ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಯಶಸ್ಸನ್ನು ಹೇಗೆ ಅಳೆಯುತ್ತೀರಿ?

ನೀವು ಯಶಸ್ಸನ್ನು ಹೇಗೆ ಅಳೆಯುತ್ತೀರಿ?

ನೀವು ಯಶಸ್ಸನ್ನು ಹೇಗೆ ಅಳೆಯುತ್ತೀರಿ?

“ಐಶ್ವರ್ಯ, ವಿಶ್ವಾಸ, ಅಥವಾ ಹಿರಿಮೆಯ ಸಾಧನೆ”ಯೇ ಯಶಸ್ಸಿನ ಅರ್ಥವಾಗಿದೆ ಎಂದು ಒಂದು ಶಬ್ದಕೋಶವು ಹೇಳುತ್ತದೆ. ಇದು ನಿಷ್ಕೃಷ್ಟವಾದ ಅರ್ಥನಿರೂಪಣೆಯಾಗಿದೆಯೊ? ಯಶಸ್ಸನ್ನು ಐಶ್ವರ್ಯ, ವಿಶ್ವಾಸ, ಅಥವಾ ಹಿರಿಮೆಯಿಂದ ಮಾತ್ರ ಅಳೆಯಸಾಧ್ಯವಿದೆಯೊ? ನೀವು ಉತ್ತರಿಸುವುದಕ್ಕೆ ಮೊದಲು ಇದರ ಬಗ್ಗೆ ತುಸು ಆಲೋಚಿಸಿರಿ: ತನ್ನ ಜೀವಮಾನಕಾಲದಲ್ಲಿ ಯೇಸು ಯಾವುದೇ ಭೌತಿಕ ಸಂಪತ್ತನ್ನು ಗಳಿಸಲಿಲ್ಲ. ಅಷ್ಟುಮಾತ್ರವಲ್ಲ, ತನ್ನ ಕಾಲದಲ್ಲಿದ್ದ ಅಧಿಕಾಂಶ ಜನರ ವಿಶ್ವಾಸವನ್ನು ಸಹ ಗಳಿಸಲಿಲ್ಲ; ಇಲ್ಲವೇ ತನ್ನ ದಿನಗಳ ಧಾರ್ಮಿಕ ನಾಯಕರಿಂದಲೂ ಅವನು ಗೌರವವನ್ನು ಸಂಪಾದಿಸಲಿಲ್ಲ. ಆದರೂ, ಯೇಸು ಒಬ್ಬ ಯಶಸ್ವೀ ವ್ಯಕ್ತಿಯಾಗಿದ್ದನು ಎಂದು ನಾವು ಹೇಗೆ ಹೇಳಸಾಧ್ಯವಿದೆ?

ಭೂಮಿಯಲ್ಲಿರುವಾಗ ಯೇಸು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗಿದ್ದನು.’ (ಲೂಕ 12:21) ಅವನ ಪುನರುತ್ಥಾನದ ಬಳಿಕ, “ಪ್ರಭಾವವನ್ನೂ ಮಾನವನ್ನೂ” ಕಿರೀಟವಾಗಿ ಕೊಡುವ ಮೂಲಕ ದೇವರು ಅವನಿಗೆ ಪ್ರತಿಫಲವನ್ನು ನೀಡಿದನು. ಯೆಹೋವನು ತನ್ನ ಮಗನನ್ನು “ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.” (ಇಬ್ರಿಯ 2:9; ಫಿಲಿಪ್ಪಿ 2:⁠9) ಯೇಸುವಿನ ಜೀವನ ರೀತಿಯು ಯೆಹೋವನ ಮನಸ್ಸನ್ನು ಸಂತೋಷಪಡಿಸಿತು. (ಜ್ಞಾನೋಕ್ತಿ 27:11) ಅವನ ಭೂಜೀವಿತವು ಯಶಸ್ವಿಕರವಾಗಿತ್ತು. ಏಕೆಂದರೆ, ಅದು ತನ್ನ ಉದ್ದೇಶವನ್ನು ಪೂರೈಸಿತು. ಯೇಸು ದೇವರ ಚಿತ್ತವನ್ನು ಮಾಡಿದನು ಮತ್ತು ಆತನ ಹೆಸರಿಗೆ ಕೀರ್ತಿಯನ್ನು ತಂದನು. ಇದಕ್ಕೆ ಪ್ರತಿಯಾಗಿ ಐಶ್ವರ್ಯ, ವಿಶ್ವಾಸ, ಹಾಗೂ ಹಿರಿಮೆಯನ್ನು ಯೇಸುವಿಗೆ ನೀಡುವ ಮೂಲಕ ದೇವರು ಅವನನ್ನು ಘನತೆಗೇರಿಸಿದನು. ಯಾವ ಪಂಡಿತನಿಗೂ, ರಾಜಕಾರಣಿಗೂ, ಕ್ರೀಡಾ ತಾರೆಗೂ ಇಂತಹ ಘನತೆಯು ಸಿಕ್ಕಿರಲಿಲ್ಲ. ಆದುದರಿಂದ, ಭೂಮಿಯಲ್ಲಿ ಜೀವಿಸಿಸುವವರಲ್ಲೇ ಯೇಸು ಅತ್ಯಂತ ಯಶಸ್ವೀ ಮನುಷ್ಯನಾಗಿದ್ದನು ಎಂಬುದು ಖಂಡಿತವಾಗಿಯೂ ಸತ್ಯವಾಗಿದೆ.

ಕ್ರೈಸ್ತ ಹೆತ್ತವರು ಈ ವಿಷಯದ ಬಗ್ಗೆ ತುಂಬ ಖಾತ್ರಿಯಿಂದಿದ್ದಾರೆ. ಅದೇನೆಂದರೆ, ತಮ್ಮ ಮಕ್ಕಳು ಕ್ರಿಸ್ತನ ಹೆಜ್ಜೆಜಾಡನ್ನು ಅನುಸರಿಸುತ್ತಾ, ಯೇಸುವಿನಂತೆ ದೇವರ ವಿಷಯದಲ್ಲಿ ಐಶ್ವರ್ಯವಂತರಾಗುವಲ್ಲಿ, ಅದರ ಫಲವಾಗಿ ಈಗ ಅವರು ಅನೇಕ ಆಶೀರ್ವಾದಗಳನ್ನು ಪಡೆದುಕೊಳ್ಳುವರು; ಮತ್ತು ಬರಲಿರುವ ನೂತನ ವಿಷಯಗಳ ವ್ಯವಸ್ಥೆಯಲ್ಲಿ ಊಹಿಸಲಸಾಧ್ಯವಾದಷ್ಟು ಪ್ರತಿಫಲಗಳನ್ನು ಅನುಭವಿಸುವರು. ಯುವ ಜನರು ಕ್ರಿಸ್ತನ ಹೆಜ್ಜೆಜಾಡನ್ನು ಅನುಸರಿಸಿ ನಡೆಯುವುದಕ್ಕಿಂತ, ಅಂದರೆ ಯೇಸುವಿನಂತೆ ಪೂರ್ಣ ಸಮಯದ ಸೇವೆಯಲ್ಲಿ ಒಳಗೂಡುವುದಕ್ಕಿಂತ ಉತ್ತಮವಾದ ಮಾರ್ಗವು ಬೇರೊಂದಿಲ್ಲ.

