ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ನೈತಿಕತೆಯು ಸರ್ವೋತ್ತಮವೋ?

ಬೈಬಲಿನ ನೈತಿಕತೆಯು ಸರ್ವೋತ್ತಮವೋ?

ಬೈಬಲಿನ ನೈತಿಕತೆಯು ಸರ್ವೋತ್ತಮವೋ?

“ಜನರಿಗೆ ಭದ್ರತೆ ಹಾಗೂ ಮಾರ್ಗದರ್ಶನವನ್ನು ಕೊಡುವಂತಹ ಮೂಲಭೂತ ಮೌಲ್ಯಗಳು ಸಮಾಜದಲ್ಲಿರುವುದು ಆವಶ್ಯಕ.” ಹೀಗೆ, ಜರ್ಮನ್‌ ಬರಹಗಾರನೂ ಟೆಲಿವಿಷನ್‌ ಪ್ರಸಾರಕನೂ ಆಗಿರುವ ಒಬ್ಬ ಅನುಭವೀ ವ್ಯಕ್ತಿ ಹೇಳಿದನು. ನಿಜವಾಗಿಯೂ ಈ ಹೇಳಿಕೆಯಲ್ಲಿ ಸತ್ಯಾಂಶವು ಅಡಗಿದೆ. ಮಾನವ ಸಮಾಜದ ಅಡಿಪಾಯವು ಅಲುಗಾಡದೆ ಇರಬೇಕಾದರೆ ಹಾಗೂ ಏಳಿಗೆ ಹೊಂದುತ್ತಿರಬೇಕಾಗಿರುವುದಾದರೆ, ಸರಿ ಅಥವಾ ತಪ್ಪು ಯಾವುದು ಇಲ್ಲವೆ ಒಳ್ಳೆಯದು ಅಥವಾ ಕೆಟ್ಟದ್ದು ಯಾವುದು ಎಂಬುದನ್ನು ಗುರುತಿಸುವಂತಹ ಎಲ್ಲರಿಂದಲೂ ಅಂಗೀಕರಿಸಲ್ಪಟ್ಟ ಮಟ್ಟಗಳು ಜನರಿಗೆ ಇರಲೇಬೇಕು. ಆದರೆ, ಸಮಾಜಕ್ಕೂ ಅದರಲ್ಲಿರುವ ಜನರಿಗೂ ಯಾವ ಮಟ್ಟಗಳು ಅತ್ಯುತ್ತಮವಾಗಿರಬಹುದು ಎಂಬ ಪ್ರಶ್ನೆಯು ಏಳುತ್ತದೆ.

ಬೈಬಲಿನಲ್ಲಿರುವ ನೈತಿಕ ಮೌಲ್ಯಗಳು ಇತರರಿಂದ ಅಂಗೀಕರಿಸಲ್ಪಟ್ಟ ಮೌಲ್ಯಗಳಾಗಿರುವಲ್ಲಿ, ಇವು ಸ್ಥಿರ ಹಾಗೂ ಸುಖೀ ಜೀವನವನ್ನು ನಡೆಸುವಂತೆ ಜನರಿಗೆ ಸಹಾಯ ಮಾಡುವಂತಹವುಗಳಾಗಿರಬೇಕು. ಆ ಮೌಲ್ಯಗಳು, ಅದನ್ನು ಅನುಸರಿಸುವ ಜನರ ಒಂದು ಸಮಾಜವನ್ನು ಸಂತೋಷಗೊಳಿಸಬೇಕು ಮತ್ತು ದೃಢಗೊಳಿಸಬೇಕು. ಆದರೆ ಇಂದು ಪರಿಸ್ಥಿತಿಯು ಹಾಗಿದೆಯೋ? ಎರಡು ಪ್ರಾಮುಖ್ಯವಾದ ವಿವಾದಾಂಶಗಳ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ನಾವು ಪರೀಕ್ಷಿಸಿ ನೋಡೋಣ. ಅದೇನೆಂದರೆ, ವಿವಾಹದಲ್ಲಿ ನಿಷ್ಠೆಯನ್ನು ತೋರಿಸುವುದು ಹಾಗೂ ಅನುದಿನದ ಜೀವನದಲ್ಲಿ ಪ್ರಾಮಾಣಿಕರಾಗಿರುವುದೇ ಆಗಿದೆ.

ನಿಮ್ಮ ವಿವಾಹ ಸಂಗಾತಿಯೊಂದಿಗೆ ಅನ್ಯೋನ್ಯವಾಗಿರಿ

ನಮ್ಮ ಸೃಷ್ಟಿಕರ್ತನು ಆದಾಮನ ಸಂಗಾತಿಯಾಗಿರುವಂತೆ ಹವ್ವಳನ್ನು ಸೃಷ್ಟಿಸಿದನು. ಅವರ ಮಿಲನವು ಇತಿಹಾಸದಲ್ಲಿಯೇ ಮೊದಲ ವಿವಾಹವಾಗಿತ್ತು. ಮಾತ್ರವಲ್ಲ, ಅದು ಚಿರಕಾಲದ ಬಾಂಧವ್ಯವಾಗಿರಬೇಕಾಗಿತ್ತು. ಆದುದರಿಂದಲೇ ದೇವರು ಹೇಳಿದ್ದು: “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.” ಇದಾಗಿ ಸುಮಾರು 4,000 ವರ್ಷಗಳ ನಂತರ, ಇದೇ ವೈವಾಹಿಕ ಮಟ್ಟವನ್ನು ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಪುನರುಚ್ಚರಿಸಿದನು. ಮಾತ್ರವಲ್ಲ, ವಿವಾಹದ ಹೊರಗೆ ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದು ತಪ್ಪು ಎಂದು ಅವನು ಖಂಡಿಸಿದನು.​—⁠ಆದಿಕಾಂಡ 1:​27, 28; 2:24; ಮತ್ತಾಯ 5:​27-30; 19:⁠5.

