ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಯ ಹೊಸ ಆಡಳಿತ—ದೇವರ ರಾಜ್ಯ

ಭೂಮಿಯ ಹೊಸ ಆಡಳಿತ—ದೇವರ ರಾಜ್ಯ

ಭೂಮಿಯ ಹೊಸ ಆಡಳಿತ​—ದೇವರ ರಾಜ್ಯ

“ಆ [ರಾಜ್ಯವು] . . . ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”​—⁠ದಾನಿಯೇಲ 2:⁠44.

1. ನಾವು ಬೈಬಲಿನಲ್ಲಿ ಏಕೆ ಭರವಸೆಯನ್ನಿಡಬಹುದು?

ಬೈಬಲ್‌, ದೇವರು ಮಾನವರಿಗೆ ಕೊಟ್ಟಿರುವ ಒಂದು ಪ್ರಕಟನೆಯಾಗಿದೆ. ಅಪೊಸ್ತಲ ಪೌಲನು ಬರೆದುದು: “ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ನಿಜವಾಗಿ ದೇವರ ವಾಕ್ಯವೇ; ಅದು ನಂಬುವವರಾದ ನಿಮ್ಮೊಳಗೆ ಬಲವಾಗಿ ಕೆಲಸ ನಡಿಸುತ್ತದೆ.” (1 ಥೆಸಲೊನೀಕ 2:13) ದೇವರ ವ್ಯಕ್ತಿತ್ವ, ಆತನ ಉದ್ದೇಶಗಳು, ಮತ್ತು ನಮಗಾಗಿ ಆತನ ಆವಶ್ಯಕತೆಗಳೇನು ಎಂಬುದರ ಮಾಹಿತಿ, ಹೀಗೆ ದೇವರ ಬಗ್ಗೆ ನಮಗೆ ಏನೆಲ್ಲಾ ತಿಳಿದಿರಬೇಕೊ ಅದೆಲ್ಲವೂ ಬೈಬಲಿನಲ್ಲಿದೆ. ಕುಟುಂಬ ಜೀವನ ಮತ್ತು ನಮ್ಮ ದೈನಂದಿನ ನಡತೆಯ ಬಗ್ಗೆಯೂ ಅದರಲ್ಲಿ ಅತ್ಯುತ್ತಮವಾದ ಸಲಹೆಯಿದೆ. ಗತಕಾಲದಲ್ಲಿ ನೆರವೇರಿರುವ, ಈಗ ನೆರವೇರುತ್ತಿರುವ, ಮತ್ತು ಭವಿಷ್ಯತ್ತಿನಲ್ಲಿ ನೆರವೇರಲಿರುವ ಪ್ರವಾದನೆಗಳು ಅದರಲ್ಲಿವೆ. ಹೌದು, “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”​—⁠2 ತಿಮೊಥೆಯ 3:16, 17.

2. ಬೈಬಲಿನ ಮುಖ್ಯ ವಿಷಯವನ್ನು ಯೇಸು ಹೇಗೆ ಎತ್ತಿಹಿಡಿದನು?

2 ಆದರೆ ಬೈಬಲಿನ ಮುಖ್ಯವಿಷಯವೇ, ಅತಿ ಮಹತ್ವದ ಸಂಗತಿಯಾಗಿದೆ. ಆ ಮುಖ್ಯವಿಷಯವೇನು? ದೇವರ ಸ್ವರ್ಗೀಯ ರಾಜ್ಯದ ಮೂಲಕ, ಆತನ ಪರಮಾಧಿಕಾರದ (ಆಳುವ ಹಕ್ಕಿನ) ನಿರ್ದೋಷೀಕರಣವೇ. ಇದನ್ನೇ ಯೇಸು ಸಹ ತನ್ನ ಶುಶ್ರೂಷೆಯ ಮುಖ್ಯ ವಿಷಯವನ್ನಾಗಿ ಮಾಡಿದನು. “ಯೇಸು​—⁠ಪರಲೋಕರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು.” (ಮತ್ತಾಯ 4:17) ಈ ರಾಜ್ಯಕ್ಕೆ ನಾವು ನಮ್ಮ ಜೀವಿತಗಳಲ್ಲಿ ಯಾವ ಸ್ಥಾನವನ್ನು ಕೊಡಬೇಕೆಂಬುದನ್ನು ಅವನು ತೋರಿಸುತ್ತಾ, ಉತ್ತೇಜಿಸಿದ್ದು: “ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.” (ಮತ್ತಾಯ 6:33) “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಪ್ರಾರ್ಥಿಸುವಂತೆ ತನ್ನ ಹಿಂಬಾಲಕರಿಗೆ ಕಲಿಸುವ ಮೂಲಕ, ಅದು ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ಸಹ ಅವನು ತೋರಿಸಿಕೊಟ್ಟನು.​—⁠ಮತ್ತಾಯ 6:⁠10.

ಭೂಮಿಯ ಮೇಲಿನ ಹೊಸ ಆಡಳಿತ

3. ದೇವರ ರಾಜ್ಯವು ನಮಗೆ ಏಕೆ ಅಷ್ಟೊಂದು ಮಹತ್ವಪೂರ್ಣವಾಗಿದೆ?

3 ದೇವರ ರಾಜ್ಯವು ಮನುಷ್ಯರಿಗೆ ಯಾಕೆ ಅಷ್ಟೊಂದು ಮಹತ್ವಪೂರ್ಣವಾಗಿದೆ? ಏಕೆಂದರೆ ಅದು ಅತಿ ಬೇಗನೆ, ಈ ಭೂಮಿಯ ಆಡಳಿತವನ್ನು ಸದಾಕಾಲಕ್ಕೂ ಬದಲಾಯಿಸಲು ಕ್ರಿಯೆಗೈಯಲಿದೆ. ದಾನಿಯೇಲ 2:44ರಲ್ಲಿರುವ ಪ್ರವಾದನೆಯು ತಿಳಿಸುವುದು: “[ಈಗ ಭೂಮಿಯ ಮೇಲೆ ಆಳುತ್ತಿರುವ] ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು [ಸ್ವರ್ಗದಲ್ಲಿ ಒಂದು ಸರಕಾರವನ್ನು] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ [ಭೂಸರಕಾರಗಳನ್ನು] ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ದೇವರ ಸ್ವರ್ಗೀಯ ರಾಜ್ಯವೊಂದೇ ಇಡೀ ಭೂಮಿಯ ಮೇಲೆ ಆಳುವಾಗ, ಮುಂದೆಂದೂ ಮನುಷ್ಯರು ಈ ಭೂಮಿಯ ಮೇಲೆ ಅಧಿಕಾರವನ್ನು ಚಲಾಯಿಸದಿರುವರು. ಒಡಕನ್ನುಂಟುಮಾಡುವ ಮತ್ತು ಅತೃಪ್ತಿಕರವಾದ ಮಾನವ ಆಳ್ವಿಕೆಯು ಸದಾಕಾಲಕ್ಕೂ ಚರಿತ್ರೆಯ ಪುಟಗಳಲ್ಲಿ ಸೇರಿಹೋಗುವುದು.

