ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ನೈತಿಕವಾಗಿ ಶುದ್ಧರಾಗಿ ಉಳಿಯಸಾಧ್ಯವಿದೆ

ನೀವು ನೈತಿಕವಾಗಿ ಶುದ್ಧರಾಗಿ ಉಳಿಯಸಾಧ್ಯವಿದೆ

ನೀವು ನೈತಿಕವಾಗಿ ಶುದ್ಧರಾಗಿ ಉಳಿಯಸಾಧ್ಯವಿದೆ

“ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.”​—⁠1 ಯೋಹಾನ 5:⁠3.

1. ಇಂದು ಜನರ ನಡತೆಯಲ್ಲಿ ಯಾವ ಭಿನ್ನತೆಯನ್ನು ನೋಡಸಾಧ್ಯವಿದೆ?

ದೇವರ ಸೇವೆಯನ್ನು ಮಾಡದಂತಹ ಜನರ ನಡತೆಯು, ದೇವಜನರ ನಡತೆಗಿಂತ ತೀರ ಭಿನ್ನವಾಗಿರುವಂತಹ ಒಂದು ಸಮಯದ ಕುರಿತು ಮುಂತಿಳಿಸುವಂತೆ, ಬಹಳ ಸಮಯದ ಹಿಂದೆಯೇ ಪ್ರವಾದಿಯಾದ ಮಲಾಕಿಯನನ್ನು ಪ್ರೇರೇಪಿಸಲಾಗಿತ್ತು. ಆ ಪ್ರವಾದಿಯು ಬರೆದುದು: “ಆಗ ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ.” (ಮಲಾಕಿಯ 3:18) ಈ ಪ್ರವಾದನೆಯು ಇಂದು ನೆರವೇರುತ್ತಾ ಇದೆ. ನೈತಿಕ ಶುದ್ಧತೆಯನ್ನು ಅಗತ್ಯಪಡಿಸುವಂತಹ ಆಜ್ಞೆಗಳೊಂದಿಗೆ ದೇವರ ಎಲ್ಲ ಆಜ್ಞೆಗಳನ್ನು ಕೈಕೊಂಡು ನಡೆಯುವುದು, ವಿವೇಕಭರಿತವೂ ಯೋಗ್ಯವೂ ಆದ ಮಾರ್ಗಕ್ರಮವಾಗಿದೆ. ಆದರೂ, ಇದು ಅಷ್ಟೊಂದು ಸುಲಭವಾದ ವಿಷಯವಲ್ಲ. ಸಕಾರಣದಿಂದಲೇ, ರಕ್ಷಣೆಯನ್ನು ಪಡೆಯಲಿಕ್ಕಾಗಿ ಕ್ರೈಸ್ತರು ತುಂಬ ಕಷ್ಟಪಟ್ಟು ಹೆಣಗಾಡಬೇಕು ಎಂದು ಯೇಸು ಹೇಳಿದನು.​—⁠ಲೂಕ 13:​23, 24.

2. ಯಾವ ಲೌಕಿಕ ಒತ್ತಡಗಳು ನೈತಿಕವಾಗಿ ಶುದ್ಧರಾಗಿ ಉಳಿಯುವುದನ್ನು ಕೆಲವರಿಗೆ ಕಷ್ಟಕರವನ್ನಾಗಿ ಮಾಡುತ್ತವೆ?

2 ನೈತಿಕವಾಗಿ ಶುದ್ಧರಾಗಿ ಉಳಿಯುವುದು ಏಕೆ ಕಷ್ಟಕರವಾದದ್ದಾಗಿದೆ? ಒಂದು ಕಾರಣವೇನೆಂದರೆ, ಲೌಕಿಕ ಒತ್ತಡಗಳೇ. ಮನೋರಂಜನೆಯ ಉದ್ಯಮವು ಕಾನೂನುಬಾಹಿರ ಲೈಂಗಿಕತೆಯನ್ನು, ಮನಮೋಹಕವಾದದ್ದಾಗಿ, ಮಜಾ ನೀಡುವಂತಹದ್ದಾಗಿ, ಹಾಗೂ ವಯಸ್ಕರ ಲಕ್ಷಣವಾಗಿ ಚಿತ್ರಿಸುತ್ತದೆ. ಆದರೆ ಅದು ಕಾನೂನುಬಾಹಿರ ಲೈಂಗಿಕತೆಯ ಹಾನಿಕರ ಪರಿಣಾಮಗಳನ್ನು ಉದ್ದೇಶಪೂರ್ವಕವಾಗಿ ಅಲಕ್ಷಿಸುತ್ತದೆ. (ಎಫೆಸ 4:​17-19) ಮನೋರಂಜನೆಯ ಉದ್ಯಮವು ಚಿತ್ರಿಸುವ ಆಪ್ತ ಸಂಬಂಧಗಳಲ್ಲಿ ಹೆಚ್ಚಿನವು, ಅವಿವಾಹಿತ ಜೋಡಿಗಳ ನಡುವಿನ ಸಂಬಂಧಗಳಾಗಿವೆ. ಕೆಲವೊಮ್ಮೆ ಚಲನ ಚಿತ್ರಗಳು ಹಾಗೂ ಟೆಲಿವಿಷನ್‌ ಕಾರ್ಯಕ್ರಮಗಳು, ಲೈಂಗಿಕ ಸಂಬಂಧಗಳನ್ನು ಯಾವುದೇ ಕಟ್ಟುಪಾಡುಗಳಿಲ್ಲದಂತಹ ಸನ್ನಿವೇಶದಲ್ಲಿ ಚಿತ್ರಿಸಿ ತೋರಿಸುತ್ತವೆ. ಸಾಮಾನ್ಯವಾಗಿ, ಇಂತಹ ಸಂಬಂಧಗಳಲ್ಲಿ ಆದರಣೀಯತೆ ಹಾಗೂ ಪರಸ್ಪರ ಗೌರವವು ಇರುವುದಿಲ್ಲ. ಅನೇಕರು ಬಾಲ್ಯಾವಸ್ಥೆಯಿಂದಲೂ ಇಂತಹ ವಿಷಯಗಳನ್ನು ಪದೇ ಪದೇ ಕೇಳಿಸಿಕೊಂಡಿರಬಹುದು. ಅಷ್ಟುಮಾತ್ರವಲ್ಲ, ಇಂದಿನ ಸ್ವಚ್ಛಂದ ನೈತಿಕ ಶೈಲಿಯನ್ನು ಅನುಸರಿಸುವಂತೆ ಸಮಾನಸ್ಥರಿಂದ ಸಹ ಪ್ರಬಲವಾದ ಒತ್ತಡ ಬರುತ್ತದೆ. ಮತ್ತು ಯಾರು ಈ ರೀತಿಯಲ್ಲಿ ನಡೆಯುವುದಿಲ್ಲವೋ ಅಂಥವರು ಕೆಲವೊಮ್ಮೆ ಗೇಲಿಮಾಡಲ್ಪಡುತ್ತಾರೆ ಅಥವಾ ನಿಂದಿಸಲ್ಪಡುತ್ತಾರೆ.​—⁠1 ಪೇತ್ರ 4:⁠4.

3. ಲೋಕದಲ್ಲಿರುವ ಅನೇಕರು ಅನೈತಿಕತೆಯಲ್ಲಿ ಏಕೆ ಒಳಗೂಡುತ್ತಿದ್ದಾರೆ ಎಂಬುದಕ್ಕಿರುವ ಕೆಲವು ಕಾರಣಗಳು ಯಾವುವು?