ಬೈಬಲಿಗನುಸಾರ, ಸುಖೀ ವಿವಾಹಕ್ಕೆ ಎರಡು ಮುಖ್ಯವಾದ ಕೀಲಿಕೈಗಳು, ಸಂಗಾತಿಗಳ ಮಧ್ಯೆ ಪ್ರೀತಿ ಮತ್ತು ಗೌರವವಾಗಿದೆ. ಕುಟುಂಬದ ತಲೆಯಾಗಿರುವ ಪತಿಯು, ಪತ್ನಿಯ ಹಿತವನ್ನು ನೋಡಬೇಕು ಹಾಗೂ ನಿಸ್ವಾರ್ಥ ಪ್ರೇಮವನ್ನು ತೋರಿಸಬೇಕು. ಅವನು ಪತ್ನಿಯೊಂದಿಗೆ “ಜ್ಞಾನಾನುಸಾರ”ವಾಗಿ (NW) ನಡೆದುಕೊಳ್ಳಬೇಕೇ ಹೊರತು ಅವಳೊಂದಿಗೆ “ನಿಷ್ಠುರವಾಗಿ” ನಡೆದುಕೊಳ್ಳಬಾರದು. ಅದೇ ರೀತಿ, ಪತ್ನಿಯು ತನ್ನ ಗಂಡನೊಂದಿಗೆ “ಭಯಭಕ್ತಿಯಿಂದ” ನಡೆದುಕೊಳ್ಳಬೇಕು. ಈ ತತ್ವಗಳನ್ನು ವಿವಾಹಿತರು ಅನುಸರಿಸುವುದಾದರೆ, ವೈವಾಹಿಕ ಜೀವನದಲ್ಲಿ ಎದುರಾಗಬಹುದಾದ ಅನೇಕ ಸಂಕಷ್ಟಗಳನ್ನು ತಪ್ಪಿಸಬಹುದು ಇಲ್ಲವೇ ಅದನ್ನು ಜಯಿಸಬಹುದು. ಪತಿಯು ಪತ್ನಿಯೊಂದಿಗೆ ಹಾಗೂ ಪತ್ನಿಯು ಪತಿಯೊಂದಿಗೆ ಆಪ್ತವಾಗಿರಲು ಬಯಸಬೇಕು.​—⁠1 ಪೇತ್ರ 3:​1-7; ಕೊಲೊಸ್ಸೆ 3:​18, 19; ಎಫೆಸ 5:​22-33.

ಒಬ್ಬ ವಿವಾಹ ಸಂಗಾತಿಗೆ ನಂಬಿಗಸ್ತರಾಗಿರಬೇಕು ಅನ್ನುವ ಬೈಬಲಿನ ಮಟ್ಟವು ಒಂದು ಸುಖೀ ವಿವಾಹಕ್ಕೆ ನಡೆಸಸಾಧ್ಯವೋ? ಉತ್ತರಕ್ಕಾಗಿ, ಜರ್ಮನಿಯಲ್ಲಿ ನಡೆಸಿದ ಸರ್ವೇಯನ್ನು ಸ್ವಲ್ಪ ಗಮನಿಸಿರಿ. ವಿವಾಹವು ಮುರಿಯದೇ ಇರಬೇಕಾದರೆ ಯಾವ ಅಂಶಗಳು ಮುಖ್ಯವಾಗಿವೆ ಎಂಬ ಪ್ರಶ್ನೆಯನ್ನು ಜನರಿಗೆ ಕೇಳಲಾಯಿತು. ಅವರು ಹೇಳಿದ ಅನೇಕ ಉತ್ತರಗಳಲ್ಲಿ ಒಂದು ಮುಖ್ಯವಾದ ಅಂಶವು, ಒಬ್ಬರಿಗೊಬ್ಬರು ನಂಬಿಗಸ್ತಿಕೆಯಿಂದ ಇರುವುದಾಗಿತ್ತು. ತನ್ನ ಸಂಗಾತಿಯು ನಂಬಿಗಸ್ತಳಾಗಿದ್ದಾಳೆ/ನಾಗಿದ್ದಾನೆ ಎಂಬುದನ್ನು ಅರಿತಿರುವ ವಿವಾಹಿತರು ಹೆಚ್ಚು ಸಂತುಷ್ಟರಾಗಿದ್ದಾರೆ ಎಂಬುದನ್ನು ನೀವು ಒಪ್ಪುವುದಿಲ್ಲವೋ?

ಸಮಸ್ಯೆಗಳು ಎದುರಾದರೆ ಏನು ಮಾಡುವುದು?

