ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರ ಸೇವೆಮಾಡುವುದರಲ್ಲಿ ಕ್ರೈಸ್ತರು ಸಂತೋಷವನ್ನು ಕಂಡುಕೊಳ್ಳುತ್ತಾರೆ

ಇತರರ ಸೇವೆಮಾಡುವುದರಲ್ಲಿ ಕ್ರೈಸ್ತರು ಸಂತೋಷವನ್ನು ಕಂಡುಕೊಳ್ಳುತ್ತಾರೆ

ಇತರರ ಸೇವೆಮಾಡುವುದರಲ್ಲಿ ಕ್ರೈಸ್ತರು ಸಂತೋಷವನ್ನು ಕಂಡುಕೊಳ್ಳುತ್ತಾರೆ

“ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ.”​—⁠ಅ. ಕೃತ್ಯಗಳು 20:​35, NW.

1. ಇಂದು ಯಾವ ಕೆಟ್ಟ ಮನೋಭಾವವು ವ್ಯಾಪಕವಾಗಿ ಹಬ್ಬಿದೆ, ಮತ್ತು ಅದು ಏಕೆ ಹಾನಿಕರವಾದದ್ದಾಗಿದೆ?

ಇಸವಿ 1900ರ ಕೊನೆಯ ದಶಕಗಳಲ್ಲಿ, “ಅಹಂವಾದ” ಎಂಬ ಶಬ್ದವು ಪದೇ ಪದೇ ಕೇಳಿಬಂತು. ಅದರ ಅರ್ಥ “ತಾನು ಮೊದಲು” ಎಂದಾಗಿದೆ. ಮತ್ತು ಇದು ಸ್ವಾರ್ಥ ಹಾಗೂ ಲೋಭವು ಒಟ್ಟುಗೂಡಿರುವಂತಹ ಒಂದು ಮನೋಭಾವಕ್ಕೆ ಸೂಚಿತವಾಗಿದೆ. ಇಂತಹ ಮನೋಭಾವವಿರುವ ವ್ಯಕ್ತಿಯು ಇತರರ ಬಗ್ಗೆ ಚಿಂತಿಸುವುದೇ ಇಲ್ಲ. 2000 ಇಸವಿಯಲ್ಲಿಯೂ ಅಹಂವಾದವು ಕೊನೆಗೊಂಡಿಲ್ಲ ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. ಏಕೆಂದರೆ, “ಅದರಿಂದ ನನಗೇನು ಲಾಭ?” ಅಥವಾ “ಇದರಿಂದ ನನಗೇನು ಸಿಗುತ್ತದೆ?” ಎಂಬಂಥ ಪ್ರಶ್ನೆಗಳನ್ನು ನೀವು ಎಷ್ಟು ಸಲ ಕೇಳಿಸಿಕೊಂಡಿದ್ದೀರಿ? ಅಂತಹ ಸ್ವಾರ್ಥ ಮನೋಭಾವವು ಖಂಡಿತವಾಗಿಯೂ ಸಂತೋಷವನ್ನು ಹೆಚ್ಚಿಸುವುದಿಲ್ಲ. ಯೇಸು ಹೇಳಿದಂತಹ ಮೂಲತತ್ವಕ್ಕೆ ಇದು ತದ್ವಿರುದ್ಧವಾದದ್ದಾಗಿದೆ. ಅವನು ಹೇಳಿದ್ದು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ.”​—⁠ಅ. ಕೃತ್ಯಗಳು 20:​35, NW.

2. ಕೊಡುವುದರಿಂದ ಹೆಚ್ಚಿನ ಸಂತೋಷ ಸಿಗುತ್ತದೆ ಎಂದು ಏಕೆ ಹೇಳಬಹುದು?

2 ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ ಎಂಬುದು ಸತ್ಯವೋ? ಹೌದು. ಯೆಹೋವ ದೇವರ ಕುರಿತು ಆಲೋಚಿಸಿರಿ. ಆತನ ಬಳಿ ‘ಜೀವದ ಬುಗ್ಗೆಯಿದೆ.’ (ಕೀರ್ತನೆ 36:⁠9) ನಮ್ಮನ್ನು ಆನಂದಮಯವಾಗಿಯೂ ಉತ್ಪನ್ನದಾಯಕವಾಗಿಯೂ ಮಾಡಲು ಅಗತ್ಯವಿರುವ ಎಲ್ಲವನ್ನೂ ಆತನು ನಮಗೆ ಒದಗಿಸುತ್ತಾನೆ. ವಾಸ್ತವದಲ್ಲಿ, ಆತನೇ “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರ”ಗಳ ಮೂಲನಾಗಿದ್ದಾನೆ. (ಯಾಕೋಬ 1:17) “ಸಂತೋಷಭರಿತ ದೇವರಾಗಿರುವ” (NW) ಯೆಹೋವನು ನಮ್ಮ ಆವಶ್ಯಕತೆಗಳನ್ನು ಸತತವಾಗಿ ಪೂರೈಸುತ್ತಾನೆ. (1 ತಿಮೊಥೆಯ 1:11) ತನ್ನ ಮಾನವ ಸೃಷ್ಟಿಯನ್ನು ಆತನು ತುಂಬ ಪ್ರೀತಿಸುತ್ತಾನೆ. ಆದುದರಿಂದಲೇ ಆತನು ಅವರಿಗೆ ಅಗತ್ಯವಿರುವುದನ್ನೆಲ್ಲ ಒದಗಿಸುತ್ತಾನೆ. (ಯೋಹಾನ 3:16) ಒಂದು ಮಾನವ ಕುಟುಂಬವನ್ನು ಸಹ ಪರಿಗಣಿಸಿರಿ. ನೀವು ಒಬ್ಬ ಹೆತ್ತವರಾಗಿರುವಲ್ಲಿ, ಒಂದು ಮಗುವನ್ನು ಬೆಳೆಸಲು ಎಷ್ಟು ತ್ಯಾಗಗಳನ್ನು ಮಾಡಬೇಕು, ಎಷ್ಟನ್ನೆಲ್ಲ ಕೊಡಬೇಕು ಎಂಬುದು ನಿಮಗೆ ಗೊತ್ತಿದೆ. ಮತ್ತು ನೀವು ಮಾಡುವಂತಹ ತ್ಯಾಗಗಳು, ಅನೇಕ ವರ್ಷಗಳ ವರೆಗೆ ನಿಮ್ಮ ಮಗುವಿಗೆ ಗೊತ್ತೇ ಇರುವುದಿಲ್ಲ. ನಿಮ್ಮ ತ್ಯಾಗಗಳನ್ನು ಅದು ಅಮೂಲ್ಯವಾಗಿ ಪರಿಗಣಿಸುವುದೇ ಇಲ್ಲ. ಆದರೂ, ನಿಮ್ಮ ನಿಸ್ವಾರ್ಥ ತ್ಯಾಗಗಳ ಫಲವಾಗಿ ಮಗುವು ಚೆನ್ನಾಗಿ ಬೆಳೆಯುತ್ತಿರುವುದನ್ನು ನೋಡುವಾಗ ನಿಮಗೆ ತುಂಬ ಸಂತೋಷವಾಗುತ್ತದೆ. ಏಕೆ? ಏಕೆಂದರೆ ನೀವು ಮಗುವನ್ನು ಪ್ರೀತಿಸುತ್ತೀರಿ.

3. ಯೆಹೋವನ ಹಾಗೂ ನಮ್ಮ ಜೊತೆ ವಿಶ್ವಾಸಿಗಳ ಸೇವೆಮಾಡುವುದು ಸಂತೋಷಕರ ಸಂಗತಿಯಾಗಿದೆ ಏಕೆ?

