ ಅದನ್ನು ತಿಳಿಯಪಡಿಸುತ್ತಿಲ್ಲ. (ಕೀರ್ತನೆ 83:18) ಆದರೆ ಮೂಲ ಹೀಬ್ರು ಗ್ರಂಥದಲ್ಲಿ, ಯೆಹೋವ ಎಂಬ ಆ ಹೆಸರು ಸುಮಾರು 7,000 ಬಾರಿ ಇದೆ! (ಹೆಚ್ಚಿನ ಬೈಬಲ್‌ ಭಾಷಾಂತರಕಾರರು ದೇವರ ಹೆಸರನ್ನು ತೆಗೆದುಹಾಕಿದ್ದಾರೆ. ಆದರೆ ಆದೇ ಸಮಯದಲ್ಲಿ, ಮೂಲ ಗ್ರಂಥದಲ್ಲಿ ತಿಳಿಸಲ್ಪಟ್ಟಿರುವ, ಬಾಲ್‌, ಬೇಲ್‌, ಮೆರೋಡಾಕ್‌ ಮತ್ತು ಸೈತಾನನಂತಹ ಅನೇಕ ಸುಳ್ಳು ದೇವರುಗಳ ಹೆಸರುಗಳನ್ನು ತೆಗೆದುಹಾಕದೇ ಹಾಗೇ ಬಿಟ್ಟಿರುವುದು ವಿಪರ್ಯಾಸದ ಸಂಗತಿಯಾಗಿದೆ!)

ದೇವರ ಹೆಸರನ್ನು ತೆಗೆದುಹಾಕುವುದು ಅಷ್ಟೇನೂ ದೊಡ್ಡ ಸಂಗತಿಯಲ್ಲವೆಂದು ಕೆಲವರಿಗನಿಸುತ್ತದೆ. ಆದರೆ ಸ್ವಲ್ಪ ಯೋಚಿಸಿರಿ: ಒಬ್ಬ ಅನಾಮಧೇಯ ವ್ಯಕ್ತಿಯೊಂದಿಗೆ ಒಂದು ಆಪ್ತವಾದ, ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳುವುದು ಸುಲಭವೊ, ಕಷ್ಟವೊ? ದೇವರು ಮತ್ತು ಕರ್ತನು (ಇವುಗಳನ್ನು ಸುಳ್ಳು ದೇವರುಗಳಿಗೂ ಉಪಯೋಗಿಸಲಾಗುತ್ತದೆ) ಎಂಬ ಬಿರುದುಗಳು, ಕೇವಲ ಯೆಹೋವನ ಶಕ್ತಿ, ಅಧಿಕಾರ ಮತ್ತು ಸ್ಥಾನಕ್ಕೆ ಗಮನವನ್ನು ಸೆಳೆಯುತ್ತವೆ. ಆದರೆ ಆತನ ವೈಯಕ್ತಿಕ ಹೆಸರು ಮಾತ್ರ ಆತನನ್ನು, ಆತನ ವ್ಯಕ್ತಿತ್ವವನ್ನು ತುಂಬ ಸ್ಪಷ್ಟವಾಗಿ ಗುರುತಿಸುತ್ತದೆ. (ವಿಮೋಚನಕಾಂಡ 3:15; 1 ಕೊರಿಂಥ 8:⁠5, 6) ಆತನ ವೈಯಕ್ತಿಕ ಹೆಸರು ಆತನ ಗುಣಗಳನ್ನು ಮತ್ತು ಗುಣವೈಶಿಷ್ಟ್ಯಗಳನ್ನು ವರ್ಣಿಸುತ್ತದೆ. ವಾಲ್ಟರ್‌ ಲೌರಿ ಎಂಬ ದೇವತಾಶಾಸ್ತ್ರಜ್ಞನು ಹೀಗೆ ಹೇಳಿದ್ದು ಯುಕ್ತವಾಗಿತ್ತು: “ದೇವರನ್ನು ಆತನ ಹೆಸರಿನಿಂದ ತಿಳಿದುಕೊಂಡಿರದವನು, ನಿಜವಾಗಿಯೂ ಆತನನ್ನು ಒಬ್ಬ ವ್ಯಕ್ತಿಯೋಪಾದಿ ತಿಳಿದುಕೊಂಡಿಲ್ಲ.”