ಪತಿಪತ್ನಿಯರ ಮಧ್ಯೆ ಗಂಭೀರವಾದ ಭಿನ್ನಾಭಿಪ್ರಾಯಗಳು ಏಳುವುದಾದರೆ ಆಗೇನು? ಅವರ ಮಧ್ಯೆ ಪ್ರೀತಿಯೆಂಬ ಕುಸುಮವು ಬಾಡಿಹೋಗುವುದಾದರೆ ಏನು ಮಾಡಬೇಕು? ಅಂತಹ ಸಮಯದಲ್ಲಿ ವಿವಾಹ ಬಂಧವನ್ನು ಕಡಿದುಹಾಕುವುದೇ ಲೇಸಲ್ಲವೋ? ಇಲ್ಲವೆ, ಏನೇ ಆದರೂ ಸಂಗಾತಿಯೊಂದಿಗೆ ನಂಬಿಗಸ್ತರಾಗಿರಬೇಕು ಎಂದು ಹೇಳುವ ಬೈಬಲಿನ ಮಟ್ಟಕ್ಕೆ ಅನುಸಾರವಾಗಿ ನಡೆಯುವುದು ಬುದ್ಧಿವಂತರ ಲಕ್ಷಣವೋ?

ನಾವೆಲ್ಲರೂ ಅಪರಿಪೂರ್ಣರಾಗಿರುವುದರಿಂದ, ಎಲ್ಲ ವಿವಾಹಿತ ದಂಪತಿಗಳ ಮಧ್ಯೆ ಸಮಸ್ಯೆಗಳಿರುತ್ತವೆ ಎಂಬುದನ್ನು ಬೈಬಲ್‌ ಬರಹಗಾರರು ಗುರುತಿಸಿದರು. (1 ಕೊರಿಂಥ 7:28) ಆದರೂ, ಯಾರು ಬೈಬಲಿನ ನೈತಿಕ ಮಟ್ಟಗಳಿಗನುಸಾರ ನಡೆದುಕೊಳ್ಳುತ್ತಾರೋ ಅಂತಹ ದಂಪತಿಗಳು ಒಬ್ಬರನ್ನೊಬ್ಬರು ಕ್ಷಮಿಸುತ್ತಾ, ಭಿನ್ನಾಭಿಪ್ರಾಯಗಳನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ವ್ಯಭಿಚಾರ ಅಥವಾ ಶಾರೀರಿಕವಾಗಿ ಹಾನಿಮಾಡುವಂತಹ ಸಂದರ್ಭಗಳು ಎದುರಾದರೆ, ಆಗ ಒಬ್ಬ ಕ್ರೈಸ್ತನು ಬೇರೆಯಾಗಿ ಜೀವಿಸಲು ನಿರ್ಣಯಿಸಬಹುದು ಇಲ್ಲವೆ ವಿಚ್ಛೇದವನ್ನು ತೆಗೆದುಕೊಳ್ಳಬಹುದು. (ಮತ್ತಾಯ 5:32; 19:⁠9) ಆದರೆ ಗಂಭೀರವಾದ ಕಾರಣವಿಲ್ಲದಿರುವಾಗ ಇಲ್ಲವೆ ಕೇವಲ ಮತ್ತೊಬ್ಬ ವ್ಯಕ್ತಿಯೊಡನೆ ಬಾಳಲಿಕ್ಕಾಗಿ ವಿವಾಹ ಬಂಧವನ್ನು ಕಡಿದುಹಾಕಿಕೊಳ್ಳುವುದು ಸ್ವಾರ್ಥವಾಗಿದೆ. ಮಾತ್ರವಲ್ಲ, ಇದು ಜೀವನದಲ್ಲಿ ಭದ್ರತೆ ಇಲ್ಲವೆ ಸಂತೋಷವನ್ನು ತರಲು ಸಾಧ್ಯವೇ ಇಲ್ಲ. ಈ ಉದಾರಣೆಯನ್ನು ತೆಗೆದುಕೊಳ್ಳಿ.

ತನ್ನ ವೈವಾಹಿಕ ಜೀವನದಲ್ಲಿ ಹಿಂದೆ ಇದ್ದಂತಹ ಲವಲವಿಕೆ, ಹುರುಪು-ಉತ್ಸಾಹ ಈಗಿಲ್ಲವೆಂಬುದನ್ನು ಪೀಟರ್‌ ಕಂಡುಕೊಂಡನು. * ಆದಕಾರಣ, ಅವನು ತನ್ನ ಹೆಂಡತಿಯನ್ನು ಬಿಟ್ಟು, ಮೊನಿಕ ಎಂಬ ಸ್ತ್ರೀಯೊಂದಿಗೆ ಓಡಿಹೋದ. ಮೊನಿಕಳು ತನ್ನ ಪತಿಯನ್ನು ಬಿಟ್ಟುಬಿಟ್ಟಿದ್ದಳು. ಎಲ್ಲವೂ ಸುಖಮಯವಾಗಿತ್ತೋ? ಕೆಲವೇ ತಿಂಗಳೊಳಗೆ, ಮೊನಿಕಳೊಡನೆ ಜೀವಿಸುವುದು “ನೆನಸಿದಷ್ಟು ಸುಲಭವಲ್ಲ” ಎಂಬುದನ್ನು ಪೀಟರ್‌ ಕಂಡುಕೊಂಡನು. ಏಕೆ? ಹಳೇ ಹೆಂಡತಿಯಲ್ಲಿದ್ದ ಕುಂದುಕೊರತೆಗಳೇ ಈ ಹೊಸ ಹೆಂಡತಿಯಲ್ಲೂ ಇದ್ದವು. ಅವನು ಮುಂದಾಲೋಚನೆ ಮಾಡದೆ, ಸ್ವಾರ್ಥದಿಂದ ತೆಗೆದುಕೊಂಡ ನಿರ್ಣಯವು ಅವನನ್ನು ಗಂಭೀರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿತು. ಅಷ್ಟಲ್ಲದೆ, ತಮ್ಮ ಕುಟುಂಬ ಜೀವನದಲ್ಲಿ ಥಟ್ಟನೇ ಆದ ಬದಲಾವಣೆಯು, ಮೊನಿಕಳ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸಿತು.