3 ತದ್ರೀತಿಯಲ್ಲಿ, ಸತ್ಯಾರಾಧನೆಯ ವಿಶೇಷತೆಯು ಸಹ ಕೊಡುವಿಕೆಯೇ ಆಗಿದೆ. ಮತ್ತು ಈ ಕೊಡುವಿಕೆಯು ಪ್ರೀತಿಯ ಮೇಲಾಧಾರಿತವಾಗಿದೆ. ನಾವು ಯೆಹೋವನನ್ನು ಹಾಗೂ ನಮ್ಮ ಜೊತೆ ವಿಶ್ವಾಸಿಗಳನ್ನು ಪ್ರೀತಿಸುವುದರಿಂದ, ಅವರ ಸೇವೆಮಾಡುವುದು ಮತ್ತು ಅವರಿಗೋಸ್ಕರ ನಮ್ಮನ್ನು ನೀಡಿಕೊಳ್ಳುವುದು ಆನಂದಕರ ಸಂಗತಿಯಾಗಿದೆ. (ಮತ್ತಾಯ 22:37-39) ಸ್ವಾರ್ಥ ಉದ್ದೇಶಗಳಿಂದ ದೇವರನ್ನು ಆರಾಧಿಸುವವರಿಗೆ ಸಂತೋಷವು ಸಿಗುವುದೇ ಇಲ್ಲ. ಆದರೆ, ನಿಸ್ವಾರ್ಥ ಮನೋಭಾವದಿಂದ ಸೇವೆಮಾಡುವವರು ಬಹಳಷ್ಟು ಸಂತೋಷವನ್ನು ಕಂಡುಕೊಳ್ಳುವರು. ಏಕೆಂದರೆ ತಾವು ಏನನ್ನು ಪಡೆದುಕೊಳ್ಳಲಿದ್ದೇವೆ ಎಂಬುದಕ್ಕಿಂತಲೂ ಹೆಚ್ಚಾಗಿ ತಾವು ಏನನ್ನು ಕೊಡಸಾಧ್ಯವಿದೆ ಎಂಬ ವಿಷಯದಲ್ಲಿ ಅವರು ಹೆಚ್ಚು ಚಿಂತಿತರಾಗಿರುತ್ತಾರೆ. ನಮ್ಮ ಆರಾಧನೆಗೆ ಸಂಬಂಧಿಸಿದ ಕೆಲವು ಬೈಬಲ್‌ ಶಬ್ದಗಳು ಶಾಸ್ತ್ರವಚನಗಳಲ್ಲಿ ಹೇಗೆ ಉಪಯೋಗಿಸಲ್ಪಟ್ಟಿವೆ ಎಂಬುದನ್ನು ಗಮನಿಸುವಲ್ಲಿ, ಈ ಸತ್ಯವು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಇಂತಹ ಶಬ್ದಗಳಲ್ಲಿ ಮೂರು ಶಬ್ದಗಳನ್ನು ಈ ಲೇಖನದಲ್ಲಿ ಹಾಗೂ ಮುಂದಿನ ಲೇಖನದಲ್ಲಿ ನಾವು ಚರ್ಚಿಸುವೆವು.

ಯೇಸುವಿನ ಸಾರ್ವಜನಿಕ ಸೇವೆ

4. ಕ್ರೈಸ್ತಪ್ರಪಂಚದಲ್ಲಿ “ಸಾರ್ವಜನಿಕ ಸೇವೆ”ಯ ವೈಶಿಷ್ಟ್ಯವೇನು?

4 ಮೂಲ ಗ್ರೀಕ್‌ ಭಾಷೆಯಲ್ಲಿ, ಆರಾಧನೆಗೆ ಸಂಬಂಧಿಸಿದ ಮೊದಲ ಪ್ರಾಮುಖ್ಯ ಶಬ್ದವು ಲೀಟೂರೈಯೀಅ ಎಂಬುದಾಗಿದೆ. ಮತ್ತು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲಿನಲ್ಲಿ ಈ ಶಬ್ದವನ್ನು “ಸಾರ್ವಜನಿಕ ಸೇವೆ” ಎಂದು ಭಾಷಾಂತರಿಸಲಾಗಿದೆ. ಕ್ರೈಸ್ತಪ್ರಪಂಚದಲ್ಲಿ ಲೀಟೂರೈಯೀಅ ಎಂಬ ಶಬ್ದದಿಂದ “ಲಿಟರ್ಜಿ” ಎಂಬ ಶಬ್ದವು ಉಂಟಾಗಿದೆ. * ಆದರೂ, ಕ್ರೈಸ್ತಪ್ರಪಂಚದ ಸಂಪ್ರದಾಯಬದ್ಧ ಆರಾಧನಾ ವಿಧಾನಗಳು ನಿಜವಾಗಿಯೂ ಪ್ರಯೋಜನದಾಯಕವಾಗಿರುವ ಸಾರ್ವಜನಿಕ ಸೇವೆಯಾಗಿರುವುದಿಲ್ಲ.

5, 6. (ಎ) ಇಸ್ರಾಯೇಲ್‌ನಲ್ಲಿ ಯಾವ ಸಾರ್ವಜನಿಕ ಸೇವೆಯು ನಡೆಸಲ್ಪಡುತ್ತಿತ್ತು, ಮತ್ತು ಇದರಿಂದ ಯಾವ ಪ್ರಯೋಜನಗಳು ಸಿಗುತ್ತಿದ್ದವು? (ಬಿ) ಇಸ್ರಾಯೇಲ್‌ನಲ್ಲಿ ನಡೆಸಲ್ಪಡುತ್ತಿದ್ದ ಸೇವೆಗೆ ಬದಲಾಗಿ, ಇನ್ನೂ ಹೆಚ್ಚು ಮಹತ್ವಪೂರ್ಣವಾದ ಯಾವ ಸಾರ್ವಜನಿಕ ಸೇವೆಯು ಆರಂಭವಾಯಿತು, ಮತ್ತು ಏಕೆ?

5 ಇಸ್ರಾಯೇಲ್ಯ ಯಾಜಕರ ವಿಷಯದಲ್ಲಿ ಅಪೊಸ್ತಲ ಪೌಲನು ಲೀಟೂರೈಯೀಅ ಶಬ್ದಕ್ಕೆ ಸಂಬಂಧಿಸಿದ ಒಂದು ಗ್ರೀಕ್‌ ಪದವನ್ನು ಉಪಯೋಗಿಸಿದನು. ಅವನು ಹೇಳಿದ್ದು: “ಯಾಜಕರೆಲ್ಲರು ದಿನಾಲು ಸೇವೆ [“ಸಾರ್ವಜನಿಕ ಸೇವೆ,” NW; (ಇದು ಲೀಟೂರೈಯೀಅ ಶಬ್ದದ ಒಂದು ರೂಪವಾಗಿದೆ)] ಮಾಡುತ್ತಾ ಎಂದಿಗೂ ಪಾಪನಿವಾರಣೆ ಮಾಡಲಾರದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಾ ನಿಂತುಕೊಂಡಿರುವರು.” (ಇಬ್ರಿಯ 10:11) ಲೇವಿಯ ಯಾಜಕರು ಇಸ್ರಾಯೇಲಿನಲ್ಲಿ ತುಂಬ ಅಮೂಲ್ಯವಾದ ಸಾರ್ವಜನಿಕ ಸೇವೆಯನ್ನು ಮಾಡುತ್ತಿದ್ದರು. ಅವರು ದೇವರ ಧರ್ಮಶಾಸ್ತ್ರವನ್ನು ಕಲಿಸುತ್ತಿದ್ದರು ಮತ್ತು ಜನರ ಪಾಪಗಳನ್ನು ನಿವಾರಿಸುವ ಯಜ್ಞಗಳನ್ನು ಅರ್ಪಿಸುತ್ತಿದ್ದರು. (2 ಪೂರ್ವಕಾಲವೃತ್ತಾಂತ 15:3; ಮಲಾಕಿಯ 2:⁠7) ಯಾಜಕರು ಮತ್ತು ಜನರು ಯೆಹೋವನ ಧರ್ಮಶಾಸ್ತ್ರಕ್ಕನುಸಾರ ನಡೆಯುತ್ತಿದ್ದಾಗ, ಇಸ್ರಾಯೇಲ್‌ ಜನಾಂಗಕ್ಕೆ ಹರ್ಷಿಸಲು ಕಾರಣಗಳಿದ್ದವು.​—⁠ಧರ್ಮೋಪದೇಶಕಾಂಡ 16:⁠15.

6 ಧರ್ಮಶಾಸ್ತ್ರದ ಕೆಳಗೆ ಸಾರ್ವಜನಿಕ ಸೇವೆಯನ್ನು ಮಾಡುವುದು ಇಸ್ರಾಯೇಲ್ಯ ಯಾಜಕರಿಗೆ ನಿಜವಾಗಿಯೂ ಒಂದು ಅಮೂಲ್ಯ ಸುಯೋಗವಾಗಿತ್ತು. ಆದರೆ ಅಪನಂಬಿಗಸ್ತಿಕೆಯ ಕಾರಣದಿಂದ ಇಸ್ರಾಯೇಲ್‌ ಜನಾಂಗವು ತಿರಸ್ಕರಿಸಲ್ಪಟ್ಟಾಗ, ಆ ಯಾಜಕರ ಸೇವೆಯು ಅದರ ಮೌಲ್ಯವನ್ನು ಕಳೆದುಕೊಂಡಿತು. (ಮತ್ತಾಯ 21:43) ಆದರೂ, ಇದಕ್ಕಿಂತಲೂ ಹೆಚ್ಚು ಮಹತ್ವಪೂರ್ಣವಾದ ಏರ್ಪಾಡನ್ನು ಯೆಹೋವನು ಮಾಡಿದನು. ಅದೇನೆಂದರೆ, ಮಹಾಯಾಜಕನಾದ ಯೇಸುವಿನಿಂದ ನಡೆಸಲ್ಪಟ್ಟ ಸಾರ್ವಜನಿಕ ಸೇವೆಯೇ. ಅವನ ಕುರಿತಾಗಿ ನಾವು ಓದುವುದು: “ಆತನಾದರೋ ಸದಾಕಾಲವಿರುವದರಿಂದ ಆತನ ಯಾಜಕತ್ವವು ಮತ್ತೊಬ್ಬರಿಗೆ ಹೋಗುವಂಥದಲ್ಲ. ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.”​—⁠ಇಬ್ರಿಯ 7:​24, 25.

