ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೈತಿಕ ಶುದ್ಧತೆಯ ವಿಷಯದಲ್ಲಿ ದೇವರ ನೋಟ

ನೈತಿಕ ಶುದ್ಧತೆಯ ವಿಷಯದಲ್ಲಿ ದೇವರ ನೋಟ

ನೈತಿಕ ಶುದ್ಧತೆಯ ವಿಷಯದಲ್ಲಿ ದೇವರ ನೋಟ

“ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”​—⁠ಯೆಶಾಯ 48:⁠17.

1, 2. (ಎ) ಸಾಮಾನ್ಯವಾಗಿ ಜನರು ಲೈಂಗಿಕ ನೈತಿಕತೆಯನ್ನು ಹೇಗೆ ಪರಿಗಣಿಸುತ್ತಾರೆ? (ಬಿ) ಲೈಂಗಿಕ ನೈತಿಕತೆಯ ಬಗ್ಗೆ ಕ್ರೈಸ್ತರಿಗೆ ಯಾವ ದೃಷ್ಟಿಕೋನವಿದೆ?

ಇಂದು, ಭೂಮಿಯ ಅನೇಕ ಭಾಗಗಳಲ್ಲಿ ನೈತಿಕತೆಯನ್ನು ವೈಯಕ್ತಿಕ ವಿಷಯವಾಗಿ ಪರಿಗಣಿಸಲಾಗುತ್ತದೆ. ಜನರು ಲೈಂಗಿಕ ಸಂಬಂಧಗಳನ್ನು ವಿವಾಹಕ್ಕೆ ಮಾತ್ರ ಸೀಮಿತವಾಗಿಡಬೇಕಾದ ವಿಷಯವಾಗಿ ಪರಿಗಣಿಸುವುದಿಲ್ಲ. ಇದಕ್ಕೆ ಬದಲಾಗಿ, ಈ ಸಂಬಂಧಗಳನ್ನು ತಾವು ಬಯಸಿದಾಗ ತೃಪ್ತಿಪಡಿಸಿಕೊಳ್ಳುವಂತಹ ಪ್ರೀತಿಯ ಒಂದು ಸಹಜ ಅಭಿವ್ಯಕ್ತಿಯಾಗಿ ಪರಿಗಣಿಸುತ್ತಾರೆ. ತಮ್ಮ ವರ್ತನೆಯಿಂದ ಯಾರಿಗೂ ಹಾನಿಯಾಗದಿರುವ ವರೆಗೆ, ಒಬ್ಬನು ಹೇಗೆ ವರ್ತಿಸಬೇಕು ಎಂಬುದನ್ನು ಸ್ವತಃ ನಿರ್ಧರಿಸುವುದರಲ್ಲಿ ತಪ್ಪೇನಿಲ್ಲ ಎಂದು ಅವರು ನೆನಸಬಹುದು. ಅವರ ದೃಷ್ಟಿಕೋನದಲ್ಲಿ, ಜನರ ನೈತಿಕತೆಯ ಆಧಾರದ ಮೇಲೆ, ಅದರಲ್ಲೂ ವಿಶೇಷವಾಗಿ ಅವರು ಲೈಂಗಿಕ ವಿಷಯಗಳಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದರ ಆಧಾರದ ಮೇಲೆ, ಅವರು ಒಳ್ಳೆಯವರು ಅಥವಾ ಕೆಟ್ಟವರು ಎಂಬ ತೀರ್ಮಾನಕ್ಕೆ ಬರಬಾರದು.

2 ಯೆಹೋವನ ಬಗ್ಗೆ ತಿಳಿದುಕೊಂಡಿರುವವರಿಗೆ ಈ ವಿಷಯದಲ್ಲಿ ಭಿನ್ನವಾದ ದೃಷ್ಟಿಕೋನವಿದೆ. ಅವರು ಸಂತೋಷದಿಂದ ಶಾಸ್ತ್ರೀಯ ಮಾರ್ಗದರ್ಶನಗಳನ್ನು ಅನುಸರಿಸುತ್ತಾರೆ. ಏಕೆಂದರೆ, ಅವರು ಯೆಹೋವನನ್ನು ಪ್ರೀತಿಸುತ್ತಾರೆ ಮತ್ತು ಆತನನ್ನು ಮೆಚ್ಚಿಸಲು ಬಯಸುತ್ತಾರೆ. ಯೆಹೋವನು ತಮ್ಮನ್ನು ಪ್ರೀತಿಸುತ್ತಾನೆ ಮತ್ತು ತಮ್ಮ ಒಳಿತಿಗಾಗಿಯೇ ಮಾರ್ಗದರ್ಶನವನ್ನು ನೀಡುತ್ತಾನೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ; ಈ ಮಾರ್ಗದರ್ಶನವು ನಿಜವಾಗಿಯೂ ಅವರಿಗೆ ಪ್ರಯೋಜನವನ್ನು ತರುತ್ತದೆ ಮತ್ತು ಅವರನ್ನು ಸಂತೋಷಪಡಿಸುತ್ತದೆ. (ಯೆಶಾಯ 48:17) ದೇವರು ಜೀವದ ಮೂಲನಾಗಿರುವುದರಿಂದ, ತಮ್ಮ ದೇಹಗಳನ್ನು ಹೇಗೆ ಉಪಯೋಗಿಸಬೇಕು ಎಂಬ ವಿಷಯದಲ್ಲಿ ಆತನ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಒಳ್ಳೇದಾಗಿದೆ. ಏಕೆಂದರೆ, ಜೀವವನ್ನು ದಾಟಿಸುವ ಪ್ರಕ್ರಿಯೆಗಾಗಿ ಇದು ಉಪಯೋಗಿಸಲ್ಪಡುತ್ತದೆ.

ಒಬ್ಬ ಪ್ರೀತಿಯ ಸೃಷ್ಟಿಕರ್ತನ ಕೊಡುಗೆ

3. ಕ್ರೈಸ್ತಪ್ರಪಂಚದಲ್ಲಿರುವ ಅನೇಕರಿಗೆ ಲೈಂಗಿಕ ಸಂಬಂಧಗಳ ಕುರಿತು ಏನು ಕಲಿಸಲಾಗಿದೆ, ಮತ್ತು ಬೈಬಲು ಕಲಿಸುವ ವಿಷಯಕ್ಕೆ ಹೋಲಿಸುವಾಗ ಅದು ಹೇಗೆ ಭಿನ್ನವಾಗಿದೆ?

3 ಇಂದಿನ ಲೋಕಕ್ಕೆ ವ್ಯತಿರಿಕ್ತವಾಗಿ, ಲೈಂಗಿಕ ಸಂಬಂಧಗಳು ಲಜ್ಜಾಸ್ಪದವಾಗಿವೆ, ಪಾಪಭರಿತವಾಗಿವೆ ಎಂದು ಕ್ರೈಸ್ತಪ್ರಪಂಚದಲ್ಲಿರುವ ಕೆಲವರು ಕಲಿಸಿದ್ದಾರೆ. ಮತ್ತು ಏದೆನ್‌ ತೋಟದಲ್ಲಿ ಮಾಡಲ್ಪಟ್ಟ “ಮೊದಲ ಪಾಪ”ವು, ಆದಾಮಹವ್ವರ ಲೈಂಗಿಕ ಆಕರ್ಷಣೆಯೇ ಆಗಿತ್ತು ಎಂದು ಅದು ಹೇಳುತ್ತದೆ. ಆದರೆ ಇಂತಹ ದೃಷ್ಟಿಕೋನವು, ಪ್ರೇರಿತ ಶಾಸ್ತ್ರವು ಹೇಳುವಂತಹ ವಿಷಯಗಳಿಗೆ ತದ್ವಿರುದ್ಧವಾದದ್ದಾಗಿದೆ. ಏಕೆಂದರೆ, ಪ್ರಥಮ ಮಾನವ ದಂಪತಿಗಳನ್ನು “ಪುರುಷ ಹಾಗೂ ಅವನ ಪತ್ನಿ” (NW) ಎಂದು ಬೈಬಲ್‌ ದಾಖಲೆಯು ಸೂಚಿಸುತ್ತದೆ. (ಆದಿಕಾಂಡ 2:25) “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂದು ಹೇಳುವ ಮೂಲಕ ದೇವರು ಅವರಿಗೆ ಮಕ್ಕಳನ್ನು ಪಡೆಯುವಂತೆ ಆಜ್ಞಾಪಿಸಿದನು. (ಆದಿಕಾಂಡ 1:28) ಮಕ್ಕಳನ್ನು ಹೆರುವಂತೆ ಆದಾಮಹವ್ವರಿಗೆ ದೇವರೇ ಆಜ್ಞೆಯನ್ನಿತ್ತು, ಅದನ್ನು ಪಾಲಿಸಿದ್ದಕ್ಕಾಗಿ ಅವರನ್ನು ಆತನು ಶಿಕ್ಷಿಸುತ್ತಿದ್ದಲ್ಲಿ, ಅದಕ್ಕೆ ಯಾವುದೇ ಅರ್ಥವಿರುತ್ತಿರಲಿಲ್ಲ.​—⁠ಕೀರ್ತನೆ 19:⁠8.

