ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಂದು ಯಾರು ದೇವರ ಶುಶ್ರೂಷಕರಾಗಿದ್ದಾರೆ?

ಇಂದು ಯಾರು ದೇವರ ಶುಶ್ರೂಷಕರಾಗಿದ್ದಾರೆ?

ಇಂದು ಯಾರು ದೇವರ ಶುಶ್ರೂಷಕರಾಗಿದ್ದಾರೆ?

“ನಾವು ಸಾಕಷ್ಟು ಅರ್ಹರಾಗಿರುವ ಸಾಮರ್ಥ್ಯವನ್ನು ದೇವರೇ ಅನುಗ್ರಹಿಸಿದನು, ಒಂದು ಹೊಸ ಒಡಂಬಡಿಕೆಯ ಶುಶ್ರೂಷಕರಾಗಿರುವಂತೆ ನಮ್ಮನ್ನು ಸಾಕಷ್ಟು ಅರ್ಹರನ್ನಾಗಿ ಮಾಡಿದ್ದು ಆತನೇ.”​—⁠2 ಕೊರಿಂಥ 3:​5, 6, NW.

1, 2. ಪ್ರಥಮ ಶತಮಾನದ ಎಲ್ಲ ಕ್ರೈಸ್ತರಿಗೆ ಯಾವ ಜವಾಬ್ದಾರಿಯಿತ್ತು, ಆದರೆ ಸಮಯ ಕಳೆದಂತೆ ಎಲ್ಲವೂ ಹೇಗೆ ಬದಲಾಯಿತು?

ನಮ್ಮ ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ, ಎಲ್ಲ ಕ್ರೈಸ್ತರು ಪ್ರಾಮುಖ್ಯವಾದ ಒಂದು ಜವಾಬ್ದಾರಿಯಲ್ಲಿ ಪಾಲಿಗರಾಗಿದ್ದರು. ಅದು ಸುವಾರ್ತೆಯನ್ನು ಸಾರುವ ಕರ್ತವ್ಯವೇ ಆಗಿತ್ತು. ಅವರೆಲ್ಲರೂ ಅಭಿಷಿಕ್ತ ಕ್ರೈಸ್ತರಾಗಿದ್ದರು ಮತ್ತು ಹೊಸ ಒಡಂಬಡಿಕೆಯ ಶುಶ್ರೂಷಕರಾಗಿದ್ದರು. ಸಭೆಯಲ್ಲಿ ಬೋಧಿಸುವಂತಹ ಹೆಚ್ಚಿನ ಜವಾಬ್ದಾರಿಗಳೂ ಕೆಲವರಿಗೆ ಕೊಡಲ್ಪಟ್ಟಿದ್ದವು. (1 ಕೊರಿಂಥ 12:​27-29; ಎಫೆಸ 4:11) ಹೆತ್ತವರಿಗಾದರೋ ಕುಟುಂಬದಲ್ಲಿ ಗಂಭೀರವಾದ ಜವಾಬ್ದಾರಿಗಳನ್ನು ಪೂರೈಸಲಿಕ್ಕಿತ್ತು. (ಕೊಲೊಸ್ಸೆ 3:​18-21) ಆದರೆ, ಅತಿ ಪ್ರಾಮುಖ್ಯವಾದ ಹಾಗೂ ಅತ್ಯಾವಶ್ಯಕವಾದ ಸಾರುವ ಕೆಲಸದಲ್ಲಿ ಎಲ್ಲರೂ ಪಾಲ್ಗೊಂಡರು. ಕ್ರೈಸ್ತ ಶಾಸ್ತ್ರವಚನಗಳ ಮೂಲ ಗ್ರೀಕ್‌ ಭಾಷೆಯಲ್ಲಿ, ಅತಿ ಪ್ರಾಮುಖ್ಯವಾದ ಸಾರುವ ಕೆಲಸವನ್ನು ಸೂಚಿಸಲು ಡೀಆಕೋನೀಅ ಎಂಬ ಶಬ್ದವು ಉಪಯೋಗಿಸಲ್ಪಟ್ಟಿತು. ಮತ್ತು ಇದರ ಅರ್ಥ, ಒಂದು ಸೇವೆ ಅಥವಾ ಶುಶ್ರೂಷೆಯಾಗಿತ್ತು.​—⁠ಕೊಲೊಸ್ಸೆ 4:⁠17.

2 ಸಮಯ ಕಳೆದಂತೆ ಎಲ್ಲವೂ ಬದಲಾಗತೊಡಗಿತು. ಪಾದ್ರಿಗಳು ಎಂದು ಪ್ರಸಿದ್ಧವಾದ ಒಂದು ವರ್ಗವು ಹುಟ್ಟಿಕೊಂಡಿತು. ಇವರು ಸಾರುವ ಸುಯೋಗವನ್ನು ತಮಗೆ ಮಾತ್ರ ಮೀಸಲಾಗಿಟ್ಟುಕೊಂಡರು. (ಅ. ಕೃತ್ಯಗಳು 20:30) ಕ್ರೈಸ್ತರೆಂದು ಕರೆಸಿಕೊಳ್ಳುತ್ತಿದ್ದ ಜನರಲ್ಲಿ, ಈ ಪಾದ್ರಿಗಳು ಒಂದು ಚಿಕ್ಕ ಗುಂಪಾಗಿದ್ದರು. ಪಾದ್ರಿಗಳನ್ನು ಬಿಟ್ಟು ಇನ್ನುಳಿದ ಕ್ರೈಸ್ತರನ್ನು ಸಾಮಾನ್ಯ ಜನರೆಂದು ಕರೆಯಲಾಯಿತು. ಇವರಿಗೆ, ಪಾದ್ರಿಗಳ ಪರಾಮರಿಕೆಗಾಗಿ ಕಾಣಿಕೆಗಳನ್ನು ನೀಡುವಂತೆ ಮತ್ತು ಇನ್ನಿತರ ಕರ್ತವ್ಯಗಳನ್ನು ಪೂರೈಸುವಂತೆ ಬೋಧಿಸಲಾಗಿತ್ತು. ಆದುದರಿಂದ, ಸಾರುವ ಕೆಲಸದ ವಿಷಯದಲ್ಲಿ ಇವರು ಅನಾಸಕ್ತರಾಗಿ ಉಳಿದರು.

3, 4. (ಎ) ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ ಕೆಲವರು ಹೇಗೆ ಪಾದ್ರಿಗಳಾಗುತ್ತಾರೆ? (ಬಿ) ಕ್ರೈಸ್ತಪ್ರಪಂಚದಲ್ಲಿ ಯಾರನ್ನು ಒಬ್ಬ ಶುಶ್ರೂಷಕನಾಗಿ ಪರಿಗಣಿಸಲಾಗುತ್ತದೆ, ಮತ್ತು ಯೆಹೋವನ ಸಾಕ್ಷಿಗಳ ನಡುವೆ ಈ ರೀತಿಯ ನಿರ್ಬಂಧವಿಲ್ಲವೇಕೆ?

3 ತಾವು ಮಾತ್ರ ಶುಶ್ರೂಷಕರಾಗಿದ್ದೇವೆ (ಡೀಆಕೋನೋಸ್‌, “ಸೇವಕ” ಎಂಬ ಶಬ್ದದ ಲ್ಯಾಟಿನ್‌ ಭಾಷಾಂತರವಾದ ಶುಶ್ರೂಷಕ ಎಂಬ ಪದದಿಂದ ಬಂದದ್ದು) ಎಂದು ಪಾದ್ರಿಗಳು ವಾದಿಸುತ್ತಾರೆ. * ಶುಶ್ರೂಷಕರಾಗಲಿಕ್ಕೋಸ್ಕರ ಅವರು ಕಾಲೇಜ್‌ಗಳಿಂದ ಅಥವಾ ಸೆಮಿನೆರಿಗಳಿಂದ ಪದವಿಪಡೆದುಕೊಳ್ಳುತ್ತಾರೆ ಮತ್ತು ಅಧಿಕಾರಯುಕ್ತವಾಗಿ ನೇಮಿಸಲ್ಪಡುತ್ತಾರೆ. ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “‘ವಿಧಿವತ್ತಾಗಿ ನೇಮಿಸುವುದು’ ಮತ್ತು ‘ದೀಕ್ಷೆಕೊಡುವುದು’ ಸಾಮಾನ್ಯವಾಗಿ ಪಾದ್ರಿಗಳಿಗೆ ಕೊಡಲ್ಪಡುವ ವಿಶೇಷ ಸ್ಥಾನಮಾನಕ್ಕೆ ಸೂಚಿತವಾಗಿದೆ. ಅಧಿಕೃತವಾಗಿ ಅನುಮೋದಿಸಲ್ಪಟ್ಟ ಮತಾಚರಣೆಗಳ ಮೂಲಕ ಇದು ಮಾಡಲ್ಪಡುತ್ತದೆ. ಮತ್ತು ದೇವರ ವಾಕ್ಯವನ್ನು ಸಾರುವ ಅಥವಾ ಧಾರ್ಮಿಕ ಮತಸಂಸ್ಕಾರಗಳನ್ನು ನಡೆಸುವ ಇಲ್ಲವೆ ಎರಡನ್ನೂ ಮಾಡುವ ಅಧಿಕಾರಕ್ಕೆ ಹೆಚ್ಚು ಮಹತ್ವವನ್ನು ಕೊಡಲಾಗುತ್ತದೆ.” ಈ ಪಾದ್ರಿಗಳನ್ನು ಯಾರು ನೇಮಿಸುತ್ತಾರೆ? ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೀಗೆ ಹೇಳುತ್ತದೆ: “ಇದುವರೆಗೂ ಬಿಷಪ್ಪಿನ ಅಧಿಕಾರದ ಕೆಳಗೆ ಇರುವಂತಹ ಚರ್ಚುಗಳಲ್ಲಿ, ಒಬ್ಬ ಬಿಷಪನೇ ಯಾವಾಗಲೂ ಪಾದ್ರಿಗಳನ್ನು ನೇಮಿಸುತ್ತಾನೆ. ಆದರೆ ಪ್ರೆಸ್ಬಿಟೇರಿಯನ್‌ ಚರ್ಚುಗಳಲ್ಲಿ, ಹಿರಿಯರ ಒಂದು ಗುಂಪು ಪಾದ್ರಿಗಳನ್ನು ನೇಮಿಸುತ್ತದೆ.”