7. ಯೇಸುವಿನ ಸಾರ್ವಜನಿಕ ಸೇವೆಯು ಏಕೆ ಅಪೂರ್ವ ಪ್ರಯೋಜನಗಳನ್ನು ತರುತ್ತದೆ?

7 ಯಾವುದೇ ಉತ್ತರಾಧಿಕಾರಿಗಳಿಲ್ಲದೆ ಯೇಸು ಸದಾಕಾಲಕ್ಕೂ ಯಾಜಕನೋಪಾದಿ ತನ್ನ ಸೇವೆಯನ್ನು ಮುಂದುವರಿಸುತ್ತಾನೆ. ಹೀಗೆ, ಅವನು ಮಾತ್ರ ಜನರನ್ನು ಸಂಪೂರ್ಣವಾಗಿ ರಕ್ಷಿಸಬಲ್ಲನು. ಅವನು ಅಪೂರ್ವವಾದ ಈ ಸಾರ್ವಜನಿಕ ಸೇವೆಯನ್ನು ಮಾನವನಿರ್ಮಿತ ದೇವಾಲಯದಲ್ಲಿ ಮಾಡುವುದಿಲ್ಲ. ಬದಲಾಗಿ, ಸಾ.ಶ. 29ರಲ್ಲಿ ಕಾರ್ಯನಡಿಸಲು ಆರಂಭಿಸಿದಂತಹ ಯೆಹೋವನ ಸೂಚಿತರೂಪದ ದೇವಾಲಯದಲ್ಲಿ ಅವನು ಈ ಸೇವೆಯನ್ನು ಮಾಡುತ್ತಿದ್ದಾನೆ. ಇದು ಆರಾಧನೆಗಾಗಿ ಯೆಹೋವನು ಮಾಡಿರುವಂತಹ ಮಹಾ ಏರ್ಪಾಡಾಗಿದೆ. ಈಗ ಯೇಸು ಸ್ವರ್ಗದಲ್ಲಿ ಆ ದೇವಾಲಯದ ಮಹಾಪರಿಶುದ್ಧ ಸ್ಥಾನದಲ್ಲಿ ಸೇವೆಮಾಡುತ್ತಿದ್ದಾನೆ. ಅವನು “ಪವಿತ್ರಸ್ಥಾನದಲ್ಲಿ ಅಂದರೆ ಮನುಷ್ಯನು ಹಾಕದೆ ಯೆಹೋವನೇ ಹಾಕಿದ ನಿಜವಾದ ದೇವದರ್ಶನಗುಡಾರದಲ್ಲಿ ಯಾಜಕೋದ್ಯೋಗ [“ಸಾರ್ವಜನಿಕ ಸೇವೆ,” NW] ನಡಿಸುವವನಾಗಿದ್ದಾನೆ.” (ಇಬ್ರಿಯ 8:2; 9:​11, 12) ಈಗ ಯೇಸು ಉನ್ನತವಾದ ಸ್ಥಾನದಲ್ಲಿದ್ದಾನಾದರೂ, ಈಗಲೂ ಅವನು “ಒಬ್ಬ ಸಾರ್ವಜನಿಕ ಸೇವಕ”ನಾಗಿದ್ದಾನೆ. ಅವನು ತನ್ನ ಅಧಿಕಾರವನ್ನು, ತೆಗೆದುಕೊಳ್ಳಲಿಕ್ಕಾಗಿ ಅಲ್ಲ ಬದಲಾಗಿ ಕೊಡಲಿಕ್ಕಾಗಿ ಉಪಯೋಗಿಸುತ್ತಾನೆ. ಮತ್ತು ಅಂತಹ ಕೊಡುವಿಕೆಯು ಅವನಿಗೆ ಸಂತೋಷವನ್ನು ತರುತ್ತದೆ. ಇದು ‘ಅವನ ಮುಂದೆ ಇಡಲ್ಪಟ್ಟಿದ್ದ ಸಂತೋಷದ’ ಒಂದು ಭಾಗವಾಗಿದೆ. ಮತ್ತು ಅವನು ಭೂಮಿಯಲ್ಲಿದ್ದ ಸಮಯದಲ್ಲೆಲ್ಲ ತಾಳಿಕೊಳ್ಳುವಂತೆ ಇದೇ ಅವನನ್ನು ಬಲಗೊಳಿಸಿತು.​—⁠ಇಬ್ರಿಯ 12:⁠2.

8. ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಸ್ಥಾನಪಲ್ಲಟಮಾಡಲಿಕ್ಕಾಗಿ ಯೇಸು ಹೇಗೆ ಸಾರ್ವಜನಿಕ ಸೇವೆಯನ್ನು ಮಾಡಿದನು?

8 ಯೇಸುವಿನ ಸಾರ್ವಜನಿಕ ಸೇವೆಯಲ್ಲಿ ಇನ್ನೊಂದು ಅಂಶವೂ ಒಳಗೂಡಿದೆ. ಈ ವಿಷಯದಲ್ಲಿ ಪೌಲನು ಬರೆದುದು: “ಯೇಸು ಅದಕ್ಕಿಂತ ಶ್ರೇಷ್ಠವಾದ ಯಾಜಕೋದ್ಯೋಗವನ್ನು [“ಸಾರ್ವಜನಿಕ ಸೇವೆಯನ್ನು,” NW] ಹೊಂದಿದವನಾಗಿದ್ದಾನೆ; ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಉತ್ತಮವಾದ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ.” (ಇಬ್ರಿಯ 8:⁠6) ಯೆಹೋವನಿಗೂ ಇಸ್ರಾಯೇಲ್ಯರಿಗೂ ಇದ್ದ ಸಂಬಂಧದ ಮೇಲೆ ಆಧಾರಿತವಾಗಿದ್ದ ಒಡಂಬಡಿಕೆಗೆ ಯೇಸು ಮಧ್ಯಸ್ಥನಾಗಿದ್ದನು. (ವಿಮೋಚನಕಾಂಡ 19:​4, 5) ಯೇಸು ಹೊಸ ಒಡಂಬಡಿಕೆಗೂ ಮಧ್ಯಸ್ಥನಾಗಿದ್ದನು. ಈ ಒಡಂಬಡಿಕೆಯು ಒಂದು ಹೊಸ ಜನಾಂಗದ, ಅಂದರೆ ‘ದೇವರ ಇಸ್ರಾಯೇಲ್‌ನ’ ಜನನವನ್ನು ಸಾಧ್ಯಗೊಳಿಸಿತು. ಈ ಹೊಸ ಜನಾಂಗವು, ಅನೇಕ ರಾಷ್ಟ್ರಗಳಿಂದ ಬಂದ ಆತ್ಮಾಭಿಷಿಕ್ತ ಕ್ರೈಸ್ತರಿಂದ ರಚಿತವಾಗಿತ್ತು. (ಗಲಾತ್ಯ 6:​16, ಇಬ್ರಿಯ 8:​8, 13; ಪ್ರಕಟನೆ 5:​9, 10) ಅದು ಎಷ್ಟು ಅತ್ಯುತ್ತಮವಾದ ಸಾರ್ವಜನಿಕ ಸೇವೆಯಾಗಿತ್ತು! ನಾವು ಯಾರ ಮೂಲಕ ಯೆಹೋವನಿಗೆ ಸ್ವೀಕಾರಾರ್ಹವಾದ ಆರಾಧನೆಯನ್ನು ಸಲ್ಲಿಸಸಾಧ್ಯವಿದೆಯೋ ಆ ಸಾರ್ವಜನಿಕ ಸೇವಕನಾದ ಯೇಸುವಿನೊಂದಿಗೆ ಚಿರಪರಿಚಿತರಾಗಿರುವುದಕ್ಕಾಗಿ ನಾವೆಷ್ಟು ಸಂತೋಷಿತರಾಗಿದ್ದೇವೆ!​—⁠ಯೋಹಾನ 14:⁠6.

ಕ್ರೈಸ್ತರು ಸಹ ಸಾರ್ವಜನಿಕ ಸೇವೆಯನ್ನು ಮಾಡುತ್ತಾರೆ

9, 10. ಕ್ರೈಸ್ತರು ಮಾಡುವ ಕೆಲವು ರೀತಿಯ ಸಾರ್ವಜನಿಕ ಸೇವೆಗಳು ಯಾವುವು?