4. ದೇವರು ಮನುಷ್ಯರಿಗೆ ಏಕೆ ಲೈಂಗಿಕ ಶಕ್ತಿಯನ್ನು ಕೊಟ್ಟನು?

4 ನಮ್ಮ ಪ್ರಥಮ ಹೆತ್ತವರಿಗೆ ಕೊಡಲ್ಪಟ್ಟಿದ್ದ ಆ ಆಜ್ಞೆಯು, ನೋಹನಿಗೂ ಅವನ ಪುತ್ರರಿಗೂ ಪುನಃ ಒತ್ತಿಹೇಳಲ್ಪಟ್ಟಿತು. ಈ ಆಜ್ಞೆಯಲ್ಲಿ ನಾವು ಲೈಂಗಿಕ ಸಂಬಂಧಗಳ ಮುಖ್ಯ ಉದ್ದೇಶವನ್ನು ಗಮನಿಸಸಾಧ್ಯವಿದೆ: ಅದೇನೆಂದರೆ, ಮಕ್ಕಳನ್ನು ಹುಟ್ಟಿಸುವುದೇ ಆಗಿದೆ. (ಆದಿಕಾಂಡ 9:⁠1) ಆದರೂ, ತನ್ನ ವಿವಾಹಿತ ಸೇವಕರು ಮಕ್ಕಳನ್ನು ಹುಟ್ಟಿಸುವಂತಹ ಪ್ರಯತ್ನಗಳಿಗಾಗಿ ಮಾತ್ರ ಲೈಂಗಿಕ ಸಂಬಂಧಗಳನ್ನು ಸೀಮಿತಗೊಳಿಸಬೇಕಾಗಿಲ್ಲ ಎಂದು ದೇವರ ವಾಕ್ಯವು ತೋರಿಸುತ್ತದೆ. ಇಂತಹ ಲೈಂಗಿಕ ಸಂಬಂಧಗಳು, ಭಾವನಾತ್ಮಕ ಹಾಗೂ ಭೌತಿಕ ಆವಶ್ಯಕತೆಗಳನ್ನು ಯೋಗ್ಯವಾದ ರೀತಿಯಲ್ಲಿ ಪೂರೈಸಸಾಧ್ಯವಿದೆ ಮತ್ತು ಇವು ವಿವಾಹಿತ ದಂಪತಿಗಳಿಗೆ ಸಂತೋಷದ ಮೂಲವಾಗಿರಸಾಧ್ಯವಿದೆ. ಇದು, ಪರಸ್ಪರ ಅವರಿಗಿರುವ ಗಾಢವಾದ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ.​—⁠ಆದಿಕಾಂಡ 26:​8, 9; ಜ್ಞಾನೋಕ್ತಿ 5:​18, 19; 1 ಕೊರಿಂಥ 7:​3-5.

ದೈವಿಕ ನಿರ್ಬಂಧಗಳು

5. ಮಾನವರ ಲೈಂಗಿಕ ಸಂಬಂಧದ ವಿಷಯದಲ್ಲಿ ದೇವರು ಯಾವ ನಿಷೇಧಗಳನ್ನು ಒಡ್ಡಿದನು?

5 ಲೈಂಗಿಕತೆಯು ದೇವರಿಂದ ಕೊಡಲ್ಪಟ್ಟಿರುವ ಒಂದು ಕೊಡುಗೆಯಾಗಿರುವುದಾದರೂ, ಅದನ್ನು ಸ್ವೇಚ್ಛೆಯಿಂದ ವ್ಯಕ್ತಪಡಿಸಬಾರದಾಗಿದೆ. ವಿವಾಹದ ಏರ್ಪಾಡಿನೊಳಗೂ ಈ ಮೂಲತತ್ವವು ಅನ್ವಯವಾಗುತ್ತದೆ. (ಎಫೆಸ 5:​28-30; 1 ಪೇತ್ರ 3:​1, 7) ಆದರೆ, ವಿವಾಹದ ಹೊರಗೆ ಲೈಂಗಿಕ ಸಂಬಂಧಗಳು ನಿಷೇಧಿಸಲ್ಪಟ್ಟಿವೆ. ಈ ವಿಷಯದಲ್ಲಿ ಬೈಬಲು ತುಂಬ ಸ್ಪಷ್ಟವಾಗಿ ಮಾತಾಡುತ್ತದೆ. ಇಸ್ರಾಯೇಲ್‌ ಜನಾಂಗಕ್ಕೆ ದೇವರು ಕೊಟ್ಟಿದ್ದ ಧರ್ಮಶಾಸ್ತ್ರದಲ್ಲಿ, “ವ್ಯಭಿಚಾರ ಮಾಡಬಾರದು” ಎಂದು ತಿಳಿಸಲಾಗಿತ್ತು. (ವಿಮೋಚನಕಾಂಡ 20:14) ಸಮಯಾನಂತರ, ಮನಸ್ಸಿನೊಳಗಿಂದ ಹೊರಟು ಒಬ್ಬ ವ್ಯಕ್ತಿಯನ್ನು ಮಲಿನಗೊಳಿಸುವಂತಹ ‘ಕೆಟ್ಟ ಆಲೋಚನೆಗಳೊಂದಿಗೆ’ “ಜಾರತ್ವ” (NW) ಹಾಗೂ “ವ್ಯಭಿಚಾರ” (NW)ಗಳನ್ನು ಸಹ ಸೇರಿಸಿ ಯೇಸು ಮಾತಾಡುತ್ತಾನೆ. (ಮಾರ್ಕ 7:​21, 22) ಅಪೊಸ್ತಲ ಪೌಲನು ಕೊರಿಂಥದ ಕ್ರೈಸ್ತರಿಗೆ, “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂಬ ಬುದ್ಧಿವಾದವನ್ನು ನೀಡುವಂತೆ ದೈವಿಕವಾಗಿ ಪ್ರೇರೇಪಿಸಲ್ಪಟ್ಟನು. (1 ಕೊರಿಂಥ 6:18) ಮತ್ತು ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಬರೆದುದು: “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.”​—⁠ಇಬ್ರಿಯ 13:⁠4.

6. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ “ಜಾರತ್ವ” ಎಂಬ ಶಬ್ದದಲ್ಲಿ ಏನೆಲ್ಲಾ ಒಳಗೂಡಿಸಲ್ಪಟ್ಟಿದೆ?

6 “ಜಾರತ್ವ” ಎಂಬ ಶಬ್ದದ ಅರ್ಥವೇನು? ಇದು ಪೋರ್ನಿಯ ಎಂಬ ಗ್ರೀಕ್‌ ಶಬ್ದದಿಂದ ಬಂದಿದೆ. ಕೆಲವೊಮ್ಮೆ ಇದನ್ನು ಅವಿವಾಹಿತ ವ್ಯಕ್ತಿಗಳ ನಡುವಿನ ಲೈಂಗಿಕ ಸಂಬಂಧಕ್ಕೆ ಕೂಡ ಅನ್ವಯಿಸಲು ಉಪಯೋಗಿಸಲಾಗುತ್ತದೆ. (1 ಕೊರಿಂಥ 6:⁠9) ಇನ್ನೊಂದು ಕಡೆಯಲ್ಲಿ, ಅಂದರೆ ಮತ್ತಾಯ 5:32 ಹಾಗೂ ಮತ್ತಾಯ 19:9ರಂತಹ ವಚನಗಳಲ್ಲಿ, ಈ ಶಬ್ದವು ವಿಶಾಲಾರ್ಥವುಳ್ಳದ್ದಾಗಿದೆ; ಮತ್ತು ವ್ಯಭಿಚಾರ, ಅಗಮ್ಯ ಗಮನ, ಮತ್ತು ಪಶುಗಮನಕ್ಕೆ ಸಹ ಈ ಶಬ್ದವು ಸೂಚಿತವಾಗಿದೆ. ಮದುವೆಯಾಗಿರದಂತಹ ವ್ಯಕ್ತಿಗಳ ನಡುವೆ ನಡೆಯುವ ಇನ್ನಿತರ ಲೈಂಗಿಕ ಕ್ರಿಯೆಗಳನ್ನು, ಅಂದರೆ ಬಾಯಿಯ ಹಾಗೂ ಗುದದ್ವಾರದ ಮೂಲಕ ನಡೆಸುವ ಲೈಂಗಿಕ ಕ್ರಿಯೆಯನ್ನು ಹಾಗೂ ಇನ್ನೊಬ್ಬ ವ್ಯಕ್ತಿಯ ಜನನಾಂಗವನ್ನು ಮುದ್ದಿಸುವುದನ್ನು ಸಹ ಪೋರ್ನಿಯ ಎಂದು ಸಂಬೋಧಿಸಸಾಧ್ಯವಿದೆ. ದೇವರ ವಾಕ್ಯದಲ್ಲಿ ಇಂತಹ ರೂಢಿಗಳನ್ನು ನೇರವಾಗಿ ಅಥವಾ ಮೂಲತತ್ವಗಳ ಮೂಲಕ ಬಲವಾಗಿ ಖಂಡಿಸಲಾಗಿದೆ.​—⁠ಯಾಜಕಕಾಂಡ 20:​10, 13, 15, 16; ರೋಮಾಪುರ 1:​24, 26, 27, 32. *

ದೇವರ ನೈತಿಕ ನಿಯಮಗಳಿಂದ ಪ್ರಯೋಜನವನ್ನು ಪಡೆದುಕೊಳ್ಳುವುದು

7. ನೈತಿಕವಾಗಿ ಶುದ್ಧರಾಗಿರುವ ಮೂಲಕ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ?