4, 5. (ಎ) ರಾಜ್ಯದ ರಾಜನಾಗಲು ಯೇಸುವಿನ ಬಳಿಯೇ ಸಕಲ ಅರ್ಹತೆಗಳಿವೆಯೆಂದು ಏಕೆ ಹೇಳಬಹುದು? (ಬಿ) ಭವಿಷ್ಯತ್ತಿನಲ್ಲಿ ಸ್ವಲ್ಪ ಸಮಯದೊಳಗೆ ಯೇಸುವಿಗೆ ಯಾವ ನೇಮಕವಿರುವುದು?

4 ಆ ಸ್ವರ್ಗೀಯ ರಾಜ್ಯದ ಮುಖ್ಯ ರಾಜನು, ಅಂದರೆ ಯೆಹೋವನ ನಂತರದ ಸ್ಥಾನದಲ್ಲಿದ್ದು ಆತನ ನಿರ್ದೇಶನದ ಕೆಳಗಿರುವವನು, ಅತ್ಯುಚ್ಚ ಅರ್ಹತೆಗಳುಳ್ಳವನಾಗಿದ್ದಾನೆ. ಅವನು ಯೇಸು ಕ್ರಿಸ್ತನೇ. ಭೂಮಿಗೆ ಬರುವ ಮುಂಚೆ ಅವನು ಸ್ವರ್ಗದಲ್ಲಿದ್ದನು. ಅವನು ದೇವರ ಎಲ್ಲ ಸೃಷ್ಟಿಯಲ್ಲಿ ಪ್ರಥಮನಾಗಿದ್ದು, ದೇವರ “ಕುಶಲಕರ್ಮಿ” (NW) ಆಗಿದ್ದನು. (ಜ್ಞಾನೋಕ್ತಿ 8:​22-31) “ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ. ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನಗಳಾಗಲಿ ಪ್ರಭುತ್ವಗಳಾಗಲಿ ಧೊರೆತನಗಳಾಗಲಿ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು.” (ಕೊಲೊಸ್ಸೆ 1:15, 16) ದೇವರು ಯೇಸುವನ್ನು ಈ ಭೂಮಿಗೆ ಕಳುಹಿಸಿದಾಗಲೂ, ಎಲ್ಲ ಸಮಯಗಳಲ್ಲಿ ಅವನು ದೇವರ ಚಿತ್ತವನ್ನು ಮಾಡಿದನು. ಅತ್ಯಂತ ಕಷ್ಟಕರವಾದ ಪರೀಕ್ಷೆಗಳನ್ನೂ ತಾಳಿಕೊಂಡು, ಅವನು ಕೊನೆಯ ವರೆಗೆ, ಅಂದರೆ ಮರಣದ ವರೆಗೂ ತನ್ನ ತಂದೆಗೆ ನಂಬಿಗಸ್ತನಾಗಿದ್ದನು.​—⁠ಯೋಹಾನ 4:34; 15:⁠10.

5 ಮರಣದ ವರೆಗೆ ಯೇಸು ದೇವರಿಗೆ ತೋರಿಸಿದ ನಿಷ್ಠೆಗಾಗಿ ಅವನಿಗೆ ಪ್ರತಿಫಲವನ್ನು ಕೊಡಲಾಯಿತು. ಹೇಗೆಂದರೆ, ದೇವರು ಅವನನ್ನು ಪುನರುತ್ಥಾನಗೊಳಿಸಿ, ಸ್ವರ್ಗಕ್ಕೇರಿಸಿದನು. ಅಲ್ಲಿ, ಸ್ವರ್ಗೀಯ ರಾಜ್ಯದ ರಾಜನಾಗುವ ಹಕ್ಕನ್ನು ಅವನಿಗೆ ಕೊಟ್ಟನು. (ಅ. ಕೃತ್ಯಗಳು 2:​32-36) ಆ ರಾಜ್ಯದ ರಾಜನೋಪಾದಿ ಯೇಸು ಕ್ರಿಸ್ತನು, ಈ ಭೂಮಿಯಿಂದ ಮಾನವಾಳ್ವಿಕೆಯನ್ನು ತೆಗೆದುಹಾಕುವ ಮತ್ತು ನಮ್ಮ ಈ ಭೂಗೋಳದಿಂದ ಎಲ್ಲ ದುಷ್ಟತನವನ್ನು ಅಳಿಸಿಹಾಕುವ ದೊಡ್ಡ ನೇಮಕವನ್ನು ಪಡೆಯುವನು. ಈ ಕೆಲಸವನ್ನು ಮಾಡಲಿಕ್ಕಾಗಿ ಅವನು ಕೋಟ್ಯಾನುಕೋಟಿ ಶಕ್ತಿಶಾಲಿ ಆತ್ಮಜೀವಿಗಳ ನಾಯಕತ್ವವಹಿಸುವನು. (ಜ್ಞಾನೋಕ್ತಿ 2:​21, 22; 2 ಥೆಸಲೊನೀಕ 1:​6-9; ಪ್ರಕಟನೆ 19:​11-21; 20:​1-3) ಆಗ ಕ್ರಿಸ್ತನ ಕೈಯಲ್ಲಿರುವ ದೇವರ ಸ್ವರ್ಗೀಯ ರಾಜ್ಯವೇ, ಇಡೀ ಭೂಮಿಯ ಮೇಲಿನ ಹೊಸ ಆಡಳಿತ ಅಧಿಕಾರ, ಅಂದರೆ ಏಕೈಕ ಸರಕಾರ ಆಗಿರುವುದು.​—⁠ಪ್ರಕಟನೆ 11:⁠15.

6. ದೇವರ ರಾಜ್ಯದ ರಾಜನಿಂದ ನಾವು ಯಾವ ರೀತಿಯ ಆಳ್ವಿಕೆಯನ್ನು ನಿರೀಕ್ಷಿಸಬಹುದು?

6 ದೇವರ ವಾಕ್ಯವು ಭೂಮಿಯ ಆ ಹೊಸ ರಾಜನ ಕುರಿತಾಗಿ ಹೀಗನ್ನುತ್ತದೆ: “ಸಕಲಜನಾಂಗ ಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.” (ದಾನಿಯೇಲ 7:14) ಯೇಸು ದೇವರ ಪ್ರೀತಿಯನ್ನು ಅನುಕರಿಸಲಿರುವುದರಿಂದ, ಆತನ ಆಳ್ವಿಕೆಯಲ್ಲಿ ಶಾಂತಿ ಮತ್ತು ಸಂತೋಷವು ಅತ್ಯಧಿಕವಾಗಿರುವುದು. (ಮತ್ತಾಯ 5:5; ಯೋಹಾನ 3:16; 1 ಯೋಹಾನ 4:​7-10) “ಅವನ ರಾಜ್ಯ ಮತ್ತು ಶಾಂತಿಗೆ ಅಂತ್ಯವಿರುವುದಿಲ್ಲ, . . . ಅದು ನೀತಿನ್ಯಾಯಗಳಿಂದ ಎತ್ತಿಹಿಡಿಯಲ್ಪಡುವುದು.” (ಯೆಶಾಯ 9:⁠7, ರಿವೈಸ್ಡ್‌ ಸ್ಟ್ಯಾಂಡರ್ಡ್‌ ವರ್ಷನ್‌) ನೀತಿ, ನ್ಯಾಯ ಮತ್ತು ಪ್ರೀತಿಯಿಂದ ಆಳುವ ಒಬ್ಬ ರಾಜನಿರುವುದು ಎಂತಹ ಒಂದು ಆಶೀರ್ವಾದವಾಗಿರುವುದು! ಹೀಗಿರುವುದರಿಂದ, 2 ಪೇತ್ರ 3:13 ಮುಂತಿಳಿಸುವುದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”

7. ಇಂದು ಮತ್ತಾಯ 24:14 ಹೇಗೆ ನೆರವೇರುತ್ತಿದೆ?