9 ಯೇಸುವಿನಷ್ಟು ಉಚ್ಚ ಮಟ್ಟದ ಸಾರ್ವಜನಿಕ ಸೇವೆಯನ್ನು ಬೇರೆ ಯಾವ ಮಾನವರೂ ಮಾಡುವುದಿಲ್ಲ. ಆದರೂ, ಅಭಿಷಿಕ್ತ ಕ್ರೈಸ್ತರು ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದುಕೊಳ್ಳುವಾಗ, ಅವರು ಯೇಸುವಿನ ಸಾರ್ವಜನಿಕ ಸೇವೆಯಲ್ಲಿ ಸ್ವರ್ಗೀಯ ರಾಜರು ಮತ್ತು ಯಾಜಕರೋಪಾದಿ ಅವನಿಗೆ ಸಹಾಯಮಾಡುವರು. (ಪ್ರಕಟನೆ 20:6; 22:​1-5) ಭೂಮಿಯಲ್ಲಿರುವ ಕ್ರೈಸ್ತರು ಸಹ ಸಾರ್ವಜನಿಕ ಸೇವೆಯನ್ನು ಮಾಡುತ್ತಾರೆ. ಹಾಗೂ ಆ ಸೇವೆಯಲ್ಲಿ ಅವರು ಅತ್ಯಧಿಕ ಆನಂದವನ್ನು ಕಂಡುಕೊಳ್ಳುತ್ತಾರೆ. ಉದಾಹರಣೆಗೆ, ಒಮ್ಮೆ ಪ್ಯಾಲೆಸ್ಟೈನ್‌ನಲ್ಲಿ ಆಹಾರದ ಕೊರತೆಯು ಉಂಟಾಗಿತ್ತು. ಆಗ ಅಪೊಸ್ತಲ ಪೌಲನು ಯೂರೋಪಿನಲ್ಲಿದ್ದ ಸಹೋದರರಿಂದ ಕಾಣಿಕೆಗಳನ್ನು ಸಂಗ್ರಹಿಸಿ, ಅದನ್ನು ಪ್ಯಾಲೆಸ್ಟೈನ್‌ಗೆ ಕೊಂಡೊಯ್ದನು. ಹಾಗೂ ಯೂದಾಯದಲ್ಲಿದ್ದ ಯೆಹೂದಿ ಕ್ರೈಸ್ತರ ಕೊರತೆಯನ್ನು ನೀಗಿಸಲು ಸಹಾಯಮಾಡಿದನು. ಅದು ಒಂದು ಸಾರ್ವಜನಿಕ ಸೇವೆಯಾಗಿತ್ತು. (ರೋಮಾಪುರ 15:27; 2 ಕೊರಿಂಥ 9:12) ಇಂದು, ತದ್ರೀತಿಯ ಸೇವೆಯನ್ನು ಮಾಡಲು ಕ್ರೈಸ್ತರು ತುಂಬ ಸಂತೋಷಿಸುತ್ತಾರೆ. ಆದುದರಿಂದಲೇ, ತಮ್ಮ ಸಹೋದರರು ಸಂಕಟವನ್ನು, ನೈಸರ್ಗಿಕ ವಿಪತ್ತುಗಳನ್ನು ಅಥವಾ ಇನ್ನಿತರ ಕಷ್ಟತೊಂದರೆಗಳನ್ನು ಅನುಭವಿಸುವಾಗ, ಅಗತ್ಯವಿರುವ ಸಹಾಯವನ್ನು ಒಡನೆಯೇ ನೀಡುತ್ತಾರೆ.​—⁠ಜ್ಞಾನೋಕ್ತಿ 14:⁠21.

10 ಇನ್ನೊಂದು ರೀತಿಯ ಸಾರ್ವಜನಿಕ ಸೇವೆಯ ಕುರಿತು ಸಹ ಪೌಲನು ತಿಳಿಸಿದನು. ಅವನು ಬರೆದುದು: “ನಿಮ್ಮ ನಂಬಿಕೆಯೆಂಬ ಯಜ್ಞವನ್ನು ದೇವರಿಗರ್ಪಿಸುವ ಸೇವೆಯಲ್ಲಿ [“ಸಾರ್ವಜನಿಕ ಸೇವೆಯಲ್ಲಿ,” NW] ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ನನಗೆ ಸಂತೋಷ, ನಿಮ್ಮೆಲ್ಲರ ಕೂಡ ಸಂತೋಷ.” (ಫಿಲಿಪ್ಪಿ 2:17) ಫಿಲಿಪ್ಪಿಯವರ ಪರವಾಗಿ ಪೌಲನು ಪರಿಶ್ರಮಿಸಿದ್ದು ಸಹ ಒಂದು ರೀತಿಯ ಸಾರ್ವಜನಿಕ ಸೇವೆಯಾಗಿತ್ತು. ಇದನ್ನು ಅವನು ಪ್ರೀತಿಯಿಂದಲೂ ಶ್ರದ್ಧೆಯಿಂದಲೂ ಮಾಡಿದ್ದನು. ಇಂದು ಸಹ ಅದೇ ರೀತಿಯ ಸಾರ್ವಜನಿಕ ಸೇವೆಯು ಮಾಡಲ್ಪಡುತ್ತಿದೆ. ವಿಶೇಷವಾಗಿ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನೋಪಾದಿ’ ಸೇವೆಮಾಡುತ್ತಿರುವ ಅಭಿಷಿಕ್ತ ಕ್ರೈಸ್ತರು ಈ ಕೆಲಸದಲ್ಲಿ ಒಳಗೂಡಿದ್ದಾರೆ. ಇವರು ಹೊತ್ತುಹೊತ್ತಿಗೆ ಬೇಕಾಗಿರುವ ಆತ್ಮಿಕ ಆಹಾರವನ್ನು ಒದಗಿಸುತ್ತಾರೆ. (ಮತ್ತಾಯ 24:​45-47) ಇದಲ್ಲದೆ, ಒಂದು ಗುಂಪಿನೋಪಾದಿ ಇವರು “ಪವಿತ್ರ ಯಾಜಕವರ್ಗ”ದವರಾಗಿದ್ದು, “ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಯಯಜ್ಞಗಳನ್ನು ಸಮರ್ಪಿಸುವ” ನೇಮಕವನ್ನು ಪಡೆದಿದ್ದಾರೆ. ಮತ್ತು ಅವರನ್ನು “ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ” ನೇಮಿಸಲ್ಪಟ್ಟಿದ್ದಾರೆ. (1 ಪೇತ್ರ 2:​5, 9) ಪೌಲನಂತೆ, ಇವರು ಸಹ ತಮ್ಮ ಸುಯೋಗಗಳಲ್ಲಿ ಆನಂದಿಸುತ್ತಾರೆ ಮತ್ತು ತಮ್ಮ ಜವಾಬ್ದಾರಿಗಳನ್ನು ಪೂರೈಸುವುದರಲ್ಲಿ ಅವರು ‘ತಮ್ಮನ್ನೇ ಅರ್ಪಿಸಿಕೊಳ್ಳುತ್ತಾರೆ.’ ಇವರೊಂದಿಗೆ “ಬೇರೆ ಕುರಿಗಳ” ಗುಂಪು ಸಹ ಜೊತೆಗೂಡುತ್ತದೆ. ಯೆಹೋವನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಮಾನವಕುಲಕ್ಕೆ ತಿಳಿಸುವಂತಹ ಕೆಲಸದಲ್ಲಿ ಬೇರೆ ಕುರಿಗಳ ವರ್ಗದವರು ಅಭಿಷಿಕ್ತ ಕ್ರೈಸ್ತರಿಗೆ ಬೆಂಬಲ ನೀಡುತ್ತಾರೆ. * (ಯೋಹಾನ 10:16; ಮತ್ತಾಯ 24:14) ಅದೆಷ್ಟು ಮಹತ್ವದ ಹಾಗೂ ಆನಂದಮಯ ಸಾರ್ವಜನಿಕ ಸೇವೆಯಾಗಿದೆ!​—⁠ಕೀರ್ತನೆ 107:​21, 22.

ಪವಿತ್ರ ಸೇವೆಯನ್ನು ಸಲ್ಲಿಸಿರಿ

11. ಪ್ರವಾದಿನಿ ಅನ್ನಳು ಎಲ್ಲ ಕ್ರೈಸ್ತರಿಗೆ ಹೇಗೆ ಒಂದು ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದಾಳೆ?

