“ಹಿಮ್ಮೆಟ್ಟದಿರುವಂತಹ ನಂಬಿಕೆಯಿರಲಿ”!
ಜೀವನ ಕಥೆ
“ಹಿಮ್ಮೆಟ್ಟದಿರುವಂತಹ ನಂಬಿಕೆಯಿರಲಿ”!
ಹರ್ಬರ್ಟ್ ಮುಲ್ಲರ್ ಅವರು ಹೇಳಿದಂತೆ
ಹಿಟ್ಲರನ ಸೈನ್ಯವು ನೆದರ್ಲೆಂಡ್ಸ್‌ಗೆ ಮುತ್ತಿಗೆಹಾಕಿದ ಕೆಲವು ತಿಂಗಳುಗಳ ಬಳಿಕ, ಯೆಹೋವನ ಸಾಕ್ಷಿಗಳ ಮೇಲೆ ಬ್ಯಾನ್ ಹಾಕಲಾಯಿತು. ಸ್ವಲ್ಪ ಸಮಯದ ನಂತರ ನಾಸಿಗಳು ಹಿಡಿಯಲು ಪ್ರಯತ್ನಿಸುತ್ತಿದ್ದ ಜನರ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ಮತ್ತು ಒಂದು ಪ್ರಾಣಿಯನ್ನು ಬೇಟೆಯಾಡುವಂತೆ ನನ್ನನ್ನು ಬೇಟೆಯಾಡಲಾಯಿತು.
ಅವಿತುಕೊಳ್ಳುವ ಹಾಗೂ ಓಡುವ ಕೆಲಸದಿಂದ ನಾನು ತುಂಬ ಬೇಸತ್ತುಹೋಗಿದ್ದೆ. ಆದುದರಿಂದ, ಸೈನಿಕರ ಕೈಗೆ ಸಿಕ್ಕಿಬೀಳುವುದರಿಂದಲಾದರೂ ನನಗೆ ಬಿಡುಗಡೆ ಸಿಗಬಹುದು ಎಂದು ನಾನು ನನ್ನ ಪತ್ನಿಗೆ ಬರೆದೆ. ಆ ಸಮಯದಲ್ಲಿ ಒಂದು ಗೀತೆಯ ಮಾತುಗಳು ನನ್ನ ಮನಸ್ಸಿಗೆ ಬಂದವು: “ಪ್ರತಿಯೊಬ್ಬ ಎದುರಾಳಿಯಿಂದ ಎಷ್ಟೇ ಒತ್ತಡಕ್ಕೊಳಗಾಗುವುದಾದರೂ, ಹಿಮ್ಮೆಟ್ಟದಿರುವಂತಹ ನಂಬಿಕೆಯಿರಲಿ.” * ಆ ಗೀತೆಯನ್ನು ಪುನಃ ಜ್ಞಾಪಿಸಿಕೊಂಡದ್ದರಿಂದ, ನನ್ನ ಆಂತರಿಕ ಬಲವು ಹೆಚ್ಚಾಯಿತು. ಮತ್ತು ಜರ್ಮನಿಯಲ್ಲಿರುವ ನನ್ನ ಹೆತ್ತವರ ನೆನಪನ್ನು ಹಾಗೂ ನನಗೆ ವಿದಾಯ ಹೇಳುತ್ತಿರುವಾಗ ನನ್ನ ಸ್ನೇಹಿತರು ಈ ಗೀತೆಯನ್ನು ಹಾಡಿದ ದಿನದ ನೆನಪನ್ನು ನನ್ನ ಮನಸ್ಸಿಗೆ ತಂದಿತು. ಈ ಸವಿನೆನಪುಗಳಲ್ಲಿ ಕೆಲವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲೋ?
ನನ್ನ ಹೆತ್ತವರ ಮಾದರಿ
1913ರಲ್ಲಿ, ಜರ್ಮನಿಯ ಕೊಪಿಟ್ಸ್ ಪಟ್ಟಣದಲ್ಲಿ ನಾನು ಜನಿಸಿದಾಗ, ನನ್ನ ಹೆತ್ತವರು ಇವ್ಯಾಂಜೆಲಿಕಲ್ ಚರ್ಚಿನ ಸದಸ್ಯರಾಗಿದ್ದರು. * ಏಳು ವರ್ಷಗಳ ನಂತರ, ಅಂದರೆ 1920ರಲ್ಲಿ ತಂದೆಯವರು ಚರ್ಚನ್ನು ತೊರೆದುಬಿಟ್ಟರು. ಏಪ್ರಿಲ್ 6ರಂದು, ಅವರು ಆಫೀಸಿಗೆ ಹೋಗಿ ಕಿರ್‌ಚೆನಾಸ್ಟ್ರಿಟ್ಸ್‌ಬೆಸ್ಕೈನಿಗಂಗ್ (ಚರ್ಚಿನ ಸದಸ್ಯತ್ವವನ್ನು ಹಿಂದೆಗೆದುಕೊಳ್ಳುವ ತ್ಯಾಗಪತ್ರ) ಅನ್ನು ಕೊಡುವಂತೆ ಕೇಳಿಕೊಂಡರು. ಆ ಪಟ್ಟಣದ ಸಿವಿಲ್ ರೆಜಿಸ್ಟ್ರೇಷನ್ ಅಧಿಕಾರಿಯು ಒಂದು ದಾಖಲೆಪತ್ರವನ್ನು ಭರ್ತಿಮಾಡಿದನು. ಆದರೂ, ಒಂದು ವಾರದ ನಂತರ ತಂದೆಯವರು ಪುನಃ ಆ ಆಫೀಸಿಗೆ ಹೋಗಿ, ಆ ತ್ಯಾಗಪತ್ರದಲ್ಲಿ ತನ್ನ ಮಗಳ ಹೆಸರು ನಮೂದಿಸಲ್ಪಟ್ಟಿಲ್ಲ ಎಂದು ವಿವರಿಸಿದರು. ಆಗ ಆ ಅಧಿಕಾರಿಯು ಇನ್ನೊಂದು ದಾಖಲೆಪತ್ರವನ್ನು ಭರ್ತಿಮಾಡಿ, ಚರ್ಚ್ ಸದಸ್ಯತ್ವವನ್ನು ಹಿಂದೆಗೆದುಕೊಳ್ಳುವ ವಿಷಯವು ಮಾರ್‌ಟಾ ಮಾರ್ಗಾರೇಟಾ ಮುಲ್ಲರ್‌ಗೆ ಸಹ ಅನ್ವಯವಾಗುತ್ತದೆ ಎಂದು ಅದರಲ್ಲಿ ಬರೆದನು. ಆ ಸಮಯದಲ್ಲಿ ನನ್ನ ತಂಗಿಯಾದ ಮಾರ್ಗಾರೇಟಾಳು ಕೇವಲ ಒಂದೂವರೆ ವರ್ಷದವಳಾಗಿದ್ದಳು. ಯೆಹೋವನ ಸೇವೆಮಾಡುವ ವಿಷಯದಲ್ಲಿ ಚಿಕ್ಕಪುಟ್ಟ ವಿಷಯಗಳಲ್ಲಿಯೂ ತಂದೆಯವರು ಎಂದೂ ರಾಜಿಯಾಗುತ್ತಿರಲಿಲ್ಲ.
ಅದೇ ವರ್ಷ ನನ್ನ ಹೆತ್ತವರು, ಈಗ ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧರಾಗಿರುವ ಬೈಬಲ್ ವಿದ್ಯಾರ್ಥಿಗಳಿಂದ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಮಕ್ಕಳಾದ ನಮ್ಮನ್ನು ತಂದೆಯವರು ತುಂಬ ಕಟ್ಟುನಿಟ್ಟಾದ ರೀತಿಯಲ್ಲಿ ಬೆಳೆಸಿದರು. ಆದರೆ, ಯೆಹೋವನ ಕಡೆಗೆ ನನ್ನ ತಂದೆಯವರಿಗಿದ್ದ
ನಿಷ್ಠೆಯು, ಅವರು ನೀಡುತ್ತಿದ್ದ ಮಾರ್ಗದರ್ಶನವನ್ನು ನಾವು ಸುಲಭವಾಗಿ ಅಂಗೀಕರಿಸುವಂತೆ ಮಾಡಿತು. ನನ್ನ ಹೆತ್ತವರು ನಿಷ್ಠಾವಂತರಾಗಿದ್ದರಿಂದಲೇ ಅವರು ತಮ್ಮ ಜೀವಿತದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಂಡರು. ದೃಷ್ಟಾಂತಕ್ಕಾಗಿ, ಮೊದಲು ನಮ್ಮ ಹೆತ್ತವರು ನಮ್ಮನ್ನು ಭಾನುವಾರಗಳಂದು ಮನೆಯಿಂದ ಹೊರಗೆ ಆಟವಾಡಲು ಬಿಡುತ್ತಿರಲಿಲ್ಲ. ಆದರೆ 1925ರ ಒಂದು ಭಾನುವಾರದಂದು, ನಾವೆಲ್ಲರೂ ತಿರುಗಾಡಲು ಹೊರಗೆ ಹೋಗಲಿದ್ದೇವೆ ಎಂದು ನಮ್ಮ ಹೆತ್ತವರು ನಮಗೆ ಹೇಳಿದರು. ನಾವು ಸ್ವಲ್ಪ ತಿಂಡಿಯನ್ನು ಮಾಡಿಕೊಂಡು ಹೋದೆವು ಮತ್ತು ಆ ದಿನ ತುಂಬ ಮಜಾ ಮಾಡಿದೆವು. ಇಡೀ ದಿನ ಮನೆಯೊಳಗೇ ಬಂಧಿತರಾಗಿರುತ್ತಿದ್ದ ನಮಗೆ ಎಂತಹ ಒಂದು ಬದಲಾವಣೆಯಾಗಿತ್ತು! ಇತ್ತೀಚಿನ ಅಧಿವೇಶನದಲ್ಲಿ ಕೆಲವೊಂದು ಅಂಶಗಳನ್ನು ತಾನು ಕೇಳಿಸಿಕೊಂಡಿದ್ದೆ ಮತ್ತು ಅದು ಭಾನುವಾರದ ಚಟುವಟಿಕೆಗಳ ಕುರಿತಾದ ನನ್ನ ದೃಷ್ಟಿಕೋನವನ್ನು ಸರಿಪಡಿಸಿತು ಎಂದು ತಂದೆಯವರು ಹೇಳಿದರು. ಇನ್ನೂ ಅನೇಕಬಾರಿ ಅವರು ಅದೇ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸಿದ್ಧರಿದ್ದರು.ನನ್ನ ಹೆತ್ತವರ ಆರೋಗ್ಯವು ಅಷ್ಟೇನೂ ಚೆನ್ನಾಗಿರಲಿಲ್ಲ, ಆದರೂ, ಸಾರುವ ಕೆಲಸದಿಂದ ಅವರು ಎಂದೂ ಹಿಂಜರಿಯಲಿಲ್ಲ. ಉದಾಹರಣೆಗೆ, ಒಂದು ದಿನ ಸಾಯಂಕಾಲ ನಾವು ಮತ್ತು ಸಭೆಯ ಉಳಿದ ಪ್ರಚಾರಕರು, ಚರ್ಚೀಯತೆಯು ದೂಷಿಸಲ್ಪಟ್ಟದ್ದು (ಇಂಗ್ಲಿಷ್) ಎಂಬ ಟ್ರ್ಯಾಕ್ಟನ್ನು ಹಂಚಲಿಕ್ಕಾಗಿ ಒಂದು ಟ್ರೈನಿನಲ್ಲಿ ರೆಜೆನ್ಸ್‌ಬರ್ಗ್ ಪಟ್ಟಣಕ್ಕೆ ಪ್ರಯಾಣಿಸಿದೆವು. ಈ ಪಟ್ಟಣವು ಡ್ರೆಸ್‌ಡೆನ್‌ನಿಂದ ಸುಮಾರು 300 ಕಿಲೊಮೀಟರುಗಳಷ್ಟು ದೂರವಿತ್ತು. ಮರುದಿನ ನಾವು ಆ ಪಟ್ಟಣದಾದ್ಯಂತ ಟ್ರ್ಯಾಕ್ಟ್‌ಗಳನ್ನು ಹಂಚಿದೆವು, ಮತ್ತು ಆ ಕೆಲಸವು ಮುಗಿದ ಬಳಿಕ ಪುನಃ ಟ್ರೈನಿನಲ್ಲಿ ಹಿಂದಿರುಗಿದೆವು. ನಾವು ಮನೆಗೆ ಹಿಂದಿರುಗುವುದರೊಳಗಾಗಿ ಸುಮಾರು 24 ಗಂಟೆಗಳು ಕಳೆದಿರುತ್ತಿದ್ದವು.