7 ಲೈಂಗಿಕತೆ ಸಂಬಂಧದ ಕುರಿತಾದ ಯೆಹೋವನ ಮಾರ್ಗದರ್ಶನಕ್ಕೆ ವಿಧೇಯರಾಗುವುದು, ಅಪರಿಪೂರ್ಣ ಮಾನವರಿಗೆ ಒಂದು ಪಂಥಾಹ್ವಾನವಾಗಿರಸಾಧ್ಯವಿದೆ. 12ನೆಯ ಶತಮಾನದ ಮೈಮೊನೈಡಿಸ್‌ ಎಂಬ ಪ್ರಖ್ಯಾತ ಯೆಹೂದಿ ತತ್ವಜ್ಞಾನಿಯು ಬರೆದುದು: “ಇಡೀ ಟೋರಾ [ಮೋಶೆಯ ಧರ್ಮಶಾಸ್ತ್ರ]ದಲ್ಲಿ ಕೊಡಲ್ಪಟ್ಟಿರುವ ನಿಯಮಗಳಲ್ಲಿ, ನಿಷಿದ್ಧ ಸಂಬಂಧಗಳು ಹಾಗೂ ಕಾನೂನುಬಾಹಿರ ಲೈಂಗಿಕ ಸಂಬಂಧಗಳ ಕುರಿತಾದ ನಿಯಮವನ್ನು ಪಾಲಿಸುವುದು ತುಂಬ ಕಷ್ಟಕರವಾದದ್ದಾಗಿದೆ.” ಆದರೂ, ನಾವು ದೇವರ ಮಾರ್ಗದರ್ಶನಕ್ಕೆ ವಿಧೇಯರಾಗುವಲ್ಲಿ, ಅದರಿಂದ ನಮಗೆ ಮಹತ್ತರವಾದ ಪ್ರಯೋಜನಗಳು ಸಿಗುತ್ತವೆ. (ಯೆಶಾಯ 48:18) ಉದಾಹರಣೆಗೆ, ಈ ವಿಷಯದಲ್ಲಿ ವಿಧೇಯತೆಯನ್ನು ತೋರಿಸುವುದು, ರತಿರವಾನಿತ ರೋಗಗಳಿಂದ ನಮ್ಮನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ; ಇಂತಹ ರೋಗಗಳು ವಾಸಿಯಾಗುವುದೇ ಕಷ್ಟ ಮತ್ತು ಇವು ಜನರನ್ನು ಕೊಲ್ಲಸಾಧ್ಯವಿದೆ. * ಅಷ್ಟುಮಾತ್ರವಲ್ಲ, ವಿವಾಹಬಾಹಿರ ಗರ್ಭಧಾರಣೆಗಳಿಂದಲೂ ನಾವು ಸುರಕ್ಷಿತವಾಗಿ ಉಳಿಯುತ್ತೇವೆ. ದೈವಿಕ ವಿವೇಕವನ್ನು ಅನ್ವಯಿಸಿಕೊಳ್ಳುವುದು, ಶುದ್ಧವಾದ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲು ಸಹಾಯಮಾಡುವುದು. ಇದರಿಂದ ನಮ್ಮ ಸ್ವಗೌರವವೂ ಹೆಚ್ಚುತ್ತದೆ ಮತ್ತು ನಮ್ಮ ಸಂಬಂಧಿಕರು, ನಮ್ಮ ವಿವಾಹ ಸಂಗಾತಿಗಳು, ನಮ್ಮ ಮಕ್ಕಳು ಮತ್ತು ನಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಒಳಗೊಂಡು ಇನ್ನಿತರರ ಗೌರವವನ್ನೂ ನಾವು ಸಂಪಾದಿಸುತ್ತೇವೆ. ತದ್ರೀತಿಯಲ್ಲಿ, ದೈವಿಕ ವಿವೇಕವನ್ನು ಅನ್ವಯಿಸಿಕೊಳ್ಳುವುದು, ಲೈಂಗಿಕತೆಯ ಕಡೆಗೆ ಹಿತಕರವಾದ ಹಾಗೂ ಸಕಾರಾತ್ಮಕವಾದ ಮನೋಭಾವವನ್ನು ನಮ್ಮಲ್ಲಿ ಉಂಟುಮಾಡುತ್ತದೆ. ಮತ್ತು ಈ ಮನೋಭಾವವು ವಿವಾಹದಲ್ಲಿ ಹೆಚ್ಚು ಸಂತೋಷವನ್ನು ಕಂಡುಕೊಳ್ಳಲು ಸಹಾಯಮಾಡುತ್ತದೆ. ಒಬ್ಬ ಕ್ರೈಸ್ತ ಸ್ತ್ರೀಯು ಬರೆದುದು: “ದೇವರ ವಾಕ್ಯದ ಸತ್ಯತೆಯೇ ಅತ್ಯುತ್ತಮ ಸುರಕ್ಷೆಯಾಗಿದೆ. ನಾನು ವಿವಾಹಮಾಡಿಕೊಳ್ಳಲು ಕಾಯುತ್ತಿದ್ದೇನೆ. ನಾನು ವಿವಾಹವಾದಾಗ, ನಾನು ವಿವಾಹವಾಗುವ ಆ ಕ್ರೈಸ್ತ ಪುರುಷನಿಗೆ, ನಾನು ಪರಿಶುದ್ಧ ಕನ್ಯೆಯಾಗಿಯೇ ಉಳಿದಿದ್ದೇನೆ ಎಂದು ಹೆಮ್ಮೆಯಿಂದ ಹೇಳಬಲ್ಲೆ.”

8. ಯಾವ ವಿಧಗಳಲ್ಲಿ ನಮ್ಮ ನೈತಿಕ ನಡತೆಯು ಸತ್ಯಾರಾಧನೆಗೆ ಒತ್ತಾಸೆಕೊಡಬಹುದು?

8 ನಾವು ನೈತಿಕವಾಗಿ ಶುದ್ಧ ನಡತೆಯನ್ನು ಕಾಪಾಡಿಕೊಳ್ಳುವ ಮೂಲಕ, ಸತ್ಯಾರಾಧನೆಯ ಕುರಿತಾದ ತಪ್ಪಭಿಪ್ರಾಯಗಳನ್ನು ವಿರೋಧಿಸಲು ಮತ್ತು ನಾವು ಆರಾಧಿಸುವಂತಹ ದೇವರ ಕಡೆಗೆ ಜನರನ್ನು ಆಕರ್ಷಿಸಲು ಹೆಚ್ಚನ್ನು ಮಾಡಸಾಧ್ಯವಿದೆ. ಆದುದರಿಂದಲೇ, ಅಪೊಸ್ತಲ ಪೇತ್ರನು ಬರೆದುದು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” (1 ಪೇತ್ರ 2:12) ಯೆಹೋವನನ್ನು ಆರಾಧಿಸದಂತಹ ಜನರು, ನಮ್ಮ ನೈತಿಕ ನಡವಳಿಕೆಯನ್ನು ಗುರುತಿಸಲು ಅಥವಾ ಮೆಚ್ಚಿಕೊಳ್ಳಲು ಅಸಮರ್ಥರಾಗಿದ್ದಾರೆ. ಆದರೆ, ತನ್ನ ಮಾರ್ಗದರ್ಶನವನ್ನು ಅನುಸರಿಸಲಿಕ್ಕಾಗಿ ನಾವು ಮಾಡುವ ಪ್ರಯತ್ನಗಳನ್ನು ನಮ್ಮ ಸ್ವರ್ಗೀಯ ತಂದೆಯು ನೋಡುತ್ತಿರುತ್ತಾನೆ; ಅಷ್ಟುಮಾತ್ರವಲ್ಲ, ಅಂತಹ ಪ್ರಯತ್ನಗಳನ್ನು ಆತನು ಮೆಚ್ಚುತ್ತಾನೆ ಮತ್ತು ಸಂತೋಷಪಡುತ್ತಾನೆ ಎಂಬ ವಿಷಯದಲ್ಲಿ ನಾವು ದೃಢನಿಶ್ಚಿತರಾಗಿರಸಾಧ್ಯವಿದೆ.​—⁠ಜ್ಞಾನೋಕ್ತಿ 27:11; ಇಬ್ರಿಯ 4:⁠13.

