ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪವಿತ್ರಾತ್ಮವನ್ನು ನನ್ನ ವೈಯಕ್ತಿಕ ಸಹಾಯಕನನ್ನಾಗಿ ಮಾಡಿಕೊಂಡಿದ್ದೇನೊ?

ಪವಿತ್ರಾತ್ಮವನ್ನು ನನ್ನ ವೈಯಕ್ತಿಕ ಸಹಾಯಕನನ್ನಾಗಿ ಮಾಡಿಕೊಂಡಿದ್ದೇನೊ?

ಪವಿತ್ರಾತ್ಮವನ್ನು ನನ್ನ ವೈಯಕ್ತಿಕ ಸಹಾಯಕನನ್ನಾಗಿ ಮಾಡಿಕೊಂಡಿದ್ದೇನೊ?

ದೇವರಾತ್ಮವು ಏನೆಂಬುದರ ಬಗ್ಗೆ ಸಾಮಾನ್ಯ ಜನರಿಗೆ ಮಾತ್ರವಲ್ಲದೆ ದೇವತಾಶಾಸ್ತ್ರಜ್ಞರಿಗೂ ಹಲವಾರು ಅಭಿಪ್ರಾಯಗಳಿವೆ. ಆದರೆ ಅಷ್ಟೊಂದು ಅನಿಶ್ಚಿತ ಅನಿಸಿಕೆಯಿರುವ ಆವಶ್ಯಕತೆಯಿಲ್ಲ. ಏಕೆಂದರೆ ಪವಿತ್ರಾತ್ಮ ಏನಾಗಿದೆ ಎಂಬುದನ್ನು ಬೈಬಲ್‌ ಸ್ಪಷ್ಟವಾಗಿ ವಿವರಿಸುತ್ತದೆ. ಕೆಲವರು ಹೇಳುವಂತೆ ಅದು ಒಬ್ಬ ವ್ಯಕ್ತಿಯಾಗಿರುವುದಿಲ್ಲ. ಬದಲಾಗಿ ದೇವರು ತನ್ನ ಚಿತ್ತವನ್ನು ಪೂರೈಸಲಿಕ್ಕಾಗಿ ಉಪಯೋಗಿಸುವಂತಹ ಪ್ರಭಾವಶಾಲಿಯಾದ ಕಾರ್ಯಕಾರಿ ಶಕ್ತಿಯಾಗಿದೆ.​—⁠ಕೀರ್ತನೆ 104:30; ಅ. ಕೃತ್ಯಗಳು 2:33; 4:31; 2 ಪೇತ್ರ 1:⁠21.

ಪವಿತ್ರಾತ್ಮವು ದೇವರ ಉದ್ದೇಶಗಳನ್ನು ಪೂರೈಸುವುದರಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆದುದರಿಂದ, ನಮ್ಮ ಜೀವಿತಗಳು ಅದಕ್ಕೆ ಹೊಂದಿಕೆಯಲ್ಲಿರುವಂತೆ ನಾವು ನೋಡಿಕೊಳ್ಳಬೇಕು. ನಾವು ಅದನ್ನು ನಮ್ಮ ವೈಯಕ್ತಿಕ ಸಹಾಯಕನನ್ನಾಗಿ ಮಾಡಿಕೊಳ್ಳಬೇಕು.

ಒಬ್ಬ ಸಹಾಯಕನು ಏಕೆ ಬೇಕು?

ತಾನು ಭೂಮಿಯನ್ನು ಬಿಟ್ಟುಹೋಗಲಿದ್ದೇನೆಂಬುದು ಯೇಸುವಿಗೆ ತಿಳಿದಿತ್ತು. ಆದುದರಿಂದ ಅವನು ತನ್ನ ಶಿಷ್ಯರಿಗೆ ಈ ಆಶ್ವಾಸನೆಯನ್ನು ಕೊಟ್ಟನು: “ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.” ಮತ್ತು ಅವನು ಪುನಃ ಹೇಳಿದ್ದು: “ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ಕೇಳಿರಿ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಹೇಗಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ.”​—⁠ಯೋಹಾನ 14:​16, 17; 16:⁠7.

ಯೇಸು ತನ್ನ ಶಿಷ್ಯರಿಗೆ ಈ ಸೂಚನೆಯನ್ನು ಕೊಡುವ ಮೂಲಕ ಅವರಿಗೆ ಒಂದು ಗಂಭೀರವಾದ ನೇಮಕವನ್ನು ಒಪ್ಪಿಸಿದನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ [“ಪವಿತ್ರಾತ್ಮದ,” NW] ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾಯ 28:19, 20) ಇದೊಂದು ಸುಲಭದ ಕೆಲಸವಾಗಿರಲಿಲ್ಲ, ಯಾಕಂದರೆ ಅವರು ಅದನ್ನು ವಿರೋಧದ ಎದುರಿನಲ್ಲೂ ಮುಂದುವರಿಸಬೇಕಾಗಿತ್ತು.​—⁠ಮತ್ತಾಯ 10:​22, 23.