11 ನಮ್ಮ ಆರಾಧನೆಗೆ ಸಂಬಂಧಿಸಿದ ಎರಡನೆಯ ಗ್ರೀಕ್‌ ಶಬ್ದವು ಲಾಟ್ರೀಆ ಎಂಬುದಾಗಿದೆ. ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲಿನಲ್ಲಿ ಈ ಶಬ್ದವನ್ನು “ಪವಿತ್ರ ಸೇವೆ” ಎಂದು ಭಾಷಾಂತರಿಸಲಾಗಿದೆ. ಪವಿತ್ರ ಸೇವೆಯು ಆರಾಧನಾ ಕೃತ್ಯಗಳಿಗೆ ಸಂಬಂಧಿಸಿದ್ದಾಗಿದೆ. ಉದಾಹರಣೆಗೆ, 84 ವರ್ಷ ಪ್ರಾಯದ ವಿಧವೆಯಾಗಿದ್ದ ಅನ್ನಳನ್ನು ಪರಿಗಣಿಸಿರಿ. “ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರ ಸೇವೆಯನ್ನು [“ಪವಿತ್ರ ಸೇವೆಯನ್ನು,” NW; (ಇದು ಲಾಟ್ರೀಆ ಎಂಬ ಶಬ್ದಕ್ಕೆ ಸಂಬಂಧಿಸಿದ ಒಂದು ಗ್ರೀಕ್‌ ಪದವಾಗಿದೆ)] ಮಾಡುತ್ತಿದ್ದಳು” ಎಂದು ಅವಳ ಬಗ್ಗೆ ವಿವರಿಸಲಾಗಿದೆ. (ಲೂಕ 2:​36, 37) ಅನ್ನಳು ದೃಢವಿಶ್ವಾಸದಿಂದ ಸತತವಾಗಿ ಯೆಹೋವನನ್ನು ಆರಾಧಿಸುತ್ತಿದ್ದಳು. ನಮ್ಮೆಲ್ಲರಿಗೆ, ಅಂದರೆ ಎಳೆಯರಿಗೆ, ವೃದ್ಧರಿಗೆ ಮತ್ತು ಸ್ತ್ರೀಪುರುಷರಿಗೆ ಅವಳು ಒಂದು ಅತ್ಯುತ್ತಮ ಮಾದರಿಯಾಗಿದ್ದಾಳೆ. ಅನ್ನಳು ಶೃದ್ಧೆಯಿಂದ ಯೆಹೋವನಿಗೆ ಪ್ರಾರ್ಥಿಸಿದಂತೆ ಹಾಗೂ ದೇವಾಲಯದಲ್ಲಿ ಹಗಲೂರಾತ್ರಿ ಆತನನ್ನು ಆರಾಧಿಸಿದಂತೆ, ನಮ್ಮ ಪವಿತ್ರ ಸೇವೆಯಲ್ಲೂ ಪ್ರಾರ್ಥನೆ ಹಾಗೂ ಕೂಟದ ಹಾಜರಿಯು ಒಳಗೂಡಿದೆ.​—⁠ರೋಮಾಪುರ 12:12; ಇಬ್ರಿಯ 10:​24, 25.

12. ನಮ್ಮ ಪವಿತ್ರ ಸೇವೆಯ ಒಂದು ಮುಖ್ಯ ವೈಶಿಷ್ಟ್ಯವು ಯಾವುದಾಗಿದೆ ಮತ್ತು ಇದು ಸಹ ಹೇಗೆ ಒಂದು ಸಾರ್ವಜನಿಕ ಸೇವೆಯಾಗಿದೆ?

12 ನಮ್ಮ ಪವಿತ್ರ ಸೇವೆಯ ಮುಖ್ಯ ವೈಶಿಷ್ಟ್ಯವನ್ನು ಅಪೊಸ್ತಲ ಪೌಲನು ಉಲ್ಲೇಖಿಸಿದನು. ಅವನು ಬರೆದುದು: “ನನ್ನ ಪ್ರಾರ್ಥನೆಗಳಲ್ಲಿ ನಾನು ಯಾವಾಗಲೂ ನಿಮ್ಮ ಬಗ್ಗೆ ಹೇಗೆ ವಿಜ್ಞಾಪನೆ ಮಾಡಿಕೊಳ್ಳುತ್ತೇನೆ ಎಂಬುದಕ್ಕೆ, ದೇವರ ಮಗನ ಕುರಿತಾದ ಸುವಾರ್ತೆಯ ವಿಷಯದಲ್ಲಿ ಪೂರ್ಣಮನಸ್ಸಿನಿಂದ ನಾನು ಯಾರಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತೇನೋ ಆ ದೇವರೇ ನನಗೆ ಸಾಕ್ಷಿಯಾಗಿದ್ದಾನೆ.” (ರೋಮಾಪುರ 1:​9, NW) ಆದುದರಿಂದ, ಸುವಾರ್ತೆಯನ್ನು ಸಾರುವುದು ಅದನ್ನು ಕೇಳಿಸಿಕೊಳ್ಳುವವರಿಗೆ ಒಂದು ಸಾರ್ವಜನಿಕ ಸೇವೆಯಾಗಿದೆ ಮಾತ್ರವಲ್ಲ, ಯೆಹೋವ ದೇವರಿಗೆ ಸಲ್ಲಿಸುವ ಒಂದು ಆರಾಧನಾ ಕೃತ್ಯವೂ ಆಗಿದೆ. ನಾವು ಸುವಾರ್ತೆಯನ್ನು ಸಾರುವಾಗ ನಮಗೆ ಒಳ್ಳೆಯ ಪ್ರತಿಕ್ರಿಯೆ ಸಿಗಲಿ ಅಥವಾ ಸಿಗದಿರಲಿ, ನಮ್ಮ ಸಾರುವ ಕೆಲಸವು ಯೆಹೋವನಿಗೋಸ್ಕರ ಮಾಡುವ ಪವಿತ್ರ ಸೇವೆಯಾಗಿದೆ. ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯ ಅತ್ಯುತ್ತಮ ಗುಣಗಳು ಹಾಗೂ ಸದುದ್ದೇಶಗಳ ಕುರಿತು ಇತರರಿಗೆ ಹೇಳಲಿಕ್ಕಾಗಿ ನಾವು ಪಡುವ ಶ್ರಮವು, ಖಂಡಿತವಾಗಿಯೂ ನಮಗೆ ಆನಂದವನ್ನು ತರುತ್ತದೆ.​—⁠ಕೀರ್ತನೆ 71:⁠23.

ನಾವು ಎಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸುತ್ತೇವೆ?

13. ಯೆಹೋವನ ಆತ್ಮಿಕ ದೇವಾಲಯದ ಒಳಾಂಗಣದಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವವರ ನಿರೀಕ್ಷೆ ಏನಾಗಿದೆ, ಮತ್ತು ಅವರೊಂದಿಗೆ ಯಾರು ಸಹ ಆನಂದಿಸುತ್ತಾರೆ?

13 ಅಭಿಷಿಕ್ತ ಕ್ರೈಸ್ತರಿಗೆ ಪೌಲನು ಬರೆದುದು: “ಯಾರೂ ಕದಲಿಸಲಾರದ ರಾಜ್ಯವನ್ನು ಹೊಂದುವವರಾದ ನಾವು ಕೃತಜ್ಞತೆಯುಳ್ಳವರಾಗಿದ್ದು ಆತನಿಗೆ [ದೇವರಿಗೆ] ಸಮರ್ಪಕವಾದ ಆರಾಧನೆಯನ್ನು [“ಪವಿತ್ರ ಸೇವೆಯನ್ನು,” NW] ಭಕ್ತಿಯಿಂದಲೂ ಭಯದಿಂದಲೂ ಮಾಡೋಣ.” (ಇಬ್ರಿಯ 12:28) ರಾಜ್ಯವನ್ನು ಬಾಧ್ಯತೆಯಾಗಿ ಪಡೆಯುವ ದೃಢ ನಿರೀಕ್ಷೆಯಿಂದ ಅಭಿಷಿಕ್ತ ಕ್ರೈಸ್ತರು, ಸರ್ವೋನ್ನತ ದೇವರನ್ನು ಆರಾಧಿಸುವಾಗ ಅಚಲ ನಂಬಿಕೆಯನ್ನು ತೋರಿಸುತ್ತಾರೆ. ಅವರು ಮಾತ್ರ ಯೆಹೋವನ ಆತ್ಮಿಕ ಆಲಯದ ಪವಿತ್ರ ಸ್ಥಾನದಲ್ಲಿ ಮತ್ತು ಒಳಾಂಗಣದಲ್ಲಿ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಸಾಧ್ಯವಿದೆ. ಮತ್ತು ಸ್ವರ್ಗದಲ್ಲಿರುವ ಅತಿಪವಿತ್ರ ಸ್ಥಾನದಲ್ಲಿ ಯೇಸುವಿನೊಂದಿಗೆ ಸೇವೆಮಾಡುವ ಸುಯೋಗವನ್ನು ಅತ್ಯಾತುರದಿಂದ ಎದುರುನೋಡುತ್ತಾರೆ. ಅವರೊಂದಿಗೆ ಅವರ ಸಂಗಾತಿಗಳು, ಅಂದರೆ ಬೇರೆ ಕುರಿ ವರ್ಗದವರು ಸಹ ತಮ್ಮ ಅದ್ಭುತಕರ ನಿರೀಕ್ಷೆಯಲ್ಲಿ ಆನಂದಿಸುತ್ತಾರೆ.​—⁠ಇಬ್ರಿಯ 6:​19, 20; 10:​19-22.

14. ಯೇಸುವಿನ ಸಾರ್ವಜನಿಕ ಸೇವೆಯಿಂದ ಮಹಾ ಸಮೂಹವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತದೆ?

14 ಹಾಗಾದರೆ, ಬೇರೆ ಕುರಿ ವರ್ಗಕ್ಕೆ ಸೇರಿದವರು ಎಲ್ಲಿ ಪವಿತ್ರ ಸೇವೆಯನ್ನು ಮಾಡುತ್ತಾರೆ? ಅಪೊಸ್ತಲ ಯೋಹಾನನು ಮುನ್ನೋಡಿದಂತೆ, ಈ ಕಡೇ ದಿವಸಗಳಲ್ಲಿ ಒಂದು ಮಹಾ ಸಮೂಹವು ಒಟ್ಟುಗೂಡಿಸಲ್ಪಟ್ಟಿದೆ. ಮತ್ತು ಈ ಮಹಾ ಸಮೂಹದವರು “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” (ಪ್ರಕಟನೆ 7:14) ತಮ್ಮ ಅಭಿಷಿಕ್ತ ಜೊತೆ ಆರಾಧಕರಂತೆಯೇ ಇವರು ಸಹ ಯೇಸುವಿನ ಸಾರ್ವಜನಿಕ ಸೇವೆಯಲ್ಲಿ, ಅಂದರೆ ಮಾನವಕುಲಕ್ಕೋಸ್ಕರ ಅವನು ತನ್ನ ಪರಿಪೂರ್ಣ ಮಾನವ ಜೀವಿತವನ್ನು ಅರ್ಪಿಸಿದುದರಲ್ಲಿ ನಂಬಿಕೆಯಿಡುತ್ತಾರೆ ಎಂಬುದೇ ಇದರ ಅರ್ಥವಾಗಿದೆ. ಬೇರೆ ಕುರಿಗಳು ಸಹ ಯೇಸುವಿನ ಸಾರ್ವಜನಿಕ ಸೇವೆಯಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಏಕೆಂದರೆ ಅವರು ಯೆಹೋವನ ‘ಒಡಂಬಡಿಕೆಯನ್ನು ಭದ್ರವಾಗಿ ಹಿಡಿದುಕೊಂಡವರಾಗಿದ್ದಾರೆ.’ (ಯೆಶಾಯ 56:⁠6) ಬೇರೆ ಕುರಿಗಳು ಹೊಸ ಒಡಂಬಡಿಕೆಯಲ್ಲಿ ಭಾಗಿಗಳಾಗಿಲ್ಲ. ಆದರೆ, ಹೊಸ ಒಡಂಬಡಿಕೆಗೆ ಸಂಬಂಧಿಸಿದ ನಿಯಮಗಳಿಗೆ ವಿಧೇಯರಾಗುವ ಮೂಲಕ ಹಾಗೂ ಅದರ ಏರ್ಪಾಡುಗಳೊಂದಿಗೆ ಸಹಕರಿಸುವ ಮೂಲಕ ಅದನ್ನು ಭದ್ರವಾಗಿ ಹಿಡಿದುಕೊಂಡವರಾಗಿದ್ದಾರೆ. ಇವರು ದೇವರ ಇಸ್ರಾಯೇಲಿನೊಂದಿಗೆ ಸಹವಾಸ ಮಾಡುತ್ತಾರೆ ಮತ್ತು ಅದೇ ಆತ್ಮಿಕ ಮೇಜಿನ ಮೇಲೆ ಊಟಮಾಡುತ್ತಾರೆ ಮತ್ತು ಅದರ ಸದಸ್ಯರೊಂದಿಗೆ ಜೊತೆಗೂಡಿ ಕೆಲಸಮಾಡುತ್ತಾರೆ. ಅಷ್ಟುಮಾತ್ರವಲ್ಲ, ಸಾರ್ವಜನಿಕವಾಗಿ ದೇವರನ್ನು ಸ್ತುತಿಸುತ್ತಾರೆ ಮತ್ತು ಆತನಿಗೆ ಸಂತೋಷವನ್ನು ತರುವಂತಹ ಆತ್ಮಿಕ ಯಜ್ಞಗಳನ್ನು ಸಮರ್ಪಿಸುತ್ತಾರೆ.​—⁠ಇಬ್ರಿಯ 13:⁠15.

15. ಮಹಾ ಸಮೂಹವು ಎಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸುತ್ತದೆ, ಮತ್ತು ಈ ಆಶೀರ್ವಾದವು ಅವರ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

15 ಹೀಗೆ, ಮಹಾ ಸಮೂಹದವರು “ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ” ನಿಂತಿದ್ದಾರೆ. ಮತ್ತು ಅವರು “ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆಮಾಡುತ್ತಾ [“ಪವಿತ್ರ ಸೇವೆಮಾಡುತ್ತಾ,” NW] ಇದ್ದಾರೆ; ಸಿಂಹಾಸನದಲ್ಲಿ ಕೂತಿರುವಾತನು ಗುಡಾರದಂತೆ ಅವರನ್ನು ಆವರಿಸುವನು.” (ಪ್ರಕಟನೆ 7:​9, 15) ಇಸ್ರಾಯೇಲಿನಲ್ಲಿ, ಸೊಲೊಮೋನನ ದೇವಾಲಯದ ಹೊರಾಂಗಣದಲ್ಲಿ ಯೆಹೂದಿ ಮತಾವಲಂಬಿಗಳು ಆರಾಧನೆಯನ್ನು ಸಲ್ಲಿಸುತ್ತಿದ್ದರು. ಅದೇ ರೀತಿಯಲ್ಲಿ ಇಂದು, ಯೆಹೋವನ ಆತ್ಮಿಕ ಆಲಯದ ಹೊರಾಂಗಣದಲ್ಲಿ ಮಹಾ ಸಮೂಹವು ಆರಾಧನೆಯನ್ನು ಸಲ್ಲಿಸುತ್ತದೆ. ಇಲ್ಲಿ ಸೇವೆಮಾಡುವುದು ಅವರಿಗೆ ಆನಂದವನ್ನು ತರುತ್ತದೆ. (ಕೀರ್ತನೆ 122:⁠1) ಮಹಾ ಸಮೂಹದವರ ಅಭಿಷಿಕ್ತ ಸಹವಾಸಿಗಳಲ್ಲಿ ಕೊನೆಯವನು ತನ್ನ ಸ್ವರ್ಗೀಯ ಬಾಧ್ಯತೆಯನ್ನು ಪಡೆದುಕೊಂಡ ಬಳಿಕವೂ, ಯೆಹೋವನ ಜನರೋಪಾದಿ ಇವರು ಆತನಿಗೆ ತಮ್ಮ ಪವಿತ್ರ ಸೇವೆಯನ್ನು ಸಲ್ಲಿಸುವುದನ್ನು ಮುಂದುವರಿಸುವರು.​—⁠ಪ್ರಕಟನೆ 21:⁠3.

ದೇವರು ಸ್ವೀಕರಿಸದಂತಹ ಪವಿತ್ರ ಸೇವೆ

16. ಪವಿತ್ರ ಸೇವೆಯ ಕುರಿತು ಯಾವ ಎಚ್ಚರಿಕೆಗಳು ಕೊಡಲ್ಪಟ್ಟಿವೆ?

16 ಪುರಾತನ ಇಸ್ರಾಯೇಲ್ಯರ ಕಾಲದಲ್ಲಿ, ಯೆಹೋವನ ನಿಯಮಗಳಿಗೆ ಹೊಂದಿಕೆಯಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸಬೇಕಾಗಿತ್ತು. (ವಿಮೋಚನಕಾಂಡ 30:9; ಯಾಜಕಕಾಂಡ 10:​1, 2) ತದ್ರೀತಿಯಲ್ಲಿ ಇಂದು ನಮ್ಮ ಪವಿತ್ರ ಸೇವೆಯನ್ನು ಯೆಹೋವನು ಸ್ವೀಕರಿಸಬೇಕಾದರೆ, ನಾವು ಕೆಲವು ಆವಶ್ಯಕತೆಗಳನ್ನು ಪೂರೈಸಲಿಕ್ಕಿದೆ. ಆದುದರಿಂದಲೇ ಪೌಲನು ಕೊಲೊಸ್ಸೆಯವರಿಗೆ ಹೀಗೆ ಬರೆದನು: “ನಾವು ನಿಮ್ಮ ಸುದ್ಧಿಯನ್ನು ಕೇಳಿದ ದಿವಸದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಯೆಹೋವನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂತಲೂ” ದೇವರನ್ನು ಬೇಡಿಕೊಳ್ಳುತ್ತೇವೆ. (ಕೊಲೊಸ್ಸೆ 1:​9, 10) ದೇವರನ್ನು ಆರಾಧಿಸಲು ಯಾವುದು ಯೋಗ್ಯವಾದ ವಿಧವಾಗಿದೆ ಎಂಬುದನ್ನು ನಾವು ನಿರ್ಧರಿಸುವುದಿಲ್ಲ. ಬದಲಾಗಿ, ಅದಕ್ಕೆ ದೇವರ ವಾಕ್ಯದ ನಿಷ್ಕೃಷ್ಟವಾದ ಜ್ಞಾನ, ಆತ್ಮಿಕ ತಿಳುವಳಿಕೆ ಹಾಗೂ ದೈವಿಕ ವಿವೇಕವು ಅತ್ಯಾವಶ್ಯಕವಾದದ್ದಾಗಿದೆ. ಇಲ್ಲದಿದ್ದರೆ, ಫಲಿತಾಂಶಗಳು ವಿಪತ್ಕಾರಕವಾಗಿರಸಾಧ್ಯವಿದೆ.