ಈ ಅನುಭವವು ತಿಳಿಸುವಂತೆ, ವಿವಾಹವೆಂಬ ಹಡಗು ಪ್ರತಿಕೂಲವಾದ ಹವಾಮಾನವನ್ನು ಎದುರಿಸುವಾಗ, ಹಡಗನ್ನು ಬಿಟ್ಟು ಓಡಿಹೋಗುವುದು ಸಮಸ್ಯೆಗೆ ಪರಿಹಾರವಲ್ಲ. ಅದಕ್ಕೆ ಬದಲಾಗಿ, ಮಳೆಬಿರುಗಾಳಿಯನ್ನು ಎದುರಿಸಿ, ದೇವರ ವಾಕ್ಯವಾದ ಬೈಬಲಿನಲ್ಲಿರುವ ನೈತಿಕ ಮೌಲ್ಯಗಳಿಗೆ ಅನುಸಾರವಾಗಿ ನಡೆಯುವಾಗ, ಇದು ವಿವಾಹವೆಂಬ ಹಡಗು ಭೋರ್ಗರೆಯುವ ಅಲೆಗಳಿಲ್ಲದ ಶಾಂತವಾದ ನೀರಿನಲ್ಲಿ ತೇಲುತ್ತಾ ಮುಂದೆ ಮುಂದೆ ಸಾಗುವಂತೆ ಮಾಡುತ್ತದೆ. ಇದು ಟೋಮಾಸ್‌ ಹಾಗೂ ಡೋರೀಸ್‌ ಅವರ ಜೀವನದಲ್ಲಿ ಸತ್ಯವಾಗಿತ್ತು.

ಟೋಮಾಸ್‌ ಹಾಗೂ ಡೋರೀಸ್‌ ವಿವಾಹವಾಗಿ 30 ವರ್ಷಗಳಾಗಿದ್ದವು. ಆಗ ಟೋಮಾಸ್‌ ವಿಪರೀತವಾಗಿ ಕುಡಿಯಲು ಶುರುಮಾಡಿದ. ಇದರಿಂದ ಡೋರೀಸ್‌ ಮನನೊಂದು, ಖಿನ್ನಳಾದಳು. ಆದ್ದರಿಂದ ಅವರಿಬ್ಬರು ವಿವಾಹ ವಿಚ್ಛೇದವನ್ನು ಪಡೆದುಕೊಳ್ಳಲು ನಿರ್ಧರಿಸಿದರು. ಡೋರೀಸ್‌ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳ ಹತ್ತಿರ ತನ್ನ ಸಮಸ್ಯೆಯನ್ನು ತೋಡಿಕೊಂಡಳು. ವಿವಾಹದ ಬಗ್ಗೆ ಬೈಬಲು ಏನು ಹೇಳುತ್ತದೆ ಎಂಬುದನ್ನು ಆ ಸಾಕ್ಷಿಯು ಡೋರೀಸ್‌ಗೆ ತೋರಿಸಿದಳು. ಹಾಗೂ ಪ್ರತ್ಯೇಕಗೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳದೆ ಮೊದಲು, ಪತಿಯೊಂದಿಗೆ ಅದರ ಬಗ್ಗೆ ಮಾತಾಡಿ ಪರಿಹಾರವನ್ನು ಕಂಡುಕೊಳ್ಳುವಂತೆ ಉತ್ತೇಜನವನ್ನು ನೀಡಿದಳು. ಡೋರೀಸ್‌ ಈ ಸಾಕ್ಷಿ ಸಹೋದರಿಯ ಸಲಹೆಯನ್ನು ಪಾಲಿಸಿದಳು. ಹೀಗೆ, ಕೆಲವೇ ತಿಂಗಳುಗಳೊಳಗೆ ಅವರು ವಿಚ್ಛೇದದ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಟೋಮಾಸ್‌ ಮತ್ತು ಡೋರಿಸ್‌ ಇಬ್ಬರು ಸೇರಿಕೊಂಡು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗವನ್ನು ಹುಡುಕುತ್ತಿದ್ದರು. ಬೈಬಲಿನ ಸಲಹೆಯನ್ನು ಅನುಸರಿಸಿದ್ದರಿಂದ, ಅವರ ವಿವಾಹ ಬಂಧವು ಇನ್ನೂ ಗಟ್ಟಿಯಾಯಿತು ಮಾತ್ರವಲ್ಲ, ಸಮಸ್ಯೆಯನ್ನು ಪರಿಹರಿಸಲು ಅವರಿಗೆ ಸಮಯ ಸಿಕ್ಕಿತು.