4 ಆದುದರಿಂದ ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ, ಒಬ್ಬ ಶುಶ್ರೂಷಕನಾಗುವ ಸುಯೋಗವು ಕೆಲವರಿಗೆ ಮಾತ್ರ ಸಿಗುತ್ತದೆ. ಆದರೆ, ಯೆಹೋವನ ಸಾಕ್ಷಿಗಳ ಮಧ್ಯೆ ಇಂತಹ ನಿರ್ಬಂಧವಿಲ್ಲ. ಏಕೆ? ಏಕೆಂದರೆ ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿಯೂ ಇಂತಹ ನಿರ್ಬಂಧವಿರಲಿಲ್ಲ.

ನಿಜವಾಗಿಯೂ ಯಾರು ದೇವರ ಶುಶ್ರೂಷಕರಾಗಿದ್ದಾರೆ?

5. ಬೈಬಲಿಗನುಸಾರ, ಶುಶ್ರೂಷಕರಾಗಿ ಸೇವೆಮಾಡುವವರಲ್ಲಿ ಯಾರು ಸಹ ಒಳಗೂಡಿದ್ದಾರೆ?

5 ಬೈಬಲಿಗನುಸಾರ, ಸ್ವರ್ಗದಲ್ಲಿರುವ ಹಾಗೂ ಭೂಮಿಯಲ್ಲಿರುವ ಯೆಹೋವನ ಎಲ್ಲ ಆರಾಧಕರು ಶುಶ್ರೂಷಕರಾಗಿದ್ದಾರೆ. ಮತ್ತು ಸ್ವರ್ಗೀಯ ದೇವದೂತರು ಯೇಸುವಿನ ಶುಶ್ರೂಷೆ ಮಾಡಿದರು. (ಮತ್ತಾಯ 4:11; 26:53; ಲೂಕ 22:43) ಅಷ್ಟುಮಾತ್ರವಲ್ಲ, ದೇವದೂತರು “ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ” ಶುಶ್ರೂಷೆಯನ್ನೂ ಮಾಡುತ್ತಾರೆ. (ಇಬ್ರಿಯ 1:14; ಮತ್ತಾಯ 18:10) ಯೇಸು ಸಹ ಒಬ್ಬ ಶುಶ್ರೂಷಕನಾಗಿದ್ದನು. ಅವನು ಹೇಳಿದ್ದು: “ಮನುಷ್ಯಕುಮಾರನು ಶುಶ್ರೂಷೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಶುಶ್ರೂಷೆಮಾಡುವುದಕ್ಕೆ ಬಂದನು.” (ಮತ್ತಾಯ 20:​28, NW; ರೋಮಾಪುರ 15:⁠8) ಹೀಗೆ, ಯೇಸುವಿನ ಹಿಂಬಾಲಕರು ಅವನ “ಹೆಜ್ಜೆಯ ಜಾಡಿನಲ್ಲಿ ನಡೆಯ”ಬೇಕಾಗಿರುವುದರಿಂದ, ಅವರು ಸಹ ಶುಶ್ರೂಷಕರಾಗಿರಬೇಕು ಎಂಬುದರಲ್ಲಿ ಆಶ್ಚರ್ಯವೇನಿಲ್ಲ.​—⁠1 ಪೇತ್ರ 2:⁠21.

6. ತನ್ನ ಶಿಷ್ಯರು ಶುಶ್ರೂಷಕರಾಗಿರಬೇಕು ಎಂಬುದನ್ನು ಯೇಸು ಹೇಗೆ ಸೂಚಿಸಿದನು?

6 ಯೇಸು ಸ್ವರ್ಗಕ್ಕೆ ಹೋಗುವುದಕ್ಕೆ ಸ್ವಲ್ಪ ಮೊದಲು ತನ್ನ ಶಿಷ್ಯರಿಗೆ ಅವನು ಹೇಳಿದ್ದು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:​19, 20) ಯೇಸುವಿನ ಶಿಷ್ಯರು, ಶಿಷ್ಯರನ್ನಾಗಿ ಮಾಡುವವರಾಗಿರಬೇಕಿತ್ತು, ಅಂದರೆ ಶುಶ್ರೂಷಕರಾಗಿರಬೇಕಿತ್ತು. ಯಾರು ಹೊಸದಾಗಿ ಯೇಸುವಿನ ಶಿಷ್ಯರಾಗುತ್ತಾರೋ ಅವರು, ಅವನು ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಮಾಡಲು ಕಲಿಯಬೇಕಿತ್ತು. ಮತ್ತು ಅವರು ಇತರರಿಗೆ ಸಾರಿ ಶಿಷ್ಯರನ್ನಾಗಿ ಮಾಡುವ ಆಜ್ಞೆಯೂ ಇದರಲ್ಲಿ ಒಳಗೂಡಿತ್ತು. ಪುರುಷನಾಗಲಿ ಸ್ತ್ರೀಯಾಗಲಿ, ವಯಸ್ಕನಾಗಲಿ ಎಳೆಯವನಾಗಲಿ, ಯೇಸು ಕ್ರಿಸ್ತನನ್ನು ಅನುಸರಿಸಲು ಬಯಸುವ ನಿಜ ಶಿಷ್ಯನು ಒಬ್ಬ ಶುಶ್ರೂಷಕನಾಗಿ ಇರುವನು.​—⁠ಯೋವೇಲ 2:​28, 29.

7, 8. (ಎ) ಸತ್ಯ ಕ್ರೈಸ್ತರೆಲ್ಲರೂ ಶುಶ್ರೂಷಕರಾಗಿದ್ದಾರೆ ಎಂಬುದನ್ನು ಯಾವ ಶಾಸ್ತ್ರವಚನಗಳು ರುಜುಪಡಿಸುತ್ತವೆ? (ಬಿ) ಶುಶ್ರೂಷಕರಾಗಿ ನೇಮಿಸಲ್ಪಡುವ ವಿಷಯದಲ್ಲಿ ಯಾವ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?