17. (ಎ) ಮೋಶೆಯ ದಿನಗಳಲ್ಲಿ ಪವಿತ್ರ ಸೇವೆಯು ಹೇಗೆ ಭ್ರಷ್ಟಗೊಂಡಿತ್ತು? (ಬಿ) ಇಂದು ಸಹ ಪವಿತ್ರ ಸೇವೆಯು ಯಾವ ರೀತಿಯಲ್ಲಿ ತಪ್ಪಾಗಿ ಮಾರ್ಗದರ್ಶಿಸಲ್ಪಡಸಾಧ್ಯವಿದೆ?

17 ಮೋಶೆಯ ದಿನಗಳಲ್ಲಿದ್ದ ಇಸ್ರಾಯೇಲ್ಯರನ್ನು ಜ್ಞಾಪಿಸಿಕೊಳ್ಳಿರಿ. ಈ ವಿಷಯದಲ್ಲಿ ನಾವು ಹೀಗೆ ಓದುತ್ತೇವೆ: “ದೇವರು ಅವರಿಗೆ ವಿಮುಖನಾಗಿ ಆಕಾಶದ ನಕ್ಷತ್ರ ಗಣವನ್ನು ಪೂಜಿಸುವದಕ್ಕೆ [“ಪವಿತ್ರ ಸೇವೆಮಾಡುವುದಕ್ಕೆ,” NW] ಅವರನ್ನು ಒಪ್ಪಿಸಿಬಿಟ್ಟನು.” (ಅ. ಕೃತ್ಯಗಳು 7:42) ಅವರ ಪರವಾಗಿ ಯೆಹೋವನು ನಡಿಸಿದ್ದ ಪರಾಕ್ರಮಗಳನ್ನು ಇಸ್ರಾಯೇಲ್ಯರು ಕಣ್ಣಾರೆ ನೋಡಿದ್ದರು. ಆದರೂ ಅವರು ಬೇರೆ ದೇವದೇವತೆಗಳನ್ನು ಆರಾಧಿಸಿದರು ಮತ್ತು ಇದರಿಂದ ತಮಗೆ ಒಳಿತಾಗುತ್ತದೆ ಎಂದು ನೆನಸಿದರು. ಅಂದರೆ ಅವರು ದೇವರಿಗೆ ನಿಷ್ಠರಾಗಿರಲಿಲ್ಲ. ಆದರೆ, ನಮ್ಮ ಪವಿತ್ರ ಸೇವೆಯು ದೇವರಿಗೆ ಮೆಚ್ಚಿಕೆಯಾಗಬೇಕಾದರೆ, ನಿಷ್ಠೆಯನ್ನು ತೋರಿಸುವುದು ಅತ್ಯಗತ್ಯವಾದದ್ದಾಗಿದೆ. (ಕೀರ್ತನೆ 18:25) ಇಂದು ನಕ್ಷತ್ರಗಳು ಅಥವಾ ಚಿನ್ನದ ಬಸವನನ್ನು ಆರಾಧಿಸಲಿಕ್ಕಾಗಿ ಜನರು ಯೆಹೋವನನ್ನು ಬಿಟ್ಟು ಹೋಗುವುದು ಅಪರೂಪವಾಗಿರುವುದಾದರೂ, ವಿಗ್ರಹಾರಾಧನೆಯ ಬೇರೆ ರೂಪಗಳು ಸಹ ಇವೆ. “ಐಶ್ವರ್ಯ”ಕ್ಕೆ (NW) ದಾಸರಾಗುವುದರ ವಿರುದ್ಧ ಯೇಸು ಸಹ ಎಚ್ಚರಿಕೆಯನ್ನು ನೀಡಿದನು ಮತ್ತು ಪೌಲನು ಲೋಭವನ್ನು ವಿಗ್ರಹಾರಾಧನೆಯೆಂದು ಕರೆದನು. (ಮತ್ತಾಯ 6:24; ಕೊಲೊಸ್ಸೆ 3:⁠5) ಸೈತಾನನು ತನ್ನನ್ನು ದೇವರೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. (2 ಕೊರಿಂಥ 4:⁠4) ಇಂತಹ ರೀತಿಯ ವಿಗ್ರಹಾರಾಧನೆಯು ಇಂದು ವ್ಯಾಪಕವಾಗಿ ಅಸ್ತಿತ್ವದಲ್ಲಿವೆ ಮತ್ತು ಇವು ಪಾಶದಂತಿವೆ. ಉದಾಹರಣೆಗೆ, ಯೇಸುವಿನ ಹೆಜ್ಜೆಜಾಡನ್ನು ಹಿಂಬಾಲಿಸುತ್ತಿದ್ದೇನೆಂದು ಹೇಳಿಕೊಳ್ಳುವ ಒಬ್ಬ ವ್ಯಕ್ತಿಯನ್ನು ತೆಗೆದುಕೊಳ್ಳಿ. ಅವನು ಯೇಸುವಿನ ಹಿಂಬಾಲಕನೆಂದು ಹೇಳಿಕೊಳ್ಳುತ್ತಿರುವುದಾದರೂ, ಐಶ್ವರ್ಯವಂತನಾಗುವುದೇ ಅವನ ಜೀವಿತದ ನಿಜವಾದ ಗುರಿಯಾಗಿದೆ ಮತ್ತು ಸ್ವತಃ ತನ್ನ ಮೇಲೆ ಹಾಗೂ ತನ್ನ ಸ್ವಂತ ವಿಚಾರಗಳ ಮೇಲೆ ಮಾತ್ರ ಅವನಿಗೆ ಭರವಸೆಯಿದೆ ಎಂದಿಟ್ಟುಕೊಳ್ಳಿ. ಹೀಗಿರುವಲ್ಲಿ, ನಿಜವಾಗಿಯೂ ಅವನು ಯಾರ ಸೇವೆಮಾಡುತ್ತಿದ್ದಾನೆ? ಯೆಹೋವನ ನಾಮದ ಮೇಲೆ ಆಣೆಯಿಟ್ಟು, ನಂತರ ಆತನು ನಡಿಸಿದ ಪರಾಕ್ರಮಗಳ ಪರವಾಗಿ ಅಶುದ್ಧ ವಿಗ್ರಹಗಳಿಗೆ ಕೀರ್ತಿಯನ್ನು ಸಲ್ಲಿಸಿದ ಯೆಶಾಯನ ದಿನದ ಯೆಹೂದ್ಯರಿಗಿಂತ ಇವನು ಭಿನ್ನನಾಗಿದ್ದಾನೋ?​—⁠ಯೆಶಾಯ 48:​1, 5.

18. ಗತಕಾಲದಲ್ಲಿ ಪವಿತ್ರ ಸೇವೆಯು ಹೇಗೆ ಸಲ್ಲಿಸಲ್ಪಟ್ಟಿತು ಮತ್ತು ಇಂದು ಅದು ಹೇಗೆ ತಪ್ಪಾದ ರೀತಿಯಲ್ಲಿ ಸಲ್ಲಿಸಲ್ಪಡುತ್ತದೆ?

18 ಯೇಸು ಹೀಗೂ ಎಚ್ಚರಿಸಿದನು: “ನಿಮ್ಮನ್ನು ಕೊಲ್ಲುವ ಪ್ರತಿಯೊಬ್ಬರೂ, ತಾವು ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಿದ್ದೇವೆ ಎಂದು ನೆನಸುವಂತಹ ಕಾಲವು ಬರುತ್ತದೆ.” (ಯೋಹಾನ 16:​2, NW) ಅಪೊಸ್ತಲ ಪೌಲನಾಗಿ ಪರಿಣಮಿಸಿದ ಸೌಲನು, ‘ಸ್ತೆಫನನ ಕೊಲೆಗೆ ಸಮ್ಮತಿಸಿದಾಗ’ ಮತ್ತು ‘ಕರ್ತನ ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡಿದಾಗ,’ ತಾನು ದೇವರ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಅವನು ನೆನಸಿದ್ದನು ಎಂಬುದರಲ್ಲಿ ಸಂದೇಹವೇ ಇಲ್ಲ. (ಅ. ಕೃತ್ಯಗಳು 8:1; 9:⁠1) ಇಂದು, ಜನಾಂಗೀಯ ಶುದ್ಧೀಕರಣ ಹಾಗೂ ಜನಹತ್ಯೆಯಲ್ಲಿ ಒಳಗೂಡುವಂತಹ ಕೆಲವು ದುಷ್ಕರ್ಮಿಗಳು ಸಹ, ತಾವು ದೇವರನ್ನು ಆರಾಧಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಹೌದು, ದೇವರನ್ನು ಆರಾಧಿಸುತ್ತಿದ್ದೇವೆಂದು ಹೇಳಿಕೊಳ್ಳುವಂತಹ ಅನೇಕ ಜನರಿರುವುದಾದರೂ, ವಾಸ್ತವದಲ್ಲಿ ಅವರ ಆರಾಧನೆಯು ರಾಷ್ಟ್ರೀಯತೆ, ಕುಲವಾದ, ಐಶ್ವರ್ಯ, ಸ್ವಾರ್ಥ ಅಥವಾ ಇನ್ನಿತರ ದೇವರುಗಳಿಗೆ ಸಲ್ಲಿಸಲ್ಪಡುತ್ತದೆ.