ಆದರೂ, ಕೆಲವು ಸಂಸ್ಕೃತಿಗಳಲ್ಲಿ ಯುವ ಜನರು ಪೂರ್ಣ ಸಮಯದ ಸೇವೆಯನ್ನು ಒಳಗೂಡದಂತೆ ಮಾಡುವುದು ರೂಢಿಯಾಗಿದೆ. ಒಬ್ಬನು ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ, ಅವನು ಉದ್ಯೋಗವನ್ನು ಪಡೆದುಕೊಂಡು, ಮದುವೆಯಾಗಿ, ಸಂಸಾರ ಸಾಗಿಸುತ್ತಾ ಜೀವನದಲ್ಲಿ ನೆಲೆನಿಲ್ಲುವಂತೆ ಅವನಿಂದ ನಿರೀಕ್ಷಿಸಬಹುದು. ಕೆಲವೊಮ್ಮೆ, ಅಂತಹ ಹಿನ್ನೆಲೆಗಳಿಂದ ಬಂದ ಯುವ ಜನರು, ತಪ್ಪಾದ ದೃಷ್ಟಿಕೋನದಿಂದ ಪೂರ್ಣ ಸಮಯದ ಸೇವೆಯನ್ನು ಆರಂಭಿಸಲು ಹಿಂಜರಿಯುತ್ತಾರೆ. (ಜ್ಞಾನೋಕ್ತಿ 3:27) ಏಕೆ? ಏಕೆಂದರೆ, ಅವರ ಮೇಲೆ ಒತ್ತಡವನ್ನು ಹೇರಲಾಗುತ್ತದೆ ಮತ್ತು ಅವರು ಪ್ರಚಲಿತ ಮಟ್ಟಗಳಿಗೆ ಅನುಸಾರವಾಗಿ ನಡೆಯುವ ಆಯ್ಕೆಮಾಡುತ್ತಾರೆ. ರಾಬರ್ಟ್‌ ಸಹ ಇದೇ ರೀತಿಯ ಸನ್ನಿವೇಶವನ್ನು ಎದುರಿಸಬೇಕಾಯಿತು. *

ಸಂಸ್ಕೃತಿ ಹಾಗೂ ಮನಸ್ಸಾಕ್ಷಿಯ ನಡುವೆ ಸಂಘರ್ಷವಿರುವಾಗ

ರಾಬರ್ಟ್‌ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ಬೆಳೆಸಲ್ಪಟ್ಟಿದ್ದನು. ಹದಿಪ್ರಾಯದ ವರ್ಷಗಳಲ್ಲಿ ಅವನ ನಡತೆಯು ಸರಿಯಿರಲಿಲ್ಲ ಹಾಗೂ ಅವನ ಸಹವಾಸವು ಸಹ ಒಳ್ಳೇದಿರಲಿಲ್ಲ. ಅವನ ತಾಯಿ ಅವನ ಬಗ್ಗೆ ತುಂಬ ಚಿಂತೆಮಾಡತೊಡಗಿದರು. ಆದುದರಿಂದ, ಒಳ್ಳೆಯ ಮಾರ್ಗದಲ್ಲಿ ನಡೆಯಲಿಕ್ಕಾಗಿ ತನ್ನ ಮಗನನ್ನು ಉತ್ತೇಜಿಸುವಂತೆ, ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಸೇವಕನಾಗಿದ್ದ ಒಬ್ಬ ಪಯನೀಯರನನ್ನು ಕೇಳಿಕೊಂಡಳು. ತದನಂತರ ಏನು ಸಂಭವಿಸಿತು ಎಂಬುದನ್ನು ರಾಬರ್ಟ್‌ ವಿವರಿಸುತ್ತಾನೆ.

“ನನ್ನ ವಿಷಯದಲ್ಲಿ ಆ ಪಯನೀಯರ್‌ ಸಹೋದರನು ತೋರಿಸಿದ ಆಸಕ್ತಿಯನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೆ. ಆ ಸಹೋದರನ ಒಳ್ಳೆಯ ಮಾದರಿಯ ಫಲವಾಗಿ, ನಾನು ನನ್ನ ವಿದ್ಯಾಭ್ಯಾಸವನ್ನು ಮುಗಿಸಿದ ಕೂಡಲೆ ಪಯನೀಯರ್‌ ಸೇವೆಯನ್ನು ನನ್ನ ಜೀವನಮಾರ್ಗವಾಗಿ ಮಾಡಿಕೊಳ್ಳಲು ಬಯಸುವಂತೆ ನನ್ನನ್ನು ಪ್ರಚೋದಿಸಿತು. ಈ ಸಮಯದಲ್ಲಿ ಪುನಃ ನನ್ನ ತಾಯಿ ನನ್ನ ಬಗ್ಗೆ ಚಿಂತಿಸತೊಡಗಿತರು. ಆದರೆ ಈ ಬಾರಿ ಬೇರೊಂದು ಕಾರಣದ ಬಗ್ಗೆ ಚಿಂತಿಸುತ್ತಿದ್ದರು. ಏಕೆಂದರೆ, ನಮ್ಮ ಸಂಸ್ಕೃತಿಯಲ್ಲಿ, ಒಬ್ಬ ಹುಡುಗಿಯು ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಕೂಡಲೆ ಪಯನೀಯರ್‌ ಸೇವೆಯನ್ನು ಆರಂಭಿಸಿದರೆ ಅದರಲ್ಲಿ ಏನೂ ತೊಂದರೆಯಿರುತ್ತಿರಲಿಲ್ಲ. ಆದರೆ ಹುಡುಗನು ಮಾತ್ರ ಹಾಗೆ ಮಾಡಸಾಧ್ಯವಿರಲಿಲ್ಲ. ಏಕೆಂದರೆ ಅವನು ಮೊದಲು ಆರ್ಥಿಕ ರೀತಿಯಲ್ಲಿ ಸಾಕಷ್ಟು ಭದ್ರತೆಯನ್ನು ಪಡೆದ ನಂತರವೇ ಪಯನೀಯರ್‌ ಸೇವೆಯನ್ನು ಮಾಡುವುದರ ಕುರಿತು ಆಲೋಚಿಸುವಂತೆ ನಿರೀಕ್ಷಿಸಲಾಗುತ್ತಿತ್ತು.