7 ಇದಕ್ಕೆ ಹೊಂದಿಕೆಯಲ್ಲಿ, ಸಾ.ಶ. 33ರ ಪಂಚಾಶತ್ತಮ ದಿನದಂದು, ಒಂದೇ ಸ್ಥಳದಲ್ಲಿ ಕೂಡಿಬಂದಿದ್ದ ಯೇಸುವಿನ ಶಿಷ್ಯರೆಲ್ಲರೂ, ಅಂದರೆ ಸ್ತ್ರೀಪುರುಷರೆಲ್ಲರೂ “ದೇವರ ಮಹತ್ತುಗಳ ವಿಷಯವಾಗಿ” ಹೇಳುವುದರಲ್ಲಿ ಜೊತೆಗೂಡಿದರು. (ಅ. ಕೃತ್ಯಗಳು 2:​1-11) ಇದಲ್ಲದೆ ಅಪೊಸ್ತಲ ಪೌಲನು ಬರೆದುದು: “ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ, ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.” (ರೋಮಾಪುರ 10:10) ಪೌಲನು ಈ ಮಾತುಗಳನ್ನು ಪಾದ್ರಿ ವರ್ಗಕ್ಕೆ ಸಂಬೋಧಿಸಿ ಹೇಳಲಿಲ್ಲ. ಬದಲಾಗಿ “ರೋಮಾಪುರದಲ್ಲಿ ದೇವರಿಗೆ ಪ್ರಿಯರೂ ದೇವಜನರಾಗುವದಕ್ಕೆ ಕರೆಯಲ್ಪಟ್ಟವರೂ ಆಗಿರುವವರೆಲ್ಲರಿಗೆ” ಸಂಬೋಧಿಸಿ ಮಾತಾಡಿದನು. (ರೋಮಾಪುರ 1:​1, 7) ತದ್ರೀತಿಯಲ್ಲಿ, ‘ಎಫೆಸದಲ್ಲಿರುವ ದೇವಜನರು ಮತ್ತು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟಿರುವವರು,’ “ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು” ಮೆಟ್ಟಿಕೊಳ್ಳಬೇಕಿತ್ತು. (ಎಫೆಸ 1:1; 6:15) ಅಷ್ಟುಮಾತ್ರವಲ್ಲ, ಇಬ್ರಿಯರಿಗೆ ಸಂಬೋಧಿಸಿ ಬರೆದ ಪತ್ರವನ್ನು ಕೇಳಿಸಿಕೊಂಡವರೆಲ್ಲರೂ ‘ತಮ್ಮ ನಂಬಿಕೆಯ ಕುರಿತಾದ ಸಾರ್ವಜನಿಕ ಘೋಷಣೆಯಲ್ಲಿ ನಿಶ್ಚಂಚಲರಾಗಿರಬೇಕಿತ್ತು.’​—⁠ಇಬ್ರಿಯ 10:​23, NW.

8 ಆದರೂ, ಒಬ್ಬ ವ್ಯಕ್ತಿಯು ಯಾವಾಗ ಶುಶ್ರೂಷಕನಾಗುತ್ತಾನೆ? ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವನು ಯಾವಾಗ ಶುಶ್ರೂಷಕನಾಗಿ ನೇಮಿಸಲ್ಪಡುತ್ತಾನೆ? ಮತ್ತು ಯಾರು ಅವನನ್ನು ನೇಮಿಸುತ್ತಾರೆ?

ಶುಶ್ರೂಷಕನಾಗಿ ನೇಮಿಸಲ್ಪಡುವುದು​—⁠ಯಾವಾಗ?

9. ಯೇಸು ಯಾವಾಗ ಶುಶ್ರೂಷಕನಾಗಿ ನೇಮಿಸಲ್ಪಟ್ಟನು, ಮತ್ತು ಯಾರಿಂದ?

9 ಒಬ್ಬ ವ್ಯಕ್ತಿಯು ಯಾವಾಗ ಮತ್ತು ಯಾರಿಂದ ನೇಮಿಸಲ್ಪಡುತ್ತಾನೆ ಎಂಬುದನ್ನು ತಿಳಿದುಕೊಳ್ಳಲು, ಯೇಸು ಕ್ರಿಸ್ತನ ಉದಾಹರಣೆಯನ್ನು ಪರಿಗಣಿಸಿರಿ. ಅವನೊಬ್ಬ ಶುಶ್ರೂಷಕನಾಗಿದ್ದಾನೆಂಬುದನ್ನು ರುಜುಪಡಿಸಲು, ಅವನ ಬಳಿ ನೇಮಕದ ಒಂದು ಪ್ರಮಾಣಪತ್ರವಾಗಲಿ ಅಥವಾ ಒಂದು ಸೆಮಿನೆರಿಯಿಂದ ಪಡೆದ ಡಿಗ್ರಿಯಾಗಲಿ ಇರಲಿಲ್ಲ. ಇದಲ್ಲದೆ ಅವನು ಯಾವುದೇ ಮನುಷ್ಯನಿಂದಲೂ ನೇಮಕವನ್ನು ಪಡೆದಿರಲಿಲ್ಲ. ಹಾಗಾದರೆ, ಅವನು ಒಬ್ಬ ಶುಶ್ರೂಷಕನಾಗಿ ಇದ್ದನು ಎಂದು ನಾವು ಏಕೆ ಹೇಳಸಾಧ್ಯವಿದೆ? ಏಕೆಂದರೆ ಯೆಶಾಯನ ಪ್ರೇರಿತ ಮಾತುಗಳು ಅವನಲ್ಲಿ ನೆರವೇರಿದವು: “ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು . . . ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು.” (ಲೂಕ 4:​17-19; ಯೆಶಾಯ 61:⁠1) ಯೇಸು ಸುವಾರ್ತೆಯನ್ನು ಸಾರಲಿಕ್ಕಾಗಿಯೇ ನೇಮಿಸಲ್ಪಟ್ಟಿದ್ದನು ಎಂಬುದನ್ನು ಈ ಮಾತುಗಳು ಸ್ಪಷ್ಟವಾಗಿ ರುಜುಪಡಿಸುತ್ತವೆ. ಯಾರಿಂದ? ಈ ಕೆಲಸಕ್ಕಾಗಿ ಯೆಹೋವನ ಆತ್ಮವು ಯೇಸುವನ್ನು ಅಭಿಷೇಕಿಸಿದ್ದರಿಂದ, ಅವನು ಯೆಹೋವ ದೇವರಿಂದಲೇ ನೇಮಿಸಲ್ಪಟ್ಟನು ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಇದು ಯಾವಾಗ ಸಂಭವಿಸಿತು? ಯೇಸು ದೀಕ್ಷಾಸ್ನಾನ ಪಡೆದುಕೊಂಡಾಗ, ಯೆಹೋವನ ಆತ್ಮವು ಅವನ ಮೇಲೆ ಬಂತು. (ಲೂಕ 3:​21, 22) ಆದುದರಿಂದ, ಅವನ ದೀಕ್ಷಾಸ್ನಾನದ ಸಮಯದಲ್ಲೇ ಅವನು ಶುಶ್ರೂಷಕನಾಗಿ ನೇಮಿಸಲ್ಪಟ್ಟನು.

10. ಒಬ್ಬ ಕ್ರೈಸ್ತ ಶುಶ್ರೂಷಕನು ಯಾರಿಂದ ‘ಸಾಕಷ್ಟು ಅರ್ಹತೆಯನ್ನು’ ಪಡೆಯುತ್ತಾನೆ?

10 ಯೇಸುವಿನ ಪ್ರಥಮ ಶತಮಾನದ ಹಿಂಬಾಲಕರ ಕುರಿತಾಗಿ ಏನು? ಅವರು ಸಹ ಯೆಹೋವನಿಂದಲೇ ಶುಶ್ರೂಷಕರಾಗಿ ನೇಮಿಸಲ್ಪಟ್ಟರು. ಈ ವಿಷಯದಲ್ಲಿ ಪೌಲನು ಹೇಳಿದ್ದು: “ನಾವು ಸಾಕಷ್ಟು ಅರ್ಹರಾಗಿರುವ ಸಾಮರ್ಥ್ಯವನ್ನು ದೇವರೇ ಅನುಗ್ರಹಿಸಿದನು, ಒಂದು ಹೊಸ ಒಡಂಬಡಿಕೆಯ ಶುಶ್ರೂಷಕರಾಗಿರುವಂತೆ ನಮ್ಮನ್ನು ಸಾಕಷ್ಟು ಅರ್ಹರನ್ನಾಗಿ ಮಾಡಿದ್ದು ಆತನೇ.” (2 ಕೊರಿಂಥ 3:​5, 6, NW) ಯೆಹೋವನು ತನ್ನ ಆರಾಧಕರನ್ನು ಶುಶ್ರೂಷಕರಾಗಿರಲು ಹೇಗೆ ಅರ್ಹರನ್ನಾಗಿ ಮಾಡುತ್ತಾನೆ? ತಿಮೊಥೆಯನ ಉದಾಹರಣೆಯನ್ನು ಪರಿಗಣಿಸಿರಿ. ಇವನನ್ನು ಪೌಲನು “ಕ್ರಿಸ್ತನ ಸುವಾರ್ತೆಯ ಉದ್ಯೋಗದಲ್ಲಿ ದೇವರ ಸೇವಕನು [“ಶುಶ್ರೂಷಕನು,” NW]” ಎಂದು ಕರೆದನು.​—⁠1 ಥೆಸಲೊನೀಕ 3:⁠2.

11, 12. ಒಬ್ಬ ಶುಶ್ರೂಷಕನಾಗಲಿಕ್ಕಾಗಿ ತಿಮೊಥೆಯನು ಹೇಗೆ ಪ್ರಗತಿಯನ್ನು ಮಾಡಿದನು?