9. ದೇವರ ಮಾರ್ಗದರ್ಶನದ ಹಿಂದಿರುವ ಕಾರಣಗಳನ್ನು ನಾವು ಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಇರುವುದಾದರೂ, ಅದರಲ್ಲಿ ನಮಗೆ ಏಕೆ ಭರವಸೆಯಿರಬೇಕು? ದೃಷ್ಟಾಂತಿಸಿರಿ.

9 ದೇವರು ನಮ್ಮನ್ನು ಈ ರೀತಿಯಲ್ಲಿ ಏಕೆ ಮಾರ್ಗದರ್ಶಿಸುತ್ತಾನೆ ಎಂಬುದಕ್ಕಿರುವ ಕಾರಣಗಳನ್ನು ನಾವು ಪೂರ್ಣವಾಗಿ ಅರ್ಥಮಾಡಿಕೊಳ್ಳದಿರಬಹುದು. ಆದರೆ, ನಮಗೆ ಯಾವುದು ಅತ್ಯುತ್ತಮವಾದ ಮಾರ್ಗಕ್ರಮವಾಗಿದೆ ಎಂಬುದು ಆತನಿಗೆ ಗೊತ್ತಿದೆ ಎಂಬ ದೃಢಭರವಸೆಯು, ಆತನಲ್ಲಿ ನಂಬಿಕೆಯಿಡುವುದರಲ್ಲಿ ಒಳಗೂಡಿದೆ. ಮೋಶೆಯ ಧರ್ಮಶಾಸ್ತ್ರದಲ್ಲಿರುವ ಒಂದು ಉದಾಹರಣೆಯನ್ನು ಪರಿಗಣಿಸಿರಿ. ಸೈನಿಕರ ಪಾಳೆಯದ ವಿಷಯದಲ್ಲಿ ಕೊಡಲ್ಪಟ್ಟಿದ್ದ ನಿಯಮಗಳಲ್ಲಿ ಒಂದು, ಪಾಳೆಯದ ಹೊರಗೆ ಸಲಿಕೆಯಿಂದ ಅಗೆದು, ಅಲ್ಲಿ ಮಲವಿಸರ್ಜನೆಮಾಡಿದ ನಂತರ ಆ ಮಲವನ್ನು ಮುಚ್ಚಿಬಿಡುವುದನ್ನು ಅಗತ್ಯಪಡಿಸಿತು. (ಧರ್ಮೋಪದೇಶಕಾಂಡ 23:​13, 14) ಇಂತಹ ಮಾರ್ಗದರ್ಶನವನ್ನು ಕೊಟ್ಟಿರುವುದಕ್ಕೆ ಕಾರಣವೇನು ಎಂದು ಇಸ್ರಾಯೇಲ್ಯರು ಕುತೂಹಲಪಟ್ಟಿದ್ದಿರಬಹುದು; ಇದು ಅನಗತ್ಯ ಎಂದು ಸಹ ಕೆಲವರು ನೆನಸಿದ್ದಿರಬಹುದು. ಆದರೂ, ನೀರಿನ ಮೂಲಗಳು ಕಲುಷಿತಗೊಳ್ಳುವುದನ್ನು ತಪ್ಪಿಸಲು ಈ ನಿಯಮವು ಸಹಾಯಮಾಡಿದೆ ಮತ್ತು ಕೀಟಾಣುಗಳಿಂದ ಹಬ್ಬಿಸಲ್ಪಡುವ ಅನೇಕ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯನ್ನು ಒದಗಿಸಿದೆ ಎಂಬುದನ್ನು ಈಗ ವಿಜ್ಞಾನವು ಗ್ರಹಿಸಿದೆ. ತದ್ರೀತಿಯಲ್ಲಿ, ಲೈಂಗಿಕ ಸಂಬಂಧಗಳನ್ನು ದೇವರು ಕೇವಲ ವಿವಾಹಿತರಿಗೆ ಮಾತ್ರ ಏಕೆ ಸೀಮಿತಗೊಳಿಸಿದನು ಎಂಬುದಕ್ಕೆ ಕಾರಣಗಳಿವೆ. ಅದರಲ್ಲಿ ಆತ್ಮಿಕ, ಸಾಮಾಜಿಕ, ಭಾವನಾತ್ಮಕ, ಭೌತಿಕ ಮತ್ತು ಮನೋವೈಜ್ಞಾನಿಕ ಕಾರಣಗಳೂ ಒಳಗೂಡಿವೆ. ನೈತಿಕ ಶುದ್ಧತೆಯನ್ನು ಕಾಪಾಡಿಕೊಂಡವರ ಕೆಲವು ಬೈಬಲ್‌ ಉದಾಹರಣೆಗಳನ್ನು ನಾವೀಗ ಪರಿಗಣಿಸೋಣ.

ನೈತಿಕತೆಗಾಗಿ ಯೋಸೇಫನು ಆಶೀರ್ವದಿಸಲ್ಪಟ್ಟನು

10. ಯಾರು ಯೋಸೇಫನನ್ನು ಅನೈತಿಕತೆಯಲ್ಲಿ ಒಳಗೂಡಿಸಲು ಪ್ರಯತ್ನಿಸಿದರು, ಮತ್ತು ಅವನು ಅದಕ್ಕೆ ಯಾವ ಉತ್ತರವನ್ನು ಕೊಟ್ಟನು?

10 ಯಾಕೋಬನ ಮಗನಾಗಿದ್ದ ಯೋಸೇಫನ ಕುರಿತಾದ ಬೈಬಲ್‌ ಉದಾಹರಣೆಯು ನಿಮಗೆ ಚಿರಪರಿಚಿತವಾಗಿರಬಹುದು. ತನ್ನ 17ರ ಪ್ರಾಯದಲ್ಲಿ ಅವನು, ಐಗುಪ್ತದ ಫರೋಹನ ಮೈಗಾವಲಿನವರ ದಳವಾಯಿಯಾಗಿದ್ದ ಪೋಟೀಫರನ ಸೇವಕನಾಗಿ ಕೆಲಸಮಾಡುತ್ತಿದ್ದನು. ಯೆಹೋವನು ಯೋಸೇಫನನ್ನು ಹೇರಳವಾಗಿ ಆಶೀರ್ವದಿಸಿದನು, ಮತ್ತು ಸಕಾಲದಲ್ಲಿ ಪೋಟೀಫರನು ತನ್ನ ಮನೆಯ ಮೇಲ್ವಿಚಾರಣೆಯನ್ನು ಯೋಸೇಫನಿಗೆ ಕೊಟ್ಟು, ತನ್ನ ಆಸ್ತಿಯನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿಯನ್ನು ಅವನಿಗೆ ವಹಿಸಿದನು. ಯೋಸೇಫನು 20ರ ಪ್ರಾಯಕ್ಕೆ ಬಂದಾಗ, “ರೂಪದಲ್ಲಿಯೂ ಮುಖಭಾವದಲ್ಲಿಯೂ ಸುಂದರನಾಗಿದ್ದನು.” ಈ ಸಮಯದಲ್ಲಿ ಪೋಟೀಫರನ ಹೆಂಡತಿಯು ಅವನ ಮೇಲೆ ಕಣ್ಣನ್ನು ಇಟ್ಟಿದ್ದಳು ಮತ್ತು ತನ್ನೊಂದಿಗೆ ಲೈಂಗಿಕ ಸಂಭೋಗದಲ್ಲಿ ಒಳಗೂಡಿಸಲು ಪ್ರಯತ್ನಿಸಿದಳು. ಆದರೆ ಯೋಸೇಫನು ತನ್ನ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದನು. ಮತ್ತು ಅವಳ ಮಾತಿಗೆ ಒಪ್ಪುವುದರಿಂದ ತನ್ನ ಧಣಿಗೆ ದ್ರೋಹಮಾಡಿದಂತಾಗುವುದು ಮಾತ್ರವಲ್ಲ, ಅದು ‘ದೇವರಿಗೆ ವಿರುದ್ಧವಾದ ಪಾಪ’ವೂ ಆಗಿದೆ ಎಂದು ಅವಳಿಗೆ ವಿವರಿಸಿದನು. ಯೋಸೇಫನು ಅವಳೊಂದಿಗೆ ಹೀಗೆ ತರ್ಕಿಸಲು ಏಕೆ ಪ್ರಯತ್ನಿಸಿದನು?​—⁠ಆದಿಕಾಂಡ 39:​1-9.

11, 12. ಯೋಸೇಫನ ಸಮಯದಲ್ಲಿ ಜಾರತ್ವ ಹಾಗೂ ವ್ಯಭಿಚಾರವನ್ನು ನಿಷೇಧಿಸುವಂತಹ ಲಿಖಿತ ನಿಯಮವು ದೇವರಿಂದ ಕೊಡಲ್ಪಟ್ಟಿರಲಿಲ್ಲವಾದರೂ, ಅವನು ಈ ರೀತಿ ತರ್ಕಿಸಲು ಕಾರಣವೇನಾಗಿದ್ದಿರಬಹುದು?