ಹೊರಗಿನ ವಿರೋಧದೊಂದಿಗೆ, ಸಭೆಯೊಳಗೂ ಸ್ವಲ್ಪ ಮಟ್ಟಿಗೆ ಘರ್ಷಣೆ ಇರಲಿತ್ತು. ಸಾ.ಶ. 56ರಷ್ಟಕ್ಕೆ ಪೌಲನು ರೋಮಿನಲ್ಲಿದ್ದ ಕ್ರೈಸ್ತರಿಗೆ ಹೀಗೆ ಬರೆದನು: “ಸಹೋದರರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿ ಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.” (ರೋಮಾಪುರ 16:17, 18) ಅಪೊಸ್ತಲರ ಮರಣದ ಮೇಲಂತೂ ಈ ಪರಿಸ್ಥಿತಿಯು ಇನ್ನೂ ಹದಗೆಡಲಿತ್ತು. ಈ ಕಾರಣದಿಂದಲೇ ಪೌಲನು ಎಚ್ಚರಿಕೆ ನೀಡಿದ್ದು: “ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.”​—⁠ಅ. ಕೃತ್ಯಗಳು 20:29, 30.

ಈ ಎಲ್ಲ ಅಡೆತಡೆಗಳನ್ನು ಜಯಿಸಿ ಮುಂದುವರಿಯಲಿಕ್ಕಾಗಿ ದೇವರ ಸಹಾಯದ ಆವಶ್ಯಕತೆಯಿತ್ತು. ಈ ಸಹಾಯವನ್ನು ಆತನು ಯೇಸುವಿನ ಮೂಲಕ ಕೊಟ್ಟನು. ಅವನ ಪುನರುತ್ಥಾನದ ನಂತರ, ಸಾ.ಶ. 33ರ ಪಂಚಾಶತ್ತಮದಂದು, ಅವನ ಸುಮಾರು 120 ಹಿಂಬಾಲಕರು ‘ಪವಿತ್ರಾತ್ಮಭರಿತರಾದರು.’​—⁠ಅ. ಕೃತ್ಯಗಳು 1:15; 2:⁠4.

ಈ ಸಂದರ್ಭದಲ್ಲಿ ತಮ್ಮ ಮೇಲೆ ಸುರಿಸಲಾಗಿರುವ ಪವಿತ್ರಾತ್ಮವೇ, ಯೇಸು ಹಿಂದೆ ವಾಗ್ದಾನಿಸಿದ್ದ ಸಹಾಯಕನೆಂದು ಆ ಶಿಷ್ಯರು ಅಂಗೀಕರಿಸಿದರು. “ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ [“ಪವಿತ್ರಾತ್ಮವೇ,” NW] ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು [“ತರುವುದು,” NW]” ಎಂದು ಯೇಸು ಹೇಳಿದಾಗ, ಆ ಸಹಾಯಕನು ಯಾರಾಗಿರುವನು ಎಂಬುದರ ಕುರಿತಾದ ಅವನ ಮಾತುಗಳು ಅವರಿಗೆ ಈಗ ನಿಸ್ಸಂದೇಹವಾಗಿ ಹೆಚ್ಚು ಚೆನ್ನಾಗಿ ಅರ್ಥವಾದವು. (ಓರೆಅಕ್ಷರಗಳು ನಮ್ಮವು.) (ಯೋಹಾನ 14:26) ಅವನದನ್ನು ‘ಸಹಾಯಕನು, ಸತ್ಯದ ಆತ್ಮ’ ಎಂದು ಸಹ ಕರೆದನು.​—⁠ಯೋಹಾನ 15:⁠26.

ಪವಿತ್ರಾತ್ಮ ಹೇಗೆ ಸಹಾಯಕವಾಗಿದೆ?