11 ತಿಮೊಥೆಯನಿಗೆ ಸೂಚಿಸಿ ತಿಳಿಸಲ್ಪಟ್ಟ ಈ ಕೆಳಗಿನ ಮಾತುಗಳು, ಅವನು ಹೇಗೆ ಶುಶ್ರೂಷಕನಾದನು ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯಮಾಡುತ್ತವೆ: “ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು. ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.” (2 ತಿಮೊಥೆಯ 3:​14, 15) ತಿಮೊಥೆಯನ ನಂಬಿಕೆಗೆ ತಳಪಾಯವಾಗಿದ್ದು, ಬಹಿರಂಗವಾಗಿ ಸಾರುವಂತೆ ಅವನನ್ನು ಪ್ರಚೋದಿಸಿದ ಒಂದು ವಿಷಯವು, ಶಾಸ್ತ್ರವಚನಗಳ ಕುರಿತಾದ ಜ್ಞಾನವೇ ಆಗಿತ್ತು. ಶಾಸ್ತ್ರವಚನಗಳ ಜ್ಞಾನವನ್ನು ಪಡೆದುಕೊಳ್ಳಲು ಕೇವಲ ವೈಯಕ್ತಿಕ ವಾಚನವು ಮಾತ್ರ ಸಾಕಾಗಿತ್ತೋ? ಖಂಡಿತವಾಗಿಯೂ ಇಲ್ಲ. ತಾನು ಓದುತ್ತಿದ್ದ ವಿಷಯದ ನಿಷ್ಕೃಷ್ಟ ಜ್ಞಾನವನ್ನು ಮತ್ತು ಆತ್ಮಿಕ ಗ್ರಹಿಕೆಯನ್ನು ಪಡೆದುಕೊಳ್ಳಲು ತಿಮೊಥೆಯನಿಗೆ ಸಹಾಯದ ಅಗತ್ಯವಿತ್ತು. (ಕೊಲೊಸ್ಸೆ 1:⁠9) ಆ ಸಹಾಯದ ಮೂಲಕ ತಿಮೊಥೆಯನು ಕಲಿತ ವಿಷಯಗಳನ್ನು ‘ದೃಢವಾಗಿ ನಂಬ’ಶಕ್ತನಾದನು. “ಚಿಕ್ಕಂದಿನಿಂದಲೂ” ಅವನಿಗೆ ಶಾಸ್ತ್ರವಚನಗಳ ಪರಿಚಯವಿತ್ತು. ಅಂದರೆ ಅವನ ತಾಯಿ ಹಾಗೂ ಅಜ್ಜಿಯು ಅವನ ಪ್ರಥಮ ಶಿಕ್ಷಕರಾಗಿದ್ದಿರಬೇಕು. ಏಕೆಂದರೆ ಅವನ ತಂದೆಯು ಒಬ್ಬ ವಿಶ್ವಾಸಿಯಾಗಿರಲಿಲ್ಲ.​—⁠2 ತಿಮೊಥೆಯ 1:⁠5.

12 ಆದರೂ, ತಿಮೊಥೆಯನು ಒಬ್ಬ ಶುಶ್ರೂಷಕನಾಗಿ ಪರಿಣಮಿಸುವುದರಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿತ್ತು. ಸಮೀಪದ ಸಭೆಗಳಲ್ಲಿದ್ದ ಕ್ರೈಸ್ತರೊಂದಿಗಿನ ಸಹವಾಸದ ಮೂಲಕ ಅವನ ನಂಬಿಕೆಯು ಇನ್ನೂ ಹೆಚ್ಚು ಬಲಗೊಳಿಸಲ್ಪಟ್ಟಿತ್ತು. ಇದು ನಮಗೆ ಹೇಗೆ ಗೊತ್ತಾಗುತ್ತದೆ? ಹೇಗೆಂದರೆ, ಪೌಲನು ಮೊದಲ ಬಾರಿ ತಿಮೊಥೆಯನನ್ನು ಭೇಟಿಯಾದಾಗ, ಈ ಯುವಕನ ಬಗ್ಗೆ “ಲುಸ್ತ್ರದಲ್ಲಿಯೂ ಇಕೋನ್ಯದಲ್ಲಿಯೂ ಇದ್ದ ಸಹೋದರರು ಒಳ್ಳೇ ಸಾಕ್ಷಿಹೇಳುತ್ತಿದ್ದರು.” (ಅ. ಕೃತ್ಯಗಳು 16:⁠2) ಅಷ್ಟುಮಾತ್ರವಲ್ಲ, ಆ ಸಮಯದಲ್ಲಿ ಕೆಲವು ಸಹೋದರರು ಸಭೆಯವರನ್ನು ಬಲಗೊಳಿಸಲಿಕ್ಕಾಗಿ ಪತ್ರಗಳನ್ನು ಸಹ ಬರೆಯುತ್ತಿದ್ದರು. ಮತ್ತು ಇವರನ್ನು ಪ್ರೋತ್ಸಾಹಿಸಲಿಕ್ಕಾಗಿ ಮೇಲ್ವಿಚಾರಕರು ಸಭೆಗಳನ್ನು ಸಂದರ್ಶಿಸುತ್ತಿದ್ದರು. ಇಂತಹ ಒದಗಿಸುವಿಕೆಗಳು, ತಿಮೊಥೆಯನಂತಹ ಕ್ರೈಸ್ತರಿಗೆ ಆತ್ಮಿಕವಾಗಿ ಪ್ರಗತಿಯನ್ನು ಮಾಡಲು ಸಹಾಯಮಾಡಿದವು.​—⁠ಅ. ಕೃತ್ಯಗಳು 15:​22-32; 1 ಪೇತ್ರ 1:⁠1.

13. ತಿಮೊಥೆಯನು ಯಾವಾಗ ಒಬ್ಬ ಶುಶ್ರೂಷಕನಾಗಿ ನೇಮಿಸಲ್ಪಟ್ಟನು, ಮತ್ತು ಶುಶ್ರೂಷಕನಾದ ಕೂಡಲೆ ಅವನ ಆತ್ಮಿಕ ಪ್ರಗತಿಯು ನಿಂತುಹೋಗಲಿಲ್ಲ ಎಂದು ನೀವು ಏಕೆ ಹೇಳಸಾಧ್ಯವಿದೆ?

13ಮತ್ತಾಯ 28:​19, 20ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಆಜ್ಞೆಯನ್ನು ಪರಿಗಣಿಸುವಾಗ, ಯಾವುದೋ ಒಂದು ಹಂತದಲ್ಲಿ ತಿಮೊಥೆಯನ ನಂಬಿಕೆಯು ಯೇಸುವನ್ನು ಅನುಕರಿಸುವಂತೆ ಹಾಗೂ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಂತೆ ಪ್ರಚೋದಿಸಿತು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. (ಮತ್ತಾಯ 3:​15-17; ಇಬ್ರಿಯ 10:​5-9) ಇದು ತಿಮೊಥೆಯನು ದೇವರಿಗೆ ಮಾಡಿಕೊಂಡ ಪೂರ್ಣಮನಸ್ಸಿನ ಸಮರ್ಪಣೆಯ ಒಂದು ಸಂಕೇತವಾಗಿತ್ತು. ತಿಮೊಥೆಯನು ದೀಕ್ಷಾಸ್ನಾನ ಪಡೆದುಕೊಂಡ ಸಮಯದಲ್ಲಿ ಅವನು ಒಬ್ಬ ಶುಶ್ರೂಷಕನಾದನು. ಅಂದಿನಿಂದ, ಅವನ ಜೀವ, ಅವನ ಬಲಸಾಮರ್ಥ್ಯಗಳು ಹಾಗೂ ಅವನ ಬಳಿಯಿದ್ದದ್ದೆಲ್ಲವೂ ದೇವರಿಗೆ ಸೇರಿದ್ದಾಗಿತ್ತು. ಇದು ಅವನ ಆರಾಧನೆಯ ಒಂದು ಅವಿಭಾಜ್ಯ ಅಂಗವಾಗಿತ್ತು, ಅಂದರೆ “ಪವಿತ್ರ ಸೇವೆ”ಯಾಗಿತ್ತು. ಆದರೂ, ತಾನೊಬ್ಬ ಶುಶ್ರೂಷಕನು ಎಂಬ ಕೀರ್ತಿಯಲ್ಲೇ ತಿಮೊಥೆಯನು ಸಂತೃಪ್ತನಾಗಿ, ತನ್ನ ಪ್ರಗತಿಯನ್ನು ಅಷ್ಟಕ್ಕೇ ನಿಲ್ಲಿಸಲಿಲ್ಲ. ಅವನು ಆತ್ಮಿಕವಾಗಿ ಪ್ರಗತಿಮಾಡುತ್ತಾ ಮುಂದುವರಿದನು ಮತ್ತು ಒಬ್ಬ ಪ್ರೌಢ ಕ್ರೈಸ್ತ ಶುಶ್ರೂಷಕನಾದನು. ತಿಮೊಥೆಯನು ಪೌಲನಂತಹ ಪ್ರೌಢ ಕ್ರೈಸ್ತರೊಂದಿಗೆ ಆಪ್ತ ಸಹವಾಸಮಾಡಿದ್ದರಿಂದ, ಮತ್ತು ವೈಯಕ್ತಿಕ ಅಧ್ಯಯನದಿಂದ, ಹಾಗೂ ಹುರುಪಿನ ಸಾಕ್ಷಿಕಾರ್ಯದಿಂದ ತಿಮೊಥೆಯನು ಆತ್ಮಿಕ ಪ್ರಗತಿಯನ್ನು ಮಾಡಲು ಶಕ್ತನಾದನು.​—⁠1 ತಿಮೊಥೆಯ 4:14; 2 ತಿಮೊಥೆಯ 2:2; ಇಬ್ರಿಯ 6:⁠1.