ಎಲ್ಲ ವಿಷಯಗಳಲ್ಲೂ ಪ್ರಾಮಾಣಿಕರಾಗಿರುವುದು

ಒಬ್ಬ ವಿವಾಹ ಸಂಗಾತಿಯೊಡನೆ ಅನ್ಯೋನ್ಯವಾಗಿ ಬಾಳಲು ನೈತಿಕ ಬಲ ಹಾಗೂ ಪ್ರೀತಿಯು ಅತ್ಯಾವಶ್ಯಕವಾಗಿರುತ್ತದೆ. ವಂಚನೆಯಿಂದ ತುಂಬಿರುವ ಈ ಲೋಕದಲ್ಲಿ ಪ್ರಾಮಾಣಿಕರಾಗಿ ಉಳಿಯಲು ಸಹ ಇವೇ ಗುಣಗಳು ಅತ್ಯಾವಶ್ಯಕ. ಪ್ರಾಮಾಣಿಕತೆಯ ಬಗ್ಗೆ ಹೇರಳವಾದ ಮಾಹಿತಿಯನ್ನು ಬೈಬಲು ನಮಗೆ ನೀಡುತ್ತದೆ. ಯೂದಾಯದಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಹೀಗೆ ಬರೆದನು: “ನಾವು ಎಲ್ಲ ವಿಷಯಗಳಲ್ಲೂ ಪ್ರಾಮಾಣಿಕರಾಗಿರಲು ಬಯಸುತ್ತೇವೆ.” (ಇಬ್ರಿಯ 13:​18, NW) ಇದರ ಅರ್ಥವೇನು?

ಪ್ರಾಮಾಣಿಕನಾಗಿರುವ ಒಬ್ಬ ವ್ಯಕ್ತಿ ಸತ್ಯವನ್ನೇ ನುಡಿಯುವವನು ಹಾಗೂ ಮೋಸ, ವಂಚನೆ ಮಾಡದಿರುವವನಾಗಿರುತ್ತಾನೆ. ಅವನು ಇತರರೊಂದಿಗೆ ನಿಷ್ಪಕ್ಷಪಾತದಿಂದ ವ್ಯವಹರಿಸುವವನಾಗಿರುತ್ತಾನೆ. ಹಾಗೂ ಮೋಸ ಮಾಡುವ ಅಥವಾ ತಪ್ಪುದಾರಿಗೆ ನಡೆಸುವಂತಹ ವ್ಯಕ್ತಿಯಾಗಿರದೇ ನೇರವಾಗಿ ಮಾತಾಡುವವನೂ ಪ್ರಾಮಾಣಿಕನೂ ಆಗಿರುತ್ತಾನೆ. ಅಷ್ಟುಮಾತ್ರವಲ್ಲ, ಅವನು ನಿಷ್ಠಾವಂತನಾಗಿದ್ದು, ತನ್ನ ಜೊತೆಮಾನವರಿಗೆ ಮೋಸಮಾಡುವುದಿಲ್ಲ. ಪ್ರಾಮಾಣಿಕನಾದ ವ್ಯಕ್ತಿ ವಿಶ್ವಾಸ ಹಾಗೂ ಭರವಸೆಯ ವಾತಾವರಣಕ್ಕೆ ಎಡೆಮಾಡಿಕೊಡುತ್ತಾನೆ. ಇದು ಒಳ್ಳೆಯ ಮನೋಭಾವಗಳನ್ನು ಹೊಂದಿರುವಂತೆ ಸಹಾಯಮಾಡುತ್ತದೆ ಮಾತ್ರವಲ್ಲ, ಬಲವಾದ ಮಾನವ ಸಂಬಂಧಗಳನ್ನು ಪ್ರವರ್ಧಿಸುತ್ತವೆ.

ಪ್ರಾಮಾಣಿಕರಾಗಿರುವವರು ಸಂತೋಷಿತ ಜನರೋ? ಹೌದು, ಅವರು ಸಂತೋಷಿತ ಜನರೇ. ಹೀಗಿರುವುದಕ್ಕೆ ಕಾರಣವು ಸಹ ಇದೆ. ಎಲ್ಲೆಲ್ಲೂ ಭ್ರಷ್ಟಾಚಾರ, ಮೋಸ, ವಂಚನೆ ಇದೆಯಾದರೂ ಇವೆಲ್ಲದರ ಮಧ್ಯದಲ್ಲೂ ಪ್ರಾಮಾಣಿಕ ಜನರನ್ನು ಇತರರು ಪ್ರಶಂಸಿಸುತ್ತಾರೆ. ಯುವ ಜನರ ಮಧ್ಯೆ ನಡೆಸಿದ ಒಂದು ಸರ್ವೇಗನುಸಾರ, 70 ಪ್ರತಿಶತ ಉತ್ತರವು, ಪ್ರಾಮಾಣಿಕತೆಯು ಸದ್ಗುಣವಾಗಿದೆ ಎಂದಾಗಿತ್ತು. ಅಷ್ಟಲ್ಲದೆ, ನಮ್ಮ ವಯಸ್ಸು ಎಷ್ಟೇ ಆಗಿರಲಿ, ನಾವು ಯಾರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೋ ಅವರಲ್ಲಿ ಪ್ರಾಮಾಣಿಕತೆಯನ್ನು ಖಂಡಿತವಾಗಿಯೂ ಎದುರುನೋಡುತ್ತೇವಲ್ಲಾ.