ಮನೆಬಿಟ್ಟು ಹೋಗುವುದು
ನನ್ನ ಸಭೆಯಲ್ಲಿದ್ದ ಜುಗೆಂಡ್‌ಗ್ರೂಪ್ (ಯೂತ್ ಗ್ರೂಪ್)ನೊಂದಿಗಿದ್ದ ನನ್ನ ಸಹವಾಸವು ಸಹ, ಆತ್ಮಿಕವಾಗಿ ಬೆಳೆಯುವಂತೆ ನನಗೆ ಸಹಾಯಮಾಡಿತು. ಪ್ರತಿವಾರ, 14 ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟ ಯುವಕರು, ಸಭೆಯ ವೃದ್ಧ ಸಹೋದರರಲ್ಲಿ ಕೆಲವರೊಂದಿಗೆ ಒಂದು ಸ್ಥಳದಲ್ಲಿ ಒಟ್ಟುಗೂಡುತ್ತಿದ್ದೆವು. ನಾವೆಲ್ಲರೂ ಒಟ್ಟಿಗೆ ಸೇರಿ ಆಟವಾಡುತ್ತಿದ್ದೆವು ಹಾಗೂ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದೆವು, ಬೈಬಲನ್ನು ಅಭ್ಯಾಸಿಸುತ್ತಿದ್ದೆವು ಮತ್ತು ಸೃಷ್ಟಿಯ ಕುರಿತು ಹಾಗೂ ವಿಜ್ಞಾನದ ಕುರಿತು ಮಾತಾಡುತ್ತಿದ್ದೆವು. ಆದರೂ, 1932ರಲ್ಲಿ, ಅಂದರೆ ನಾನು 19 ವರ್ಷ ಪ್ರಾಯದವನಾಗಿದ್ದಾಗ, ಈ ಗುಂಪಿನೊಂದಿಗಿನ ನನ್ನ ಸಹವಾಸವು ಕೊನೆಗೊಂಡಿತು.
ಆ ವರ್ಷದ ಏಪ್ರಿಲ್ ತಿಂಗಳಿನಲ್ಲಿ, ಮಾಗ್ಡೆಬರ್ಗ್‌ನಲ್ಲಿದ್ದ ವಾಚ್ ಟವರ್ ಸೊಸೈಟಿಯ ಆಫೀಸಿನಿಂದ ತಂದೆಯವರಿಗೆ ಒಂದು ಪತ್ರ ಬಂತು. ಒಂದು ಕಾರನ್ನು ಡ್ರೈವ್‌ಮಾಡಸಾಧ್ಯವಿರುವ ಹಾಗೂ ಪಯನೀಯರ್ ಸೇವೆಯನ್ನು ಮಾಡಲು ಬಯಸುವಂತಹ ಒಬ್ಬ ವ್ಯಕ್ತಿಯನ್ನು ಸೊಸೈಟಿಯು ಹುಡುಕುತ್ತಿತ್ತು. ನಾನು ಪಯನೀಯರ್ ಸೇವೆಯನ್ನು ಮಾಡಬೇಕೆಂಬುದು ನನ್ನ ಹೆತ್ತವರ ಬಯಕೆಯಾಗಿತ್ತು ಎಂಬುದು ನನಗೆ ಗೊತ್ತಿತ್ತು. ಆದರೂ ನಾನು ಪಯನೀಯರ್ ಸೇವೆಯನ್ನು ಮಾಡಲಾರೆ ಎಂದು ನನಗನಿಸಿತು. ನನ್ನ ಹೆತ್ತವರು ತುಂಬ ಬಡವರಾಗಿದ್ದದರಿಂದ, 14 ವರ್ಷದವನಾಗಿದ್ದಾಲೇ ನಾನು ಸೈಕಲ್‌ಗಳನ್ನು, ಹೊಲಿಗೆ ಯಂತ್ರಗಳನ್ನು ಹಾಗೂ ಟೈಪ್‌ರೈಟರ್‌ಗಳನ್ನು ಮತ್ತು ಆಫೀಸಿನ ಇನ್ನಿತರ ಸಾಧನಗಳನ್ನು ರಿಪೇರಿಮಾಡುವ ಕೆಲಸವನ್ನು ಆರಂಭಿಸಿದ್ದೆ. ಈ ಸ್ಥಿತಿಯಲ್ಲಿ ನಾನು ನನ್ನ ಕುಟುಂಬವನ್ನು ಹೇಗೆ ಬಿಟ್ಟುಹೋಗಸಾಧ್ಯವಿತ್ತು? ಅವರಿಗೆ ನನ್ನ ಬೆಂಬಲದ ಅಗತ್ಯವಿತ್ತು. ಅಷ್ಟುಮಾತ್ರವಲ್ಲ, ನನಗೆ ದೀಕ್ಷಾಸ್ನಾನವೂ ಆಗಿರಲಿಲ್ಲ. ಈ ಸಮಯದಲ್ಲಿ ತಂದೆಯವರು ನನ್ನನ್ನು ಕೂರಿಸಿಕೊಂಡು, ದೀಕ್ಷಾಸ್ನಾನದಲ್ಲಿ ಏನು ಒಳಗೂಡಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೋ ಎಂದು ನೋಡಲಿಕ್ಕಾಗಿ ಕೆಲವು ಪ್ರಶ್ನೆಗಳನ್ನು ಕೇಳಿದರು. ನಾನು ಕೊಟ್ಟ ಉತ್ತರಗಳು, ನಾನು ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಅಗತ್ಯವಿರುವಷ್ಟು ಆತ್ಮಿಕ ಪ್ರಗತಿಯನ್ನು ಮಾಡಿದ್ದೇನೆ ಎಂಬ ಖಾತ್ರಿಯನ್ನು ತಂದೆಯವರಿಗೆ ಕೊಟ್ಟವು. ಆದುದರಿಂದ, “ಈ ನೇಮಕಕ್ಕಾಗಿ ನೀನು ನಿನ್ನನ್ನು ನೀಡಿಕೊಳ್ಳಬೇಕು” ಎಂದು ಅವರು ನನಗೆ ಹೇಳಿದರು. ನಾನು ಹಾಗೆಯೇ ಮಾಡಿದೆ.