14. ಇಂದು, ‘ನಿತ್ಯಜೀವಕ್ಕೆ ನೇಮಿಸಲ್ಪಟ್ಟಿರುವವರಲ್ಲಿ’ ಒಬ್ಬನು ಶುಶ್ರೂಷಕನಾಗಲಿಕ್ಕಾಗಿ ಹೇಗೆ ಪ್ರಗತಿಯನ್ನು ಮಾಡಸಾಧ್ಯವಿದೆ?

14 ಇಂದು ಸಹ ಕ್ರೈಸ್ತ ಶುಶ್ರೂಷೆಯ ನೇಮಕವು ಇದೇ ರೀತಿ ಮಾಡಲ್ಪಡುತ್ತದೆ. ಯಾರು ‘ನಿತ್ಯಜೀವಕ್ಕೆ ನೇಮಿಸಲ್ಪಟ್ಟಿದ್ದಾರೋ’ ಅಂಥ ಒಬ್ಬ ವ್ಯಕ್ತಿಯು, ಬೈಬಲ್‌ ಅಧ್ಯಯನದ ಮೂಲಕ ದೇವರ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಕಲಿಯುವಂತೆ ಸಹಾಯವು ಕೊಡಲ್ಪಡುತ್ತದೆ. (ಅ. ಕೃತ್ಯಗಳು 13:48) ಆ ವ್ಯಕ್ತಿಯು ಬೈಬಲ್‌ ಮೂಲತತ್ವಗಳನ್ನು ತನ್ನ ಜೀವಿತದಲ್ಲಿ ಅನ್ವಯಿಸಿಕೊಳ್ಳಲು ಮತ್ತು ದೇವರಿಗೆ ಅರ್ಥಭರಿತವಾಗಿ ಪ್ರಾರ್ಥಿಸಲು ಕಲಿಯುತ್ತಾನೆ. (ಕೀರ್ತನೆ 1:​1-3; ಜ್ಞಾನೋಕ್ತಿ 2:​1-9; 1 ಥೆಸಲೊನೀಕ 5:​17, 18) ಅವನು ಜೊತೆ ವಿಶ್ವಾಸಿಗಳೊಂದಿಗೆ ಸಹವಾಸಮಾಡುತ್ತಾನೆ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಮಾಡಲ್ಪಡುವ ಒದಗಿಸುವಿಕೆಗಳು ಹಾಗೂ ಏರ್ಪಾಡುಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. (ಮತ್ತಾಯ 24:45-47; ಜ್ಞಾನೋಕ್ತಿ 13:20; ಇಬ್ರಿಯ 10:​23-25) ಹೀಗೆ, ಅವನು ಒಂದು ವ್ಯವಸ್ಥಾಪಿತ ರೀತಿಯ ಶಿಕ್ಷಣದಲ್ಲಿ ಪ್ರಗತಿಯನ್ನು ಮಾಡುತ್ತಾ ಮುಂದುವರಿಯುತ್ತಾನೆ.

15. ಒಬ್ಬ ವ್ಯಕ್ತಿಯು ದೀಕ್ಷಾಸ್ನಾನ ಪಡೆದುಕೊಂಡಾಗ ಏನು ಸಂಭವಿಸುತ್ತದೆ? (ಪಾದಟಿಪ್ಪಣಿಯನ್ನೂ ನೋಡಿರಿ.)

15 ಸಮಯಾನಂತರ, ಯೆಹೋವ ದೇವರ ಕಡೆಗೆ ಪ್ರೀತಿಯನ್ನು ಹಾಗೂ ಪ್ರಾಯಶ್ಚಿತ್ತ ಯಜ್ಞದಲ್ಲಿ ಬಲವಾದ ನಂಬಿಕೆಯನ್ನು ಬೆಳೆಸಿಕೊಂಡಿರುವ ಆ ಬೈಬಲ್‌ ವಿದ್ಯಾರ್ಥಿಯು, ತನ್ನ ಸ್ವರ್ಗೀಯ ತಂದೆಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಬಯಸುತ್ತಾನೆ. (ಯೋಹಾನ 14:⁠1) ಅವನು ಆ ಸಮರ್ಪಣೆಯನ್ನು ಮೊದಲು ವೈಯಕ್ತಿಕ ಪ್ರಾರ್ಥನೆಯಲ್ಲಿ ಮಾಡುತ್ತಾನೆ ಮತ್ತು ನಂತರ ಅದರ ಬಹಿರಂಗ ಸಂಕೇತದೋಪಾದಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳುತ್ತಾನೆ. ಅವನ ದೀಕ್ಷಾಸ್ನಾನದ ಸಮಯದಲ್ಲಿ ಪೂರ್ಣ ಸಮರ್ಪಿತ ಸೇವಕನಾಗಿ ನೇಮಕವನ್ನು ಪಡೆಯುತ್ತಾನೆ. ಅವನ ದೀಕ್ಷಾಸ್ನಾನವೇ ಅವನ ನೇಮಕವಿಧಿಯಾಗಿದೆ. ಏಕೆಂದರೆ ಆ ಸಮಯದಲ್ಲೇ ಅವನು ಪೂರ್ಣ ರೀತಿಯಲ್ಲಿ ದೇವರ ಸಮರ್ಪಿತ ಸೇವಕನಾಗಿ (ಡೀಆಕೋನೋಸ್‌) ಗುರುತಿಸಲ್ಪಡುತ್ತಾನೆ. ಅವನು ಲೋಕದಿಂದ ಭಿನ್ನವಾಗಿ ಉಳಿಯಬೇಕು. (ಯೋಹಾನ 17:16; ಯಾಕೋಬ 4:⁠4) ಅವನು ಯಾವುದೇ ಷರತ್ತು ಅಥವಾ ಅಭ್ಯಂತರವಿಲ್ಲದೆ ತನ್ನನ್ನು ‘ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿ’ಕೊಂಡಿದ್ದಾನೆ. (ರೋಮಾಪುರ 12:⁠1) * ಅವನು ದೇವರ ಶುಶ್ರೂಷಕನಾಗಿದ್ದಾನೆ ಮತ್ತು ಕ್ರಿಸ್ತನನ್ನು ಅನುಕರಿಸುತ್ತಾನೆ.

ಕ್ರೈಸ್ತ ಶುಶ್ರೂಷೆ ಎಂದರೇನು?

16. ಒಬ್ಬ ಶುಶ್ರೂಷಕನೋಪಾದಿ ತಿಮೊಥೆಯನಿಗೆ ಕೊಡಲ್ಪಟ್ಟಿದ್ದ ಜವಾಬ್ದಾರಿಗಳಲ್ಲಿ ಕೆಲವು ಯಾವುವು?

16 ತಿಮೊಥೆಯನ ಶುಶ್ರೂಷೆಯಲ್ಲಿ ಏನು ಒಳಗೂಡಿತ್ತು? ಪೌಲನ ಸಂಚರಣ ಸಂಗಾತಿಯಾಗಿದ್ದ ತಿಮೊಥೆಯನಿಗೆ ವಿಶೇಷ ಕರ್ತವ್ಯಗಳಿದ್ದವು. ಮತ್ತು ತಿಮೊಥೆಯನು ಹಿರಿಯನಾದಾಗ, ಜೊತೆ ಕ್ರೈಸ್ತರಿಗೆ ಬೋಧಿಸುವುದರಲ್ಲಿ ಹಾಗೂ ಅವರನ್ನು ಬಲಪಡಿಸುವುದರಲ್ಲಿ ಬಹಳಷ್ಟು ಶ್ರಮಿಸಿದನು. ಯೇಸು ಹಾಗೂ ಪೌಲರಂತೆ, ಇವನ ಶುಶ್ರೂಷೆಯ ಮುಖ್ಯ ಭಾಗವು, ಸುವಾರ್ತೆಯನ್ನು ಸಾರುವುದು ಹಾಗೂ ಶಿಷ್ಯರನ್ನು ಮಾಡುವುದೇ ಆಗಿತ್ತು. (ಮತ್ತಾಯ 4:23; 1 ಕೊರಿಂಥ 3:⁠5) ಹೀಗೆ, ಪೌಲನು ತಿಮೊಥೆಯನಿಗೆ ಹೇಳಿದ್ದು: “ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು, ಶ್ರಮೆಯನ್ನು ತಾಳಿಕೋ, ಸೌವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು [“ಶುಶ್ರೂಷೆಯನ್ನು,” NW] ಲೋಪವಿಲ್ಲದೆ ನಡಿಸು.” (ಓರೆ ಅಕ್ಷರಗಳು ನಮ್ಮವು.)​—⁠2 ತಿಮೊಥೆಯ 4:⁠5.