3 ಆಂತರಿಕ ಒತ್ತಡವು ಸಹ, ನೈತಿಕವಾಗಿ ಶುದ್ಧರಾಗಿ ಉಳಿಯುವುದನ್ನು ಕಷ್ಟಕರವಾಗಿ ಮಾಡುತ್ತದೆ. ಯೆಹೋವನು ಮಾನವರನ್ನು ಲೈಂಗಿಕ ಬಯಕೆಗಳೊಂದಿಗೆ ಸೃಷ್ಟಿಸಿದ್ದಾನೆ, ಮತ್ತು ಆ ಬಯಕೆಗಳು ಕೆಲವೊಮ್ಮೆ ತುಂಬ ಪ್ರಬಲವಾಗಿರಸಾಧ್ಯವಿದೆ. ನಾವು ಯೋಚಿಸುವ ವಿಷಯಗಳಿಗೂ ನಮ್ಮ ಬಯಕೆಗಳಿಗೂ ಸಂಬಂಧವಿದೆ. ಮತ್ತು ಅನೈತಿಕತೆಯು ಯೆಹೋವನ ಆಲೋಚನೆಗಳಿಗೆ ಅಸಂಗತವಾಗಿರುವಂತಹ ಆಲೋಚನೆಗೆ ಸಂಬಂಧಿಸಿದ್ದಾಗಿದೆ. (ಯಾಕೋಬ 1:​14, 15) ಉದಾಹರಣೆಗೆ, ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಾಶಿಸಲ್ಪಟ್ಟ ಇತ್ತೀಚಿನ ಒಂದು ಸಮೀಕ್ಷೆಗನುಸಾರ, ಪ್ರಥಮ ಬಾರಿ ಸಂಭೋಗದಲ್ಲಿ ಒಳಗೂಡಿದಂತಹ ಅನೇಕರು, ಲೈಂಗಿಕ ಸಂಬಂಧವು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲದಿಂದಾಗಿಯೇ ಅದರಲ್ಲಿ ಒಳಗೂಡಿದ್ದರು. ಇನ್ನಿತರರಾದರೋ, ತಮ್ಮ ವಯಸ್ಸಿನವರಲ್ಲಿ ಹೆಚ್ಚಿನವರು ಸಂಭೋಗದಲ್ಲಿ ಒಳಗೂಡುತ್ತಿದ್ದಾರೆ ಎಂದು ನಂಬಿದ್ದರಿಂದ ಅವರು ಸಹ ತಮ್ಮ ಕನ್ಯಾವಸ್ಥೆಯನ್ನು ಕಳೆದುಕೊಳ್ಳಲು ಬಯಸಿದರು. ಇನ್ನೂ ಅನೇಕರು, ತಾವು ಆತ್ಮನಿಯಂತ್ರಣವನ್ನು ಕಳೆದುಕೊಂಡದ್ದರಿಂದ ಅಥವಾ “ಆ ಸಮಯದಲ್ಲಿ ಸ್ವಲ್ಪ ಕುಡಿದಿದ್ದರಿಂದ” ಸಂಭೋಗದಲ್ಲಿ ಒಳಗೂಡಿದೆವು ಎಂದು ಹೇಳಿದರು. ಆದರೆ, ದೇವರನ್ನು ಸಂತೋಷಪಡಿಸಲು ನಾವು ಬಯಸುವಲ್ಲಿ, ನಾವು ಭಿನ್ನವಾದ ರೀತಿಯಲ್ಲಿ ಯೋಚಿಸಬೇಕು. ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳಲು ನಮಗೆ ಯಾವ ರೀತಿಯ ಆಲೋಚನೆಯು ಸಹಾಯಮಾಡುವುದು?

ದೃಢವಾದ ನಿಶ್ಚಿತಾಭಿಪ್ರಾಯಗಳನ್ನು ಮಾಡಿರಿ

4. ನೈತಿಕವಾಗಿ ಪರಿಶುದ್ಧವಾಗಿ ಉಳಿಯಬೇಕಾದರೆ, ನಾವೇನು ಮಾಡಬೇಕು?

4ನೈತಿಕವಾಗಿ ಪರಿಶುದ್ಧರಾಗಿ ಉಳಿಯಬೇಕಾದರೆ, ಅಂತಹ ಒಂದು ಜೀವನ ಶೈಲಿಯನ್ನು ಅನುಸರಿಸುವುದು ಪ್ರಯತ್ನಕ್ಕೆ ಅರ್ಹವಾದದ್ದಾಗಿದೆ ಎಂಬುದನ್ನು ನಾವು ಗ್ರಹಿಸಬೇಕು. ಅಪೊಸ್ತಲ ಪೌಲನು ರೋಮಾಪುರದಲ್ಲಿದ್ದ ಕ್ರೈಸ್ತರಿಗೆ ಬರೆದ ವಿಷಯಕ್ಕೆ ಅದು ಹೊಂದಿಕೆಯಲ್ಲಿದೆ: “ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:⁠2) ನೈತಿಕ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವುದು ಪ್ರಯತ್ನಕ್ಕೆ ಅರ್ಹವಾದದ್ದಾಗಿದೆ. ಮತ್ತು ಅನೈತಿಕತೆಯು ದೇವರ ವಾಕ್ಯದಲ್ಲಿ ಖಂಡಿಸಲ್ಪಟ್ಟಿದೆ ಎಂಬ ಗ್ರಹಿಕೆಯಿರುವುದಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಒಳಗೂಡಿದೆ. ಅನೈತಿಕತೆಯು ಏಕೆ ಖಂಡಿಸಲ್ಪಟ್ಟಿದೆ ಮತ್ತು ಅದರಿಂದ ದೂರವಿರುವ ಮೂಲಕ ನಾವು ಹೇಗೆ ಪ್ರಯೋಜನಗಳನ್ನು ಪಡೆಯುತ್ತೇವೆ ಎಂಬ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಇದರಲ್ಲಿ ಒಳಗೂಡಿದೆ. ಈ ಕಾರಣಗಳಲ್ಲಿ ಕೆಲವು ಹಿಂದಿನ ಲೇಖನದಲ್ಲಿ ಪರಿಗಣಿಸಲ್ಪಟ್ಟಿದ್ದವು.

5. ಮುಖ್ಯವಾಗಿ ಕ್ರೈಸ್ತರು ತಮ್ಮ ನೈತಿಕ ಶುದ್ಧತೆಯನ್ನು ಏಕೆ ಕಾಪಾಡಿಕೊಳ್ಳಬೇಕು?

5 ಆದರೂ, ಕ್ರೈಸ್ತರು ಲೈಂಗಿಕ ಅನೈತಿಕತೆಯಿಂದ ದೂರವಿರುವುದಕ್ಕಿರುವ ಅತ್ಯಂತ ಪ್ರಬಲ ಕಾರಣಗಳು, ದೇವರೊಂದಿಗಿನ ನಮ್ಮ ಸಂಬಂಧದಿಂದ ಬಂದವುಗಳಾಗಿವೆ. ನಮಗೆ ಯಾವುದು ಒಳಿತನ್ನು ಉಂಟುಮಾಡುತ್ತದೆ ಎಂಬುದು ದೇವರಿಗೆ ಗೊತ್ತು ಎಂಬುದನ್ನು ನಾವು ಕಲಿತುಕೊಂಡಿದ್ದೇವೆ. ಆತನಿಗಾಗಿರುವ ನಮ್ಮ ಪ್ರೀತಿಯು, ಕೆಟ್ಟದ್ದನ್ನು ದ್ವೇಷಿಸುವಂತೆ ನಮಗೆ ಸಹಾಯಮಾಡುವುದು. (ಕೀರ್ತನೆ 97:10) ದೇವರು ‘ಎಲ್ಲಾ ಒಳ್ಳೇ ದಾನಗಳು ಮತ್ತು ಕುಂದಿಲ್ಲದ ಎಲ್ಲಾ ವರಗಳ’ ದಾತನಾಗಿದ್ದಾನೆ. (ಯಾಕೋಬ 1:17) ಆತನು ನಮ್ಮನ್ನು ಪ್ರೀತಿಸುತ್ತಾನೆ. ನಾವು ಆತನಿಗೆ ವಿಧೇಯರಾಗುವ ಮೂಲಕ, ಆತನನ್ನು ನಾವು ಪ್ರೀತಿಸುತ್ತೇವೆ ಮತ್ತು ನಮಗೋಸ್ಕರ ಆತನು ಮಾಡಿರುವ ಎಲ್ಲ ಕೆಲಸಗಳನ್ನು ಗಣ್ಯಮಾಡುತ್ತೇವೆ ಎಂಬುದನ್ನು ತೋರಿಸುತ್ತೇವೆ. (1 ಯೋಹಾನ 5:⁠3) ಯೆಹೋವನ ನೀತಿಯ ಆಜ್ಞೆಗಳನ್ನು ಉಲ್ಲಂಘಿಸುವ ಮೂಲಕ ಆತನಿಗೆ ಆಶಾಭಂಗವನ್ನು ಅಥವಾ ವೇದನೆಯನ್ನು ಉಂಟುಮಾಡಲು ನಾವು ಬಯಸಲಾರೆವು. (ಕೀರ್ತನೆ 78:41) ಆತನ ಪವಿತ್ರವಾದ ಹಾಗೂ ನೀತಿಯ ಆರಾಧನಾ ವಿಧಾನದ ಕುರಿತು ನಿಂದಾತ್ಮಕವಾಗಿ ಮಾತಾಡುವಂತೆ ಇತರರಿಗೆ ಆಸ್ಪದವನ್ನು ಕೊಡುವಂತಹ ಯಾವುದೇ ರೀತಿಯ ಕೃತ್ಯವನ್ನು ಮಾಡಲು ನಾವು ಬಯಸಲಾರೆವು. (ತೀತ 2:5; 2 ಪೇತ್ರ 2:⁠2) ನೈತಿಕವಾಗಿ ಪರಿಶುದ್ಧರಾಗಿ ಉಳಿಯುವ ಮೂಲಕ, ಸರ್ವೋನ್ನತನಾದ ದೇವರ ಮನಸ್ಸನ್ನು ನಾವು ಸಂತೋಷಪಡಿಸುತ್ತೇವೆ.​—⁠ಜ್ಞಾನೋಕ್ತಿ 27:⁠11.