7 ನ್ಯಾಯವಾದದ್ದನ್ನು ಪ್ರೀತಿಸುವವರೆಲ್ಲರಿಗೆ, ದೇವರ ರಾಜ್ಯದ ಈ ವಾರ್ತೆಯು ಎಲ್ಲಕ್ಕಿಂತಲೂ ಉತ್ತಮವಾದ ವಾರ್ತೆಯಾಗಿರುತ್ತದೆ ಎಂಬುದು ಖಂಡಿತ. ಈ ಕಾರಣದಿಂದಲೇ, ಈ ದುಷ್ಟ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ನಾವು ಜೀವಿಸುತ್ತಿದ್ದೇವೆಂಬುದರ ಸೂಚನೆಯ ಭಾಗವಾಗಿ, ಯೇಸು ಇದನ್ನು ಮುಂತಿಳಿಸಿದನು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (2 ತಿಮೊಥೆಯ 3:1-5; ಮತ್ತಾಯ 24:14) ಆ ಪ್ರವಾದನೆಯು ಈಗ ನೆರವೇರುತ್ತಾ ಇದೆ. 234 ದೇಶಗಳಲ್ಲಿ ಸುಮಾರು ಅರುವತ್ತು ಲಕ್ಷ ಯೆಹೋವನ ಸಾಕ್ಷಿಗಳು, ಒಂದು ವರ್ಷದಲ್ಲಿ ನೂರು ಕೋಟಿಗಿಂತಲೂ ಹೆಚ್ಚು ತಾಸುಗಳನ್ನು, ದೇವರ ರಾಜ್ಯದ ಕುರಿತಾಗಿ ಬೇರೆಯವರಿಗೆ ತಿಳಿಸುವುದರಲ್ಲಿ ಕಳೆಯುತ್ತಾರೆ. ಆದುದರಿಂದ, ಲೋಕದ ಸುತ್ತಲೂ ಅವರ ಸುಮಾರು 90,000 ಸಭೆಗಳು ಒಟ್ಟುಗೂಡುವ ಆರಾಧನಾ ಸ್ಥಳಗಳನ್ನು ಸೂಕ್ತವಾಗಿಯೇ ರಾಜ್ಯ ಸಭಾಗೃಹ ಎಂದು ಕರೆಯಲಾಗುತ್ತದೆ. ಏಕೆಂದರೆ, ಆಗಮಿಸಲಿರುವ ಆ ಹೊಸ ಸರಕಾರದ ಕುರಿತಾಗಿ ಕಲಿಯಲಿಕ್ಕಾಗಿಯೇ ಜನರು ಅಲ್ಲಿ ಕೂಡಿಬರುತ್ತಾರೆ.

ಜೊತೆ ಅರಸರು

8, 9. (ಎ) ಕ್ರಿಸ್ತನ ಜೊತೆ ರಾಜರು ಎಲ್ಲಿಂದ ಕೊಂಡುಕೊಳ್ಳಲ್ಪಟ್ಟವರಾಗಿದ್ದಾರೆ? (ಬಿ) ರಾಜನ ಮತ್ತು ಅವನ ಜೊತೆ ರಾಜರ ಆಳ್ವಿಕೆಯ ವಿಷಯದಲ್ಲಿ ನಮಗೆ ಯಾವ ಭರವಸೆಯಿರಬಲ್ಲದು?

8 ದೇವರ ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಜೊತೆ ರಾಜರೂ ಇರುವರು. ಪ್ರಕಟನೆ 14:​1-4 ಇದನ್ನು ಮುಂತಿಳಿಸುತ್ತಾ, 1,44,000 ಮಂದಿ ‘ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟು’ ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವರೆಂದು ಹೇಳುತ್ತದೆ. ಈ ಗುಂಪಿನಲ್ಲಿ ಪುರುಷರೂ ಸ್ತ್ರೀಯರೂ ಇರುವರು. ಮತ್ತು ಇತರರು ಇವರ ಸೇವೆಯನ್ನು ಮಾಡುವ ಬದಲಿಗೆ, ಇವರೇ ನಮ್ರರಾಗಿ ದೇವರ ಮತ್ತು ಜೊತೆ ಮಾನವರ ಸೇವೆಯನ್ನು ಮಾಡುವರು. ಅವರ ಕುರಿತು ಹೀಗೆ ಹೇಳಲಾಗಿದೆ: “ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರುಷ ಆಳುವರು.” (ಪ್ರಕಟನೆ 20:6) ಇವರ ಸಂಖ್ಯೆಯು, ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗುವ, “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಮತ್ತು “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹ”ಕ್ಕೆ ಸೇರಿರುವವರಿಗಿಂತಲೂ ಬಹಳ ಚಿಕ್ಕದಾಗಿದೆ. ಈ ಮಹಾ ಸಮೂಹದವರಿಗೆ ಸ್ವರ್ಗೀಯ ನಿರೀಕ್ಷೆಯಿರದಿದ್ದರೂ, ಅವರು “ಹಗಲಿರುಳು” ದೇವರ “ಸೇವೆಮಾಡುತ್ತಾ” ಇರುತ್ತಾರೆ. (ಪ್ರಕಟನೆ 7:​9, 15) ಇವರು, ದೇವರ ಸ್ವರ್ಗೀಯ ರಾಜ್ಯದ ಪ್ರಜೆಗಳಾಗಿದ್ದು, ಹೊಸ ಭೂಮಿಯ ಮೂಲಭಾಗವಾಗಿದ್ದಾರೆ.​—⁠ಕೀರ್ತನೆ 37:29; ಯೋಹಾನ 10:⁠16.