ಪವಿತ್ರಾತ್ಮವು ಹಲವಾರು ರೀತಿಗಳಲ್ಲಿ ಸಹಾಯಕನಂತೆ ಕಾರ್ಯನಡಿಸಲಿತ್ತು. ಮೊದಲನೆಯದಾಗಿ, ಯೇಸು ಮಾತುಕೊಟ್ಟಂತೆ, ಅದು ಅವನು ಅವರಿಗೆ ಹೇಳಿದಂತಹ ವಿಷಯಗಳನ್ನು ಅವರ ನೆನಪಿಗೆ ತರಲಿತ್ತು. ಇದರರ್ಥ, ಕೇವಲ ಮಾತುಗಳನ್ನು ಜ್ಞಾಪಕಕ್ಕೆ ತರಲು ಸಹಾಯಮಾಡುವುದಾಗಿರಲಿಲ್ಲ. ಬದಲಾಗಿ, ಯೇಸು ಏನನ್ನು ಕಲಿಸಿದ್ದನೊ ಅದರ ಹೆಚ್ಚು ಗಾಢವಾದ ಅರ್ಥ ಮತ್ತು ಮಹತ್ವವನ್ನು ಗ್ರಹಿಸಿಕೊಳ್ಳುವಂತೆ ಅದು ಸಹಾಯಮಾಡಲಿತ್ತು. (ಯೋಹಾನ 16:​12-14) ಚುಟುಕಾಗಿ ಹೇಳುವುದಾದರೆ, ಆ ಆತ್ಮವು ಶಿಷ್ಯರು ಸತ್ಯದ ಹೆಚ್ಚು ಉತ್ತಮ ತಿಳುವಳಿಕೆಯನ್ನು ಪಡೆದುಕೊಳ್ಳುವಂತೆ ಸಹಾಯ ಮಾಡಲಿತ್ತು. ಸಮಯಾನಂತರ, ಅಪೊಸ್ತಲ ಪೌಲನು ಬರೆದುದು: “ನಮಗಾದರೋ ದೇವರು ತನ್ನ ಆತ್ಮದ ಮೂಲಕ ಅದನ್ನು ಪ್ರಕಟಿಸಿದ್ದಾನೆ. ಯಾಕೆಂದರೆ ಆ ಆತ್ಮವು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುತ್ತದೆ.” (1 ಕೊರಿಂಥ 2:​10, NW) ಯೇಸುವಿನ ಅಭಿಷಿಕ್ತ ಹಿಂಬಾಲಕರು ಬೇರೆಯವರಿಗೆ ನಿಷ್ಕೃಷ್ಟವಾದ ಜ್ಞಾನವನ್ನು ಹಂಚಬೇಕಾಗಿದ್ದರೆ, ಮೊದಲು ಅವರ ಸ್ವಂತ ತಿಳುವಳಿಕೆಯು ದೃಢವಾದದ್ದಾಗಿರುವ ಅಗತ್ಯವಿತ್ತು.

ಎರಡನೆಯದಾಗಿ, ಪವಿತ್ರಾತ್ಮವು ಅವರಿಗೆ ಪ್ರಾರ್ಥನೆಯ ಸಂಬಂಧದಲ್ಲಿ ಸಹಾಯಮಾಡಲಿತ್ತು. ಯೇಸು ತನ್ನ ಶಿಷ್ಯರಿಗೆ ಪ್ರಾರ್ಥನೆಮಾಡಲು ಕಲಿಸಿದನು. ಮತ್ತು ಅವರದನ್ನು ಅನೇಕಸಲ ಮಾಡುವಂತೆ ಕಲಿಸಿದನು. ಒಂದುವೇಳೆ ಪ್ರಾರ್ಥನೆಮಾಡುವಾಗ ಏನು ಹೇಳಬೇಕೆಂದು ಅವರಿಗೆ ಖಾತ್ರಿಯಿಲ್ಲದಿರುತ್ತಿದ್ದಲ್ಲಿ, ಪವಿತ್ರಾತ್ಮವು ಅವರ ಪರವಾಗಿ ಮಾತಾಡಸಾಧ್ಯವಿತ್ತು ಅಥವಾ ಮಾತಾಡಲು ಸಹಾಯಮಾಡಸಾಧ್ಯವಿತ್ತು. “ಹಾಗೆ ಪವಿತ್ರಾತ್ಮನು [“ಪವಿತ್ರಾತ್ಮವು,” NW] ಸಹ ನಮ್ಮ ಅಶಕ್ತಿಯನ್ನು ನೋಡಿ ಸಹಾಯಮಾಡುತ್ತಾನೆ [“ಸಹಾಯಮಾಡುತ್ತದೆ,” NW]. ಹೇಗಂದರೆ ನಾವು ತಕ್ಕ ಪ್ರಕಾರ ಏನೂ ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲದ್ದರಿಂದ ಪವಿತ್ರಾತ್ಮನು [“ಪವಿತ್ರಾತ್ಮವು,” NW] ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ [“ಬೇಡಿಕೊಳ್ಳುತ್ತದೆ,” NW].​—⁠ರೋಮಾಪುರ 8:⁠26.