6. ನಮ್ಮ ನೈತಿಕ ಮಟ್ಟಗಳನ್ನು ಇತರರಿಗೆ ತಿಳಿಯಪಡಿಸುವುದು ನಮಗೆ ಹೇಗೆ ಸಹಾಯಕರವಾಗಿದೆ?

6ನೈತಿಕವಾಗಿ ಪರಿಶುದ್ಧರಾಗಿ ಉಳಿಯುವ ನಿರ್ಧಾರವನ್ನು ಮಾಡಿದ ಬಳಿಕ, ನಿಮ್ಮ ನಿಶ್ಚಿತಾಭಿಪ್ರಾಯವನ್ನು ಇತರರಿಗೆ ತಿಳಿಯಪಡಿಸುವುದು ಇನ್ನೂ ಹೆಚ್ಚಿನ ಸುರಕ್ಷೆಯಾಗಿದೆ. ನೀವು ಯೆಹೋವ ದೇವರ ಸೇವಕರಾಗಿದ್ದೀರಿ ಮತ್ತು ಆತನ ಉಚ್ಚ ನೈತಿಕ ಮಟ್ಟಗಳನ್ನು ಕಾಪಾಡಿಕೊಳ್ಳುವ ನಿರ್ಧಾರವನ್ನು ನೀವು ಮಾಡಿದ್ದೀರಿ ಎಂಬುದು ಜನರಿಗೆ ತಿಳಿದಿರಲಿ. ಏಕೆಂದರೆ ಅದು ನಿಮ್ಮ ಜೀವನ, ನಿಮ್ಮ ದೇಹ, ಮತ್ತು ನಿಮ್ಮ ಆಯ್ಕೆಯಾಗಿದೆ. ಆದರೆ ಯಾವುದು ಅಪಾಯದಲ್ಲಿದೆ? ನಿಮ್ಮ ಸ್ವರ್ಗೀಯ ತಂದೆಯೊಂದಿಗಿನ ನಿಮ್ಮ ಅಮೂಲ್ಯ ಸಂಬಂಧವೇ. ಆದುದರಿಂದ, ನಿಮ್ಮ ನೈತಿಕ ಸಮಗ್ರತೆಯನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಯಪಡಿಸಿರಿ. ದೇವರ ಮೂಲತತ್ವಗಳನ್ನು ಎತ್ತಿಹಿಡಿಯುವ ಮೂಲಕ ಆತನನ್ನು ಪ್ರತಿನಿಧಿಸುವುದಕ್ಕಾಗಿ ಹೆಮ್ಮೆಪಡಿರಿ. (ಕೀರ್ತನೆ 64:10) ನಿಮ್ಮ ನೈತಿಕ ನಿಶ್ಚಿತಾಭಿಪ್ರಾಯಗಳ ಕುರಿತು ಇತರರೊಂದಿಗೆ ಚರ್ಚಿಸಲು ಎಂದೂ ನಾಚಿಕೆಪಡದಿರಿ. ನಿಮ್ಮ ನಂಬಿಕೆಗಳ ಕುರಿತು ಧೈರ್ಯದಿಂದ ಹಾಗೂ ದೃಢವಾಗಿ ಮಾತಾಡುವುದು ನಿಮ್ಮನ್ನು ಬಲಗೊಳಿಸಸಾಧ್ಯವಿದೆ, ಸಂರಕ್ಷಿಸಸಾಧ್ಯವಿದೆ, ಮತ್ತು ನಿಮ್ಮ ಮಾದರಿಯನ್ನು ಅನುಸರಿಸುವಂತೆ ಇತರರನ್ನು ಉತ್ತೇಜಿಸಸಾಧ್ಯವಿದೆ.​—⁠1 ತಿಮೊಥೆಯ 4:⁠12.

7. ನೈತಿಕವಾಗಿ ಪರಿಶುದ್ಧವಾಗಿ ಉಳಿಯುವ ನಮ್ಮ ದೃಢನಿರ್ಧಾರವನ್ನು ನಾವು ಹೇಗೆ ಕಾಪಾಡಿಕೊಳ್ಳಬಹುದು?

7ಉಚ್ಚ ನೈತಿಕ ಮಟ್ಟವನ್ನು ಕಾಪಾಡಿಕೊಳ್ಳಲು ನಿರ್ಧರಿಸಿ, ನಮ್ಮ ನಿಲುವನ್ನು ಇತರರಿಗೆ ತಿಳಿಯಪಡಿಸಿದ ನಂತರ, ನಮ್ಮ ದೃಢನಿರ್ಧಾರಕ್ಕೆ ಭದ್ರವಾಗಿ ಅಂಟಿಕೊಳ್ಳಲಿಕ್ಕಾಗಿ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದನ್ನು ಮಾಡುವ ಒಂದು ವಿಧವು, ಸ್ನೇಹಿತರನ್ನು ಆಯ್ಕೆಮಾಡುವಾಗ ತುಂಬ ಜಾಗರೂಕರಾಗಿರುವುದೇ ಆಗಿದೆ. “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು” ಎಂದು ಬೈಬಲ್‌ ಹೇಳುತ್ತದೆ. ಆದುದರಿಂದ, ನಿಮಗಿರುವಂತಹದ್ದೇ ನೈತಿಕ ಮೌಲ್ಯಗಳಿರುವ ಜನರೊಂದಿಗೆ ಸಹವಾಸಿಸಿರಿ; ಏಕೆಂದರೆ ಅವರು ನಿಮ್ಮನ್ನು ಬಲಪಡಿಸುವರು. ಇದೇ ವಚನವು ಮುಂದುವರಿಸುತ್ತಾ ಹೇಳುವುದು: “ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ಹೀಗೆ, ನಿಮ್ಮ ನಿರ್ಧಾರವನ್ನು ಬದಲಾಯಿಸಬಹುದಾದಂಥ ಜನರಿಂದ ಆದಷ್ಟು ಮಟ್ಟಿಗೆ ದೂರವಿರಿ.​—⁠1 ಕೊರಿಂಥ 15:⁠33.

8. (ಎ) ಹಿತಕರವಾದ ವಿಷಯಗಳನ್ನು ನಮ್ಮ ಮನಸ್ಸುಗಳಲ್ಲಿ ನಾವು ಏಕೆ ತುಂಬಿಸಿಕೊಳ್ಳಬೇಕು? (ಬಿ) ನಾವು ಯಾವುದರಿಂದ ದೂರವಿರಬೇಕು?

8 ಇದಲ್ಲದೆ, ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಸದ್ಗುಣವೂ ಕೀರ್ತಿಗೆ ಯೋಗ್ಯವೂ ಆಗಿರುವಂತಹ ವಿಷಯಗಳನ್ನು ನಮ್ಮ ಮನಸ್ಸಿನಲ್ಲಿ ತುಂಬಿಸಿಕೊಳ್ಳುವ ಅಗತ್ಯವಿದೆ. (ಫಿಲಿಪ್ಪಿ 4:⁠8) ಆದುದರಿಂದ, ನಾವು ವೀಕ್ಷಿಸುವಂತಹ, ಓದುವಂತಹ ವಿಷಯಗಳಲ್ಲಿ ಹಾಗೂ ಕಿವಿಗೊಡುವಂತಹ ಸಂಗೀತದಲ್ಲಿ ಆಯ್ಕೆಯನ್ನು ಮಾಡುವವರಾಗಿರಬೇಕು. ಅನೈತಿಕ ಸಾಹಿತ್ಯವು ನಮ್ಮ ಮೇಲೆ ಕೆಟ್ಟ ಪ್ರಭಾವವನ್ನು ಬೀರುವುದಿಲ್ಲ ಎಂದು ಹೇಳುವುದು, ನೈತಿಕ ಸಾಹಿತ್ಯವು ಯಾವುದೇ ರೀತಿಯ ಸಕಾರಾತ್ಮಕ ಪ್ರಭಾವವನ್ನು ಬೀರುವುದಿಲ್ಲ ಎಂದು ಹೇಳುವುದಕ್ಕೆ ಸಮಾನವಾಗಿದೆ. ಅಷ್ಟುಮಾತ್ರವಲ್ಲ, ಅಪರಿಪೂರ್ಣ ಮಾನವರು ಅನೈತಿಕತೆಗೆ ಸುಲಭವಾಗಿ ಬಲಿಬೀಳಸಾಧ್ಯವಿದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಆದುದರಿಂದ, ಲೈಂಗಿಕ ಅನಿಸಿಕೆಗಳನ್ನು ಉತ್ತೇಜಿಸುವ ಪುಸ್ತಕಗಳು, ಪತ್ರಿಕೆಗಳು, ಚಲನ ಚಿತ್ರಗಳು ಹಾಗೂ ಸಂಗೀತವು, ಕೆಟ್ಟ ಬಯಕೆಗಳಿಗೆ ಮೂಡಿಸುವುದು ಮತ್ತು ಕಾಲಕ್ರಮೇಣ ಇವು ಪಾಪಕ್ಕೆ ನಡಿಸಬಹುದು. ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ, ನಾವು ನಮ್ಮ ಮನಸ್ಸುಗಳನ್ನು ದೈವಿಕ ವಿವೇಕದಿಂದ ತುಂಬಿಸಬೇಕು.​—⁠ಯಾಕೋಬ 3:⁠17.