9 ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವವರನ್ನು ಯೆಹೋವನೇ ಆಯ್ಕೆಮಾಡಿದನು. ಜೀವಿತದಲ್ಲಿ ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸಿರುವಂಥ ನಂಬಿಗಸ್ತ ಮನುಷ್ಯರನ್ನು ಆತನು ಆಯ್ಕೆಮಾಡಿದನು. ರಾಜರೂ ಯಾಜಕರೂ ಆಗಿ ಕಾರ್ಯನಡಿಸಲಿರುವ ಇವರು, ಈ ಭೂಮಿಯಲ್ಲಿರುವ ಜನರು ಅನುಭವಿಸಿರುವ ಪ್ರತಿಯೊಂದು ಸ್ಥಿತಿಯನ್ನು ಅನುಭವಿಸಿರುವರೆಂದೇ ಹೇಳಬಹುದು. ಯೇಸು ಸಹ ತಾನು “ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.” (ಇಬ್ರಿಯ 5:⁠8) ಅಪೊಸ್ತಲ ಪೌಲನು ಅವನ ಬಗ್ಗೆ ಹೇಳಿದ್ದು: “ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ.” (ಇಬ್ರಿಯ 4:15) ದೇವರ ನೀತಿಯ ಹೊಸ ಲೋಕದಲ್ಲಿ, ಪ್ರೀತಿಪರರಾದ ಮತ್ತು ಸಹಾನುಭೂತಿಯುಳ್ಳ ರಾಜರು ಮತ್ತು ಯಾಜಕರು ಜನರನ್ನು ಆಳುವರು ಎಂಬುದು ಎಷ್ಟು ಸಾಂತ್ವನೀಯವಾಗಿದೆ!

ಈ ರಾಜ್ಯವು ದೇವರ ಮೂಲ ಉದ್ದೇಶದ ಭಾಗವಾಗಿತ್ತೊ?

10. ಈ ಸ್ವರ್ಗೀಯ ರಾಜ್ಯವು, ದೇವರ ಮೂಲ ಉದ್ದೇಶದ ಭಾಗವಾಗಿರಲಿಲ್ಲ ಏಕೆ?

10 ದೇವರು ಆದಾಮಹವ್ವರನ್ನು ಸೃಷ್ಟಿಸಿದಾಗ, ಈ ಸ್ವರ್ಗೀಯ ರಾಜ್ಯವು ಆತನ ಮೂಲ ಉದ್ದೇಶದ ಭಾಗವಾಗಿತ್ತೊ? ಆದಿಕಾಂಡದಲ್ಲಿರುವ ಸೃಷ್ಟಿಯ ಕುರಿತಾದ ವೃತ್ತಾಂತದಲ್ಲಿ, ಮಾನವಕುಲವನ್ನು ಆಳಲಿರುವ ಒಂದು ರಾಜ್ಯದ ಕುರಿತಾಗಿ ಏನೂ ತಿಳಿಸಲ್ಪಟ್ಟಿಲ್ಲ. ಏಕೆಂದರೆ ಆಗ ಸ್ವತಃ ಯೆಹೋವನೇ ಅವರ ಅಧಿಪತಿಯಾಗಿದ್ದನು. ಮತ್ತು ಎಷ್ಟರ ವರೆಗೆ ಅವರು ಆತನಿಗೆ ವಿಧೇಯರಾಗಿರುತ್ತಿದ್ದರೊ, ಅಷ್ಟರ ವರೆಗೆ ಬೇರೆ ಯಾರೂ ಅವರ ಮೇಲೆ ಆಳ್ವಿಕೆ ನಡೆಸುವ ಅಗತ್ಯವಿರಲಿಲ್ಲ. ಯೆಹೋವನು ತನ್ನ ಸ್ವರ್ಗೀಯ ಜ್ಯೇಷ್ಠಪುತ್ರನ ಮೂಲಕ ಆದಾಮಹವ್ವರೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದನೆಂದು ಆದಿಕಾಂಡ 1ನೆಯ ಅಧ್ಯಾಯವು ತೋರಿಸುತ್ತದೆ. ಆ ವೃತ್ತಾಂತದಲ್ಲಿ ‘ದೇವರು ಅವರಿಗೆ ಅಂದನು’ ಮತ್ತು ‘ದೇವರು ಅವರಿಗೆ ಹೇಳಿದನು’ ಎಂಬಂತಹ ಅಭಿವ್ಯಕ್ತಿಗಳನ್ನು ಉಪಯೋಗಿಸಲಾಗಿದೆ.​—⁠ಆದಿಕಾಂಡ 1:​28, 29; ಯೋಹಾನ 1:⁠1.

11. ಮಾನವಕುಲದ ಆರಂಭವು ಹೇಗೆ ಪರಿಪೂರ್ಣವಾಗಿತ್ತು?

11 ಬೈಬಲ್‌ ಹೀಗನ್ನುತ್ತದೆ: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಆದಿಕಾಂಡ 1:31) ಏದೆನ್‌ ತೋಟದಲ್ಲಿದ್ದದ್ದೆಲ್ಲವೂ ನೂರು ಪ್ರತಿಶತ ಪರಿಪೂರ್ಣವಾಗಿತ್ತು. ಆದಾಮಹವ್ವರು ಒಂದು ಪ್ರಮೋದವನದಲ್ಲಿ ಜೀವಿಸುತ್ತಿದ್ದರು. ಅವರಿಗೆ ಪರಿಪೂರ್ಣ ಮನಸ್ಸುಗಳು ಮತ್ತು ದೇಹಗಳಿದ್ದವು. ಅವರು ತಮ್ಮ ನಿರ್ಮಾಣಿಕನೊಂದಿಗೆ ಸಂವಾದಮಾಡಬಹುದಿತ್ತು, ಮತ್ತು ಆತನು ಅವರೊಂದಿಗೆ ಸಂವಾದಮಾಡಬಹುದಿತ್ತು. ಮತ್ತು ಅವರು ನಂಬಿಗಸ್ತರಾಗಿ ಉಳಿಯುತ್ತಿದ್ದರೆ, ಪರಿಪೂರ್ಣರಾಗಿರುವ ಮಕ್ಕಳಿಗೆ ಅವರು ಜನ್ಮನೀಡುತ್ತಿದ್ದರು. ಹೀಗಿರುವುದರಿಂದ, ಒಂದು ಹೊಸ ಸ್ವರ್ಗೀಯ ಸರಕಾರದ ಅಗತ್ಯವೇ ಇರುತ್ತಿರಲಿಲ್ಲ.

12, 13. ಪರಿಪೂರ್ಣ ಮಾನವರ ಸಂಖ್ಯೆಯು ಹೆಚ್ಚಿದಾಗಲೂ ದೇವರು ಅವರೊಂದಿಗೆ ಸಂವಾದಮಾಡಲು ಶಕ್ತನಾಗಿರುತ್ತಿದ್ದನು ಎಂದು ಏಕೆ ಹೇಳಬಹುದು?