11 ಯೋಸೇಫನ ನಿರ್ಧಾರವು, ತನ್ನ ಪಾಪವು ಜನರಿಗೆ ಗೊತ್ತಾಗುತ್ತದೆಂಬ ಭಯದ ಮೇಲಾಧಾರಿತವಾಗಿರಲಿಲ್ಲ ಎಂಬುದು ಸುವ್ಯಕ್ತ. ಯೋಸೇಫನ ಕುಟುಂಬವು ಬಹಳ ದೂರದಲ್ಲಿ ವಾಸಿಸುತ್ತಿತ್ತು ಮತ್ತು ಯೋಸೇಫನು ಮೃತಪಟ್ಟಿದ್ದಾನೆಂದು ಅವನ ತಂದೆ ನೆನಸಿದ್ದನು. ಒಂದುವೇಳೆ ಯೋಸೇಫನು ಲೈಂಗಿಕ ಅನೈತಿಕತೆಯಲ್ಲಿ ಒಳಗೂಡುತ್ತಿದ್ದರೂ, ಅದರ ಬಗ್ಗೆ ಅವನ ಕುಟುಂಬದವರಿಗೆ ಎಂದೂ ಗೊತ್ತಾಗುತ್ತಿರಲಿಲ್ಲ. ಇಂತಹ ಪಾಪವು ಪೋಟೀಫರನಿಂದ ಹಾಗೂ ಅವನ ಸೇವಕರಿಂದ ಸಹ ರಹಸ್ಯವಾಗಿರಿಸಲ್ಪಡಸಾಧ್ಯವಿತ್ತು. ಏಕೆಂದರೆ ಇವರೆಲ್ಲರೂ ಮನೆಯಲ್ಲಿ ಇಲ್ಲದಿರುವಂತಹ ಸಂದರ್ಭಗಳೂ ಇದ್ದವು. (ಆದಿಕಾಂಡ 39:11) ಆದರೂ, ಇಂತಹ ನಡತೆಯನ್ನು ದೇವರಿಂದ ಮರೆಯಾಗಿಡಲು ಸಾಧ್ಯವಿಲ್ಲ ಎಂಬುದು ಯೋಸೇಫನಿಗೆ ತಿಳಿದಿತ್ತು.

12 ಯೆಹೋವನ ಕುರಿತು ಯೋಸೇಫನಿಗೆ ತಿಳಿದಿದ್ದ ವಿಷಯದ ಆಧಾರದ ಮೇಲೆ ಅವನು ಹಾಗೆ ವಿಚಾರಮಾಡಿದ್ದಿರಬೇಕು. ಏಕೆಂದರೆ, ಏದೆನ್‌ ತೋಟದಲ್ಲಿ ಯೆಹೋವನು ಹೀಗೆ ಹೇಳಿದ್ದನು: “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.” ಮತ್ತು ಈ ವಿಷಯವು ಖಂಡಿತವಾಗಿಯೂ ಯೋಸೇಫನಿಗೆ ತಿಳಿದಿತ್ತು. (ಆದಿಕಾಂಡ 2:24) ಇದಲ್ಲದೆ, ಸಾರಳೊಂದಿಗೆ (ಅಂದರೆ ಯೋಸೇಫನ ಮುತ್ತಜ್ಜಿಯೊಂದಿಗೆ) ಸಂಗಮಿಸಲು ನಿರ್ಧರಿಸಿದ ಫಿಲಿಷ್ಟಿಯ ಅರಸನಿಗೆ ಯೆಹೋವನು ಏನು ಹೇಳಿದ್ದನು ಎಂಬುದು ಸಹ ಯೋಸೇಫನಿಗೆ ಗೊತ್ತಿದ್ದಿರಬಹುದು. ಯೆಹೋವನು ಆ ಅರಸನಿಗೆ ಹೇಳಿದ್ದು: “ನೀನು ಆ ಸ್ತ್ರೀಯನ್ನು ಸೇರಿಸಿಕೊಂಡದರಿಂದ ಸಾಯತಕ್ಕವನಾಗಿದ್ದೀ; ಆಕೆ ಮುತ್ತೈದೆ . . . ನೀನು ಇದನ್ನು ಯಥಾರ್ಥಮನಸ್ಸಿನಿಂದ ಮಾಡಿದೆ ಎಂಬುದನ್ನು ನಾನು ಬಲ್ಲೆ; ಆದಕಾರಣ ನಾನಂತೂ ನೀನು ನನಗೆ ವಿರುದ್ಧವಾಗಿ ಪಾಪಮಾಡದಂತೆ ನಿನ್ನನ್ನು ತಡೆದು ಆಕೆಯನ್ನು ಮುಟ್ಟಗೊಡಿಸಲಿಲ್ಲ.” (ಆದಿಕಾಂಡ 20:3, 6, ಓರೆ ಅಕ್ಷರಗಳು ನಮ್ಮವು.) ಹೀಗೆ, ಅಷ್ಟರ ತನಕ ಯೆಹೋವನು ಒಂದು ಲಿಖಿತ ನಿಯಮವನ್ನು ಒದಗಿಸಿರಲಿಲ್ಲವಾದರೂ, ವಿವಾಹದ ಕುರಿತಾದ ಆತನ ಅನಿಸಿಕೆಗಳು ತುಂಬ ಸ್ಪಷ್ಟವಾಗಿದ್ದವು. ಯೋಸೇಫನ ನೈತಿಕ ಪ್ರಜ್ಞೆ ಹಾಗೂ ಯೆಹೋವನ ಮನಸ್ಸನ್ನು ಸಂತೋಷಪಡಿಸುವ ಅವನ ಬಯಕೆಯು, ಅನೈತಿಕತೆಯನ್ನು ತಿರಸ್ಕರಿಸುವಂತೆ ಅವನನ್ನು ಪ್ರಚೋದಿಸಿತು.

13. ಯೋಸೇಫನು ಪೋಟೀಫರನ ಹೆಂಡತಿಯಿಂದ ಏಕೆ ತಪ್ಪಿಸಿಕೊಳ್ಳಸಾಧ್ಯವಿರಲಿಲ್ಲ?

13 ಇಷ್ಟಾದರೂ ಪೋಟೀಫರನ ಹೆಂಡತಿಯು ಅವನನ್ನು ಸತತವಾಗಿ ಒತ್ತಾಯಿಸುತ್ತಿದ್ದಳು ಮತ್ತು ತನ್ನೊಂದಿಗೆ ಸಂಗಮಮಾಡುವಂತೆ “ಪ್ರತಿದಿನವೂ” ಪೀಡಿಸುತ್ತಿದ್ದಳು. ಹಾಗಾದರೆ ಯೋಸೇಫನು ಏಕೆ ಅವಳಿಂದ ತಪ್ಪಿಸಿಕೊಳ್ಳಲಿಲ್ಲ? ಏಕೆಂದರೆ, ಯೋಸೇಫನು ಒಬ್ಬ ಸೇವಕನಾಗಿದ್ದದರಿಂದ ಅವನು ಅನೇಕ ಕರ್ತವ್ಯಗಳನ್ನು ನಿಭಾಯಿಸಬೇಕಾಗಿತ್ತು ಮತ್ತು ಅವನು ತನ್ನ ಸನ್ನಿವೇಶವನ್ನು ಬದಲಾಯಿಸಸಾಧ್ಯವಿರಲಿಲ್ಲ. ಇದಲ್ಲದೆ, ಐಗುಪ್ತದಲ್ಲಿದ್ದ ಮನೆಗಳ ವಿನ್ಯಾಸವು ಹೇಗಿತ್ತೆಂದರೆ, ಒಬ್ಬನು ಉಗ್ರಾಣಗಳಿಗೆ ಹೋಗಬೇಕಾದರೆ ಆ ಮನೆಯ ಮುಖ್ಯ ಭಾಗದಿಂದಲೇ ಹಾದುಹೋಗಬೇಕಾಗಿತ್ತು ಎಂದು ಪ್ರಾಕ್ತನಶಾಸ್ತ್ರದ ಪುರಾವೆಯು ಸೂಚಿಸುತ್ತದೆ. ಆದುದರಿಂದ, ಪೋಟೀಫರನ ಹೆಂಡತಿಯಿಂದ ತಪ್ಪಿಸಿಕೊಳ್ಳುವುದು ಯೋಸೇಫನಿಗೆ ಖಂಡಿತವಾಗಿಯೂ ಅಸಾಧ್ಯವಾಗಿದ್ದಿರಬಹುದು.​—⁠ಆದಿಕಾಂಡ 39:⁠10.