ಮೂರನೆಯದಾಗಿ, ಸತ್ಯವನ್ನು ಬಹಿರಂಗವಾಗಿ ಸಮರ್ಥಿಸಲಿಕ್ಕಾಗಿ ಪವಿತ್ರಾತ್ಮವು ಯೇಸುವಿನ ಶಿಷ್ಯರಿಗೆ ಸಹಾಯಮಾಡಲಿತ್ತು. ಅವನು ಅವರನ್ನು ಎಚ್ಚರಿಸಿದ್ದು: “ಇದಲ್ಲದೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ; ಅವರು ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವದು. ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಹೇಗೆ ಮಾತಾಡಬೇಕು ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವದು. ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ [“ಆತ್ಮವೇ,” NW] ನಿಮ್ಮ ಮುಖಾಂತರವಾಗಿ ಮಾತಾಡುವನು.”​—⁠ಮತ್ತಾಯ 10:17-20.

ಪವಿತ್ರಾತ್ಮವು, ಕ್ರೈಸ್ತ ಸಭೆಯು ಯಾವುದೆಂಬುದನ್ನು ಗುರುತಿಸಲಿಕ್ಕಾಗಿ ಸಹಾಯಮಾಡಲಿತ್ತು. ಮತ್ತು ಅದರ ಸದಸ್ಯರು ವೈಯಕ್ತಿಕವಾಗಿ ಬುದ್ಧಿವಂತ ನಿರ್ಣಯಗಳನ್ನು ಮಾಡುವಂತೆಯೂ ಪ್ರಚೋದಿಸಲಿತ್ತು. ಈ ವಿಷಯದ ಈ ಎರಡು ಅಂಶಗಳನ್ನು ನಾವು ಹೆಚ್ಚು ವಿವರವಾಗಿ ಚರ್ಚಿಸೋಣ ಮತ್ತು ಇಂದು ನಮಗೆ ಅವು ಯಾವ ಅರ್ಥದಲ್ಲಿವೆ ಎಂಬುದನ್ನು ನೋಡೋಣ.

ಗುರುತು ಚಿಹ್ನೆ

ಎಷ್ಟೋ ಶತಮಾನಗಳ ವರೆಗೆ ಯೆಹೂದ್ಯರು ಮೋಶೆಯ ಧರ್ಮಶಾಸ್ತ್ರದ ಕೆಳಗೆ ದೇವರ ವಿಶೇಷ ಜನರೋಪಾದಿ ಇದ್ದರು. ಆದರೆ ಯೇಸು ಮೆಸ್ಸೀಯನೆಂಬುದನ್ನು ಅವರು ಅಂಗೀಕರಿಸಲು ನಿರಾಕರಿಸಿದ್ದರಿಂದ, ಅವರನ್ನೇ ದೇವರು ಬೇಗನೆ ತಿರಸ್ಕರಿಸಲಿದ್ದಾನೆಂದು ಯೇಸು ಮುಂತಿಳಿಸಿದನು. ಅವನು ಹೇಳಿದ್ದು: “ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬುವ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ? ಆದದರಿಂದ ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು.” (ಮತ್ತಾಯ 21:42, 43) ಸಾ.ಶ. 33ರ ಪಂಚಾಶತ್ತಮದಂದು ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟಾಗ, ಕ್ರಿಸ್ತನ ಹಿಂಬಾಲಕರು ಆ ‘ಫಲಗಳನ್ನು ಕೊಡುವ ಜನವಾದರು.’ ಅಂದಿನಿಂದ ಆ ಸಭೆಯು, ದೇವರ ಸಂಪರ್ಕದ ಮಾಧ್ಯಮವಾಯಿತು. ದೇವರು ತನ್ನ ಅನುಗ್ರಹವನ್ನು ಯೆಹೂದಿ ಜನಾಂಗದಿಂದ ತೆಗೆದು, ಈ ಸಭೆಗೆ ಕೊಡುತ್ತಿದ್ದಾನೆಂಬುದನ್ನು ಜನರು ಗುರುತಿಸಲು ಶಕ್ತರಾಗುವಂತೆ, ಒಂದು ಸ್ಪಷ್ಟವಾದ ಗುರುತು ಚಿಹ್ನೆಯನ್ನು ದೇವರು ಒದಗಿಸಿದನು. ಅದೇನಾಗಿತ್ತು?