12 ಮಾನವ ಕುಟುಂಬವು ದೊಡ್ಡದಾದಂತೆ, ದೇವರು ಅವರೆಲ್ಲರೊಂದಿಗೆ ಹೇಗೆ ಸಂವಾದ ಮಾಡಲಿದ್ದನು? ಆಕಾಶದಲ್ಲಿರುವ ನಕ್ಷತ್ರಗಳನ್ನು ಪರಿಗಣಿಸಿರಿ. ಅವುಗಳು ಆಕಾಶಗಂಗೆಗಳೆಂದು ಕರೆಯಲ್ಪಡುವ ದ್ವೀಪ ವಿಶ್ವಗಳಾಗಿ ಗುಂಪುಗೂಡಿವೆ. ಕೆಲವು ಆಕಾಶಗಂಗೆಗಳಲ್ಲಿ ನೂರು ಕೋಟಿಯಷ್ಟು ನಕ್ಷತ್ರಗಳಿವೆ. ಬೇರೆ ಆಕಾಶಗಂಗೆಗಳಲ್ಲಿ ಸುಮಾರು ಒಂದು ಲಕ್ಷ ಕೋಟಿ ನಕ್ಷತ್ರಗಳಿವೆ. ಮತ್ತು ವಿಜ್ಞಾನಿಗಳ ಅಂದಾಜಿಗನುಸಾರ, ಅವರು ನೋಡಸಾಧ್ಯವಿರುವ ವಿಶ್ವದಲ್ಲಿ, ಅಂತಹ ಸುಮಾರು ಹತ್ತು ಸಾವಿರ ಕೋಟಿ ಆಕಾಶಗಂಗೆಗಳಿವೆ! ಆದರೂ, ಅವುಗಳ ಸೃಷ್ಟಿಕರ್ತನು ಹೀಗನ್ನುತ್ತಾನೆ: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.”​—⁠ಯೆಶಾಯ 40:⁠26.

13 ಈ ಎಲ್ಲ ಆಕಾಶಸ್ಥ ಕಾಯಗಳ ಕುರಿತಾದ ಎಲ್ಲ ವಿಷಯವೂ ದೇವರಿಗೆ ತಿಳಿದಿರುವುದರಿಂದ, ಅವುಗಳಿಗಿಂತ ಎಷ್ಟೋ ಚಿಕ್ಕ ಸಂಖ್ಯೆಯಲ್ಲಿರುವ ಮನುಷ್ಯರ ಬಗ್ಗೆ ತಿಳಿದಿರುವುದು ಖಂಡಿತವಾಗಿಯೂ ಆತನಿಗೆ ಒಂದು ಸಮಸ್ಯೆಯಾಗಿರಲಿಕ್ಕಿಲ್ಲ. ಈಗಲೂ, ಲಕ್ಷಾಂತರ ಸೇವಕರು ಆತನಿಗೆ ದಿನಾಲೂ ಪ್ರಾರ್ಥನೆಮಾಡುತ್ತಾರೆ. ಆ ಪ್ರಾರ್ಥನೆಗಳು ತತ್‌ಕ್ಷಣವೇ ದೇವರನ್ನು ತಲಪುತ್ತವೆ. ಹೀಗಿರುವುದರಿಂದ, ಎಲ್ಲ ಪರಿಪೂರ್ಣ ಮನುಷ್ಯರೊಂದಿಗೆ ಸಂವಾದಮಾಡುವುದು ಆತನಿಗೆ ಒಂದು ಸಮಸ್ಯೆಯಾಗಿರುತ್ತಿರಲಿಲ್ಲ. ಅವರೆಲ್ಲರ ಬಗ್ಗೆ ತಿಳಿದುಕೊಳ್ಳಲು ಆತನಿಗೆ ಒಂದು ಸ್ವರ್ಗೀಯ ರಾಜ್ಯದ ಅಗತ್ಯವಿರುತ್ತಿರಲಿಲ್ಲ. ಯೆಹೋವನು ಅಧಿಪತಿಯಾಗಿ ಆಳುವುದು, ಮನುಷ್ಯರು ಆತನೊಂದಿಗೆ ನೇರವಾಗಿ ಮಾತಾಡಲು ಶಕ್ತರಾಗಿರುವುದು, ಮತ್ತು ಒಂದು ಪ್ರಮೋದವನ ಭೂಮಿಯಲ್ಲಿ ಸಾಯದೇ, ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನು ಪಡೆದುಕೊಂಡಿರುವುದು​—⁠ಇದೆಲ್ಲವೂ ಎಂತಹ ಅದ್ಭುತವಾದ ಏರ್ಪಾಡು!

“ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ”

14. ಮನುಷ್ಯರಿಗೆ ಎಂದೆಂದಿಗೂ ಯೆಹೋವನ ಆಳ್ವಿಕೆಯು ಏಕೆ ಅಗತ್ಯವಾಗಿದೆ?

14 ಒಂದುವೇಳೆ ಮಾನವರು ಪರಿಪೂರ್ಣರಾಗಿರುತ್ತಿದ್ದರೂ ಅವರಿಗೆ ಎಂದೆಂದಿಗೂ ಯೆಹೋವನ ಆಳ್ವಿಕೆಯು ಬೇಕಾಗುತ್ತಿತ್ತು. ಏಕೆ? ಏಕೆಂದರೆ ಯೆಹೋವನು ಅವರನ್ನು ಸೃಷ್ಟಿಸಿದಾಗ, ಅವರು ತನ್ನ ಆಳ್ವಿಕೆಯಿಂದ ಸ್ವತಂತ್ರರಾಗಿ, ಯಶಸ್ವಿಗಳಾಗುವ ಸಾಮರ್ಥ್ಯವನ್ನು ಆತನು ಅವರಿಗೆ ಕೊಟ್ಟಿರಲಿಲ್ಲ. ಇದು ಇಡೀ ಮಾನವಜಾತಿಗೇ ಅನ್ವಯವಾಗುವಂತಹ ನಿಯಮವಾಗಿದೆ. ಮತ್ತು ಇದನ್ನು ಪ್ರವಾದಿಯಾದ ಯೆರೆಮೀಯನು ಸಹ ಒಪ್ಪಿಕೊಂಡನು. ಅವನಂದದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು. ಯೆಹೋವನೇ, ನನ್ನನ್ನು ಶಿಕ್ಷಿಸು.” (ಯೆರೆಮೀಯ 10:23, 24) ಯೆಹೋವನ ಆಳ್ವಿಕೆಯಿಲ್ಲದೆ ಸಮಾಜವನ್ನು ಯಶಸ್ವಿಕರವಾಗಿ ನಡೆಸಬಲ್ಲೆವೆಂದು ಮನುಷ್ಯರು ನೆನಸುವುದಾದರೆ, ಅದೊಂದು ದೊಡ್ಡ ತಪ್ಪು. ಏಕೆಂದರೆ ಹಾಗೆ ಮಾಡುವಂತಹ ಸಾಮರ್ಥ್ಯವೇ ಅವರಲ್ಲಿಲ್ಲ. ಯೆಹೋವನ ಆಳ್ವಿಕೆಯಿಂದ ಸ್ವತಂತ್ರರಾಗುವುದರಿಂದ, ಬರಿ ಸ್ವಾರ್ಥ, ದ್ವೇಷ, ಕ್ರೂರತನ, ಹಿಂಸಾಚಾರ, ಯುದ್ಧಗಳು ಮತ್ತು ಮರಣವೇ ಫಲಿಸುವುದು. ಹೀಗೆ ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡುವನು.’​—⁠ಪ್ರಸಂಗಿ 8:⁠9.