ಒಂದು ವಾರದ ಬಳಿಕ ನಾನು, ಮಾಗ್ಡೆಬರ್ಗ್‌ಗೆ ಬರುವಂತೆ ಕರೆನೀಡಿದ ಪತ್ರವನ್ನು ಪಡೆದುಕೊಂಡೆ. ಯೂತ್ ಗ್ರೂಪ್‌ನಲ್ಲಿದ್ದ ನನ್ನ ಸ್ನೇಹಿತರಿಗೆ ನಾನು ಇದನ್ನು ಹೇಳಿದಾಗ, ಉತ್ಸಾಹಪೂರ್ಣವಾದ ಒಂದು ಗೀತೆಯನ್ನು ಹಾಡುವ ಮೂಲಕ ನನ್ನನ್ನು ಕಳುಹಿಸಿಕೊಡಲು ಇಷ್ಟಪಟ್ಟರು. ನಾನು ಆಯ್ಕೆಮಾಡಿದ ಗೀತೆಯನ್ನು ನೋಡಿ ಅವರು ಅತ್ಯಾಶ್ಚರ್ಯಪಟ್ಟರು, ಏಕೆಂದರೆ ಆ ಗೀತೆಯು ತುಂಬ ಗಂಭೀರವಾದದ್ದೆಂದು ಅವರು ಪರಿಗಣಿಸಿದರು. ಆದರೂ, ಕೆಲವರು ತಮ್ಮ ಪಿಟೀಲುಗಳು, ಮ್ಯಾಂಡೊಲಿನ್‌ಗಳು, ಹಾಗೂ ಗಿಟಾರ್‌ಗಳನ್ನು ತೆಗೆದುಕೊಂಡು, ಒಟ್ಟಾಗಿ ಹೀಗೆ ಹಾಡಿದರು: “ಪ್ರತಿಯೊಬ್ಬ ಎದುರಾಳಿಯಿಂದ ಎಷ್ಟೇ ಒತ್ತಡಕ್ಕೊಳಗಾಗುವುದಾದರೂ,
ಹಿಮ್ಮೆಟ್ಟದಿರುವಂತಹ ನಂಬಿಕೆಯಿರಲಿ; ಯಾವುದೇ ಕೇಡಿನ ಎದುರು ಆ ನಂಬಿಕೆಯು ಎಂದೂ ತಲ್ಲಣಿಸುವುದಿಲ್ಲ.” ಬರಲಿರುವ ವರ್ಷಗಳಲ್ಲಿ ಆ ಮಾತುಗಳು ಎಷ್ಟು ಬಾರಿ ನನ್ನನ್ನು ಬಲಪಡಿಸಲಿದ್ದವು ಎಂಬುದನ್ನು ನಾನು ಆ ದಿನ ಗ್ರಹಿಸಿರಲಿಲ್ಲ.ಗಲಭೆಯಿಂದ ಕೂಡಿದ ಆರಂಭ
ಮಾಗ್ಡೆಬರ್ಗ್‌ನಲ್ಲಿದ್ದ ಸಹೋದರರು ನನ್ನ ಡ್ರೈವಿಂಗ್ ಚಾತುರ್ಯಗಳನ್ನು ಪರೀಕ್ಷಿಸಿದ ಬಳಿಕ, ಅವರು ನನಗೆ ಹಾಗೂ ಬೇರೆ ನಾಲ್ಕು ಪಯನೀಯರರಿಗೆ ಒಂದು ಕಾರನ್ನು ಕೊಟ್ಟರು. ತದನಂತರ ನಾವು ಬೆಲ್ಜಿಯಮ್‌ನ ಸಮೀಪದಲ್ಲಿ ಸ್ಕೆನಿಫೆಲ್ ಎಂಬ ಸ್ಥಳಕ್ಕೆ ಪ್ರಯಾಣ ಬೆಳೆಸಿದೆವು. ನಮ್ಮ ಕಾರ್ ತುಂಬ ಉಪಯುಕ್ತಕರವಾದದ್ದೆಂದು ನಮಗೆ ಬೇಗನೆ ತಿಳಿದುಬಂತು. ನಾವು ಅಲ್ಲಿಗೆ ಹೋದದ್ದು ಅಲ್ಲಿದ್ದ ಕ್ಯಾಥೊಲಿಕ್ ಚರ್ಚ್‌ಗೆ ಅಸಮಾಧಾನವನ್ನು ಉಂಟುಮಾಡಿತು. ಅದರ ಪಾದ್ರಿಗಳಿಂದ ಚಿತಾಯಿಸಲ್ಪಟ್ಟಿದ್ದ ಹಳ್ಳಿಗರು, ನಮ್ಮನ್ನು ಅಲ್ಲಿಂದ ಓಡಿಸಲು ಕಾಯುತ್ತಿದ್ದರು. ಅನೇಕಬಾರಿ, ಅವರ ಗುದ್ದಲಿಗಳು ಮತ್ತು ಕವಲುಗೋಲುಗಳಿಂದ ತಪ್ಪಿಸಿಕೊಳ್ಳಲು ನಮ್ಮ ಕಾರ್ ನಮಗೆ ಸಹಾಯಮಾಡಿತು.
1933ರ ಜ್ಞಾಪಕಾಚರಣೆಯ ನಂತರ, ಜರ್ಮನಿಯಲ್ಲಿ ಸೊಸೈಟಿಯ ಕೆಲಸದ ಮೇಲೆ ಬ್ಯಾನ್ ಹಾಕಲಾಗಿದೆ ಎಂದು, ಆ ಪ್ರಾಂತದ ಮೇಲ್ವಿಚಾರಕರಾಗಿದ್ದ ಪೌಲ್ ಗ್ರಾಸ್‌ಮನ್‌ರು ನಮಗೆ ಹೇಳಿದರು. ಸ್ವಲ್ಪ ಸಮಯಾನಂತರ, ಕಾರ್‌ನೊಂದಿಗೆ ಮಾಗ್ಡೆಬರ್ಗ್‌ಗೆ ಬರುವಂತೆ ಬ್ರಾಂಚ್ ಆಫೀಸು ನನ್ನನ್ನು ಕೇಳಿಕೊಂಡಿತು. ನಾನು ಮಾಗ್ಡೆಬರ್ಗ್‌ನಿಂದ ಸಾಹಿತ್ಯವನ್ನು ತೆಗೆದುಕೊಂಡು, ಅಲ್ಲಿಂದ ಸುಮಾರು 100 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಸ್ಯಾಕ್ಸೊನಿ ರಾಜ್ಯಕ್ಕೆ ಅದನ್ನು ರವಾನಿಸಬೇಕಾಗಿತ್ತು. ಆದರೂ, ನಾನು ಮಾಗ್ಡೆಬರ್ಗ್ ಅನ್ನು ತಲಪುವಷ್ಟಕ್ಕೆ, ಈಗಾಗಲೇ ಗೆಸ್ಟಪೊ (ನಾಸಿ ರಹಸ್ಯ ಪೊಲೀಸ್)ಗಳು ಸೊಸೈಟಿಯ ಆಫೀಸನ್ನು ಮುಚ್ಚಿಬಿಟ್ಟಿದ್ದರು. ಲೈಪ್ಸಿಗ್‌ನಲ್ಲಿದ್ದ ಒಬ್ಬ ಸಹೋದರನ ಬಳಿ ಕಾರನ್ನು ಬಿಟ್ಟು, ನಾನು ಮನೆಗೆ ಹಿಂದಿರುಗಿದೆ. ಆದರೆ ಹೆಚ್ಚು ಸಮಯ ಉಳಿಯಲಾಗಲಿಲ್ಲ.
ನೆದರ್ಲೆಂಡ್ಸ್‌ನಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸುವಂತೆ, ಸ್ವಿಟ್ಸರ್ಲೆಂಡ್‌ನಲ್ಲಿದ್ದ ಸೊಸೈಟಿಯ ಆಫೀಸು ನನ್ನನ್ನು ಆಮಂತ್ರಿಸಿತು. ನಾನು ಒಂದೆರಡು ವಾರಗಳಲ್ಲಿ ಅಲ್ಲಿಗೆ ಹೋಗಲು ಯೋಜಿಸಿದೆ. ಆದರೆ, ಆ ಕೂಡಲೆ ಹೊರಡುವಂತೆ ನನ್ನ ತಂದೆಯವರು ನನಗೆ ಸಲಹೆ ನೀಡಿದರು. ನಾನು ಅವರ ಸಲಹೆಯನ್ನು ಸ್ವೀಕರಿಸಿದೆ ಮತ್ತು ಕೆಲವೇ ತಾಸುಗಳ ಬಳಿಕ ಮನೆಯನ್ನು ಬಿಟ್ಟು ನೆದರ್ಲೆಂಡ್ಸ್‌ಗೆ ಹೊರಟೆ. ಮರುದಿನ, ಸೈನ್ಯಕ್ಕೆ ಸೇರಲಿಲ್ಲ ಎಂಬ ಆರೋಪದ ಮೇಲೆ ನನ್ನನ್ನು ಬಂಧಿಸಲಿಕ್ಕಾಗಿ ಪೊಲೀಸರು ನನ್ನ ತಂದೆಯ ಮನೆಗೆ ಬಂದರು. ಆದರೆ ಅವರು ಬಂದಾಗ ತುಂಬ ತಡವಾಗಿತ್ತು.
ನೆದರ್ಲೆಂಡ್ಸ್‌ನಲ್ಲಿ ಸೇವೆಯನ್ನು ಆರಂಭಿಸಿದ್ದು
1933ರ ಆಗಸ್ಟ್ 15ರಂದು, ಆಮ್‌ಸ್ಟರ್‌ಡ್ಯಾಮ್‌ನಿಂದ 25 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಹೀಮ್‌ಸ್ಟೀಡ್ ಪಟ್ಟಣದ ಪಯನೀಯರ್ ಹೋಮ್‌ಗೆ ನಾನು ಬಂದೆ. ನನಗೆ ಡಚ್‌ಭಾಷೆಯು ಕಿಂಚಿತ್ತೂ ಗೊತ್ತಿಲ್ಲದಿದ್ದರೂ, ಮರುದಿನ ನಾನು ಸಾರುವುದಕ್ಕಾಗಿ ಹೋದೆ. ನನ್ನ ಬಳಿ ಒಂದು ಪ್ರಮಾಣಪತ್ರ (ಟೆಸ್ಟಿಮನಿ ಕಾರ್ಡ್)ವಿತ್ತು ಮತ್ತು ಅದರೊಳಗೆ ಒಂದು ಮುದ್ರಿತ ಪ್ರಸಂಗವಿತ್ತು. ಒಬ್ಬ ಕ್ಯಾಥೊಲಿಕ್ ಸ್ತ್ರೀಯು ರೆಕನ್ಸಿಲೇಷನ್ ಎಂಬ ಪುಸ್ತಕವನ್ನು ಸ್ವೀಕರಿಸಿದಾಗ ಅದೆಷ್ಟು ಪ್ರೋತ್ಸಾಹನೀಯವಾಗಿತ್ತು! ಅದೇ ದಿನ ನಾನು 27 ಪುಸ್ತಿಕೆಗಳನ್ನು ಸಹ ನೀಡಿದೆ. ಆ ಮೊದಲ ದಿನದ ಕೊನೆಯಲ್ಲಿ, ಪುನಃ ಸ್ವತಂತ್ರವಾಗಿ ಸಾರಲು ಶಕ್ತನಾದುದಕ್ಕಾಗಿ ನಾನು ತುಂಬ ಸಂಭ್ರಮಪಟ್ಟೆ.