ಆಸ್ಟ್ರೇಲಿಯದಲ್ಲಿ ವಾಸಿಸುತ್ತಿರುವ ಮಾರಿಯಾಳ ಉದಾಹರಣೆಯನ್ನು ಪರಿಗಣಿಸಿರಿ. ಅವಳೊಬ್ಬ ಪ್ರಾಮಾಣಿಕ ಕ್ಯಾಥೊಲಿಕಳಾಗಿದ್ದಳು. ಯೆಹೋವನ ಸಾಕ್ಷಿಗಳು ಮೊದಲನೆಯ ಸಲ ಅವಳನ್ನು ಭೇಟಿಮಾಡಿದಾಗ, ಅವರು ಅವಳಿಗೆ ಬೈಬಲಿನಿಂದ ದೇವರ ಹೆಸರನ್ನು ತೋರಿಸಿದರು. ಅವಳ ಪ್ರತಿಕ್ರಿಯೆ ಏನಾಗಿತ್ತು? “ಬೈಬಲಿನಲ್ಲಿ ನಾನು ಪ್ರಥಮ ಬಾರಿ ದೇವರ ಹೆಸರನ್ನು ನೋಡಿದಾಗ, ನಾನು ಅತ್ತುಬಿಟ್ಟೆ. ಯಾಕೆಂದರೆ ದೇವರ ವೈಯಕ್ತಿಕ ಹೆಸರನ್ನು ನಾನು ತಿಳಿದುಕೊಂಡು, ಅದನ್ನು ಉಪಯೋಗಿಸಲು ಶಕ್ತಳಾಗಿದ್ದೇನೆಂಬ ಅರಿವಿನಿಂದ ನನ್ನ ಹೃದಯ ತುಂಬಿ ಬಂತು.” ಹೀಗೆ, ಮಾರಿಯಾ ಬೈಬಲನ್ನು ಅಭ್ಯಾಸಿಸುತ್ತಾ ಮುಂದುವರಿದಳು. ಮತ್ತು ತನ್ನ ಜೀವಿತದಲ್ಲೇ ಮೊದಲ ಬಾರಿ, ಅವಳು ಯೆಹೋವನನ್ನು ಒಬ್ಬ ವ್ಯಕ್ತಿಯೋಪಾದಿ ತಿಳಿದುಕೊಂಡಳು ಮತ್ತು ಆತನೊಂದಿಗೆ ಸದಾಕಾಲ ಬಾಳುವಂತಹ ಸಂಬಂಧವನ್ನು ಬೆಳೆಸಿಕೊಳ್ಳಲು ಶಕ್ತಳಾದಳು.

ಹೌದು, ನಾವು ದೇವರನ್ನು ನಮ್ಮ ಕಣ್ಣುಗಳಿಂದ ನೋಡಲಾರೆವಾದರೂ, ‘ದೇವರ ಸಮೀಪಕ್ಕೆ ಬರಬಲ್ಲೆವು.’ ನಮ್ಮ ಹೃದಮನಗಳಲ್ಲಿ ನಾವು ಆತನ ಅತಿ ಮನೋಹರವಾದ ವ್ಯಕ್ತಿತ್ವವನ್ನು “ನೋಡಬಲ್ಲೆವು.” ಹೀಗೆ ಮಾಡುವುದರಿಂದ, ಆತನಿಗಾಗಿ ನಮ್ಮಲ್ಲಿರುವ ಪ್ರೀತಿಯು ಬೆಳೆಯುತ್ತಾ ಹೋಗುವುದು. ಅಂತಹ ಪ್ರೀತಿಯು “ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”​—⁠ಕೊಲೊಸ್ಸೆ 3:⁠14.