ಕ್ರಿಸ್ಟೀನ್‌ಗೆ ಅವಳು 12 ವರ್ಷದವಳಾಗಿರುವಾಗಲೇ ಕದಿಯುವುದನ್ನು ಕಲಿಸಿಕೊಡಲಾಯಿತು. ಸ್ವಲ್ಪ ವರ್ಷಗಳು ಕಳೆದ ನಂತರ ಅವಳು ಪಿಕ್‌ಪಾಕೆಟ್‌ ಮಾಡುವುದರಲ್ಲಿ ನಂ. 1 ಆದಳು. “ಆಗ ಕೆಲವೊಮ್ಮೆ ದಿನಕ್ಕೆ ನಾನು ಸುಮಾರು 2,200 ಡಾಲರುಗಳಷ್ಟು ಹಣವನ್ನು ಮನೆಗೆ ತರುತ್ತಿದ್ದೆ” ಎಂದು ಅವಳು ಹೇಳುತ್ತಾಳೆ. ಆದರೆ ಕ್ರಿಸ್ಟೀನಳನ್ನು ಅನೇಕ ಸಲ ಬಂಧಿಸಲಾಯಿತು. ಮತ್ತು ಸದಾ ಜೈಲಿಗೆ ಹಾಕಲ್ಪಡುವ ಅಪಾಯದಲ್ಲಿ ಅವಳು ಜೀವಿಸುತ್ತಿದ್ದಳು. ಪ್ರಾಮಾಣಿಕತೆಯ ಬಗ್ಗೆ ಬೈಬಲು ಏನು ಹೇಳುತ್ತದೆ ಎಂಬುದನ್ನು ಯೆಹೋವನ ಸಾಕ್ಷಿಗಳು ಅವಳಿಗೆ ವಿವರಿಸಿದಾಗ, ಕ್ರಿಸ್ಟೀನ್‌ಗೆ ಬೈಬಲಿನ ನೈತಿಕ ಮಟ್ಟಗಳು ಬಹಳ ಆಕರ್ಷಿಸಿದವು. “ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ” ಇರಲಿ ಎಂಬ ಈ ಬುದ್ಧಿವಾದಕ್ಕೆ ವಿಧೇಯತೆಯನ್ನು ತೋರಿಸಲು ಅವಳು ಕಲಿತುಕೊಂಡಳು.​—⁠ಎಫೆಸ 4:28.

ಕ್ರಿಸ್ಟೀನಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ದೀಕ್ಷಾಸ್ನಾನ ಪಡೆದುಕೊಂಡಾಗ, ಅವಳು ಒಬ್ಬ ಕಳ್ಳಿಯಾಗಿರಲಿಲ್ಲ. ಏಕೆಂದರೆ ಅವಳು ಕದಿಯುವುದನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದಳು. ಮಾತ್ರವಲ್ಲ, ಎಲ್ಲ ವಿಷಯಗಳಲ್ಲೂ ಪ್ರಾಮಾಣಿಕಳಾಗಿರಲು ಅವಳು ಪ್ರಯತ್ನಿಸುತ್ತಿದ್ದಳು. ಏಕೆಂದರೆ ಪ್ರಾಮಾಣಿಕತೆ ಹಾಗೂ ಇತರ ಕ್ರೈಸ್ತ ಗುಣಗಳ ಬಗ್ಗೆ ಸಾಕ್ಷಿಗಳು ಅವಳಿಗೆ ಪದೇಪದೇ ಹೇಳುತ್ತಿದ್ದರು. ಲೌಸಿಟ್ಸ ರುಂಟ್‌ಷೌ ಎಂಬ ವಾರ್ತಾಪತ್ರಿಕೆಯು ವರದಿಸುವುದು: “ಪ್ರಾಮಾಣಿಕತೆ, ಹಿತಮಿತವಾದ ಜೀವನ ಹಾಗೂ ನೆರೆಯವರಿಗಾಗಿ ಪ್ರೀತಿಯಂತಹ ನೈತಿಕ ಮಟ್ಟಗಳು ಸಾಕ್ಷಿಗಳ ಮಧ್ಯೆ ಹೆಚ್ಚಾಗಿ ಕಂಡುಬರುತ್ತದೆ.” ತನ್ನ ಜೀವನದಲ್ಲಿ ಬದಲಾವಣೆಯನ್ನು ಮಾಡಿಕೊಂಡ ಬಳಿಕ ಕ್ರಿಸ್ಟೀನಳಿಗೆ ಈಗ ಹೇಗನಿಸುತ್ತದೆ? “ನಾನೀಗ ಬಹಳ ಸಂತೋಷಿತಳಾಗಿದ್ದೇನೆ ಹಾಗೂ ಕಳ್ಳತನ ಮಾಡುವುದನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದೇನೆ. ನಾನು ಸಹ ಈ ಸಮಾಜದಲ್ಲಿ ಒಬ್ಬ ಗೌರವಾರ್ಹ ಸದಸ್ಯಳಾಗಿದ್ದೇನೆ ಎಂದು ನನಗೆ ಅನಿಸುತ್ತದೆ” ಎಂದು ಅವಳು ಹೇಳುತ್ತಾಳೆ.