ಆ ದಿನಗಳಲ್ಲಿ, ಸಾಹಿತ್ಯವನ್ನು ನೀಡಿದಾಗ ಸಿಗುವ ಕಾಣಿಕೆಗಳನ್ನು ಬಿಟ್ಟು ಬೇರೆ ಯಾವ ರೀತಿಯ ಆದಾಯವೂ ಪಯನೀಯರರಿಗೆ ಸಿಗುತ್ತಿರಲಿಲ್ಲ. ಆ ಹಣವನ್ನು ಆಹಾರವನ್ನು ಕೊಂಡುಕೊಳ್ಳಲಿಕ್ಕಾಗಿ ಹಾಗೂ ಇತರ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಉಪಯೋಗಿಸುತ್ತಿದ್ದೆವು. ತಿಂಗಳ ಕೊನೆಯಲ್ಲಿ ಸ್ವಲ್ಪ ಹಣವು ಉಳಿದಿರುತ್ತಿದ್ದಲ್ಲಿ, ವೈಯಕ್ತಿಕ ವೆಚ್ಚಗಳಿಗಾಗಿ ಪಯನೀಯರರು ಅದನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ಬಳಿ ಭೌತಿಕ ಸಂಪತ್ತು ಇರದೆ ಇದ್ದರೂ, ಯೆಹೋವನು ನಮಗೆ ಬಹಳಷ್ಟನ್ನು ಒದಗಿಸಿದ್ದನು. ಆದುದರಿಂದಲೇ, 1934ರಲ್ಲಿ ನಾನು ಸ್ವಿಟ್ಸರ್ಲೆಂಡ್‌ನಲ್ಲಿ ನಡೆದ ಒಂದು ಅಧಿವೇಶನಕ್ಕೆ ಹಾಜರಾಗಲು ಶಕ್ತನಾದೆ.
ಒಬ್ಬ ನಂಬಿಗಸ್ತ ಸಂಗಾತಿ
ಆ ಅಧಿವೇಶನದಲ್ಲಿ ನಾನು 18 ವರ್ಷ ಪ್ರಾಯದ ಎರೀಕಾ ಫಿನ್ಕೆಯನ್ನು ನೋಡಿದೆ. ನಾನು ಜರ್ಮನಿಯಲ್ಲಿ ಇದ್ದಾಗಿನಿಂದಲೂ ನನಗೆ ಅವಳ ಪರಿಚಯವಿತ್ತು. ಅವಳು ನನ್ನ ತಂಗಿಯಾದ ಮಾರ್ಗಾರೇಟಾಳ ಗೆಳತಿಯಾಗಿದ್ದಳು. ಮತ್ತು ಸತ್ಯಕ್ಕಾಗಿರುವ ಎರೀಕಾಳ ದೃಢವಾದ ನಿಲುವಿನಿಂದ ನಾನು ಪ್ರಭಾವಿತನಾಗಿದ್ದೆ. 1932ರಲ್ಲಿ ಅವಳು ದೀಕ್ಷಾಸ್ನಾನ ಪಡೆದುಕೊಂಡಳು. ಸ್ವಲ್ಪದರಲ್ಲೇ, ಎರೀಕಾಳು “ಹಿಟ್ಲರ್‌ಗೆ ಜಯವಾಗಲಿ!” ಎಂದು ಹೇಳಲು ನಿರಾಕರಿಸಿದಳೆಂದು ಯಾರೋ ಒಬ್ಬರು ಗೆಸ್ಟಪೊಗಳಿಗೆ ತಿಳಿಸಿದರು. ಗೆಸ್ಟಪೊಗಳು ಅವಳನ್ನು ಹುಡುಕಿಕೊಂಡು ಹೋಗಿ, ಅವಳು ಹಿಟ್ಲರ್‌ಗೆ ಜಯಕಾರ ಹೇಳಲು ಏಕೆ ನಿರಾಕರಿಸಿದಳು ಎಂಬುದನ್ನು ತಿಳಿಸುವಂತೆ ಅವಳನ್ನು ಒತ್ತಾಯಿಸಿದರು. ಪೊಲೀಸ್ ಠಾಣೆಯಲ್ಲಿದ್ದ ಅಧಿಕಾರಿಯ ಮುಂದೆ ಎರೀಕಾಳು ಅ. ಕೃತ್ಯ 17:3ನ್ನು ಓದಿದಳು ಮತ್ತು ಯೇಸು ಕ್ರಿಸ್ತನನ್ನು ಮಾತ್ರ ದೇವರು ರಕ್ಷಕನಾಗಿ ನೇಮಿಸಿದ್ದಾನೆ ಎಂದು ಅವನಿಗೆ ವಿವರಿಸಿದಳು. “ನಿನ್ನಂತೆ ನಂಬುವಂತಹ ಇತರ ಜನರೂ ಇದ್ದಾರೋ?” ಎಂದು ಆ ಅಧಿಕಾರಿಯು ಅವಳನ್ನು ಕೇಳಿದನು. ಅಂಥವರ ಹೆಸರುಗಳನ್ನು ಕೊಡಲು ಎರೀಕಾ ನಿರಾಕರಿಸಿದಳು. ಆ ಪೊಲೀಸ್ ಅಧಿಕಾರಿಯು ಅವಳನ್ನು ಸೆರೆಯಲ್ಲೇ ಇಟ್ಟುಕೊಳ್ಳುವ ಬೆದರಿಕೆಯೊಡ್ಡಿದಾಗ, ತಾನು ಸತ್ತರೂ ಆ ಹೆಸರುಗಳನ್ನು ಕೊಡುವುದಿಲ್ಲ ಎಂದು ಅವಳು ಹೇಳಿದಳು. ಅವನು ಅವಳನ್ನು ದುರುಗುಟ್ಟಿಕೊಂಡು ನೋಡಿ, “ಇಲ್ಲಿಂದ ತೊಲಗು. ಮನೆಗೆ ಹೋಗು. ಹಿಟ್ಲರ್‌ಗೆ ಜಯವಾಗಲಿ” ಎಂದು ಅಬ್ಬರಿಸಿದನು.
ಅಧಿವೇಶನದ ಬಳಿಕ ನಾನು ನೆದರ್ಲೆಂಡ್ಸ್‌ಗೆ ಹಿಂದಿರುಗಿದೆ. ಆದರೆ ಎರೀಕಾಳು ಸ್ವಿಟ್ಸರ್ಲೆಂಡ್‌ನಲ್ಲೇ ಉಳಿದಳು. ಆದರೂ, ನಮ್ಮ ಗೆಳೆತನವು ತುಂಬ ಆತ್ಮೀಯವಾಗಿದೆ ಎಂದು ನಮ್ಮಿಬ್ಬರಿಗೂ ಅನಿಸಿತು. ಎರೀಕಾಳು ಸ್ವಿಟ್ಸರ್ಲೆಂಡ್‌ನಲ್ಲಿದ್ದಾಗ, ಅವಳ ಸ್ವಂತ ಮನೆಯಲ್ಲಿ ಗೆಸ್ಟಪೊಗಳು ಅವಳಿಗಾಗಿ ಹುಡುಕಾಡುತ್ತಿದ್ದಾರೆ ಎಂಬ ಸುದ್ದಿ ಅವಳಿಗೆ ಸಿಕ್ಕಿತು. ಅವಳು ಸ್ವಿಟ್ಸರ್ಲೆಂಡ್‌ನಲ್ಲೇ ಉಳಿದು, ಪಯನೀಯರ್ ಸೇವೆಯನ್ನು ಮಾಡಲು ನಿರ್ಧರಿಸಿದಳು. ಕೆಲವು ತಿಂಗಳುಗಳ ಬಳಿಕ, ಸೊಸೈಟಿಯು ಅವಳನ್ನು ಸ್ಪೆಯ್ನ್‌ಗೆ ಕಳುಹಿಸಿತು. ಅವಳು ಮಾಡ್ರಿಡ್‌ನಲ್ಲಿ, ನಂತರ ಬಿಲ್‌ಬಾವೊದಲ್ಲಿ ಮತ್ತು ಸಾನ್ ಸೆಬಾಸ್ಟಿಯನ್‌ನಲ್ಲಿ ಪಯನೀಯರ್ ಸೇವೆಮಾಡಿದಳು. ಸಾನ್ ಸೆಬಾಸ್ಟಿಯನ್‌ನಲ್ಲಿ ಪಾದ್ರಿಗಳಿಂದ ಹುರಿದುಂಬಿಸಲ್ಪಟ್ಟ ಹಿಂಸೆಯಿಂದಾಗಿ, ಅವಳೂ ಅವಳ ಪಯನೀಯರ್ ಸಂಗಾತಿಯೂ ಸೆರೆಮನೆಗೆ ಹೋಗಬೇಕಾಯಿತು. 1935ರಲ್ಲಿ, ಸ್ಪೆಯ್ನ್ ಅನ್ನು ಬಿಟ್ಟುಹೋಗುವಂತೆ ಅವರಿಗೆ ಅಪ್ಪಣೆ ನೀಡಲಾಯಿತು. ಆಗ ಎರೀಕಾ ನೆದರ್ಲೆಂಡ್ಸ್‌ಗೆ ಬಂದಳು. ಮತ್ತು ಅದೇ ವರ್ಷ ನಾವಿಬ್ಬರೂ ಮದುವೆಯಾದೆವು.