17, 18. (ಎ) ಕ್ರೈಸ್ತರು ಯಾವ ಶುಶ್ರೂಷೆಯಲ್ಲಿ ಒಳಗೂಡುತ್ತಾರೆ? (ಬಿ) ಕ್ರೈಸ್ತ ಶುಶ್ರೂಷಕರಿಗೆ ಸಾರುವ ಕೆಲಸವು ಎಷ್ಟು ಪ್ರಾಮುಖ್ಯವಾದದ್ದಾಗಿದೆ?

17 ಇಂದಿನ ಕ್ರೈಸ್ತ ಶುಶ್ರೂಷಕರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಅವರು ಸಾರ್ವಜನಿಕ ಶುಶ್ರೂಷೆಯಲ್ಲಿ, ಅಂದರೆ ಸೌವಾರ್ತಿಕ ಕೆಲಸದಲ್ಲಿ ಭಾಗವಹಿಸುತ್ತಾರೆ. ಮತ್ತು ಯೇಸುವಿನ ಯಜ್ಞದ ಆಧಾರದ ಮೇಲೆ ಲಭ್ಯವಿರುವ ರಕ್ಷಣೆಯ ಕಡೆಗೆ ಜನರನ್ನು ನಡಿಸುತ್ತಾರೆ ಹಾಗೂ ಯೆಹೋವನ ನಾಮವನ್ನು ಕರೆಯುವಂತೆ ದೀನರಿಗೆ ಕಲಿಸುತ್ತಾರೆ. (ಅ. ಕೃತ್ಯಗಳು 2:21; 4:​10-12; ರೋಮಾಪುರ 10:13) ಕಷ್ಟಾನುಭವಿಸುತ್ತಿರುವ ಮಾನವಕುಲದ ಮುಂದಿರುವ ಏಕಮಾತ್ರ ನಿರೀಕ್ಷೆಯು ದೇವರ ರಾಜ್ಯವಾಗಿದೆ ಎಂಬುದನ್ನು ಅವರು ಬೈಬಲಿನಿಂದ ರುಜುಪಡಿಸುತ್ತಾರೆ. ಹಾಗೂ ನಾವು ದೇವರ ಮೂಲತತ್ವಗಳಿಗನುಸಾರ ಜೀವಿಸುವುದಾದರೆ, ಇಂದು ಸಹ ಪ್ರಯೋಜನಗಳನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನೂ ತೋರಿಸುತ್ತಾರೆ. (ಕೀರ್ತನೆ 15:​1-5; ಮಾರ್ಕ 13:10) ಆದರೆ, ಒಬ್ಬ ಕ್ರೈಸ್ತ ಶುಶ್ರೂಷಕನು ಸಾಮಾಜಿಕ ಸುವಾರ್ತೆಯನ್ನು ಸಾರುವುದಿಲ್ಲ. ಅದಕ್ಕೆ ಬದಲಾಗಿ, ‘ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು’ ಎಂದು ಅವನು ಕಲಿಸುತ್ತಾನೆ.​—⁠1 ತಿಮೊಥೆಯ 4:⁠8.

18 ಅನೇಕ ಶುಶ್ರೂಷಕರು ಇನ್ನೂ ಅನೇಕ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ. ಇದು ಒಬ್ಬ ಕ್ರೈಸ್ತನಿಂದ ಇನ್ನೊಬ್ಬ ಕ್ರೈಸ್ತನಿಗೆ ಭಿನ್ನವಾಗಿರಬಹುದು. ಅನೇಕರಿಗೆ ಕುಟುಂಬದ ಹಂಗುಗಳನ್ನು ಪೂರೈಸಲಿಕ್ಕಿರುತ್ತದೆ. (ಎಫೆಸ 5:​21–6:⁠4) ಹಿರಿಯರಿಗೆ ಮತ್ತು ಶುಶ್ರೂಷಾ ಸೇವಕರಿಗೆ ಸಭೆಯಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕಿರುತ್ತದೆ. (1 ತಿಮೊಥೆಯ 3:​1, 12, 13; ತೀತ 1:5; ಇಬ್ರಿಯ 13:⁠7) ಅನೇಕ ಕ್ರೈಸ್ತರು ರಾಜ್ಯ ಸಭಾಗೃಹಗಳನ್ನು ಕಟ್ಟುವುದರಲ್ಲಿ ಸಹಾಯಮಾಡುತ್ತಾರೆ. ಇನ್ನು ಕೆಲವರಿಗೆ, ವಾಚ್‌ ಟವರ್‌ ಸೊಸೈಟಿಯ ಬೆತೆಲ್‌ ಗೃಹಗಳಲ್ಲೊಂದರಲ್ಲಿ ಸ್ವಯಂಸೇವಕರಾಗಿ ಕೆಲಸಮಾಡುವ ಅಪೂರ್ವ ಸುಯೋಗವಿದೆ. ಆದರೂ, ಎಲ್ಲ ಕ್ರೈಸ್ತ ಶುಶ್ರೂಷಕರು ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಾರೆ. ಸುವಾರ್ತೆಯನ್ನು ಸಾರುವ ವಿಷಯದಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಈ ಕೆಲಸದಲ್ಲಿ ಭಾಗವಹಿಸುವುದೇ, ಒಬ್ಬ ನಿಜ ಕ್ರೈಸ್ತ ಶುಶ್ರೂಷಕನೋಪಾದಿ ಒಬ್ಬನನ್ನು ಸಾರ್ವಜನಿಕವಾಗಿ ಗುರುತಿಸುತ್ತದೆ.

ಒಬ್ಬ ಕ್ರೈಸ್ತ ಶುಶ್ರೂಷಕನ ಮನೋಭಾವ

19, 20. ಯಾವ ಮನೋಭಾವವನ್ನು ಕ್ರೈಸ್ತ ಶುಶ್ರೂಷಕರು ಬೆಳೆಸಿಕೊಳ್ಳಬೇಕು?

19 ಕ್ರೈಸ್ತ ಶುಶ್ರೂಷಕರಲ್ಲಿ ಅನೇಕರು, ವಿಶೇಷ ಗೌರವ ಹಾಗೂ “ರೆವರೆಂಡ್‌” ಮತ್ತು “ಪಾದ್ರಿ” ಎಂಬ ಬಿರುದುಗಳನ್ನು ಪಡೆದುಕೊಳ್ಳಲು ಇಷ್ಟಪಡುತ್ತಾರೆ. ಆದರೆ, ಯೆಹೋವನು ಮಾತ್ರ ಪೂಜ್ಯಭಾವನೆಗೆ ಅರ್ಹನಾಗಿದ್ದಾನೆ ಎಂಬುದು ಒಬ್ಬ ಕ್ರೈಸ್ತ ಶುಶ್ರೂಷಕನಿಗೆ ತಿಳಿದಿದೆ. (1 ತಿಮೊಥೆಯ 2:​9, 10) ಯಾವ ಕ್ರೈಸ್ತ ಶುಶ್ರೂಷಕನೂ ಅಂತಹ ಉಚ್ಚ ಗೌರವವನ್ನು ಬಯಸುವುದಿಲ್ಲ ಅಥವಾ ವಿಶೇಷ ಬಿರುದುಗಳನ್ನು ಪಡೆದುಕೊಳ್ಳುವ ಆಕಾಂಕ್ಷೆಯನ್ನು ವ್ಯಕ್ತಪಡಿಸುವುದಿಲ್ಲ. (ಮತ್ತಾಯ 23:​8-12) ಡೀಆಕೋನೀಅ ಎಂಬ ಶಬ್ದದ ಮೂಲ ಅರ್ಥವು “ಸೇವೆ” ಎಂದಾಗಿದೆ ಎಂಬುದು ಅವನಿಗೆ ತಿಳಿದಿದೆ. ಇದಕ್ಕೆ ಸಂಬಂಧಿಸಿರುವ ಕ್ರಿಯಾಪದವು, ಬೈಬಲಿನಲ್ಲಿ ಕೆಲವೊಮ್ಮೆ ಪರಿಚಾರಕನ ಕೆಲಸಮಾಡುವಂತಹ ವೈಯಕ್ತಿಕ ಸೇವೆಯನ್ನು ಸೂಚಿಸಲಿಕ್ಕಾಗಿ ಸಹ ಉಪಯೋಗಿಸಲ್ಪಟ್ಟಿದೆ. (ಲೂಕ 4:39; 17:8; ಯೋಹಾನ 2:⁠5) ಕ್ರೈಸ್ತ ಶುಶ್ರೂಷೆಯ ವಿಷಯದಲ್ಲಿ ಈ ಶಬ್ದದ ಅರ್ಥವು ಇನ್ನೂ ಉನ್ನತ ಮಟ್ಟದ್ದಾಗಿರುವುದಾದರೂ, ಒಬ್ಬ ಡೀಆಕೋನೋಸ್‌ ಸೇವಕನೇ ಆಗಿದ್ದಾನೆ.