[ಪಾದಟಿಪ್ಪಣಿಗಳು]

^ ಪ್ಯಾರ. 19 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 6ರಲ್ಲಿರುವ ಚೌಕ/ಚಿತ್ರ]

ಯೆಹೋವನನ್ನು ಪ್ರೀತಿಸಿದರೆ ಆತನು ಸ್ಪಂದಿಸುತ್ತಾನೆ

ಯಾವುದೇ ಸಂಬಂಧದಲ್ಲಿ ಕೊಡುವುದು ತೆಗೆದುಕೊಳ್ಳುವುದು ಇದ್ದೇ ಇರುತ್ತದೆ. ಹಾಗೆಯೇ, ನಾವು ದೇವರ ಸಮೀಪಕ್ಕೆ ಹೋಗುವಾಗ, ಆತನು ಪ್ರತಿಕ್ರಿಯಿಸಿ ನಮ್ಮ ಸಮೀಪಕ್ಕೆ ಬರುತ್ತಾನೆ. ಉದಾಹರಣೆಗೆ, ವೃದ್ಧ ಸಿಮೆಯೋನ ಮತ್ತು ಅನ್ನಳ ಕಡೆಗೆ ಆತನಲ್ಲಿದ್ದ ಭಾವನೆಗಳನ್ನು ಪರಿಗಣಿಸಿರಿ. ಬೈಬಲಿನಲ್ಲಿ ಇವರಿಬ್ಬರ ಬಗ್ಗೆ ವಿಶೇಷವಾದ ಉಲ್ಲೇಖವಿದೆ. ಸಿಮೆಯೋನನು, ಮೆಸ್ಸೀಯನಿಗಾಗಿ ಕಾಯುತ್ತಾ ಇದ್ದ “ನೀತಿವಂತನೂ ದೇವಭಕ್ತನೂ” ಆದ ವ್ಯಕ್ತಿಯಾಗಿದ್ದನೆಂದು ಸುವಾರ್ತಾ ಲೇಖಕನಾದ ಲೂಕನು ನಮಗೆ ಹೇಳುತ್ತಾನೆ. ಸಿಮೆಯೋನನಲ್ಲಿದ್ದ ಈ ಉತ್ತಮ ಗುಣಗಳನ್ನು ಯೆಹೋವನು ಗಮನಿಸಿ, ಈ ಪ್ರಿಯ ವೃದ್ಧ ವ್ಯಕ್ತಿಗಾಗಿ ತನ್ನ ಪ್ರೀತಿಯನ್ನು ತೋರಿಸಿದನು. ಹೇಗೆ? ‘ಕ್ರಿಸ್ತನನ್ನು ಕಾಣುವದಕ್ಕಿಂತ ಮುಂಚೆ ಅವನು ಸಾಯುವುದಿಲ್ಲ’ ಎಂದು ಅವನಿಗೆ ದೈವೋಕ್ತಿ ನೀಡುವ ಮೂಲಕವೇ. ಯೆಹೋವನು ತಾನು ಕೊಟ್ಟ ಮಾತಿನಂತೆಯೇ ನಡೆದುಕೊಂಡನು. ಶಿಶುವಾಗಿದ್ದ ಯೇಸುವನ್ನು ಅವನ ಹೆತ್ತವರು ಯೆರೂಸಲೇಮಿನಲ್ಲಿದ್ದ ಆಲಯಕ್ಕೆ ಕರೆತಂದಾಗ, ಯೆಹೋವನು ಸಿಮೆಯೋನನನ್ನು ಅವರಿದ್ದಲ್ಲಿಗೆ ನಡಿಸಿದನು. ಇದರಿಂದ ಪುಳಕಿತಗೊಂಡು, ಕೃತಜ್ಞತೆ ತುಂಬಿದ ಹೃದಯದಿಂದ ಸಿಮೆಯೋನನು ಶಿಶುವನ್ನು ತನ್ನ ಕೈಯಲ್ಲಿ ತಕ್ಕೊಂಡು, “ಒಡೆಯನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. ನೀನು ನೇಮಿಸಿರುವ ರಕ್ಷಕನನ್ನು ನಾನು ಕಣ್ಣಾರೆ ಕಂಡೆನು” ಎಂದು ಪ್ರಾರ್ಥಿಸಿದನು.​—⁠ಲೂಕ 2:​25-35.