ಯುದ್ಧದ ಮೋಡಗಳು ಕವಿಯಲಾರಂಭಿಸಿದವು
ನಮ್ಮ ವಿವಾಹದ ನಂತರ, ನಾವು ಹೀಮ್‌ಸ್ಟೀಡ್‌ನಲ್ಲಿ ಪಯನೀಯರ್ ಸೇವೆಯನ್ನು ಮಾಡಿದೆವು. ತದನಂತರ ರಾಟರ್‌ಡ್ಯಾಮ್ ಪಟ್ಟಣಕ್ಕೆ ಸ್ಥಳಾಂತರಿಸಿದೆವು. ಅಲ್ಲಿ 1937ರಲ್ಲಿ ನಮ್ಮ ಮಗನಾದ ವೂಲ್ಫ್‌ಗ್ಯಾಂಗ್ ಹುಟ್ಟಿದನು. ಒಂದು ವರ್ಷದ ಬಳಿಕ ನಾವು ನೆದರ್ಲೆಂಡ್ಸ್‌ನ ಉತ್ತರಕ್ಕಿರುವ ಗ್ರೋನಿಂಗನ್ ಪಟ್ಟಣಕ್ಕೆ ಸ್ಥಳಾಂತರಿಸಿದೆವು. ಅಲ್ಲಿ, ಜರ್ಮನ್ ಪಯನೀಯರರಾದ ಫರ್ಡಿನಾಂಡ್ ಮತ್ತು ಹೆಲ್ಗ ಹೊಲ್‌ಟಾರ್ಫ್ ಹಾಗೂ ಅವರ ಮಗಳೊಂದಿಗೆ ನಾವು ವಾಸಿಸತೊಡಗಿದೆವು. 1938ರಲ್ಲಿ, ಜರ್ಮನ್ ದೇಶದ ಸಾಕ್ಷಿಗಳಿಗೆ ಈ ಪಟ್ಟಣದಲ್ಲಿ ಸಾರುವ ಅನುಮತಿಯಿಲ್ಲ ಎಂಬ ಎಚ್ಚರಿಕೆಯನ್ನು ಡಚ್ ಸರಕಾರವು ಜಾರಿಗೆ ತಂದಿದೆ ಎಂದು ಸೊಸೈಟಿಯು ನಮಗೆ ಹೇಳಿತು. ಸುಮಾರು ಅದೇ ಸಮಯದಲ್ಲಿ ನನ್ನನ್ನು ಝೋನ್ ಸೇವಕ (ಸರ್ಕಿಟ್ ಮೇಲ್ವಿಚಾರಕ)ನಾಗಿ ನೇಮಿಸಲಾಯಿತು. ಮತ್ತು ನೆದರ್ಲೆಂಡ್ಸ್‌ನ ಉತ್ತರ ಭಾಗದಲ್ಲಿ ಸಾರುತ್ತಿದ್ದ ಪಯನೀಯರರಿಗೆ ಮನೆಯಾಗಿ ಕಾರ್ಯನಡಿಸುತ್ತಿದ್ದ ಲಿಕ್ಟ್‌ಡ್ರೇಜರ್ (ಲೈಟ್‌ಬೇರರ್) ಎಂಬ ಸೊಸೈಟಿಯ ಹಡಗಿಗೆ ನಮ್ಮ ಕುಟುಂಬವು ಸ್ಥಳಾಂತರಿಸಿತು. ಹೆಚ್ಚಿನ ಸಮಯ ನಾನು ನನ್ನ ಕುಟುಂಬದಿಂದ ದೂರವಿರಬೇಕಾಗುತ್ತಿತ್ತು. ಏಕೆಂದರೆ ಸಾರುವ ಕೆಲಸದಲ್ಲಿ ಮುಂದುವರಿಯುವಂತೆ ಸಹೋದರರನ್ನು ಉತ್ತೇಜಿಸಲಿಕ್ಕಾಗಿ, ಒಂದು ಸಭೆಯಿಂದ ಇನ್ನೊಂದು ಸಭೆಗೆ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಮತ್ತು ಸಹೋದರರು ಸಾರುವ ಕೆಲಸವನ್ನು ಎಂದಿನಂತೆ ಮುಂದುವರಿಸುತ್ತಾ ಇದ್ದರು. ಕೆಲವರು ತಮ್ಮ ಚಟುವಟಿಕೆಗಳನ್ನು ಇನ್ನೂ ಅಧಿಕಗೊಳಿಸಿದರು. ಈ ವಿಷಯದಲ್ಲಿ ವಿಮ್ ಕೆಟಲಾರಾ ಎಂಬುವವರು ಒಂದು ಅತ್ಯುತ್ತಮ ಮಾದರಿಯನ್ನಿಟ್ಟರು.
ಮೊದಲು ನಾನು ಅವರನ್ನು ಸಂಧಿಸಿದಾಗ, ಅವರೇ ಸತ್ಯವನ್ನು ಮೊದಲು ಸ್ವೀಕರಿಸಿದ್ದು. ಆದರೆ ಇವರು ಫಾರ್ಮ್‌ನಲ್ಲಿ ಕೆಲಸಮಾಡುತ್ತಿದ್ದದರಿಂದ ತುಂಬ ಕಾರ್ಯಮಗ್ನ ವ್ಯಕ್ತಿಯಾಗಿದ್ದರು. “ಯೆಹೋವನ ಸೇವೆಯನ್ನು ಮಾಡಲು ನಿಮಗೆ ಸಮಯ ಸಿಗಬೇಕಾದರೆ, ನೀವು ಬೇರೊಂದು ಕೆಲಸವನ್ನು ಹುಡುಕಿಕೊಳ್ಳಬೇಕು” ಎಂದು ನಾನು ಅವರಿಗೆ ಸಲಹೆ ನೀಡಿದೆ. ನಾನು ಹೇಳಿದಂತೆ ಅವರು ಬೇರೊಂದು ಕೆಲಸವನ್ನು ಹುಡುಕಿಕೊಂಡರು. ಸಮಯಾನಂತರ ನಾವು ಪುನಃ ಭೇಟಿಯಾದಾಗ, ಪಯನೀಯರ್ ಸೇವೆಯನ್ನು ಮಾಡುವಂತೆ ನಾನು ಅವರನ್ನು ಪ್ರೋತ್ಸಾಹಿಸಿದೆ. “ಆದರೆ ನನ್ನ ಹೊಟ್ಟೆಪಾಡಿಗೋಸ್ಕರ ನಾನು ಕೆಲಸ ಮಾಡಲೇಬೇಕು” ಎಂದು ಅವರು ಉತ್ತರಿಸಿದರು. “ಹೊಟ್ಟೆಪಾಡಿನ ವಿಷಯದಲ್ಲಿ ನೀನು ಖಂಡಿತವಾಗಿಯೂ ಚಿಂತಿಸಬೇಕಾಗಿಲ್ಲ. ಯೆಹೋವನು ನಿನ್ನನ್ನು ನೋಡಿಕೊಳ್ಳುತ್ತಾನೆ” ಎಂದು ನಾನು ಅವನಿಗೆ ಆಶ್ವಾಸನೆಯನ್ನು ನೀಡಿದೆ. ತದನಂತರ ವಿಮ್ ಪಯನೀಯರ್ ಸೇವೆಯನ್ನು ಆರಂಭಿಸಿದರು. ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಅವರು ಸಂಚರಣ ಮೇಲ್ವಿಚಾರಕರಾಗಿ ಸೇವೆಮಾಡಿದರು. ಇಂದು, ತಮ್ಮ 80ಗಳ ಪ್ರಾಯದಲ್ಲಿರುವ ವಿಮ್ ಈಗಲೂ ಬಹಳ ಹುರುಪಿನಿಂದ ಸೇವೆಮಾಡುತ್ತಿದ್ದಾರೆ. ನಿಜವಾಗಿಯೂ ಯೆಹೋವನು ಅವರ ಪರಾಮರಿಕೆ ಮಾಡುತ್ತಿದ್ದಾನೆ.
ಬ್ಯಾನ್ ಮತ್ತು ನನಗೋಸ್ಕರ ಹುಡುಕಾಟ
1940ರ ಮೇ ತಿಂಗಳಿನಲ್ಲಿ, ಅಂದರೆ ನಮ್ಮ ಎರಡನೆಯ ಮಗುವಾದ ರೈನಾ ಹುಟ್ಟಿ ಸುಮಾರು ಒಂದು ವರ್ಷ ಕಳೆದ ಬಳಿಕ, ಡಚ್ ಸೇನೆಯು ಶರಣಾಗತವಾಯಿತು ಮತ್ತು ನಾಸಿಗಳು ನೆದರ್ಲೆಂಡ್ಸ್ ಅನ್ನು ಆಕ್ರಮಿಸಿದವು. ಜುಲೈ ತಿಂಗಳಿನಲ್ಲಿ ಗೆಸ್ಟಪೊಗಳು ಸೊಸೈಟಿಯ ಆಫೀಸು ಹಾಗೂ ಮುದ್ರಣಾಲಯವನ್ನು ವಶಪಡಿಸಿಕೊಂಡರು. ಮರುವರ್ಷ, ಒಬ್ಬರ ನಂತರ ಇನ್ನೊಬ್ಬರಂತೆ ಅನೇಕ ಸಾಕ್ಷಿಗಳನ್ನು ಬಂಧಿಸಲಾಯಿತು, ಮತ್ತು ನನ್ನನ್ನು ಸಹ ಹಿಡಿಯಲಾಯಿತು. ನಾನೊಬ್ಬ ಸಾಕ್ಷಿಯಾಗಿದ್ದರಿಂದ ಮತ್ತು ಸೈನ್ಯದಲ್ಲಿ ಭರ್ತಿಯಾಗುವ ಪ್ರಾಯದವನಾಗಿದ್ದರಿಂದ, ಗೆಸ್ಟಪೊಗಳು ನನ್ನನ್ನು ಏನು ಮಾಡುವರು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವೇನಾಗಿರಲಿಲ್ಲ. ನಾನು ಪುನಃ ಇನ್ನೆಂದೂ ನನ್ನ ಕುಟುಂಬವನ್ನು ನೋಡಲಾರೆ ಎಂದು ನನಗನಿಸಿತು.
ತದನಂತರ, 1941ರ ಮೇ ತಿಂಗಳಿನಲ್ಲಿ ಗೆಸ್ಟಪೊಗಳು ನನ್ನನ್ನು ಸೆರೆಯಿಂದ ಬಿಡುಗಡೆಮಾಡಿ, ಮಿಲಿಟರಿ ಸೈನ್ಯಕ್ಕೆ ಸೇರಿಕೊ ಎಂದು ಅಪ್ಪಣೆಯಿತ್ತರು. ಇದು ಒಂದು ಕನಸಿನಂತೆ ನನಗೆ ತೋರಿತು. ಅದೇ ದಿನ ನಾನು ಯಾರ ಕಣ್ಣಿಗೂ ಬೀಳದಂತೆ ಜಾಗ್ರತೆ ವಹಿಸತೊಡಗಿದೆ. ಮತ್ತು ಅದೇ ತಿಂಗಳಿನಲ್ಲಿ ನನ್ನ ಸರ್ಕಿಟ್ ಕೆಲಸಕ್ಕೆ ಪುನಃ ಹಿಂದಿರುಗಿದೆ. ಈ ಸಮಯದಲ್ಲೇ ಗೆಸ್ಟಪೊಗಳು, ತುಂಬ ಅಗತ್ಯವಿರುವಂತಹ ಜನರ ಪಟ್ಟಿಯಲ್ಲಿ ನನ್ನ ಹೆಸರನ್ನೂ ಸೇರಿಸಿದರು.