15. ನಮ್ಮ ಪ್ರಥಮ ಹೆತ್ತವರು ಮಾಡಿದಂತಹ ತಪ್ಪು ಆಯ್ಕೆಯ ಫಲಿತಾಂಶಗಳೇನು?

15 ಆದರೆ ದುಃಖಕರ ಸಂಗತಿಯೇನೆಂದರೆ, ನಮ್ಮ ಪ್ರಥಮ ಹೆತ್ತವರು ತಮ್ಮನ್ನು ದೇವರು ಆಳುವ ಆವಶ್ಯಕತೆಯಿಲ್ಲವೆಂಬ ನಿರ್ಣಯವನ್ನು ಮಾಡಿದರು. ಅವರು ದೇವರಿಂದ ಸ್ವತಂತ್ರರಾಗಿ ಜೀವಿಸುವ ಆಯ್ಕೆಯನ್ನು ಮಾಡಿದರು. ಪರಿಣಾಮವಾಗಿ, ದೇವರು ಅವರನ್ನು ಆ ಪರಿಪೂರ್ಣ ಸ್ಥಿತಿಯಲ್ಲಿ ಇಡಲಿಲ್ಲ. ಆಗ ಅವರು, ವಿದ್ಯುಚ್ಛಕ್ತಿಯ ಮೂಲದಿಂದ ಬೇರ್ಪಡಿಸಲ್ಪಟ್ಟಿರುವ ಒಂದು ವಿದ್ಯುತ್‌ ಉಪಕರಣದಂತಾದರು. ಕ್ರಮೇಣ, ಅವರು ನಿಧಾನಗೊಂಡು ನಿಂತುಬಿಟ್ಟರು, ಅಂದರೆ ಸತ್ತುಹೋದರು. ಅವರು ಒಂದು ದೋಷಪೂರ್ಣ ವಿನ್ಯಾಸದಂತಾದರು, ಮತ್ತು ಅವರು ತಮ್ಮ ಆ ಸ್ಥಿತಿಯನ್ನು ಬಿಟ್ಟು ಬೇರೇನನ್ನೂ ತಮ್ಮ ಸಂತತಿಯವರಿಗೆ ದಾಟಿಸಲು ಶಕ್ತರಾಗಿರಲಿಲ್ಲ. (ರೋಮಾಪುರ 5:12) “ನಮಗೆ ಶರಣನಾದ ದೇವರು [ಯೆಹೋವನು] ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; . . . ಆದರೆ ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷವು.” (ಧರ್ಮೋಪದೇಶಕಾಂಡ 32:4, 5) ಆದಾಮಹವ್ವರನ್ನು ಸೈತಾನನೆಂಬ ಆತ್ಮಜೀವಿಯು ಪ್ರಭಾವಿಸಿದನೆಂಬುದೇನೋ ನಿಜ, ಆದರೆ ಅವರಿಗೆ ಪರಿಪೂರ್ಣ ಮನಸ್ಸು ಮತ್ತು ದೇಹಗಳಿದ್ದದರಿಂದ, ಅವರು ಅವನ ತಪ್ಪು ಸಲಹೆಗಳನ್ನು ತಳ್ಳಿಹಾಕಬಹುದಿತ್ತು.​—⁠ಆದಿಕಾಂಡ 3:​1-19; ಯಾಕೋಬ 4:⁠7.

16. ಮನುಷ್ಯರು ದೇವರಿಂದ ಸ್ವತಂತ್ರರಾಗಿರುವುದರಿಂದ ಏನಾಗುತ್ತದೆಂಬುದಕ್ಕೆ ಇತಿಹಾಸವು ಯಾವ ಪುರಾವೆಯನ್ನು ಕೊಡುತ್ತದೆ?

16 ದೇವರಿಂದ ಸ್ವತಂತ್ರರಾಗಿರುವುದರಿಂದ ಏನಾಗುತ್ತದೆಂಬುದಕ್ಕೆ ಇತಿಹಾಸವು ಬಹಳಷ್ಟು ಪುರಾವೆಯನ್ನು ಕೊಡುತ್ತದೆ. ಸಾವಿರಾರು ವರ್ಷಗಳಿಂದ ಜನರು ಪ್ರತಿಯೊಂದು ರೀತಿಯ ಮಾನವ ಸರಕಾರವನ್ನು, ಪ್ರತಿಯೊಂದು ರೀತಿಯ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಪ್ರಯತ್ನಿಸಿನೋಡಿದ್ದಾರೆ. ಇದೆಲ್ಲವನ್ನೂ ಮಾಡಿಯೂ, ದುಷ್ಟತನವು ‘ಹೆಚ್ಚುತ್ತಾ ಹೋಗುತ್ತಿದೆ.’ (2 ತಿಮೊಥೆಯ 3:13) 20ನೆಯ ಶತಮಾನವು ಈ ಮಾತುಗಳ ಸತ್ಯತೆಯನ್ನು ರುಜುಪಡಿಸಿತು. ಇತಿಹಾಸದಲ್ಲಿ ಹಿಂದೆಂದೂ ನೋಡಿರದಷ್ಟು ಕ್ರೂರವಾದ ಹಗೆ ಹಿಂಸಾಚಾರ, ಯುದ್ಧಗಳು, ಹಸಿವು, ಬಡತನ, ಮತ್ತು ಕಷ್ಟಾನುಭವಗಳಿಂದ ಆ ಶತಮಾನವು ತುಂಬಿತ್ತು. ಮತ್ತು ಈ ಶತಮಾನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಮಾಡಲ್ಪಟ್ಟಿರುವುದಾದರೂ, ಒಂದಲ್ಲ ಒಂದು ದಿನ ಎಲ್ಲರೂ ಸಾಯುತ್ತಾರೆ. (ಪ್ರಸಂಗಿ 9:​5, 10) ಮನುಷ್ಯರು ತಮ್ಮ ಸ್ವಂತ ಹೆಜ್ಜೆಗಳನ್ನಿಡಲು ಪ್ರಯತ್ನಿಸುವ ಮೂಲಕ, ತಮ್ಮನ್ನು ಸೈತಾನನಿಗೆ ಮತ್ತು ಅವನ ದೆವ್ವಗಳಿಗೆ ಬೇಟೆಯಾಗಿ ನೀಡಿಕೊಂಡಿದ್ದಾರೆ. ಎಷ್ಟರ ಮಟ್ಟಿಗೆಂದರೆ, ಬೈಬಲ್‌ ಸೈತಾನನನ್ನು “ಈ ಪ್ರಪಂಚದ ದೇವರು” ಎಂದು ಕರೆಯುತ್ತದೆ.​—⁠2 ಕೊರಿಂಥ 4:⁠4.