14. (ಎ) ಯೋಸೇಫನು ಪೋಟೀಫರನ ಹೆಂಡತಿಯಿಂದ ತಪ್ಪಿಸಿಕೊಂಡು ಓಡಿಹೋದ ಬಳಿಕ ಅವನಿಗೆ ಏನು ಸಂಭವಿಸಿತು? (ಬಿ) ಯೋಸೇಫನ ನಂಬಿಗಸ್ತಿಕೆಗಾಗಿ ಯೆಹೋವನು ಅವನನ್ನು ಹೇಗೆ ಆಶೀರ್ವದಿಸಿದನು?

14 ಒಂದು ದಿನ ಅವರಿಬ್ಬರು ಮಾತ್ರ ಮನೆಯಲ್ಲಿ ಇರಬೇಕಾದಂತಹ ಸಂದರ್ಭ ಒದಗಿಬಂತು. ಪೋಟೀಫರನ ಹೆಂಡತಿಯು ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನ ಸಂಗಮಕ್ಕೆ ಬಾ” ಎಂದು ಕರೆದಳು. ಆದರೆ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋದನು. ಅವನ ತಿರಸ್ಕಾರದಿಂದ ಕೋಪಗೊಂಡ ಪೋಟೀಫರನ ಹೆಂಡತಿಯು, ಅವನೇ ಮಾನಭಂಗಮಾಡುವುದಕ್ಕೆ ಪ್ರಯತ್ನಿಸಿದನೆಂಬ ಆರೋಪವನ್ನು ಅವನ ಮೇಲೆ ಹೊರಿಸಿದಳು. ಇದರ ಪರಿಣಾಮಗಳೇನಾಗಿದ್ದವು? ಅವನ ಯಥಾರ್ಥ ಜೀವನಕ್ರಮಕ್ಕಾಗಿ ಯೆಹೋವನು ಆ ಕೂಡಲೆ ಅವನಿಗೆ ಪ್ರತಿಫಲ ನೀಡಿದನೋ? ಇಲ್ಲ. ಯೋಸೇಫನು ಸೆರೆಮನೆಗೆ ಹಾಕಲ್ಪಟ್ಟನು ಮತ್ತು ಕಾಲುಗಳಿಗೆ ಕೋಳಗಳನ್ನು ತೊಡಿಸಲಾಯಿತು. (ಆದಿಕಾಂಡ 39:​12-20; ಕೀರ್ತನೆ 105:18) ಯೆಹೋವನು ಯೋಸೇಫನಿಗಾದ ಅನ್ಯಾಯವನ್ನು ನೋಡಿದನು ಮತ್ತು ಕಾಲಕ್ರಮೇಣ ಅವನನ್ನು ಸೆರೆಮನೆಯಿಂದ ಅರಮನೆಯ ಸ್ಥಾನಕ್ಕೆ ಏರಿಸಿದನು. ಅವನು ಐಗುಪ್ತ ದೇಶದಲ್ಲೇ ಎರಡನೆಯ ಸರ್ವಾಧಿಕಾರಿಯಾಗಿ ನೇಮಿಸಲ್ಪಟ್ಟನು ಮತ್ತು ಒಬ್ಬ ಪತ್ನಿ ಹಾಗೂ ಮಕ್ಕಳಿಂದ ಆಶೀರ್ವದಿಸಲ್ಪಟ್ಟನು. (ಆದಿಕಾಂಡ 41:​14, 15, 39-45, 50-52) ಅಷ್ಟುಮಾತ್ರವಲ್ಲ, ಯೋಸೇಫನ ಯಥಾರ್ಥತೆಯ ಕುರಿತಾದ ವೃತ್ತಾಂತವು 3,500 ವರ್ಷಗಳ ಹಿಂದೆ ದಾಖಲಿಸಲ್ಪಟ್ಟಿತು. ಮತ್ತು ಅಂದಿನಿಂದ ದೇವರ ಸೇವಕರು ಅದನ್ನು ಓದಿ ತಿಳಿದುಕೊಳ್ಳುವಂತೆ ಇಡಲ್ಪಟ್ಟಿದೆ. ದೇವರ ನೀತಿಯ ನಿಯಮಗಳಿಗೆ ದೃಢವಾಗಿ ಅಂಟಿಕೊಂಡದ್ದಕ್ಕಾಗಿ ಎಂತಹ ಅದ್ಭುತಕರ ಆಶೀರ್ವಾದಗಳು! ತದ್ರೀತಿಯಲ್ಲಿ, ಇಂದು ನಾವು ನೈತಿಕ ಸಮಗ್ರತೆಯನ್ನು ಕಾಪಾಡಿಕೊಂಡದ್ದರ ಪ್ರಯೋಜನಗಳನ್ನು ಆ ಕೂಡಲೆ ಪಡೆಯದಿರಬಹುದಾದರೂ, ಯೆಹೋವನು ಅದನ್ನು ನೋಡುತ್ತಾನೆ ಮತ್ತು ತಕ್ಕ ಸಮಯದಲ್ಲಿ ನಮ್ಮನ್ನು ಆಶೀರ್ವದಿಸುವನು ಎಂಬ ಆಶ್ವಾಸನೆ ನಮಗಿರಸಾಧ್ಯವಿದೆ.​—⁠2 ಪೂರ್ವಕಾಲವೃತ್ತಾಂತ 16:⁠9.

ಯೋಬನು ‘ತನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡದ್ದು’

15. ಯೋಬನು ‘ತನ್ನ ಕಣ್ಣುಗಳೊಂದಿಗೆ’ ಯಾವ ‘ನಿಬಂಧನೆಯನ್ನು ಮಾಡಿಕೊಂಡಿದ್ದನು’?

15 ಯಥಾರ್ಥತೆಯನ್ನು ಕಾಪಾಡಿಕೊಂಡ ಇನ್ನೊಬ್ಬ ವ್ಯಕ್ತಿಯು ಯೋಬನಾಗಿದ್ದನು. ಪಿಶಾಚನು ಅವನ ಮೇಲೆ ಅನೇಕ ಪರೀಕ್ಷೆಗಳನ್ನು ತಂದೊಡ್ಡಿದನು. ಆ ಸಮಯದಲ್ಲಿ ಯೋಬನು ತನ್ನ ಜೀವನವನ್ನು ಪುನಃ ಪರೀಕ್ಷಿಸಿಕೊಂಡನು. ಮತ್ತು ಯೆಹೋವನು ಕೊಟ್ಟಂತಹ ಅನೇಕ ನಿಯಮಗಳಲ್ಲಿ ಲೈಂಗಿಕ ನೈತಿಕತೆಯ ಕುರಿತಾದ ನಿಯಮವನ್ನು ತಾನು ಉಲ್ಲಂಘಿಸಿರುವುದಾದಲ್ಲಿ, ನಾನು ಗಂಭೀರವಾದ ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ ಎಂದು ಅವನು ಹೇಳಿದನು. ಯೋಬನು ಹೇಳಿದ್ದು: “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?” (ಯೋಬ 31:⁠1) ಹೀಗೆ, ದೇವರಿಗೆ ಯಥಾರ್ಥತೆಯನ್ನು ಕಾಪಾಡಿಕೊಳ್ಳುವ ತನ್ನ ತೀರ್ಮಾನದಲ್ಲಿ, ಒಬ್ಬ ಸ್ತ್ರೀಯ ಕಡೆಗೆ ಕಾಮಾಸಕ್ತಿಯಿಂದ ನೋಡುವುದೇ ಇಲ್ಲ ಎಂಬ ನಿರ್ಧಾರವು ಸಹ ಸೇರಿದೆ ಎಂಬುದು ಯೋಬನು ಹೇಳಿದ್ದರ ಅರ್ಥವಾಗಿತ್ತು. ತನ್ನ ದೈನಂದಿನ ಜೀವನದಲ್ಲಿ ಅವನು ಸ್ತ್ರೀಯರನ್ನು ನೋಡುತ್ತಿದ್ದನು ಮತ್ತು ಅವರಿಗೆ ಸಹಾಯದ ಅಗತ್ಯವಿರುವಾಗ ಸಹಾಯವನ್ನು ಸಹ ಮಾಡುತ್ತಿದ್ದನು ಎಂಬುದಂತೂ ಖಂಡಿತ. ಆದರೆ ಅವನು ಕಾಮಾಸಕ್ತಿಯಿಂದ ಅವರ ಕಡೆಗೆ ದೃಷ್ಟಿಹರಿಸುತ್ತಿರಲಿಲ್ಲ, ಅಂದರೆ ಹಾಗೆ ಮಾಡಲು ಅವನು ತನ್ನ ಮನಸ್ಸನ್ನು ಬಿಟ್ಟುಕೊಡಲಿಲ್ಲ. ಅವನ ಪರೀಕ್ಷೆಗಳು ಆರಂಭವಾಗುವುದಕ್ಕೆ ಮುಂಚೆ ಅವನು ಒಬ್ಬ ಐಶ್ವರ್ಯವಂತನಾಗಿದ್ದನು ಮತ್ತು “ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವಾಸ್ತ್ಯವುಳ್ಳವನಾಗಿದ್ದನು.” (ಯೋಬ 1:⁠3) ಆದರೂ, ಅನೇಕ ಸ್ತ್ರೀಯರನ್ನು ಆಕರ್ಷಿಸಲಿಕ್ಕಾಗಿ ಅವನು ತನ್ನ ಐಶ್ವರ್ಯದ ಪ್ರಭಾವವನ್ನು ಉಪಯೋಗಿಸಲಿಲ್ಲ. ಯುವತಿಯರೊಂದಿಗೆ ಕಾನೂನುಬಾಹಿರ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ವಿಷಯವನ್ನು ಯೋಚಿಸಿರಲೂ ಇಲ್ಲ ಎಂಬುದಂತೂ ಸ್ಪಷ್ಟ.