ನನ್ನ ಕುಟುಂಬವು ಈ ಸನ್ನಿವೇಶವನ್ನು ನಿಭಾಯಿಸಿದ ರೀತಿ
ನನ್ನ ಪತ್ನಿ ಮತ್ತು ಮಕ್ಕಳು, ಈ ದೇಶದ ಪೂರ್ವ ಭಾಗದಲ್ಲಿದ್ದ ಫೋರ್ಡನ್ ಎಂಬ ಹಳ್ಳಿಗೆ ಸ್ಥಳಾಂತರಿಸಿದ್ದರು. ಆದರೂ, ಅವರಿಗಾಗಬಹುದಾದ ಅಪಾಯಗಳನ್ನು ತಪ್ಪಿಸಲಿಕ್ಕಾಗಿ, ನಾನು ಮನೆಗೆ ನೀಡುತ್ತಿದ್ದ ಭೇಟಿಗಳನ್ನು ಬಹಳಷ್ಟು ಕಡಿಮೆ ಮಾಡಬೇಕಾಗಿ ಬಂತು. (ಮತ್ತಾಯ 10:16) ಸುರಕ್ಷೆಗೋಸ್ಕರ, ಸಹೋದರರು ನನ್ನ ನಿಜವಾದ ಹೆಸರನ್ನು ಉಪಯೋಗಿಸುತ್ತಿರಲಿಲ್ಲ. ಬದಲಾಗಿ, ಡೈಟ್ಸೆ ಯಾನ್ (ಜರ್ಮನ್ ಜಾನ್) ಎಂಬ ಗುಪ್ತನಾಮವನ್ನು ಉಪಯೋಗಿಸುತ್ತಿದ್ದರು. ನನ್ನ ನಾಲ್ಕು ವರ್ಷಪ್ರಾಯದ ಮಗನಾಗಿದ್ದ ವೂಲ್ಫ್‌ಗ್ಯಾಂಗ್ ಸಹ ನನ್ನನ್ನು “ಡ್ಯಾಡಿ” ಎಂದು ಸಂಬೋಧಿಸಿ ಮಾತಾಡಸಾಧ್ಯವಿರಲಿಲ್ಲ; ಬದಲಾಗಿ ಅವನು ನನ್ನನ್ನು “ಓಮ ಯಾನ್” (ಅಂಕಲ್ ಜಾನ್) ಎಂದೇ ಕರೆಯಬೇಕಾಗಿತ್ತು. ಇದು ಭಾವನಾತ್ಮಕವಾಗಿ ಅವನಿಗೆ ತುಂಬ ಕಷ್ಟಕರವಾದ ಸಂಗತಿಯಾಗಿತ್ತು.
ನಾನು ಪಲಾಯನಮಾಡುತ್ತಿರುವಾಗ, ಎರೀಕಾಳು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು ಮತ್ತು ಸಾರುವ ಕೆಲಸವನ್ನೂ ಮಾಡುತ್ತಿದ್ದಳು. ರೈನಾಳು ಎರಡು ವರ್ಷದವಳಾಗಿದ್ದಾಗ, ಎರೀಕಾಳು ಅವಳನ್ನು ಸೈಕಲಿನಲ್ಲಿ ಕೂರಿಸಿಕೊಂಡು, ಗ್ರಾಮೀಣ ಪ್ರದೇಶಗಳಲ್ಲಿ ಸಾರಲು ಕರೆದುಕೊಂಡು ಹೋಗುತ್ತಿದ್ದಳು. ಆಹಾರವನ್ನು ಕಂಡುಕೊಳ್ಳುವುದು ತುಂಬ ಕಷ್ಟಕರವಾಗಿದ್ದ ಸಮಯದಲ್ಲೂ, ಎರೀಕಾಳಿಗೆ ಹಾಗೂ ಕುಟುಂಬಕ್ಕೆ ಎಂದೂ ಆಹಾರದ ಕೊರತೆಯ ಅನುಭವ ಆಗಲಿಲ್ಲ. (ಮತ್ತಾಯ 6:33) ಒಂದು ಬಾರಿ ನಾನು ಒಬ್ಬ ಕ್ಯಾಥೊಲಿಕ್ ರೈತನ ಹೊಲಿಗೆ ಯಂತ್ರವನ್ನು ರಿಪೇರಿಮಾಡಿದ್ದೆ. ಈಗ ಅವನೇ ಎರೀಕಾಳಿಗೆ ಆಲೂಗಡ್ಡೆಗಳನ್ನು ಕೊಟ್ಟನು. ಅಷ್ಟುಮಾತ್ರವಲ್ಲ, ಅವನ ಮೂಲಕ ನಾನು ಎರೀಕಾಳಿಗೆ ಕೆಲವು ಸಂದೇಶಗಳನ್ನು ಸಹ ಮುಟ್ಟಿಸುತ್ತಿದ್ದೆ. ಒಂದು ಸಲ, ಒಂದು ಔಷಧದಂಗಡಿಯಲ್ಲಿ ಏನನ್ನೋ ಕೊಳ್ಳಲು ಹೋದಾಗ, ಅವಳು ಒಂದು ಗಲ್ಡನ್ (ನೆದರ್ಲೆಂಡ್ಸ್ ನ ಒಂದು ನಾಣ್ಯ) ಪಾವತಿಮಾಡಿದಳು. ಎರೀಕಾಳು ಅವಿತುಕೊಂಡು ಜೀವನ ನಡೆಸುತ್ತಿದ್ದಾಳೆ ಮತ್ತು ಆಹಾರದ ರೇಷನ್ ಕಾರ್ಡ್‌ಗಳನ್ನು ಪಡೆದುಕೊಳ್ಳಲು ಅವಳಿಂದ ಸಾಧ್ಯವಿಲ್ಲ ಎಂಬುದು ಆ ಅಂಗಡಿಯ ಮಾಲಿಕನಿಗೆ ಗೊತ್ತಿತ್ತು. ಆದುದರಿಂದ ಅವನು ಅವಳಿಗೆ ಬೇಕಾದ ವಸ್ತುವನ್ನು ಉಚಿತವಾಗಿ ಕೊಟ್ಟನು ಮತ್ತು ಎರಡು ಗಲ್ಡನ್‌ಗಳನ್ನು ಸಹ ಅವಳಿಗೆ ಕೊಟ್ಟನು. ಸಹಾನುಭೂತಿಯ ಅಂತಹ ಅಭಿವ್ಯಕ್ತಿಗಳು, ಆ ಸಮಯದಲ್ಲಿ ಪಾರಾಗಿ ಉಳಿಯುವಂತೆ ಅವಳಿಗೆ ಸಹಾಯಮಾಡಿದವು.—ಇಬ್ರಿಯ 13:5.
ಧೀರ ಸಹೋದರರೊಂದಿಗೆ ಕೆಲಸಮಾಡುವುದು
ಈ ಮಧ್ಯೆ ನಾನು ಸಭೆಗಳನ್ನು ಸಂದರ್ಶಿಸುವ ಕೆಲಸವನ್ನು ಮುಂದುವರಿಸಿದೆ. ಆದರೆ ಸಭೆಗಳ ಜವಾಬ್ದಾರಿಯುತ ಸಹೋದರರನ್ನು ಮಾತ್ರ ನಾನು ಸಂಪರ್ಕಿಸುತ್ತಿದ್ದೆ. ಏಕೆಂದರೆ ಗೆಸ್ಟಪೊಗಳು ನನ್ನನ್ನು ಹಿಂಬಾಲಿಸುತ್ತಿದ್ದರು. ಮತ್ತು ನಾನು ಕೆಲವು ತಾಸುಗಳಿಗಿಂತ ಹೆಚ್ಚಿನ ಸಮಯದ ವರೆಗೆ ಒಂದೇ ಸ್ಥಳದಲ್ಲಿ ಉಳಿಯಸಾಧ್ಯವಿರಲಿಲ್ಲ. ಸಹೋದರ ಸಹೋದರಿಯರಲ್ಲಿ ಹೆಚ್ಚಿನವರು ನನ್ನನ್ನು ಸಂಧಿಸುವ ಅವಕಾಶವಿರಲಿಲ್ಲ. ತಮ್ಮ ಚಿಕ್ಕ ಬೈಬಲ್ ಅಭ್ಯಾಸ ಗುಂಪಿಗೆ ಸೇರಿದ್ದ ಕೆಲವೇ ಸಾಕ್ಷಿಗಳೊಂದಿಗೆ ಮಾತ್ರ ಅವರು ಚಿರಪರಿಚಿತರಾಗಿದ್ದರು. ಆದುದರಿಂದ, ಯುದ್ಧದ ಸಮಯದಲ್ಲಿ ಒಂದೇ ಪಟ್ಟಣದ ಬೇರೆ ಬೇರೆ ಭಾಗಗಳಲ್ಲಿ ವಾಸಿಸುತ್ತಿದ್ದ ಇಬ್ಬರು ಸ್ವಂತ ಅಕ್ಕತಂಗಿಯರು ಸಾಕ್ಷಿಗಳಾಗಿದ್ದರೂ, ಎರಡನೆಯ ಲೋಕ ಯುದ್ಧವು ಮುಗಿದ ಮೇಲೆಯೇ ಅವರಿಬ್ಬರಿಗೆ ತಾವು ಸಾಕ್ಷಿಗಳಾಗಿದ್ದೇವೆ ಎಂಬ ವಿಷಯವು ಗೊತ್ತಾಯಿತು.
ಸೊಸೈಟಿಯ ಸಾಹಿತ್ಯವನ್ನು ಬಚ್ಚಿಡಲಿಕ್ಕಾಗಿ ಗುಪ್ತವಾದ ಸ್ಥಳವನ್ನು ಕಂಡುಹಿಡಿಯುವುದು ನನಗೆ ನೇಮಿಸಲ್ಪಟ್ಟಿದ್ದ ಇನ್ನೊಂದು ಕೆಲಸವಾಗಿತ್ತು.