“ನಾನು ಒಂದು ಕೆಲಸವನ್ನು ಕಲಿತುಕೊಂಡೆ ಮತ್ತು ನನ್ನ ಸ್ವಂತ ವ್ಯಾಪಾರವನ್ನು ಆರಂಭಿಸಿದೆ. ಸ್ವಲ್ಪದರಲ್ಲೇ ನಾನು ವ್ಯಾಪಾರದಲ್ಲಿ ಸಂಪೂರ್ಣವಾಗಿ ಮಗ್ನನಾಗಿಬಿಟ್ಟೆ. ಇದರಿಂದಾಗಿ ಕೂಟಗಳಿಗೆ ಹಾಜರಾಗುವುದು ಮತ್ತು ಸಾರುವ ಕೆಲಸದಲ್ಲಿ ಭಾಗವಹಿಸುವುದು ಕೇವಲ ಒಂದು ರೂಢಿಯಾಗಿಬಿಟ್ಟಿತು. ಸಮಯಾನಂತರ ನನ್ನ ಮನಸ್ಸಾಕ್ಷಿಯು ನನ್ನನ್ನು ಚುಚ್ಚಿತು. ಏಕೆಂದರೆ, ಯೆಹೋವನ ಸೇವೆಯಲ್ಲಿ ನಾನು ಇನ್ನೂ ಹೆಚ್ಚನ್ನು ಮಾಡಸಾಧ್ಯವಿದೆ ಎಂಬುದು ನನಗೆ ಗೊತ್ತಿತ್ತು. ಆದರೂ, ಇತರರು ನನ್ನಿಂದ ನಿರೀಕ್ಷಿಸುತ್ತಿದ್ದ ವಿಷಯಗಳಿಂದ ಸ್ವತಂತ್ರನಾಗುವುದು ನಿಜವಾಗಿಯೂ ಒಂದು ಹೋರಾಟವಾಗಿತ್ತು. ಏನೇ ಆದರೂ, ನಾನು ಸಂಸ್ಕೃತಿಯ ಬಂಧನದಿಂದ ಹೊರಗೆ ಬಂದುದಕ್ಕಾಗಿ ಈಗ ತುಂಬ ಸಂತೋಷಿತನಾಗಿದ್ದೇನೆ. ಈಗ ನನಗೆ ಮದುವೆಯಾಗಿದೆ ಮತ್ತು ಕಳೆದ ಎರಡು ವರ್ಷಗಳಿಂದ ನನ್ನ ಪತ್ನಿಯೊಂದಿಗೆ ನಾನು ಪಯನೀಯರ್‌ ಸೇವೆಮಾಡುತ್ತಿದ್ದೇನೆ. ಇತ್ತೀಚೆಗೆ, ಸಭೆಯಲ್ಲಿ ನನ್ನನ್ನು ಒಬ್ಬ ಶುಶ್ರೂಷಾ ಸೇವಕನಾಗಿ ನೇಮಿಸಲಾಯಿತು. ಪೂರ್ಣ ಮನಸ್ಸಿನಿಂದ, ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ನಾನು ಯೆಹೋವನನ್ನು ಸೇವಿಸುವುದರಲ್ಲಿ ನಿಜವಾದ ಸಂತೃಪ್ತಿಯನ್ನು ಕಾಣುತ್ತಿದ್ದೇನೆ ಎಂದು ನಾನು ಮನಃಪೂರ್ವಕವಾಗಿ ಹೇಳಬಲ್ಲೆ.”

ಸಾಧ್ಯವಿರುವಲ್ಲಿ ಶಾಲೆಯಲ್ಲಿರುವಾಗಲೇ ಒಂದು ಕೆಲಸವನ್ನು ಕಲಿತುಕೊಳ್ಳುವಂತೆ ಅಥವಾ ಉಪಯುಕ್ತವಾದ ಅರ್ಹತೆಗಳನ್ನು ಪಡೆದುಕೊಳ್ಳುವಂತೆ ಈ ಪತ್ರಿಕೆಯು ಆಗಿಂದಾಗ್ಗೆ ಯುವ ಜನರನ್ನು ಪ್ರೋತ್ಸಾಹಿಸಿದೆ. ಯಾವ ಕಾರಣಕ್ಕಾಗಿ? ಐಶ್ವರ್ಯವಂತರಾಗಲಿಕ್ಕಾಗಿಯೇ? ಇಲ್ಲ. ಪ್ರಾಮುಖ್ಯವಾದ ಕಾರಣವೇನೆಂದರೆ, ಇದರಿಂದ ಅವರು ವಯಸ್ಕರಾಗುವಾಗ ತಮ್ಮನ್ನು ಯೋಗ್ಯ ರೀತಿಯಲ್ಲಿ ಬೆಂಬಲಿಸಿಕೊಳ್ಳಶಕ್ತರಾಗುವರು ಹಾಗೂ ಪೂರ್ಣ ಸಮಯದ ಸೇವೆಯಲ್ಲಿ ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಯೆಹೋವನ ಸೇವೆಮಾಡಲು ಶಕ್ತರಾಗುವರು. ಆದರೂ, ಕೆಲವೊಮ್ಮೆ ಏನಾಗಿದೆಯೆಂದರೆ, ಐಹಿಕ ಕೆಲಸಗಳನ್ನು ಬೆನ್ನಟ್ಟುವುದರಲ್ಲಿ ಯುವಕ ಯುವತಿಯರು ಎಷ್ಟರ ಮಟ್ಟಿಗೆ ಮಗ್ನರಾಗಿದ್ದಾರೆಂದರೆ, ಅವರು ಶುಶ್ರೂಷೆಗೆ ತುಂಬ ಕಡಿಮೆ ಮಹತ್ವವನ್ನು ಕೊಡುತ್ತಾರೆ. ಕೆಲವರಂತೂ ಪೂರ್ಣ ಸಮಯದ ಸೇವೆಯನ್ನು ಮಾಡುವ ವಿಷಯದಲ್ಲಿ ಸ್ವಲ್ಪವೂ ಯೋಚಿಸುವುದೇ ಇಲ್ಲ. ಏಕೆ?