ಇದರಿಂದ ಇಡೀ ಸಮಾಜಕ್ಕೆ ಪ್ರಯೋಜನವಾಗುತ್ತದೆ

ತಮ್ಮ ಸಂಗಾತಿಗೆ ನಂಬಿಗಸ್ತರಾಗಿರುವ ಮತ್ತು ಪ್ರಾಮಾಣಿಕರಾಗಿರುವ ಜನರು ಸಂತೋಷಿತರು ಮಾತ್ರವಲ್ಲ, ಸಮಾಜಕ್ಕೂ ಪ್ರಯೋಜನಕಾರಿಯಾಗಿರುತ್ತಾರೆ. ಪ್ರಾಮಾಣಿಕ ಕೆಲಸಗಾರರನ್ನು ಕೆಲಸಕ್ಕಿಟ್ಟುಕೊಳ್ಳಲು ಧಣಿಗಳು ಇಷ್ಟಪಡುತ್ತಾರೆ. ನಮ್ಮ ನೆರೆಹೊರೆಯವರು ಭರವಸಾರ್ಹರಾಗಿರುವಂತೆ ಹಾಗೂ ಪ್ರಾಮಾಣಿಕ ವ್ಯಾಪಾರಿಗಳಿಂದ ಸಾಮಾನನ್ನು ಖರೀದಿಸಲು ನಾವೆಲ್ಲರೂ ಇಷ್ಟಪಡುತ್ತೇವೆ. ಭ್ರಷ್ಟಾಚಾರದಲ್ಲಿ ಒಳಗೂಡಿರದ ರಾಜಕಾರಿಣಿಗಳನ್ನು, ಪೊಲೀಸರನ್ನು ಹಾಗೂ ನ್ಯಾಯಾಧೀಶರನ್ನು ನಾವು ಗೌರವಿಸುವುದಿಲ್ಲವೋ? ಸಮಾಜದಲ್ಲಿರುವ ಜನರು ತಮಗೆ ಅನುಕೂಲಕರವಾದಾಗ ಮಾತ್ರ ಪ್ರಾಮಾಣಿಕರಾಗಿರದೇ ಎಲ್ಲ ಸಮಯದಲ್ಲೂ ಅದನ್ನು ನಿಯಮವನ್ನಾಗಿ ಪಾಲಿಸುವಾಗ, ಸಮಾಜಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿರುತ್ತದೆ.

ಅಷ್ಟಲ್ಲದೆ, ನಂಬಿಗಸ್ತರಾಗಿರುವ ವಿವಾಹ ಸಂಗಾತಿಗಳು ಸ್ಥಿರವಾದ ಕುಟುಂಬಗಳಿಗೆ ಆಧಾರವಾಗಿದ್ದಾರೆ. ಯೂರೋಪಿಯನ್‌ ರಾಜಕಾರಣಿಯ ಮಾತನ್ನು ಅನೇಕ ಜನರು ಒಪ್ಪುತ್ತಾರೆ. ಅವು ಹೇಳಿದ್ದು: “[ಸಾಂಪ್ರದಾಯಿಕ] ಕುಟುಂಬವು ಇಂದಿನ ತನಕವೂ ನೆಲೆನಿಂತಿದೆ. ಇದು ಮಾನವನಿಗೆ ಭದ್ರತೆಯನ್ನು ಹಾಗೂ ಜೀವನಕ್ಕೆ ಅರ್ಥವನ್ನು ಕೊಡುತ್ತದೆ.” ಎಲ್ಲಿ ವಯಸ್ಕರಿಗೂ ಮಕ್ಕಳಿಗೂ ಭಾವನಾತ್ಮಕ ಭದ್ರತೆಯನ್ನು ಅನುಭವಿಸಲು ಅವಕಾಶವಿರುತ್ತದೋ ಅಂತಹ ಕುಟುಂಬದಲ್ಲಿ ಶಾಂತಿಯು ಮನೆಮಾಡಿರುತ್ತದೆ. ವಿವಾಹದಲ್ಲಿ ನಂಬಿಗಸ್ತರಾಗಿರುವವರು, ಹೀಗೆ ಒಂದು ಸ್ಥಿರವಾದ ಸಮಾಜವನ್ನು ಕಟ್ಟಲು ಸಹಾಯಮಾಡುತ್ತಿದ್ದಾರೆ.

ಪತಿಯನ್ನು ಬಿಟ್ಟುಬಿಟ್ಟಿರುವ ಪತ್ನಿ ಇಲ್ಲವೇ ಪತ್ನಿಯನ್ನು ಬಿಟ್ಟುಬಿಟ್ಟಿರುವ ಪತಿ, ವಿಚ್ಛೇದನವನ್ನು ನೀಡುವ ಕೋರ್ಟುಗಳು ಅಥವಾ ಮಕ್ಕಳನ್ನು ಬೇರೆಯವರ ಕಸ್ಟಡಿಗೆ ಬಿಟ್ಟುಬಿಡುವಂತಹ ಸಂಗತಿಗಳು ಇಲ್ಲದಿರುವಾಗ, ಎಲ್ಲರೂ ಎಷ್ಟೊಂದು ಪ್ರಯೋಜನವನ್ನು ಪಡೆಯುವರು ಎಂಬುದನ್ನು ಸ್ವಲ್ಪ ಯೋಚಿಸಿ ನೋಡಿರಿ. ಪಿಕ್‌ಪಾಕೆಟ್‌ ಮಾಡುವವರು, ಅಂಗಡಿಗಳ್ಳರು, ಹಣವನ್ನು ಲಪಟಾಯಿಸುವವರು, ಭ್ರಷ್ಟ ಅಧಿಕಾರಿಗಳು ಅಥವಾ ಮೋಸಮಾಡುವ ವಿಜ್ಞಾನಿಗಳು ಇಲ್ಲದಿದ್ದರೆ ಪರಿಸ್ಥಿತಿಯು ಹೇಗಿರುವುದು? ಇದು ನಿಮಗೆ ಕೇವಲ ಒಂದು ಸ್ವಪ್ನದಂತೆ ಅನಿಸುತ್ತದೋ? ಬೈಬಲಿನಲ್ಲಿ ಹಾಗೂ ನಮ್ಮ ಭವಿಷ್ಯತ್ತಿನ ಕುರಿತು ಅದು ಹೇಳುವ ವಿಚಾರದಲ್ಲಿ ಬಹಳ ಆಸಕ್ತಿಯುಳ್ಳ ಜನರಿಗೆ ಇದು ಕನಸಾಗಿ ತೋರುವುದಿಲ್ಲ. ಈ ಭೂಮಿಯಲ್ಲಿರುವ ಎಲ್ಲ ಮಾನವ ಸಮಾಜದ ಆಳ್ವಿಕೆಯನ್ನು ಯೆಹೋವನ ಮೆಸ್ಸೀಯ ರಾಜ್ಯವು ತನ್ನ ವಶಕ್ಕೆ ತೆಗೆದುಕೊಳ್ಳುವುದು ಎಂಬುದಾಗಿ ದೇವರ ವಾಕ್ಯವು ವಾಗ್ದಾನಿಸುತ್ತದೆ. ಆ ರಾಜ್ಯದ ಕೆಳಗೆ ಎಲ್ಲ ಪ್ರಜೆಗಳು ಬೈಬಲಿನ ನೈತಿಕತೆಗಳಿಗನುಸಾರ ಜೀವಿಸುವಂತೆ ಕಲಿಸಲ್ಪಡುವರು. ಆಗ, “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”​—⁠ಕೀರ್ತನೆ 37:⁠29.