ನಾವು ಕಾವಲಿನಬುರುಜು ಪತ್ರಿಕೆಯ ಪ್ರತಿಗಳನ್ನು ಮಾಡಲಿಕ್ಕಾಗಿ, ಪೇಪರ್, ಸ್ಟೆನ್ಸಿಲ್ ಯಂತ್ರಗಳು, ಮತ್ತು ಟೈಪ್‌ರೈಟರ್‌ಗಳನ್ನು ಸಹ ಬಚ್ಚಿಟ್ಟೆವು. ಕೆಲವೊಮ್ಮೆ, ಸೊಸೈಟಿಯಿಂದ ಮುದ್ರಿಸಲ್ಪಟ್ಟಿದ್ದ ಪುಸ್ತಕಗಳನ್ನು ನಾವು ಒಂದು ರಹಸ್ಯ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಬೇಕಾಗಿತ್ತು. ಒಂದು ಬಾರಿ, ಸಾಹಿತ್ಯಗಳಿಂದ ತುಂಬಿದ್ದ 30 ಪೆಟ್ಟಿಗೆಗಳನ್ನು, ಯಾರ ಕಣ್ಣಿಗೂ ಬೀಳದಂತೆ ಬೇರೆ ಕಡೆಗೆ ರವಾನಿಸಲು ಪ್ರಯತ್ನಿಸಿದ್ದನ್ನು ನಾನು ಈಗಲೂ ಜ್ಞಾಪಿಸಿಕೊಳ್ಳಬಲ್ಲೆ. ಖಂಡಿತವಾಗಿಯೂ, ಇದು ದಿಗಿಲುಹುಟ್ಟಿಸುವ ಕೆಲಸವಾಗಿತ್ತು!ಇದರ ಜೊತೆಗೆ, ಪೂರ್ವ ನೆದರ್ಲೆಂಡ್ಸ್‌ನಲ್ಲಿದ್ದ ಫಾರ್ಮ್‌ಗಳಿಂದ ಆಹಾರವನ್ನು ತುಂಬಿಸಿಕೊಂಡು, ಪಶ್ಚಿಮದಲ್ಲಿದ್ದ ನಗರಗಳಿಗೆ ರವಾನಿಸುವ ಕೆಲಸವನ್ನೂ ನಾವು ವ್ಯವಸ್ಥಾಪಿಸಿದೆವು. ಈ ರೀತಿ ರವಾನಿಸುವುದು ನಿಷೇಧಿಸಲ್ಪಟ್ಟಿದ್ದರೂ, ನಾವು ಈ ಕೆಲಸವನ್ನು ಮುಂದುವರಿಸಿದೆವು. ಕುದುರೆಗಳಿಂದ ಎಳೆಯಲ್ಪಡುವ ಸರಕುಬಂಡಿಯಲ್ಲಿ ಆಹಾರವನ್ನು ತುಂಬಿಸಿ, ಪಶ್ಚಿಮದ ಕಡೆಗೆ ಪ್ರಯಾಣ ಬೆಳೆಸಿದೆವು. ನಾವು ಒಂದು ನದಿಯನ್ನು ತಲಪಿದಾಗ, ಯಾವ ಸೇತುವೆಗಳನ್ನೂ ನಾವು ಉಪಯೋಗಿಸಸಾಧ್ಯವಿರಲಿಲ್ಲ. ಏಕೆಂದರೆ ಎಲ್ಲ ಸೇತುವೆಗಳಲ್ಲಿ ಸೈನಿಕರು ಕಾವಲಿದ್ದರು. ಆದುದರಿಂದ, ನಾವು ಸರಕನ್ನು ಚಿಕ್ಕ ದೋಣಿಗಳಿಗೆ ತುಂಬಿಸಿದೆವು. ಆ ದೋಣಿಗಳ ಮೂಲಕ ಆಹಾರವನ್ನು ನದಿಯ ಇನ್ನೊಂದು ದಡಕ್ಕೆ ಸಾಗಿಸಿದೆವು. ತದನಂತರ ಆ ಸರಕನ್ನು ಇನ್ನೊಂದು ಸರಕು ಬಂಡಿಯಲ್ಲಿ ತುಂಬಿಸಿದೆವು. ನಾವು ತಲಪಬೇಕಾಗಿದ್ದ ನಗರಕ್ಕೆ ನಾವು ಬಂದು ಮುಟ್ಟಿದ್ದಾಗ, ಕತ್ತಲು ಆವರಿಸುವ ವರೆಗೆ ಕಾದಿದ್ದು, ಕುದುರೆಗಳ ಗೊರಸುಗಳಿಗೆ ಕಾಲುಚೀಲಗಳನ್ನು ಹಾಕಿ, ಸಭೆಯ ರಹಸ್ಯ ಆಹಾರ ಉಗ್ರಾಣಕ್ಕೆ ನಿಶ್ಶಬ್ದವಾಗಿ ಹೋದೆವು. ಅಲ್ಲಿಂದ ಅಗತ್ಯದಲ್ಲಿರುವ ಸಹೋದರರಿಗೆ ಆಹಾರವನ್ನು ವಿತರಿಸಲಾಯಿತು.
ಒಂದುವೇಳೆ ಜರ್ಮನ್ ಸೈನಿಕರು ಈ ಆಹಾರದ ಉಗ್ರಾಣವನ್ನು ಕಂಡುಹಿಡಿಯುತ್ತಿದ್ದಲ್ಲಿ, ಇದು ಯಾರ ಜೀವವನ್ನಾದರೂ ಬಲಿತೆಗೆದುಕೊಳ್ಳಸಾಧ್ಯವಿತ್ತು. ಆದರೂ, ಅನೇಕ ಸಹೋದರರು ಸಹಾಯಮಾಡಲು ತಾವಾಗಿಯೇ ಮುಂದೆ ಬಂದರು. ಉದಾಹರಣೆಗೆ, ಆ್ಯಮರ್ಸ್‌ಫೂರ್ಟ್ ಪಟ್ಟಣದಲ್ಲಿದ್ದ ಬ್ಲೂಮಿಂಕ್ ಕುಟುಂಬವು, ಜರ್ಮನ್ ಸೈನಿಕರ ಪಾಳೆಯದ ಹತ್ತಿರವೇ ವಾಸಿಸುತ್ತಿತ್ತು! ಆದರೂ ಅವರು ತಮ್ಮ ವಾಸದ ಕೊಠಡಿಯನ್ನು ಆಹಾರದ ಮಳಿಗೆಯಾಗಿ ಉಪಯೋಗಿಸಲು ಅನುಮತಿಸಿದರು. ಇಂತಹ ಧೀರ ಸಾಕ್ಷಿಗಳು, ತಮ್ಮ ಸಹೋದರರಿಗೋಸ್ಕರ ತಮ್ಮ ಜೀವಗಳನ್ನೇ ಅಪಾಯಕ್ಕೊಡ್ಡಿದರು.
ಬ್ಯಾನ್ ಇದ್ದ ವರ್ಷಗಳಲ್ಲೆಲ್ಲ ನಂಬಿಗಸ್ತರಾಗಿ ಉಳಿಯುವಂತೆ, ನನಗೆ ಹಾಗೂ ನನ್ನ ಹೆಂಡತಿಗೆ ಯೆಹೋವನು ಸಹಾಯಮಾಡಿದನು. 1945ರ ಮೇ ತಿಂಗಳಿನಲ್ಲಿ ಜರ್ಮನ್ ಸೈನ್ಯವು ಸೋಲಿಸಲ್ಪಟ್ಟಿತು, ಮತ್ತು ಕೊನೆಗೂ ನನ್ನ ಪಲಾಯನ ಮಾಡುವ ಜೀವನಶೈಲಿಯು ಮುಕ್ತಾಯಗೊಂಡಿತು. ಬೇರೆ ಸಹೋದರರು ದೊರಕುವ ತನಕ ಸಂಚರಣ ಮೇಲ್ವಿಚಾರಕನೋಪಾದಿ ಸೇವೆಮಾಡುವುದನ್ನು ನಾನು ಮುಂದುವರಿಸುವಂತೆ ಸೊಸೈಟಿಯು ನನ್ನನ್ನು ಕೇಳಿಕೊಂಡಿತು. 1947ರಲ್ಲಿ, ಬರ್ಟಸ್ ಫಾನ್ ಡರ್ ಬೇಲ್ ಎಂಬ ಸಹೋದರರು ನನ್ನ ಕೆಲಸವನ್ನು ವಹಿಸಿಕೊಂಡರು. * ಆ ಸಮಯದಷ್ಟಕ್ಕೆ, ನಮಗೆ ಮೂರನೆಯ ಮಗುವು ಹುಟ್ಟಿತ್ತು ಮತ್ತು ನಾವು ಆ ದೇಶದ ಪೂರ್ವ ಭಾಗದಲ್ಲಿ ನೆಲೆಯೂರಿದೆವು.
ದುಃಖ ಹಾಗೂ ಸಂತೋಷ
ನೆದರ್ಲೆಂಡ್ಸ್‌ಗೆ ಹೋಗಲಿಕ್ಕಾಗಿ ನಾನು ಮನೆಬಿಟ್ಟ ಸುಮಾರು ಒಂದು ವರ್ಷದ ಬಳಿಕ ತಂದೆಯವರನ್ನು ಬಂಧಿಸಲಾಯಿತು. ಈ ವಿಷಯವು ನನಗೆ ಯುದ್ಧಾನಂತರ ತಿಳಿದುಬಂತು. ಅನಾರೋಗ್ಯದ ಕಾರಣ ಅವರನ್ನು ಎರಡು ಬಾರಿ ಬಿಡುಗಡೆಮಾಡಲಾಗಿತ್ತಾದರೂ, ಪುನಃ ಪುನಃ ಅವರನ್ನು ಬಂಧಿಸಿ ಸೆರೆಯಲ್ಲಿಡಲಾಯಿತು. 1938ರ ಫೆಬ್ರವರಿ ತಿಂಗಳಿನಲ್ಲಿ, ಅವರನ್ನು ಬುಚೆನ್‌ವಾಲ್ಡ್ ಕೂಟ ಶಿಬಿರಕ್ಕೆ ಮತ್ತು ನಂತರ ಡಾಚೌಗೆ ಕಳುಹಿಸಲಾಯಿತು. ಅಲ್ಲಿ, 1942ರ ಮೇ 14ರಂದು ನನ್ನ ತಂದೆಯವರು ಕೊನೆಯುಸಿರೆಳೆದರು. ಮರಣದ ತನಕ ಅವರು ನಂಬಿಗಸ್ತರಾಗಿ ಉಳಿದರು.