ಪಂಚಾಶತ್ತಮದಂದು, ತಾವು ಎಂದೂ ಕಲಿತಿರದಂತಹ ಭಾಷೆಗಳಲ್ಲಿ ಶಿಷ್ಯರು ಮಾತಾಡುವಂತೆ ಪವಿತ್ರಾತ್ಮವು ಮಾಡಿತು. ಇದರಿಂದಾಗಿ ಪ್ರೇಕ್ಷಕರು ಬೆರಗಾಗಿ, ಹೀಗೆ ಕೇಳಿದರು: “ನಾವು ಪ್ರತಿಯೊಬ್ಬರು ನಮ್ಮನಮ್ಮ ಹುಟ್ಟುಭಾಷೆಯಲ್ಲಿ ಇವರು ಮಾತಾಡುವದನ್ನು ಕೇಳುತ್ತೇವಲ್ಲಾ, ಇದು ಹೇಗೆ?” (ಅ. ಕೃತ್ಯಗಳು 2:7, 8) ತಮಗೆ ಈ ಹಿಂದೆ ತಿಳಿದಿರದಂತಹ ಭಾಷೆಗಳಲ್ಲಿ ಮಾತಾಡುವ ಸಾಮರ್ಥ್ಯದ ಜೊತೆಗೆ, “ಅನೇಕ ಅದ್ಭುತಕಾರ್ಯಗಳೂ ಸೂಚಕಕಾರ್ಯಗಳೂ ಅಪೊಸ್ತಲರ ಕೈಯಿಂದ ನಡೆದವು.” ಇದರಿಂದಾಗಿ ಸುಮಾರು ಮೂರು ಸಾವಿರ ಜನರು, ದೇವರಾತ್ಮವು ನಿಜವಾಗಿಯೂ ಈ ಸಭೆಯ ಮೇಲಿದೆಯೆಂಬುದನ್ನು ಗುರುತಿಸಲು ಸಾಧ್ಯವಾಯಿತು.​—⁠ಅ. ಕೃತ್ಯಗಳು 2:41, 43.

ಅಷ್ಟುಮಾತ್ರವಲ್ಲದೆ, ಕ್ರಿಸ್ತನ ಶಿಷ್ಯರು ‘ದೇವರಾತ್ಮದ ಫಲವನ್ನು’ ಅಂದರೆ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆಯಂತಹ ಗುಣಗಳನ್ನು ಪ್ರದರ್ಶಿಸಿದರು. ಇದರಿಂದಾಗಿಯೂ ಅವರು ದೇವರ ಸೇವಕರೆಂದು ಇತರರು ಸ್ಪಷ್ಟವಾಗಿ ಗುರುತಿಸುತ್ತಿದ್ದರು. (ಗಲಾತ್ಯ 5:​22, 23) ಆದರೆ ಎಲ್ಲದಕ್ಕಿಂತಲೂ ಹೆಚ್ಚಾಗಿ, ಪ್ರೀತಿಯೇ ಅವರನ್ನು ನಿಜ ಕ್ರೈಸ್ತ ಸಭೆಯಾಗಿ ಗುರುತಿಸಿತು. ಇದನ್ನು ಯೇಸು ಮುಂಚೆಯೇ ತಿಳಿಸಿದ್ದನು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”​—⁠ಯೋಹಾನ 13:34, 35.

ಆರಂಭದ ಕ್ರೈಸ್ತ ಸಭೆಯ ಸದಸ್ಯರು, ದೇವರ ಪವಿತ್ರಾತ್ಮದ ಮಾರ್ಗದರ್ಶನವನ್ನು ಅಂಗೀಕರಿಸಿ, ಅದು ನೀಡುವ ಸಹಾಯವನ್ನು ವಿನಿಯೋಗಿಸಿಕೊಂಡರು. ಪ್ರಥಮ ಶತಮಾನದಲ್ಲಿ ಮಾಡುತ್ತಿದ್ದಂತೆ ದೇವರು ಇಂದು ಸತ್ತವರನ್ನು ಎಬ್ಬಿಸುವುದಿಲ್ಲ ಮತ್ತು ಅದ್ಭುತಗಳನ್ನು ನಡೆಸುವುದಿಲ್ಲವೆಂಬುದು ಕ್ರೈಸ್ತರಿಗೆ ತಿಳಿದಿದೆ. ಆದರೂ, ತಾವು ಯೇಸು ಕ್ರಿಸ್ತನ ನಿಜ ಶಿಷ್ಯರಾಗಿದ್ದೇವೆಂಬುದನ್ನು ಇತರರು ಗುರುತಿಸುವಂತೆ ಮಾಡುವ ದೇವರಾತ್ಮದ ಫಲವನ್ನು ಅವರು ಪ್ರದರ್ಶಿಸುತ್ತಾರೆ.​—⁠1 ಕೊರಿಂಥ 13:⁠8.