ಅನೈತಿಕತೆಗೆ ನಡಿಸುವ ಹಂತಗಳು

9-11. ಸೊಲೊಮೋನನಿಂದ ವಿವರಿಸಲ್ಪಟ್ಟಿರುವಂತೆ, ಯಾವ ಹಂತಗಳು ಪ್ರಗತಿಪರವಾಗಿ ಒಬ್ಬ ಯುವಕನನ್ನು ಅನೈತಿಕತೆಗೆ ನಡೆಸಿದವು?

9 ಅನೇಕವೇಳೆ, ಅನೈತಿಕತೆಗೆ ಬಲಿಬೀಳಿಸುವಂತಹ ಸ್ಪಷ್ಟ ಹಂತಗಳು ಇವೆ. ತೆಗೆದುಕೊಳ್ಳಲ್ಪಡುವ ಪ್ರತಿಯೊಂದು ಹೆಜ್ಜೆಯು, ಅದರಿಂದ ಹಿಂದಿರುಗುವುದನ್ನು ತುಂಬ ಕಷ್ಟಕರವಾದದ್ದಾಗಿ ಮಾಡುವುದು. ಜ್ಞಾನೋಕ್ತಿ 7:​6-23ರಲ್ಲಿ ಇದನ್ನು ಹೇಗೆ ವರ್ಣಿಸಲಾಗಿದೆ ಎಂಬುದನ್ನು ಗಮನಿಸಿರಿ. “ಜ್ಞಾನಹೀನನಾದ” ಅಥವಾ ಒಳ್ಳೆಯ ಉದ್ದೇಶವಿಲ್ಲದಿರುವಂತಹ “ಒಬ್ಬ ಯೌವನಸ್ಥನನ್ನು” ಸೊಲೊಮೋನನು ಗಮನಿಸುತ್ತಾನೆ. ಆ ಯೌವನಸ್ಥನು “ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ, ಅವಳ [ಒಬ್ಬ ವೇಶ್ಯೆಯ] [ಮನೆಯ] ಮೂಲೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ ಅವಳ ಮನೆಯ ಕಡೆಗೆ” ತಿರುಗುತ್ತಾನೆ. ಇದೇ ಅವನು ಮಾಡಿದ ಮೊದಲ ತಪ್ಪಾಗಿದೆ. “ಸಂಜೆಯ ಮೊಬ್ಬಿನಲ್ಲಿ” ಅವನ ಹೃದಯವು ಅವನನ್ನು ಯಾವುದೋ ಒಂದು ಬೀದಿಗಲ್ಲ, ಬದಲಾಗಿ ಸಾಮಾನ್ಯವಾಗಿ ಒಬ್ಬ ವೇಶ್ಯೆಯನ್ನು ಕಂಡುಕೊಳ್ಳಸಾಧ್ಯವಿದೆಯೆಂದು ಅವನಿಗೆ ಗೊತ್ತಿರುವ ಒಂದು ಬೀದಿಗೆ ಅವನನ್ನು ಕರೆದೊಯ್ದಿದೆ.

10 ತದನಂತರ ನಾವು ಓದುವುದು: “ಇಗೋ ವೇಶ್ಯಾವೇಷವನ್ನು ಧರಿಸಿರುವ ಒಬ್ಬ ಕಪಟಸ್ತ್ರೀಯು ಅವನನ್ನು ಎದುರುಗೊಳ್ಳುತ್ತಾಳೆ.” ಈಗ ಅವನು ಅವಳನ್ನು ನೋಡುತ್ತಾನೆ! ಆಗ ಅವನು ಹಿಂದೆ ತಿರುಗಿ ಮನೆಯ ದಾರಿ ಹಿಡಿಯಬಹುದಾಗಿತ್ತು. ಆದರೆ ಹೀಗೆ ಮಾಡುವುದು ಅವನಿಗೆ ಈ ಮುಂಚಿಗಿಂತಲೂ ಹೆಚ್ಚು ಕಷ್ಟಕರವಾದದ್ದಾಗಿದೆ, ಏಕೆಂದರೆ ಅವನು ನೈತಿಕವಾಗಿ ತುಂಬ ದುರ್ಬಲನಾಗಿದ್ದಾನೆ. ಅವಳು ಅವನನ್ನು ಗಟ್ಟಿಯಾಗಿ ಹಿಡಿದುಕೊಂಡು, ಅವನಿಗೆ ಮುದ್ದಿಡುತ್ತಾಳೆ. ಅವನು ಆ ಮುತ್ತನ್ನು ಸ್ವೀಕರಿಸುತ್ತಾನೆ, ಮತ್ತು ಅವಳ ಮೋಹಕ ಒತ್ತಾಯಕ್ಕೆ ಕಿವಿಗೊಡುತ್ತಾನೆ. “ಎಲೈ, ಈ ದಿವಸ ನನ್ನ ಹರಿಕೆಗಳನ್ನು ಸಲ್ಲಿಸಿದ್ದೇನೆ, ಸಮಾಧಾನಯಜ್ಞಶೇಷವು ನನ್ನಲ್ಲಿದೆ” ಎಂದು ಅವಳು ಹೇಳುತ್ತಾಳೆ. ಸಮಾಧಾನಯಜ್ಞಶೇಷಗಳಲ್ಲಿ, ಮಾಂಸ, ಗೋದಿಯ ಹಿಟ್ಟು, ಎಣ್ಣೆ ಹಾಗೂ ದ್ರಾಕ್ಷಾರಸವು ಒಳಗೂಡಿರುತ್ತಿತ್ತು. (ಯಾಜಕಕಾಂಡ 19:​5, 6; 22:21; ಅರಣ್ಯಕಾಂಡ 15:​8-10) ಇವುಗಳ ಬಗ್ಗೆ ಹೇಳುವ ಮೂಲಕ ಅವಳು, ತಾನು ಆತ್ಮಿಕತೆಯಲ್ಲಿ ಕೊರತೆಯುಳ್ಳವಳಾಗಿಲ್ಲ ಎಂಬ ಸೂಚನೆಯನ್ನು ಕೊಡುತ್ತಿದ್ದಿರಬಹುದು; ಅದೇ ಸಮಯದಲ್ಲಿ, ತನ್ನ ಮನೆಯಲ್ಲಿ ತಿನ್ನಲು ಹಾಗೂ ಕುಡಿಯಲು ಒಳ್ಳೇ ವಸ್ತುಗಳು ಯಥೇಷ್ಟವಾಗಿವೆ ಎಂದು ಅವನಿಗೆ ಹೇಳುತ್ತಿದ್ದಿರಬಹುದು. “ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ” ಎಂದು ಅವಳು ಅವನನ್ನು ಬೇಡಿಕೊಳ್ಳುತ್ತಾಳೆ.