ಈ ವಿಷಯದಲ್ಲಿ ರಾಬರ್ಟ್‌ನ ಹೇಳಿಕೆಗಳು ನಿಜವನ್ನು ತಿಳಿಸುತ್ತವೆ. ಅವನು ಒಂದು ಕೆಲಸವನ್ನು ಕಲಿತುಕೊಂಡ ಬಳಿಕ, ವ್ಯಾಪಾರವನ್ನು ಆರಂಭಿಸಿದನು. ಸ್ವಲ್ಪದರಲ್ಲೇ ಅವನು, ಎಲ್ಲಿಗೂ ತಲಪಿಸದಂತಹ ಸಾಂಕೇತಿಕ ಮೆಟ್ಟುಯಂತ್ರ (ಟ್ರೆಡ್‌ಮಿಲ್‌)ದ ಮೇಲಿದ್ದನು. ಆರ್ಥಿಕವಾಗಿ ನೆಲೆನಿಲ್ಲುವುದು ಅವನ ಗುರಿಯಾಗಿತ್ತು. ಆದರೆ, ಕ್ರೈಸ್ತ ಸಭೆಯ ಒಳಗಾಗಲಿ ಹೊರಗಾಗಲಿ ಯಾರಾದರೊಬ್ಬರು ಆರ್ಥಿಕವಾಗಿ ನೆಲೆನಿಲ್ಲುವ ಗುರಿಯನ್ನು ಪೂರ್ಣವಾಗಿ ಸಾಧಿಸಿದ್ದಾರೋ? ಕ್ರೈಸ್ತರು ತಮ್ಮ ಆರ್ಥಿಕ ಹಂಗುಗಳನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತಾ, ಆರ್ಥಿಕ ರೀತಿಯಲ್ಲಿ ಜವಾಬ್ದಾರಿಯುತರಾಗಿರಲು ಪ್ರಯತ್ನಿಸಬೇಕು ಎಂಬುದೇನೋ ನಿಜ; ಆದರೆ ಈ ಸಂದಿಗ್ಧ ಸಮಯಗಳಲ್ಲಿ, ತಾವು ನಿಜವಾಗಿಯೂ ಆರ್ಥಿಕವಾಗಿ ಭದ್ರತೆಯನ್ನು ಕಂಡುಕೊಂಡಿದ್ದೇವೆ ಎಂದು ಭಾವಿಸುವ ಹಂತವನ್ನು ತಲಪುವುದು ತುಂಬ ಅಪರೂಪ ಎಂಬುದನ್ನು ಸಹ ಅವರು ಗ್ರಹಿಸಬೇಕು. ಆದುದರಿಂದಲೇ, ಮತ್ತಾಯ 6:33ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ವಾಗ್ದಾನವು ಕ್ರೈಸ್ತರಿಗೆ ನಿಜವಾಗಿಯೂ ಸಾಂತ್ವನದಾಯಕವಾಗಿದೆ.

ತನ್ನ ಸಂಸ್ಕೃತಿಯ ಆಜ್ಞೆಗಳನ್ನು ಅನುಸರಿಸುವುದಕ್ಕೆ ಬದಲಾಗಿ, ತನ್ನ ಹೃದಯದ ಬಯಕೆಗಳನ್ನು ಅನುಸರಿಸುವ ನಿರ್ಧಾರವನ್ನು ಮಾಡಿರುವುದಕ್ಕಾಗಿ ರಾಬರ್ಟ್‌ ತುಂಬ ಸಂತೋಷಿತನಾಗಿದ್ದಾನೆ. ಇಂದು, ಪೂರ್ಣ ಸಮಯದ ಸೇವೆಯನ್ನು ಮಾಡುವುದರಲ್ಲಿ ಅವನು ಆನಂದಿಸುತ್ತಿದ್ದಾನೆ. ಹೌದು, ಪೂರ್ಣ ಸಮಯದ ಸೇವೆಯು ಕೀರ್ತಿಗೆ ಯೋಗ್ಯವಾದ ಒಂದು ಜೀವನಮಾರ್ಗವಾಗಿದೆ. ರಾಬರ್ಟ್‌ ಯೆಹೋವನ ಸೇವೆಮಾಡುತ್ತಿರುವುದರಿಂದ ಅವನಿಗೆ ಮನಶ್ಶಾಂತಿಯಿದೆ; ಏಕೆಂದರೆ ‘ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ’ ತಾನು ಯೆಹೋವನನ್ನು ಸೇವಿಸುತ್ತಿದ್ದೇನೆ ಎಂದು ಅವನು ಹೇಳುತ್ತಾನೆ.

ನಿಮ್ಮ ಬುದ್ಧಿಸಾಮರ್ಥ್ಯಗಳನ್ನು ಸದುಪಯೋಗಿಸಿರಿ

ಯೆಹೋವನ ಸಾಕ್ಷಿಗಳಲ್ಲಿ ಬೇರೆ ಬೇರೆ ವರದಾನಗಳಿರುವ ಅನೇಕ ಜನರಿದ್ದಾರೆ. ಬೇರೆ ಬೇರೆ ಸಾಮರ್ಥ್ಯಗಳಿರುವ ಪ್ರತಿಭಾವಂತರಿದ್ದಾರೆ ಮತ್ತು ಕೈಕೆಲಸಗಳಲ್ಲಿ ಪ್ರತಿಭೆಯುಳ್ಳವರೂ ಇದ್ದಾರೆ. ಈ ಎಲ್ಲ ವರದಾನಗಳು ಯೆಹೋವನಿಂದ ಬಂದವುಗಳಾಗಿವೆ. ಮತ್ತು ಆತನೇ “ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿ”ದ್ದಾನೆ. (ಅ. ಕೃತ್ಯಗಳು 17:25) ಜೀವವೇ ಇಲ್ಲದಿರುತ್ತಿದ್ದಲ್ಲಿ, ಈ ವರದಾನಗಳಿಗೆ ಯಾವುದೇ ಬೆಲೆಯಿರುತ್ತಿರಲಿಲ್ಲ.