20 ಆದುದರಿಂದ, ತಾನು ತುಂಬ ಪ್ರಾಮುಖ್ಯ ವ್ಯಕ್ತಿ ಎಂದು ಭಾವಿಸಲು ಯಾವುದೇ ಕಾರಣವಿಲ್ಲ. ನಿಜವಾದ ಕ್ರೈಸ್ತ ಶುಶ್ರೂಷಕರು, ಅದರಲ್ಲೂ ಸಭೆಯಲ್ಲಿ ವಿಶೇಷ ಜವಾಬ್ದಾರಿಗಳನ್ನು ಹೊಂದಿರುವವರು, ದೀನ ಮನೋಭಾವವುಳ್ಳ ಸೇವಕರಾಗಿದ್ದಾರೆ. ಈ ವಿಷಯದಲ್ಲಿ ಯೇಸು ಹೇಳಿದ್ದು: “ಆದರೆ ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು.” (ಮತ್ತಾಯ 20:​26, 27) ಯೋಗ್ಯ ಮನೋಭಾವವನ್ನು ಬೆಳೆಸಿಕೊಳ್ಳುವ ವಿಧವನ್ನು ತನ್ನ ಶಿಷ್ಯರಿಗೆ ತೋರಿಸುತ್ತಿರುವಾಗ, ಯೇಸು ಅವರ ಪಾದಗಳನ್ನು ತೊಳೆದನು. ಅಂದರೆ ಒಬ್ಬ ಆಳಿನ ಕೆಲಸವನ್ನು ಮಾಡಿದನು. (ಯೋಹಾನ 13:​1-15) ಎಂತಹ ದೀನ ಸೇವೆ ಇದಾಗಿತ್ತು! ಆದುದರಿಂದ, ಕ್ರೈಸ್ತ ಶುಶ್ರೂಷಕರು ದೀನಭಾವದಿಂದ ಯೆಹೋವ ದೇವರ ಹಾಗೂ ಯೇಸು ಕ್ರಿಸ್ತನ ಸೇವೆಯನ್ನು ಮಾಡುತ್ತಾರೆ. (2 ಕೊರಿಂಥ 6:4; 11:23) ಒಬ್ಬರು ಇನ್ನೊಬ್ಬರ ಸೇವೆಮಾಡುತ್ತಿರುವಾಗ ಅವರು ದೀನಮನಸ್ಸನ್ನು ತೋರಿಸುತ್ತಾರೆ. ಮತ್ತು ಅವರು ಸುವಾರ್ತೆಯನ್ನು ಸಾರುವಾಗ, ಅವಿಶ್ವಾಸಿಗಳಾಗಿರುವ ತಮ್ಮ ನೆರೆಹೊರೆಯವರ ಸೇವೆಯನ್ನು ನಿಸ್ವಾರ್ಥ ಮನೋಭಾವದಿಂದ ಮಾಡುತ್ತಾರೆ.​—⁠ರೋಮಾಪುರ 1:​14, 15; ಎಫೆಸ 3:​1-7.

ಶುಶ್ರೂಷೆಯಲ್ಲಿ ತಾಳಿಕೊಳ್ಳಿರಿ

21. ಶುಶ್ರೂಷೆಯಲ್ಲಿ ತಾಳ್ಮೆಯನ್ನು ತೋರಿಸಿದ್ದಕ್ಕಾಗಿ ಪೌಲನಿಗೆ ಯಾವ ಪ್ರತಿಫಲ ಸಿಕ್ಕಿತು?

21 ಪೌಲನ ವಿಷಯದಲ್ಲಿಯಾದರೋ, ಶುಶ್ರೂಷೆಯು ತುಂಬ ತಾಳ್ಮೆಯನ್ನು ಅಗತ್ಯಪಡಿಸಿತು. ಕೊಲೊಸ್ಸೆಯವರಿಗೆ ಸುವಾರ್ತೆಯನ್ನು ಸಾರಲಿಕ್ಕಾಗಿ ತುಂಬ ಕಷ್ಟಪಟ್ಟೆನೆಂದು ಅವನು ಹೇಳಿದನು. (ಕೊಲೊಸ್ಸೆ 1:​24, 25) ಆದರೂ, ಅವನು ತಾಳ್ಮೆಯನ್ನು ತೋರಿಸಿದ್ದರಿಂದ, ಅನೇಕರು ಸುವಾರ್ತೆಯನ್ನು ಸ್ವೀಕರಿಸಿದರು ಮತ್ತು ಶುಶ್ರೂಷಕರಾದರು. ನಂತರ ದೇವರು ಅವರನ್ನು ಪುತ್ರರಾಗಿ ಮತ್ತು ಯೇಸು ಕ್ರಿಸ್ತನ ಸಹೋದರರಾಗಿ ಅಂಗೀಕರಿಸಿದನು. ಹಾಗೂ ಯೇಸು ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆತ್ಮಜೀವಿಗಳಾಗುವ ಪ್ರತೀಕ್ಷೆಯು ಅವರಿಗೆ ಕೊಡಲ್ಪಟ್ಟಿತು. ತಾಳ್ಮೆಯನ್ನು ತೋರಿಸಿದ್ದಕ್ಕಾಗಿ ಎಂತಹ ಮಹಾ ಪ್ರತಿಫಲ ಸಿಕ್ಕಿತು!

22, 23. (ಎ) ಇಂದು ಕ್ರೈಸ್ತ ಶುಶ್ರೂಷಕರಿಗೆ ತಾಳ್ಮೆಯ ಅಗತ್ಯವಿದೆ ಏಕೆ? (ಬಿ) ಕ್ರೈಸ್ತ ತಾಳ್ಮೆಯಿಂದ ಯಾವ ಅದ್ಭುತಕರ ಫಲವು ಸಿಗುತ್ತದೆ?

22 ಇಂದು, ನಿಜವಾಗಿಯೂ ದೇವರ ಶುಶ್ರೂಷಕರಾಗಿರುವವರಿಗೆ ತಾಳ್ಮೆಯು ಅತ್ಯಗತ್ಯವಾಗಿದೆ. ಅಸ್ವಸ್ಥತೆ ಅಥವಾ ವೃದ್ಧಾಪ್ಯದ ಕಾರಣಗಳಿಂದ ಅನೇಕರು ದಿನಾಲೂ ಕಷ್ಟಪಡುತ್ತಾರೆ. ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸಲು ತುಂಬ ಶ್ರಮಿಸುತ್ತಾರೆ. ಮತ್ತು ಅವರಲ್ಲಿ ಅನೇಕರು ಒಬ್ಬ ಸಂಗಾತಿಯಿಲ್ಲದೆ ಒಂಟಿಯಾಗಿಯೇ ಇದನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ವ್ಯಾಸಂಗಮಾಡುತ್ತಿರುವ ಮಕ್ಕಳು, ತಮ್ಮ ಸುತ್ತಲೂ ಇರುವ ಕೆಟ್ಟ ಪ್ರಭಾವಗಳನ್ನು ಧೈರ್ಯದಿಂದ ಪ್ರತಿರೋಧಿಸುತ್ತಾರೆ. ಅನೇಕ ಕ್ರೈಸ್ತರು ಗಂಭೀರವಾದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಮತ್ತು “ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಸಮಯಗಳಲ್ಲಿ” (NW) ಜೀವಿಸುತ್ತಿರುವುದರಿಂದ, ಇನ್ನು ಕೆಲವರು ಹಿಂಸೆಯನ್ನು ಅಥವಾ ತೊಂದರೆಯನ್ನು ಅನುಭವಿಸುತ್ತಾರೆ. (2 ತಿಮೊಥೆಯ 3:⁠1) ಹೌದು, ಇಂದು ಯೆಹೋವನ ಸುಮಾರು 60 ಲಕ್ಷ ಶುಶ್ರೂಷಕರು, ಅಪೊಸ್ತಲ ಪೌಲನೊಂದಿಗೆ ಈ ಮಾತುಗಳನ್ನು ಹೇಳಬಲ್ಲರು: “ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು [“ಶುಶ್ರೂಷಕರೆಂದು,” NW] ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.” (2 ಕೊರಿಂಥ 6:⁠4) ಕ್ರೈಸ್ತ ಶುಶ್ರೂಷಕರು ತಮ್ಮ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಅವರ ತಾಳ್ಮೆಯ ವಿಷಯದಲ್ಲಿ ಅವರು ಖಂಡಿತವಾಗಿಯೂ ಪ್ರಶಂಸಾರ್ಹರಾಗಿದ್ದಾರೆ.