11 ಇದರ ಪರಿಣಾಮವನ್ನು ಮುಂತಿಳಿಸುವುದು ಕಷ್ಟಕರವೇನಲ್ಲ. ಏನೆಂದರೆ, ಅವಳು “ಅವನನ್ನು ತನ್ನ ಸವಿಮಾತುಗಳಿಂದ ಬಲಾತ್ಕರಿಸಿ ಬಹಳವಾಗಿ ಪ್ರೇರಿಸಿ ಸುಮ್ಮತಿಪಡಿಸುತ್ತಾಳೆ.” “ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ ಪಕ್ಷಿಯು ಬಲೆಯ ಕಡೆಗೆ ಓಡುವ ಮೇರೆಗೂ” ಅವನು ಅವಳ ಹಿಂದೆ ಹೋಗುತ್ತಾನೆ. ತದನಂತರ ಸೊಲೊಮೋನನು ಈ ಮಾತುಗಳಿಂದ ಮುಕ್ತಾಯಗೊಳಿಸುತ್ತಾನೆ: “ಅದು ತನ್ನ ಪ್ರಾಣವನ್ನೇ ಬಲಿತೆಗೆದುಕೊಳ್ಳುತ್ತದೆ ಎಂಬುದು ಅವನಿಗೆ ಗೊತ್ತಿಲ್ಲ” (NW). ಅವನ ಪ್ರಾಣ ಅಥವಾ ಜೀವವು ಅದರಲ್ಲಿ ಒಳಗೂಡಿದೆ. ಏಕೆಂದರೆ ‘ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನು.’ (ಇಬ್ರಿಯ 13:⁠4) ಎಲ್ಲ ಸ್ತ್ರೀಪುರುಷರಿಗೆ ಇದು ಎಷ್ಟು ಬಲವಾದ ಪಾಠವಾಗಿದೆ! ದೇವರ ಅಸಮ್ಮತಿಗೆ ನಡಿಸುವಂತಹ ಮಾರ್ಗದಲ್ಲಿ ಹೆಜ್ಜೆಯನ್ನು ಇಡುವುದನ್ನು ಸಹ ನಾವು ತೊರೆಯಬೇಕು.

12. (ಎ) ‘ಜ್ಞಾನಹೀನ’ ಎಂಬ ಅಭಿವ್ಯಕ್ತಿಯ ಅರ್ಥವೇನು? (ಬಿ) ನಾವು ಹೇಗೆ ನೈತಿಕ ಬಲವನ್ನು ಒಟ್ಟುಗೂಡಿಸಿಕೊಳ್ಳಸಾಧ್ಯವಿದೆ?

12 ಆ ವೃತ್ತಾಂತದಲ್ಲಿ ತಿಳಿಸಲ್ಪಟ್ಟಿದ್ದ ಯುವಕನು ‘ಜ್ಞಾನಹೀನನಾಗಿದ್ದನು’ ಎಂಬುದನ್ನು ಗಮನಿಸಿರಿ. ಆ ಯುವಕನ ಆಲೋಚನೆಗಳು, ಬಯಕೆಗಳು, ಇಚ್ಛೆಗಳು, ಭಾವನೆಗಳು ಮತ್ತು ಗುರಿಗಳು, ದೇವರಿಗೆ ಒಪ್ಪಿಗೆಯಿಲ್ಲದವುಗಳಾಗಿದ್ದವು ಎಂಬುದನ್ನು ಈ ಅಭಿವ್ಯಕ್ತಿಯು ನಮಗೆ ತಿಳಿಸುತ್ತದೆ. ತುಂಬ ಕಠಿನವಾಗಿರುವ ಈ “ಕಡೇ ದಿವಸಗಳಲ್ಲಿ,” ನೈತಿಕ ಬಲವನ್ನು ಒಟ್ಟುಗೂಡಿಸಿಕೊಳ್ಳುವುದು ಪ್ರಯತ್ನವನ್ನು ಕೇಳಿಕೊಳ್ಳುತ್ತದೆ. (2 ತಿಮೊಥೆಯ 3:⁠1) ಆದರೂ, ನಮಗೆ ಸಹಾಯಮಾಡಲಿಕ್ಕಾಗಿ ದೇವರು ಏರ್ಪಾಡನ್ನು ಮಾಡಿದ್ದಾನೆ. ಸರಿಯಾದ ಮಾರ್ಗದಲ್ಲಿ ನಡೆಯುವಂತೆ ನಮ್ಮನ್ನು ಉತ್ತೇಜಿಸಲಿಕ್ಕಾಗಿ ಮತ್ತು ನಮ್ಮಂತಹದ್ದೇ ಗುರಿಯನ್ನು ಇಟ್ಟುಕೊಂಡಿರುವಂತಹ ಇನ್ನಿತರರೊಂದಿಗೆ ನಾವು ಸಹವಾಸಮಾಡುವಂತೆ, ಆತನು ಕ್ರೈಸ್ತ ಸಭೆಯ ಕೂಟಗಳನ್ನು ಒದಗಿಸಿದ್ದಾನೆ. (ಇಬ್ರಿಯ 10:​24, 25) ಅಷ್ಟುಮಾತ್ರವಲ್ಲ, ಸಭಾ ಹಿರಿಯರು ನಮ್ಮ ಪರಿಪಾಲನೆ ಮಾಡುತ್ತಾರೆ ಹಾಗೂ ನೀತಿಯ ಮಾರ್ಗಗಳನ್ನು ನಮಗೆ ಬೋಧಿಸುತ್ತಾರೆ. (ಎಫೆಸ 4:​11, 12) ನಮ್ಮನ್ನು ಮಾರ್ಗದರ್ಶಿಸಲಿಕ್ಕಾಗಿ ದೇವರ ವಾಕ್ಯವಾದ ಬೈಬಲು ನಮ್ಮ ಬಳಿ ಇದೆ. (2 ತಿಮೊಥೆಯ 3:16) ಮತ್ತು ಎಲ್ಲ ಸಮಯಗಳಲ್ಲಿ, ನಮಗೆ ಸಹಾಯಮಾಡುವಂತೆ ದೇವರಾತ್ಮಕ್ಕಾಗಿ ಪ್ರಾರ್ಥಿಸುವ ಅವಕಾಶವು ಸಹ ನಮಗಿದೆ.​—⁠ಮತ್ತಾಯ 26:⁠41.

ದಾವೀದನ ಪಾಪಗಳಿಂದ ಪಾಠವನ್ನು ಕಲಿಯುವುದು

13, 14. ಅರಸನಾದ ದಾವೀದನು ಹೇಗೆ ಗಂಭೀರವಾದ ಪಾಪದಲ್ಲಿ ಒಳಗೂಡಿದನು?

13 ಆದರೂ, ತುಂಬ ನಂಬಿಗಸ್ತರಾಗಿದ್ದ ದೇವರ ಸೇವಕರಲ್ಲಿ ಸಹ ಕೆಲವರು ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದ್ದರು ಎಂಬುದು ದುಃಖಕರ ಸಂಗತಿಯಾಗಿದೆ. ಅರಸನಾದ ದಾವೀದನು ಅಂತಹ ಒಬ್ಬ ವ್ಯಕ್ತಿಯಾಗಿದ್ದನು. ಅನೇಕ ವರ್ಷಗಳ ವರೆಗೆ ದಾವೀದನು ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡಿದ್ದನು. ಅವನು ದೇವರನ್ನು ಅಪಾರವಾಗಿ ಪ್ರೀತಿಸುತ್ತಿದ್ದನು ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೂ, ಅವನು ಪಾಪದಲ್ಲಿ ಒಳಗೂಡಿದನು. ಯಾರ ಕುರಿತಾಗಿ ಸೊಲೊಮೋನನು ವರ್ಣಿಸಿದನೋ ಆ ಯುವಕನಂತೆಯೇ, ದಾವೀದನು ಸಹ ಹಂತ ಹಂತವಾಗಿ ಪಾಪವನ್ನು ಮಾಡಿದನು ಮತ್ತು ಕ್ರಮೇಣ ಈ ಪಾಪವು ದೊಡ್ಡದಾಗುತ್ತಾ ಹೋಯಿತು.