“ಅದೇ ಗಳಿಗೆಯಲ್ಲಿ” ಯೆಹೋವನು 84 ವರ್ಷ ಪ್ರಾಯದ ಅನ್ನಳ ಕಡೆಗಿದ್ದ ತನ್ನ ಪ್ರೀತಿಯನ್ನು ತೋರ್ಪಡಿಸಿದನು. ಆತನು ಅವಳನ್ನು ಸಹ ಯೇಸುವಿನ ಬಳಿಗೆ ನಡಿಸಿದನು. ಯೆಹೋವನ ದೃಷ್ಟಿಯಲ್ಲಿ ಅಮೂಲ್ಯವಾಗಿದ್ದ ಈ ವಿಧವೆಯು, ಯಾವಾಗಲೂ ಆಲಯದಲ್ಲಿ ಯೆಹೋವನ “ಸೇವೆಯನ್ನು ಮಾಡುತ್ತಿದ್ದಳು” ಎಂದು ಬೈಬಲ್‌ ನಮಗೆ ಹೇಳುತ್ತದೆ. ಅವಳಲ್ಲಿಯೂ ಗಣ್ಯತೆಯು ತುಂಬಿತುಳುಕುತ್ತಿತ್ತು ಮತ್ತು ಸಿಮೆಯೋನನಂತೆ ಅವಳು ಸಹ ಯೆಹೋವನ ಅಪಾತ್ರ ದಯೆಗಾಗಿ ಆತನಿಗೆ ಉಪಕಾರವನ್ನು ಸಲ್ಲಿಸಿದಳು. ತದನಂತರ ಅವಳು, “ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ” ಆ ಮಗುವಿನ ಕುರಿತಾಗಿ ಮಾತಾಡಿದಳು.​—⁠ಲೂಕ 2:​36-38.

ಸಿಮೆಯೋನ ಮತ್ತು ಅನ್ನಳು ಯೆಹೋವನನ್ನು ಪ್ರೀತಿಸಿ, ಆತನಿಗೆ ಭಯಪಡುತ್ತಿದ್ದರು. ಮತ್ತು ಆತನ ಉದ್ದೇಶವು ನೆರವೇರುವುದರ ಬಗ್ಗೆ ಅವರು ಚಿಂತಿತರಾಗಿದ್ದರು. ಇದೆಲ್ಲವನ್ನೂ ಯೆಹೋವನು ಗಮನಿಸಿದ್ದನು. ಇಂತಹ ಬೈಬಲ್‌ ವೃತ್ತಾಂತಗಳು ನಿಮ್ಮನ್ನು ಯೆಹೋವನ ಕಡೆಗೆ ಸೆಳೆಯುವುದಿಲ್ಲವೊ?