ಇಚ್ಛಾ ಸ್ವಾತಂತ್ರ್ಯವೆಂಬ ವರದಾನ

17. ದೇವರು ಕೊಟ್ಟಿರುವ ಇಚ್ಛಾ ಸ್ವಾತಂತ್ರ್ಯದ ವರದಾನವು ಹೇಗೆ ಉಪಯೋಗಿಸಲ್ಪಡಲಿತ್ತು?

17 ಆದರೆ, ಮನುಷ್ಯರು ತಮ್ಮ ಇಷ್ಟದಂತೆ ನಡೆದುಕೊಳ್ಳಲು ಯೆಹೋವನು ಏಕೆ ಬಿಟ್ಟನು? ಏಕೆಂದರೆ ಆತನು ಅವರನ್ನು ಸೃಷ್ಟಿಸಿದಾಗ, ಇಚ್ಛಾ ಸ್ವಾತಂತ್ರ್ಯದ ಅದ್ಭುತವಾದ ವರದಾನವನ್ನು ಅವರಿಗೆ ಕೊಟ್ಟನು. ಅಂದರೆ, ಆಯ್ಕೆಯನ್ನು ಮಾಡುವ ಸ್ವತಂತ್ರ ಶಕ್ತಿ. “ಯೆಹೋವನ ಆತ್ಮವು ಎಲ್ಲಿದೆಯೊ ಅಲ್ಲಿ ಸ್ವಾತಂತ್ರ್ಯವಿದೆ” ಎಂದು ಅಪೊಸ್ತಲ ಪೌಲನು ಹೇಳಿದನು. (2 ಕೊರಿಂಥ 3:17) ಆದುದರಿಂದ ಯಾರೊಬ್ಬನೂ ಒಬ್ಬ ಯಂತ್ರಮಾನವನಂತಿರುವುದಿಲ್ಲ. ಅಂದರೆ, ಅವನು ಏನು ಹೇಳಬೇಕು ಅಥವಾ ಏನು ಮಾಡಬೇಕೆಂಬ ಪ್ರತಿಯೊಂದೂ ವಿಷಯವನ್ನು ಇನ್ನೊಬ್ಬನು ನಿರ್ಣಯಿಸಿ ನಿಯಂತ್ರಿಸುವುದಿಲ್ಲ. ಆದರೆ, ಅವನಿಗೆ ಕೊಡಲ್ಪಟ್ಟಿರುವ ಇಚ್ಛಾ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಉಪಯೋಗಿಸುವಂತೆ ಯೆಹೋವನು ಅಪೇಕ್ಷಿಸಿದನು. ದೇವರ ಚಿತ್ತವನ್ನು ಮಾಡುವ ಮತ್ತು ಆತನಿಗೆ ಅಧೀನರಾಗಿ ಉಳಿಯುವುದರ ಬುದ್ಧಿವಂತಿಕೆಯನ್ನು ನೋಡುವಂತೆ ನಿರೀಕ್ಷಿಸಿದನು. (ಗಲಾತ್ಯ 5:13) ಹೀಗೆ ಆ ಸ್ವಾತಂತ್ರ್ಯವು ಸಂಪೂರ್ಣವಾದದ್ದಾಗಿರಲಿಲ್ಲ. ಯಾಕೆಂದರೆ ಅದರ ಪರಿಣಾಮ ಕೇವಲ ಅವ್ಯವಸ್ಥೆಯೇ ಆಗಿದೆ. ಅದಕ್ಕೆ ಬದಲಾಗಿ, ದೇವರ ಪ್ರಯೋಜನಕರ ನಿಯಮಗಳ ಮೇರೆಯೊಳಗೆ ಅದು ನಿಯಂತ್ರಿಸಲ್ಪಡಬೇಕಿತ್ತು.

18. ಮನುಷ್ಯನು ತನ್ನ ಇಚ್ಛಾ ಸ್ವಾತಂತ್ರ್ಯವನ್ನು ಉಪಯೋಗಿಸುವಂತೆ ಬಿಡುವ ಮೂಲಕ ದೇವರು ಏನನ್ನು ತೋರ್ಪಡಿಸಿದ್ದಾನೆ?

18 ಮಾನವ ಕುಟುಂಬವು ತನ್ನ ಇಷ್ಟದ ಪ್ರಕಾರ ನಡೆಯುವಂತೆ ಬಿಡುವ ಮೂಲಕ, ನಮಗೆ ದೇವರ ಆಳ್ವಿಕೆಯ ಅಗತ್ಯವಿದೆಯೆಂಬುದನ್ನು ಆತನು ಸುಸ್ಪಷ್ಟವಾಗಿ ತೋರ್ಪಡಿಸಿದ್ದಾನೆ. ಆತನ ಪರಮಾಧಿಕಾರವೇ, ಆತನ ಆಳ್ವಿಕೆಯ ವಿಧಾನವೊಂದೇ ಸರಿಯಾದದ್ದು. ಇದರಿಂದಲೇ ತುಂಬ ಸಂತೋಷ, ತೃಪ್ತಿ ಮತ್ತು ಸಮೃದ್ಧಿಯು ಫಲಿಸುತ್ತದೆ. ಏಕೆಂದರೆ, ನಾವು ಯೆಹೋವನ ನಿಯಮಗಳಿಗೆ ಹೊಂದಿಕೆಯಲ್ಲಿ ಕೆಲಸಮಾಡುವಾಗಲೇ ನಮ್ಮ ಮನಸ್ಸುಗಳು ಮತ್ತು ದೇಹಗಳು ಅತ್ಯುತ್ತಮವಾಗಿ ಕಾರ್ಯನಡಿಸುವಂತೆ ವಿನ್ಯಾಸಿಸಲ್ಪಟ್ಟಿದ್ದವು. ಆದುದರಿಂದಲೇ ಹೀಗೆ ಹೇಳಲಾಗಿದೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” (ಯೆಶಾಯ 48:17) ದೇವರ ನಿಯಮಗಳ ಸೀಮೆಯೊಳಗೆ ಉಪಯೋಗಿಸಲ್ಪಡುವ ಸ್ವತಂತ್ರ ಆಯ್ಕೆಯು ನಿರ್ಬಂಧದಾಯಕವಾಗಿರುತ್ತಿರಲಿಲ್ಲ. ಬದಲಾಗಿ ಅದರಿಂದಾಗಿ ಮನುಷ್ಯರು, ವೈವಿಧ್ಯಮಯ ಆಹಾರ, ಮನೆಗಳು, ಕಲೆ ಮತ್ತು ಸಂಗೀತದ ಆನಂದವನ್ನು ಪಡೆದುಕೊಳ್ಳಸಾಧ್ಯವಿತ್ತು. ಇಚ್ಛಾ ಸ್ವಾತಂತ್ರ್ಯವು ಸರಿಯಾಗಿ ಉಪಯೋಗಿಸಲ್ಪಡುತ್ತಿದ್ದಲ್ಲಿ, ಅದು ಭೂಪ್ರಮೋದವನದಲ್ಲಿ ಒಂದು ಅದ್ಭುತಕರವಾದ, ಸದಾ ಸಂತಸದ ಜೀವಿತದಲ್ಲಿ ಫಲಿಸುತ್ತಿತ್ತು.