ವೈಯಕ್ತಿಕ ನಿರ್ಣಯಗಳನ್ನು ಮಾಡುವುದಕ್ಕಾಗಿ ಒಬ್ಬ ಸಹಾಯಕ

ಬೈಬಲ್‌ ಪವಿತ್ರಾತ್ಮ ಪ್ರೇರಣೆಯಿಂದ ಬರೆಯಲ್ಪಟ್ಟ ಒಂದು ಪುಸ್ತಕವಾಗಿದೆ. ಬೈಬಲ್‌ನಲ್ಲಿ ತಿಳಿಸಿರುವಂಥ ವಿಷಯಗಳಿಗನುಸಾರ ನಾವು ನಡೆಯುವಾಗ, ಅದು ಪವಿತ್ರಾತ್ಮವೇ ನಮ್ಮನ್ನು ಮಾರ್ಗದರ್ಶಿಸುವಂತೆ ಇದೆ. (2 ತಿಮೊಥೆಯ 3:​16, 17) ನಾವು ವಿವೇಕಯುತ ನಿರ್ಣಯಗಳನ್ನು ಮಾಡುವಂತೆಯೂ ಅದು ಸಹಾಯಮಾಡಬಲ್ಲದು. ಆದರೆ ಹೇಗೆ?

ನಮ್ಮ ಕಸಬು ಅಥವಾ ಉದ್ಯೋಗದ ವಿಷಯದಲ್ಲಿ ನಾವು ಮಾಡಬೇಕಾಗುವ ಆಯ್ಕೆಯನ್ನೇ ತೆಗೆದುಕೊಳ್ಳಿ. ನಮ್ಮ ಉದ್ಯೋಗವು ಬೈಬಲ್‌ ಸಿದ್ಧಾಂತಗಳಿಗೆ ಹೊಂದಿಕೆಯಲ್ಲಿರಬೇಕು. ಮತ್ತು ನಾವು ದೇವಪ್ರಭುತ್ವ ಗುರಿಗಳನ್ನು ಬೆನ್ನಟ್ಟುವಂತೆ ಅದು ಅವಕಾಶಕೊಡುವಲ್ಲಿ ಇನ್ನೂ ಒಳ್ಳೇದು. ಅದರಿಂದ ನಮಗೆ ಸಿಗಬಹುದಾದ ಸಂಬಳ ಅಥವಾ ಮಾನ ಮತ್ತು ಪ್ರತಿಷ್ಠೆಯು ಅಷ್ಟೇನೂ ಪ್ರಾಮುಖ್ಯವಾಗಿರುವುದಿಲ್ಲ. ಬದಲಾಗಿ, ಅದು ನಮ್ಮ ಜೀವಿತದ ಆವಶ್ಯಕತೆಗಳನ್ನು ಪೂರೈಸುತ್ತದೊ ಮತ್ತು ಕ್ರೈಸ್ತರೋಪಾದಿ ನಮಗಿರುವ ಹಂಗುಗಳನ್ನು ತೀರಿಸಲು ಅದು ಸಾಕಷ್ಟು ಸಮಯ ಮತ್ತು ಅವಕಾಶವನ್ನು ಕೊಡುತ್ತದೊ ಎಂಬುದು ಹೆಚ್ಚು ಪ್ರಾಮುಖ್ಯವಾಗಿರುತ್ತದೆ. ಹೀಗೆ, ನಮಗೆ ಸಿಗಬಹುದಾದ ಉದ್ಯೋಗವನ್ನು ನಾವು ಯೆಹೋವನ ದೃಷ್ಟಿಕೋನದಿಂದ ನೋಡುವಂತೆ ಪವಿತ್ರಾತ್ಮವು ನಮಗೆ ಸಹಾಯಮಾಡುವುದು.

ಜೀವಿತದಲ್ಲಿ ಆನಂದಿಸಬೇಕೆಂಬ ಅಭಿಲಾಷೆಯು ತಪ್ಪಲ್ಲ. ಅದು ಸಹಜವೂ ಯೋಗ್ಯವೂ ಆದದ್ದಾಗಿದೆ. (ಪ್ರಸಂಗಿ 2:24; 11:⁠9) ಆದುದರಿಂದ, ಸ್ವಲ್ಪ ಚೈತನ್ಯ ಮತ್ತು ಆನಂದವನ್ನು ಪಡೆಯಲಿಕ್ಕಾಗಿ ಸಮಚಿತ್ತದ ಕ್ರೈಸ್ತನೊಬ್ಬನು ಮನೋರಂಜನಾ ಚಟುವಟಿಕೆಗಳಲ್ಲಿ ತೊಡಗಬಹುದು. ಆದರೆ ಅವನು ಒಂದು ವಿಷಯವನ್ನು ಮಾತ್ರ ನೆನಪಿನಲ್ಲಿಡಬೇಕು. ಅದೇನೆಂದರೆ, ಆ ಮನೋರಂಜನೆಯು ‘ಶರೀರಭಾವದ ಕರ್ಮಗಳಿಗೆ’ ಹೆಚ್ಚು ಪ್ರಾಧಾನ್ಯತೆ ಕೊಡದೆ, ಪವಿತ್ರಾತ್ಮದ ಫಲವನ್ನು ಪ್ರತಿಬಿಂಬಿಸುವಂಥದ್ದಾಗಿರಬೇಕು. ಪೌಲನು ವಿವರಿಸುವುದು: “ಶರೀರಭಾವದ ಕರ್ಮಗಳು ಪ್ರಸಿದ್ಧವಾಗಿಯೇ ಅವೆ; ಯಾವವಂದರೆ​—⁠ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತನ ಇಂಥವುಗಳೇ.” ನಾವು “ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ” ಆಗಿರುವುದರಿಂದ ದೂರವಿರಬೇಕಾಗಿದೆ.​—⁠ಗಲಾತ್ಯ 5:​16-26.