14 ಆ ಸಮಯದಲ್ಲಿ ದಾವೀದನು ಮಧ್ಯಪ್ರಾಯದವನಾಗಿದ್ದನು, ಅಂದರೆ 50ಗಳ ಆರಂಭದಲ್ಲಿದ್ದಿರಬಹುದು. ಒಂದು ದಿನ ಅವನು, ಬಹಳ ಸುಂದರಿಯಾಗಿದ್ದ ಬತ್ಷೆಬೆಯು ಸ್ನಾನಮಾಡುತ್ತಿರುವುದನ್ನು ತನ್ನ ಅರಮನೆಯ ಮಾಳಿಗೆಯಿಂದ ನೋಡಿದನು. ಅವಳ ಕುರಿತು ಅವನು ವಿಚಾರಿಸಿ ತಿಳಿದುಕೊಂಡನು. ಅವಳ ಗಂಡನಾಗಿದ್ದ ಊರೀಯನು, ಅಮ್ಮೋನಿಯರ ಪಟ್ಟಣವಾಗಿದ್ದ ರಬ್ಬಕ್ಕೆ ಮುತ್ತಿಗೆಯನ್ನು ಹಾಕುವ ಕೆಲಸದಲ್ಲಿ ಒಳಗೂಡಿದ್ದನು ಎಂಬುದು ದಾವೀದನಿಗೆ ಗೊತ್ತಾಯಿತು. ಆದುದರಿಂದ, ಅವನು ಅವಳನ್ನು ತನ್ನ ಅರಮನೆಗೆ ಕರೆಸಿಕೊಂಡನು ಮತ್ತು ಅವಳೊಂದಿಗೆ ಸಂಭೋಗ ಮಾಡಿದನು. ತದನಂತರ, ವಿಷಯಗಳು ತುಂಬ ಜಟಿಲವಾಗತೊಡಗಿದವು. ಏಕೆಂದರೆ, ತಾನು ಗರ್ಭಧರಿಸಿದ್ದೇನೆ ಎಂಬುದು ಬತ್ಷೆಬೆಗೆ ಗೊತ್ತಾಯಿತು. ಆಗ, ಅವಳ ಗಂಡನಾದ ಊರೀಯನು ತನ್ನ ಮನೆಗೆ ಹೋಗಿ, ಹೆಂಡತಿಯೊಂದಿಗೆ ರಾತ್ರಿಯನ್ನು ಕಳೆಯಲಿ ಎಂಬ ನಿರೀಕ್ಷೆಯಿಂದ ದಾವೀದನು, ಮುತ್ತಿಗೆ ಹಾಕುತ್ತಿರುವ ಸ್ಥಳದಿಂದ ಊರೀಯನನ್ನು ಹಿಂದೆ ಕರೆಸಿಕೊಂಡನು. ಈ ರೀತಿಯಲ್ಲಾದರೂ, ಬತ್ಷೆಬೆಗೆ ಹುಟ್ಟಲಿರುವ ಮಗುವಿನ ತಂದೆಯು ಊರೀಯನೇ ಎಂಬ ಅಭಿಪ್ರಾಯವನ್ನು ಮೂಡಿಸುವುದು ಅವನ ಉದ್ದೇಶವಾಗಿತ್ತು. ಆದರೆ ಊರೀಯನು ತನ್ನ ಮನೆಗೆ ಹೋಗಲಿಲ್ಲ. ಆದುದರಿಂದ, ತನ್ನ ಪಾಪವನ್ನು ಮರೆಮಾಚಲಿಕ್ಕೋಸ್ಕರ ದಾವೀದನು ಒಂದು ಯೋಜನೆಯನ್ನು ಮಾಡಿದನು. ಅದೇನೆಂದರೆ, ಅವನು ತನ್ನ ಸೇನಾಧಿಪತಿಗೆ ಒಂದು ಪತ್ರವನ್ನು ಬರೆದು, ಅದನ್ನು ಊರೀಯನ ಕೈಯಲ್ಲಿ ಕೊಟ್ಟು, ಅವನನ್ನು ಪುನಃ ರಬ್ಬಕ್ಕೆ ಕಳುಹಿಸಿದನು. ಆ ಪತ್ರದಲ್ಲಿ, ಊರೀಯನು ಗಾಯಹೊಂದಿ ಸಾಯುವಂತೆ ಅವನನ್ನು ಭೀಕರ ಕಾಳಗವು ನಡೆಯುತ್ತಿರುವ ಸ್ಥಳದಲ್ಲಿ ನಿಲ್ಲಿಸುವಂತೆ ತಿಳಿಸಲಾಗಿತ್ತು. ಈ ರೀತಿಯಲ್ಲಿ ಊರೀಯನು ತನ್ನ ಪ್ರಾಣವನ್ನು ಕಳೆದುಕೊಂಡನು. ತದನಂತರ, ಬತ್ಷೆಬೆಯು ಗರ್ಭಿಣಿಯಾಗಿದ್ದಾಳೆ ಎಂಬುದು ಎಲ್ಲರಿಗೂ ಗೊತ್ತಾಗುವುದಕ್ಕೆ ಮೊದಲೇ ದಾವೀದನು ಆ ವಿಧವೆಯನ್ನು ಮದುವೆಯಾದನು.​—⁠2 ಸಮುವೇಲ 11:​1-27.

15. (ಎ) ದಾವೀದನ ಪಾಪವು ಹೇಗೆ ಬಯಲಿಗೆ ತರಲ್ಪಟ್ಟಿತು? (ಬಿ) ನಾತಾನನು ಚಾತುರ್ಯದಿಂದ ದಾವೀದನಿಗೆ ತಿದ್ದುಪಾಟು ನೀಡಿದಾಗ, ಅವನು ಹೇಗೆ ಪ್ರತಿಕ್ರಿಯಿಸಿದನು?

15 ತನ್ನ ಪಾಪವನ್ನು ಮರೆಮಾಚಲಿಕ್ಕಾಗಿ ದಾವೀದನು ಮಾಡಿದ ಒಳಸಂಚು ಸಫಲವಾದಂತೆ ತೋರಿತು. ಅನೇಕ ತಿಂಗಳುಗಳು ಕಳೆದವು. ಅವರಿಗೆ ಒಬ್ಬ ಮಗನು ಹುಟ್ಟಿದನು. ದಾವೀದನು 32ನೆಯ ಕೀರ್ತನೆಯನ್ನು ರಚಿಸಿದಾಗ, ಒಂದುವೇಳೆ ಈ ಘಟನೆಯು ಅವನ ಮನಸ್ಸಿನಲ್ಲಿದ್ದಿರುವುದಾದರೆ, ಖಂಡಿತವಾಗಿಯೂ ಅವನ ಮನಸ್ಸಾಕ್ಷಿಯು ಅವನನ್ನು ಬಹಳವಾಗಿ ಹಿಂಸಿಸಿತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. (ಕೀರ್ತನೆ 32:​3-5) ಆದರೂ, ಅವನು ಮಾಡಿದ ಪಾಪವು ದೇವರ ಕಣ್ಣಿಗೆ ಮರೆಯಾಗಿರಲಿಲ್ಲ. ಈ ವಿಷಯದಲ್ಲಿ ಬೈಬಲು ಹೇಳುವುದು: “ದಾವೀದನ ಈ ಕೃತ್ಯವು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು.” (2 ಸಮುವೇಲ 11:27) ಈ ಸಮಯದಲ್ಲಿ ಯೆಹೋವನು ತನ್ನ ಪ್ರವಾದಿಯಾದ ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ದಾವೀದನು ಮಾಡಿದ ಪಾಪದ ಕುರಿತು ನಾತಾನನು ಬಹಳ ಬುದ್ಧಿವಂತಿಕೆಯಿಂದ ಅವನೊಂದಿಗೆ ಚರ್ಚಿಸಿದನು. ಆ ಕೂಡಲೆ ದಾವೀದನು ತನ್ನ ತಪ್ಪನ್ನು ಒಪ್ಪಿಕೊಂಡನು ಮತ್ತು ಯೆಹೋವನಿಂದ ಕ್ಷಮೆಯನ್ನು ಬೇಡಿದನು. ಅವನು ನಿಜವಾಗಿಯೂ ಪಶ್ಚಾತ್ತಾಪಪಟ್ಟದ್ದರಿಂದ, ದೇವರೊಂದಿಗೆ ಪುನಃ ಒಳ್ಳೆಯ ಸಂಬಂಧವನ್ನು ಸ್ಥಾಪಿಸಿಕೊಂಡನು. (2 ಸಮುವೇಲ 12:​1-13) ನಾತಾನನು ತಿದ್ದುಪಾಟು ನೀಡಿದಾಗ ದಾವೀದನು ಅಸಮಾಧಾನಗೊಳ್ಳಲಿಲ್ಲ. ಅದಕ್ಕೆ ಬದಲಾಗಿ, ಕೀರ್ತನೆ 141:5ರಲ್ಲಿ ವರ್ಣಿಸಲ್ಪಟ್ಟಿರುವಂತಹದ್ದೇ ಮನೋಭಾವವನ್ನು ಅವನು ತೋರಿಸಿದನು. ಅದು ಹೀಗೆ ಹೇಳುತ್ತದೆ: “ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗುಪಕಾರ; ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ; ನನ್ನ ತಲೆಯು ಅದನ್ನು ಬೇಡವೆನ್ನದಿರಲಿ.”

16. ಪಾಪದ ವಿಷಯದಲ್ಲಿ ಸೊಲೊಮೋನನು ಯಾವ ಎಚ್ಚರಿಕೆಯನ್ನು ಹಾಗೂ ಸಲಹೆಯನ್ನು ಕೊಡುತ್ತಾನೆ?