16. (ಎ) ವಿವಾಹಿತ ಕ್ರೈಸ್ತರಿಗೆ ಯೋಬನು ಏಕೆ ಒಂದು ಅತ್ಯುತ್ತಮ ಮಾದರಿಯಾಗಿದ್ದಾನೆ? (ಬಿ) ಮಲಾಕಿಯ ದಿನದಲ್ಲಿದ್ದ ಪುರುಷರ ನಡವಳಿಕೆಯು ಯಾವ ರೀತಿಯಲ್ಲಿ ಯೋಬನ ನಡವಳಿಕೆಗಿಂತ ತೀರ ಭಿನ್ನವಾಗಿತ್ತು ಮತ್ತು ನಮ್ಮ ದಿನಗಳ ಕುರಿತೇನು?

16 ಹೀಗೆ, ಅನುಕೂಲಕರವಾದ ಸಮಯದಲ್ಲಿಯೂ ಕಷ್ಟದ ಸಮಯದಲ್ಲಿಯೂ ಯೋಬನು ನೈತಿಕ ಸಮಗ್ರತೆಯನ್ನು ತೋರಿಸಿದನು. ಯೆಹೋವನು ಇದನ್ನು ಗಮನಿಸಿದನು ಮತ್ತು ಅವನನ್ನು ಬಹಳವಾಗಿ ಆಶೀರ್ವದಿಸಿದನು. (ಯೋಬ 1:10; 42:12) ವಿವಾಹಿತರಾಗಿರುವ ಕ್ರೈಸ್ತ ಸ್ತ್ರೀಪುರುಷರಿಗೆ ಯೋಬನು ಎಂತಹ ಅತ್ಯುತ್ತಮ ಮಾದರಿಯಾಗಿದ್ದಾನೆ! ಯೆಹೋವನು ಅವನನ್ನು ಅಷ್ಟೊಂದು ಪ್ರೀತಿಸಿದ್ದರಲ್ಲಿ ಆಶ್ಚರ್ಯವೇ ಇಲ್ಲ! ಇದಕ್ಕೆ ವ್ಯತಿರಿಕ್ತವಾಗಿ, ಇಂದಿನ ಅನೇಕರ ನಡವಳಿಕೆಯು, ಮಲಾಕಿಯನ ದಿನದಲ್ಲಿದ್ದ ಜನರ ನಡವಳಿಕೆಗೆ ತುಂಬ ನಿಕಟವಾಗಿ ಹೋಲುತ್ತದೆ. ಅನೇಕವೇಳೆ ಯುವಸ್ತ್ರೀಯರನ್ನು ಮದುವೆಮಾಡಿಕೊಳ್ಳಲಿಕ್ಕಾಗಿ ಅನೇಕ ಗಂಡಂದಿರು ತಮ್ಮ ಪತ್ನಿಯರನ್ನು ಪರಿತ್ಯಾಗಮಾಡಿದ ವಿಧವನ್ನು ಆ ಪ್ರವಾದಿಯು ಕಡೆಗಣಿಸಿ ಮಾತಾಡುತ್ತಾನೆ. ಏಕೆಂದರೆ, ಆಗ ಯೆಹೋವನ ಯಜ್ಞವೇದಿಯು ಪರಿತ್ಯಾಗ ಮಾಡಲ್ಪಟ್ಟ ಪತ್ನಿಯರ ಕಣ್ಣೀರಿನಿಂದ ಮುಳುಗಿತ್ತು. ಮತ್ತು ತಮ್ಮ ಪತ್ನಿಯರಿಗೆ ‘ದ್ರೋಹಮಾಡಿದ’ ಗಂಡಂದಿರನ್ನು ಯೆಹೋವನು ಖಂಡಿಸಿದನು.​—⁠ಮಲಾಕಿಯ 2:​13-16.

ಒಬ್ಬ ಪರಿಶುದ್ಧ ಯುವತಿ

17. ಶೂನೇಮಿನ ಯುವತಿಯು ಹೇಗೆ “ಅಗುಳಿಹಾಕಿದ ಉದ್ಯಾನ”ವನದಂತಿದ್ದಳು?

17 ಯಥಾರ್ಥತೆಯನ್ನು ಕಾಪಾಡಿಕೊಂಡ ಮೂರನೆಯ ವ್ಯಕ್ತಿ, ಶೂನೇಮ್‌ನ ಯುವತಿಯಾಗಿದ್ದಳು. ಅವಳು ಯುವ ಪ್ರಾಯದವಳೂ ಸೌಂದರ್ಯವತಿಯೂ ಆಗಿದ್ದಳು. ಆದುದರಿಂದ, ಒಬ್ಬ ಯುವ ಕುರುಬನ ಪ್ರೀತಿಯನ್ನು ಅವಳು ಆಕರ್ಷಿಸಿದಳು ಮಾತ್ರವಲ್ಲ, ಇಸ್ರಾಯೇಲ್‌ನ ಐಶ್ವರ್ಯವಂತ ರಾಜನಾಗಿದ್ದ ಸೊಲೊಮೋನನು ಸಹ ಅವಳ ಸೌಂದರ್ಯವನ್ನು ಮೋಹಿಸತೊಡಗಿದನು. ಪರಮ ಗೀತ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಸುಂದರ ಕಥೆಯಾದ್ಯಂತ, ಶೂನೇಮ್‌ನ ಯುವತಿಯು ಪರಿಶುದ್ಧಳಾಗಿ ಉಳಿದಳು. ಇದರಿಂದಾಗಿ ತನ್ನ ಸುತ್ತಲಿದ್ದವರ ಗೌರವವನ್ನು ಅವಳು ಸಂಪಾದಿಸಿದಳು. ಸೊಲೊಮೋನನ ಪ್ರೀತಿಯನ್ನು ಅವಳು ತಿರಸ್ಕರಿಸಿದರೂ, ಅವಳ ಕಥೆಯನ್ನು ದಾಖಲಿಸುವಂತೆ ಅವನು ಪ್ರೇರೇಪಿಸಲ್ಪಟ್ಟನು. ಅವಳು ಪ್ರೀತಿಸಿದಂತಹ ಕುರುಬ ಯುವಕನು ಸಹ ಅವಳ ಪರಿಶುದ್ಧ ನಡವಳಿಕೆಯನ್ನು ಗೌರವಿಸಿದನು. ಒಂದು ಹಂತದಲ್ಲಿ, ಶೂನೇಮ್‌ನ ಈ ಯುವತಿಯು “ಅಗುಳಿಹಾಕಿದ ಉದ್ಯಾನ”ದಂತಿದ್ದಾಳೆ ಎಂದು ಅವನು ಅವಳ ಬಗ್ಗೆ ಆಲೋಚಿಸಿದ್ದಿರಬಹುದು. (ಪರಮ ಗೀತ 4:12) ಪುರಾತನ ಇಸ್ರಾಯೇಲ್‌ನಲ್ಲಿದ್ದ ಸುಂದರ ಉದ್ಯಾನವನಗಳಲ್ಲಿ ಮನಸ್ಸಿಗೆ ಮುದನೀಡುವಂತಹ ಬೇರೆ ಬೇರೆ ರೀತಿಯ ತರಕಾರಿಗಳು, ಘಮಘಮಿಸುವ ಹೂವುಗಳು ಮತ್ತು ಭವ್ಯವಾದ ಮರಗಳು ಇದ್ದವು. ಇಂತಹ ಉದ್ಯಾನವನಗಳ ಸುತ್ತಲೂ ಬೇಲಿ ಅಥವಾ ಗೋಡೆಯು ಇರುತ್ತಿದ್ದುದರಿಂದ, ಬೀಗ ಹಾಕಲ್ಪಟ್ಟಿರುವ ಒಂದು ಪ್ರವೇಶದ್ವಾರದ ಮೂಲಕ ಮಾತ್ರ ಒಳಗೆ ಪ್ರವೇಶಿಸಸಾಧ್ಯವಿತ್ತು. (ಯೆಶಾಯ 5:⁠5) ಈ ಕುರುಬ ಯುವಕನಿಗೆ, ಶೂನೇಮ್‌ನ ಯುವತಿಯ ನೈತಿಕ ಶುದ್ಧತೆ ಹಾಗೂ ಸೌಂದರ್ಯವು, ಅಪರೂಪವಾದ ರಮಣೀಯತೆಯಿಂದ ಕೂಡಿದ ಅಂತಹ ಒಂದು ಉದ್ಯಾನವನದಂತಿತ್ತು. ಅವಳು ಸಂಪೂರ್ಣವಾದ ರೀತಿಯಲ್ಲಿ ಪರಿಶುದ್ಧಳಾಗಿದ್ದಳು. ಅವಳ ಕೋಮಲ ಪ್ರೀತಿಯು, ಅವಳ ಭಾವಿ ಗಂಡನಿಗೆ ಮಾತ್ರ ಸಿಗಲಿತ್ತು.