ಸ್ನೇಹಿತರನ್ನು ಆಯ್ಕೆಮಾಡುವ ವಿಷಯದಲ್ಲಿಯೂ ಈ ಸಿದ್ಧಾಂತವು ಅನ್ವಯವಾಗುತ್ತದೆ. ಸ್ನೇಹಿತರನ್ನು, ಅವರ ಬಾಹ್ಯ ರೂಪ ಅಥವಾ ಅವರ ಬಳಿ ಇರುವ ಸ್ವತ್ತುಗಳನ್ನು ನೋಡಿ ಆಯ್ಕೆಮಾಡದೆ, ಅವರ ಆತ್ಮಿಕತೆ ಹೇಗಿದೆ ಎಂಬುದನ್ನು ನೋಡಿ ಆಯ್ಕೆಮಾಡಬೇಕು. ದಾವೀದನು ದೇವರ ಸ್ನೇಹಿತನಾಗಿದ್ದನು. ಆದುದರಿಂದ “ಅವನು ನನಗೆ ಒಪ್ಪುವ ಮನುಷ್ಯನು” ಎಂದು ದೇವರು ಅವನ ವಿಷಯದಲ್ಲಿ ಹೇಳಿದನು. (ಅ. ಕೃತ್ಯಗಳು 13:22) ಇಸ್ರಾಯೇಲಿನ ರಾಜನಾಗುವಂತೆ ದೇವರು ದಾವೀದನನ್ನು ಆಯ್ಕೆಮಾಡಿದಾಗ, ಆತನು ಅವನ ಬಾಹ್ಯ ರೂಪವನ್ನು ನೋಡಲಿಲ್ಲ. ಇದು ದೇವರ ಈ ಸಿದ್ಧಾಂತಕ್ಕನುಗುಣವಾಗಿತ್ತು: “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.”​—⁠1 ಸಮುವೇಲ 16:⁠7.

ಸಾವಿರಾರು ಜನರು, ಬಾಹ್ಯ ರೂಪ ಅಥವಾ ಸ್ವತ್ತುಗಳನ್ನು ನೋಡಿ ಮಾಡಿದಂತಹ ಗೆಳೆತನಗಳು ಕುಸಿದುಬಿದ್ದಿವೆ. ಅನಿಶ್ಚಿತವಾದ ಐಶ್ವರ್ಯಗಳ ಮೇಲೆ ಆಧಾರಿತವಾದ ಗೆಳೆತನಗಳು ಒಮ್ಮಿಂದೊಮ್ಮೆಲೆ ಕೊನೆಗೊಳ್ಳಬಲ್ಲವು. (ಜ್ಞಾನೋಕ್ತಿ 14:20) ನಾವು ಸ್ನೇಹಿತರನ್ನು ಆಯ್ಕೆಮಾಡುವಾಗ, ಯೆಹೋವನ ಸೇವೆಮಾಡುವುದರಲ್ಲಿ ನಮಗೆ ಸಹಾಯಮಾಡಬಲ್ಲ ರೀತಿಯ ಸ್ನೇಹಿತರನ್ನು ಆರಿಸಿಕೊಳ್ಳುವಂತೆ, ದೇವರ ಆತ್ಮಪ್ರೇರಿತ ವಾಕ್ಯವು ನಮಗೆ ಬುದ್ಧಿವಾದ ನೀಡುತ್ತದೆ. ಅಷ್ಟುಮಾತ್ರವಲ್ಲದೆ, ಸ್ನೇಹಿತರಿಂದ ಏನಾದರೂ ಪಡೆದುಕೊಳ್ಳುವುದರ ಕಡೆಗೆ ಗಮನಕೊಡದೆ, ಅವರಿಗೆ ಕೊಡುವುದರ ಕಡೆಗೆ ಹೆಚ್ಚು ಗಮನಕೊಡುವಂತೆ ಅದು ಹೇಳುತ್ತದೆ. ಯಾಕೆಂದರೆ ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಆನಂದವು ಸಿಗುತ್ತದೆ. (ಅ. ಕೃತ್ಯಗಳು 20:35) ಮತ್ತು ನಾವು ಸ್ನೇಹಿತರಿಗೆ ಕೊಡಬಹುದಾದ ಅತ್ಯಮೂಲ್ಯ ಸಂಗತಿಗಳು ಯಾವುವು? ಸಮಯ ಮತ್ತು ವಾತ್ಸಲ್ಯವೇ.