ಬೈಬಲ್‌ ನೈತಿಕತೆಯೇ ಸರ್ವೋತ್ತಮ ನೈತಿಕತೆ

ಪವಿತ್ರ ಶಾಸ್ತ್ರಗಳನ್ನು ಪರೀಕ್ಷಿಸಿ ನೋಡಿರುವ ಲಕ್ಷಾಂತರ ಜನರು, ದೈವಿಕ ವಿವೇಕದ ಮೇಲಾಧಾರಿಸಿದ ಬೈಬಲಿನ ಸಲಹೆಯನ್ನು ಗಣ್ಯಮಾಡಿದ್ದಾರೆ. ಏಕೆಂದರೆ ಇದು ಮಾನವ ಆಲೋಚನೆಗಿಂತಲೂ ಹೆಚ್ಚು ಉತ್ಕೃಷ್ಟವಾಗಿದೆ. ಇಂತಹ ಜನರು, ಬೈಬಲು ಭರವಸಾರ್ಹವಾಗಿದೆ ಹಾಗೂ ನಮ್ಮ ಆಧುನಿಕ ಲೋಕದಲ್ಲಿ ಜೀವಿತಕ್ಕೆ ಸುಸಂಗತವಾಗಿದೆ ಎಂದು ನೆನಸುತ್ತಾರೆ. ದೇವರ ವಾಕ್ಯದಲ್ಲಿರುವ ಸಲಹೆಯನ್ನು ಪಾಲಿಸುವುದು ತಮಗೆ ಒಳಿತನ್ನು ತರುತ್ತದೆ ಎಂಬುದು ಅವರಿಗೆ ಗೊತ್ತಿದೆ.

ಆದುದರಿಂದ, ಅಂತಹ ವ್ಯಕ್ತಿಗಳು ಬೈಬಲಿನ ಈ ಸಲಹೆಯನ್ನು ಪಾಲಿಸುತ್ತಾರೆ. ಅದು ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಹೀಗೆ ಯೆಹೋವನ ಮಾರ್ಗದಲ್ಲಿ ನಡೆಯುವಾಗ, ಅವರು ತಮ್ಮ ಸ್ವಂತ ಜೀವಿತಗಳನ್ನು ಸುಧಾರಿಸಿಕೊಳ್ಳುತ್ತಾರೆ. ಮಾತ್ರವಲ್ಲ, ತಮ್ಮ ಸುತ್ತಮುತ್ತಲಿರುವ ಜನರ ಜೀವಿತಗಳಿಗೂ ಪ್ರಯೋಜನವನ್ನು ತರುತ್ತಾರೆ. ಎಲ್ಲ ಮಾನವಕುಲವು ಬೈಬಲಿನ ನೈತಿಕತೆಯನ್ನು ಅನುಸರಿಸುವ, ಅಂದರೆ “ಮುಂದೆ ಬರಲಿರುವ . . . ಜೀವನ”ದಲ್ಲಿ (NW) ಅವರು ದೃಢಭರವಸೆಯನ್ನಿಡುತ್ತಾರೆ.​—⁠1 ತಿಮೊಥೆಯ 4:⁠8.

[ಪಾದಟಿಪ್ಪಣಿ]

^ ಪ್ಯಾರ. 11 ಈ ಲೇಖನದಲ್ಲಿರುವ ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ವೈವಾಹಿಕ ಮಳೆಬಿರುಗಾಳಿಯ ಸಮಯದಲ್ಲಿ, ದೇವರ ವಾಕ್ಯವಾದ ಬೈಬಲಿನಲ್ಲಿರುವ ನೈತಿಕ ಮೌಲ್ಯಗಳನ್ನು ಅನುಸರಿಸಿ ನಡೆಯುವಾಗ, ಇದು ವಿವಾಹವೆಂಬ ಹಡಗು ಭೋರ್ಗರೆಯುವ ಅಲೆಗಳಿಲ್ಲದ ಶಾಂತವಾದ ನೀರಿನಲ್ಲಿ ತೇಲುತ್ತಾ ಮುಂದೆ ಮುಂದೆ ಸಾಗುವಂತೆ ಮಾಡುತ್ತದೆ

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಎಲ್ಲೆಲ್ಲೂ ಭ್ರಷ್ಟಾಚಾರ ಇದೆಯಾದರೂ​—⁠ಅಥವಾ ಇದರಿಂದಾಗಿ​—⁠ಪ್ರಾಮಾಣಿಕ ಜನರನ್ನು ಇತರರು ಪ್ರಶಂಸಿಸುತ್ತಾರೆ