23 ಅಷ್ಟುಮಾತ್ರವಲ್ಲ, ಪೌಲನ ವಿಷಯದಲ್ಲಿ ಸತ್ಯವಾಗಿದ್ದಂತೆ, ತಾಳ್ಮೆಯು ಅದ್ಭುತಕರ ಫಲಗಳನ್ನು ಫಲಿಸುವುದು. ತಾಳ್ಮೆಯನ್ನು ತೋರಿಸುವ ಮೂಲಕ ನಾವು ಯೆಹೋವನೊಂದಿಗಿನ ನಮ್ಮ ಆಪ್ತ ಸಂಬಂಧವನ್ನು ಕಾಪಾಡಿಕೊಳ್ಳುತ್ತೇವೆ ಮತ್ತು ಆತನ ಮನಸ್ಸನ್ನು ಸಂತೋಷಪಡಿಸುತ್ತೇವೆ. (ಜ್ಞಾನೋಕ್ತಿ 27:11) ತಾಳ್ಮೆಯ ಮೂಲಕ ನಾವು ನಮ್ಮ ನಂಬಿಕೆಯನ್ನು ಬಲಗೊಳಿಸುತ್ತೇವೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಮುಂದುವರಿಸುತ್ತೇವೆ. ಇದರಿಂದ ನಮ್ಮ ಕ್ರೈಸ್ತ ಸಹೋದರರ ಬಳಗವೂ ದೊಡ್ಡದಾಗುತ್ತಾ ಹೋಗುತ್ತದೆ. (1 ತಿಮೊಥೆಯ 4:16) ಈ ಕಡೇ ದಿವಸಗಳಲ್ಲಿ ಯೆಹೋವನು ತನ್ನ ಶುಶ್ರೂಷಕರನ್ನು ಪೋಷಿಸಿದ್ದಾನೆ ಮತ್ತು ಅವರ ಶುಶ್ರೂಷೆಯನ್ನು ಆಶೀರ್ವದಿಸಿದ್ದಾನೆ. ಇದರ ಫಲಿತಾಂಶವಾಗಿ, 1,44,000 ಮಂದಿಯಲ್ಲಿ ಉಳಿಕೆಯವರು ಒಟ್ಟುಗೂಡಿಸಲ್ಪಟ್ಟಿದ್ದಾರೆ; ಮತ್ತು ಲಕ್ಷಾಂತರ ಸಂಖ್ಯೆಯಲ್ಲಿರುವ ಇತರರು, ಭೂಪ್ರಮೋದವನದಲ್ಲಿ ನಿತ್ಯಜೀವವನ್ನು ಆನಂದಿಸುವ ದೃಢ ನಿರೀಕ್ಷೆಯುಳ್ಳವರಾಗಿದ್ದಾರೆ. (ಲೂಕ 23:43; ಪ್ರಕಟನೆ 14:⁠1) ಕ್ರೈಸ್ತ ಶುಶ್ರೂಷೆಯು, ಯೆಹೋವನ ಕರುಣೆಯ ಒಂದು ಅಭಿವ್ಯಕ್ತಿಯಾಗಿದೆ ಎಂಬುದು ನಿಜ. (2 ಕೊರಿಂಥ 4:⁠1) ನಾವೆಲ್ಲರೂ ಕ್ರೈಸ್ತ ಶುಶ್ರೂಷೆಯನ್ನು ಅಮೂಲ್ಯವಾದದ್ದಾಗಿ ಪರಿಗಣಿಸೋಣ ಮತ್ತು ಅದರ ಫಲವು ಸದಾಕಾಲಕ್ಕೂ ಉಳಿಯುವುದು ಎಂಬುದಕ್ಕೆ ಕೃತಜ್ಞರಾಗಿರೋಣ.​—⁠1 ಯೋಹಾನ 2:⁠17.

[ಪಾದಟಿಪ್ಪಣಿಗಳು]

^ ಪ್ಯಾರ. 3 ಡೀಆಕೋನೋಸ್‌ ಎಂಬ ಗ್ರೀಕ್‌ ಶಬ್ದವು, “ಡೀಕನ್‌” ಎಂಬ ಶಬ್ದದ ಮೂಲರೂಪವಾಗಿದೆ. ಡೀಕನ್‌ ಅಂದರೆ ಚರ್ಚಿನ ಒಬ್ಬ ಅಧಿಕಾರಿಯಾಗಿದ್ದಾನೆ. ಸ್ತ್ರೀಯರು ಡೀಕನ್‌ಗಳಾಗಿ ಸೇವೆಯನ್ನು ಸಲ್ಲಿಸಸಾಧ್ಯವಿರುವಂತಹ ಚರ್ಚುಗಳಲ್ಲಿ, ಅವರನ್ನು ಮಹಿಳಾ ಡೀಕನ್‌ಗಳೆಂದು ಕರೆಯಬಹುದು.

^ ಪ್ಯಾರ. 15 ರೋಮಾಪುರ 12:1 ವಿಶೇಷವಾಗಿ ಅಭಿಷಿಕ್ತ ಕ್ರೈಸ್ತರಿಗೆ ಅನ್ವಯವಾಗುತ್ತದಾದರೂ, ಆ ಮೂಲತತ್ವವು “ಬೇರೆ ಕುರಿ”ಗಳಿಗೂ ಅನ್ವಯಿಸುತ್ತದೆ. (ಯೋಹಾನ 10:16) ಇವರು ‘ಯೆಹೋವನನ್ನು ಅವಲಂಬಿಸಿ ಸೇವಿಸಿ ಆತನ ನಾಮವನ್ನು ಪ್ರೀತಿಸಿ ಆತನಿಗೆ ದಾಸರಾಗುತ್ತಾರೆ.’​—⁠ಯೆಶಾಯ 56:⁠6.

ನೀವು ವಿವರಿಸಬಲ್ಲಿರೋ?

• ಪ್ರಥಮ ಶತಮಾನದ ಎಲ್ಲ ಕ್ರೈಸ್ತರು ಯಾವ ಜವಾಬ್ದಾರಿಯಲ್ಲಿ ಪಾಲಿಗರಾಗಿದ್ದರು?

• ಯಾವಾಗ ಮತ್ತು ಹೇಗೆ ಒಬ್ಬ ಕ್ರೈಸ್ತ ಶುಶ್ರೂಷಕನು ನೇಮಿಸಲ್ಪಡುತ್ತಾನೆ?

• ಒಬ್ಬ ಕ್ರೈಸ್ತ ಶುಶ್ರೂಷಕನು ಯಾವ ಮನೋಭಾವವನ್ನು ಬೆಳೆಸಿಕೊಳ್ಳಬೇಕು?

• ಕಷ್ಟತೊಂದರೆಗಳನ್ನು ಎದುರಿಸುವಾಗಲೂ, ಒಬ್ಬ ಕ್ರೈಸ್ತ ಶುಶ್ರೂಷಕನು ಏಕೆ ತಾಳ್ಮೆಯನ್ನು ತೋರಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 16, 17ರಲ್ಲಿರುವ ಚಿತ್ರಗಳು]

ಚಿಕ್ಕಂದಿನಿಂದಲೂ ತಿಮೊಥೆಯನಿಗೆ ದೇವರ ವಾಕ್ಯವು ಕಲಿಸಲ್ಪಟ್ಟಿತ್ತು. ಅವನು ದೀಕ್ಷಾಸ್ನಾನ ಪಡೆದುಕೊಂಡಾಗ, ಅವನೊಬ್ಬ ನೇಮಿತ ಶುಶ್ರೂಷಕನಾದನು

[ಪುಟ 18ರಲ್ಲಿರುವ ಚಿತ್ರ]

ದೀಕ್ಷಾಸ್ನಾನವು ದೇವರಿಗೆ ಮಾಡಿಕೊಳ್ಳುವ ಸಮರ್ಪಣೆಯನ್ನು ಸಂಕೇತಿಸುತ್ತದೆ ಮತ್ತು ಶುಶ್ರೂಷಕನೋಪಾದಿ ಒಬ್ಬನ ನೇಮಕವನ್ನು ಗುರುತಿಸುತ್ತದೆ

[ಪುಟ 20ರಲ್ಲಿರುವ ಚಿತ್ರ]

ಕ್ರೈಸ್ತ ಶುಶ್ರೂಷಕರು ಮನಃಪೂರ್ವಕವಾಗಿ ಸೇವೆಮಾಡಲು ಸಿದ್ಧರಿರುತ್ತಾರೆ