ಆಂತರಿಕ ಸೌಂದರ್ಯಕ್ಕೆ ಶಾಶ್ವತ ಮೌಲ್ಯವಿದೆ
ಆಂತರಿಕ ಸೌಂದರ್ಯಕ್ಕೆ ಶಾಶ್ವತ ಮೌಲ್ಯವಿದೆ
“ಒಬ್ಬ ಯುವಕನು ಸದ್ಗುಣವೆಂಬ ಆಂತರಿಕ ಸೌಂದರ್ಯಕ್ಕಿಂತಲೂ ಬಾಹ್ಯ ಸೌಂದರ್ಯಕ್ಕೇ ಹೆಚ್ಚು ಬೆಲೆಕೊಡುತ್ತಾನೆ” ಎಂದು ನಂಬಿಗಸ್ತ ವೃದ್ಧ ಕ್ರೈಸ್ತರೊಬ್ಬರು ಹೇಳಿದರು.
ಹೌದು, ಬಹಳ ಹಿಂದಿನಿಂದಲೂ ಮನುಷ್ಯನು ಬಾಹ್ಯ ಸೌಂದರ್ಯಕ್ಕೇ ಹೆಚ್ಚಿನ ಮಹತ್ವವನ್ನು ಕೊಡುವ ಪ್ರವೃತ್ತಿಯುಳ್ಳವನಾಗಿದ್ದಾನೆ. ಆದುದರಿಂದ, ಅನೇಕವೇಳೆ ಆಂತರಿಕ ಗುಣಗಳ ವಿಷಯದಲ್ಲಿ ಜನರು ತಪ್ಪು ತೀರ್ಮಾನಕ್ಕೆ ಬರುತ್ತಾರೆ. ಆದರೆ, ನಮ್ಮ ಬಾಹ್ಯ ತೋರಿಕೆಯು ಹೇಗೆಯೇ ಇರಲಿ, ನಮ್ಮ ಸೃಷ್ಟಿಕರ್ತನು ಮಾತ್ರ ನಮ್ಮ ಆಂತರ್ಯದಲ್ಲಿ ನಾವೇನಾಗಿದ್ದೇವೆ ಎಂಬುದನ್ನು ನೋಡುತ್ತಾನೆ. ಈ ರೀತಿಯಲ್ಲಿ, ಪ್ರೌಢ ತೀರ್ಮಾನದ ವಿಷಯದಲ್ಲಿ ಆತನು ಅತ್ಯುತ್ತಮವಾದ ಮಾದರಿಯನ್ನಿಡುತ್ತಾನೆ. ಬೈಬಲಿಗನುಸಾರ, ಸ್ವತಃ ದೇವರೇ ಹೇಳಿದ್ದು: “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.”—1 ಸಮುವೇಲ 16:7.
ನಿಜವಾದ ಮಾನವ ಸೌಂದರ್ಯದ ಮೂಲನು ದೇವರಾಗಿದ್ದಾನೆ, ಮತ್ತು ಒಬ್ಬ ವ್ಯಕ್ತಿಯ ನಿಜವಾದ ಯೋಗ್ಯತೆಯನ್ನು ನಿರ್ಧರಿಸುವಾಗ, ಆತ್ಮಿಕ ಗುಣಗಳೇ ಅತ್ಯಮೂಲ್ಯವಾದವುಗಳಾಗಿವೆ ಎಂದು ಆತನ ವಾಕ್ಯವು ತಿಳಿಯಪಡಿಸುತ್ತದೆ. ಆದುದರಿಂದ ಬೈಬಲು ಹೇಳುವುದು: “ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.” (ಜ್ಞಾನೋಕ್ತಿ 31:30) ಬಾಹ್ಯ ಸೌಂದರ್ಯವು ಆಂತರಿಕ ಕುರೂಪವನ್ನು ಮರೆಮಾಚಬಲ್ಲದು ಎಂಬುದಂತೂ ನಿಜ. (ಎಸ್ತೇರ 1:10-12; ಜ್ಞಾನೋಕ್ತಿ 11:22) ಕಾಲಕಳೆದಂತೆ ಶಾರೀರಿಕ ಸೌಂದರ್ಯವು ಕಳೆಗುಂದುವುದಾದರೂ, ಆಂತರಿಕ ಸೌಂದರ್ಯ, ಅಂದರೆ ಹೃದಯದ ಒಳ್ಳೆಯ ಗುಣಗಳು ಮಾತ್ರ ಬೆಳೆಯುತ್ತಾ ಹೋಗಸಾಧ್ಯವಿದೆ ಮತ್ತು ಶಾಶ್ವತವಾಗಿ ಉಳಿಯಬಲ್ಲವು.
ಆದುದರಿಂದ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಮತ್ತು ಶಮೆದಮೆಯಂತಹ ಗುಣಗಳನ್ನು ಬೆಳೆಸಿಕೊಳ್ಳುವುದು ಎಷ್ಟು ವಿವೇಕಯುತವಾಗಿರುವುದು! (ಗಲಾತ್ಯ 5:22, 23) ಹೀಗೆ ನಾವು, ನಿಜವಾಗಿಯೂ ಶಾಶ್ವತವಾದ ಮೌಲ್ಯವುಳ್ಳ ಆಂತರಿಕ ಸೌಂದರ್ಯವನ್ನು ಬೆಳೆಸಿಕೊಳ್ಳಸಾಧ್ಯವಿದೆ.—1 ಪೇತ್ರ 3:3, 4.