19. (ಎ) ನಮ್ಮ ಪವಿತ್ರ ಸೇವೆಯನ್ನು ನಾವು ಹೇಗೆ ಪರಿಗಣಿಸುತ್ತೇವೆ? (ಬಿ) ಯಾವ ರೀತಿಯ ಪವಿತ್ರ ಸೇವೆಯು ನಮಗೆ ಸಂತೋಷವನ್ನು ತರಬಲ್ಲದು?

19 ಯೇಸು ಹೇಳಿದ್ದು: “ನಿನ್ನ ದೇವರಾಗಿರುವ ಯೆಹೋವನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು [“ಆತನೊಬ್ಬನಿಗೇ ಪವಿತ್ರ ಸೇವೆಯನ್ನು ಸಲ್ಲಿಸಬೇಕು,” NW].” (ಮತ್ತಾಯ 4:10) ಈ ಮಾತುಗಳನ್ನು ಯೇಸು ಸೈತಾನನಿಗೆ ಹೇಳುತ್ತಿದ್ದನಾದರೂ, ಈ ಮಾತುಗಳಿಗೆ ನಾವೆಲ್ಲರೂ ಕಿವಿಗೊಡುವುದು ಎಷ್ಟು ಅತ್ಯಾವಶ್ಯಕವಾದದ್ದಾಗಿದೆ! ಈ ವಿಶ್ವದ ಪರಮಾಧಿಕಾರಿಗೆ ಪವಿತ್ರ ಸೇವೆಯನ್ನು ಸಲ್ಲಿಸುವುದು, ಅತಿ ಮಹತ್ವದ ಹಾಗೂ ಭಯಭಕ್ತಿಪ್ರೇರಕ ಸುಯೋಗವಾಗಿದೆ. ಮತ್ತು ನಮ್ಮ ಆರಾಧನೆಗೆ ಸಂಬಂಧಿಸಿರುವ ಸಾರ್ವಜನಿಕ ಸೇವೆಯನ್ನು ಮಾಡುವುದರ ಕುರಿತೇನು? ನಮ್ಮ ಜೊತೆಮಾನವರಿಗೋಸ್ಕರ ಈ ಸೇವೆಯನ್ನು ಮಾಡುವುದು ಒಂದು ಆನಂದಮಯ ಕೆಲಸವಾಗಿದ್ದು, ಇದು ತುಂಬ ಸಂತೋಷವನ್ನು ತರುತ್ತದೆ. (ಕೀರ್ತನೆ 41:​1, 2; 59:16) ಆದರೂ, ಅಂತಹ ಸೇವೆಯನ್ನು ಮನಃಪೂರ್ವಕವಾಗಿ ಮತ್ತು ಯೋಗ್ಯವಾದ ರೀತಿಯಲ್ಲಿ ಮಾಡುವುದಾದರೆ ಮಾತ್ರ ನಿಜವಾದ ಸಂತೋಷವನ್ನು ಕಂಡುಕೊಳ್ಳಸಾಧ್ಯವಿದೆ. ಹಾಗಾದರೆ, ಯಾರು ನಿಜವಾಗಿಯೂ ಯೋಗ್ಯವಾದ ರೀತಿಯಲ್ಲಿ ದೇವರನ್ನು ಆರಾಧಿಸುತ್ತಿದ್ದಾರೆ? ಯಾರ ಪವಿತ್ರ ಸೇವೆಯನ್ನು ಯೆಹೋವನು ಸ್ವೀಕರಿಸುತ್ತಾನೆ? ನಮ್ಮ ಆರಾಧನೆಗೆ ಸಂಬಂಧಿಸಿದ ಮೂರನೆಯ ಬೈಬಲ್‌ ಶಬ್ದವನ್ನು ನಾವು ಪರಿಗಣಿಸುವಲ್ಲಿ, ಈ ಪ್ರಶ್ನೆಗಳಿಗೆ ನಾವು ಉತ್ತರಿಸಸಾಧ್ಯವಿದೆ. ಈ ಶಬ್ದವನ್ನು ನಾವು ಮುಂದಿನ ಲೇಖನದಲ್ಲಿ ಅಭ್ಯಾಸಿಸಲಿರುವೆವು.

[ಪಾದಟಿಪ್ಪಣಿಗಳು]

^ ಪ್ಯಾರ. 4 ಕ್ರೈಸ್ತಪ್ರಪಂಚದ ಲಿಟರ್ಜಿಗಳು ಸಾಮಾನ್ಯವಾಗಿ ಆರಾಧನಾ ವಿಧಾನಗಳಾಗಿರುತ್ತವೆ ಅಥವಾ ನಿರ್ದಿಷ್ಟ ಮತಸಂಸ್ಕಾರಗಳಾಗಿರುತ್ತವೆ. ರೋಮನ್‌ ಕ್ಯಾಥೊಲಿಕ್‌ ಚರ್ಚಿನ ಯೂಕರಿಸ್ಟ್‌ (ಪ್ರಭು ಭೋಜನ ಸಂಸ್ಕಾರ) ಸಹ ಇದರಲ್ಲಿ ಒಳಗೂಡಿದೆ.

^ ಪ್ಯಾರ. 10 ಅ. ಕೃತ್ಯಗಳು 13:2ರಲ್ಲಿ, ಅಂತಿಯೋಕ್ಯದ ಸಭೆಯಲ್ಲಿದ್ದ ಕೆಲವು ಪ್ರವಾದಿಗಳು ಹಾಗೂ ಬೋಧಕರು ಯೆಹೋವನಿಗೆ “ಸಾರ್ವಜನಿಕವಾಗಿ ಸೇವೆ” ಮಾಡುತ್ತಿದ್ದರು (ಲೀಟೂರೈಯೀಅ ಎಂಬ ಶಬ್ದಕ್ಕೆ ಸಂಬಂಧಿಸಿದ ಒಂದು ಗ್ರೀಕ್‌ ಪದದಿಂದ ಇದು ಭಾಷಾಂತರಿಸಲ್ಪಟ್ಟಿದೆ) ಎಂದು ವರದಿಸಲಾಗಿದೆ. ಈ ಸೇವೆಯಲ್ಲಿ, ಸಾರ್ವಜನಿಕರಿಗೆ ಸಾರುವುದು ಸಹ ಒಳಗೂಡಿದ್ದಿರಬಹುದು.

ನೀವು ಹೇಗೆ ಉತ್ತರಿಸುವಿರಿ?

• ಯಾವ ರೀತಿಯ ಸಾರ್ವಜನಿಕ ಸೇವೆಯನ್ನು ಯೇಸು ಮಾಡಿದನು?

• ಯಾವ ರೀತಿಯ ಸಾರ್ವಜನಿಕ ಸೇವೆಯನ್ನು ಕ್ರೈಸ್ತರು ಮಾಡುತ್ತಾರೆ?

• ಕ್ರೈಸ್ತ ಪವಿತ್ರ ಸೇವೆ ಎಂದರೇನು, ಮತ್ತು ಅದು ಎಲ್ಲಿ ಸಲ್ಲಿಸಲ್ಪಡುತ್ತದೆ?

• ನಮ್ಮ ಪವಿತ್ರ ಸೇವೆಯನ್ನು ದೇವರು ಮೆಚ್ಚಬೇಕಾದರೆ, ನಾವು ಏನು ಮಾಡಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ಕೊಡುವುದರಲ್ಲಿ ಹೆತ್ತವರು ಅತ್ಯಧಿಕ ಆನಂದವನ್ನು ಪಡೆದುಕೊಳ್ಳುತ್ತಾರೆ

[ಪುಟ 13ರಲ್ಲಿರುವ ಚಿತ್ರಗಳು]

ಕ್ರೈಸ್ತರು ಇತರರಿಗೆ ಸಹಾಯಮಾಡುವಾಗ ಮತ್ತು ಸುವಾರ್ತೆಯನ್ನು ಸಾರುವಾಗ, ಸಾರ್ವಜನಿಕ ಸೇವೆಯನ್ನು ಮಾಡುತ್ತಾರೆ

[ಪುಟ 14ರಲ್ಲಿರುವ ಚಿತ್ರ]

ನಮ್ಮ ಪವಿತ್ರ ಸೇವೆಯು ದೇವರಿಗೆ ಸ್ವೀಕಾರಯೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಮಗೆ ನಿಷ್ಕೃಷ್ಟವಾದ ಜ್ಞಾನ ಹಾಗೂ ತಿಳುವಳಿಕೆಯ ಅಗತ್ಯವಿದೆ