ಆದುದರಿಂದ, ನಮ್ಮ ಸಮರ್ಪಿತ ಜೀವನಗಳನ್ನು ಯೆಹೋವನ ಸೇವೆಯಲ್ಲಿ ಉಪಯೋಗಿಸುವುದು ಯೋಗ್ಯವಾದದ್ದಾಗಿದೆ. ಬುದ್ಧಿಸಾಮರ್ಥ್ಯವಿದ್ದಂತಹ ಒಬ್ಬ ಯುವಕನು ಇದನ್ನೇ ಮಾಡಲು ನಿರ್ಧರಿಸಿದನು. ಅವನು ಸಾ.ಶ. ಮೊದಲನೆಯ ಶತಮಾನದಲ್ಲಿ ಜೀವಿಸಿದ್ದನು. ಅವನು ತುಂಬ ಪ್ರಸಿದ್ಧವಾದ ಕುಟುಂಬದ ಸದಸ್ಯನಾಗಿದ್ದನು. ಕಿಲಿಕ್ಯ ಸೀಮೆಯ ಪ್ರಸಿದ್ಧ ಪಟ್ಟಣವಾಗಿದ್ದ ತಾರ್ಸದಲ್ಲಿ ಅವನು ಬೆಳೆದನು. ಅವನು ಜನ್ಮತಃ ಯೆಹೂದ್ಯನಾಗಿದ್ದರೂ, ತನ್ನ ತಂದೆಯಿಂದ ರೋಮನ್‌ ಪ್ರಜಾಹಕ್ಕನ್ನು ಪಡೆದಿದ್ದನು. ಇದರಿಂದಾಗಿ ಅವನಿಗೆ ಅನೇಕ ಹಕ್ಕುಗಳು ಹಾಗೂ ಸುಯೋಗಗಳು ಸಿಕ್ಕಿದವು. ಅವನು ದೊಡ್ಡವನಾದಾಗ, ಆ ಸಮಯದ ಅಗ್ರಗಣ್ಯ “ಪ್ರೊಫೆಸರರಲ್ಲಿ” ಒಬ್ಬನಾಗಿದ್ದ ಗಮಲಿಯೇಲನ ಪಾದಸನ್ನಿಧಿಯಲ್ಲಿ ಇಸ್ರಾಯೇಲ್‌ ಜನಾಂಗದ ಕಾನೂನನ್ನು ಅಭ್ಯಾಸಿಸಿದನು. ಅತಿ ಬೇಗನೆ ಅವನಿಗೂ ‘ಐಶ್ವರ್ಯ, ವಿಶ್ವಾಸ, ಹಾಗೂ ಹಿರಿಮೆಯು’ ಸಿಗುತ್ತದೋ ಎಂಬಂತೆ ತೋರಿತು.​—⁠ಅ. ಕೃತ್ಯಗಳು 21:39; 22:​3, 27, 28.

ಈ ಯುವಕನು ಯಾರಾಗಿದ್ದನು? ಅವನ ಹೆಸರು ಸೌಲ ಎಂದಾಗಿತ್ತು. ಆದರೆ ಸೌಲನು ಒಬ್ಬ ಕ್ರೈಸ್ತನಾದನು ಮತ್ತು ಕಾಲಕ್ರಮೇಣ ಅಪೊಸ್ತಲ ಪೌಲನಾಗಿ ಪರಿಣಮಿಸಿದನು. ಅವನು ತನ್ನ ಮಹತ್ವಾಕಾಂಕ್ಷೆಗಳನ್ನು ಬದಿಗೊತ್ತಿ, ಒಬ್ಬ ಕ್ರೈಸ್ತನೋಪಾದಿ ತನ್ನ ಇಡೀ ಜೀವಿತವನ್ನು ಯೆಹೋವನ ಸೇವೆಗಾಗಿ ಮುಡಿಪಾಗಿಟ್ಟನು. ಒಬ್ಬ ವಿಖ್ಯಾತ ವಕೀಲನೋಪಾದಿ ಅಲ್ಲ, ಬದಲಾಗಿ ಸುವಾರ್ತೆಯ ಹುರುಪಿನ ಪ್ರಚಾರಕನೋಪಾದಿ ಪೌಲನು ಪ್ರಖ್ಯಾತಿಯನ್ನು ಪಡೆದನು. ಒಬ್ಬ ಮಿಷನೆರಿಯೋಪಾದಿ ಸುಮಾರು 30 ವರ್ಷಗಳನ್ನು ಕಳೆದ ಬಳಿಕ, ಫಿಲಿಪ್ಪಿಯಲ್ಲಿರುವ ತನ್ನ ಸ್ನೇಹಿತರಿಗೆ ಪೌಲನು ಒಂದು ಪತ್ರವನ್ನು ಬರೆದನು. ಈ ಪತ್ರದಲ್ಲಿ ಅವನು, ಕ್ರೈಸ್ತನಾಗುವುದಕ್ಕೆ ಮೊದಲು ತಾನು ಮಾಡಿದ್ದ ಕೆಲವು ಸಾಧನೆಗಳ ಕುರಿತು ಪುನರ್ವಿಮರ್ಶಿಸಿದನು. ತದನಂತರ ಅವನು ಹೇಳಿದ್ದು: “ಆತನ [ಯೇಸು ಕ್ರಿಸ್ತನ] ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.” (ಫಿಲಿಪ್ಪಿ 3:⁠8) ತನ್ನ ಜೀವನವನ್ನು ಉಪಯೋಗಿಸಿದ ರೀತಿಯ ಬಗ್ಗೆ ಪೌಲನಿಗೆ ಸ್ವಲ್ಪವೂ ವಿಷಾದವಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಗಮಲಿಯೇಲನಿಂದ ಪೌಲನು ಪಡೆದುಕೊಂಡ ತರಬೇತಿಯ ಕುರಿತಾಗಿ ಏನು? ಅವನಿಗೆ ಅದು ಎಂದಾದರೂ ಉಪಯೋಗಕ್ಕೆ ಬಂತೋ? ಹೌದು! ಅನೇಕ ಸಂದರ್ಭಗಳಲ್ಲಿ ಅವನು “ಸುವಾರ್ತೆಯ ಪರವಾಗಿ ಮಾತಾಡಲು ಹಾಗೂ ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸಲು” (NW) ಸಹಾಯಮಾಡಿದನು. ಆದರೆ ಪೌಲನ ಮುಖ್ಯ ಕೆಲಸವು, ಸುವಾರ್ತೆಯನ್ನು ಸಾರುವ ಪ್ರಚಾರಕನಾಗಿರುವುದಾಗಿತ್ತು; ಈ ಕೆಲಸವನ್ನು ಅವನ ವಿದ್ಯಾಭ್ಯಾಸವು ಎಂದೂ ಅವನಿಗೆ ಕಲಿಸಸಾಧ್ಯವಿರಲಿಲ್ಲ.​—⁠ಫಿಲಿಪ್ಪಿ 1:7; ಅ. ಕೃತ್ಯಗಳು 26:​24, 25.

ತದ್ರೀತಿಯಲ್ಲಿ ಇಂದು, ಕೆಲವರು ತಮ್ಮ ವರದಾನಗಳನ್ನು ಹಾಗೂ ಬುದ್ಧಿಸಾಮರ್ಥ್ಯಗಳನ್ನು ಮತ್ತು ತಮ್ಮ ವಿದ್ಯಾಭ್ಯಾಸವನ್ನು, ರಾಜ್ಯಾಭಿರುಚಿಗಳನ್ನು ಹೆಚ್ಚಿಸುವ ಕೆಲಸದಲ್ಲಿ ಉಪಯೋಗಿಸಲು ಶಕ್ತರಾಗಿದ್ದಾರೆ. ದೃಷ್ಟಾಂತಕ್ಕಾಗಿ, ಎಮಿಯು ಕಾಮರ್ಸ್‌ನಲ್ಲಿ ವಿಶ್ವವಿದ್ಯಾನಿಲಯದ ಡಿಗ್ರಿಯನ್ನು ಪಡೆದುಕೊಂಡಿದ್ದಾಳೆ ಮತ್ತು ನ್ಯಾಯಶಾಸ್ತ್ರದಲ್ಲಿಯೂ ಇನ್ನೊಂದು ಡಿಗ್ರಿಯನ್ನು ಪಡೆದುಕೊಂಡಿದ್ದಾಳೆ. ಈ ಮುಂಚೆ ಅವಳು ಒಂದು ಕಾನೂನು ಸಂಸ್ಥೆಯಲ್ಲಿ ತುಂಬ ಲಾಭಕರವಾದ ಉದ್ಯೋಗದಲ್ಲಿದ್ದಳು. ಆದರೆ ಇಂದು ಅವಳು ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸ್‌ಗಳಲ್ಲೊಂದರಲ್ಲಿ ಒಬ್ಬ ಸ್ವಯಂಸೇವಕಳೋಪಾದಿ ವೇತನರಹಿತ ಕೆಲಸವನ್ನು ಮಾಡುತ್ತಿದ್ದಾಳೆ. ಈಗಿನ ತನ್ನ ಜೀವನದ ಕುರಿತು ಎಮಿ ಹೀಗೆ ವರ್ಣಿಸುತ್ತಾಳೆ: “ನನ್ನ ಜೀವನದಲ್ಲೇ ಅತ್ಯುತ್ತಮ ಆಯ್ಕೆಯನ್ನು ನಾನು ಮಾಡಿದ್ದೇನೆ ಎಂಬುದೇ ನನ್ನ ಅಭಿಪ್ರಾಯ. . . . ನನ್ನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸಮಾಡಿದ ವಿದ್ಯಾರ್ಥಿಗಳ ಹೆಜ್ಜೆಜಾಡನ್ನು ಅನುಸರಿಸುವ ಬಯಕೆ ನನಗಿಲ್ಲ. ನಾನು ಆಯ್ಕೆಮಾಡಿಕೊಂಡಿರುವ ಜೀವನಮಾರ್ಗದ ಬಗ್ಗೆ ನನಗೆ ಹೆಮ್ಮೆಯ ಅನಿಸಿಕೆ ಇದೆ. ನನಗೆ ಬೇಕಾಗಿರುವುದೆಲ್ಲವೂ ನನಗೆ ಸಿಕ್ಕಿದೆ ಮತ್ತು ನಾನು ಬಯಸಿದ್ದೆಲ್ಲವೂ ನನಗೆ ಪ್ರಾಪ್ತಿಯಾಗಿದೆ. ಅದೇನೆಂದರೆ, ಸಂತುಷ್ಟವಾದ ಹಾಗೂ ಸಂತೃಪ್ತ ಜೀವನ ಮತ್ತು ಮನಸ್ಸಿಗೆ ಸಮಾಧಾನ ಸಂತೃಪ್ತಿಯನ್ನು ನೀಡುವಂತಹ ಒಂದು ಕೆಲಸ.”

ತನಗೆ ಮನಶ್ಶಾಂತಿಯನ್ನು, ಸಂತೃಪ್ತಿಯನ್ನು ಹಾಗೂ ಯೆಹೋವನ ಆಶೀರ್ವಾದವನ್ನು ತಂದುಕೊಟ್ಟಂತಹ ಒಂದು ಜೀವನಮಾರ್ಗವನ್ನು ಎಮಿ ಆಯ್ಕೆಮಾಡಿದಳು. ಖಂಡಿತವಾಗಿಯೂ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ವಿಷಯದಲ್ಲೂ ಇದನ್ನೇ ಬಯಸುತ್ತಾರೆ!

ಕ್ರೈಸ್ತ ಶುಶ್ರೂಷೆಯಲ್ಲಿ ಯಶಸ್ಸು

ಕ್ರೈಸ್ತ ಶುಶ್ರೂಷೆಯಲ್ಲಿನ ಯಶಸ್ಸಿನ ಕುರಿತು ಯೋಗ್ಯವಾದ ನೋಟವುಳ್ಳವರಾಗಿರುವುದು ಅತ್ಯಾವಶ್ಯಕವಾಗಿದೆ ಎಂಬುದಂತೂ ಖಂಡಿತ. ಬೈಬಲ್‌ ಸಾಹಿತ್ಯವನ್ನು ನೀಡುವ ಮೂಲಕ ಅಥವಾ ಮನೆಯವರನ್ನು ಪ್ರಚೋದನಾತ್ಮಕ ಬೈಬಲ್‌ ಚರ್ಚೆಯಲ್ಲಿ ಒಳಗೂಡಿಸುವ ಮೂಲಕ, ನಾವು ಕ್ಷೇತ್ರ ಸೇವೆಯಲ್ಲಿ ಸಂತೋಷದಿಂದ ಸಮಯವನ್ನು ಕಳೆದಿರುವಾಗ, ನಾವು ಯಶಸ್ಸನ್ನು ಪಡೆದುಕೊಂಡಿದ್ದೇವೆ ಎಂದು ಭಾವಿಸುವುದು ಸುಲಭ. ಆದರೆ, ನಮ್ಮ ಸುವಾರ್ತೆಗೆ ಕಿವಿಗೊಡುವಂತಹ ಜನರನ್ನು ನಾವು ಕಂಡುಕೊಳ್ಳದಿರುವಲ್ಲಿ, ನಾವು ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದೇವೆ ಎಂಬ ತೀರ್ಮಾನಕ್ಕೆ ನಾವು ಬರಬಹುದು. ಆದರೆ, ಒಂದು ವಿಷಯವನ್ನು ನೆನಪಿನಲ್ಲಿಡಿರಿ; ಅದೇನೆಂದರೆ, ಯಶಸ್ಸಿನ ಅರ್ಥನಿರೂಪಣೆಗಳಲ್ಲಿ ಒಂದು ‘ವಿಶ್ವಾಸವನ್ನು ಗಳಿಸುವುದೇ’ ಆಗಿದೆ. ನಾವು ಯಾರ ವಿಶ್ವಾಸವನ್ನು ಪಡೆದುಕೊಳ್ಳಲು ಬಯಸುತ್ತೇವೆ? ಯೆಹೋವನದ್ದೇ. ಜನರು ನಮ್ಮ ಸಂದೇಶಕ್ಕೆ ಕಿವಿಗೊಡಲಿ ಅಥವಾ ಕಿವಿಗೊಡಲು ನಿರಾಕರಿಸಲಿ, ಯೆಹೋವನ ವಿಶ್ವಾಸವನ್ನು ಮಾತ್ರ ನಾವು ಖಂಡಿತವಾಗಿಯೂ ಗಳಿಸಸಾಧ್ಯವಿದೆ. ಈ ವಿಷಯದಲ್ಲಿ ಯೇಸು ತನ್ನ ಶಿಷ್ಯರಿಗೆ ಒಂದು ಮಹತ್ವಪೂರ್ಣ ಪಾಠವನ್ನು ಕಲಿಸಿದನು.

ಯೇಸು 70 ಮಂದಿ ರಾಜ್ಯ ಪ್ರಚಾರಕರನ್ನು “ತಾನು ಹೋಗಬೇಕೆಂದಿದ್ದ ಪ್ರತಿಯೊಂದೂರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು” ಎಂಬುದನ್ನು ನೀವು ಜ್ಞಾಪಿಸಿಕೊಳ್ಳಬಹುದು. (ಲೂಕ 10:⁠1) ಈ ಬಾರಿ ಅವರು ಪಟ್ಟಣದಿಂದ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಸಾರುತ್ತಿರುವಾಗ, ಈ ಮುಂಚಿನಂತೆ ಯೇಸು ಅವರ ಜೊತೆಯಲ್ಲಿರಲಿಲ್ಲ. ಇದು ಅವರಿಗೆ ಒಂದು ಹೊಸ ಅನುಭವವಾಗಿತ್ತು. ಆದುದರಿಂದ, ಅವರನ್ನು ಹೊರಗೆ ಕಳುಹಿಸುವುದಕ್ಕೆ ಮೊದಲು ಯೇಸು ಅವರಿಗೆ ಸವಿವರವಾದ ಸೂಚನೆಗಳನ್ನು ನೀಡಿದನು. ಅವರು ಒಬ್ಬ “ಆಶೀರ್ವಾದಪಾತ್ರ”ನನ್ನು ಭೇಟಿಯಾದಾಗ, ರಾಜ್ಯದ ಕುರಿತು ಅವನಿಗೆ ಸಂಪೂರ್ಣವಾದ ರೀತಿಯಲ್ಲಿ ಸಾಕ್ಷಿಯನ್ನು ಕೊಡಬೇಕಾಗಿತ್ತು. ಆದರೂ, ಅವರ ಸಂದೇಶವನ್ನು ತಿರಸ್ಕರಿಸುವವರು ಸಿಕ್ಕಿದಾಗ, ಅದರ ಬಗ್ಗೆ ಚಿಂತಿಸದೆ ತಮ್ಮ ದಾರಿ ಹಿಡಿದು ಮುಂದೆ ಸಾಗಬೇಕಾಗಿತ್ತು. ಅವರಿಗೆ ಕಿವಿಗೊಡಲು ನಿರಾಕರಿಸುವವರೆಲ್ಲರೂ ವಾಸ್ತವದಲ್ಲಿ ಯೆಹೋವನನ್ನೇ ತಿರಸ್ಕರಿಸುವಂತಿದ್ದಾರೆ ಎಂದು ಸಹ ಯೇಸು ಅವರಿಗೆ ಹೇಳಿದನು.​—⁠ಲೂಕ 10:​4-7, 16.

ಆ 70 ಮಂದಿ ಶಿಷ್ಯರು ತಮ್ಮ ಸಾರುವ ನೇಮಕವನ್ನು ಪೂರ್ಣಗೊಳಿಸಿದಾಗ, ಅವರು “ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು​—⁠ಸ್ವಾಮೀ, ದೆವ್ವಗಳು ಕೂಡಾ ನಿನ್ನ ಹೆಸರನ್ನು ಕೇಳಿ ನಮಗೆ ಅಧೀನವಾಗುತ್ತವೆ” ಎಂದು ಯೇಸುವಿಗೆ ಹೇಳಿದರು. (ಲೂಕ 10:17) ಆ ಅಪರಿಪೂರ್ಣ ಪುರುಷರಿಗೆ, ಪ್ರಬಲವಾದ ಆತ್ಮಜೀವಿಗಳಾಗಿದ್ದ ದೆವ್ವಗಳನ್ನು ಬಿಡಿಸುವುದು ನಿಜವಾಗಿಯೂ ರೋಮಾಂಚನೀಯವಾಗಿದ್ದಿರಬೇಕು! ಆದರೂ, ತನ್ನ ಅತ್ಯುತ್ಸಾಹಿ ಶಿಷ್ಯರಿಗೆ ಹೀಗೆ ಎಚ್ಚರಿಕೆ ನೀಡಿದನು: “ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಮ್ಮ [ನಿಮ್ಮ] ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ.” (ಲೂಕ 10:20; ಓರೆ ಅಕ್ಷರಗಳು ನಮ್ಮವು.) ಆ 70 ಮಂದಿ ದೆವ್ವಗಳನ್ನು ಬಿಡಿಸುವ ಶಕ್ತಿಯನ್ನು ಯಾವಾಗಲೂ ಹೊಂದಿರುವರು ಅಥವಾ ಶುಶ್ರೂಷೆಯಲ್ಲಿ ಅವರಿಗೆ ಯಾವಾಗಲೂ ಸಕಾರಾತ್ಮಕ ಫಲಿತಾಂಶಗಳೇ ಸಿಗುವವು ಎಂದು ಹೇಳಸಾಧ್ಯವಿರಲಿಲ್ಲ. ಆದರೆ, ಅವರು ನಂಬಿಗಸ್ತರಾಗಿ ಉಳಿಯುವಲ್ಲಿ, ಅವರಿಗೆ ಯಾವಾಗಲೂ ದೇವರ ಅನುಗ್ರಹವು ಸಿಗುವ ಸಾಧ್ಯತೆಯಿತ್ತು.

ಪೂರ್ಣ ಸಮಯದ ಶುಶ್ರೂಷಕರನ್ನು ನೀವು ಗಣ್ಯಮಾಡುತ್ತೀರೊ?

ಒಬ್ಬ ಯುವಕನು ಕ್ರೈಸ್ತ ಹಿರಿಯನೊಬ್ಬನಿಗೆ ಹೇಳಿದ್ದು: “ನಾನು ಪ್ರೌಢಶಾಲೆಯಿಂದ ತೇರ್ಗಡೆಯಾದ ಬಳಿಕ, ಒಂದು ಉದ್ಯೋಗವನ್ನು ಪಡೆದುಕೊಳ್ಳಲು ಪ್ರಯತ್ನಿಸುವೆ. ಒಂದುವೇಳೆ ನನಗೆ ಕೆಲಸ ಸಿಕ್ಕುವುದಿಲ್ಲವಾದರೆ, ನಾನು ಪೂರ್ಣ ಸಮಯದ ಸೇವೆಯನ್ನು ಆರಂಭಿಸುವ ಆಲೋಚನೆ ಮಾಡುವೆ.” ಆದರೆ, ಪಯನೀಯರ್‌ ಸೇವೆಯನ್ನು ಮಾಡುತ್ತಿರುವ ಅನೇಕರ ದೃಷ್ಟಿಕೋನವು ಈ ರೀತಿ ಇರುವುದಿಲ್ಲ. ಪಯನೀಯರ್‌ ಸೇವೆಯನ್ನು ಮಾಡುವುದಕ್ಕೋಸ್ಕರ, ಕೆಲವರು ಲಾಭದಾಯಕ ಕೆಲಸಗಳ ಸದವಕಾಶವನ್ನು ತಿರಸ್ಕರಿಸಿದ್ದಾರೆ. ಇನ್ನಿತರರಾದರೋ ಉನ್ನತ ವ್ಯಾಸಂಗಕ್ಕಾಗಿ ಸಿಕ್ಕಿರುವ ಅವಕಾಶಗಳನ್ನು ನಿರಾಕರಿಸಿದ್ದಾರೆ. ಅಪೊಸ್ತಲ ಪೌಲನಂತೆ ಇವರು ಸಹ ತ್ಯಾಗಗಳನ್ನು ಮಾಡಿದ್ದಾರೆ. ಆದರೂ ಪೌಲ, ರಾಬರ್ಟ್‌, ಮತ್ತು ಎಮಿಯಂತೆಯೇ ಇವರು ಸಹ ತಾವು ಮಾಡಿರುವ ಆಯ್ಕೆಗಳಿಗಾಗಿ ವಿಷಾದಿಸುವುದಿಲ್ಲ. ತಮಗೆ ಸಿಕ್ಕಿರುವ ವರದಾನಗಳನ್ನು, ತಮ್ಮ ಅತ್ಯುತ್ತಮ ಸೇವೆಗೆ ಅರ್ಹನಾಗಿರುವ ಯೆಹೋವನ ಸ್ತುತಿಗಾಗಿ ಉಪಯೋಗಿಸುವ ಸುಯೋಗವು ತಮಗೆ ಸಿಕ್ಕಿರುವುದಕ್ಕಾಗಿ ಅವರು ಗಣ್ಯತೆಯನ್ನು ವ್ಯಕ್ತಪಡಿಸುತ್ತಾರೆ.

ಯೆಹೋವನ ಅನೇಕ ನಂಬಿಗಸ್ತ ಸಾಕ್ಷಿಗಳು, ಬೇರೆ ಬೇರೆ ಕಾರಣಗಳಿಂದಾಗಿ ಪಯನೀಯರ್‌ ಸೇವೆಯನ್ನು ಮಾಡುವ ಸ್ಥಿತಿಯಲ್ಲಿಲ್ಲ ಎಂಬುದು ನಿಜ. ಅವರು ಕೆಲವೊಂದು ಶಾಸ್ತ್ರೀಯ ಕರ್ತವ್ಯಗಳನ್ನು ಪೂರೈಸುವ ಹಂಗಿನಲ್ಲಿರಬಹುದು. ಆದರೂ, ಅವರು ತಮ್ಮ ಪೂರ್ಣ ‘ಹೃದಯ, ಪ್ರಾಣ, ಮತ್ತು ಬುದ್ಧಿ’ಯಿಂದ ದೇವರ ಸೇವೆಮಾಡುತ್ತಿರುವಲ್ಲಿ, ಯೆಹೋವನು ಅವರನ್ನು ಮೆಚ್ಚಿಕೊಳ್ಳುತ್ತಾನೆ. (ಮತ್ತಾಯ 22:37) ಸ್ವತಃ ಅವರೇ ಪಯನೀಯರ್‌ ಸೇವೆಯನ್ನು ಮಾಡಲು ಅಶಕ್ತರಾಗಿರುವುದಾದರೂ, ಯಾರು ಪಯನೀಯರ್‌ ಸೇವೆಯನ್ನು ಮಾಡುತ್ತಾರೋ ಅವರು ಅತ್ಯುತ್ತಮವಾದ ಜೀವನಮಾರ್ಗವನ್ನು ಆಯ್ದುಕೊಂಡಿದ್ದಾರೆ ಎಂಬುದನ್ನು ಇವರು ಗ್ರಹಿಸುತ್ತಾರೆ.

ಅಪೊಸ್ತಲ ಪೌಲನು ಬರೆದುದು: ‘ಇಹಲೋಕದ ನಡವಳಿಕೆಯನ್ನು ಅನುಸರಿಸದಿರಿ.’ (ರೋಮಾಪುರ 12:⁠2) ಪೌಲನ ಸಲಹೆಗೆ ಹೊಂದಿಕೆಯಲ್ಲಿ, ಈ ವ್ಯವಸ್ಥೆಯ ಸಂಸ್ಕೃತಿಯ ಮಟ್ಟಗಳು ಅಥವಾ ಐಹಿಕ ಮಟ್ಟಗಳು, ನಮ್ಮ ಆಲೋಚನೆಯನ್ನು ರೂಪಿಸುವಂತೆ ನಾವು ಬಿಡಬಾರದು. ನೀವು ಪಯನೀಯರ್‌ ಸೇವೆಯನ್ನು ಮಾಡಸಾಧ್ಯವಿರಲಿ ಇಲ್ಲದಿರಲಿ, ಯೆಹೋವನ ಸೇವೆಯನ್ನು ನಿಮ್ಮ ಜೀವಿತದ ಮುಖ್ಯ ಭಾಗವಾಗಿ ಮಾಡಿಕೊಳ್ಳಿರಿ. ಯೆಹೋವನ ಸಮ್ಮತಿಯಿರುವಷ್ಟು ಸಮಯ ಖಂಡಿತವಾಗಿಯೂ ನೀವು ಯಶಸ್ಸನ್ನು ಪಡೆದುಕೊಳ್ಳುವಿರಿ.

[ಪಾದಟಿಪ್ಪಣಿ]

^ ಪ್ಯಾರ. 5 ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 19ರಲ್ಲಿರುವ ಚಿತ್ರ]

ನಿಮ್ಮನ್ನು ಎಲ್ಲಿಗೂ ತಲುಪಿಸದಂತಹ ಸಾಂಕೇತಿಕ ಮೆಟ್ಟುಯಂತ್ರಕ್ಕೆ ನೀವು ಅಂಟಿಕೊಳ್ಳದಿರಿ