16 ದಾವೀದ ಹಾಗೂ ಬತ್ಷೆಬೆಯರ ಎರಡನೆಯ ಪುತ್ರನಾಗಿದ್ದ ಸೊಲೊಮೋನನು, ತನ್ನ ತಂದೆಯ ಜೀವನದಲ್ಲಿ ನಡೆದ ಈ ಕರಾಳ ಘಟನೆಯ ಕುರಿತು ಆಲೋಚಿಸಿದ್ದಿರಬಹುದು. ಏಕೆಂದರೆ, ಸಮಯಾನಂತರ ಅವನು ಬರೆದುದು: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” (ಜ್ಞಾನೋಕ್ತಿ 28:13) ಒಂದುವೇಳೆ ನಾವು ಗಂಭೀರವಾದ ಪಾಪವನ್ನು ಮಾಡುವಲ್ಲಿ, ಈ ಪ್ರೇರಿತ ಸಲಹೆಗೆ ನಾವು ಕಿವಿಗೊಡಬೇಕು. ಏಕೆಂದರೆ ಇದು ಒಂದು ಎಚ್ಚರಿಕೆಯಾಗಿದೆ ಮತ್ತು ಬುದ್ಧಿಮಾತಾಗಿದೆ. ನಮ್ಮ ಪಾಪವನ್ನು ನಾವು ಯೆಹೋವನ ಮುಂದೆ ಅರಿಕೆಮಾಡಿಕೊಳ್ಳಬೇಕು ಮತ್ತು ಸಹಾಯಕ್ಕಾಗಿ ಸಭಾ ಹಿರಿಯರ ಬಳಿಗೆ ಹೋಗಬೇಕು. ಯಾರು ತಪ್ಪನ್ನು ಮಾಡಿರುತ್ತಾರೋ ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಸಹಾಯಮಾಡುವುದೇ ಹಿರಿಯರ ಪ್ರಾಮುಖ್ಯ ಜವಾಬ್ದಾರಿಯಾಗಿದೆ.​—⁠ಯಾಕೋಬ 5:​14, 15.

ಪಾಪದ ಪರಿಣಾಮಗಳನ್ನು ಸಹಿಸಿಕೊಳ್ಳುವುದು

17. ಯೆಹೋವನು ಪಾಪಗಳನ್ನು ಕ್ಷಮಿಸುತ್ತಾನಾದರೂ, ಆತನು ಯಾವುದರಿಂದ ನಮ್ಮನ್ನು ತಪ್ಪಿಸಿ ಕಾಪಾಡುವುದಿಲ್ಲ?

17 ಯೆಹೋವನು ದಾವೀದನನ್ನು ಕ್ಷಮಿಸಿದನು. ಏಕೆ? ಏಕೆಂದರೆ, ದಾವೀದನು ಯಥಾರ್ಥವಂತನಾಗಿದ್ದನು, ಇತರರಿಗೆ ಕರುಣೆ ತೋರಿಸುವವನಾಗಿದ್ದನು, ಮತ್ತು ನಿಜವಾದ ಪಶ್ಚಾತ್ತಾಪವನ್ನು ತೋರಿಸಿದನು. ಆದರೂ, ತನ್ನ ಪಾಪದ ನಂತರದ ವಿಪತ್ಕಾರಕ ಪರಿಣಾಮಗಳಿಂದ ದೇವರು ದಾವೀದನನ್ನು ಕಾಪಾಡಲಿಲ್ಲ. (2 ಸಮುವೇಲ 12:​9-14) ಇಂದು ಸಹ ಇದು ಸತ್ಯವಾಗಿದೆ. ಯಾರು ಪಶ್ಚಾತ್ತಾಪಪಡುತ್ತಾರೋ ಅವರ ಮೇಲೆ ಯೆಹೋವನು ಕೇಡನ್ನು ಬರಮಾಡುವುದಿಲ್ಲವಾದರೂ, ತಮ್ಮ ಕೆಟ್ಟ ಕೃತ್ಯಗಳಿಂದ ಉಂಟಾಗುವ ಸಹಜ ಪರಿಣಾಮಗಳಿಂದ ಮಾತ್ರ ಆತನು ಅವರನ್ನು ಕಾಪಾಡುವುದಿಲ್ಲ. (ಗಲಾತ್ಯ 6:⁠7) ಲೈಂಗಿಕ ಅನೈತಿಕತೆಯ ಫಲಿತಾಂಶಗಳಲ್ಲಿ ಕೆಲವು, ವಿವಾಹ ವಿಚ್ಛೇದ, ಅನಪೇಕ್ಷಿತ ಗರ್ಭಧಾರಣೆ, ರತಿರವಾನಿತ ರೋಗ, ಮತ್ತು ಭರವಸೆ ಹಾಗೂ ಮಾನವನ್ನು ಕಳೆದುಕೊಳ್ಳುವುದೇ ಆಗಿದೆ.

18. (ಎ) ಗಂಭೀರವಾದ ಲೈಂಗಿಕ ದುರ್ನಡತೆಯಲ್ಲಿ ಪಾಲಿಗನಾಗಿದ್ದ ಒಬ್ಬ ವ್ಯಕ್ತಿಗೆ ಏನು ಮಾಡುವಂತೆ ಪೌಲನು ಕೊರಿಂಥ ಸಭೆಗೆ ಹೇಳಿದನು? (ಬಿ) ಪಾಪಿಗಳ ಕಡೆಗೆ ಯೆಹೋವನು ಹೇಗೆ ಪ್ರೀತಿ ಮತ್ತು ಕರುಣೆಯನ್ನು ತೋರಿಸುತ್ತಾನೆ?

18 ಒಂದುವೇಳೆ ನಾವು ವೈಯಕ್ತಿಕವಾಗಿ ಗಂಭೀರವಾದ ತಪ್ಪನ್ನು ಮಾಡಿರುವಲ್ಲಿ, ನಾವು ಮಾಡಿರುವಂತಹ ತಪ್ಪುಗಳ ಪರಿಣಾಮಗಳನ್ನು ಅನುಭವಿಸುತ್ತಿರುವಾಗ, ಎದೆಗುಂದುವುದು ತುಂಬ ಸುಲಭ. ಆದರೂ, ನಾವು ಪಶ್ಚಾತ್ತಾಪಪಟ್ಟು, ದೇವರೊಂದಿಗೆ ಪುನಃ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದರಿಂದ ನಮ್ಮನ್ನು ಯಾವುದೂ ತಡೆಯಬಾರದು. ಮೊದಲನೆಯ ಶತಮಾನದಲ್ಲಿ, ಸಭೆಯಲ್ಲಿ ಅಗಮ್ಯಗಮನದ ಜಾರತ್ವವನ್ನು ನಡೆಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಸಭೆಯಿಂದ ಹೊರಹಾಕುವಂತೆ ಪೌಲನು ಕೊರಿಂಥದವರಿಗೆ ಬರೆದನು. (1 ಕೊರಿಂಥ 5:​1, 13) ಆ ಮನುಷ್ಯನು ನಿಜವಾದ ಪಶ್ಚಾತ್ತಾಪವನ್ನು ತೋರಿಸಿದ ಬಳಿಕ, ಪೌಲನು ಸಭೆಯವರಿಗೆ ಹೀಗೆ ಸಲಹೆ ಕೊಟ್ಟನು: ‘ಅವನನ್ನು ಮನ್ನಿಸಿರಿ, ಸಂತೈಸಿರಿ; ಮತ್ತು ಅವನಿಗೆ ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸಿರಿ.’ (2 ಕೊರಿಂಥ 2:​5-8) ಈ ಪ್ರೇರಿತ ಸಲಹೆಯಲ್ಲಿ, ಪಶ್ಚಾತ್ತಾಪಪಡುವಂತಹ ಪಾಪಿಗಳ ಕಡೆಗೆ ಯೆಹೋವನು ತೋರಿಸುವ ಪ್ರೀತಿ ಹಾಗೂ ಕರುಣೆಯನ್ನು ನಾವು ನೋಡುತ್ತೇವೆ. ಒಬ್ಬ ಪಾಪಿಯು ಪಶ್ಚಾತ್ತಾಪಪಡುವಾಗ, ಪರಲೋಕದಲ್ಲಿರುವ ದೇವದೂತರು ಸಹ ಸಂತೋಷಪಡುತ್ತಾರೆ.​—⁠ಲೂಕ 15:⁠10.

19. ಒಂದು ತಪ್ಪಿನ ವಿಷಯದಲ್ಲಿ ನಾವು ಯೋಗ್ಯವಾದ ರೀತಿಯ ದುಃಖವನ್ನು ಅನುಭವಿಸುವುದು, ಯಾವ ಪ್ರಯೋಜನಗಳಿಗೆ ನಡಿಸಬಹುದು?