18. ಯೋಸೇಫ, ಯೋಬ ಹಾಗೂ ಶೂನೇಮ್‌ನ ಯುವತಿಯ ಕುರಿತಾದ ವೃತ್ತಾಂತಗಳು ನಮಗೆ ಯಾವುದನ್ನು ಜ್ಞಾಪಕ ಹುಟ್ಟಿಸುತ್ತವೆ?

18 ಶೂನೇಮಿನ ಈ ಯುವತಿಯು, ನೈತಿಕ ಸಮಗ್ರತೆಯಲ್ಲಿ ಇಂದಿನ ಕ್ರೈಸ್ತ ಸ್ತ್ರೀಯರಿಗೆ ಅತ್ಯುತ್ತಮವಾದ ಒಂದು ಮಾದರಿಯನ್ನಿಟ್ಟಿದ್ದಾಳೆ. ಈ ಯುವತಿಯ ಸದ್ಗುಣವನ್ನು ಯೆಹೋವನು ಗಮನಿಸಿದನು. ಮತ್ತು ಅದನ್ನು ಗಣ್ಯಮಾಡಿದನು ಮತ್ತು ಯೋಸೇಫ ಹಾಗೂ ಯೋಬರನ್ನು ಆಶೀರ್ವದಿಸಿದಂತೆ ಇವಳನ್ನೂ ಆಶೀರ್ವದಿಸಿದನು. ನಮ್ಮ ಮಾರ್ಗದರ್ಶನಕ್ಕಾಗಿ, ಅವರ ಯಥಾರ್ಥತೆಯ ಕೃತ್ಯಗಳು ದೇವರ ವಾಕ್ಯದಲ್ಲಿ ದಾಖಲಿಸಲ್ಪಟ್ಟಿವೆ. ಇಂದು ಯಥಾರ್ಥತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಮಾಡುವ ಪ್ರಯತ್ನಗಳು ಬೈಬಲಿನಲ್ಲಿ ದಾಖಲಿಸಲ್ಪಡುವುದಿಲ್ಲವಾದರೂ, ಯಾರು ಆತನ ಚಿತ್ತವನ್ನು ಮಾಡಲು ಪ್ರಯತ್ನಿಸುತ್ತಾರೋ ಅವರಿಗಾಗಿ ಯೆಹೋವನು “ಜ್ಞಾಪಕದ ಪುಸ್ತಕ”ವನ್ನು ಇಟ್ಟುಕೊಂಡಿದ್ದಾನೆ. ಆದುದರಿಂದ, ನಾವು ನೈತಿಕವಾಗಿ ಶುದ್ಧರಾಗಿರಲು ನಿಷ್ಠೆಯಿಂದ ಪ್ರಯತ್ನಿಸುತ್ತಿರುವಾಗ, ಯೆಹೋವನು ‘ಕಿವಿಗೊಟ್ಟು ಆಲಿಸುತ್ತಾನೆ’ ಮತ್ತು ಅದನ್ನು ನೋಡಿ ಆತನು ಸಂತೋಷಪಡುತ್ತಾನೆ ಎಂಬುದನ್ನು ಎಂದಿಗೂ ಮರೆಯದಿರೋಣ.​—⁠ಮಲಾಕಿಯ 3:⁠16.

19. (ಎ) ನೈತಿಕ ಶುದ್ಧತೆಯನ್ನು ನಾವು ಹೇಗೆ ವೀಕ್ಷಿಸಬೇಕು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

19 ನಮ್ಮ ಪ್ರೀತಿಯ ಸೃಷ್ಟಿಕರ್ತನಿಗೆ ನಾವು ವಿಧೇಯತೆಯನ್ನು ತೋರಿಸುವಾಗ ನಂಬಿಕೆಯಿಲ್ಲದಂತಹ ಜನರು ನಮ್ಮನ್ನು ಕುಚೋದ್ಯ ಮಾಡುವುದಾದರೂ, ನಾವು ಖಂಡಿತವಾಗಿಯೂ ಸಂತೋಷಪಡುತ್ತೇವೆ. ಏಕೆಂದರೆ, ನಮಗೆ ಉಚ್ಚ ನೈತಿಕ ಮಟ್ಟಗಳಿವೆ, ಅಂದರೆ ದೇವರ ನೈತಿಕ ಮಟ್ಟಗಳಿವೆ. ಇದರ ಬಗ್ಗೆ ನಾವು ಹೆಮ್ಮೆಪಡಬೇಕು ಮತ್ತು ಇದನ್ನು ಅಮೂಲ್ಯವಾಗಿ ನೋಡಬೇಕು. ಶುದ್ಧವಾದ ನೈತಿಕ ನಿಲುವನ್ನು ಕಾಪಾಡಿಕೊಳ್ಳುವ ಮೂಲಕ, ನಾವು ದೇವರ ಆಶೀರ್ವಾದವನ್ನು ಪಡೆಯಸಾಧ್ಯವಿದೆ ಮತ್ತು ಶಾಶ್ವತ ಭವಿಷ್ಯತ್ತಿನ ಆಶೀರ್ವಾದದ ಕುರಿತಾದ ಉಜ್ವಲ ನಿರೀಕ್ಷೆಯನ್ನು ಕಾಪಾಡಿಕೊಳ್ಳಸಾಧ್ಯವಿದೆ. ಆದರೂ, ಪ್ರಾಯೋಗಿಕ ಅರ್ಥದಲ್ಲಿ ನೈತಿಕವಾಗಿ ಶುದ್ಧರಾಗಿ ಉಳಿಯಲು ನಾವು ಏನು ಮಾಡಸಾಧ್ಯವಿದೆ? ಪ್ರಾಮುಖ್ಯವಾದ ಈ ಪ್ರಶ್ನೆಯ ಕುರಿತು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 6 ಮಾರ್ಚ್‌ 15, 1983ರ ವಾಚ್‌ಟವರ್‌ ಪತ್ರಿಕೆಯ 29-31ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 7 ಒಬ್ಬ ಮುಗ್ಧ ಕ್ರೈಸ್ತ ಸ್ತ್ರೀ ಅಥವಾ ಪುರುಷನು, ದೇವರ ಮಾರ್ಗದರ್ಶನವನ್ನು ಅನುಸರಿಸದಿರುವಂತಹ ಅವಿಶ್ವಾಸಿ ವಿವಾಹ ಸಂಗಾತಿಯಿಂದ ರತಿರವಾನಿತ ರೋಗವನ್ನು ಪಡೆದುಕೊಂಡಿರುವಂತಹ ಸನ್ನಿವೇಶಗಳೂ ಇವೆ ಎಂಬುದು ದುಃಖಕರ ಸಂಗತಿಯಾಗಿದೆ.

ನೀವು ವಿವರಿಸಬಲ್ಲಿರೋ?

• ಲೈಂಗಿಕ ಸಂಬಂಧಗಳ ಕುರಿತು ಬೈಬಲು ಏನನ್ನು ಕಲಿಸುತ್ತದೆ?

• ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ “ಜಾರತ್ವ” ಎಂಬ ಶಬ್ದಕ್ಕೆ ಯಾವ ಅರ್ಥಗಳಿವೆ?

• ನೈತಿಕವಾಗಿ ಶುದ್ಧರಾಗಿ ಉಳಿಯುವ ಮೂಲಕ ನಾವು ಹೇಗೆ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ?

• ಯೋಸೇಫ, ಯೋಬ ಮತ್ತು ಶೂನೇಮ್‌ನ ಯುವತಿಯು, ಇಂದಿನ ಕ್ರೈಸ್ತರಿಗೆ ಏಕೆ ಅತ್ಯುತ್ತಮ ಮಾದರಿಯಾಗಿದ್ದಾರೆ?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಯೋಸೇಫನು ಅನೈತಿಕತೆಯಿಂದ ತಪ್ಪಿಸಿಕೊಂಡು ಓಡಿಹೋದನು

[ಪುಟ 10ರಲ್ಲಿರುವ ಚಿತ್ರ]

ಶೂನೇಮ್‌ನ ಯುವತಿಯು “ಅಗುಳಿಹಾಕಿದ ಉದ್ಯಾನ”ದಂತಿದ್ದಳು

[ಪುಟ 11ರಲ್ಲಿರುವ ಚಿತ್ರ]

ಯೋಬನು ‘ತನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದನು’