ನೈತಿಕ ಮೌಲ್ಯಗಳು ಅವನತಿಗೊಳ್ಳುತ್ತಿವೆ
ನೈತಿಕ ಮೌಲ್ಯಗಳು ಅವನತಿಗೊಳ್ಳುತ್ತಿವೆ
“ಈರೀತಿಯ ಸಂಗತಿಯು ಹಿಂದೆ ನಡೆಯುತ್ತಿರಲಿಲ್ಲ” ಎಂದು ಜರ್ಮನಿಯ ಮಾಜಿ ಸಚಿವರಾದ ಹೆಲ್ಮೂಟ್ ಸ್ಕಿಮಟ್ ಹೇಳಿದರು. ಏಕೆಂದರೆ, ಇತ್ತೀಚೆಗೆ ಸರಕಾರಿ ಅಧಿಕಾರಿಗಳಿಂದ ಆಗುತ್ತಿರುವ ಅಪ್ರಾಮಾಣಿಕತೆಯ ಕುರಿತ ವರದಿಗಳು ತಲೆಬರಹಗಳಲ್ಲಿ ಕಾಣಿಸಿಕೊಂಡದ್ದನ್ನು ನೋಡಿ ಇವರು ಮನನೊಂದಿದ್ದರು. “ಮನುಷ್ಯ ಲೋಭಿಯಾಗಿರುವುದರಿಂದಲೇ ನೈತಿಕ ಮಟ್ಟಗಳು ಅವನತಿಗೊಂಡಿವೆ” ಎಂಬುದು ಇವರ ಹೇಳಿಕೆಯಾಗಿದೆ.
ಇವರ ಮಾತನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ಏಕೆಂದರೆ, ದೇವರ ವಾಕ್ಯವಾದ ಬೈಬಲಿನ ಮೇಲೆ ಆಧಾರಿಸಲ್ಪಟ್ಟಿರುವ ಹಾಗೂ ಸರಿ ಯಾವುದು ತಪ್ಪು ಯಾವುದು ಎಂಬುದಕ್ಕೆ ಮಾರ್ಗದರ್ಶಕದೋಪಾದಿ ಬಹಳ ಹಿಂದಿನಿಂದಲೂ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿರುವ ನೈತಿಕ ಮೌಲ್ಯಗಳು ತಳ್ಳಿಹಾಕಲ್ಪಟ್ಟಿವೆ. ಕ್ರೈಸ್ತರು ಎಂದು ಹೇಳಿಕೊಳ್ಳುವ ದೇಶಗಳಲ್ಲಿಯೂ ಸಹ ಪರಿಸ್ಥಿತಿಯು ಇದೇ ರೀತಿಯಲ್ಲಿದೆ.
ಬೈಬಲು ನೈತಿಕವಾಗಿ ಪ್ರಸಕ್ತವಾಗಿದೆಯೋ?
ಬೈಬಲಿನ ಬೋಧನೆಗಳ ಮೇಲಾಧಾರಿಸಿದ ನೈತಿಕತೆಯಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆ ಒಳಗೂಡಿರುತ್ತದೆ. ಆದರೆ, ಇಂದು ಮೋಸ, ಭ್ರಷ್ಟಾಚಾರ ಹಾಗೂ ವಂಚನೆ ಎಲ್ಲೆಲ್ಲೂ ತಾಂಡವಾಡುತ್ತಿದೆ. “ಪೊಲೀಸರಿಂದ ಜಫ್ತಿಮಾಡಲ್ಪಟ್ಟ ಅಮಲೌಷಧಗಳನ್ನು ಪುನಃ ಮಾರುವಂತೆ ಅಪರಾಧಿಗಳಿಗೆ ಕೊಡುವ ಮೂಲಕ” ಕೆಲವು ಪತ್ತೇದಾರರು “ಸುಮಾರು 1,00,000 ಡಾಲರುಗಳನ್ನು ಕಬಳಿಸಿದ್ದಾರೆ” ಎಂದು ಲಂಡನಿನ ದ ಟೈಮ್ಸ್ ವರದಿಸುತ್ತದೆ. ಆಸ್ಟ್ರಿಯ ದೇಶದಲ್ಲಿ ವಿಮೆಯ ಹಣದಲ್ಲಿ ಮೋಸಮಾಡುವುದಂತೂ ಸರ್ವಸಾಮಾನ್ಯವಾಗಿಬಿಟ್ಟಿದೆ ಎಂದು ಹೇಳಲಾಗುತ್ತದೆ. ಮತ್ತು ಜರ್ಮನಿಯಲ್ಲಾದರೋ, “ಜರ್ಮನ್ ವಿಜ್ಞಾನ ಕ್ಷೇತ್ರದಲ್ಲಾದ ಒಂದು ಮೋಸದ ಹಗರಣವನ್ನು” ಇತ್ತೀಚೆಗೆ ಸಂಶೋಧಕರು ಕಂಡುಹಿಡಿದಾಗ, ವಿಜ್ಞಾನದ ಕ್ಷೇತ್ರದಲ್ಲಿರುವವರು
ತಲ್ಲಣಗೊಂಡರು. “ತಳಿವಿಜ್ಞಾನಿಗಳಲ್ಲಿಯೇ ಪ್ರಸಿದ್ಧ ವ್ಯಕ್ತಿಯೆಂದು” ಹೆಸರುಪಡೆದಿದ್ದ ಒಬ್ಬ ಪ್ರೊಫೆಸರ್, ಅಂಕಿಅಂಶಗಳ ಸುಳ್ಳು ಮಾಹಿತಿಯನ್ನು ನೀಡಿದರು ಇಲ್ಲವೆ ತಪ್ಪಾದ ಮಾಹಿತಿಯನ್ನು ಕಲ್ಪಿಸಿ ನುಡಿದರು ಎಂದು ಆಪಾದಿಸಲ್ಪಟ್ಟರು.
ಬೈಬಲ್ ಆಧಾರಿತ ನೈತಿಕತೆ ಎಂದು ಹೇಳುವಾಗ, ವಿವಾಹದಲ್ಲಿ ನಂಬಿಗಸ್ತರಾಗಿರುವುದು ಸಹ ಇದರಲ್ಲಿ ಸೇರಿರುತ್ತದೆ. ಅಂದರೆ ಅದು ಒಂದು ಶಾಶ್ವತವಾದ ಸಂಬಂಧವಾಗಿರತಕ್ಕದ್ದು. ಆದರೆ ಅನೇಕ ದಂಪತಿಗಳು ಕೋರ್ಟಿನ ಕಟೆಕಟೆಯನ್ನು ಹತ್ತಿ ವಿವಾಹ ವಿಚ್ಛೇದವನ್ನು ಪಡೆದುಕೊಳ್ಳುತ್ತಿದ್ದಾರೆ. ಕ್ರಿಸ್ಟ್ ಇನ್ ಡೇ ಗೇಗನ್‌ವಾರ್ಟ್ (ಸಮಕಾಲೀನ ಕ್ರೈಸ್ತ) ಎಂಬ ಕ್ಯಾಥೊಲಿಕ್ ಪೇಪರಿನ ವರದಿಗನುಸಾರ, “ತೀರ ‘ಸಂಪ್ರದಾಯಸ್ಥ ದೇಶವಾಗಿರುವ’ ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಕೂಡ ಈಗೀಗ ಬಹಳಷ್ಟು ವಿವಾಹಗಳು ಮುರಿದುಬೀಳುತ್ತಿವೆ.” ನೆದರ್‌ಲ್ಯಾಂಡ್‌ನಲ್ಲಿ ಸುಮಾರು 33 ಪ್ರತಿಶತದಷ್ಟು ವಿವಾಹಗಳು ವಿಚ್ಛೇದದಲ್ಲಿ ಕೊನೆಗೊಳ್ಳುತ್ತವೆ. ಕಳೆದ ಕೆಲವು ವರ್ಷಗಳಿಂದ ಜರ್ಮನಿಯಲ್ಲಿ ಆಗುತ್ತಿರುವ ಸಾಮಾಜಿಕ ಬದಲಾವಣೆಗಳನ್ನು ಗಮನಿಸಿದ ಒಬ್ಬ ಮಹಿಳೆಯು, ತೀರ ಚಿಂತಿತಳಾಗಿ ಹೇಳಿದ್ದು: “ಇಂದು ಅನೇಕರು ವಿವಾಹವನ್ನು ಹಳೇಕಾಲದ ಪದ್ಧತಿಯಾಗಿ ಇಲ್ಲವೇ ಇದು ಓಬೀರಾಯನ ಕಾಲದ್ದಾಗಿದೆ ಎಂದು ನೆನಸುತ್ತಾರೆ. ಇಂದು ಜನರು ವ್ಯಕ್ತಿಯೊಬ್ಬರನ್ನು ವಿವಾಹವಾಗಿ ಜೀವನಪೂರ್ತಿ ಅವನೊಂದಿಗೆ/ಅವಳೊಂದಿಗೆ ಬಾಳಲು ಇಷ್ಟಪಡುವುದಿಲ್ಲ.”
ಆದರೆ ಇನ್ನೊಂದು ಕಡೆಯಲ್ಲಿ ನೋಡುವಾಗ, ಬೈಬಲಿನಲ್ಲಿ ಕಲಿಸಲ್ಪಡುವ ನೈತಿಕ ಮಟ್ಟಗಳು ಭರವಸಾರ್ಹವಾಗಿವೆ ಮಾತ್ರವಲ್ಲ, ಈಗಲೂ ಸಹ ನಮ್ಮ ದಿನಕ್ಕೆ ಅವು ಅನ್ವಯಿಸುವಂತಹದ್ದಾಗಿವೆ ಎಂಬ ವಿಷಯವನ್ನು ಇಂದು ಲಕ್ಷಾಂತರ ಜನರು ನಂಬುತ್ತಾರೆ. ಸ್ವಿಸ್-ಜರ್ಮನಿ ಗಡಿಯಲ್ಲಿ ವಾಸಿಸುವ ಒಬ್ಬ ದಂಪತಿಯು ಬೈಬಲಿನ ನೈತಿಕತೆಗಳಿಗೆ ಅನುಸಾರವಾಗಿ ಜೀವಿಸುತ್ತಿರುವುದರಿಂದ, ತಾವು ಸುಖವಾಗಿದ್ದೇವೆ ಎಂಬುದನ್ನು ಕಂಡುಕೊಂಡರು. ಅವರ ಮಟ್ಟಿಗೆ, “ಜೀವಿತದ ಪ್ರತಿಯೊಂದು ಕ್ಷೇತ್ರಗಳಿಗೂ ಅನ್ವಯಿಸುವಂತಹ ಏಕಮಾತ್ರ ಮಾರ್ಗದರ್ಶನವಿದೆ. ಅದು ಬೈಬಲ್ ಅಲ್ಲದೆ ಇನ್ಯಾವುದೂ ಆಗಿಲ್ಲ.”
ಇದರ ಬಗ್ಗೆ ನೀವೇನು ನೆನಸುತ್ತೀರಿ? ಬೈಬಲ್ ಒಂದು ಅತ್ಯಮೂಲ್ಯ ಮಾರ್ಗದರ್ಶನವಾಗಸಾಧ್ಯವಿದೆಯೋ? ಬೈಬಲ್ ಆಧಾರಿತವಾದ ನೈತಿಕತೆಯು ಇಂದು ಪ್ರಾಯೋಗಿಕವೋ?