ಒಬ್ಬ ವಿವಾಹ ಸಂಗಾತಿಗಾಗಿ ಹುಡುಕುತ್ತಿರುವ ಕ್ರೈಸ್ತನೊಬ್ಬನಿಗೆ/ಳಿಗೆ ಸಹ ಬೈಬಲು ಆತ್ಮಪ್ರೇರಿತ ಬುದ್ಧಿವಾದವನ್ನು ಕೊಡುತ್ತದೆ. ಒಂದು ವಿಧದಲ್ಲಿ ಅದು ಹೀಗನ್ನುತ್ತದೆ: ‘ಮುಖ ಮತ್ತು ರೂಪಕ್ಕಿಂತಲೂ ಹೆಚ್ಚನ್ನು ನೋಡಿ. ಪಾದಗಳನ್ನು ನೋಡಿರಿ.’ ಪಾದಗಳನ್ನು ನೋಡಬೇಕೊ? ಹೌದು, ಆ ವ್ಯಕ್ತಿಯು, ಸುವಾರ್ತೆಯನ್ನು ಸಾರುವ ಯೆಹೋವನ ಕೆಲಸವನ್ನು ಪೂರೈಸುವುದರಲ್ಲಿ ತನ್ನ ಪಾದಗಳನ್ನು ಉಪಯೋಗಿಸುತ್ತಿದ್ದಾನೊ ಮತ್ತು ಹೀಗೆ ಅವು ಯೆಹೋವನ ದೃಷ್ಟಿಯಲ್ಲಿ ಅಂದವಾಗಿವೆಯೊ? ಅವನ ಪಾದಗಳು ಸತ್ಯದ ಸಂದೇಶ ಮತ್ತು ಸಮಾಧಾನದ ವಿಷಯವಾದ ಸುವಾರ್ತೆಯೆಂಬ ಕೆರಗಳನ್ನು ಮೆಟ್ಟಿಕೊಂಡಿವೆಯೊ? ಬೈಬಲ್‌ ಹೀಗನ್ನುತ್ತದೆ: “ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಒಳ್ಳೆಯ ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು ರಕ್ಷಣೆಯನ್ನು ಪ್ರಕಟಿಸುತ್ತಾ​—⁠ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.”​—⁠ಯೆಶಾಯ 52:⁠7; ಎಫೆಸ 6:15.

ನಾವು ಇಂದು ‘ಕಠಿನಕಾಲಗಳಲ್ಲಿ’ ಜೀವಿಸುತ್ತಿರುವುದರಿಂದ, ದೇವರ ಚಿತ್ತವನ್ನು ಮಾಡಲಿಕ್ಕಾಗಿ ನಮಗೆ ಸಹಾಯ ಬೇಕಾಗಿದೆ. (2 ತಿಮೊಥೆಯ 3:⁠1) ದೇವರ ಪವಿತ್ರಾತ್ಮವು, ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರ ಕೆಲಸಕ್ಕೆ ತುಂಬ ಬಲವಾದ ಬೆಂಬಲವನ್ನು ಕೊಟ್ಟಿತ್ತು ಮಾತ್ರವಲ್ಲದೆ, ಅದು ಅವರ ವೈಯಕ್ತಿಕ ಸಹಾಯಕನೂ ಆಗಿತ್ತು. ನಾವು ಸಹ ಹಾಗೆಯೇ ಪವಿತ್ರಾತ್ಮವನ್ನು ನಮ್ಮ ವೈಯಕ್ತಿಕ ಸಹಾಯಕನನ್ನಾಗಿ ಮಾಡಿಕೊಳ್ಳಬಹುದು. ಇದಕ್ಕಾಗಿರುವ ಒಂದು ಪ್ರಧಾನ ವಿಧವು, ಪವಿತ್ರಾತ್ಮದ ಸಹಾಯದಿಂದ ಬರೆಯಲ್ಪಟ್ಟಿರುವ ದೇವರ ವಾಕ್ಯವನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಮಾಡುವುದೇ ಆಗಿದೆ. ನಾವು ಈಗಾಗಲೇ ಪವಿತ್ರಾತ್ಮವನ್ನು ನಮ್ಮ ವೈಯಕ್ತಿಕ ಸಹಾಯಕನನ್ನಾಗಿ ಮಾಡಿಕೊಂಡಿದ್ದೇವೊ?

[ಪುಟ 23ರಲ್ಲಿ ಇಡೀ ಪುಟದ ಚಿತ್ರ]