19 ನಮ್ಮ ತಪ್ಪಿನ ವಿಷಯದಲ್ಲಿ ನಾವು ದುಃಖಪಡುವುದಾದರೂ, ನಾವು ತೋರಿಸುವಂತಹ ಪಶ್ಚಾತ್ತಾಪವು, ‘ವೇದನೆಯನ್ನು ಉಂಟುಮಾಡುವಂತಹ ಕೆಲಸವನ್ನು ಮಾಡಲು ಹಿಂದಿರುಗದಂತೆ ಎಚ್ಚರಿಕೆಯಾಗಿರಲು’ ನಮಗೆ ಸಹಾಯಮಾಡಸಾಧ್ಯವಿದೆ. (ಯೋಬ 36:​21, NW) ಅಷ್ಟುಮಾತ್ರವಲ್ಲ, ನಾವು ಮಾಡುವಂತಹ ಪಾಪದ ಕೆಟ್ಟ ಪರಿಣಾಮಗಳು, ಆ ತಪ್ಪನ್ನು ಪುನಃ ಮಾಡದಂತೆ ನಮ್ಮನ್ನು ಬಲಪಡಿಸಬೇಕು. ಆದುದರಿಂದಲೇ, ತನ್ನ ಪಾಪಭರಿತ ನಡತೆಯಿಂದ ದೊರೆತ ದುಃಖಕರ ಅನುಭವವನ್ನು ದಾವೀದನು, ಇತರರಿಗೆ ಸಲಹೆ ನೀಡಲಿಕ್ಕಾಗಿ ಉಪಯೋಗಿಸಿದನು. ಅವನು ಹೇಳಿದ್ದು: “ನಿನ್ನ ಮಾರ್ಗವನ್ನು ದ್ರೋಹಿಗಳಿಗೆ ಬೋಧಿಸುವೆನು; ಪಾಪಿಗಳು ನಿನ್ನ ಕಡೆಗೆ ತಿರುಗಿಕೊಳ್ಳುವರು.”​—⁠ಕೀರ್ತನೆ 51:⁠13.

ಯೆಹೋವನ ಸೇವೆಮಾಡುವುದರಿಂದ ಸಂತೋಷವು ಸಿಗುತ್ತದೆ

20. ದೇವರ ನೀತಿಯ ಆವಶ್ಯಕತೆಗಳಿಗೆ ವಿಧೇಯರಾಗುವ ಮೂಲಕ ನಾವು ಯಾವ ಪ್ರಯೋಜನಗಳನ್ನು ಪಡೆದುಕೊಳ್ಳುವೆವು?

20 “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು [“ಸಂತೋಷಿಗಳು,” NW]” ಎಂದು ಯೇಸು ಹೇಳಿದನು. (ಲೂಕ 11:28) ದೇವರ ನೀತಿಯ ಆವಶ್ಯಕತೆಗಳಿಗೆ ವಿಧೇಯರಾಗುವುದು, ಈಗ ಮತ್ತು ನಿತ್ಯವಾದ ಭವಿಷ್ಯತ್ತಿನಲ್ಲಿ ಸಂತೋಷವನ್ನು ತರುವುದು. ನಾವು ನೈತಿಕವಾಗಿ ಶುದ್ಧರಾಗಿ ಉಳಿದಿರುವಲ್ಲಿ, ನಮಗೆ ಸಹಾಯಮಾಡಲಿಕ್ಕಾಗಿ ಯೆಹೋವನು ಮಾಡಿರುವ ಎಲ್ಲ ಒದಗಿಸುವಿಕೆಗಳನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಮತ್ತು ಅದೇ ಮಾರ್ಗದಲ್ಲಿ ನಾವು ಮುಂದುವರಿಯಬೇಕು. ಒಂದುವೇಳೆ ನಾವು ಅನೈತಿಕತೆಯ ಪಾಶಕ್ಕೆ ಒಳಗಾಗಿರುವುದಾದರೆ, ಯಾರು ನಿಜವಾದ ಪಶ್ಚಾತ್ತಾಪವನ್ನು ತೋರಿಸುತ್ತಾರೋ ಅವರನ್ನು ಮನಃಪೂರ್ವಕವಾಗಿ ಕ್ಷಮಿಸಲು ಯೆಹೋವನು ಸಿದ್ಧನಿದ್ದಾನೆ ಎಂಬ ವಿಷಯದಲ್ಲಿ ಆಶ್ವಾಸನೆಯನ್ನು ಕಂಡುಕೊಳ್ಳೋಣ. ಮತ್ತು ಆ ಪಾಪವನ್ನು ಇನ್ನೆಂದೂ ಪುನರಾವರ್ತಿಸದಿರೋಣ.​—⁠ಯೆಶಾಯ 55:⁠7.

21. ಅಪೊಸ್ತಲ ಪೇತ್ರನ ಯಾವ ಬುದ್ಧಿವಾದವನ್ನು ಅನ್ವಯಿಸಿಕೊಳ್ಳುವುದು, ನಾವು ನೈತಿಕವಾಗಿ ಶುದ್ಧರಾಗಿ ಉಳಿಯುವಂತೆ ಸಹಾಯಮಾಡಸಾಧ್ಯವಿದೆ?

21 ಅತಿ ಬೇಗನೆ ಅನೀತಿಯಿಂದ ತುಂಬಿರುವ ಈ ಲೋಕವು ನಾಶವಾಗುವುದು. ಆಗ ಈ ಲೋಕದ ಅನೈತಿಕ ವಿಚಾರಗಳು ಹಾಗೂ ರೂಢಿಗಳು ಸಹ ಇಲ್ಲವಾಗುವವು. ಆದರೆ ನಾವು ನೈತಿಕ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಮೂಲಕ, ಈಗ ಮತ್ತು ಸದಾಕಾಲಕ್ಕೂ ಪ್ರಯೋಜನವನ್ನು ಪಡೆದುಕೊಳ್ಳುವೆವು. ಅಪೊಸ್ತಲ ಪೇತ್ರನು ಬರೆದುದು: “ಪ್ರಿಯರೇ, ನೀವು ಇವುಗಳನ್ನು ಎದುರುನೋಡುವವರಾಗಿರುವದರಿಂದ ಶಾಂತರಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡಿರಿ. . . . ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವದರಿಂದ ಅಧರ್ಮಿಗಳ ಭ್ರಾಂತಿಯ ಸೆಳವಿಗೆ ಸಿಕ್ಕಿಕೊಂಡು ನಿಮ್ಮ ಸ್ಥಿರಮನಸ್ಸನ್ನು ಬಿಟ್ಟು ಭ್ರಷ್ಟರಾಗದಂತೆ ಎಚ್ಚರಿಕೆಯಾಗಿರಿ.”​—⁠2 ಪೇತ್ರ 3:​14, 17.

ನೀವು ವಿವರಿಸಬಲ್ಲಿರೋ?

• ನೈತಿಕವಾಗಿ ಶುದ್ಧರಾಗಿ ಉಳಿಯುವುದು ಏಕೆ ಕಷ್ಟಕರವಾಗಿರಸಾಧ್ಯವಿದೆ?

• ಉಚ್ಚ ನೈತಿಕ ಮಟ್ಟಗಳನ್ನು ಅನುಸರಿಸುವ ನಮ್ಮ ದೃಢನಿರ್ಧಾರವನ್ನು ಬೆಂಬಲಿಸುವ ಕೆಲವು ವಿಧಗಳು ಯಾವುವು?

• ಸೊಲೊಮೋನನಿಂದ ವಿವರಿಸಲ್ಪಟ್ಟ ಯುವಕನ ಪಾಪಗಳಿಂದ ನಾವು ಯಾವ ಪಾಠಗಳನ್ನು ಕಲಿತುಕೊಳ್ಳಸಾಧ್ಯವಿದೆ?

• ಪಶ್ಚಾತ್ತಾಪದ ಕುರಿತು ದಾವೀದನ ಉದಾಹರಣೆಯು ನಮಗೆ ಏನನ್ನು ಕಲಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ನೈತಿಕ ವಿಷಯಗಳಲ್ಲಿ ನಿಮ್ಮ ನಿಲುವೇನು ಎಂಬುದನ್ನು ಇತರರಿಗೆ ತಿಳಿಯಪಡಿಸುವುದು ಸಹ ಒಂದು ರೀತಿಯ ಸುರಕ್ಷೆಯಾಗಿದೆ

[ಪುಟ 17ರಲ್ಲಿರುವ ಚಿತ್ರಗಳು]

ದಾವೀದನು ಯಥಾರ್ಥಮನಸ್ಸಿನಿಂದ ಪಶ್ಚಾತ್ತಾಪ ತೋರಿಸಿದ್ದರಿಂದ ಯೆಹೋವನು ಅವನನ್ನು ಕ್ಷಮಿಸಿದನು