ತನ್ನ ತಂದೆಯಂತೆಯೇ ಯೇಸು, ಆಂತರಿಕ ವ್ಯಕ್ತಿಯನ್ನು ಗುರುತಿಸುತ್ತಿದ್ದನು. ಒಮ್ಮೆ ದೇವಾಲಯದಲ್ಲಿ ಕಲಿಸುತ್ತಿದ್ದಾಗ, “ಒಬ್ಬ ಬಡ ವಿಧವೆಯು ಬಂದು ಎರಡು ಕಾಸುಗಳನ್ನು” ಬೊಕ್ಕಸದಲ್ಲಿ ಹಾಕುವುದನ್ನು ಗಮನಿಸಿದನು. ಅಲ್ಲಿ ನೋಡುತ್ತಿದ್ದ ಇತರರಿಗೆ ಅವಳ ಆ ಕಾಣಿಕೆಯು ಅಷ್ಟೇನೂ ದೊಡ್ಡದ್ದಾಗಿ ತೋರಲಿಲ್ಲ. ಆದರೆ ಯೇಸು ಅದನ್ನು ಗಮನಿಸಿದನು ಮತ್ತು ಅವನ ದೃಷ್ಟಿಯಲ್ಲಿ ಅದು ಚಿಕ್ಕದ್ದಾಗಿರಲಿಲ್ಲ. ಅವಳು ತನ್ನ ಬಳಿ ಇದ್ದದ್ದೆಲ್ಲವನ್ನೂ ಕೊಟ್ಟಳು ಎಂದು ಅವನು ಅವಳನ್ನು ಪ್ರಶಂಸಿಸಿದನು. (ಲೂಕ 21:​1-4) ಆದುದರಿಂದ, ನಾವು ಯೆಹೋವನಿಗೆ ಮತ್ತು ಯೇಸುವಿಗೆ ಕೊಡುವ ಕೊಡುಗೆಯು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ನಮ್ಮಿಂದ ಸಾಧ್ಯವಾದುದೆಲ್ಲವನ್ನೂ ನಾವು ಕೊಡುತ್ತಿರುವಲ್ಲಿ ಅವರು ನಮ್ಮನ್ನು ಗಣ್ಯಮಾಡುತ್ತಾರೆ.

ತನ್ನನ್ನು ಪ್ರೀತಿಸುವವರನ್ನು ನೋಡಿ ದೇವರು ಸಂತೋಷಪಡುತ್ತಾನೆ. ಆದರೆ ಅದೇ ಸಮಯದಲ್ಲಿ, ಮನುಷ್ಯರು ಆತನಿಂದ ದೂರ ಸರಿದು, ತಪ್ಪು ಹಾದಿಯನ್ನು ಹಿಡಿಯುವಾಗ ಆತನ ಮನಸ್ಸಿಗೆ ನೋವಾಗುತ್ತದೆ. ನೋಹನ ದಿನದ ಜಲಪ್ರಳಯಕ್ಕೆ ಮುಂಚೆ ಮನುಷ್ಯರ ಕೆಟ್ಟತನದಿಂದಾಗಿ ಯೆಹೋವನು “ತನ್ನ ಹೃದಯದಲ್ಲಿ ನೊಂದುಕೊಂಡನು” ಎಂದು ಆದಿಕಾಂಡ 6:6 ಹೇಳುತ್ತದೆ. ಅನಂತರ, ಅವಿಧೇಯ ಇಸ್ರಾಯೇಲ್ಯರು ಸಹ ಪದೇ ಪದೇ ದೇವರನ್ನು “ಪರೀಕ್ಷಿಸಿ, ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರೆಕರೆಗೊಳಿಸಿದರು” ಎಂದು ಕೀರ್ತನೆ 78:41 ಹೇಳುತ್ತದೆ. ಆದುದರಿಂದ, ದೇವರು ಎಲ್ಲರಿಂದಲೂ ದೂರವಿರುವ, ಭಾವನೆಗಳೇ ಇಲ್ಲದ ಒಂದು ಶಕ್ತಿ ಆಗಿರುವುದಿಲ್ಲ. ಆತನು ಒಬ್ಬ ನೈಜ ವ್ಯಕ್ತಿ ಆಗಿದ್ದಾನೆ. ಮತ್ತು ಆತನ ಭಾವನೆಗಳು ನಮ್ಮಂತೆ ಸಮತೋಲನವಿಲ್ಲದವುಗಳು ಅಥವಾ ಅಪರಿಪೂರ್ಣತೆಯಿಂದಾಗಿ ಕುಗ್ಗಿಹೋದವುಗಳಾಗಿರುವುದಿಲ್ಲ.

[ಪುಟ 7ರಲ್ಲಿರುವ ಚಿತ್ರಗಳು]

ಯೆಹೋವನ ಸೃಷ್ಟಿಯ ಕುರಿತಾಗಿ ಯೋಚಿಸುವುದು, ಆತನ ಸಮೀಪಕ್ಕೆ ಬರುವ ಒಂದು ಮಾರ್ಗವಾಗಿದೆ