ತಾಯಿಯವರನ್ನು ಸಹ ಡಾಚೌ ಕೂಟ ಶಿಬಿರಕ್ಕೆ ಕಳುಹಿಸಲಾಯಿತು. 1945ರಲ್ಲಿ ತಮ್ಮ ಬಿಡುಗಡೆಯಾಗುವ ತನಕ ತಾಯಿಯವರು ಅಲ್ಲೇ ಉಳಿದಿದ್ದರು. ನಾನು ಆನಂದಿಸಿರುವ ಆತ್ಮಿಕ ಆಶೀರ್ವಾದಗಳಲ್ಲಿ ಹೆಚ್ಚಿನದ್ದು ನನ್ನ ಹೆತ್ತವರ ಅಚಲ ಮಾದರಿಯಿಂದಲೇ ನನಗೆ ಸಿಕ್ಕಿದ್ದರಿಂದ, 1954ರಲ್ಲಿ ತಾಯಿಯವರು ನಮ್ಮೊಂದಿಗೆ ವಾಸಿಸಲು ಬಂದದ್ದು ನಿಜವಾಗಿಯೂ ಒಂದು ದೊಡ್ಡ ಸುಯೋಗವಾಗಿತ್ತು. 1945ರಿಂದ, ಕಮ್ಯೂನಿಸ್ಟ್ ಈಸ್ಟ್ ಜರ್ಮನಿಯಲ್ಲಿ ಪಯನೀಯರ್ ಸೇವೆಯನ್ನು ಮಾಡುತ್ತಿದ್ದ ನನ್ನ ತಂಗಿಯಾದ ಮಾರ್ಗಾರೇಟಾ ಸಹ ತಾಯಿಯವರ ಜೊತೆಯಲ್ಲಿ ಬಂದಳು. ತಾಯಿಯವರು ಅಸ್ವಸ್ಥರಾಗಿದ್ದು, ಅವರಿಗೆ ಡಚ್ ಭಾಷೆಯು ಬರುತ್ತಿರಲಿಲ್ಲವಾದರೂ, ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದನ್ನು ಮುಂದುವರಿಸಿದರು. ಆದರೆ 1957ರ ಅಕ್ಟೋಬರ್ ತಿಂಗಳಿನಲ್ಲಿ ಅವರು ಭೂಜೀವಿತವನ್ನು ಮುಗಿಸಿದರು. ಅವರು ತಮ್ಮ ಮರಣಪರ್ಯಂತ ನಂಬಿಗಸ್ತರಾಗಿದ್ದರು.
1955ರಲ್ಲಿ ಜರ್ಮನಿಯ ನ್ಯೂರೆಂಬರ್ಗ್‌ನಲ್ಲಿ ನಡೆದ ಅಧಿವೇಶನವು ತುಂಬ ವಿಶೇಷವಾದದ್ದಾಗಿತ್ತು. ನಾವು ಅಲ್ಲಿಗೆ ಆಗಮಿಸಿದ ಬಳಿಕ, ಎರೀಕಾಳ ತಾಯಿಯವರು ಸಹ ಅಧಿವೇಶನಕ್ಕೆ ಬಂದಿದ್ದಾರೆ ಎಂದು ಡ್ರೆಸ್‌ಡೆನ್‌ನಿಂದ ಬಂದ ಸಹೋದರರು ಅವಳಿಗೆ ಹೇಳಿದರು. ಡ್ರೆಸ್‌ಡೆನ್ ಆಗ ಈಸ್ಟ್ ಜರ್ಮನ್ ಆಳ್ವಿಕೆಯ ಕೆಳಗಿದ್ದುದರಿಂದ, ಎರೀಕಾಳು 21 ವರ್ಷಗಳ ವರೆಗೆ ತನ್ನ ತಾಯಿಯನ್ನು ನೋಡಿರಲಿಲ್ಲ. ಅವರಿಬ್ಬರೂ ಸಂಧಿಸುವಂತೆ ಏರ್ಪಾಡನ್ನು ಮಾಡಲಾಯಿತು, ಮತ್ತು ತಾಯಿಮಗಳಿಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡರು. ಅದು ಎಂಥ ಒಂದು ಆನಂದಮಯ ಪುನರ್ಮಿಲನವಾಗಿತ್ತು!
ಈ ಮಧ್ಯೆ ನಮ್ಮ ಕುಟುಂಬವು ಎಂಟು ಮಕ್ಕಳಷ್ಟು ದೊಡ್ಡದಾಯಿತು. ದುರಂತಕರ ವಿಷಯವೇನೆಂದರೆ, ಕಾರ್ ಅಪಘಾತದಲ್ಲಿ ನಾವು ನಮ್ಮ ಗಂಡುಮಕ್ಕಳಲ್ಲಿ ಒಬ್ಬನನ್ನು ಕಳೆದುಕೊಂಡೆವು. ಆದರೂ, ನಮ್ಮ ಉಳಿದ ಮಕ್ಕಳೆಲ್ಲರೂ ಯೆಹೋವನ ಸೇವೆಮಾಡುತ್ತಿರುವುದನ್ನು ನೋಡುವುದು ನಿಜವಾಗಿಯೂ ಬಹಳಷ್ಟು ಆನಂದವನ್ನು ಉಂಟುಮಾಡುತ್ತದೆ. ನಮ್ಮ ಮಗನಾದ ವೂಲ್ಫ್‌ಗ್ಯಾಂಗ್ ಮತ್ತು ಅವನ ಪತ್ನಿ ಸರ್ಕಿಟ್ ಕೆಲಸದಲ್ಲಿದ್ದಾರೆ ಮತ್ತು ಅವರ ಮಗನು ಸಹ ಒಬ್ಬ ಸರ್ಕಿಟ್ ಮೇಲ್ವಿಚಾರಕನಾಗಿ ಸೇವೆಮಾಡುತ್ತಿದ್ದಾನೆ ಎಂದು ಹೇಳಲು ನಾವು ಸಂತೋಷಿಸುತ್ತೇವೆ.
ನೆದರ್ಲೆಂಡ್ಸ್‌ನಲ್ಲಿ ಯೆಹೋವನ ಕೆಲಸದ ಪ್ರಗತಿಯನ್ನು ಕಣ್ಣಾರೆ ಕಂಡಿರುವುದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. 1933ರಲ್ಲಿ ನಾನು ಇಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸಿದಾಗ, ಸುಮಾರು ನೂರು ಸಾಕ್ಷಿಗಳು ಇದ್ದರು. ಇಂದು, 30,000ಕ್ಕಿಂತಲೂ ಹೆಚ್ಚು ಮಂದಿ ಇದ್ದಾರೆ. ನಮ್ಮ ಶಾರೀರಿಕ ಬಲವು ಈಗ ಕ್ಷೀಣವಾಗುತ್ತಿರುವುದಾದರೂ, ಈಗಲೂ ನಾನು ಮತ್ತು ಎರೀಕಾ “ಹಿಮ್ಮೆಟ್ಟದಿರುವಂತಹ ನಂಬಿಕೆಯಿರಲಿ” ಎಂಬ ಆ ಹಳೆಯ ಹಾಡಿನ ಶಬ್ದಗಳಿಗನುಸಾರ ಜೀವಿಸಲು ನಿಶ್ಚಯಿಸಿದ್ದೇವೆ.
[ಪಾದಟಿಪ್ಪಣಿಗಳು]
^ ಪ್ಯಾರ. 5 ಗೀತೆ 194.—ಯೆಹೋವನಿಗೆ ಸುತ್ತಿಗೀತೆಗಳು (1928)
^ ಪ್ಯಾರ. 7 ಈಗ ಪಿರ್ನ ಎಂದು ಕರೆಯಲ್ಪಡುವ ಕಾಪಿಟ್ಸ್ ಪಟ್ಟಣವು, ಡ್ರೆಸ್‌ಡೆನ್ ಪಟ್ಟಣದಿಂದ ಸುಮಾರು 18 ಕಿಲೊಮೀಟರುಗಳಷ್ಟು ದೂರದಲ್ಲಿ, ಅಂದರೆ ಎಲ್ಬೆ ನದಿಯ ಬಳಿಯಿದೆ.
^ ಪ್ಯಾರ. 38 ಸಹೋದರ ಫಾನ್ ಡರ್ ಬೇಲ್‌ರ ಜೀವನ ಕಥೆಗಾಗಿ, ಕಾವಲಿನಬುರುಜು ಪತ್ರಿಕೆಯ ಜನವರಿ 1, 1998ರ ಸಂಚಿಕೆಯಲ್ಲಿರುವ, “ಸತ್ಯಕ್ಕಿಂತಲೂ ಹೆಚ್ಚು ಉತ್ತಮವಾದದ್ದು ಯಾವುದೂ ಇಲ್ಲ” ಎಂಬ ಲೇಖನವನ್ನು ನೋಡಿರಿ.
[ಪುಟ 23ರಲ್ಲಿರುವ ಚಿತ್ರ]
ಕ್ಷೇತ್ರ ಸೇವೆಯ ನಂತರ ವಿರಮಿಸುತ್ತಿರುವ “ಜುಗೆಂಡ್‌ಗ್ರೂಪ್”
[ಪುಟ 24ರಲ್ಲಿರುವ ಚಿತ್ರ]
ನಾನು ಮತ್ತು ಜೊತೆ ಪಯನೀಯರರು ಸೇರಿಕೊಂಡು ಸ್ಕೆನಿಫೆಲ್ ಟೆರಿಟೊರಿಯನ್ನು ಆವರಿಸಿದೆವು. ಆಗ ನಾನು 20 ವರ್ಷ ಪ್ರಾಯದವನಾಗಿದ್ದೆ
[ಪುಟ 25ರಲ್ಲಿರುವ ಚಿತ್ರ]
1940ರಲ್ಲಿ ಎರೀಕಾ ಹಾಗೂ ವೂಲ್ಫ್‌ಗ್ಯಾಂಗ್‌ನೊಂದಿಗೆ
[ಪುಟ 26ರಲ್ಲಿರುವ ಚಿತ್ರ]
ಎಡದಿಂದ ಬಲಕ್ಕೆ: ನನ್ನ ಮೊಮ್ಮಗ ಯೋನಾಟಾನ್ ಮತ್ತು ಅವನ ಪತ್ನಿಯಾದ ಮಿರ್ಯಾಮ್; ಎರೀಕಾ, ನಾನು, ನನ್ನ ಮಗ ವೂಲ್ಫ್‌ಗ್ಯಾಂಗ್ ಮತ್ತು ಅವನ ಪತ್ನಿಯಾದ ಯೂಲ್ಯಾ
[ಪುಟ 26ರಲ್ಲಿರುವ ಚಿತ್ರ]
ನನ್ನ ತಂದೆಯೊಂದಿಗೆ ಸೆರೆಮನೆಯಲ್ಲಿದ್ದ ಒಬ್ಬ ಸಹೋದರನು 1941ರಲ್ಲಿ ಅವರ ಈ ಚಿತ್ರವನ್ನು ಬರೆದನು