19. ಮನುಷ್ಯರು ತನ್ನೊಂದಿಗೆ ರಾಜಿಮಾಡಿಕೊಳ್ಳಲು ಸಾಧ್ಯವಾಗುವಂತೆ ದೇವರು ಯಾವ ಮಾಧ್ಯಮವನ್ನು ಉಪಯೋಗಿಸುತ್ತಾನೆ?

19 ಆದರೆ ಮನುಷ್ಯರು ತಪ್ಪು ಆಯ್ಕೆಯನ್ನು ಮಾಡಿದರು. ಮತ್ತು ಇದರಿಂದಾಗಿ ಅವರು ಯೆಹೋವನಿಂದ ದೂರಸರಿದರು, ಅಪರಿಪೂರ್ಣರಾದರು, ಅವನತಿ ಹೊಂದುತ್ತಾ ಹೋದರು ಮತ್ತು ಸತ್ತರು. ಆದುದರಿಂದ, ಅವರನ್ನು ಈ ವಿಷಾದಕರವಾದ ಸ್ಥಿತಿಯಿಂದ ಹೊರತಂದು, ದೇವರ ಮಕ್ಕಳೋಪಾದಿ ಸರಿಯಾದ ಸಂಬಂಧದೊಳಗೆ ತರುವ ಅಗತ್ಯವಿತ್ತು. ಈ ಕೆಲಸಕ್ಕಾಗಿ ದೇವರು ಉಪಯೋಗಿಸಿದ ಮಾಧ್ಯಮವು ಈ ರಾಜ್ಯವಾಗಿತ್ತು, ಮತ್ತು ಅವರನ್ನು ವಿಮೋಚಿಸುವವನು ಯೇಸು ಕ್ರಿಸ್ತನಾಗಿದ್ದನು. (ಯೋಹಾನ 3:16) ಈ ಏರ್ಪಾಡಿನ ಮೂಲಕ, ಯೇಸುವಿನ ದೃಷ್ಟಾಂತದ ದುಂದುಗಾರ ಮಗನಂತೆ ನಿಜವಾಗಿ ಪಶ್ಚಾತ್ತಾಪಪಡುವ ವ್ಯಕ್ತಿಗಳು, ದೇವರೊಂದಿಗೆ ರಾಜಿಮಾಡಿಕೊಂಡು ಆತನ ಮಕ್ಕಳೋಪಾದಿ ಪುನಃ ಸ್ವೀಕರಿಸಲ್ಪಡುವರು.​—⁠ಲೂಕ 15:​11-24; ರೋಮಾಪುರ 8:21; 2 ಕೊರಿಂಥ 6:⁠18.

20. ಆ ರಾಜ್ಯವು ದೇವರ ಉದ್ದೇಶವನ್ನು ಹೇಗೆ ಪೂರೈಸಲಿದೆ?

20 ಯೆಹೋವನ ಚಿತ್ತವು ಖಂಡಿತವಾಗಿಯೂ ಭೂಮಿಯ ಮೇಲೆ ನೆರವೇರಲಿದೆ. (ಯೆಶಾಯ 14:​24, 27; 55:11) ಕ್ರಿಸ್ತನು ರಾಜನಾಗಿರುವ ರಾಜ್ಯದ ಮೂಲಕ ದೇವರು, ನಮ್ಮ ಪರಮಾಧಿಕಾರಿಯಾಗಿರುವ ತನ್ನ ಹಕ್ಕನ್ನು ಪೂರ್ಣವಾಗಿ ನಿರ್ದೋಷೀಕರಿಸುವನು (ಸಮರ್ಥಿಸುವನು ಇಲ್ಲವೇ ರುಜುಪಡಿಸುವನು). ಆ ರಾಜ್ಯವು, ಈ ಭೂಮಿಯ ಮೇಲಿನ ಮಾನವ ಮತ್ತು ದೆವ್ವಗಳ ಆಳ್ವಿಕೆಯನ್ನು ಅಂತ್ಯಗೊಳಿಸುವುದು. ಮತ್ತು ಕೇವಲ ಅದೊಂದೇ ರಾಜ್ಯವು ಸ್ವರ್ಗದಿಂದ ಸಾವಿರ ವರ್ಷಗಳ ವರೆಗೆ ಆಳುವುದು. (ರೋಮಾಪುರ 16:20; ಪ್ರಕಟನೆ 20:​1-6) ಆದರೆ ಆ ಸಮಯದಲ್ಲಿ, ಯೆಹೋವನ ಆಳುವ ವಿಧಾನವು ಶ್ರೇಷ್ಠವಾದದ್ದೆಂಬುದು ಹೇಗೆ ಪ್ರದರ್ಶಿಸಲ್ಪಡುವುದು? ಮತ್ತು ಆ ಸಾವಿರ ವರ್ಷಗಳ ನಂತರ, ಆ ರಾಜ್ಯದ ಪಾತ್ರವೇನು? ಈ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

ಪುನರ್ವಿಮರ್ಶೆಗಾಗಿ ವಿಷಯಗಳು

• ಬೈಬಲಿನ ಮುಖ್ಯವಿಷಯ ಏನಾಗಿದೆ?

• ಭೂಮಿಯ ಹೊಸ ಆಳ್ವಿಕೆಯಲ್ಲಿ ಯಾರು ಇರುವರು?

• ದೇವರಿಂದ ಸ್ವತಂತ್ರವಾಗಿರುವ ಮಾನವಾಳ್ವಿಕೆಯು ಏಕೆ ಎಂದಿಗೂ ಸಫಲವಾಗದು?

• ಇಚ್ಛಾ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸತಕ್ಕದ್ದು?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ಯೇಸುವಿನ ಬೋಧನೆಯಲ್ಲಿ, ರಾಜ್ಯದ ಮೂಲಕ ದೇವರು ನಡೆಸಲಿರುವ ಆಳ್ವಿಕೆಗೆ ಮಹತ್ವವು ಕೊಡಲ್ಪಟ್ಟಿತ್ತು

[ಪುಟ 12ರಲ್ಲಿರುವ ಚಿತ್ರಗಳು]

ಪ್ರತಿಯೊಂದು ದೇಶದಲ್ಲಿಯೂ ಯೆಹೋವನ ಸಾಕ್ಷಿಗಳ ಮುಖ್ಯ ಬೋಧನೆಯು ದೇವರ ರಾಜ್ಯವಾಗಿದೆ

[ಪುಟ 14ರಲ್ಲಿರುವ ಚಿತ್ರಗಳು]

ದೇವರಿಂದ ಸ್ವತಂತ್ರರಾಗುವಾಗ ಸಿಗುವ ಕೆಟ್ಟ ಫಲಿತಾಂಶಗಳ ಪುರಾವೆಯನ್ನು ಇತಿಹಾಸವು ಒದಗಿಸುತ್ತದೆ

[ಕೃಪೆ]

WWI soldiers: U.S. National Archives photo; concentration camp: Oświęcim Museum; child: UN PHOTO 186156/J. Isaac